ಧಾವಂತದ ಹಗಲಿಗೆ ಸಮಾಪ್ತಿಯ ತೆರೆ ಎಳೆವ
ವಿಶ್ರಾಂತಿಯ ನೆರಳಾಗುವುದಿಲ್ಲ ಅವಳ ಇರುಳು
ತಮಸ್ಸಿನ ವಿಕಾರಗಳ ಕಳೆದು ಸ್ವಾಸ್ಥ್ಯ ಸೌಖ್ಯದಿ ಪೊರೆಯುವ ವರವಾಗುವುದಿಲ್ಲ ಅವಳ ಇರುಳು
ಅದಲು ಬದಲಿಸುತ ಹೊರಳುವ ಮಗ್ಗುಲಿಗೆ
ಅರಳೆಯ ಗಾದಿಯೂ ಕೊರಕಲು ಕಲ್ಲ ಹಾದಿ
ಕೆರಳಿ ಉರಿದುರಿಯುವ ವೇದನೆಯ ಬಿಸುಪು
ಸಹಿಸುವ ಚಾದರವಾಗುವುದಿಲ್ಲ ಅವಳ ಇರುಳು
ನಿರಾಕುಲ ಧ್ಯಾನಮಗ್ನ ತಲೆಯೊಳು ಹೊಕ್ಕು
ಕೆದರಿ ಕಂಗಲಾಗಿಸುತ್ತ ಕತ್ತಲಲಿ ಶಂಕೆಯ ಹಕ್ಕಿ
ಕಣ್ಣೆವೆಗಳು ತಣ್ಣಗೆ ಮುಚ್ಚದೆ ವರ್ಣ ದೃಶ್ಯಾವಳಿ
ಕನಸಿಸುವ ತೇರಾಗುವುದಿಲ್ಲ ಅವಳ ಇರುಳು
ಭವಿಷ್ಯದ ಭಯಾನಕ ಸಾಗರ ಕಣ್ಣ ಮುಂದಿರೆ
ಕ್ಷಣಕ್ಷಣವು ಹೃದಯದಿ ಆತಂಕದಲೆಗಳ ಮೊರೆತ
ನಿಶೆಯ ಕೌದಿಯ ಮುಸುಕು ತೆರೆದುಕೊಳ್ಳುತ
ಸುರಿವ ಕೌಮುದಿಯಾಗುವುದಿಲ್ಲ ಅವಳ ಇರುಳು
ಚಿಂತೆ ಎಂಬುದು ಸುಂಕ ತೆರದೆ ಚಿತಾಗಾರಕ್ಕೆ
ಸಾಗುವ ಸುಲಭ ಸರಳ ಮಾರ್ಗ ಕುಸುಮಾ
ನೀರವತೆಯ ಗಾಢ ತಮoಧದ ಒಡಲ ಸೀಳಿ
ಉಷೆಯ ಓಜಸ್ಸಾಗುವುದಿಲ್ಲ
ಅವಳ ಇರುಳು
✍️ ಕುಸುಮಾ. ಜಿ. ಭಟ್
2 thoughts on “ಗಜಲ್”
ಮನ ಸೆಳೆಯುವ ಗಜಲ್…
Super