ಒಂದಾನೊಂದು ಕಾಲದಲ್ಲಿ ಸ್ವಿಜರ್ಲ್ಯಾಂಡ್ ದೇಶದಲ್ಲಿ ಪ್ರಖ್ಯಾತ ಈಡುಗಾರ (ಬಿಲ್ಲುಗಾರ) ನೊಬ್ಬನಿದ್ದನು. ಅವನ ಹೆಸರು ವಿಲಿಯಂ ಟೆಲ್ ಎಂದಾಗಿತ್ತು. ಅವನಿಗೆ ಹತ್ತು ವರ್ಷದ ಮಗನಿದ್ದನು. ತಂದೆ ಮಗ ಇಬ್ಬರೂ ಪರ್ವತ ಕಣಿವೆಗಳಲ್ಲಿ, ಕಾಡು ಮೇಡುಗಳಲ್ಲಿ ಆಗಾಗಿ ಬೇಟೆಗಾಗಿ ಹೋಗುತ್ತಿದ್ದರು. ಒಂದು ದಿನ ತಂದೆ ಮಗ ಇಬ್ಬರೂ ಪಕ್ಕದ ಪಟ್ಟಣಕ್ಕೆ ಹೋದರು. ಅಲ್ಲಿ ಉದ್ದವಾದ ಗಳುವೊಂದಕ್ಕೆ ಟೊಪ್ಪಿಗೆ ಒಂದನ್ನು ನೇತು ಹಾಕಿದ್ದರು. “ಇದೇನು” ಎಂದು ವಿಲಿಯಂ ಟೆಲ್ ಕೇಳಿದ. “ಅದು ನಮ್ಮ ರಾಜನ ಟೊಪ್ಪಿಗೆ ,ಅದಕ್ಕೆ ನಮಸ್ಕಾರ ಮಾಡು ” ಎಂದು ರಾಜಭಟರು ಒತ್ತಾಯಿಸಿದರು. ” ದೇವರೊಬ್ಬನಿಗೆ ನಾನು ತಲೆಬಾಗುವುದು, ಬೇರಾರಿಗೂ ನಮಸ್ಕಾರ ಮಾಡುವುದಿಲ್ಲ” ಎಂದು ವಿಲಿಯಂ ಖಡಾಖಂಡಿತವಾಗಿ ಹೇಳಿದನು. ಭಟರು ಅವನನ್ನು ಹಿಡಿದುಕೊಂಡು ಸೇನಾಧಿಪತಿಯ ಬಳಿಗೆ ಹೋದರು. ” ನೀನು ನಮಸ್ಕಾರ ಮಾಡದಿದ್ದರೆ ಸಾಯುತ್ತೀಯಾ” ಎಂದು ಸೇನಾಪತಿ ಹೆದರಿಸಿದನು. ವಿಲಿಯಂ ಯಾವುದಕ್ಕೂ ಸುತರಾಂ ಬಗ್ಗಲಿಲ್ಲ.
ಆಗ ಒಬ್ಬ ರಾಜಭಟ ” ಮಹಾಸ್ವಾಮೀ ವಿಲಿಯಂ ಚಾಣಾಕ್ಷ ಬಿಲ್ಲಗಾರನಾಗಿದ್ದಾನೆ ” ಎಂಬ ಮಾಹಿತಿ ನೀಡಿದನು. “ಹೌದೇನು ಹಾಗಾದರೆ ಪರೀಕ್ಷಿಸಿ ಬಿಡೋಣ ಇಲ್ಲಿ ನೋಡು ನಿನ್ನ ಮಗನ ತಲೆಯ ಮೇಲೆ ಸೇಬು ಹಣ್ಣೊಂದು ಇಡುತ್ತೇವೆ. ಅದನ್ನು ನೀನು ಬಾಣದಿಂದ ತುಂಡರಿಸಿದರೆ ನೀನು ಮತ್ತೆ ಸ್ವತಂತ್ರನಾಗುವೆ ” ಎಂದು ಸೇನಾಪತಿ ಗರ್ಜಿಸಿದನು . ವಿಲಿಯಂ ಗೆ ಉಭಯ ಸಂಕಟ ಶುರುವಾಯಿತು. ಅಕಸ್ಮಾತ್ ಗುರಿ ತಪ್ಪಿದರೆ ಆ ಬಾಣ ತನ್ನ ಮಗನಿಗೆ ತಗಲಿ ಅಪಾಯವಾದಿತೇನೋ ಎಂಬ ಚಿಂತೆ ಅವನನ್ನು ಬಾಧಿಸಿತು. ಆಗ ಅಲ್ಲೇ ಇದ್ದ ಮಗ ಹೇಳಿದನು. ” ಅಪ್ಪ ನಿನ್ನ ಗುರಿ ಎಂದೂ ತಪ್ಪುವುದಿಲ್ಲ , ಹೊಡಿ ” ಎಂದನು. ಮಗನ ಭರವಸೆಯ ನುಡಿಗಳಿಂದ ತಂದೆಗೆ ಧೈರ್ಯ ಬಂತು. ಮಗುವಿನ ತಲೆ ಮೇಲೆ ಸೇಬು ಹಣ್ಣು ಇರಿಸಿ ಮರವೊಂದರ ಮುಂದೆ ಅವನನ್ನು ನಿಲ್ಲಿಸಿದರು. ವಿಲಿಯಂ ದೂರದಲ್ಲಿ ನಿಂತು ಬಾಣಬಿಟ್ಟನು. ಬಾಣ ವೇಗವಾಗಿ ತೂರಿ ಸೇಬು ಹಣ್ಣನ್ನು ಇಬ್ಬಾಗ ಮಾಡಿತು. ಮಗ ನಗುತ್ತಾ ಬಂದು ತಂದೆಯನ್ನು ತಬ್ಬಿಕೊಂಡನು. ಸೇನಾಪತಿ ಸಂತೋಷದಿಂದ ವಿಲಿಯಂ ಮತ್ತು ಅವನ ಮಗನನ್ನು ಬಿಡುಗಡೆಗೊಳಿಸಿದನು. ಮುಂದೆ ವಿಲಿಯಂ ರಾಜನ ಮಿತ್ರನಾದನು. ಎಷ್ಟೋ ಯುದ್ಧಗಳಲ್ಲಿ ರಾಜನಿಗೆ ಸಹಾಯ ಮಾಡಿ ಜಯವನ್ನು ಸಂಪಾದಿಸಿ ಕೊಡುವಲ್ಲಿ ಬಹು ಮುಖ್ಯ ಪಾತ್ರವಹಿಸಿದನು.
ಆತ್ಮೀಯರೆ, ಇಲ್ಲಿ ಹತ್ತು ವರ್ಷದ ಮಗನಲ್ಲಿದ್ದ ತಂದೆಯ ಕುರಿತಾದ ಭರವಸೆ ಅಮೂಲ್ಯ ವಾದದ್ದು. ಮಗನ ಮಾತುಗಳಲ್ಲಿದ್ದ ನಂಬಿಕೆಯೇ ವಿಲಿಯಂನನ್ನು ಸತ್ವಪರೀಕ್ಷೆಯಿಂದ ಪಾರುಮಾಡಿತು. ಅಪ್ಪನ ಮೇಲಿನ ಮಗುವಿನ ಅಗಾಧವಾದ ನಂಬಿಕೆ ಸುಳ್ಳಾಗಲಿಲ್ಲ. ನಾವು ಬದುಕನ್ನು ಕಟ್ಟಿ ಕೊಳ್ಳಲು ಬೇಕಾಗುವ ಹಲವಾರು ಆಯಾಮಗಳಲ್ಲಿ ಭರವಸೆ ಅಥವಾ ವಿಶ್ವಾಸವು ಒಂದು ಮಹತ್ತರವಾದ ಅಂಶ. ಇದು ಮನುಷ್ಯನನ್ನು ಆಂತರಿಕವಾಗಿ ಸದೃಢಗೊಳಿಸುವುದಲ್ಲದೆ ಜೀವನೋತ್ಸಾಹವನ್ನು ತುಂಬಿ ಕೊಡುತ್ತದೆ. ಜಗತ್ತು ನಿಂತಿರುವದೇ ಪರಸ್ಪರ ನಂಬಿಕೆಯ ಮೇಲೆ ಅಲ್ಲವೆ ? ಮನುಷ್ಯ ಸಂಘಜೀವಿ ಸಮಾಜದಲ್ಲಿ ಪರಸ್ಪರ ನಂಬಿಕೆಯೇ ಮುಖ್ಯವಾಗುತ್ತದೆ ಯಾವ ವ್ಯಕ್ತಿ ಮತ್ತೊಬ್ಬರನ್ನು ಯಾವಾಗಲೂ ಸಂಶಯದಿಂದ ಕಾಣುತ್ತಾನೊ ಅವನ ಬದುಕು ದುರ್ಬರವಾಗುತ್ತದೆ.
ಮಗುವಿಗೆ ತಂದೆ ತಾಯಿಯರ ಮೇಲೆ , ರೋಗಿಗೆ ವೈದ್ಯನ ಮೇಲೆ, ಭಕ್ತನಿಗೆ ದೇವರ ಮೇಲೆ ನಂಬಿಕೆ ಇರುತ್ತದೆ. ದಿನನಿತ್ಯದ ವಿದ್ಯಮಾನಗಳಲ್ಲಿ ನಾವು ತರಕಾರಿ, ಹಾಲು ಹಣ್ಣು ದಿನಸಿ ಎಲ್ಲವೂ ಒಳ್ಳೆಯ ಗುಣಮಟ್ಟದಾಗಿವೆ ಎಂಬ ನಂಬಿಕೆಯಿಂದ ಕೊಂಡುಕೊಳ್ಳುತ್ತೇವೆ. ಬಸ್ಸಿನ ಚಾಲಕ ನಮ್ಮನ್ನು ಸುರಕ್ಷಿತವಾಗಿ ತಲುಪಿಸುತ್ತಾನೆಂಬ ಭರವಸೆಯಿಂದ ಪ್ರಯಾಣಿಸುತ್ತೇವೆ. ಮನೆ ಕಾಯುವವ ಗೇಟಿನ ಬಳಿ ನಮ್ಮ ಮನೆ ಕಾಯುತ್ತಾನೆಂಬ ನಂಬಿಕೆಯಿಂದ ಆತಂಕವಿಲ್ಲದೆ ನಿದ್ರಿಸುತ್ತೇವೆ. ಹೀಗೆ ಪರಸ್ಪರ ನಂಬಿಕೆಯಿಂದಲೇ ಜೀವನ ನಡೆಸಬೇಕಾಗುವದು ಅನಿವಾರ್ಯ. ಇಲ್ಲವಾದಲ್ಲಿ ಬದುಕು ಭಾರವಾಗುವದು ಖಚಿತ. ಭರವಸೆ ಎಂಬುದೊಂದು ಸಕಾರಾತ್ಮಕತೆಯ ದೀಪ. ಹೃದಯದ ಸೊಡರಿನಲ್ಲಿ ಸದಾ ಇದು ಬೆಳಗುತ್ತಿದ್ದರೆ ಬಾಳು ಸೊಗಸು .
ಎಷ್ಟೋಸಲ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮಾತುಗಳು ಪರಿಣಾಮಕಾರಿಯಾಗಿರುತ್ತವೆ . ಇದು ಸ್ವಂತ ಅನುಭವದ ಮಾತು . ಪೂರ್ವ ಪರೀಕ್ಷೆಯಲ್ಲಿ ಶೇಕಡ 60 ರಷ್ಷು ಅಂಕಗಳಿಸಿದ ವಿದ್ಯಾರ್ಥಿ ಗುರುಗಳ ಉತ್ತೇಜನಕಾರಿ ನುಡಿಗಳಿಂದ 80 ಶೇಕಡ ಅಂಕ ಗಳಿಸುತ್ತಾನೆ ” ನಿನ್ನಲ್ಲಿ ಸಾಮರ್ಥ್ಯವಿದೆ , ಪ್ರಯತ್ನ ಮುಂದುವರೆಯಲಿ, ವಾರ್ಷಿಕ ಪರೀಕ್ಷೆಯಲ್ಲಿ 75 ಶೇಕಡ ಗಿಂತ ಹೆಚ್ಚಿನ ಅಂಕಗಳು ನಿನ್ನದಾಗಿಸಿಕೊಳ್ಳಬಹುದು ” ಎಂಬ ಗುರುಗಳ ಸದಾಶಯ ತುಂಬಿದ ಭರವಸೆಯ ನುಡಿಗಳೇ ಇದಕ್ಕೆ ಕಾರಣವಾಗಿತ್ತು. ಪ್ರೀತಿ, ವಿಶ್ವಾಸದಿಂದ ಹೇಳಿದ ಮಾತುಗಳಿಗೆ ಎಷ್ಟೊಂದು ತೂಕವಿದೆಯಲ್ಲವೆ !
ಹಾಗಾಗಿ ಸಕಾರಾತ್ಮಕ ಫಲಿತಾಂಶಗಳ ನಿರೀಕ್ಷೆಯನ್ನು ಆಧರಿಸಿದ ಒಂದು ಆಶಾವಾದಿ ಮನಸ್ಥಿತಿ ಯನ್ನು ಭರವಸೆ ಎನ್ನಬಹುದು . ಭಯ ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಭರವಸೆಯೂ ಸ್ವತಂತ್ರ ಮತ್ತು ಸಮರ್ಥವಾಗುತ್ತದೆ. ಆಗ ಮನುಷ್ಯನು ಹೊಸ ಸೃಜನಾತ್ಮಕ ಸಂಭಾವ್ಯತೆಗಳಿಗೆ ತೆರೆದುಕೊಳ್ಳುತ್ತಾನೆ . ಭರವಸೆಯು ಮಾನಸಿಕ ಶಕ್ತಿಯಾದಾಗ ಅದು ದಿವ್ಯ ಔಷಧವಾಗಿ ಕೆಲಸ ಮಾಡುತ್ತದೆ . ಜನರಿಗೆ ಬೇಗನೆ ಮತ್ತು ಸುಲಭವಾಗಿ ಚೇತರಿಸಿಕೊಳ್ಳಲು ನೆರವಾಗುವ ಸಾಮರ್ಥ್ಯ ಭರವಸೆಗಿದೆ.
“ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ” ಎನ್ನುವ ದಾಸರ ಪದವೇ ಇದೆ . ಪ್ರತಿದಿನ ನಾವು ಬೆಳಿಗ್ಗೆ ಕೈ ಮುಗಿದು ಏಳುವ ವಾಡಿಕೆಯಿದೆ. ಕಾಣದ ದೇವರನ್ನು ಪ್ರಾರ್ಥಿಸಿ ನಮ್ಮ ದಿನದ ಕೆಲಸದಲ್ಲಿ ತೊಡಗುತ್ತೇವೆ. ನಮಗೊಂದು ಕಾಣದ ಆ ದೇವರೆಂಬ ಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇದೆ. ಹಾಗಂತ ಯಾರ್ಯಾರನ್ನೋ ನಂಬಿ ಮೋಸ ಹೋಗದಿರಿ ! ಈಗಿನ ಕಾಲದಲ್ಲಿ ನಂಬಿಕೆ ದ್ರೋಹ ಮಾಡೋರು ಕಡಿಮೆಯಿಲ್ಲ. ನಮ್ಮ ಎಚ್ಚರಿಕೆ ನಮಗೆ ಇರಬೇಕಲ್ಲವೇ ?
2 thoughts on “ನೀತಿ ಪ್ರತೀತಿ – ವಿಭಾ ಪುರೋಹಿತ ಅಂಕಣl ಭರವಸೆಯೆಂಬ ಬೆಳಕು ಬದುಕನ್ನು ಬೆಳಗಲಿ”
ಇದೊಂದು, ಉದಾಹರಣೆಗಳಿಂದ ಮಾರ್ಗದರ್ಶನ ನೀಡುವ ಅಂಕಣ. ಇದರಲ್ಲಿ ಸಾಕಷ್ಟು, ದಿನನಿತ್ಯದ ಮಾನವೀಯ ವರ್ತನೆಗಳಿಗೆ ಅನುಕೂಲಕರವಾಗಿ ಬೇಕಾಗಬಹುದಾದ, ಉಪಾಯವಾಗಬಹುದಾದ ರೆಡಿ ಮೇಡ್ ಮಾತ್ರೆಗಳು ಸಿಗುತ್ತವೆ : ಬೆಳೆಯುವ, ಬೆಳೆಯುವ ಹಂಬಲವುಳ್ಳ, ಮನಸ್ಸುಗಳು ಪ್ರಜ್ಞಾಪೂರ್ವಕವಾಗಿ ಓದುತ್ತಿದ್ದರೆ. ಒಂದು ಪ್ರಾಮಾಣಿಕ, ಆಸಕ್ತಿಯುತ, ಸ್ತುತ್ಯ ಪ್ರಯತ್ನ! ಹೀಗಾಗಿ, ಇಲ್ಲಿ ಉಪಯೋಗಿಸುವ ಉದಾಹರಣೆಗಳು ಸತ್ವಯುತವಷ್ಟೇ ಅಲ್ಲ, ಸತ್ಯಯುತವೂ ಆಗಿರಬೇಕಾದದ್ದು, ಕಾಳಜಿ ಪೂರ್ವಕವಾಗಿ ಸಹಜವಾದಾಗ, ಲೇಖನದ ಸಂಕಲ್ಪಕ್ಕೆ ಪುಷ್ಟಿ, ಹೆಚ್ಚು ನಿಚ್ಚಳವಾಗುತ್ತದೆ.
ಆದುದರಿಂದ, ಬಿಡುಗಡೆಗೆ ಮುನ್ನ, ಶಬರಿಯ ವಿಧಾನವನ್ನು ಹತ್ತು ಸಲ ಪಾಲಿಸಿದರೂ ಚೆನ್ನಲ್ಲವೇ?
‘ಆತ್ಮೀಯರೆ, ಇಲ್ಲಿ ಹತ್ತು ವರ್ಷದ ಮಗನಲ್ಲಿದ್ದ ತಂದೆಯ ಕುರಿತಾದ ಭರವಸೆ ಅಮೂಲ್ಯ ವಾದದ್ದು.’ ಬಿಲ್ಕುಲ್ ಸರಿ.
‘ಈಗಿನ ಕಾಲದಲ್ಲಿ ನಂಬಿಕೆ ದ್ರೋಹ ಮಾಡೋರು ಕಡಿಮೆಯಿಲ್ಲ. ನಮ್ಮ ಎಚ್ಚರಿಕೆ ನಮಗೆ ಇರಬೇಕಲ್ಲವೇ ?’ ಅನ್ನುವ ಮುಕ್ತಾಯವೂ ಸರಿ.
‘ಮಗನ ಮಾತುಗಳಲ್ಲಿದ್ದ ನಂಬಿಕೆಯೇ ವಿಲಿಯಂನನ್ನು ಸತ್ವಪರೀಕ್ಷೆಯಿಂದ ಪಾರುಮಾಡಿತು.’- ಇಡೀ ಲೇಖನದ ಮೂಲ ಉದ್ದೇಶದ ಬೀಜ ವಾಕ್ಯ. ಶಿರೋನಾಮೆಯ ಪ್ರತಿಪಾದನೆಯ ಆಧಾರದ ಮಂತ್ರವಿದು. ಈ ಉದಾಹರಣೆ ‘ಅಂಶೋಪಮೆ’ಯಾಗಿರುವುದರಿಂದ, ‘ಭರವಸೆಯೆಂಬ ಬೆಳಕು ಬದುಕನ್ನು ಬೆಳಗಲಿ’ಗೆ, ವಿಲಿಯಂ ಟೆಲ್ಲನ ಹೊರತಾದ ಸಮಂಜಸ ಉದಾಹರಣೆ ಹೆಚ್ಚು ಒಪ್ಪವಾಗಬಹುದಿತ್ತೇ?
ಯಾಕೆಂದರೆ, ಆ ಹೊತ್ತಿನಲ್ಲಿ ವಿಲಿಯಂ ಟೆಲ್ಲನ ಸತ್ವ ಪರೀಕ್ಷೆ ಏನಿತ್ತು?
‘He took two arrows, aimed one, and shot the apple off his son’s head. Gessler said their lives were saved, but asked why Tell took two arrows. Tell said he was planning to shoot Gessler if the first arrow hurt his son.’
ವಿಲಿಯಂ ಟೆಲ್ ಕಟ್ಟಾ ಸ್ವಾಭಿಮಾನಿ- ತನ್ನ ಗುರಿಯ ಬಗ್ಗೆ- ಅಭಿಮಾನ ಅತಿಯಾದಾಗ ಅಹಂಕಾರವೆನಿಸಿಕೊಳ್ಳುವುದೂ ಸಹಜವೇ! ‘ಅಕಸ್ಮಾತ್ ಗುರಿ ತಪ್ಪಿದರೆ?’ ಅನ್ನುವ ಭೀತಿ, ತನ್ನ ಕುಡಿಯನ್ನೇ ಗುರಿಯನ್ನಾಗಿಟ್ಟಾಗ, ಯಾವ ತಂದೆಗೆ ಭೀತಿಯಾಗುವದಿಲ್ಲ? ಯಾವ ಅಹಂಕಾರವೂ, ಮಮಕಾರದ ಎದುರಿಗೆ ಕಮರಿ ಹೋಗುತ್ತದೆಯಷ್ಟೆ! ಅದೇ ಕಾರಣದಿಂದ, ಟೆಲ್ ಒಂದರ ಬದಲು, ಎರಡು ಬಾಣಗಳನ್ನೇರಿಸಿ, ತನ್ನ ಗುರಿಯ ನಿಷ್ಠೆಯಲ್ಲಿ ನಂಬಿಕೆಯಿಟ್ಟು , ದೇವರ (ಮಗನ ಮಾತಿನ ಮೇಲೆ ಎಂದೇ ಇಟ್ಟುಕೊಳ್ಳೋಣ) ಭರವಸೆಯಲ್ಲಿ ಒಂದೇ ಬಾಣ ಬಿಟ್ಟು, ಯಶಸ್ವಿಯಾಗುತ್ತಾನೆ.
ತಕ್ಷಣ ರಾಜ ಪ್ರಶ್ನಿಸಿದ್ದೂ ಸಹಜವೇ : ‘ಸ್ವಂತ ಗುರಿಯಲ್ಲಿ ನಿಸ್ಸೀಮ ವಿಶ್ವಾಸವಿದ್ದ ನೀನು, ಬೇಕಾದ ಬಾಣ ಒಂದೇ ಆಗಿರಬೇಕೆಂದು ಗೊತ್ತಿದ್ದರೂ ಕೂಡ, ಎರಡನೆಯದನ್ನು ಸೇರಿಸಿಕೊಂಡಿದ್ದೇಕೆ?’
ಈ ಪ್ರಶ್ನೆಗೆ, ವಿಲಿಯಂ ಟೆಲ್ಲನ ಉತ್ತರವೂ ಆತನ ನಿಷ್ಠೆಯಷ್ಟೇ, ನಿಷ್ಥುರವಾಗಿತ್ತು : ‘ಅಕಸ್ಮಾತ್ ಗುರಿ ತಪ್ಪಿದ್ದರೆ, ಎರಡನೆಯ ಬಾಣ, ಈ ವರಸೆ ಹಚ್ಚಿದವನ ತಲೆ ತೆಗೆಯುತ್ತಿತ್ತು!’
ಇನ್ನೊಬ್ಬರು ಕೊಡುವ ಭರವಸೆ,ಬರಿಯ ವೇಗವರ್ಧಕ ಮಾತ್ರ.ಯಶಸ್ಸಿನ ಅಂತಿಮ ಶಕ್ತಿಯಿರುವದು ನಮ್ಮ ಅಂತರಂಗದಲ್ಲಿಯೇ,- ಭೌತಿಕ ಪ್ರಪಂಚದ ರಾಜಿಯಾಗದ ನಿಯಮ – ತಂದೆಗೆ ಹಸಿವಾದರೆ,ಮಗ ಊಟ ಮಾಡುವ ಪ್ರಮೇಯವನ್ನು ಅವಲಂಬಿಸದಂತೆ.
ಚಿಕ್ಕಂದಿನಲ್ಲಿ, ನಮ್ಮ ಗುರುಗಳು ಕಲಿಸಿದ್ದು, ಇದೇ ಉದಾಹರಣೆಯಿಂದ. ಆದರೆ, ಅಲ್ಲಿ ವಿಲಿಯಂ ಟೆಲ್, ‘ಪ್ರಸಂಗಾವಧಾನದ, ಸಂಕಟದ ಸಮಯದಲ್ಲಿ ತನ್ನಿಂತಾನೇ ಬಿಚ್ಚಿಕೊಳ್ಳುವ, ಪ್ರತ್ಯುತ್ಪನ್ನ ಮತಿ’ಯ ಮಾದರಿಯಾಗಿ ನಿಂತಿದ್ದ!
ಧನ್ಯವಾದಗಳು ಸರ್ ತಮ್ಮ ಪ್ರತಿಕ್ರಿಯೆಗೆ.
ಹೌದು ನಿಮ್ಮ ಮಾತು ನೂರಕ್ಕೆ ನೂರು ನಿಜ