ಪಿ. ವತ್ಸಲಾ ಅವರ ‘ಆಗ್ನೇಯ’

ಪಿ. ವತ್ಸಲಾ (28. 8. 1939 – 21. 11. 2023)

ಮಲಯಾಳಂ ಭಾಷೆಯ ಮಹತ್ವದ ಲೇಖಕಿಯರಲ್ಲಿ ಒಬ್ಬರಾದ ಪಿ. ವತ್ಸಲಾ (28. 8. 1939 – 21. 11. 2023) ಅವರು ‘ನೆಲ್ಲ್’ (ಭತ್ತ) ಗೌತಮನ್, ಪಾಳಯಂ, ಚಾವೇರ್ (ಆತ್ಮಹತ್ಯಾದಳ) ಅರಕ್ಕಿಲ್ಲಂ (ಹೆಂಡದ ಮನೆ), ತಗರ್ಚ (ಅಧಪತನ) ದಂಥ ಸಾರ್ಥಕ ಕೃತಿಗಳನ್ನು ಕೊಟ್ಟಿದ್ದಾರೆ. ‘ನಿಳಲುಗಳ್ ಉರಙುನ್ನ ವಳಿಗಳ್’ (ನೆರಳುಗಳು ನಿದ್ರಿಸುವ ದಾರಿಗಳು) ಕೃತಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಲಯಾಳಂ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಎಳುತ್ತಚ್ಛನ್ ಪ್ರಶಸ್ತಿ, ಮುಟ್ಟತ್ತು ವರ್ಕಿ ಪ್ರಶಸ್ತಿ ಮತ್ತು ಸಿ. ವಿ. ಕುಂಞÂರಾಮನ್ ಸ್ಮಾರಕ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ಥ ಡಾ. ಮೋಹನ ಕುಂಟಾರ್ ಅವರು ‘ಆಗ್ನೇಯಂ’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಪಿ. ವತ್ಸಲಾ ಅವರಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟ ‘ನೆಲ್ಲ್’ ವಯನಾಡಿನ ಬುಡಕಟ್ಟು ಸಮುದಾಯಗಳ ಬದುಕಿನ ಅನುಭವಗಳನ್ನು ಹುಡುಕಾಡಿದರೆ ‘ಆಗ್ನೇಯಂ’ ಇಪ್ಪತ್ತನೇ ಶತಮಾನದ ಸಾಂಪ್ರದಾಯಿಕ ನಂಬಿಕೆಗಳನ್ನು ಧಿಕ್ಕರಿಸಿ ಬಾಳಿದ ನಂಗೇಮಳ ಬದುಕಿನ ಚಿತ್ರಣವನ್ನು ನೀಡುತ್ತದೆ. ಬೀದಿಪಾಲಾದರೂ ಬದುಕುವ ಛಲವನ್ನು ಬಿಡದೆ, ನೋವಿಗೆ ಕಾರಣರಾದವರನ್ನು ದೂರದೆ, ಬದುಕಿನ ಬಗ್ಗೆ ಅಪಸ್ವರವನ್ನು ಎತ್ತದೆ, ಅನುಭವದ ಆಧಾರದಿಂದ ಕಂಡುಕೊಂಡ ಮೌಲ್ಯಗಳನ್ನು ಅಡಿಗಲ್ಲಾಗಿಟ್ಟುಕೊಂಡು ಗೌರವಯುತವಾಗಿ ಬಾಳುತ್ತಾ ಆಕೆಯು ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವ ವಿಧಾನವು ಮುಖ್ಯವಾಗುತ್ತದೆ. ಅಗ್ನಿಯಂತೆ ಉರಿಯುತ್ತಿರುವ ಹೃದಯವನ್ನು ಹೊಂದಿದ ನಂಬೂದಿರಿ ಹೆಣ್ಣೊಬ್ಬಳ ಬದುಕನ್ನು ಸೂಕ್ಷ್ಮಾತಿಸೂಕ್ಷ್ಮ ನೆಲೆಯಲ್ಲಿ ದಟ್ಟವಾಗಿ ಸೆರೆ ಹಿಡಿಯುವ ವಿವರಗಳು ಬದುಕಿನ ವಿನ್ಯಾಸದ ನೇಯ್ಗೆಯಾಗಿ ಹೆಣೆದುಕೊಂಡಿವೆ. ಪಾಶ್ಚಿಮಾತ್ಯ ವಾಸ್ತವವಾದಿ ಮಾದರಿಯನ್ನು ಹಿಂಬಾಲಿಸದೆ ಪ್ರಾದೇಶಿಕ ಕಥನದ ಮಾದರಿಯನ್ನು ಮುಂದಿಡುವ ನಿರೂಪಣ ವಿಧಾನವು ಸರಳ ರೇಖಾತ್ಮಕವಾಗಿ ಮುನ್ನುಗ್ಗದೆ ಅಲೆಗಳಂತೆ ಸುತ್ತಲೂ ಹರಡಿಕೊಳ್ಳುತ್ತದೆ.

ಸ್ವಾತಂತ್ರ ಹೋರಾಟಗಾರನಾದ ಗಂಡನು ತೀರಿಕೊಂಡ ಬಳಿಕ, ಪಾಲಕ್ಕಾಡಿನಲ್ಲಿ ಬಾಳುವೆಯು ಅಸಹನೀಯವಾದಾಗ ಮಕ್ಕಳನ್ನು ಕಟ್ಟಿಕೊಂಡು ವಯನಾಡಿನಲ್ಲಿರುವ ತಿರುನೆಲ್ಲಿಗೆ ಬಂದು, ಅಕ್ಕನ ಮನೆಯಲ್ಲಿ ಆಸರೆಯನ್ನು ಪಡೆದು ಅಪಾಯಕಾರಿಯಾದ ಗುಡ್ಡ ಪ್ರದೇಶ ಮತ್ತು ಬಂಜರು ಭೂಮಿಯನ್ನು ಕೃಷಿಗೆ ಯೋಗ್ಯವಾದ ಭೂಮಿಯನ್ನಾಗಿ ಮಾಡಿ ನೆಲದ ಒಡತಿ ಎನಿಸಿಕೊಂಡ ನಂಗೇಮನ ಶ್ರಮ, ಕಗ್ಗಾಡನ್ನು ಕಡಿದು, ಕಪ್ಪು ಮಣ್ಣನ್ನು ಅಗೆದು ನೆಟ್ಟ ಗಿಡಗಳಲ್ಲಿ ಬೆಳೆದ ಕಾಫಿ ಬೀಜಗಳನ್ನು ಕದಿಯುವ ಕಳ್ಳರನ್ನು ಹಿಡಿಯುವ ಸಾಹಸಗಳು ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಗಂಡನು ತೀರಿಕೊಂಡ ಬಳಿಕ ನಂಬೂದಿರಿ ಹೆಣ್ಣು ಮನೆಯಿಂದ ಹೊರಗೆ ಕಾಲಿಡುವುದಾಗಲೀ, ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಾಗಲೀ ನಿಷಿದ್ಧ ಎಂಬ ಕಟ್ಟಳೆಯನ್ನು ಮೀರಿ ಕೃಷಿ ಮಾಡುವ, ಉಪ್ಪು, ಹುಳಿ, ಬೆಲ್ಲ ಮತ್ತು ಮೆಣಸಿನಕಾಯಿಯ ವ್ಯಾಪಾರಗಳಲ್ಲಿ ತೊಡಗಿಸಿಕೊಳ್ಳುವ ಕ್ರಿಯೆಗಳು ನಂಬೂದಿರಿಗಳ ಸಂಪ್ರದಾಯಕ್ಕೆ ವಿರುದ್ಧವಾದ ವಿಚಾರವಾಗಿರುವುದರಿಂದ ಅದು ಪುರುಷ ಪ್ರಧಾನ ಸಮಾಜದ ಎದುರಾಗಿ ನಡೆಸಿದ ಪ್ರತಿಭಟನೆಯೂ ಹೌದು. ಆಕೆಯು ವಾಸಿಸುವ ಮನೆಯೊಳಗಿನ ಗಂಡಸರು ಅವಳ ನಡೆಯನ್ನು ವಿರೋಧಿಸುವುದರಿಂದ ಆಕೆಗೆ ತನ್ನ ಅಸ್ಮಿತೆಯನ್ನು ಸ್ಥಾಪಿಸಿ ಕರ್ಮಯೋಗಿನಿಯಾಗುವುದು ಅನಿವಾರ್ಯವಾಗುತ್ತದೆ. ಯಾರ ಒಡೆತನಕ್ಕೂ ಸೇರದ ಕಾಡು ಪ್ರದೇಶವನ್ನು ಕಡಿದು ಕೃಷಿ ಭೂಮಿಯನ್ನಾಗಿ ಮಾಡಿಕೊಂಡಿದ್ದುದರಿಂದ ಕಾನೂನು ರೀತಿಯ ಅಡೆತಡೆಗಳು ಎದುರಾಗದಿದ್ದರೂ ಗುಡ್ಡ ಬೆಟ್ಟಗಳಿಂದ ಕೂಡಿದ ಪುಟ್ಟ ಗ್ರಾಮ, ಮಳೆಯ ಅಭಾವ, ಕಾಡು ಪ್ರಾಣಿಗಳ ಕಾಟಗಳು ಆಕೆಯ ಪಾಲಿಗೆ ಸವಾಲುಗಳಾಗುತ್ತವೆ. ಆದರೂ ಆಕೆಯು ಕಾಡನ್ನು ಕಡಿದು ಕೃಷಿಭೂಮಿಯನ್ನಾಗಿಸುವಲ್ಲಿ ಯಶಸ್ವಿಯಾಗುತ್ತಾಳೆ. ಅದು ಆಕೆಯ ಬದುಕಿನಲ್ಲಿ ನಡೆದ ಮುಖ್ಯವಾದ ಪಲ್ಲಟವಾಗಿದೆ. ಆಮೇಲೆ ಆಕೆಯು ಬಡ ಬ್ರಾಹ್ಮಣಳಲ್ಲ. ಶೋಷಿತೆಯಲ್ಲ. ಬದಲಾಗಿ ಮಾಲೀಕಳಾಗುತ್ತಾಳೆ. ಆದರೆ ತನ್ನ ಮಾಲಕತ್ವವನ್ನು ಶೋಷಣೆಗೆ ದಾರಿ ಮಾಡಿ ಕೊಡುವುದಿಲ್ಲ. ವಯನಾಡಿನಲ್ಲಿ ಆಕೆ ಕಟ್ಟಿಸುವ ಮನೆಯು ಬರೇ ಕಟ್ಟಡವಾಗಲೀ, ಭೌಗೋಳಿಕ ವ್ಯಾಪ್ತಿಯ ವಿಸ್ತಾರವಾಗಲೀ ಅಲ್ಲ. ಅದೊಂದು ಕಾರ್ಯಕ್ಷೇತ್ರ. ಅದರ ಹೆಸರಿನಲ್ಲಿ ಆಕೆಯು ಹಲವು ಬಗೆಯ ಬವಣೆಯ ಬೆಂಕಿಯಲ್ಲಿ ಬೆಂದರೂ ಹೊಸ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಅದಕ್ಕೆ ಬೇಕಾದ ಮನಸ್ಥಿತಿ, ಧೈರ್ಯ, ಶ್ರಮ ಮತ್ತು ನಿಷ್ಠೆಯನ್ನು ರೂಢಿಸಿಕೊಂಡು ಗುರಿಯನ್ನು ಸಾಧಿಸಿದ ರೀತಿಯು ಗಮನಾರ್ಹವಾಗಿದೆ.

“ಅಪ್ಪು, ನೀನು ಹೀಗೆ ತಲೆಯೆತ್ತಿ ನಡೆಯುವಂತಾಗಲು ನಾನು ಮಾಡಿದ ಹೋರಾಟ ನಿನಗೆ ಗೊತ್ತಿಲ್ಲ. ನಿನ್ನ ತುಟಿಯಲ್ಲಿ ಬೀಳಬೇಕಾದ ಹಾಲಿನ ಬಿಂದುಗಳು ಕಾಡುದಾರಿಗಳ ಒಣ ಎಲೆಗಳ ಮೇಲೆ ಉದುರಿ ಬಿದ್ದು ಚದುರಿದಾಗ ನನ್ನ ಕರುಳು ಚುರುಕ್ಕೆಂದದ್ದು ನೀನು ತಿಳಿದಿಲ್ಲ. ಹಾಲೂಡಲು ಸಿದ್ಧವಾದ ಮೊಲೆಗಳ ಬಿಗಿತ ನನಗಿನ್ನೂ ನೆನಪಿದೆ. ಪಾಲಕ್ಕಾಡಿನ ಗಾಳಿಗೆ ಬಿರಿದ ನಿನ್ನ ತುಟಿಗಳನ್ನು ನೆನೆದು ನಾನು ಕಣ್ಣೀರು ಸುರಿಸಿದೆ.”(ಪುಟ 19) ಎಂಬ ನಂಗೇಮನ ಸ್ವಗತದ ಸಾಲುಗಳಲ್ಲಿ ಇಡೀ ಕಾದಂಬರಿಯ ತಿರುಳು ಇದೆ. ತನಗೆ ಎದುರಾಗಿ ಬರುವ ಪ್ರಕರಣಗಳನ್ನು ನಿವಾರಿಸುವಲ್ಲಿ ಆಕೆಯ ಘನತೆ ಗಾಂಭೀರ್ಯಗಳು ಎದ್ದು ಕಾಣುತ್ತವೆ. ಈ ಮನೋಧಾಢ್ರ್ಯವೇ ಆಕೆಯ ಚಾರಿತ್ರ್ಯ ಕೆಡದಂತೆ ತಡೆಯುತ್ತದೆ. ಮಲಬಾರ್ ದಂಗೆಯ ಕಾಲದಲ್ಲಿ ಮುಸಲ್ಮಾನರು ಆಕೆಯನ್ನು ವಶಪಡಿಸಲು ಯತ್ನಿಸುತ್ತಾರೆ. ಆಕೆಯು ಬಾಗಿಲನ್ನು ತೆರೆಯದಿದ್ದಾಗ ತೆಂಗಿನಕಾಯಿಗಳನ್ನು ಕೊಯ್ಯುತ್ತಾರೆ. ಜಮೀನ್ದಾರನಾದ ಕೇಯಿ ಮಾಪಿಳ್ಳೆಯು ಆಕೆಯನ್ನು ನಯವಾದ ಮಾತುಗಳಿಂದ ಒಲಿಸಿಕೊಳ್ಳಲು ಯತ್ನಿಸುತ್ತಾನೆಯೇ ಹೊರತು ದೈಹಿಕ ಆಕ್ರಮಣಕ್ಕೆ ಮುಂದಾಗುವುದಿಲ್ಲ. ಆದ್ದರಿಂದ ಮುಸಲ್ಮಾನರ ದಾಳಿಕೋರ ಸಂಸ್ಕøತಿಯನ್ನು ಚಿತ್ರಿಸಿಯೂ ಕಾದಂಬರಿಯು ಏಕಪಕ್ಷೀಯ ನೋಟದಿಂದ ತಪ್ಪಿಸಿಕೊಳ್ಳುತ್ತದೆ. ಅಕ್ಕನ ಗಂಡನೂ ಕಣ್ಣು ಹಾಕುತ್ತಾನೆ. ಆದರೆ ಆಕೆಯು ಯಾರಿಗೂ ಜಗ್ಗುವುದಿಲ್ಲ. ಹಾಗೆಂದು ಆಕೆಯು ಭಾವನೆಗಳೇ ಇಲ್ಲದ ಕಲ್ಲು ಹೃದಯವಳಲ್ಲ. ತನ್ನ ಮೇಲೆ ಪ್ರೀತಿ, ಗೌರವ, ನಂಬಿಕೆ ಅನುಕಂಪಗಳನ್ನು ವ್ಯಕ್ತಪಡಿಸುವ ಹಿತಚಿಂತಕ, ಗೌರವಸ್ಥನಾದ ಪದ್ಮನಾಭ ಮೆನೋನನ ಪ್ರಸ್ತಾಪವನ್ನು ಸ್ವೀಕರಿಸಿ ಆತನನ್ನು ಮದುವೆಯಾಗಿ ಕಷ್ಟಗಳನ್ನು ನೀಗಿಕೊಳ್ಳಬಹುದಿತ್ತು. ಆದರೆ ಮಗನಾದ ಅಪ್ಪುವನ್ನು ನೆನೆದು ಸುಮ್ಮನಾಗುವ ಮೂಲಕ ತನ್ನ ಲೈಂಗಿಕತೆಯನ್ನು ನಿರಾಕರಿಸಿ, ಕಠಿಣವಾದ ಪರಿಶ್ರಮ, ದೈಹಿಕ ದುಡಿಮೆಗಳ ಮೂಲಕ ಕಾಮನೆಗಳನ್ನು ಅಧೀನದಲ್ಲಿಟ್ಟುಕೊಳ್ಳುತ್ತಾಳೆ. ಈ ವಿಷಯದಲ್ಲಿ ಜಾರಿದ ಪಾರ್ವತಿ ಮತ್ತು ಶಿವನ್ ಕುಟ್ಟಿಯನ್ನು ಆಕೆಯು ಹೀನಾಯವಾಗಿ ಕಾಣುವುದಿಲ್ಲ. ಆಕೆಯ ನೆರವಿಗೆ ಬರುವ ಪದ್ಮನಾಭ ಮೆನೋನರ ಬೆಂಬಲವು ಆಕೆಯ ಸಂಕಷ್ಟಗಳನ್ನು ಪವಾಡದಂತೆ ಬಗೆಹರಿಸದಿದ್ದರೂ ಅವುಗಳನ್ನು ತಾಳಿಕೊಳ್ಳುವ, ಎದುರಿಸುವ, ಮನಸ್ಸಿನ ಆರೋಗ್ಯವನ್ನು ಕಾಯ್ದುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಮೇಲುಗೇಣಿಗೆ ಭೂಮಿ ಪಡೆಯಲು ನಂಗೇಮನಿಗೆ ಮೆನೋನ್ ಸಹಾಯ ಮಾಡಿದಾಗ “ಹಿಂತಿರುಗಿ ಕೊಡಬೇಕಾಗಿಲ್ಲದಿರಬಹುದು” (ಪುಟ 109) ಎಂಬ ಮಾತಿನ ಮೂಲಕ ಲೈಂಗಿಕ ಅಸೂಯೆಯನ್ನು ವ್ಯಕ್ತಪಡಿಸುವುದರೊಂದಿಗೆ ಪ್ರತಿಯೊಂದು ಸನ್ನಿವೇಶದಲ್ಲೂ ಆಕೆಯನ್ನು ಆರೋಪಿ ಸ್ಥಾನದಲ್ಲಿ ನೋಡುವ ಬಾವನಿಗೆ ಕಟುವಾದ ಮಾತಿನ ಮೂಲಕ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಕೊಡುತ್ತಾಳೆಯೇ ಹೊರತು ಹಗೆತನದಿಂದ ಕಾಣುವುದಿಲ್ಲ. ಕಹಿ ಪ್ರಸಂಗಗಳಿಂದ ಘಾಸಿಗೊಂಡರೂ ಕುಸಿಯುವುದಿಲ್ಲ. ಗಂಡು ಹೆಣ್ಣಿನ ಸಂಬಂಧಗಳ ಬಗ್ಗೆ ಸಮಾಜ ಸಿನಿಕತನದ ಧೋರಣೆಯನ್ನು ಹೊಂದಿರುವ ಹೊತ್ತಿನಲ್ಲಿ, ಸಂಬಂಧಗಳು ಬದಲಾದ ಸಾಮಾಜಿಕ ಸಂದರ್ಭದಲ್ಲಿ ಹೆಣ್ಣು ತನ್ನ ಸಂಬಂಧಗಳ ನೈಜತೆ, ಭದ್ರತೆಗಳ ಬಗ್ಗೆ ಎಚ್ಚರಿಕೆಯನ್ನು ವಹಿಸುವ ಉದ್ದೇಶದಿಂದ ಗಂಡಸರ ಸಂಪರ್ಕದಿಂದ ದೂರವನ್ನು ಕಾಯ್ದುಕೊಳ್ಳುವ ನಂಗೇಮನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವವರೂ ಇದ್ದಾರೆ ಎಂಬಂತೆ ಮೆನೋನರ ಪಾತ್ರ ಮೂಡಿ ಬಂದಿರುವುದು ಕಾದಂಬರಿಯ ದೃಷ್ಟಿಯಿಂದ ಆಶಾವಾದಿ ಬೆಳವಣಿಗೆಯಾಗಿದೆ. ಹೆಣ್ಣು ಗಂಡಿನ ಸಂಬಂಧಗಳು ಕೇವಲ ಕಾಮದ ಆಧಾರದ ಮೇಲೆ ನಿಂತಿವೆಯೇ? ಆತ್ಮೀಯತೆಯ ಭಾವನೆಯಿಂದ ಕಾಣಲು ಸಾಧ್ಯವಿಲ್ಲವೇ? ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತುವ ಕಾದಂಬರಿಯು ತಿಳುವಳಿಕೆಯ ಆಧಾರದಲ್ಲಿ ಸಂಬಂಧವಿರಿಸುವ ಆಶಯವನ್ನು ಹೊಂದಿದೆ. “ಈ ಕಾಲದಲ್ಲಿ ಯಾರನ್ನೂ ನಂಬುವಂತಿಲ್ಲ. ಎಲ್ಲರೂ ಕಳ್ಳರೇ” (ಪುಟ 201) ಎಂಬ ಚಂಪಾಳ ಸಾಂದರ್ಭಿಕ ಮಾತು ನಂಗೇಮನ ಫಸಲನ್ನು ಕದ್ದು ಸಾಗಿಸುವ ಸೈದಲವಿ ಮತ್ತು ಕೋರುವಿಗೆ ಮಾತ್ರವಲ್ಲ, ಆಕೆಯ ಮೇಲೆ ಕುತ್ಸಿತ ನೋಟವನ್ನು ಬೀರುವ ಎಲ್ಲರಿಗೂ ಅನ್ವಯವಾಗುತ್ತದೆ.

ನಂಗೇಮ ತನ್ನ ಅಕ್ಕನ ಮದ್ದಿಗಾಗಿ ಕಾಳಿಂದಿ ನದಿಯನ್ನು ಗಂಡಸರೂ ಬೆರಗಾಗುವಂತೆ ಈಜಿ ಜೇನನ್ನು ಸಂಗ್ರಹಿಸುವ ಸಂದರ್ಭವು ಒಂದು ಪ್ರತೀಕವಾಗಿ ಗಮನವನ್ನು ಸೆಳೆಯುತ್ತದೆ. ಇದು ಪ್ರವಾಹದ ವಿರುದ್ಧ ಈಜಿ ಗೆಲ್ಲುವುದರ ಸಂಕೇತವಾಗಿದೆ. ಉಬ್ಬಸರೋಗಿಯಾಗಿರುವ ಅಕ್ಕ ಮತ್ತೆ ಬಸಿರಾಗಿದ್ದಾಳೆ ಎಂದು ತಿಳಿದಾಗ ಆಕೆಯು ಹಸಿರು ಮದ್ದನ್ನು ಬೀಸಿ ಎಸೆಯುವುದಿಲ್ಲ. ಹಿಸುಕಿ ನೀರಿನಲ್ಲಿ ಲಯಗೊಳಿಸುತ್ತಾಳೆ. ಹೆಣ್ಣನ್ನು ಭೋಗವಸ್ತುವನ್ನಾಗಿ ಕಾಣುವ ಗಂಡಿನ ಧೋರಣೆಯ ವಿರುದ್ಧ ಆಕ್ರೋಶವು ಈ ಕ್ರಿಯೆಯಲ್ಲಿ ವ್ಯಕ್ತವಾಗುತ್ತದೆ. ತಾನು ಸೊಸೆಯಾಗಿ ಕಾಣಲು ಬಯಸಿದ ಪಾರ್ವತಿಯ ಬದಲು ಅಪ್ಪುವು ಚಮ್ಮಾರನ ಮಗಳಾದ ಲೀಲಳನ್ನು ತನ್ನ ಹೆಂಡತಿಯನ್ನಾಗಿ ಆಯ್ದುಕೊಂಡಾಗ “ನನ್ನ ಅಪ್ಪು, ನೀನು ಹೀಗೆ ಹೇರು ಹೊರುವ ಕತ್ತೆಯಾಗಿ ಹೋದೆಯಲ್ಲ. ನಾನು ಯಾರಿಗಾಗಿ ಇದನ್ನೆಲ್ಲ ಮಾಡಿದೆ? ಯಾರಿಗಾಗಿ ಏನೇನೆಲ್ಲ ಮಾಡಿದೆ? ಕಣ್ಣೀರಿನಲ್ಲಿ ತೊಳೆದು ಕಾಣಿಸಿದ ಚಿತ್ರಗಳು. ಕಾಳಿಂದಿಯಲ್ಲಿ ಹರಿದ ಕಣ್ಣೀರು. ಕಣ್ಣೀರಿನ ದಡದಲ್ಲಿ ತಲೆಯೆತ್ತಿ ಅಗಮ್ಯವಾಗಿ ನಿಂತಿರುವ ಕಾಳಿಂದಿ ಬಂಡೆ. ನನಗೆ ಇನ್ನೆಂದೂ ದಡ ಸೇರಲು ಸಾಧ್ಯವಾಗದ ಕಾಳಿಂದಿ ಬಂಡೆ” (ಪುಟ 199) ಎಂದು ತನಗೆ ತಾನೇ ಹೇಳಿಕೊಳ್ಳುವಾಗ ಗೆದ್ದವರು ಯಾರೂ ಗೆಲ್ಲಲೇ ಇಲ್ಲ ಎಂಬ ಲೋಕನೀತಿಯ ಅರ್ಥವು ಮನದಟ್ಟಾಗುತ್ತದೆ. ರಾಜಕೀಯವನ್ನು ಸೇರಿ ಸೆರೆಮನೆಯನ್ನು ಸೇರಿದ ತಂದೆಯಂತೆ ಮಗನೂ ಆರಕ್ಷಕರ ಅತಿಥಿಯಾಗುವ ಸನ್ನಿವೇಶವು ಆಕೆಯ ಬದುಕನ್ನು ಬೇರು ಸಹಿತ ಅಲುಗಿಸುವ ಘಟನೆಯಾಗಿದೆ. ‘ನೀನು ಯಾವತ್ತೂ ನಿನ್ನ ಇಚ್ಛೆಯಂತೆ ನಡೆಯುತ್ತೀ’ ಎಂದಿದ್ದ ಮಗನ ಮಾತಿಗೆ “ನನಗೆ ಸ್ವಂತವಾಗಿ ಇರೋದು ಅದು ಮಾತ್ರ ಎಂದು ತಿಳ್ಕೊ” (ಪುಟ 21) ಎಂದು ಉತ್ತರಿಸಿದ್ದ ಆಕೆಯು ತನ್ನ ಇಚ್ಛಾಶಕ್ತಿಯನ್ನು ಕಳೆದುಕೊಳ್ಳುತ್ತಾಳೆ.

ನಂಗೇಮ ತನ್ನ ಮೇಲಿನ ಆಕ್ರಮಣ ಮತ್ತು ಬಲಪ್ರಯೋಗಗಳನ್ನು ಮಾತಿಲ್ಲದೆ ಸಹಿಸಿಕೊಂಡಳು ಎಂದಲ್ಲ. ತನ್ನ ಘನತೆಯು ಕುಸಿಯದ ರೀತಿಯಲ್ಲಿ ಆಕೆಯು ಪ್ರತ್ಯುತ್ತರವನ್ನು ನೀಡುತ್ತಾಳೆ. ಸ್ವಾವಲಂಬಿಯಾಗುವುದೇ ಸಮಸ್ಯೆಯ ಪರಿಹಾರ ಎಂಬುದನ್ನು ಅರಿತುಕೊಂಡಿದ್ದ ಆಕೆಯು ಜಗಳ, ಚಾಡಿ, ದೂರುಗಳ ಹಾದಿಯಲ್ಲಿ ಸಾಗದಿದ್ದುದರಿಂದ ಆಕೆಯ ನಡೆನುಡಿಗಳಲ್ಲಿ ಬಾಳಿನ ವಿವೇಕವು ವ್ಯಕ್ತವಾಗುತ್ತದೆ. ಬ್ರಾಹ್ಮಣಳಾಗಿದ್ದು ನಾಟಿಯ ಕೆಲಸಗಳನ್ನು ಮಾಡುವಾಗ, ನಿತ್ಯೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವಾಗ ನೆಂಟರಿಷ್ಟರು, ನೆರೆಹೊರೆಯವರಿಂದ ಒಂದು ಬಗೆಯ ಹಿಂಸೆಯನ್ನು ಅನುಭವಿಸಿದರೆ ದುಡಿಯುವ ವರ್ಗದ ಜನರ ಕಡೆಯಿಂದ ಮತ್ತೊಂದು ಬಗೆಯ ಮುಜುಗರವನ್ನು ಎದುರಿಸಬೇಕಾಗುತ್ತದೆ. ಆಕೆಯ ಚಾರಿತ್ರ್ಯವನ್ನು ನಿರೂಪಿಸುವಾಗ ಕಾದಂಬರಿಯು ಏನನ್ನೂ ವೈಭವೀಕರಿಸದೆ, ಕಷ್ಟಗಳನ್ನು ಭಾವಾತಿರೇಕದಿಂದ ಬಣ್ಣಿಸಿ ಕಣ್ಣೀರು ತರಿಸದೆ, ಆಕೆಯ ಕರ್ಮಯೋಗ ಮತ್ತು ಶ್ರಮಜೀವನವನ್ನು ವಿವರಿಸುತ್ತದೆ. ಆಕೆಯ ತಾಳ್ಮೆಯನ್ನು ಮಾತ್ರ ಹೊಗಳದೆ ಸಂಕಲ್ಪ ಬಲ, ಸಾತ್ವಿಕ ಛಲಗಳನ್ನು ಮುಂದಿರಿಸುತ್ತದೆ. ಸಾಮಾನ್ಯ ನಂಬೂದಿರಿ ಹೆಣ್ಣೊಬ್ಬಳು ಬೆಳೆದ ಪಕ್ರಿಯೆಯನ್ನು ಕಟ್ಟಿಕೊಡುತ್ತದೆ. ಆಕೆಯ ಲೋಕಗ್ರಹಿಕೆ ಮತ್ತು ತತ್ವವನ್ನು ಒಪ್ಪದಿರುವವರು ಇರಬಹುದಾದರೂ ಆಕೆಯ ಗಟ್ಟಿತನ ಮತ್ತು ಸಾಚಾತನವನ್ನು ಅನುಮಾನಿಸಲಾರರು. ಈ ರೀತಿಯಲ್ಲಿ ಲೇಖಕಿಯು ಮಲಯಾಳಂ ಸಾಹಿತ್ಯಕ್ಕೆ ಘನವಾದ ಪಾತ್ರಮಾದರಿಯನ್ನು ಅರ್ಪಿಸಿದ್ದಾರೆ. ಆದರೆ ಇದನ್ನು ಒಂಟಿಮಾದರಿ ಎನ್ನುವಂತಿಲ್ಲ. ಲಲಿತಾಂಬಿಕಾ ಅಂತರ್ಜನರ ಕಾದಂಬರಿಗಳಲ್ಲಿ ನಂಗೇಮನ ಸತ್ವವನ್ನು ನೆನಪಿಸುವ ಪಾತ್ರಗಳು ಇವೆ. ಕನ್ನಡದಲ್ಲಿ ಮಾಸ್ತಿ, ಕಾರಂತರು ಇಂಥ ಪಾತ್ರಗಳನ್ನು ಮೊದಲೇ ಚಿತ್ರಿಸಿದ್ದಾರೆ.

ತಮ್ಮ ಜಾತ್ಯತೀತ ಮನೋಭಾವ ಮತ್ತು ರಾಜಕೀಯವಾಗಿ ಸರಿ ಎನಿಸಿಕೊಳ್ಳಲು ಹೆಣಗಾಡುವ ಮಲಯಾಳಂ ಮತ್ತು ಕನ್ನಡ ಭಾಷೆಯ ಹಲವು ಲೇಖಕರು ಮೇಲು ಜಾತಿಗೆ ಸೇರಿದವರನ್ನು ಕೆಟ್ಟವರಾಗಿ ಮತ್ತು ಕೆಳಜಾತಿಗೆ ಸೇರಿದವರನ್ನು ಒಳ್ಳೆಯವರಾಗಿ ಚಿತ್ರಿಸುವ ಕಪ್ಪು ಬಿಳುಪಿನ ಧೋರಣೆಯು ಇಂದು ನಿನ್ನೆಯದಲ್ಲ. ಆದರೆ ನಿರ್ದಿಷ್ಟ ಜಾತಿಗಳನ್ನು ಎತ್ತಿ ಹಿಡಿಯುವ ಮೂಲಕವೇ ಜಾತ್ಯತೀತ ಎನಿಸಿಕೊಳ್ಳಬೇಕೆಂಬ ಒತ್ತಡವನ್ನು ಬಿಟ್ಟುಕೊಟ್ಟಿದ್ದರಿಂದ ಮುಸಲ್ಮಾನರ ದಾಳಿಕೋರ ಸಂಸ್ಕøತಿಯನ್ನು, ಏನೂ ತಿಳಿಯದ ಮೂಕರು, ಶೋಷಿತರು, ಅಸಹಾಯಕರು ಎಂಬಂತೆ ಕಾಣಿಸಿಕೊಳ್ಳುವ ಕೆಳಜಾತಿಯವರ ದುರ್ಬುದ್ಧಿಗಳನ್ನು ವಿವರಿಸಲು ಲೇಖಕಿಗೆ ಸಾಧ್ಯವಾಗಿದೆ. ಆ ಕಾಲದಲ್ಲಿ ಬಹಿರಂಗವಾಗಿ ಪ್ರತಿಭಟಿಸಲು ಸಾಧ್ಯವಿಲ್ಲದಿದ್ದರೂ ಕದ್ದುಮುಚ್ಚಿ ಅವ್ಯವಹಾರಗಳನ್ನು ಮಾಡುತ್ತಿದ್ದ ಅವರು ಮುಗ್ಧರಾಗಿ, ಮೂಢರಾಗಿ ಇರಲಿಲ್ಲ ಎಂಬ ಸತ್ಯವನ್ನು ಅನಾವರಣಗೊಳಿಸಿದ್ದಾರೆ. ತನಗಾಗಿ ಮಾತ್ರವಲ್ಲ ತನ್ನ ಸುತುಮುತ್ತಲಿನಲ್ಲಿರುವ ಎಲ್ಲ ಜಾತಿಗೆ ಸೇರಿದ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಸಮಯೋಚಿತ ನಿರ್ಧಾರಗಳನ್ನು ತಳೆಯುವ ನಂಗೇಮನು ಮಾನವತಾವಾದದ ಪ್ರತಿನಿಧಿಯಾಗಿ ಕಂಡು ಬರುತ್ತಾಳೆ. ಪ್ರತಿ ಸಾಹಿತ್ಯದಲ್ಲೂ ಆಕ್ರಮಣ, ಶೋಷಣೆ ಎಂದೇ ವ್ಯಾಖ್ಯಾನಿಸುವ ಕೃತಿಗಳು ತುಂಬುತ್ತಿರುವ ಸಂದರ್ಭದಲ್ಲಿ ಈ ಕಾದಂಬರಿಯು ಭಿನ್ನವಾದ ಮಾನವೀಯ ಸ್ಪಂದನೆಯನ್ನು ಪ್ರಕಟಿಸುತ್ತದೆ. ಜಾತಿಯ ಮೇಲುಗಾರಿಕೆಯ ಬದಲು ಸೌಹಾರ್ದತೆಯು ಕಾಣಿಸುತ್ತದೆ.

ದಿಟ್ಟ ಮನೋಭಾವದ ನಂಗೇಮಳು ತನ್ನ ಬದುಕಿನ ಘಟ್ಟಗಳಲ್ಲಿ ಎದುರಿಸಿದ ಕಷ್ಟ ಕಾರ್ಪಣ್ಯಗಳನ್ನು ವಿವರಿಸುವುದರೊಂದಿಗೆ ಆಕೆಯ ವ್ಯಕ್ತಿತ್ವವು ಮಾಗುವ ರೀತಿ, ಪಕ್ವ ನೋಟದಲ್ಲಿ ಬದುಕನ್ನು ವ್ಯಾಖ್ಯಾನಿಸುವ ಬಗೆಯನ್ನು ಕಾದಂಬರಿಯು ಕಲಾತ್ಮಕ ಮತ್ತು ಕಾವ್ಯಾತ್ಮಕ ಭಾಷೆಯಲ್ಲಿ ನಿರೂಪಿಸುತ್ತದೆ. ನವ್ಯ ಸಂವೇದನೆಯ ಹಿನ್ನೆಲೆಯಲ್ಲಿ ಮತ್ತು ಪ್ರಗತಿಪರ ಆಶಯವನ್ನು ಬಿಂಬಿಸುತ್ತದೆ. ಜೀವನ ಪ್ರೀತಿಯು ಆಕೆಯ ಬದುಕಿಗೆ ಸುಖವನ್ನು ನೀಡುವುದಿಲ್ಲ. ಜಡವಾದ, ರೂಢಿಗತವಾದ ಸಾಂಪ್ರದಾಯಿಕ ರೀತಿ ರಿವಾಜುಗಳಿಂದಾಗಿ ಆಕೆಯ ಮನಸ್ಸಿಗೆ ಏಟುಗಳು ಬೀಳತೊಡಗುತ್ತವೆ. ಕೆಳವರ್ಗದವರ ಪರ ನಡೆಯುವ ನಕ್ಸಲ್‍ವಾದಿ ಚಟುವಟಿಕೆಗಳಲ್ಲಿ ನಂಗೇಮನ ಮಗ ಅಪ್ಪು ಶಾಮೀಲಾಗಿರುತ್ತಾನೆ. ಆತನು ಲೀಲಳನ್ನು ಮದುವೆಯಾಗುವುದು ಆಕೆಗೆ ಇಷ್ಟವಿಲ್ಲದಿದ್ದರೂ ಮಗನನ್ನು ಎದುರು ಹಾಕಿಕೊಂಡರೆ ತನಗೆ ಬೆಂಬಲವನ್ನು ನೀಡುವವರಿಲ್ಲ ಎಂಬ ಅರಿವು ಇದ್ದುದರಿಂದ ಆಕೆಯು ಸುಮ್ಮನಾಗುತ್ತಾಳೆ. ಗಂಡನನ್ನು ಕಳೆದುಕೊಂಡ ದಿನಗಳಲ್ಲಿ ಆಕೆಯು ವ್ಯವಸ್ಥೆಯನ್ನು ಧಿಕ್ಕರಿಸಿದಂತೆ ನಂತರದ ತಲೆಮಾರಿಗೆ ಸೇರಿದ ಮಗನು ಆತನ ಕಾಲದ ವ್ಯವಸ್ಥೆಯನ್ನು ವಿರೋಧಿಸುತ್ತಾನೆ. ಆಯ್ಕೆಯ ಸ್ವಾತಂತ್ರ್ಯವನ್ನು ಚಲಾಯಿಸುತ್ತಾನೆ. ತಾನು ನಿರ್ಮಿಸಿದ ವ್ಯವಸ್ಥೆ, ನಂಬಿಕೆಗಳ ಲೋಕ ನಾಶಗೊಳ್ಳುತ್ತಿರುವುದನ್ನು ಗೊಂದಲ, ಆತಂಕ ಆಘಾತಗಳಿಂದ ಗಮನಿಸುವುದಲ್ಲದೆ ನಂಗೇಮನಿಗೆ ಏನನ್ನೂ ಮಾಡಲಾಗುವುದಿಲ್ಲ. ಆಕೆಯು ನಕ್ಸಲರನ್ನು ಬೆಂಬಲಿಸದಿದ್ದರೂ ತನ್ನ ಮಗನು ಅವರೊಂದಿಗೆ ಸೇರಿಕೊಂಡಿರುವುದರಿಂದ ತನ್ನ ಕುದಿತವನ್ನು ತೋರಿಸಿಕೊಳ್ಳದೆ ಒಳಗೊಳಗೆ ಬೇಯುತ್ತಾಳೆ. ಸಮಾಜದ ಉದ್ಧಾರದ ಹೆಸರಿನಲ್ಲಿ ತನ್ನ ಪಾಲಿಗೆ ಇಲ್ಲವಾದ ಗಂಡನಂತೆ ಬಡವರ ಬಂಧುವೆನಿಸಿದ ಮಗನೂ ಆಕೆಯ ಪಾಲಿಗೆ ಇಲ್ಲವಾಗುತ್ತಾನೆ. ಸೆರೆಮನೆಯನ್ನು ಸೇರಿದ ಮಗನು ಮಾಡಿಟ್ಟ ಸಾಲಕ್ಕಾಗಿ ತಾನು ಬೆವರಿಳಿಸಿ ದುಡಿದು ಸಂಪಾದಿಸಿದ ನೆಲವನ್ನು ತೊರೆದು ಪಾಲಕ್ಕಾಡಿನಲ್ಲಿರುವ ಮಗಳ ಮನೆಗೆ ಹೋಗುನ ನಂಗೇಮನ ಬದುಕಿನ ಕೊನೆಯಲ್ಲಿ ಅನುಭವಕ್ಕೆ ಬರುವ ಅಭದ್ರತೆ ಮತ್ತು ಶೂನ್ಯತೆಯನ್ನು ಕಾಣುತ್ತೇವೆ.

ಮಲಯಾಳಂ ಸಾಹಿತ್ಯದಲ್ಲಿ ನೈತಿಕತೆಯ ಸ್ಥಾನವೇನು ಎಂಬ ಪ್ರಶ್ನೆಗೆ ಈ ಕಾದಂಬರಿಯೇ ಉತ್ತರವಾಗಿದೆ. ವಿಧಿ-ನಿಷೇಧಗಳು, ಸಂಪ್ರದಾಯ- ಹೊಸಹಾದಿಗಳ ತೊಡಕಿಲ್ಲದ ನೈತಿಕತೆಯು ಇದರೊಳಗೆ ಹಬ್ಬಿಕೊಂಡಿದೆ. ಸಂವೇದನೆಯ ಸೂಕ್ಷ್ಮತೆಗೆ ಕೊಡುವ ಮಹತ್ವದಲ್ಲಿ, ನೋವಿಗೆ ಸ್ಪಂದಿಸುವ ಸೂಕ್ಷ್ಮತೆಯಲ್ಲಿ, ಇತರರ ನೋವನ್ನು ಅಲಕ್ಷಿಸುವ ವಿಷಯದ ಬಗೆಗಿನ ತಿರಸ್ಕಾರದಲ್ಲಿ ಈ ನೈತಿಕತೆಯ ಸಾನ್ನಿಧ್ಯವಿದೆ. ಹೆಣ್ಣಿನ ಸ್ವಾತಂತ್ರ್ಯದ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳನ್ನು ಸಮರ್ಥಿಸುವ ಕೃತಿಗಳೇ ಹೊರಬರುತ್ತಿರುವ ಹೊತ್ತಿನಲ್ಲಿ ಸ್ವೇಚ್ಛೆಯು ಬದುಕನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ವಿವೇಕದ ಹಾದಿ ಎಂದು ಮನಗಾಣಿಸಿದ ಈ ಕಾದಂಬರಿಯು ಮಲಯಾಳಂ ಸಾಹಿತ್ಯದ ಅನನ್ಯ ಕೃತಿಯಾಗಿದೆ. ಮಕ್ಕಳನ್ನು ಕರೆದುಕೊಂಡು ಅಕ್ಕನ ಮನೆಗೆ ಬರಿಗೈಯಲ್ಲಿ ಬಂದ ಸಂದರ್ಭದಲ್ಲಿ ಮಗನ ವಿದ್ಯಾಭ್ಯಾಸ, ತೋಟ ಗದ್ದೆಗಳು, ಮಗಳ ಮದುವೆಯ ಜವಾಬ್ದಾರಿಯನ್ನು ನಿಭಾಯಿಸಿದ ನಂಗೇಮನ ಮನದಲ್ಲಿ ಹಳಹಳಿಕೆ, ಕೊರಗುಗಳು ಇದ್ದರೂ ಬದಲಾದ ಸಂದರ್ಭವನ್ನು ಅರ್ಥಮಾಡಿಕೊಂಡು, ಪರಿಸ್ಥಿತಿಯೊಂದಿಗೆ ಹೊಂದಿಕೊಂಡು ಸಮಾಧಾನವನ್ನು ತಂದುಕೊಳ್ಳಲು ಬಯಸುವ ಮನೋಭಾವವು ಮುಖ್ಯವಾಗುತ್ತದೆ. ಗಂಡು ಹೆಣ್ಣುಗಳ ನಡುವಿನ ಸಂಬಂಧಗಳ ಸಂಕೀರ್ಣತೆ, ವಿಷಮ ದಾಂಪತ್ಯ, ವ್ಯಕ್ತಿಯನ್ನು ಕ್ರೂರವೂ, ನಿರ್ದಯವೂ ಆಗಿ ನಡೆಸಿಕೊಳ್ಳುವ ವ್ಯವಸ್ಥೆ, ಸಣ್ಣಪುಟ್ಟ ಕನಸುಗಳನ್ನು ನನಸಾಗಿಸಲು ಸಾಧ್ಯವಾಗದ ಜನಸಾಮಾನ್ಯರ ದಿನನಿತ್ಯದ ಬದುಕು, ಅಮೂರ್ತ ಕ್ರೌರ್ಯ, ತಲ್ಲಣ, ಭೀತಿ, ವಿಷಾದ, ಒಂಟಿತನ, ಉದ್ವಿಗ್ನತೆ, ಸಾವಿನ ಆಘಾತ ಮತ್ತು ಪರಿಣಾಮಗಳನ್ನು ಬೆಸೆದು ಹೆಣೆದ ಕಾದಂಬರಿಯು ತನ್ನ ಆದ್ರ್ರತೆಯೊಂದಿಗೆ ಮನಮುಟ್ಟುತ್ತದೆ. ನೈತಿಕಪ್ರಜ್ಞೆಗೆ ಪೂರಕವಾಗಿ ದುಡಿಸಿಕೊಳ್ಳುತ್ತದೆ. ಪ್ರಗತಿಶೀಲ ಮನೋಭಾವದ ಗಟ್ಟಿ ಹೇಳಿಕೆಗಳ, ‘ಇದಮಿತ್ಥಂ’ ಎಂಬ ತೀರ್ಪುಗಳನ್ನು ಕೊಡುವ ಹೆಚ್ಚಿನ ಮಲಯಾಳಂ ಕೃತಿಗಳ ನಡುವೆ ಮನುಷ್ಯನ ಹೃದಯದಲ್ಲಿ ಗಾಢವಾಗಿ ಪುಟಿಯುವ ಪ್ರೀತಿಯ ಬಯಕೆಯ ಪಾವಿತ್ರ್ಯವನ್ನು ಎತ್ತಿ ಹಿಡಿಯುವ ಕಾದಂಬರಿಯಲ್ಲಿ ಅಬ್ಬರದ ದನಿಯಲ್ಲ. ಸುಧಾರಣೆಯ ಆವೇಶವಾಗಲೀ ಸಮಾಜದ ಅಂಧಶ್ರದ್ಧೆಗಳ ಬಗ್ಗೆ ಆಕ್ರೋಶವಾಗಲೀ ಇಲ್ಲ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಒಂದು ಕಾಲದ ಜೀವನಕ್ರಮವನ್ನು ಹಿಡಿದಿಡುವ ಕಾದಂಬರಿಯು ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ವಿಶ್ಲೇಷಿಸುತ್ತದೆ. ಹಿಂದಿನ ತಲೆಮಾರಿನ ಬದುಕಿನ ಅಧ್ಯಯನದ ಮೂಲಕ ಶಾಶ್ವತವಾದ ಜೀವನಸೂತ್ರಗಳನ್ನು ಕಂಡುಕೊಂಡಿರುವ ಕಾದಂಬರಿಯು ಸಂಪ್ರದಾಯ ನಿಷ್ಠ ನಂಬೂದಿರಿ ಸಮಾಜದಲ್ಲಿ ಬದುಕುವ ಹೆಣ್ಣಿನ ಪರಿಸ್ಥಿತಿಯನ್ನು ಅತ್ಯಂತ ಕಾಳಜಿಯಿಂದ, ನಿಷ್ಠೆಯಿಂದ ಚಿತ್ರಿಸುತ್ತಾ ಅದರಲ್ಲಿನ ಒಳಿತನ್ನು ಸ್ವೀಕರಿಸುವುದರೊಂದಿಗೆ ಜಡತ್ವವನ್ನು ಪ್ರಶ್ನಿಸುತ್ತದೆ.

ನಂಗೇಮ ಮತ್ತು ನಕ್ಸಲರ ನಾಯಕ ಪೌಲೋಸ್ ಕಲ್ಪಿತ ಪಾತ್ರಗಳಲ್ಲ. ಇಬ್ಬರನ್ನೂ ಹತ್ತಿರದಿಂದ ಬಲ್ಲ ಲೇಖಕಿಯು ತನ್ನ ಬರವಣಿಗೆಗೆ ಬೇಕಾದ ಆಕರಗಳನ್ನು ಅವರಲ್ಲಿ ಕಂಡುಕೊಂಡಿರುವುದರಿಂದ ಈ ಕಾದಂಬರಿಗೆ ಒಂದು ಮಟ್ಟದ ಅಧಿಕೃತತೆಯು ದೊರಕಿದೆ. ನಂಗೇಮನ ಕೈಯಿಂದ ಅನ್ನ ತಿಂದ ಪೌಲೋಸನು ಆಕೆಯ ಬಾವನ ಕಣ್ಣೆದುರೇ ಭತ್ತವನ್ನು ಎತ್ತಿಕೊಂಡು ಹೋಗುವ ಸಂದರ್ಭವು ಹೊರಜಗತ್ತಿನ ಸೂಕ್ಷ್ಮರೂಪವಾಗಿ ಕಂಡುಬರುತ್ತದೆ. ಆಕೆಯ ಯಶಸ್ಸಿನ ಸಂಕೇತವಾದ ಬೀಗದ ಕೀಲಿಗಳ ಗೊಂಚಲನ್ನು ಕಾಣುವಾಗ ಮುಂದೆ ಬರಲಿರುವ ವಿಪತ್ತುಗಳ ಸಂಕೇತವಾಗಿ ಕಾಣುತ್ತದೆ. ಪೌಲೋಸನ ತಂಡದ ಮೂಲಕ ಉಂಟಾಗಬಹುದಾದ ಅಪಾಯವನ್ನು ಊಹಿಸಿ ಮನೆಯನ್ನು ಬಿಟ್ಟು ಹೋಗುವ ಸೊಸೆಯ ಬಳಿ ನಂಗೇಮನು “ನನ್ನ ಕುಸಿದ ಹೆಗಲುಗಳಲ್ಲಿ ಹೊಸ ಭಾರವನ್ನು ಹೊರಿಸಬೇಡ (ಪುಟ 209) ಎನ್ನುವಲ್ಲಿ ಆಕೆಯ ಬದುಕಿನ ದಣಿವು ಮತ್ತು ಸೋಲಿನ ಭಾವವು ವ್ಯಕ್ತವಾಗುತ್ತದೆ. ಆರಕ್ಷಕರಿಗೆ ಪೌಲೋಸನನ್ನು ತೋರಿಸಿ ಕೊಟ್ಟು ಆಕೆಗೆ ಎಲ್ಲ ಸಮಸ್ಯೆಗಳಿಂದ ಪಾರಾಗಬಹುದಿತ್ತು. ಆದರೆ ಆತನ ಗೆಳೆಯನಾದ ತನ್ನ ಮಗನ ಮುಂದೆ ತಪ್ಪಿತಸ್ಥಳಂತೆ ತಲೆ ತಗ್ಗಿಸಲು ಇಷ್ಟವಿಲ್ಲದೆ ಆಕೆಯು ಪೌಲೋಸನಿಗೆ ಉಣಬಡಿಸಿ ಕಳುಹಿಸುತ್ತಾಳೆ. “ಅಪ್ಪು, ಇವತ್ತು ಸರಿಯಾಗಿ ನಾನು ನಿನ್ನ ತಾಯಿಯಾದೆ. ಒಮ್ಮೆ ಕೈ ತೋರಿದ್ದರೆ, ಒಂದು ಉಸಿರು ಖರ್ಚು ಮಾಡಿದ್ದರೆ ನನಗವನನ್ನು ಆಚೆಕರೆಯಲ್ಲಿ ನೆಲೆಯೂರಿರುವ ಸೈನ್ಯಕ್ಕೆ ಹಿಡಿದೊಪ್ಪಿಸಬಹುದಾಗಿತ್ತು. ನಿನ್ನನ್ನು ಆವರಿಸಿದ ಕಪ್ಪು ನೆರಳಿನಿಂದ ನಿನ್ನನ್ನು ದೂರ ಮಾಡಬಹುದಾಗಿತ್ತು. ಆದರೆ ನೀನು ನನಗೆ ಎಂದೆಂದೂ ಕಳೆದು ಹೋಗುತ್ತಿದ್ದೆ. ನಾನು ನಿನ್ನ ಅಮ್ಮನಲ್ಲವಾಗಲು ಬಯಸುವುದಿಲ್ಲ” (ಪುಟ 247) ಎಂಬ ಸಾಲುಗಳು ಆಕೆಯ ಅಸಾಧಾರಣ ಮಾನವೀಯ ಗುಣಗಳನ್ನು ಸೆರೆ ಹಿಡಿಯುತ್ತವೆ. ಮಾನವನ ವಿಚ್ಛಿದ್ರಕಾರಿ ಪ್ರವೃತ್ತಿಯನ್ನು, ಮೌಲ್ಯಗಳ ಕಡೆ ತೋರುವ ತಿರಸ್ಕಾರಗಳನ್ನು ವಿಷಾದ ಬೆರೆತ ಧಾಟಿಯಲ್ಲಿ ವಿವರಿಸುತ್ತಾ ಬದುಕಿನ ಕ್ರೂರ ವಾಸ್ತವಗಳನ್ನು ನಿರೂಪಿಸುತ್ತದೆ. ವ್ಯಕ್ತಿಗತ-ಸಾಮಾಜಿಕ ಅನುಭವಗಳನ್ನು ಹಿಡಿದಿಡುತ್ತದೆ. ಮೊದಲ ಓದಿಗೆ ಸುಲಭವಾಗಿ ತೆರೆದುಕೊಳ್ಳದೆ ತುಸು ವ್ಯವಧಾನದ ಓದನ್ನು ಬೇಡುವ ಕಾದಂಬರಿಯು ಎಲ್ಲೂ ಉದ್ವೇಗಕ್ಕೊಳಗಾಗದಿರುವುದರಿಂದ ಸಂಯಮವನ್ನು ರೂಢಿಸಿಕೊಂಡಿದೆ. ಕುರೂಪಗೊಂಡ ಬದುಕಿನ ರೀತಿನೀತಿ, ಜೀವನದೃಷ್ಟಿ, ಮೌಲ್ಯ, ಭಾವನೆ, ಇಳಿಮುಖವಾಗುತ್ತಿರುವ ಮನುಷ್ಯನ ಮನಸ್ಸು, ಆಧುನಿಕ ತಲೆಮಾರಿನ ವಿರೋಧಾಭಾಸಗಳನ್ನು ಅನಾವರಣಗೊಳಿಸುತ್ತದೆ. ದಾಂಪತ್ಯದ ಅರ್ಥ, ಕಷ್ಟ ನಿಷ್ಠುರದಿಂದ ಕೂಡಿದ ಬಾಳುವೆ, ವಾತ್ಸಲ್ಯದ ಹಿಂದಿನ ಜೀವನದರ್ಶನ, ಮತ್ತು ಜೀವನಪ್ರೀತಿಯನ್ನು ಜೀವದ್ರವ್ಯವಾಗಿಸಿಕೊಂಡ ಕಾದಂಬರಿಯ ಪದ ಸಂಪತ್ತು, ಧ್ವನಿ, ಸತ್ವಯುತವಾದ ಭಾಷೆ, ನಿರೂಪಣೆಗಳು ಗಮನವನ್ನು ಸೆಳೆಯುವ ಕಾದಂಬರಿಯಲ್ಲಿ ಸಾಂಸಾರಿಕ ವಿರಸಕ್ಕಿಂತ ಬೇರೆಯಾದ ಅನುಭವಗಳೂ ಸೇರಿಕೊಳ್ಳುವುದರಿಂದ ತನ್ನೆಲ್ಲ ಸಂಕೀರ್ಣತೆಯೊಂದಿಗೆ ಮನಸ್ಸನ್ನು ತಟ್ಟುತ್ತದೆ. ಒಂದೇ ಆಶಯಕ್ಕೆ ಕಟ್ಟು ಬೀಳದೆ ಸಮಸ್ಯೆಯ ಹಲವು ಮಗ್ಗುಲುಗಳನ್ನು ಗಮನಿಸುವ ಲೇಖಕಿಯು ಹೆಣ್ಣಿನ ಬವಣೆಗೆ ಮಾತ್ರ ಮೀಸಲಾಗದೆ ಎಲ್ಲರ ಸಮಸ್ಯೆಗಳನ್ನು ಹಲವು ನೆಲೆಗಳಲ್ಲಿ ಕಾಣಿಸುತ್ತಾರೆ. ಹೆಣ್ಣಿನ ಸಂಕಷ್ಟಗಳ ಬಗ್ಗೆ ಮಾತ್ರ ಬರೆಯುತ್ತಾ ಸರಳೀಕೃತ, ಏಕಮುಖಿಯಾದ ಪುರುಷವಿರೋಧಿ ನೆಲೆಗಳನ್ನು ಮುಟ್ಟಲು ಹಾತೊರೆಯದೆ ಬದುಕಿನ ವಿರಸದ ಕ್ಷಣಗಳನ್ನು, ಸಂಪ್ರದಾಯದ ಸರಪಳಿಯನ್ನು ಮೀರುವ ದಿಟ್ಟ ಹೆಣ್ಣನ್ನು ತೋರುತ್ತಾರೆ. ಜನಜೀವನದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ ಲೇಖಕಿಯು ಬದುಕಿನ ಕುರಿತು ಸಕಾರಾತ್ಮಕ ನೋಟದಿಂದ ಮನುಜವರ್ಗವನ್ನು ಕುರಿತ ಮುಖ್ಯ ಸೂತ್ರಗಳನ್ನು ಸಾಧಿಸುತ್ತಾರೆ. ಜೀವನವೆಂಬುದು ಅಸಂಖ್ಯ ಬಣ್ಣ, ವಾಸನೆಗಳಿಂದ ಕೂಡಿರುವುದೆಂಬ ಗ್ರಹಿಕೆ, ಮಾನವೀಯ ಸಂಬಂಧಗಳ ಹಿಂದೆ ಹಲವು ಬಗೆಯ ಒತ್ತಡಗಳಿರುತ್ತವೆ ಎಂಬ ಗಾಢವಾದ ತಿಳುವಳಿಕೆ, ಯಾವುದೇ ವ್ಯಕ್ತಿಯ ಬದುಕಿನ ಸಾಫಲ್ಯದ ಪ್ರಶ್ನೆಯು ಎಲ್ಲಾ ಜೀವಿಗಳ ಮತ್ತು ವರ್ಗಗಳ ಸಂಬಂಧಗಳ ಪ್ರಶ್ನೆಗಳೇ ಆಗಿರುತ್ತವೆ ಎಂಬ ಅರಿವು ಇಲ್ಲಿ ಕೆಲಸ ಮಾಡಿದೆ. ಪಾತ್ರಗಳಲ್ಲಿ ಉಕ್ಕುವ ಮಾನವೀಯ ಸಂವೇದನೆಗಳು ಲೇಖಕಿಯೊಳಗಿನ ಜೀವನ ಪ್ರೀತಿಯಿಂದ ಮೂಡಿ ಬಂದಿವೆ. ಕಾದಂಬರಿಯೊಳಗಿನಿಂದಲೇ ತತ್ವ ಅರಳಿ ಜೀವನದ ರೀತಿಯಾಗುವ ಕ್ರಮವು ಪರಿಣಾಮಕಾರಿಯಾಗಿದೆ.

ಬಾಂಧವ್ಯದ ಸುಖವು ಇಲ್ಲದಾಗುತ್ತಿರುವುದರ ಕುರಿತು ಗಾಢ ವಿಷಾದವನ್ನು ಕಟ್ಟಿಕೊಡುವ ಕಾದಂಬರಿಯು 1920ರಿಂದ 70ರ ದಶಕದವರೆಗಿನ ವ್ಯಾಪ್ತಿಯನ್ನು ಹೊಂದಿದ್ದರೂ ಅದರಲ್ಲಿ ಅಡಕಗೊಂಡಿರುವ ವಿಚಾರಗಳು ಈಗಿನ ಸಮಾಜವು ಎದುರಿಸುತ್ತಿರುವ ದೈನಂದಿನ ಆಗುಹೋಗುಗಳು, ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತದೆ. ನೈತಿಕ ಅಧಪತನದ ಕಡೆ ಬೊಟ್ಟು ಮಾಡುತ್ತದೆ. ಹಳ್ಳಿಯ ಬದುಕನ್ನು ವೈಭವೀಕರಿಸುವ ರಚನೆಗಳೇ ತುಂಬಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಕಾದಂಬರಿಯು ಮಧ್ಯಮ ವರ್ಗದವರ ತಲ್ಲಣ ಮತ್ತು ಬಡವರ ಸಂಕಷ್ಟಗಳನ್ನು ಚಿತ್ರಿಸುತ್ತಾ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುತ್ತವೆ. ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದವು ಭದ್ರವಾಗಿ ನೆಲೆಗೊಂಡ ನಂತರ ರೂಪುಗೊಂಡ ಈ ಕಾದಂಬರಿಯು ಯಾವುದೇ ಸಿದ್ದಾಂತಕ್ಕೆ ಕಟ್ಟುಬಿದ್ದಿಲ್ಲ. ಗಂಡು ಹೆಣ್ಣಿನ ಸಂಘರ್ಷ, ಸಾಮುದಾಯಿಕ ತಿಕ್ಕಾಟಗಳು ಸೈದ್ಧಾಂತಿಕ ಸ್ವರೂಪದ್ದಾಗಿಲ್ಲ. ನಂಬೂದಿರಿ ಹೆಣ್ಣೊಬ್ಬಳ ಏಳುಬೀಳಿನ ಕತೆಯಾದರೂ ಇಡೀ ಸಮಾಜದ ಸಂವೇದನೆಯಾಗಿ ರೂಪುಗೊಂಡಿದ್ದು ಬದುಕಿನ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ನೆಲೆಗಳನ್ನು ಗ್ರಹಿಸುವಲ್ಲಿ ಯಶಸ್ವಿಯಾಗಿರುವ ಕಾದಂಬರಿಯಲ್ಲಿ ಮೂಡಿದ ಗಟ್ಟಿ ಪಾತ್ರಗಳು, ಸಾಂದ್ರ ಅನುಭವ, ಬದುಕಿನ ಸಮಸ್ಯೆಗಳು, ಹುರುಳಿಲ್ಲದ ವಿಚಾರಗಳ ವಿರುದ್ಧ ಎತ್ತುವ ಪ್ರಶ್ನೆಗಳು, ಬದುಕಿನ ತತ್ವಗಳು ಮುಖ್ಯವಾಗುತ್ತವೆ. ಪಳಗಿದ ಬರವಣಿಗೆಯಲ್ಲಿ ಪ್ರಬುದ್ಧ ಮನಸ್ಸನ್ನು ಕಾಣುತ್ತೇವೆ.

ನಂಗೇಮನ ಮೂಲಕ ಒಂದು ಕಾಲಧರ್ಮ ಮತ್ತು ಯುಗಧರ್ಮವನ್ನು ಹೊಳೆಯಿಸುವುದರಲ್ಲಿ ಯಶಸ್ವಿಯಾಗಿರುವ ಕಾದಂಬರಿಯು ವ್ಯಕ್ತಿಚರಿತೆಯಾಗಲಿಲ್ಲ ಎಂಬುದು ಇಲ್ಲಿನ ಹೆಚ್ಚುಗಾರಿಕೆಯಾಗಿದೆ. ಸ್ವಾತಂತ್ರ್ಯಪೂರ್ವ ಕಾಲದ ಜೀವನಕ್ರಮ, ಮೌಲ್ಯ ವ್ಯವಸ್ಥೆ, ತಲ್ಲಣಗಳು, ಎಪ್ಪತ್ತರ ದಶಕದ ನಕ್ಸಲ್‍ವಾದಿ ಚಳುವಳಿಯ ಪ್ರಭಾವವನ್ನು ಉಚಿತ ಪ್ರಮಾಣದಲ್ಲಿ ಒಳಗೊಂಡಿರುವ ಕೃತಿಯು ಸಾಮಾಜಿಕ ಪಲ್ಲಟಗಳ ನಡುವೆ ಮನುಷ್ಯನ ವ್ಯಕ್ತಿತ್ವ ಮತ್ತು ಬಾಳುವೆಯು ರೂಪುಗೊಂಡ ಬಗೆಯನ್ನು ತಟಸ್ಥ ನೆಲೆಯಲ್ಲಿ ವಿವರಿಸುತ್ತದೆ. ಸಾತ್ವಿಕವಾದದ್ದು ದುರ್ಬಲವಾಗಿರಬೇಕಾಗಿಲ್ಲ ಎಂಬುದನ್ನು ಉದಾಹರಣೆ ಸಮೇತ ತೋರಿಸಿಕೊಡುತ್ತದೆ. ಒಳಗಿನ ದೌರ್ಬಲ್ಯ ಮತ್ತು ಹೊರಗಿನ ಆಕ್ರಮಣಶೀಲತೆಗಳು ಸಂಧಿಸುವ ಕ್ಷಣಗಳನ್ನು ಸೆರೆ ಹಿಡಿಯುತ್ತದೆ. ನಂಗೇಮನ ವೈವಿಧ್ಯಮಯ ಚಟುವಟಿಕೆಗಳನ್ನು ಕಾರ್ಯಕರ್ತರ, ಕೂಲಿಯಾಳುಗಳ, ಆದಿವಾಸಿಗಳಾದ ಕೊರಚರ ಬಡತನ, ಅಸಹಾಯಕತೆಗಳೊಂದಿಗೆ ದಾಖಲಿಸುವ ಕಾದಂಬರಿಯಲ್ಲಿ ಪೂರ್ತಿ ದುಷ್ಟರಲ್ಲದ, ಪ್ರೇಮಿಗಳಾದರೂ ಪ್ರೀತಿಯನ್ನು ಸರಿಯಾಗಿ ವ್ಯಕ್ತಪಡಿಸಲಾರದ, ದಾಂಪತ್ಯವನ್ನು ಸರಿಯಾಗಿ ನಿರ್ವಹಿಸಲಾರದ, ಸಂಬಂಧಗಳನ್ನು ನಿರ್ವಹಿಸಲಾರದ ಸಂಕೀರ್ಣ ಪಾತ್ರಗಳು ಇವೆ. ಸಂಬಂಧಗಳು ಗೋಜಲಾಗಿದ್ದರೂ ಪಾತ್ರಗಳ ಗುರಿ ಮತ್ತು ನಿಲುವು ಸ್ಪಷ್ಟವಾಗಿದೆ. ಹೇಳಿಕೊಳ್ಳುವಂಥ ಕತೆ ಇಲ್ಲದಿದ್ದರೂ ಜೀವನಾನುಭವದ ಚಿತ್ರಣವಿದೆ. ಕಥನದ ಹಿಂದಿನ ಐತಿಹಾಸಿಕ, ಸಾಂಸ್ಕøತಿಕ, ರಾಜಕೀಯ ಮತ್ತು ಆರ್ಥಿಕ ಕಾರಣಗಳನ್ನು ಓಘ ಮತ್ತು ಓಟಗಳಿಗೆ ಅಡ್ಡಿ ಬಾರದಂತೆ ಮಂಡಿಸುವ ಕಾದಂಬರಿಯು ಲೇಖಕಿಯ ಪ್ರತಿಭೆ ಮತ್ತು ನಿರೂಪಣ ಕೌಶಲ್ಯದಿಂದಾಗಿ ಹೆಣ್ಣಿನ ಬದುಕಿನ ಹೋರಾಟದ, ಬವಣೆಯ ಪರಿಣಾಮಕಾರಿ ಕಥನವೆನಿಸಿಕೊಳ್ಳುತ್ತದೆ. ಸಿಟ್ಟು, ನಿರಾಶೆ ಮತ್ತು ಅವಮಾನದ ಭಾವಗಳನ್ನು ಮೀರಿ ಬೆಳೆಯುವ ಆಕೆಯ ಬದುಕಿನಲ್ಲಿ ಒಂದು ತತ್ವಜ್ಞಾನ ಮತ್ತು ಜೀವನದರ್ಶನ ಮೂಡಿ ಬಿಡುತ್ತದೆ. ಹೆಣ್ಣು ಬರೇ ಮಾಂಸಲ ಶರೀರ ಮತ್ತು ಕಣ್ಣೀರಿನ ಸಂಕೇತವಾಗಿರದೆ ಬದುಕಿನ ಹೋರಾಟದ ಪ್ರತೀಕವಾಗಿ ಮೂಡಿ ಬರುತ್ತಾಳೆ. ಇದು ನಿರ್ದಿಷ್ಟ ಕಾಲದ, ಊರಿನ, ಸಮುದಾಯದ ಸ್ಥಿತಿಗತಿಗಳಿಗೆ ಲೇಖಕಿಯ ಪ್ರತಿಕ್ರಿಯೆಯೂ ಹೌದು. ಕ್ರಿಯಾತ್ಮಕ, ವಿಮರ್ಶಾತ್ಮಕ ಪ್ರತಿಸ್ಪಂದನೆಯೂ ಹೌದು.

ಮಲಯಾಳಂ ಸಾಹಿತ್ಯದ ಉತ್ತಮ ಕಾದಂಬರಿಗಳಲ್ಲಿ ಒಂದಾಗಿರುವ ‘ಆಗ್ನೇಯ’ವನ್ನು ಭಾಷಾಂತರಿಸುವಾಗ ಮೋಹನ ಕುಂಟಾರ್ ಅವರು ಮೂಲ ಕೃತಿಯ ಶೈಲಿಯನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಪದಕ್ಕೆ ಪದವಿಟ್ಟು ವಾಕ್ಯಗಳನ್ನು ಅನುವಾದ ಮಾಡಿದರೂ ಕಾದಂಬರಿಯು ಕೃತಕವೆನಿಸದೆ ಮೂಲದಂತೆ ಕಾವ್ಯಾತ್ಮಕವಾಗಿ, ಕಲಾತ್ಮಕವಾಗಿ ಮತ್ತು ಸೃಜನಶೀಲವಾಗಿ ಓದಿಸಿಕೊಳ್ಳುತ್ತದೆ. ಹೊಸ ಪದಗಳನ್ನು ಸೇರಿಸದೆ, ಕೈಬಿಡದೆ ಅನುವಾದಿಸಿದ್ದರೂ ಕುಂಟಾರ್ ಅವರ ಇತರ ಕೃತಿಗಳ ಕೆಲವೆಡೆಗಳಲ್ಲಿ ಕಾಣಿಸಿಕೊಳ್ಳುವ ಕೃತಕತೆ ಮತ್ತು ಅಸಹಜತೆಗಳು ಇಲ್ಲಿ ತಲೆದೋರುವುದಿಲ್ಲ. ಮೂಲ ಲೇಖಕರ ಶೈಲಿ, ನಮ್ಮದಲ್ಲದ ಸಂಸ್ಕøತಿಯ ಪರಿಚಯವಾಗಲು ಅಡ್ಡಿಯು ಉಂಟಾಗುವುದಿಲ್ಲ. ಮಲಯಾಳಂ ಭಾಷೆಯ ಕೃತಿಯು ಕನ್ನಡದ ಕೃತಿಯಾಗಿ ಅನುವಾದಗೊಳ್ಳುವುದಕ್ಕಿಂತಲೂ ಮಲಯಾಳಂ ಕೃತಿಯಾಗಿ ಅನುವಾದಗೊಳ್ಳಬೇಕೆಂಬ ಕುಂಟಾರ್ ಅವರ ಧೋರಣೆಗೆ ಬದಲಾಗಿ ಇದು ಕನ್ನಡದ ಕೃತಿಯಾಗಿ ಉಳಿದುಕೊಳ್ಳುವ, ಮೂಲದ ಧ್ವನಿಶಕ್ತಿಯನ್ನು ಯಥಾವತ್ತಾಗಿ ವ್ಯಕ್ತಪಡಿಸುವ ರೀತಿಯಿಂದಲೂ ಗಮನಾರ್ಹವೆನಿಸುತ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಪಿ. ವತ್ಸಲಾ ಅವರ ‘ಆಗ್ನೇಯ’”

  1. Chintamani Sabhahit

    ಒಬ್ಬ ವಿಧವೆಯ ಅಸಹನೀಯ ಬಾಳುವೆಯಲ್ಲಿ, ಸಮಾಜದ ಅನೇಕ ಕಟ್ಟಳೆ, ನಿಷಿಧ್ಧತೆ, ಬಾಧ್ಯ ಸವಾಲುಗಳ ವಾಸ್ತವವನ್ನು ಎದುರಿಸುತ್ತ, ‘ಜೀವನ ಪ್ರೀತಿಯ ಛಲದಲ್ಲಿ, ‘ತತ್ವ ಅರಳಿ ಜೀವನ ರೀತಿ’ಯಾಗುವ ಕ್ರಮ, ನಂಗೇಮನ ಬದುಕಿನ ಕಥೆ – ಆಗಬಹುದಾದ ವ್ಯಥೆಯನ್ನು ತಪ್ಪಿಸಿ, ತನ್ನ ಮಗನಿಗೆ ‘ನಾನು ನಿನ್ನ ಅಮ್ಮನಲ್ಲನಾಗಲು ಬಯಸುವದಿಲ್ಲ’ ಅನ್ನುವಾಗ ನಿಚ್ಚಳವಾಗಿ, ನಂಗೇಮ ‘ಆಗ್ನೇಯ’ (ಅಗ್ನಿಯಿಂದಲೇ ಹುಟ್ಟಿದ್ದು) ವಾಗುತ್ತಾಳೆ.

    ‘ಮಲಯಾಳಂ ಕೃತಿಯಾಗಿ ಅನುವಾದಗೊಳ್ಳಬೇಕೆಂಬ ಕುಂಟಾರ್ ಅವರ ಧೋರಣೆಗೆ ಬದಲಾಗಿ ಇದು ಕನ್ನಡದ ಕೃತಿಯಾಗಿ ಉಳಿದುಕೊಳ್ಳುವ, ಮೂಲದ ಧ್ವನಿಶಕ್ತಿಯನ್ನು ಯಥಾವತ್ತಾಗಿ ವ್ಯಕ್ತಪಡಿಸುವ ರೀತಿಯಿಂದಲೂ ಗಮನಾರ್ಹವೆನಿಸುತ್ತದೆ.’- ಪ್ರಾಯಶಃ!

    ಪಿ. ವತ್ಸಲಾ ಅವರ, ವಾಸ್ತವಿಕವಾಗಿ ಉಲ್ಲೇಖನೀಯ ಮಲಯಾಳಂ ಸಾಹಿತ್ಯ ಕೃತಿಯನ್ನು, ಕುಂಟಾರರ ಮೂಲಕ ಕನ್ನಡಕ್ಕೆ ತಲುಪಿಸುವಲ್ಲಿ, ಪಟ್ಟಾಜೆಯವರ ಈ ಪ್ರಾಸ್ತಾವಿಕ ನೋಟ, ಸೂರ್ಯನ ಬೆಳಕಿನಲ್ಲಿ ಮೂಡುವ, ಸರೋವರದ ಕದಡದ ಒಳ ಮೈಯಷ್ಟೇ ತಿಳಿಯಾಗಿದೆ.

    ಮೂವರಿಗೂ ಅಭಿನಂದನೆಗಳು!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter