ಒಮ್ಮೆ ಒಬ್ಬ ಮಹರ್ಷಿಯು ಸ್ನಾನ ಮಾಡಿ ಆಶ್ರಮಕ್ಕೆ ಹಿಂತಿರುಗುವಾಗ ಒಂದು ಇಲಿಯ ಮರಿ ದಾರಿಯಲ್ಲಿ ಬಿದ್ದುದ್ದನ್ನು ಕಂಡು ಕರುಣಾಳುವಾದ ಆ ಮುನಿ ಆ ಇಲಿಯನ್ನು ಆಶ್ರಮಕ್ಕೆ ತಂದು ಸಾಕಿದನು. ದಿನೇ ದಿನೇ ಇಲಿಯು ಬೆಳೆಯುತ್ತಾ ಬಂದು ಆಶ್ರಮದಲ್ಲೆಲ್ಲ ಓಡಾಡುತ್ತಿತ್ತು. ಒಮ್ಮೆ ಇಲಿಯನ್ನು ತಿನ್ನಲು ಒಂದು ಬೆಕ್ಕು ಕಾದು ಕುಳಿತಿದ್ದನ್ನು ಮಹರ್ಷಿ ನೋಡಿದನು. ಇಲಿಗೆ ಪ್ರಾಣ ಅಪಾಯ ತಪ್ಪಿದ್ದಲ್ಲ, ಎಂದು ಭಾವಿಸಿ ಅವರ ತಪಸ್ಸಿನ ಶಕ್ತಿಯಿಂದ ಆ ಇಲಿಯನ್ನು ಬೆಕ್ಕನ್ನಾಗಿ ಪರಿವರ್ತಿಸಿದನು . ಇಲಿಗಾಗಿ ಕಾಯುತ್ತಿದ್ದ ಬೆಕ್ಕು ಇನ್ನೊಂದು ಬೆಕ್ಕನ್ನು ಕಂಡು ಗುರುಗುಟ್ಟುತ್ತಾ ಹೊರಟುಹೋಯಿತು. ಮತ್ತೊಂದು ದಿವಸ ನಾಯಿಯೊಂದು ಬೆಕ್ಕನ್ನು ಹಿಡಿಯ ಬಯಸಿದಾಗ ಮಹರ್ಷಿ ಬೆಕ್ಕನ್ನು ನಾಯಿಯನ್ನಾಗಿಸಿದನು. ಕೆಲವು ದಿನಗಳು ಕಳೆದ ನಂತರ ನಾಯಿಯನ್ನು ಒಂದು ಹುಲಿ ಅಟ್ಟಿಸಿ ಕೊಂಡು ಬಂದಿತು. ಹುಲಿಯಿಂದ ನಾಯಿಯನ್ನು ಉಳಿಸಲು ನಾಯಿಯನ್ನು ಮಹರ್ಷಿ ಹುಲಿಯನ್ನಾಗಿ ಪರಿವರ್ತನೆ ಮಾಡಿದನು. ಹುಲಿಯಾದ ನಂತರ ಹುಲಿ ಮಹರ್ಷಿಯ ಉಪಕಾರವನ್ನು ನೆನೆಯದೆ ಅವನನ್ನೇ ತಿನ್ನಲು ಬಯಸಿತು. ಆಗ ಮಹರ್ಷಿಗೆ ತಾನು ಏನು ಮಾಡಿದರು , ಭೌತಿಕ ಶರೀರ ಮತ್ತು ಆಕಾರವನ್ನು ಬದಲಿಸಬಹುದಷ್ಟೆ, ಸ್ವಭಾವವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅರಿವಾಯಿತು. ಉಪಕಾರ ಸ್ಮರಣೆ ಎಂಬುದು ಇಲ್ಲ ಎನ್ನುವುದು ಗೊತ್ತಾಯಿತು . ಹುಲಿಗೆ ನೀನು ಮತ್ತೆ ಇಲಿಯೇ ಆಗು ಎಂದು ಶಪಿಸಿದನು. ಇಲಿ ಅಲ್ಲಿಂದ ಓಡಿ ಹೋಯಿತು. ಹೀಗೆ ಅಕ್ರಮಣ ಮಾಡುವುದು, ಮಾಂಸಹಾರ ತಿನ್ನುವುದು , ಮುಂತಾದ ಸ್ವಭಾವವು ಯಾವುದೇ ರೂಪದಲ್ಲಿದ್ದರೂ ಬದಲಾಗುವುದಿಲ್ಲವೆಂಬ ನೀತಿ ಈ ಕಥೆಯಲ್ಲಿದೆ.
ಹೌದಲ್ಲವೇ, ವಿಶ್ವದ ಎಲ್ಲ ವಸ್ತುಗಳಲ್ಲಿಯೂ ಪ್ರತಿಯೊಂದರ ಸ್ವಭಾವ ಅಥವಾ ತನ್ನತನ ಇರುತ್ತದೆ. ಇದನ್ನು ವಸ್ತು ಸ್ವಭಾವ ಎಂದು ಕರೆಯುತ್ತಾರೆ. ಹಾಗೆ ಪ್ರಾಣಿ , ಪಕ್ಷಿಗಳಲ್ಲಿಯೂ ಇರುತ್ತದೆ.ಮನುಷ್ಯನೂ ಒಂದು ಪ್ರಾಣಿ. ಪ್ರಾಣಿಗಳಿಗೆ ಹೇಗೆ ಅದರ ಮೂಲಸ್ವಭಾವ ಬದಲಿಸಿಕೊಳ್ಳಲು ಕಷ್ಟ ಸಾಧ್ಯವೋ , ಪ್ರಾಣಿಗಳಂತೆ ಮನುಷ್ಯನ ಸ್ವಭಾವವು ಬದಲಾಗುವುದು ಬಹಳ ಕಷ್ಟಕರ. ಮನೆಯಲ್ಲಿ ನಾಲ್ಕು ಜನರಿದ್ದರೆ , ನಾಲ್ಕೂ ಜನರ ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ. ಒಬ್ಬರಿಗೆ ರೇಗುವ ಸ್ವಭಾವ, ಇನ್ನೊಬ್ಬರದು ಮೃದು ಸ್ವಭಾವ, ಮೂರನೆಯವರು ಚಾಡಿ ಹೇಳುವ ಗುಣ, ಮತ್ತೊಬ್ಬರು ಮಹಾ ಸೋಮಾರಿ, ಬೇರೆಯವರಿಂದ ಕೆಲಸ ಮಾಡಿಸಿಕೊಂಡು ಅರಾಮದಿಂದ ಇರಬೇಕೆಂಬ ಪ್ರವೃತ್ತಿಯವರು. ಹೀಗೆ ಮನುಷ್ಯನಲ್ಲಿ ಜನ್ಮಜಾತ ಕೆಲವು ಗುಣ ಸ್ವಭಾವಗಳು ವಂಶವಾಹಿನಿಯ ಮೂಲಕ ಬಂದಿರುತ್ತವೆ. ಕೆಲವು ಸುತ್ತಲಿನ ಪರಿಸರ ಹಾಗೂ ಇನ್ನೂ ಕೆಲವು ತಾನು ಸ್ವತ: ರೂಡಿಸಿಕೊಂಡಿದ್ದು, ಕ್ರಮೇಣ ಸ್ವಭಾವಗಳಾಗಿ ರೂಪಗೊಳ್ಳುತ್ತವೆ .
ಶತಮಾನಗಳಿಂದಲೂ ಮಾನವ ಸ್ವಭಾವ ಕುರಿತಾದ ವಾದಗಳು ತತ್ವಶಾಸ್ತ್ರದ ಕೇಂದ್ರ ಬಿಂದುವಾಗಿವೆ. ನಮ್ಮ ಸ್ವಭಾವವು ನಮ್ಮನ್ನು ಏನಾಗಲು ಪ್ರೆರೇಪಿಸುತ್ತದೆ ಎಂದು ನಮಗೆ ತಿಳಿದಿಲ್ಲ. ಮನುಷ್ಯ ತರ್ಕಬದ್ದ ಪ್ರಾಣಿ ಎಂಬುದು ಮಾತ್ರ ಗೊತ್ತು. ಮನುಷ್ಯರೆಲ್ಲ ಒಂದೇ ಆದರೂ ಒಬ್ಬರಂತೆ ಇನ್ನೊಬ್ಬರಿಲ್ಲ . ಸ್ವಭಾವ ವಿಭಿನ್ನ. ತತ್ವಶಾಸ್ತ್ರ ಅಥವಾ ವಿಶ್ವದೃಷ್ಟಿ ಕೋನದಲ್ಲಿ ಮೂಲತಃ ಮೂರು ಗುಣ ಸ್ವಭಾವಗಳಿವೆ. ಸಾತ್ವಿಕ (ಒಳ್ಳೆಯತನ, ಸಾಮರಸ್ಯ,ಶಾಂತತೆ ); ರಜಸ್ (ಉತ್ಸಾಹ, ಚಟುವಟಿಕೆ, ಚಲನೆ ); ತಮಸ್ಸು( ಅಜ್ಞಾನ, ಜಡತ್ವ ,ಸೋಮಾರಿತನ , ಇನ್ನೊಬ್ಬರಿಗೆ ತೊಂದರೆ ಕೊಡುವುದು) . ಅಂತೆಯೇ ವ್ಯಕ್ತಿಯ ಗುಣ ಸ್ವಭಾವಗಳೇ ಅವನ ವ್ಯಕ್ತಿತ್ವದ ಕುರುಹು . ಕೋಪಿಷ್ಟ, ಸಿಡುಕ, ಮೈಗಳ್ಳ, ಚಾಡಿಕೋರ, ಉತ್ಸಾಹಿ ( ಸದಾ ಗೆಲುವಾಗಿರುವ ಪ್ರವೃತ್ತಿ) , ಇತ್ಯಾದಿ.
“ಬೇವು ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದರೇನು ಫಲ”
ಎಂದು ಪುರಂದರದಾಸರು ಹೇಳಿದ್ದಾರೆ.
ಮನುಷ್ಯನ ಹುಟ್ಟುಗುಣವನ್ನು ಬದಲಾಯಿಸಲು ಹರಸಾಹಸ ಪಡಬೇಕಾಗುವದು. ಬೇವು ಬೆಲ್ಲದೊಂದಿಗೆ ಇಟ್ಟಾಗ ಬೇವು ತನ್ನ ಕಹಿ ಗುಣವನ್ನು ಬಿಡುವುದಿಲ್ಲ. ಅದು ಅದರ ಮೂಲಭೂತವಾದ ಗುಣ. ಹಾಗೆ ಹಾವಿನದು ಕಚ್ಚುವ ಸ್ವಭಾವ. ಇದನ್ನೇ ಗ್ರಾಮ್ಯ ಭಾಷೆಯಲ್ಲಿ “ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ” ಎಂದು ಹಿರಿಯರು ಹೇಳುವದಿದೆ. ಆದರೆ ನಾವು ಎಲ್ಲ ಪ್ರಾಣಿಗಳಂತಲ್ಲ. ಪ್ರಾಣಿಗಳಿಗಿಂತ ಮನುಷ್ಯ ಉಚ್ಛ ಸ್ತರದಲ್ಲಿದ್ದಾನೆ . ಬುದ್ಧಿಶಕ್ತಿ , ಸಂವೇದನಾಶೀಲತೆ, ವಿವೇಚನೆಗಳು ಇವೆ .ಯಾವುದು ಹಿತ ಯಾವುದು ಅಹಿತಕರ ಎನ್ನುವುದರ ಅರಿವಿದೆ. ನಮ್ಮ ಸ್ವಭಾವದಿಂದ ಅಥವಾ ದುರ್ನಡತೆಯಿಂದ ಬೇರೆಯವರಿಗೆ ತೊಂದರೆ ಉಂಟಾಗುತ್ತಿದ್ದರೆ ನಾವು ಬದಲಾವಣೆ ಮಾಡಿಕೊಳ್ಳಬಹುದಲ್ಲವೆ? ಅಥವಾ ಕೊನೆಯ ಪಕ್ಷ ಆ ನಿಟ್ಟಿನಲ್ಲಿ ಪ್ರಯತ್ನಿಶೀಲರಾಗಬಹುದಲ್ಲವೇ ? ವ್ಯಕ್ತಿಯ ಸ್ವಭಾವದಿಂದ ಸುತ್ತಲಿನ ಜನರಿಗೆ ಕಷ್ಟವಾಗುತ್ತಿದೆ, ಎಂದು ತಿಳಿದ ಮೇಲಾದರೂ ನಾವು ಬದಲಾಯಿಸಿಕೊಳ್ಳುವಲ್ಲಿ ಪ್ರಯತ್ನವನ್ನು ಮಾಡಬೇಕೆಂಬುದು ಮಾನವ್ಯಧರ್ಮವಲ್ಲವೆ?
ಕೆಲವು ಸಾಧಕರು ವ್ಯಕ್ತಿತ್ವದ ಸುಧಾರಣೆಗೋಸ್ಕರ ಬದಲಾವಣೆ ಮಾಡಿಕೊಳ್ಳುತ್ತಾರೆ. ತಿಳುವಳಿಕೆ ಇರುವವರು ನಿಜವಾಗಿ ಬದಲಾಗಬೇಕು ಎನ್ನುವವರು ಕಾರ್ಯ ಪ್ರವೃತ್ತರಾಗಿರುವದನ್ನು ಕಾಣಬಹುದು.
ಸಂಕ್ರಾಂತಿಯ ದಿವಸ ಭೂಮಿಯ ಚಾಲಕ ಶಕ್ತಿ ಸೂರ್ಯನಾರಾಯಣ ಕೂಡ ಪಥ ಬದಲಿಸುತ್ತಾನೆ. ಇದೇ ಸಂಕ್ರಮಣ ಕಾಲ. ಈ ಪಥ ಪರಿವರ್ತನೆ ಜಗಕೆಲ್ಲ ಸಂತೋಷವನ್ನು ತರುತ್ತದೆ. ಹಾಗಾದರೆ ಜನರಿಗೆ ಸದುಪಯೋಗವಾಗುವ ಹರ್ಷದಾಯಕವಾಗುವ ಬದಲಾವಣೆ ಬಯಸುವುದು ತಪ್ಪಲ್ಲವಲ್ಲ.