ಯುಗಾದಿ ಅನ್ನುವದೇ ಒಂದು ಸಂಭ್ರಮ, ಕನ್ನಡ ಕೋಟಿಗೆ. ಯುಗಾದಿ, ದಿನಾರಂಭದ ಮೂಲಭೂತ ಕಳಕಳಿ ಅಭಿವ್ಯಕ್ತವಾಗುವಾಗ, ಪ್ರತಿಯೊಬ್ಬನ ಜೀವನದ ಉದ್ದೇಶದ ಒಂದು ವಿಶೇಷ ಬೀಜಮಂತ್ರ, ಮನಸ್ಸನ್ನು ಜಾಗೃತಿಸುವ, ಉದ್ದೀಪಿಸುವ ಒಂದು ದಾರಿದೀಪವಾಗಬಲ್ಲುದು. ಅದೇ ಸಂಕಲ್ಪವಾಗಿ, ಕತ್ತಲಿನಿಂದ ಬೆಳಕಿಗೆ ಒಯ್ಯುವ ಸಂವಹನಕ್ಕೆ, ಆಧಾರವಾಗಬಾರದೇಕೆ? ಅದರ ಶಕ್ಯತೆಯೇನು? ಎಂಬುದರ ಬಗ್ಗೆ ಯುಗಾದಿಯ ಶೂನ್ಯದಾಳದಿಂದ ಚಿಮ್ಮಿದ ಒಂದು ಚಿಂತನಾಲಹರಿಯಿದು.
ಯುಗಾದಿಯಿಂದ ಆರಂಭವಾಗುವ ಪ್ರತೀ ವರ್ಷ, ‘ಬೇವು-ಬೆಲ್ಲ’ದ ಸಂದೇಶದೊಂದಿಗೆ, ಜೀವನದ ಕಷ್ಟ ಸುಖಗಳ ಸಾರದ ಒಂದು ತತ್ವವನ್ನಷ್ಟೇ ಅಲ್ಲ, ಬದುಕಿನ ಹಾದಿಯನ್ನು ನೇಯುವ ಸ್ವಂತ ಉದ್ದೇಶದ ತಂತುವನ್ನು ಹುಡುಕುವ, ಒಂದು ರೀತಿಯ ಅಗ್ನಿಚಾಲನೆಯಾಗಲಾರದೆ? ಬಹುಶ್ರುತತೆಯಲ್ಲಿ ಗೊತ್ತಿದ್ದ ವಿಷಯ : ಪ್ರತಿಯೊಬ್ಬರ ಯಾತ್ರೆಯೂ ಬೇರೆ ಬೇರೆ – ತಮ್ಮ ತಮ್ಮ ಉದ್ದೇಶಗಳನ್ನು ತಾವೇ ಕಂಡುಕೊಳ್ಳಬೇಕು – ಭೌತಿಕ ಪ್ರಪಂಚದಲ್ಲಿ ಹಸಿವಾದವನೇ ಊಟ ಮಾಡಬೇಕಾದ ಪ್ರಮೇಯದಂತೆ. ಅದು ಈ ಜಗದ ಪ್ರಶ್ನಾತೀತ ನಿಯಮ!
‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗ ಶುಧ್ಧಿ; ಇದೇ ಬಹಿರಂಗ ಶುಧ್ಧಿ!’ ಎಂದು ಬಸವಣ್ಣನವರು ಅತ್ಯಂತ ಸರಳವಾಗಿ ಜನ ಸಾಮಾನ್ಯರಿಗೆಲ್ಲ ಹೃದಯತಟ್ಟುವಂತೆ ಪ್ರತಿಪಾದಿಸಿದ್ದಾರೆ. ಅದೇರೀತಿ ಡಾ.ಡಿ.ವಿ.ಗುಂಡಪ್ಪನವರು ಮಂಕುತಿಮ್ಮನ ಕಗ್ಗದ ತತ್ವಾನ್ವೇಷಣೆಯಲ್ಲಿ,
‘ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರ ಕೋಣೆಯಲಿ ಲೋಗರಾಟಗಳನಾಡು I
ವಿರಮಿಸೊಬ್ಬನೇ ನೀನು ಒಳಕೋಣೆ ಶಾಂತಿಯಲಿ
ವರಯೋಗ ಸೂತ್ರವಿದು – ಮಂಕುತಿಮ್ಮ II ‘
ಎಂದು ಮನೋವೈಜ್ಞಾನಿಕರೀತ್ಯಾ ವಿಭಾಜಿಸುತ್ತ, ಚಿತ್ತಸ್ಪರ್ಶಿಯಾಗಿ ನುಡಿದಿದ್ದಾರೆ. ಇನ್ನೊಂದು ಸಂದರ್ಭದಲ್ಲಿ, ಡಿ.ವಿ.ಜಿ.ಯವರು ‘ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ, ಹೇ ದೇವಾ’ ಎಂದು ಪ್ರಾರ್ಥಿಸುತ್ತಾರೆ. ರಾಮಾಯಣ, ಮಹಾಭಾರತಗಳನ್ನು ಪರಿಶೀಲಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ : ಸತ್ಯ, ವಾಕ್ಯ, ವಚನ, ಪರಿಪಾಲನೆಯ ಅನುಧಾರಣೆಯ ಮೇಲೆ ನಿಂತಿರುವ ಬದುಕಿನ ತಳಹದಿಯನ್ನು ರಾಮಾಯಣ ವಿಶದವಾಗಿ ಮನೋಗತಿಸಿದರೆ, ಜೀವನದ ಮಾರ್ಗದಲ್ಲಿ ಪದೇ ಪದೇ ಭೇಟಿಯಾಗಬಹುದಾದ, ಬೇರೆ ಬೇರೆ ತರಹದ ಅನೇಕ ವ್ಯಕ್ತಿಮತ್ವಗಳ ಉದಾಹರಣೆಗಳು ಮಹಾಭಾರತದಲ್ಲಿ ತೋರಿ ಬರುತ್ತವೆ. ರಾಮಾಯಣದಲ್ಲಿ ಎಲ್ಲ ಕತೆಗಳ ಮೂಲ ತಂತು ಬಹುತೇಕ ಹೃದಯ, ಭಾವನೆಗಳಿಗೆ ನೇರ ಸಂಬಂಧಿಸಿದಂತವುಗಳು. ಅದೇ ರೀತಿ ಮಹಾಭಾರತದ, ಎಲ್ಲ ಕತೆಗಳ ಮೂಲತಂತು ವಿಶೇಷತಃ ಬುಧ್ಧಿಗೆ, ವಿಚಾರ, ವಿಮರ್ಶೆಗಳಿಗೆ ಸಂಬಂಧಿಸಿದಂತವುಗಳು. ಈ ವಿಶ್ಲೇಷಣದ ಬೆಳಕಿನಲ್ಲಿ ನೋಡಿದಾಗ, ಪ್ರಾಯಶಃ ಮಾನವನ ಉನ್ನತಿಗೆ ಕುಮ್ಮಕ್ಕು ಕೊಡುವ, ಮೂಲಭೂತ ಅಂಗಗಳಾದ ಹೃದಯ ಹಾಗೂ ಬುದ್ಧಿಶಕ್ತಿಗಳ ಪ್ರಚೋದಕತೆಯನ್ನು ಓದಿದಾಗ, ಕೇಳಿದಾಗ ಸತತವಾಗಿ ಸ್ವಯಂಚಾಲಿತ ಚುರುಕಿನ, ಜೀವಂತ ಸ್ಪಂದನವನ್ನು ಉಂಟುಮಾಡುತ್ತಿರುವದರಿಂದಲೇ ರಾಮಾಯಣ, ಮಹಾಭಾರತಗಳು ಸರ್ವ ಋತುವಿನಲ್ಲೂ / ಸಾರ್ವಕಾಲಿಕವಾಗಿ, ಸಾರ್ವತ್ರಿಕವಾಗಿ, ಮಹೋನ್ನತ ಗ್ರಂಥಗಳಾಗಿ ಉಳಿದುಕೊಂಡಿವೆ. ಈ ಗ್ರಂಥದ್ವಯಗಳ ಅಮೂಲ್ಯ ಸಂದೇಶಗಳು, ಅಪ್ರತಿಮ ಸನಾತನ ತತ್ವದ ಸರಳ ಸತ್ವವಾಗಿ / ಸತ್ಯಗಳಾಗಿ, ಇವುಗಳನ್ನು ಓದಿ ಅರ್ಥೈಸಿಕೊಂಡ ವ್ಯಕ್ತಿಗಳ, ಆತ್ಮವಿಶ್ವಾಸದ ಊರ್ಧ್ವಗತಿಗೆ ಭದ್ರ ಬುನಾದಿಗಳಾಗಿ, ಅಚಲವಾಗಿ ಸಾಕ್ಷಿಯಾಗಿವೆ!
ಒಂದು ರೀತಿಯಿಂದ ಪರಿಶೀಲಿಸಿದರೆ, ಬದುಕಿನ ವಿವಿಧತೆಗೆ ಯಾವ ಮಿತಿಯೇ ಇಲ್ಲ. ಅದು ನಿರಂತರ ಹರಿಯುವ ನೀರಿನಂತೆ. ‘ಆದದ್ದೆಲ್ಲ ಒಳ್ಳೆಯದಕ್ಕೇ ಆಗಿದೆ. ಆಗುವದೆಲ್ಲಾ ಒಳ್ಳೆಯದೇ ಆಗುತ್ತಿದೆ. ಆಗಲಿರುವದೂ ಒಳ್ಳೆಯದೇ ಆಗಲಿದೆ. ರೋಧಿಸಲು ನೀನೇನು ಕಳೆದುಕೊಂಡಿರುವೆ? ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು? ನಾಶವಾಗಲು ನೀನು ಮಾಡಿರುವುದಾದರೂ ಏನು? ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ. ಏನನ್ನು ನೀಡಿದ್ದರೂ, ಅದನ್ನು ಇಲ್ಲಿಗೆ ನೀಡಿರುವೆ. ನಿನ್ನೆ ಬೇರಾದದ್ದೋ ಆಗಿದ್ದು, ಇಂದು ನಿನ್ನದಾಗಿದೆ. ಮತ್ತೆ ನಾಳೆ, ಇನ್ನಾರದ್ದೋ ಆಗಲಿದೆ. ಪರಿವರ್ತನೆ, ಜಗತ್ತಿನ ಅನಿವಾರ್ಯ ನಿಯಮ!’ ಎಂದು ಭಗವದ್ಗೀತೆ, ಸಾರಿ ಸಾರಿ ಹೇಳುತ್ತಿದೆ- ಒಂದು ಪ್ರತ್ಯಕ್ಷ ಸಾಕ್ಷಿಯ ತರಹ! ‘ ಈ ಜಗತ್ತಿನ ಎಲ್ಲ ಚರಾಚರ ವಸ್ತುಗಳಲ್ಲೂ ನಾನಿದ್ದೇನೆ ಹಾಗೂ ಅವೆಲ್ಲವೂ ನನ್ನಲ್ಲಿಯೇ ಇವೆ.’ ಎಂಬ ಶ್ರೀಕೃಷ್ಣನ ಮಾರ್ಮಿಕ ತಾತ್ವಿಕತೆಯ ಪರಾಕಾಷ್ಠೆಯ, ತರ್ಕದ ಕುತೂಹಲವನ್ನು ಮೀರಿದ, ಪರಿಜ್ಞಾನವಾಗುತ್ತಿದ್ದಂತೆ, ಅನಂತ ಆಧ್ಯಾತ್ಮಿಕತೆಯ, ಅದಮ್ಯ, ಆಂತರಿಕ ಮಾಧುರ್ಯದ ಬಾಗಿಲು ತೆರೆದುಕೊಳ್ಳುತ್ತದೆ!
ಕಾಲದ ಗರ್ಭದಲ್ಲಿ, ಅಸಾಧ್ಯವೆನ್ನುವದೇ ಇಲ್ಲ ಅನ್ನುವದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ‘….ಎಳೆಗರುಮ್ ಎತ್ತಾಗದೇ ಲೋಕದೊಳ್, ಕಾಲಾನು ಕಾಲಕ್ಕೆ ತಾಂ, ಬಡವಂ ಬಲ್ಲಿದನಾಗನೇ ಹರ ಹರಾ, ಶ್ರೀಚೆನ್ನ ಸೋಮೇಶ್ವರ!’ ಎಂದು ಸೋಮೇಶ್ವರ ಶತಕದಲ್ಲಿ, ಸಾರಿ ಸಾರಿ ಸೂಕ್ತವಾಗಿದೆ. ಯಾವುದೋ ಹತೋಟಿಯಲ್ಲಿಲ್ಲದ ಅನಿವಾರ್ಯ ವಿಷ ಘಳಿಗೆ / ವಿಷಮ ಪರಿಸ್ಥಿತಿ ಕೂಡ ನಿಲ್ಲದೇ, ಮಾಯವಾಗುತ್ತದೆ. ಅದೆಷ್ಟು ಶಕ್ತಿಶಾಲಿ ವಿಚಾರ! ಅಷ್ಟೇ ಅಲ್ಲ, ‘ಯತ್ತದಗ್ರೇ ವಿಷಮಿವ, ಪರಿಣಾಮೇ ಅಮೃತೋಪಮಮ್’ ಅನ್ನುವ ಗೀತಸುಧೆಯನ್ನು, ‘ನಾನು ಯಾರು’ ಎಂಬ ಪುಸ್ತಕದಲ್ಲಿ ಶ್ರೀ ರಮಣ ಮಹರ್ಷಿಗಳು, ಪ್ರಮಾಣಬಧ್ಧವಾಗಿ ಉದಾಹರಿಸಿದ್ದನ್ನು, ಅವರ ಶಿಷ್ಯೋತ್ತಮರು ಸಂಗ್ರಹಿಸಿಟ್ಟಿದ್ದಾರೆ.
ಇಲ್ಲಿ, ಒಂದು ವಿಶೇಷ ಕತೆಯ ನೆನಪಾಗುತ್ತದೆ. ಒಬ್ಬ ರೈತ ಭಕ್ತ, ಭಗವಂತನನ್ನು ಕುರಿತು ತಪಸ್ಸು ಮಾಡುತ್ತ, ತನ್ನ ಜೀವನ ಹಸನಾಗುವಂಥ ಅಪರೂಪದ ಬೀಜವೊಂದನ್ನು ದಯಪಾಲಿಸು ಅಂತ ಪ್ರಾರ್ಥಿಸುತ್ತಾನೆ. ತನ್ನ ಮುಷ್ಟಿಯಲ್ಲಿದ್ದ ಹಲವಾರು ಬೀಜಗಳಲ್ಲಿ, ಒಂದನ್ನು ಆರಿಸಲು ಭಕ್ತನಿಗೆ ಹೇಳಿದರೆ, ಅದನ್ನು ಭಗವಂತನಿಗೇ ಆಯ್ಕೆ ಮಾಡೆಂದು ಭಕ್ತ ತಿರುಗಿ ಕೇಳಿದಾಗ, ಭಗವಂತ ಉತ್ತರಿಸುತ್ತಾನೆ :
‘ ನಾನು ನಿನಗೆ ಬುದ್ಧಿಯನ್ನು ಕೊಟ್ಟೆ. ಹಾಗೂ ಅದರ ಜತೆಗೆ ಸರ್ವಸ್ವವನ್ನೂ ಕೂಡ. ಆದುದರಿಂದ ಆಯ್ಕೆ ನಿನ್ನದೇ.’ ಅಂದಾಗ, ಭಕ್ತ ಒಂದು ಬೀಜವನ್ನು ಎತ್ತಿಕೊಂಡ. ಹೊಂಡ ತೋಡಿ, ಆ ಬೀಜವನ್ನು ನೆಟ್ಟ. ನೀರೆರೆದ. ಗೊಬ್ಬರ ಸೇರಿಸಿದ. ಯೋಗಕ್ಷೇಮ, ಮಾಡಿದ. ಕಾಲಕ್ರಮೇಣ, ಬೀಜವೊಡೆದು, ಸಸಿಯಾಗಿ ಬೆಳೆಯುತ್ತ, ಉದ್ದವಾದ ಗಿಡವಾಯಿತು. ತೆನೆ ಬಂದರೂ, ಹಣ್ಣು ಕಾಣಿಸಲಿಲ್ಲ. ವರ್ಷವೇ ಆಯಿತು. ಫಲ, ಸಿಕ್ಕಲಿಲ್ಲವೆಂದು ಮತ್ತೆ ತಗಾದೆ ಮಾಡಿದಾಗ, ಭಗವಂತ, ಅದರ ಕಾಂಡವನ್ನು ತಿನ್ನಲು ಹೇಳಿದ. ಕಬ್ಬು, ಸಿಹಿಯೇ ಆಗಿತ್ತು. ಈಗ ಭಕ್ತನನ್ನು ಪ್ರಶ್ನಿಸಿದ. ‘ಹೇಳು, ಈ ಕಬ್ಬಿಗೆ ನಿಜವಾಗಿ, ಸಿಹಿಯನ್ನು ಕೊಟ್ಟವರು ಯಾರು? ಬೀಜವೇ? ಜಾಗವೇ? ಮಣ್ಣೇ? ಹವಾಮಾನವೇ? ನೀರೇ? ಸೂರ್ಯ ಪ್ರಕಾಶವೇ? ಗೊಬ್ಬರವೇ? ಗಾಳಿಯೇ?’ ಭಕ್ತ ನಿರುತ್ತರನಾದ. ಆಗ ಭಗವಂತನೇ ಉತ್ತರಿಸಿದ : ‘ನೀನು, ಅದರ ಉತ್ತರ ತಿಳಿಯ ಬೇಕಾದ್ದಿಲ್ಲ. ನಿನ್ನ ಪ್ರಯತ್ನ, ಕಾಳಜಿ ಪ್ರಾಮಾಣಿಕವಾಗಿದ್ದರೆ, ಅದಕ್ಕೆ ತಕ್ಕ ಫಲ, ಶತಃಸ್ಸಿಧ್ಧ!’
ಪರಮಹಂಸರ, ಒಂದು ಚಿಕ್ಕ ಕತೆಯೂ ಇಲ್ಲಿ ಪ್ರಾಸ್ತಾವಿಕವೆನಿಸುತ್ತದೆ. ಹಳ್ಳಿಯಲ್ಲೊಂದು ಏರ್ಪಡಿಸಿದ ಯಕ್ಷಗಾನ ನೋಡಲೆಂದು, ಒಬ್ಬಾತ, ಊಟ ಮುಗಿಸಿ, ಜಮಖಾನೆ ಸಮೇತ, ಮೊದಲೇ ತಲುಪಿದ್ದ. ಇನ್ನೂ ರಂಗಸಜ್ಜಿಕೆಯನ್ನು ಕಟ್ಟುತ್ತಿರುವದನ್ನು ನೋಡಿ, ಹೇಗೂ ತಡವಿದೆಯೆಂದು, ಸ್ವಲ್ಪ ಅಡ್ಡಾದ. ಮತ್ತೆ ಎಚ್ಚರವಾದಾಗ, ಟೆಂಟನ್ನು ಬಿಚ್ಚುತ್ತಿದ್ದರು. ಕಥೆ ಮುಗಿಯುತ್ತದೆ. ‘ಎಷ್ಟೋ ಜನರು, ಈ ಜಗತ್ತಿನಲ್ಲಿ ತಮ್ಮ ಉದ್ದೇಶವನ್ನು ಕಂಡುಕೊಳ್ಳುವ ಮೊದಲೇ, ಅಂತಿಮ ಅಧ್ಯಾಯದ ಕೊನೆ ತಲುಪಿರುತ್ತಾರೆ.’ ಈ ಸತ್ಯ ಅದೆಷ್ಟು ಆಘಾತಕರ!
ಜೀವನ ವಾಸ್ತವಿಕವಾಗಿ, ಅವಕಾಶಗಳ ಸಮುದ್ರವೇ ಆಗಿರುವದರಿಂದ, ಪ್ರತಿಯೊಬ್ಬನಿಗೂ ತನ್ನ ಅಸ್ತಿತ್ವದ ಗುರಿಯನ್ನು ಕಂಡುಕೊಳ್ಳುವದು, ಅಷ್ಟು ಸುಲಭ ಸಾಧ್ಯವಲ್ಲ. ಕಬ್ಬಿಣ ಕಾರ್ಖಾನೆಯ ಓರ್ವ ಕೂಲಿಕಾರನಾಗಿ ಜೀವನ ಆರಂಭಿಸಿ, ನಂತರ ಅಮೆರಿಕಾದ ಕಬ್ಬಿಣ ಕಾರ್ಖಾನೆಯ ಚಕ್ರವರ್ತಿಯೇ ಆದ, ಆಂಡ್ರೂ ಕಾರ್ನೆಗಿಯ ಮಹದಾಸೆ, ಜನ ಸಾಮಾನ್ಯ ಕೂಡ, ಬದುಕಿನ ಕಾಣದ ಕಡಲ ಹಾದಿಯಲ್ಲಿ, ಸ್ವಂತ ಗುರಿಯನ್ನು ನಿರೂಪಿಸಬಲ್ಲಂಥ ಮೂಲ ತತ್ವಗಳನ್ನು ಸಂಶೋಧಿಸಿ, ಆ ಸುಲಭ ಸೂತ್ರಗಳನ್ನು ಮಾರ್ಗದರ್ಶನೋಪಾದಿಯಲ್ಲಿ ಪುಸ್ತಕ ರೂಪದಲ್ಲಿಡಬೇಕೆಂಬುದು! ಈ ಮಹತ್ತರ ಪರಿಶೋಧನೆಗಾಗಿ, ಯಾವುದೇ ಪ್ರತಿಫಲಾಕ್ಷೆಯಿಲ್ಲದೆ, ತನ್ನ ಇಡೀ ಜೀವನವನ್ನೇ ಮುಡಿಪಾಗಿಡುವಂಥ ಸಶಕ್ತ, ಸುಯೋಗ್ಯ, ಸಂಯಮಶೀಲ ಹಾಗೂ ಸ್ವಾಭಿರುಚಿಯುಳ್ಳ ವ್ಯಕ್ತಿಗಾಗಿ, ಮುನ್ನೂರಕ್ಕೂ ಹೆಚ್ಚು ಯುವಜನರನ್ನು ಅತ್ಯಂತ ಕಠಿಣ ಪರೀಕ್ಷೆಗಳಿಂದ ಪರಿಶೀಲಿಸಿ, ಕೊನೆಯದಾಗಿ ‘ನೆಪೋಲಿಯನ್ ಹಿಲ್ ‘ ಎಂಬಾತನನ್ನು ಆಯ್ಕೆ ಮಾಡುತ್ತಾನೆ.
ನೆಪೋಲಿಯನ್ ಹಿಲ್, ಈ ಅದ್ವಿತೀಯ ಹಾಗೂ ಅಧ್ಭುತ ಆಹ್ವಾನವನ್ನು ಆದಾರೋತ್ಸಾಹದಿಂದ ಸ್ವೀಕರಿಸಿ, ಸುಮಾರು ಅರವತ್ತು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ, ಆಗಿನ ಜಾಗತಿಕ ಮಟ್ಟದ ವಿವಿಧ ಕ್ಷೇತ್ರಗಳ, ಮಹಾತ್ಮಾ ಗಾಂಧೀ ಸಮೇತ, ಐದು ನೂರಕ್ಕೂ ಮಿಕ್ಕಿದ, ಯಶಸ್ವೀ ಪುರುಷರ ಜೀವನ ಚರಿತ್ರೆಗಳ ಸುದೀರ್ಘ ಅಭ್ಯಾಸದ ನಂತರ, ಪುನಃ ಪುನಃ ಪ್ರಯತ್ನಿಸಿ, ಪ್ರಾಯೋಗಿಕವಾಗಿ ಅನುಸರಿಸಬಲ್ಲ ಹಾಗೂ ಸಂಗ್ರಹಯೋಗ್ಯ, ಸಮರ್ಥ, ಯಶಕಾರಕ ಸೂತ್ರಗಳನ್ನು ಹೊಂದಿದ, ಅನೇಕ ಪುಸ್ತಕಗಳನ್ನು ಬರೆದಿದ್ದಾನೆ. ತನ್ನ ವಿಚಾರ ಶಕ್ತಿಯ ಮೂಲಕ ಭಿನ್ನವಾದ, ಮನುಷ್ಯನ ಯಶಸ್ಸಿನ ಸೂತ್ರಗಳನ್ನು, ನಮೂದಿಸುತ್ತ , ‘ನಮ್ಮ ಯಶಸ್ಸಿಗೆ ನಾವೇ ಕಾರಣೀ ಭೂತರು!’ ಎಂದು ಮುಕ್ತಾಯಿಸಿದ್ದ. ಮೌನದಿಂದಲೇ ಆಕಾಂಕ್ಷಿಗಳ ಸಮಸ್ಯೆಗಳನ್ನು ನಿವಾರಿಸಿದ ಪರಮಾರ್ಥದ ರೂವಾರಿ, ರಮಣ ಮಹರ್ಷಿಗಳೂ ಕೂಡ ತೋರಿಸಿಕೊಟ್ಟಿದ್ದು, ಇದನ್ನೇ: ‘ಸಂಕಲ್ಪವೇ ಮನಸ್ಸಿನ ಸ್ವರೂಪ!’
ಸರ್ವರೂ ಸುಲಭವಾಗಿ, ಉಪಯೋಗಿಸಬಲ್ಲಂಥ ಸಮಯಕಾಲಿಕ, ಔಷಧಿಗಳನ್ನೊಳಗೊಂಡ ಸರಳ ಜ್ಞಾನ ಭಂಡಾರದ ಹೇರಳ ಖನಿಜಗಳ ಖಜಾನೆ, ಎಂದರೆ ಸುಭಾಷಿತಗಳು! ಬದುಕಿನ ಉದ್ದೇಶದ ಅಂತಿಮ ಪ್ರಶ್ನೆಯಲ್ಲಿ, ಮನುಷ್ಯನ ವಿಚಾರ ಶಕ್ತಿಗೆದುರಾದ ಅಸಾಮಾನ್ಯ ಸವಾಲಿಗೆ, ಉತ್ತರವಾಗಿ ನಿಂತ / ನಿಲ್ಲುವ, ಒಂದು ಬಲಿಷ್ಠ ಸಂಸ್ಕೃತ ಸುಭಾಷಿತ :
‘ಪ್ರಥಮೇ ನಾರ್ಜಿತಮ್ ವಿದ್ಯಾ, ದ್ವಿತೀಯೇ ನಾರ್ಜಿತಮ್ ಧನಂ I
ತೃತೀಯೇ ನಾರ್ಜಿತಮ್ ಪುಣ್ಯಂ, ಚತುರ್ಥೇ ಕಿಮ್ ಕರಿಷ್ಯಸಿ?’
ಯುಗಾದಿಯ ಕ್ಷಣ, ಪ್ರತಿಯೊಬ್ಬರ ವೈಯಕ್ತಿಕ ಜೀವನದಲ್ಲಿ, ಹೊಸ ಹುಟ್ಟಿನ ಜೀವಕೋಶವಿದ್ದಂತೆಯೇ! ಈ ಬೀಜಕೋಶದ ಆಯ್ಕೆ, ಅದೆಷ್ಟು ಮಹತ್ತರ ಹಾಗೂ ಜವಾಬ್ದಾರಿಯುತವಾಗುತ್ತದೆಂದರೆ, ಗೀತೋಪದೇಶದಲ್ಲಿ ಉಧೃತವಾದ ಶ್ರೀಕೃಷ್ಣನ ಈ ದಿಟ್ಟ, ಸಂಶಯರಹಿತ, ಕಾಲಾತೀತ ಮಾತುಗಳು ತನ್ನಿಂತಾನೇ ಗುಂಜನವಾಗುತ್ತವೆ : ‘ಮನಏವ ಮನುಷ್ಯಾಣಾಮ್ ಕಾರಣಂ ಬಂಧ ಮೋಕ್ಷಯೋ:’ ಒಟ್ಟಿನಲ್ಲಿ, ಅರಿಯಬೇಕಾದ ಪಂಚ ತತ್ವ ವೆಂದರೆ, ಬದುಕಿನಲ್ಲಿ ಕಂಡು ಕೊಂಡ ಉದ್ದೇಶಕ್ಕೆ, ಛಲ ಮತ್ತು ಸಮಯ ಪ್ರಜ್ಞೆಗಳ ಧನಾತ್ಮಕ ದೃಷ್ಟಿ ಜೋಡಿಸಿದ, ಶಿಸ್ತಿನ, ಪ್ರಗತಿಶೀಲ, ಪ್ರಯತ್ನಗಳ ತಾದಾತ್ಮ್ಯದಲ್ಲಿ, ಪರಿಪಕ್ವವಾಗುವ ಸ್ವಭಾವವೇ, ಅದೃಷ್ಟವಾಗಿ ಮಾರ್ಪಡುತ್ತದೆ!
ಈ ಹಿನ್ನೆಲೆಯಲ್ಲಿ, ಯುಗಾದಿಯದಿನದಂದು ಹೂಡುವ ಒಂದು ಧನಾತ್ಮಕ ‘ಸಂಕಲ್ಪ’ವಿದ್ದರೆ, ಅದು ಮೂಡುವ ‘ದಿಸೆ’ಯಲ್ಲಿಟ್ಟ, ನಿಷ್ಠೆಯ ಫಲಶೃತಿಯೇ ಜೀವನದ ‘ದೆಸೆ’ಯಾಗಬಲ್ಲುದಷ್ಟೇ!
-ಚಿಂತಾಮಣಿ ಸಭಾಹಿತ