ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಶಾಂತಿನಾಥ ದೇಸಾಯಿ – ಒಂದು ಸ್ಮರಣೆ

ಶಾಂತಿನಾಥ ದೇಸಾಯಿ ಕನ್ನಡದ ಮಹತ್ವದ ಲೇಖಕರಲ್ಲೊಬ್ಬರು. ಕನ್ನಡದಲ್ಲಿ ನವ್ಯ ಸಾಹಿತ್ಯಕ್ಕೊಂದು ನೆಲೆ-ಬೆಲೆ ತಂದುಕೊಟ್ಟವರಲ್ಲಿ ದೇಸಾಯಿಯವರು ಪ್ರಮುಖರು. ಕಥೆ, ಕಾದಂಬರಿ, ವಿಮರ್ಶೆ, ಸಂಪಾದನೆ ಮತ್ತು ಅನುವಾದ ಪ್ರಕಾರಗಳಲ್ಲಿ ಅವರು ಸಾಕಷ್ಟು ಒಳ್ಳೆಯ ಕೃತಿಗಳನ್ನು ಕೊಟ್ಟಿದ್ದಾರೆ. ಧಾರವಾಡ ಮತ್ತು ಮುಂಬಯಿಯಲ್ಲಿ ಓದಿದ ದೇಸಾಯಿಯವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ದೇಸಾಯಿಯವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಛತ್ರಪತಿ ಶಿವಾಜಿ ವಿಶ್ವವಿದ್ಯಾಲಯ ಕೊಲ್ಹಾಪುರದಲ್ಲಿ ಅವರ ವೃತ್ತಿ ಜೀವನದ ಬಹುತೇಕ ವರ್ಷಗಳು ಕಳೆದಿವೆ. ಶಿವಾಜಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಆ ವಿಭಾಗದಲ್ಲಿ ಮಹತ್ತರ ಕೆಲಸಗಳನ್ನು ಮಾಡಿದ್ದಾರೆ. ದೇಶದ ಅತ್ಯುತ್ತಮ ಇಂಗ್ಲಿಷ್ ಪ್ರಾಧ್ಯಾಪಕರಲ್ಲಿ ಒಬ್ಬರೆಂದು ಖ್ಯಾತಿ ಪಡೆದಿದ್ದ ದೇಸಾಯಿಯವರು ಇಂಗ್ಲಿಷಿನಲ್ಲೂ ಸಹ ಸಾಕಷ್ಟು ಬರೆದಿದ್ದಾರೆ. ಅವರು ಇಂಗ್ಲಿಷಿನಲ್ಲಿ ಬರೆಯುವಾಗ ಶಾಂತಿನಾಥ ಕೆ. ದೇಸಾಯಿ ಎಂಬ ಹೆಸರು ಬಳಸುತ್ತಿದ್ದರು.

ಶಿವಮೊಗ್ಗದಲ್ಲಿ ಕುವೆಂಪು ವಿಶ್ವವಿದ್ಯಾಲಯ ಸ್ಥಾಪನೆಯಾದಾಗ ದೇಸಾಯಿಯವರು ಅದರ ಪ್ರಥಮ ಕುಲಪತಿಗಳಾಗಿ ನೇಮಕಗೊಂಡರು. ಹೊಸದಾಗಿ ಸ್ಥಾಪನೆಯಾದ ಕುವೆಂಪು ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸುವ ಸವಾಲು ಅವರೆದುರಿತ್ತು. ಉತ್ತಮ ಪ್ರಾಧ್ಯಾಪಕ ಮತ್ತು ಶ್ರೇಷ್ಠ ಲೇಖಕರಾದ ದೇಸಾಯಿಯವರು ನುರಿತ ಆಡಳಿತಗಾರರೂ ಆಗಿದ್ದರು. ಕುವೆಂಪು ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿ ತುಂಬ ಒಳ್ಳೆಯ ಕೆಲಸ ಮಾಡುವ ಮೂಲಕ ಅವರು ಅದಕ್ಕೊಂದು ಭದ್ರ ಬುನಾದಿ ಹಾಕಿದರು. ಸಾಮಾನ್ಯವಾಗಿ ಹೊಸ ವಿಶ್ವವಿದ್ಯಾಲಯವೊಂದು ಸ್ಥಾಪನೆಯಾದಾಗ ಅದರ ಅಭಿವೃದ್ಧಿಯ ದೃಷ್ಟಿಯಿಂದ ಮೊದಲ ಕುಲಪತಿಗಳನ್ನು ಮತ್ತೊಂದು ಅವಧಿಗೆ ಮುಂದುವರಿಸಲಾಗುತ್ತದೆ. ಆದರೆ ಮಧ್ಯ ಕರ್ನಾಟಕದ ಎರಡು ಪ್ರಬಲ ಸಮುದಾಯಗಳ ಜಾತಿ ರಾಜಕಾರಣದಿಂದಾಗಿ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಲಿಲ್ಲ. ಇದರಿಂದ ನಷ್ಟವಾದದ್ದು ಕುವೆಂಪು ವಿಶ್ವವಿದ್ಯಾಲಯಕ್ಕೆಯೇ ಹೊರತು ದೇಸಾಯಿಯವರಿಗಲ್ಲ . ದೇಸಾಯಿಯವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ರಾಜಕೀಯದಿಂದ ಯಾವತ್ತೂ ದೂರವಿದ್ದವರು. ಅಲ್ಪಸಂಖ್ಯಾತ ಸಮುದಾಯವಾದ ಜೈನ ಮತಕ್ಕೆ ಸೇರಿದ ಅವರಿಗೆ ಪ್ರಬಲ ಜಾತಿಯ ಹಿನ್ನೆಲೆಯೂ ಇರಲಿಲ್ಲ. ಇಂತಹ ಅನೇಕ ಸಾಹಿತ್ಯೇತರ ಕಾರಣಗಳಿಂದ ದೇಸಾಯಿಯವರಿಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ. ಸಜ್ಜನ ಮತ್ತು ಸ್ನೇಹಶೀಲರಾಗಿದ್ದ ಅವರಿಗೆ ಯೋಗ್ಯತೆಯಿದ್ದರೂ ಯೋಗವಿರಲಿಲ್ಲ. ದೇಸಾಯಿಯವರಿಗಾದ ಅನ್ಯಾಯ ನೆನೆದರೆ ತುಂಬ ವಿಷಾದವಾಗುತ್ತದೆ.

ಎಪ್ಪತ್ತು – ಎಂಬತ್ತರ ದಶಕದಲ್ಲಿ ದೇಸಾಯಿಯವರು ಮುನ್ನುಡಿ, ಹಿನ್ನುಡಿ ಮತ್ತು ಬೆನ್ನುಡಿ ಬರೆಯದ ಲೇಖಕರೇ ಇರಲಿಲ್ಲವೆಂದರೆ ಅದು ಅತಿಶಯೋಕ್ತಿಯ ಮಾತಲ್ಲ. ನವ್ಯ, ದಲಿತ-ಬಂಡಾಯ ಮತ್ತು ನವ್ಯೋತ್ತರ ಎಂಬುದನ್ನು ನೋಡದೆ, ಯಾರು ಕೇಳಿದರೂ ತುಂಬ ಪ್ರೀತಿಯಿಂದ ಮುನ್ನುಡಿ, ಹಿನ್ನುಡಿ ಮತ್ತು ಬೆನ್ನುಡಿ ಬರೆದು ಕೊಡುತ್ತಿದ್ದರು. ಈ ರೀತಿ ಅವರು ಹೊಸ ಪೀಳಿಗೆಯ ಅನೇಕ ಲೇಖಕರನ್ನು ಪ್ರೋತ್ಸಾಹಿಸಿದ್ದಾರೆ.

ಕಳೆದ ಶತಮಾನದ ಐವತ್ತರ ದಶಕದಲ್ಲಿ ಬರವಣಿಗೆ ಆರಂಭಿಸಿದ ದೇಸಾಯಿಯವರು ಕಳೆದ ಶತಮಾನದ ತೊಂಬತ್ತರ ದಶಕದ ಮಧ್ಯಭಾಗದವರೆಗೂ ಸಾಹಿತ್ಯಿಕವಾಗಿ ಕ್ರಿಯಾಶೀಲರಾಗಿದ್ದರು. ಸಣ್ಣಕಥೆಯ ಮೂಲಕ ಶುರುವಾದ ಅವರ ಬರವಣಿಗೆ ಮುಂದೆ ಕಾದಂಬರಿ, ವಿಮರ್ಶೆ ಮತ್ತು ಅನುವಾದ ಪ್ರಕಾರಗಳಿಗೂ ವಿಸ್ತರಿಸಿತು. ಕಳೆದ ಶತಮಾನದ ಐವತ್ತರ ದಶಕದಲ್ಲಿ ದೇಸಾಯಿಯವರ ‘ಮಳೆ’ ಎಂಬ ಕಥೆ ಪ್ರಕಟವಾಯಿತು. ಇಲ್ಲಿಂದ ಶುರುವಾದ ದೇಸಾಯಿಯವರ ಕಥಾ ರಚನೆ ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಪ್ರಕಟವಾದ ‘ವಿಯೋಗ’ ಎಂಬ ಕಥೆಯವರೆಗೂ ಮುಂದುವರೆಯಿತು. ‘ಮಂಜುಗಡ್ಡೆ’, ‘ಕ್ಷಿತಿಜ’, ‘ದಂಡೆ’, ‘ರಾಕ್ಷಸ’, ‘ಪರಿವರ್ತನೆ’, ‘ಕೂರ್ಮಾವತಾರ’, ‘ಶಾಂತಿನಾಥ ದೇಸಾಯಿ ಅವರ ಆಯ್ದ ಕಥೆಗಳು’ ಮತ್ತು ಅವರ ಮರಣಾನಂತರ ಪ್ರಕಟವಾದ ‘ಸಮಗ್ರ ಕತೆಗಳು’ ದೇಸಾಯಿಯವರ ಕಥಾಸಂಕಲನಗಳು. ದೇಸಾಯಿಯವರು ಒಟ್ಟು ನಲವತ್ತೊಂಬತ್ತು ಕಥೆಗಳನ್ನು ಬರೆದಿದ್ದಾರೆ. ‘ಚಂದೂ’, ‘ದಿಗ್ಭ್ರಮೆ’, ‘ಕ್ಷಿತಿಜ’, ‘ಗಂಡ ಸತ್ತ ಮೇಲೆ’, ‘ರಾಕ್ಷಸ’, ‘ನದಿಯ ನೀರು’, ‘ನಾನಾನ ತೀರ್ಥಯಾತ್ರೆ’, ‘ತೃಪ್ತ’, ‘ಭರಮ್ಯಾ ಹೋಗಿ ನಿಖಿಲನಾದದ್ದು’, ‘ಜವಾಬ್ದಾರಿ’ ಮತ್ತು ‘ಹೀರೊ’ ದೇಸಾಯಿಯವರ ಪ್ರಮುಖ ಕಥೆಗಳು. ದೇಸಾಯಿಯವರ ಅನೇಕ ಕಥೆಗಳು ಇಂಗ್ಲಿಷ್ ಸೇರಿದಂತೆ ಇತರೆ ಭಾರತೀಯ ಭಾಷೆಗಳಿಗೆ ಅನುವಾದವಾಗಿವೆ.

ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದೆಂದು ವಿಮರ್ಶಕರು ಮತ್ತು ಓದುಗರಿಂದ ಅಪಾರ ಮೆಚ್ಚುಗೆ ಪಡೆದ ಕಥೆ ‘ಕ್ಷಿತಿಜ’. ಈ ಕಥೆಯಲ್ಲಿ ಸಂಪ್ರದಾಯ ಮತ್ತು ಆಧುನಿಕತೆಗಳ ಸಂಘರ್ಷವನ್ನು ಕಾಣಬಹುದು. ನವ ಮಧ್ಯಮವರ್ಗದ ಸುಶಿಕ್ಷಿತ ಮಹಿಳೆಯಾದ ಮಂದಾಕಿನಿ ಮೂವತ್ತರ ಆಸುಪಾಸಿನಲ್ಲಿದ್ದರೂ ಸಹ ಅವಿವಾಹಿತೆ. ತಾಯಿ-ತಮ್ಮಂದಿರ ಸಲುವಾಗಿ ತನ್ನ ಸುಖವನ್ನು ಕಡೆಗಣಿಸಿ ತನ್ನ ಕುಟುಂಬಕ್ಕಾಗಿ ಜೀವ ತೇಯುತ್ತಿದ್ದಾಳೆ. ಸ್ಕಾಲರ್‌ಶಿಪ್ ದೊರೆತ ಕಾರಣ ಇಂಗ್ಲೆಂಡಿಗೆ ತೆರಳುತ್ತಿರುವ ಮಂದಾಕಿನಿಗೆ ಹಡಗಿನ ಪ್ರಯಾಣದಲ್ಲಿ ಎದುರಾಗುವ ಅನುಭವಗಳು ಅವಳು ಇದುವರೆಗಿನ ತನ್ನ ಜೀವನದ ಕುರಿತು ಮರುಚಿಂತನೆ ಮಾಡುವಂತೆ ಪ್ರೇರೇಪಿಸುತ್ತವೆ. ತುಂಬ ಸಾಂಪ್ರದಾಯಿಕ ಕುಟುಂಬದ ಹಿನ್ನಲೆಯಿಂದ ಬಂದ ಮಂದಾಕಿನಿಗೆ ಹಡಗಿನ ಪ್ರಯಾಣ ಒಂದು ಸಾಂಸ್ಕೃತಿಕ ಆಘಾತವುಂಟುಮಾಡುತ್ತದೆ. ಈ ಪ್ರಯಾಣದಲ್ಲಿ ಭೇಟಿಯಾದ ಮಿಸ್ ಜೋಸೆಫ್, ಮುಖರ್ಜಿ, ಮೆಕಾರ್ಥಿ ಮತ್ತು ಲೆಗ್ವಿಯ ಪರಿಚಯ ಅವಳ ಮೇಲೆ ತೀವ್ರ ಪ್ರಭಾವ ಬೀರುತ್ತವೆ. ಈ ಭಿನ್ನ ಸ್ತರದ ಜನರ ಭಿನ್ನ ಶೈಲಿಯ ಜೀವನ ಕಂಡ ಮಂದಾಕಿನಿಯ ವ್ಯಕ್ತಿತ್ವಲ್ಲಿ ಅನೇಕ ಸೂಕ್ಷ್ಮ ಬದಲಾವಣೆಗಳುಂಟಾಗುವುದನ್ನು ಕಾಣಬಹುದು.

ಲೆಗ್ವಿಯತ್ತ ಮಂದಾಕಿನಿ ಆಕರ್ಷಿತಳಾದರೂ ರಕ್ತಗತವಾಗಿ ಬಂದ ಸಂಕೋಚ ಭಾವನೆಯಿಂದ ಹೊರಬರಲು ಅವಳಿಗೆ ಸಾಧ್ಯವಾಗುವುದಿಲ್ಲ. ಹಡಗು ಇಂಗ್ಲೆಂಡ್ ಸಮೀಪಿಸಿದರೂ ಮಂದಾಕಿನಿ ತನ್ನ ದ್ವಂದ್ವ ಭಾವನೆಗಳಿಂದ ಮುಕ್ತಳಾಗುವುದಿಲ್ಲ. ನವ ಮಧ್ಯಮವರ್ಗದ ಸುಶಿಕ್ಷಿತ ಸ್ತ್ರೀಯಾದ ಮಂದಾಕಿನಿ ಆಧುನಿಕಳಾದರೂ ಸಹ ಸಂಪ್ರದಾಯದ ಪರಿಧಿಯನ್ನು ಮೀರುವಷ್ಟು ಸಮರ್ಥಳಲ್ಲ. ಇಲ್ಲಿ ದೇಸಾಯಿಯವರು ಏಕಕಾಲಕ್ಕೆ ಮಂದಾಕಿನಿಯ ಒಳಮನಸ್ಸಿನ ದ್ವಂದ್ವಗಳು ಮತ್ತು ಸಂಪ್ರದಾಯ ಹಾಗೂ ಆಧುನಿಕತೆಗಳು ಪರಸ್ಪರ ಎದುರಾದಾಗ ಉಂಟಾಗುವ ಘರ್ಷಣೆಗಳನ್ನು ತುಂಬ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ. ಸಂಪ್ರದಾಯವನ್ನು ಬಿಡಲಾಗದೆ, ಆಧುನಿಕತೆಯನ್ನು ಒಪ್ಪಿಕೊಳ್ಳಲಾಗದೆ ಒದ್ದಾಡುವ ಮಂದಾಕಿನಿಯದು ಕನ್ನಡದ ಶ್ರೇಷ್ಠ ಸ್ತ್ರೀ ಕಥಾಪಾತ್ರಗಳಲ್ಲೊಂದು.

ದೇಸಾಯಿಯವರ ಕಥನ ಸಾಹಿತ್ಯದಲ್ಲಿ ‘ಭರಮ್ಯಾ ಹೋಗಿ ನಿಖಿಲನಾದದ್ದು’ ಕಥೆಗೆ ಮಹತ್ವದ ಸ್ಥಾನವಿದೆ. ಮೊದಲ ಬಾರಿಗೆ ಸಾಮಾಜಿಕ ಸಂಘರ್ಷವೊಂದರ ಸ್ಪಷ್ಟ ಮತ್ತು ನೇರ ಚಿತ್ರಣವನ್ನು ಈ ಕಥೆಯಲ್ಲಿ ಕಾಣಬಹುದು. ಅನಿವಾರ್ಯ ಕಾರಣಗಳಿಂದ ದಾದಾಸಾಹೇಬ ಪಾಟೀಲರ ಮನೆಗೆ ಕೆಲಸಾದಾಳಾಗಿ ಬರುವ ಭರಮ್ಯಾ ಅಸಹಾಯಕನಾದರೂ ದುರ್ಬಲನಲ್ಲ. ವೇಷಭೂಷಣಗಳಲ್ಲಿ ಭರಮ್ಯಾ ನಿಖಿಲನಿಗೆ ಕಡಿಮೆಯಿಲ್ಲ. ಭರಮ್ಯಾನಿಗೆ ತಾನು ದುಡಿದು ಗಳಿಸಿದ ಅಲ್ಪಸ್ವಲ್ಪ ಹಣ ಮತ್ತು ಇಂಗ್ಲಿಷ್ ಭಾಷೆಯ ತಕ್ಕಮಟ್ಟಿಗಿನ ಪರಿಚಯ ಸಾಕಷ್ಟು ಆತ್ಮವಿಶ್ವಾಸ ನೀಡಿದೆ.

ಪಾಟೀಲ ಮನೆತನದ ಸರ್ವಾಧಿಕಾರಿ ಧೋರಣೆ ಮತ್ತು ನಿಖಿಲನ ಆಟಾಟೋಪವನ್ನು ಒಪ್ಪಲಾಗಲಿ, ಸಹಿಸಲಾಗಲಿ ಭರಮ್ಯಾನಿಗೆ ಸಾಧ್ಯವಿಲ್ಲ. ಸಮಾನವಯಸ್ಕರಾದ ನಿಖಿಲ ಮತ್ತು ಭರಮ್ಯಾರಲ್ಲಿ ಸಹಜವಾಗಿಯೇ ಹರೆಯಕ್ಕೆ ಸಹಜವಾದ ಅನೇಕ ಬಯಕೆಗಳಿವೆ. ಅದೇ ರೀತಿ ಮಾತ್ಸರ್ಯವೂ ಇದೆ. ತನ್ನನ್ನು ತಾನು ನಿಖಿಲನೊಂದಿಗೆ ಹೋಲಿಸಿಕೊಳ್ಳುವ ಭರಮ್ಯಾನಿಗೆ ತಾನು ನಿಖಿಲನಗಿಂತ ಯಾವುದರಲ್ಲೂ ಕಡಿಮೆಯಿಲ್ಲವೆಂಬ ಭಾವನೆ ಬಲಿಯತೊಡಗುತ್ತದೆ. ಭರಮ್ಯಾ ನಿಖಿಲನನ್ನು ಪ್ರತಿಯೊಂದು ವಿಷಯದಲ್ಲೂ ಅನುಕರಿಸಲು ತೊಡಗುತ್ತಾನೆ. ನಿಖಿಲನ ಸೈಕಲ್ಲನ್ನು ತನ್ನದೆಂಬಂತೆ ಬಳಸಿಕೊಳ್ಳುತ್ತಾನೆ.

ನಿಖಿಲನ ಪ್ರೇಯಸಿ ತನ್ನ ಪ್ರೇಯಸಿ ಯಾಕಾಗಬಾರದು? ತಾನು ನಿಖಿಲನಿಗಿಂತ ಯಾವುದರಲ್ಲಿ ಕಡಿಮೆ? ಎಂಬ ಹುಂಬ ಧೈರ್ಯದಿಂದ ನಿಖಿಲನ ಗೆಳತಿ ಶಾಲಿನಿಯನ್ನು ಅಪಹರಿಸುತ್ತಾನೆ. ಶಾಲಿನಿಗೆ ತನ್ನ ಬಗೆಗಿರುವ ತಿರಸ್ಕಾರ ಕಂಡು ದುಃಖಿತನಾದ ಭರಮ್ಯಾ ಅವಳನ್ನು ಬಿಡುಗಡೆ ಮಾಡುತ್ತಾನೆ. ಮುಂದೆ ಈ ಘಟನೆ ತೀವ್ರ ಸ್ವರೂಪ ಪಡೆದು ಪಾಟೀಲ ಮನೆತನದವರಿಂದ ಭರಮ್ಯಾ ಮತ್ತು ಕಲ್ಲಪ್ಪನ ಕುಟುಂಬ ಸಾಕಷ್ಟು ನೋವುಣ್ಣಬೇಕಾಗುತ್ತದೆ. ಇದೆಲ್ಲರಿಂದ ಬಿಡುಗಡೆ ಪಡೆಯಲು ಬಯಸಿದ ಭರಮ್ಯಾ ಊರು ಬಿಡುತ್ತಾನೆ. ಭರಮ್ಯಾ ಕೊನೆಗೆ ಮಿಲಿಟರಿ ಸೇರಿ ಅಲ್ಲಿ ತನ್ನ ಹೆಸರನ್ನು ನಿಖಿಲ ಪಾಟೀಲ ಎಂದು ಬದಲಾಯಿಸಿಕೊಂಡು ಹೊಸ ಹುಟ್ಟು ಪಡೆಯಬಯಸುವುದು ಅರ್ಥಪೂರ್ಣವಾಗಿದೆ.

ದೇಸಾಯಿಯವರು ಭರಮ್ಯಾ ಮತ್ತು ನಿಖಿಲರ ಪಾತ್ರಗಳ ಮೂಲಕ ಸ್ಪಷ್ಟವಾಗಿ ವರ್ಗಕಲಹವೊಂದರ ಚಿತ್ರಣ ನೀಡಿದ್ದಾರೆ. ಕಥೆಯ ಕೊನೆಯಲ್ಲಿ ಭರಮ್ಯಾ ಕನಸಿನಲ್ಲಿ ಯುದ್ಧವಿಮಾನದಲ್ಲಿ ಬಂದು ಪಾಟೀಲರ ಮನೆಯ ಮೇಲೆ ಬಾಂಬೆಸೆದು ನಾಶ ಮಾಡುವುದರಲ್ಲಾಗಲಿ ಅಥವಾ ಮಿಲಿಟರಿಗೆ ಸೇರಿ ತನ್ನ ಹೆಸರು ನಿಖಿಲ ಎಂದು ಬದಲಾಯಿಸಿಕೊಳ್ಳುವುದರಲ್ಲಾಗಲಿ ಬದಲಾವಣೆಯ ಸ್ಪಷ್ಟ ಸಂಕೇತಗಳಿರುವುದು ಗಮನಾರ್ಹ. ಶಾಂತಿನಾಥ ದೇಸಾಯಿಯವರು ‘ಮುಕ್ತಿ’, ‘ವಿಕ್ಷೇಪ’, ‘ಸೃಷ್ಟಿ’, ‘ಸಂಬಂಧ’, ‘ಬೀಜ’, ‘ಅಂತರಾಳ’ ಮತ್ತು ‘ಓಂಣಮೋ’ ಎಂಬ ಏಳು ಕಾದಂಬರಿಗಳನ್ನು ಬರೆದಿದ್ದಾರೆ. ಕನ್ನಡದ ಪ್ರಪ್ರಥಮ ನವ್ಯ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ವಿಶಿಷ್ಟ ಕೃತಿ ಮುಕ್ತಿ (೧೯೬೧). ಈ ಕಾದಂಬರಿಯ ವಿನೂತನ ಕಥಾವಸ್ತು, ವಿಭಿನ್ನ ನಿರೂಪಣಾ ಶೈಲಿ, ಧಾರವಾಡ ಭಾಷೆಯ ಗತ್ತು ಮತ್ತು ದಿನಚರಿಯ ಮೂಲಕ ಸಾಗುವ ಕಾದಂಬರಿಯ ನಿರೂಪಣೆ ಒಂದು ಕಾಲದ ಓದುಗರ ಮೇಲೆ ಅಪಾರ ಮೋಡಿ ಮಾಡಿತ್ತು. ಧಾರವಾಡದ ಕಾಲೇಜುಗಳು ಮತ್ತು ಧಾರವಾಡದಲ್ಲಿ ಕಲಿಯುತ್ತಿರುವ ಹುಡುಗಿಯರಿಗೆ ತಾರಾ ವರ್ಚಸ್ಸು ತಂದುಕೊಟ್ಟ ಖ್ಯಾತಿ ‘ಮುಕ್ತಿ’ ಕಾದಂಬರಿಗೆ ಸಲ್ಲುತ್ತದೆ.
ʻಮುಕ್ತಿʼ ಕಾದಂಬರಿಯ ಗೌರೀಶ ಕನ್ನಡ ಕಾದಂಬರಿ ಲೋಕದ ಮೊದಲ ಭಗ್ನಪ್ರೇಮಿ ಮತ್ತು ವಿಷಾದ ನಾಯಕ. ಕಾಮಿನಿಯನ್ನು ಹುಚ್ಚನಂತೆ ಪ್ರೇಮಿಸಿದ ಗೌರೀಶ ಈ ಕಾದಂಬರಿಯ ನಾಯಕನಾದರೆ, ಹೆಣ್ಣೆಂದರೆ ಚಂಚಲೆ ಎಂಬ ಪದಕ್ಕೆ ಜೀವಂತ ಉದಾಹರಣೆಯಂತಿರುವ ಕಾಮಿನಿ ಈ ಕಾದಂಬರಿಯ ನಾಯಕಿಯೂ ಹೌದು, ಖಳನಾಯಕಿಯೂ ಹೌದು! ಕಾಮಿನಿಯನ್ನು ಇನ್ನಿಲ್ಲದಂತೆ ಪ್ರೀತಿಸಿ ಅವಳಿಂದ ತಿರಸ್ಕೃತನಾಗುವ ಗೌರೀಶ ಡಾಲಿಯ ಸಂಗದಲ್ಲಿ ನವಚೈತನ್ಯ ಪಡೆಯುತ್ತಾನೆ. ಡಾಲಿಯ ಪ್ರೀತಿ ಅವನಲ್ಲಿ ಹೊಸ ಜೀವನೋತ್ಸಾಹ ಮೂಡಿಸುತ್ತದೆ. ನವ್ಯ ಕಾದಂಬರಿಯಾದರೂ ‘ಮುಕ್ತಿ’ ಸುಖಾಂತ್ಯ ಕಾಣುವುದು ವಿಶೇಷ. ಓದುಗರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದ ಕಾದಂಬರಿ ‘ಮುಕ್ತಿ’.

‘ವಿಕ್ಷೇಪ’ (೧೯೭೩) ರಾಹುಲ ಎಂಬ ಆಧುನಿಕ ಯುವಕನ ತಳಮಳವನ್ನು ಸೊಗಸಾಗಿ ನಿರೂಪಿಸಿರುವ ದೇಸಾಯಿಯವರ ಮತ್ತೊಂದು ನವ್ಯ ಕಾದಂಬರಿ. ‘ಮುಕ್ತಿ’ಯ ನಾಯಕ ಗೌರೀಶನಿಗೂ, ‘ವಿಕ್ಷೇಪ’ದ ನಾಯಕ ರಾಹುಲನಿಗೂ ಅಜಗಜಾಂತರ ವ್ಯತ್ಯಾಸವಿದೆ. ಗೌರೀಶ ಭಗ್ನಪ್ರೇಮಿಯಾದರೆ, ರಾಹುಲ ಪ್ಲೇಬಾಯ್. ಗೌರೀಶ ಕಾಮಿನಿಯಂತಹ ಕೆಟ್ಟ ಹುಡುಗಿಯನ್ನು ಆರಾಧಿಸುತ್ತ, ಅವಳ ಪ್ರೀತಿ ಸಿಗದೆ ಒಳಗೊಳಗೇ ನೊಂದರೆ, ರಾಹುಲ ಕಾಮಿನಿಯಂತಹ ಹತ್ತು ಹಲವು ಹುಡುಗಿಯರ ಜೀವನದ ಜೊತೆ ಚೆಲ್ಲಾಟವಾಡುವ ಆಧುನಿಕ ಮನೋಭಾವದ ಯುವಕ. ಆಧುನಿಕ ಜೀವನಕ್ಕೆ ಒಗ್ಗಿ ಹೋಗಿರುವ ರಾಹುಲನಂತಹ ಯುವಕನಿಗೆ ಕೊನೆಗೂ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಗೌರೀಶನಿಗೆ ಸಾಧ್ಯವಾದ ತೀವ್ರ ಪ್ರೇಮ ರಾಹುಲನಿಗೆ ಸಾಧ್ಯವಾಗುವುದಿಲ್ಲ. ಹಲವು ಹೆಣ್ಣುಗಳು ಅವನ ಜೀವನದಲ್ಲಿ ಬಂದರೂ ಅವನಿಗೆ ನಿಜವಾದ ಪ್ರೀತಿಯ ಅನುಭವ ದಕ್ಕುವುದಿಲ್ಲ.

ಇಂದಿನ ಅತ್ಯಾಧುನಿಕ ಮತ್ತು ಉಡಾಫೆ ಮನೋಭಾವದ ಯುವಕರ ಪ್ರತಿನಿಧಿಯಂತಿರುವವ ರಾಹುಲ. ಇದು ಪಕ್ಕಾ ದೇಸಾಯಿತನದ ಛಾಪಿರುವ ನವ್ಯ ಕಾದಂಬರಿ.
‘ಬೀಜ’ (೧೯೮೩) ದೇಸಾಯಿಯವರ ಉತ್ತಮ ಕಾದಂಬರಿಗಳಲ್ಲೊಂದು. ದೇಸಾಯಿಯವರು ಮೊಟ್ಟ ಮೊದಲ ಬಾರಿಗೆ ನವ್ಯದ ಪರಿಧಿಯಿಂದ ಆಚೆ ಬಂದು ಸಮಾಜಮುಖಿ ಧೋರಣೆಯಿಂದ ಬರೆದ ಕಾದಂಬರಿ ‘ಬೀಜ’. ಕನ್ನಡದ ಮತ್ತೊಬ್ಬ ದಿಗ್ಗಜ ಲೇಖಕ ಯು.ಆರ್. ಅನಂತಮೂರ್ತಿಯವರ ‘ಭಾರತೀಪುರ’ ಕಾದಂಬರಿಗೆ ಹೋಲಿಸ ಬಹುದಾದ ಕಾದಂಬರಿ ‘ಬೀಜ’. ಈ ಕಾದಂಬರಿಯ ಕಥಾನಾಯಕ ಶ್ರೇಯಾಂಸ ತಂದೆಯ ವಿರುದ್ಧ ಬಂಡೆದ್ದು ಊರು ಬಿಟ್ಟು ಮುಂಬಯಿ ಸೇರಿದವನು. ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿ ಮುಂಬೈವಾಸಿಯಾಗಿರುವ ಶ್ರೇಯಾಂಸ ತಂದೆಯ ಸಾವಿನ ನಂತರ ಊರಿಗೆ ಮರಳುತ್ತಾನೆ. ಮನೆತನದ ಜವಾಬ್ದಾರಿ ಹೊರುವುದರೊಂದಿಗೆ ಊರಿನಲ್ಲಿ ಕೆಲವು ಸಾಮಾಜಿಕ ಬದಲಾವಣೆಗಳನ್ನು ತರಲು ಶ್ರಮಿಸುತ್ತಾನೆ. ಇದಕ್ಕೆ ವಿಧವೆಯಾದ ಅವನ ಹಳೆಯ ಪ್ರೇಯಸಿ ರೇವತಿಯ ಬೆಂಬಲ ಸಹ ದೊರೆಯುತ್ತದೆ. ಶ್ರೇಯಾಂಸನ ಸಮಾಜ ಸುಧಾರಣಾ ಕಾರ್ಯಗಳಿಗೆ ಹಲವು ವಿಘ್ನಗಳು ಎದುರಾದರೂ ಸಹ ಅವನ್ನೆಲ್ಲ ಮೀರಿ ಅವನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅರ್ಥಪೂರ್ಣವಾಗಿದೆ.

ಶಾಂತಿನಾಥ ದೇಸಾಯಿಯವರ ಕೊನೆಯ ಕಾದಂಬರಿ ‘ಓಂಣಮೋ’ (೧೯೯೮) ದೇಸಾಯಿಯವರ ಮರಣಾನಂತರ ಈ ಕಾದಂಬರಿ ಪ್ರಕಟವಾಯಿತು. ‘ಓಂಣಮೋ’ ಕಾದಂಬರಿಯ ಮೂಲಕ ದೇಸಾಯಿಯವರು ಸ್ವಾತಂತ್ರ್ಯೋತ್ತರ ಕಾಲಘಟ್ಟದ ಧಾರವಾಡ ಭಾಗದ ಜೈನ್ ಮನೆತನವೊಂದರ ಏಳು-ಬೀಳುಗಳನ್ನು ತುಂಬ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿಯಲ್ಲೂ ಸಂಪ್ರದಾಯ ಮತ್ತು ಆಧುನಿಕತೆಗಳ ಮುಖಾಮುಖಿಯ ಸಮರ್ಥ ಚಿತ್ರಣವಿದೆ. ಅದೇ ರೀತಿ ಜೈನ್ ಧರ್ಮದ ಕುರಿತು ಸಾಕಷ್ಟು ಜಿಜ್ಞಾಸೆಯೂ ಇದೆ. ಒಟ್ಟಿನಲ್ಲಿ ‘ಓಂಣಮೋ’ ಕಾದಂಬರಿಯ ಸೊಗಸನ್ನು ಓದಿಯೇ ಸವಿಯಬೇಕು.

ದೇಸಾಯಿಯವರು ಕಥೆ-ಕಾದಂಬರಿ ಮಾತ್ರವಲ್ಲ ವಿಮರ್ಶೆ ಮತ್ತು ಅನುವಾದದಲ್ಲೂ ಕೆಲವು ಒಳ್ಳೆಯ ಕೃತಿಗಳನ್ನು ಕೊಟ್ಟಿದ್ದಾರೆ. ‘ಸಾಹಿತ್ಯ ಮತ್ತು ಭಾಷೆ’, ‘ಕನ್ನಡ ಕಾದಂಬರಿ ನಡೆದು ಬಂದ ದಾರಿ’ ಮತ್ತು ‘ನವ್ಯ ಸಾಹಿತ್ಯ ದರ್ಶನ’ ಅವರ ವಿಮರ್ಶಾ ಕೃತಿಗಳು. ಮರಾಠಿಯಿಂದ ಕನ್ನಡಕ್ಕೆ ‘ರಥಚಕ್ರ’ ಎಂಬ ಕಾದಂಬರಿಯನ್ನು ಅನುವಾದಿಸಿದ್ದಾರೆ. ಅನಂತಮೂರ್ತಿಯವರ ‘ಅವಸ್ಥೆ’ ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ‘ಭವಾನಿ ಭಟ್ಟಾಚಾರ್ಯ’ ಮತ್ತು ‘ಶಾಂತಾ ರಾಮರಾವ್’ ಎಂಬ ಮೊನೋಗ್ರಾಫುಗಳನ್ನು ಇಂಗ್ಲಿಷಿನಲ್ಲಿ ಬರೆದಿದ್ದಾರೆ. ಇನ್ನೂ ಹಲವು ಒಳ್ಳೆಯ ಇಂಗ್ಲಿಷ್ ಕೃತಿಗಳನ್ನು ತುಂಬ ಅಚ್ಚುಕಟ್ಟಾಗಿ ಸಂಪಾದಿಸಿ ಕೊಟ್ಟಿದ್ದಾರೆ.
ನವ್ಯ ಸಾಹಿತ್ಯದ ಪ್ರಬಲ ಪ್ರತಿಪಾದಕರಾಗಿದ್ದ ಶಾಂತಿನಾಥ ದೇಸಾಯಿ ಮತ್ತು ರಾಮಚಂದ್ರ ಶರ್ಮ ಕೊನೆಯವರೆಗೂ ನವ್ಯ ಲೇಖಕರಾಗಿದ್ದರು ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ. ಶರ್ಮರ ವಿಷಯದಲ್ಲಿ ಇದನ್ನು ಒಪ್ಪಬಹುದಾದರೂ ದೇಸಾಯಿಯವರ ವಿಷಯದಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ. ದೇಸಾಯಿಯವರು ಮೊದಮೊದಲು ಬರೆದ ಕಥೆ-ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ಕಂಡು ಬರುವುದಿಲ್ಲವೆಂಬುದು ನಿಜವಾದರೂ ನಂತರದ ವರ್ಷಗಳಲ್ಲಿ ಅವರು ನವ್ಯತೆಯನ್ನು ಮೀರಿ ಸ್ಪಷ್ಟವಾದ ಸಾಮಾಜಿಕ ಪ್ರಜ್ಞೆಯಿಂದ ಬರೆದರು ಎಂಬುದು ಗಮನಿಸಬೇಕಾದ ಸಂಗತಿ. ‘ಭರಮ್ಯಾ ಹೋಗಿ ನಿಖಿಲನಾದದ್ದು’ ತರಹದ ಕಥೆಗಳು ಮತ್ತು ‘ಬೀಜ’ ಕಾದಂಬರಿಯೇ ಇದಕ್ಕೆ ಸಾಕ್ಷಿ.

ಕನ್ನಡ ಕಥನ ಸಾಹಿತ್ಯದ ಇತಿಹಾಸವನ್ನು ಅವಲೋಕಿಸಿದರೆ ದೇಸಾಯಿಯವರ ಕಥೆ-ಕಾದಂಬರಿಗಳಲ್ಲಿ ಕಂಡುಬರುವಷ್ಟು ಆಧುನಿಕ ಮತ್ತು ದಿಟ್ಟ ಸ್ತ್ರೀ ಪಾತ್ರಗಳು ಉಳಿದ ಕಥೆ-ಕಾದಂಬರಿಕಾರರಲ್ಲಿ ಕಂಡು ಬರುವುದು ಕಡಿಮೆ. ಮುಂದೆ ತುಂಬ ಸ್ಪಷ್ಟವಾಗಿ ಮತ್ತು ದಿಟ್ಟವಾಗಿ ಸ್ತ್ರೀವಾದಿ ಕಥೆಗಳನ್ನು ಬರೆದು ಖ್ಯಾತರಾದ ವೀಣಾ ಶಾಂತೇಶ್ವರರ ಕಥೆ-ಕಾದಂಬರಿಗಳ ಮೇಲೆ ಶಾಂತಿನಾಥ ದೇಸಾಯಿಯವರ ದಟ್ಟ ಪ್ರಭಾವವಾಗಿರುವುದನ್ನು ಗುರುತಿಸಬಹುದು.

ಶಾಂತಿನಾಥ ದೇಸಾಯಿಯವರು ಕನ್ನಡ ಕಥನ ಸಾಹಿತ್ಯದಲ್ಲಿ ಹತ್ತು ಹಲವು ಹೊಸ ಪ್ರಯೋಗಗಳನ್ನು ನಡೆಸಿದ್ದಾರೆ. ಬಹುಶಃ ಕನ್ನಡದಲ್ಲಿ ನಗರಪ್ರಜ್ಞೆಯ ಹಿನ್ನಲೆಯಲ್ಲಿ ಮೊದಲ ಬಾರಿಗೆ ಕಥೆಗಳನ್ನು ರಚಿಸಿದವರು ದೇಸಾಯಿಯವರು. ಸಂಪ್ರದಾಯ ಮತ್ತು ಆಧುನಿಕತೆಗಳ ನಡುವಿನ ಸಂಘರ್ಷದ ಸಮರ್ಥ ಚಿತ್ರಣವನ್ನು ದೇಸಾಯಿಯವರ ಕಥೆ-ಕಾದಂಬರಿಗಳಲ್ಲಿ ಕಾಣಬಹುದು. ಕನ್ನಡ ಕಥನ ಸಾಹಿತ್ಯದಲ್ಲಿ ಮೊದಲ ಬಾರಿಗೆ ಆಧುನಿಕ ಮತ್ತು ಮಹತ್ವಾಕಾಂಕ್ಷಿ ಸ್ತ್ರೀ ಪಾತ್ರಗಳು ಪ್ರವೇಶಿಸಿದ್ದು ದೇಸಾಯಿಯವರ ಕಥೆ-ಕಾದಂಬರಿಗಳ ಮೂಲಕ ಎಂಬುದು ಗಮನಾರ್ಹ.
ಕನ್ನಡ ಸಾಹಿತ್ಯಲೋಕಕ್ಕೆ ಇಷ್ಟೆಲ್ಲ ಕೊಡುಗೆ ನೀಡಿದ ಶಾಂತಿನಾಥ ದೇಸಾಯಿಯವರನ್ನು ನಮ್ಮ ತಥಾಕಥಿತ ವಿಮರ್ಶಕರು ಅಲಕ್ಷಿಸಿದ್ದಾರೆ. ಅವರ ಸಾಹಿತ್ಯಕ್ಕೆ ಸಲ್ಲಬೇಕಾದ ಮನ್ನಣೆ ನಮ್ಮ ವಿಮರ್ಶಕರಿಂದ ಸಂದಿಲ್ಲವೆಂಬುದು ವಿಷಾದದ ಸಂಗತಿ.

ದೇಸಾಯಿಯವರಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ಪ್ರಶಸ್ತಿ-ಪುರಸ್ಕಾರಗಳು, ಗೌರವ-ಸಮ್ಮಾನಗಳು ಸಹ ಅವರು ಬದುಕಿದ್ದಾಗ ಸಿಗಲಿಲ್ಲ. ‘ಓಂಣಮೋ’ ಕಾದಂಬರಿಗೆ ಮರಣೋತ್ತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕದ್ದು ಸ್ವಲ್ಪಮಟ್ಟಿಗೆ ಸಮಾಧಾನದ ಸಂಗತಿ. ಕನ್ನಡದ ಶ್ರೇಷ್ಠ ವಿಮರ್ಶಕರಾದ ಜಿ.ಎಸ್. ಆಮೂರರು ಮಾತ್ರ ದೇಸಾಯಿಯವರ ಕುರಿತು ಒಳ್ಳೆಯ ವಿಮರ್ಶೆ ಬರೆದಿದ್ದಾರೆ. ದೇಸಾಯಿಯವರ ಕಥನ ಸಾಹಿತ್ಯದ ಮಹತ್ವವನ್ನು ಆಮೂರರು ತುಂಬ ಚೆನ್ನಾಗಿ ಗುರುತಿಸಿ, ಗೌರವಿಸಿದ್ದಾರೆ.

ಜಿ.ಎಸ್.ಆಮೂರರ /ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆ – ಶಾಂತಿನಾಥ ದೇಸಾಯಿ’, ಟಿ. ಪಿ. ಅಶೋಕರ ‘ದೇಸಾಯಿ ಕಥನ’, ಪ್ರೀತಿ ಶುಭಚಂದ್ರರ ‘ಶಾಂತಿನಾಥ ದೇಸಾಯಿ’, ಗಿರಡ್ಡಿ ಗೋವಿಂದರಾಜರು ಸಂಪಾದಿಸಿದ ‘ಶಾಂತಿನಾಥ ದೇಸಾಯಿಯವರ ಸಾಹಿತ್ಯ’, ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ‘ಶಾಂತಿನಾಥ ದೇಸಾಯಿ – ಸಾಹಿತ್ಯ ಮತ್ತು ವ್ಯಕ್ತಿತ್ವ’ ಹಾಗೂ ಸಂಚಯ ಪತ್ರಿಕೆಯ ವಿಶೇಷ ಸಂಚಿಕೆ ‘ಮುಕ್ತಛಂದ’ ಹೊರತು ಪಡಿಸಿ ಕನ್ನಡದಲ್ಲಿ ದೇಸಾಯಿಯವರ ಕುರಿತು ಬೇರೆ ಪುಸ್ತಕಗಳು ಲಭ್ಯವಿಲ್ಲ.

ದೇಸಾಯಿಯವರ ‘ಮುಕ್ತಿ’, ‘ಓಂಣಮೋ’, ‘ಸಮಗ್ರ ಕತೆಗಳು’ ಮತ್ತು ‘ಶಾಂತಿನಾಥ ದೇಸಾಯಿ ಅವರ ಕವಿತೆಗಳು’ (ಸಂ. ಶಂಕರ ಮ. ಪಾಟೀಲ) ಪುಸ್ತಕಗಳು ಮಾತ್ರ ಸದ್ಯ ಓದುಗರಿಗೆ ಲಭ್ಯ. ದೇಸಾಯಿಯವರ ‘ವಿಕ್ಷೇಪ’, ‘ಸೃಷ್ಟಿ’, ‘ಸಂಬಂಧ’, ‘ಅಂತರಾಳ’ ಮತ್ತು ‘ಸಮಗ್ರ ವಿಮರ್ಶೆ’ ಪುಸ್ತಕಗಳು ಮರುಮುದ್ರಣವಾಗಬೇಕಿವೆ. ದೇಸಾಯಿಯವರಂತಹ ಮಹತ್ವದ ಲೇಖಕರ ಕೃತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸದಾ ಓದುಗರಿಗೆ ಸಿಗುವಂತಿರಬೇಕು. ದೇಸಾಯಿಯವರ ಕೃತಿಗಳು ಮತ್ತೆ ಮರುಮುದ್ರಣವಾಗಿ ಓದುಗರಿಗೆ ದೊರೆಯುವಂತಾಗಲಿ. ಅವರ ಕೃತಿಗಳು ಮರು ಓದಿನ ಮೂಲಕ ಮತ್ತೆ ಚರ್ಚೆಗೊಳಗಾಗಲಿ. ಇದೇ ದೇಸಾಯಿಯವರಿಗೆ ನಾವು ನಿಜಕ್ಕೂ ಸಲ್ಲಿಸಬಹುದಾದ ಗೌರವ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಶಾಂತಿನಾಥ ದೇಸಾಯಿ – ಒಂದು ಸ್ಮರಣೆ”

  1. ಮೋಹನ ಭಟ್ಟ

    ಶಾಂತಿನಾಥ ದೇಸಾಯಿಯವರು ನೆಚ್ಚಿನ ಬರಹಗಾರರು. ಮೊದಲ ಭೇಟಿಯಲ್ಲಿ ಅವರು ಕಿರಿಯನಾದ. ನನ್ನ್ನನ್ನು ತುಂಬ ಆತ್ಮೀಯತೆ ಯಿಂದ ಮಾತನಾಡಿ, ಬರಹಗಳಿಗೆ ಒಂದು ದಿಕ್ಸೂಚಿ ಯನ್ನು ಸೂಚಿಸಿದ್ದರು. ಅವರ ಸಂಬಂಧ ಕಾದಂಬರಿಯ ಬಗ್ಗೆ
    ನಾನು ಉದಯವಾಣಿಯಲ್ಲಿ ಬರೆದಿದ್ದೆ. ಅದನ್ನು ಅವರು ಮೆಚ್ಚಿದ್ದರು. ಅವರ ಬರಹಗಳನ್ನು ಆಸಕ್ತಿ ಯಿಂದ ಓದಿದ್ದೇನೆ. ಅವರ ಶಾಂತ, ನಗುಮುಖ ನನ್ನ ಮನದಲ್ಲಿ ಹಸಿರಾಗಿದೆ. ಅಪರೂಪದ ವ್ಯಕ್ತಿತ್ವ ವನ್ನು ಹೊಂದಿದ್ದ ಶಾಂತಿನಾಥ ದೇಸಾಯಿ ಯವರ ಬರಹಗಳು ಸಾಹಿತ್ಯ ಕ್ಷೇತ್ರದ ಮೈಲುಗಲ್ಲುಗಳು.

  2. Chintamani Sabhahit

    ಕನ್ನಡದ ನವ್ಯ, ನವೋದಯ ಕಾಲದ ಓರ್ವ ಅಪೂರ್ವ ಲೇಖಕ, ಕತೆಗಾರ, ಕಾದಂಬರಿಕಾರ, ಅನುವಾದಕ, ಸಂಪಾದಕ, ಸಾಹಿತಿ ಶಾಂತಿನಾಥ ದೇಸಾಯಿಯವರ ಕೃತಿಗಳ ಸಮಗ್ರ ಪರಿಚಯದಲ್ಲಿರುವ ಭಾಷೆಗೆ ನಿರ್ಲಿಪ್ತತೆಯೇ ಜೀವಾಳ. ಹಂಬಲ ಅಥವಾ ಆಶಯವಿರದೇ ಸೃಷ್ಟಿಯಾಗುವದಿಲ್ಲ. ಆದರೆ, ಲೇಖನದ ಒಳನೋಟದಲ್ಲಿ, ದೇಸಾಯಿಯವರ ವಿವಿಧ – ವಿಶೇಷ ಕೃತಿಗಳ ಪರಿಭಾಷೆಯನ್ನು ಅವಲೋಕಿಸುವ, ಹಲವು ಸಲ ಹತ್ತಿರದಿಂದ, ಕೆಲವು ಸಲ ದೂರದಿಂದಲೂ ಹತ್ತಿರವನ್ನು ಬಿಡದ, ಬೇರೆ ಬೇರೆ ಕೋನಗಳಿಂದ ವಿಶ್ಲೇಷಿಸುವ, ಯೋಗ್ಯತೆಯಿದ್ದರೂ ಯೋಗವಿರದ ಅನ್ಯಾಯವನ್ನು ಮರೆಯದೆ, ಅವರ ಆಯ್ದ ಪ್ರಮುಖ ಕತೆಗಳ, ಕಾದಂಬರಿಗಳ ಸಂಕ್ಷಿಪ್ತ, ಆದರೆ, ಮಿಂಚಿನ ಚಿತ್ರಣದಲ್ಲಿ, ಸ್ಪಷ್ಟವಾದ, ನಿಶಿತ ಹಾಗೂ ನಿಶ್ಚಿತ ಲವಲವಿಕೆಯಿದೆ!

    ಮರಾಠಿಯಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲೀಷಿಗೆ, ಅನೇಕ ಸ್ವಂತ ಇಂಗ್ಲಿಷ್ ಕೃತಿಗಳಿಗೆ, ಕೆಲವು ಇಂಗ್ಲಿಷ್ ಸಂಪಾದನೆಗಳಿಗೆ, ಕನ್ನಡದ ಕಥೆ, ಕಾದಂಬರಿ, ವಿಮರ್ಶೆಗಳಲ್ಲೆಲ್ಲ ಹೊಸ ಹೊಸ ಪ್ರಯೋಗ ಮಾಡುತ್ತಾ ಬಂದಿರುವ ದೇಸಾಯಿಯವರು, ಶಾಂತಿನಾಥರಾಗೇ ಹೆಚ್ಚು ಮಿಂಚಿದ್ದಾರೆ ಅನ್ನುವುದು ನಿರ್ವಿವಾದ. ಪಟ್ಟಭದ್ರ ಹಿತಾಸಕ್ತಿಗಳುಳ್ಳ ವಿಮರ್ಶಕ ಶಕ್ತಿಗಳು ಸಮಕಾಲೀನ ಗೌರವಿಕೆಯ ಹಂಚಿಕೆದಾರರಾಗಬಹುದೇ, ಹೊರತು ಕಾಲದ ವ್ಯಾಜ ಬಧ್ಧ ಸಂಯುಕ್ತತೆಯಲ್ಲಿ ಶಾಂತಿನಾಥರ ಕೃತಿಗಳು ಲಭ್ಯವಾಗಿರಲೇ ಬೇಕಾದ ಜರೂರನ್ನು ಗುರುತಿಸಿದ್ದು, ವಿಶೇಷ ಕಾಳಜಿಯ ಹಾಗೂ ಸವ್ಯ ಸಾಚೀ ಸದಾಶಯಭರಿತ, ಮೆಚ್ಚಲೇ ಬೇಕಾದ ಅನುಕಂಪದ ದೃಷ್ಟಿ.

    ಇಡೀ ಲೇಖನದ ವಿವೇಚನೆಯಲ್ಲಿ, ಆಸ್ಥೆಯ ಬಹು ಅಪರೂಪತೆಯಿದೆ, ಅಪಾರ ಪ್ರೇಮವಿದೆ, ಕಳಕಳಿಯಿದೆ, ಪೂರಾ ಸಮಗ್ರತೆಯಲ್ಲಿ, ಸಂವೇದನಾಶೀಲತೆಯನ್ನು ಸಂಯಮದಿಂದ ಗೃಹಿಸುವ, ನಿರ್ದಿಷ್ಟ ಹಳಿಯಲ್ಲೇ ದಿಟ್ಟವಾಗಿ ಸಾಗುವ ದಿವ್ಯ ನಿರ್ಲಿಪ್ತತೆಯಿದೆ.

    ಇದೇ, ಅಂಕಣದ ಈ ಲೇಖನದ ಆಕರ್ಷಕ ಅಂಶ! ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter