ಜನಾರ್ದನ ಎರ್ಪಕಟ್ಟೆ (29ನೇ ಡಿಸೆಂಬರ್ ಅವರ ಪುಣ್ಯತಿಥಿ ದಿನ)
ಕಾಸರಗೋಡು ಜಿಲ್ಲೆಯ ಎರ್ಪಕಟ್ಟೆಯಲ್ಲಿ ಜನಿಸಿದ ಜನಾರ್ದನ ಎರ್ಪಕಟ್ಟೆಯವರು (1. 11. 1952 – 29. 12. 2012) ದಲಿತ ಬಂಡಾಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ವಿಶೇಷವಾಗಿ ಗಮನಿಸಬೇಕಾದ ಬರಹಗಾರರು. ದಲಿತ ಸಮುದಾಯದವರು ಅಕ್ಷರಾಭ್ಯಾಸದಿಂದ ದೂರ ಉಳಿದಿರುತ್ತಿದ್ದ ಕಾಲದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನಿಂದ ಅರ್ಥಶಾಸ್ತ್ರ ಪದವೀಧರನಾಗಿ, ಕರ್ನಾಟಕದ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, ಕೇಂದ್ರ ಸರಕಾರದ ಭಾರತ ಸಂಚಾರ ನಿಗಮದಲ್ಲಿ ಸಂಪರ್ಕ ಸಹಾಯಕರಾಗಿ ವೃತ್ತಿಜೀವನವನ್ನು ಆರಂಭಿಸಿ, ಸುಳ್ಯದಲ್ಲಿ ಹಿರಿಯ ದೂರವಾಣಿ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದು ಅವರ ಬದುಕಿನ ಸಾಧನೆಯಾಗಿದೆ. ‘ತಿರಸ್ಕೃತರು’, ‘ಕಾಯುತಿದೆ ಈ ನೆಲ’, ‘ಪ್ರಕ್ರಿಯೆ’, ‘ಹಗ್ಲೇ ಬರ್ತೇನ್ ಗಂಗಮ್ಮಾ’ (ಕಥಾ ಸಂಕಲನಗಳು), ‘ಎರ್ಪಕಟ್ಟೆ ಕತೆಗಳು’ (ಸಮಗ್ರ ಕತೆಗಳ ಸಂಗ್ರಹ) ‘ದಲಿತ ಚಿಂತನೆ’ (ಪ್ರಬಂಧ ಸಂಕಲನ) ‘ಸುಗಂಧಕಾಯ’ (ಕವನ ಸಂಕಲನ) ಮುಂತಾದ ಕೃತಿಗಳನ್ನು ಬರೆದ ಇವರು ದಲಿತ ಬಂಡಾಯ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದೆ ಹೋದ ವಿಶಿಷ್ಟ ಪ್ರತಿಭೆ.
ದಲಿತ – ಬಂಡಾಯ ಸಾಹಿತ್ಯವು ಹೊಸ ದಿಕ್ಕಿನತ್ತ ಹೊರಳಿದಾಗ ಹಸಿಹಸಿ ಅನುಭವ, ಪೂರ್ವ ನಿಯೋಜಿತ ಮಾದರಿ, ಏಕರೀತಿಯ ಘಟನಾವಳಿ, ಧ್ವನಿರಹಿತ ಭಾಷೆ, ವರದಿಗಾರಿಕೆಯ ಶೈಲಿ ಮತ್ತು ಸುಲಭ ಪರಿಹಾರಗಳನ್ನು ಮೀರಿ ಬದುಕಿನ ಆಳ ವಿಸ್ತಾರಗಳನ್ನು ಶೋಧಿಸತೊಡಗಿದ ಬರಹಗಾರರ ಪೈಕಿ ಜನಾರ್ದನ ಎರ್ಪಕಟ್ಟೆಯವರೂ ಒಬ್ಬರು. ತಾವು ಕಂಡು ಅನುಭವಿಸಿದ ಸಂಗತಿಗಳನ್ನು ಚಿತ್ರಿಸುವ ಪ್ರಾಮಾಣಿಕತೆ, ಹಳ್ಳಿಯ ಬದುಕಿನಲ್ಲಿ ಅಡಗಿರುವ ರೋಗ ರುಜಿನಗಳನ್ನು ಗಮನಿಸುವ ಚಿಕಿತ್ಸಕ ದೃಷ್ಟಿ, ತಮ್ಮ ಸಮುದಾಯದವರ ಅಂತರಂಗವನ್ನು ಹೊಕ್ಕು ಅವರ ನೋವು ನಲಿವುಗಳನ್ನು ಬಿಡಿಸುವ ಕಾಳಜಿ, ಒಳಗೆ ದುರ್ಬಲವಾಗಿದ್ದುಕೊಂಡು ಹೊರಗೆ ಕ್ರೂರವಾಗಿರುವ ಊಳಿಗಮಾನ್ಯ ಪದ್ಧತಿಯ ಒಳ ಹೊರಗುಗಳ ಅವಲೋಕನ, ಜನಾಂಗದ ಮೌಢ್ಯವನ್ನು ನಿವಾರಿಸುವ ಹಂಬಲಗಳನ್ನು ಒಳಗೊಂಡ ಕತೆಗಳು ಇಂದಿಗೂ ಅರ್ಥಪೂರ್ಣವೆನಿಸುತ್ತವೆ.
ಇತರ ದಲಿತ ಬರಹಗಾರರಿಂದ ಭಿನ್ನವಾಗಿ ನಿಲ್ಲುವ ಎರ್ಪಕಟ್ಟೆಯವರ ಕತೆಗಳಲ್ಲಿ ದಲಿತರ ಸಾಂಸ್ಕೃತಿಕ ಲೋಕವು ಹೆಪ್ಪುಗಟ್ಟಿದೆ. ತುಳುನಾಡಿನ ಆಚರಣೆಗಳಲ್ಲೊಂದಾದ ಭೂತಾರಾಧನೆಯು ಪ್ರಚಾರಪ್ರೀತಿಯ ದಾಳವಾಗಿ ಬದಲಾಗುವ ಬಗೆಗಿನ ವಿಷಾದವು ‘ಆಕ್ರಮಣ’ ಕತೆಯಲ್ಲಿದೆ. ಆಚಾರಗಳ ಮೇಲಿನ ಶ್ರದ್ಧೆ ಭಕ್ತಿಗಳು ವ್ಯಾವಹಾರಿಕತೆಯೊಂದಿಗೆ ಮುಖಾಮುಖಿಯಾಗುವಾಗ ಬೊಗ್ಗುವಿನ ಮಾನಸಿಕ ತುಮುಲವು ಭಾವ ಸಂಕೀರ್ಣತೆಯೊಂದಿಗೆ ಹರಳುಗಟ್ಟುತ್ತದೆ. ಭೂತದ ವೇಷಧಾರಿಯಾದ ಬೊಗ್ಗು ಊರಿನವರ ಪಾಲಿಗೆ ಭಕ್ತಿಯ ಕೇಂದ್ರವಾದರೂ ತನ್ನ ಧನಿಗಳ ಸ್ವಾರ್ಥವನ್ನು ನೆರವೇರಿಸುವ ಕೈಗೊಂಬೆಯಾಗಿದ್ದಾನೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಅವನ ಮೊಮ್ಮಕ್ಕಳು ಸಂಸ್ಕೃತಿಯ ಕಡೆ ವಿಮುಖರಾಗುತ್ತಿರುವ ಯುವ ಜನಾಂಗದ ಪ್ರತೀಕವಾಗಿದ್ದಾರೆ.
ದಲಿತರು ಎಷ್ಟೇ ಮುಂದುವರಿದರೂ ಜಾತಿನಿಂದನೆಗೆ ಒಳಗಾಗುವ ಬಗೆಗಿನ ನೋವು ಇಲ್ಲಿನ ಕತೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆಧುನಿಕ ಶಿಕ್ಷಣವನ್ನು ಪಡೆದು ಹೊಸ ವಿಚಾರಗಳಿಗೆ ತಮ್ಮನ್ನು ತೆರೆದುಕೊಂಡ ಕೆಳವರ್ಗದ ಪಾತ್ರಗಳು ತಮ್ಮ ಸಮುದಾಯವೂ ಸೇರಿದಂತೆ ಸಮಾಜದ ಎಲ್ಲ ಸ್ತರಗಳಲ್ಲಿ ಬದುಕುತ್ತಿರುವ ಜನರೊಳಗೆ ಮನೆ ಮಾಡಿರುವ ಜಾತೀಯತೆಯು ಮಾನವೀಯ ಸಂಬಂಧಗಳ ಮೇಲೆ ಬೀರುವ ದುಷ್ಪರಿಣಾಮಗಳನ್ನು ಕಂಡು ತಲ್ಲಣಿಸುತ್ತವೆಯೇ ಹೊರತು ಹೋರಾಟದ ಪರಿಭಾಷೆಯಲ್ಲಿ ಮಾತನಾಡುವುದಿಲ್ಲ. ಈ ನಿಟ್ಟಿನಲ್ಲಿ ‘ಸಿಡಿದು ಹೋಗದವರು’ ಕತೆಯು ಮುಖ್ಯವಾಗುತ್ತದೆ. ಚಮ್ಮಾರನಾಗಿರುವ ಮಾಲಿಂಗನ ಮಗನು ವಿದ್ಯಾಭ್ಯಾಸವನ್ನು ಪಡೆದು ಬ್ಯಾಂಕ್ ಉದ್ಯೋಗಿಯಾಗಿದ್ದಾನೆ. ಆದರೆ ಆತನು ಮಾಲಿಂಗನನ್ನು ತನ್ನ ತಂದೆ ಎನ್ನದೆ ಪರಿಚಯದವನೆಂದು ಗೆಳೆಯರ ಬಳಿ ಹೇಳಿದಾಗ ಅವನಿಗೆ ಕಣ್ಣು ಕತ್ತಲಿಟ್ಟಂತಾಗುತ್ತದೆ. ಸನ್ನಿವೇಶವನ್ನು ಅರ್ಥೈಸಿಕೊಂಡು ಅವರಿಂದ ದೂರವಾಗಬೇಕಾಗುತ್ತದೆ. ತನಗೆ ಆದ ಅವಮಾನ ತಾರತಮ್ಯವನ್ನು ಕೋಪದಿಂದ ಪ್ರತಿಭಟಿಸುವ ಕೆಳ ಜನಾಂಗದವನು ತನಗಾದ ಅವಮಾನ ತಾರತಮ್ಯಗಳನ್ನೇ ತನಗಿಂತ ತಳಮಟ್ಟದವನಿಗೆ ಮಾಡುವುದು ಹೊಸತಲ್ಲವಾದರೂ ಹುಟ್ಟಿಸಿದ ತಂದೆಯನ್ನೇ ಬೇರೆಯಾಗಿ ಕಾಣುವುದು ನಿಜವಾದ ಕೀಳುತನವಾಗಿದೆ. ಜಾತಿಪದ್ಧತಿಯ ರೋಗವು ಅಂತಃಸಾಕ್ಷಿಯನ್ನು ತಿಂದು ಹಾಕಿದ್ದು ನಿಜವಾದರೂ, ತಾರತಮ್ಯವನ್ನು ವಿರೋಧಿಸುವ ಆಶಯವನ್ನು ಹೊಂದಿದ ಬರಹ, ಭಾಷಣ ಮತ್ತು ಕೂಗಾಟಗಳನ್ನು ಮಾಡುವುದೇ ಸಮುದಾಯದ ಹಕ್ಕು ಎಂಬಂತೆ ಕಾಣಿಸಿಕೊಳ್ಳುವ ಅರ್ಥಹೀನ ಕೃತಿಗಳ ನಡುವೆ ಪ್ರೀತಿ ಸಮಾನತೆಗಳು ಎಲ್ಲ ನೆಲೆಗಳಲ್ಲೂ ತಬ್ಬಲಿಗಳಾಗಿರುವ ಬಗೆಗಿನ ನೋವನ್ನು ತೆರೆದಿಡುವ ಕತೆಯ ಹಿಂದಿನ ವಾಸ್ತವವನ್ನು ಅರಿತುಕೊಳ್ಳುವುದು ಮುಖ್ಯ.
ಶಿಕ್ಷಣ ಮತ್ತು ಉದ್ಯೋಗದ ಮೂಲಕ ಸಾಮಾಜಿಕ ಅಂತಸ್ತನ್ನು ಹೆಚ್ಚಿಸಿಕೊಂಡವನು ತನ್ನ ತಂದೆಯನ್ನೇ ಅನ್ಯನಾಗಿ ಕಂಡರೆ ‘ಹಿರಿತನ’ ಎಂಬ ಕತೆಯಲ್ಲಿ ಸರಕಾರಿ ಉದ್ಯೋಗಸ್ಥನನ್ನೇ ಅನ್ಯನಾಗಿ ಕಾಣುವ ಸಂಬಂಧಿಕರನ್ನು ಕಾಣುತ್ತೇವೆ. ಇದರಲ್ಲಿ ಗ್ರಾಮೀಣ ವಾಸ್ತವದ ಅಂಗವಾದ ದ್ವೇಷ ಮತ್ತು ಹಿಂಸೆಯನ್ನು ಅನಾವರಣಗೊಳಿಸುವ ಪ್ರಯತ್ನವಿದೆ. ಜಗನ್ನಾಥನ ತಂದೆ ಮತ್ತು ಮಾಲಿಂಗನ ತಂದೆ ಒಡಹುಟ್ಟಿದವರಾಗಿದ್ದು ಕ್ಷುಲ್ಲಕ ಕಾರಣಕ್ಕಾಗಿ ಅವರ ನಡುವೆ ಹೊಡೆದಾಟವಾಗುತ್ತದೆ. ಇಬ್ಬರ ಕುಟುಂಬದ ನಡುವೆ ದಾಯಾದಿತನವು ತಲೆಯೆತ್ತುತ್ತದೆ. ಜಗನ್ನಾಥನ ದೊಡ್ಡಪ್ಪನು ತೀರಿಹೋದಾಗ ಅಣ್ಣನ ಅಂತ್ಯಕ್ರಿಯೆಯನ್ನು ನೆರವೇರಿಸುವ, ಮಾಲಿಂಗನು ಅವರನ್ನು ಕಾಣಲು ಬರುವ ಕ್ರಿಯೆಗಳಲ್ಲಿ ಅವರ ನಡುವಿನ ಸ್ನೇಹ, ದೈಹಿಕವಾಗಿ ದೂರವಿದ್ದರೂ ಮಾನಸಿಕವಾಗಿ ಸಾಮೀಪ್ಯವನ್ನು ಕಾಯ್ದುಕೊಂಡ ಬಗೆಯು ವ್ಯಕ್ತವಾಗುತ್ತದೆ. ಜಗನ್ನಾಥನು ಹಳ್ಳಿಯ ಪಾಲಿಗೆ ಅನ್ಯನಾಗಿ ಉಳಿದರೂ ಮಾಲಿಂಗನ ಅಂತ್ಯ ಸಂಸ್ಕಾರವನ್ನು ಮಾಡಲು ಹಳ್ಳಿಗೆ ಬರಬೇಕಾಗುತ್ತದೆ. ಮನಸ್ಸಿನಲ್ಲಿ ದ್ವೇಷವನ್ನು ಉಳಿಸಿಕೊಂಡಿದ್ದ ಮಾಲಿಂಗನ ಅಕ್ಕ ಬಾವಂದಿರು ಮಾಲಿಂಗನ ಅಂತ್ಯಕ್ರಿಯೆಯನ್ನು ನೆರವೇರಿಸಲು ಬಂದ ಜಗನ್ನಾಥನ ಜೊತೆ ಹೊಡೆದಾಡುವುದು ಬದುಕಿನ ವ್ಯಂಗ್ಯ ವಿಪರ್ಯಾಸಗಳನ್ನು ಹರಿತಗೊಳಿಸುತ್ತದೆ. ಅನಕ್ಷರಸ್ಥರಾದ ಅವರಿಗೆ ಸರಕಾರಿ ಉದ್ಯೋಗದಲ್ಲಿರುವ ಜಗನ್ನಾಥನ ಮೇಲಿನ ಅಸೂಯೆಯೂ ಇದಕ್ಕೆ ಕಾರಣವಾಗಿದೆ. ಸರಕಾರಿ ಉದ್ಯೋಗಸ್ಥನಾಗಿರುವ ತನ್ನ ಮೇಲೆ ಕೈ ಮಾಡಿದುದಕ್ಕೆ ಅವರಿಗೆ ಶಿಕ್ಷೆಯನ್ನು ನೀಡಬೇಕೆಂದು ಜಗನ್ನಾಥನು ಬಯಸುವುದಿಲ್ಲ. “ಅವ್ರೇನು ಹೊರಗಿನವರಾ? ನನ್ನ ಅಕ್ಕ, ಅವರ ಮಕ್ಕಳು, ಅಳಿಯಂದಿರೇ ಅಲ್ವಾ? ಬನ್ನಿ ಮುಂದಿನ ಕೆಲಸ ಮಾಡೋಣ” ಎನ್ನುತ್ತಾ ಅವರನ್ನು ಕ್ಷಮಿಸಿ ತನ್ನ ಹಿರಿತನವನ್ನು ವ್ಯಕ್ತಪಡಿಸುತ್ತಾನೆ. ಮೇಲ್ನೋಟಕ್ಕೆ ಸಾಮಾನ್ಯ ಕತೆಯಂತೆ ಭಾಸವಾಗುವ ಈ ಕತೆಯ ತಾತ್ವಿಕತೆಯು ಶ್ರೇಷ್ಠ ಮಟ್ಟದ್ದಾಗಿದೆ.
ದೇವನೂರ ಮಹಾದೇವ ಅವರ ‘ಒಂದು ದಹನದ ಕತೆ’ಯಲ್ಲೂ ಇಂಥ ಘಟನೆಯು ನಡೆಯುತ್ತದೆ. ಒಳ್ಳೆಯ ನೌಕರಿ ಮತ್ತು ಅನುಕೂಲವಂತನಾಗಿದ್ದ ನಾಯಕನು ಅಜ್ಜಿಯ ಅಂತ್ಯ ಸಂಸ್ಕಾರಕ್ಕೆಂದು ಊರಿಗೆ ಬಂದಾಗ ಜಾತಿಬಾಂಧವರು ತಡೆಯುತ್ತಾರೆ. ಇದರಿಂದ ನಾಯಕನು ದಿಕ್ಕೆಟ್ಟರೂ ಅಂತ್ಯಕ್ರಿಯೆಯನ್ನು ಮುಗಿಸುತ್ತಾನೆ. ಈ ಸನ್ನಿವೇಶದೊಂದಿಗೆ ಸಾಮ್ಯತೆ ಇದೆಯೇ ಹೊರತು ಎರಡೂ ಕತೆಗಳ ಉದ್ದೇಶ ಮತ್ತು ಸ್ವರೂಪ ಭಿನ್ನವಾಗಿದೆ. ದೇವನೂರರ ಕತೆಯಲ್ಲಿ ಪ್ರತಿಭಟನೆಯು ಮುಖ್ಯವಾಗುತ್ತದೆ. ಹಟ್ಟಿಯ ಗಳುಗಳಿಂದಲೇ ಅಜ್ಜಿಯ ದೇಹವನ್ನು ಸುಡುವುದರ ಸಾಂಕೇತಿಕತೆಯು ಸ್ಪಷ್ಟವಾಗಿದೆ. ಎರ್ಪಕಟ್ಟೆಯವರ ಕತೆಯಲ್ಲಿ ಪ್ರತಿಭಟನೆಯ ಬದಲು ಸಮಸ್ಯೆಯನ್ನು ಬಗೆಹರಿಸಲು ಅಗತ್ಯವಾದ ತಾಳ್ಮೆಯು ಮಹತ್ವದ್ದಾಗುತ್ತದೆ. ದೇವನೂರರ ನಾಯಕನ ಪ್ರತಿಭಟನೆಯ ಸ್ವರೂಪವು ವೈಯಕ್ತಿಕವಾಗಿದ್ದು ಕತೆಯ ಕೊನೆಯಲ್ಲಿ ಆತನು ಸಮುದಾಯವನ್ನು ತೊರೆದು ಓಡುವ ಕ್ರಿಯೆಯು ಅವನೊಬ್ಬನ ಬಿಡುಗಡೆಯನ್ನು ಮಾತ್ರ ಸೂಚಿಸಿದರೆ ಎರ್ಪಕಟ್ಟೆಯವರ ನಾಯಕನು ಸಂಘರ್ಷವನ್ನು ಮೀರಿ ನಿಂತು ವೈಯಕ್ತಿಕ, ಕೌಟುಂಬಿಕ ಮತ್ತು ಸಾಮುದಾಯಿಕ ನೆಲೆಯಲ್ಲಿ ಎಲ್ಲರನ್ನು ಒಳಗೊಳ್ಳುತ್ತಾನೆ.
ಅಣ್ಣ ತಮ್ಮಂದಿರ ವೈಮನಸ್ಸನ್ನು ವಿಷಯವನ್ನಾಗಿರಿಸಿಕೊಂಡ ‘ನೀರು’ ಎಂಬ ಕತೆಯು ತನ್ನ ಸಾಂಕೇತಿಕತೆಯಿಂದಾಗಿ ಗಮನವನ್ನು ಸೆಳೆಯುತ್ತದೆ. ಮಾಲಿಂಗನು ತನಗೆ ಮಾಟ ಇಟ್ಟನೆಂದು ಸಿಟ್ಟುಗೊಂಡ ಐತನು ಆತನಿಗೆ ತನ್ನ ಬಾವಿಯಿಂದ ನೀರು ಎತ್ತಲು ಬಿಡದಿದ್ದಾಗ ತಾನೇ ಬಾವಿಯನ್ನು ತೋಡುವ ಮೂಲಕ ಮಾಲಿಂಗನು ತನ್ನ ನೀರಿನ ದಾರಿಯನ್ನು ಕಂಡುಕೊಂಡ ರೀತಿಯನ್ನು ವಿವರಿಸುತ್ತದೆ. ಮನುಷ್ಯನ ಸ್ವಭಾವದಲ್ಲಿರುವ ಕ್ಷುದ್ರ ಕ್ಷುಲ್ಲಕತೆ, ಜಗಳ ಮತ್ತು ಅದನ್ನು ನಿವಾರಿಸುವ ಕಡೆಗೆ ಮೇಲೆ ಬೆಳಕನ್ನು ಚೆಲ್ಲುವ ‘ನೀರು’ ಛಲ, ದುಡಿಮೆ ಮತ್ತು ಪ್ರೀತಿಯ ಸಂಕೇತವಾಗಿ ಬೆಳೆಯುವ ರೀತಿಯು ಗಮನಾರ್ಹವಾಗಿದೆ. ನೀರಿನ ಬತ್ತುವಿಕೆ, ಉಕ್ಕುವಿಕೆ, ಬದುಕಿಗೆ ಅದರ ಅನಿವಾರ್ಯತೆಗಳು ಸ್ಫುರಿಸುತ್ತಾ ನೀರು ಎಂಬುದು ಮಾನವೀಯತೆಯ ದೃಶ್ಯರೂಪವಾಗುತ್ತದೆ. ಅನುಕಂಪ, ಸಹೋದರತೆ ಮತ್ತು ಸಹಮಾನವ ಪ್ರಜ್ಞೆ ಪ್ರಾಣದಾಯಕ ನೀರಿನ ರೂಪದಲ್ಲಿ ಒಸರುತ್ತದೆ. ಒರತೆಯ ನೀರು, ಐತು ಮಾವ-ಮಾಲಿಂಗರ ಕಣ್ಣಿನಲ್ಲಿ ತುಳುಕುವ ಹನಿಗಳೆರಡೂ ಒಂದೇ ಆಗಿದ್ದು ಮನಸ್ಸಿನ ರಾಡಿಯನ್ನು ತೊಳೆದು ಶುದ್ಧಗೊಳಿಸುತ್ತದೆ. ನೀರಿನ ನಿಮಿತ್ತವಾಗಿ ಜಿನುಗಿದ ಹೊಸ ಅರಿವು ಮತ್ತು ಪಶ್ಚಾತ್ತಾಪದ ಅನುಭವದಿಂದ ಅವರು ಹೊಸ ಹುಟ್ಟನ್ನು ಪಡೆದುಕೊಳ್ಳುತ್ತಾರೆ.
‘ದರ್ಶನ’ ಕತೆಯಲ್ಲಿ ಮೊದಲ ಬಾರಿ ದೇವಾಲಯವನ್ನು ಪ್ರವೇಶಿಸುವ ದಲಿತರ ಭಾವನೆಗಳು ವ್ಯಕ್ತವಾಗುತ್ತವೆ. ದೇವರನ್ನು ಕಾಣುವುದಕ್ಕಿಂತಲೂ ಹೆಚ್ಚಾಗಿ “ಅನ್ನ ಪಾಯಸವುಂಟಲ್ಲ” ಎನ್ನುವ ದಲಿತರ ಒಡಲ ಒತ್ತಾಸೆ, ಬಡತನದ ಕರಾಳ ಚಿತ್ರಗಳು ಮುಖ್ಯವಾಗುತ್ತವೆ. ದೇವರನ್ನು ನೋಡಿದ ಮೇಲೂ ಬೈರಜ್ಜನಿಗೆ ತನ್ನ ಹೆಂಡತಿಯ ನೆನಪಾಗಿ ದುಃಖ ಉಕ್ಕಿ ಬರುತ್ತದೆ. ಅವಳು ಬದುಕಿದ್ದರೆ ಊಟದ ರುಚಿಯನ್ನು ತೋರಿಸಬಹುದಿತ್ತು ಎಂದೆನಿಸುತ್ತದೆಯೇ ಹೊರತು ದೇವರು ಅವನ ಮನಸ್ಸನ್ನು ಕಾಡುವುದಿಲ್ಲ. “ಅಜ್ಜಾ ಅಲ್ಲಿ ದೇವರೆಲ್ಲಿದ್ದಾನೆ? ನಾನು ಕಾಣಲೇ ಇಲ್ಲ. ನೀ ಕಂಡಿದ್ದೀಯಾ? ಒಂದೇ ಒಂದು ಹಾವು ಅಲ್ಲಿಲ್ಲವಲ್ಲ. ಒಂದು ಕೋಣೆಯೊಳಗೆ ತುಂಬಾ ದೀಪ. ಪರಿಮಳದ ಹೊಗೆ. ಅಲ್ಲಿ ಕಪ್ಪಾಗಿ ಏನೋ ಇದೆ. ದೇವರೆಂದರೆ ಅದಾ? ಅದನ್ನಾ ಇಷ್ಟರವರೆಗೆ ಇವರೆಲ್ಲ ನಾವು ನೋಡದ ಹಾಗೆ ಅಡಗಿಸಿ ಇಟ್ಟದ್ದು?” (ಪುಟ 88) ಎನ್ನುವ ಮೊಮ್ಮಗನ ಮುಗ್ಧ ಪ್ರಶ್ನೆಯು ಧಾರ್ಮಿಕ ಆಚರಣೆಗಳ ಮೂಲವನ್ನು ಅಲುಗಾಡಿಸಲು ಯತ್ನಿಸುತ್ತದೆ.
‘ಹಗ್ಲೇ ಬರ್ತೇನ್ ಗಂಗಮ್ಮಾ’ ಕತೆಯಲ್ಲಿ ಗಂಗೆಯ ಮೌನ- ಅಸಹಾಯಕತೆಗಳನ್ನು ಬಂಡವಾಳವನ್ನಾಗಿಸಿದ ಆಕೆಯ ಅಕ್ಕನ ಗಂಡ ರಾಮಚಂದ್ರನು ಗಂಗೆಯ ಬಸಿರಿಗೆ ಕಾರಣನಾಗುತ್ತಾನೆ. ತನ್ನಿಂದ ಅಕ್ಕನ ಬದುಕು ಹಾಳಾಗದಿರಲಿ ಎಂಬ ಉದ್ದೇಶದಿಂದ ಅಪ್ಪಣ್ಣನೇ ತನ್ನ ಬಸಿರಿಗೆ ಕಾರಣನೆಂದು ಪಂಚಾಯ್ತಿ ಕಟ್ಟೆಯಲ್ಲಿ ನುಡಿಯುತ್ತಾಳೆ. ತಾನು ಅವಳನ್ನು ಪ್ರೀತಿಸಿದ್ದು ನಿಜವಾದರೂ ಆಕೆಯನ್ನು ಒಮ್ಮೆಯೂ ಮುಟ್ಟಿರಲಿಲ್ಲ ಎಂದು ಎಷ್ಟೇ ಹೇಳಿದರೂ ಕೇಳದೆ ಅವನನ್ನು ಜಾತಿಯಿಂದ ಬಹಿಷ್ಕರಿಸಲಾಗುತ್ತದೆ. ಗಂಗೆಯ ಮಗಳ ಮದುವೆಯ ದಿನ ಆಕೆಯ ತಂದೆ ರಾಮಚಂದ್ರನೆಂಬ ಸತ್ಯವು ಸ್ಪೋಟಗೊಂಡಾಗ ಗಂಗೆಯು ಬಾವಿಗೆ ಹಾರಿ ಸಾಯುತ್ತಾಳೆ. ಅತ್ಯಾಚಾರ ಅನಾಚಾರಗಳಿಗೆ ಆತ್ಮಹತ್ಯೆಯು ಉತ್ತರವಾಗಬಹುದಾದರೂ ಗಂಗೆಯ ಸಮಸ್ಯೆಗೆ ಇದು ಪರಿಹಾರವೇ? ಇತರ ಪಾತ್ರಗಳಂತೆ ಬದುಕಿನ ಹೋರಾಟದ ಪಾಠವನ್ನು ರೂಢಿಸಿಕೊಳ್ಳುತ್ತಿದ್ದರೆ ಕತೆಗೆ ಬೇರೆಯೇ ಆಯಾಮ ದೊರಕುತ್ತಿರಲಿಲ್ಲವೇ? ‘ಬಲಿ’ ಕತೆಯ ಪಾರ್ವತಿಯ ಕುರಿತು ಯೋಚಿಸುವಾಗಲೂ ಮೂಡುವ ಪ್ರಶ್ನೆ ಇದುವೇ.
ಎರ್ಪಕಟ್ಟೆಯವರ ಕತೆಗಳಲ್ಲಿ ಸಾಮಾಜಿಕ ಆಯಾಮವು ಕೇವಲ ಆವರಣವಾಗಿ ಬಾರದೆ ಪಾತ್ರ ಮತ್ತು ಘಟನೆಗಳನ್ನು ತಿಳಿದುಕೊಳ್ಳಲು ಅಗತ್ಯವಾದ ಆಕರಗಳಾಗಿ ಬರುತ್ತವೆ ಎನ್ನುವುದಕ್ಕೆ ‘ಆಸರೆ’ ಉತ್ತಮ ಉದಾಹರಣೆ. ಕತೆಯಲ್ಲಿ ನಡೆಯುವ ಕ್ರಿಯೆಯ ಮೂಲ ಅಪ್ಪ ಮತ್ತು ಲಕ್ಷ್ಮಿಯ ನಡುವಿನ ಸಂಬಂಧದಲ್ಲಿದೆ. ತನ್ನ ತಂದೆಯು ಒಕ್ಕಲಿನವಳಾದ ಲಕ್ಷ್ಮಿಯನ್ನು ಇಟ್ಟುಕೊಂಡಿರುವ ವಿಚಾರ ಮಗನ ಕಿವಿಗೆ ಬಿದ್ದಾಗ ಕತೆಯು ಪಡೆದುಕೊಳ್ಳುವ ನಿರ್ಣಾಯಕ ತಿರುವಿನಲ್ಲಿ ಭವಿಷ್ಯದ ನಿರ್ಧಾರವಾಗುತ್ತದೆ. ಇಂಥ ಕತೆಯನ್ನು ಇತರ ಲೇಖಕರು ಹೇಗೆ ಬರೆಯುತ್ತಿದ್ದರೋ, ಕತೆಯ ನಾಯಕನನ್ನು ಯಾವ ರೀತಿ ಚಿತ್ರಿಸುತ್ತಿದ್ದರೋ ಗೊತ್ತಿಲ್ಲ. ಎರ್ಪಕಟ್ಟೆಯವರಂತೂ ಏಕಪಕ್ಷೀಯ ನೋಟ, ಆಸ್ಫೋಟಕ ಧಾಟಿಯನ್ನು ಬಿಟ್ಟು ವಾಸ್ತವದ ಇನ್ನೊಂದು ಮಗ್ಗುಲನ್ನು ಶೋಧಿಸಿದ್ದಾರೆ. ಅಪ್ಪನು ಆರ್ಥಿಕವಾಗಿ ಸಬಲನೇ ಆದರೂ ಮಾನಸಿಕ ಸಾಂಗತ್ಯದ ಕೊರತೆ ಮತ್ತು ಒಂಟಿತನವು ಕಾಡುತ್ತಿದ್ದುದರಿಂದ, ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಲಕ್ಷ್ಮಿಯ ಸ್ನೇಹವನ್ನು ಮಾಡಿದನೇ ಹೊರತು ಬರೇ ದೈಹಿಕ ಅಗತ್ಯಗಳಿಗಾಗಿ ಅಲ್ಲ. ನಡು ವಯಸ್ಸಿನವರೆಗೆ ಅಪ್ಪನು ಅನುಭವಿಸಿದ ಕಷ್ಟವನ್ನು ನೆನೆದಾಗ ಅವನ ರೀತಿ ತಪ್ಪಲ್ಲ ಎಂದೆನಿಸುವುದಾದರೂ ಆತನ ವರ್ತನೆಯ ಕುರಿತು ಸಮಾಜ ಏನೆಂದೀತು? ಆಗ ತನ್ನ ಪಾಡೇನು? ಸರೀಕರೆದುರು ತಲೆಯತ್ತಿ ನಿಲ್ಲಬಲ್ಲೆನೇ? ಎಂಬ ತೊಳಲಾಟವು ಆವರಿಸಿದ ಕ್ಷಣದಲ್ಲಿಯೂ ಮಗನು ತನ್ನ ಅಪ್ಪನ ಪರವಾಗಿ ಯೋಚನೆ ಮಾಡಿದಾಗ ಉತ್ತರಗಳು ನಿಲುಕುತ್ತವೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಕೊಟ್ಟು ಮುಗಿಯುವಂಥದ್ದಲ್ಲ. ಸಮಾಜ ಎಂದರೆ ನಾವು ಮತ್ತು ನಮ್ಮ ಸುತ್ತುಮುತ್ತಲಿನ ಜನರು. ಅಪ್ಪನು ತನ್ನ ಹೆಂಡತಿಯನ್ನು ಕಳೆದುಕೊಂಡಾಗ ನೆರವಿಗೆ ಬಾರದ ಸಮಾಜದ ಹಂಗು ಅವರಿಗೆ ಏಕೆ? ಹೆದರುವವರನ್ನು ಸಮಾಜ ಇನ್ನಷ್ಟು ಹೆದರಿಸುತ್ತದೆ. ತಲೆಯೆತ್ತಿ ನಿಂತವರೆದುರು ಬಾಗಿ ಬಿಡುತ್ತದೆ ಎಂಬ ಅರಿವು ಮೂಡಿದಾಗ ಅವನಲ್ಲಿ ತುಂಬಿಕೊಂಡಿದ್ದ ಶಂಕೆ, ವ್ಯಥೆ, ಗೊಂದಲ, ತಿರಸ್ಕಾರಗಳು ಕರಗಿ ಹೋಗುತ್ತವೆ. ಮಕ್ಕಳು ಚಿಕ್ಕವರಿದ್ದಾಗಲೇ ಹೆಂಡತಿಯನ್ನು ಕಳೆದುಕೊಂಡ ಅಪ್ಪನು ಮರು ಮದುವೆಯಾಗದೆ, ವಯೋಸಹಜ ಕಾಮನೆಗಳನ್ನು ಅದುಮಿಟ್ಟುಕೊಂಡು ತನ್ನ ಮಕ್ಕಳ ಪಾಲಿಗೆ ಒದಗಬಹುದಿದ್ದ ಮಲತಾಯಿಯ ಕಿರುಕುಳವನ್ನು ತಪ್ಪಿಸಿ ಅವರನ್ನು ಉತ್ತಮ ನೆಲೆಗೆ ತಲುಪಿಸಲು ಹಗಲಿರುಳು ಶ್ರಮಿಸಿದ ಉದಾತ್ತ ಮನುಷ್ಯ. ಜಾತಿ ಮತಗಳ ಆಧಾರವಿಲ್ಲದ ಸಹಜ ಬದುಕನ್ನು ಸಾಗಿಸುವ ಅಪ್ಪ ಮತ್ತು ಲಕ್ಷ್ಮಿಯದ್ದು ದೇಹವನ್ನು ಮೀರಿ ನಿಂತ ಆತ್ಮ ಸಂಬಂಧ. ಲಕ್ಷ್ಮಿಯು ಇಲ್ಲಿ ಶೋಷಿತಳಾಗಿರದೆ ಒಂಟಿತನದಿಂದ ನರಳುವ ಅಪ್ಪನ ಮೈಮನಗಳಿಗೆ ಪ್ರೀತಿಯ ಚೇತನವನ್ನು ನೀಡುವ ಹೆಂಗಸು. ಇಷ್ಟು ವರ್ಷಗಳವರೆಗೆ ಖಾಲಿಯಾಗಿದ್ದ ಅಪ್ಪನ ಹೃದಯವನ್ನು ತುಂಬಲು ಮುಂದಾದ ಲಕ್ಮಿಯನ್ನು ತನ್ನ ತಾಯಿಯಾಗಿ, ಆಕೆಯ ಮಗನನ್ನು ತಮ್ಮನಾಗಿ ಸ್ವೀಕರಿಸಲು ನಾಯಕನು ತಯಾರಾಗುವುದು ಕಥೆಯಲ್ಲಿನ ಹೊಸ ಬೆಳವಣಿಗೆ.
ಬಡತನ ಮತ್ತು ನೀತಿಗಳ ನಡುವಿನ ಸಂಬಂಧದ ಸಮಸ್ಯೆಯನ್ನು ಪ್ರಗತಿಶೀಲರೂ ಎತ್ತಿಕೊಂಡಿದ್ದರು. ಆದರೆ ಸಮಸ್ಯೆಯನ್ನು ಸರಳೀಕರಿಸಿದ್ದರಿಂದ ಅವರ ಕತೆಗಳು ದುರ್ಬಲವಾದವು. ‘ಉಮಾಪತಿಯ ಸ್ಕಾಲರ್‍ಶಿಪ್ ಯಾತ್ರೆ’ಯಲ್ಲಿ ಲಂಕೇಶರು ಈ ಸಮಸ್ಯೆಯನ್ನು ಸಾಮಾಜಿಕ ಸಂದರ್ಭದಲ್ಲಿಟ್ಟು ನೋಡುವ ಮೂಲಕ ಸಂಕೀರ್ಣತೆಯನ್ನು ಸಾಧಿಸಿದರು. ಎರ್ಪಕಟ್ಟೆಯವರ ‘ಕಾಣಿಕೆ’ಯಲ್ಲಿ ಈ ಸಂಕೀರ್ಣತೆಯಿಲ್ಲದಿದ್ದರೂ ಅದೊಂದು ಪ್ರಾಮಾಣಿಕ ಕತೆ. ಇಳಿವಯಸ್ಸಿನ ಧಣಿಯ ಆತ್ಮಾವಲೋಕನವು ಇಲ್ಲಿ ಮುಖ್ಯವಾಗುತ್ತದೆ. ಜಾತಿ, ಸಂಸ್ಕಾರ, ಅಂತಸ್ತು, ನೀತಿ ನಿಯಮಗಳು ಹೀಗೆ ಯಾವ ವಿಷಯದಲ್ಲೂ ಸಮಾನತೆಯಿಲ್ಲದ ಕೆಲಸದಾಕೆ ಮತ್ತು ಧಣಿಯ ನಡುವಿನ ಸಂಬಂಧ ನಿಜಕ್ಕೂ ಭಾವನಾತ್ಮಕವಾಗಿದೆ. ಕೆಲಸದಾಕೆಯನ್ನು ಕೂಡುವ ಮೊದಲು ಅವನೊಳಗಿದ್ದ ಅನುಕಂಪ, ಭಯ, ವ್ಯಥೆ, ಅಪರಾಧಿ ಪ್ರಜ್ಞೆ, ತಾರುಣ್ಯದ ಬಯಕೆಗಳ ತಾಕಲಾಟ, ಮನೆತನದ ಹೆಸರು ಮಣ್ಣುಪಾಲಾಗುವುದೆಂದು ಅವನ ತಂದೆತಾಯಿಯರು ಕೆಲಸದಾಕೆಯನ್ನು ಹೊರಗೆ ಹಾಕಿದಾಗ ಆತನು ಅನುಭವಿಸುವ ನಿರಾಶೆ, ಯಾತನೆ, ಸಂಕಟ. ಏಕಾಂಗಿತನಗಳ ಕಡೆಗೆ ಕತೆಗಾರರ ಮನಸ್ಸು ಮಿಡಿದಿದೆ.
‘ಬಡವಾ ಬುದ್ಧಿ ಹೆಂಗಾದ್ರೂ ಬದುಕ್ಬೇಕಲ್ಲ’ ಎನ್ನುವ ಭಿಕ್ಷುಕನ ಮಾತಿನ ಮೂಲಕ ಬದುಕಿನ ಕಠೋರ ವಾಸ್ತವವನ್ನು ಒಂದೇ ಮಾತಿನಲ್ಲಿ ನಮ್ಮ ಮುಂದಿಡುವ ‘ಬಂಡವಾಳ’ ಎಂಬ ಕತೆಯು ಬಡತನವನ್ನೂ ಚುನಾವಣೆಯ ಮಾನದಂಡವನ್ನಾಗಿಸಿಕೊಂಡ ರಾಜಕೀಯ ಪಕ್ಷಗಳು ಬಡವರ ಬದುಕನ್ನು ನಿರ್ಲಕ್ಷಿಸಿ ಪರಿಸ್ಥಿತಿಯ ಲಾಭ ದೋಚುವ ಬಗೆಯನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯ ವೈಫಲ್ಯಗಳನ್ನು ಮುಚ್ಚುಮರೆಯಿಲ್ಲದೆ ಬಯಲುಗೊಳಿಸಿದರೆ ‘ಚಪಾತಿ, ರೊಟ್ಟಿ ಮತ್ತು ನಾಯಿಗಳು’ ನಿರ್ಗತಿಕರ ಬದುಕಿನ ಮೇಲೆ ನಾಗರಿಕ ಸಮಾಜ ಮತ್ತು ಪ್ರಭುತ್ವಗಳು ಎಸಗುವ ದಾಳಿಯನ್ನು ವಿವರಿಸುತ್ತದೆ. ಈ ಕತೆಯ ಕೇಂದ್ರ ಪಾತ್ರಗಳಾದ ಭಿಕ್ಷುಕ ಮತ್ತು ಭಿಕ್ಷುಕಿಗೆ ಹೆಸರಿಲ್ಲದಿರುವುದು ಅವರ ಅಸ್ತಿತ್ವ ರಹಿತ ಬದುಕಿನ ಸೂಚನೆಯಾಗಿದೆ. ಭಿಕ್ಷೆಯಾಗಿ ದೊರೆತ ಚಪಾತಿಯನ್ನು ತಿನ್ನುತ್ತಿದ್ದ ಆತನಿಗೆ ಚಪಾತಿ ಎಂಬ ಹೆಸರಿನಿಂದ, ಅಂತೆಯೇ ಭಿಕ್ಷುಕಿಯನ್ನು ರೊಟ್ಟಿ ಎಂಬ ಹೆಸರಿನಿಂದ ಕರೆಯುವ ಮಕ್ಕಳಿಂದಾಗಿ ಅವರಿಗೆ ಆ ಹೆಸರು ಅಂಟಿಕೊಳ್ಳುತ್ತದೆ. ನಾಗರಿಕ ಜಗತ್ತಿನಿಂದ ಬೇರೆಯೇ ಆಗಿ ಬದುಕುತ್ತಿರುವ ಅವರು ಗಂಡಹೆಂಡತಿಯರಂತೆ ಬಸ್ ನಿಲ್ದಾಣದಲ್ಲಿ ನಿದ್ರಿಸುತ್ತಿರುವ ಹೊತ್ತಿನಲ್ಲಿ ಕಾಮುಕರು ಭಿಕ್ಷುಕನಿಗೆ ಹೊಡೆದು ಪ್ರಜ್ಞೆ ತಪ್ಪಿಸಿ, ಭಿಕ್ಷುಕಿಯನ್ನು ಬಲಾತ್ಕರಿಸುತ್ತಾರೆ. ಹಗಲಿನಲ್ಲಿ ಅಸ್ಪøಶ್ಯಳಾಗಿರುವ ಭಿಕ್ಷುಕಿಯು ರಾತ್ರಿ ಹೊತ್ತಿನಲ್ಲಿ ಅಸ್ಪೃಶ್ಯಳಲ್ಲವೇ ಎಂಬ ಪ್ರಶ್ನೆಗೆ ಆಸ್ಪದವಿಲ್ಲದಂತೆ ಕಾಮ, ಕ್ರೌರ್ಯಗಳ ಮೇಲುಗೈಯಾಗುತ್ತದೆ. ಚಪಾತಿ ಮತ್ತು ರೊಟ್ಟಿಯ ಬದುಕು ನಾಯಿಗಳ ಹಲ್ಲು ಉಗುರುಗಳಲ್ಲಿ ಸಿಕ್ಕಿ ಚೂರು ಚೂರಾಗುತ್ತದೆ. ಪ್ರಜ್ಞೆ ತಿಳಿದು ಎದ್ದ ಬಳಿಕ ಜರ್ಜರಿತಳಾಗಿ ಬಿದ್ದುಕೊಂಡ ಜೊತೆಗಾತಿಯನ್ನು ದೀನನಾಗಿ ನಿರ್ವಿಣ್ಣನಾಗಿ ನೋಡುತ್ತಾ ನಿಲ್ಲುವ ಆತನ ಅಸಹಾಯಕತೆಯು ಸಂವೇದನರಹಿತ ಬದುಕನ್ನು ಸಾಗಿಸುತ್ತಿರುವ ಮಂದಿಗೆ ಕಾಣುವುದಿಲ್ಲ. ಹೀಗೆ ವರ್ತಮಾನದ ಅನೇಕ ಬೆಳವಣಿಗೆಗಳಿಂದ ಆವರಣಕ್ಕೆ ಅನ್ಯವಾಗುತ್ತಿರುವ ಜೀವಗಳು ತಮ್ಮನ್ನು ತಾವು ಕಂಡುಕೊಳ್ಳಲು ಹಂಬಲಿಸುತ್ತವೆ. ವ್ಯಾಮೋಹ, ಅಸಹಾಯಕತೆಗಳಿಂದಾಗಿ ಬೇರು ಕತ್ತರಿಸಿಕೊಂಡವರ ತೊಯ್ದಾಟಗಳನ್ನು ಕಾಣುತ್ತೇವೆ.
ತಳ ವರ್ಗದ ಶೋಷಿತ ಸಮುದಾಯಗಳ ಬದುಕನ್ನು ಹಿನ್ನೆಲೆಯಾಗಿಟ್ಟುಕೊಂಡ ಕತೆಗಳಲ್ಲಿ ಕಂಡುಬರುವ ಸಂಘರ್ಷ, ಜಾತಿಯ ವರ್ಗೀಕರಣಗಳ ಚಿತ್ರಣವು ಬಹುತೇಕ ಕಪ್ಪು ಬಿಳುಪು ವರ್ಣನೆಗಳಲ್ಲೇ ಕಳೆದುಹೋಗುತ್ತಿದ್ದ ಸಂದರ್ಭದಲ್ಲಿ ಎರ್ಪಕಟ್ಟೆಯವರು ತಮ್ಮ ಕತೆಗಳ ಮೂಲಕ ಕಟ್ಟಿಕೊಟ್ಟ ಸರಳ ಸುಂದರ ಸಹಜ ಬದುಕಿನ ರೂಪಕವು ಹೊಸ ಆಶಯದ ಕಡೆಗೆ ಮುಖ ಮಾಡುತ್ತದೆ. ಮೇಲು ಕೀಳು ಜಾತಿಯೆನ್ನದೆ ಎಲ್ಲ ಪಾತ್ರಗಳು ಬದುಕಿನ ಬೇಗುದಿಯಲ್ಲಿ ನೊಂದ ಜೀವಿಗಳಾದರೂ ಹೊಟ್ಟೆಯೊಳಗೆ ಕಿಚ್ಚು ಇಟ್ಟುಕೊಳ್ಳದೆ ಸಂಬಂಧಗಳ ಕುರಿತು ತೀವ್ರ ವಿಶ್ವಾಸವನ್ನಿರಿಸಿಕೊಂಡಿರುವುದರಿಂದ ಅವರಿಗೆ ಬದುಕಿನೊಂದಿಗೆ ಸೆಣಸುವ, ಅಬ್ಬರವಿಲ್ಲದೆ ಎದೆಗೊಟ್ಟು ನಿಲ್ಲುವ ಶಕ್ತಿ ಇದೆ. ಹಾಗೆಂದು ಲೇಖಕರು ಇವರೆಲ್ಲರನ್ನೂ ಭಾವುಕ ನೆಲೆಯಲ್ಲಿ ಚಿತ್ರಿಸಲು ಹೋಗದೆ ಬದುಕಿನ ಸಹಜ ನಡೆಯನ್ನು ಹಾಗೆಯೇ ದಾಖಲಿಸಿದ್ದಾರೆ. ಎಲ್ಲೂ ರೊಚ್ಚು ಆವೇಶಗಳನ್ನು ತಾಳದ, ಬಡವರ ನೋವನ್ನು ಕಣ್ಣೀರಿನಲ್ಲಿ ಅದ್ದಿದ ಭಾಷೆಯಲ್ಲಿ ಬರೆಯದ ಕತೆಗಳಲ್ಲಿ ಮೂಡುವ ಪ್ರತಿಭಟನೆಯ ಸ್ವರೂಪವು ಅಷ್ಟು ಸುಲಭವಾಗಿ ತಿಳಿಯುವಂಥದ್ದಲ್ಲ. ಯಾಕೆಂದರೆ ಅದು ಪ್ರತಿಭಟನೆಯನ್ನು ಸಂಕೇತಿಸುವ ವ್ಯಕ್ತಿ – ಘಟನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಆವೇಶ, ಉದ್ವೇಗರಹಿತ ಭಾಷೆಯಲ್ಲಿ ಓದುಗರ ಸಂವೇದನೆಗೆ ಪ್ರತಿಭಟನೆಯನ್ನು ಬಿಟ್ಟುಕೊಡುವ ಕತೆಗಳಲ್ಲಿ ಪ್ರತಿಭಟನೆಯು ಹಿಂಸೆಯ ರೂಪವನ್ನು ತಾಳುವುದಿಲ್ಲ. ಇತರರ ಬರವಣಿಗೆಗೆ ಹೋಲಿಸಿದರೆ ಎರ್ಪಕಟ್ಟೆಯವರ ಕತೆಗಳು ತೋರುವ ಸಂಯಮವು ಅನನ್ಯವಾಗಿದೆ. ಹೆಚ್ಚಿನ ಕತೆಗಳಲ್ಲಿ ಕೇಂದ್ರ ಪಾತ್ರವು ತಾನು ಮತ್ತು ತನ್ನೆದುರಿಗೆ ಇರುವುದನ್ನು ಬೇರೆ ಬೇರೆಯೆಂದು ಪರಿಭಾವಿಸದಿರುವುದರಿಂದ ಸಂಘರ್ಷವು ಕಂಡು ಬರುವುದಿಲ್ಲ. ಆದ್ದರಿಂದ ಬದುಕಿನ ಹಾದಿಯಲ್ಲಿ ನಿರಾಸೆ ಹುಟ್ಟಿದರೂ ಅವುಗಳು ಸಾಮರಸ್ಯಕ್ಕೆ ದಾರಿಯಾಗುವುದರಿಂದ ಲೋಕವೆಲ್ಲ ಹಂಬಲಿಸುವ ಸುಖೀಭಾವವು ಕತೆಗಳ ಉದ್ದಕ್ಕೂ ಹರಡಿಕೊಳ್ಳುತ್ತದೆ.
ಇಲ್ಲಿನ ಕತೆಗಳು ನಿರ್ಲಕ್ಷಿತರ ರಾಗಭಾವಗಳನ್ನಲ್ಲದೆ ಉಳ್ಳವರ ಹಸಿವಿನೊಂದಿಗೆ ತಳುಕು ಹಾಕಿದ ಲೈಂಗಿಕತೆಯನ್ನು ಹಲವು ಪದರಗಳಲ್ಲಿ ನಿರೂಪಿಸುತ್ತವೆ. ತುಣುಕು ತುಣುಕಾಗಿ ಜಿನುಗುವ ನೋವು, ತಳಮಳಗಳ ಮಗ್ಗುಲಲ್ಲಿರುವ ಜೀವನ ಪ್ರೀತಿ, ಚೆಲುವುಗಳನ್ನು ಬಿಂಬಿಸುತ್ತವೆ. ಭರವಸೆಯಿಲ್ಲದ ಬದುಕು ಮತ್ತು ಪರಿಸರಗಳಿಗೆ ಮುಖಾಮುಖಿಯಾಗುವಂತೆ ಮಾಡುತ್ತವೆ. ಜಾತಿ ಯಜಮಾನಿಕೆಯಡಿಯಲ್ಲಿ ನಲುಗುತ್ತಾ ಬಾಳುವ ದಲಿತರು ಬಲಿಷ್ಠ ಜಾತಿಗಳ ಕ್ರೌರ್ಯಕ್ಕೆ ಬಲಿಯಾಗಿ ಪ್ರತಿಭಟನೆಯ ಸೊಲ್ಲಡಗಿಸಿಕೊಂಡ ಅಸಹಾಯಕರಾಗಿ ಮಾತ್ರ ಕಾಣಿಸಿಕೊಳ್ಳದೆ ವರ್ತಮಾನದ ಸಾಮಾಜಿಕ ಬೆಳವಣಿಗೆಗಳಿಂದಾಗಿ ಎಚ್ಚೆತ್ತುಕೊಂಡು ಸ್ವಾಭಿಮಾನವನ್ನು ರೂಢಿಸಿಕೊಂಡವರಾಗಿಯೂ ಕಂಡು ಬರುತ್ತಾರೆ. ಪ್ರಾರಂಭದಲ್ಲಿ ಕಂಡು ಬಂದ ದಲಿತ ಕಥನಗಳ ಸರಳತೆಗೂ ಇವರ ಕತೆಗಳ ಸಂಕೀರ್ಣತೆಗೂ ಇರುವ ಅಂತರವು ಮುಖ್ಯವಾಗಿದೆ. ದಲಿತ- ಸವರ್ಣೀಯರ ಬದಲಾದ ಸಂಬಂಧ, ನೆನಪುಗಳ ಆಳ – ತೀವ್ರತೆ, ಅಧಿಕಾರದ ಬೆನ್ನಲ್ಲೇ ದಲಿತರು ಎದುರಿಸಬೇಕಾದ ಸಂದಿಗ್ಧಗಳು ಮತ್ತು ಸ್ವವಿಮರ್ಶೆಯನ್ನು ಒಳಗೊಂಡ ಕತೆಗಳು ಪ್ರಬುದ್ಧತೆಯನ್ನು ಸಾಧಿಸಿವೆ. ಪ್ರತ್ಯೇಕತೆ, ತಿರಸ್ಕಾರ ಮತ್ತು ಅವಕಾಶಹೀನತೆಯ ಕತ್ತಲಿನಿಂದ ಹೊರಬಂದು ಸಮಾನತೆ ಮತ್ತು ಘನತೆಯುಕ್ತ ಬದುಕಿಗಾಗಿ ತುಡಿಯುವ ಸಮುದಾಯಗಳ ಒಡಲ ದನಿಯು ಇವರ ಕತೆಗಳ ಸ್ಥಾಯಿಭಾವವಾಗಿದ್ದರೂ ಬದಲಾದ ಸಂದರ್ಭದಲ್ಲಿ ಹುಟ್ಟಿಕೊಂಡ ಸಾಮಾಜಿಕ ಮತ್ತು ವೈಯಕ್ತಿಕ ಸಮಸ್ಯೆಗಳನ್ನು ಲೇಖಕರು ವಸ್ತುನಿಷ್ಠವಾಗಿ ತಿಳಿಸಿದ್ದಾರೆ. ಊಳಿಗಮಾನ್ಯ ವ್ಯವಸ್ಥೆಯೊಳಗಿನ ಶ್ರೇಣಿಗಳಲ್ಲಿ ಕಾಣಿಸುವ ಮಾನವೀಯ ಸೆಲೆಗಳನ್ನು ಗಮನಿಸಿದ್ದಾರೆ. ಜಾತಿ ಮತಗಳ ಇಕ್ಕಟ್ಟುಗಳನ್ನು ಒಪ್ಪಿಕೊಂಡೂ ಉತ್ಕಟ ಮಾನವೀಯ ಸಂಬಂಧವು ಸಾಧ್ಯವಾಗಿರುವ ಮಾದರಿಗಳನ್ನು ಒದಗಿಸಿದ್ದಾರೆ. ದೇವನೂರರು ಕಲಾತ್ಮಕವಾಗಿ, ನುಗಡೋಣಿಯವರು ಹಸಿ ಹಸಿಯಾಗಿ ಮಂಡಿಸುವ ವಿಚಾರಗಳನ್ನು ಸರಳವಾಗಿ ಆಪ್ತವಾಗಿ ವಿವರಿಸುವ ಎರ್ಪಕಟ್ಟೆಯವರು ಮೇಲು – ಕೀಳು ಎಂಬ ಭೇದವಿಲ್ಲದೆ ಒಂದೇ ಮನೆಯ ಮಕ್ಕಳಂತೆ ಎಲ್ಲರೂ ಸಾಮಾಜಿಕ ಸಂಬಂಧಗಳಿಗೆ ಬದ್ಧರಾಗಿ ಬಾಳಲು ಬಯಸುವ ಸಮನ್ವಯದ ಹಾದಿಯನ್ನು ನೆಚ್ಚಿಕೊಳ್ಳುತ್ತಾರೆ.
ತೀವ್ರಗೊಳ್ಳುತ್ತಿರುವ ಸಾಮಾಜಿಕ ಕೋಲಾಹಲಗಳ ನಡುವೆ ಸುಮ್ಮನೆ ಬೊಬ್ಬಿರಿಯದೆ, ತಮ್ಮೊಳಗಿನ ಪ್ರತಿಭಟನೆಯ ಕಾವನ್ನು ಆರಲು ಬಿಡದೆ ಮೆಲುನುಡಿಗಳ ಅಲಗಿನ ಮೇಲೆ ಚಲಿಸುವ ಎರ್ಪಕಟ್ಟೆಯವರ ಕತೆಗಳು ಹಲವು ದೃಷ್ಟಿಗಳಿಂದ ಮುಖ್ಯವೆನಿಸುತ್ತವೆ. ಸಾಮಾಜಿಕ ಮತ್ತು ಧಾರ್ಮಿಕ ಅಸಹನೆಗಳು ಯಾವ ಸಭ್ಯತೆಯೂ ಇಲ್ಲದೆ ಬಹಿರಂಗವಾಗಿ ವ್ಯಕ್ತಗೊಳ್ಳುತ್ತಿರುವ ನಂಜು ಮುಸುಕಿದ ಇಂದಿನ ವಾತಾವರಣದಲ್ಲಿ ಉಗ್ರವಾದಿಗಳಂತೆ ಅಥವಾ ಧರ್ಮಭೀರುಗಳಂತೆ ಎಲ್ಲವನ್ನೂ ಸರಳಗೊಳಿಸಿ ಪರಿಹಾರವನ್ನು ಸೂಚಿಸುವ ಸುಲಭದ ಹಾದಿಯನ್ನು ಹಿಡಿಯದ ಕತೆಗಳು ಬೀದಿ ಬದಿಯ ಭಾಷಣಗಳಾಗುವುದಿಲ್ಲ. ಆತ್ಮಪ್ರತ್ಯಯದ ರಚನೆಗಳಾಗುವುದಿಲ್ಲ.
ನಾಗರಿಕರ ಕಣ್ಣುಗಳಿಗೆ ಅಷ್ಟೇನೂ ತೆರೆದುಕೊಳ್ಳದ ಸಮುದಾಯದ ಅನುಭವಗಳನ್ನು ತಕ್ಕೈಸಿಕೊಂಡು ಜೀವ ತಳೆದಿರುವ ಕತೆಗಳು ತಮ್ಮೊಳಗಿನ ಕುದಿತಗಳನ್ನು ಪ್ರತೀಕಾರ ಮತ್ತು ದ್ವೇಷವಾಗಿ ಪರಿವರ್ತಿಸದೆ ಸಾಮರಸ್ಯದ ನೆಲೆಯಲ್ಲಿ ಬಿಚ್ಚಿಡುವ ಮೂಲಕ ಸಮಾನತೆಯ ಮೌಲ್ಯಗಳನ್ನು ಸಮಾಜದ ನಡುವೆ ಅದರ ಪರಿಶುದ್ಧ ರೂಪದಲ್ಲಿ ಪುನಶ್ಚೇತನಗೊಳಿಸಲು ಬಯಸುತ್ತವೆ. ಸಾಮಾಜಿಕ ಅಸ್ತಿತ್ವವಿಲ್ಲದ ಸಮುದಾಯದ ಒಡಲಿನಿಂದ ಮೂಡಿದ ಕತೆಗಳು ಬದುಕಿನ ಯಾತನೆಯ ಕಡೆಗೆ ಬೆಳಕನ್ನು ಬೀರುತ್ತವೆ. ಛಿದ್ರಗೊಂಡ ಬದುಕನ್ನು ಕಾಠಿಣ್ಯವಿಲ್ಲದೆ ಪ್ರಕಟಿಸುತ್ತವೆ. ಮೇಲ್ನೋಟಕ್ಕೆ ಸರಳೀಕರಣದಂತೆ ಕಂಡರೂ ಪರಿಧಿಯ ಆಚೆಗೆ ಉಳಿದು ನಲುಗಿದ ಸಮುದಾಯವೊಂದರ ದನಿಯಾಗಿ ಗುರುತಿಸಿದಾಗ ಕತೆಗಳ ಆಳದಲ್ಲಿರುವ ಮಾನವ ಪ್ರೀತಿ, ಸಾಮಾಜಿಕ ಅಸಮಾನತೆಗಳಿಂದ ಬಿಡುಗಡೆಯನ್ನು ಪಡೆಯಲು ಬಯಸುವ ತುಡಿತ ಮತ್ತು ಸಮಾನತೆಯ ದಾಹವು ಅರಿವಿಗೆ ಬರುತ್ತದೆ. ಸಮಷ್ಟಿಯ ಎಲ್ಲ ಅನುಭವಗಳನ್ನು ಬದುಕಿನ ಒಡನಾಟ ಮತ್ತು ಸಂಕಟಗಳೊಂದಿಗೆ ನವಿರಾಗಿ ಅಭಿವ್ಯಕ್ತಿಸುವ ಕತೆಗಳ ಅಂತರಾಳದಲ್ಲಿ ಕರುಣೆಯ ಹೊನಲು ಜೀವ ನದಿಯಂತೆ ಹರಿಯುತ್ತದೆ. ಆದ್ದರಿಂದಲೇ ಅವುಗಳು ಮಾತಿನ ಅಬ್ಬರದಿಂದ ಸುಡುವುದಿಲ್ಲ. ಹರಿಯುವ ನೀರಿನಂತೆ ತಣಿಸುತ್ತವೆ.
ಬದುಕು ಎದುರಿಸುವ ಇಕ್ಕಟ್ಟು ಮತ್ತು ಸದ್ಯವು ಒಡ್ಡುತ್ತಿರುವ ಬಿಕ್ಕಟ್ಟು ಇಲ್ಲಿನ ಕತೆಗಳನ್ನು ಆವರಿಸಿದೆ. ವ್ಯಕ್ತಿ ಮತ್ತು ಸಮಷ್ಟಿಯ ಸಂಬಂಧದ ಮೊದಲ ಎಳೆಯಾದ ಕುಟುಂಬವನ್ನು ಮುಖ್ಯ ನೆಲೆಯಲ್ಲಿ ಪರಿಭಾವಿಸುವ ಮೂಲಕ ಬದುಕನ್ನು ಶೋಧಿಸಲು ಹೊರಡುವ ಕತೆಗಳು ಜೀವನದ ನಿಜ ಚಹರೆಗಳನ್ನು ಹೆಪ್ಪು ಹಾಕಿ ಹದಗೊಳಿಸಿದಂತೆ ರೂಪುಗೊಂಡಿವೆ. ಬದುಕಿನ ದಿಕ್ಕು ತಪ್ಪಿಸುವಂತೆ ಒಂದರೊಳಗೊಂದು ಹೆಣೆದುಕೊಂಡು ತೋರಿಕೆ – ವಾಸ್ತವ, ಸಂಪ್ರದಾಯ – ಹೊಸದೃಷ್ಟಿ, ಸತ್ಯ – ಅಸತ್ಯ ಮುಂತಾದ ಪೂರಕ ವಿಚಾರಗಳ ಹಿನ್ನೆಲೆಯಲ್ಲಿ ಬದುಕಿನ ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಯತ್ನಿಸುವ ಕತೆಗಳು ಅನವಶ್ಯಕ ವ್ಯಾಖ್ಯಾನ, ಭಾವಾಡಂಬರ, ಮತ್ತು ಕಪ್ಪು ಬಿಳುಪಿನ ಪಾತ್ರ ಚಿತ್ರಣಗಳನ್ನು ಮೀರಿ ನಿಲ್ಲುತ್ತವೆ. ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವ ಪಾತ್ರಗಳೇ ಹೆಚ್ಚಿದ್ದರೂ ಜಾತಿ ಸಂಬಂಧವನ್ನು ಮೀರಿದ ಆತ್ಮಸಂಬಂಧವು ಸಾಧ್ಯವಾಗುವುದು ‘ಆಸರೆ’ಯಂಥ ಕತೆಗಳಲ್ಲಿ ಮಾತ್ರ. ‘ಕಾಣಿಕೆ’ಯ ಧನಿ, ‘ನಿರ್ಧಾರ’ದ ಸೌಮ್ಯಾ ಮೊದಲಾದ ಮೇಲು ಜಾತಿಯವರು ಉತ್ತಮ ಮನೋಭಾವದವರಾಗಿದ್ದು ‘ಹಗ್ಲೇ ಬರ್ತೇನ್ ಗಂಗಮಾ’್ಮದಲ್ಲಿನ ರಾಮಚಂದ್ರ, ‘ಲೆಕ್ಕ’ದ ನಿಂಗಜ್ಜ, ‘ಬಲಿ’ಯ ಮಾವ ಮೊದಲಾದವರು ನಂಬಿಕೆಗೆ ದ್ರೋಹವನ್ನು ಬಗೆಯುವವರಾಗಿ ಕಂಡು ಬರುತ್ತಾರೆ. ನಿರ್ದಿಷ್ಟ ಜಾತಿಯೊಂದನ್ನು ಹೊಗಳುವುದು ಅಥವಾ ತೆಗಳುವುದೇ ಪ್ರಗತಿಪರ ಚಿಂತನೆ ಎಂಬ ಭಾವನೆಯು ಬೇರು ಬಿಟ್ಟಿರುವ ಈ ಹೊತ್ತಿನಲ್ಲಿ ಎಲ್ಲ ಜಾತಿಯವರನ್ನೂ ಮನುಷ್ಯರೆಂದು ಪರಿಗಣಿಸಿ ಅವರನ್ನು ಪ್ರೀತಿಯ ತಂತುವಿನಲ್ಲಿ ಬೆಸೆಯುವ ಎರ್ಪಕಟ್ಟೆಯವರ ಕತೆಗಳು ವಿಶೇಷ ಅಧ್ಯಯನಕ್ಕೆ ಒಳಗಾಗಬೇಕಾದ ಅಗತ್ಯವಿದೆ.