ಸಾಹಿತಿಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಹತ್ತು ಹಲವು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಇರುವಿಕೆಯನ್ನು ಪ್ರಕಟ ಪಡಿಸುತ್ತಿದ್ದ ರಾಜಕಾರಣಿಗಳು, ಸಿನಿಮಾ ತಾರೆಯರು, ಸಂಗೀತಗಾರರು ಮತ್ತು ಕ್ರಿಕೆಟ್ ಆಟಗಾರರ ಚಾಳಿ ಈಗ ಸಾಹಿತಿಗಳಿಗೂ ತಗುಲಿದೆ. ಇತ್ತೀಚೆಗಂತೂ ಫೇಸ್‌ಬುಕ್, ಇನ್ಸಟಾಗ್ರಾಂ, ಟ್ವಿಟರ್ (ಎಕ್ಸ್), ವಾಟ್ಸಪ್, ಟೆಲಿಗ್ರಾಂ, ಬ್ಲಾಗ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಹೊಂದಿರದ ಸಾಹಿತಿಗಳು ಕಾಣಸಿಗುವುದು ತೀರ ವಿರಳ.
ಸಾಮಾನ್ಯವಾಗಿ ಸಾಹಿತಿಗಳು ಸಾಮಾನ್ಯ ಜನರಿಗಿಂತ ಭಿನ್ನವಾಗಿ ಯೋಚಿಸುವವರು, ಪ್ರಜ್ಞಾವಂತರು ಎಂಬ ನಂಬಿಕೆ ತುಂಬ ಜನರಿಗಿದೆ. ಆದರೆ ಆ ನಂಬಿಕೆ ಸುಳ್ಳು ಎಂಬುದು ತುಂಬ ಜನರಿಗೆ ಗೊತ್ತಿಲ್ಲ. ಸಾಹಿತಿಗಳ ಅಸಲಿ ಮುಖ ನೋಡಬೇಕೆಂದರೆ ಅವರ ಸಾಮಾಜಿಕ ಜಾಲತಾಣಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಸಾಹಿತಿಗಳ ನಾನಾ ಮುಖಗಳು ಮತ್ತು ಅವತಾರಗಳು ಅಲ್ಲಿ ಅನಾವರಣಗೊಳ್ಳುತ್ತವೆ. ಓದುಗರು ತುಂಬ ಗೌರವದಿಂದ ಕಾಣುವ ಹಲವು ಸಾಹಿತಿಗಳ ನಿಜ ದರ್ಶನವಾಗುತ್ತದೆ.
ಇತ್ತೀಚೆಗೆ ಪ್ರತಿಲಿಪಿ, ಫೇಸ್‌ಬುಕ್ ಮತ್ತು ಇನ್ಸಟಾಗ್ರಾಂ ಸಾಹಿತಿಗಳ ಹಾವಳಿ ಹೆಚ್ಚಾಗಿದೆ. ತುಂಬ ಜನ ಲೇಖಕ/ಕಿಯರು ಇಂತಹ ಸಾಮಾಜಿಕ ಜಾಲತಾಣಗಳಲ್ಲಿಯೇ ಹುಟ್ಟಿ, ಅಲ್ಲಿಯೇ ಬೆಳೆದು ಕೊನೆಗೆ ಅಲ್ಲಿಯೇ ಮರಣ ಹೊಂದುತ್ತಾರೆ. ಹಲವು ಕಥೆಗಾರರು ಮತ್ತು ಕಥೆಗಾರ್ತಿಯರದೇ ಒಂದು ಫೇಸ್‌ಬುಕ್ ಗ್ರೂಪಿದೆ. ಅಲ್ಲಿ ಐನೂರಕ್ಕೂ ಹೆಚ್ಚು ಲೇಖಕ/ಕಿಯರು ಪ್ರತಿದಿನ ಕಥೆ ಬರೆದು ಪೋಸ್ಟ್ ಹಾಕುತ್ತಾರೆ. ಅದು ಪ್ರಕಟವಾದ ಕೂಡಲೇ ಲೈಕು, ಕಮೆಂಟು ಮತ್ತು ಶೇರ್ ಗಳು ಶುರುವಾಗುತ್ತವೆ. ಎಲ್ಲರೂ, ಎಲ್ಲರಿಗೂ ಬೇಕಾದವರೇ ಆಗಿರುವುದರಿಂದ ಪರಸ್ಪರರಿಗೆ ಲೈಕು ಒತ್ತುತ್ತಾರೆ, ಕಮೆಂಟು ಹಾಕುತ್ತಾರೆ ಮತ್ತು ಶೇರ್ ಮಾಡಿಕೊಳ್ಳುತ್ತಾರೆ. ‘ನೀ ನನಗಾದರೆ, ನಾ ನಿನಗೆ’ ಎಂಬ ಸಹಕಾರ ತತ್ವವು ಇಲ್ಲಿ ತುಂಬ ಚೆನ್ನಾಗಿ ಕಾರ್ಯರೂಪಕ್ಕೆ ಬಂದಿದೆ.
ತುಂಬ ಜನ ಸಾಹಿತಿಗಳಲ್ಲಿ ಈ ಸಾಮಾಜಿಕ ಜಾಲತಾಣಗಳ ಕುರಿತ ಗೀಳು ಯಾವ ಮಟ್ಟಕ್ಕೆ ಹೋಗಿದೆಯೆಂದರೆ ಒಂದೇ ಒಂದು ದಿನ ಅವುಗಳಿಂದ ದೂರವಿರುವುದು ಅವರಿಗೆ ಸಾಧ್ಯವಾಗದು. ನೆಟ್ ವರ್ಕ್ ಸಮಸ್ಯೆಯಿಂದ ಒಂದೆರೆಡು ಗಂಟೆ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರೂ ಸಾಕು, ನೀರಿನಿಂದ ಹೊರ ತೆಗೆದ ಮೀನಿನಂತೆ ತುಂಬ ಚಡಪಡಿಸುತ್ತಾರೆ. ತಮಗೆ ಇಷ್ಟು ಜನ ಫ್ರೆಂಡುಗಳಿದ್ದಾರೆ, ತಮ್ಮ ಒಂದು ಕವಿತೆ ಅಥವಾ ಕಥೆಗೆ ಇಷ್ಟು ಲೈಕುಗಳು ಬಂದವು, ಇಷ್ಟು ಕಮೆಂಟುಗಳು ಬಂದವು ಮತ್ತು ಇಷ್ಟು ಜನ ಶೇರ್ ಮಾಡಿಕೊಂಡಿದ್ದಾರೆ ಎಂದು ತುಂಬ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬರುಬರುತ್ತಾ ಇದೊಂದು ವ್ಯಸನವಾಗುತ್ತಿದೆ. ತುಂಬ ಜನಕ್ಕೆ ತಮಗೆ ಬೇಕಾದವರನ್ನು ಹೊಗಳಲು, ಬೇಡವಾದವರನ್ನು ತೆಗಳಲು ಫೇಸ್‌ಬುಕ್ ಒಂದು ಒಳ್ಳೆಯ ವೇದಿಕೆಯಾಗಿದೆ.
ಕೆಲವರಂತೂ ಫೇಸ್‌ಬುಕ್ ನಲ್ಲಿ ಅಬ್ಬರಿಸಿ, ಬೊಬ್ಬಿರಿಯುತ್ತಾರೆ. ಇತ್ತೀಚೆಗೆ ಒಬ್ಬ ಲೇಖಕ ಮಹಾಶಯ ತನಗಾಗದ ಲೇಖಕನ ಪುಸ್ತಕವೊಂದರ ಕುರಿತು ಫೇಸ್‌ಬುಕ್ ನಲ್ಲಿ ತುಂಬ ಕಟುವಾಗಿ ಬರೆದು ರೊಚ್ಚು ತೀರಿಸಿಕೊಂಡ. ಮುಂದೆ ಕೆಲವೇ ದಿನಗಳಲ್ಲಿ ಆ ಲೇಖಕ ಇವನ ಹೊಸ ಪುಸ್ತಕದ ಕುರಿತು ಇನ್ನೂ ಕಟುವಾಗಿ ಬರೆದು ಲೆಕ್ಕ ಚುಕ್ತಾ ಮಾಡಿಕೊಂಡ. ಮುಂದೆ ಆರು ತಿಂಗಳ ನಂತರ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರಿಬ್ಬರೂ ವಿಷ್ಣುವರ್ಧನ್ ಮತ್ತು ಅಂಬರೀಶರ ತರಹ ಪರಸ್ಪರರ ಹೆಗಲ ಮೇಲೆ ಕೈ ಹಾಕಿಕೊಂಡು ತುಂಬ ಸ್ನೇಹದಿಂದ ಓಡಾಡುವುದನ್ನು ನೋಡಿ ಹಿರಿಯ ಸಾಹಿತಿಯೊಬ್ಬರು ಕಂಗಾಲಾದರು.
ಫೇಸ್‌ಬುಕ್ ಕವಯತ್ರಿಯರ ಆಟಾಟೋಪ ಎಂತಹವರನ್ನೂ ಬೇಚೈನುಗೊಳಿಸುತ್ತದೆ. ಚುಟುಕು, ಹಾಯ್ಕು, ದ್ವಿಪದಿ, ಗಜಲ್, ಕವನ ಎಂದು ತಮ್ಮ ವಿವಿಧ ಭಂಗಿಯ ಫೋಟೋಗಳ ಮೇಲೆಯೇ ಕವಿತೆ ಬರೆದು ಪೋಸ್ಟ್ ಹಾಕುತ್ತಾರೆ. ಇವರು ಏನು ಬರೆದರೂ ಮೆಚ್ಚುವ ಮಧ್ಯ ವಯಸ್ಕ ಮತ್ತು ಅಪರ ವಯಸ್ಕ ಸಾಹಿತಿಗಳು ಹಾಡಿ ಹೊಗಳಿ ಕಮೆಂಟ್ ಹಾಕುತ್ತಾರೆ. ಕೆಲವು ಬಾರಿ ಕವಿತೆಗಿಂತ ಕಮೆಂಟುಗಳೇ ದೀರ್ಘವಾಗಿರುತ್ತವೆ. ಈ ಜಾಲತಾಣಗಳಲ್ಲಿ ಮಿರಿ ಮಿರಿ ಮಿಂಚುವ ಕವಯತ್ರಿಯರ ಕವನದ ಗುಣಮಟ್ಟದ ಕುರಿತು ಮಾತನಾಡದಿರುವುದೇ ವಾಸಿ.
ಇತ್ತೀಚೆಗೆ ಹಿರಿಯ ಕವಿಯೊಬ್ಬರು, “ಎಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲವೋ ಅಲ್ಲಿ ಕವಿತೆ ಹುಟ್ಟುತ್ತದೆ” ಎಂದು ಹೇಳಿಕೆ ಕೊಟ್ಟಿದ್ದಾರೆ. ಇದು ದೇವರಗುಡ್ಡದ ಮೈಲಾರಲಿಂಗೇಶ್ವರನ ಹೇಳಿಕೆಯಂತೆ ಕೆಲವು ದಿನಗಳ ಕಾಲ ತುಂಬ ಟ್ರೆಂಡಿಂಗನಲ್ಲಿತ್ತು. ದುರ್ದೈವವಶಾತ್ ಈ ಹೇಳಿಕೆ ಕೊಟ್ಟ ಮಹಾಶಯರು ಒಂದು ದಿನ ಬಿಡಿ, ಒಂದು ಗಂಟೆಯೂ ಇಂಟರ್ನೆಟ್ ಸೌಲಭ್ಯವಿಲ್ಲದೆ ಬದುಕಿರಲಾರರು. ಹೇಳಿಕೆ ಕೊಡಲಂತೂ ದುಡ್ಡು ಖರ್ಚಾಗುವುದಿಲ್ಲ, ಜೊತೆಗೆ ಹೇಳಿಕೆ ಕೊಟ್ಟವರು ಅದನ್ನು ಪಾಲಿಸಬೇಕಂತಲೂ ಇಲ್ಲವಾದ್ದರಿಂದ ಪಾಪ, ಆ ಸಾಹಿತಿ ಆವೇಶಕ್ಕೊಳಗಾಗಿ ಈ ರೀತಿ ಹೇಳಿರಬಹುದು.
ಇನ್ನೂ ಕೆಲವು ಸಾಹಿತಿಗಳಿಗೆ ಖಾಸಗಿ ಸಂಗತಿಗಳು ಯಾವುವು, ಸಾರ್ವಜನಿಕ ಸಂಗತಿಗಳು ಯಾವುವು, ಯಾವುದನ್ನು ಹಂಚಿಕೊಳ್ಳಬೇಕು, ಯಾವುದನ್ನು ಹಂಚಿಕೊಳ್ಳಬಾರದು ಎಂಬ ಸಾಮಾನ್ಯ ಜ್ಞಾನ ಸಹ ಇರುವುದಿಲ್ಲ. ಜಾತಿ ಮೀಸಲಾತಿ ಆಧಾರದ ಮೇಲೆ ತುಂಬ ದೊಡ್ಡ ಲೇಖಕ ಎಂದು ಬೀಗುವ ಮಹಾಶಯನೊಬ್ಬ ಸದಾ ಕೊರಳಲ್ಲಿ ಕ್ಯಾಮರಾ ನೇತು ಹಾಕಿಕೊಂಡು ತಿರುಗುತ್ತಿರುತ್ತಾನೆ. ಅವನ ಎಲ್ಲ ದೈನಂದಿನ ಚಟುವಟಿಕೆಗಳೂ ಕ್ಯಾಮರಾದಲ್ಲಿ ಸೆರೆಯಾಗಬೇಕು ಮತ್ತು ಅದನ್ನು ಫೇಸ್‌ಬುಕ್ ನಲ್ಲಿ ಹಾಕಬೇಕು ಎಂಬುದು ಅವನ ಹಠ. ತಿಂದದ್ದು, ತಿರುಗಿದ್ದು, ಮಲಗಿದ್ದು ಎಲ್ಲವನ್ನೂ ದಾಖಲಿಸುತ್ತಾನೆ. ಲೇಖಕಿಯರ ಜೊತೆ ಹೆಚ್ಚಿನ ಒಡನಾಟವಿರುವ ಈ ಮನುಷ್ಯ ಹೆಂಗರುಳಿನವ.
ಕೆಲವು ಫೇಸ್‌ಬುಕ್ ವಿಮರ್ಶಕರಿದ್ದಾರೆ. ಇವರು ಪುಸ್ತಕ ಪರಿಚಯವನ್ನೇ ವಿಮರ್ಶೆ ಎಂದುಕೊಂಡಿದ್ದಾರೆ. ತೀರ ಸಾಧಾರಣ ಮತ್ತು ಜನಪ್ರಿಯ ಕಾದಂಬರಿಗಳನ್ನು ಅದ್ಭುತ, ಅನನ್ಯ ಎಂಬಂತೆ ಬರೆಯುತ್ತಾರೆ. ಸಾಧಾರಣ ಲೇಖಕರನ್ನು ಸಹ ಶ್ರೇಷ್ಠ ಸಾಹಿತಿಗಳು ಎಂದು ಬಿಂಬಿಸುವುದೇ ಇವರ ಕೆಲಸ. ಕ್ಲಾಸಿಕ್ ಕೃತಿಗಳು ಮತ್ತು ಜನಪ್ರಿಯ ಕೃತಿಗಳಿಗಿರುವ ವ್ಯತ್ಯಾಸವೇ ಇವರಿಗೆ ಗೊತ್ತಿಲ್ಲ. ಇಂಗ್ಲಿಷ್ ಸಿನಿಮಾಗಳನ್ನು ನೋಡಿ, ಕಾದಂಬರಿಗಳನ್ನು ಓದಿ ಕದ್ದು ಕನ್ನಡದಲ್ಲಿ ಬರೆಯುವ ಸಾಧಾರಣ ಲೇಖಕರನ್ನು ಈ ಫೇಸ್‌ಬುಕ್ ಪಂಡಿತರು ಭೈರಪ್ಪ ಮತ್ತು ತೇಜಸ್ವಿಯವರಿಗೆ ಹೋಲಿಸಿ ಬರೆಯುವುದನ್ನು ನೋಡಿದರೆ ತುಂಬ ತಮಾಷೆಯೆನಿಸುತ್ತದೆ. ಈಗ ಇಂತಹವರ ಸಂಖ್ಯೆ ಜಾಸ್ತಿಯಾಗುತ್ತಿದೆ.
ಒಬ್ಬ ಯುವ ಕವಯತ್ರಿ ತನ್ನ ಹೊಸ ಕವನಸಂಕಲನವೊಂದನ್ನು ಫೇಸ್‌ಬುಕ್ ಗೆ ಅರ್ಪಿಸಿದ್ದಾಳೆ. ಅದು ನ್ಯಾಯವಾದುದು, ಏಕೆಂದರೆ ಅವಳು ಕವಯತ್ರಿಯಾದದ್ದೇ ಫೇಸ್‌ಬುಕ್ ನಿಂದ, ಫೇಸ್‌ಬುಕ್ ನಲ್ಲಿ ಅವಳು ಏನೂ ಬರೆದರೂ ಮೆಚ್ಚಿ ಲೈಕು, ಕಮೆಂಟುಗಳು ಬರುತ್ತವೆ. ಅವಳಿಗೆ ಎರಡು ಸಾವಿರಕ್ಕೂ ಅಧಿಕ ಫೇಸ್‌ಬುಕ್ ಫ್ರೆಂಡುಗಳಿದ್ದಾರೆ. ಅವಳಿಗೆ ಬರೆಯುವ ಧೈರ್ಯ ಮತ್ತು ಆತ್ಮವಿಶ್ವಾಸ ನೀಡಿದ ಫೇಸ್‌ಬುಕ್ ಕುರಿತು ಅವಳಿಗಿರುವ ಕೃತಜ್ಞತೆಯನ್ನು ಮೆಚ್ಚಲೇಬೇಕು.
ಇತ್ತೀಚೆಗೆ ಲೇಖಕರೊಬ್ಬನ ಜೊತೆ ಮಾತನಾಡುತ್ತಿದ್ದೆ. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಖ್ಯಾತ ನಿರ್ದೇಶಕ ಎಸ್. ನಾರಾಯಣರಂತೆ ಸದಾ ಮುಗುಳ್ನಗುತ್ತ ಇರುವ ಆ ಮನುಷ್ಯ ಫೇಸ್‌ಬುಕ್ ನಲ್ಲಿ ತುಂಬ ಚಟುವಟಿಕೆಯಿಂದಿರುತ್ತಾನೆ. ಅವನ ಶಿಷ್ಯ-ಶಿಷ್ಯೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವನು ಏನೇ ಪೋಸ್ಟ್ ಮಾಡಿದರೂ ಲೈಕು ಒತ್ತಲು ಮತ್ತು ಕಮೆಂಟು ಹಾಕಲು ತುದಿಗಾಲ ಮೇಲೆ ನಿಂತಿರುತ್ತಾರೆ. ಈ ವ್ಯಕ್ತಿ ನಾನು ಫೇಸ್‌ಬುಕ್ ನಲ್ಲಿ ಇಲ್ಲದಿರುವುದನ್ನು ತಿಳಿದು ಆಶ್ಚರ್ಯ ವ್ಯಕ್ತಪಡಿಸಿದ. ಅವನು, “ಫೇಸ್‌ಬುಕ್ ನಲ್ಲಿಲ್ಲದೆ ನೀನು ಬದುಕುವುದಾದರೆ ಹೇಗೆ ಮಾರಾಯ?” ಎಂದು ಚಿಂತಾಕ್ರಾಂತನಾಗಿ ಕೇಳಿದ.
ಮತ್ತೊಬ್ಬ ಯುವ ಲೇಖಕಿ ತನ್ನ ಕೆಲವು ಕವಿತೆಗಳನ್ನು ನನಗೆ ಕಳಿಸಿದಳು. ಫೇಸ್‌ಬುಕ್ ನಲ್ಲಿ ಇಂತಿಂತಹವರು ನನ್ನ ಕವಿತೆಗಳಿಗೆ ಲೈಕು ಒತ್ತಿದ್ದಾರೆ. ಕಮೆಂಟು ಮಾಡಿದ್ದಾರೆ ಎಂದು ತುಂಬ ಸಂತೋಷ ಮತ್ತು ಆತ್ಮವಿಶ್ವಾಸವಿಂದ ಹೇಳಿದಳು. ವಾಸ್ತವವಾಗಿ ಈ ಕವಯತ್ರಿ ನೋಡಲು ಚೆನ್ನಾಗಿದ್ದಾಳೆ. ಈ ಕವಯತ್ರಿಗೆ ಬರುವ ಬಹುತೇಕ ಲೈಕು, ಕಮೆಂಟುಗಳು ಇವಳ ಮುಖ ಮತ್ತು ಮೈಮಾಟ ನೋಡಿಯೇ ಹೊರತು ಕವಿತೆಗಳಿಗಲ್ಲ. ಇದರ ಬಗ್ಗೆ ನಾನು ಹೇಳಿದಾಗ ಆಕೆ ಅದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಳು. “ಈಗೆಲ್ಲ ಇರುವುದೇ ಹೀಗಲ್ಲವೇ ಸರ್, ಗಾಳಿ ಬಂದ ಕಡೆ ತೂರಿಕೊ ಎಂಬ ಮಾತೇ ಇದೆಯಲ್ಲ…” ಎಂದದ್ದು ಕೇಳಿ ನನಗೆ ತುಂಬ ಆಶ್ಚರ್ಯವಾಯಿತು.
ಕರಾವಳಿ ಭಾಗದಲ್ಲಿ ಒಬ್ಬ ಸ್ವಯಂಘೋಷಿತ ವಿಮರ್ಶಕನಿದ್ದಾನೆ. ಕನ್ನಡದ ಯಾವುದೇ ಹಿರಿಯ-ಕಿರಿಯ ಲೇಖಕರ ಪುಸ್ತಕಗಳು ಬಂದರೂ ತನಗೆ ಗೌರವ ಪ್ರತಿಗಳು ಬರುತ್ತವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಇದು ಸುಳ್ಳೆಂದು ತುಂಬ ಜನರಿಗೆ ಗೊತ್ತಿದೆ. ಇವನು ತಾನೋದಿದ ಪುಸ್ತಕಗಳ ಕುರಿತು ಚುಟುಕಾಗಿ ಬರೆದು ಪೋಸ್ಟ್ ಹಾಕುತ್ತಾನೆ. ಇವನ ಮುಖ್ಯ ಸಮಸ್ಯೆಯೆಂದರೆ ತಾನು ಮೆಚ್ಚಿ ಬರೆದ ಕೃತಿಗಳು ಮಾತ್ರ ಒಳ್ಳೆಯ ಕೃತಿಗಳು, ಉಳಿದ ಕೃತಿಗಳು ಒಳ್ಳೆಯ ಕೃತಿಗಳಲ್ಲ ಎಂಬ ಮೂಢನಂಬಿಕೆ. ತನ್ನ ಆ ಮೂಢನಂಬಿಕೆಯನ್ನು ಸಾಬೀತುಪಡಿಸಲು ಫೇಸ್‌ಬುಕ್ ನಲ್ಲಿ ಇನ್ನಿಲ್ಲದಂತೆ ಹೆಣಗುತ್ತಾನೆ. ತುಂಬ ಜನ ಸಾಹಿತಿಗಳ ಜೊತೆ ಇವನಿಗೆ ಸ್ನೇಹ – ದ್ವೇಷಗಳಂತಹ ವಿಚಿತ್ರ ಸಂಬಂಧವಿದೆ. ಇವನ ಬಗ್ಗೆ ತುಂಬ ಜನ ಸಾಹಿತಿಗಳಿಗೆ ಅಳುಕಿದೆ. ಅವರೆಲ್ಲ ದುಷ್ಟ ಸಹವಾಸ… ಎಂದು ಇವನಿಂದ ಸುರಕ್ಷಿತ ಅಂತರ ಕಾಯ್ದುಕೊಂಡು ಬಂದಿದ್ದಾರೆ.
ಫೇಸ್‌ಬುಕ್ ಮೂಲಕ ಆದ ಅವಾಂತರಗಳು ಒಂದೆರಡಲ್ಲ. ತನಗಾಗದ ಲೇಖಕಿಯೊಬ್ಬಳ ಕುರಿತು ತೇಜೋವಧೆ ಮಾಡಲು ಯತ್ನಿಸಿ ಒಬ್ಬ ಲೇಖಕ ಪೋಲೀಸರ ಅತಿಥಿಯಾದ. ಮುಂದೆ ಬೆಂಗಳೂರಿನ ಕೆಲವು ಹಿರಿಯ ಸಾಹಿತಿಗಳ ಮಧ್ಯಸ್ಥಿಕೆಯಿಂದ ಆ ಪ್ರಕರಣ ರಾಜೀ ಪಂಚಾಯಿತಿಯಾಗಿ ಸುಖಾಂತ ಕಂಡಿತು. ಮತ್ತೊಬ್ಬ ೪೦+ ಲೇಖಕಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟ ಮಧ್ಯ ವಯಸ್ಕ ಲೇಖಕ ಆ ಲೇಖಕಿ ಫೇಸ್‌ಬುಕ್ ನಲ್ಲಿ ತೋರಿಸಿದ ಆಕ್ರೋಶಕ್ಕೆ ಹೆದರಿ ಫೇಸ್‌ಬುಕ್ ಅಕೌಂಟನ್ನೇ ಡಿಆ್ಯಕ್ಟಿವೇಟ್ ಮಾಡಿ ಸುಮಾರು ಎರಡು ವರ್ಷಗಳ ಕಾಲ ನಾಪತ್ತೆಯಾಗಿದ್ದ. ಈಗ ಆ ಲೇಖಕಿಗೆ ಹೊಸ ಗೆಳೆಯ ಮತ್ತು ಈ ಲೇಖಕನಿಗೆ ಹೊಸ ಗೆಳತಿ ಸಿಕ್ಕಿರುವುದರಿಂದ ಹೆಚ್ಚಿನ ಅನಾಹುತ ನಡೆಯದೇ ಪ್ರಕರಣ ಸುಖಾಂತ ಕಂಡಿದೆ.
ಫೇಸ್‌ಬುಕ್ ನಿಂದ ಬರವಣಿಗೆಯ ಗುಣಮಟ್ಟ ಗಣನೀಯವಾಗಿ ಕುಸಿದಿರುವುದು ಸುಳ್ಳಲ್ಲ. ಫೇಸ್‌ಬುಕ್ ನಲ್ಲಿ ಯಾರು ಬೇಕಾದರೂ, ಏನು ಬೇಕಾದರೂ, ಹೇಗೆ ಬೇಕಾದರೂ ಬರೆಯಬಹುದು ಎಂಬಂತಾಗಿದೆ. ಇದೊಂತರಹ ಬರವಣಿಗೆಯ ಅತಿವೃಷ್ಟಿಯಿದ್ದಂತೆ. ಬರವಣಿಗೆಯ ಅನಾವೃಷ್ಟಿ ಮತ್ತು ಅತಿವೃಷ್ಟಿ ಎರಡೂ ಸಹ ಸಾಹಿತ್ಯಕ್ಕೆ ಮಾರಕ. ಕನ್ನಡ ಸಾಹಿತ್ಯದಲ್ಲಿ ಗುಣಮಟ್ಟಕ್ಕಿಂತ ಪ್ರಮಾಣ ಹೆಚ್ಚಾಗುವಲ್ಲಿ ಫೇಸ್‌ಬುಕ್ ಸಾಹಿತಿಗಳ ಗಣನೀಯ ಕೊಡುಗೆಯಿದೆ. ಸಾಧಾರಣ ಲೇಖಕರ ಜನಪ್ರಿಯ ಕಾದಂಬರಿಗಳನ್ನು ಓದಿ ಮೆಚ್ಚುವ, ಅವರನ್ನು ಹಾಡಿ ಹೊಗಳುವ, ಬರೆಯುವ ಬಹುದೊಡ್ಡ ವರ್ಗವೇ ಫೇಸ್‌ಬುಕ್ ನಲ್ಲಿದೆ. ಸಾಹಿತ್ಯದ ಹಿತದೃಷ್ಟಿಯಿಂದ ಇದು ಖಂಡಿತವಾಗಿಯೂ ಒಳ್ಳೆಯದಲ್ಲ. ಫೇಸ್‌ಬುಕ್ ನಿಂದ ಸಾಕಷ್ಟು ಪ್ರಯೋಜನಗಳಿವೆ. ಅದರಿಂದ ಅನೇಕ ಒಳ್ಳೆಯ ಕೆಲಸಗಳೂ ಕೂಡ ಆಗಿವೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಸದುಪಯೋಗಕ್ಕಿಂತ ದುರುಪಯೋಗವೇ ಜಾಸ್ತಿಯಾಯಿತೇ ಎಂದು ಇತ್ತೀಚಿನ ಸಾಹಿತ್ಯ ಮತ್ತು ಸಾಹಿತಿಗಳ ಗುಣಮಟ್ಟ ನೋಡಿದರೆ ಅನಿಸುತ್ತದೆ. ಇದು ಕಹಿಯಾದರೂ ಸಹ ಸತ್ಯ!
(ಚಿತ್ರ ಕೃಪೆ: ಫೇಸ್ ಬುಕ್)
1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಫೇಸ್‌ಬುಕ್ ಸಾಹಿತಿಗಳು”
ಚನ್ನಾಗಿದೆ