ಮಲ್ಲಿಕಾರ್ಜುನ ಹಿರೇಮಠ
ಮಲ್ಲಿಕಾರ್ಜುನ ಹಿರೇಮಠರು ನವ್ಯೋತ್ತರ ಕಾಲಘಟ್ಟದಲ್ಲಿ ಬರೆಯಲು ಆರಂಭಿಸಿದವರು. ಹಿರೇಮಠರು ಕಳೆದ ನಾಲ್ಕು ದಶಕಗಳಲ್ಲಿ ‘ಅಮೀನಪುರದ ಸಂತೆ’, ‘ಮೊಲೆವಾಲು ನಂಜಾಗಿ…’, ‘ಮೂರೂ ಸಂಜಿ ಮುಂದ ಧಾರವಾಡ’, ‘ಜ್ಞಾನೇಶ್ವರನ ನಾಡಿನಲ್ಲಿ’, ‘ಗಿರಡ್ಡಿ ಗೋವಿಂದರಾಜ’ ಮತ್ತು ‘ಹವನ’ ಕೃತಿಗಳನ್ನು ಪ್ರಕಟಿಸಿದ್ದಾರೆ. ಓದುಗರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದ ಹಿರೇಮಠರ ‘ಹವನ’ ಕನ್ನಡದ ಉತ್ತಮ ಕಾದಂಬರಿಗಳಲ್ಲೊಂದು. ಹಿರೇಮಠರ ಮೊದಲ ಕಾದಂಬರಿ ‘ಹವನ’ ಪ್ರಕಟವಾದ ಎರಡು ದಶಕಗಳ ನಂತರ ಎರಡನೆಯ ಕಾದಂಬರಿ ‘ಹಾವಳಿ’ ಪ್ರಕಟವಾಗಿದೆ.
‘ಹಾವಳಿ’ ಹಿರೇಮಠರ ಮಹತ್ವಾಕಾಂಕ್ಷಿ ಕೃತಿ. ನಾಲ್ಕು ನೂರು ಪುಟಗಳ ಈ ಧೀರ್ಘ ಕಥನಕ್ಕೆ “ಹಾವಳಿ” ಎಂಬ ಶೀರ್ಷಿಕೆಯ ಜೊತೆಗೆ ‘ಬಿಡುಗಡೆಯ ಕಥನ’ ಎಂಬ ಉಪಶಿರ್ಷಿಕೆಯನ್ನು ಸಹ ಹಿರೇಮಠರು ನೀಡಿದ್ದಾರೆ. ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ದೇಶ ವಿಭಜನೆಯಾಯಿತು. ಅಖಂಡ ಭಾರತ ಒಡೆದು ಭಾರತ ಮತ್ತು ಪಾಕಿಸ್ತಾನ ಎಂಬ ಹೆಸರಿನಲ್ಲಿ ಎರಡು ರಾಷ್ಟ್ರಗಳು ಉದಯವಾದವು. ಸ್ವಾತಂತ್ರ‍್ಯ ಸಿಕ್ಕರೂ ದೇಶವಿಭಜನೆಯ ನೋವು ಹಾಗೆಯೇ ಉಳಿಯಿತು. ಇಂತಹ ಸಂಕ್ರಮಣ ಕಾಲಘಟ್ಟದಲ್ಲಿ ಹೈದರಾಬಾದ್ ಸಂಸ್ಥಾನ ಮಾತ್ರ ಭಾರತ ಅಥವಾ ಪಾಕಿಸ್ತಾನಕ್ಕೆ ಸೇರುವ ಆಯ್ಕೆಯಿದ್ದರೂ ಸಹ ಎರಡೂ ಆಯ್ಕೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿ ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದ್ದು, ಅದು ಮುಂದೆ ಹಲವು ಅನರ್ಥಗಳಿಗೆ ದಾರಿ ಮಾಡಿ ಕೊಟ್ಟಿದ್ದು ಈಗ ಇತಿಹಾಸದ ಪುಟಗಳಿಗೆ ಸೇರಿದ ಸಂಗತಿ.
ಕಾಸಿಂ ರಜ್ವಿಯೆಂಬ ಮಹತ್ವಾಕಾಂಕ್ಷಿ, ಮತಾಂಧ ಮತ್ತು ಸರ್ವಾಧಿಕಾರಿ ಧೋರಣೆಯ ದುಷ್ಟ ವ್ಯಕ್ತಿಯ ಕುಮ್ಮಕ್ಕಿನಿಂದ ಹೈದರಾಬಾದ್ ನಿಜಾಂ ಸ್ವತಂತ್ರ ಭಾರತ ಒಕ್ಕೂಟದಲ್ಲಿ ಸೇರದಿರಲು ನಿರ್ಧರಿಸುತ್ತಾನೆ. ಇದು ಹೈದರಾಬಾದ್ ನಿಜಾಂ ಮತ್ತು ಧರ್ಮಯುದ್ಧದ ಭೂತ ಮೈ ಹೊಕ್ಕ ಕಾಸಿಂ ರಜ್ವಿ ತೆಗೆದುಕೊಂಡ ಏಕಪಕ್ಷೀಯ ನಿರ್ಣಯವೇ ಹೊರತು ಹೈದರಾಬಾದ್ ಪ್ರಾಂತದ ಜನತೆಯ ನಿರ್ಣಯವಾಗಿರಲಿಲ್ಲ. ದೇಶಕ್ಕೆ ಸ್ವಾತಂತ್ರ‍್ಯ ದೊರೆತರೂ ಸಹ ಹೈದರಾಬಾದ್ ಪ್ರಾಂತದ ಜನತೆ ಸ್ವಾತಂತ್ರ್ಯ ಪಡೆಯಲು ತುಂಬ ಹೋರಾಟ ಮಾಡಬೇಕಾಯಿತು. ಈ ನಿರ್ಣಾಯಕ ಹೋರಾಟದಲ್ಲಿ ಸಾವಿರಾರು ಜನ ಪ್ರಾಣ ತೆತ್ತರು, ಅಸಂಖ್ಯ ಸ್ತ್ರೀಯರು ಮಾನಭಂಗಕ್ಕೊಳಗಾದರು ಮತ್ತು ಲಕ್ಷಾಂತರ ಅಮಾಯಕ ಜನರು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದರು. ಹೈದರಾಬಾದ್ ಪ್ರಾಂತದ ಸಾಮಾನ್ಯ ಜನತೆ ತಮ್ಮ ವಿಮೋಚನೆಗಾಗಿ ನಡೆಸಿದ ಹೋರಾಟದ ಕಥನವೇ ‘ಹಾವಳಿ’ ಕಾದಂಬರಿಯ ವಸ್ತು.
೧೯೪೭-೪೮ರ ಕಾಲಘಟ್ಟದಲ್ಲಿ ಹೈದರಾಬಾದ್ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕ ಎಂದು ಕರೆಯಿಸಿಕೊಳ್ಳುವ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಭಾಗದಲ್ಲಿ ರಜಾಕಾರರ ಹಾವಳಿಯಿಂದ ಬಿಡುಗಡೆ ಪಡೆದು ಸ್ವತಂತ್ರ ಭಾರತ ಒಕ್ಕೂಟದಲ್ಲಿ ಸೇರಬೇಕೆಂಬ ಸಾಮಾನ್ಯ ಜನರ ಆಶೋತ್ತರ ಮತ್ತು ಅದಕ್ಕಾಗಿ ಅವರು ನಡೆಸಿದ ಹೋರಾಟದ ಕಥನವನ್ನು ಹಿರೇಮಠರು ಈ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಕೊಪ್ಪಳ ಬಳಿಯ ಬಸಾಪುರ ಎಂಬ ಕಾಲ್ಪನಿಕ ಗ್ರಾಮದಲ್ಲಿ ಈ ಕಥೆ ನಡೆಯುತ್ತದೆ. ಬಸಾಪುರದ ಸುಶಿಕ್ಷಿತ ಯುವಕರಾದ ಶಂಕರ, ಶೇಖರ, ಕುಮಾರ, ರೆಹಮಾನ್, ವಸಂತ ಮುಂತಾದ ಯುವಕರಲ್ಲಿ ಸ್ವಾತಂತ್ರ್ಯ ಪಡೆಯಬೇಕೆನ್ನುವ ಕನಸಿದೆ. ರಜ್ವಿ ಮತ್ತು ರಜಾಕಾರರ ಕುರಿತು ಆಕ್ರೋಶವೂ ಇದೆ. ಇವರಿಗೆಲ್ಲ ಸಹಕಾರ ನೀಡುವ ವಿರೂಪಾಕ್ಷಪ್ಪ ಮಾಸ್ತರ, ಅವರ ಪತ್ನಿ ಶಾರಮ್ಮ, ಶಂಕರನ ತಾಯಿ ಗುರವ್ವ, ಪ್ರೇಯಸಿ ಉಮಾ, ಶೇಖರನ ಹೆಂಡತಿ ಗಂಗಾ, ದೇಸಾಯಿ ಮನೆತನದ ಸೊಸೆ ಮಾಧವಿ ಇದ್ದಾರೆ. ನಿಜಾಂ ರಾಜ್ಯವೋ? ಸ್ವತಂತ್ರ ಭಾರತವೋ? ಏನಾದರೇನು ಒಟ್ಟಿನಲ್ಲಿ ತಾವು ತಮ್ಮ ಮನೆತನ ಚೆನ್ನಾಗಿದ್ದರೆ ಸಾಕು. ದೇಸಗತಿ ಉಳಿದರೆ ಸಾಕು ಎಂದು ಹಂಬಲಿಸುವ ದೇಸಾಯಿ, ತುಂಬ ತಿಳುವಳಿಕೆಯುಳ್ಳವರಾದ ಇಬ್ರಾಹಿಂ ಸಾಹೇಬ ಮತ್ತು ಇತ್ತೇಹಾದವರಿಂದ ಪ್ರಭಾವಿತನಾಗಿ ಮತಾಂಧನಂತೆ ವರ್ತಿಸುವ ನಬಿಯಂತಹರೂ ಸಹ ಬಸಾಪುರದಲ್ಲಿದ್ದಾರೆ.
ಹಿಂದೂ-ಮುಸ್ಲಿಮರೆಲ್ಲ ಸೇರಿ ಸಂಭ್ರಮದಿಂದ ಆಚರಿಸುವ ಉರುಸಿಗೆ ನಾಟಕ ಇನ್ನಷ್ಟು ರಂಗೇರಿಸಿದೆ. ಆದರೆ ಕುಡುಕ ನಬಿ ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಔಚಿತ್ಯ ಮೀರಿ ವರ್ತಿಸಿ ದ್ರೌಪದಿಯ ಪಾತ್ರಧಾರಿಯಾದ ನಟಿ ದೇವಿಕ ಎಲ್ಲರೆದುರು ತಲೆತಗ್ಗಿಸುವಂತೆ ಮಾಡುತ್ತಾನೆ. ನಬಿಯ ಅತಿರೇಕದ ವರ್ತನೆಯಿಂದ ಸಂಪೂರ್ಣ ನಾಟಕವೇ ಹಾಳಾಗುತ್ತದೆ. ತಿರಸಷ್ಟನಾದ ನಬಿ ಹಿರಿಯರ ಬುದ್ಧಿ ಮಾತು ಕೇಳದೆ ಊರು ಬಿಟ್ಟು ಮತಾಂಧನಾಗುತ್ತಾನೆ. ಮತ್ತೊಂದೆಡೆ ಶಂಕರ, ಶೇಖರ, ಕುಮಾರ, ರೆಹಮಾನ್ ಮುಂತಾದವರೆಲ್ಲ ಸ್ವಾತಂತ್ರ‍್ಯದ ಕನಸು ಕಾಣತೊಡಗುತ್ತಾರೆ. ಹೈದರಾಬಾದ್ ಪ್ರಾಂತದ ವಿಮೋಚನೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷದವರು ಶಂಕರ, ಶೇಖರನಂತಹ ಯುವಕರ ಕನಸುಗಳಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಕೀರ್ತನಕಾರ ಜಯರಾಮಾಚಾರ್ಯರಯ ತಮ್ಮ ಕೀರ್ತನೆಗಳ ಮುಖಾಂತರ ಅಪರೋಕ್ಷವಾಗಿ ಜನರಲ್ಲಿ ರಜಾಕಾರರ ಹಾವಳಿಯ ಕುರಿತು ಜಾಗೃತಿ ಮೂಡಿಸುತ್ತಾರೆ.
ಕೊಪ್ಪಳದ ಕೋಟೆಯ ಮೇಲೆ ತಿರಂಗಾ ಹಾರಿಸಲು ಹೋಗಿ ಬಂಧಿತರಾಗುವ ಶಂಕರ ಮತ್ತು ಶೇಖರ ನಿಜಾಂ ಸರ್ಕಾರದ ನೌಕರನಾದರೂ ಅಂತಃಕರಣದ ವ್ಯಕ್ತಿಯಾದ ರೋಶನರ ಸಹಾಯದಿಂದ ಮುಂಡರಗಿ ಶಿಬಿರ ಸೇರಿ ಸಶಸ್ತ್ರ ಪಡೆಯ ಯೋಧರಾಗುತ್ತಾರೆ. ಸಸ್ಯ ಸಂಪತ್ತಿನಿಂದ ಕಂಗೊಳಿಸುವ ಕಪ್ಪತ್ತಗುಡ್ಡದಲ್ಲಿ ಮುಂಡರಗಿ ಶಿಬಿರದ ಸಶಸ್ತ್ರ ಪಡೆಯ ಯೋಧರಿಗೆ ಸೈನಿಕ ತರಬೇತಿ ನೀಡಲಾಗುತ್ತದೆ. ಐತಿಹಾಸಿಕ ಮಹತ್ವ ಪಡೆದ ಕಪ್ಪತ್ತಗುಡ್ಡದ ನೈಸರ್ಗಿಕ ಸೊಬಗನ್ನು ಹಿರೇಮಠರು ತುಂಬ ಚೆನ್ನಾಗಿ ವರ್ಣಿಸಿದ್ದಾರೆ.
ಶಂಕರ ಮತ್ತು ಶೇಖರರ ಸ್ವಭಾವದ ನಡುವೆ ಸಾಕಷ್ಟು ಅಂತರವಿದ್ದರೂ ಅವರಿಬ್ಬರ ನಡುವೆ ಒಳ್ಳೆಯ ಸ್ನೇಹವಿದೆ. ಸ್ವಲ್ಪ ಭಾವಜೀವಿಯಾದ ಶಂಕರ ಕಪ್ಪತ್ತಗುಡ್ಡದಲ್ಲಿ ನಡೆಯುವ ಸೈನಿಕ ತರಬೇತಿ ಶಿಬಿರದಲ್ಲಿ ಶೇಖರ ಮತ್ತು ಇತರರಿಗಿಂತ ಹಿಂದುಳಿಯಲು ಸಹ ಇದೇ ಕಾರಣ. ಇಂತಹ ಶಂಕರ ನಿರ್ಣಾಯಕ ಹಂತದ ಹೋರಾಟವೊಂದರಲ್ಲಿ ತನಗೆ ತಿಳಿಯದೇ ರೋಶನರನ್ನು ಕೊಂದು ಹಾಕುತ್ತಾನೆ. ಮೃದು ಸ್ವಭಾವದ ಶಂಕರ ಕಷ್ಟಕಾಲದಲ್ಲಿ ಕೊಪ್ಪಳದ ಜೈಲಿನಿಂದ ತಪ್ಪಿಸಿಕೊಂಡು ಮುಂಡರಗಿ ಸೇರಲು ಸಹಾಯ ಮಾಡಿದ ರೋಶನರ ಕೊಲೆ ತನ್ನಿಂದಲೇ ಆಯಿತೆಂದು ತಿಳಿದು ಇನ್ನಿಲ್ಲದಂತೆ ಸಂಕಟಪಡುತ್ತಾನೆ.
ದೇಸಾಯಿಯದು ಮಾತ್ರ ಲೆಕ್ಕಾಚಾರದ ಬದುಕು. ನಿಜಾಂ ರಾಜ್ಯದಿಂದ ಹೆಚ್ಚು ಅನುಕೂಲವೋ? ಸ್ವತಂತ್ರ ಭಾರತ ಸರ್ಕಾರದಿಂದ ಹೆಚ್ಚು ಅನುಕೂಲವೋ? ಎಂಬ ದ್ವಂದ್ವ ನಿರಂತರವಾಗಿದೆ. ಮತಲಬಿ ಮಹಾಶಯನಾದ ದೇಸಾಯಿ ಕೊನೆಗೂ ಊರಹಿತ ಮತ್ತು ಜನಹಿತಕ್ಕಿಂತ ತನ್ನ ಸ್ವಾರ್ಥ ಸಾಧನೆಗೆ ಮಾತ್ರ ಆದ್ಯತೆ ನೀಡುತ್ತಾನೆ. ಇಂತಹ ಸ್ವಾರ್ಥಭರಿತ ದೇಸಾಯಿ ಮನೆತನದಲ್ಲೂ ಮಾಧವಿಯಂತಹ ಜನಹಿತ ಬಯಸುವ ವ್ಯಕ್ತಿಗಳಿದ್ದಾರೆ. ದೇಸಾಯಿಯ ದೊಡ್ಡ ಮಗ ನಾರಾಯಣ ಬೇಜವಾಬ್ದಾರಿ ವ್ಯಕ್ತಿಯಾದರೂ ಹೆಂಡತಿ ಮಾಧವಿಯ ಬೆಂಬಲಕ್ಕೆ ನಿಲ್ಲುವುದು ವಿಶೇಷ.
ದೇಸಾಯಿಯ ಚಿಕ್ಕ ಮಗ ವಸಂತ ದೇಸಾಯಿಯದು ಮತ್ತೊಂದು ಕಥೆ. ‘ಗಾಳಿ ಬಂದಾಗ ತೂರಿಕೋ’ ಎಂಬ ಮಾತಿಗೆ ಅನ್ವರ್ಥ ಈ ವಸಂತ ದೇಸಾಯಿಯ ಪಾತ್ರ. ಆರಂಭದಲ್ಲಿ ಶಂಕರ, ಶೇಖರ ಮುಂತಾದವರೊಂದಿಗೆ ಉತ್ಸಾಹದಿಂದ ಸ್ವಾತಂತ್ರ‍್ಯದ ಪರ, ನಿಜಾಂ ರಾಜ್ಯದ ಜನವಿರೋಧಿ ನೀತಿಯ ವಿರುದ್ಧ ಮಾತನಾಡುತ್ತ ಸಕ್ರಿಯವಾಗಿ ಇವರೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾನೆ. ಅವನು ತುಂಬ ಪ್ರೀತಿಸಿದ ಲಕ್ಷ್ಮಿ ದೇಶಸೇವೆಗೆ ಬದ್ಧಳಾದವಳು. ಅವಳು ಇವನ ಅಪ್ರಬುದ್ಧ ಪ್ರೀತಿಯನ್ನು ತಿರಸ್ಕರಿಸಿದಾಗ ಇವನ ಉತ್ಸಾಹವೂ ಇಳಿದು ಹೋಗುತ್ತದೆ. ವಸಂತ ಕೊನೆಗೂ ತಂದೆಯ ಹಿತಬೋಧನೆಯನ್ನು ಮನ್ನಿಸಿ ಗುಲ್ಬರ್ಗ ಬಿಟ್ಟು ಪುಣೆಗೆ ತೆರಳುತ್ತಾನೆ.
‘ಹಾವಳಿ’ ಕಾದಂಬರಿಯಲ್ಲಿ ಹೋರಾಟದ ಜೊತೆ ಜೊತೆಗೇ ಒಂದು ಗ್ರಾಮದಲ್ಲಿರಬಹುದಾದ ಎಲ್ಲ ಬಗೆಯ ಮನುಷ್ಯ ಸಹಜ ಕಥೆಗಳೂ ಕಾಣಸಿಗುತ್ತವೆ. ರಜಾಕಾರರ ಹಾವಳಿಯೇ ಕಥನದ ಕೇಂದ್ರವಾಗಿರುವುದರಿಂದ ಇವೆಲ್ಲ ಗೌಣವಾಗಿ ಕಾಣುತ್ತವೆಯಾದರೂ ಅಲಕ್ಷಿಸುವಂತಿಲ್ಲ. ಚಿಕ್ಕ ಪ್ರಾಯದಲ್ಲೇ ಗಂಡನನ್ನು ಕಳೆದುಕೊಂಡು ಧೈರ್ಯದಿಂದ ಬಾಳು ಕಟ್ಟಿಕೊಂಡ ಗುರವ್ವ, ಶಂಕರ-ಉಮಾರ ಪ್ರೇಮ, ಶೇಖರ-ಗಂಗಾರ ಅಲ್ಪವಯಿ ದಾಂಪತ್ಯ, ದೇವದಾಸಿಯ ಮಗನಾದರೂ ಸ್ವಾಭಿಮಾನದಿಂದ ಬದುಕ ಬಯಸುವ ಕುಮಾರ, ತಿರಸಷ್ಟನೂ, ಒರಟನೂ ಆದ ನಬಿಯ ದುರಂತ ಮತ್ತು ನಕಲಿ ಶ್ಯಾಮನಂತೆ ಕಾಣುವ ಸಂಗ ಮುಂದೆ ಸಾಹುಕಾರ ಸಂಗಪ್ಪನಾಗುವ ಚಾಣಾಕ್ಷತೆ ಓದುಗರ ಗಮನ ಸೆಳೆಯುತ್ತವೆ.
ಕಾದಂಬರಿಯ ಕೊನೆಯಲ್ಲಿ ರಜಾಕಾರರ ಹಾವಳಿಯ ಪರಿಣಾಮದ ಭೀಕರತೆಯನ್ನು ಕಾಣಬಹುದು. ವಿವಿಧ ಹಳ್ಳಿಗಳಲ್ಲಿ ರಾಕ್ಷಸೀ ಕೃತ್ಯ ನಡೆಸುವ ರಜಾಕಾರರು ಕೊನೆಗೆ ಬಸಾಪುರದ ಮೇಲೂ ದಾಳಿ ಮಾಡುತ್ತಾರೆ. ಶಂಕರನ ಪ್ರೇಯಸಿ ಉಮಾ ಮತ್ತು ಕಷ್ಟದ ಈಶಪ್ಪನ ಮಗಳು ಕಮಲಾ ರಜಾಕಾರರಿಂದ ಮಾನಭಂಗಕ್ಕೊಳಗಾಗಿ ಊರು ಬಿಡುತ್ತಾರೆ. ಇತ್ತ ರಜಾಕಾರರ ದಾಳಿಯನ್ನೆದುರಿಸಲು ಹೋಗಿ ತೀವ್ರವಾಗಿ ಗಾಯಗೊಳ್ಳುವ ಶಂಕರ ಮತ್ತು ಶೇಖರರು ಆಸ್ಪತ್ರೆ ಸೇರುತ್ತಾರೆ. ಚಿಕಿತ್ಸೆ ಫಲಿಸದೆ ಶೇಖರ ಮೃತಪಟ್ಟರೆ, ಶಂಕರ ಕುಂಟನಾಗಬೇಕಾಗುತ್ತದೆ.
ಆದರ್ಶವಾದಿಯಾದ ಶಂಕರ ರಜಾಕಾರರಿಂದ ಮಾನಭಂಗಕ್ಕೊಳಗಾದ ಉಮಾಳನ್ನು ಹಿಂದೆಮುಂದೆ ನೋಡದೆ ಹೆಂಡತಿಯಾಗಿ ಸ್ವೀಕರಿಸುತ್ತಾನೆ. ಇಂತಹ ಸಂದರ್ಭದಲ್ಲಿ ಅಶಿಕ್ಷಿತ ಗ್ರಾಮೀಣ ಮಹಿಳೆಯಾದ ಗುರವ್ವ ಅತ್ಯಾಚಾರಕ್ಕೊಳಗಾದ ಉಮಾಳನ್ನು ಸೊಸೆಯಾಗಿ ಸ್ವೀಕರಿಸುವುದು ಮತ್ತು ಮೊಮ್ಮಕ್ಕಳ ಹಿತಕ್ಕಾಗಿ ಹನುಮಿಯನ್ನು ಮೊದಲ ಸೊಸೆ ಸುಮಂಗಲೆಯ ಸ್ಥಾನದಲ್ಲಿ ತರಲು ಒಪ್ಪುವುದು ಗಮನಾರ್ಹ. ಗುರವ್ವನದು ಜೀವನಾನುಭವ ಮತ್ತು ಜೀವನಪ್ರೀತಿಯಿಂದ ಪಡೆದ ಮುತ್ಸದ್ದಿತನವೇ ಹೊರತು ಪುಸ್ತಕದ ಬದನೆಕಾಯಿಯಲ್ಲ.
ಅಪ್ರಬುದ್ಧನಂತೆ ಕಾಣುವ ವಸಂತ ಮತ್ತು ನಕಲಿಶಾಮನಂತೆ ಕಾಣುವ ಸಂಗ ಇಬ್ಬರೂ ಕಾದಂಬರಿಯ ಕೊನೆಯಲ್ಲಿ ಮತಲಬಿ ರಾಜಕಾರಣಿಗಳಾಗುತ್ತಾರೆ. ದೇಸಾಯಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದಾನೆಂದು ಊರವರನ್ನು ನಂಬಿಸಿ, ಮಗ ವಸಂತನನ್ನು ಪುಣೆಗೆ ಕಳಿಸುತ್ತಾನೆ. ದೇಸಾಯಿಯದು ಯಾವತ್ತಿಗೂ ದ್ವಂದ್ವ ನೀತಿ. ಪೊಲೀಸರು ವಿರೂಪಾಕ್ಷಪ್ಪ ಮಾಸ್ತರರನ್ನು ಬಂಧಿಸುವುದನ್ನು ತಡೆದ ದೇಸಾಯಿ ಮುಂದೆ ಶಂಕರ ಊರಿಗೆ ಬಂದ ಮಾಹಿತಿಯನ್ನು ಪೊಲೀಸರಿಗೆ ಕೊಡುತ್ತಾನೆ. ಕೀರ್ತನಕಾರ ಜಯರಾಮಾಚಾರ್ಯರರ ಗುಪ್ತ ಸಭೆ ಮತ್ತು ಕೀರ್ತನ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುವವನೂ ಸಹ ಇದೇ ದೇಸಾಯಿ ಮಹಾಶಯ. ಹೈದರಾಬಾದಿನ ನಿಜಾಂ ಸರ್ದಾರ್ ವಲ್ಲಭಭಾಯಿ ಪಟೇಲರ ಪೊಲೋ ಕಾರ್ಯಾಚರಣೆಯಿಂದ ಕಂಗೆಟ್ಟು ಭಾರತೀಯ ಸೇನೆಯ ಎದುರು ಸೋತು ಶರಣಾಗತನಾದ ನಂತರ ದೇಸಾಯಿ ಮತ್ತು ಮಗ ವಸಂತ ಖಾದಿ ಜುಬ್ಬಾ ಮತ್ತು ಗಾಂಧಿ ಟೋಪಿ ಧರಿಸಿ ಕಾಂಗ್ರೆಸ್ ಪಕ್ಷ ಸೇರಿ ರಾಜಕೀಯ ನಾಯಕರಾಗುತ್ತಾರೆ.
ಒಂದು ಕಾಲದಲ್ಲಿ ಅಪ್ರಯೋಜಕ, ಉಂಡಾಡಿ ಗುಂಡ ಎಂಬ ಹೆಸರು ಪಡೆದ ಸಂಗ ಹತ್ತು ಹಲವು ಭಾನಗಡಿ ಮಾಡಿ ಮುಂಡರಗಿ ಸಾಹುಕಾರನ ಪ್ರೀತಿಗೆ ಪಾತ್ರನಾಗುತ್ತಾನೆ. ಸಂಗ ಸಾಹುಕಾರನ ಮಗಳನ್ನು ಮದುವೆಯಾಗಿ ಸಾಹುಕಾರ ಸಂಗಪ್ಪನಾಗುತ್ತಾನೆ. ವಸಂತನ ಜೊತೆಗೆ ತಾನು ಸಹ ಖಾದಿ ಜುಬ್ಬಾ, ಗಾಂಧಿ ಟೋಪಿ ಧರಿಸಿ ಕಾಂಗ್ರೆಸ್ ನಾಯಕನಾಗುತ್ತಾನೆ. ದೇಶಕ್ಕಾಗಿ ಪ್ರಾಣತೆತ್ತ ಶೇಖರನ ಹೆಂಡತಿ ಗಂಗಾ, ಕುಂಟನಾದ ಶಂಕರ, ಮಾನಭಂಗ ಕ್ಕೊಳಗಾದ ಉಮಾ, ಕಮಲ, ತಾಯಿಯನ್ನು ಕಳೆದುಕೊಂಡ ಕುಮಾರ, ಗಟ್ಟಿಗಿತ್ತಿ ಗುರವ್ವ, ಗಾಂಧಿವಾದಿ ಕರಬಸಪ್ಪ, ವಿರೂಪಾಕ್ಷಪ್ಪ ಮಾಸ್ತರ, ಇಬ್ರಾಹಿಂ ಸಾಹೇಬ ಮುಂತಾದವರು ಗಾಂಧೀಜಿ ಕನಸಾದ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು ಅರ್ಥಪೂರ್ಣ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರೆ, ಇತ್ತ ದೇಶಕ್ಕಾಗಿ ಏನೂ ಮಾಡದ ವಸಂತ ದೇಸಾಯಿ ಮತ್ತು ಸಾಹುಕಾರ ಸಂಗಪ್ಪ ಕಾಂಗ್ರೆಸ್ ಹುರಿಯಾಳುಗಳಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವುದು ವಿಪರ್ಯಾಸದ ಸಂಗತಿ.
ಹಿರೇಮಠರ ‘ಹಾವಳಿ’ ಕಾದಂಬರಿ ಬಸಾಪುರ ಎಂಬ ಕಾಲ್ಪನಿಕ ಗ್ರಾಮದ ಸಾಮಾನ್ಯ ಜನತೆ ಮತ್ತು ಅವರು ಒಂದು ಕಾಲಘಟ್ಟದಲ್ಲಿ ರಜಾಕಾರರಿಂದ ಬಿಡುಗಡೆ ಪಡೆಯಲು ಪಟ್ಟ ಪಾಡಿನ ಕಥೆ. ಹಿರೇಮಠರು ರಜಾಕಾರರ ವಿರುದ್ಧದ ಹೋರಾಟದ ಜೊತೆ ಜೊತೆಗೆ ಬಸಾಪುರದ ಹತ್ತು ಹಲವು ತರಹದ ಜನರ ಬದುಕು – ಬವಣೆಯನ್ನು ಹೃದಯಂಗಮವಾಗಿ ಕಟ್ಟಿಕೊಟ್ಟಿದ್ದಾರೆ.
ಕಾದಂಬರಿಯುದ್ದಕ್ಕೂ ಸಮತೋಲನ ಕಾಯ್ದುಕೊಂಡಿರುವ ಹಿರೇಮಠರು ಕಾಸಿಂ ರಜ್ವಿಯ ಕ್ರೌರ್ಯ ಮತ್ತು ಶೋಯಬುಲ್ಲನ ದೇಶಪ್ರೇಮದ ಜೊತೆ ಜೊತೆಗೆ ಶೇಖರ, ಶಂಕರರ ಹೋರಾಟ ಮತ್ತು ವಸಂತ, ಸಂಗನಂತಹವರ ಸಮಯಸಾಧಕತನ ಮತ್ತು ಧೂರ್ತತನವನ್ನೂ ದಾಖಲಿಸುತ್ತಾರೆ. ಈ ಎಲ್ಲ ಕಾರಣಗಳಿಂದ ಬರೀ ಹೋರಾಟ ಅಥವಾ ರಾಜಕೀಯ ಕಥನವಾಗಬಹುದಾದ ಅಪಾಯದಿಂದ ಕಾದಂಬರಿ ಪಾರಾಗಿದೆ.
ಹಿರೇಮಠರು ಕಾದಂಬರಿಯ ಕೊನೆಯಲ್ಲಿ ಮುಂದೆ ದೇಶದ ರಾಜಕೀಯದಲ್ಲುಂಟಾಗಬಹುದಾದ ಪಲ್ಲಟಗಳನ್ನು ಸೂಕ್ಷ್ಮವಾಗಿ ದಾಖಲಿಸುತ್ತಾರೆ. ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷ ಮುಂದೆ ಕೇವಲ ರಾಜಕೀಯ ಪಕ್ಷವಾಗಿ ಒಂದು ಕುಟುಂಬದ ಹಿಡಿತಕ್ಕೆ ಸಿಕ್ಕಿದ್ದು, ನಿಜವಾಗಿಯೂ ದೇಶಕ್ಕಾಗಿ ದುಡಿದವರು ಅಪ್ರಸ್ತುತರಾಗಿ ಮೂಲೆ ಸೇರಿದ್ದು, ಒಂದು ಕಾಲದಲ್ಲಿ ಬ್ರಿಟಿಷರು ಮತ್ತು ನಿಜಾಂ ಶಾಹಿಯ ಪರವಾಗಿ ಕೆಲಸ ಮಾಡಿದ ಧೂರ್ತರೇ ರಾಜಕೀಯ ನಾಯಕರಾಗಿದ್ದು, ಹಿಂದೂಗಳು ಮುಸ್ಲಿಮರನ್ನೂ, ಮುಸ್ಲಿಮರು ಹಿಂದೂಗಳನ್ನೂ ಪರಸ್ಪರ ಅನುಮಾನದಿಂದ ನೋಡುವಂತಾಗಿದ್ದು ಸೇರಿದಂತೆ ಹಲವು ಜ್ವಲಂತ ವಿಷಯಗಳನ್ನು ಕಾದಂಬರಿ ಸೂಕ್ಷ್ಮವಾಗಿಯಾದರೂ ದಾಖಲಿಸುವುದು ಗಮನಾರ್ಹ.
ವರ್ತಮಾನದ ಸಮಸ್ಯೆಗಳಿಗೆ ಇತಿಹಾಸದಲ್ಲಿ ಪರಿಹಾರ ಸಿಗುವುದಿಲ್ಲ ನಿಜ. ಆದರೆ ಇತಿಹಾಸದಲ್ಲುಂಟಾದ ತಪ್ಪುಗಳಿಂದ ಪಾಠ ಕಲಿಯುವ ಮೂಲಕ ವರ್ತಮಾನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಪ್ರಯತ್ನ ನಡೆಯಬೇಕಿದೆ. ಹಿರೇಮಠರ ‘ಹಾವಳಿ’ ಕಾದಂಬರಿ ಇತಿಹಾಸದಲ್ಲುಂಟಾದ ತಪ್ಪುಗಳಿಂದ ಪಾಠ ಕಲಿಯುವ ಅಗತ್ಯದ ಕುರಿತು ಮೆಲು ದನಿಯಲ್ಲಿ ಆಗ್ರಹಿಸುತ್ತದೆ. ಈ ಆಗ್ರಹ ಸಕಾರಣವಾಗಿರುವುದರಿಂದ ಸ್ವಾಗತಾರ್ಹವಾಗಿದೆ. ಮಲ್ಲಿಕಾರ್ಜುನ ಹಿರೇಮಠರ ‘ಹಾವಳಿ’ ಇತ್ತೀಚೆಗೆ ಕನ್ನಡದಲ್ಲಿ ಬಂದ ಮಹತ್ವದ ಕಾದಂಬರಿಗಳಲ್ಲೊಂದು.