ನಿವಾಳಿಸಿ ಬಿಟ್ಟ ಕೋಳಿ (ಕಥಾ ಸಂಕಲನ)
ಲೇ: ಅನಿತಾ ಪಿ. ತಾಕೊಡೆ
ಪ್ರಕಾಶಕರು: ಸ್ನೇಹ ಎಂಟರ್ ಪ್ರೈಸಸ್
ಪುಟ: 216, ಬೆಲೆ : ರೂ. 220
‘ನಿವಾಳಿಸಿ ಬಿಟ್ಟ ಕೋಳಿ’ ಈ ಪ್ರಥಮ ಸಂಕಲನದ ಮೂಲಕ ಅನಿತಾ ಪೂಜಾರಿ ತಾಕೊಡೆ ಅವರು ಮುಂಬೈ ಕನ್ನಡ ಕಥಾ ಸಾಹಿತ್ಯದಲ್ಲಿ ತನ್ನ ಪ್ರವೇಶ ಪಡೆದು ತನ್ನ ಹೆಜ್ಜೆ ಗುರುತು ಮೂಡಿಸಿದ್ದಾರೆ. ಅವರಿಗೆ ಶುಭಾಶಯಗಳು. ಅವರು ಪ್ರೀತಿಯಿಂದ ಕಳಿಸಿದ ಈ ಕತೆಗಳ ಕುರಿತು ಕೆಲವು ಟಿಪ್ಪಣಿಗಳು:
ಟಿಪ್ಪಣಿ ೧ : ತಾನು ಹುಟ್ಟಿ ಬೆಳೆದ ದಕ್ಷಿಣ ಕನ್ನಡ ಮತ್ತು ಈಗಿನ ಮುಂಬೈ ಎರಡನ್ನೂ ಒಳಗೊಳ್ಳುವ ಪ್ರಯತ್ನ ಈ ಕತೆಗಳಲ್ಲಿ ಕಂಡು ಬರುತ್ತದೆ. ಅವರ ಮೊದಲ ಘಟ್ಟದಲ್ಲಿ ಬರೆದ ಕತೆಗಳಲ್ಲಿ ಮುಂಬೈಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅವುಗಳಿಗಿಂತ ತಮ್ಮ ಬಾಲ್ಯದ ದಿನಗಳನ್ನು ರೂಪಿಸಿದ ,ದಕ್ಷಿಣ ಕನ್ನಡದ ಗಾಢವಾದ ಪ್ರಭಾವ, ಅವರ ಮೇಲೆ ಆಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ನಿವಾಳಿಸಿ ಬಿಟ್ಟ ಕೋಳಿ, ಬೈರಪ್ಪ ಗುಡ್ಡ ಮತ್ತು ಕವುಜಗಿ ಹಕ್ಕಿ, ಅಪ್ಪ ನೆಟ್ಟ ಸೀತಾಫಲ ಈ ಸಂಕಲನದ ಸಫಲ ಕತೆಗಳನ್ನಬಹುದು. ಅದಕ್ಕೆ ಕಾರಣ ಅವರು ಅಲ್ಲಿನ ನಂಬಿಕೆಗಳನ್ನು ಬಳಸಿರುವ ವಿನ್ಯಾಸ. ಮೊದಲ ಕತೆ ನಂಬಿಕೆಗಳ ಹಿಂದೆ ಇರುವ ಸ್ವಾರ್ಥವನ್ನು ಬಯಲಿಗೆಳೆದರೆ, ಎರಡನೆ ಕತೆ ಅಲ್ಲಿನ ಜೀವಾಳವಾದ ಜಾನಪದ ನಂಬಿಕೆಗಳು ಮತ್ತು ನಿಸರ್ಗ, ಅದಕ್ಕೆ ಧಕ್ಕೆ ತರುವ ಮೂಲಕ ಪ್ರಕೃತಿಯ ಮೇಲೆ ಆಧುನೀಕತೆ ನಡೆಸುವ ಅತ್ಯಾಚಾರವನ್ನು ಆತಂಕದಿಂದ ಬಯಲಿಗೆಳೆಯುತ್ತದೆ. ಎರಡು ಬಗೆಯ ನಂಬಿಕೆಗಳ ನಡುವೆ ಇರುವ ಅಂತರ, ಯಾವುದು ಆರೋಗ್ಯಕರ ಎನ್ನುವ ಔಚಿತ್ಯ ಜ್ಞಾನ ಈ ಕಥಾವಸ್ತುಗಳನ್ನು ನಿರ್ದೇಶಿಸುತ್ತವೆ. ಅಪ್ಪ ಮಗಳ ನಡುವಿನ ಆತ್ಮೀಯತೆ ಮೂರನೇ ಕತೆಯಲ್ಲಿ ಇದೆ .
ಟಿಪ್ಪಣಿ ೨. ಹದಿಹರೆಯದ ತಲ್ಲಣಗಳು ಅವರ’ ಮಧುರ ಭಾವ’ ಅಂತಹ ಕತೆಗಳಲ್ಲಿ ಮೂಡಿಬಂದಿದೆ. ಟಿಪ್ಪಣಿ ೩: ವಾಸ್ತವಕ್ಕೆ ಮುಖಾ ಮುಖಿಯಾದ ಕತೆಗಳು: ಬೆಂಕಿಯಿಂದ ಬಾಣಲೆಗೆ ಬೀಳುವ ಅಮಾಯಕ ಹೆಣ್ಮಕ್ಕಳ ದುರಂತ ( ಸುಳಿಯಲ್ಲಿ ನಲುಗಿದ ನಾವೆ), ಅಂತರ ಧರ್ಮೀಯ ವಿವಾಹದ ಸವಾಲುಗಳು, ( ಭ್ರಮೆಗಳ ತೆರೆ ಸರಿದಾಗ) ಮಕ್ಕಳಿಲ್ಲದ ಮತ್ತು ಬಾಡಿಗೆ ತಾಯಿಯ ಕರುಳಿನ ತೊಡಕು (ದತ್ತ), ವಿಶ್ವಾಸ ದ್ರೋಹ ಮಾಡಿದ ಗೆಳತಿಯ ಕುರಿತು ತಳೆವ ಉದಾರ ನಿಲುವು ( ಮಣ್ಣು ) ಇದಕ್ಕೆ ನಿದರ್ಶನಗಳು .
ಮುಂಬೈ ಮತ್ತು ಊರಿನ ಮುಖಾ ಮುಖಿಯನ್ನು ಬರೆವ ಶಕ್ತಿ ಅವರ ಮುಂದಿನ ಕತೆಗಳಲ್ಲಿ ಮೂಡಿ ಬರಲಿ. ಆರೋಗ್ಯಕರ ಮೌಲ್ಯಗಳನ್ನು ಕತೆಗಳ ಮೂಲಕ ಎತ್ತಿ ಹಿಡಿಯುವ ಅವರ ಕತೆಗಳು ಮತ್ತಷ್ಟು ಕಲಾತ್ಮಕ ಕಸುವನ್ನು ಮೈಗೂಡಿಸಿಕೊಳ್ಳಲಿ ಎಂದುಹಾರೈಸುತ್ತೇನೆ. ಶುಭಾಶಯಗಳು.
* ಡಾ. ಕೆ. ರಘುನಾಥ್
2 thoughts on “ನಿವಾಳಿಸಿ ಬಿಟ್ಟ ಕೋಳಿ: ಕೆಲವು ಟಿಪ್ಪಣಿಗಳು”
ವಂದನೆ ಪ್ರಕಾಶ್ ನನ್ನ ಮೆಚ್ಚಿನ ಶಿಷ್ಯೆಯ ಕಥಾಸಂಕಲನ ಕುರಿತು ಬರೆದ ನನ್ನ ಬರಹವನ್ನು ಪ್ರಕಟಿಸಿದ್ದಕ್ಕೆ.
ವಿಮರ್ಶೆ ಚೆನ್ನಾಗಿದೆ. ಅಭಿನಂದನೆಗಳು ಡಾ ರಘುನಾಥ್ ಕೃಷ್ಣಮಾಚಾರ್ ಅವರಿಗೆ ಹಾಗೂ ಅನಿತಾ ಪಿ. ತಾಕೋಡೆ ಇವರಿಗೆ