ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪತ್ರಗಳಿಗೆ ವಿಶೇಷ ಸ್ಥಾನವಿದೆ. ಪತ್ರಗಳು ಒಂದು ಕಾಲಘಟ್ಟದ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡುವ ಅಮೂಲ್ಯ ದಾಖಲೆಗಳಾಗಿವೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಮತ್ತು ನವ್ಯೋತ್ತರ ಸಾಹಿತ್ಯ ಸಂದರ್ಭಗಳಲ್ಲಿ ಉಂಟಾದ ತಾತ್ವಿಕ ಚರ್ಚೆ, ಸಂವಾದ, ವಾಗ್ವಾದ ಮುಂತಾದುವನ್ನು ತಿಳಿಯಲು ಪತ್ರಗಳು ಬಹುಮುಖ್ಯ ಆಕರಗಳಾಗಿವೆ.
ವರಕವಿ ಬೇಂದ್ರೆ ಮತ್ತು ಸತ್ಯಶೋಧಕ ಶಂಬಾ ಜೋಶಿಯವರ ಜಗಳ ಜಗತ್ಪ್ರಸಿದ್ಧವಾದುದು. ಈ ಇಬ್ಬರು ಹಿರಿಯರು ಪತ್ರಗಳ ಮುಖಾಂತರ ಜಗಳವಾಡುತ್ತಿದ್ದರು. ಎಪ್ಪತ್ತರ ದಶಕದಲ್ಲಿ ಇವರಿಬ್ಬರ ಪತ್ರಮುಖೇನ ಜಗಳಕ್ಕೆ ಸಂಯುಕ್ತ ಕರ್ನಾಟಕ ಪತ್ರಿಕೆ ವೇದಿಕೆಯಾಗಿತ್ತು. ಆ ದಿನಗಳಲ್ಲಿ ಪ್ರತಿ ವಾರ ಬೇಂದ್ರೆ ಮತ್ತು ಜೋಶಿಯವರ ಪತ್ರಗಳಿಗಾಗಿ ಓದುಗರು ಕಾತರದಿಂದ ಕಾಯುತ್ತಿದ್ದರು.
ಖ್ಯಾತ ಜಾನಪದ ತಜ್ಞ ಎಚ್.ಎಲ್.ನಾಗೇಗೌಡರು ತಮ್ಮ ‘ನನ್ನೂರು’ ಎಂಬ ಕೃತಿಗೆ ರಾಷ್ಟ್ರಕವಿ ಕುವೆಂಪು ಅವರಿಂದ ಮುನ್ನುಡಿ ಅಪೇಕ್ಷಿಸಿದ್ದರು. ಕುವೆಂಪು ಅವರು ಕಾರ್ಯಬಾಹುಳ್ಯದ ಕಾರಣ ಮುನ್ನುಡಿ ಬರೆಯಲಾಗುತ್ತಿಲ್ಲವೆಂದು ತಿಳಿಸಿ, ‘ನನ್ನೂರು’ ಕೃತಿಯ ಕುರಿತು ನಾಲ್ಕು ಒಳ್ಳೆಯ ಮಾತುಗಳಿರುವ ಚಿಕ್ಕ ಪತ್ರವೊಂದನ್ನು ಬರೆದರು. ನಾಗೇಗೌಡರಿಗೆ ಆ ಪತ್ರ ಎಷ್ಟು ಸಂತೋಷ ನೀಡಿತೆಂದರೆ ಆ ಪತ್ರವನ್ನೇ ಅವರು ಯಥಾವತ್ತಾಗಿ ಮುನ್ನುಡಿಯ ಬದಲು ಹೊನ್ನುಡಿಯಾಗಿ ಪುಸ್ತಕದಲ್ಲಿ ಹಾಕಿಕೊಂಡರು. ಕುವೆಂಪು ಅವರು ಕೆದಂಬಾಡಿ ಜತ್ತಪ್ಪ ರೈಗಳ ‘ಬೇಟೆಯ ನೆನಪುಗಳು’ ಕೃತಿಯನ್ನು ಮೆಚ್ಚಿ ಬರೆದ ಪತ್ರವನ್ನು ನಂತರದ ಮುದ್ರಣಗಳಲ್ಲಿ ಆ ಪುಸ್ತಕಕ್ಕೆ ಬ್ಲರ್ಬ್ ಆಗಿ ಉಪಯೋಗಿಸಿಕೊಳ್ಳಲಾಯಿತು.
ನಮ್ಮ ನಾಡಿನ ಬಹುತೇಕ ಹಿರಿಯ ಸಾಹಿತಿಗಳು ತಮ್ಮ ಸಮಕಾಲೀನರು ಮತ್ತು ಕಿರಿಯ ಲೇಖಕ/ಕಿಯರು ಪುಸ್ತಕ ಕಳಿಸಿದರೆ, ಅವುಗಳನ್ನು ಓದಿ, ತಮ್ಮ ಪ್ರತಿಕ್ರಿಯೆಯನ್ನು ಪತ್ರ ರೂಪದಲ್ಲಿ ತಿಳಿಸುತ್ತಿದ್ದರು. ಹಿರಿಯ ಲೇಖಕ ಹಾ.ಮಾ.ನಾಯಕರು ಐವತ್ತು ಪೈಸೆಯ ಅಂಚೆ ಕಾರ್ಡಿನಲ್ಲಿ, ತುಂಬ ಅಚ್ಚುಕಟ್ಟಾಗಿ ಮತ್ತು ಸಂಕ್ಷಿಪ್ತವಾಗಿ ಕೆಲವೇ ಸಾಲುಗಳಲ್ಲಿ ಪತ್ರ ಬರೆಯುತ್ತಿದ್ದರು. ಹಾ.ಮಾ.ನಾಯಕರು ನಾಡಿನ ವಿವಿಧ ಸಾಹಿತಿಗಳಿಗೆ ಬರೆದ ಅಂತಹ ಕೆಲವು ಪತ್ರಗಳು ಈಗಲೂ ಕೆಲವು ಹಿರಿಯರ ಬಳಿಯಿವೆ.
ಲಲಿತ ಪ್ರಬಂಧ ಸಾಹಿತ್ಯದ ದಿಗ್ಗಜರಾದ ಎ.ಎನ್.ಮೂರ್ತಿರಾಯರ ‘ಚಿತ್ರಗಳು-ಪತ್ರಗಳು’ ಪತ್ರ ಸಾಹಿತ್ಯ ಪ್ರಕಾರದ ಒಂದು ಅಪರೂಪದ ಕೃತಿ. ಈ ಪುಸ್ತಕಕ್ಕೆ ೧೯೭೯ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ವಿ.ಕೃ.ಗೋಕಾರರ ‘ಸಮುದ್ರದಾಚೆಯಿಂದ’ ಮತ್ತು ‘ಸಮುದ್ರದೀಚೆಯಿಂದ’ ಎಂಬ ಎರಡು ಪ್ರವಾಸ ಕಥನಗಳು ಸಂಪೂರ್ಣವಾಗಿ ಪತ್ರರೂಪದಲ್ಲಿವೆ. ಪ್ರವಾಸ ಕಥನ ಮತ್ತು ವೈಜ್ಞಾನಿಕ ಬರಹಗಳಿಂದ ಖ್ಯಾತಿ ಪಡೆದ ಕೃಷ್ಣಾನಂದ ಕಾಮತರ ‘ಪತ್ರ ಪರಾಚಿ’ ಮತ್ತು ‘ಪ್ರೇಯಸಿಗೆ ಪತ್ರಗಳು’ ಕೃತಿಗಳು ಗಮನಾರ್ಹವಾಗಿವೆ. ಸುಮತೀಂದ್ರ ನಾಡಿಗರು ಸಂಪಾದಿಸಿದ ‘ಅಡಿಗರ ಪತ್ರಗಳು’ ಮತ್ತು ನರೇಂದ್ರ ರೈ ದೇರ್ಲ ಸಂಪಾದಿಸಿದ ‘ತೇಜಸ್ವಿ ಪತ್ರಗಳು’ ಅಪರೂಪದ ಮಾಹಿತಿ ನೀಡುವ ವಿಶಿಷ್ಟ ಕೃತಿಗಳಾಗಿವೆ. ಹಲವು ಜನಪ್ರಿಯ ಕಾದಂಬರಿಗಳು ಸಹ ಪತ್ರರೂಪದಲ್ಲಿ ಪ್ರಕಟವಾಗಿವೆ. ಇರಲಿ, ಇದೆಲ್ಲ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯವಾಯಿತು. ಸಾಮಾನ್ಯ ಜನರ ಜೀವನದಲ್ಲಿ ಪತ್ರಗಳು ವಹಿಸಿದ ಪಾತ್ರ ಮತ್ತು ಅವು ಉಂಟು ಮಾಡಿದ ಕೆಲವು ಮೋಜಿನ ಪ್ರಸಂಗಗಳು ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತವೆ.
ಪತ್ರಗಳಲ್ಲಿ ಮೊದಲ ಸ್ಥಾನ ಪ್ರೇಮ ಪತ್ರಗಳಿಗೆ ಸಲ್ಲುತ್ತದೆ. ವಾಟ್ಸಪ್, ಟೆಲಿಗ್ರಾಂ, ಇನ್ಸಟಾಗ್ರಾಂ, ಫೇಸ್‌ಬುಕ್ ಸೇರಿದಂತೆ ಹತ್ತು ಹಲವು ಅತ್ಯಾಧುನಿಕ ಸಂಪರ್ಕ ಮಾಧ್ಯಮಗಳಿರುವ ಈಗಿನ ಪ್ರೇಮಿಗಳಿಗೆ ಪ್ರೇಮಪತ್ರಗಳ ಮಹತ್ವ ಗೊತ್ತಿಲ್ಲ. ಈಗಿನಷ್ಟು ಸಂಪರ್ಕ ಮಾಧ್ಯಮಗಳಿರದ ಹಿಂದಿನ ಕಾಲದಲ್ಲಿ ಪತ್ರಗಳೇ ಪ್ರೇಮಿಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದವು. ಪ್ರಿಯತಮ, ಪ್ರೇಯಸಿಯರು ಪರಸ್ಪರರ ಮನಸ್ಸಿನ ಭಾವನೆಗಳನ್ನು ಪತ್ರಗಳಲ್ಲಿ, ಅಕ್ಷರಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಪ್ರೇಮಿಗಳ ಮನಸ್ಸಿನ ಭಾವನೆಗಳಿಗೆ ಹಿಡಿದ ಕೈಗನ್ನಡಿಯಂತಿರುವ ಕೆಲವು ಪ್ರೇಮಪತ್ರಗಳಿಗೆ ಕೆಲವು ಸಲ ಸಾಹಿತ್ಯಕ ಮೌಲ್ಯ ಸಹ ಪ್ರಾಪ್ತವಾಗುತ್ತಿತ್ತು!
ಗದುಗಿನ ಮಂಜುಮಾಮಾ ಸುಮಾರು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಡಿಗ್ರಿ ಓದುತ್ತಿರುವಾಗ ತುಂಬ ಒಳ್ಳೆಯ ಕಬಡ್ಡಿ ಆಟಗಾರನೆಂದು ಖ್ಯಾತಿ ಪಡೆದಿದ್ದ. ನೋಡಲು ಸಹ ತಕ್ಕಮಟ್ಟಿಗೆ ಸುಂದರವಾಗಿದ್ದ ಮಂಜುಮಾಮನೊಂದಿಗೆ ಸಹಜವಾಗಿಯೇ ಹುಡುಗಿಯರು ಸ್ವಲ್ಪ ಆತ್ಮೀಯತೆಯಿಂದ ಮಾತನಾಡುತ್ತಿದ್ದರು. ಇದು ಅವನ ಕೆಲವು ಸಹಪಾಠಿಗಳ ಹೊಟ್ಟೆಯುರಿಗೂ ಕಾರಣವಾಗಿತ್ತು. ಇಂತಹ ಸಂದರ್ಭದಲ್ಲಿ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುವ ಟಿ.ಸಿ. ಒಬ್ಬರ ಮಗಳಾದ ಸ್ವಾತಿ ಅತಡಕರ್ ಎಂಬ ಮರಾಠಿ ಹುಡುಗಿ ಪುಣೆಯಿಂದ ಬೆಳಗಾವಿ ಕಾಲೇಜಿಗೆ ಬಂದು ಸೇರಿದಳು.
ಮಂಜುಮಾಮಾ ಕನ್ನಡ ಮೇಜರ್ ಆದರೆ ಸ್ವಾತಿ ಇಂಗ್ಲಿಷ್ ಮೇಜರ್. ಆಂಜನೇಯನ ಭಕ್ತನಾದ ಮಂಜುಮಾಮಾ ತಾನಾಯಿತು, ಕಬಡ್ಡಿಯಾಯಿತು ಎಂದು ತನ್ನ ಪಾಡಿಗೆ ತಾನಿದ್ದವ. ಕರಾವಳಿ ಜನ ಹೇಳುವ ಹಾಗೆ ಅವನು ‘ಪಾಪದವ’. ಸ್ವಾತಿ ಮಾತ್ರ ಹಾಗಲ್ಲ, ಮಾಧುರಿ ದೀಕ್ಷಿತಳ ಕಟ್ಟಾ ಅಭಿಮಾನಿಯಾದ ಆಕೆ ಕೇವಲ ಎರಡೇ ತಿಂಗಳಿನಲ್ಲಿ ಕಾಲೇಜಿನ ಸುಂದರಿಯೆಂದು ಖ್ಯಾತಿ ಪಡೆದಳು. ಆಂಜನೇಯನ ಭಕ್ತನಾದ ಮಂಜುಮಾಮಾ ಮತ್ತು ಮಾಧುರಿಯ ಅಭಿಮಾನಿಯಾದ ಸ್ವಾತಿ ಪರಸ್ಪರ ಪ್ರೀತಿಸಬಲ್ಲರು ಎಂಬ ವಿಷಯವೇ ತುಂಬ ಜನರ ಊಹೆಗೆ ನಿಲುಕದ ಸಂಗತಿಯಾಗಿತ್ತು.
ಪಾಪದವನಾದ ಮಂಜುಮಾಮಾನ ಮುಗ್ದತೆ, ಒಳ್ಳೆಯತನ ಮತ್ತು ಕಬಡ್ಡಿ ಆಟಗಾರನೆಂಬ ಖ್ಯಾತಿ ಅವನಿಗೆ ಸ್ವಾತಿ ಅತಡಕರ್ ಒಲಿಯುವಂತೆ ಮಾಡಿತು. ಒಂದು ಶನಿವಾರ ಆಂಜನೇಯನ ಗುಡಿಗೆ ಹಣ್ಣು-ಕಾಯಿ ಸಮರ್ಪಿಸಿ, ಆಶೀರ್ವಾದ ಪಡೆದು ಬರಲು ಹೋದ ಮಂಜುಮಾಮನನ್ನು ಸ್ವಾತಿ ತಾನಾಗಿಯೇ ಮಾತನಾಡಿಸಿದಳು. ದುಂಡು ಮುಖ, ಚಂಚಲ ಕಣ್ಣುಗಳು, ಹಾಲು ಬಿಳುಪಿನ ಮೈ ಬಣ್ಣದ ಸ್ವಾತಿ ರಕ್ತಗೆಂಪು ವರ್ಣದ ಚೂಡಿದಾರದಲ್ಲಿ ನಗುತ್ತ ನಿಂತಿದ್ದಳು. ಮಂಜುಮಾಮನಿಗೆ ಅವಳನ್ನು ಕಂಡು ತುಂಬ ಸಂತೋಷವಾಯಿತು. ಅವನಿಗೆ ಆಗ ಸ್ವಾತಿ ಥೇಟ್ ಮಾಧುರಿ ದೀಕ್ಷಿತಳಂತೆಯೇ ಕಂಡಳು!
ಯಾರೂ ನೋಡುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಸ್ವಾತಿ ಮಂಜುಮಾಮಾನ ಕೈಯಲ್ಲಿ ಒಂದು ಮಡಿಸಿದ ಕಾಗದವನ್ನಿಟ್ಟವಳೇ ಬಿರಬಿರನೆ ನಡೆದು ಹೋದಳು. ಮಂಜುಮಾಮಾನ ಆನಂದಕ್ಕೆ ಪಾರವೇ ಇರಲಿಲ್ಲ. ಅಲ್ಲಿಂದ ಓಡೋಡಿ ಬಂದು ರೂಮು ಸೇರಿದ ಅವನಿಗೆ ಸ್ವಾತಿಯ ಪ್ರೇಮಪತ್ರ ನೋಡಿ ತುಂಬ ನಿರಾಶೆಯಾಯಿತು. ಏಕೆಂದರೆ ಆ ಪತ್ರ ಮರಾಠಿ ಭಾಷೆಯಲ್ಲಿ ಬರೆಯಲ್ಪಟ್ಟಿತ್ತು! ಮಂಜುಮಾಮನಿಗೆ ಕನ್ನಡ ಹೊರತು ಪಡಿಸಿ ಬೇರೆ ಭಾಷೆ ಬಾರದು. ಅದರಲ್ಲೂ ಮರಾಠಿ ಮಂದಿ ಮತ್ತು ಶಿವಸೇನೆಯವರೆಂದರೆ ಅವನಿಗೆ ಅಷ್ಟಕ್ಕಷ್ಟೆ. ಮರಾಠಿ ಬಲ್ಲವರೊಡನೆ ಓದಿಸಿ, ಅರ್ಥ ತಿಳಿಯಲು ಸಹ ಅವನಿಗೆ ತುಂಬ ಸಂಕೋಚವಾಯಿತು. ಈ ಮರಾಠಿ ಪ್ರೇಮಪತ್ರದ ಸಮಸ್ಯೆಯಿಂದಾಗಿ ಅವನು ನಾಲ್ಕೈದು ದಿನಗಳ ಕಾಲ ಕಾಲೇಜಿಗೆ ಹೋಗುವುದನ್ನೇ ಬಿಟ್ಟ. ಇತ್ತ ಸ್ವಾತಿ ತನ್ನ ಪ್ರೇಮಲೇಖನಕ್ಕೆ ಉತ್ತರಿಸದೆ ಕಾಣೆಯಾದ ಮಂಜುಮಾಮಾನ ಕುರಿತು ಚಿಂತಿಸುತ್ತಿದ್ದಳು. ಅತ್ತ, ಮಂಜುಮಾಮಾ ಸ್ವಾತಿಯ ಮರಾಠಿ ಪ್ರೇಮಪತ್ರ ಓದಲಾಗದೆ ಒದ್ದಾಡುತ್ತಿದ್ದ. ಕೊನೆಗೂ ಇವನು ಬಾಲಸುಟ್ಟ ಬೆಕ್ಕಿನಂತೆ ಓಡಾಡುವುದನ್ನು ನೋಡಿದ ಅವನ ಗೆಳೆಯ ಸೋಮು ಏನು ವಿಷಯ ಎಂದು ಕೇಳಿ ತಿಳಿದುಕೊಂಡ ನಂತರ ಮರಾಠಿ ಬಲ್ಲ ಅವಘಾನ ಟೇಲರನ ಬಳಿ ಕರೆದುಕೊಂಡು ಹೋದ. ಶ್ರೀ ಜಗದಂಬಾ ದರ್ಶಿನಿಯಲ್ಲಿ ಪುಷ್ಕಳ ಉಪಹಾರ ಸೇವಿಸಿದ ನಂತರ ಅವಘಾನ ಮಹಾಶಯ ಸ್ವಾತಿ ಬರೆದ ಒಂದು ಪುಟದ ಮರಾಠಿ ಪ್ರೇಮಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಹೇಳಿದ.
ಮಂಜುಮಾಮನಿಗೆ ಆನಂದದಿಂದ ಕಣ್ಣಲ್ಲಿ ನೀರೇ ಬಂತು. ಸೋಮು, “ಹೊಡೆದೆಯಲ್ಲ ಛಾನ್ಸು…” ಎಂದು ಮಂಜುಮಾಮನ ಬೆನ್ನಿಗೆ ಗುದ್ದಿದ. ಆರನೆಯ ದಿನ ಕಾಲೇಜಿಗೆ ಹೋದ ಮಂಜುಮಾಮ ಕ್ಯಾಂಟೀನಿನಲ್ಲಿ ಸ್ವಾತಿಯನ್ನು ಭೇಟಿಯಾಗಿ ಅನುವಾದಕರು ಸಿಗದ ಕಾರಣ ಉತ್ತರ ಕೊಡುವುದು ತಡವಾಯಿತೆಂದು ಅವಳಲ್ಲಿ ಮಾಫೀ ಕೇಳಿದ. ಇದನ್ನು ಕೇಳಿ ಹೊಟ್ಟೆ ತುಂಬ ನಕ್ಕ ಸ್ವಾತಿ ಮತ್ತು ಅವಳ ಗೆಳತಿಯರು ಚೆನ್ನಾಗಿ ತಿಂದುಂಡು, ಬಿಲ್ಲನ್ನು ಮಂಜುಮಾಮನ ಕೈಯಲ್ಲಿ ಕೊಟ್ಟು ಹೋದರು. ಒಂದೆರಡು ದಿನಗಳಲ್ಲಿ ಈ ಮರಾಠಿ ಪ್ರೇಮಪತ್ರ ಪ್ರಕರಣ ಕಾಲೇಜಿನ ತುಂಬ ಹರಡಿ, ಮಂಜುಮಾಮನನ್ನು ಒಂದು ತಿಂಗಳ ಕಾಲ ಎಲ್ಲರೂ ಗೋಳು ಹೊಯ್ದುಕೊಂಡರು.
ಇದು ಪ್ರೇಮಪತ್ರದ ವಿಷಯವಾದರೆ ಕೆಲವರು ತಮಾಷೆಗೆ ಅನಾಮಧೇಯ ಪತ್ರಗಳನ್ನು ಬರೆಯುತ್ತಾರೆ. ನನಗೆ ಪರಿಚಿತರಾದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ ಪ್ರಸಂಗ ತುಂಬ ವಿಚಿತ್ರವಾದುದು. ಕರಾವಳಿ ಭಾಗದ ಪಟ್ಟಣದಲ್ಲಿ ಒಬ್ಬ ಕೆಲಸವಿಲ್ಲದ ಆಸಾಮಿ ಸುಂದರವಾದ ಹುಡುಗಿಯರಿಗೆ ಯದ್ವಾತದ್ವಾ ಹೊಗಳಿ ಅನಾಮಧೇಯ ಕಾಗದ ಬರೆಯುತ್ತಿದ್ದ. ಚೆನ್ನಾಗಿ ಕಾಣುವ, ಚೆನ್ನಾಗಿ ಹಾಡುವ, ಚೆನ್ನಾಗಿ ನೃತ್ಯ ಮಾಡುವ, ಚೆನ್ನಾಗಿ ಚಿತ್ರ ಬರೆಯುವ ಹುಡುಗಿಯರೇ ಇವನ ಟಾರ್ಗೆಟ್. ಅಂತಹ ಹುಡುಗಿಯರ ಗಾಯನ, ನೃತ್ಯ ಅಥವಾ ಚಿತ್ರಕಲೆಯನ್ನು ಸಿಕ್ಕಾಪಟ್ಟೆ ಹೊಗಳಿ, ತುಂಬ ಗೌರವಪೂರ್ವಕವಾಗಿ ಅನಾಮಧೇಯ ಕಾಗದ ಬರೆಯುತ್ತಿದ್ದ. ಆರಂಭದಲ್ಲಿ ಹುಡುಗಿಯರು ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೂ, ಬರುಬರುತ್ತಾ ತಮ್ಮ ಕಲೆಗೆ ಬೆಲೆ ಕೊಡುವ ಅನಾಮಧೇಯ ಅಭಿಮಾನಿಯ ಕುರಿತು ಸಹಜವಾಗಿಯೇ ಕುತೂಹಲ ಮತ್ತು ಗೌರವ ಉಂಟಾಗುತ್ತಿತ್ತು. ಬರುಬರುತ್ತಾ ಆ ಹುಡುಗಿಯರು ಈ ಭೂಗತ ಅಭಿಮಾನಿಯ ಪತ್ರಗಳಿಗಾಗಿ ಕಾಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಆ ಹುಡುಗಿಯರಿಗೆ ಪತ್ರ ಬರುವುದು ನಿಂತು ಹೋಗುತ್ತಿತ್ತು. ಹೊಗಳಿಕೆಯ ಪತ್ರಗಳಿಗೆ ಕಾಯುವ ಹುಡುಗಿಯರಿಗೆ ಇದರಿಂದ ಉಂಟಾದ ನಿರಾಶೆಯೆಷ್ಟು ಎಂಬುದನ್ನು ಬರೀ ಮಾತಿನಲ್ಲಿ ವಿವರಿಸುವುದು ತುಂಬ ಕಷ್ಟ. ಹೊಗಳಿಕೆಯ ಪತ್ರ ಸಿಗದೇ ನಿರಾಶರಾದ ಹುಡುಗಿಯರು ತುಂಬ ಚಡಪಡಿಸುತ್ತಿದ್ದರು. ಸ್ವಲ್ಪ ದಿನಗಳು ಕಳೆದ ನಂತರ ನಾರ್ಮಲ್ಲಾಗುತ್ತಿದ್ದರು. ಆ ಅನಾಮಧೇಯ ಪತ್ರ ಲೇಖಕ ಮತ್ತೆ ಬೇರೆ ಹುಡುಗಿಯರಿಗೆ ಪತ್ರ ಬರೆಯುವ ಮೂಲಕ ತಮಾಷೆಯ ಆಟ ಪ್ರಾರಂಭಿಸುತ್ತಿದ್ದ.
ಈ ಭೂಗತ ಪತ್ರ ಲೇಖಕ ಒಂದು ಬಾರಿ ತನಗೆ ಪರಿಚಿತಳಾದ, ತಕ್ಕ ಮಟ್ಟಿಗೆ ಸುಂದರವಾಗಿದ್ದ ಹುಡುಗಿಯನ್ನು ಗೋಳು ಹೊಯ್ದುಕೊಳ್ಳಬೇಕೆಂದು ನಿರ್ಧರಿಸಿದ. ಅವಳನ್ನು ಹೊಗಳಿ ಕಾಗದ ಬರೆಯಲು ಶುರು ಮಾಡಿದ ನಾಲ್ಕೈದು ಕಾಗದ ಬರೆಯುವ ಹೊತ್ತಿಗೆ, ಅವಳು ಇವನನ್ನು ಗಂಭೀರವಾಗಿ ಪರಿಗಣಿಸಿ, ಅವನು ಕಾಗದದಲ್ಲಿ ನೀಡಿದ ಸೂಚನೆಗಳನ್ನು ಅನುಸರಿಸತೊಡಗಿದಳು. ಶುಕ್ರವಾರ ಹಳದಿ ಚೂಡಿದಾರ ಧರಿಸಲು ಸೂಚನೆ ನೀಡಿದರೆ, ಮಂಗಳವಾರ ದೇವಿಯ ದೇವಸ್ಥಾನಕ್ಕೆ ನೀಲಿ ಸೀರೆಯುಟ್ಟುಕೊಂಡು ಬರುವಂತೆ ಹೇಳುತ್ತಿದ್ದ. ಪಾಪ, ಆ ಹುಡುಗಿ ಎಲ್ಲವನ್ನೂ ಚಾಚೂ ತಪ್ಪದೇ ಮಾಡಿದಳು. ನಾಲ್ಕೈದು ತಿಂಗಳುಗಳ ನಂತರ ಕಾಗದ ಬರುವುದು ನಿಂತಿತು. ಅಷ್ಟರಲ್ಲಿ ಅವನನ್ನು ತುಂಬ ಹಚ್ಚಿಕೊಂಡಿದ್ದ ಹುಡುಗಿ ಪೊಲೀಸ್ ಕಂಪ್ಲೇಂಟ್ ನೀಡಿದಳು. ಪೊಲೀಸರು ಕೇವಲ ನಾಲ್ಕೈದು ದಿನಗಳಲ್ಲಿ ಅವನನ್ನು ಹುಡುಕಿ ತೆಗೆದರು. ಅವನು ಬೇರಾರೂ ಆಗಿರದೆ, ಕಂಪ್ಲೇಂಟ್ ನೀಡಿದ ಹುಡುಗಿಯ ಅತ್ತೆಯ ಮಗನಾಗಿದ್ದ! ಕರಾವಳಿ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದರೂ ಕೆಲಸ ಸಿಗದೆ ಒದ್ದಾಡುತ್ತಿದ್ದ ಅವನು ತಮಾಷೆಗೆ ಮಾತ್ರ ಹೀಗೆ ಮಾಡಿದ್ದೆಂದು ಕ್ಷಮಾಪಣೆ ಕೇಳಿದ. ಅವನ ಮೇಲೆ ಕೇಸು ಹಾಕಲು ಅವನು ಯಾರಿಗೂ ತೇಜೋವಧೆ ಮಾಡುವ ಪತ್ರಗಳನ್ನು ಬರೆದಿರಲಿಲ್ಲ. ಎಲ್ಲರನ್ನೂ ತುಂಬ ಹೊಗಳಿ, ಗೌರವಪೂರ್ವಕವಾಗಿ ಪತ್ರ ಬರೆದಿದ್ದ. ಕೊನೆಗೆ ಅವನ ಮಾವನ ಮಗಳು ಕಂಪ್ಲೇಂಟ್ ಹಿಂತೆಗೆದುಕೊಳ್ಳುವುದಾಗಿ ಹೇಳಿದ ನಂತರ ಅವನನ್ನು ಎಚ್ಚರಿಸಿ ಬಿಡಲಾಯಿತು. ಆ ಪತ್ರ ಸಾಹಿತಿ ಇದಾದ ಒಂದು ವರ್ಷದಲ್ಲಿ ಕಂಪ್ಲೇಂಟ್ ನೀಡಿದ ಮಾವನ ಮಗಳನ್ನೇ ಮದುವೆಯಾಗಿ ತಕ್ಕ ಮಟ್ಟಿಗೆ ಸುಖವಾಗಿಯೇ ಇದ್ದಾನೆ!
ಹಳೆ ಮೈಸೂರು ಭಾಗದ ಮಧ್ಯ ವಯಸ್ಕ ಕವಿಯೊಬ್ಬ ಸುಮಾರು ವರ್ಷಗಳಿಂದ ಸಾಹಿತ್ಯ ಲೋಕದಲ್ಲಿ ಮಣ್ಣು ಹೊರುತ್ತಿದ್ದಾನೆ. ತಾನೇ ದುಡ್ಡು ಹಾಕಿ ಕೆಲವು ಕವನಸಂಕಲನ ಮತ್ತು ನಾಟಕಗಳನ್ನು ಸಹ ಪ್ರಕಟಿಸಿದ್ದಾನೆ. ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಕೆಲವು ಪ್ರಶಸ್ತಿಗಳನ್ನು ದುಡ್ಡು ಕೊಟ್ಟು ಖರೀದಿಸಿದ್ದಾನೆ! ಪ್ರಶಸ್ತಿ ಮತ್ತು ಸನ್ಮಾನವನ್ನು ಕುರಿತು ಅವನಿಗೆ ತುಂಬ ಹಪಾಹಪಿಯಿದೆ. ಪ್ರಶಸ್ತಿ ಮತ್ತು ಸನ್ಮಾನಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಸಿದ್ಧನಾದ ಆ ವ್ಯಕ್ತಿಯ ಕುರಿತು ತುಂಬ ಜನರಿಗೆ ಅಸಮಾಧಾನವಿತ್ತು. ಒಂದು ಬಾರಿ ದೂರದ ಬಳ್ಳಾರಿ ಪ್ರಾಂತದ ಕನ್ನಡ ಸಂಘವೊಂದರಿಂದ ಅವನಿಗೆ ಒಂದು ಪತ್ರ ಬಂದಿತು. ಕನ್ನಡ ಸಾಹಿತ್ಯಕ್ಕೆ ಅಮೋಘ ಸೇವೆಯನ್ನು ಸಲ್ಲಿಸಿದ ಅವನನ್ನು ಅದ್ದೂರಿಯಾಗಿ ಸನ್ಮಾನಿಸಲಾಗುವುದು ಅದಕ್ಕಾಗಿ ಇಂತಹ ದಿನಾಂಕದಂದು ಬಳ್ಳಾರಿ ಪ್ರಾಂತಕ್ಕೆ ಧರ್ಮಪತ್ನಿ ಸಮೇತ ಬರಬೇಕೆಂದು ಅದರಲ್ಲಿ ಬರೆಯಲ್ಪಟ್ಟಿತ್ತು. ಮಧ್ಯ ವಯಸ್ಕ ಕವಿ ಪತ್ರವನ್ನು ಓದಿ ಸಂತುಷ್ಟನಾದ. ಪತ್ನಿ, ಮಕ್ಕಳಿಗೆ ಪತ್ರವನ್ನು ತೋರಿಸಿ ಹಿಗ್ಗಿದ. ಸ್ಥಳೀಯ ಸಾಹಿತಿಗಳ ಎದುರು ಮೈಸೂರು ದೇಶವನಾದ ತನ್ನ ಕೀರ್ತಿ ದೂರದ ಬಳ್ಳಾರಿ ಪ್ರಾಂತವನ್ನು ತಲುಪಿದ ಕುರಿತು ಬಡಾಯಿ ಕೊಚ್ಚಿಕೊಂಡ. ನಿಗದಿತ ದಿನಕ್ಕಿಂತ ಎರಡು ದಿನಗಳ ಮೊದಲು ಪ್ರಶಸ್ತಿ ಸ್ವೀಕರಿಸಲು ಹೋಗುತ್ತಿದ್ದೇನೆಂದು ಎಲ್ಲರೆದುರು ಟಾಂ ಟಾಂ ಮಾಡಿ ಪತ್ನಿಯೊಂದಿಗೆ ಬಳ್ಳಾರಿ ಪ್ರಾಂತದತ್ತ ಪ್ರಯಾಣ ಬೆಳೆಸಿದ.
ಮೈಸೂರು ದೇಶದ ಕವಿ ಸುದೀರ್ಘ ಹದಿನಾಲ್ಕು ಗಂಟೆಯ ಪಯಣದ ನಂತರ ಬಳ್ಳಾರಿ ಪ್ರಾಂತದ ಚಿಕ್ಕ ಪಟ್ಟಣವನ್ನು ತಲುಪಿದ. ಅದನ್ನು ಚಿಕ್ಕ ಪಟ್ಟಣವೆನ್ನುವುದಕ್ಕಿಂತ ದೊಡ್ಡ ಹಳ್ಳಿಯೆಂದು ಕರೆಯಬಹುದಿತ್ತು. ಊರ ದಕ್ಷಿಣ ಭಾಗದಲ್ಲಿದ್ದ, ದೊಡ್ಡ ಮಳೆ ಬಂದರೆ ಬಿದ್ದು ಹೋಗುವಂತಿದ್ದ ಬ್ರಿಟೀಷರ ಕಾಲದ ಹಂಚಿನ ಮನೆಯೇ ಕನ್ನಡ ಸಂಘದ ಕಚೇರಿಯಾಗಿತ್ತು. ಆ ಮುರಿದು ಬೀಳುವಂತಿದ್ದ ಮನೆಯ ಗೋಡೆಯ ಮೇಲೆ ಅಲ್ಲಲ್ಲಿ, “ಗೋ ಬ್ಯಾಕ್ ಟ್ರಂಪ್!” ಎಂದು ಇದ್ದಿಲಿನಿಂದ ಬರೆಯಲಾಗಿತ್ತು. ಮೂರು ಭಾಗಗಳಾಗಿ ವಿಂಗಡಿಸಿದ್ದ ಆ ಮನೆಯ ಮೊದಲ ಭಾಗದಲ್ಲಿ ಇಸ್ಪೀಟಾಟ ಆಡುತ್ತ ಕುಳಿತಿದ್ದ ನಾಲ್ಕಾರು ಸೋಮಾರಿ ತರುಣರು ಈ ದಂಪತಿ ಅಲ್ಲಿ ಬಂದದ್ದನ್ನು ನೋಡಿ, “ಏನು ವಿಷಯ?” ಎಂದು ಕೇಳಿದರು. ಕವಿ ಪತ್ರ ಕೊಟ್ಟಾಗ ಅದನ್ನು ಓದಿದ ತರುಣನ ಮುಖದಲ್ಲಿ ಮುಗುಳ್ನಗೆ ಮೂಡಿತು. “ಸರ್, ನಿಮಗ ಯಾರೋ ಮಂಗ್ಯಾ ಮಾಡ್ಯಾರಾ… ಅಲ್ರೀ ಯಾವಾಗ ಬೇಕಾದರೂ ಮುರಿದು ಬೀಳುವಂಗಿರೂ ಈ ಕನ್ನಡ ಸಂಘದ ಪರಿಸ್ಥಿತಿ ನೋಡಿದರ ನಿಮಗ ತಿಳಿಯೂದಿಲ್ಲ? ಏನು ಓದೀರಿ ನೀವು? ಯಾರಾರ ಸನ್ಮಾನ ಮಾಡ್ತಾರ ಅಂದ ಕೂಡಲೇ ಹಂಗ ಲೇಡಿಸ್ ಕರಕೊಂಡು ಇಷ್ಟು ದೂರ ಬರೂದು ತಪ್ಪಾಗತೈತಿ. ಅದು ಜವಾಬ್ದಾರಿ ಇರೂ ಮಂದಿ ಮಾಡೂ ಕೆಲಸ ಅಲ್ಲಾ…” ಎಂದು ಬಜಾಯಿಸಿ ಹೇಳಿದ.
ಅಷ್ಟು ದೂರದಿಂದ ಬಂದು ಮೂರ್ಖರಾದ ಇವರ ಕುರಿತು ಅದಾಗಲೇ ಊರಲ್ಲಿ ಸುದ್ದಿ ಹಬ್ಬಿತ್ತು. ಕರುಣಾಳುಗಳಾದ ಊರ ಮಂದಿ ಕವಿ ಮತ್ತು ಕವಿಪತ್ನಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕರಿಯಣ್ಣನ ಮನೆಗೆ ಕರೆದೊಯ್ದರು. ಯಾರೋ ಪತ್ರ ಬರೆದು ಇವರಿಗೆ ಬಕರಾ ಮಾಡಿದ್ದಾರೆಂದು ತಿಳಿದ ಅಧ್ಯಕ್ಷ ಕರಿಯಣ್ಣ ಮಮ್ಮಲ ಮರುಗಿದ. ಅವತ್ತಿನ ದಿನ ತನ್ನ ಮನೆಯಲ್ಲಿ ಅತಿಥಿಯಾಗಿರಬೇಕೆಂದು ಹೇಳಿದ. ಯಾರೋ ಬರೆದ ಕಾಗದ ಓದಿ ಇಷ್ಟು ದೂರ ಬಂದು ಪೆಚ್ಚಾದ ಇವರನ್ನು ಊರ ಮಂದಿ ಬಂದು ಭೇಟಿಯಾಗಿ ಸಮಾಧಾನ ಹೇಳಿದರು. ಮೈಸೂರು ಕವಿಗೆ ಹಗ್ಗ ತೆಗೆದುಕೊಳ್ಳಲೋ, ಹಳಿಗೆ ತಲೆ ಕೊಡಲೋ ಎಂಬ ವಿಚಾರಗಳು ಸಹ ಬಂದವು!
ಬಳ್ಳಾರಿಯಿಂದ (ವಯಾ ದಾವಣಗೆರೆ) ಮೈಸೂರು ದೇಶಕ್ಕೆ ಮರುಪ್ರಯಾಣ ಮಾಡಿದ ಕವಿ, ಶಿವಮೊಗ್ಗದಲ್ಲಿ ಕೈಯಿಂದ ಹಣ ಹಾಕಿ, ಒಂದು ಭರ್ಜರಿ ರೇಶಿಮೆ ಶಾಲು, ಮೈಸೂರು ಪೇಟ, ಮುತ್ತಿನ ಮಾಲೆ ಮತ್ತು ಹೂವು-ಹಣ್ಣು ಕೊಂಡ. ಇದಕ್ಕೆ ಮೊದಲೇ ಗ್ರಾಮ ಪಂಚಾಯತ್ ಅಧ್ಯಕ್ಷ ಕರಿಯಣ್ಣ ಕನ್ನಡ ಸಂಘದ ಹೆಸರಿನಲ್ಲಿ ಸನ್ಮಾನ ಮಾಡಲಾಗಿದೆಯೆಂದು ಮಾಸಿದ ಲೆಟರ್ ಹೆಡ್ಡಿನಲ್ಲಿ ಬರೆದು ಕೊಟ್ಟಿದ್ದ! ಇಷ್ಟೆಲ್ಲ ನಡೆದರೂ ಏನು ನಡೆದೇ ಇಲ್ಲವೆಂಬಂತೆ ತುಂಬ ಸಡಗರದಿಂದ ಊರಿಗೆ ಬಂದಿಳಿದ ಈ ಕವಿಯನ್ನು ನೋಡಿ ಊರ ಜನ ದಂಗಾದರು!
ಕೆಲವು ವ್ಯಕ್ತಿಗಳು ತುಂಬ ವಿಚಿತ್ರವಾಗಿರುತ್ತಾರೆ. ಈಗ ಫೇಸ್ ಬುಕ್, ಇನ್ಸಟಾಗ್ರಾಂ, ವಾಟ್ಸಪ್ ಮತ್ತು ಟೆಲಿಗ್ರಾಂಗಳಲ್ಲಿ ಜಗಳವಾಡುವಂತೆ ಹಿಂದೆ ಕೆಲವು ವ್ಯಕ್ತಿಗಳು ಪತ್ರಗಳ ಮೂಲಕ ಜಗಳವಾಡುತ್ತಿದ್ದರು! ನರೇಗಲ್ಲಿನ ನಾಗೇಶ ಮತ್ತು ಮುಳಗುಂದದ ಮಲ್ಲೇಶನ ನಡುವೆ ಯಾವುದೋ ಹಣಕಾಸಿನ ವ್ಯವಹಾರದ ಸಂಬಂಧ ಸಣ್ಣ ಮನಸ್ತಾಪವುಂಟಾಯಿತು. ಅದು ಅಲ್ಲಿಗೇ ನಿಲ್ಲಲಿಲ್ಲ, ಬದಲಾಗಿ ಪತ್ರಗಳ ಮೂಲಕ ಜಗಳ ಮುಂದುವರಿಯಿತು. ಇವನೊಂದು ಪತ್ರ ಬರೆದರೆ ಅದಕ್ಕುತ್ತರವಾಗಿ ಅವನೊಂದು ಪತ್ರ ಬರೆಯುತ್ತಿದ್ದ. ಪತ್ರಗಳಲ್ಲಿ ಪರಸ್ಪರರ ಮನೆತನದ ಇತಿಹಾಸ ಜಾಲಾಡುವ ಕೆಳಮಟ್ಟದ ಭಾಷೆ ಉಪಯೋಗಿಸಿ, ಒಬ್ಬರಿಗೊಬ್ಬರು ನಿಂದಿಸಿಕೊಳ್ಳುತ್ತಿದ್ದರು. ಸುಮಾರು ಆರು ತಿಂಗಳ ಕಾಲ ಈ ಪತ್ರ ಜಗಳ ಮುಂದುವರೆಯಿತು. ಒಮ್ಮೆ ಗದುಗಿನಲ್ಲಿ ಆಕಸ್ಮಿಕವಾಗಿ ಭೇಟಿಯಾದ ಇಬ್ಬರೂ ಮತ್ತೆ ಜಗಳಕ್ಕಾರಂಭಿಸಿದಾಗ ಅಲ್ಲಿದ್ದ ಜನ ಇವರಿಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಇವರಿಬ್ಬರು ಪತ್ರಗಳ ಮೂಲಕ ಜಗಳವಾಡುವುದನ್ನು ಕೇಳಿ, ತುಂಬ ಕುತೂಹಲದಿಂದ ಇಬ್ಬರ ಪತ್ರಗಳನ್ನೂ ತರಿಸಿ ಓದಿದ ಪಿ.ಎಸ್.ಐ.ಗೆ ಪತ್ರಗಳಲ್ಲಿ ಪರಸ್ಪರರು ಹಾಕಿದ್ದ ಬೆದರಿಕೆ ನೋಡಿ ನಗು ಬಂದಿತು. ನರಪೇತಲ ನಾರಾಯಣರಂತಿದ್ದ ನಾಗೇಶ ಮತ್ತು ಮಲ್ಲೇಶ ವಾಸ್ತವವಾಗಿ ಹೆಂಡತಿಯರಿಗೆ ಹೆದರುವ ಪುಕ್ಕಲರು. ಅಂತಹುದರಲ್ಲಿ ಪತ್ರಗಳಲ್ಲಿ ಮಾತ್ರ “ಕೊಚ್ಚಿ ಹಾಕುತ್ತೇನೆ”, “ಹೂತು ಹಾಕುತ್ತೇನೆ”, “ಬೆಂಕಿ ಹಚ್ಚಿ ಕೊಲ್ಲುತ್ತೇನೆ…” ಎಂದೆಲ್ಲ ಅತಿರಂಜಿತವಾಗಿ ಬರೆದುಕೊಂಡಿದ್ದರು. ಪಿ.ಎಸ್.ಐ. ಈ ಇಬ್ಬರೂ ನರಪೇತಲರಿಗೆ ತಲಾ ಒಂದೊಂದು ತಪರಾಕಿ ಕೊಟ್ಟು, ಇನ್ನು ಮುಂದೆ ಜಗಳವಾಡದಂತೆ ಎಚ್ಚರಿಸಿ ಕಳಿಸಿದರು. ಪೊಲೀಸರ ಭಯದಿಂದ ಇಬ್ಬರೂ ನಂತರ ಪತ್ರಗಳ ಮೂಲಕ ಜಗಳವಾಡುವುದನ್ನು ಬಿಟ್ಟರು.
ಇನ್ನು ಸಾಹಿತ್ಯ ಲೋಕದಲ್ಲಿರುವ ಹಲವು ಲೇಖಕ/ಕಿಯರ ಸಣ್ಣತನಗಳನ್ನು ನೋಡಿದರೆ ವಿನೋದ ಮತ್ತು ವಿಷಾದ ಒಟ್ಟಿಗೇ ಉಂಟಾಗುತ್ತದೆ. ಕನ್ನಡದ ಒಬ್ಬ ಲೇಖಕರು ಬರೆಯಲು ಆರಂಭಿಸಿದ್ದೇ ನಿವೃತ್ತಿಯ ನಂತರ. ಅವರು ಹೆಚ್ಚು ಬರೆದಿಲ್ಲ ನಿಜ, ಆದರೆ ಅವರು ಬರೆದದ್ದರಲ್ಲಿ ಹೆಚ್ಚಿನದು ಸತ್ವಯುತವಾದುದು. ಅವರು ಬರೆದ ಏಕೈಕ ಕಾದಂಬರಿಯೇ ಅವರ ಮಾಸ್ಟರ್ ಪೀಸ್. ಓದುಗ ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದ ಅವರ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಬುದ್ಧಿಜೀವಿಗಳಿಗೆ ಆ ಲೇಖಕರ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತದ್ದನ್ನು ಅರಗಿಸಿಕೊಳ್ಳುವುದು ತುಂಬ ಕಷ್ಟವಾಯಿತು. ಸರಿ,
ಬುದ್ಧಿಜೀವಿಗಳೆಲ್ಲ ಸೇರಿ ಸರ್ಕಾರಿ ಮೊಗಸಾಲೆಯಲ್ಲಿ ಬಕೆಟ್ ಹಿಡಿಯುವ ಹಲವು ಪೂರ್ಣಕಾಲಿಕ ರಾಜಕಾರಣಿಗಳು ಮತ್ತು ಅರೆಕಾಲಿಕ ಸಾಹಿತಿಗಳ ನೇತೃತ್ವದಲ್ಲಿ ಒಂದು ಭರ್ಜರಿ ಪತ್ರವನ್ನು ತಯಾರಿಸಿದರು. ಆ ಪತ್ರದಲ್ಲಿ ಏಕೈಕ ಕಾದಂಬರಿ ಬರೆದ ಲೇಖಕರು, ಅವರ ಕೃತಿ ಮತ್ತು ಅವರ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ತೀರ್ಪುಗಾರರನ್ನು ಯದ್ವಾತದ್ವಾ ತೆಗಳಿ ಬರೆಯಲಾಗಿತ್ತು. ಸಾಹಿತ್ಯ ಅಕಾಡೆಮಿ ಮಾಡಿದ ತಪ್ಪನ್ನು ಈಗಲಾದರೂ ಸರಿಪಡಿಸಿಕೊಳ್ಳಬೇಕು, ಆ ಏಕೈಕ ಕಾದಂಬರಿಗೆ ಕೊಟ್ಟ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿತ್ತು. ಅದಕ್ಕೆ ಬೆಂಬಲವಾಗಿ ನಿಂತಿರುವ ಐವತ್ತಕ್ಕೂ ಅಧಿಕ ಬುದ್ಧಿಜೀವಿಗಳು ಪತ್ರದಲ್ಲಿ ಸಹಿ ಮಾಡಿದ್ದರು. ಆ ಪತ್ರವನ್ನು ರಿಜಿಸ್ಟರ್ಡ್ ಅಂಚೆಯ ದ್ವಾರಾ ಅಕಾಡೆಮಿಗೆ ಕಳಿಸಲಾಯಿತು. ಅಕಾಡೆಮಿ ತನ್ನ ಎಂದಿನ ದಿವ್ಯ ನಿರ್ಲಕ್ಷ್ಯದಿಂದ ಈ ಪತ್ರವನ್ನು ಕಸದಬುಟ್ಟಿಗೆ ಎಸೆದು ಕೈ ತೊಳೆದುಕೊಂಡಿತು! ಇಂತಹ ವಿಶಿಷ್ಟ ಘಟನೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಮಾತ್ರ ನಡೆಯುತ್ತವೆ!
ಇರಲಿ, ಪತ್ರಗಳ ಕುರಿತ ಕಥೆಗಳು ನೂರಾರಿವೆ ಮತ್ತು ಒಂದಕ್ಕಿಂತ ಒಂದು ಸ್ವಾರಸ್ಯಕರವಾಗಿವೆ. ನನಗಂತೂ ಪತ್ರ ಸಾಹಿತ್ಯದ ಕುರಿತು ಇನ್ನಿಲ್ಲದ ಆಸಕ್ತಿಯುಂಟು. ಎಷ್ಟೋ ವೇಳೆ ಆತ್ಮಕಥನ, ಜೀವನ ಚರಿತ್ರೆ ಮತ್ತು ವ್ಯಕ್ತಿ ಚಿತ್ರಣಗಳು ಕೊಡಲಾಗದ ಅಪರೂಪದ ಮಾಹಿತಿಯನ್ನು ಪತ್ರ ಸಾಹಿತ್ಯ ಒದಗಿಸುತ್ತದೆ. ಪತ್ರಗಳು ಎಲ್ಲ ದೃಷ್ಟಿಯಿಂದಲೂ ಅಮೂಲ್ಯ ದಾಖಲೆಗಳಾಗಿವೆ ಆದರೆ ಅವುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಸಂರಕ್ಷಿಸುವ ಕೆಲಸ ಮಾತ್ರ ತೃಪ್ತಿಕರವಾಗಿ ನಡೆಯುತ್ತಿಲ್ಲ. ನಾವು ಇನ್ನಾದರೂ ಪತ್ರಗಳ ಮಹತ್ವವನ್ನರಿತು, ಅವುಗಳನ್ನು ಸಂರಕ್ಷಿಸುವತ್ತ ಗಮನ ಹರಿಸಬೇಕಿದೆ.
2 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಪತ್ರಗಳು”
ಒಂದಾನೊಂದು ಕಾಲದಲ್ಲಿ ನಾನೂ ಅನೇಕ ಲೇಖಕರಿಗೆ ಪತ್ರ ಬರೆದು ಮೆಚ್ಚುಗೆ, ಟೀಕೆ, ತಪ್ಪು ಒಪ್ಪುಗಳನ್ನು ಎತ್ತಿ ತೋರಿಸುತ್ತಿದ್ದೆ. ಕಾಲಕ್ರಮೇಣ ನಿಲ್ಲಿಸಿದೆ. ಆದರೆ ಹೇಳಿಕೊಳ್ಳುವಂತಹದೇನೂ ಇಲ್ಲ. ನೀವು ಪತ್ರ ಬರಹದ ಸೊಬಗನ್ನು ಮತ್ತೆ ಜ್ಞಾಪಿಸಿದ್ದಕ್ಕೆ ಧನ್ಯವಾದಗಳು.
ವಿಷಯ – ಜರಾ ಹಟ್ಕೇ! ಲಲಿತ ಬರೆಹ. ಮುದ ನೀಡಿತು!!