ನೀತಿ ಪ್ರತೀತಿ – ವಿಭಾ ಪುರೋಹಿತ ಅಂಕಣl ನಂಬಿಕೆ ಮತ್ತು ವಾಸ್ತವಪ್ರಜ್ಞೆ

ಶಾಂತವಾಗಿ ಹರಿಯುತ್ತಿರುವ ನದಿ . ನದಿಯ ಪಕ್ಕದಲ್ಲಿ ಹಸಿರಾದ ಮೆತ್ತನೆಯ ಹುಲ್ಲುಗಾವಲು. ದೂರದಿಂದ ಗರ್ಭಿಣಿ ಜಿಂಕೆ ಇದನ್ನು ನೋಡುತ್ತ ಮಗುವಿಗೆ ಜನ್ಮ ನೀಡಲು ಇದೇ ಸ್ಥಳ ಸೂಕ್ತವಾದದ್ದು ಎಂದು ಮನದಲ್ಲಿ ನಿರ್ಧರಿಸಿತು. ಅಷ್ಟರಲ್ಲಿ ಬಾನಿನಲ್ಲಿ ಕಾರ್ಮೋ ಡಗಳು ತುಂಬಿಕೊಂಡವು. ಮಿಂಚು, ಗುಡುಗು, ಆರ್ಭಟ ನಡೆಸಿದವು. ಜಿಂಕೆ ತನ್ನ ಎಡಕ್ಕೆ ತಿರುಗಿ ನೋಡಿತು. ಓರ್ವ ಬೇಟೆಗಾರ ಅದಕ್ಕೆ ಗುರಿ ಇಟ್ಟು ಬಾಣವನ್ನು ಬಿಲ್ಲಿಗೆ ತೊಡಿಸುತ್ತಿದ್ದನು . ನಂತರ ಬಲಗಡೆ ತಿರುಗಿ ನೋಡಿತು. ಅಲ್ಲೊಂದು ಹುಲಿ ಆ ಜಿಂಕೆ ಕಡೆಗೆ ಬರುತ್ತಿದೆ . ಇಂಥ ಸಂದಿಗ್ಧದಲ್ಲಿ ಜಿಂಕೆಗೆ ಪ್ರಸವ ವೇದನೆಯೂ ಆರಂಭವಾಯಿತು. ಇಷ್ಟೆಲ್ಲ ಸಾಲದು ಎಂಬಂತೆ ಕಾಳ್ಗಿಚ್ಚು ದೂರದಲ್ಲಿ ಕಾಣಿಸಿಕೊಂಡಿತು . ಇದೇನಿದು? ಇನ್ನೇನಾಗುವುದು? ಜಿಂಕೆಯ ಗತಿ ! ಎಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡುತ್ತದೆ.

ಜಿಂಕೆ ತನಗೆ ಉಂಟಾಗಬಹುದಾದ ಅಪಾಯಗಳನ್ನು ದೇವರಿಗೆ ಒಪ್ಪಿಸಿ ಶಿಶುವಿಗೆ ಜನ್ಮ ಕೊಡುವುದರಲ್ಲಿಯೇ ತನ್ನ ಮನವನ್ನು ಕೇಂದ್ರೀಕರಿಸಿತು. ಅಬ್ಬಾ! ಎಂತಹ ವಾಸ್ತವ ಪ್ರಜ್ಞೆ, ಜಿಂಕೆಯದು ಇಂತಹ ದುರ್ಗಮ ಪರಿಸ್ಥಿತಿಯಲ್ಲಿ ತನ್ನ ಮನಸ್ಸನ್ನು ಸ್ಥಿರಗೊಳಿಸಿಕೊಂಡು ಎಲ್ಲ ಭಾರವನ್ನು ಭಗವಂತನ ಮೇಲೆ ಹಾಕಿದ್ದು ಅಚ್ಚರಿ ಎನಿಸಿದರೂ ಅದರ ಸ್ಥಿತಪ್ರಜ್ಞೆಯನ್ನು ಮೆಚ್ಚಲೇಬೇಕು. ಅದೃಷ್ಟವಶಾತ್ ಅಲ್ಲಿ ಮಿಂಚು ತಗುಲಿ ಬೇಡನ ಕಣ್ಣು ದೃಷ್ಟಿ ಹೀನವಾಯಿತು. ಅವನ ಗುರಿ ತಪ್ಪಿ ಬಾಣ ಹುಲಿಗೆ ತಗುಲಿತು. ಹುಲಿ ಮೃತಪಟ್ಟಿತು. ಆ ಹೊತ್ತಿಗೆ ಜೋರಾಗಿ ಸುರಿದ ಮಳೆ ಕಾಳ್ಗಿಚ್ಚಿನ್ನು ಶಮನ ಮಾಡಿತು. ಹಾಗಾಗಿ ಜಿಂಕೆ ಮುದ್ದಾದ ಮರಿಯೊಂದನ್ನು ಪಡೆಯಿತು.

ಸ್ನೇಹಿತರೆ, ಇಲ್ಲಿ ಜಿಂಕೆಯ ಈ ಸ್ವಭಾವನ್ನು ತಿಳಿಯೋಣ. ಯಾವುದು ತನ್ನ ಅಧೀನದಲ್ಲಿತ್ತೊ ಅದನ್ನ ಪೂರೈಸಲು ಮುಂದಾಯಿತು. ಇನ್ನುಳಿದ ಕ್ರಿಯೆಗಳು ಅದರ ಕೈಯಲ್ಲಿ ಇರಲಿಲ್ಲ. ವೃಥಾ ಚಿಂತಿಸಲಿಲ್ಲ. ತನ್ನನ್ನು ಸುತ್ತುವರೆದ ಅಪಾಯಗಳನ್ನು ಕುರಿತೆ ಚಿಂತಿಸುತ್ತಿದ್ದರೆ ಜಿಂಕೆ ಮರಿಯೊಂದಿಗೆ ಸಾವನ್ನಪ್ಪುತ್ತಿತ್ತು. ಹಾಗಾಗಿ ಜಿಂಕೆಯ ಗಮನವೆಲ್ಲ ಮರಿಯನ್ನು ಹೇರುವುದರಲ್ಲಿ ಕೇಂದ್ರೀಕರಿಸಿತು. ಯಾವುದು ನಮ್ಮ ಕೈಯಲ್ಲಿರುತ್ತದೆಯೋ ಅದನ್ನು ಮಾತ್ರ ನಾವು ಮಾಡಬಲ್ಲೆವು. ನಮ್ಮ ಜೀವನದಲ್ಲಯೂ ಹಾಗೆ , ಎಲ್ಲ ಸಂದರ್ಭಗಳು ನಮ್ಮ ಅಧೀನದಲ್ಲಿ ಇರುವುದಿಲ್ಲ. ಅದರ ಕುರಿತು ಚಿಂತಿಸಿ ಫಲವೇನು ಇಲ್ಲ. ಜಿಂಕೆ ಕೈಯಲ್ಲಿ ಕಾಳ್ಗಿಚ್ಚಿನ್ನು ತಪ್ಪಿಸುವ ಶಕ್ತಿ ಇರಲಿಲ್ಲ . ಬೇಡನ ಬಾಣದ ಗುರಿ ತಪ್ಪಿಸುವಂತಿರಲಿಲ್ಲ, ಹಾಗೂ ಹಸಿದ ಹುಲಿಯನ್ನು ತಡೆಯುವಂತೆಯೂ ಇರಲಿಲ್ಲ . ಆದ್ದರಿಂದ ಇವೆಲ್ಲ ಸಂಗತಿಗಳನ್ನು ಅದು ದೇವರಿಗೆ ಒಪ್ಪಿಸಿ ತನ್ನ ಅಧೀನದಲ್ಲಿರುವ ಕ್ರಿಯೆಯನ್ನು ಮಾಡಲು ಮುಂದಾಯಿತು. ಹೀಗೆ ನಮ್ಮ ಜೀವನದಲ್ಲಿಯೂ ತೊಂದರೆಗಳು, ಅಪಾಯಗಳು ಎದುರಾದಾಗ ಚಿಂತಿಸುತ್ತ ಮನದಲ್ಲೇ ಕೊರಗುವುದರಿಂದ ಲಾಭವಿಲ್ಲ. ನಮ್ಮ ಕೈಯಲ್ಲಿ ಸಾಧ್ಯವಾಗುವ ಪರಿಹಾರಗಳನ್ನು ನಾವೇ ಮಾಡಿಕೊಳ್ಳಬೇಕು. ಯಾವುದು ನಮ್ಮ ಕೈ ಮೀರಿರುವ ಸಂಗತಿಯೊ, ಅದನ್ನು ಭಗವಂತನ ಮೇಲೆ ನಂಬಿಕೆಯಿಟ್ಟು ಭಾರ ಹಾಕಿ, ತನ್ನ ಪಾಲಿನ ಕೆಲಸದಲ್ಲಿ ಮಗ್ನನಾಗುವುದು ಒಳ್ಳೆಯದು.

ಮನುಷ್ಯನ ಬದುಕಿನಲ್ಲಿ ನಂಬಿಕೆಗಳಿಗೆ ವಿಶೇಷವಾದ ಮಹತ್ವವಿದೆ. ಪರಸ್ಪರ ನಂಬಿಕೆಗಳಿಂದಲೇ ನಮ್ಮ ಸಾಮಾಜಿಕ ಜೀವನ ಸುರಕ್ಷಿತವಾಗಿ ಸಾಗುತ್ತದೆ . ನಮ್ಮ ಚರಿತ್ರೆ, ಸಂಸ್ಕೃತಿ, ಧರ್ಮ, ಪರಂಪರೆಗಳಿಗೆ ನಂಬಿಕೆ ಮೂಲಾಧಾರವಾಗಿದೆ. ಆಧ್ಯಾತ್ಮಿಕ ಜಗತ್ತಿನಲ್ಲಿ ನಂಬಿಕೆಗಳನ್ನು ‘ಶ್ರದ್ಧೆ’ ಎಂದು ಕರೆಯುತ್ತಾರೆ. ಈ ಶ್ರದ್ಧೆಯೊಂದಿಗೆ ಪ್ರೀತಿಯನ್ನು ಸೇರಿಸಿದಾಗ ಅದು ಭಕ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಭಕ್ತಿ ಮತ್ತು ನಂಬಿಕೆಗಳು ದೃಢವಾಗಿದ್ದಾಗ ಅಲ್ಲಿ ಯಾವುದೇ ಸಂಶಯ, ಅಪನಂಬಿಕೆಗಳಿಗೆ ಅವಕಾಶವೇ ಇರುವುದಿಲ್ಲ. ನಂಬಿಕೆಯು ಧೃಡವಾಗಿದ್ದಾಗ ಉತ್ತಮವಾದ ಫಲವನ್ನು ನೀಡುತ್ತದೆ . ನಿಸರ್ಗ ಚಿಕಿತ್ಸಾ ವಿಜ್ಞಾನಿಗಳು ಹೇಳುವಂತೆ ಪ್ರತಿಯೊಬ್ಬ ವ್ಯಕ್ತಿಯ ಶರೀರದಲ್ಲಿ ರೋಗನಿರೋಧಕ ಶಕ್ತಿಗಳನ್ನು ಪುನಶ್ಚೇತನ ಗೊಳಿಸುವ ಅಂತ:ಶಕ್ತಿಯು ಹುದುಗಿರುತ್ತದೆ. ಪ್ರಚೋದನೆ ದೊರೆತಾಗ ಮಾತ್ರ ಶರೀರದಲ್ಲಿರುವ ರೋಗನಿರೋಧಕ ಶಕ್ತಿ ಜಾಗೃತವಾಗುತ್ತದೆ ಹಾಗೂ ಹೊರಗಿನ ರೋಗಾಣುಗಳನ್ನು ಹೊಡೆದೊಡಿಸಿ , ಆರೋಗ್ಯ ಸ್ಥಾಪನೆಗೆ ಸಹಾಯವಾಗುತ್ತದೆ. ಅಂತಹ ಪ್ರಚೋದನಾ ಕಾರ್ಯದಲ್ಲಿ ನೆರವಾಗುವ ಹಲವಾರು ಅಂಶಗಳಲ್ಲಿ ನಂಬಿಕೆ ,ಭಕ್ತಿ, ಶ್ರದ್ಧೆಗಳೂ ಕೂಡ ಆಗಿವೆ. ಪ್ರತಿಯೊಬ್ಬರ ಬದುಕಿನಲ್ಲಿ ಅನೇಕ ಸಲ ಸಂದಿಗ್ಧ ಪರಿಸ್ಥಿತಿಗಳು ಎದುರಾಗುತ್ತವೆ.

ನಾವು ಕೂಡ ಜಿಂಕೆಯಂತೆ ವಾಸ್ತವದಲ್ಲಿರುವುದನ್ನು ಕಲಿಯಬೇಕು. ಭವಿಷ್ಯದ ಅತಿಯಾದ ಕಾಳಜಿ ಇರಕೂಡದು. ಗತಿಸಿಹೋದ ಘಟನೆಗಳ ಕುರಿತು ತಲೆಕೆಡಿಸಿಕೊಳ್ಳಬಾರದು. ಆಗಿ ಹೋಗಿರುವ ಹಾಗೂ ಮುಂದಾಗುವ ವಿಷಯಗಳನ್ನು ಪದೇ ಪದೇ ವಿಚಾರ ಮಾಡುತ್ತಾ ವರ್ತಮಾನದ ಕೆಲಸ ಕಾರ್ಯಗಳನ್ನು ಮರೆಯುವಂತಿಲ್ಲ. ಇಂದಿನ ಜವಾಬ್ದಾರಿಗಳನ್ನು ಪೂರೈಸುವುದರ ಜೊತೆಗೆ ಜೀವನದಲ್ಲಿ ಸಂತೋಷವನ್ನು ಕಾಣಬಹುದು .

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ನೀತಿ ಪ್ರತೀತಿ – ವಿಭಾ ಪುರೋಹಿತ ಅಂಕಣl ನಂಬಿಕೆ ಮತ್ತು ವಾಸ್ತವಪ್ರಜ್ಞೆ”

  1. ಮಹೇಶ್ವರಿ ಯು

    ತುಂಬ ಸುಂದರವಾದ ನಿರೂಪಣೆ. ಧನ್ಯವಾದಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter