ಎಪ್ಪತ್ತರ ದಶಕ ಕನ್ನಡ ಸಿನಿಮಾ ಚರಿತ್ರೆಯಲ್ಲಿ ಒಂದು ಮರೆಯಲಾಗದ ಕಾಲಾವಧಿ. ಇಂದು ದಂತಕಥೆಯಾಗಿರುವ ಕನ್ನಡದ ಹಲವು ಪ್ರತಿಭೆಗಳು ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡು, ಭಾರತೀಯ ಚಿತ್ರ ರಂಗ ಕನ್ನಡ ಸಿನಿಮಾದತ್ತ ಅಚ್ಚರಿ ಮತ್ತು ಸಂತಸದಿಂದ ನೋಡುವಂತೆ ಮಾಡಿದ ಅದ್ಭುತ ಕಾಲಘಟ್ಟವದು. ಅದಕ್ಕೆಂದೇ ಎಪ್ಪತ್ತರ ದಶಕವನ್ನು ಕನ್ನಡ ಚಿತ್ರರಂಗದ ಸುವರ್ಣ ಯುಗವೆಂದು ಕರೆಯಲಾಗಿದೆ. ೧೯೭೩ರಲ್ಲಿ ಕನ್ನಡ ಭಾಷೆಯೊಂದರಲ್ಲಿಯೇ ೭೦ಕ್ಕೂ ಅಧಿಕ ಚಲನಚಿತ್ರಗಳು ಬಿಡುಗಡೆಯಾಗಿವೆ. ವರನಟ, ನಟಸಾರ್ವಭೌಮ ಡಾ. ರಾಜಕುಮಾರರ ೧೫೦ನೆಯ ಚಿತ್ರ ‘ಗಂಧದಗುಡಿ’, ಸಹಜ ನಟ ಅನಂತನಾಗರ ಮೊದಲ ಚಿತ್ರ ‘ಸಂಕಲ್ಪ’, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಶ್ರೀಕೃಷ್ಣ ಆಲನಹಳ್ಳಿಯವರ ಕಾದಂಬರಿಯಾಧಾರಿತ ‘ಕಾಡು’, ಕಾಮದ ಕುರಿತು ದಿಟ್ಟ ಚಿತ್ರಣ ಹೊಂದಿದ್ದ ಅಪೂರ್ವ ನಿರ್ದೇಶಕ ಪುಟ್ಟಣ್ಣ ಕಣಗಾಲರ ‘ಎಡಕಲ್ಲು ಗುಡ್ಡದ ಮೇಲೆ’ ಮತ್ತು ಮರಣ ದಂಡನೆಯ ಕುರಿತು ತೀವ್ರ ಜಿಜ್ಞಾಸೆ ಹೊಂದಿರುವ ಡಾ. ರಾಜಕುಮಾರರ ‘ಬಿಡುಗಡೆ’ ೧೯೭೩ರಲ್ಲಿ ತೆರೆಕಂಡ ಮಹತ್ವದ ಕನ್ನಡ ಚಿತ್ರಗಳು.
ಯಾವುದೇ ಸಾಮಾಜಿಕ ಸಂದೇಶವಿಲ್ಲದ, ಹಿಂಸೆ ಮತ್ತು ಕಾಮವನ್ನು ವೈಭವೀಕರಿಸುವ ಕೃತಿಚೋರರ ಅದ್ದೂರಿ ಚಿತ್ರಗಳಿಗಿಂತ ಐವತ್ತು ವರ್ಷಗಳ ಹಿಂದೆ ಬಿಡುಗಡೆಯಾದರೂ ಸಹ ಈಗಲೂ ಪ್ರಸ್ತುತವಾಗಿರುವ ಐದು ಹಳೆಯ ಕನ್ನಡ ಚಲನಚಿತ್ರಗಳ ಕುರಿತ ಟಿಪ್ಪಣಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಹೊಸ ತಲೆಮಾರಿನ ಪ್ರೇಕ್ಷಕರು ನೋಡಲೇಬೇಕಾದ ಒಳ್ಳೆಯ ಸಿನೆಮಾಗಳಿವು. ರಾಜಮೌಳಿ, ಲೋಕೇಶ್ ಕನಗರಾಜ, ನೆಲ್ಸನ್ ದಿಲೀಪ್, ಅಟ್ಲಿ ಕುಮಾರ ಸೇರಿದಂತೆ ಇತ್ತೀಚಿನ ಕೆಲವು ಯಶಸ್ವಿ ನಿರ್ದೇಶಕರು ಕಥೆ, ಚಿತ್ರಕಥೆ ಮತ್ತು ಬಹುತೇಕ ದೃಶ್ಯಗಳನ್ನು ಅಲ್ಲಿ-ಇಲ್ಲಿ ಕದ್ದು, ಅದ್ದೂರಿಯಾಗಿ ನಿರ್ಮಿಸುತ್ತಾರೆ. ದೊಡ್ಡ ದೊಡ್ಡ ಸ್ಟಾರುಗಳ ಹೆಸರಿನ ಬಲದ ಮೇಲೆ ಇಂತಹ ಸಿನಿಮಾಗಳು ನೂರಾರು ಕೋಟಿ ರೂಪಾಯಿಗಳನ್ನು ಗಳಿಸುತ್ತವೆ. ಹಣ ಗಳಿಕೆಯೊಂದೇ ಯಶಸ್ಸಿನ ಮಾನದಂಡ ಎಂದು ನಂಬಿರುವ ಪ್ರಸ್ತುತ ಸಂದರ್ಭದಲ್ಲಿ ಸದಭಿರುಚಿ ಮತ್ತು ಸಾಮಾಜಿಕ ಸಂದೇಶವಿರುವ ಹಳೆಯ ಕನ್ನಡ ಚಿತ್ರಗಳ ವೀಕ್ಷಣೆ ಖಂಡಿತ ಒಂದು ಭಿನ್ನ ಅನುಭವ ನೀಡಬಲ್ಲದು.
ಗಂಧದಗುಡಿ (೧೯೭೩)
ಕನ್ನಡ ಚಲನಚಿತ್ರ ರಂಗದ ಯುಗ ಪುರುಷರಾದ ಡಾ. ರಾಜಕುಮಾರರ ನೂರಾ ಐವತ್ತನೆಯ ಚಿತ್ರ ಗಂಧದಗುಡಿ. ೧೯೫೪ರಲ್ಲಿ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಡಾ. ರಾಜಕುಮಾರರು ಕೇವಲ ೧೯ ವರ್ಷಗಳಲ್ಲಿ ೧೫೦ ಚಿತ್ರ ಪೂರೈಸಿದರು. ಅವರ ನೂರನೆಯ ಚಿತ್ರ ‘ಭಾಗ್ಯದ ಬಾಗಿಲು’ ತೆರೆಕಂಡಿದ್ದು ೧೯೬೮ರಲ್ಲಿ. ೧೫೦ನೆಯ ಚಿತ್ರ ತೆರೆಕಂಡಿದ್ದು ೧೯೭೩ರಲ್ಲಿ. ಅಂದರೆ ಕೇವಲ ಐದು ವರ್ಷಗಳ ಕಾಲಾವಧಿಯಲ್ಲಿ ಅಣ್ಣಾವ್ರ ಐವತ್ತು ಚಿತ್ರಗಳು ಬಿಡುಗಡೆಯಾಗಿವೆ.
ಭಾರತೀಯ ಭಾಷೆಗಳು ಮಾತ್ರವಲ್ಲ, ಏಷಿಯಾ ಖಂಡದ ಭಾಷೆಗಳಲ್ಲೇ ಅರಣ್ಯ ಸಂರಕ್ಷಣೆಯ ಕುರಿತು ತಯಾರಾದ ಮೊದಲ ಮುಖ್ಯ ವಾಹಿನಿಯ ಚಿತ್ರ ‘ಗಂಧದಗುಡಿ’. ಖ್ಯಾತ ನಿರ್ದೇಶಕ ವಿಜಯ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಕುಮಾರ್ ಎಂಬ ಅರಣ್ಯಾಧಿಕಾರಿಯ ಪಾತ್ರದಲ್ಲಿ ಡಾ. ರಾಜಕುಮಾರರು ಪಾತ್ರವೇ ತಾವಾಗಿದ್ದಾರೆ. ಬಾಲಕೃಷ್ಣ, ನರಸಿಂಹರಾಜು, ವಿಷ್ಣುವರ್ಧನ್, ಕಲ್ಪನಾ ಮತ್ತು ಆದವಾನಿ ಲಕ್ಷ್ಮಿದೇವಿಯವರಂತಹ ಖ್ಯಾತ ಕಲಾವಿದರು ಸಹ ಸೊಗಸಾಗಿ ನಟಿಸಿದ್ದಾರೆ. ಈ ಚಿತ್ರದ ಕ್ಲೈಮ್ಯಾಕ್ಸಿನಲ್ಲಿ ನಡೆದ ಒಂದು ಬಹುದೊಡ್ಡ ಅಚಾತುರ್ಯದಿಂದ ಅಣ್ಣಾವ್ರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು. ಉದಯೋನ್ಮುಖ ನಟರಾದ ವಿಷ್ಣುವರ್ಧನ ಇದರ ಆಪಾದನೆ ಹೊರಬೇಕಾಯಿತು. ಈಗಲೂ ಸಹ ಈ ಘಟನೆಯ ಕುರಿತು ತುಂಬ ಅನುಮಾನಗಳಿವೆ.
ವಿಷ್ಣುವರ್ಧನ್ ಮಾತ್ರ ಈ ಘಟನೆಯಿಂದ ತುಂಬಅವಮಾನ ಮತ್ತು ನೋವನ್ನ ಎದುರಿಸ ಬೇಕಾಯಿತು. ‘ಗಂಧದಗುಡಿ’ ಎಂಬ ಹೆಸರಿಗೆ ಅನ್ವರ್ಥದಂತಿರುವ ಕರ್ನಾಟಕದ ಸಸ್ಯ ಮತ್ತು ವನ್ಯ ಸಂಪತ್ತನ್ನು ಈ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಕಲಾತ್ಮಕ ಮತ್ತು ಜನಪ್ರಿಯ ಎರಡೂ ಶೈಲಿಯ ಸಮ್ಮಿಶ್ರಣದಿಂದ ಎಲ್ಲ ಬಗೆಯ ಪ್ರೇಕ್ಷಕರು ಮತ್ತು ಸಿನಿ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದ ಚಿತ್ರವಿದು. ‘ಗಂಧದಗುಡಿ’ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತು. ಕರ್ನಾಟಕದ ಹತ್ತು ಹಲವು ಕೇಂದ್ರಗಳಲ್ಲಿ ಬೆಳ್ಳಿ ಹಬ್ಬ ಆಚರಿಸಿತು. ಇತರೆ ಚಿತ್ರರಂಗದವರು ಸಹ ‘ಗಂಧದಗುಡಿ’ ಚಿತ್ರದ ಯಶಸ್ಸನ್ನು ಅಚ್ಚರಿಯಿಂದ ನೋಡುವಂತಾಯಿತು.
‘ಗಂಧದಗುಡಿ’ ಚಿತ್ರದ ಯಶಸ್ಸು ಸಾಮಾನ್ಯ ಕನ್ನಡಿಗರ ಮೇಲೆ ಮಾಡಿದ ಪರಿಣಾಮ ಮಾತ್ರ ಅದ್ಭುತವಾದುದು. ಈ ಚಿತ್ರದ ಪ್ರಭಾವದಿಂದಾಗಿ ಸಾವಿರಾರು ಯುವಕರು ಅರಣ್ಯ ಇಲಾಖೆಗೆ ಕೆಲಸಕ್ಕೆ ಸೇರಿದರು. ಅರಣ್ಯ ಸಂರಕ್ಷಣೆಯ ಕುರಿತು ಸಾಮಾನ್ಯ ಜನರಲ್ಲಿ ಅರಿವುಂಟುಮಾಡಿದ ಖ್ಯಾತಿ ಸಹ ‘ಗಂಧದಗುಡಿ’ಗೆ ಸಲ್ಲುತ್ತದೆ.
‘ಗಂಧದಗುಡಿ’ ಚಿತ್ರ ಹಿಂದಿಯಲ್ಲಿ ಧರ್ಮೇಂದ್ರ ನಾಯಕರಾಗಿ ‘ಕರ್ತವ್ಯ’ ಎಂಬ ಹೆಸರಿನಲ್ಲಿ ರಿಮೇಕಾಗಿದೆ. ಎನ್. ಟಿ. ರಾಮರಾವ್ ಅವರ ನಾಯಕರಾಗಿ ‘ಅಡವಿ ರಾಮುಡು’ ಎಂಬ ಹೆಸರಿನಲ್ಲಿ ತೆಲುಗಿನಲ್ಲಿ ರಿಮೇಕಾಗಿದೆ. ಸೂಪರ್ ಸ್ಟಾರ್ ಕೃಷ್ಣ ಎದುರು ಸೋತು ಮಂಕಾಗಿದ್ದ ಎನ್. ಟಿ. ರಾಮರಾವ್ ಅವರಿಗೆ ಮರುಜನ್ಮ ನೀಡಿದ ಚಿತ್ರವಿದು. ತೊಂಬತ್ತರ ದಶಕದಲ್ಲಿ ಶಿವರಾಜಕುಮಾರರು ನಟಿಸಿದ ‘ಗಂಧದಗುಡಿ – ೨’ ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸು ಗಳಿಸಲಿಲ್ಲ. ‘ಗಂಧದಗುಡಿ’ ಪ್ರಭಾವದಿಂದ ಭಾರತದ ಹಲವು ಭಾಷೆಗಳಲ್ಲಿ ಹಲವು ಚಿತ್ರಗಳು ಬಂದಿವೆ.
ಬಿಡುಗಡೆ (೧೯೭೩)
ವೈ. ಆರ್. ಸ್ವಾಮಿಯವರ ನಿರ್ದೇಶನದಲ್ಲಿ ಬಂದ ‘ಬಿಡುಗಡೆ’ ಆ ಕಾಲಕ್ಕೆ ಒಂದು ಹೊಸ ಬಗೆಯ ಪ್ರಯೋಗ. ‘ದ ಮ್ಯಾನ್ ಹೂ ಡೇರ್ಡ್’ (೧೯೪೬) ಮತ್ತು ‘ಬಿಯಾಂಡ್ ದ ರಿಸನೇಬಲ್ ಡೌಟ್ಸ್’ (೧೯೫೬) ಎಂಬ ಎರಡು ಇಂಗ್ಲಿಷ್ ಚಿತ್ರಗಳಿಂದ ಪ್ರೇರಿತವಾಗಿ, ನಿರ್ಮಿತವಾದ ಚಿತ್ರ. ಡಾ. ರಾಜಕುಮಾರ, ಭಾರತಿ, ಜಯಂತಿ, ರಾಜೇಶ್, ಸಂಪತ್, ಬಾಲಕೃಷ್ಣ, ಅಶ್ವತ್ಥ, ನರಸಿಂಹರಾಜು, ವಜ್ರಮುನಿ, ತೂಗುದೀಪ್ ಶ್ರೀನಿವಾಸ, ಶಕ್ತಿ ಪ್ರಸಾದ್ ಮತ್ತು ದಿನೇಶ ಅವರಂತಹ ಘಟಾನುಘಟಿ ನಟರು ನಟಿಸಿದ್ದ ಈ ಚಿತ್ರ ಮರಣ ದಂಡನೆಯ ಕುರಿತು ಜಿಜ್ಞಾಸೆ ನಡೆಸಿದ ಮೊದಲ ಭಾರತೀಯ ಚಿತ್ರ. ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿ ‘ಅಭಿಲಾಷ’ ಮತ್ತು ಆ ಕಾದಂಬರಿಯಾಧಾರಿತ ತೆಲುಗು ಚಿತ್ರ ‘ಬಿಡುಗಡೆ’ ಚಿತ್ರದಿಂದ ಸ್ಫೂರ್ತಿ ಮತ್ತು ಪ್ರೇರಣೆ ಪಡೆದಿವೆ. ಅತ್ಯಂತ ಸೂಕ್ಷ್ಮ ವಿಚಾರವಾದ ಮರಣ ದಂಡನೆಯ ಕುರಿತ ಕಥಾವಸ್ತುವನ್ನು ಚಲನಚಿತ್ರದಲ್ಲಿ ತುಂಬ ಅರ್ಥಪೂರ್ಣವಾಗಿ ತರಲಾಗಿದೆ.
ಕಾಡು (೧೯೭೩)
ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಭರವಸೆ ಮೂಡಿಸಿ, ನಲವತ್ತೆರಡರ ಪ್ರಾಯದಲ್ಲಿಯೇ ನಿಧನರಾದ ಶ್ರೀಕೃಷ್ಣ ಆಲನಹಳ್ಳಿಯವರ ಕಾದಂಬರಿಯಾಧಾರಿತ ಚಿತ್ರ ‘ಕಾಡು’. ಗಿರೀಶ ಕಾರ್ನಾಡರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಕಾದಂಬರಿಗೆ ಸಂಪೂರ್ಣ ನ್ಯಾಯ ಸಲ್ಲಿಸಿದೆ. ಹಳೆಯ ಮೈಸೂರು ಪ್ರದೇಶದ ಒಂದು ಕಾಲಘಟ್ಟದ ಗ್ರಾಮೀಣ ಸಂಸ್ಕೃತಿಯನ್ನು ಜೀವಂತವಾಗಿ ಕಟ್ಟಿಕೊಡುವಲ್ಲಿ ‘ಕಾಡು’ ಚಿತ್ರ ಬಹುತೇಕ ಯಶಸ್ವಿಯಾಗಿದೆ. ಲೋಕೇಶ್, ಅಮರಿಶ್ ಪುರಿ, ನಂದಿನಿ ಭಕ್ತವತ್ಸಲ ಮತ್ತು ಮಾಸ್ಟರ್ ನಟರಾಜ ನಟನೆಯ ಈ ಚಿತ್ರ ಕಲಾತ್ಮಕ ಚಿತ್ರವಾದರೂ ಸಹ ವ್ಯಾಪಾರಿ ದೃಷ್ಟಿಯಿಂದ ಸಹ ಯಶಸ್ವಿಯಾಗಿ ನಿರ್ಮಾಪಕರ ಕೈ ಹಿಡಿಯಿತು.
ನಂದಿನಿ ಭಕ್ತವತ್ಸಲ ಮತ್ತು ಮಾಸ್ಟರ್ ನಟರಾಜ ಇಬ್ಬರೂ ಕಮಲತ್ತೆ ಮತ್ತು ಕಿಟ್ಟಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ನಂದಿನಿಯವರಿಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಈ ಚಿತ್ರದ ನಟನೆಗಾಗಿ ಮಾಸ್ಟರ್ ನಟರಾಜನಿಗೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲಂಫೇರ್ ಪ್ರಶಸ್ತಿ ಸಹ ದೊರೆತಿದೆ. ಆ ಕಾಲದಲ್ಲಿ ತುಂಬ ಸದ್ದು ಮಾಡಿದ ಈ ಚಿತ್ರ ಕಮಲ್ ಹಾಸನ್, ಮಮ್ಮುಟ್ಟಿ ಸೇರಿದಂತೆ ಖ್ಯಾತನಾಮರನೇಕರ ಮೆಚ್ಚುಗೆ ಗಳಿಸಿತ್ತು. ಗಿರೀಶ ಕಾರ್ನಾಡ ಮತ್ತು ಶ್ರೀಕೃಷ್ಣ ಆಲನಹಳ್ಳಿಯವರಿಗೆ ತಾರಾ ವರ್ಚಸ್ಸು ತಂದು ಕೊಟ್ಟ ಚಿತ್ರವಿದು.
ಸಂಕಲ್ಪ (೧೯೭೩)
ಸಹಜ ನಟನೆಯಿಂದಾಗಿ ಭಾರತದಲ್ಲೇ ಅಪರೂಪದ ನಟರೆಂದು ಖ್ಯಾತಿ ಪಡೆದ ಕನ್ನಡದ ಹೆಮ್ಮೆಯ ನಟ ಅನಂತನಾಗರ ಮೊದಲ ಚಿತ್ರ ‘ಸಂಕಲ್ಪ’. ಪಿ. ವಿ. ನಂಜರಾಜ್ ಅರಸ್ ನಿರ್ದೇಶನದ ಈ ಕಪ್ಪು ಬಿಳುಪು ಚಿತ್ರ ಧರ್ಮ ಮತ್ತು ವಿಜ್ಞಾನದ ಸಂಘರ್ಷದ ಕುರಿತ ಕಥೆ. ಮೂಢನಂಬಿಕೆಗಳು ಮತ್ತು ಆಧುನಿಕ ವಿಜ್ಞಾನದ ಮುಖಾಮುಖಿ ಈ ಚಿತ್ರದಲ್ಲಿದೆ. ಧರ್ಮಗುರುವಾಗಿ ಸಿ. ಆರ್. ಸಿಂಹ ಮತ್ತು ಮನಶಾಸ್ತ್ರಜ್ಞರಾಗಿ ಅನಂತನಾಗ್ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಇದು ಅನಂತನಾಗರ ಮೊದಲ ಚಿತ್ರವಾದರೂ ಅಭಿನಯದಲ್ಲಿ ಅವರು ಪೂರ್ಣಾಂಕ ಗಳಿಸುತ್ತಾರೆ. ಈ ಚಿತ್ರಕ್ಕೆ ವಿವಿಧ ವಿಭಾಗಗಳಲ್ಲಿ ಹಲವು ರಾಜ್ಯ ಪ್ರಶಸ್ತಿಗಳು ದೊರೆತಿವೆ. ‘ಸಂಕಲ್ಪ’ದ ಟೈಟಲ್ ಕಾರ್ಡಿನಲ್ಲಿ ನಾಯಕ ಅನಂತನಾಗರ ಹೆಸರು ಅನಂತ ನಾಗರಕಟ್ಟೆ ಎಂದಿದೆ. ಮುಂದೆ ೧೯೭೪ರಲ್ಲಿ ತೆರೆಕಂಡ ಹಿಂದಿ ಕ್ಲಾಸಿಕ್ ‘ಅಂಕುರ್’ ಚಿತ್ರದಿಂದ ಅನಂತನಾಗ್ ಎಂಬ ಹೆಸರು ಖಾಯಮ್ಮಾಗಿ ಉಳಿಯಿತು.
ಎಡಕಲ್ಲು ಗುಡ್ಡದ ಮೇಲೆ (೧೯೭೩)
ಭಾರತದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಪುಟ್ಟಣ್ಣ ಕಣಗಾಲರ ವಿಶಿಷ್ಟ ಸಿನಿಮಾ ‘ಎಡಕಲ್ಲು ಗುಡ್ಡದ ಮೇಲೆ’. ಭಾರತೀಸುತರ ಅದೇ ಹೆಸರಿನ ಕಾದಂಬರಿಯಾಧಾರಿತ ಈ ಚಿತ್ರ ಪುಟ್ಟಣ್ಣನವರ ಕೈಯಲ್ಲಿ ಸುಂದರ ಕಲಾಕೃತಿಯಾಗಿದೆ. ವಿವಾಹಿತ ಮಹಿಳೆಯೊಬ್ಬಳ ವಿವಾಹಬಾಹಿರ ಸಂಬಂಧ ಮತ್ತು ಅದು ಉಂಟು ಮಾಡುವ ಮನಃಕ್ಲೇಶಗಳ ಸುತ್ತ ನಡೆಯುವ ಕಥೆ ಈ ಚಿತ್ರದ ಕೇಂದ್ರದಲ್ಲಿದೆ. ವಿವಾಹಬಾಹಿರ ಸಂಬಂಧದ ಕುರಿತ ಕಥೆಯನ್ನು ಚಿತ್ರವನ್ನಾಗಿ ಮಾಡುವಾಗ ತುಂಬ ಜೋಕೆಯಿಂದ ಇರಬೇಕಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದೊಂದು ವಯಸ್ಕರ ಚಿತ್ರವಾಗುವ ಅಪಾಯ ತಪ್ಪಿದ್ದಲ್ಲ. ಆದರೆ ಅಪೂರ್ವ ಪ್ರತಿಭೆಯ ಪುಟ್ಟಣ್ಣನವರು ಇಂತಹ ಒಂದು ಸೂಕ್ಷ್ಮ ವಿಷಯವನ್ನು ಸರ್ವಜನಪ್ರಿಯವಾಗುವಂತೆ ಸೊಗಸಾಗಿ ತೆರೆಯ ಮೇಲೆ ತಂದಿದ್ದಾರೆ.
ಈ ಚಿತ್ರದಲ್ಲಿ ಕಥೆಯನ್ನು ಪ್ರೆಸೆಂಟ್ ಮಾಡಿರುವ ರೀತಿ ತುಂಬ ಭಿನ್ನವಾಗಿದೆ. ವಿರಹದಿಂದ ಪರಿತಪಿಸುವ ಮಧ್ಯವಯಸ್ಕ ಮಹಿಳೆಯ ಅಂತರಂಗದ ತೊಳಲಾಟವನ್ನು ಚಿತ್ರೀಕರಿಸಿದ ಶಾಟುಗಳು ಮತ್ತು ಸಂದರ್ಭೋಚಿತ ಹಾಡುಗಳು ಚಿತ್ರದ ಪರಿಣಾಮವನ್ನು ಹೆಚ್ಚಿಸಿವೆ. ಕಥೆಯ ಅಂತ್ಯವೂ ಸಹ ಅಷ್ಟೇ ತೀವ್ರವಾಗಿ ಮೂಡಿ ಬಂದಿದೆ. ಅದಕ್ಕೆಂದೇ ಆ ಕಾಲದಲ್ಲಿ ಈ ಚಿತ್ರ ಒಂದು ಸಂಚಲನವನ್ನೇ ಉಂಟುಮಾಡಿತ್ತು. ಜಯಂತಿ ಮತ್ತು ಆರತಿಯವರ ಅಭಿನಯ ಈ ಚಿತ್ರದ ಹೈಲೈಟ್. ಬಹುಶಃ ಇದು ಜಯಂತಿಯವರ ಅತ್ಯುತ್ತಮ ಅಭಿನಯದ ಮೊದಲ ಐದು ಚಿತ್ರಗಳಲ್ಲೊಂದು. ಮೊದಲು ಈ ಪಾತ್ರ ಒಪ್ಪಿಕೊಳ್ಳಲು ಹಿಂದೇಟು ಹಾಕಿದ ಜಯಂತಿಯವರ ಮನವೊಲಿಸಿ ಅವರಿಂದ ಅದ್ಭುತ ಅಭಿನಯ ಹೊರತೆಗೆಸಿದ ಖ್ಯಾತಿ ಪುಟ್ಟಣ್ಣನವರಿಗೆ ಸಲ್ಲುತ್ತದೆ. ಮುಂದೆ ಭಾರತದ ಹಲವು ಭಾಷೆಗಳಲ್ಲಿ ಬಂದ ಈ ಬಗೆಯ ಚಿತ್ರಗಳಿಗೆ ಮುನ್ನುಡಿ ಬರೆದ ಹೆಗ್ಗಳಿಕೆ ಸಹ ಪುಟ್ಟಣ್ಣ ಕಣಗಾಲರದು. ಈ ಬಗೆಯ ಚಿತ್ರಗಳಿಗೆ ಮಲಯಾಳಂ ಭಾಷೆಯಲ್ಲಿ ಸಿಕ್ಕಷ್ಟು ಯಶಸ್ಸು ಉಳಿದ ಭಾಷೆಗಳಲ್ಲಿ ಸಿಗಲಿಲ್ಲ ಎಂಬುದು ಗಮನಾರ್ಹ ಸಂಗತಿ.
1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಸುವರ್ಣ ಸಂಭ್ರಮದ ಐದು ಚಲನಚಿತ್ರಗಳು”
ಸುವರ್ಣಸಂಭ್ರಮದಲ್ಲಿರುವ ಸದಭಿರುಚಿಯ ಚಿತ್ರಗಳ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದೀರಿ. ೧೯೭೩ರಲ್ಲಿ ತೆರೆಕಂಡ ಬಿಡುಗಡೆ ಎಂಬ ಚಿತ್ರದ ಬಗ್ಗೆ ಮರಣದಂಡನೆಯ ಬಗ್ಗೆ ಜಿಜ್ಞಾಸೆ ನಡೆಸಿದ ಮೊದಲ ಭಾರತೀಯ ಚಿತ್ರ ಎಂದು ಉಲ್ಲೇಖಿಸಿದ್ದೀರಿ. ಆದರೆ ಈ ಚಿತ್ರಕ್ಕಿಂತ ಮೊದಲು ತೆರೆಕಂಡ ೧೯೬೦ರಲ್ಲಿ ‘ಕಾನೂನ್’, (ಅಶೋಕ್ ಕುಮಾರ್, ರಾಜೇಂದ್ರ ಕುಮಾರ್, ನಂದಾ)೧೯೬೯ರಲ್ಲಿ ‘ಇತ್ತೆಫಾಕ್'(ರಾಜೇಶ ಖನ್ನಾ, ನಂದಾ) ಚಿತ್ರಗಳು ಮರಣದಂಡನೆಯನ್ನು ವಸ್ತುವನ್ನಾಗಿಟ್ಟುಕೊಂಡಿದ್ದವು. ಆದ್ದರಿಂದ ‘ಬಿಡುಗಡೆ’ಯು ಮರಣದಂಡನೆಯನ್ನು ವಸ್ತುವನ್ನಾಗಿ ಇಟ್ಟುಕೊಂಡ ಮೊದಲ ಕನ್ನಡ ಚಿತ್ರ ಎನ್ನಬಹುದು.