(ಆನಂದಕಂದರ ಆಶಯದ ಮೊಳಗು)
(ಲೇಖಕರು: ಪ್ರೊ. ಪಿ. ಎನ್. ಮೂಡಿತ್ತಾಯ)
ಮಾರ್ಚ್ ೧೬. ಭಾಗ ೧
ಹಬ್ಬದ ಅಚ್ಚುಕಟ್ಟುತನ, ಕನ್ನಡದ ಬೇಂದ್ರೆ, ಕುವೆಂಪು, ಆನಂದ ಕಂದರ ಕವನಗಳ ಆಲಾಪನೆ ಮತ್ತು ಅವುಗಳ ಕಾವ್ಯ ಮೀಮಾಂಸೆ, ಆಯ್ದ ಲೇಖಕರ ಕಥೆಗಳ ವಾಚನ, ವಿಮರ್ಶೆ, ಕನ್ನಡ ವಿಮರ್ಶೆಯ ದಾರಿಯ ಸಮೀಕ್ಷೆ , ಹಿರಿಯ ಲೇಖಕರ ಕುರಿತು ವಿವಿಧ ಸಾಹಿತಿಗಳಿಂದ ನೆನಪಿನ ಸುರುಳಿ ಸಮರ್ಪಣೆ, ರಾಘವೇಂದ್ರ ಪಾಟೀಲರ ‘ಮತ್ತೊಬ್ಬ ಮಾಯಿ’ ಕಥೆಯ ರಂಗ ನಿರೂಪಣೆ ಹೀಗೆ ಮೊದಲ ದಿನ ಆನಂದಕಂದ ಸಾಹಿತ್ಯ ಹಬ್ಬ ಪೊಸಡಿ ಗುಂಪೆಯ ತಪ್ಪಲಿನ ಪ್ರಮೀಳ – ಮಾಧವ ದಂಪತಿಯ ಉದ್ಯಾನ ಪರಿಸರದಲ್ಲಿ ರಂಜಿಸಿತು.
ರಾಘವೇಂದ್ರ ಪಾಟೀಲರ ನುಡಿಗಳು.
ರಾಘವೇಂದ್ರ ಪಾಟೀಲರು ಆನಂದ ಕಂದರ ಮಾತುಗಳ ಧ್ವನಿಮುದ್ರಿಕೆಯನ್ನು ಚಾಲೂ ಮಾಡಿದರು. “ಭೂತ ಪಿಶಾಚಿಗಳ, ದುರಾಚಾರ ಅತ್ಯಾಚಾರ ಮತಾಚಾರ ವಾಮಾಚಾರ, ನಿಶಾಚಾರಗಳನ್ನೆಲ್ಲ ನಾವು ಮುಂದಿನ ಸಂತಾನಕ್ಕೂ ಬಳುವಳಿಯಾಗಿ ಕೊಡಬೇಕೇ ಅಥವಾ ಇಂದಿನ ನಮ್ಮ ಜೀವನದ ವಸ್ತುಸ್ಥಿತಿಯನ್ನು ಅರಿತು ಭವಿಷ್ಯವನ್ನು ಭದ್ರಪಡಿಸಬೇಕೇ? ಹಳೆಯ ಕಾಲವು ಸಂಪ್ರದಾಯಗಳನ್ನು ಒದಗಿಸಿಕೊಟ್ಟಿತು. ಅಂದಿನ ಸಾಮಾಜಿಕ ನೀತಿ ನಿಯಮಗಳು ಇಂದು ಉಳಿದಿಲ್ಲ. ಭಿನ್ನ ರೀತಿಯ ಆಸೆ ಆಕಾಂಕ್ಷೆಗಳು ನಮ್ಮ ಮುಂದಿವೆ. ಅಂದಿನ ಸಮಸ್ಯೆಗಳು, ಅವಿಭಕ್ತ ಕುಟುಂಬ ಜೀವನ ಹೋರಾಟಗಳಿಲ್ಲ. ಎಲ್ಲರೂ ಸಂಪಾದನೆ ಮಾಡಬೇಕು. ಹೆಚ್ಚು ಹಣ ಬೇಕು, ವೇಳೆ ಬೇಕು. ಅದನ್ನೆಲ್ಲ ಕಿತ್ತುಹಾಕಲೇ ಬೇಕೇ? ಮೂದಲಿಸಬೇಕಿಲ್ಲ. ಕ್ರಾಂತಿಯ ಅಗತ್ಯವೂ ಅಷ್ಟಿಲ್ಲ. ಬೇಡದ್ದು ಅಳಿಯುತ್ತದೆ. ಒಳಿತು ಉಳಿಯುತ್ತದೆ.” ನಂತರ ಕಾರ್ಯಕ್ರಮ ನಿರ್ವಹಣೆ, ಪರಿಚಯ ಕಥನ ವಂದನಾರ್ಪಣೆಗಳಂಥ ಅನೌಪಚಾರಿಕ ವಿಧಿ ವಿಧಾನಗಳನ್ನು ಬಿಟ್ಟು ನಿಗದಿತ ಸಮಯದೊಳಗೆ ನಡೆಯಲಿರುವ ವಿಚಾರವನ್ನು ತಿಳಿಸುತ್ತಿದ್ದಂತೆ ಸಭಾಸದರ ಕೈಗಳಿಗೆ ಎಲ್ಲರ ಕುರಿತ ಪರಿಚಯ, ಸಂಪನ್ಮೂಲ ವ್ಯಕ್ತಿಗಳ ಭಾವಚಿತ್ರಗಳನ್ನು ಒಳಗೊಂಡ ಪುಸ್ತಿಕೆಗಳನ್ನು ಹಂಚಲಾಯಿತು.
ಉದ್ಘಾಟಕರ ಮಾತು : ಲಕ್ಷ್ಮೀಶ ತೋಳ್ಪಾಡಿ
“”””””””””””””””””””””””””””””””””””
“೧೯೬೮ರಲ್ಲಿ ಬೆಟಗೇರಿ ಕೃಷ್ಣ ಶರ್ಮರನ್ನು ಕಂಡೆ. ನಾವು ಅಂದಿನ ವಿಶ್ವೇಶ ತೀರ್ಥರಿಂದ ವೇದಪಾಠವನ್ನು ಕೇಳುತ್ತಿದ್ದ ವೇಳೆಯಲ್ಲಿ ಹೊರಗೆ ಬೇಂದ್ರೆ ಮತ್ತು ಬೆಟಗೇರಿ ಬಂದಿದ್ದ ವಿಷಯವನ್ನು ಸ್ವಾಮೀಜಿಗೆ ತಿಳಿಸಲಾಯಿತು. ಅಲ್ಲಿಗೆ ತರಗತಿ ಮುಗಿಯಿತು. ಬೇಂದ್ರೆಯವರು ಜೊತೆಗಾರನನ್ನು ತೋರಿಸಿ ‘ಇವ ಬೆಟಗೇರಿ ಆನಂದ. ಕನ್ನಡಕ್ಕಾಗಿ ದುಡಿಯುವ ವ್ಯಸನ ಇದೆ’ ಎಂದು ಪರಿಚಯ ಮಾಡಿಸಿದರು. ಇಂಥ ಕನ್ನಡದ ಸ್ವಾರ್ಥವೇ ತನ್ನ ಸ್ವಾರ್ಥವಾಗಿರುವ ದೊಡ್ಡ ವ್ಯಕ್ತಿಗಳ ಹೆಸರಲ್ಲಿ ಇಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಅಭಿನಂದನೀಯ.
ಕಷ್ಟ, ಸಂಕಟಗಳನ್ನು ಮುಂದಿಡುವುದೂ ಒಂದು ರೀತಿಯ ಸಂಭ್ರಮ. ಕಷ್ಟ ಕಾಲದಲ್ಲಿ ಒಳ್ಳೆಯ ಸಾಹಿತ್ಯ, ಒಳ್ಳೆಯ ಕಾಲದಲ್ಲಿ ಯಥಾ ಯಥಾ ಸಾಹಿತ್ಯ ಹುಟ್ಟುತ್ತದೆ. ಜೀವನ್ಮರಣ ಪ್ರಶ್ನೆ ಎದುರಾದಾಗ ಚೈತನ್ಯ ಪ್ರಕಟವಾಗುತ್ತದೆ. ಮಾತಿನ ಮೂಲಕ ಸಂವಹನವೂ ಸಮಸ್ಯಾತ್ಮಕವಾಗಿದೆ. ವಾಲ್ಮೀಕಿಯ ಮಹಾಕಾವ್ಯ ಮಾತಿನಿಂದ ಹುಟ್ಟಿದ್ದಲ್ಲ. ಅದು ನಾದದಿಂದ, ಹಕ್ಕಿಯ ಆರ್ತನಾದದ ಆಲಿಸುವಿಕೆಯಿಂದ ಬಂತು. ನಂತರದ್ದೆಲ್ಲ ಮಾತಿನಿಂದ ಹುಟ್ಟಿದ ಮಾತುಗಳು ಅಷ್ಟೆ.
ಮುಗ್ಧತೆಯ ಶರಣಾಗತಿ ಸಹಜ, ಪರಿಪೂರ್ಣ. ಮುಗ್ಧತೆಯನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಹೇಳುವಿರಾದರೆ ನಿಮಗೆ ಮುಗ್ಧತೆ ಅರ್ಥವಾಗಲಿಲ್ಲ ಎಂದು ಅರ್ಥ. ನಾವು ಮುಗ್ಧರಾಗಿದ್ದ ಕಾಲವಿತ್ತು. ಪ್ರೇಕ್ಷಕರಿಗೆ ನೋವಾದೀತೆಂದು ಸಂವೇದನೆಯನ್ನು ಮುಚ್ಚಿಹಾಕುವುದು, ಅಡಗಿಸಿಡುವುದು ರೂಢಿಯಾಯಿತು. ಬುದ್ಧಿಯೇ ಎಲ್ಲ ಕೆಲಸವನ್ನು ಮಾಡುತ್ತದೆ. ಚೆನ್ನಾಗಿ ಮಾತಾಡುತ್ತೇವೆ. ಹಾಗಾಗಿ ಪ್ರಜ್ಞಾ ಪೂರ್ವಕ ಮೀಮಾಂಸೆ ಬಿಟ್ಟು ಮುಟ್ಟದೇ ಇದ್ದ ಸಂಗತಿಗಳ ಕಡೆಗೆ ಮನಸ್ಸು ಹೋಗಬೇಕಿದ್ದರೆ ಮುಗ್ಧತೆ ಒಂದೇ ದಾರಿ. ಈ ವಿಚಾರ ಮಹಾಭಾರತದಲ್ಲಿದೆ. ಗೆದ್ದವರ ದುಃಖವೇ ನಿಜವಾದದ್ದು ಎಂದು ವ್ಯಾಸರು ಎನ್ನುತ್ತಾರೆ. ಸೋತವನ ದುಃಖ ಅಹಂಕಾರಕ್ಕೆ ಸಿಕ್ಕ ಫಲ. ಇನ್ನು ಮುಂದಾದರೂ ಗೆಲ್ಲಬೇಕೆಂದು ಅವನು ತಯಾರಾಗುತ್ತಾನೆ. ಗೆದ್ದವನದ್ದೇ ನಿಜವಾದ ದುಃಖ. ಯುಧಿಷ್ಠಿರ, ತನ್ನದು ಜಯವೋ ಪರಾಜಯವೋ ಎಂಬ ಗೊಂದಲದಿಂದ ತೊಳಲುತ್ತಾನೆ. ಇಂಥ ಸಂಕಟವನ್ನು ವರ್ಣಿಸುವುದು ಹೇಗೆ ? ತನಗೆ ವಿಜಯೋತ್ಸವ ಬೇಕಾಗಿಲ್ಲ ಎನ್ನುವ ಅವನ ತೊಳಲಾಟವನ್ನು ವರ್ಣಿಸುವಲ್ಲಿ ಭಾಷೆ ಸೋಲುತ್ತದೆ. ಸಂಕಟದಲ್ಲಿ ಸೃಷ್ಟಿಶೀಲವಾಗುವ ಚೈತನ್ಯದ ರಹಸ್ಯವನ್ನು ಭೇದಿಸಬೇಕು. ನಂತರ ಬರೆಯಬೇಕು. ಸಾಮೂಹಿಕತೆ, ಗುಂಪಿನ ಕ್ರಿಯಾಶೀಲತೆಯಲ್ಲಿ ಪಾಪಪ್ರಜ್ಞೆ ಇರುವುದಿಲ್ಲ. ವ್ಯಕ್ತಿಗೆ ಇರುತ್ತದೆ. ಒಂದು ತಂಡ ಮಾಡುವ ಕೊಲೆ, ಬಲಾತ್ಕಾರ ಮುಂತಾದವುಗಳನ್ನು ಶೌರ್ಯ ಎಂಬಂತೆ ಕಾಣುವುದೇ ಹೆಚ್ಚು . ಉದಾಹರಣೆಗೆ, ಒಂದು ಜನಾಂಗವನ್ನೆ ಕೊಂದುಹಾಕಿದರೆ ಅದು ‘ವೀರ’ ಎನಿಸಿಕೊಳ್ಳುತ್ತದೆ. ವ್ಯಕ್ತಿ ಇನ್ನೊಬ್ಬನನ್ನು ಕೊಂದರೆ ಗರಿಷ್ಠ ಶಿಕ್ಷೆಗೆ ಒಳಗಾಗುತ್ತಾನೆ.”
ಸಾಹಿತ್ಯ ವ್ಯರ್ಥಾಲಾಪವಾಗುತ್ತಿರುವ ಬಗ್ಗೆ ತೋಳ್ಪಾಡಿಯವರು ಹೀಗೆ ಮಾರ್ಮಿಕವಾಗಿ ಮಾತನಾಡಿದರು.
ರಾಘವೇಂದ್ರ ಪಾಟೀಲ ಅವರಿಗೆ ಪ್ರಮೀಳ ಮಾಧವ ಅವರಿಂದ ನೆನಪಿನ ಕಾಣಿಕೆ.
ಆನಂದ ಕಂದರು ಪತ್ರಿಕೋದ್ಯಮದಲ್ಲಿ ಮಾಡಿದ ಸಾಧನೆಗಳನ್ನು ಆಶಯ ನುಡಿಗಳ ಮೂಲಕ ಪರಿಚಯಿಸಿದ ಎಂ. ಜಿ. ಹೆಗಡೆಯವರು, ಕಾಲದಿಂದ ಕಾಲಕ್ಕೆ ವಿಮರ್ಶೆಯ ರೀತಿಯಲ್ಲಿ ನಡೆದ ಸಾಧನೆಗಳನ್ನು ಪಟ್ಟಿ ಮಾಡುತ್ತಾ ಇತ್ತೀಚೆಗೆ ವಿಮರ್ಶಾ ಲೋಕದಲ್ಲಿ ಪಾಂಡಿತ್ಯ ಪ್ರದರ್ಶನ ಹೆಚ್ಚಾಗಿ ಬೆಳೆದುದನ್ನು ನೆನಪಿಸಿದರು. ಓದುಗರ ಅಭಿರುಚಿಯನ್ನು ತಿದ್ದುವ ಕೆಲಸ ಸಾಧುವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಕವಿತೆಗಳ ವಾಚನ, ಗಾಯನ ಮತ್ತು ಮನನ ಎಂಬ ವಿಶಿಷ್ಟ ಗೋಷ್ಠಿಯಲ್ಲಿ ವಿಭಾಶ್ರೀ ಬೆಳ್ಳಾರೆ ಮೂರು ಕವಿತೆಗಳ ವಾಚನ ಮಾಡಿದಾಗ ಡಾ. ಮಹೇಶ್ವರಿಯವರು ಸ್ವಾರಸ್ಯಗಳ ಜೊತೆ ವಿಮರ್ಶಾತ್ಮಕ ನೋಟವನ್ನು ಮುಂದಿಟ್ಟರು. ಚಂದ್ರಶೇಖರ ವಸ್ತ್ರದ, ಸಿ. ಕೆ. ನಾವಲಗಿ ಮತ್ತು ಕಲ್ಲಚ್ಚು ಮಹೇಶ ಆ ಕವಿತೆಗಳ ವಾಚನ ಮಾಡಿದ್ದರು. ಮಾಸ್ತಿಯವರ ‘ವೆಂಕಟಿಗನ ಹೆಂಡತಿ’ ಮತ್ತು ಆನಂದಕಂದರ ‘ಮಾಲ್ಕೀ ಹಕ್ಕು’ ಕಥೆಗಳ ವಾಚನ ಮತ್ತು ವಿಶ್ಲೇಷಣೆ ಎಂಬ ಮುಂದಿನ ಗೋಷ್ಠಿಯಲ್ಲಿ ಪ್ರವೀಣ ಪದ್ಯಾಣ, ಮಹಾದೇವ ಹಡಪದ ಮತ್ತು ವಿಕಾಸ ಹೊಸಮನಿ ಭಾಗವಹಿಸಿದರು. ೧೯೩೩ರ ದಶಕದ ಮೊದಲ ಕಾಲಘಟ್ಟದ ಸಣ್ಣಕಥೆಗಳ ಪೈಕಿ ಆನಂದಕಂದರ ಕೊಡುಗೆಯ ಬಗ್ಗೆ ಸಂವಾದ ನಡೆಯಿತು.
ಕನ್ನಡ ವಿಮರ್ಶೆ ಎತ್ತ ಸಾಗಿದೆ? ಎಂಬ ವಿಷಯ ಡಾ. ವರದರಾಜ ಚಂದ್ರಗಿರಿ ಅವರಿಂದ ಪ್ರಸ್ತಾಪಿಸಲ್ಪಟ್ಟು ಡಾ. ಗಿರೀಶ ಭಟ್ಟ ಅಜಕ್ಕಳ , ಡಾ. ಬಾಲಕೃಷ್ಣ ಹೊಸಂಗಡಿ , ವಿಕಾಸ್ ಹೊಸಮನಿ ಅವರ ಚಾವಡಿ ಚರ್ಚೆಯ ಮೂಲಕ ತುಂಬ ಹೃದ್ಯವಾಗಿ ಮೂಡಿ ಬಂತು. ಕೃತಿ ಕೇಂದ್ರಿತ ವಿಮರ್ಶೆಯ ಕಾಲಘಟ್ಟವನ್ನು ದಾಟಿ ಬರಲು ಪ್ರಚೋದನೆಯಾದ ಸಾಕ್ಷಿ, ರುಜುವಾತು ಪತ್ರಿಕೆಗಳ ಕುರಿತು ಪ್ರಸ್ತಾಪ ಮಾಡಿದ ಬಾಲಕೃಷ್ಣ ಹೊಸಂಗಡಿಯವರು ಪಕ್ಷಪಾತಿ ವಿಮರ್ಶೆ, ಗುಣ ಪಕ್ಷಪಾತದ ಬೆಳವಣಿಗೆ, ಪತ್ರಿಕೆಗಳ ಮೂಲಕ ನಡೆಯುತ್ತ ಬಂದ ವೇಗದ, ಆದರೆ ಆಯ್ಕೆಯ ವಿಮರ್ಶೆ, ಅಂಥ ಸಂದರ್ಭದಲ್ಲಿ ವ್ಯಾಸ – ತಿರುಮಲೇಶರ ವಿಮರ್ಶೆಗಳ ಕಡೆಗಣನೆ, ಉತ್ತಮ ಕವಿಗಳ ಸಾಲಿನಲ್ಲಿ ಆನಂದಕಂದರ ಹೆಸರನ್ನು ಮರೆತು ಮಂದುವರಿದ ಕ್ರಮಗಳ ಕುರಿತು ಪ್ರತಿಕ್ರಿಯೆ ಮುಂದಿಟ್ಟರು. ಡಾ. ವರದರಾಜರು ವಿಮರ್ಶೆಯ ಲೋಕದಿಂದ ಅವಗಣನೆಗೊಳಗಾದ ಕವಿ, ಸಾಹಿತಿಗಳ ಹೆಸರುಗಳು, ಅವರ ಸುತ್ತ ಹಬ್ಬಿದ ಅಹವಾಲುಗಳನ್ನು ವಿವರಿಸಿದ್ದಲ್ಲದೆ ಇದೇ ವೇಳೆಯಲ್ಲಿ ಇತರ ಭಾರತೀಯ ಸಾಹಿತ್ಯ ಮುಖ್ಯವಾಗಿ ಮಲಯಾಳ ವಿಮರ್ಶೆಯ ಕುರಿತೂ ಬೆಳಕು ಚೆಲ್ಲುವುದಕ್ಕೆ ಪ್ರೇರಣೆ ನೀಡಿದರು. ನೀ ನನಗಿದ್ದರೆ ನಾನಿನಗೆ ತತ್ವ, ನವ್ಯ ವಿಮರ್ಶೆ ಹುಟ್ಟು ಹಾಕಿದ ಗೊಂದಲ, ಭಾರತೀಯ ಸಾಹಿತ್ಯವನ್ನು ಗೌರವಿಸಿದ ವಿ. ಸೀ, ಶಂಕರ ಮೊಕಾಶಿ ಪುಣೇಕರ, ಗೋಕಾಕರನ್ನು ಅವಗಣಿಸಲು ಕಾರಣವಾದ ಸಂದರ್ಭಗಳು, ವಿಶಿಷ್ಟ ಪ್ರತಿಭೆಗಳನ್ನು ವಿಕ್ಷಿಪ್ತರು ಎಂಬಂತೆ ನಡೆಸಿಕೊಂಡ ಅನ್ಯಾಯ, ಸುತ್ತು ಗೋಡೆಗಳನ್ನು ಕಟ್ಟಿಕೊಂಡು ಗುಂಪುಗಾರಿಕೆಯಲ್ಲಿ ತೊಡಗಿಕೊಂಡ ಕನ್ನಡ ವಿಮರ್ಶಕರ ಹೀನಾಯ ಸ್ಥಿತಿಗಳನ್ನು ಉದಾಹರಣೆ ಸಹಿತ ವಿಶ್ಲೇಷಿಸಿದರು. ಈ ಗೋಷ್ಠಿಗೆ ಸಂಬಂಧಿಸಿದ ಸಂವಾದದ ಆಳ ವಿಸ್ತಾರ ಕೇಳುಗರನ್ನು ಬಹಳಷ್ಟು ಸೆಳೆಯಿತು. ಅಜಕ್ಕಳ ಗಿರೀಶ ಭಟ್ಟರು ಇತ್ತೀಚಿನ ಕೃತಕ ಬುದ್ಧಿಮತ್ತೆಯ ಕಾರಸ್ಥಾನವನ್ನು ಸ್ವಾರಸ್ಯಕರವಾಗಿ ಪರಿಚಯಿಸಿದರು. ವಿಮರ್ಶೆಯಲ್ಲಿ ಭಾರತೀಯ ಮೀಮಾಂಸೆಯ ಬಳಕೆ, ಕನ್ನಡದ್ದೇ ಆದ ರೀತಿ, ಪಾಶ್ಚಾತ್ಯ ತತ್ವ ಸಿದ್ಧಾಂತಗಳ ದಾರಿಗಳಿಗೆ ಸಂಬಂಧಿಸಿದ ದೃಷ್ಟಿಕೋನವನ್ನು ಮುಂದಿಡುತ್ತಾ, ಕೃತಿಯ ವಸ್ತು ಮತ್ತು ತಂತ್ರದ ಕುರಿತ ನೋಟ ಮುಖ್ಯ ಎಂದರು. ಸಾಹಿತ್ಯದ ನೋಟ, ಆಕರ್ಷಣೆ ಮತ್ತು ವಿಷಯಗಳ ಮೇಲೆ ಪ್ರಾಮಾಣಿಕ ಪ್ರತಿಕ್ರಿಯೆಗೆ ಕರೆ ಕೊಟ್ಟರು. ಮುನ್ನೂರು, ಇನ್ನೂರು, ನೂರು ಹೀಗೆ ಕೃತಿ ಪ್ರಕಟಣೆ ಮಾಡಿ ಮರುಮುದ್ರಣದ ದಾಖಲೆ ವ್ಯಕ್ತಪಡಿಸಿ, ಆ ಮೂಲಕ ಹೆಸರು ಮಾಡುವ ವಿಧಾನಗಳ ಕುರಿತೂ ಮಾತು ಬಂತು. ಆಧುನಿಕ ಜಾಲತಾಣಗಳು ಓದುಗರ ರುಚಿಯನ್ನು ಬದಲಿಸಿಬಿಟ್ಟ, ಸಾಹಿತ್ಯ ರಾಶಿ ಸಂಖ್ಯೆಯಲ್ಲಿ ಅಪಾರವಾಗಿಬಿಟ್ಟ ಈ ಕಾಲಘಟ್ಟದಲ್ಲಿ ಕೃತಿಗಳ ಹಿನ್ನೆಲೆ ಮುನ್ನೆಲೆಗಳ ಕುರಿತ ಚರ್ಚೆ ಗೊಂದಲದ ಗೂಡಾದ್ದನ್ನೂ ಕಂಡರಿಸಲಾಯಿತು.
ಸೃಜನ ಶೀಲತೆ ಮಂಕಾಗುತ್ತಿರುವುದೂ ಗಮನಾರ್ಹವಾಗಿದೆ. ಕಂಪ್ಯೂಟರಿನಿಂದಾಗಿ ಜನರಲ್ಲಿ ಹೆಚ್ಚಿದ ನಿಷ್ಕ್ರಿಯತೆಯಿಂದ ಕಂಪ್ಯೂಟರ್ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಇದರಿಂದಾಗಿ ವಿಮರ್ಶೆ ಆಳ ವಿಸ್ತಾರಗಳನ್ನು ಕಾಣದೆ ಅಲ್ಲಲ್ಲಿ ಇಂಗಿಹೋಗುವ ದೃಶ್ಯಗಳೂ ಗೋಚರವಾಗುತ್ತವೆ.
ಮಧ್ಯಾಹ್ನದ ಗೋಷ್ಠಿಯಲ್ಲಿ ಹಿರಿಯರೊಂದಿಗೆ ನಡೆದ ರಸ ಪ್ರಸಂಗಗಳ ಸ್ಮರಣೆಗೆ ತೊಡಗಿದ ಡಾll ನಾ ಮೊಗಸಾಲೆಯವರು ಗೋವಿಂದ ಪೈ, ನಿರಂಜನ, ಹಾ. ಮಾ. ನಾಯಕರ ಜೊತೆಗೆ ವ್ಯವಹರಿಸಿದ ಸಂದರ್ಭಗಳ ಅನುಭವಗಳನ್ನು ಹಂಚಿದರು. ಡಾ. ಸುಭಾಷ್ ಪಟ್ಟಾಜೆಯವರು ಕನ್ನಡದ ಮಹತ್ವದ ಕವಿ ಕೆ. ವಿ. ತಿರುಮಲೇಶ್ ಅವರನ್ನು ಭೇಟಿಯಾದ ಸಂದರ್ಭಗಳ ಸ್ವಾರಸ್ಯಗಳನ್ನು ವ್ಯಕ್ತಪಡಿಸಿದರು. ವಿಕಾಸ ಹೊಸಮನಿಯವರು ರಾಘವೇಂದ್ರ ಪಾಟೀಲರ ಬಗ್ಗೆ ಮಾತನಾಡಿದರು.
ರಾಘವೇಂದ್ರ ಪಾಟೀಲರ ‘ಮತ್ತೊಬ್ಬ ಮಾಯಿ’ ಕಥೆಯ ರಂಗ ಪ್ರಸ್ತುತಿ ಪ್ರೇಕ್ಷಕರಿಗೆ ಒಳ್ಳೆಯ ಅನುಭವ ಕೊಟ್ಟಿತು. ಧಾರವಾಡದ ಆಟ ಮಾಟ ತಂಡದ ಮಹಾದೇವ ಹಡಪದ, ಮಂಜುನಾಥ ಬಗಲಿ ಹೆಣೆದ ಮಾತುಕತೆ ಅಪೂರ್ವ ಹೊಂದಾಣಿಕೆಯಿಂದ ಕೂಡಿತ್ತು. ಘಟನಾವಳಿಯನ್ನು ಸಂಭಾಷಣೆ, ಚಲನೆ, ಮೌನ, ಅಲ್ಲಲ್ಲಿ ಪಾತ್ರಗಳು ಸ್ತಬ್ಧವಾಗಿ ಕಾಲದ ಅಂತರವನ್ನು ಪ್ರಸ್ತುತ ಪಡಿಸಿದ ರೀತಿಗಳಿಂದ ಮೈತುಂಬಿ ಮನ ಸೂರೆಗೊಂಡಿತು. ಎಲ್ಲೂ ಎಡವದ ನಿರರ್ಗಳ ಸಂಭಾಷಣೆ, ದುರಂತದ ಕಡೆಗೆ ಜಾರುವ ಕಥೆಯ ಗತಿ ನಾಟಕಕಾರನ ಸಾಹಿತ್ಯದ ಸೊಗಸಿಗೆ ಸಾಕ್ಷಿಯಾಯಿತು. ತಂಡದ ಯೋಜಿತ ದುಡಿಮೆ, ಪರದೆ ಬೆಳಕಿನ ಥಳಕು, ಕೊನೆಗೆ ವೇದಿಕೆಗಳಿಲ್ಲದೆ ಬೀದಿ ನಾಟಕದಂತೆ ಪ್ರದರ್ಶನಗೊಂಡ ಈ ರೂಪಕ ಎಂದಿಗೂ ಮರೆಯಲಾಗದ್ದು.
ತಾ ೧೭ : ಎರಡನೇ ದಿನ ಪೂರ್ವಾಹ್ನ (ಭಾಗ ೨)
“””'”””””””””””””””””””””””””
ಡಾ. ಬೆಟಗೇರಿ ಕೃಷ್ಣ ಶರ್ಮ ಸ್ಮಾರಕ ಟ್ಟಸ್ಟ್ ಮತ್ತು ಶಂಪಾ ಪ್ರತಿಷ್ಠಾನದ ಆನಂದಕಂದ ಸಾಹಿತ್ಯ ಹಬ್ಬದ ಎರಡನೇ ದಿನ ‘ಸಂಶೋಧನಾ ಪರಿಕಲ್ಪನೆಗಳ ಸತ್ಯಾಸತ್ಯತೆ ಮತ್ತು ವಿಮರ್ಶೆಯ ಹೊರ ಚಾಚುಗಳು’ ಎಂಬ ವಿಚಾರ ಸಂಕಿರಣದಲ್ಲಿ ಮಂಡಿಸಿದ ವಿಚಾರಗಳು ಎಲ್ಲರಿಗೂ ಮೆಚ್ಚುಗೆಯಾದವು.
“ಕವಿರಾಜಮಾರ್ಗಕಾರ, ಕೇಶಿರಾಜ, ಭಟ್ಟಾಕಳಂಕ, ಮಲ್ಲಿನಾಥ ಮುಂತಾದವರು ತಮ್ಮನ್ನು ಸಂಶೋಧಕರೆಂದು ಹೇಳಿಕೊಳ್ಳಲಿಲ್ಲ. ೧೯ ನೇ ಶತಮಾನದಲ್ಲಿ ಕನ್ನಡದಲ್ಲಿ ಅಂಥವರನ್ನು ಗೌರವಿಸುವ ಪಂಡಿತ ಪರಂಪರೆ ಇತ್ತು. ಇಂಗ್ಲಿಷ್ ಪ್ರಭಾವದಿಂದ ಮುಂದೆ ಎರಡೂ ಬಗೆಯ ಅಧ್ಯಯನದ ಶಿಸ್ತು ಪ್ರವೇಶಿಸಿ ಅಕಡೆಮಿಕ್ ಚೌಕಟ್ಟು ರೂಪುಗೊಂಡಿತು. ಅದರಿಂದ ವಿಮರ್ಶೆ ಹಾಗೂ ಸಂಶೋಧನೆ ಬೆಳೆಯಿತು. ವಿಮರ್ಶೆ ವ್ಯಾಖ್ಯಾನಾತ್ಮಕ ಸಂಶೋಧನೆಯಾಗಿಯೂ ಸಂಶೋಧನೆ ವಿಶ್ಲೇಷಣಾತ್ಮಕ ವಿಮರ್ಶೆಯಾಗಿಯೂ ಚಾಲೂ ಆದವು” ಎಂಬ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಡಾ. ಮೋಹನ ಕುಂಟಾರ್ “ಸಂಶೋಧನೆಯು ಸತ್ಯ ಶೋಧನೆ ಹೌದಾದರೆ ಅಲ್ಲಿ ಅಸತ್ಯ ತಲೆ ಹಾಕಿದ್ದು ಹೇಗೆ ?” ಎಂಬ ಪ್ರಶ್ನೆಯನ್ನು ಮುಂದಿಟ್ಟರು. “ಲಿಖಿತ ಸಾಹಿತ್ಯ, ಜನಪದ ,ಪಾಶ್ಚಾತ್ಯ ವಿದ್ವಾಂಸರ ಕೊಡುಗೆ ಮುಂತಾದ ಹಲವು ಪರಿಕಲ್ಪನೆಗಳು ಇವೆ. ಆಧುನಿಕವಾದ ಆರ್ಯದ್ರಾವಿಡ ನಿಜವಾಗಿಯೂ ಇದೆಯೇ? ಜಾಗತೀಕರಣ, ವಸಾಹತುವಾದ, ವಸಾಹತೋತ್ತರವಾದ, ರಾಷ್ಟ್ರೀಕರಣ, ರಾಷ್ಟ್ರೀಯತೆಗಳು ತಂದ ಪರಿಕಲ್ಪನೆಗಳ ಕಥೆ ಏನು? ಇನ್ನು ತಾನೇ ರೂಪಿಸಿಕೊಳ್ಳುವ ಪರಿಕಲ್ಪನೆಗಳಿಂದ ವ್ಯಾಖ್ಯಾನಿಸಿಕೊಳ್ಳುವ ರೀತಿಯೂ ಇದೆ. ಮುಸ್ಲಿಂ , ಸ್ತ್ರೀವಾದಿ ಪರಿಕಲ್ಪನೆಗಳಿವೆ. ಹಾಗೇ ಸಾಹಿತ್ಯ ಪ್ರಣೀತಗಳನ್ನು ಕನ್ನಡದ ಸಂದರ್ಭದಲ್ಲಿ ಹೇಗೆ ಬಳಸಿಕೊಳ್ಳಬೇಕು?” ಹೀಗೆ ವಿಷಯವನ್ನು ಮುಂದಿಟ್ಟ ಮೋಹನ ಕುಂಟಾರು ಅವರಿಗೆ ಧನಂಜಯ ಕುಂಬ್ಳೆ ಉತ್ತರಿಸಿದರು :
ವಿಭಾಶ್ರೀ ಬೆಳ್ಳಾರೆ ಅವರಿಂದ ಕಾವ್ಯ ಗಾಯನ.
“ಮಾಸ್ತಿಯವರ ಸಣ್ಣ ಕತೆಗಳ ಅಧ್ಯಯನದ ಮಹಾ ಪ್ರಬಂಧ ಸಮರ್ಪಿಸಿದಾಗ ಮೌಲ್ಯಮಾಪಕರು ‘ಮಾಸ್ತಿಯವರು ಪುರೋಹಿತ ಶಾಹಿ ಅಲ್ಲವೆ ?’ ಎಂಬ ಪ್ರಶ್ನೆಯನ್ನು ಮುಂದಿಟ್ಟು ವಿರೋಧಿಸಿದರು. ಅದೇ ರೀತಿ ಮೊಗಸಾಲೆಯವರ ಕೊಡುಗೆಗಳ ಅಧ್ಯಯನಕ್ಕೆ ‘ಆ ವ್ಯಕ್ತಿ ದಲಿತರ ಪರ ಅಲ್ಲ ಅಂತ ಹೇಳಬೇಕಾಗಿತ್ತು’ ಎಂದು ಪ್ರತಿಕ್ರಿಯಿಸಿದರು. ಕೊಡಗಿನ ಪ್ರಾದೇಶಿಕ ಸಂಸ್ಕೃತಿಯ ಅಧ್ಯಯನ ಮಾಡಿದಾಗ ‘ಕೊಡಗರು ಭೂಮಾಲಿಕರಲ್ಲವೇ? ಇದರಲ್ಲಿ ಕಾರ್ಮಿಕರ ಶೋಷಣೆಯ ವಿಚಾರ ಎಲ್ಲಿದೆ? ಕೊಡಗರು ಕಾರ್ಮಿಕ ವಿರೋಧಿಗಳಲ್ಲ ಎಂದು ಬರೆದಿದ್ದೀರಿ’ ಎಂಬ ವಿಚಿತ್ರ ಆಕ್ಷೇಪ ಬಂದಿತ್ತು. ಸಂಶೋಧಕನಿಗೆ ಇಂಥ ಹಲವು ಒತ್ತಡಗಳು ಎದುರಾಗುತ್ತವೆ. ಆದರೆ ಇಟ್ಟುಕೊಂಡ ಪರಿಕಲ್ಪನೆ, ಸಿದ್ಧಾಂತಗಳ ಚೌಕಟ್ಟಿಗೆ ಒಗ್ಗುವಂತೆ ಜೋಡಿಸುವ ಕ್ರಮಕ್ಕೆ ಬಂದ ಮೇಲೆ ಸಂಶೋಧನೆಯ ಫಲದಲ್ಲಿ ಅಸತ್ಯ ಸುಳಿಯಲಾರದು. ಸಂಶೋಧಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಗೌರವಿಸಲೇಬೇಕು. ಈ ನಿಟ್ಟಿನಲ್ಲಿ ‘ನಿಮ್ಮ ನೂರು ಆಲೋಚನೆಗಳನ್ನು ನಾನು ಒಪ್ಪದಿರಬಹುದು. ಆದರೆ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಒಂದು ಪ್ರಸಂಗ ನಡೆದರೂ ಕೂಡ ನನ್ನ ಜೀವ ಕೊಟ್ಟಾದರೂ ವಿರೋಧಿಸುತ್ತೇನೆ.’ ಎಂದ ವಾಲ್ಟರನ ಮಾತು ಇಲ್ಲಿ ಪ್ರಸ್ತುತವಾಗುತ್ತದೆ. ಪರಿಕಲ್ಪನೆಗಳು ಹೇರಿಕೆ ಆಗಬಾರದು. ಭೂತಾರಾಧನೆ, ಕುಣಿತಗಳ ಅಧ್ಯಯನಗಳನ್ನು ಪಾಶ್ಚಾತ್ಯ ವಾದಗಳ ಮೂಲಕ ಭೇದಿಸಲಾಗದು. ಹೀಗಿರುವಾಗ ಸಂಶೋಧಕ, ಮಾರ್ಗದರ್ಶಕರು ಜಾಗರೂಕರಾಗಿರಬೇಕು. ತರ್ಕ ಹಾಗೂ ತಾತ್ವಿಕತೆಗಳಿಗೆ ಗೌರವ ಕೊಡದಿದ್ದರೆ ಅದು ಸಂಶೋಧನೆ ಅಲ್ಲ.”
ವಿಭಾಶ್ರೀ ಅವರ ಕಾವ್ಯಗಾಯನಕ್ಕೆ ಡಾ. ಮಹೇಶ್ವರಿ ಯು ಅವರ ವ್ಯಾಖ್ಯಾನ
ಡಾ. ರಾಧಾಕೃಷ್ಣ ಬೆಳ್ಳೂರರ ಅಭಿಪ್ರಾಯವೂ ಸಂಶೋಧನಾ ವಲಯದ ಇತ್ತೀಚಿನ ಕಳಪೆ ಸ್ಥಿತಿಯನ್ನು ಪುಷ್ಟೀಕರಿಸುವಂತಿತ್ತು. “ಸತ್ಯ ಅಸತ್ಯ ನೂರಕ್ಕೆ ನೂರು ಸಾಪೇಕ್ಷ ಅಲ್ಲ. ಆದರೆ ಅಧ್ಯಯನಗಳು ಖಚಿತತೆ ಇಲ್ಲದೆ ಮುಗಿಯ ಕೂಡದು. ಉದ್ದೇಶ ಈಡೇರದಿದ್ದರೆ ಸೋಲಾಗುತ್ತದೆ. ಪರಿಕಲ್ಪನೆಗೆ ಬೇಕಾದ ಹಾಗೆ ಹೊಂದಿಸಿಕೊಂಡು ಹೋಗುವಾಗ ಹೊಂದಾಣಿಕೆ ಆಗದೇ ಇದ್ದರೆ ಸುಳ್ಳನ್ನು ಸೇರಿಸಬೇಕಾಗುತ್ತದೆ. ಆದರೆ ಪರಿಕಲ್ಪನೆ ಅಸತ್ಯವಾಗದು. ತಾನು ಮಾಡಬಾರದ್ದನ್ನು ಮಾಡ ಹೊರಟರೆ ಸಂಶೋಧಕನ ದಿಕ್ಕು ತಪ್ಪುತ್ತದೆ. ಸುಮಾರು ಎಪ್ಪತ್ತೈದು ಮಹಾಪ್ರಬಂಧಗಳನ್ನು ಮೌಲ್ಯ ಮಾಪನ ಮಾಡಿದ ನನಗೆ ಸಮರ್ಪಕವೆಂದು ಕಂಡದ್ದು ಎರಡೋ ಮೂರೋ. ಆ ಮೂವರೂ ಅಕಡೆಮಿಕ್ ವಲಯದವರಲ್ಲ.”
ಇದಕ್ಕೆ ರಾಘವೇಂದ್ರ ಪಾಟೀಲರು ಹೇಳಿದ್ದು ಹೀಗೆ : “ವಿಜ್ಞಾನ ವಿಷಯಗಳಲ್ಲಿ ಪರಿಕಲ್ಪನೆಗಳು ನಿರ್ದುಷ್ಟ. ಮಾನವಿಕದಲ್ಲಿ ಹಾಗಿಲ್ಲ. ಅವುಗಳ ಕುರಿತು ಆಳವಾದ ಜಿಜ್ಞಾಸೆ ಬೇಕು. ಸ್ವಾತಂತ್ರ್ಯ ಬಂದ ಲಾಗಾಯ್ತು ನಮ್ಮ ಮಾನವಿಕ ಸಂಶೋಧನೆಗಳು ವಸಾಹತುಶಾಹಿ ವ್ಯವಸ್ಥೆ ನಿರ್ದೇಶಿಸಿದ ಪರಿಕಲ್ಪನೆಗಳಲ್ಲಿ ತೊಡರಿಕೊಂಡಿವೆ. ಆರ್ಯ ದ್ರಾವಿಡದಂತಹ ವಸಾಹತುಶಾಹಿ ಶಿಕ್ಷಣದ ಸತ್ಯಾಸತ್ಯತೆಯನ್ನು ಪರಿಶೀಲಿಸುವಲ್ಲಿ ಸೋತಿದ್ದೇವೆ. ಜಾತಿ ನಿಂದನೆಯಂಥ ವಿಷಯಗಳಲ್ಲೂ ಯಾರೋ ಹೇಳಿಬಿಟ್ಟ ಮಾತುಗಳನ್ನು ಗಂಭೀರವಾಗಿ ಬಳಸುವುದು ತರವಲ್ಲ.”
ಅಜಕ್ಕಳ ಗಿರೀಶ್ ಅವರ ಉತ್ತರ ಸಂದರ್ಭೋಚಿತವಾಗಿತ್ತು.
ಅವರು ಸಂಶೋಧನಾ ಪರಿಕಲ್ಪನೆಗಳ ತಾಂತ್ರಿಕ ಮತ್ತು ವೈಚಾರಿಕ ನೆಲೆಗಳನ್ನು ಪ್ರಸ್ತಾಪಿಸಿದರು. ನವ್ಯೋತ್ತರ ಕಾಲಘಟ್ಟದಲ್ಲಿ ವಸ್ತುನಿಷ್ಠ ಭಾವನೆ, ವ್ಯಕ್ತಿಗತ ನಂಬಿಕೆ, ರಾಜಕೀಯ ನಿಲುವಿನ ಬಳಕೆ ಹಾಗೂ ವಸಾಹತೋತ್ತರ ಧೋರಣೆಗಳನ್ನು ವಿವರಿಸಿದರು. ಬಹುಶಃ ದೇವರನ್ನು ಕೊಂದ ನೀಶೆಯ ಪ್ರಭಾವ ಇದರ ಹಿಂದೆ ಇರಬಹುದೆಂದು ಸೂಚಿಸಿದರು. “ಸತ್ಯ ಒಂದಲ್ಲ, ಬೇರೆ ಬೇರೆ ಉಂಟೆಂದು ನೀಶೆ ವಾದಿಸಿದ. ಅದರಿಂದಾಗಿ ಮೌಲಿಕ ಹಾಗೂ ನಿರಪೇಕ್ಷ ಎಂಬ ಎರಡು ಬಗೆಯ ತೀರ್ಪುಗಳ ಪ್ರವೇಶವಾಯಿತು. ಸತ್ಯದಿಂದ ಆಚೆ ಹೋಗಬಹುದೆಂದರೆ ಅಲ್ಲಿ ಸುಳ್ಳುಗಳಿಗೆ ಮಿತಿ ಇರುವುದಿಲ್ಲ. ಸತ್ಯ ಹೇಳುವುದು ‘ಆದರ್ಶ’ ಆದರೆ ಕಡ್ಡಾಯ ಅಲ್ಲ ಎಂಬ ಧೋರಣೆ ವ್ಯಾಪಿಸಿತು. ತಪ್ಪು (ಭಿನ್ನ) ವ್ಯಾಖ್ಯಾನಗಳು ವಿಚಿತ್ರ ರೀತಿಯಲ್ಲಿ ಪ್ರವೇಶ ಮಾಡಲು ಅಧ್ಯಯನದ ಕೊರತೆಯೂ ಕಾರಣವಾಗಿದೆ. ಉದಾಹರಣೆಗೆ ‘ಮಾನವ ಜಾತಿ ತಾನೊಂದೆ ವಲಂ’ ಎಂದದ್ದು ಪಂಪ ಎನ್ನುವ ಪ್ರಚಾರ. ವಾಸ್ತವವಾಗಿ ಅದು ಮೂಲದಲ್ಲಿ ಜಿನಸೇನಾಚಾರ್ಯರ ಹೇಳಿಕೆ.ಅದೇ ಪಂಪನು ವರ್ಣ ಭೇದ ನೀತಿಯನ್ನು ಸಮರ್ಥಿಸಿದಾಗ ಅದು ಅವನದಲ್ಲ, ಜಿನಸೇನಾಚಾರ್ಯರ ಮಾತೆಂದು ಜಾರಿಕೊಳ್ಳುವಿಕೆ. ಠಾಗೋರರು ನ್ಯಾಶನಲಿಸಂನ್ನು ಟೀಕಿಸಿದರೇ ಹೊರತು ರಾಷ್ಟ್ರವಾದವನ್ನು ಟೀಕಿಸಲಿಲ್ಲ. ಆದರೆ ಸ್ಥಾಪಿತ ಹಿತಾಸಕ್ತಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ.”
ವಿಚಾರ ಸಂಕಿರಣದಲ್ಲಿ ಕೊನೆಗೆ ಅಭಿಪ್ರಾಯ ಮಂಡಿಸಿದ ಅರವಿಂದ ಚೊಕ್ಕಾಡಿಯವರು ತೊಡಗಿದ್ದು ಹೀಗೆ : “ಸತ್ಯಕ್ಕೆ ಅನೇಕ ಮುಖಗಳಿರುವುದರಿಂದ ನಾವು ಸತ್ಯದ ಬದಲು ಪ್ರಾಮಾಣಿಕತೆ ಎಂಬ ಪದವನ್ನು ಬಳಸೋಣ. ಆರ್ಯ ದ್ರಾವಿಡ ಎಂಬ ಜನಾಂಗಿಕ ಪರಿಕಲ್ಪನೆಗಳು ಇಲ್ಲವೆಂದು ಯಾರಿಗೆ ಗೊತ್ತಿಲ್ಲ? ಶಂಕರಾಚಾರ್ಯರೇ ತನ್ನನ್ನು ದ್ರಾವಿಡ ಶಿಶು ಎಂದು ಹೇಳಿಕೊಂಡಿದ್ದಾರೆ. ದ್ರಾವಿಡ ಎಂದರೆ ಮೂರು ನೀರು ಸೇರಿದ ಜಾಗ ಎಂದರ್ಥ. ಪ್ರಾಗ್ ಕಲ್ಪನೆ ಕೇವಲ ಊಹಾ ಸಿದ್ಧಾಂತದ ಮೇಲೆ ವಸಾಹತುಶಾಹಿ ಕಥನ ಪರಂಪರೆಯೇ ಕಟ್ಟಲ್ಪಟ್ಟಿದೆ. ಬ್ರಾಹ್ಮಣರನ್ನು ಬಿಟ್ಟರೆ ಯಾರಿಗೂ ಶಿಕ್ಷಣ ಇರಲಿಲ್ಲವೆಂದು ವಿಲಿಯಂ ಬೆಂಟಿಂಕ್ ಹೇಳಿದ್ದೇ ಶಾಶ್ವತ ಸತ್ಯವಾಯಿತು. ಎಂಬತ್ತು ಟನ್ ಭಾರದ ಬಂಡೆ ಬೃಹದೀಶ್ವರ ದೇವಾಲಯದ ತುದಿಗೆ ಹೇಗೆ ಬಂತು? ವಿಜಯ ವಿಠ್ಠಲ ದೇವಾಲಯದ ಸಂಗೀತ ಕಂಬಗಳ ನಿರ್ಮಾಣದ ಹಿಂದಿನ ಗುಟ್ಟೇನು? ಶಿಲೆಯೊಳಗಣ ರಾಸಾಯನಿಕಗಳ ಪರೀಕ್ಷೆ ಮಾಡಿದ್ದು ಯಾರು? ಶಿಕ್ಷಣವೇ ಇಲ್ಲದಿದ್ದರೆ ಜ್ಞಾನ ಹೇಗೆ ಲಭ್ಯವಾಗುತ್ತದೆ? ವಿವಿಧ ಸಮುದಾಯದವರಿಗೆ ಶಿಕ್ಷಣ ಸಿಗುತ್ತಿದ್ದುದರ ಬಗ್ಗೆ ವಿವರಗಳು ಬೇಕಾದಷ್ಟಿವೆ. ಗುರುಕುಲ, ವಿಶ್ವವಿದ್ಯಾಲಯಗಳು ಯಾರವು? ಸ್ವಾತಂತ್ರ್ಯದ ಚರಿತ್ರೆಯನ್ನು ಪ್ರಶ್ನಿಸುವ ಅಧಿಕಾರವೂ ನಮಗಿಲ್ಲವೇ? ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವುದಕ್ಕೆ ಬೇರೆ ಕಾರಣಗಳಿಲ್ಲವೇ ? ಅದೆಲ್ಲ ಯಾಕೆ ಅಧ್ಯಯನ ಯೋಗ್ಯವಲ್ಲ? ೨೯೩೧ ರಲ್ಲಿ ಕ್ರಾಂತಿಕಾರಿಗಳನ್ನೆಲ್ಲ ಮಟ್ಟ ಹಾಕಿದ ಮೇಲೆ ಸುಭಾಷ್ ಚಂದ್ರ ಬೋಸ್, ಭಗವಾನ್ ದಾಸರಂಥವರು ಸಶಸ್ತ್ರ ಬಂಡಾಯ ಮಾಡಿದ್ದನ್ನು ಯಾಕೆ ದಾಖಲಿಸಬಾರದು?”
ಇದೇ ವೇಳೆಯಲ್ಲಿ ರಾಘವೇಂದ್ರ ಪಾಟೀಲರು ಹಾಸ್ಯ ಪ್ರಸಂಗವನ್ನು ಹೇಳುವ ಮೂಲಕ ಎಂತಹ ವಿಚಾರಗಳು ಸಂಶೋಧಕನಿಗೆ ಹೊಸ ಪರಿಕಲ್ಪನೆ ಒದಗಿಸುತ್ತವೆ ಎಂಬ ವಿಚಾರವನ್ನು ಮಾರ್ಮಿಕವಾಗಿ ಹೇಳಿದರು. “ನಾಲ್ಕು ವೇದಗಳನ್ನು ಕನಕದಾಸರ ಕುನ್ನಿಗಳು ಎಂದು ಮಂತ್ರಿಗಳೊಬ್ಬರು ಹೇಳಿದ್ದನ್ನು ಎಂ. ಜಿ. ಹೆಗಡೆ ಹೀಗೆ ವ್ಯಾಖ್ಯಾನಿಸಿದ್ದುಂಟು. “ತನ್ನ ಕುರಿಮಂದೆ ನಿರ್ದಿಷ್ಟ ದಾರಿಯಲ್ಲಿ ಸಾಗುವಂತೆ ಮಾಡಲು ಕುರುಬ ದೇವರು ನಾಲ್ಕು ಕುನ್ನಿಗಳನ್ನು ಸಾಕಿದ್ದಾನೆ!ಹೌದಲ್ಲವೆ?!”
ಭಾಗ ಮೂರು : ಆನಂದಕಂದ ಸಾಹಿತ್ಯ ಹಬ್ಬ
“”””””””””””””””””””””””””””””””””
ಆನಂದಕಂದರ ನಲ್ವಾಡುಗಳ ಗೀತಗಾಯನವು ಪ್ರೇಕ್ಷಕರನ್ನು ಹಿಡಿದಿಡುವುದರಲ್ಲಿ ಯಶಸ್ವಿಯಾಯಿತು. ಬೇಂದ್ರೆ, ಕೆ. ಎಸ್. ನ ಅವರ ಸಾಲಿನಲ್ಲಿ ಕನ್ನಡಿಗರು ಆನಂದಕಂದರನ್ನೂ ಗುರುತಿಸಬೇಕಿತ್ತು ಎಂದು ತೀವ್ರವಾಗಿ ಚಿಂತಿಸುವಂತೆ ಮಾಡಿದ ಮುಹೂರ್ತ ಅದಾಗಿತ್ತು.
೧೯೫೮ ರಲ್ಲಿ ತಮ್ಮ ‘ನಲ್ವಾಡುಗಳು’ ಸಂಕಲನಕ್ಕೆ ಆನಂದ ಕಂದರು ಬರೆದ ಮೊದಲ ಮಾತುಗಳು ಇಲ್ಲಿ ಚಿಂತನೀಯವಾಗಿವೆ : “ಇಂದು ನಮ್ಮ ಸಾಹಿತ್ಯದಲ್ಲಿ ವಾಸ್ತವ ಜೀವನಕ್ಕೆ ಹೆಚ್ಚಿನ ಸ್ಥಾನ ಕೊಡಬೇಕೆಂದು ಬಾಯಿಂದೇನೋ ಹೇಳುತ್ತಲಿದ್ದೇವೆ. ಆದರೆ ಈ ಮಾತನ್ನು ಒತ್ತಿ ಒತ್ತಿ ಹೇಳುತ್ತಿರುವ ಸಾಹಿತ್ಯಕರ ಕೃತಿ ಸಂತಾನಗಳನ್ನು ನೋಡಿದರೆ ಅವುಗಳಲ್ಲಿ ಹೆಚ್ಚಾಗಿ ಇನ್ನಾವುವೋ ಪರಕೀಯ ಜೀವನಗಳ ಅನುಕರಣ, ಆಭಾಸ ಕಾಣುವುದೇ ಹೊರತು ನಮ್ಮ ಕನ್ನಡಿಗರ ವಾಸ್ತವ ಜೀವನ ಚಿತ್ರ ಮೂಡಿದುದು ಅಪೂರ್ವವೆಂದು ತೋರುವುದು. ಇದಕ್ಕೆ ಕಾರಣವೆಂದರೆ, ನಮ್ಮ ಸಾಹಿತ್ಯ ನಿರ್ಮಾಪಕರು ನಮ್ಮ ನಾಡಿನ ಜನಸಾಮಾನ್ಯರ ನಡೆ, ನುಡಿ, ಸಂಸ್ಕೃತಿ, ಸಹಜ ಕಲಾಭಿರುಚಿ ಇವುಗಳನ್ನು ಕಣ್ಣಿಟ್ಟು ಕುತೂಹಲದಿಂದ ನೋಡದೆ ಇರುವುದು.”
ಉತ್ತರ ಕರ್ನಾಟಕದ ಆಡು ಭಾಷೆ ಅಥವಾ ಪ್ರಾದೇಶಿಕ ನುಡಿಗಳ ನಾಡಿ ಮಿಡಿತವನ್ನು ಅರಿತ ‘ನಲ್ವಾಡುಗಳು’ ಸಂಕಲನದ ೨೩ ಕವಿತೆಗಳು ಪ್ರಾದೇಶಿಕತೆಗೆ ಕನ್ನಡಿಯನ್ನು ಹಿಡಿಯುತ್ತವೆ.
‘ನಮ್ಮ ಹಳ್ಳಿಯೂರs ನಮಗ ಪಾಡs
ಯಾತಕವ್ವಾ ಹುಬ್ಬಳ್ಳಿ ಧಾರ್ವಾಡs
ಗರಡಿಯ ಹುಡುಗರ ಹುರುಪು ಅದೇನs
ಕರಡಿ – ಹಲಿಗಿ ಮಜಲಿನ ಮೋಜೇನs
ಬಯಲಾಟದ ಸುಖಕಿಲ್ಲ ಸಮಾನ-
ಕೇಳಿಲ್ಲೇನs ಲಾವಣಿ ಗೀಗೀ ಹಾಡs
ಯಾತಕವ್ವಾ ಹುಬ್ಬಳ್ಳಿ ಧಾರ್ವಾಡs.’
ಎಂಬ ಸಾಲುಗಳು ಆನಂದಕಂದರ ವಿಶಿಷ್ಟ ಕಾವ್ಯ ಶೈಲಿಗೆ ಉದಾಹರಣೆಯಾಗಿವೆ. ಪ್ರಾದೇಶಿಕ ಭಾಷೆಯಲ್ಲಿ ನಾಟಕ, ಚಲನಚಿತ್ರ ಮಾತ್ರವಲ್ಲ ಸಾಹಿತ್ಯ ಸೃಷ್ಟಿ ಕೂಡ ಕನ್ನಡಿಗರೆಲ್ಲರಿಗೂ ತಲುಪಲಾರದೆಂಬ ಭಾವನೆಯ ಸುತ್ತ ಹೆಣೆದುಕೊಂಡ ಕಾರಣಗಳು ಇದರ ಹಿಂದೆ ಇವೆ. ದೇಸೀ ಹಾಡು ಮತ್ತು ಕುಣಿತಗಳಿಗೆ ಸಹಸ್ರಾರು ವರ್ಷಗಳ ಇತಿಹಾಸ ಇದೆ. ಅವುಗಳು ಸರಳವಾದ ರೀತಿಗಳಲ್ಲಿ ಜನರ ಕಡೆ ತಲುಪುತ್ತಿದ್ದುವು. ಕವಿ ದ. ರಾ ಬೇಂದ್ರೆ ತಮ್ಮ ಕವನವನ್ನು ತಾವೇ ರಾಗವಾಗಿ ಹಾಡುತ್ತಿದ್ದುದರಿಂದ ಜನ ಮನಕ್ಕೆ ತಟ್ಟಿದುವೆಂದು ಅಸೂಯೆ ಪಡುವ ಸಾಹಿತಿಗಳು ಇದ್ದರು. ಇಂಥ ಕ್ರಮವನ್ನು ತಡೆಯುವ ಅಥವಾ ಟೀಕಿಸುವ ಕೆಲಸ ಅಪೇಕ್ಷಿತವಲ್ಲ. ಆ ಕಾಲದಲ್ಲಿ ಇಂದಿನ ಹಾಗೆ ಜಾಲತಾಣಗಳೂ ಇರಲಿಲ್ಲ. ಕಾವ್ಯವಾಚನ, ಹರಿಕತೆ ಯಕ್ಷಗಾನ ಬೊಂಬೆಯಾಟ ಇತ್ಯಾದಿಗಳು ಕಾವ್ಯ ಜನರ ಬಳಿ ಬರುವುದಕ್ಕಿದ್ದ ಪಾರಂಪರಿಕ ದಾರಿಗಳಾಗಿದ್ದವು. ಅವುಗಳ ಜೊತೆ ಕ್ರಮೇಣ ಆಕಾಶವಾಣಿಯೂ ಸೇರಿಕೊಂಡಿತು.
‘ಆನಂದ ಕಂದ ಗೆಳೆಯರ ಬಳಗ’ದಲ್ಲಿರುವ ೪೦ ಕ್ಕೂ ಮಿಕ್ಕ ಸದಸ್ಯರ ಪೈಕಿ ನಾಲ್ಕು ಮಂದಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರವೀಂದ್ರ ಕುಲಕರ್ಣಿ ( ಆನಂದ ಕಂದರ ಹೆಮ್ಮೊಮ್ಮಗ) ಮತ್ತು ಹೇಮಂತ ಲಮಾಣಿಯವರ ಹಾಡುಗಳಿಗೆ ಡಾ. ಅನಿಲ ಮೇತ್ರಿಯವರ ತಬಲಾ ಮತ್ತು ಡಾ. ಪರಶುರಾಮ್ ಅವರ ಹಾರ್ಮೋನಿಯಂ ಸಾಥ್ ಕೊಟ್ಟವು. ೬೦ರ ಹರೆಯವನ್ನು ತಲುಪಿದ ತನ್ನ ಅಣ್ಣ ಹದಿನಾರರ ಹುಡುಗಿಯೊಂದಿಗೆ ಮದುವೆಗೆ ಹೊರಟಾಗ ಅದನ್ನು ತಡೆದು, ಠಾಣೆಗೆ ದೂರು ಕೊಡುವುದಾಗಿ ಆನಂದ ಕಂದರು ಎಚ್ಚರಿಸಿ ಆ ಮದುವೆಯನ್ನು ನಿಲ್ಲಿಸಿದ ಹಿನ್ನೆಲೆಯನ್ನು ಹೊಂದಿದ ಗೀತೆಯೊಂದರ ಬಗ್ಗೆ ರಾಘವೇಂದ್ರ ಪಾಟೀಲರು ವಿವರಿಸಿದರು. ಅದರ ಕೆಲವು ಸಾಲುಗಳು ಹೀಗಿವೆ :
‘ಎಲ್ಲಿಂದೀಕಿನ ಕರತಂದೆಣ್ಣಾ ಯಾರು ಹೇಳು ಈಕಿ
ಅಣ್ಣ ಯಾರು ಹೇಳು ಈಕಿ
ಮಲ್ಲಿಗಿದಂಡಿಯ ಮಧುರ ಪರಿಮಳs ತೂರುತ ಬಂದಾಕಿ ! ಮಲ್ಲೂರಿನ ಗೌಡರ ಮಗಳಂತೂ ಅಲ್ಲ ಅಲ್ಲ ಈಕಿ
ಕಲ್ಲಿನೊಳಗ ಮಲ್ಲಿಗೆ ಅರಳೀತs ಹೇಳು ಎಲ್ಲಿಯಾಕಿ ?
ದುರುಳ ರಾಕ್ಷಸನು ಸೆರಿಯೊಳಗಿಟ್ಟಾ ಅರಸುಗುವರಿಯೇನೋ
ಈಕಿಯು ಅರಸನ ಮಗಳೇನೋ?
ಸೆರೆ ಬಿಡಿಸಿದ ನಿನ ಹುರುಡ ಕಂಡಿವಳು ಸೆರಗು ಹಿಡಿದಳೇನೊ
ಬಾಳಿಯ ಸುಳಿಯೊಳಗಡಗಿ ಕುಂತ ಲೀಲಾವತಿ ಇವಳೇನೊ
ಹೇಳು ಹ್ಯಾಂಗಿವಳು ನಿನ್ನ ಮೆಚ್ಚಿದಳು? ಮಾಟ ಮಾಡಿದೇನೋ?’
ಭಾಷಣ ಮತ್ತು ಚರ್ಚೆಗಳನ್ನೊಳಗೊಂಡ ಎಂಟನೇ ಗೋಷ್ಠಿಯಲ್ಲಿ ವಿಕಾಸ ಹೊಸಮನಿಯವರು ‘ಪರಿಸರ ವಿಮರ್ಶೆ ಮತ್ತು ಮಾಧ್ಯಮ ವಿಮರ್ಶೆ’ಗಳ ಬಗ್ಗೆ ಉಪನ್ಯಾಸವನ್ನು ನೀಡಿದರು.
ಕಡಿಮೆ ಮಾತುಗಳಲ್ಲಿ ಹಲವು ಮಹತ್ವಪೂರ್ಣ ಮಾಹಿತಿಗಳನ್ನು ಒದಗಿಸಿದರು. “ಪರಿಸರ ವಿಮರ್ಶೆ, ಮಾಧ್ಯಮ ವಿಮರ್ಶೆ: ಹೇಗೆ ಯಾರಿಂದ ನಡೆಯಿತು ಎಂಬ ಬಗ್ಗೆ ಸಂಗ್ರಹವಾಗಿ ಚಿಂತಿಸುವುದಿದ್ದರೆ ಕುವೆಂಪು, ತೇಜಸ್ವಿ ಅವರ ಕಾದಂಬರಿಗಳ ಕಡೆಗೆ ನೋಡಬೇಕಾಗುತ್ತದೆ. ಮಾನವ ಮತ್ತು ಪರಿಸರ, ಮಾನವ ಮತ್ತು ಪ್ರಾಣಿಗಳೊಳಗಿನ ಸಂಬಂಧ, ಭೌತಿಕ ಪರಿಸರ ಹಾಗೂ ಮಾನವ, ಮಾನವ ಮತ್ತು ಸಾಮಾಜಿಕ ಸಂಬಂಧಗಳನ್ನು ಗ್ರಹಿಸಬೇಕಾಗುತ್ತದೆ. ಅನಕ್ಷರತೆ, ಅಧ್ಯಯನದ ಕೊರತೆಗಳು ಮಲೆನಾಡಿನ ಜೀವನದ ಗುರುತುಗಳಾಗಿವೆ. ‘ಕಾನೂರು ಹೆಗ್ಗಡತಿ’ ಕಾದಂಬರಿಯಲ್ಲಿ ಮನುಷ್ಯ ಹಾಗೂ ಪ್ರಾಣಿಗಳ ಮಾಹಿತಿ, ಕೆದಂಬಾಡಿ ಜತ್ತಪ್ಪ ರೈಗಳ ಬೇಟೆಯ ಕೃತಿಗಳಲ್ಲಿ ಕಾಡು, ಹುಲಿ ಮತ್ತಿತರ ವಿವರ ಧಾರಾಳವಾಗಿವೆ. ಸಾಮಾಜಿಕ, ಸಾಂಸ್ಕೃತಿಕ ಪರಿಸರದ ಸಾಹಿತ್ಯವು ಪಠ್ಯ ಪುಸ್ತಕಗಳಲ್ಲಿ ಅಪ್ಡೇಟ್ ಆಗುತ್ತಿಲ್ಲ. ಪರಿಸರ ವಿಮರ್ಶೆಯ ವ್ಯಾಪ್ತಿ ತಿಳಿದರೆ ಮಾತ್ರ ಈ ಸುಧಾರಣೆ ಸಾಧ್ಯ. ಸಾಹಿತ್ಯದ ಔದ್ಯಮೀಕರಣ, ಪ್ರಚಾರದ ಭರಾಟೆಗಳಿಂದಾಗಿ ಮಾಧ್ಯಮ ವಿಮರ್ಶೆಯ ರೀತಿನೀತಿ, ಸಾಮಾಜಿಕ, ಸಾಂಸ್ಕೃತಿಕ ಕಾಳಜಿ ಹಿಮ್ಮುಖವಾಗಿದೆ. ಹಿಂದಿಯ ಶುಕ್ಲಾ, ಕನ್ನಡದ ಎಸ್. ಎಲ್ ಭೈರಪ್ಪರಂಥವರ ಕುರಿತು ಗೌರವ ತೋರದೆ ಸಿನಿ ಸಾಹಿತಿಗಳಿಗೆ ಪ್ರಶಸ್ತಿ ನೀಡುವುದರಿಂದಲೂ ಸಂದೇಹಗಳೇಳುತ್ತವೆ. ಫೇಸ್ ಬುಕ್ ಕವಿಗಳೆಂದು ಮೆಚ್ಚುವಷ್ಟು ಆ ಕವನಗಳ ಸೆಳೆತ ಇಲ್ಲ. ಮಾಧ್ಯಮಗಳು ತಾವು ಪ್ರಕಟಿಸುವ ಕತೆಗಳ ಗಾತ್ರವನ್ನು ನಿಯಂತ್ರಿಸುವ ಕೆಲಸಕ್ಕೆ ಹೊರಟಿರುವುದು ವಿಚಿತ್ರವಾಗಿದೆ. ಕಳಪೆ ಕೃತಿಗಳು ಮುನ್ನೆಲೆಗೆ ತಲುಪಿ, ಉತ್ತಮ ಕೃತಿಗಳು ಹಿನ್ನೆಲೆಗೆ ಸರಿದು ಗೊಂದಲವುಂಟಾದರೆ ಅದಕ್ಕೆ ಪ್ರಚಾರವೇ ಮುಖ್ಯ ಕಾರಣ ಎನ್ನಬೇಕು. ಇನ್ನು ಮುಂದೆ ಕೃತಿಗಳ ಆಯ್ಕೆಗಾಗಿ ಚುನಾವಣಾ ಪದ್ಧತಿ ಬಂದರೂ ಅಚ್ಚರಿಯಿಲ್ಲ. ಕನ್ನಡದಲ್ಲಿ ಮಾಸ್ತಿ, ಅನಂತ ಮೂರ್ತಿ ಲಂಕೇಶ್, ತೇಜಸ್ವಿ, ಚಿತ್ತಾಲ, ಪಾಟೀಲರಂತೆ ಯಾವ ಇಸಂಗೂ ಅಂಟದ ಸಾಹಿತಿಗಳು ನಮಗೆ ಆದರ್ಶವೆನಿಸಿಲ್ಲ. ಒಮ್ಮೆಗೆ ಕಳಪೆ ಕೃತಿ ಮೇಲೆ ಬಂದರೂ ಅದಕ್ಕೆ ಶಾಶ್ವತ ಮನ್ನಣೆ ದೊರಕದಿರುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಪ್ರಚಾರ, ಜಾಹೀರಾತುಗಳು ಮುಖ್ಯ ಕಾರಣವಾಗುತ್ತಿವೆ.”
‘ಬೆಟಗೇರಿ ಅವರ ಕಥನ ಸಾಧನೆ ‘ ಎಂಬ ವಿಷಯದ ಮೇಲೆ ಡಾ. ಪ್ರಮೀಳ ಮಾಧವ್ ವಿಷಯ ಮಂಡನೆ ಮಾಡಿದರು.ಡಾ. ಸುಭಾಷ್ ಪಟ್ಟಾಜೆ, ಡಾ. ಪ್ರವೀಣ ಪದ್ಯಾಣ ಮತ್ತು ವಿಕಾಸ್ ಹೊಸಮನಿ
ಸಂವಾದವನ್ನು ನಡೆಸಿಕೊಟ್ಟರು. ೭೫೦ ಪುಟಗಳಲ್ಲಿ ೪೪ ಕತೆಗಳನ್ನು ಕೊಟ್ಟ ಆನಂದಕಂದರ ಸಾಧನೆಯ ಕುರಿತು ಪ್ರಮೀಳಾ ಮಾತನಾಡುತ್ತ : “ಕರ್ನಾಟಕದ ಜೀವಂತ ಪ್ರತಿಭೆಯಾಗಿ ದಶಕಗಳ ಕಾಲ ಕವಿತೆ ವಿಮರ್ಶೆ, ಕಾದಂಬರಿ, ಪತ್ರಿಕಾ ಸಂಪಾದನೆಗಳ ಮೂಲಕ ಸಾಕ್ಷಿ ಪ್ರಜ್ಞೆಯಾಗಿದ್ದ ಬೆಟಗೇರಿ ಅವರು ಕಾಂತಾ ಸಮ್ಮಿತ ಶೈಲಿಯ ಮೂಲಕ ಓದುಗರನ್ನು ಎಚ್ಚರಿಸಿದರು. ಅವರ ಹೆಚ್ಚಿನ ಕಥೆಗಳು ಸುಖಾಂತವನ್ನು ಹೊಂದಿವೆ. ಪಾಶ್ಚಾತ್ಯ ಸಾಹಿತ್ಯ, ನವ್ಯತೆಗೆ ಮನಸ್ಸು ಮಾಡದಿದ್ದುದರಿಂದ ಅವರಿಗೆ ಅಷ್ಟೊಂದು ಮನ್ನಣೆ ಸಿಗದಿದ್ದಿರಬಹುದು” ಎಂದಾಗ ಸುಭಾಷ್ ಪಟ್ಟಾಜೆಯವರು ಅದಕ್ಕೆ ಉತ್ತರಿಸಿದರು. “ಅವರದು ದೇಶೀ ಭಾಷಾ ಶೈಲಿ ಎಂಬುದು ಸರಿ. ಆದರೆ ಓ ಹೆನ್ರಿ ಅವರಂಥ ಪಾಶ್ಚಾತ್ಯ ಲೇಖಕನ ಅನಿರೀಕ್ಷಿತ ತಿರುವನ್ನು ತರುವ ತಂತ್ರವನ್ನು ಬಳಸಿದ್ದಾರೆ. ಅವರು ನವ್ಯ ಸಾಹಿತ್ಯದ ವಿರೋಧಿಯಾಗಿರಲಿಲ್ಲ. ಹಲವು ನವ್ಯ ಕತೆಗಾರರಿಗೆ ಜಯಂತಿ ಪತ್ರಿಕೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದರು. ತನ್ನ ಮೂರು ಕಾದಂಬರಿಗಳ ಮೂಲಕ ಗ್ರಾಮೀಣ ವಾಸ್ತವದ ಅಂತರಂಗವನ್ನು ಒಳಗಿಂದ ಕಂಡ ಆನಂದಕಂದರದ್ದು ವೈಭವೀಕರಣ ಇಲ್ಲದ ಸಂಕೀರ್ಣ ಶೈಲಿ. ಅವರ ಕಥೆಗಳಲ್ಲಿ ಪ್ರೌಢ ಜಗತ್ತು ಬಾಲಜಗತ್ತಿನ ಮೇಲೆ ಮಾಡುವ ಆಘಾತಗಳ ಚಿತ್ರಣವನ್ನು ಕಾಣಬಹುದು. ಅವರ ಕಥನದಲ್ಲಿ ನವ್ಯ ಸಂವೇದನೆಯ ಬೀಜಗಳು ಇದ್ದವು.”
ಪಾಶ್ಚಾತ್ಯ ಸಾಹಿತ್ಯ ಹಾಗೂ ಭಾಷೆಗಳಿಗೆ ವಶವಾಗದೆ ದೇಸೀ ಶೈಲಿಯಲ್ಲೆ ಮುಂದುವರಿಯುವ ಉತ್ತರ ಕರ್ನಾಟಕದ ಸಾಹಿತ್ಯ ಕೃಷಿಯ ಕುರಿತು ಪ್ರವೀಣ ಪದ್ಯಾಣ ಅಭಿಮಾನದ ಮಾತಾಡಿದರು. ಕೊನೆಗೆ ವಿಕಾಸ್ ಹೊಸಮನಿ ಅಭಿಪ್ರಾಯ ಪಟ್ಟಂತೆ “ಆ ಕಾಲದಲ್ಲಿ ಬೇಂದ್ರೆ ಹಾಗೂ ಬೇಂದ್ರೆ ವಿರೋಧಿ ವಿಭಾಗ ರೂಪುಗೊಂಡಿತ್ತು. ಅದರಿಂದಾಗಿ ಶಂಬಾ ಜೋಶಿ, ಆನಂದ ಕಂದರು ಎರಡನೆಯವರೆನಿಸುತ್ತಾರೆ. ಆರೂ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆ ಕೊಟ್ಟವರು ಆನಂದಕಂದರು. ಬೇಂದ್ರೆಯವರಿಗಿಂತ ಭಿನ್ನವಾಗಿ ಜನಪದ ಸಾಹಿತ್ಯದ ಶಕ್ತಿಯನ್ನು ಸೂರೆಗೊಂಡವರು. ಸಣ್ಣ ಕತೆಯ ಮೂರನೇ ದಶಕದಲ್ಲಿ ಉತ್ತಮ ಕೊಡುಗೆಯನ್ನು ನೀಡಿದ ಆನಂದಕಂದರು ಯಾವುದೇ ಪಂಥಕ್ಕೆ ಸೇರದೆ ಸಾಧನೆಯನ್ನು ಮಾಡಿದ್ದರಿಂದ ಮಾಸ್ತಿ, ಅನಂದರಿಗೆ ಸಮಾನವಾಗಿ ಗುರುತಿಸಿಕೊಳ್ಳಲಿಲ್ಲ. ಐತಿಹಾಸಿಕ ಕಾದಂಬರಿಗಳಿಗೆ ಸಂಬಂಧಿಸಿದಂತೆ ಮಾಸ್ತಿ, ಆನಂದಕಂದರ ಪರಂಪರೆ ಮುಂದುವರಿಯಲಿಲ್ಲ. ಸಾಹಿತ್ಯೇತರ ಕಾರಣದ ವಿಸ್ಮೃತಿ ಆನಂದಕಂದರನ್ನು ಚೆನ್ನಾಗಿ ಬಾಧಿಸಿತ್ತು”
ದಿನದ ಕೊನೆಯ ಕಥಾಗೋಷ್ಠಿಯಲ್ಲಿ ಮಂಜುನಾಥ ಬಗಲಿ ಆನಂದ ಕಂದರ “ಜಾಡರ ಜಾನಪ್ಪ” ಕಥೆಯನ್ನು ಮಂಡಿಸಿದಾಗ ಸುಭಾಷ್ ಪಟ್ಟಾಜೆ ಆ ಕತೆಯ ಹುರುಳನ್ನು ವಿವರಿಸಿದರು.
ರಾಧಾಕೃಷ್ಣ ಉಳಿಯತ್ತಡ್ಕ ಅವರು ಸಮಾರೋಪ ಭಾಷಣದಲ್ಲಿ ಒಟ್ಟು ಕಾರ್ಯಕ್ರಮ ಸಾಹಿತ್ಯ ಚರಿತ್ರೆಯೊಂದಿಗೆ ಸದಾಕಾಲ ನೆನಪಿಡ ತಕ್ಕ ಸಾಹಿತಿಯ ಸ್ಮರಣೆ ಹಬ್ಬವಾಗಿ ಸಾರ್ಥಕಗೊಂಡ ಬಗೆಯನ್ನು ವಿವರಿಸಿದರು. ಡಾ. ಪ್ರಮೀಳ ಮಾಧವ ಅಧ್ಯಕ್ಷ ಭಾಷಣವನ್ನು ಮಾಡಿದರು. ರಾಘವೆಂದ್ರ ಪಾಟೀಲರು ಈ ಕಾರ್ಯಕ್ರಮದ ಹಿನ್ನೆಲೆಯನ್ನು ವಿವರಿಸಿ ಅದು ಸಮರ್ಪಕವಾಗಿ ನಿರ್ವಹಿಸಲ್ಪಟ್ಟದ್ದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು. ಎರಡೂ ದಿನಗಳ ಕಾರ್ಯಕ್ರಮವನ್ನು ನಿರ್ವಹಿಸಿದ ಶಂಪಾ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಶಾರದ ವಂದಿಸಿದರು.
ಪ್ರೊ l ಪಿ. ಎನ್. ಮೂಡಿತ್ತಾಯ