(ಹಾಸ್ಯ / ವಿಡಂಬನೆ ಬರಹ)
ನಗರದ ‘ ಶಂಕರ ‘ ಮಿನಿ ರೈಸ್ ಮಾಲೀಕ ಕಂ ಪ್ರಗತಿ ಪರ ರೈತ ಕಂ ನಾಲ್ಕು ಲಾರಿಗಳ ಓನರ್ ಕಂ ‘ ಶಿಶು ಪಾಲ ‘ ಖಾನಾವಳಿಯ ಪ್ರೊಪ್ರೈಟರ್ ಕಂ ಇನ್ನೋವಾ ಕಾರಿನ ಒಡೆಯ – ಶ್ರೀ ಗುಂಡಪ್ಪ ಹಸಿ ಶುಂಠಿ ಒಂದು ವಾರದಿಂದ ಯಾರೊಂದಿಗೂ ಹೆಚ್ಚು ಬೆರೆಯದೆ ಮಾತನಾಡದೆ ಮೈಮೇಲೆ ದೆವ್ವ ಬಂದವರಂತೆ ಒಮ್ಮೊಮ್ಮೆ ಅವರಿವರ ಮೇಲೆ ಹರಿ ಹಾಯುತ್ತಿದ್ದ. ಮತ್ತೆ ಕೆಲ ಕಾಲ ಆಕಾಶದತ್ತ ದಿಟ್ಟಿಸಿ ನೋಡಿ ಮುಸಿ ಮುಸಿ ಅಳುತ್ತಿದ್ದ. ಹೆಂಡತಿ ಗುಂಡಮ್ಮನಿಗೆ ದಿಕ್ಕು ತೋಚದೇ ಹುಬ್ಬಳ್ಳಿಯಲ್ಲಿದ್ದ ಸೋದರರಿಗೆ ಫೋನ್ ಮಾಡಿ ಗಂಡನ ಸದ್ಯದ ವಿಚಿತ್ರ ವರ್ತನೆ ಕುರಿತು ಅವಲತ್ತುಕೊಂಡಳು. ಜೊತೆಗೆ ಗುಂಡಣ್ಣನ ಆಪ್ತ ಮಿತ್ರ ಬಸ್ಯಾ ( ಬಸವರಾಜ ) ನಿಗೆ ಒಂದು ಸಾರಿ ಮನೆಗೆ ಬರಲು ಹೇಳಿದಳು.
ಬಸ್ಯಾ ಕೂಡಲೇ ಓಡಿ ಬಂದು ಮಿತ್ರನನ್ನು ನೋಡಿ ದಿಗಿಲಾದ. ಗುಂಡಪ್ಪ ಹಸಿ ಶುಂಠಿ ಸ್ನೇಹಿತನೊಂದಿಗೆ ಸರಿಯಾಗಿ ಮಾತನಾಡದೆ ಏನೋ ಕಳೆದುಕೊಂಡಂತೆ ಮನೆಯ ಅಂಗಳದಲ್ಲಿ ಒಬ್ಬನೇ ಚಿಂತಾಕ್ರಾಂತನಾಗಿ ಕೂತಿದ್ದ. ಬಸ್ಯಾ ಮಿತ್ರನ ಹ್ಯಾಪು ಮೋರೆ ನೋಡಿ ಕಾರಣ ಏನಿರಬಹುದೆಂದು ಎಲ್ಲಾ ಯಾಂಗಲ್ ಗಳಿಂದ ಆಲೋಚಿಸಿದ. ಪ್ರಯೋಜನವಾಗಲಿಲ್ಲ. ಸತ್ಯ ತಿಳಿದುಕೊಳ್ಳಲು ಇದೇ ಕೊನೆಯ ಪ್ರಯತ್ನ ಎನ್ನುವಂತೆ ಗುಂಡಪ್ಪ ಹಸಿ ಶುಂಠಿ ಕಿವಿಯಲ್ಲಿ ” ಇವೊತ್ತು ರಾತ್ರಿ ‘ ಕುಬೇರ ‘ ದೊಳಗೆ ನಾವಿಬ್ಬರೂ ಪಾರ್ಟಿ ಮಾಡೋಣ. ಬೇರೆ ಯಾರೂ ಬೇಡ. ನಾವು ನಾವುಗಳೇ ನೀನು ಬರಲೇಬೇಕು ಮತ್ತೆ! …” ಎಂದು ಉಸುರಿದ. ಅದನ್ನು ಕೇಳಿದ ಬಳಿಕ ಗುಂಡಪ್ಪ ಹಸಿ ಶುಂಠಿ ಮುಖದಲ್ಲಿನ ಪ್ರೇತ ಕಳೆ ಸ್ವಲ್ಪ ಮಟ್ಟಿಗೆ ಸೌಮ್ಯವಾಗಿ ಬದಲಾಯಿತು.
ರಾತ್ರಿ 8 ಘಂಟೆಗೆ ಆಪ್ತ ಮಿತ್ರರಿಬ್ಬರೂ ‘ ಕುಬೇರ ‘ ದಲ್ಲಿನ ತಮ್ಮ ಫೇವರಿಟ್ ಟೇಬಲ್ ಹಿಡಿದರು. ಸ್ನ್ಯಾಕ್ಸ್ ತಿಂದ ಬಳಿಕ ಸೋಡಾ ಜೊತೆ ‘ ನೈಂಟಿ ‘ ಶುರು ಮಾಡಿದರು. ಗುಂಡಪ್ಪನ ಮನಸಿನಲ್ಲಿ ಇದ್ದದ್ದನ್ನು ಹೊರ ತರಲು ಇದಕ್ಕಿಂತ ಉತ್ತಮ ಅವಕಾಶ ಬೇರೆ ಇಲ್ಲ ಎಂದು ಮನಗಂಡ ಬಸ್ಯಾ ಮೆಲ್ಲನೆ ಮಾತಿಗಾರಂಭಿಸಿದ. ಒಮ್ಮೆ ಗ್ಲಾಸನ್ನು ಎತ್ತಿ ಗಟ ಗಟ ಕುಡಿದು ನಿಧಾನವಾಗಿ ತನ್ನ ಮನಸಿನಲ್ಲಿ ಅಡಗಿದ್ದ ವಿಷಾದವನ್ನು ಹೊರ ಹಾಕಲು ಅನುವಾದ ಗುಂಡಪ್ಪ ಹಸಿ ಶುಂಠಿ.
” ಸಾಹುಕಾರನಾದ ನಾನು ಯಾವಾಗಲೂ ಖರ್ಚು ಮಾಡುತ್ತಾ ಹೋದರೆ ಅದಕ್ಕೆ ಮಿತಿ ಎನ್ನುವುದೇ ಇರೋದಿಲ್ಲ. ಖರ್ಚು ಮಾಡದೆ ಅದನ್ನೇ ಉಳಿಸಿದರೆ ಈ ಬದುಕಿಗೆ ಅದೇ ದೊಡ್ಡ ಉಳಿತಾಯ ಅಂತ ನಿನಗೂ ಗೊತ್ತು. ಇದರ ಜೊತೆ ನಮ್ಮಂಥವರಿಗೆ ಪುಕ್ಕಟೆ ಸೌಲಭ್ಯ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು! ಸ್ವಂತ ಹಣ ಖರ್ಚು ಮಾಡದೆ ಎಲ್ಲವನ್ನೂ ಪುಕ್ಕಟೆಯಾಗಿ ಪಡೆಯುವ ಆನಂದ ಇದೆಯಲ್ಲ ಅದರ ಥ್ರಿಲ್ಲೇ ಬೇರೆ ಬಸ್ಯಾ! ನಾನು ಈ ಮಟ್ಟಕ್ಕೆ ಬೆಳೆಯಲು ಅದೂ ಒಂದು ಕಾರಣ. ಅಲ್ಲದೇ ಇಲ್ಲಿಯವರೆಗೆ ಅದಿಲ್ಲದೆ ನಾನು ಬದುಕಿಲ್ಲ ದೋಸ್ಟ್!.” ಎಂದು ವಿಷಾದ ಸ್ವರದಲ್ಲಿ ನುಡಿದು ಮಾತು ಅರ್ಧಕ್ಕೆ ನಿಲ್ಲಿಸಿದ ಗುಂಡಪ್ಪ ಹಸಿ ಶುಂಠಿ.
ಆತ್ಮೀಯ ಗೆಳೆಯ ಬಸ್ಯಾ ಚಿಪ್ಸ್ ಮತ್ತು ಹುರಿದ ಶೇಂಗಾವನ್ನು ಮತ್ತೆ ಪ್ಲೇಟಿನಲ್ಲಿ ತುಂಬಿಸಿ ಗುಂಡಪ್ಪ ಹಸಿ ಶುಂಠಿಯ ಮುಂದೆ ನೈವೇದ್ಯದಂತೆ ಸಮರ್ಪಿಸಿ ಮೆದು ಮಾತಿನಲ್ಲಿ ” ನಿನ್ನ ಇತ್ತೀಚಿನ ವರ್ತನೆ ಕುರಿತು ಯಾಕೋ ಏನೂ ಹೇಳುತ್ತಿಲ್ಲ. ಮೊದಲು ಅದನ್ನು ಹೇಳಿ ಮನಸು ಹಗುರ ಮಾಡಿಕೋ ಗುಂಡಪ್ಪ.” ಎಂದು ಅನುನಯ ಧ್ವನಿಯಲ್ಲಿ ನುಡಿದ ಆಪ್ತ ಮಿತ್ರ ಬಸ್ಯಾ. ” ನಾನು ಒಂದು ವಾರದಿಂದ ಎಂತಹ ಮನೋವೇದನೆ ಅನುಭವಿಸುತ್ತಿರುವೆ ನನಗೇ ಗೊತ್ತು ಬಸ್ಯಾ, ಹೆಂಡತಿಗೂ ಸಹಾ ಈ ವಿಷಯ ಹೇಳಿಲ್ಲ, ಆದರೆ ನೀನು ನನ್ನ ಚಡ್ಡಿ ದೋಸ್ತ್.ನಿನ್ನ ಮುಂದೆ ಮುಚ್ಚಿಡಲು ಆಗದೆ ಓಪನ್ ಆಗುತ್ತಿರುವೆ…” ಎಂದು ಕಣ್ಣಿಂದ ಜಿನುಗುತ್ತಿರುವ ಅಶ್ರು ಧಾರೆಯನ್ನು ಜುಬ್ಬಾದ ಚುಂಗಿನಿಂದ ಒರೆಸಿಕೊಳ್ಳುತ್ತಾ ಅರೆ ಕ್ಷಣ ನಿಲ್ಲಿಸಿದ ಗುಂಡಪ್ಪ ಹಸಿ ಶುಂಠಿ. ಬಸ್ಯಾ ತುಂಬಾ ವಿಷಾದದ ಮುಖ ಹೊತ್ತು ನೋಡಿದ ಆಪ್ತ ಮಿತ್ರನತ್ತ.
ಒಂದೆರಡು ಬಾರಿ ಬಿಕ್ಕುತ್ತಾ ಗಂಟಲು ಸರಿ ಪಡಿಸಿಕೊಂಡು ಮೆಲ್ಲಗೆ ನುಡಿದ ಗುಂಡಪ್ಪ ಹಸಿ ಶುಂಠಿ ” ಈಗ ಒಂದು ವಾರದ ಕೆಳಗೆ ಆಘಾತಕಾರಿ ಸುದ್ದಿ ಬಂತು. ಅದು ಏನೆಂದರೆ ನನ್ನ ಬಿಪಿಎಲ್ ಕಾರ್ಡ್ ರದ್ದಾಗಿದೆ ಎನ್ನುವ ವಿಷಯ. ಅದು ಗೊತ್ತಾದ ಮೇಲೆ ನಾನು ನಾನಾಗಿಲ್ಲ ದೋಸ್ತ್…” ಎಂದು ಮತ್ತೊಮ್ಮೆ ಕಣ್ಣೀರು ಹರಿಸುತ್ತಾ ನುಡಿದ ಗುಂಡಪ್ಪ ಹಸಿ ಶುಂಠಿ. ” ಒಂದು ರೂಪಾಯಿ ಕೂಡಾ ಖರ್ಚು ಮಾಡದೆ ಈ ಕಾರ್ಡ್ ಪುಣ್ಯದಿಂದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದೆ…ಕುಟುಂಬ ಸದಸ್ಯರ ಅನಾರೋಗ್ಯ – ಆಪರೇಶನ್ ಎಲ್ಲದಕ್ಕೂ ನೆರವಿಗೆ ಬಂದಿದ್ದು ಇದೇ ಕಾರ್ಡ್. ಪ್ರತೀ ತಿಂಗಳು ಕಿರಾಣಿ ಖರ್ಚಿಲ್ಲದೇ ಕುಟುಂಬ ಸರಾಗವಾಗಿ ಸಾಗುತ್ತಿತ್ತು. ಈ ಬಿಪಿಎಲ್ ಕಾರ್ಡ್ ಅಡ್ಡ ಇಟ್ಟುಕೊಂಡು ನಮ್ಮ ತಂದೆಯ ಕಾಲದಿಂದ ನಾವು ಯಾರೂ ಯಾವ ಆದಾಯ ತೆರಿಗೆ ಕಟ್ಟುವ ಗೋಜಿಗೆ ಹೋಗಲಿಲ್ಲ. ಈಗ ಎಲ್ಲವನ್ನೂ ಕಳೆದುಕೊಂಡು ಒಮ್ಮೇಲೆ ಅನಾಥನಾಗಿಬಿಟ್ಟೆ ದೋಸ್ತ್! ಸದ್ಯ ಇಡೀ ಪ್ರಪಂಚ ಒಂದು ಕಡೆ – ನಾನು ಮತ್ತು ನನ್ನ ಕುಟುಂಬ ಒಂದು ಮಗ್ಗಲು ಆದಂತಾಗಿದೆ. ಸರಿ ರಾತ್ರಿಯಲ್ಲಿ ಸಹಾ ಬಿಪಿಎಲ್ ಕಾರ್ಡ್ ನೆನಪಾಗಿ ಚಿಂತೆ ಕಳವಳ ಹೆಚ್ಚಾಗಿ ಸರಿಯಾಗಿ ನಿದ್ದೆ ಬರುತ್ತಿಲ್ಲ ಬಸ್ಯಾ, ಇದನ್ನೇ ಮನಸಿಗೆ ಹಚ್ಚಿಕೊಂಡು ಊಟ ತಿಂಡಿ ಸರಿಯಾಗಿ ಹೋಗುತ್ತಿಲ್ಲ ” ಎಂದು ಗೋಳಾಡಿದ ಗುಂಡಪ್ಪ ಹಸಿ ಶುಂಠಿ.
ಬಸ್ಯಾನಿಗೆ ಆಪ್ತ ಮಿತ್ರನನ್ನು ಹೇಗೆ ಸಮಾಧಾನ ಪಡಿಸಬೇಕು ಎಂದು ಒಂದು ಕ್ಷಣ ಸಂದಿಗ್ದಕ್ಕೆ ಒಳಗಾದ. ಆದರೂ ಗುಂಡಪ್ಪನಿಗೆ ಧೈರ್ಯ ತುಂಬಲು ಸಿದ್ಧನಾದ. ” ಹಳೆಯ ಗತ ವೈಭವವನ್ನು ಮತ್ತೆ ನಿನಗೆ ಮರುಕಳಿಸಲು ನಾನು ಸಹಾಯ ಮಾಡುವೆ. ನೀನು ಮತ್ತೆ ಬಿಪಿಎಲ್ ಕಾರ್ಡು ಪಡೆದೇ ಪಡೆಯುವೆ, ಆ ನಂಬಿಕೆ ನನಗಿದೆ. ನನ್ನ ಮಾತು ನಂಬು. ನಾನು ನಾಳೆಯೇ ತಹಸಿಲ್ ಆಫೀಸಿನ ಬ್ರೋಕರ್ ಒಬ್ಬರನ್ನು ಕಳಿಸುವೆ.” ಎಂದು ಹೇಳಿದ ಮೇಲೆ ಗುಂಡಪ್ಪ ಹಸಿ ಶುಂಠಿ ಸ್ವಲ್ಪ ಸಮಾಧಾನಗೊಂಡ.
ನಂತರ ಇಬ್ಬರೂ ಮತ್ತೆರಡು ಪೆಗ್ ಏರಿಸಿ ಊಟದ ಶಾಸ್ತ್ರ ಮುಗಿಸಿ ಆಪ್ತ ಮಿತ್ರರಿಬ್ಬರೂ ಅವರವರ ಮನೆಗಳಿಗೆ ಸೇಫ್ ಆಗಿ ಮುಟ್ಟಿದರು. ಮರುದಿನ ಆಪ್ತಮಿತ್ರ ಬಸ್ಯಾ ಬ್ರೋಕರ್ ಚಂದ್ರಪ್ಪನನ್ನು ಭೇಟಿ ಮಾಡಿ ಹೇಳಿದ ” ಆ ಸಾಹುಕಾರ ಗುಂಡಪ್ಪ ಹಸಿ ಶುಂಠಿಗೆ ಬಿಪಿಎಲ್ ಕಾರ್ಡಿನ ಮನೋ ವ್ಯಾಧಿ ಶುರುವಾಗಿದೆ. ಬಹಳ ಚಿಂತೆ ಹಚ್ಚಿಕೊಂಡಿದ್ದಾನೆ. ನೀನು ಹೇಗಾದರೂ ಮಾಡಿ ಬಿಪಿಲ್ ಕಾರ್ಡ್ ಮತ್ತೊಮ್ಮೆ ಬರೋ ಹಾಗೆ ಮಾಡಿ ಆತನ ಮುಖಕ್ಕೆ ಬೀಸಿ ಒಗೆಯೋ ವ್ಯವಸ್ಥೆ ಬೇಗ ಮಾಡಬೇಕು. ಅದರ ಕಮಿಷನ್ ಬಗ್ಗೆ ಚಿಂತೆ ಮಾಡಬೇಡ, ಬೇಕಿದ್ದರೆ ನಾನೇ ಡಬಲ್ ಕೊಡಿಸುವೆ. ಮೊದಲು ಆತನ ಮನೆಗೆ ಹೋಗಿ ಸಮಾಧಾನ ಮಾಡು ಅಷ್ಟೇ.”
ಸಂಜೆ ಚಂದ್ರಪ್ಪ ಹ್ಯಾಪು ಮೋರೆ ಹೊತ್ತ ಗುಂಡಪ್ಪ ಹಸಿ ಶುಂಠಿ ಬಳಿ ಬಂದು ವಿಷಯ ವಿವರವಾಗಿ ಮತ್ತೊಮ್ಮೆ ತಿಳಿದುಕೊಂಡು ಹೇಳಿದ ” ಸಾಹುಕಾರರೇ, ನಿಮ್ಮ ಹೆಸರಲ್ಲಿರುವ ಚಿರಾಸ್ತಿ ಆಸ್ತಿಯಾದ ನಾಲ್ಕು ಲಾರಿಗಳನ್ನು ಮೊದಲು ಬೇರೆಯವರ ಹೆಸರಲ್ಲಿ ವರ್ಗಾವಣೆ ಮಾಡಿ. ಹಾಗೆಯೇ ನಿಮ್ಮ ಇನ್ನೋವಾ ಕಾರು ಸಹಾ, ನಂತರ ಮತ್ತೆ ಕಾರ್ಡಿಗೆ ಅಪ್ಲೈ ಮಾಡೋಣ.ಆಗ ಕಾರ್ಡ್ ಹೇಗೆ ಬರೋದಿಲ್ಲವೋ ನಾನೂ ನೋಡುತ್ತೇನೆ. ನೀವೂ ಒಂದು ಸಲ ಯಾವುದಕ್ಕೂ ಯೋಚನೆ ಮಾಡಿ ಹೇಳಿ.”
ಗುಂಡಪ್ಪ ಹಸಿ ಶುಂಠಿ ” ಬಿಪಿಲ್ ಕಾರ್ಡ್ ಮತ್ತೆ ನನಗೆ ಸಿಗಲು ನಾನು ಯಾವ ತ್ಯಾಗಕ್ಕೂ ಸಿದ್ಧ ” ಎಂದು ಮನದಲ್ಲಿ ಘೋಷಿಸಿಕೊಂಡು ಮರು ದಿನ ತನ್ನ ಹೆಸರಲ್ಲಿ ಇದ್ದ ಆ ನಾಲ್ಕು ಲಾರಿಗಳನ್ನು ಅವುಗಳನ್ನು ಚಾಲನೆ ಮಾಡುತ್ತಿದ್ದ ಡ್ರೈವರುಗಳ ಹೆಸರುಗಳಿಗೆ ಮತ್ತು ಇನ್ನೋವಾ ಕಾರನ್ನು ಆಪ್ತ ಮಿತ್ರ ಬಸ್ಯಾನ ಹೆಸರಿಗೆ ( ಬಸ್ಯಾನ ಮನಸಿಗೆ ಖುಷಿ ಕೊಡುವ ವಿಷಯವಾದರೂ ತೋರಿಕೆಗೆ ಮಾತ್ರ ಬೇಡ ಎಂದ! ) ಬದಲಾಯಿಸಿಬಿಟ್ಟ. ಈಗ ಗುಂಡಪ್ಪ ಹಸಿ ಶುಂಠಿ ಹೆಸರಿನಲ್ಲಿ ಒಂದು ವಾಹನವೂ ಇಲ್ಲ. ಹೀಗಾಗಿ ಮತ್ತೆ ಬಿಪಿಎಲ್ ಕಾರ್ಡಿಗೆ ಅಪ್ಲೈ ಮಾಡಿದ ಬ್ರೋಕರ್ ಚಂದ್ರಪ್ಪನ ಮುಖಾಂತರ. ಒಂದು ವಾರದ ಬಳಿಕ ಚಂದ್ರಪ್ಪ ಮನೆಗೆ ಬಂದು ಹೇಳಿದ ” ಸಾಹುಕಾರರೇ, ಈಗ ನಿಮ್ಮ ಹೆಸರಿನಲ್ಲಿ ಯಾವ ವಾಹನವಿಲ್ಲ. ಓಕೆ. ಆದರೆ ಹತ್ತು ಎಕರೆ ಜಮೀನಿದೆ ಎಂದು ನಮ್ಮ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ.”
” ಹಾಗೇನು? ಒಂದು ವಾರ ಅವಕಾಶ ಕೊಡು. ಏನಾದರೂ ಪ್ಲಾನ್ ಮಾಡುತ್ತೇನೆ.” ಎಂದು ಗುಂಡಪ್ಪ ಹಸಿ ಶುಂಠಿ ಸಮಾಧಾನ ಹೇಳಿ ಕಳಿಸಿದ ಚಂದ್ರಪ್ಪನನ್ನು. ಒಂದು ವಾರದ ಬಳಿಕ ಫೋನ್ ಮಾಡಿ ಮನೆಗೆ ಕರೆಸಿದ ಗುಂಡಪ್ಪ ಹಸಿ ಶುಂಠಿ ಬ್ರೋಕರ್ ಚಂದ್ರಪ್ಪನನ್ನು.
” ಆಯಿತು…ನನ್ನ ಹೆಸರಲ್ಲಿ ಇದ್ದ ಭೂಮಿಯನ್ನು ನನ್ನ ಹೆಂಡತಿ ಗುಂಡಮ್ಮನ ತಮ್ಮ ತಿಮ್ಮನಿಗೆ ಮೊನ್ನೆ ಗಿಫ್ಟ್ ಡೀಡ್ ಮಾಡಿರುವೆ. ಈಗ ನನ್ನ ಹೆಸರಲ್ಲಿ ಭೂಮಿಯೇ ಇಲ್ಲ, ಈಗ ನಾನು ಬಿಪಿಎಲ್ ಕಾರ್ಡ್ ಪಡೆಯಲು ಸಂಪೂರ್ಣ ಅರ್ಹನಾಗಿರುವೆ ಎಂದು ಭಾವಿಸುವೆ. ನಾನು ಮತ್ತೊಮ್ಮೆ ಅರ್ಜಿ ಸಲ್ಲಿಸುತ್ತೇನೆ. ಮುಂದಿನ ಕೆಲಸ ನಿನ್ನದು.” ಎಂದು ಬ್ರೋಕರ್ ಚಂದ್ರಪ್ಪನಿಗೆ ಹೇಳಿ ಮತ್ತೊಮ್ಮೆ ಅರ್ಜಿ ಹಾಕಿಯೇ ಬಿಟ್ಟ ಗುಂಡಪ್ಪ ಹಸಿ ಶುಂಠಿ. ನಡು ನಡುವೆ ಆಪ್ತ ಮಿತ್ರ ಬಸ್ಯಾನಿಗೆ ಕಾರ್ಡ್ ಕುರಿತು ಎಲ್ಲವನ್ನೂ ಅಪ್ಡೇಟ್ ಮಾಡುತ್ತಿದ್ದ ಗುಂಡಪ್ಪ ಹಸಿ ಶುಂಠಿ.
ಒಮ್ಮೆ ಬಸ್ಯಾ ಮನೆಗೆ ಬಂದು ” ಬಿಪಿಎಲ್ ಕಾರ್ಡಿನ ಹುಚ್ಚಿನಿಂದ ನಿನ್ನ ಮಾಲೀಕತ್ವದ ನಾಲ್ಕು ಲಾರಿಗಳು ಮತ್ತು ಜಮೀನು ಈಗಾಗಲೇ ಬೇರೆಯವರ ಪಾಲು ಆಗಿವೆ. ಕಾರ್ ನನ್ನ ಹೆಸರಿಗೆ ಮಾಡಿದ ಪುಣ್ಯಕ್ಕೆ ಇನ್ನೂ ನಿನ್ನ ಮನೆ ಮುಂದೆ ನಿಂತಿದೆ! ಹಾಳು ಬಿಪಿಎಲ್ ಕಾರ್ಡ್ ಬದಲು ಪಾನ್ ಕಾರ್ಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಸ್ಟಾರ್ ಕಾರ್ಡ್, ಟಾಟಾ ಕಾರ್ಡ್… ಇತ್ಯಾದಿಗಳ ಕಡೆ ತುಸು ಗಮನ ಕೊಡು ” ಎಂದು ಹಿತವಚನ ನೀಡಿದ ಗುಂಡಪ್ಪ ಹಸಿ ಶುಂಠಿಗೆ.
ರಾಜಕಾರಿಣಿಯಂತೆ ದಪ್ಪ ಚರ್ಮ ಹೊಂದಿದ್ದ ಗುಂಡಪ್ಪ ಹಸಿ ಶುಂಠಿ ಮಿತ್ರನ ಮಾತಿಗೆ ಕ್ಯಾರೇ ಎನ್ನದೆ ಬಿಪಿಎಲ್ ಕಾರ್ಡ್ ಹೇಗಾದರೂ ಮತ್ತೆ ವಾಪಾಸು ಪಡೆಯಲೇ ಬೇಕು ಎನ್ನುವ ಹಟಕ್ಕೆ ಬಿದ್ದ. ಮತ್ತೆ ಒಂದು ತಿಂಗಳ ಬಳಿಕ ಬ್ರೋಕರ್ ಚಂದ್ರಪ್ಪ ನಿರಾಸೆಯ ಸುದ್ದಿ ಹೊತ್ತು ತಂದ. ” ನಿಮ್ಮ ಹೆಸರಲ್ಲಿ ಖಾನಾವಳಿ ಇದೆ. ಹೀಗಾಗಿ ಆನ್ ಲೈನಿನಲ್ಲಿ ನಿಮ್ಮ ಅರ್ಜಿ ಸ್ವೀಕಾರವಾಗುತ್ತಿಲ್ಲ ಎಂದು ನಮ್ಮ ಆರ್ ಐ ( ಕಂದಾಯ ಅಧಿಕಾರಿಗಳು ) ಹೇಳುತ್ತಿದ್ದಾರೆ ಸಾರ್. ಹೀಗಾಗಿ ಇದನ್ನು ಇಲ್ಲಿಗೇ ಬಿಟ್ಟು ಬಿಡೋದು ಒಳ್ಳೆಯದು ಸಾರ್” ಎಂದು ಪರಿ ಪರಿಯಾಗಿ ವಿನಂತಿಸಿದ ಸಾಹುಕಾರ ಗುಂಡಪ್ಪ ಹಸಿ ಶುಂಠಿಯನ್ನು.
” ನೂರು ಆರು ಆದರೂ ಸರಿ!”( ಆರು ನೂರು ಆಗುವುದು ಅಲ್ಲ! ) ಎನ್ನುವ ಹಠಮಾರಿತನಕ್ಕೆ ಬಿದ್ದಿದ್ದ ಗುಂಡಪ್ಪ ಹಸಿ ಶುಂಠಿ ಬ್ರೋಕರ್ ಚಂದ್ರಪ್ಪನಿಗೆ ಸ್ಪಷ್ಟ ನುಡಿಯಲ್ಲಿ ” ನಿನ್ನ ಕಡೆಯಿಂದ ಬಿಪಿಎಲ್ ಕಾರ್ಡ್ ಕೆಲಸ ಆಗೋ ಲಕ್ಷಣಗಳು ಕಾಣುತ್ತಿಲ್ಲ. ಇನ್ನು ಮುಂದೆ ನಾನೇ ನೇರವಾಗಿ ರಣರಂಗಕ್ಕೆ ಇಳಿಯುವೆ .” ಎಂದು ಗದರಿಸಿದ ಗುಂಡಪ್ಪ ಹಸಿ ಶುಂಠಿ. ಕೆಲವು ದಿನಗಳು ಮಟ್ಟಿಗೆ ಮರೆತು ತಣ್ಣಗೆ ಮಲಗಿದ್ದ ಗುಂಡಪ್ಪ ಹಸಿ ಶುಂಠಿ ಮತ್ತೆ ಫೀನಿಕ್ಸ್ ನಂತೆ ಮೇಲೆದ್ದ.
ಈ ಬಾರಿ ತಾನೇ ಮೇಲಾಧಿಕಾರಿಯನ್ನು ಸ್ವತಃ ಭೇಟಿ ತನ್ನ ಕಷ್ಟ ಹೇಳಿಕೊಂಡ. ಅವರು ಎಲ್ಲವನ್ನೂ ಶಾಂತವಾಗಿ ಕೇಳಿ ಉತ್ತರಿಸಿದರು. ” ಸಾಹುಕಾರರೇ ನಿಮ್ಮ ಹೆಸರಲ್ಲಿ ಮಿನಿ ರೈಸ್ ಮಿಲ್ ಇದೆ, ದೊಡ್ಡ ಮನೆ ಇದೆ, ಅಲ್ಲದೇ ಖಾನಾವಳಿ ಬೇರೆ ನಿಮ್ಮ ಹೆಸರಲ್ಲೇ ಇದೆ. ಹೀಗಾಗಿ ನಿಮಗೆ ಬಿಪಿಎಲ್ ಕಾರ್ಡ್ ಸಿಗುವ ಅವಕಾಶಗಳು ಕಡಿಮೆ ಇವೆ. ಮತ್ತೊಮ್ಮೆ ಯೋಚನೆ ಮಾಡಿ” ಎಂದು ಸ್ಪಷ್ಟವಾಗಿ ಹೇಳಿದರು ಗುಂಡಪ್ಪ ಹಸಿ ಶುಂಠಿಗೆ.
ಛಲ ಬಿಡದೆ ತ್ರಿವಿಕ್ರಮನಂತೆ ಅಥವಾ ‘ ಡು ಆರ್ ಡೈ ‘ ಪರಿಸ್ಥಿತಿಗೆ ತಲುಪಿದ್ದ, ಅಲ್ಲದೇ ತುಂಬಾ ಪ್ರಸ್ಟೇಜ್ ( ಕುಕ್ಕರ್ ಅಲ್ಲ! ) ಫೀಲಾದ ಗುಂಡಪ್ಪ ಹಸಿ ಶುಂಠಿ ಅಲ್ಲಿಗೇ ಬಿಡಲೊಪ್ಪಲಿಲ್ಲ. ” ನಾನಿರಬೇಕು ಇಲ್ಲಾ ಬಿಪಿಎಲ್ ಕಾರ್ಡ್ ಇರಬೇಕು. ನೋಡಿಯೇ ಬಿಡೋಣ ” ಎಂದು ಮನಸಿನಲ್ಲಿ ಪ್ರತಿಜ್ಞೆ ಬೇರೆ ಮಾಡಿದ.
ಮತ್ತೊಂದು ಸ್ವಲ್ಪ ದಿನಗಳೊಳಗೆ ಗುಂಡಪ್ಪ ಹಸಿ ಶುಂಠಿ ಮಿನಿ ರೈಸ್ ಮಿಲ್ಲನ್ನು ಹೆಂಡತಿಯ ಅಣ್ಣ ತಮ್ಮಣ್ಣನ ಹೆಸರಿನಲ್ಲಿ…ಶಿಶು ಪಾಲ ಖಾನಾವಳಿಯನ್ನು ಕ್ಯಾಷಿಯರ್ ಕಂ ಸಪ್ಲೈಯರ್ ಸಂಗಪ್ಪನ ಹೆಸರಿನಲ್ಲಿ ಗಿಫ್ಟ್ ಡೀಡ್ ಮೂಲಕ ವರ್ಗಾಯಿಸಿಬಿಟ್ಟ. ಇನ್ನು ಮನೆಯನ್ನು ‘ ಬೇಡ ಬೇಡ ‘ ವೆಂದು ಬೇಡಿಕೊಂಡರೂ ಬಿಡದೆ ಹೆಂಡತಿ ಗುಂಡಮ್ಮನ ಹೆಸರಲ್ಲಿ ಗಿಫ್ಟ್ ಡೀಡ್ ಮಾಡಿದ. ಪರಿಣಾಮ ಈಗ ಮನೆಯಲ್ಲಿ ತಾನು ಮತ್ತು ತನ್ನ ಹೆಂಡತಿ ಎರಡು ಬಣವಾಗಿ ಕುಟುಂಬ ಸದಸ್ಯರು ವಿಭಜನೆಗೊಂಡರು. ಹೆಂಡತಿ ಗುಂಡಮ್ಮ ಗಂಡನ ಕೆಲಸಕ್ಕೆ ಮತ್ತು ಚಿಲ್ಲರೆ ಬುದ್ಧಿಗೆ ಹಗಲೂ ರಾತ್ರಿ ಹಿಡಿ ಶಾಪ ಹಾಕಿದಳು.
ಕೊನೆಗೂ ಗುರಿ ಮುಟ್ಟುವ ಏಕ ಮೇವ ಉದ್ದೇಶ ಮಾತ್ರ ಹೊಂದಿದ್ದ ಗುಂಡಪ್ಪ ಹಸಿ ಶುಂಠಿ ಮತ್ತೊಮ್ಮೆ ಬಿಪಿಎಲ್ ಕಾರ್ಡಿಗೆ ಅರ್ಜಿ ಜಡಿದ. ಕಾದ…ಒಂದು ತಿಂಗಳು…ಎರಡು ತಿಂಗಳು…ಮೂರು ತಿಂಗಳಾದವು. ಒಂದು ಬೆಳಿಗ್ಗೆ ಎದ್ದಾಗ ಯಾಕೋ ಎಡ ಕಣ್ಣು ತನ್ನಷ್ಟಕ್ಕೆ ತಾನೇ ಹೊಡೆದುಕೊಳ್ಳಲು ಶುರು ಮಾಡಿದಾಗ ಈ ದಿನ ತನಗೆ ಸರಿ ಇದ್ದಂತಿಲ್ಲ ಎಂದು ಅನಿಸತೊಡಗಿತು. ಅಲ್ಲದೇ ಯಾವ ಅಶುಭ ಶಕುನ ಎದುರಾಗುವುದೋ ಎಂದು ಭಯವಾಯಿತು ಗುಂಡಪ್ಪ ಹಸಿ ಶುಂಠಿಗೆ.
ಕೂಡಲೇ ಆಪ್ತ ಮಿತ್ರ ಬಸ್ಯಾನಿಗೆ ತನ್ನ ಅಪಶಕುನದ ಸುದ್ದಿ ಹೇಳಿ ಆದಷ್ಟು ಬೇಗ ಬರಲು ಹೇಳಿದ. ಆಪ್ತ ಮಿತ್ರ ಬಂದ ನಂತರ ಅಪ ಶಕುನಗಳು ನಿಜವಾಗಿ ಆಘಾತಕಾರಿ ಸುದ್ದಿಗಳು ಒಂದೊಂದಾಗಿ ಗುಂಡಪ್ಪ ಹಸಿ ಶುಂಠಿಯ ಮೇಲೆ ‘ ಸರ್ಜಿಕಲ್ ಸ್ಟ್ರೈಕ್ ‘ ಮಾಡಿದವು. ನಾಲ್ಕು ಲಾರಿಗಳ ಡ್ರೈವರ್ ಗಳು ( ಈಗ ಮಾಲೀಕರು! ) ಗುಂಡಪ್ಪ ಹಸಿ ಶುಂಠಿಯ ಮತ್ತು ಇದ್ದ ಊರಿನ ಸಹವಾಸವೇ ಬೇಡವೆಂದು ನಾಲ್ಕು ಬೇರೆ ಬೇರೆ ದಿಕ್ಕಿನ ರಾಜ್ಯಗಳಿಗೆ ಲಾರಿಗಳ ಜೊತೆ ಪಲಾಯನ ಮಾಡಿದ ಸುದ್ದಿ ಮೊದಲು ಬಂತು. ಈಗ ಹತ್ತು ಎಕರೆ ಜಮೀನಿನ ಮಾಲೀಕ ನಾನು. ನೀನು ಈ ಕೂಡಲೇ ಇಲ್ಲಿಂದ ಜಾಗ ಖಾಲಿ ಮಾಡು ಎಂದು ನಿಮ್ಮ ಹೆಂಡತಿ ಗುಂಡಮ್ಮನ ತಮ್ಮ ನನ್ನನ್ನು ಜಮೀನಿನಿಂದ ಹೊರಗೆ ಕಳಿಸಿದರು ಎಂದು ಗೇಣಿದಾರ ಗಂಗ ರಾಜು ಫೋನ್ ಮಾಡಿದ್ದು ಎರಡನೆಯ ಸುದ್ದಿ.
ಮಿನಿ ರೈಸ್ ಮಿಲ್ ಸದ್ಯದ ಮಾಲೀಕ ತಮ್ಮಣ್ಣ ( ಹೆಂಡತಿ ಗುಂಡಮ್ಮಳ ಖಾಸ ಅಣ್ಣ) ಅಲ್ಲಿ ಬಹಳ ವರ್ಷಗಳಿಂದ ಮ್ಯಾನೇಜರ್ ಎಂದು ಕೆಲಸ ಮಾಡುತ್ತಿದ್ದ ಮಂಜುನಾಥನನ್ನು ಕೆಲಸ ಬಿಡಿಸಿ ಹೊರ ದಬ್ಬಿದರು ಎಂದು ಮೂರನೆಯ ಆಘಾತದ ಸುದ್ದಿ ಫೋನ್ ಮೂಲಕ ಬಂತು. ಗುಂಡಪ್ಪ ಹಸಿ ಶುಂಠಿ ನಿಂತಿದ್ದ ಭೂಮಿಯೇ ಈಗ ತಿರುಗತೊಡಗಿದ ಅನುಭವವಾಗತೊಡಗಿತು. ಅಷ್ಟರಲ್ಲಿ ಖಾನಾವಳಿ ಕ್ಯಾಷಿಯರ್ ಕಂ ಸಪ್ಲೈಯರ್ ಸಂಗಪ್ಪ ಬೇರೊಬ್ಬರಿಗೆ ಖಾನಾವಳಿಯನ್ನು ಒತ್ತೆ ಇಟ್ಟು ಅಡುಗೆ ಮಾಡುವ ಅಕ್ಕಮ್ಮನೊಂದಿಗೆ ಬಿಜಾಪುರಕ್ಕೆ ಓಡಿ ಹೋದ ಎನ್ನುವ ತಾಜಾ ಖಬರ್ ಪಕ್ಕದ ಪಾನ್ ಶಾಪ್ ಪರಮೇಶಿಯಿಂದ ಫೋನ್ ಮೂಲಕ ಬಂತು. ಇದು ನಾಲ್ಕನೆಯ ಸುದ್ದಿ. ಇದನ್ನೆಲ್ಲ ನೋಡಿ ಹತ್ತಿರ ಬಂದ ಆಪ್ತ ಮಿತ್ರ ಬಸ್ಯಾ ನಿಂತ ನೆಲವೇ ಕುಸಿಯುವ ಅನುಭವದ ಬೇಗೆಯಲ್ಲಿ ಬಳಲುತ್ತಿರುವ ಗುಂಡಪ್ಪ ಹಸಿ ಶುಂಠಿಯನ್ನು ಒಂದು ಛೇರಿನಲ್ಲಿ ಕೂಡಿಸಿ ಫ್ಯಾನ್ ಹಾಕಿ ಕುಡಿಯಲು ನೀರು ಕೊಟ್ಟ.
ಅಷ್ಟರಲ್ಲಿ ಬ್ರೋಕರ್ ಚಂದ್ರಪ್ಪ ಬಂದು ಶಾಕಿಂಗ್ ಸುದ್ದಿ ಕೊಟ್ಟ “ಇತ್ತೀಚಿಗೆ ಅನ್ ಲೈನ್ ನಲ್ಲಿ ಬಿಡುಗಡೆಯಾದ ಹೊಸ ಬಿಪಿಎಲ್ ಲೀಸ್ಟಿನಲ್ಲಿ ತಮ್ಮ ಹೆಸರು ಇಲ್ಲ ಸಾಹುಕಾರರೇ…” ಎಂದ ಗುಂಡಪ್ಪ ಹಸಿ ಶುಂಠಿಯನ್ನು ಉದ್ದೇಶಿಸಿ. ಆ ಮಾತು ಕೇಳಿ ಗುಂಡಪ್ಪ ಹಸಿ ಶುಂಠಿಯ ಬಾಯಿ ಒಣಗತೊಡಗಿತು, ಬೆವರು ಹೆಚ್ಚಾಯಿತು, ಮುಖ ಕರೆಂಟ್ ಶಾಕಿನಿಂದ ಬರ್ನ್ ಆದ ಬಲ್ಪಿನಂತೆ ಕಂದಿಟ್ಟಿತು! ಒಂದೈದು ನಿಮಿಷದ ಬಳಿಕ ಪೋಸ್ಟ್ ಮೆನ್ ಪಾಂಡುರಂಗ ಗುಂಡಪ್ಪ ಹಸಿ ಶುಂಠಿ ಹೆಸರಿಗೆ ಬಂದ ರಿಜಿಸ್ಟರ್ಡ್ ಪೋಸ್ಟ್ ಕೊಟ್ಟು ಸಹಿ ಪಡೆದು ನಡೆದ. ಮೊದಲೇ ಸುಸ್ತಾಗಿ ಬಸವಳಿದಿದ್ದ ಗುಂಡಪ್ಪ ಹಸಿ ಶುಂಠಿ ಅದನ್ನು ಹೆದರಿಕೆಯಿಂದ ಓಪನ್ ಮಾಡಲು ಆಪ್ತ ಮಿತ್ರ ಬಸ್ಯಾನಿಗೆ ಹೇಳಿದ.
ಬಸ್ಯಾ ಅದನ್ನು ಓಪನ್ ಮಾಡಿ ನೋಡಿದ. ಅದು ಇನ್ ಕಂ ಟ್ಯಾಕ್ಸ್ ಆಫೀಸಿನಿಂದ ಬಂದ ನೋಟಿಸ್. ಅದರಲ್ಲಿನ ವಿಷಯ ಹೀಗಿತ್ತು ” ನೀವು ಇತ್ತೀಚಿಗೆ ಬೇರೆಯವರಿಗೆ ವರ್ಗಾಯಿಸಿದ ಅಲ್ಲದೇ ಗಿಫ್ಟ್ ಡೀಡ್ ಮಾಡಿದ ಎಲ್ಲ ಚಿರಾಸ್ಥಿ ಮತ್ತು ಸ್ಥಿರಾಸ್ಥಿಗಳು ನಿಮ್ಮ ಸ್ವಂತ ಆಸ್ತಿಗಳು ಎಂದು ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ನೀವು ಕಳೆದ ಹತ್ತು ವರ್ಷಗಳ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವದರ ಜೊತೆಗೆ ಸದರಿ ಆಸ್ತಿಗಳ ಖರೀದಿಯ ವಿವರಗಳ ಲೆಕ್ಕ ಪತ್ರಗಳನ್ನು ಕೂಡಲೇ ದಾಖಲಿಸಬೇಕು.” ಬಸ್ಯಾ ಅದನ್ನು ಓದಿ ಮುಗಿಸುವದರೊಳಗೆ ದೊಪ್ಪೆಂದು ಶಬ್ದ ಬಂತು, ನೋಡಿದರೆ ಗುಂಡಪ್ಪ ಹಸಿ ಶುಂಠಿ ಛೇರಿನಿಂದ ಕುಸಿದು ಕೆಳಗೆ ಬಿದ್ದಿದ್ದ! ಆಪ್ತ ಮಿತ್ರ ಬಸ್ಯಾ ಕೂಡಲೇ ತಡ ಮಾಡದೆ ನಂಬರ್ 108 ಗೆ ಫೋನ್ ಮಾಡಿದ…
*****
12 thoughts on “ಲಕ್ಕಿ ಕಾರ್ಡ್ !”
ಬಹಳ ಸೊಗಸಾದ ನಗು ಬರಿಸುವ ಹಾಸ್ಯಲೇಖನ.
ಬಿಪಿಎಲ್ ಕಾರ್ಡೊಂದು ಸೃಷ್ಟಿಸಿದ ಅವಾಂತರ ಅದರಿಂದ ದಿವಾಳಿಯಾದ ಗುಂಡಣ್ಣನ ಕಥೆ ಮನಮುಟ್ಟುವಂತಿದೆ.
ಅಭಿನಂದನೆಗಳು ರಾಘಣ್ಣ.
ಧನ್ಯವಾದಗಳು
This is a lesson to greedy people who are after freebies. Applicable to people who have voted to Congress in karnataka.
Thank you Sir
‘ ಲಕ್ಕಿ ಕಾರ್ಡ್ ‘ ವಿಡಂಬನೆ ಚನ್ನಾಗಿದೆ. ಎಲ್ಲಾ ಇದ್ದರೂ ಉಚಿತಗಳನ್ನು ಅನುಭವಿಸುವ ಮನಸ್ಥಿತಿ ಇರುವವರ ಬಗ್ಗೆ ಅದ್ಭುತವಾಗಿ ಚಿತ್ರಿಸಿದ್ದೀರಿ. ನಿಮ್ಮ ಭಾಷಾ ಶೈಲಿ, ವಿಡಂಬನಾತ್ಮಕ ಆಲೋಚನೆಗಳು, ಪಕ್ವವಾದ ಬರಹ, ಸೂಪರ್ ರಾಘಣ್ಣ. ಅಭಿನಂದನೆಗಳು.
ಧನ್ಯವಾದಗಳು
There is a sufficiency in the world for man’s need but not for man’s greed. …
Very well written.
Thank you Sir
ಈ ರೀತಿಯ ಜನರು ಬಹಳಷ್ಟು ಜನರಿದ್ದಾರೆ. ತಾವು ಎಷ್ಟೇ ಅನುಕೂಲವಂತರಿದ್ದರೂ ಟ್ಯಾಕ್ಸ್ ಕಟ್ಟುವುದಿಲ್ಲ ಹಾಗೂ ಪುಕ್ಕಟೆ ಬರುವ ಯಾವುದನ್ನೂ ಬಿಡುವುದಿಲ್ಲ. ಅಂಥವರಿಗೆ ಇನ್ನಾದರೂ ಬುದ್ದಿ ಬರಲಿ ಎಂಬ ನಿಮ್ಮ ಬರಹ ತುಂಬಾ ಚೆನ್ನಾಗಿ ಮೂಡಿಬಂದಿದೆ.
ಅಭಿನಂದನೆಗಳು.
ಧನ್ಯವಾದಗಳು
ಸರ್ಕಾರಿ ಸೌಲಭ್ಯ ಗಳ ಸದುಪಯೋಗಿಕ್ಕಿಂತ ದುರುಪಯೋಗ ವೆ ಬಹಳ ಇಂಥಾ ಸಾವಿರಾರು ಜನರ ಪೈಕಿ ಕಥಾ ನಾಯಕನೂ ಒಬ್ಬ
ಅತಿ.ಆಸೆ ಗತಿ ಗೆಡಿಸಿತು ಎಂಬಂತೆ ಕಷ್ಟ ಪಟ್ಟು ಗಳ ಸಿದ ಆಸ್ತಿ ಯ ಪರರಿಗೆ ಮಾಡಿ ನಿರ್ಗತಿಕ ನಾಗುವುದು ನಗು ತರಿಸಿದರೂ ಖೇದ ವಾಗು ತ್ತ ದೇ
Gopinath