ಅನಾಥೆ

ಉಮಾದೇವಿ ಮರಣಶಯ್ಯೆಯಲ್ಲಿದ್ದಳು. ವಯಸ್ಸು ಎಪ್ಪತ್ತೈದರ ಆಸು-ಪಾಸು. ಒಂಟಿ ಜೀವ. ಗಂಡ ಕಾಶೀನಾಥ್ ಕೈಲಾಸವಾಸಿಯಾಗಿ ಆಗಲೇ ಐದು ವರ್ಷಗಳೇ ಗತಿಸಿದ್ದವು. ಮಕ್ಕಳಿದ್ದೂ ಒಂಥರ ಅನಾಥೆ. ಎರಡು ತಿಂಗಳುಗಳಿಂದ ಶರೀರದ ಚಲನವಲನ ತುಂಬಾ ಮಂದಗತಿಯಲ್ಲಿ ಸಾಗಿತ್ತು. ಈ ಮೊದಲು ತುತ್ತಿನ ಚೀಲ ತುಂಬಿಸಿಕೊಳ್ಳಲು ಹೇಗೋ ತನ್ನಷ್ಟಕ್ಕೆ ತಾನೇ ಏನೋ ಒಂದಿಷ್ಟು ಅಡುಗೆ ಮಾಡಿಕೊಂಡು ತಿನ್ನುವ ಶಾಸ್ತ್ರವನ್ನಾದರೂ ಮಾಡುತ್ತಿದ್ದಳು. ಈಗ ಅದೂ ಇಲ್ಲದಂತಾಗಿದೆ. ಏನೋ ಆಟೀಟು ಬಚ್ಚಲು ಮನೆಗೆ ಹೋಗಿ ಬರುವಷ್ಟಕ್ಕೇ ಶಕ್ತಿ ಉಳಿಸಿದ್ದಾನೆ ಭಗವಂತ ಅವಳ ದೇಹದಲ್ಲಿ. ಪಕ್ಕದ ಮನೆಯ ಶಾಂತಾ, ಪುಷ್ಪಾ ಏನೋ ಒಂದಿಷ್ಟು ಅಡುಗೆ ಮಾಡಿಕೊಡುತ್ತಾರೆ. ಹೇಗೋ ಜೀವನ ನಡೆದಿದೆ. ಯಾಕೋ ತಾನಿನ್ನು ಬಹಳ ದಿನ ಬದುಕುವುದಿಲ್ಲ ಎಂಬ ಭಾವನೆ ಅವಳ ಮನದ ಮೂಲೆಯಲ್ಲಿ ಪಟ್ಟಾಗಿ ಕುಳಿತುಕೊಂಡಿದೆ. `ನಾನಿನ್ನೂ ಭೂಮಿಗೆ ಭಾರವಾಗಿ ಜೀವಂತ ಶವದಂತೆ ಬದುಕುತ್ತಿರುವುದು ಯಾತಕ್ಕಾಗಿ, ಯಾರಿಗಾಗಿ...' ಎಂಬ ಪ್ರಶ್ನೆಗಳು ಅವಳ ಪ್ರತಿ ಉಸಿರಾಟದಲ್ಲಿ ತುಂಬಿಕೊಂಡಿವೆ. `ನಾನಿನ್ನು ಬದುಕಲೂ ಬಾರದು...' ಎಂಬ ಭಾವನೆಯೂ ಅವಳ ಮನದಲ್ಲಿ ಮಡುವುಗಟ್ಟಿದೆ. ನಿರ್ಲಿಪ್ತಳಾಗಿ ಕುಳಿತಿದ್ದ ಅವಳ ಮನಸ್ಸು ಎತ್ತೆತ್ತಲೋ ಜಿಗಿದಾಡತೊಡಗಿತ್ತು.

ಉಮಾದೇವಿ ಈ ಮನೆಗೆ ಸೊಸೆಯಾಗಿ ಬಂದಿದ್ದೇ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ. ಸ್ವಂತ ಅಕ್ಕನ ಜಾಗ ತುಂಬಲು ಅವಳೀ ಮನೆಗೆ ಬಂದಿದ್ದು. ಆಗಷ್ಟೇ ಅವಳಿಗೆ ಹದಿನೆಂಟು ತುಂಬಿದ್ದವೇನೋ? ಎಸ್ಸೆಸ್ಸೆಲ್ಸಿ ಮುಗಿಸಿ ಎರಡು ವರ್ಷಗಳಾಗಿದ್ದವು. ಊರಲ್ಲಿ ಪಿಯುಸಿ ಕಾಲೇಜ್ ಇಲ್ಲದ್ದರಿಂದ ಉಮಾಳ ವಿದ್ಯಾಭ್ಯಾಸ ಎಸ್ಸೆಸ್ಸೆಲ್ಸಿಗೇ ಮೊಟಕುಗೊಂಡಿತ್ತು. ಅಕ್ಕ ಅಂಬುಜಾಳಿಗೆ, ಉಮಾಳಿಗೆ ಆರು ವರ್ಷಗಳ ಅಂತರ. ಅಂಬುಜಾಳಿಗೆ ಹದಿನೇಳು ತುಂಬಿದಾಗ ಕಾಶೀನಾಥನಿಗೆ ಹೆಂಡತಿಯಾಗಿ ಈ ಮನೆಗೆ ಸೊಸೆಯಾಗಿ ಬಂದಿದ್ದಳು. ಕಾಶೀನಾಥ್ ಮತ್ತು ಜಂಬುನಾಥ್ ಇಬ್ಬರು ಅಣ್ಣ-ತಮ್ಮಂದಿರು. ಕಾಶೀನಾಥನೇ ಸಣ್ಣವನು. ಅವರ ಜೊತೆಗೆ ತಾಯಿ ಶಿವಮ್ಮ ಇದ್ದಳು. ತಂದೆ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಕಾಶೀನಾಥ್ ಸಣ್ಣದೊಂದು ಡಬ್ಬಿ ಅಂಗಡಿ ಇಟ್ಟುಕೊಂಡಿದ್ದ ಜೀವನೋಪಾಯಕ್ಕೆ. ಜೊತೆಗೆ ಪಿತ್ರಾರ್ಜಿತ ಆಸ್ತಿ ಅಂತ ಎಂಟೆಕರೆ ಜಮೀನು, ಮನೆ ಇದ್ದವು. ಜಂಬುನಾಥನಿಗೆ ಮದುವೆಯಾಗಿದ್ದರೂ ಅವನ ಹೆಂಡತಿ ಜಲಜಾ ಅವನೊಂದಿಗೆ ಬಾಳುವೆ ಮಾಡಲಾರದೇ ತವರುಮನೆ ಸೇರಿಕೊಂಡಿದ್ದಳು. ಜಂಬುನಾಥ್ ಸಾಹುಕಾರ್ ಚೆನ್ನಪ್ಪನವರ ಅಡತಿ ಅಂಗಡಿಯಲ್ಲಿ ಲೆಕ್ಕಪತ್ರ ಬರೆಯುತ್ತಿದ್ದ. ಆತನಿಗೆ ಒಂದಿಷ್ಟು ನಾಟಕದ ಗೀಳು ಇತ್ತು. ಆಗಾಗ ನಾಟಕ ಕಂಪನಿಗಳ ಹಿಂದೆ ತಿರುಗಾಡುತ್ತಿದ್ದ. ಹಾರ್ಮೋನಿಯಮ್ ನುಡಿಸುವ ಕಲೆ ಗೊತ್ತಿದ್ದರಿಂದ ನಾಟಕದವರೂ ಈತನಿಗೆ ಪ್ರಾಶಸ್ತ್ಯ ಕೊಡುತ್ತಿದ್ದರು. ನಟನಾ ಚಾತುರ್ಯವೂ ಇತ್ತು ಈತನಲ್ಲಿ. ಆಗಿನ ಕಾಲದಲ್ಲಿ ಏಳನೆಯ ತರಗತಿಯವರೆಗೆ ಓದಿದ್ದ ಈತನಿಗೆ, `ಮಲಮಗಳು, ರಕ್ತ ರಾತ್ರಿ, ವೀರ ಅಭಿಮನ್ಯು, ಲವ-ಕುಶ, ಸಂಪತ್ತಿಗೆ ಸವಾಲ್' ಮುಂತಾದ ನಾಟಕಗಳ ಸಂಭಾಷಣೆಗಳು ಕಂಠಪಾಠವಾಗಿದ್ದವು. ಈತನ ನಟನಾ ಪ್ರಾವೀಣ್ಯತೆ, ಸಂಭಾಷಣೆ ಹೇಳುವ ಚಮತ್ಕಾರಕ್ಕೆ ನಾಟಕಗಳಲ್ಲಿ ಅಭಿನಯಿಸಲು ಪಾತ್ರ ಸಿಗುತ್ತಿದ್ದವು. ಕೆಂಪು ಮೋತಿಯ ಸುಂದರಾಂಗ ಜಂಬುನಾಥನ ಚೆಲುವಿಗೆ ನಾಟಕ ಕಂಪನಿಯಲ್ಲಿನ ಒಂದಿಷ್ಟು ಹುಡುಗಿಯರು ಮರುಳಾಗುತ್ತಿದ್ದುದು ನಿಜವೇ. ತಾವಾಗಿಯೇ ಮೈಮೇಲೆ ಬೀಳುವ ಹೆಣ್ಣುಗಳ ಜೊತೆಗೆ ಒಂದಿಷ್ಟು ದೈಹಿಕ ಸಂಬಂಧವೂ ಇತ್ತು ಈತನಿಗೆ. ಇದಲ್ಲದೇ ಆಚೆ ಓಣಿಯಲ್ಲಿನ ದೇಸಾಯಿಯರ ಮನೆಯ ವಿಧವೆ ಹೆಣ್ಣು ಕುಸುಮಾವತಿ ಸಹ ಈತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈತನ ಈ ಹೊರಗಿನ ಚಾಳಿ ಗೊತ್ತಾಗೇ ಹೆಂಡತಿ ಜಲಜಾ ತವರುಮನೆಗೆ ಹೋಗಿದ್ದು. ಸಕಲ ಕಲಾ ವಲ್ಲಭನೆಂದೇ ಕರೆಯುತ್ತಿದ್ದರು ಓಣಿಯ ಜನ ಜಂಬುನಾಥನಿಗೆ. 
                    ****
ಉಮಾದೇವಿ ವಿಧುರ ಕಾಶೀನಾಥನಿಗೆ ಎರಡನೆಯ ಹೆಂಡತಿಯಾಗಿ, ಕಾಶೀನಾಥ್-ಅಂಬುಜಾರ ದಾಂಪತ್ಯಕ್ಕೆ ಜನಿಸಿದ್ದ ಇಬ್ಬರು ಗಂಡು ಮಕ್ಕಳಿಗೆ ತಾಯಿಯಾಗಿ ಗುರುತರ ಹೊಣೆ ಹೊತ್ತುಕೊಂಡು ಆ ಮನೆ ಸೇರಿದ್ದಳು. ಅಂಬುಜಾಳ ಅಕಾಲಿಕ ಮರಣ ತವರುಮನೆಯವರನ್ನು ಮತ್ತು ಗಂಡನ ಮನೆಯವರನ್ನು ದಿಗ್ಭ್ರಮೆಗೊಳಿಸಿತ್ತು. ಅಂಬುಜಾ ತನ್ನ ನಾಲ್ಕು ವರ್ಷದ ಶಿವರಾಜ್ ಮತ್ತು ಎರಡು ವರ್ಷದ ಭೃಂಗೀಶನನ್ನು ಅನಾಥಳನ್ನಾಗಿ ಮಾಡಿ ಶಿವನಪಾದ ಕಂಡಿದ್ದಳು. ಅವಳ ಸಾವು ಅಂತಿಂಥಹದಲ್ಲ. ಅಂಬುಜಾ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡು ತನ್ನ ಜೀವ, ಜೀವನಕ್ಕೆ ಅಂತಿಮ ಚರಣ ಹಾಡಿದ್ದಳು. ಅದ್ಯಾಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದಕ್ಕೆ ಇದುವರೆಗೂ ನಿಖರವಾದ ಮಾಹಿತಿ ಸಿಕ್ಕಿಲ್ಲ. ಓಣಿಯ ಬಿಬಿಸಿ ಹೆಣ್ಣು ಮಕ್ಕಳು ಸುದ್ದಿ ಮಾಡಿದಂತೆ, `ಅಂಬುಜಾಳಿಗೆ ಆಕೆಯ ಅತ್ತೆಯಿಂದ ತುಂಬಾ ಕಿರಿಕಿರಿ ಇತ್ತು. ಅವಳು ಕುಂತ್ರೂ-ನಿಂತ್ರೂ ಅತ್ತೆ ಶಿವಮ್ಮ ವಟವಟ ಅನ್ನೋದು ನಿಲ್ಲುತ್ತಿರಲಿಲ್ಲವಂತೆ. ಒಂದಿಷ್ಟು ಅಡುಗೆ ಹೆಚ್ಚಾದ್ರೂ ಆಕೆಯ ರಿಪಿರಿಪಿ ಇರುತ್ತಿತ್ತಂತೆ. ಹೆಚ್ಚಿಗೆ ಊಟಮಾಡಿದರೂ ನಮ್ಮ ಮನೆ ತಿಂದು ತೇಗ್ತಾಳೆ ಇವಳು ಅಂತ ಅಂತಿದ್ಲಂತೆ. ಮಕ್ಕಳು ಅತ್ತರೆ, ಇವಳಿಗೆ ಮಕ್ಕಳನ್ನು ಸಂಭಾಳಿಸುವುದಕ್ಕೇ ಬರೋದೇ ಇಲ್ಲ. ಗಂಡ, ಭಾವ ಹೊರಗಡೆಯಿಂದ ಬಂದ ತಕ್ಷಣ ಊಟಕ್ಕೆ ಹಾಕದಿದ್ದರೆ, ಹೊರಗೆ ಕತ್ತೆ ದುಡಿದಂಗೆ ದುಡಿದು ತಂದು ಹಾಕುವ ನನ್ನ ಮಕ್ಕಳಿಗೆ ವೇಳೆಗೆ ಸರಿಯಾಗಿ ಕೂಳು ಕುಚ್ಚಿಹಾಕುವ ಯೋಗ್ಯತೆ ಇಲ್ಲ ಎಂದೆನ್ನುತ್ತಿದ್ದಳಂತೆ. ಕೆಲಸ ಮಾಡಿ ಮಾಡಿ ಸಾಕಾಗಿ ಅಂಬುಜಾ ಹಾಸಿಗೆಯಲ್ಲಿ ಒಂದಿಷ್ಟು ಸಮಯ ಅಡ್ಡಾದರೆ, ಈ ಭೋಸುಡಿ, ಸರಿಯಾಗಿ ಕೆಲಸ ಮಾಡದೇ ಸುಮ್ಮನೇ ಬಿದ್ಕೊಳ್ತಾಳೆ ಅಂತ ವಟಗುಡುತಿದ್ಳಂತೆ. ನಿನ್ನ ಹೆಂಡತಿ ಅದು ಮಾಡುವುದಿಲ್ಲ, ಇದು ಮಾಡುವುದಿಲ್ಲ ಎಂದು ಸುಮ್ಮಸುಮ್ಮನೇ ಕಾಶೀನಾಥನಿಗೆ ದೂರು ನೀಡುತ್ತಿದ್ದಳಂತೆ. ನಿನ್ನ ಹೆಂಡತಿ ದಿನವಿಡೀ ಕನ್ನಡಿ ಮುಂದೆ ನಿಂತುಕೊಂಡಿರ್ತಾಳೆ. ಕನ್ನಡಿ ಮುಂದೆ ನಿಂತ್ಕೊಂಡು ಅದೇನು ಮಾಡ್ತಾಳೋ ಏನೋ? ಇವಳು ತನ್ನಷ್ಟಕ್ಕೆ ತಾನೇ ರಂಭೆ, ಊರ್ವಶಿ ಅಂತ ಅಂದ್ಕೊಂಡಾಳೋ ಏನೋ?' ಎಂಬ ಮಾತುಗಳು ಕೇಳಿ ಬರುತ್ತಿದ್ದವು.
ಇನ್ನೊಂದಿಷ್ಟು ಜನ ಹೆಂಗಳೆಯರು, `ಕಾಶೀನಾಥ್ ಹೆಂಡತಿಗೆ ಬಾಳ ಕಿರಿಕಿರಿ ಕೊಡುತಿದ್ದನಂತೆ. ತಾನು ಅಂದಿದ್ದು ತಕ್ಷಣ ಆಗಬೇಕಂತೆ ಕಾಶೀನಾಥನಿಗೆ. ಅಂಬುಜಾ ತಕ್ಷಣ ಅವನ ಕಡೆಗೆ ಗಮನ ಹರಿಸದಿದ್ದರೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದನಂತೆ. ಕೆಲವೊಮ್ಮೆ ಕಾಶೀನಾಥ್ ಅಂಬುಜಾಳಿಗೆ ಏಟೂ ಹಾಕುತ್ತಿದ್ದನಂತೆ. ಹೆಂಡತಿ ಹೇಳಿದ ದಿನಸಿ ಸಾಮಾನುಗಳನ್ನು ತಂದು ಹಾಕುತ್ತಿರಲಿಲ್ಲವಂತೆ ಕಾಶೀನಾಥ್. ನಾನೇನು ಸಾಮಾನು ತಂದು ಹಾಕ್ತೀನೋ, ಅದರಲ್ಲೇ ನೀನು ಸಂಸಾರ ನಡೆಸಬೇಕು ಅಂತ ದಬಾಯಿಸುತ್ತಿದ್ದನಂತೆ. ನನ್ನವ್ವನಿಗೆ ಸುಮ್ಮಸುಮ್ಮನೇ ಎದುರಾಡುತೀ ಅಂತ ಅಂಬುಜಾಳಿಗೆ ದಬಾಯಿಸುತ್ತಿದ್ದನಂತೆ. ದಿನ ರಾತ್ರಿ ಕಾಶೀನಾಥ್ ಅಂಬುಜಾಳನ್ನು ಹರ್ಕೊಂಡು ತಿನ್ತಿದ್ನಂತೆ. ಗಂಡನ ಕಿರಿಕಿರಿ ತಾಳ್ಲಾರ್ದೇ ಅವ್ಳು ಸತ್ತು ಪುಣ್ಯ ಕಟ್ಕೊಂಡ್ಳು ಅಷ್ಟೇ' ಅಂತ ಬಿತ್ತರಿಸುತ್ತಿದ್ದರು.
ಇನ್ನೂ ಕೆಲವೊಂದಿಷ್ಟು ಜನ ಹೆಣ್ಮಕ್ಳು, `ಪಾಪ, ಸಣ್ಣಸಣ್ಣ ಎರಡೂ ಮಕ್ಕಳನ್ನು ಕಟ್ಟಿಕೊಂಡು ಅಂಬುಜಾ ಬಾಳ ಏಗ್ತಿದ್ಳಂತೆ. ಮಕ್ಕಳಿಬ್ಬರನ್ನೂ ಸಂಭಾಳಿಸುವುದರಲ್ಲಿ ಬಾಳ ಕಟಿಪಿಟಿ ಬಿಡ್ತಿದ್ಳಂತೆ. ಅವಳ ಅತ್ತೆ ಅಡುಗೆ ಮನೆ ಕಡೆಗೆ ಒಂಚೂರು ಕಾಲು ಇಡುತ್ತಿರಲಿಲ್ಲವಂತೆ. ಕೆಲಸದಲ್ಲಿ ಅಂಬುಜಾಳಿಗೆ ರವೆಯಷ್ಟೂ ಸಹಾಯ ಮಾಡುತ್ತಿರಲಿಲ್ಲವಂತೆ. ಶಿವಮ್ಮ ಸುಮ್ಮನೇ ಕಟ್ಟೆ ಮೇಲೆ ಕುಂತ್ಕೊಂಡು ಹೋಗೋರು, ಬರೋರ ಮುಂದೆ ಅಂಬುಜಾಳನ್ನು ಹೀಯಾಳಿಸಿದ್ದೇ ಹೀಯಾಳಿಸಿದ್ದು ಅಂತ. ತವರುಮನೆಗೆ ಹೋಗಿ ನನ್ನ ಮಗನ ವ್ಯಾಪಾರಕ್ಕೆ ದುಡ್ಡು ಇಸ್ಕೊಂಡು ಬಾ ಅಂತ ಪೀಡಿಸುತ್ತಿದ್ದಂತೆ ಶಿವಮ್ಮ. ನಾನು ಹಂಗಾಮದಾಗ ಹಾಂಗ್ ಮಾಡೀನಿ, ಹೀಂಗ್ ಮಾಡೀನಿ ಅಂತ ಬಡಾಯಿ ಕೊಚ್ಕೊಳ್ತಿದ್ಳಂತೆ ಅತ್ತೆ ಸೊಸೆಯ ಮುಂದೆ. ಕೈಲಾಗದ ರಣಹೇಡಿ ನೀ ನನ್ಮಗನಿಗೆ ಎಲ್ಲಿ ಗಂಟು ಬಿದ್ದಿದ್ದೆ ಏನೋ? ಒಟ್ಟಿನ್ಯಾಗ ನನ್ಮಗನ ನಶೀಬು ಸರಿಯಿಲ್ಲ ಅಂತ ಒದರಿ ಅಂಬುಜಾಳ ಕಣ್ಣಲ್ಲಿ ನೀರು ತರಿಸುತ್ತಿದ್ದಳಂತೆ' ಎಂದು ನಾಕು ಜನ ಹೆಣ್ಣು ಮಕ್ಕಳು ಕಲೆತಲ್ಲಿ, ಸಂಡಾಸಿಗೆ ಚೆರಿಗೆ ತೊಗೊಂಡು ಹೋದಲ್ಲಿ ಮಾತಾಡುತ್ತಿದ್ದರು.
ಕಾಶೀನಾಥನ ಅಣ್ಣನ ಬಾಯಿಯಿಂದಲೂ ಒಂದಿಷ್ಟು ಒರಟು ಮಾತುಗಳು ಕೇಳಿ ಬರುತ್ತಿದ್ದವಂತೆ. `ನನ್ನ ಹೆಂಡತಿ ಜಲಜಾಳ ಜೊತೆಗೆ ನೀನು ಹೊಂದಿಕೊಂಡು ಹೋಗಿದ್ದರೆ ಅವಳು ಈ ಮನೆಬಿಟ್ಟು ತನ್ನ ತವರುಮನೆ ಸೇರಿಕೊಳ್ಳುತ್ತಿರಲಿಲ್ಲ. ನಿನ್ನ ಕಾಲ್ಗುಣವೇ ಸರಿ ಇಲ್ಲ. ನಮಗೆ ಮಕ್ಕಳು ಇಲ್ಲದಿದ್ದುದಕ್ಕೆ ಅವಳಿಗೆ ನೀನು ಬಂಜೆ ಬಂಜೆ ಎಂದು ಅಣಕಿಸುತ್ತಿದ್ದಿಯಂತೆ. ಪಾಪ, ನಿನ್ನ ಮಾತಿನಿಂದ ಅವಳೆಷ್ಟು ನೊಂದುಕೊಂಡಿದ್ದಳೋ ಏನೋ? ಅಮ್ಮನಿಗೆ ಅವಳ ಬಗ್ಗೆ ಇಲ್ಲಸಲ್ಲದ ಚಾಡಿ ಚುಚ್ಚುತ್ತಿದ್ದಿಯಂತೆ. ನಿನ್ನ ಚಾಡಿ ಮಾತುಗಳನ್ನೇ ನಂಬಿಕೊಂಡು ಅಮ್ಮ ಅವಳ ಮೇಲೆ ಸಿಟ್ಟು ಮಾಡುತ್ತಿದ್ದಳಂತೆ. ಕಾರಣವಿಲ್ಲದೇ ಹಾರಾಡುತ್ತಿದ್ದಳಂತೆ. ನಿನಗೆ ಒಂದಿಷ್ಟೂ ತಿಳುವಳಿಕೆ ಇಲ್ಲ.' ಹೀಗೆ, ಹಾಗೆ ಅಂತ ಜಂಬುನಾಥನೂ ಅಂಬುಜಾಳ ಮೇಲೆ ಕಿಡಿ ಕಾರುತ್ತಿದ್ದನಂತೆ. 
"ಮನೆಯವರೆಲ್ಲರ ಮಾತುಗಳಿಂದ ಮನನೊಂದ ಅಂಬುಜಾಳಿಗೆ ಜೀವನವೇ ಸಾಕೆನಿಸಿತೋ ಏನೋ? ಅವಳಾದರೂ ಅದೆಷ್ಟು ದಿನ ಅಂತ ಸಹಿಸಿಕೊಂಡಾಳು...? ಏರು ಜವ್ವನದ ವಯಸ್ಸಿನಲ್ಲಿಯೇ ಅವಳಿಗೆ ಜೀವನದಲ್ಲಿ ಜಿಗುಪ್ಸೆಯಾಗತೊಡಗಿತು. `ಮನೆಯವರೆಲ್ಲರೂ ನನ್ನನ್ನೇ ಕುಟುಕುತ್ತಿದ್ದಾರೆ. ರಣ ಹದ್ದುಗಳು ಹಾವುಗಳನ್ನು ಕುಕ್ಕಿ ಕುಕ್ಕಿ ಗಾಯಗೊಳಿಸಿ ಚಿತ್ರಹಿಂಸೆ ಕೊಟ್ಟು ನಿಧಾನಕ್ಕೆ ಜೀವ ತೆಗೆಯುವಂತೆ ಇವರು ನನ್ನ ಜೀವ ಹಿಂಡುತ್ತಿದ್ದಾರೆ. ಬೆಳಗಾಗೆದ್ದ ಕೂಡಲೇ ಇವರ ಬೈಗುಳದ ಸುಪ್ರಭಾತದ ನುಡಿಗಳು ನನ್ನೆದೆಯನ್ನು ಚುಚ್ಚುತ್ತಿವೆ. ಕೂರಲಗಿಗಿಂತಲೂ ಇವರ ಮಾತುಗಳು ಹರಿತ. ಅತ್ತೆ, ಭಾವ ನನ್ನ ಬೈದರೆ ಹೇಗೋ ಸಹಿಸಿಕೊಳ್ಳಬಲ್ಲೆ. ಆದರೆ ಅವರ ಜೊತೆಗೆ ನನ್ನ ಗಂಡನೂ ದನಿಗೂಡಿಸಿದರೆ ಅದ್ಹೇಗೆ ಸಹಿಸಿಕೊಳ್ಳಲಿ? ನನ್ನ ಮೈಮನಸ್ಸುಗಳೆರಡನ್ನೂ ನನ್ನ ಗಂಡ ಚಿಂದಿಚಿಂದಿ ಮಾಡುತ್ತಿದ್ದಾನೆ. ರಾತ್ರಿಯಂತೂ ಇವರ ಅಟ್ಟಹಾಸ ಹೇಳ ತೀರದು. ಅದೆಷ್ಟು ದಿನ ಅಂತ ಸಹಿಸಿಕೊಳ್ಳಲಿ? ನನ್ನ ಗಂಡನಿಗೂ ನಾನು ಬೇಡವಾಗಿರುವಾಗ ಈ ಬದುಕಿನ ಬಂಡಿಯನ್ನು ಎಳೆಯುವುದಾದರೂ ಏಕೆ? ಗಂಡನಿಗೆ ಬೇಡವಾದವಳು ಗುಂಡು ಕಲ್ಲಿಗೂ ಬೇಡವಾಗುವಳಂತೆ. ನಂದೂ ಪರಿಸ್ಥಿತಿ ಹಾಗೇನೇ. ಹೀಗೆ ದಿನಾಲೂ ಸಾಯುವುದಕ್ಕಿಂತ ತಕ್ಷಣ ಸಾಯುವುದು ಲೇಸಲ್ಲವೇ? ನಾನು ಬದುಕಿದ್ದರೆ ತಾನೇ ಇಷ್ಟೆಲ್ಲ ಮಾತುಗಳನ್ನು ಅನಿಸಿಕೊಳ್ಳುವುದು? ನಾನೇ ಇಲ್ಲವಾದರೆ...? ಆವಾಗ ನನ್ನ ಮಕ್ಕಳ ಗತಿ...? ಹಾಂ! ನನ್ನ ಮಕ್ಕಳೂ...? ನಾನೇ ಇಲ್ಲವೆಂದ ಮೇಲೆ ನಾನೇಕೆ ಮಕ್ಕಳು, ಗಂಡ, ಮನೆ ಅಂತ ಯೋಚಿಸಬೇಕು? ಎಲ್ಲರನ್ನೂ ಕಾಪಾಡುವ ದೇವರು ನನ್ನ ಮಕ್ಕಳನ್ನು ಕಾಪಾಡುತ್ತಾನೆ. ಹೌದು, ಎಲ್ಲರನ್ನೂ ಕಾಪಾಡುವ ದೇವರು ನನ್ನನ್ನೇಕೆ ಕಾಪಾಡುತ್ತಿಲ್ಲ...? ಯಾವ ಜನ್ಮದ ಪಾಪದ ಫಲವೋ ಏನೋ? ಪಾಪಿ ಸಾಯಲು ಸಮುದ್ರಕ್ಕೆ ಇಳಿದರೂ ಮೊಣಕಾಲು ಮಟ ನೀರು ಅಂತಾರೆ. ನಂದೂ ಹಾಗೇ ಇರಬೇಕೇನೋ? ಬದುಕಿದ್ದು ನಾನು ಸಾಧಿಸುವುದಾದರೂ ಏನಿದೆ? ಎಂದಾದರೂ ಒಂದು ದಿನ ಸಾಯಲೇ ಬೇಕಲ್ಲ...? ದಿನಾಲೂ ನರಳಿ ನರಳಿ ಸಾಯುವುದಕ್ಕಿಂತ ಈಗಲೇ ಸತ್ತು ಮಣ್ಣಲ್ಲಿ ಮಣ್ಣಾಗುವುದೇ ಲೇಸು. ಅಯ್ಯ ಸತ್ತರೆ ಅಮವಾಸ್ಯೆ ನಿಲ್ಲುವುದೇ? ಜಗತ್ತಿಗೆ ಯಾರೂ ಅನಿವಾರ್ಯವಲ್ಲವಲ್ಲ? ನಾನು ಹೋದರೆ ಕಾಶೀನಾಥ್ ಇನ್ನೊಬ್ಬಳನ್ನು ತನ್ನ ಮಗ್ಗುಲಿಗೆ ಎಳೆದುಕೊಳ್ಳುತ್ತಾನೆ. ಅವಳು ಅವನಿಗೆ ಹೆಂಡತಿಯಾಗುತ್ತಾಳೆ, ನನ್ನ ಮಕ್ಕಳಿಗೆ ಒಳ್ಳೆಯ ತಾಯಿಯೂ ಆಗಬಹುದು. ಎಲ್ಲವೂ ಅವರು ಪಡೆದುಕೊಂಡು ಬಂದಿದ್ದು ಅಷ್ಟೇ.' ತುಂಬಾ ಬೇಸರ ಮಾಡಿಕೊಂಡ ಅಂಬುಜಾ ಹೀಗೆ ತನ್ನಲ್ಲೇ ಯೋಚಿಸಿ ಅದೊಂದು ದಿನ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಹೊತ್ತಿನಲ್ಲಿ ಮನೆಯ ಬೆಳಕಿಂಡಿಗೇ ಜೋತುಬಿದ್ದು ತನ್ನ ಜೀವ ಕಳೆದುಕೊಂಡು ನೋವಿನಿಂದ ಮುಕ್ತಿ ಪಡೆದಳು, ಜೀವನ್ಮುಕ್ತಳಾದಳು" ಎಂದೂ ಕೆಲವರ ಅಂಬೋಣ. ಚಿಕ್ಕ ವಯಸ್ಸಿನಲ್ಲೇ ಅಂಬುಜಾ ಜೀವ ಕಳೆದುಕೊಂಡಿದ್ದಂತೂ ಸತ್ಯ. ಅವಳು ಬಾರದ ಲೋಕಕ್ಕೆ ಪಯಣಿಸಿದ್ದಂತೂ ನಿಜ.
                    ****
ಅಂಬುಜಾಳ ಸಾವಿಗೆ ಮನೆಯಲ್ಲಿ ಯಾರೂ ಮಮ್ಮಲ ಮರುಗಲಿಲ್ಲ. ಕಾಶೀನಾಥನಾಗಲೀ, ಅತ್ತೆ ಶಿವಮ್ಮನಾಗಲೀ ಕಣ್ಣೀರು ಸುರಿಸಲಿಲ್ಲ. ಆದರೆ ಶವ ಸಂಸ್ಕಾರಕ್ಕೆ ಬಂದ ಅವಳ ತವರುಮನೆಯವರ ದುಃಖಕ್ಕೆ ಕೊನೆಯೇ ಇರಲಿಲ್ಲ. ಎಲ್ಲರೂ ಅನಾಥರಾಗಿದ್ದ ಚಿಕ್ಕ ಮಕ್ಕಳಿಗಾಗಿ ಮರುಗುವವರೇ. ಅಂಬುಜಾಳ ತಾಯಿ ಅನಸೂಯಾದೇವಿ ಎರಡು ವಾರಗಳವರೆಗೆ ಅಳಿಯನ ಮನೆಯಲ್ಲಿದ್ದು ಎರಡೂ ಮಕ್ಕಳನ್ನು ಸಂಭಾಳಿಸಿದ್ದಳು. ಶಿವರಾಜ್ ಮತ್ತು ಭೃಂಗೀಶ್ ಅಜ್ಜಿಗೆ ಹೊಂದಿಕೊಳ್ಳತೊಡಗಿದ್ದರು. ಅಂಬುಜಾಳ ಶಿವಗಣಾರಾಧೆಗೆ ಉಮಾದೇವಿ ತಂದೆಯೊಂದಿಗೆ ಬಂದಿದ್ದಳು. ಮಕ್ಕಳು ಚಿಕ್ಕಮ್ಮನ ಜೊತೆಗೆ ಇರುವುದನ್ನು ರೂಢಿಸಿಕೊಳ್ಳತೊಡಗಿದ್ದರು. ಮಕ್ಕಳು ತಮ್ಮ ಜೊತೆಗೆ ಒಂದಿಷ್ಟು ದಿನ ಇರಲಿ ಎಂದು ಅನಸೂಯಾದೇವಿ ಊರಿಗೆ ಹೋಗುವಾಗ ತನ್ನ ಜೊತೆಗೆ ಕರೆದುಕೊಂಡು ಹೋಗಿದ್ದಳು. ಶಿವರಾಜ್ ಮತ್ತು ಭೃಂಗೀಶ್ ಇಬ್ಬರೂ ಉಮಾದೇವಿಯ ಜೊತೆಗೆ ಮಲಗುತ್ತಿದ್ದರು. ಚಿಕ್ಕಮ್ಮನನ್ನು ಅಗಲಿ ಒಂದು ಕ್ಷಣಾನೂ ಇರುತ್ತಿರಲಿಲ್ಲ. ಮಕ್ಕಳ ಊಟ-ಉಪಚಾರ, ತಿಂಡಿ-ತೀರ್ಥ, ಸ್ನಾನ, ಆಟ-ಪಾಟ ಎಲ್ಲವೂ ಅವಳ ಜೊತೆಗೇ. ಇಬ್ಬರೂ ಅಜ್ಜಿ ಮತ್ತು ಚಿಕ್ಕಮ್ಮನನ್ನು ತುಂಬಾ ಹಚ್ಚಿಕೊಂಡುಬಿಟ್ಟವು. ಒಂದು ತಿಂಗಳ ನಂತರ ಕಾಶೀನಾಥ್ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಾಗ ಇಬ್ಬರೂ ಬಹಳಷ್ಟು ರಂಪಾಟ ಮಾಡಿದರು. `ನಾವು ಇಲ್ಲೇ ಚಿಕ್ಕಮ್ಮ, ಅಜ್ಜಿಯ ಜೊತೆಗೆ ಇರುತ್ತೇವೆ' ಎಂಬ ಹಟ. `ಮತ್ತೆ ನಿಮ್ಮಿಬ್ಬರನ್ನು ಕರೆದುಕೊಂಡು ಬಂದು ಇಲ್ಲೇ ಬಿಡುತ್ತೇನೆ. ಮುಂದಿನ ಸಾರೆ ಅಜ್ಜಿ ಮತ್ತು ನಿಮ್ಮ ಚಿಕ್ಕಮ್ಮನನ್ನು ನಮ್ಮ ಜೊತೆಗೇ ಕರೆದುಕೊಂಡು ಹೋಗೋಣ. ಸದ್ಯ ಊರಿಗೆ ಹೋಗೋಣ' ಎಂದು ಸಮಾಧಾನಿಸಿ ಇಬ್ಬರನ್ನೂ ಅಲ್ಲಿಂದ ತನ್ನೂರಿಗೆ ಕರೆದುಕೊಂಡು ಹೋಗುವಷ್ಟರಲ್ಲಿ ಕಾಶೀನಾಥನಿಗೆ ಸಾಕು ಸಾಕಾಗಿ ಹೋಯಿತು.  
ಅಂಬುಜಾ ಗತಿಸಿ ಆರು ತಿಂಗಳಾಗಿದ್ದವೇನೋ? ಶಿವಮ್ಮ ಮಗ ಕಾಶೀನಾಥನಿಗೆ ಮತ್ತೊಂದು ಮದುವೆ ಮಾಡಬೇಕೆಂಬ ತರಾತುರಿಯಲ್ಲಿದ್ದಳು. ವರ್ಷೊಪ್ಪತ್ತಿನಲ್ಲಿ ಮನೆಗೆ ಸೊಸೆಯನ್ನು ತರಬೇಕೆಂಬ ಹಂಬಲ ಆ ಮುದಿ ಜೀವದಲ್ಲಿ ಹೊಯ್ದಾಡುತ್ತಿತ್ತು. ಅಂಬುಜಾಳ ತಂಗಿ ಉಮಾದೇವಿಯನ್ನು ಅವಳು ನೋಡಿದ್ದಳು. `ಅವಳಿವಳನ್ನು ಈ ಮನೆಗೆ ತರುವುದೇಕೆ...? ಉಮಾದೇವಿಯನ್ನೇ ತಂದರೆ ಹೇಗೆ...? ಉಮಾ ಅಂಬುಜಾಳಿಗೆ ಎಷ್ಟಾದರೂ ಒಡಹುಟ್ಟಿದ ತಂಗಿ. ಮೊಮ್ಮಕ್ಕಳೂ ಅವಳನ್ನು ಬೇರೆ ತುಂಬಾ ಹಚ್ಚಿಕೊಂಡಿದ್ದಾರೆ. ಉಮಾ ಸವತಿಯಾಗಿ ಬರದೇ ಮಕ್ಕಳಿಗೆ ಖಾಸಾ ತಾಯಿಯೂ ಆಗಬಹುದು' ಎಂಬುದು ಶಿವಮ್ಮನ ಲೆಕ್ಕಾಚಾರವೂ ಆಗಿತ್ತು. 
ಒಂದು ದಿನ ಶಿವಮ್ಮ ಸಂಬಂಧಿಕರೊಬ್ಬರನ್ನು ಅಂಬುಜಾಳ ತವರುಮನೆಗೆ ಕಳುಹಿಸಿ ಉಮಾದೇವಿಯನ್ನು ಕಾಶೀನಾಥನಿಗೆ ತೆಗೆದುಕೊಳ್ಳುವ ವಿಚಾರದ ಬಗ್ಗೆ ಪ್ರಸ್ತಾಪಿಸಲು ತಿಳಿಸಿದ್ದಳು. ಬಂದಿದ್ದ ವ್ಯಕ್ತಿ ತನ್ನ ಹೆತ್ತವರೊಂದಿಗೆ ಮಾತಾಡುತ್ತಿದ್ದ ವಿಷಯಗಳೆಲ್ಲವನ್ನೂ ಅಡುಗೆ ಮನೆಯಲ್ಲಿ ನಿಂತುಕೊಂಡು ಕೇಳಿಸಿಕೊಂಡ ಉಮಾ ಒಂದಿಷ್ಟು ಸಮಯ ಯೋಚನೆಯಲ್ಲಿ ಮುಳುಗಿದ್ದು ನಿಜ. `ಕಾಶೀನಾಥ ಮಾಮ ರೂಪವಂತನೇ. ನನಗೂ, ಅವರಿಗೂ ಎಂಟ್ಹತ್ತು ವರ್ಷಗಳ ಅಂತರವಿರುವುದಾದರೂ ಅಕ್ಕಪಕ್ಕ ನಿಲ್ಲಿಸಿದಾಗ ವಯಸ್ಸಿನ ಅಂತರ ಅಷ್ಟೇನೂ ಕಾಣುವುದಿಲ್ಲ. ಅದಿರಲಿ, ನನ್ನ ಮದುವೆಯಾಗಲು ಬೇರೆ ವರಗಳು ಬರಲಿಕ್ಕಿಲ್ಲವೇ? ನನಗೆ ಸಕೆಂಡ್ ಹ್ಯಾಂಡ್ ಗಂಡನೇ ಬೇಕಾ? ಫಸ್ಟ್ ಹ್ಯಾಂಡ್ ಗಂಡ ಸಿಗಲಿಕ್ಕಿಲ್ಲವೇ? ಯಾಕೆ ಸಿಗುವುದಿಲ್ಲ? ಆದರೆ ಈಗ ಪ್ರಸ್ತಾಪವಾಗುತ್ತಿರುವುದು ಕಾಶೀನಾಥನಿಗೆ ಹೆಂಡತಿಯಾಗುವ ಜೊತೆಗೆ ಅಕ್ಕನ ಮಕ್ಕಳಿಗೆ ತಾಯಿಯಾಗುವುದರ ಬಗ್ಗೆ. ಮಾಮನಿಗೆ ಯಾರಾದರೂ ಹೆಂಡತಿಯಾಗಿ ಬಂದೇ ಬರುತ್ತಾರೆ. ಹಾಗೆ ಹೆಂಡತಿಯಾಗಿ ಬಂದವಳು ಅಕ್ಕನ ಮಕ್ಕಳಿಗೆ ತಕ್ಕ ತಾಯಿ ಆಗಬೇಕಲ್ಲವೇ...? ಬಂದವಳು ಮಲಮಕ್ಕಳೆಂದು ಅಕ್ಕನ ಮಕ್ಕಳನ್ನು ಸರಿಯಾಗಿ ನೋಡಕೊಳ್ಳದಿರಬಹುದಲ್ಲವೇ? ಈಗ ನಾನೇನು ಮಾಡಲಿ...? ಅಪ್ಪ-ಅಮ್ಮನ ಮನಸ್ಸಿನಲ್ಲಿ ಏನಿದೆಯೋ ಏನೋ...? ಕಾದು ನೋಡಬೇಕಷ್ಟೇ.' ಹೀಗೆ ಒಂದಿಷ್ಟು ವಿಚಾರಗಳು ಉಮಾಳ ಮನಸ್ಸಿನ ಮುಂದೆ ಹರಿದಾಡಿ ಮಾಯವಾಗಿದ್ದವು. ತ್ಯಾಗದಲ್ಲೂ ತೃಪ್ತಿ ಕಾಣಬಹುದು ಎಂಬ ಮಾತು ಅವಳ ಮನದಲ್ಲಿ ಹೊಳೆದೂ ಹೋಯಿತು.   
ಸಮಯ, ಸಂದರ್ಭ ನೋಡಿಕೊಂಡು ಉಮಾದೇವಿಯ ಹೆತ್ತವರು ವಿಷಯವನ್ನು ಪ್ರಸ್ತಾಪಿಸಿದ್ದೂ ಆಯಿತು. `ಮಗಳೇ, ನೀನು ಆ ಮನೆ ಸೇರಿದರೆ ನಿನ್ನಕ್ಕನ ಮಕ್ಕಳ ಭವಿಷ್ಯವನ್ನು ರೂಪಿಸಬಹುದು. ಅವರ ಬಾಳು ಹಸನಾಗುವುದು ಎಂಬುದು ನಮ್ಮ ಅನಿಸಿಕೆ. ನಿನ್ನ ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ನಿನಗಿದೆ' ಎಂದು ಹೇಳಿ ಅವಳ ಮನಸ್ಸನ್ನು ಗೆದ್ದಿದ್ದರು ಹೆತ್ತವರಾದ ಅನಸೂಯಾದೇವಿ ಮತ್ತು ಶಂಭುಲಿಂಗಪ್ಪ.
ಶುಭ ಮುಹೂರ್ತವೊಂದರಲ್ಲಿ ಉಮಾದೇವಿ ಕಾಶೀನಾಥನ ಮಡದಿಯಾಗಿ ಆತನ ಮನೆಯ ಸಂಸಾರದ ತೇರು ಎಳೆಯತೊಡಗಿದಳು. `ನೀನು ಅಂಬುಜಾಳ ಮಕ್ಕಳಿಗೆ ನಿಜವಾಗಿಯೂ ತಾಯಿಯಾಗಬೇಕು. ಯಾವ ಕಾಲಕ್ಕೂ ಮಲತಾಯಿಯಾಗಬೇಡ. ಆ ಮಕ್ಕಳು ನಿನ್ನನ್ನೇ ಹೆತ್ತ ತಾಯಿ ಎಂದು ತಿಳಿದುಕೊಂಡಿರಬೇಕು' ಎಂದು ಅನಸೂಯಾದೇವಿ ಮಗಳಿಗೆ ಒತ್ತಿ ಒತ್ತಿ ಹೇಳಿ ಕಳುಹಿಸಿದ್ದಳು ಗಂಡನ ಮನೆಗೆ ಕಳುಹಿಸುವಾಗ. ಉಮಾಳೂ ಅಷ್ಟೇ. ತಾಯಿಯ ಮಾತನ್ನು ಅಕ್ಷರಶಃ ಪಾಲಿಸತೊಡಗಿದ್ದಳು.
ಅದೇನೋ ಗೊತ್ತಿಲ್ಲ, ಉಮಾದೇವಿ ಆ ಸೇರಿದ ನಂತರ ಅತ್ತೆ ಶಿವಮ್ಮ ಮೊದಲಿನಂತೆ ಕಿರಿಕಿರಿ ಮಾಡಲಿಲ್ಲ. ಗಂಡನೂ ಪ್ರೀತಿಯ ಹೊಳೆಯನ್ನೇ ಹರಿಸತೊಡಗಿದ್ದ. ಭಾವ ಒಂದಿಷ್ಟು ಮೌನ ತಾಳಿದ್ದ. ಶಿವರಾಜ್ ಮತ್ತು ಭೃಂಗೀಶ್ ಉಮಾಳನ್ನು ತಮ್ಮ ಹೆತ್ತಮ್ಮನೇ ಎಂದು ಭಾವಿಸತೊಡಗಿದ್ದರು. ನಿಜವಾಗಿಯೂ ಅವರಿಬ್ಬರೂ ಉಮಾಳ ಮಕ್ಕಳೇ ಆದವು. ಸಂಸಾರ ಚೆಂದಾಗಿಯೇ ಸಾಗಿತ್ತು. ಸಂಸಾರ ಸಂತೃಪ್ತಿಯಿಂದ ಸಾಗುತ್ತಿರುವಾಗ ಮಧುರ ದಾಂಪತ್ಯದಲ್ಲಿ ಮಕ್ಕಳಿಗೇನು ಕೊರತೆ ಅಲ್ಲವೇ...? ಮದುವೆಯಾಗಿ ವರ್ಷ ತುಂಬುವಷ್ಟರಲ್ಲಿ ಉಮಾ ಗರ್ಭವತಿಯಾಗಿ ನವಮಾಸಗಳ ನಂತರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಕಾಶೀನಾಥನ ಮನೆಯಲ್ಲಿ ಸಂತಸದ ನಗೆ ಚಿಮ್ಮಿತ್ತು. ದೀಪಾ ಮನೆ ಬೆಳಗುವ ಮಗಳಾದಳು. ದೀಪಾಳಿಗೆ ವರ್ಷ ತುಂಬುವಷ್ಟರಲ್ಲಿ ಉಮಾ ಮತ್ತೆ ಗರ್ಭಧರಿಸಿದ್ದಳು. ಕೀರ್ತಿ ಹೆಚ್ಚಿಸಲು ಗೌರಿಶಂಕರ್ ಆ ಮನೆಯಲ್ಲಿ ಕಿಲಕಿಲಿಸಿದ್ದ. ನಾಲ್ಕೂ ಮಕ್ಕಳು ಅನ್ಯೋನ್ಯವಾಗಿ ಬೆಳಯತೊಡಗಿದ್ದರು.
ಕಾಶೀನಾಥನ ಜೀವಿತ ಕಾಲದಲ್ಲೇ ನಾಲ್ಕೂ ಮಕ್ಕಳ ಮದುವೆಯೂ ಮುಗಿದು ಹೋದವು. ಮದುವೆಯ ನಂತರ ಮೂರೂ ಜನ ಗಂಡುಮಕ್ಕಳು ತಮ್ಮ ತಮ್ಮ ಹೆಂಡಿರ ಜೊತೆಗೆ ಬೇರೆ ಬೇರೆ ಮನೆಮಾಡಿಕೊಂಡರು. ಹಿರಿಯ ಮಗ ಶಿವರಾಜ್ ಸಣ್ಣದೊಂದು ಬಟ್ಟೆ ಅಂಗಡಿ ಮಾಡಿಕೊಂಡಿದ್ದರೆ ಭೃಂಗೀಶ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಗೌರಿಶಂಕರ್ ದಿನಸಿ ಅಂಗಡಿ ಮಾಡಿಕೊಂಡಿದ್ದ. ಮೂವರಲ್ಲಿ ಭೃಂಗೀಶನೇ ಹೆತ್ತವರ ಬಗ್ಗೆ ಕಾಳಿಜಿ, ಕಳಕಳಿ ವ್ಯಕ್ತಪಡಿಸುತ್ತಿದ್ದುದು. ಮಕ್ಕಳಿಲ್ಲದ ಶಿವರಾಜ್ ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಕುಡಿತಕ್ಕೆ ಶರಣಾಗಿದ್ದ. ಗಂಡನ ವರ್ತನೆಗೆ ಬೇಸತ್ತ ಅವನ ಹೆಂಡತಿ ತವರುಮನೆ ಸೇರಿಕೊಂಡಿದ್ದಳು. ತಂದೆ ಕಾಶೀನಾಥ್ ತೀರಿಕೊಂಡ ಎರಡು ವರ್ಷಗಳ ನಂತರ ಅವನೂ ಇಹಲೋಕ ಯಾತ್ರೆ ಮುಗಿಸಿದ್ದ.
                    ****
"ಅಕ್ಕಾ, ಉಮ್ಮಕ್ಕಾ, ಹೇಗಿದ್ದೀಯವ್ವ...?" ಎಂದೆನ್ನುತ್ತಾ ಪಕ್ಕದ ಮನೆಯ ಶಶಿಕಾಂತ ತನ್ನ ಹೆಂಡತಿ ಪುಷ್ಪಾಳ ಜೊತೆಗೆ ಬಂದಾಗ ಉಮಾದೇವಿಯ ಯೋಚನಾ ಲಹರಿ ತುಂಡಾಗಿತ್ತು. ಹಾಸಿಗೆಯಲ್ಲಿದ್ದ ಉಮಾದೇವಿ ಅವರ ಕಡೆಗೆ ಕಣ್ಕಣ್ ಬಿಡುತ್ತಾ ಎದ್ದೇಳಲು ಪ್ರಯತ್ನಿಸಿದಳಾದರೂ ಮೇಲೇಳಲಾಗಲಿಲ್ಲ. ಪುಷ್ಪಾಳೇ ಅವಳ ಕೈಹಿಡಿದು ಎಬ್ಬಿಸಿ ಕೂಡ್ರಿಸಿದಳು. ದೇಹ ನವೆದು, ಸವೆದು ಹೋಗಿತ್ತು. ಕೃತಜ್ಞತಾ ಭಾವವಿತ್ತು ಉಮಾದೇವಿಯ ನೋಟದಲ್ಲಿ. 
"ತಮ್ಮಾ ಶಶಿ, ಯಾಕೋ ನಾನಿನ್ನು ಬಹಳ ದಿನ ಬದುಕಲಾರೆ ಅಂತ ಅನಿಸುತ್ತಿದೆ. ಕೊನೇ ಗಳಿಗೆಯಲ್ಲಿ ದೀಪಾಳನ್ನು ನೋಡಬೇಕೆನ್ನುವ ಆಸೆ ನನ್ನ ಹುಚ್ಚು ಮನಸ್ಸಿಗೆ. ಈಗ ಇನ್ನೊಂದು ಸಾರೆ ದೀಪಾಳಿಗೆ ಫೋನು ಹಚ್ಚಿ ಮಾತಾಡಿ ತಕ್ಷಣ ಹೊರಟು ಬರಲು ಹೇಳಿಬಿಡಿ. ಇದೊಂದು ಕೊನೇ ಪ್ರಯತ್ನ ಅಷ್ಟೇ. ಅವಳು ಬಂದರೆ ಬರಲಿ, ಇಲ್ಲವಾದರೆ ಇಲ್ಲ." ಇಷ್ಟು ಹೇಳುವಷ್ಟರಲ್ಲಿ ಉಮಾದೇವಿ ಏದುಸಿರು ಬಿಡತೊಡಗಿದ್ದಳು. ತೇಲುಗಣ್ಣು, ಮೇಲುಗಣ್ಣು ಹಾಕತೊಡಗಿದ್ದಳು. 
"ಅಕ್ಕಾ, ಗಾಬರಿ ಬೀಳಬೇಡಿರಿ. ನಿಮ್ಮ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ಕಾಳಜಿ ಮಾಡದಿದ್ದರೂ ನಾವೆಲ್ಲ ಇದ್ದೇವೆ. ಭಯಬೀಳಬೇಡಿರಿ. ನಾವು ರಕ್ತ ಸಂಬಂಧಿಗಳು ಆಗಿರದಿದ್ದರೂ ನಮ್ಮ, ನಿಮ್ಮ ನಡುವೆ ಏನೋ ಒಂದು ಅವಿನಾಭಾವ ಬೆಸುಗೆ ಇದೆ. ನನ್ನನ್ನು ಒಡಹುಟ್ಟಿದ ತಮ್ಮನೆಂದೇ ಭಾವಿಸಿಕೊಳ್ಳಿರಿ. ಪುಷ್ಪಾ ನಿಮ್ಮ ನಾದಿನಿಯಂದೇ ತಿಳಿದುಕೊಳ್ಳಿರಿ. ಸರಿ, ದೀಪಾಳಿಗೆ ಫೋನ್ ಹಚ್ಚುವೆ. ನೋಡೋಣ. ನೀವು ತುಸು ಸುಧಾರಿಸಿಕೊಳ್ಳಿರಿ" ಎಂದೆನ್ನುತ್ತಾ ಶಶಿಕಾಂತ್ ದೀಪಾಳ ನಂಬರಿಗೆ ಡಯಲ್ ಮಾಡಿದ. ಫೋನ್ ರಿಂಗಾಯಿತು, ಕರೆಯನ್ನು ಸ್ವೀಕರಿಸಿದ್ದೂ ಆಯಿತು.
"ಹಲೋ ದೀಪಾ, ನಾನಮ್ಮ ನಿಮ್ಮ ಅಂಕಲ್ ಶಶಿಕಾಂತ್." ಅತ್ತ ಕಡೆಯಿಂದ ಹಲೋ ಎಂಬ ಧ್ವನಿ ಕೇಳಿಬರುತ್ತಲೇ ಶಶಿಕಾಂತ್ ಒಂದಿಷ್ಟು ದೂರ ಸರಿದು ಮಾತಿಗೆ ಮುಂದಾಗಿದ್ದ. 
"ಗೊತ್ತಾಯಿತು ಹೇಳಿ ಅಂಕಲ್. ಅದೇ ಅಮ್ಮನ ರಂಪಾಟದ ಸುದ್ದಿ ತಾನೇ...?" ದೀಪಾಳ ಧ್ವನಿಯಲ್ಲಿ ಒಂಥರ ಒರಟುತನ, ತಾತ್ಸಾರತನವಿದ್ದವು.
"ಈ ಒಂದು ವಾರದಲ್ಲಿ ನಿಮ್ಮಮ್ಮ ತುಂಬಾ ಇಳಿದು ಹೋಗಿದ್ದಾಳೆ. ಊಟವನ್ನೇ ಮಾಡುತ್ತಿಲ್ಲ. ಬರೀ ದ್ರವಹಾರದ ಮೇಲೆ ಜೀವ ಹಿಡಿದುಕೊಂಡಿದ್ದಾಳೆ. ಒಂದೆರಡು ಮಾತಾಡುವಷ್ಟರಲ್ಲಿ ಅತಿಯಾದ ಆಯಾಸವಾಗುತ್ತಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಇವತ್ತೇನೋ, ನಾಳೇನೋ ಎಂಬಂತಿದ್ದಾಳೆ. ನಿನ್ನೆ ಬಂದು ಹೋದ ಡಾಕ್ಟರ್ ಸಹ ಉತ್ಸಾಹದಾಯಕ ವರದಿ ಕೊಡಲಿಲ್ಲ. ಆ ಜೀವ ನಿನ್ನನ್ನೇ ನೆನಸುತ್ತಿದೆ. ನಿನ್ನಲ್ಲಿ ಆಕೆ ಜೀವವನ್ನೇ ಇಟ್ಟುಕೊಂಡಿದ್ದಾಳೆ. ಅದಕ್ಕೇ ನೀನು ತಕ್ಷಣ ಹೊರಟು ಬಂದುಬಿಡು. ಜೀವವಿರುವಾಗಲೇ ನೀನು ಬಂದರೆ ಅವಳು ಸಂತೃಪ್ತಿಯಿಂದ ಜೀವ ಬಿಡಬಹುದೇನೋ? ಯಮಧರ್ಮರಾಯ ಆಗಲೇ ಅವಳ ಕೊರಳಿಗೆ ತನ್ನ ಪಾಶವನ್ನು ಬಿಗಿದಿದ್ದಾನೆಂದು ಅನಿಸುತ್ತಿದೆ. ದಯವಿಟ್ಟು ನೀನು ಇನ್ನೂ ತಡಮಾಡಬೇಡ ತಾಯಿ."
"ಅಂಕಲ್, ನನಗ್ಯಾಕೆ ಸುಮ್ಮನೇ ತೊಂದರೆ ಕೊಡುತ್ತಿರುವಿರಿ...? ನಾನೊಬ್ಬಳೇ ಮಗಳೇನಾ ನನ್ನಮ್ಮನಿಗೆ...? ಅಮ್ಮನಿರುವಲ್ಲೇ ಇಬ್ಬರು ಅಣ್ಣಂದಿರಿದ್ದಾರೆ, ಇಬ್ಬರು ಸೊಸೆಯಂದಿರಿದ್ದಾರೆ. ಮೊಮ್ಮಕ್ಕಳಿದ್ದಾರೆ. ನಾನು ಬಂದು ಅಲ್ಲಿ ಮಾಡುವುದಾದರೂ ಏನಿದೆ...?" 
"ಹಾಗೆಲ್ಲ ಹೇಳಬೇಡಮ್ಮ. ಹಾಗೆ ಹೇಳುವುದಕ್ಕೆ ಇದು ಸಮಯವೂ ಅಲ್ಲ. ದಯವಿಟ್ಟು ಬಂದುಬಿಡಮ್ಮ." ದೈನ್ಯತೆ ಇತ್ತು ಶಶಿಕಾಂತನ ಧ್ವನಿಯಲ್ಲಿ. 
"ನಾನು ಅವರ ಮಗಳು ಎನ್ನುವುದಷ್ಟೇ ಸರಿ. ಅದಕ್ಕಿಂತ ಹೆಚ್ಚಿನದೇನಿದೆ? ಅವರು ನನಗೇನು ಮಾಡಿದ್ದಾರೆ ಹೇಳಿರಿ? ಅಪ್ಪ, ಅಮ್ಮ ನನ್ನನ್ನು ಒಬ್ಬ ಸಾಮಾನ್ಯ ಆರ್‍ಎಮ್‍ಪಿ ಡಾಕ್ಟರ್‍ಗೆ ಕೊಟ್ಟು ಮದುವೆಮಾಡಿ ಮನೆಯಿಂದ ಸಾಗಹಾಕಿದರು. ನನ್ನ ಗಂಡನಿಗೇನಾದರೂ ವರದಕ್ಷಿಣೆ-ಗಿರದಕ್ಷಿಣೆ ಕೊಟ್ಟರಾ...? ಅದೂ ಇಲ್ಲ. ಹೂವಿನಂಥ ಚೆಲುವಿನ ನನ್ನ ರೂಪಕ್ಕೆ ಮನಸೋತು ಡಾ.ಅರುಣ್ ನನ್ನ ಕೈಹಿಡಿದರು. ಅರುಣ್ ತುಂಬಾ ಒಳ್ಳೆಯವನಾಗಿರುವುದರಿಂದ ನಮ್ಮದು ಸುಖೀ ಸಂಸಾರ. ಅತ್ತೆ-ಮಾವನವರೂ ಸುಸಂಸ್ಕøತರು. ಆರತಿಗೊಂದು, ಕೀರುತಿಗೊಂದು ಎಂಬಂತೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ ನಮಗೆ. ನಮ್ಮ ಒಳ್ಳೆಯತನಕ್ಕೆ ಮಕ್ಕಳಿಬ್ಬರೂ ಓದಿನಲ್ಲಿ ಮುಂದು. ಮೊನ್ನೆ ಮೂರು ತಿಂಗಳ ಹಿಂದೆ ನನ್ನ ಮಗ ಸಮರ್ಥನಿಗೆ ಎಂಬಿಬಿಎಸ್ ಸೀಟು ಸಿಕ್ಕಾಗ ಅಮ್ಮನ ಹತ್ತಿರ ಒಂದಿಷ್ಟು ಹಣಕಾಸಿನ ಸಹಾಯದ ಭಿಕ್ಷೆಗೆ ಬಂದಿದ್ದೆ. ಆದರೆ ಅಮ್ಮ ನನ್ನನ್ನು ಬರಿಗೈಲೇ ಕಳುಹಿಸಿದಳು. ನಾನೇನು ಆಕೆಗೆ ಹತ್ತಿಪ್ಪತ್ತು ಲಕ್ಷ ಕೇಳಿದೆನೇ...? ಇಲ್ಲವಲ್ಲ...? ಜುಜುಬಿ ಬರೀ ಮೂರು ಲಕ್ಷ ಕೇಳಿದೆ. ಅಮ್ಮ ಹೇಳಿದ್ದೇನು ಗೊತ್ತೇ ಅಂಕಲ್? `ಮಗಳೇ ದೀಪಾ, ನನ್ನದೆನ್ನುವ ಆಸ್ತಿ ನನಗೇನಿದೆ ಹೇಳು? ನಿನ್ನಪ್ಪ ಜೀವಂತ ಇರುವಾಗಲೇ ಇದ್ದ ಹೊಲ-ಮನೆಗಳನ್ನು ನಿನ್ನ ಅಣ್ಣಂದಿರು ಹಂಚಿಕೊಂಡಿದ್ದಾರೆ. ನಾನಿರುವ ಈ ಮನೆಯೂ ನಿನ್ನ ದೊಡ್ಡ ಅಣ್ಣ ಭೃಂಗೀಶನ ಪಾಲಿಗೆ ಬಂದಿರುವುದು. ಏನೋ ದೊಡ್ಡ ಮನಸ್ಸುಮಾಡಿ ನಮಗೆ ಇರಲು ಬಿಟ್ಟುಕೊಟ್ಟಿದ್ದಾನೆ. ಮನೆ ನನ್ನ ಹೆಸರಿನಲ್ಲಿ ಇರುವುದಾದರೂ ಭೃಂಗೀಶನ ಪಾಲಿಗೆ ಬಂದಿದೆ ಅಲ್ಲವೇ? ಭೃಂಗೀಶನೇ ನನ್ನ ಖರ್ಚಿಗೆ ಒಂದಿಷ್ಟು ಕೊಡುತ್ತಿರುವನಾದರೂ ಅವನ ಹೆಂಡತಿಗೆ ಇದು ಇಷ್ಟವಿಲ್ಲ. ಅತ್ತ ಸಾಯಲೂ ಇಲ್ಲ, ಇತ್ತ ಬದುಕಲೂ ಇಲ್ಲ ಎಂಬಂತೆ ಕುಂಟುಂತ್ತಾ ಹೇಗೋ ನನ್ನ ಜೀವನ ನಡೆದಿದೆ. ಅಂಥಹುದರಲ್ಲಿ ನಾನೇನು ಸಹಾಯ ಮಾಡಬಲ್ಲೆ ನಿನಗೆ...?' ಎಂದು ಕರಾರುವಾಕ್ಕಾಗಿ ಹೇಳಿದಳು. `ಅಮ್ಮಾ, ಈ ಮನೆ ಹೇಗೂ ನಿನ್ನ ಹೆಸರಿನಲ್ಲಿ ಇದೆ. ಯಾರಿಗಾದರೂ ಒತ್ತೆಹಾಕಿ ಒಂದಿಷ್ಟು ದುಡ್ಡು ಕೊಡು' ಎಂದಿದ್ದಕ್ಕೆ, `ಅದ್ಹೇಗೆ ಮಾಡಲಿಕ್ಕೆ ಬರುತ್ತದೆ? ಈ ಮನೆ ಎಷ್ಟಾದರೂ ಭೃಂಗೀಶನದು ಅಲ್ಲವೇ...?' ಎಂದು ಹೇಳಿಬಿಟ್ಟಳು. ನಾನು ಅದೆಷ್ಟೋ ಪೀಡಿಸಿ ಕೇಳಿದೆ. ಆಕೆಯ ಕಲ್ಲು ಮನಸ್ಸು ಕರಗಲೇ ಇಲ್ಲ. ಅಪ್ಪ ಇದ್ದರೆ ಹೇಗೋ ಒಂದಿಷ್ಟು ಸಹಾಯ ಮಾಡುತ್ತಿದ್ದನೇನೋ? ನಾನು ಸಪ್ಪೆ ಮೋರೆ ಹಾಕಿಕೊಂಡು ನನ್ನೂರಿಗೆ ಬರಬೇಕಾಯಿತು. ಅವರಿವರ ಕೈಕಾಲು ಹಿಡಿದು ಹೇಗೋ ದುಡ್ಡನ್ನು ಹೊಂದಿಸಿಕೊಂಡು ಮಗನನ್ನು ಮೆಡಿಕಲ್‍ಗೆ ಸೇರಿಸಿದೆವೆನ್ನಿ. ಅಂಕಲ್, ನೀವೇ ಹೇಳಿರಿ, ಅಮ್ಮ ಮನಸ್ಸು ಮಾಡಿದ್ದರೆ ನನಗೆ ದುಡ್ಡಿನ ವ್ಯವಸ್ಥೆ ಮಾಡಬಹುದಾಗಿತ್ತಲ್ಲವೇ? ಅತ್ತಿಗೆಯರಿಗೆ ದಾಸರಾಗಿರುವ ಅಣ್ಣಂದಿರಿಬ್ಬರೂ ನನ್ನನ್ನು ಹಚ್ಚಿಕೊಳ್ಳಲೇ ಇಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬಂತೆ ನಾನು ಹೊರಗಿನವಳಾಗಿಬಿಟ್ಟಿದ್ದೇನೆ. ಆದರೆ ನಾನು ಮನಸ್ಸು ಮಾಡಿದ್ದರೆ ಅಣ್ಣಂದಿರು ಆಸ್ತಿ ಪಾಲುಮಾಡಿಕೊಳ್ಳುವಾಗ ಅಡ್ಡಗಾಲು ಹಾಕಿ ನನಗೂ ಭಾಗ ಕೇಳಿದ್ದರೆ ಚೊಲೋ ಇತ್ತೇನೋ ಅಂತ ಈಗ ಅನಿಸುತ್ತಿದೆ. ನಾನಷ್ಟು ಹೀನ ಮನಸ್ಸಿನವಳಾಗಬಾರದು ಎಂದಂದುಕೊಂಡು ಸುಮ್ಮನಾದೆ ಅಷ್ಟೇ. ನಾನಂತೂ ಸದ್ಯಕ್ಕೆ ಊರಿಗೆ ಬರಲಾರೆ. ಮಗ ಸಮರ್ಥನ ಕಾಲೇಜಿನಲ್ಲಿ ಯಾವುದೋ ಫಂಕ್ಷನ್ ಇದೆಯಂತೆ. ನಾಳೆ ನಾವು ಅಲ್ಲಿಗೆ ಹೋಗಬೇಕಿರುವ ಅವಶ್ಯಕತೆ ಇದೆ." ದೀಪಾ ಕಡ್ಡಿ ಮುರಿದಂತೆ ನಿಷ್ಠುರವಾಗಿ ಮಾತಾಡಿದಳು.   
"ನೋಡಮ್ಮ ದೀಪಾ, ನೀನೆಷ್ಟಾದರೂ ನಿನ್ನಮ್ಮನ ರಕ್ತ ಹಂಚಿಕೊಂಡು ಹುಟ್ಟಿದಾಕೆ. ಇಂಥಹ ಹೊತ್ತಿನಲ್ಲಿ ಇಲ್ಲದ್ದನ್ನು ಹೇಳಿಕೊಂಡು ದೂರವಿರುವುದು ಸರಿಯಲ್ಲ. ಇಂದೋ, ನಾಳೆಯೋ ಜೀನ್ಮುಕ್ತಿ ಪಡೆಯುವ ಜೀವಕ್ಕೆ ಒಂದಿಷ್ಟು ಸಾಂತ್ವನದ ಮಾತುಗಳು ಬೇಕು ಅಷ್ಟೇ. ಮನಸ್ಸು ದೊಡ್ಡದು ಮಾಡಿಕೊಂಡು ಬಂದುಬಿಡು ಪ್ಲೀಜ್..." ಗೋಗರೆದ ಶಶಿಕಾಂತ್. 
ದೀಪಾಳ ಕಲ್ಲು ಮನಸ್ಸು ಕರಗಲಿಲ್ಲ. ಟಕ್ಕಂತ ಫೋನ್ ಕಟ್‍ಮಾಡಿದ್ದಳು.
"ತಮ್ಮಾ ಶಶಿ, ನೆರೆಹೊರೆಯವರಾದ ನಿಮಗೆ ಇರುವ ಕರುಣೆ, ಕಕ್ಕುಲಾತಿ ನನ್ನ ಮಕ್ಕಳಿಗಿಲ್ಲ. ನನ್ನವರಿಗೇ ನಾನು ಬೇಡವಾದವಳು. ನನ್ನವರೆನ್ನುವವರು ನನಗ್ಯಾರೂ ಇಲ್ಲ. ಮಕ್ಕಳಿದ್ದೂ ಅನಾಥೆ ನಾನು. ಇದು ನಾನು ಪಡೆದುಕೊಂಡು ಬಂದಿದ್ದು. ದೈವೇಚ್ಛೆಯಂತೆ ನಡೆಯಬೇಕಲ್ಲವೇ...? ನಾನಿನ್ನು ಯಾರಿಗಾಗಿ ಬದುಕಬೇಕಿದೆ...?" ಎಂದೆನ್ನುವಷ್ಟರಲ್ಲಿ ಉಮಾದೇವಿಯ ಕತ್ತು ಪಕ್ಕಕ್ಕೆ ವಾಲಿತ್ತು.

* ಶೇಖರಗೌಡ ವೀ ಸರನಾಡಗೌಡರ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

6 thoughts on “ಅನಾಥೆ”

  1. ಧರ್ಮಾನಂದ ಶಿರ್ವ

    ಒಂದು ಸಂಸಾರದ ಆಮೂಲಾಗ್ರ ಕಥೆ ಸರಳವಾಗಿ ಓದಿಸಿಕೊಂಡು ಹೋಗುವ ಗುಣ ಹೊಂದಿದೆ.ಅಭಿನಂದನೆಗಳು.

  2. Raghavendra Mangalore

    ಭಾವಪೂರ್ಣ ಮತ್ತು ಮನ ಮಿಡಿಯುವ ಕಥೆ…ತುಂಬಾ ಚೆನ್ನಾಗಿದೆ 👌🏻

  3. ಸವಿತಾ ಮುದ್ಗಲ್

    ತುಂಬಾ ಚೆನ್ನಾಗಿದೆ ಕಥೆ ಸರ್, ಗ್ರಾಮೀಣ ಭಾಷೆಯ ಅವಾಚ್ಯ ಪದಗಳು ಬಳಸಿದ್ದೀರಿ ಅಗತ್ಯ ಇರಲಿಲ್ಲ ಅನ್ನಿಸುತ್ತೆ.

  4. JANARDHANRAO KULKARNI

    ಕಥೆ ವಾಸ್ತವಕ್ಕೆ ಹತ್ತಿರ. ಬಹಳಷ್ಟು ಸಂಬಂಧಗಳು ವ್ಯವಹಾರಕ್ಕೆ ಸೀಮಿತವಾಗಿ ಭಾವನೆಗಳಿಗೆ ಬೆಲೆ ಇಲ್ಲವಾಗಿದೆ. ಕತೆಯನ್ನು ಸೊಗಸಾಗಿ ಬರೆದಿದ್ದೀರಿ. ಅಭಿನಂದನೆಗಳು ಗೌಡರೇ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter