ಮೂರು ವರ್ಷಗಳ ನಂತರ ಮತ್ತೆ ಊರಿಗೆ ಬರುತ್ತಿದ್ದೇನೆ. ಆಫೀಸಿಗೆ ಅಮ್ಮ ಆಗಾಗ ಫೋನ್ ಮಾಡುತ್ತಲೇ ಇದ್ದಳು. ಬರಲು ಸಮಯ ಸಿಗ್ತಿಲ್ಲ ಎಂಬುದೇ ನನ್ನ ಉತ್ತರವಾಗಿತ್ತು. ಕೆಲಸದ ಒತ್ತಡದಿಂದಾಗಿ ಕೆಲವೊಮ್ಮೆ ಫೋನ್ ತೆಗೆಯುತ್ತಲೂ ಇರಲಿಲ್ಲ. ಹೀಗಿದ್ದಾಗ ಒಂದು ದಿನ ಕಾಗದ ಬಂತು. ಬಿಡಿಸಿ ನೋಡಿದರೆ ಅಮ್ಮನದ್ದೇ ಕೈಬರಹ.
“ನಾಡಿದ್ದು ಪೆರಡಾಲ ದೇವಸ್ಥಾನದಲ್ಲಿ ಜಾತ್ರೆ. ನಿಂಗೆ ಉದ್ಯೋಗ ಸಿಕ್ಕಿದಾಗ ರುದ್ರಾಭಿಷೇಕ ಮಾಡಿಸ್ತೇನೆ ಅಂತ ಭಾವಿಸಿದ್ದೆ. ಆಮೇಲೆ ನೀನೊಮ್ಮೆಯೂ ಇತ್ತ ಬರಲಿಲ್ಲ. ಸಾಧ್ಯವಾದ್ರೆ ಒಮ್ಮೆ ಬಂದು ಹೋಗು”
ಆ ದಿನವೇ ಅಧಿಕೃತರ ಬಳಿ ಮೂರು ದಿನಗಳ ರಜೆ ಕೋರಿ ಅಲ್ಲಿಂದ ಹೊರಟೆ. ಬಸ್ಸಿನಿಂದಿಳಿದು ಮನೆ ಸೇರಿದಾಗ ಮೊದಲು ಕಣ್ಣಿಗೆ ಬಿದ್ದದ್ದು ಅಮ್ಮ. ತಂತಿಯ ಮೇಲೆ ಬಟ್ಟೆಯನ್ನು ಒಣಗಲು ಹಾಕುತ್ತಿದ್ದವಳಿಗೆ ನಾನು ಬಂದು ನಿಂತದ್ದೇ ಗೊತ್ತಾಗಲಿಲ್ಲ. ಬ್ಯಾಗನ್ನು ನೆಲದ ಮೇಲಿಟ್ಟು ‘ಅಮ್ಮಾ’ ಎಂದೆ. ಒಮ್ಮೆಲೆ ಎಚ್ಚೆತ್ತು ನನ್ನತ್ತ ನೋಡಿದ್ದೇ ತಡ ಇಷ್ಟಗಲ ಅರಳಿತು ಅವಳ ಮೋರೆ “ಬಂದ್ಯ ಮಗ? ಏಕಿಷ್ಟು ತಡ? ಬಸ್ಸು ಸಿಗ್ಲಿಲ್ವ?”
ನಾನು ಮಾತಿಲ್ಲದೆ ನೋಡುತ್ತಾ ನಿಂತಿದ್ದೆ ಅಮ್ಮನನ್ನು. ಅವಳ ಸಂಭ್ರಮ ಸಡಗರಗಳನ್ನು.
“ಕೈಕಾಲು ತೊಳ್ಕೊಂಡು ಬಾ. ಬಡಿಸ್ತೇನೆ. ಕೇನೆಗೆಡ್ಡೆ ಮೇಲೋಗರವುಂಟು” ಎನ್ನುತ್ತಾ ನೇರ ಅಡುಗೆ ಮನೆಗೆ ಹೋದಳು. ಕೈಕಾಲು ತೊಳೆದು ಊಟಕ್ಕೆ ಕುಳಿತಾಗ ಬಟ್ಟಲಲ್ಲಿ ತುಸು ಹೆಚ್ಚೇ ಅನ್ನವಿತ್ತು. ಜೊತೆಗೆ ಕೇನೆಗೆಡ್ಡೆಯ ಹೋಳುಗಳೂ. ಉಂಡು ಮುಗಿಯುವಲ್ಲಿವರೆಗೆ ಅಮ್ಮ ಜೊತೆಯಲ್ಲೇ ಇದ್ದಳು ನನಗೆ ಬಡಿಸುತ್ತಾ. ಊರಿನ ವಿಶೇಷಗಳನ್ನು ಹೇಳುತ್ತಾ. ಅದೂ ಇದೂ ಮಾತನಾಡುತ್ತಾ.
ಕೊನೆಯ ತುತ್ತನ್ನು ಉಣ್ಣುತ್ತಾ ನಾನು ಹೇಳಿದೆ “ನನ್ನ ವಿಚಾರ ಹೇಳೋದಕ್ಕಿಂತ ಹೇಳದಿರೋದೇ ಒಳ್ಳೇದಮ್ಮಾ. ತೀರಾ ಬೇಕಾದವರೊಬ್ಬರು ತೀರಿ ಹೋದ್ರು ಅಂತ ಸುಳ್ಳು ಹೇಳಿ ಇಲ್ಲಿಗೆ ಬರಬೇಕಾಯ್ತು. ಅದೂ ಮೂರು ದಿನಕ್ಕೆ” ಎನ್ನುವಾಗ ಅಮ್ಮನ ಮುಖದಲ್ಲಿ ಕಂಡೂ ಕಾಣದಂತೆ ಬೇಸರ ಮೂಡಿತು.
ನನ್ನ ಊಟವಾದ ಮೇಲೆ ಅಮ್ಮ ಸ್ನಾನಕ್ಕೆ ಹೋದಳು. ನಾನು ತೋಟದ ಕಡೆ ಹೆಜ್ಜೆ ಹಾಕಿದೆ. ಒಂದು ಕಾಲದಲ್ಲಿ ಹಸುರಿನಿಂದ ಕಂಗೊಳಿಸುತ್ತಿದ್ದ ತೆಂಗು, ಕಂಗು ಮತ್ತು ಬಾಳೆಗಳು ಹಳದಿ ಬಣ್ಣಕ್ಕೆ ತಿರುಗಿದ್ದವು. ಮರದ ಬುಡದಲ್ಲಿ ಅಡಿಕೆಗಳು ರಾಶಿ ಬಿದ್ದಿದ್ದವು. ತೋಟದ ಬುಡ ಬಿಡಿಸದೆ ವರ್ಷಗಳೆಷ್ಟಾದವೋ ಎಂದುಕೊಂಡು ಮುಂದೆ ಸಾಗುತ್ತಿದ್ದಂತೆ ಹರಿಯುವ ಹಳ್ಳದ ಕುಲುಕುಲು ನಾದ ಕಿವಿಯನ್ನು ತುಂಬತೊಡಗಿತು. ಹುಡುಗನಾಗಿದ್ದಾಗ ಚಡ್ಡಿ ಹಾಕಿಕೊಂಡು ರಾಜೇಶ, ಸತೀಶ, ಪ್ರವೀಣ, ಸಂದೀಪ ಮುಂತಾದವರೊಂದಿಗೆ ಈಜಾಡಿದ ಹಳ್ಳವನ್ನು ಕಾಣುವಾಗ ನನ್ನ ಮನಸ್ಸೇಕೆ ತಂಪಾಗುತ್ತಿಲ್ಲ? ನಾನು ಉದ್ಯೋಗಿಯಾಗಿರುವ ನಗರದಲ್ಲಿ ಒಮ್ಮೆಯೂ ಕಾಣಲು ಸಾಧ್ಯವಿಲ್ಲದಂಥ ಗುಡ್ಡ, ಪೊದೆ, ಬಿದಿರಿನ ಬುಡ, ಎಕ್ಕದ ಗಿಡ, ಈಟಿನ ಗೆಲ್ಲು ಮತ್ತು ದಾಸವಾಳದ ಗೊಂಚಲುಗಳನ್ನು ಕಂಡಾಗ ಎದೆಯೇಕೆ ಉಕ್ಕುವುದಿಲ್ಲ? ಅಮ್ಮನನ್ನು ಕಂಡಾಗ, ಅವಳು ಬಡಿಸಿದ ಅನ್ನ ಉಂಡಾಗ ಯಾಕೆ ತುಂಬಲಿಲ್ಲ ನನ್ನ ಕಣ್ಣು- ಕೊರಳು? ಯೋಚನೆಗಳು ಮುತ್ತುತ್ತಿದ್ದಂತೆ ವಿಚಿತ್ರವಾದ ಅಸ್ವಸ್ಥತೆಯು ಮೈಯನ್ನು ಹೊಕ್ಕು ನಿಧಾನವಾಗಿ ಅಂತರಂಗವನ್ನು ವ್ಯಾಪಿಸತೊಡಗಿತು.
ತೋಟದಲ್ಲಿ ಸುತ್ತಾಡಿ ಮನೆಗೆ ಬಂದಾಗ ಅಪ್ಪ ಚಾವಡಿಯಲ್ಲಿ ಕುಳಿತಿದ್ದರು. ದೇಶಾವರಿ ನಗೆ ಬೀರಿ “ಹ್ಞಾ! ಯಾವಾಗ ಬಂದೆ?” ಎಂದರು. “ಮಧ್ಯಾಹ್ನ” ಎಂದೆ. ಬಳಿಕ ಅಪ್ಪ ಲೆಕ್ಕಪತ್ರವನ್ನು ನೋಡುವುದರಲ್ಲಿ ಮಗ್ನರಾದರು. ಮೂರು ವರ್ಷಗಳ ಬಳಿಕ ಮಗ ಊರಿಗೆ ಬಂದಾಗ ಅಪ್ಪ ಮಾತನಾಡಿದ್ದು ಇಷ್ಟೇಯಾ ಎಂದು ಬೇಸರವೇನೂ ಆಗಲಿಲ್ಲ. ಸ್ವಂತ ಮಗನಾಗಿದ್ದುಕೊಂಡು ತನ್ನ ಕಡೆ ತಿರುಗಿಯೂ ನೋಡದಿದ್ದ ಮೇಲೆ ಯಾವ ಅಪ್ಪನಿಗೆ ತಾನೇ ಪ್ರೀತಿಯಿಂದ ಮಾತನಾಡಲು ಮನಸ್ಸು ಬಂದೀತು? ಎಂದುಕೊಂಡು ಸುಮ್ಮನಾದೆ. ಅಪ್ಪನ ದನಿಯಲ್ಲಿ ಹಿಂದಿನ ಗಡುಸಿಲ್ಲ. ಸ್ವಲ್ಪ ಕುಗ್ಗಿ ಹೋಗಿದ್ದಾರೆ. ನಗುವಿನಲ್ಲಿ ನೋವು ಬೆರೆತಿದೆ.
ರಾತ್ರಿಯ ಊಟವಾದ ಬಳಿಕ ಅಮ್ಮ ಮಾತಿಗೆ ಕುಳಿತಳು. ಎದುರು ಕುರ್ಚಿಯಲ್ಲಿ ಕುಳಿತಿದ್ದಅಪ್ಪ ಮಾತೇ ತಿಳಿಯದವರಂತೆ ಸುಮ್ಮನಿದ್ದರು. ಎರಡು ನಿಮಿಷ, ಮೂರು ನಿಮಿಷ, ಮತ್ತೂ ತುಸು ಹೊತ್ತು ಏರಿತು. ಮೌನ ಅಸಹನೀಯವೆನಿಸಿತು.
“ಬಂದಾಗಿನಿಂದ ನೋಡ್ತಾ ಇದ್ದೇನೆ. ಯಾಕೋ ಒಂಥರಾ ಇದ್ದೀರಿ. ನಿಮಗೇನು ಚಿಂತೆ ಹೇಳಿ. ಸುಮ್ಮನೇ ಮನಸ್ಸಲ್ಲಿಟ್ಟುಕೊಂಡು ಕೊರಗಬೇಡಿ” ಎಂದೆ.
ಮೂಗಿನ ಹೊಳ್ಳೆಗಳರಳುವಂತೆ ಅಮ್ಮ ಬಿಟ್ಟ ನಿಟ್ಟುಸಿರು ನನ್ನ ಕಿವಿಗೆ ತಾಗಿತು. “ತುಂಬಾ ಕಷ್ಟವಾಗ್ತಿದೆ ಮಗಾ”
ಇದುವರೆಗೆ ಅನುಭವಿಸಿದ ಚಿಂತೆಗಳ ಭಾರವನ್ನು ಒಮ್ಮೆಲೇ ನೆಲಕ್ಕೆ ಕುಕ್ಕಿದಂತಿತ್ತು ಅವಳ ದನಿ. “ನಮ್ಮ ಇಪ್ಪತ್ತು ಲಕ್ಷ ಕೈ ಬಿಟ್ಟು ಹೋದವು ಮಗಾ”
ಬೆನ್ನಹುರಿಗೆ ಕೊಳ್ಳಿಯಿಟ್ಟಂತಾಗಿ ಮೈ ನಡುಗಿತು. “ಇಪ್ಪತ್ತು ಲಕ್ಷ!” ನನ್ನ ದನಿ ಹೂತು ಹೋಯಿತು. ಚರ್ಮದ ಸಕಲ ರಂಧ್ರಗಳಿಂದಲೂ ಬೆವರಿನ ಸೂಕ್ಷ್ಮ ತುಂತುರುಗಳು ಹೊಮ್ಮಿ ನಿಂತವು. “ಇದು ಹೇಗಾಯ್ತು?”
“ಬಡ್ಡಿಗೆ ಸಾಲ ಕೊಟ್ಟು ಕೈ ಸುಟ್ಟುಕೊಂಡ್ರು ನಿನ್ನಪ್ಪ. ವ್ಯವಹಾರಗಳೆಲ್ಲ ಲಕ್ಷಗಳಲ್ಲಿ. ಸಾವಿರ ಸಲ ಬಡ್ಕೊಂಡೆ ಇದೆಲ್ಲ ನಮಗೆ ಬೇಡ. ಇದ್ದುದರಲ್ಲೇ ತೃಪ್ತಿ ಪಟ್ಕೊಂಡು ಸುಮ್ಮನಿರುವ ಅಂತ. ಇವ್ರೆಲ್ಲಿ ಕೇಳ್ತಾರೆ? ಹಣ ಇರೋದು ದುಪ್ಪಟ್ಟು ಮಾಡೋದಿಕ್ಕೆ. ದಿಂಬಿನಡಿಯಲ್ಲಿಟ್ಟು ನಿದ್ದೆ ಮಾಡೋದಕ್ಕಲ್ಲ ಅಂತ ಹಂಗಿಸಿ ಕಂಡವರಿಗೆಲ್ಲ ಸಾಲ ಕೊಟ್ರು. ಮೊದ ಮೊದಲು ಅವರೆಲ್ಲ ಸರಿಯಾದ ಸಮಯಕ್ಕೆ ಹಣ ಹಿಂತಿರುಗಿಸ್ತಿದ್ರು. ಕೊನೆಗೆ ಅವರಲ್ಲೊಬ್ಬ ಇದ್ದಕ್ಕಿದ್ದಂತೆ ನೇಣು ಹಾಕ್ಕೊಂಡ. ಇನ್ನೊಬ್ಬ ದುಬೈಗೆ ಹಾರಿದ”
“ಅಯ್ಯೋ!”
ದಿಗಿಲು ಬಿದ್ದ ನನ್ನ ಬಾಯಿಯಿಂದ ಹೊರಟ ಉದ್ಗಾರ ನನಗರಿವಿಲ್ಲದಂತೆ ದೊಡ್ಡದಾದಾಗ ಅಮ್ಮನ ಮಾತು ನಿಂತಿತು. “ಯಾರ್ಯಾರಿಗೋ ಸಾಲ ಕೊಡೋ ಬದಲು ಈ ಮನೆಯನ್ನು ದುರಸ್ತಿ ಮಾಡ್ತಿದ್ರೆ…”
ನಮ್ಮದು ಹಳೆಯ ಕಾಲದ ದೊಡ್ಡ ಮನೆ. ಅಜ್ಜ ಕಟ್ಟಿಸಿದ್ದು. ಬಚ್ಚಲು ಮನೆ ಸಂಡಾಸು ಎಲ್ಲ ದೂರ. ಮನೆಯೊಳಗಿದ್ದುಕೊಂಡು ಪಾತ್ರೆ ತೊಳೆಯುವ ವ್ಯವಸ್ಥೆಯೂ ಇಲ್ಲ. ಬಿಟ್ಟೂ ಬಿಡದಂತೆ ಮಳೆ ಹೊಯ್ಯುತ್ತಿದ್ದಾಗ ಅಮ್ಮ ಕೊರಬೆ ಹಾಕಿಕೊಂಡು ಹು ಹು ಹು ಎಂದು ನಡುಗುತ್ತಾ ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಛೆ! ಕುಟ್ಟೆ ಹುಡಿ ಹಿಡಿದು ಮುರಿದು ಬೀಳುವಂತಿದ್ದ ಮನೆಯನ್ನು ದುರಸ್ತಿ ಮಾಡಿ, ಮನೆಗೆ ತಾಗಿಕೊಂಡೇ ಬಚ್ಚಲು ಮನೆ- ಶೌಚಾಲಯಗಳನ್ನು ಹೊಸತಾಗಿ ನಿರ್ಮಿಸುತ್ತಿದ್ದರೆ ಅದೆಷ್ಟು ಒಳ್ಳೆಯದಿತ್ತು. ಇದರ ಬಗ್ಗೆ ಅಪ್ಪನೇಕೆ ಆಸಕ್ತಿ ವಹಿಸುತ್ತಿಲ್ಲ? ಎಂದು ಅದೆಷ್ಟೋ ಬಾರಿ ಪರಿತಪಿಸಿದ್ದೆ.
ಅಮ್ಮನ ಆಶೀರ್ವಾದವೋ ಅಪ್ಪನ ಹಾರೈಕೆಯೋ ಅಂತೂ ಕನ್ನಡ ಸ್ನಾತಕೋತ್ತರ ಪದವಿಯನ್ನು ಮೊದಲ ರ್ಯಾಂಕಿನೊಂದಿಗೆ ತೇರ್ಗಡೆಯಾದೆ. ತಲೆ ತುಂಬ ಸುಂದರ ಕನಸುಗಳನ್ನು ಹೊತ್ತು ಕಾಲೇಜಿನಿಂದ ಹೊರಗಿಳಿದವನಿಗೆ ಬದುಕು ಇಷ್ಟು ಕಠೋರವಾಗಿರಬಹುದೆಂಬ ಅರಿವಿರಲಿಲ್ಲ. ಉಪನ್ಯಾಸಕ ಹುದ್ದೆಗಾಗಿ ಅರ್ಜಿಗಳನ್ನು ಹಾಕಿದೆ. ಸರಕಾರದ ವಿಳಂಬ ನೀತಿ, ಸಂದರ್ಶನಗಳಲ್ಲಿ ನಡೆಯುವ ಅವ್ಯವಹಾರ, ಪಕ್ಷಪಾತ ಧೋರಣೆಗಳು ಕನಸುಗಳನ್ನು ನುಚ್ಚುನೂರುಗೊಳಿಸಿದವು. ಎಲ್ಲೆಲ್ಲಿಗೋ ಹೋದೆ. ಯಾರ್ಯಾರನ್ನೋ ವಿಚಾರಿಸಿದೆ. ದೊರಕಿದ ಉತ್ತರ ಒಂದೇ- ಕೆಲಸ ಇಲ್ಲ.
ಹೀಗಿರಲು ಒಂದು ದಿನ ಕರ್ನಾಟಕದ ಪ್ರತಿಷ್ಠಿತ ಕಾಲೇಜೊಂದರಿಂದ ಕರೆ ಬಂತು. ಬೆಂಗಳೂರಿನಲ್ಲಿ ನಡೆಸಿದ ಕೆ.ಪಿ.ಎಸ್.ಸಿ ಪರೀಕ್ಷೆಯಲ್ಲಿ ಮೊದಲಿಗನಾಗಿ ತೇರ್ಗಡೆಯಾಗಿದ್ದುದರಿಂದ ಔಪಚಾರಿಕ ಸಂದರ್ಶನಕ್ಕೆ ಹಾಜರಾಗಬೇಕೆಂದು ಅಧಿಕೃತರು ಕೇಳಿಕೊಂಡಿದ್ದರು. ನನ್ನ ಕಾಲುಗಳಂತೂ ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ಅಮ್ಮ ದೇವರ ಎದುರು ಅಡ್ಡ ಬಿದ್ದಳು. ಅಪ್ಪನ ಮುಖದಲ್ಲಿ ನಗೆ ಹುಟ್ಟಿತು. ಕಷ್ಟಕಾಲ ಮುಗಿಯಿತು ಎಂದುಕೊಂಡು ಉತ್ಸಾಹದಿಂದಲೇ ಸಂದರ್ಶನಕ್ಕೆ ಹಾಜರಾದೆ. ನನ್ನ ಪ್ರಮಾಣಪತ್ರಗಳ ಮೇಲೆ ಕಣ್ಣಾಡಿಸಿದ ಸಂದರ್ಶಕರು ಕೇಳಿದ್ದು ಒಂದೇ ಪ್ರಶ್ನೆ. “ನೀವೀಗ ಎಷ್ಟು ತಂದಿದ್ದೀರಿ?”
“ಏನಂದ್ರಿ?”
ಕೆಟ್ಟ ಕನಸು ಕಂಡವನಂತೆ ಎಚ್ಚೆತ್ತು ಕೇಳಿದೆ. ಸಂದರ್ಶಕರು ಪರಸ್ಪರ ನೋಡಿಕೊಂಡು ತುಟಿ ಓರೆಗೊಳಿಸಿ ನಕ್ಕರು. “ನಿಮಗೆ ನಲ್ವತ್ತು ಸಾವಿರ ಸಂಬಳ ಸಿಗತ್ತೆ. ವರ್ಷ ಹೋದಂತೆ ಅದು ಹೆಚ್ಚುತ್ತಾ ಹೋಗತ್ತೆ. ಹಾಗಾಗಿ ಐದಾರು ಲಕ್ಷ ಕೊಟ್ರೆ ನಿಮ್ಗೇನೂ ನಷ್ಟವಾಗಲಾರದು”
ನನ್ನ ಬೋಧವೇ ಹಾರಿ ಹೋದಂತಾಯಿತು. “ಏ…ನು? ಐ…ದು…ಲ…ಕ್ಷ…?”
ಅವರು ಮತ್ತೊಮ್ಮೆ ನಕ್ಕರು. ನಾನು ಸಾವರಿಸಿಕೊಂಡು ಹೇಳಿದೆ “ಅಷ್ಟೊಂದು ಹಣ ನಾನೆಲ್ಲಿಂದ ತರ್ಲಿ? ನನ್ನಪ್ಪ ಕೃಷಿಕ. ಅಮ್ಮ ಗೃಹಿಣಿ. ಸಂಪಾದನೆಗೆ ಬೇರೆ ಮಾರ್ಗವಿಲ್ಲ…”
“ನಿಮ್ಮ ಕಷ್ಟ ನಮಗೆ ಅರ್ಥವಾಗತ್ತೆ.” ಸಂದರ್ಶಕರಲ್ಲೊಬ್ಬ ಟೈ ಸರಿಪಡಿಸಿಕೊಂಡು ಹೇಳಿದ “ಅದ್ಕೇ ಲೋನ್ ತಗೊಳ್ಳಲು ಸಾಧ್ಯವಾಗುವಷ್ಟು ಕನಿಷ್ಟ ಮೊತ್ತವನ್ನೇ ಕೇಳ್ತಿರೋದು”
ನನ್ನ ಮೈ ಹೊತ್ತಿ ಉರಿಯಿತು. “ಇಲ್ಲ. ನಂಬಿಕೊಂಡ ಮೌಲ್ಯಗಳಿಗೆ ವಿರುದ್ಧವಾಗಿ ಬದುಕಲು ನನ್ನಿಂದ ಸಾಧ್ಯವಿಲ್ಲ. ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡರೆ ನಾನು ನಾನಾಗಿ ಉಳಿಯಲಾರೆ. ಮನಸ್ಸು ಒಪ್ಪದ ಕೆಲಸ ಒಮ್ಮೆಯೂ ಮಾಡಲಾರೆ. ನಾನಿನ್ನು ಬರ್ತೇನೆ ನಮಸ್ಕಾರ” ಎಂದವನೇ ಅಲ್ಲಿಂದ ಎದ್ದು ಹೊರ ನಡೆದೆ.
ಸುದ್ದಿ ತಿಳಿದ ಅಪ್ಪ ಕೆರಳಿ ಕೆಂಡವಾದರು. ಮುಖ ಬಿಗಡಾಯಿಸಿ ಧುಮುಗುಟ್ಟುತ್ತಾ “ಐದು ಲಕ್ಷ? ಏನಂತ ತಿಳ್ಕೊಂಡಿದ್ದಾರೆ ಅವರು? ಇಲ್ಲಿ ಹಣ ಬೆಳೆವ ಮರವುಂಟು ಅಂತಲಾ? ಎಲ್ಲವನ್ನೂ ವ್ಯವಹಾರದ ಮಟ್ಟಕ್ಕಿಳಿಸುವ ಧೂರ್ತರು. ಓಹ್! ಐದು ಲಕ್ಷ! ಅಷ್ಟು ಹಣವನ್ನು ಬ್ಯಾಂಕಿನಲ್ಲಿಟ್ರೆ ಅದರ ಬಡ್ಡಿಯ ಹಣದಿಂದ್ಲೇ ಸುಖವಾಗಿ ಬದುಕಬಹುದಲ್ಲ”
ಅಪ್ಪನ ಆ ಮಾತು ನನ್ನ ಕಿವಿಯಲ್ಲಿ ಈಗಲೂ ಗುಂಯ್‍ಗುಟ್ಟುತ್ತಿದೆ. ಕೈಯಲ್ಲಿ ಹಣವಿಲ್ಲದಿದ್ದುದರಿಂದ ಹಾಗೆಂದದ್ದಲ್ಲವೇ ಅವರು? ಆ ಯೋಚನೆ ಮೂಡಿದ್ದೇ ನಾನೊಮ್ಮೆ ಬೆಚ್ಚಿಬಿದ್ದೆ. ನಂಬಿಕೊಂಡ ಮೌಲ್ಯಗಳಿಗೆ ವಿರುದ್ಧವಾಗಿ ಬದುಕಲು ಸಾಧ್ಯವಿಲ್ಲ ಎಂದು ಸಂದರ್ಶಕರ ಬಳಿ ಕಡ್ಡಿ ಮುರಿದಂತೆ ಹೇಳಿದ್ದ ನಾನು ಇದೇನು ಯೋಚಿಸುತ್ತಿದ್ದೇನೆ ಎನಿಸಿ ನಾಚಿಕೆಯಾಯಿತು. ಹೌದು. ಆಗ ನಾನು ಉದ್ಯೋಗದ ಅನಿವಾರ್ಯತೆಯ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಎಲ್ಲಾದರೊಂದು ಕಡೆ ಉಪನ್ಯಾಸಕ ಹುದ್ದೆ ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸವಿತ್ತು. ಸರಿಯಾದ ಆಯ್ಕೆ ಮೂಲಕವೇ ಉಪನ್ಯಾಸಕನಾಗಬೇಕೆಂಬ ಹಟ ತೀವ್ರವಾಯಿತು. ಛಲ ಬಿಡದೆ ಉದ್ಯೋಗದ ಬೇಟೆಯನ್ನು ಮುಂದುವರಿಸಿದೆ. ಆಡಳಿತ ಮಂಡಳಿಯ ಮೂಲಕ ಕಾರ್ಯಾಚರಿಸುತ್ತಿದ್ದ ಹಲವು ಶಾಲೆ ಕಾಲೇಜುಗಳ ಕದವನ್ನು ತಟ್ಟಿದೆ. ಮುಂಗಡವಾಗಿ ಕೊಡಬೇಕಿದ್ದ ಹಣದ ಮೊತ್ತ ಕೇಳಿಯೇ ಎದೆ ಹಾರಿತು. ಇಪ್ಪತ್ತೈದು ಲಕ್ಷ! ಹೋದಲ್ಲೆಲ್ಲ ಇದೇ ಪುನರಾವರ್ತನೆ. ಇದನ್ನೇ ಕೇಳಿ ಬೇಸತ್ತುದರಿಂದಲೇ ಇರಬೇಕು, ಅವತ್ತೇ ಐದು ಲಕ್ಷ ಕೊಟ್ಟು ಉದ್ಯೋಗಕ್ಕೆ ಸೇರಿಕೊಂಡಿರುತ್ತಿದ್ದರೆ ನಮ್ಮ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗಾದರೂ ಸುಧಾರಿಸಬಹುದಿತ್ತು ಎಂಬ ವಿಚಾರ ಈಗ ಮೂಡುತ್ತಿರುವುದು.
ಪೆರಡಾಲ ದೇವಾಲಯದಲ್ಲಿ ಕಿಕ್ಕಿರಿದ ಜನಸಂದಣಿ. ಎಲ್ಲಿಂದಲೋ ಏನೇನೋ ಕೂಗುಗಳು. ಮಕ್ಕಳ ಬೊಬ್ಬೆ. ಆಗೊಮ್ಮೆ ಈಗೊಮ್ಮೆ ಕೇಳಿ ಬರುವ ಸಂತೆ ವಾದ್ಯದ ಇಂಪು. ಪುಗ್ಗೆಗಳ ಗಿಜಿಗಿಜಿ. ರಾಟೆತೊಟ್ಟಿಲು.
ಚಿಕ್ಕವನಾಗಿದ್ದಾಗ ಅಮ್ಮನ ಒತ್ತಾಯಕ್ಕೆ ಕಟ್ಟುಬಿದ್ದು ದೇವಾಲಯಕ್ಕೆ ಹೋಗುತ್ತಿದ್ದೆ. ಆದರೆ ಕಣ್ಣೆಲ್ಲ ಪೀಪಿ, ಬಣ್ಣದ ಕನ್ನಡಕ, ಆಟಿಕೆ ಮತ್ತು ಐಸ್ ಕ್ಯಾಂಡಿಗಳ ಮೇಲೆ. ಈಗಲೂ ಅಂಥದ್ದೇ ಅಂಗಡಿಗಳು ಅಲ್ಲಿವೆ. ಜೇಬಿನಲ್ಲಿ ಒಂದಷ್ಟು ಹಣವೂ ಇದೆ. ಆದರೆ ಏನನ್ನೂ ಕೊಳ್ಳಲು ಮನಸ್ಸೇ ಬಾರದು. ಒಳಗೆ ಹೋಗಿ ನೋಡಿದರೆ ಅದೇ ದೇವಾಲಯ. ಅದೇ ದೇವರು. ಆದರೆ ನಮಿಸಲು ಮನಸ್ಸೇ ಬಾರದು.
ಹಿಂದಿನಿಂದ ಯಾರೋ ಭುಜ ತಟ್ಟಿದಂತಾಯಿತು. ಒಮ್ಮೆಲೆ ಬೆಚ್ಚಿ ಹಿಂತಿರುಗಿದ ನಾನು ‘ಓಹ್!’ ಎಂದು ಉದ್ಗರಿಸಿದೆ. ಗಾಬರಿ ಮಾಯವಾಗಿ ಆಶ್ಚರ್ಯ ಮೂಡಿತು.
ಗೀತಾ!
ಅದ್ಭುತವೊಂದನ್ನು ಕಂಡ ಅಚ್ಚರಿಯ ನಗೆಯೊಂದಿಗೆ ಪ್ರಶ್ನಿಸಿದೆ “ಹೇಗಿದ್ದಿ ಗೀತಾ?”
“ಸೌಖ್ಯ. ಜಾತ್ರೆಗೆ ಬಂದದ್ದಾ?”
ಹೌದೆಂಬಂತೆ ತಲೆಯಾಡಿಸಿದೆ.
“ಊರಿಗೆ ಯಾವಾಗ ಬಂದೆ?”
“ನಿನ್ನೆ ಬಂದೆ. ನಾಳೆಯೇ ಹೋಗ್ಬೇಕು”
ಅನ್ನುವಾಗ ನನ್ನ ದೃಷ್ಟಿ ಅವಳ ಮುಖದಿಂದ ಕೆಳಗೆ ಜಾರಿ ಕೊರಳ ಮೇಲೆ ನೆಟ್ಟಿತು. ಹಣೆಯಲ್ಲಿ ಬೊಟ್ಟು ಇದೆ. ಕತ್ತಿನಲ್ಲಿ ತಾಳಿ ಇಲ್ಲ. ಅರೆ! ಇದೇಕೆ ಹೀಗೆ? ಮನದಲ್ಲಿ ತಳಮಳವೆದ್ದಿತು. ಜೊತೆಗೆ ಹಲವಾರು ಪ್ರಶ್ನೆಗಳೂ. ದೇವರೇ! ಇವಳು ವಿಧವೆಯಾಗಿರಬಹುದಾ? ಎಂದು ಚಿಂತಿಸುತ್ತಿದ್ದಾಗಲೇ ‘ಥೂ! ಹಾಗೆಲ್ಲ ಕನಸಲ್ಲೂ ಅಂದುಕೊಳ್ಳಬಾರದು’ ಎಂದು ಮನಸ್ಸು ಗದರಿತು.
“ರವೀ”
ಮೈ ಅಲುಗಿಸಿದಂತಾಗಿ ಎಚ್ಚರಗೊಂಡೆ. “ಎಲ್ಲಿ ಕಳೆದುಹೋಗಿಬಿಟ್ಟೆ? ದೇವರ ಬಲಿ ಕಳೀತು. ಪ್ರಸಾದ ತಗೊಳ್ಳುವ ಬಾ” ಎಂದು ಗೀತಾ ಹೇಳಿದಾಗಲೇ ನಾನೀಗ ಎಲ್ಲಿದ್ದೇನೆ ಎಂದು ಅರಿವಾದದ್ದು.
ಮಂಗಳಾರತಿ ಆರಂಭವಾಗಿತ್ತಲೇ ಗೀತಾ ಕೈ ಮುಗಿದು ಶಿವಲಿಂಗವನ್ನೇ ಎವೆಯಿಕ್ಕದೆ ನೋಡುತ್ತಾ ನಿಂತಳು. ಪ್ರಸಾದ ಲಭಿಸಿದಾಗ ಒಂದು ಚಿಟಿಕೆ ಗಂಧ ತೆಗೆದು ನನ್ನ ಹಣೆಗೆ ಹಚ್ಚಿದಳು. ಅವಳೂ ಕಣ್ಣುಮುಚ್ಚಿ ಹಚ್ಚಿಸಿಕೊಂಡಳು.
“ನೀನು ಸ್ವಲ್ಪ ಸೊರಗಿದ್ದಿ ಗೀತಾ”
ಊಟ ಮಾಡಿ ಕೈ ತೊಳೆಯುತ್ತಾ ನಾನು ಹೇಳಿದೆ. ಅವಳು ಸುಮ್ಮನೆ ನಕ್ಕಳು ಅಷ್ಟೇ. ಬದಲಾಗದ್ದು ಅದೊಂದು ಮಾತ್ರ. ಬೆಳಕು ಚಿಮ್ಮುವಂಥ ಆ ನಗೆ.
“ಮನೆಗೆ ಬಾ ರವೀ”
ಇಲ್ಲ ಎನ್ನಲಾಗಲಿಲ್ಲ. ಜೊತೆಯಾಗಿ ನಡೆಯುತ್ತಾ ಹೋದೆವು. ದೇವಾಲಯದ ಉತ್ತರ ದಿಕ್ಕಿನಲ್ಲೇ ನೇರ ನಡೆದರೆ ಸಿಗುತ್ತದೆ ಅವಳ ಮನೆ.
“ಹೀಗೇ ಇದ್ರೆ ಸಾಕಾ ರವಿ?”
“ಎಲ್ರೂ ಕೇಳೋದು ಹೀಗೆಯೇ? ಏನು ಮಾಡೋದು?ನಿನ್ನಂಥವಳು ಸಿಗಬೇಕಲ್ಲ!”
“ಹೋಗೋ” ಎನ್ನುತ್ತಲೇ ಅವಳ ಮುಖ ಅರಳಿತು. ಕೆಂಪೇರಿದ ಆ ಮೋರೆಯನ್ನು ನೋಡುತ್ತಾ ನೀಳವಾದ ಉಸಿರು ಬಿಟ್ಟು ಹೇಳಿದೆ.
“ನಾನು ದುಡೀತಿರೋ ಪತ್ರಿಕೆ ಕರ್ನಾಟಕದ ಪ್ರತಿಷ್ಠಿತ ಪತ್ರಿಕೆಯೇನೋ ಹೌದು. ಆದ್ರೆ ಸಂಬಳ ಏನೇನೂ ಸಾಲದು. ಅವರು ಕೊಡೋ ಏಳು ಸಾವಿರದಲ್ಲಿ ರೂಂ ಬಾಡಿಗೆ ತೀರಿಸಲಿಕ್ಕೇ ಐದು ಸಾವಿರ ಬೇಕು. ಅಕ್ಕಿ-ಬೇಳೆ ಅದು ಇದು ಅಂತ ತಿಂಗಳೊಳಗೇ ಕೈಲಿದ್ದದ್ದೆಲ್ಲ ಖರ್ಚಾಗಿ ಹೋಗ್ತದೆ. ನಮ್ಮ ಪತ್ರಿಕೆಯ ಮಾಲೀಕರಂತೂ ಗಟ್ಟಿ ಕುಳ. ಅವರಿಗೆ ಸ್ವಿಸ್ ಬ್ಯಾಂಕಲ್ಲೂ ಅಕೌಂಟಿದೆ. ಆದ್ರೆ ನಮಗೆ ಕೊಡೋದು ಬರೇ ಏಳು ಸಾವಿರ. ವರ್ಷಕ್ಕೆ ಏರಿಸೋದು ಐನೂರು ರೂಪಾಯಿ. ಮನೆಗೆ ಕಳುಹಿಸಲಿಕ್ಕೆ ಎಲ್ಲಿ ಸಾಕಾಗ್ತದೆ ಇದು? ಹೀಗಿದ್ದಾಗ ನಾನು ಹೇಗೆ ಒಂದು ಕುಟುಂಬವನ್ನು…”
ಉಕ್ಕಿ ಬರುತ್ತಿದ್ದ ಭಾವಾವೇಗವನ್ನು ತಡೆಯಲಾಗದೆ ಗಂಟಲು ಕಟ್ಟಿದಂತಾಗಿ ಮಾತು ನಿಲ್ಲಿಸಿದೆ. ಆಮೇಲೆ ಒಳಗೊಳಗೆ ಹಿಂಜರಿಯುತ್ತಾ ಹೇಳಿದೆ.
“ಏನಿದ್ರೂ ನನ್ನ ಮದುವೆಯಾಗದ್ದು ಒಳ್ಳೇದೇ ಆಯ್ತು ಗೀತಾ…”
ಅವಳು ಸರಕ್ಕನೆ ಮುಖ ಹೊರಳಿಸಿ ನನ್ನನ್ನು ನೋಡಿದಳು. ಮುಖದಲ್ಲಿ ನೋವು ಕಣ್ಣೀರಿನಂತೆ ಮಡುಗಟ್ಟಿತ್ತು.
“ನೀನು ಉಪನ್ಯಾಸಕ ಹುದ್ದೆಗೆ ಪ್ರಯತ್ನಿಸೋ ಬದಲು ಅವತ್ತೇ ಪತ್ರಿಕೆ ಸೇರಿಕೊಳ್ತಿದ್ರೆ ಸ್ವಲ್ಪವಾದ್ರೂ ಹೆಚ್ಚು ಸಂಬಳ ಸಿಗ್ತಿತ್ತು ಅಲ್ವ?” ಅವಳ ಮಾತಿನಲ್ಲಿದ್ದ ಕನಿಕರ ನನ್ನನ್ನು ತಟ್ಟಿತು. ಎದೆಯೊಳಗೆ ನೋವನ್ನೆಬ್ಬಿಸಿತು.
“ಹೌದು. ತಿಂಗಳಿಗೆ ಹತ್ತು ಹದಿನೈದು ಸಾವಿರ ನೀಡುವ ಬೇರೆ ಯಾವುದಾದ್ರೂ ಪತ್ರಿಕೆಗೆ ಸೇರಿಕೊಳ್ತಿದ್ರೆ…” ಕೈ ಕೈ ಹಿಸುಕಿಕೊಳ್ಳುತ್ತಾ ಹೇಳಿದೆ.
“ಓಹ್! ಮಾತಾಡ್ತಾ ಮಾತಾಡ್ತಾ ಮನೆಗೆ ಮುಟ್ಟಿದ್ದು ಗೊತ್ತೇ ಆಗ್ಲಿಲ್ಲ” ಎನ್ನುತ್ತಾ ಚಪ್ಪಲಿ ಕಳಚಿ ಒಳಗೆ ಹೋದಳು.
ಮನೆ ಚೊಕ್ಕಟವಾಗಿದ್ದರೂ ಹೊಳಪು ಮಾಸಿತ್ತು. ಏನೋ ಕತ್ತಲು ಕತ್ತಲು. “ನಿನ್ನಪ್ಪ ಎಲ್ಲಿದ್ದಾರೆ ಗೀತಾ?” ಎಂದು ಕೇಳುವಷ್ಟರಲ್ಲಿ ಅಡುಗೆಮನೆಯೊಳಗಿನಿಂದ ಅವಳು ಕೂಗಿ ಹೇಳುತ್ತಿರುವುದು ಕೇಳಿಸಿತು. “ರವೀ…ನೀನೀಗ ಕತೆ ಬರಿಯೋದಿಲ್ವ?”
“ಏನು ಕತೆ? ನನ್ನ ಕತೆ ಯಾವತ್ತೋ ಮುಗಿದು ಹೋಗಿದೆ”
“ಹ್ಞಾ! ನನ್ನದೂ ಅಷ್ಟೆ. ವೀಣೆ, ಶ್ರುತಿಪೆಟ್ಟಿಗೆಗಳಿಗೆಲ್ಲ ಧೂಳು ಹಿಡಿದಿದೆ. ಅಟ್ಟದ ಮೇಲೆ ಏರಿಸೋದೊಂದು ಬಾಕಿ. ಬದುಕಿನ ಶ್ರುತಿಯೇ ತಪ್ಪಿ ಹೋದ ಮೇಲೆ ಅವೆಲ್ಲ ಯಾಕೆ?” ಎನ್ನುತ್ತಾ ಕಿಟಿಕಿಯ ಮೂಲಕ ನೋಡಿ ತುಟಿಯಂಚಿನಲ್ಲೇ ನೋವಿನಿಂದ ನಕ್ಕಳು. “ಓ… ನಿನಗೇನಾಗಿದೆ ಈಗ?” ನಾನು ಅವಳ ಮಾತನ್ನು ತೇಲಿಸಿ ಬಿಡಲು ಯತ್ನಿಸುತ್ತಲೇ ಗೋಡೆಯ ಮೇಲೆ ನೇತುಹಾಕಿದ ಭಾವಚಿತ್ರಗಳ ಪೈಕಿ ಅವಳ ಗಂಡನ ಮುಖವನ್ನು ಕಾಣದೆ ನಿಂತಲ್ಲಿ ನಿಲ್ಲಲಾಗದೆ, ಕೂತಲ್ಲಿ ಕೂರಲಾಗದೆ ತಳಮಳಿಸತೊಡಗಿದೆ.
“ಹೇಳು ಗೀತಾ. ಏನು ಮಾಡ್ತಿದ್ದಾರೆ ನಿನ್ನ ಗಂಡ… ಮಕ್ಕಳು…”
ಎನ್ನುತ್ತಲೇ ನನ್ನ ಎದೆ ಸಣ್ಣಕ್ಕೆ ಹೊಡೆದುಕೊಳ್ಳತೊಡಗಿತು. ಮನಸ್ಸು ಕುತೂಹಲದ ಸೂಜಿಮೊನೆಯಲ್ಲಿ ನಿಂತಿತ್ತು.
“ನಂಗೆ ಮದುವೆ ಆಗ್ಲಿಲ್ಲ ರವೀ…’’
“ಏನು?!”
ನನ್ನ ಬಾಯಿಯಿಂದ ಹೊರಟ ಉದ್ಗಾರ ಅನಿರೀಕ್ಷಿತವಾಗಿ ದೊಡ್ಡದಾಗುತ್ತಲೇ ಮೈಯೊಳಗೆ ಕಂಪನವಾಯಿತು. ಪುಳಕಗೊಂಡಾಗ ತೋರುವ ಸಂತಸದ ಕಂಪನ. ಆದರೆ ಚಹಾದ ಲೋಟವನ್ನು ಹಿಡಿದುಕೊಂಡು ನನ್ನತ್ತ ಬರುತ್ತಿದ್ದ ಅವಳ ಮುಖದ ನಿರ್ಲಿಪ್ತತೆ, ಕಣ್ಣುಗಳ ಸುತ್ತಲಿನ ಕತ್ತಲೆಯ ಆಳ ಇನ್ನಷ್ಟು ಹೆಚ್ಚುತ್ತಿದ್ದಂತೆ ಬೇಡವಾದುದನ್ನೇನೋ ಆಡಿಬಿಟ್ಟೆ ಎನಿಸಿ ಮನಸ್ಸು ಮೂಕವಾಯಿತು. ಸ್ವಲ್ಪ ಹೊತ್ತು ಮೌನ. ಅಲ್ಲೇ ಆಚೆಗೆ ಹರಿಯುತ್ತಿದ್ದ ನದಿಯ ಸದ್ದು ಅಲೆ ಅಲೆಯಾಗಿ ನನ್ನ ರಕ್ತವನ್ನು ಸೇರಿತು. ಮನಸ್ಸನ್ನು ಬಿಗಿಹಿಡಿದು ಕೇಳುತ್ತಿದ್ದಂತೆ ಅದರ ಶಾಂತ ಗಂಭೀರ ನಿಶ್ಶಬ್ದ ನಾದ ಮೈಯ ನರನರಗಳಲ್ಲೂ ಚಲಿಸುತ್ತಿರುವ ತೀಕ್ಷ್ಣ ಅನುಭವವಾಯಿತು. ಆ ಮಂಜುಳ ದನಿಯನ್ನು ಕೇಳಿಸಿಕೊಳ್ಳುತ್ತಾ ನಾದಲೀನನಾಗಿ ಇಬ್ಬರೂ ದೋಣಿಯೊಂದರಲ್ಲಿ ಜೊತೆಯಾಗಿ ಕುಳಿತು ತೇಲುತ್ತಾ ಹೋಗಿಬಿಡಬೇಕೆನಿಸಿತು. ನಿಂತ ನೆಲವೇ ನಮ್ಮ ಪಾಲಿಗೆ ದೋಣಿಯಾಗಿ ರೂಪು ತಳೆದಂತೆ ಭಾಸವಾಯಿತು. “ಗೀತಾ”
“ಊಂ?”
“ನಾನೊಂದು ಮಾತು ಹೇಳಲೇ?”
“ಹೇಳು”
“ನಾವು ಎಷ್ಟಾದರೂ ಪರಿಚಿತರಲ್ವಾ? ನಮ್ಮ ಸ್ವಭಾವದ ಬಗ್ಗೆ ಪರಸ್ಪರ ಅರಿವೂ ಇದೆ. ಹಾಗಿರುವಾಗ…”
“ಹಾಗಿರುವಾಗ?”
ಇದುವರೆಗೆ ಯಾವ ಆಸೆಯನ್ನು ಮನದೊಳಗೇ ಅದುಮಿಟ್ಟು ಸುಮ್ಮನಿದ್ದು ಬಿಟ್ಟಿದ್ದೆನೋ ಆ ಮೌನದ ಬೀಗ ಮೊದಲ ಬಾರಿ ಒಡೆಯಿತು. ಅವಳನ್ನು ಬಾಚಿ ಎದೆಯಲ್ಲಿ ತುಂಬಿಕೊಳ್ಳುವಂತೆ ನೋಡುತ್ತಾ ಕೇಳಿಬಿಟ್ಟೆ “ನಾವಿಬ್ಬರೂ ಜೊತೆಯಾಗಿ ಜೀವನವನ್ನು ಆರಂಭಿಸೋಣವೇ?”
“ರವೀ?!”
ಇದ್ದಕ್ಕಿದ್ದಂತೆ ಫಳಫಳ ಹೊಳೆಯತೊಡಗಿದ ಅವಳ ಕಣ್ಣುಗಳಲ್ಲಿ ನನ್ನ ಕಣ್ಣುಗಳನ್ನೇ ನೋಡಿದೆ. ನನ್ನೆದುರು ಚಾಚಿ ಹಿಡಿದ ಚಹಾದ ಲೋಟ ಸೂಕ್ಷ್ಮವಾಗಿ ಕಂಪಿಸತೊಡಗಿತು. ಅವಳು ನನ್ನವಳಾಗಬೇಕೆಂಬ ಬಯಕೆ ದಾಹವಾಗಿ ಗಂಟಲನ್ನು ಸುಡತೊಡಗಿತು.
“ಪತ್ರಿಕೆಯ ಕೆಲಸಕ್ಕೆ ನಾನು ರಾಜೀನಾಮೆ ಕೊಡ್ತೇನೆ. ಪ್ರಯತ್ನಿಸಿದ್ರೆ ಇಲ್ಲೇ ಎಲ್ಲಾದ್ರೂ ಪ್ರೈವೇಟ್ ಕಾಲೇಜಲ್ಲಿ ಕೆಲಸ ಸಿಕ್ಕರೂ ಸಿಕ್ಕೀತು. ಸಂಬಳ ಎಷ್ಟು ಕಡಿಮೆಯಾದ್ರೂ ಚಿಂತೆಯಿಲ್ಲ. ಇಲ್ಲದಿದ್ರೆ ನರ್ಸರಿ ಶಾಲೆಯಾದ್ರೂ ಆದೀತು. ಮದುವೆಯಾದ ಬಳಿಕವೂ ಒಟ್ಟಿಗೆ ದುಡಿವ. ಸಿಕ್ಕಿದ್ದರಲ್ಲಿ ತೃಪ್ತಿಪಟ್ಕೊಂಡು…”
“ಅಲ್ಲ ರವೀ… ಅದು…”
ಎಂದೇನೋ ಹೇಳಲು ಹೊರಡುತ್ತಿದ್ದಂತೆ ಅವಳ ತುಟಿ ಅದುರತೊಡಗಿತು. ಒಂದು ಸಲ ದೀರ್ಘವಾಗಿ ಉಸಿರನ್ನು ಮೇಲೆಳೆದುಕೊಳ್ಳುತ್ತಲೇ ಕಣ್ಣುಗಳು ತುಂಬಿಬಂದವು. ಗಂಟಲಲ್ಲಿ ಉಬ್ಬಿ ನಿಂತ ಬಿಕ್ಕಳಿಕೆಯನ್ನು ಕಷ್ಟಪಟ್ಟು ತಹಬದಿಗೆ ತಂದುಕೊಂಡು “ಬಾ ರವೀ, ಇಲ್ಲಿ ಬಾ” ಎಂದು ನನ್ನ ಕೈ ಹಿಡಿದು ಸೀದಾ ಮಲಗುವ ಕೋಣೆಗೆ ಕರೆದೊಯ್ದಳು. ಒಳಗೆ ದಪ್ಪ ಕಾಲಿನ ಅಗಲಮಂಚ. ಅದರ ಮೇಲೆ ಕತ್ತಿನವರೆಗೂ ಹೊದಿಕೆ ಹೊದ್ದು ಮಲಗಿರುವ ವ್ಯಕ್ತಿ…
ಅಯ್ಯೋ! ಗೀತಳ ಅಪ್ಪ!
ಅವರ ಬಾಯಿಯ ಕೊನೆ ತಿರುಪಿತ್ತು. ನಾಲಿಗೆಯು ತುಟಿಯ ಕೆಳಭಾಗದವರೆಗೂ ಚಾಚಿತ್ತು. ಗೀತಾ ಹೊದಿಕೆಯನ್ನು ಕೆಳ ಸರಿಸಿದಾಗ ದೇಹದ ಬಲಭಾಗವಿಡೀ ಮರಗಟ್ಟಿದ್ದು ಕಂಡು ಬಂತು. ಅದೇ ಭಾಗದ ಕೈ ಸುರುಟಿತ್ತು. ಅದನ್ನು ನೋಡುತ್ತಲೇ ನನ್ನ ಕರುಳಲ್ಲಿ ಕತ್ತಿ ಆಡಿದಂತಾಯಿತು. ಅವರನ್ನು ಪಕ್ಕಕ್ಕೆ ತಿರುಗಿಸುವಾಗ ಒಂದು ತೋಳು ತ್ರಾಣವಿಲ್ಲದಂತೆ ಹಿಂದುಗಡೆ ಬಿತ್ತು. ಅದನ್ನು ಮುಂದಕ್ಕೆಳೆದುಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಯಿತು. ಅವರ ಚಲನೆಯಿಲ್ಲದ ತೋಳಿನೆಡೆಗೆ ಕಣ್ಣು ಹೊರಳಿಸಿದೆ. ಅವರು ನನ್ನ ಮೋರೆ ನೊಡಿದರು. ಮತ್ತೆ ತೋಳಿನೆಡೆಗೆ ಕಣ್ಣಾದರು. ತನ್ನ ಮುಖಚರ್ಯೆಗೆ ಅನುಗುಣವಲ್ಲದ, ತನ್ನ ಅಸಹಾಯಕತೆಗೆ ಅನುಗುಣವಾದ ಮಸುಕು ಮಂದಹಾಸ ಅವರ ಮುಖದ ಮೇಲೆ ಸುಳಿದಾಡಿತು. ನನ್ನ ಎದೆ ಕಂಪಿಸಿತು. ಮೂಗು ಮುಲುಗುಟ್ಟಿತು. ಹಿಂದೆ ಗೀತಾ ನನ್ನಿಂದ ದೂರವಾದಾಗ ಉಕ್ಕಿ ಬಂದಷ್ಟೇ ದುಃಖ ಅಲೆ ಅಲೆಯಾಗಿ ಕುದಿದು ಬರತೊಡಗಿತು.
“ಅವರಿಗೆ ನಿದ್ದೆ ಬರುತ್ತಿದೆ ರವಿ, ನಾವು ಹೊರಗೆ ಹೋಗುವ”
“ಕ್ಷಮಿಸು ಗೀತಾ. ನಂಗೆ ಇದೆಲ್ಲ ಗೊತ್ತಿರ್ಲಿಲ್ಲ”
ನೋವು ತುಂಬಿದ ನನ್ನ ದನಿ ಭಾರವಾಗಿತ್ತು. ಅವಳು ಮೌನವಾದಳು. ನನಗೆ ಮತ್ತೇನೂ ಹೇಳಲು ತೋಚಲಿಲ್ಲ. ಗೀತಳೇ ಮಾತನಾಡಿದಳು.
“ಪಿ.ಎಚ್.ಡಿ ಮಾಡ್ಬೇಕು ಅಂತ ನಂಗೆ ಆಸೆಯಿತ್ತು. ಅಪ್ಪ ಒಪ್ಪಿಯೂ ಇದ್ರು. ಆಗಲೇ ಅವರಿಗೆ ನಮ್ಮಿಬ್ಬರ ಪ್ರೇಮದ ಬಗ್ಗೆ ಗೊತ್ತಾದದ್ದು. ಅವರ ಹತ್ರ ನಾನೇ ಅದನ್ನು ಹೇಳಿದ್ದು. ಆ ಬಳಿಕ ಅಪ್ಪ ಏಕಾಏಕಿ ಮೌನಿಯಾದ್ರು. ಅಮ್ಮ ತೀರಿಹೋದ ಮೇಲೆ ಮಾತಿನಲ್ಲಾಗಲೀ ನೋಟದಲ್ಲಾಗಲೀ ನೋಯಿಸದಿದ್ದ ಅಪ್ಪನ ಮೌನ ಇನ್ನಿಲ್ಲದಂತೆ ಚುಚ್ಚತೊಡಗಿತು. ಹತ್ತು ಸಲ ಕೇಳಿದ್ರೆ ಒಂದು ಸಲ ಉತ್ತರ. ‘ಅಪ್ಪಾ, ರವಿಗೆ ಒಳ್ಳೆ ಭವಿಷ್ಯವಿದೆ. ಒಂದಲ್ಲಾ ಒಂದಿನ ಅವನು ಏನಾದ್ರೂ ಆಗ್ತಾನೆ. ಅಲ್ಲಿವರೆಗೂ ನಾನು ಕಾದು ಕೂರ್ತೇನೆ’ ಅಂತ ಹೇಳಿದಾಗ ‘ಮಗಳೇ, ರವಿ ಒಳ್ಳೆಯವನೇ. ಅವನ ಗುಣ ನಡತೆಗಳೆಲ್ಲ ನಂಗೂ ಇಷ್ಟವೇ. ಅವನಿಗೋಸ್ಕರ ನೀನು ಕಾದು ಕೂರೋದೂ ಒಳ್ಳೇದೇ. ಆದರೆ ಎಲ್ಲಿವರೆಗೆ? ಬರೇ ಕನ್ನಡ ಎಂ.ಎ ಆದವನಿಗೆ ಯಾವ ಮಹಾ ಉದ್ಯೋಗ ಸಿಕ್ಕೀತು? ಒಂದು ಖಾಯಂ ಉದ್ಯೋಗ ಸಿಗೋದೇ ಕಷ್ಟವಾಗಿರೋ ಈ ಸಂದರ್ಭದಲ್ಲಿ ಅವ ದಿನಗೂಲಿ ಉದ್ಯೋಗಕ್ಕೆ ಹೊರಟರೂ ಆ ಕನಿಷ್ಟ ಸಂಬಳದಲ್ಲಿ ಒಬ್ಬನಿಗೇ ದಿನದೂಡಲು ಅದೆಷ್ಟು ತ್ರಾಸಾದೀತೆಂಬ ಅಂದಾಜು ಇದೆ ನಂಗೆ. ಹಾಗಿದ್ದ ಮೇಲೆ ನಿನ್ನ ಜೀವನ?’ ಅಂತ ಪ್ರಶ್ನಿಸಿದ್ರು. ನಂಗೆ ಉತ್ತರವೇ ತೋಚದಂತಾಯ್ತು. ಹೀಗಿರುವಾಗ ಯೂನಿವರ್ಸಿಟಿಯಿಂದ ಪತ್ರ ಬಂತು. ಒಂದು ತಿಂಗಳೊಳಗೆ ಪಿ.ಎಚ್.ಡಿ ಮಾಡಲು ಹಾಜರಾಗಬೇಕೆಂಬ ಆದೇಶವಾಗಿತ್ತದು. ಆದರೆ ಅಪ್ಪ ಖಂಡತುಂಡವಾಗಿ ‘ಬೇಡ’ ಅಂದ್ರು. ಎಷ್ಟಾದ್ರೂ ನಾನೊಬ್ಳೇ ಮಗಳಲ್ವಾ? ಕಣ್ಣೆದುರಿಂದ ದೂರವಾದ ಮೇಲೆ ಮತ್ತೇನಾದ್ರೂ ಅನಾಹುತ ಮಾಡಿಕೊಂಡಾಳೋ ಅಂತ ಹೆದರಿರಬೇಕು. ಬೇಗ ಬೇಗನೆ ನನ್ನ ಮದುವೆಗೆ ತಯಾರಿ ನಡೆಸತೊಡಗಿದ್ರು. ಅಷ್ಟು ಹೊತ್ತಿಗೇ ಹೀಗಾಗಿಬಿಟ್ಟಿತು” ಎಂದಳು ಅಪ್ಪನ ಅಂಗಾತವಾದ ದೇಹದೆಡೆಗೆ ಕೈ ತೋರಿ.
“ಅಂತೂ ನಾನು ನಿಂಗೆ ಭಾರವಾಗಿ ಹೋದೆ ಅಂತ ಹೇಳ್ತಾ ಒಂದೆರಡು ಸಲ ಅತ್ತರು. ‘ಇಲ್ಲಪ್ಪಾ ನಾನು ಬದುಕಿರೋವರೆಗೂ ನೀವೇನೂ ಯೋಚನೆ ಮಾಡ್ಬೇಡಿ’ ಅಂತ ಸಮಾಧಾನ ಮಾಡ್ತೇನೆ ನಾನು. ಏನೂಂತ ಹೇಳೂದು? ಎಲ್ಲಾ ಪಡ್ಕೊಂಡು ಬಂದದ್ದು…” ಎನ್ನುತ್ತಾ ಉಕ್ಕಿ ಬಂದ ಅಳುವನ್ನು ತುಟಿ ಕಚ್ಚಿ ತಡೆದುಕೊಂಡಳು.
“ಪಕ್ಕದ ಮನೆಯ ಶಂಕರ ಮೂಲ್ಯ ಬಹಳ ಒಳ್ಳೆಯವ. ಅವನಿಗೊಂದು ಆಟೋರಿಕ್ಷಾ ಇದೆ. ಅಪ್ಪನನ್ನು ಆಸ್ಪತ್ರೆಗೆ ಕರ್ಕೊಂಡು ಹೋಗಲು ತುಂಬಾ ಉಪಕಾರವಾಗ್ತದೆ” ಎನ್ನುತ್ತಾ ಸೆರಗೆಳೆದುಕೊಂಡು ಕಣ್ಣೊರೆಸಿಕೊಂಡಳು. ಬಳಿಕ ನೀಳವಾದ ಉಸಿರು ಚೆಲ್ಲಿ “ಅಪ್ಪ ಉದ್ಯೋಗದಲ್ಲಿದ್ದಾಗ ಸಿಕ್ಕ ಸಂಬಳ ಮತ್ತು ಪೆನ್ಶನ್‍ನ ಹಣ ಬ್ಯಾಂಕಿನಲ್ಲಿದೆ. ಅದು ಮುಗಿಯುವವರೆಗೆ ಚಿಂತೆಯಿಲ್ಲ” ಎಂದಳು.
ಎಲ್ಲವನ್ನೂ ಆಲಿಸಿದಾಗ ನೆಲದಿಂದ ಕಾಲು ಕೀಳಲಾಗುತ್ತಿಲ್ಲ ಎನಿಸಿತು. ಮನದೊಳಗೆ ಅಸ್ವಸ್ಥ ಚಡಪಡಿಕೆಗಳ ನೀರ ಬುಗ್ಗೆಗಳು. ಔಷಧ ಶೀಶೆಗಳ ನಡುವೆ ಬಸವಳಿದು ಮಲಗಿರುವ ವ್ಯಕ್ತಿಯನ್ನು ಕೊನೆಯ ಬಾರಿಗೋ ಎಂಬಂತೆ ಕಣ್ಣಲ್ಲಿ ತುಂಬಿಕೊಂಡು ಗೀತಳ ಎದುರು ನಿಂತೆ. ಮಾತಿಲ್ಲದೆ ಅವಳ ಕೈ ಹಿಡಿದುಕೊಂಡು “ನಾನಿನ್ನು ಬರ್ತೇನೆ ಗೀತಾ” ಎಂದೆ ಉಸಿರು ಕಟ್ಟಿದವನಂತೆ. ಅವಳು ನೆಲ ನೋಡುತ್ತ ತಲೆ ಆಡಿಸಿದಳು. “ಸರಿ. ನಾಳೆ ಹೊರಡೋ ತಯಾರಿ ಆಗ್ಬೇಕಲ್ಲ” ಎನ್ನುವಾಗ ಅವಳ ದನಿ ತಗ್ಗಿತ್ತು. “ಆಯ್ತು ರವಿ. ಮತ್ತೆ ಯಾವಾಗಲಾದರೂ ಭೇಟಿಯಾಗುವ” ಎಂದು ಇಲ್ಲದ ನಗೆಯನ್ನು ಮುಖದಲ್ಲಿ ತಂದುಕೊಂಡು ಹೇಳಿದಾಗ ನನ್ನ ಹೃದಯ ಬಿರಿದಂತಾಯಿತು. ಅವಳಿಗೆ ಅಮೂಲ್ಯವಾದುದೇನಾದರೂ ಕೊಟ್ಟು ಹೋಗಬೇಕೆಂಬ ಬಯಕೆ ಹುಟ್ಟಿತು. ಎದೆಗೂಡಿನೊಳಗೆ ಬಂಧಿಸಿಟ್ಟ ನೋವಿನ ಭಂಡಾರವಲ್ಲದೆ ಬೇರೇನಿದೆ ನನ್ನಲ್ಲಿ?
ಬೆಳಗ್ಗೆ ಎದ್ದು ಸ್ನಾನ ಮುಗಿಸಿ ತಿಂಡಿ ತಿನ್ನುತ್ತಿದ್ದಂತೆ ಅಪ್ಪ ಕರೆದರು. “ಮಗಾ”
ನಾನು ಕತ್ತು ಮೇಲೆತ್ತಿದೆ. ನನ್ನ ಎದುರು ಕುಳಿತಿದ್ದ ಅಪ್ಪನ ಮುಖದಲ್ಲಿ ಮುಜುಗರ ಎದ್ದು ಕಾಣುತ್ತಿತ್ತು. ಜೊತೆಗೇ ಒಂಥರಾ ಅಳುಕು; ಸಂಕೋಚ.
“ಅದೂ… ಅದೂ… ನಿನ್ನತ್ರ… ಒಂದು… ಹತ್ತು ಸಾವಿರ ಇರಬಹುದ? ತತ್ಕಾಲಕ್ಕೆ…”
“ಯಾಕೆ? ಇನ್ಯಾರಿಗಾದ್ರೂ ಸಾಲ…”
ಅರಿವಿಲ್ಲದೆ ತುಟಿ ಜಾರಿ ಉಸುರಿದೆ. ಅಪ್ಪನ ಮುಖ ಒಮ್ಮೆಲೇ ಪೆಚ್ಚಾದುದನ್ನು ಕಂಡಾಗ ನಾನು ಹೇಳಿದ್ದು ಸ್ವಲ್ಪ ಹೆಚ್ಚಾಯಿತು ಎಂದು ತೋರಿತು. ಚಿಕ್ಕಂದಿನಲ್ಲಿ ನನ್ನ ಶಾಲೆ- ಕಾಲೇಜುಗಳ ಫೀಸನ್ನು ನಿಗದಿತ ದಿನಾಂಕದ ಮೊದಲೇ ನೀಡುತ್ತಿದ್ದ ಅಪ್ಪ… ಅಂಗಡಿಯಲ್ಲಿ ಕಂಡದ್ದು ಬೇಕೆನಿಸಿದಾಗ ಮರುಮಾತಿಲ್ಲದೆ ತೆಗೆದುಕೊಡುತ್ತಿದ್ದ ಅಪ್ಪ… ಈಗ ಅಪ್ಪನಿಗೇನೋ ಅಗತ್ಯ ಬಂದಾಗ ನಾನು… ಬಾಯಿಯೊಳಗೆ ಇಳಿದ ದೋಸೆ ಗಂಟಲಲ್ಲಿ ಕಟ್ಟಿ ನಿಂತಿತು.
“ಹೋಗಿ ಕಳಿಸ್ತೇನೆ ಅಪ್ಪಾ…”
ನನ್ನ ದನಿಯಲ್ಲಿ ಬೇಸರವಿತ್ತು. ಅಸಹಾಯಕತೆಯಿತ್ತು.
“ಸಾಕು. ಅವಸರವೇನಿಲ್ಲ”
ಎಂದು ತಟ್ಟೆ ಬಿಟ್ಟೆದ್ದರು. ‘ಇವತ್ತೇನು ಮೂರೇ ದೋಸೆ?’ ಎಂದ ಅಮ್ಮನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಕೈ ತೊಳೆದು ಎಲ್ಲೋ ಹೋದರು. ಅಪ್ಪನ ಮುಖ ಬಿಗಿದು ಕೊಂಡಿರ ಬಹುದಾ? ಬಾಡಿರ ಬಹುದಾ?
“ನೀನ್ಯಾಕೆ ಮಗಾ ಹಾಗೆ ಹೇಳಿದ್ದು? ಅವರ ಕರುಳಿಗೆ ಆಪರೇಶನ್ ಆಗ್ಬೇಕಾಗಿದೆ ಅಂತ ಗೊತ್ತಿಲ್ವಾ? ಮೊದ್ಲೇ ತುಂಬ ನೊಂದಿದ್ದಾರೆ. ಅದರೆಡೆಯಲ್ಲೂ ನೀನು ಹೀಗೆ…” ಮೆತ್ತಗೆ ಗದರಿದಳು ಅಮ್ಮ.
“ಗೊತ್ತಮ್ಮಾ… ಅದಕ್ಕೆ ಬರೇ ಹತ್ತು ಸಾವಿರ…”
“ಹೇಳಿ ಪ್ರಯೋಜನವಿಲ್ಲ ಮಗಾ. ಯಾವತ್ತೋ ಅಡ್ಮಿಟ್ ಆಗ್ಬೇಕಿತ್ತು. ಆದ್ರೆ ಹಣವೆಲ್ಲ ಸಾಲಗಾರರ ಕೈಯಲ್ಲುಂಟಲ್ಲ. ಹಾಗಾಗಿ ಬರೇ ಮದ್ದಿನಲ್ಲೇ ಸುಧಾರಿಸಿಕೊಳ್ತಿದ್ದಾರೆ” ಎಂದಳು ಹೊರಗೆ ಕೇಳಿಸದಂತೆ. ‘ಅಯ್ಯೋ! ಅಷ್ಟು ಹೊತ್ತಿಗೆ ಏನಾದ್ರೂ…’ ಎಂಬ ಯೋಚನೆ ಮೂಡುತ್ತಲೇ ಹೃದಯದಲ್ಲಿ ದುಃಖ, ಕೋಪ ಮತ್ತು ಯಾತನೆಗಳು ಕುದಿದು ಮೊರೆದವು. ಅಮ್ಮನ ದಣಿದ ಕಣ್ಣುಗಳಲ್ಲಿನ ದೈನ್ಯವನ್ನು ನೋಡಲಾಗದೆ ಕೈತೊಳೆಯುವ ನೆಪದಿಂದ ಅಲ್ಲಿಂದ ಎದ್ದು ಹೊರನಡೆದೆ.
ಬಟ್ಟೆ ಬದಲಾಯಿಸಿ ಹೊರಟು ನಿಂತಾಗ ಗಂಟೆ ಒಂಬತ್ತು. ಇನ್ನು ಅರ್ಧ ಗಂಟೆಯೊಳಗೆ ಬಸ್ಸು ಹಿಡಿಯದಿದ್ದರೆ ಅಲ್ಲಿಗೆ ತಲುಪುವಾಗ ಸಂಜೆಯಾದೀತು ಎಂದುಕೊಂಡು “ಅಪ್ಪಾ” ಎಂದೆ. ಸೋಫಾದ ಮೇಲೆ ಅನ್ಯಮನಸ್ಕರಾಗಿ ಕುಳಿತಿದ್ದ ಅವರು ಬೆಚ್ಚಿ ಎದ್ದು ನಿಂತರು. ಬೀಳ್ಕೊಡುಗೆಯ ದನಿಯಲ್ಲಿ “ಆಯ್ತು ಮಗಾ ಹೋಗಿ ಬಾ” ಎನ್ನುತ್ತಲೇ ಅವರ ಕಣ್ಣುಗಳಲ್ಲಿ ಆಶ್ಚರ್ಯ; ಮುಖದಲ್ಲಿ ಗಲಿಬಿಲಿ. ಅವರತ್ತ ಚಾಚಿದ ನನ್ನ ಕೈಗಳಲ್ಲಿ ಆರುಸಾವಿರದ ನೋಟುಗಳನ್ನು ಖಂಡಿತಾ ನಿರೀಕ್ಷಿಸಿರಲಿಲ್ಲ ಎಂದು ಅವರ ಮುಖವೇ ಹೇಳುತ್ತಿತ್ತು. ಅವರ ಮುಖ ಇದೀಗ ಗೆಲುವಾಗುತ್ತದೆ ಎಂದು ನಾನೆಣಿಸಿದ್ದು ಸುಳ್ಳಾಯಿತು. ಹಣ ತೆಗೆದುಕೊಳ್ಳುವ ನೆಪದಲ್ಲಿ ನನ್ನ ಎರಡೂ ಕೈಗಳನ್ನು ಹಿಡಿದುಕೊಂಡ ಅವರ ಮುಖದಲ್ಲಿ ಹಿಂದೆಂದೂ ಕಾಣದ ಅವ್ಯಕ್ತ ನೋವು! ಅಪ್ಪನಿಂದ ದೃಷ್ಟಿ ಕಿತ್ತು ಅಮ್ಮನನ್ನು ಒಮ್ಮೆ ನೋಡಿ “ಬರ್ತೇನಮ್ಮಾ” ಎಂದಾಗ “ಪುರುಸೊತ್ತಾದ್ರೆ ಫೋನ್ ಮಾಡು ಮಗಾ…” ಎನ್ನುತ್ತಾ ಬಾಯಿಗೆ ಸೆರಗು ತುರುಕಿಕೊಂಡಳು. ಒತ್ತರಿಸಿ ಬರುತ್ತಿದ್ದ ದುಃಖವನ್ನು ಗಂಟಲಲ್ಲೇ ಅದುಮಿ ಹಿಡಿದು ಅಂಗಳವನ್ನು ದಾಟುತ್ತಿದ್ದಂತೆ ಮನೆ ದೂರವಾಗತೊಡಗಿತು.
2 thoughts on “ಅಂತರ”
ವ್ಯಾವಹಾರಿಕ ಬದುಕಿನಲ್ಲಿ, ಸುಖವನ್ನು ಅರಸುತ್ತ, ದೈವಿಕತೆಯ ಸೂತ್ರದಗುಂಟ ಆಶಾವಾದದ ಹಂಬಲದಲ್ಲಿ, ಒಂದು ಗಟ್ಟಿ ನೆಲೆಯ ಶೋಧದಲ್ಲೇ ಸಾಗುತ್ತಿರುವಾಗ ಯಾವುದೋ ‘ಅಂತರ’ ಸತತವಾಗಿ ಉಳಿಯುವ ಹೃದಯ ವಿದ್ರಾವಕ ಸನ್ನಿವೇಶಗಳಿಗೆಲ್ಲ, ಭಾವುಕತೆಯ ಆಪ್ತತೆಯನ್ನು ನವಿರಾಗಿ ಜೋಡಿಸಿದ್ದಾರೆ ವಾರದ ಕಥೆಗಾರರು. ಮೂರು ವರ್ಷಗಳ ನಂತರದ ಕಾತರದಲ್ಲಿ, ಊರಿಗೆ ಬಂದಾಗ, ಎಳೆ ಎಳೆಯಾಗಿ ಮೂಡಿಬರುವ ಸಂಗತಿಗಳು, ಸಮುದ್ರದ ಎದುರು ನಿಂತವನ ಪಾದಗಳು, ತೆರೆಗಳು ಚಲನೆಯಲ್ಲಿ ನಿರಂತರವಾಗಿ ಒಂದೊಂದಾಗಿ ಬರುತ್ತ, ಹೋಗುತ್ತಿದ್ದಂತೆ, ಒಳಗೊಳಗೇ ಕುಸಿಯುತ್ತಿರುವ ಅನುಭವದ ದಿಗ್ಭ್ರಮೆಯಲ್ಲಿ, ಬರೀ ಕಹಿಯೇ ಸ್ವಾದವಾಗುತ್ತದೆ.
ದುರಾದೃಷ್ಟವೋ, ಮಾರ್ಗದರ್ಶನದ ಅಭಾವವೋ, ಗಂಟು ಹಾಕದ ಹೊಲಿಗೆಯೋ, ಪತ್ನಿಯ ಹಿತವಚನವನ್ನು ಕೇಳದ ಒಣಶುಂಠಿತನವೋ, ಪ್ರಾಮಾಣಿಕತೆಯನ್ನು ಗುರುತಿಸದ, ನಿಷ್ಠೆಯನ್ನು ದುರ್ಲಕ್ಷಿಸುವ ಸಮಾಜದ ಅವ್ಯವಸ್ಥೆಯೋ, ವೈಷಮ್ಯ ಸುಳಿಗಳ ಹಾವಳಿಯೋ, ಮೌನದ ಬೀಗ ಮೊದಲ ಬಾರಿ ಒಡೆದರೂ, ಅಂತೂ ಕ್ಲಿಷ್ಟ ಸ್ಥಿತಿಗಳ ಕೈಗೊಂಬೆಯಾಗಿ, ಬೆಳಕು ಚಿಮ್ಮುವಂಥ ನಗುವೂ ಅಶಾಶ್ವತೆಯಲ್ಲಿ ಲೀನವಾಗುವದು, ದೇವರನ್ನು ನಮಿಸಲೂ ಮನಸ್ಸು ಬಾರದಿರುವದು, ಮಳಲಲ್ಲಿ ಕಟ್ಟುವ ಮನೆಯಂತಾಗುವದು ಅಸಹಜವಾಗುವದಿಲ್ಲ. ‘ಇವತ್ತೇನು ಮೂರು ದೋಸೆ?’ ಅನ್ನುವ ಆರ್ತ ದನಿಯೊಂದು, ಆ ದನಿಗೆ ಕಾರಣೀಭೂತವಾದ, ದಿಕ್ಕೇ ಕಾಣದ ಸಂಪೂರ್ಣ ಅಸಹಾಯಕತೆಯ, ಸುದೀರ್ಘ ಕಷ್ಟದಲ್ಲಿದ್ದ, ಆಕ್ಷೇಪಣೆಯೇ ಇಲ್ಲದ ಅಂತಿಮ ಪ್ರತಿಕ್ರಿಯೆಯ ನಿರುಪಾಯತೆ ಇನ್ನೊಂದು, ಅದನ್ನು ಕೇಳಿಸಿಕೊಂಡ ಹೃದಯಕ್ಕೂ ಉತ್ತರವಿರದ ವಿಕ್ಷಿಪ್ತ, ನಿಸ್ಸಹಾಯ ಮರುಕ ಮತ್ತೊಂದು, ‘ಅಂತರ’ದ ಹನಿಗಳ ಮಹಾಪೂರವಾಗುತ್ತಿರುವಂತೆ, ಓದುಗನ ಅಂತರಂಗವನ್ನು ಮಿಡಿಯುತ್ತದೆ.
ಸತ್ವಯುತ ನಿರೂಪಣೆಗೆ ಅಭಿನಂದನೆಗಳು!
ಧನ್ಯವಾದಗಳು.