ಆಸ್ಪತ್ರೆಯ ಹಾಸಿಗೆಯಲ್ಲಿ ಅಂಗಾತ ಮಲಗಿದ್ದ ದೀಕ್ಷಾಳ ಮುಖ ಬಿಳುಚಿಕೊಂಡಿತ್ತು. ದೃಷ್ಟಿ ಎತ್ತಲೋ ನೆಟ್ಟಿತ್ತು. ಭಾವಶೂನ್ಯ ದೃಷ್ಟಿ. ಹಾಲು ಬಣ್ಣದ ಚೆಲುವೆಯ ಮೈಯಲ್ಲಿನ ರಕ್ತವೆಲ್ಲ ಬಸಿದು ಹೋಗಿ ಒಣಗಿದ ಕಬ್ಬಿನ ಜಲ್ಲೆಯಂತೆ ಕಾಣುತ್ತಿದ್ದಳು. ಕದಡಿ ಹೋಗಿದ್ದ ಮನಸ್ಸಿಗೆ ಸಮಾಧಾನವಿರಲಿಲ್ಲ. ಒಂಥರ ದುಗುಡ, ಚಡಪಡಿಕೆ, ತುಮುಲ, ಅಳುಕು. ಏನೇನೋ ವಿಚಾರಗಳ ಕಾಡಾಟ, ತಾಕಲಾಟ.
"ದೇವರು ನನಗೇ ಏಕೆ ಈ ರೀತಿಯ ಕಷ್ಟಗಳನ್ನು ಕೊಡುತ್ತಿದ್ದಾನೆ? ನನಗೇಕೆ ಈ ರೀತಿ ಸಾಲು ಸಾಲು ಶಿಕ್ಷೆಗಳು? ಕಷ್ಟಗಳು ಹೀಗೆ ಬಂದು ಹಾಗೆ ಮಾಯವಾಗಿ ಹೋಗಿ ಸುಖಕ್ಕೆ ದಾರಿ ಮಾಡಿಕೊಟ್ಟಾಗ ಮನಸ್ಸು ಮುದಗೊಳ್ಳುತ್ತದೆ. ಆದರೆ ಕಷ್ಟಗಳ ಸರಮಾಲೆಯೇ ಬೆಂಬತ್ತಿದರೆ ಮನಸ್ಸು ಗಾಸಿಗೊಳ್ಳದೇ ಇದ್ದೀತೆ? ಕಷ್ಟ-ಸುಖಗಳು ನಾಣ್ಯದ ಎರಡು ಮುಖಗಳಿದ್ದಂತೆ; ಬೇವು-ಬೆಲ್ಲ ಇದ್ದಂತೆ ಎಂದು ತಿಳಿದವರು ಹೇಳುತ್ತಾರೆ. ಆದರೆ ಜೀವನದಲ್ಲಿ ಬರೀ ಬೇವಿನ ಕಹಿಯೇ ತುಂಬಿಕೊಂಡಿದ್ದರೆ ಸಹಿಸಲಸಾಧ್ಯವೇ? ನಾನು ಬೆಲ್ಲದ ಸವಿ ಸವಿಯುವುದು ಯಾವಾಗ? ಜೀವನ ತಿರುವುಗಳ ಮಾನಸ ಸರೋವರವಂತೆ. ಮನಸ್ಸಿಗೆ ಮುದ ನೀಡುವ ತಿರುವುಗಳು ಬೇಕಲ್ಲವೇ?
ಕಷ್ಟಗಳನ್ನು ಕೊಡಲು ನಾನೇನು ಆ ದೇವರಿಗೆ ಬೇಡವೆನ್ನುವುದಿಲ್ಲ. ಜೊತೆಗೆ ಕಷ್ಟಗಳನ್ನು ಸಹಿಸಿಕೊಂಡು ಮೆಟ್ಟಿ ನಿಲ್ಲುವ ಧೈರ್ಯ, ಶಕ್ತಿಯನ್ನೂ ಕೊಡಲಿ. `ಕಷ್ಟಗಳು ಇದ್ದರೇ ಸುಖದ ಅರಿವಾಗುತ್ತದೆ’ ಎಂದು ತಿಳಿದವರು ಹೇಳುತ್ತಾರೆ. ಒಂದರ ಹಿಂದೆ ಮತ್ತೊಂದರಂತೆ ಬರೀ ಅನಪೇಕ್ಷಿತ ಕಹಿ ಘಟನೆಗಳು ತುಂಬಿಕೊಂಡರೆ ಸಹಿಸಲಸಾಧ್ಯವೇ? ನನ್ನೀ ಜೀವನದ ಬವಣೆಗೆ ಯಾರು ಹೊಣೆ...? ನಾನೇ ಅಲ್ಲವೇ? ನಾನೊಬ್ಬಳೇ ಹೇಗಾಗುತ್ತೇನೆ...? ಉಹೂಂ. ಸಾಲು ಸಾಲು ಜನರು ಹೊಣೆಗಾರರಲ್ಲವೇ?
ಮನಸ್ಸು ಒಂಥರ ಪರಿಸರ ಇದ್ದ ಹಾಗೆ. ಯಾವಾಗ ಬೇಕಾದರೂ ಬದಲಾಗುತ್ತೆ. ಆದರೆ ನೆನಪು ಅನ್ನೋದು ಗಾಳಿ ತರಹ. ಯಾವಾಗಲೂ ನಮ್ಮ ಉಸಿರಲ್ಲೇ ಇರುತ್ತೆ. ಕಹಿ ನೆನಪುಗಳು ನಿರಂತರವಾಗಿ ನನ್ನನ್ನು ಕಾಡುತ್ತಿವೆ.
"ದೀಕ್ಷಾ, ತುಂಬಾ ಟೆನ್ಸ್‍ನಲ್ಲಿರುವ ಹಾಗಿದೆ...? ಅದೇನೋ ಒಂಥರ ದುಗುಡ, ಕಳವಳ ನಿನ್ನ ಮುಖದಲ್ಲಿ ರಾರಾಜಿಸುತ್ತಿದೆ. ಶೂನ್ಯಭಾವದ ದೃಷ್ಟಿ ಎಲ್ಲೋ ನೆಟ್ಟಿದೆ..." ದೀಕ್ಷಾಳ ಪತಿ ಚಿರಾಗ್ ಅವಳ ತೋಳಿಡಿದು ಮೆಲ್ಲಗೆ ಅಲುಗಾಡಿಸಿದಾಗಲೇ ಅವಳ ವಿಚಾರ ಲಹರಿಗೆ ತಡೆ ಬಿದ್ದಿತ್ತು. ಆಗಷ್ಟೇ ವೇಗೋತ್ಕರ್ಷ ಪಡೆಯಲು ಮುಂದಾಗಿದ್ದ ನೆನಪಿನ ದೋಣಿಗೆ ತೆರೆ ಬಿತ್ತು.
"ಹಾಂ....ಹೂಂ....ಚಿರು. ನೀನ್ಯಾವಾಗ ಬಂದಿ ಇಲ್ಲಿಗೆ...? ಬಂದು ಬಹಳ ಹೊತ್ತಾಯಿತೇ...? ನನಗೆ ಗೊತ್ತಾಗಲಿಲ್ಲವಲ್ಲ...? ಸಾರಿ." ದೀಕ್ಷಾ ತಡೆದು ತಡೆದು ಮೆಲ್ಲಗೆ ಮಾತಾಡಿದಳು. ನವಿರಾಗಿ ತನ್ನ ಮುಂರುಳನ್ನು ನೇವರಿಸುತ್ತಿದ್ದ ಗಂಡನ ಕೈಗಳನ್ನು ಹಿಡಿದುಕೊಂಡಾಗ ಭಾವೋದ್ವೇಗಕ್ಕೆ ಒಳಗಾದ ಅವಳ ಕಣ್ಗಳಲ್ಲಿ ಅವಳಿಗರಿವಿಲ್ಲದಂತೆ ನೀರು ಧಾರೆಯಾಗಿ ಧುಮ್ಮಿಕ್ಕತೊಡಗಿತು.
"ಪುಟ್ಟಾ, ಸಮಾಧಾನ ಮಾಡಿಕೋ. ಧೈರ್ಯವಿರಲಿ. ಈಗ ಏನಾಗಿದೆ ಅಂತ ಈ ಭಾವುಕತೆ...?"
"ಚಿರು, ಇನ್ನೇನಾಗಬೇಕಿತ್ತು...? ಈಗ ಆಗಿರುವುದು ಸಾಕಲ್ಲವೇ? ನನ್ನ ಜೀವನವೇ ಬಾಡಿ ಹೋಗುತ್ತಿದೆ..."
"ಅಂಥಹದ್ದೇನೂ ಆಗಿಲ್ಲ. ಜೀವನ ಅಂದರೆ ಬರೀ ಸರಳರೇಖೆಯಂತೆ ಇರುತ್ತದೆ ಎಂದು ಅಂದುಕೊಂಡಿರುವಿಯಾ ಹೇಗೆ? ಅಂಕು-ಡೊಂಕು, ಏರಿಳಿತ ಎಲ್ಲಾ ಇರುತ್ತೆ."
"ಅವೆಲ್ಲವೂ ನನ್ನ ಜೀವನದಲ್ಲೇ ಇರಬೇಕೆ?"
"ಹಾಗಂತ ಅಲ್ಲ ದೀಕ್ಷಾ. ಎಲ್ಲರ ಜೀವನದಲ್ಲೂ ಏರಿಳಿತಗಳಿರುತ್ತವೆ. ಒಬ್ಬರಿಗೆ ಹೆಚ್ಚು, ಇನ್ನೊಬ್ಬರಿಗೆ ಕಡಿಮೆ ಅಷ್ಟೇ."
"ಆದರೆ, ಎಲ್ಲವೂ ನನಗೇ ವಕ್ರಿಸಿಕೊಂಡಿವೆ."
"ದೀಕ್ಷಿ, ಮೊದಲೇ ಹುಷಾರಿಲ್ಲ. ಹಾಗೆಲ್ಲ ಅಂದುಕೊಳ್ಳಬೇಡ. ಸಮಚಿತ್ತದಿಂದ ಸ್ವೀಕರಿಸಿ ಎದುರಿಸಬೇಕು."
"ಹೇಳುವುದಕ್ಕೆ ಎಲ್ಲವೂ ಚೆನ್ನ. ಅನುಭವಿಸಿದವರಿಗೇ ಗೊತ್ತು ದುಃಖದ ಆಳ, ತೀವ್ರತೆ."
"ನಿನ್ನ ಕಷ್ಟ-ಸುಖಗಳಲ್ಲಿ ನಾನೂ ಭಾಗಿಯಲ್ಲವೇ? ನಿನ್ನ ದುಃಖ ಬೇರೆ, ನನ್ನ ದುಃಖ ಬೇರಿದೆಯೇ? ಬೆಳಕು ಕೊಡುವ ಸೂರ್ಯ, ಚಂದ್ರರಿಗೂ ಸಹ ಮೋಡಗಳು ಅಡ್ಡ ಬಂದು ಪ್ರಕಾಶ ಕಡಿಮೆ ಮಾಡುತ್ತವೆ. ಮನುಷ್ಯರಾದ ನಮ್ಮ ಕಷ್ಟ, ಸುಖಗಳು ಸಹ ಹಾಗೆಯೇ ಕ್ಷಣಿಕ. ಕಷ್ಟಗಳನ್ನು ಸರಿಸಿ ಬದುಕುವ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಬೇಕು. ನಿನಗೆ ವಿಶ್ರಾಂತಿ ಬೇಕು. ಸುಮ್ಮಸುಮ್ಮನೇ ಅದೂ, ಇದೂ ಯೋಚಿಸುತ್ತ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡ. ನಾನಿದ್ದೇನೆ. ಚಿಂತಿಸಬೇಡ. ಎಲ್ಲವೂ ಸರಿ ಹೋಗುತ್ತೆ."
"ನೋವು ಬಂದಾಗ ಜೀವನ ಇಷ್ಟ ಆಗುವುದಿಲ್ಲ ನಿಜ. ಆದರೆ ಇಷ್ಟ ಆದವರು ಜೊತೆಗಿರುವಾಗ ನೋವಲ್ಲೂ ಕೂಡಾ ಏನೋ ಒಂಥರ ಖುಷಿ ಇರುತ್ತೆ ಅಲ್ಲವೇ?" ಎಂದು ದೀಕ್ಷಾ ತನ್ನೊಳಗೇ ಅಂದುಕೊಂಡು, "ಓಕೆ ಚಿರು. ನೀನು ನಂಜೊತೆ ಇರುವಾಗ ನಾನೇಕೆ ಚಿಂತಿಸಲಿ...?" ಎಂದಾಗ ಚಿರಾಗ್, "ದಟ್ಸ್ ಲೈಕ್ ಎ ಗುಡ್ ಗರ್ಲ್. ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಂಡು ಚೆನ್ನಾಗಿ ಊಟ ಮಾಡಿ ಆದಷ್ಟು ಬೇಗ ಮೊದಲಿನಂತಾದರೆ ನನಗದಷ್ಟೇ ಸಾಕು" ಎಂದೆನ್ನುತ್ತಾ ಕಣ್ಣೀರನ್ನು ಒರೆಸಿ ಅವಳ ಮೊಗದಲ್ಲಿ ನಗು ಅರಳಿಸಿದ. ಅಷ್ಟೊತ್ತಿಗೆ ಡಾ.ರಕ್ಷಿತಾ ಬಂದರು.
ಡಾ.ರಕ್ಷಿತಾ ದೀಕ್ಷಾಳ ನಾಡಿ, ಹೃದಯಗಳ ಬಡಿತ, ರಕ್ತದೊತ್ತಡ, ಉಸಿರಾಟದ ಕ್ರಮ ಎಲ್ಲವನ್ನು ಕೂಲಂಕಶವಾಗಿ ತಪಾಸಣೆ ಮಾಡಿದ ನಂತರ, "ದೀಕ್ಷಾ, ನಿಮ್ಮ ಆರೋಗ್ಯ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಒಳ್ಳೇ ಬೆಳವಣಿಗೆ. ಇನ್ನೆರಡು ದಿನ ಇಲ್ಲಿದ್ದರೆ ಸಾಕು. ತಪ್ಪು ತಿಳಿದುಕೊಳ್ಳದಿದ್ದರೆ ಒಂದು ಮಾತನ್ನು ಹೇಳಲು ಬಯಸುವೆ..." ಎಂದು ರಾಗವೆಳೆದರು.
"ಡಾಕ್ಟರ್, ನೀವೆಷ್ಟಾದರೂ ರೋಗಿಗಳ ಹಿತವನ್ನೇ ಬಯಸುವವರು. ಮೇಲಾಗಿ ನೀವು ಪರಿಣಿತರು. ನನ್ನ ಹಿತಕ್ಕಾಗಿ ತಾನೇ ನೀವು ಹೇಳುವುದು? ಹೇಳಿ ಡಾಕ್ಟರ್, ನಿಮ್ಮ ಮಾತಿನಂತೆಯೇ ನಡೆದುಕೊಳ್ಳುವೆ." ದೀಕ್ಷಾ ಹೇಳಿದಾಗ, "ಗುಡ್ ಗರ್ಲ್ ಎಂದು ಅವಳ ಭುಜ ತಟ್ಟಿದರು.
"ದೀಕ್ಷಾ, ನೀವು ದೈಹಿಕವಾಗಿ ಆರಾಮಾಗಿದ್ದೀರಿ. ಅದರಲ್ಲೇನು ಸಂದೇಹವಿಲ್ಲ. ಯಾವುದೋ ಗಂಭೀರವಾದ ವಿಷಯವೊಂದು ನಿಮ್ಮ ಮನಸ್ಸನ್ನು ಕೊರೆಯುತ್ತಿದೆ ಎಂದು ನನಗನಿಸುತ್ತಿದೆ. ಯಾವಾಗಲೂ ಅನ್ಯ ಮನಸ್ಕಳಾಗಿ ಯಾವುದೋ ಗಹನವಾದ ವಿಚಾರದಲ್ಲಿರುತ್ತೀರಿ. ಮಾನಸಿಕವಾಗಿ ಜರ್ಜಿರಿತಾರಾಗಿರುವಿರಿ. ಮನಶಾಸ್ತ್ರಜ್ಞರೊಂದಿಗೆ ಮನಸ್ಸು ಬಿಚ್ಚಿ ಮಾತಾಡಿ ನಿಮ್ಮೆದೆಯೊಳಗಿನ ನೋವನ್ನು ಹಂಚಿಕೊಂಡರೆ ಮನಸ್ಸು ಹಗುರವಾಗಬಹುದು; ಸಮಸ್ಯೆಗೆ ಪರಿಹಾರವೂ ಸಿಗಬಹುದು. ನಾಳೆ ನನ್ನ ಗೆಳತಿ, ಮನಶಾಸ್ತ್ರಜ್ಞೆ ಡಾ.ವನಿತಾ ಬರುವವರಿದ್ದಾರೆ. ನೀವು ಹೂಂ ಅಂದರೆ ಅವರ ಜೊತೆಗೆ ಮನಸ್ಸು ಬಿಚ್ಚಿ ಮಾತಾಡಿಕೊಳ್ಳಬಹುದು." ಡಾ.ರಕ್ಷಿತಾ ಅವರ ಮಾತಿಗೆ ದೀಕ್ಷಾಳಿಂದ ತಕ್ಷಣ ಪ್ರತಿಕ್ರಿಯೆ ಬರಲಿಲ್ಲ.
"ದೀಕ್ಷಾ, ನಾಳೆಯವರೆಗೆ ಸಮಯವಿದೆ. ಯೋಚಿಸಿ ತೀರ್ಮಾನ ತೆಗೆದುಕೊಂಡರೆ ನಾಳೆ ಅವರ ಜೊತೆಗೆ ಮಾತಾಡಲು ಅವಕಾಶ ಕಲ್ಪಿಸಿಕೊಡುವೆ."
"ಡಾಕ್ಟರ್, ನಿಮ್ಮ ಸಲಹೆಗೆ ನಾಡಿ ರೆಡಿ. ಆದರೆ ಒಂದು ಕಂಡಿಷನ್. ನಾನು ಸೈಕಿಯಾಟ್ರಿಸ್ಟ್‍ನ್ನು ಕನ್ಸಲ್ಟ್ ಮಾಡಿದ್ದನ್ನು ನಮ್ಮ ಮನೆಯಲ್ಲಿ ಯಾರಿಗೂ ತಿಳಿಸಬಾರದು."
"ಓಕೇ ದೀಕ್ಷಾ. ಅದರ ಬಗ್ಗೆ ವರಿ ಮಾಡಿಕೊಳ್ಳುವುದು ಬೇಡ" ಎಂದು ಮಗುಳು ನಗೆ ಬೀರುತ್ತ ಡಾಕ್ಟರ್ ಹೋಗಿದ್ದರು. ದೀಕ್ಷಾ ಕಣ್ಮುಚ್ಚಿಕೊಂಡು ಮಲಗಿದಳು. ನಿದ್ರೆ ಬರುವ ಸೂಚನೆ ಕಾಣಲಿಲ್ಲ. ಹಾಗೇ ಸುಮ್ಮನೇ ಕಣ್ಮುಚ್ಚಿಕೊಂಡೇ ಮಲಗಿದಳು.
"ಕಣ್ತೆಗೆದರೆ ಆಚೆ ಕುಳಿತಿರುವ ಅಮ್ಮನಾಗಲೀ, ಅತ್ತೆಯಾಗಲೀ ಮಾತಿಗೆ ಶುರುವಿಕ್ಕಿಕೊಳ್ಳಬಹುದು. ಯಾರೊಂದಿಗೂ ಮಾತಾಡಲು ನನಗಿಷ್ಟವಿಲ್ಲ. ಮೌನದಲ್ಲಿರಬೇಕೆಂದು ಮನಸ್ಸು ಬಯಸುತ್ತಿದೆ." ಹೀಗೆ ಯೋಚಿಸಿದ ದೀಕ್ಷಾ ಹೊರಳಾಡದೇ ನಿದ್ರೆ ಬಂದವರಂತೆ ಮಲಗಿದಳು. ಮನಸ್ಸು ಡಾಕ್ಟರ್ ಹೇಳಿದ್ದನ್ನೇ ಯೋಚಿಸುತ್ತಿತ್ತು. ಹೌದು, ಡಾಕ್ಟರ್ ಸಲಹೆ ಸರಿಯಾಗಿದೆ ಎಂದು ಅನಿಸತೊಡಗಿತ್ತು. ಸೈಕಿಯಾಟ್ರಿಸ್ಟ್ ಜೊತೆಗೆ ಮನಬಿಚ್ಚಿ ಮಾತಾಡಿ ಪರಿಹಾರ ಕಂಡುಕೊಳ್ಳುವುದೇ ಲೇಸು ಎಂದು ಅವಳ ಮನಸ್ಸಿಗೆ ಮನದಟ್ಟಾಗತೊಡಗಿತ್ತು. ಗೊಂದಲದಲ್ಲಿದ್ದ ಮನಸ್ಸು ತಿಳಿಯಾಗತೊಡಗಿತ್ತು.
ಮರುದಿನ ಸಂಜೆ ಡಾ.ವನಿತಾ ಬಂದಿದ್ದರು. ಸುಮಾರು ಅರವತ್ತರ ಹರೆಯದ, ತೀಕ್ಷಣ ಕಣ್ಣುಗಳ, ಬಳುಕುವ ಬಳ್ಳಿಯಂಥಹ ಸಹಜ ಸುಂದರಿ ಎಂದೆನಿಸಿತು ದೀಕ್ಷಾಳಿಗೆ ಅವರನ್ನು ಕಂಡಾಗ. ತುಂಬಾ ಆತ್ಮೀಯವಾಗಿ ಮಾತಾಡಲು ಶುರುವಿಕ್ಕಿಕೊಂಡಿದ್ದರು. ದೀಕ್ಷಾಳನ್ನು ತಮ್ಮ ಮಾತಿನ ಶೈಲಿಯಿಂದ ವಿಶ್ವಾಸಕ್ಕೆ ತೆಗೆದುಕೊಂಡು ಹೆದರಿಕೆ, ಸಂಕೋಚ, ಅನುಮಾನವಿಲ್ಲದೇ ಮನಸ್ಸನ್ನು ಬಿಚ್ಚಿಡಲು ಡಾಕ್ಟರ್ ತಿಳಿಸಿದಾಗ ಮೊದಲೇ ನಿರ್ಧರಿಸಿಕೊಂಡಿದ್ದಂತೆ ದೀಕ್ಷಾ ಮನಬಿಚ್ಚಿ ಮಾತಾಡಲು ಮುಂದಾದಳು..
"ಡಾಕ್ಟ್ರೇ, ಬಿಇ ಕಂಪ್ಯೂಟರ್ ಸೈನ್ಸ್ ಮುಗಿಸುತ್ತಲೇ ನನಗೆ ಪ್ರತಿಷ್ಠಿತ "ಗ್ಲೋಬಲ್ ಸಾಫ್ಟ್‍ವೇರ್ಸ್" ಕಂಪನಿಯಲ್ಲಿ ಕೆಲಸ ಸಿಕ್ಕಿತು. ಕಂಪನಿಯ ಕಚೇರಿ ವ್ಹೈಟ್ ಫೀಲ್ಡ್‍ನಲ್ಲಿದ್ದರೆ ನಮ್ಮ ಮನೆ ಇರೋದು ಮಾರತ್‍ಹಳ್ಳಿಯಲ್ಲಿ. ದಿನಾಲೂ ಬಸ್ಸಿನಲ್ಲಿ ಓಡಾಟ. ಕಂಪನಿಯ, "ಸಾಫ್ಟ್‍ವೇರ್ ಪ್ರೊಮೋಷನ್ಸ್ ಇನ್ ಬ್ಯಾಂಕಿಂಗ್ ಸಿಸ್ಟಮ್ಸ್" ವಿಭಾಗದಲ್ಲಿ ನನಗೆ ಕೆಲಸ. ಎರಡು ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್‍ಗಳ ಜೊತೆಗೆ ನಮ್ಮ ಕಂಪನಿಯ ಒಪ್ಪಂದವಿದೆ. ನಮ್ಮ ತಂಡದಲ್ಲಿದ್ದ ಇಪ್ಪತ್ತು ಜನರಿಗೆ ಒಂದು ಬ್ಯಾಂಕಿನ ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಯ ಶಾಖೆಗಳ ಉಸ್ತುವಾರಿ ಇದೆ. ಆಗಾಗ ಎರಡು, ಮೂರು ದಿನಗಳವರೆಗೆ ಈ ಬ್ಯಾಂಕ್ ಶಾಖೆಗಳ ಊರುಗಳಿಗೆ ನಾವು ಹೋಗಬೇಕಾಗುತ್ತಿತ್ತು. ಕೆಲವೊಂದು ಸಾರೆ ಹೋದಲ್ಲೇ ವಸ್ತಿಯೂ ಆಗುತ್ತಿತ್ತು.
ಕೆಲಸಕ್ಕೆ ಸೇರಿ ಎರಡು ವರ್ಷವಾಗತೊಡಗಿತ್ತು. ಮನೆಯಲ್ಲಿ ಅಪ್ಪ-ಅಮ್ಮ ನನ್ನ ಮದುವೆಗೆ ಅವಸರ ಮಾಡತೊಡಗಿದ್ದರು. ಇನ್ನೊಂದೆರಡು ವರ್ಷವಾಗಲಿ, ಅಷ್ಟೇಕೆ ಅವಸರ? ನನಗೆ ಈಗಷ್ಟೇ ಇಪ್ಪತ್ನಾಲ್ಕು" ಎಂದು ಹೇಳಿ ಅವರ ಬಾಯಿ ಮುಚ್ಚಿಸಿದ್ದೆ.
"ಈಗಿನ ಕಾಲದ ಹುಡುಗಿಯರೇ ಹೀಗೆ. ಮೊದಲು ಡಿಗ್ರಿಯಾಗಲಿ; ನಂತರ ಮೂರ್ನಾಲ್ಕು ವರ್ಷ ಕೆಲಸ ಮಾಡುವೆ; ನಂತರ ಮದುವೆ ಎಂದು ಹೇಳುತ್ತಾ ಹೋಗುವಿರಿ. ನಿಮ್ಮ ಕೈಯಲ್ಲಿ ಓಡಾಡುತ್ತಿದೆಯಲ್ಲ ದುಡ್ಡು, ಆ ದುಡ್ಡಿನ ಮಹಿಮೆ ಅಷ್ಟೇ. ಕಾಲಾಯ ತಸ್ಮೈ ನಮಃ. ಭಗವಂತ, ನೀನೇ ಕಾಪಾಡು." ಅಮ್ಮ ಬೇಸರದಿಂದ ಗೊಣಗಿ ತೆಪ್ಪಗಾಗಿದ್ದಳು.
ಅಂದು ಬೆಳಿಗ್ಗೆ ಕಚೇರಿಯಲ್ಲಿ ಇನ್ನೂ ಅಂದಿನ ಕೆಲಸ ಶುರುವಾಗಿರಲಿಲ್ಲ. ಅಷ್ಟರಲ್ಲಿ ನಮ್ಮ ಇಪ್ಪತ್ತು ಜನರ ತಂಡಕ್ಕೆ ಹೆಡ್ ಆಗಿದ್ದ ಸಂದೀಪ್ ಹೊಸಬನೊಬ್ಬನೊಂದಿಗೆ ಬಂದಿದ್ದರು. ನಮ್ಮೆಲ್ಲರನ್ನೂ ಹತ್ತಿರ ಕರೆದ ಸಂದೀಪ್, "ಫ್ರೆಂಡ್ಸ್ ಇವರು ಉತ್ಪಲ್ ಅಂತ. ಇನ್ಮುಂದೆ ಇವರೇ ನಿಮಗೆ ಹೆಡ್. ಬೆಂಗಳೂರಿನಲ್ಲೇ ಬೇರೊಂದು ಕಂಪನಿಯಲ್ಲಿ ನಾಲ್ಕು ವರ್ಷಗಳವರೆಗೆ ಸೇವೆ ಸಲ್ಲಿಸಿ ಇಂದೇ ನಮ್ಮ ಕಂಪನಿಗೆ ಸೇರಿಕೊಂಡಿದ್ದಾರೆ. ಇವರಿಗೂ ನಿಮ್ಮ ಸಹಕಾರ ಮೊದಲಿನಂತಿರಲಿ. ಆಲ್ ದಿ ಬೆಸ್ಟ್" ಎಂದು ಹೊಸಬರ ಪರಿಚಯ ಮಾಡಿಕೊಟ್ಟಿದ್ದರು.
"ಹಾಯ್ ಫ್ರೆಂಡ್ಸ್, ಆಯ್ ಯಾಮ್ ಉತ್ಪಲ್; ಉತ್ಪಲ್ ಮುಖರ್ಜಿ, ನಾಟ್ ಉತ್ಪಲ್ ದತ್ ಆಫ್ ಸೆವೆಂಟೀಜ್ ಹಿಂದಿ ಅಂಡ್ ಬೆಂಗಾಲಿ ಫಿಲ್ಮ್ ಇಂಡಸ್ಟ್ರಿ ಫೇಮಸ್ ಸ್ಟಾರ್. ಫ್ರಾಮ್ ವೆಸ್ಟ್ ಬೆಂಗಾಲ್. ನೀಡ್ ಯುವರ್ ಫುಲ್ ಸಪೋರ್ಟ್." ಎಂದು ಉತ್ಪಲ್ ಸ್ವತಃ ತನ್ನ ಕಿರುಪರಿಚಯ ಮಾಡಿಕೊಂಡಿದ್ದ. ನಾವೆಲ್ಲರೂ ಅವನ ಕೈ ಕುಲುಕಿ ಸ್ವಾಗತಿಸಿ ಶುಭ ಹಾರೈಸಿದ್ದೆವು. ಹುಡುಗಿಯರ ದಿಲ್ ತೋಪು ಮಾಡುವಂಥಹ ಐದು ಅಡಿ ಹತ್ತು ಇಂಚು ಎತ್ತರದ ಆಕರ್ಷಕ ವ್ಯಕ್ತಿತ್ವದ ಕೆಂಪನೆಯ ಮೈಬಣ್ಣದ ಹುಡುಗ ಉತ್ಪಲ್.
ಉತ್ಪಲ್ ಒಳ್ಳೇ ಕೆಲಸಗಾರ ಅಂತ ಒಂದು ವರ್ಷದ ಒಡನಾಟದಲ್ಲಿ ಸಾಬೀತು ಮಾಡಿದ್ದ. ಒಳ್ಳೇ ಜಾಲಿ ಹುಡುಗ. ಎಲ್ಲರ ಜೊತೆಗೆ ತುಂಬಾ ಫ್ರೀಯಾಗಿ, ಆತ್ಮೀಯವಾಗಿ ಮಾತಾಡುತ್ತಿದ್ದ. ಮಾತು, ಹಾವ_ಭಾವಗಳಿಂದ ಮನ ಸೆಳೆಯುತ್ತಿದ್ದ. ನನ್ನ ಸಹೋದ್ಯೋಗಿ ಹುಡುಗಿಯರು ಅರಳು ಹುರಿದಂತೆ ಪಟಪಟ ಅಂತ ಮಾತಾಡೋ ಮಾತಿನ ಮಲ್ಲಿಯರು. ನಾನೋ ತುಸು ಗಂಭೀರೆ.
"ಏನ್ರೀ ದೀಕ್ಷಾ ಮೇಡಂ, ನಂಜೊತೆಗೆ ಮಾತಾಡಬಾರದೆಂದು ದೀಕ್ಷಾ-ಗೀಕ್ಷಾ ತೆಗೆದುಕೊಂಡಿರುವಿರೋ ಹೇಗೆ?" ಎಂದು ಕೀಟಲೆ ಮಾಡಲು ಮುಂದಾಗುತ್ತಿದ್ದ. ನಾನು ಮುಗುಳು ನಗೆಯಲ್ಲೇ ಉತ್ತರಿಸಿ ಸುಮ್ಮನಾಗುತ್ತಿದ್ದೆ. ಅಂತೂ-ಇಂತೂ ತುಸು ದಿನಗಳಲ್ಲಿ ಉತ್ಪಲ್ ನಿಧಾನವಾಗಿ ನನ್ನ ಹೃದಯಕ್ಕೆ ಲಗ್ಗೆ ಇಟ್ಟು ಮನಸ್ಸನ್ನು ಕದಿಯಲು ಮುಂದಾಗಿದ್ದ ಮನ್ಕಿ ಚೋರ್. ನನಗರಿವಿಲ್ಲದಂತೆ ನನ್ನೆದೆಯಲ್ಲಿ ಕನಸುಗಳು ಗರಿಗೆದರತೊಡಗಿದ್ದವು. ಅವನೋ ದೂರದ ಪಶ್ಚಿಮ ಬೆಂಗಾಲ್‍ದವನು; ಜಾತಿ, ಮತ ಒಂದೂ ಗೊತ್ತಿಲ್ಲ; ಅಪ್ಪ-ಅಮ್ಮ ಒಪ್ಪಲಿಕ್ಕಿಲ್ಲ ಎಂದು ಅಂದುಕೊಳ್ಳುತ್ತಿದ್ದರೂ ಹುಚ್ಚುಕೋಡಿ ಮನಸ್ಸು ಅವನನ್ನು ಆರಾಧಿಸತೊಡಗಿತ್ತು, ಪ್ರೀತಿಸತೊಡಗಿತ್ತು. ನನ್ನ ಕಂಪನಿಯಲ್ಲೇ ಕೆಲವು ಹುಡುಗಿಯರು ನಾರ್ಥೀ, ತೆಲುಗು ಮತ್ತು ತಮಿಳ್ ತಂಬಿಗಳನ್ನು ಮದುವೆಯಾಗಿ ಆರಾಮಾಗಿ ಇರುವುದನ್ನು ನೋಡಿದ್ದೆ.
ಅದೊಂದು ದಿನ ಸಂಜೆ ಎಲ್ಲರೂ ಕರ್ತವ್ಯ ಮುಗಿಸಿ ಹೊರಟಾಗಿತ್ತು. ನಾನೂ ಹೊರಡುವ ತಯಾರಿಯಲ್ಲಿದ್ದೆ. ಅಷ್ಟರಲ್ಲಿ ಉತ್ಪಲ್ ನನ್ನ ಟೇಬಲ್ ಹತ್ತಿರ ಬಂದಿದ್ದ.
"ಮೇಡಂ, ಇದೊಂದಿಷ್ಟು ಅರ್ಜೆಂಟ್ ಕೆಲಸ. ಅರ್ಧ ತಾಸಾದರೂ ಆಗಬಹುದು. ಮಾಡಿಕೊಟ್ಟರೆ ಚೆನ್ನ. ನಾನು ಕಾರಿನಲ್ಲಿ ನಿಮ್ಮನ್ನು ಮನೆಗೆ ಡ್ರಾಪ್ ಮಾಡುವೆ. ಪ್ಲೀಜ್..." ಎಂದಿದ್ದ. ಅವನ ಮುಖವನ್ನೇ ದಿಟ್ಟಿಸುತ್ತಾ ಕೆಲಸಕ್ಕೆ ಮುಂದಾಗಿದ್ದೆ. ಅರ್ಧ ತಾಸಿನಲ್ಲಿ ಕೆಲಸ ಮುಗಿದಿತ್ತು. ಅವನಿಗೆ ಇನ್ನೂ ಕೆಲಸವಿತ್ತೇನೋ...? ಆದರೂ ನನ್ನ ಸಲುವಾಗಿ ಹೊರಟ. ಮನೆಗೆ ಹೋಗುವ ಹಾದಿಯಲ್ಲಿ ಬರುವ ಮಾಲ್ ಒಂದರಲ್ಲಿ ಬೇಡವೆಂದರೂ ಐಸ್ಕ್ರೀಮ್ ತಿನ್ನಿಸಿ ಮನೆಗೆ ಕರೆದುಕೊಂಡು ಹೋಗಿದ್ದ. ಮನದಲ್ಲಿ ಅವನ ಬಗ್ಗೆ ಪುಟಿದೇಳುತ್ತಿದ್ದ ಭಾವನೆಗಳನ್ನು ತಿಳಿಸಲು ಸೂಕ್ತ ಅವಕಾಶ ದೊರೆತಿದೆ, ಹೇಳಿಬಿಟ್ಟರಾಯಿತು ಎಂದು ಅಂದುಕೊಂಡೆನಾದರೂ ಎದೆಯೊಳಗಿನ ಮಾತುಗಳು ಬಾಯಿಗೆ ಬರಲಿಲ್ಲ.
ಅದೊಂದು ಹಬ್ಬದ ದಿನ. ನನ್ನ ಖಾಸಾ ಗೆಳತಿಯರಿಬ್ಬರೂ ಹಬ್ಬವನ್ನಾಚರಿಸಲು ರಜೆ ಹಾಕಿದ್ದರು. ಉತ್ಪಲ್ ಮಧ್ಯಾಹ್ನ ಕಂಪನಿಯ ಕ್ಯಾಂಟೀನ್‍ನಲ್ಲಿ ಊಟ ಮಾಡುತ್ತಿದ್ದ. ಅಂದು ನಂಜೊತೆಗೆ ಊಟ ಮಾಡಲು ಹೇಳಿದ್ದೆ. ನನ್ನ ಲಂಚ್ ಬಾಕ್ಸ್‍ನಲ್ಲಿ ಊಟವನ್ನು ಹೆಚ್ಚಿಗೇ ತಂದಿದ್ದೆ.
"ದೀಕ್ಷಾ ನಾನು ತುಂಬಾ ಮಿಸ್ಮಾಡ್ಕೊಂಡ್ಬಿಟ್ಟೆ" ಎಂದಿದ್ದ ಊಟದ ರುಚಿಯನ್ನು ಸವಿಯುತ್ತಾ.
"ಏಕೆ...?" ಎಂದಿದ್ದೆ. ನನಗೊಂದೂ ಅರ್ಥವಾಗಿರಲಿಲ್ಲ ಅವನ ಮಾತು.
"ನಾನು ಈ ಕಂಪನಿಯಲ್ಲಿ ಮೊದಲೇ ಸೇರಿಕೊಳ್ಳಬೇಕಾಗಿತ್ತು. ನಿನ್ನಂಥಹ ನಗು ಮೊಗದ ಚೆಲುವೆಯ ಗೆಳೆತನ, ಇಂಥಹ ರುಚಿ ರುಚಿಯಾದ ಊಟ ಸವಿಯುವುದನ್ನು ತಪ್ಪಿಸಿಕೊಂಡಿದ್ದೆ." ಅವನ ಹೊಗಳಿಕೆಗೆ ನಾನು ಉಬ್ಬಿ ಹೋಗಿದ್ದೆ.
ಬ್ಯಾಂಕಿನ ಶಾಖೆಗಳಿಗೆ ಕರ್ತವ್ಯದ ನಿಮಿತ್ತ ಉತ್ಪಲ್ ಮತ್ತು ನನ್ನ ಇತರ ಸಹೋದ್ಯೋಗಿಗಳ ಜೊತೆಗೆ ಎರಡು-ಮೂರು ಸಾರೆ ಮೈಸೂರು, ಕನಕಪುರ ಅಂತ ಹೋಗಿ ಬಂದಿದ್ದೂ ಉಂಟು. ಸೋಮವಾರದಿಂದ ಮೂರ್ನಾಲ್ಕು ದಿನಗಳವರೆಗೆ ಬ್ಯಾಂಕ್‍ಗಳ ಸಾಂಫ್ಟ್‍ವೇರ್ ಪ್ರೊಮೋಷನ್‍ಗಾಗಿ ಮೈಸೂರಿಗೆ ಹೋಗಬೇಕಾಗಿ ಬಂದಿತ್ತು. ಉತ್ಪಲನೊಂದಿಗೆ ನಾನು, ಸಹೋದ್ಯೋಗಿ ಗೆಳತಿ ಸ್ಮಿತಾ ಹೋಗಬೇಕಿತ್ತು. ವೀಕೆಂಡ್ ಶುಕ್ರವಾರದಂದು ಮಂಡ್ಯ ಜಿಲ್ಲೆಯಲ್ಲಿನ ತನ್ನೂರಿಗೆ ಹೋಗಿದ್ದ ಸ್ಮಿತಾ ಸೋಮವಾರ ಮೈಸೂರಿಗೆ ನೇರವಾಗಿ ಬರುವುದಾಗಿ ಹೇಳಿದ್ದಳು. ಸೋಮವಾರ ನಾನು, ಉತ್ಪಲ್ ಇಬ್ಬರೂ ಜೊತೆಯಾಗೇ ಮೈಸೂರಿನ ಬಸ್ಸೇರಿದ್ದೆವು.
ನಾವು ಮೈಸೂರು ತಲುಪುವಷ್ಟರಲ್ಲಿ ಸ್ಮಿತಾಳಿಂದ ಫೋನ್ ಬಂದಿತ್ತು. ತಾಯಿಯ ಆರೋಗ್ಯದಲ್ಲಿ ಏರು-ಪೇರಾಗಿರುವುದರಿಂದ ತನಗೆ ಬರಲು ಆಗುವುದಿಲ್ಲ; ರಜೆಗೆ ಅಪ್ಲೈ ಮಾಡಿರುವುದಾಗಿ ಹೇಳಿದ್ದಳು.
ಮೊದಲನೇ ದಿನ ಬ್ಯಾಂಕಲ್ಲಿ ಕೆಲಸ ಮುಗಿದಾಗ ಆಗಲೇ ರಾತ್ರಿ ಎಂಟು ಗಂಟೆಯಾಗುತ್ತಲಿತ್ತು. ಬೆಂಗಳೂರಿಗೆ ಹೋಗಿ ಪುನಃ ಬೆಳಿಗ್ಗೆ ಬರುವುದಕ್ಕಿಂತ ಮೈಸೂರಲ್ಲೇ ಹಾಲ್ಟ್ ಮಾಡುವುದೇ ಲೇಸು ಎಂದೆನಿಸಿದ್ದರಿಂದ ಒಂದೊಳ್ಳೆಯ ಲಾಡ್ಜ್‍ನಲ್ಲಿ ರೂಮಗಳನ್ನು ತೆಗೆದುಕೊಂಡಿದ್ದೆವು. ಮನದಲ್ಲಿ ತುಡಿಯುತ್ತಿದ್ದ ಪ್ರೀತಿಯನ್ನು ಉತ್ಪಲ್‍ನೊಂದಿಗೆ ಹಂಚಿಕೊಳ್ಳಲು ಇದು ಸದಾವಕಾಶ ಎಂದು ಮನಸ್ಸೊಂದು ಕುಮ್ಮಕ್ಕು ನೀಡುತ್ತಿದ್ದರೂ ಅಂದು ಏನನ್ನೂ ಹೇಳಲಾಗಲಿಲ್ಲ. ಪ್ರಯಾಣ, ಕೆಲಸದಿಂದ ತುಂಬಾ ಆಯಾಸವಾಗಿದ್ದರಿಂದ ನಮ್ಮ ರೂಮುಗಳನ್ನು ಸೇರಿಕೊಂಡು ನಿದ್ರಾದೇವಿಗೆ ಶರಣಾಗಿದ್ದೆವು.
ಮರುದಿನವೂ ಕೆಲಸ ಮುಗಿಸಿಕೊಂಡು ಲಾಡ್ಜ್ ಸೇರಿದಾಗ ಎಂಟು ಗಂಟೆಯಾಗಿತ್ತು. ಊಟ ಮಾಡಿದ ನಂತರ ಇಬ್ಬರೂ ಮಾತಾಡುತ್ತಾ ನನ್ನ ಕೋಣೆಗೆ ಬಂದಿದ್ದೆವು.
"ದೀಕ್ಷಾ, ತುಸು ದಿನಗಳಿಂದ ನಿನ್ನನ್ನು ಅಬ್ಸರ್ವ್ ಮಾಡುತ್ತಿದ್ದೇನೆ, ನೀನು ಏನನ್ನೋ ಹೇಳಬೇಕೆಂದು ಚಡಪಡಿಸುತ್ತಿರುವ ಹಾಗೆ ತೋರುತ್ತಿದೆ...?" ಉತ್ಪಲ್ ಪೀಠಿಕೆ ಹಾಕಿದ್ದೆ.
"ಏ... ಏನೂ ಇಲ್ಲ ಉತ್ಪಲ್." ನಾನು ಚುಟುಕಾಗಿ ಹೇಳಿದ್ದೆ.
"ಹೌದೇ? ಏನೂ ಇಲ್ಲವಾ...?"
"ಹ್ಹೀ... ಹ್ಹೀ..."
"ನೋಡು ದೀಕ್ಷಾ, ಈ ಪ್ರೀತಿ ಅನ್ನೋ ಮಾಯಾವಿಯನ್ನು ಮುಚ್ಚಿಡಲು ಸಾಧ್ಯವಿಲ್ಲ. ನೀನು ನನ್ನನ್ನು ಮನಸಾರೆ ಪ್ರೀತಿಸುತ್ತಿರುವಿ ಎಂದು ನನ್ನ ಮನಸ್ಸು ಗ್ರಹಿಸಿ ಎಷ್ಟೋ ದಿನಗಳಾಗಿವೆ. ತುಂಬಾ ಚಡಪಡಿಕೆ, ತಲ್ಲಣವಿದೆ ನಿನ್ನೆದೆಯಲ್ಲಿ. ಹೌದು ತಾನೇ...?" ಎಂದೆನ್ನುತ್ತಾ ನನ್ನ ಮುಖವನ್ನೇ ತೀಕ್ಷಣವಾಗಿ ದಿಟ್ಟಿಸಿದ್ದ ಉತ್ಪಲ್. ಅವನ ಊಹೆ ಮೆಚ್ಚಿಕೆಯಾಗಿತ್ತು. ನಾಚಿ ನೀರಾಗಿದ್ದೆ.
"ಉತ್ಪಲ್, ನೀನು ನನ್ನನ್ನು ಪ್ರೀತಿಸುತ್ತಿಲ್ಲವೇ...?" ನಾನು ರಾಗವೆಳೆದಿದ್ದೆ.
"ಇಲ್ಲವೆಂದೆನೇ ನಾನು...? ಹ್ಹ... ಹ್ಹ..." ಎಂದಿದ್ದ. ಅವನ ಮಾತಿನಿಂದ ಮನಸ್ಸು ಸಂತಸದಿಂದ ಬೀಗುತ್ತಿತ್ತು. ಮನದಲ್ಲಿ ಉಕ್ಕೇರುತ್ತಿದ್ದ ಖುಷಿಯನ್ನು ಹಂಚಿಕೊಳ್ಳಲು ಅವನ ತೋಳುಗಳಲ್ಲಿ ಸೇರಿಕೊಂಡಿದ್ದೆ. ಅದೆಷ್ಟೋ ಸಮಯ ಹಾಗೇ ಕಳೆದು ಹೋದದ್ದು ಇಬ್ಬರ ಅರಿವಿಗೆ ಬರಲಿಲ್ಲ. ಅದೇ ಉತ್ಕಟತೆಯಲ್ಲಿ ಇಬ್ಬರೂ ಮೈ ಮರೆತು ಒಂದಾಗಿದ್ದೆವು. ಮೈಮರೆತು ಪ್ರೀತಿಯಾಟದಲ್ಲಿ ಮುಳುಗಿದ್ದು ನಮ್ಮ ಅರಿವಿಗೆ ಬರುವಷ್ಟರಲ್ಲಿ ಬಹು ದೂರ ಸಾಗಿದ್ದೆವು. ಉನ್ಮಾದದ ಕಾವು ಇಳಿದಾಗ ಭಯವಾಗಿತ್ತು.
"ದೀಕ್ಷೂ, ನಮ್ಮಿಬ್ಬರ ಪ್ರೀತಿ ಗಟ್ಟಿಯಾಗಿದೆ. ಭಯ ಪಡುವ ಅವಶ್ಯಕತೆ ಇಲ್ಲ. ಆದಷ್ಟು ಬೇಗ ಶಾಸ್ತ್ರೋಕ್ತವಾಗಿ ಮದುವೆಯಾಗೋಣ." ಭರವಸೆಯ ಮಾತುಗಳನ್ನಾಡಿದ್ದ ಉತ್ಪಲ್. ಅಂದಿನಿಂದ ಇಬ್ಬರೂ ಏಕಾಂತಕ್ಕಾಗಿ ಪರಿತಪಿಸುತ್ತಿದ್ದೆವು. ವೀಕೆಂಡ್‍ದಲ್ಲಿ ಬೆಂಗಳೂರಿನಲ್ಲಿ ಸುತ್ತದ ಮಾಲ್‍ಗಳಿರಲಿಲ್ಲ. ಕಬ್ಬನ್ ಪಾರ್ಕ, ಲಾಲ್ ಬಾಗ್, ನಂದಿಬೆಟ್ಟ, ಮೈಸೂರು, ಕೊಡಗು ಅಲ್ಲಿ ಇಲ್ಲಿ ಅಂತ ಬೇಜಾನ್ ಸುತ್ತಿದ್ದೇ ಸುತ್ತಿದ್ದು. ಪ್ರೀತಿಯ ಹೊಳೆಯಲ್ಲಿ ಮಿಂದಿದ್ದೇ ಮಿಂದಿದ್ದು.
ಹೀಗೇ ಏಳೆಂಟು ತಿಂಗಳುಗಳು ಕ್ಷಣದಂತೆ ಕಳೆದು ಹೋಗಿದ್ದವು. ಹಿಂದಿನ ತಿಂಗಳು ನಾನು ಹೊರಗಾಗದಿದ್ದುದನ್ನು ವೀಕೆಂಡ್‍ನಲ್ಲಿ ತಿಳಿಸಿದ್ದೆ. ಖುಷಿಪಟ್ಟು ಸಂಭ್ರಮಿಸಿದ್ದ ಉತ್ಪಲ್. ತಕ್ಷಣ ಮದುವೆಯ ಬಗ್ಗೆ ಯೋಚಿಸು ಎಂದು ಪೀಡಿಸಿದ್ದೆ. ಓಕೆ ಎಂದಿದ್ದ. ಅಂದು ಉತ್ಪಲ್ ಆಫೀಸಿಗೆ ಬರುವಾಗಲೇ ತುಂಬಾ ನರ್ವಸ್ ಆಗಿದ್ದನೆಂಬುದು ನನ್ನ ಗಮನಕ್ಕೆ ಬಂದಿತ್ತು. ಏನೆಂದು ವಿಚಾರಿಸಿದಾಗ, ದೀಕ್ಷೂ, ನನ್ನ ಅಪ್ಪನಿಗೆ ಸೀರಿಯಸ್, ಊರಿಗೆ ಹೋಗಬೇಕಾಗಿದೆ" ಎಂದಿದ್ದ ಮ್ಲಾನವದನನಾಗಿ. ಅವನಿಗೆ ನಾನೇ ಧೈರ್ಯ ಹೇಳಿ ಸಮಾಧಾನ ಮಾಡಿದ್ದೆ. ಅಂದೇ ಮಧ್ಯಾಹ್ನದ ಫ್ಲೈಟ್‍ಗೆ ಅವನು ಕೋಲ್ಕೋತ್ತಾಕ್ಕೆ ಹಾರಿದ್ದ. ಅಲ್ಲಿಂದ ಬಂದನಂತರ ಮದುವೆಯಾಗೋಣ ಎಂದು ಭರವಸೆಯ ಮಾತನ್ನಾಡಿದ್ದ. ಕೋಲ್ಕೋತ್ತಾ ತಲುಪಿದ ನಂತರ ಸುದ್ದಿ ತಿಳಿಸಿ ಫೋನಾಯಿಸಿದ್ದೇ ಕೊನೇ ಫೋನ್ ಅವನಿಂದ. ನಂತರ ಅವನ ಫೋನ್ ರಿಂಗಣಿಸಲೇ ಇಲ್ಲ. ನಾಟ್ ರೀಚೇಬಲ್, ಸ್ವಿಚ್ಡ್ ಆಫ್ ಎಂದು ಸಂದೇಶ ನೀಡುತ್ತಿತ್ತು. ಒಂದುವಾರ, ಎರಡುವಾರ, ತಿಂಗಳು ಕಳೆದರೂ ಉತ್ಪಲ್ ಬರಲೇ ಇಲ್ಲ. ಕಾಂಟ್ಯಾಕ್ಟ್ ಮಾಡಲು ಸಾಧ್ಯವೇ ಆಗಲಿಲ್ಲ. ಕಂಪನಿಗೂ ಅವನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.
ನಮ್ಮಿಬ್ಬರ ಪ್ರೇಮದಾಟಕ್ಕೆ ಅಂಕುರಿಸಿದ ಕುಡಿಗೆ ಎರಡು ತಿಂಗಳಾಗತೊಡಗಿದಾಗ ಗಂಭೀರತೆಯ ಅರಿವು ಮನಸ್ಸನ್ನು ಮುಕ್ಕತೊಡಗಿತ್ತು. ಭಯದ ಭೀತಿ ಆವರಿಸತೊಡಗಿತ್ತು. ಯಾರೊಂದಿಗೆ, ಹೇಗೆ ಹಂಚಿಕೊಳ್ಳಲಿ ವಿಷಯ ಎಂಬ ತಾಕಲಾಟ, ಅಳುಕು ಮನದಲ್ಲಿ.
ಉತ್ಪಲ್ ತನ್ನೂರಿಗೆ ಹೋಗಿ ಒಂದು ತಿಂಗಳಾಗಿತ್ತು. ಅಂದು ಸಂಜೆ ಕೆಲಸ ಮುಗಿಸಿ ಮನೆಗೆ ಹೊರಡುವ ತಯಾರಿಯಲ್ಲಿದ್ದೆ. ಸಹೋದ್ಯೋಗಿಗಳು ಆಗಲೇ ಜಾಗ ಖಾಲಿ ಮಾಡಿದ್ದರು. ನನ್ನದೇ ವಯಸ್ಸಿನ ಹುಡುಗಿಯೊಬ್ಬಳು ಹತ್ತಿರ ಬಂದಿದ್ದಳು. ತನ್ನ ಹೆಸರು ಬಿಪಾಷಾ ಎಂದು ಪರಿಚಯಿಸಿಕೊಳ್ಳುತ್ತಾ ಉತ್ಪಲ್‍ನ ಬಗ್ಗೆ ವಿಚಾರಿಸಿದ್ದಳು. ನನಗೆ ತಿಳಿದಿದ್ದನ್ನು ಹೇಳಿದೆ. ಕಾರ್ಮೋಡ ಕವಿದಂತೆ ಅವಳ ಮುಖ ಕಳೆಗುಂದಿತ್ತು. ಅವಳ ಮನಸ್ಸು ಏನನ್ನೋ ಹೇಳುವುದಕ್ಕೆ ಚಡಪಡಿಸುತ್ತಿದೆ ಎಂದು ನನಗನ್ನಿಸಿತ್ತು. ತುಸು ಪೀಡಿಸಿ ಕೇಳಿದಾಗ, ತಾನು ಜಾರ್ಖಂಡ್ ರಾಜ್ಯದ ಹಳ್ಳಿಯವಳು; ಇಲ್ಲಿಗೆ ನಾಲ್ಕು ಕಿಮೀ ದೂರದ ಕಂಪನಿಯೊಂದರಲ್ಲಿ ಸಾಫ್ಟ್‍ವೇರ್ ಇಂಜಿನಿಯರ್; ತನ್ನ ಮತ್ತು ಉತ್ಪಲ್‍ನ ಪಿಜಿ ಸಮೀಪದಲ್ಲೇ ಇದ್ದು; ಇಬ್ಬರಿಗೂ ಪರಸ್ಪರ ಪರಿಚಯವಾಗಿ ಪ್ರೀತಿ ಬೆಳೆದು ಸಕತ್ತಾಗಿ ಲೈಫ್ ಎಂಜಾಯ್ ಮಾಡುತ್ತಿರುವುದಾಗಿಯೂ; ಅದರ ಫಲ ತನಗೀಗ ಮೂರು ತಿಂಗಳು; ಈ ತಿಂಗಳು ಮದುವೆಯಾಗೋಣ ಎಂದು ಉತ್ಪಲ್ ಹೇಳಿದ್ದ ಸ್ಫೋಟಕ ಸುದ್ದಿಯನ್ನು ಬಹಿರಂಗ ಪಡಿಸಿದ್ದಳು. ಅಂದರೆ ಅವಳು, ನಾನು ಒಂದೇ ಹಡಗಿನಲ್ಲಿ ಪಯಣಿಸುತ್ತಿದ್ದೆವು. ನಾನೂ ಅವನಿಂದ ಮೋಸ ಹೋಗಿದ್ದನ್ನು ಅವಳಿಗೆ ಬಹಿರಂಗಪಡಿಸಿದ್ದೆ. ಇದಾಗಿ ಮೂರನೇ ದಿನ ನಮ್ಮ ಕಂಪನಿಯಲ್ಲಿ ಬೇರೊಂದು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇನ್ನಿಬ್ಬರು ಹುಡುಗಿಯರೂ ಉತ್ಪಲ್‍ನ ನಯವಂಚನೆಗೆ ಒಳಗಾಗಿದ್ದು ಬಯಲಿಗೆ ಬಂದಿತ್ತು. ಅವನೊಬ್ಬ ಗೋಮುಖ ವ್ಯಾಘ್ರ ಎಂದು ತಿಳಿದು ಬಂದಿತ್ತು. ಉತ್ಪಲ್ ಇಲ್ಲದೇ ಅವನ ಮಗುವಿಗೆ ತಾಯಿಯಾಗಿ ಒಂಟಿಯಾಗಿ ಇದ್ದು ಬಿಡೋಣವೆಂದು ನನ್ನಲ್ಲೇ ತೀರ್ಮಾನಿಸಿಕೊಂಡಿದ್ದೆ.
ನನ್ನ ಕಳ್ಳಾಟದ ಫಲ ಅಮ್ಮನಿಗೆ ತಿಳಿಯಲು ಬಹಳಷ್ಟು ದಿನಗಳೇನೂ ಬೇಕಾಗಿಲ್ಲ. ಇಂಥಹದು ತಾಯಿ ಕರುಳಿಗೆ ಅರ್ಥವಾಗದೇ ಇರುತ್ತದೆಯೇ? ಪೀಡಿಸಿ ಕೇಳಿದಾಗ ನಾನು ಅಮ್ಮನ ಮಡಿಲಲ್ಲಿ ಮುಖವಿಟ್ಟು ಎಲ್ಲವನ್ನೂ ತಿಳಿಸಿ ಗಳಗಳನೇ ಅತ್ತಿದ್ದೆ. ನನ್ನ ಘನಂದಾರಿ ಕೆಲಸವೆಲ್ಲವನ್ನು ಕೇಳಿಸಿಕೊಂಡ ಅಮ್ಮ ಹೆಚ್ಚಿಗೆ ಏನೂ ಮಾತಾಡಲಿಲ್ಲ. ನನ್ನನ್ನೇ ದಿಟ್ಟಿಸಿದಳು ತುಸು ಹೊತ್ತು ತೀಕ್ಷಣವಾಗಿ. ಮರುದಿನ ನಮ್ಮ ಮನೆವೈದ್ಯೆ ಡಾ.ಅನುರಾಧಾ ಅವರ ಹತ್ತಿರ ತಪಾಸಣೆ ಮಾಡಿಸಿಕೊಂಡು ಬರೋಣ ಎಂದಿದ್ದಾಗ ನಾನು ಕೋಲೇ ಬಸವನಂತೆ ಗೋಣಾಡಿಸಿದ್ದೆ. ಮರುದಿನ ಡಾಕ್ಟರರ ಹತ್ತಿರ ಹೋಗಿದ್ದೆವು. ಡಾಕ್ಟರ್ ಅಮ್ಮನಿಗೆ ತುಂಬಾ ಆತ್ಮೀಯರಾಗಿದ್ದುದರಿಂದ ನರ್ಸ ಅಪ್ಪಣೆ ಪಡೆದು ನನ್ನನ್ನು ನೇರವಾಗಿ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿದ್ದಳು. ತುಸು ಹೊತ್ತು ತಪಾಸಣೆ ಮಾಡಿದ ಡಾಕ್ಟರ್ ಯಾವುದೋ ಇಂಜೆಕ್ಷನ್ ಕೊಟ್ಟಿದ್ದರು. ನನ್ನ ಕಣ್ಣುಗಳಿಗೆ ಮಂಪರು ಆವರಿಸತೊಡಗಿತ್ತು. ಪ್ರಜ್ಞೆ ಮರುಕಳಿಸಿದಾಗ ನಾನು ಆಸ್ಪತ್ರೆಯ ಕೋಣೆಯೊಂದರಲ್ಲಿ ಮಲಗಿದ್ದೆ. ಮೈ ಎಲ್ಲಾ ಭಾರವಾದಂತೆ, ಮೈಯಲ್ಲೆಲ್ಲಾ ನೋವಿನ ಸೆಳಕು. ಅಮ್ಮ ನನ್ನ ಪಕ್ಕವೇ ಕುಳಿತುಕೊಂಡು ಮುಂಗುರುಳು ನೇವರಿಸುತ್ತಿದ್ದಳು. ಡಾಕ್ಟರ್ ಸಹ ಅಲ್ಲೇ ಇದ್ದರು. ಜನನಾಂಗದಲ್ಲಿ ಒಂಥರ ನೋವಿನ ಅನುಭವವಾಗತೊಡಗಿದಾಗ ಗೊತ್ತಾಗಿತ್ತು ನನಗೆ ಗರ್ಭಪಾತ ಮಾಡಿಸಲಾಗಿದೆ ಎಂದು.
"ನನ್ನ ಅನುಮತಿ ಇಲ್ಲದೇ ನನಗೆ ಗರ್ಭಪಾತ ಮಾಡಿದ್ದು ಅಪರಾಧ..." ಎಂದು ಚೀರಿದ್ದೆ.
"ದೀಕ್ಷಾ, ನೀನಿನ್ನು ಎಳೆ ನಿಂಬಿಕಾಯಿ. ನಿನಗದೆಲ್ಲಾ ಅರ್ಥವಾಗುವುದಿಲ್ಲ. ಮದುವೆ ಇಲ್ಲದೇ ಮಗುವಿಗೆ ತಾಯಿಯಾದರೆ ನಿನ್ನ ಅಪ್ಪ, ಅಮ್ಮನ ಮರ್ಯಾದೆ ಬೀದಿ ಪಾಲಾಗುತ್ತದೆ. ಜನರ ಕಣ್ಣುಗಳು ನಿನ್ನ ಹೊಟ್ಟೆಯ ಮೇಲೆಯೇ. ಸಮಾಧಾನ ಮಾಡಿಕೋ" ಎಂದು ಸಂತೈಸಿದ್ದರು. ನಂತರ ಗೊತ್ತಾಗಿತ್ತು, ಅಮ್ಮ ಮೊದಲೇ ಡಾಕ್ಟರೊಂದಿಗೆ ಫೋನಲ್ಲಿ ಮಾತಾಡಿ ಗರ್ಭಪಾತಕ್ಕೆ ವ್ಯವಸ್ಥೆ ಮಾಡಿದ್ದಳಂತೆ. ಅಪ್ಪನಿಗೆ ಈ ವಿಷಯ ತಿಳಿಸದಂತೆ ಅಮ್ಮ ನನ್ನಿಂದ ಆಣೆ ಮಾಡಿಸಿಕೊಂಡಳು. ನಾನು ಅಂತರ್ಮುಖಿಯಾಗತೊಡಗಿದೆ. ಮಾತುಗಳು ಗಗನ ಕುಸುಮವಾದವು. ಮದುವೆ ಬೇಡವೆಂದರೂ ಅಮ್ಮ ಬಿಡಲಿಲ್ಲ. ಅವಸರವಸರವಾಗಿ ಗಂಡುಗಳ ಅನ್ವೇಷಣೆಗೆ ತೊಡಗಿ ಕೊನೆಗೂ ಚಿರಾಗ್‍ನೊಂದಿಗೆ ನನ್ನ ಮದುವೆಯನ್ನೂ ಮಾಡಿಬಿಟ್ಟಳು. ಒಲ್ಲದ ಮನಸ್ಸಿನಿಂದ ಮೊದಲರಾತ್ರಿಯ ದಿನದಂದು ಅವನನ್ನು ಸೇರಿದ್ದೆ. ಒಂಥರ ಹಿಂಸೆಯಾಗಿತ್ತು ಮಲಿನವಾಗಿದ್ದ ನನ್ನ ದೇಹವನ್ನು ಅರ್ಪಿಸಿದಾಗ. ಎರಡನೇ ವರ್ಷದ ದಾಂಪತ್ಯದಲ್ಲಿ ಚಿರಾಗ್ ಮತ್ತು ನನ್ನ ಪ್ರೇಮದ ಫಲ ನನ್ನೊಡಲಲ್ಲಿ ಚಿಗುರಿತ್ತು. ಆದರೆ ಅದೇನೋ ಗೊತ್ತಿಲ್ಲ, ಮೂರನೇ ತಿಂಗಳು ಗರ್ಭಪಾತವಾಗಿತ್ತು. ಅದರ ನಂತರ ಒಂದು ವರ್ಷದ ನಂತರ ಈಗ ಮತ್ತೊಮ್ಮೆ ಗರ್ಭಪಾತ ನನಗೆ. ಆ ಮೊದಲಿನ ಅಸ್ವಾಭಾವಿಕ ಗರ್ಭಪಾತ ನನ್ನ ಮನಸ್ಸನ್ನು ಕಾಡುತ್ತಿದೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಚಿರಾಗನಿಗೆ ಅನ್ಯಾಯ ಮಾಡುತ್ತಿದ್ದೇನೆಂಬ ಪಾಪಪ್ರಜ್ಞೆಯೂ ಕಾಡುತ್ತಿದೆ. ಡಾಕ್ಟ್ರೇ, ಇದೇ ನೋಡಿ ನನ್ನ ಜೀವನದಲ್ಲಿ ನಡೆದದ್ದು." ದೀಕ್ಷಾ ಬಿಚ್ಚು ಮನಸ್ಸಿನಿಂದ ತನ್ನ ಒಡಲಾಳದಲ್ಲಿದ್ದ ನೋವೆಲ್ಲವನ್ನೂ ಕಕ್ಕಿದ್ದಳು.
"ಗುಡ್. ದೀಕ್ಷಾ, ಸುಪ್ತ ಮನಸ್ಸಿನಲ್ಲಿರುವ ಭಾವನೆಗಳನ್ನು ಅರಿತುಕೊಳ್ಳುವುದು ಕಷ್ಟದ ಕೆಲಸವೇ. ಬಿಚ್ಚು ಮನಸ್ಸಿನಿಂದ ಎಲ್ಲವನ್ನು ನೀನು ಹೇಳಿದ್ದು ಒಳ್ಳೆಯದೇ. ಮೊದಲನೆಯದಾಗಿ ಉತ್ಪಲ್‍ನೊಂದಿಗೆಗಿನ ಸಂಬಂಧ ಅನೈತಿಕ ಎಂದು ನಿನ್ನ ಮನಸ್ಸನ್ನು ಕೊರೆಯುತ್ತಿದೆ. ಅವನೊಂದಿಗೆ ಹಂಚಿಕೊಂಡಿದ್ದ ದೇಹವನ್ನು ಚಿರಾಗ್‍ನೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ಮುಜುಗರವಾಗುತ್ತಿದೆ. ಅದೇನೋ ಗೊತ್ತಿಲ್ಲ, ಈ ಐಟಿಬಿಟಿಗಳ ಭರಾಟೆಯಲ್ಲೂ ನಮ್ಮ ದೇಶದ ಸಾಂಪ್ರದಾಯಕ ಹೆಣ್ಣು ಮಕ್ಕಳಲ್ಲಿ ಶೀಲ, ಪಾವಿತ್ರತೆಯ ಬಗ್ಗೆ ಇನ್ನೂ ಒಂದು ಬಲವಾದ ನಂಬಿಕೆ ಇದೆ. ಈಗೀಗ ವಿವಾಹ ವಿಚ್ಛೇದನಗಳ ಪ್ರಮಾಣ ಹೆಚ್ಚಾಗುತ್ತಿದ್ದರೂ ಬಹುತೇಕ ಮಹಿಳೆಯರು ನೈತಿಕತೆಗೆ ಒತ್ತು ಕೊಡುತ್ತಿದ್ದಾರೆ. ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರುವುದಕ್ಕೆ ಹೆಣಗಾಟ ಮಾಡುತ್ತಿದ್ದಾರೆ. ಪಾಶ್ಚಿಮಾತ್ಯರಂತೆ ಲಂಗು-ಲಗಾಮಿಲ್ಲದೇ ಜೀವಿಸುತ್ತಿಲ್ಲ. ಸಮಾಜದ ಚೌಕಟ್ಟುಗಳಲ್ಲಿ ಜೀವಿಸುತ್ತಿದ್ದಾರೆ. ಅಂಥಹ ಭಾರತೀಯ ಸ್ತ್ರೀಯರಲ್ಲಿ ನೀನೂ ಒಬ್ಬಳು.
ಉತ್ಪಲ್‍ನನ್ನು ಮನಸಾರೆ ಪ್ರೀತಿಸಿದಿ; ನಂಬಿಕೆಯೇ ಜೀವನವಲ್ಲವೇ? ಪ್ರೀತಿಯ ಪ್ರವಾಹದಲ್ಲಿ ನಿನ್ನ ತನು, ಮನಗಳನ್ನು ಅವನಿಗೆ ಒಪ್ಪಿಸಿದಿ. ಮದುವೆಯಾಗಬೇಕೆಂದಿದ್ದಿ; ಆದರೆ ಅವನು ಪ್ರಾಂಜಲ ಪ್ರೀತಿಗೆ ಮೋಸ ಮಾಡಿದ. ನಿನ್ನ ಮನಸ್ಸಿಗೆ ಆಘಾತವಾಯಿತು. ಅವನಿಲ್ಲದಿದ್ದರೂ ಒಂಟಿಯಾಗಿಯೇ ಬದುಕನ್ನು ಕಟ್ಟಿಕೊಳ್ಳಬೇಕೆಂದಿದ್ದಿ. ಈ ಜಗತ್ತಿನಲ್ಲಿ ಸೂರ್ಯನೂ ಒಂಟಿಯೇ. ಆದ್ರೆ ಯಾವತ್ತೂ ಅವನು ಹೊಳೆಯೋದನ್ನು ನಿಲ್ಸಿಲ್ಲ. ಭೂಮಿ ಕೂಡ ಒಂಟಿನೇ. ಆದ್ರೂ ಅವಳ ಒಡಲೊಳಗಿನ ಬೆಂಕಿ ಇನ್ನೂ ಆರಿಲ್ಲ. ಒಂಟಿ ಆದಾಗ್ಲೇ ತನ್ನೊಳಗಿನ ಶಕ್ತಿ ತಿಳಿಯೋದು. ಪ್ರಯತ್ನ ಪಡದೇ ಸುಮ್ಮನೇ ಇದ್ರೆ ನಮ್ಮೊಳಗಿನ ಶಕ್ತಿ ನಮಗೇ ಗೊತ್ತಾಗೋದಿಲ್ಲ. ಅದರಂತೆ ನೀನೂ ಒಂಟಿಯಾಗಿದ್ರೂ ಪರವಾಗಿಲ್ಲ, ಉತ್ಪಲ್‍ನ ಕುಡಿಯನ್ನು ಉಳಿಸಿಕೊಂಡು ಜೀವನರಥವನ್ನು ಎಳೆಯಬೇಕೆಂದಿದ್ದಿ. ಆದರೆ ನಿನಗೆ ಗೊತ್ತಾಗದಂತೆ ನಿನ್ನ ಒಡಲಾಳದ ಕುಡಿಯನ್ನು ಚಿವುಟಿ ಹಾಕಿದಾಗ ನಿನಗೆ ಮತ್ತೊಮ್ಮೆ ಆಘಾತವಾಗಿತ್ತು. ಎಲ್ಲ ತಂದೆ-ತಾಯಿಗಳೂ ಮಕ್ಕಳ ಶ್ರೇಯಸ್ಸನ್ನೇ ಬಯಸುವವರು. ಒಂಟಿಯಾಗಿಯೇ ಮುಂದುವರಿಯಬೇಕಿಂದಿದ್ದ ನೀನು ಅಪ್ಪ, ಅಮ್ಮನ ಒತ್ತಾಯಕ್ಕೆ ಮದುವೆಯಾದೆ. ಇದು ಮೂರನೇ ಆಘಾತ ನಿನಗೆ. ಆಘಾತಗಳ ಮೇಲೆ ಆಘಾತ. ಪಾಪಪ್ರಜ್ಞೆಯ ದ್ವಂದ್ವದಲ್ಲಿದ್ದ ನೀನು ಹೇಗೋ ಚಿರಾಗ್‍ನೊಂದಿಗೆ ಹೆಜ್ಜೆ ಹಾಕಲು ನಿರ್ಧರಿಸಿ ಮುಂದುವರೆದಿರುವಿ.
ಮೊದಲ ಸಲದ ಒತ್ತಾಯದ ಗರ್ಭಪಾತದ ಕಹಿನೆನಪು ನಿನ್ನ ಸುಪ್ತ ಮನಸ್ಸಿನಲ್ಲಿ ಮನೆ ಮಾಡಿರುವುದರಿಂದ ಎರಡನೇ ಮತ್ತು ಮೂರನೇ ಸಾರೆಯೂ ಗರ್ಭಪಾತವಾಯಿತು. ಹಿಂದಿನ ಎಲ್ಲಾ ಕಹಿ ಘಟನೆಗಳನ್ನು ತೆಗೆದು ಹಾಕಿ ಮುನ್ನಡೆಯಬೇಕು. ಮನೋಬಲ ಹೆಚ್ಚಿಸಿಕೊಳ್ಳಬೇಕು. ಆತ್ಮ ವಿಶ್ವಾಸವಿದ್ದರೆ ಎಂಥಹದನ್ನೂ ಎದುರಿಸುವ ಶಕ್ತಿ ಬರುತ್ತದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೇ ವಿನಃ ಜಟಿಲಗೊಳಿಸಬಾರದು. ತಪ್ಪು ಆಗಿದ್ದು ಆಗಿ ಹೋಗಿದೆ. ತಿದ್ದಿಕೊಳ್ಳಬೇಕು ಅಷ್ಟೇ. ನಿನ್ನ ಮನಸ್ಸೇನು ಅನೈತಿಕ ಸಂಬಂಧಕ್ಕೆ ಎಳಸುತ್ತಿಲ್ಲವಲ್ಲ? ಹಾಗಿದ್ದರೆ ಉತ್ಪಲ್ ನಿನ್ನಿಂದ ದೂರವಾದಾಗ ನಿನ್ನ ಕಾಮವಾಂಛೆಯನ್ನು ಈಡೇರಿಸಿಕೊಳ್ಳಲು ಇನ್ನೊಬ್ಬ ಗಂಡಸಿನ ಸಂಗ ಮಾಡುತ್ತಿದ್ದಿ. ಅಂಥಹ ಹಪಹಪಿ ನಿನಗಿಲ್ಲ. ಪಾಶ್ಚಾತ್ಯ ಸಂಸ್ಕøತಿ ಅನುಕರಣೆಗೋಸ್ಕರ ಈಗಿನ ಅದೆಷ್ಟೋ ಜನ ಯುವಕರು ಪರಸ್ಪರ ಪ್ರೀತಿಸಿ ಮದುವೆಯಾಗುತ್ತಾರೆ; ತುಸು ದಿನಗಳಲ್ಲಿ ವಿಚ್ಛೇದನ ಪಡೆದು ಇನ್ನೊಬ್ಬರನ್ನು ಮದುವೆಯಾಗುತ್ತಾರೆ; ಮತ್ತೆ ತುಸು ದಿನಗಳಲ್ಲಿ ಆ ಸಂಬಂಧವೂ ಹಳಸುತ್ತದೆ; ಮತ್ತೆ ವಿಚ್ಛೇದನ; ಮತ್ತೆ ಮರು ಮದುವೆ. ಹೀಗೆ ಬಟ್ಟೆಗಳನ್ನು ಬದಲಿಸುವಂತೆ ತಮ್ಮ ಜೀವನ ಸಂಗಾತಿಗಳನ್ನು ಬದಲಿಸುತ್ತಾರೆ. ಯಾರೊಂದಿಗೂ ಅವರಿಗೆ ತೃಪ್ತಿ ಎಂಬುದೇ ಇರುವುದಿಲ್ಲ. ನಿನ್ನದು ಹಾಗಲ್ಲ. ಏನೋ ಅನಿರೀಕ್ಷಿತ ಘಟನೆ ಸಂಭವಿಸಿದೆ. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗುವುದು ಬೇಡ. ಆ ಕೊರಗಿಗೆ ಪೂರ್ಣ ವಿರಾಮ ಹಾಕಿ ಹೊಸ ಮನುಷ್ಯಳಾಗಿ ಚಿರಾಗ್ ನಿನ್ನ ಬಾಳ ಸಂಗಾತಿ ಎಂದು ಅರಿತು ಮನಸಾರೆ ಅವನಿಗೆ ಸಮರ್ಪಿಸಿಕೊಂಡು ಹೊಸ ಜೀವನ ಶುರು ಮಾಡು. ಆಲ್ ದಿ ಬೆಸ್ಟ್." ಡಾ. ವನಿತಾ ಅವರ ಮಾತುಗಳನ್ನು ಮನಸ್ಸುಗೊಟ್ಟು ಆಲಿಸುತ್ತಿದ್ದಳು ದೀಕ್ಷಾ.
"ಮೇಡಂ, ಉತ್ಪಲ್‍ನೊಂದಿಗೆಗಿನ ನನ್ನ ಸಂಬಂಧ ಚಿರಾಗ್‍ನೊಂದಿಗೆ ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಂಡರೆ ಹೇಗೆ...? ಅವನು ನನ್ನ ನಡೆಯನ್ನು ಸ್ವೀಕರಿಸಿಯಾನೆ....?"
"ಬೇಡ, ದೀಕ್ಷಾ ಬೇಡ. ಎಲ್ಲಾ ಗಂಡಸರು ಈ ವಿಷಯವನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದಿಲ್ಲ. ಅಂಥಹ ದುಸ್ಸಾಹಸಕ್ಕಿಳಿಯ ಬೇಡ. ತನ್ನ ಹೆಂಡತಿ ನಾಯಿ ಮುಟ್ಟಿದ ಮಡಕೆ, ಸವಕಲು ನಾಣ್ಯ ಎಂದು ತಿಳಿದು ಬಂದಾಗ ಮತ್ತೆ ಆಘಾತವಾಗುವುದು ಹೆಣ್ಣಿಗೇ. ಶೀಲ ಎಂಬ ಕಣ್ಣಿಗೆ ಕಾಣದ ವಿಷಯ ಗಂಡಸಿನ ಅಹಂನ್ನು ಕೆಣಕುತ್ತದೆ. ಸತ್ಯ ಕಹಿಯಾಗಿರುತ್ತದೆ. ಎಲ್ಲವನ್ನು ನನ್ನೊಂದಿಗೆ ಹಂಚಿಕೊಂಡಿರುವಿ. ಇದು ನಮ್ಮಿಬ್ಬರಲ್ಲೇ ಇರಲಿ. ಅಪ್ಪಿ ತಪ್ಪಿಯೂ ಬೇರೆ ಯಾರ ಮುಂದೆಯೂ ಬಾಯಿ ಬಿಡಬೇಡ. ಚಿರಾಗ್ ನಿನ್ನನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದರೂ ಈ ನಿನ್ನ ನಡೆ ಅವನಿಗೆ ಇಷ್ಟವಾಗದಿರಬಹುದು. ಅದು ಆಗೇ ಇಲ್ಲ ಅಂತ ಅಂದುಕೊಂಡು ನೀನು ಹೊಸ ಮನುಷ್ಯಳಂತೆ ಇರುವುದನ್ನು ರೂಢಿಸಿಕೊಂಡರೆ ಎಲ್ಲವೂ ಸುರಳಿತ. ಎಲ್ಲವೂ ತನ್ನಿಂದ ತಾನೇ ಸರಿ ಹೋಗುತ್ತದೆ. ಚಿಯರಪ್ ಮಾಯ್ ಗರ್ಲ" ಎಂದೆನ್ನುತ್ತಾ ಡಾ.ವನಿತಾ ದೀಕ್ಷಾಳ ಬೆನ್ನು ತಟ್ಟಿ, ಸವರಿ, ನವಿರಾಗಿ ಕೆನ್ನೆ ಹಿಂಡಿ ಸಂತೈಸಿ ಪ್ರೋತ್ಸಾಹಿಸಿದ್ದರು.
"ಥ್ಯಾಂಕ್ಯೂ ಡಾಕ್ಟರ್. ನೀವು ಹೇಳಿದ್ದನ್ನು ನಾನು ಚಾಚೂ ತಪ್ಪದೇ ಪಾಲಿಸಿ ಈಗಿನಿಂದಲೇ ಹಿಂದಿನ ಜೀವನದ ಪೊರೆ ಕಳಚಿ ಹೊಸ ಮನುಷ್ಯಳಾಗುವೆ. ಮುರುಟಿ ಹೋಗುತ್ತಿರುವ ನನ್ನ ಬಾಳ ಬಳ್ಳಿಗೆ ಆತ್ಮ ವಿಶ್ವಾಸದ ನೀರೆರೆದು ಪೋಷಿಸಿ ಜೀವನೋತ್ಸಾಹವನ್ನು ತುಂಬಿ ನಿರಂತರವಾಗಿ ಹಚ್ಚ ಹಸಿರಾಗಿ ನಳನಳಿಸುವಂತೆ ಮಾಡುವೆ. ಹೂವರಳಿಸಿ ಹಣ್ಣಾಗುವಂತೆ ಮಾಡುವೆ" ಎಂದೆನ್ನುತ್ತಾ ದೀಕ್ಷಾ ಡಾ.ವನಿತಾ ಅವರ ತೆಕ್ಕೆಯೊಳಗೆ ಸೇರಿಕೊಂಡು ಸಂಭ್ರಮಿಸಿದಾಗ ಅವಳೆದೆಯಲ್ಲಿ ಹೊಸರಾಗದ ಹೊನಲು ಮೂಡಿ ಹೊಸ ಚೈತನ್ಯ ಚಿಲುಮೆಯಂತೆ ಚಿಮ್ಮತೊಡಗಿತ್ತು.
- ಶೇಖರಗೌಡ ವೀ ಸರನಾಡಗೌಡರ್,
ತಾವರಗೇರಾ-583279, ತಾ: ಕುಷ್ಟಗಿ, ಜಿ: ಕೊಪ್ಪಳ.
4 thoughts on “ಎಲ್ಲಿ ಜಾರಿತೋ ಮನವು…”
ಪ್ರೇಮ-ಕಾಮ-ಪರಿಣಾಮಗಳ ಕುರಿತಾದ ಕಥೆ ಯಾಂತ್ರಿಕವಾಗಿ ಓದಿಸಿಕೊಂಡು ಹೋಗುತ್ತದೆ. ಅಭಿನಂದನೆಗಳು
A nice story . Congratulations sir
ಕತೆ ಸರಾಗವಾಗಿ ಓದಿಸಿಕೊಂಡು ಹೋಗುವುದಕ್ಕೆ, ಲೇಖಕರ ನುರಿತ ಶೈಲಿ, ಕತೆ ಹೇಳುವ ಕಲೆಯಲ್ಲಿ ಯಥೇಷ್ಟವಾಗಿ ವ್ಯಕ್ತವಾಗುತ್ತದೆ. ಅನವಶ್ಯಕ ಸನ್ನಿವೇಶ ಅಥವಾ ವಿವರಣೆಯಿರದಿರುವುದರಿಂದ, ಅದು ಉದ್ದಕ್ಕೂ ಓಘವನ್ನು ಒಡೆಯುವದಿಲ್ಲ. ಪ್ರಾಯಶಃ ಅವರ ಈ ಶೈಲಿ, ಸಣ್ಣ ಕತೆಗಿಂತ ಕಾದಂಬರಿಗೆ ಹೆಚ್ಚು ಒಪ್ಪುತ್ತದೆ, ಅನ್ನುವದು ನನ್ನ ಅನಿಸಿಕೆ.
ಎರಡನೆಯದಾಗಿ, ಶಿರೋನಾಮೆಯಲ್ಲೇ ಕತೆಯ ಸಾರವನ್ನು ಸಂಕೇತಿಸಿದರೆ, ಸಣ್ಣಕತೆಯ ಓದುವಿಕೆಗೆ ಸಸ್ಪೆನ್ಸ್ ಅಥವಾ ಕಿಕ್ ಉಳಿಯುವದಿಲ್ಲ. ಆದರೆ, ಇದಕ್ಕೆ ಭಿನ್ನವಾಗುವ ಗಮನಾರ್ಹ ಅಂಶವೆಂದರೆ, ಸಮಾಜದ ಬದುಕು ಬಹುತೇಕ ಗಂಡಸಿಗೆ ಕೊಡುವ, ಎಲ್ಲ ಸ್ವಾತಂತ್ರ್ಯವನ್ನು ತಪ್ಪಿಸಿ, ಕನಿಕರ, ಪಶ್ಚಾತ್ತಾಪ, ಅಳುಕಿನ, ಹಿಂಜರಿಕೆಯ ತಪ್ಪಿತಸ್ಥ ಮನೋಭಾವವನ್ನೂ ಮೀರಿದ ಪ್ರಾಂಜಲ ಸತ್ಯಕ್ಕೆ, ಭೌತಿಕವಾಗಿ ಆಧುನಿಕ ದಿಟ್ಟ ಉತ್ತರವನ್ನು ಕೊಡುವ, ನೈಸರ್ಗಿಕ ನ್ಯಾಯ ಒದಗಿಸುವ ಅಂತ್ಯದಲ್ಲಿ, ಲೇಖಕರು ಆ ಸ್ವಾರಸ್ಯವನ್ನು ಸ್ಪಷ್ಟವಾಗಿ ಹಿಡಿದಿಡುತ್ತಾರೆ.
ಈ ಲಕ್ಷ್ಯಕ್ಕೆ ಅಭಿನಂದನೆಗಳು! ,
ಹೊಸ ಬಗೆಯ ಕಥೆಯ ನಿರೂಪಣೆ ಚೆನ್ನಾಗಿದೆ. ಅಭಿನಂದನೆಗಳು