ಕನಸು ಪದವೇ ರೋಮಾಂಚನಕಾರಿ. ಕನಸು ಯಾರಿಗೆ ಬೇಡ ಹೇಳಿ? ಎಲ್ಲರೂ ಕನಸು ಕಾಣುವವರೆ. ಕನಸು ರಾತ್ರಿಯೇ ಬೀಳಬೇಕೆಂದೇನಿಲ್ಲ. ಮಧ್ಯಾಹ್ನದ ಸುಖನಿದ್ದೆಯಲ್ಲಿಯೂ ಕನಸು ಹರಡುವುದಿದೆ. ಪೂರ್ಣ ಎಚ್ಚರವಾಗಿದ್ದಾಗಲೂ ಕನಸು ಕಾಣುವುದಿದೆ. ಕನಸಿಗೆ ಸಮಯ ಯಾವುದಾದರೇನಂತೆ. ದಣಿದ ಮೈಗೆ ತಂಪಿನ ಮನ ಅಪ್ಪಿಕೊಂಡಾಗ ನಿದ್ದೆಯಲ್ಲಿ ಕನಸು ಎದ್ದು ನಡೆದಾಡಲು ಶುರುಮಾಡುತ್ತದೆ. ಎಚ್ಚರವಿದ್ದಾಗ ಮನಸ್ಸು ನಾಳಿನ ಬಗ್ಗೆ ಕನಸು ಹೆಣೆಯುತ್ತದೆ.
ವೈಜ್ಞಾನಿಕವಾಗಿ ನಮ್ಮ ಜಾಗೃತ ಮನಸ್ಸಿನ ಮೇಲಾದ ಗಾಢ ಪರಿಣಾಮಗಳು ಸುಪ್ತಾವಸ್ಥೆಯಲ್ಲಿ ಕನಸಿನ ರೂಪ ತಾಳುತ್ತವೆ ಎಂದು ಹೇಳುತ್ತಾರೆ. ನಾವು ಸಾಧಿಸಬೇಕಾದ ಗುರಿಯ ತೀವ್ರ ಹಂಬಲ, ಅದಕ್ಕಾಗಿ ಮಾಡುವ ಎಡೆಬಿಡದ ಸಾಧನೆ, ದೂರದ ಬೆಟ್ಟದಂತಿರುವ ಕೈಗೂಡದ ಬದುಕಿನ ಆಸೆಗಳು, ಯಾವತ್ತೋ ಮನಸ್ಸಿನಾಳಕ್ಕೆ ಇಳಿದು ಹೆಪ್ಪುಗಟ್ಟಿದ ಭಯ, ಅದುಮಿಟ್ಟ ಕುತೂಹಲಗಳು, ಇಚ್ಛೆಗಳು, ಬಯಕೆಗಳು… ಹೀಗೆ ಬದುಕಿನ ಹತ್ತು ಹಲವು ಸಂಗತಿಗಳು ನಾವು ಮಲಗಿದ್ದಾಗ ಸುಪ್ತಾವಸ್ಥೆಯಲ್ಲಿ ಕನಸಾಗಿ ಎದ್ದು ಕೂಡುತ್ತವೆ. ನನಸಾಗದ ಸಂಗತಿಗಳು ಅಲ್ಲಿ ವಿಜೃಂಭಿಸುತ್ತವೆ. ಮನಸ್ಸಿಗೆ ಕಚಗುಳಿ ಇಡುತ್ತವೆ. ಕೆಲವೊಂದು ಭಯ ಹುಟ್ಟಿಸುತ್ತವೆ. ನಮ್ಮ ದೇಹದೊಳಗಿನ ಒಂದು ಜಾಗೃತ ಬಿಂದುವಿನೊಂದಿಗೆ ಸುಪ್ತಮನ ಸಂಪರ್ಕಕ್ಕೆ ಬಂದಾಗ ಕನಸುಗಳಾಗುತ್ತವೆ ಎಂಬುದು ಆಧ್ಯಾತ್ಮಿಕ ವಿಶ್ಲೇಷಣೆ. ಎಚ್ಚರವಾಗಿದ್ದಾಗ ಕಾಣುವ ಕನಸಿಗೆ ಇವಾವುದರ ಹಂಗಿಲ್ಲ. ಅದು ಬಿಂದಾಸ್ ಆಗಿ ಮನೋವೇಗದಲ್ಲಿ ಎಲ್ಲವನ್ನೂ ಕಲ್ಪಿಸುತ್ತದೆ. ಸಂಕಲ್ಪಕ್ಕೂ ಒತ್ತು ನೀಡುತ್ತದೆ. ಬದುಕನ್ನು ಉಲ್ಲಸಿತವಾಗಿರಿಸುತ್ತದೆ.
ಬೆಳಗಾಗುವ ಹೊತ್ತಿಗೆ ಬೀಳುವ ಕನಸುಗಳು ನನಸಾಗುತ್ತವೆ ಎನ್ನುವ ನಂಬಿಕೆ ಇದೆ. ಬೀಳುವ ಕನಸುಗಳೆಲ್ಲ ಒಳ್ಳೆಯವೇ ಇರುತ್ತವೆ ಎನ್ನಲಾಗದು. ಕೆಲವೊಮ್ಮೆ ಭಯಾನಕ ಕನಸುಗಳು ಬಿದ್ದು ನಿದ್ದೆ ಹಾಳಾಗುವುದಿದೆ. ಅಲ್ಲದೆ ಕತ್ತಲ ಮಧ್ಯೆ ಭಯವೂ ಸೇರಿಕೊಳ್ಳುವುದಿದೆ. ನಾವು ಕಂಡ ಭಯಾನಕ ದೃಶ್ಯಗಳು, ಓದಿರಬಹುದಾದ ಕೊಲೆ, ಸುಲಿಗೆಗಳಂತಹ ಅಮಾನವೀಯ ಕೃತ್ಯಗಳು ಮನಸ್ಸಿನ ಮೇಲೆ ತೀಕ್ಷ್ಣ ಹಾಗೂ ದಟ್ಟ ಪರಿಣಾಮ ಬೀರಿ ಅವು ಕನಸಿನಲ್ಲಿ ಮತ್ತೆ ಕಾಣಿಸಿಕೊಳ್ಳುತ್ತವೆ. ಬಹಳ ಸಲ ಬೀಳುವ ಕನಸುಗಳಿಗೆ ಸಂಬಂಧವೇ ಇರುವುದಿಲ್ಲ. ಹೀಗಾಗಿ ಕೆಲವರು ಮಲಗುವ ಮುಂಚೆ ಒಳ್ಳೆಯ ವಿಚಾರಗಳನ್ನು ಮನಸ್ಸಿನಲ್ಲಿ ತುಂಬಿ, ಕನಸು ಬೀಳುವುದಿಲ್ಲ ಎನ್ನುವ ಸಂಕಲ್ಪದೊಂದಿಗೆ ನಿದ್ರಿಸಿದರೆ ಒಳ್ಳೆಯದು ಎನ್ನುವ ಸಲಹೆ ಕೊಡುತ್ತಾರೆ. ಇದು ಒಂದು ರೀತಿಯಲ್ಲಿ ಸೆಲ್ಫ್ ಹಿಪ್ನಾಟಿಸಂ ತರಹ ಕೆಲಸ ಮಾಡಬಹುದು.
ನಮ್ಮೊಳಗಿನ ಸಂಸ್ಕಾರಗಳು ಶ್ರೇಷ್ಠ ಸಂತನ ಸಂಪರ್ಕದಿಂದ ಕನಸಿನ ಮೂಲಕ ಕರಗಬಹುದೆನ್ನುವ ದಾರ್ಶನಿಕರ ಮಾತನ್ನು ತೆಗೆದುಹಾಕುವಂತಿಲ್ಲ. ಕನಸಿನಲ್ಲಿ ಕಾಣುವ ಸಂತನಿಂದ ಅವನ ಸಾನ್ನಿಧ್ಯದಿಂದ ನಮ್ಮೊಳಗಿನ ಮುಂಜಾನೆಯ ಬೆಳಗು ಹಗುರವಾಗುವ ಸಾಧ್ಯತೆಯೂ ಇದೆ. ಆ ದಿನವಿಡೀ ನಮ್ಮ ಚಿಂತನೆ ಆ ಶಾಂತಿಯ ಸುತ್ತ ಪರಿಭ್ರಮಿಸುತ್ತಿದ್ದರೆ ಅಚ್ಚರಿಯಿಲ್ಲ. ಸ್ವಪ್ನಸತ್ಯವೆನ್ನುವ ಅಚ್ಚರಿಯ ಪರಿಕಲ್ಪನೆಯೂ ಇದೆ.
ಕೆಲವೊಮ್ಮೆ ಬೀಳುವ ಕನಸುಗಳೇ ಮತ್ತೆ ಮತ್ತೆ ಪುನರಾವರ್ತಿತವಾಗುವುದುಂಟು. ವಿಚಿತ್ರ ಕನಸುಗಳು ಸಾಧ್ಯತೆಯ ಮೇರೆಯನ್ನೂ ಮೀರುವುದುಂಟು. ಯಾಕೆ ಹೀಗೆ ಎನ್ನುವುದಕ್ಕೆ ಉತ್ತರ ಸಿಗಲಾರದು. ನಾನು ಇಂತಹ ಹಲವಾರು ಬಾರಿ ಬಿದ್ದ ಕನಸಿನಲ್ಲಿ ರೆಕ್ಕೆಯಿಲ್ಲದೆ ಕೈಗಳನ್ನು ಅಗಲಿಸಿ ಆಕಾಶದಲ್ಲಿ ಹಾರಾಡಿದ್ದೇನೆ. ಹಿಂದಿನ ಜನ್ಮದಲ್ಲಿ ನಾನು ಹಕ್ಕಿಯಾಗಿ ಹುಟ್ಟಿರಬಹುದು ಎನ್ನುವ ತಮಾಷೆಯ ತೀರ್ಮಾನವನ್ನು ಕೇಳಿದವರಿಗೆ ಹೇಳುವುದಿದೆ. ಪರೀಕ್ಷೆ ಹತ್ತಿರ ಬಂದಿದೆ. ಓದುವುದಿನ್ನೂ ಬೆಟ್ಟದಷ್ಟಿದೆ ಎನ್ನುವ ಆತಂಕಕಾರಿ ಕ್ಷಣಗಳ ಕನಸೂ ಮರುಕಳಿಸಿದ್ದಿದೆ. ಇದು ಕಲಿಯುವ ಕಾಲದ ಒತ್ತಡದ ಕೊಡುಗೆ ಎನ್ನಲಡ್ಡಿಯಿಲ್ಲ. ಕನಸುಗಳೆಲ್ಲದಕ್ಕೂ ಕಾರಣ ಹುಡುಕಲು ಸಾಧ್ಯವಿಲ್ಲ. ನಮ್ಮ ಮನಸ್ಸಿನ ನೆಮ್ಮದಿಯನ್ನು ಕೆಡಿಸದಂತಹ ಸುಂದರ ಕನಸುಗಳು ಯಾವತ್ತೂ ಸ್ವಾಗತಾರ್ಹವೆ.
ಕನಸುಗಳು ಬೇಕು ಸುಂದರ ಬದುಕಿಗೆ ಎಂದಾಗ ಕನಸಿನಿಂದಲೇ ಬದುಕು ಸುಂದರ ಎನ್ನುವ ಇತ್ಯರ್ಥಕ್ಕೆ ಬರಬೇಡಿ. ಕನಸು ಬದುಕನ್ನು ಉಲ್ಲಸಿತಗೊಳಿಸುವುದರ ಜೊತೆಗೆ ಧನಾತ್ಮಕ ಚಿಂತನೆಯೊಂದಿಗೆ ಆಶಾಭಾವನೆಯನ್ನು ಹೊತ್ತು ನಡೆಯುತ್ತದೆ. ಅದೊಂದು ಭವಿಷ್ಯತ್ತಿನ ಸುಂದರ ನಿರೀಕ್ಷೆ. ಭರವಸೆಯನ್ನು ಹೆಣೆಯುವ ಸೂತ್ರ. ನಾಳಿನ ಬದುಕಿನ ನೀಲನಕ್ಷೆ ತಯಾರಾಗುವುದು ಹಗಲು ಕನಸಿನಲ್ಲಿಯೇ. ಹದಿಹರೆಯದವರಲ್ಲಿ ಮೊಳಕೆಯೊಡೆಯುವ ನಾಳಿನ ನೂರೆಂಟು ಆಸೆಗಳು, ಭವಿಷ್ಯತ್ತಿನ ಜೀವನದ ಸುಗಮ ಹಾದಿಯ ಕಲ್ಪನೆ, ಗುರಿಸಾಧನೆ ಎಲ್ಲವೂ ಪೂರ್ವಭಾವಿಯಾಗಿ ಮನಸ್ಸಿನಲ್ಲಿ ಮೂಡುವ ಒಂದುರೀತಿಯ ಕನಸಿನ ಚಿತ್ತಾರಗಳೆ. ಆದರೆ ಅಲ್ಲೆಲ್ಲ ನಮ್ಮ ನಿರಂತರ ಶ್ರಮ, ಛಲ ಮತ್ತು ಆಸಕ್ತಿಗಳು ಕಾಣುವ ಕನಸನ್ನು ಸಾಕಾರಗೊಳಿಸುವ ಮಂತ್ರಗಳಾಗುತ್ತವೆ. ಹಾಗಿದ್ದಾಗ ಮಾತ್ರ ಕನಸು ನನಸಾಗುತ್ತದೆ.
ತಿರುಕನ ಕನಸು, ಹಗಲು ಕನಸು ಪದಗಳನ್ನು ಕೆಲವರು ಅಸಾಧ್ಯತೆಯ ಪರಿಭಾಷೆಯಾಗಿ ಲೇವಡಿ ಮಾಡಲು ಬಳಸುವುದಿದೆ. ಅದರಲ್ಲೂ ರಾಜಕಾರಣಿಗಳಿಗೆ ಎದುರಾಳಿಯನ್ನು ಹಂಗಿಸಲು ಈ ಶಬ್ದವೇ ಬೇಕು. ಹಗಲು ಕನಸು ನಾವು ಜಾಗೃತಾವಸ್ಥೆಯಲ್ಲಿ ರೂಪಿಸಿಕೊಳ್ಳುವಂತದ್ದು. ಭವಿಷ್ಯತ್ತಿನ ಬಗ್ಗೆ ಕಟ್ಟುವ ಸುಂದರ ಸೌಧ ಅದು. ಕನಸು ಕಾಣುವುದಲ್ಲಿ ಏನೂ ತಪ್ಪಿಲ್ಲ. ಅದು ಬದುಕಿನ ತೀರಾ ಹತ್ತಿರದ ಸಹೃದಯಿ ಬಂಧು. ಕನಸಿಲ್ಲದ ಜೀವನ ನೀರಸ. ಕನಸಿಗೆ ವಯಸ್ಸಿನ ಕಟ್ಟುಪಾಡಿಲ್ಲ. ಇಳಿವಯಸ್ಸಿನಲ್ಲೂ ಶತಕ ಕಾಲ ಜೀವಿಸುವ ಆಶಯದ ಕನಸು ಮೈಮನಸ್ಸನ್ನು ಆರೋಗ್ಯವಾಗಿರಿಸುತ್ತದೆ; ಸಾವಿನ ಚಿಂತೆಯನ್ನು ದೂರವಿರಿಸುತ್ತದೆ. ಹೀಗಾಗಿ ಕನಸುಗಳಿರಲಿ ನಮ್ಮ ಬಾಳದಾರಿಯಲಿ… ಕನಸುಗಳಿರಬೇಕು ಮನಸನ್ನು ಮುದಗೊಳಿಸಲು; ಭರವಸೆಯ ಹೊತ್ತು ನಡೆಯಲು.
10 thoughts on “ಕನಸುಗಳಿರಬೇಕು…”
ಕನಸುಗಳು ಬೇಕು ಆದರೆ ಅವುಗಳಿಂದ ಮನಸ್ಸು ವಿಚಲಿತವಾಗಬಾರದು. ಅಂದರೇ, ಆರೋಗ್ಯಕರ ಕನಸ್ಸುಗಳಿರಲಿ. ಅಲ್ಲದೇ, ಕನಸ್ಸಿನ ಸಾಮ್ರಾಜ್ಯವೇ ಬೇಡ. ಈ ಕನಸ್ಸಿನ ವಿಶ್ಲೇಷಣೆ ಚೆನ್ನಾಗಿ ಮೂಡಿದೆ. ಅಭಿನಂದನೆಗಳು.
ಧನ್ಯವಾದಗಳು
ಕನಸುಗಳನ್ನು ವೈಜ್ಞಾನಿಕ ವಿಶ್ಲೇಷಣೆ ಮಾಡುವ ಅನೇಕ ಜನರು ವೃತ್ತಿ ಮಾಡಿ ಕೊಂಡಿದ್ದಾರೆ. ಕನಸುಗಳ ಬಗ್ಗೆ ತಲೆ ಕೆಡಿಸಿ ಕೊಳ್ಳಬಾರದು.
ನಿಮ್ಮ ಲೇಖನ ಚೆನ್ನಾಗಿ ಮೂಡಿ ಬಂದಿದೆ.
ಅಭಿನಂದನೆಗಳು
ಧನ್ಯವಾದಗಳು
ಕನಸಿಗೆ ವಯಸ್ಸಿನ ಹಂಗಿಲ್ಲ…ಒಳ್ಳೆಯ ಆಶಯದ ಕನಸು ಯಾವಾಗಲೂ ಚೇತೋಹಾರಿ. ಕನಸುಗಳು ಕಾಣದ ಬದುಕಿಗಿಂತ ಕಂಡ ಕನಸುಗಳನ್ನು
ಜೀವಂತಗೊಳಿಸುವ ಕ್ರಿಯೆ ಮನುಷ್ಯನನ್ನು ಸಂತೃಪ್ತಿಗೊಳಿಸುತ್ತದೆ.
ಧನ್ಯವಾದಗಳು
ಕನಸುಗಳು ನಿರಂತರ. ಅದಕ್ಕೆ ವಯಸ್ಸಿನ ಇತಿಮಿತಿ ಇಲ್ಲ. ಕನಸುಗಳ ಅರಮನೆಯಲ್ಲಿ ವಿಹರಿಸದವರೇ ಇಲ್ಲ.
ಕನಸುಗಳ ಬಗ್ಗೆ ಒಂದೊಳ್ಳೆಯ ಲೇಖನ. ಮನದುಂಬಿದ ಅಭಿನಂದನೆಗಳು.
ಧನ್ಯವಾದಗಳು
Selection of topic itself is ” Tough “.
Presentation is excellent.
Different type of dreams r presented with good reasoning keeping in mind local experience.
Little inputs relating to ” Psychology ” r included
Thank you very much for your kind words sir