ಸಾಹಿತ್ಯ ಕ್ಷೇತ್ರದಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿ ಎಂದು ಬಹುತೇಕ ಜನ ಪರಿಗಣಿಸಿರುವ ಜ್ಞಾನಪೀಠ ಪ್ರಶಸ್ತಿ ಈ ಬಾರಿ ಎರಡು ಭಾಷೆಗಳ ಇಬ್ಬರು ಸಾಹಿತಿಗಳಿಗೆ ದೊರೆತಿದೆ. ೨೦೨೩ನೇ ಸಾಲಿನಲ್ಲಿ ಸಂಸ್ಕೃತ ಭಾಷೆಯ ರಾಮಭದ್ರಾಚಾರ್ಯ ಮತ್ತು ಉರ್ದುವಿನ ಗುಲ್ಜಾರ್ ಅವರಿಗೆ ಜಂಟಿಯಾಗಿ ದೊರೆತಿರುವ ಈ ಪ್ರಶಸ್ತಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದುವರೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಶೇಕಡಾ ತೊಂಬತ್ತೈದರಷ್ಟು ಸಾಹಿತಿಗಳು ಅರ್ಹರೇ ಆಗಿದ್ದಾರೆ. ಆಗಾಗ ಅಲ್ಲೊಬ್ಬರು, ಇಲ್ಲೊಬ್ಬರು ಸರತಿ ಸಾಲು ತಪ್ಪಿಸಿ ಪ್ರಶಸ್ತಿ ಪಡೆದಿರುವುದೂ ಇದೆ. ಇರಲಿ, ಪ್ರಶಸ್ತಿಗಳೆಂದ ಮೇಲೆ ಇಂತಹುದೆಲ್ಲ ಇದ್ದದ್ದೆ.
ಭಾರತದಲ್ಲಿ ಪ್ರತಿವರ್ಷ ರಾಷ್ಟ್ರಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕೆಲವರು ಪ್ರಶಸ್ತಿ ಪಡೆಯುತ್ತಾರೆ ಮತ್ತು ಇನ್ನೂ ಕೆಲವರು ಪ್ರಶಸ್ತಿ ಹೊಡೆಯುತ್ತಾರೆ. ಪ್ರಶಸ್ತಿ ಆಯ್ಕೆಯ ಹಿಂದಿನ ಲೆಕ್ಕಾಚಾರಗಳು ತುಂಬ ಜಟಿಲವಾಗಿವೆ. ಗಣಿತದ ಕ್ಲಿಷ್ಟ ಸಮಸ್ಯೆಗಳನ್ನಾದರೂ ಬಿಡಿಸಬಹುದು ಆದರೆ ಇಂತಹ ಲೆಕ್ಕಾಚಾರಗಳನ್ನು ಬಿಡಿಸುವುದು ತುಂಬ ಕಷ್ಟ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷ ಸುಮಾರು ಹದಿನೈದು ಭಾಷೆಗಳಲ್ಲಿ ಆಯಾ ವರ್ಷದ ಅತ್ಯುತ್ತಮ ಕೃತಿಯೊಂದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುತ್ತದೆ. ಒಳ್ಳೆಯ ಅನುವಾದಿತ ಕೃತಿಗೆ ಅನುವಾದ ಸಾಹಿತ್ಯ ಪುರಸ್ಕಾರ ನೀಡಲಾಗುತ್ತಿದೆ. ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಬಂದ ಒಳ್ಳೆಯ ಕೃತಿಗೆ ಬಾಲ ಸಾಹಿತ್ಯ ಪುರಸ್ಕಾರ ಮತ್ತು ಉದಯೋನ್ಮುಖ ಸಾಹಿತಿಗಳನ್ನು ಪ್ರೋತ್ಸಾಹಿಸಲು ಯುವ ಪುರಸ್ಕಾರ ನೀಡಲಾಗುತ್ತಿದೆ. ಮಹಿಳಾ ಸಾಹಿತ್ಯಕ್ಕೆ ಸಹ ಒಂದು ಪುರಸ್ಕಾರ ನೀಡಬೇಕೆಂಬ ಪ್ರಸ್ತಾಪವೂ ಇದೆ. ಸದ್ಯೋಭವಿಷ್ಯತ್ತಿನಲ್ಲಿ ಅದು ಸಹ ಆರಂಭವಾದರೂ ಅಚ್ಚರಿಯಿಲ್ಲ. ಭಾರತದಲ್ಲಿ ಅಸಾಧ್ಯ ಎಂಬ ಮಾತೇ ಇಲ್ಲ. ಇಲ್ಲಿ ಎಲ್ಲವೂ ಸಾಧ್ಯ!
ಇದಲ್ಲದೆ ಜ್ಞಾನಪೀಠ ಪ್ರಶಸ್ತಿ, ಸರಸ್ವತಿ ಸಮ್ಮಾನ, ವ್ಯಾಸ್ ಸಮ್ಮಾನ, ಮೂರ್ತಿದೇವಿ ಪುರಸ್ಕಾರ, ಡಿ. ಎಸ್. ಸಿ. ಪ್ರೈಜ್ ಫಾರ್ ಸೌತ್ ಏಷಿಯನ್ ಲಿಟರೇಚರ್ ಮತ್ತು ಜೆ. ಸಿ. ಬಿ. ಅವಾರ್ಡ್ ಸೇರಿದಂತೆ ದೊಡ್ಡ ಮೊತ್ತದ ಹಣವನ್ನು ಹೊಂದಿದ ಖಾಸಗಿ ಪ್ರಶಸ್ತಿಗಳು ಸಹ ಇವೆ. ಇನ್ನು ರಾಜ್ಯಮಟ್ಟದಲ್ಲಿ ಇರುವ ಪ್ರಶಸ್ತಿಗಳಿಗಂತೂ ಲೆಕ್ಕವೇ ಇಲ್ಲ! ತುಂಬ ಜನ ದ್ವಿತೀಯ ದರ್ಜೆಯ ಲೇಖಕ/ಕಿಯರ ಬಯೋಡಾಟಾದಲ್ಲಿ ಅವರ ಕೃತಿಗಳಿಗಿಂತ ಪಡೆದ ಪ್ರಶಸ್ತಿಗಳ ಸಂಖ್ಯೆಯೇ ಹೆಚ್ಚಾಗಿ ಕಾಣುತ್ತವೆ. ಹೋಬಳಿ, ನಗರ, ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳಿವೆ. ಕರ್ನಾಟಕ ಸರ್ಕಾರ ರಾಜ್ಯಮಟ್ಟದಲ್ಲಿ ಮಾತ್ರ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕೆಂಬ ನಿಯಮ ಮಾಡಿದ್ದರೂ, ಜಿಲ್ಲಾಡಳಿತಗಳು ಜಿಲ್ಲಾಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಪರಿಪಾಠ ಬೆಳೆಸಿಕೊಂಡಿವೆ. ಇನ್ನು ಪದ್ಮ ಪ್ರಶಸ್ತಿಗಳ ಕುರಿತು ಬರೆಯ ಹೊರಟರೆ ಅಭಿನಂದನ ಗ್ರಂಥದ ಗಾತ್ರದ ಪುಸ್ತಕವಾದೀತು! ಸದ್ಯಕ್ಕೆ ಸಾಹಿತ್ಯಕ್ಕೆ ಸಂಬಂಧಪಟ್ಟ ಪ್ರಶಸ್ತಿಗಳ ಕುರಿತು ಮಾತ್ರ ಚಿಂತಿಸೋಣ.
೨೦೧೮, ೨೦೧೯, ೨೦೨೦, ೨೦೨೧ ಮತ್ತು ೨೦೨೨ರಲ್ಲಿ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಕುರಿತು ಅನೇಕ ತಕರಾರುಗಳಿವೆ. ಸಾಹಿತ್ಯ ವಲಯದ ಪ್ರಾಜ್ಞರಿಗೆ ಇದೆಲ್ಲ ಗೊತ್ತಿರುವುದರಿಂದ ಇಲ್ಲಿ ಅದನ್ನೆಲ್ಲ ವಿವರವಾಗಿ ಬರೆಯುವ ಅಗತ್ಯವಿಲ್ಲ. ಅಲ್ಲಿ, ಇಲ್ಲಿ ಮಾಹಿತಿ ಸಂಗ್ರಹಿಸಿ ಬರೆದ ಸಂಪಾದಿತ ಕೃತಿಯಂತಹುದೊಂದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಡುತ್ತಾರೆ. ಕೇವಲ ಒಂದೇ ಒಂದು ಕೃತಿ ಅನುವಾದ ಮಾಡಿದ ಒಬ್ಬರು ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಪಡೆಯುತ್ತಾರೆ. ಇನ್ನೊಬ್ಬರು ಜಾತಿ ಮೀಸಲಾತಿಯ ಅಡಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರೆ, ಮತ್ತೊಬ್ಬರು ಬೇರೆಯವರಿಂದ ಕೃತಿ ಬರೆಸಿ, ಮಾಡಬಾರದ್ದನ್ನು ಮಾಡಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುತ್ತಾರೆ. ಇಂತಹ ಅದ್ಭುತ ಘಟನೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಮಾತ್ರ ಸಂಭವಿಸುತ್ತವೆ! ಆತ್ಮಸಾಕ್ಷಿಯನ್ನು ಕೊಂದು ಹಾಕಿ, ರಾಜೀ ಮಾಡಿಕೊಂಡು ಬದುಕುವ ದ್ವಿತೀಯ ದರ್ಜೆಯ ಲೇಖಕ/ಕಿಯರಿಂದಾಗಿ ಕನ್ನಡ ಸಾಹಿತಿಗಳು ರಾಷ್ಟ್ರಮಟ್ಟದಲ್ಲಿ ಲೇವಡಿಗೊಳಗಾಗುವಂತಾಗಿದೆ.
ಇನ್ನು ಯುವ ಪುರಸ್ಕಾರ ಪಡೆದ ತುಂಬ ಜನ ಉದಯೋನ್ಮುಖರಿಗೆ ಯುವ ಪುರಸ್ಕಾರ ಯಾಕೆ ಕೊಟ್ಟಿದ್ದಾರೆ ಎಂಬ ಅರಿವೇ ಇಲ್ಲ! ಮೂವತ್ತೈದು ವರ್ಷದೊಳಗಿನ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸಲು ಇದನ್ನು ನೀಡಲಾಗುತ್ತದೆ. ಇನ್ನಷ್ಟು ಚೆನ್ನಾಗಿ ಬರೆಯಲೆಂದು ನೀಡುವ ಪ್ರೋತ್ಸಾಹವದು. ಆದರೆ ತುಂಬ ಜನರಲ್ಲಿ ಈ ಯುವ ಪುರಸ್ಕಾರ ಪಡೆದ ನಂತರ ಬರವಣಿಗೆಯ ಗುಣಮಟ್ಟವೇ ಕುಸಿದಿರುವುದು ವಿಷಾದದ ಸಂಗತಿ. ಯುವ ಪುರಸ್ಕಾರ ಪಡೆದ ಕೆಲವು ಸಾಹಿತಿಗಳು ಮಾತ್ರ ಚೆನ್ನಾಗಿ ಬರೆಯುತ್ತಿರುವುದು ಸ್ವಲ್ಪ ಸಮಾಧಾನದ ಸಂಗತಿ.
ಕಾರ್ಪೋರೇಟ್ ವಲಯದ ಬಹುದೊಡ್ಡ ಮೊತ್ತದ ಪ್ರಶಸ್ತಿಗಳಾದ ಡಿ. ಎಸ್. ಸಿ. ಪ್ರೈಜ್ ಫಾರ್ ಸೌತ್ ಏಷಿಯನ್ ಲಿಟರೇಚರ್ ಮತ್ತು ಜೆ. ಸಿ. ಬಿ. ಅವಾರ್ಡ್ ಗಳಲ್ಲಿ ಕಾರ್ಪೋರೇಟ್ ಲಾಬಿ ತುಂಬ ನಡೆಯುತ್ತದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಲಿಟರರೀ ಫೆಸ್ಟ್ ಗಳು ಇಂತಹ ಪ್ರಶಸ್ತಿಗಳ ಆಯ್ಕೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸರ್ಕಾರದ ಹಸ್ತಕ್ಷೇಪ ನಡೆಯುವಂತೆ, ಲಿಟರರೀ ಫೆಸ್ಟ್ ಗಳಲ್ಲಿ ಕಾರ್ಪೋರೇಟ್ ಕಂಪನಿಗಳ ಹಸ್ತಕ್ಷೇಪ ನಡೆಯುತ್ತದೆ. ಕರ್ನಾಟಕದಲ್ಲಿ ಸಾಹಿತಿಗಳು ಎಡ-ಬಲ ಎಂದು ರಾಜಕೀಯ ಪಕ್ಷಗಳಿಗೆ ನಿಷ್ಠೆ ತೋರುವಂತೆ, ಲಿಟರರೀ ಫೆಸ್ಟ್ ನಡೆಸುವ ಕಾರ್ಪೋರೇಟ್ ಕಂಪನಿಗಳಿಗೆ ಅಲ್ಲಿನ ಸಾಹಿತಿಗಳು ನಿಷ್ಠೆ ತೋರುತ್ತಾರೆ. ಸಹಕಾರ ತತ್ವದ ಆಧಾರದ ಮೇಲೆ ಇವೆಲ್ಲ ನಡೆಯುತ್ತವೆ. “ನೀ ನನಗಾದರೆ, ನಾ ನಿನಗೆ” ಎಂಬ ಮಾತು ಇಲ್ಲಿ ತುಂಬ ಸಾರ್ಥಕವಾಗಿ ಅನ್ವಯಿಸುತ್ತದೆ.
ಇರಲಿ, ಈಗ ಮತ್ತೆ ಜ್ಞಾನಪೀಠ ಪ್ರಶಸ್ತಿಯ ವಿಚಾರಕ್ಕೆ ಬರೋಣ. ಕನ್ನಡಕ್ಕೆ ಇದುವರೆಗೆ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಕುವೆಂಪು, ದ. ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಕೃ. ಗೋಕಾಕ್, ಯು. ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ ಮತ್ತು ಚಂದ್ರಶೇಖರ ಕಂಬಾರರು ಜ್ಞಾನಪೀಠ ಪಡೆದಿದ್ದಾರೆ. ಕಾರ್ನಾಡ ಮತ್ತು ಕಂಬಾರರ ಬಗ್ಗೆ ತಕರಾರುಗಳಿದ್ದರೂ ಅವರು ಖಂಡಿತವಾಗಿಯೂ ಜ್ಞಾನಪೀಠಕ್ಕೆ ಅರ್ಹರು. ಕನ್ನಡದ ಖ್ಯಾತ ಲೇಖಕರಾದ ಶ್ರೀರಂಗ, ಪು. ತಿ. ನ., ಗೋಪಾಲಕೃಷ್ಣ ಅಡಿಗ, ಕೆ. ಎಸ್. ನರಸಿಂಹ ಸ್ವಾಮಿ, ಎಸ್. ಎಲ್. ಭೈರಪ್ಪ, ಯಶವಂತ ಚಿತ್ತಾಲ ಮತ್ತು ಪೂರ್ಣಚಂದ್ರ ತೇಜಸ್ವಿ ಅವರಿಗೆ ಸಹ ಜ್ಞಾನಪೀಠ ಪ್ರಶಸ್ತಿ ಸಿಗಬೇಕಿತ್ತು. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕನ್ನಡಕ್ಕೆ ಕೇವಲ ಎರಡು ಜ್ಞಾನಪೀಠ ಪ್ರಶಸ್ತಿ ಮಾತ್ರ ಲಭಿಸಿವೆ. ಅಖಿಲ ಭಾರತ ಮಟ್ಟದಲ್ಲಿ ಅಪಾರ ಖ್ಯಾತಿ ಪಡೆದ ಭೈರಪ್ಪನವರಿಗೆ ಇದುವರೆಗೆ ಜ್ಞಾನಪೀಠ ದೊರೆತಿಲ್ಲ. ದುರ್ದೈವದ ಸಂಗತಿಯೆಂದರೆ ಭೈರಪ್ಪನವರಂತಹ ಗಣ್ಯ ಲೇಖಕರ ಹೆಸರನ್ನು ಜ್ಞಾನಪೀಠ ಪ್ರಶಸ್ತಿಗೆ ಕನ್ನಡದ ಆಯ್ಕೆ ಸಮಿತಿ ನಾಮಿನೇಟೇ ಮಾಡುವುದಿಲ್ಲ. ದ್ವಿತೀಯ ದರ್ಜೆಯ ಲೇಖಕ/ಕಿಯರನ್ನು ಜ್ಞಾನಪೀಠ ಪ್ರಶಸ್ತಿಗೆ ನಾಮಿನೇಟ್ ಮಾಡುತ್ತಿರುವುದರಿಂದ ಜ್ಞಾನಪೀಠ ಪ್ರಶಸ್ತಿಯ ವಿಚಾರದಲ್ಲಿ ಕನ್ನಡಕ್ಕೆ ಅನ್ಯಾಯವಾಗುತ್ತಿದೆ. ಸಾಮಾನ್ಯವಾಗಿ ಆಯಾ ಭಾಷೆಯ ಅತ್ಯುತ್ತಮ ಸಾಹಿತಿಗಳನ್ನು ಜ್ಞಾನಪೀಠ ಪ್ರಶಸ್ತಿಗೆ ನಾಮಿನೇಟ್ ಮಾಡಬೇಕು. ಆದರೆ ಕನ್ನಡ ಸಾಹಿತ್ಯ ಲೋಕದಲ್ಲಿ ನಡೆಯುತ್ತಿರುವುದೇ ಬೇರೆ. ಕನ್ನಡ ಸಾಹಿತ್ಯ ಲೋಕದಲ್ಲಿರುವಷ್ಟು ಅಪ್ರಾಮಾಣಿಕತೆ, ಜಾತೀಯತೆ ಮತ್ತು ರಾಜಕಾರಣ ಬೇರಾವ ಭಾಷೆಯಲ್ಲೂ ಇಲ್ಲ.
ಭೈರಪ್ಪನವರಿಗೆ ಸರಸ್ವತಿ ಸಮ್ಮಾನ ಮತ್ತು ಜಯಂತ ಕಾಯ್ಕಿಣಿಯವರಿಗೆ ಡಿ. ಎಸ್. ಸಿ. ಪ್ರೈಜ್ ಫಾರ್ ಸೌತ್ ಏಷಿಯನ್ ಲಿಟರೇಚರ್ ದೊರೆತಿದೆ. ಭೈರಪ್ಪ ಮತ್ತು ಕಾಯ್ಕಿಣಿಯವರು ಕಾದಂಬರಿ ಮತ್ತು ಕಥಾ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಆದ್ದರಿಂದ ಅವರಿಗೆ ಅರ್ಹವಾಗಿಯೇ ಆ ಪ್ರತಿಷ್ಠಿತ ಪ್ರಶಸ್ತಿಗಳು ದೊರೆತಿವೆ. ವೀರಪ್ಪ ಮೊಯಿಲಿಯವರು ಸರಸ್ವತಿ ಸಮ್ಮಾನ, ಮೂರ್ತಿದೇವಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ತುಂಬ ಕಷ್ಟ ಪಟ್ಟು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೊಯಿಲಿ ಮತ್ತು ಅವರ ಕೃತಿಗಳ ಬಗ್ಗೆ ಎಲ್ಲರಿಗೂ ಗೊತ್ತಿರುವುದರಿಂದ ಹೆಚ್ಚಿನ ಚರ್ಚೆ ಮಾಡುವ ಅವಶ್ಯಕತೆಯಿಲ್ಲ.
ಈ ಬಾರಿ ಜ್ಞಾನಪೀಠ ಪ್ರಶಸ್ತಿ ಪಡೆದ ರಾಮಭದ್ರಾಚಾರ್ಯ ಮತ್ತು ಗುಲ್ಜಾರರ ಕುರಿತು ಸಹ ಸಾಕಷ್ಟು ಟೀಕೆಗಳು ಬರುತ್ತಿವೆ. ರಾಮಭದ್ರಾಚಾರ್ಯರು ಸೃಜನಶೀಲ ಲೇಖಕರಲ್ಲ, ಅವರು ಪ್ರಗಲ್ಭ ವಿದ್ವಾಂಸರು ಮತ್ತು ಚಿಂತನಶೀಲ ಪ್ರವಚನಕಾರರು. ಅವರ ಶ್ರೇಷ್ಠ ಸೃಜನಶೀಲ ಕೃತಿಗಳು ಯಾವುವು ಎಂಬುದರ ಕುರಿತು ಇನ್ನೂ ಚರ್ಚೆ ನಡೆದಿದೆ. ಗುಲ್ಜಾರ್ ಮೂಲತಃ ಚಿತ್ರಸಾಹಿತಿ. ಉರ್ದುವಿನಲ್ಲಿ ಶಾಯರಿ, ಗಜಲ್, ಕವಿತೆ ಮತ್ತು ಕಥೆಗಳನ್ನು ಬರೆದಿದ್ದರೂ ಸಹ ಅವುಗಳನ್ನು ಅತ್ಯುತ್ತಮ ಕೃತಿಗಳೆಂದು ಕರೆಯಲಾಗದು. ಚಲನಚಿತ್ರ ರಂಗದಲ್ಲಿ ಮಾತ್ರ ಅವರ ಕೊಡುಗೆಯನ್ನು ಪ್ರಶ್ನಿಸುವಂತಿಲ್ಲ. ಹಿಂದಿ ಚಿತ್ರರಂಗದ ಗುಣಮಟ್ಟವನ್ನು ಎತ್ತರಕ್ಕೆ ಕೊಂಡೊಯ್ದ ಕೆಲವೇ ದಿಗ್ಗಜರಲ್ಲಿ ಅವರೂ ಒಬ್ಬರು. ಈ ಹಿಂದೆ ಅವರು ಉರ್ದು ಕಥಾಸಂಕಲನಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿ ಸಹ ಪಡೆದಿದ್ದಾರೆ. ಆದರೆ ಅವರ ಸಾಹಿತ್ಯ ಕೃತಿಗಳ ಗುಣಮಟ್ಟ ಮಾತ್ರ ಜ್ಞಾನಪೀಠ ಪ್ರಶಸ್ತಿಗೆ ಸಾಲದು. ೧೯೯೮ರಲ್ಲಿ ಜ್ಞಾನಪೀಠ ಪಡೆದ ಕನ್ನಡದ ಗಿರೀಶ ಕಾರ್ನಾಡ (ನಾಟಕಕಾರ ಮತ್ತು ನಟ) ಮತ್ತು ೨೦೦೭ರಲ್ಲಿ ಜ್ಞಾನಪೀಠ ಪಡೆದ ಮಲಯಾಳದ ಓ. ಎನ್. ವಿ. ಕುರುಪ್ (ಕವಿ ಮತ್ತು ಚಿತ್ರಸಾಹಿತಿ) ಅವರ ಕುರಿತು ಸಹ ಇಂತಹುದೇ ತಕರಾರುಗಳಿವೆ ಮತ್ತು ಆ ತಕರಾರುಗಳಲ್ಲಿ ಹುರುಳಿದೆ ಎಂಬುದು ಗಮನಾರ್ಹ.
ರಾಮಭದ್ರಾಚಾರ್ಯ ಮತ್ತು ಗುಲ್ಜಾರ್ ಅವರಿಗಿಂತ ತುಂಬ ದೊಡ್ಡ ಸಾಹಿತಿಗಳಾದ ಕನ್ನಡದ ಎಸ್. ಎಲ್. ಭೈರಪ್ಪ, ತಮಿಳಿನ ನೀಲ ಪದ್ಮನಾಭನ್ ಮತ್ತು ಹಿಂದಿಯ ವಿನೋದಕುಮಾರ್ ಶುಕ್ಲಾ ಅವರಂತಹ ದಿಗ್ಗಜ ಸಾಹಿತಿಗಳಿದ್ದರೂ ಸಹ ಅವರಿಬ್ಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇಲ್ಲಿ ಸಾಹಿತ್ಯೇತರ ಕಾರಣಗಳು ಖಂಡಿತವಾಗಿಯೂ ಕೆಲಸ ಮಾಡಿವೆ. ಜ್ಞಾನಪೀಠ ಪ್ರಶಸ್ತಿ ಆಯ್ಕೆಯ ಹಿಂದಿನ ಈ ಎಲ್ಲ ಲೆಕ್ಕಾಚಾರಗಳ ಕುರಿತು ಕೆಲವರಿಗಾದರೂ ಗೊತ್ತಿದೆ ಆದರೆ ಅವರಾರೂ ಬಹಿರಂಗವಾಗಿ ಮಾತನಾಡುವುದಿಲ್ಲ. ಇದೇ ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ದುರಂತ!
2 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಸಾಹಿತ್ಯ ಪ್ರಶಸ್ತಿಗಳು ಮತ್ತು ಬದಲಾದ ಲೆಕ್ಕಾಚಾರಗಳು”
ಚೊಕ್ಕ..ಕಣ್ತೆರೆಸಬಲ್ಲ ಲೇಖನ.
ಒಂದು ಸಣ್ಣ ವಿಷಯ ನೆನಪಿಸುವೆ. ಕೆಲವು ದಶಕಗಳಿಂದ ,ವ್ಯಕ್ತಯ ಒಟ್ಟು ಕೊಡುಗೆಗಳ ಮೇಲೆ ಆಯ್ಕೆ ನಡೆಯುತ್ತಿದೆ
ಹೌದು.
ಸರಿಯಾದ ಮತ್ತು ಧೈರ್ಯದ ಮಾತುಗಳು.