ನೇತ್ರಾ
ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ನನ್ನ ಏಳು ವರ್ಷದ ಮಗು ಸೂರಜ್ನೊಂದಿಗೆ ಕುಳಿತಿದ್ದೆ. ಕುಳಿತಿದ್ದೆ ಎನ್ನುವುದಕ್ಕಿಂತ ಏನೋ ಗಹನವಾದ ಯೋಚನೆಯಲ್ಲಿ ಕಳೆದುಹೋಗಿದ್ದೆ ಎನ್ನಬಹುದು. ದೃಷ್ಟಿ ಎಲ್ಲೋ ನೆಟ್ಟಿತ್ತು. ಸೂರಜ್ ಗಾಬರಿಯಿಂದ ನ್ಯಾಯಾಲಯದ ಕಟ್ಟಡ, ಆವರಣದಲ್ಲಿ ನಿಂತಿದ್ದ ಕಾರು, ಬೈಕು, ಅತ್ತಿಂದಿತ್ತ ಓಡಾಡುತ್ತಿದ್ದ ಜನರನ್ನು ಕುತೂಹಲದಿಂದ ನೋಡುತ್ತಿದ್ದ.
ನಾನು, ಅರವಿಂದ್ ಇಬ್ಬರೂ ಪರಸ್ಪರ ಅರಿತು, ಪ್ರೀತಿಸಿ, ಜವಾಬ್ದಾರಿ ಅರಿತು ಮದುವೆಯಾದೆವಲ್ಲವೇ? ಅರೆಕ್ಷಣ ಬಿಟ್ಟಿರಲಾರದ ನಾವು ಈಗ ಹೆಚ್ಚು ಕಡಿಮೆ ಒಂದು ವರ್ಷದಿಂದ ದೂರವಾಗಿದ್ದೇವೆ, ಒಂಟಿ ಜೀವನ ನಡೆಸುತ್ತಿಲ್ಲವೇ? ಕೋರ್ಟು ಕಚೇರಿ ಅಂತ ಅಲೆದಾಡುತ್ತಿದ್ದೇವೆ. ಇಬ್ಬರನ್ನು ಒಂದುಗೂಡಿಸಬೇಕೆನ್ನುವ ಹಿತೈಸಿಗಳ ಮಾತುಗಳು ರುಚಿಸಲಿಲ್ಲ. ಪ್ರೀತಿ ಎಲ್ಲೋ, ಎಂದೋ ಮಾಯವಾಗಿ ಹೋಯಿತು? ಜವಾಬ್ದಾರಿ ಅರಿವಿಲ್ಲದೇ ಪಲಾಯನಗೈದಿತು. ಸಂಸಾರದಲ್ಲಿನ ಪರಸ್ಪರ ನಿಷ್ಠೆ ಬೆಲೆ ಕಳೆದುಕೊಂಡು ಬಿಟ್ಟಿತು. ಒಂದಲ್ಲ, ಎರಡಲ್ಲ, ಒಂಭತ್ತು ವರ್ಷಗಳ ನಮ್ಮ ಅರ್ಥಪೂರ್ಣ ದಾಂಪತ್ಯ ಜೀವನ ತನ್ನ ಮೆರುಗನ್ನು ಕಳೆದುಕೊಂಡು ಬಿಟ್ಟಿದೆ. ಬಣ್ಣಗೆಟ್ಟು, ಮಾಸಿದ ಪರದೆಯಂತಾಗಿವೆ ನಮ್ಮ ಮುಖಗಳು.
ನಮ್ಮ ಕಿತ್ತಾಟ, ಅಹಮಹಿಕೆಯಲ್ಲಿ ಮಕ್ಕಳು ಅನಾಥರಾಗುತ್ತಿದ್ದಾರೆನ್ನುವುದು ಇಬ್ಬರಿಗೂ ತಿಳಿದಿದ್ದೇ. ಎಲ್ಲಾ ಗೊತ್ತಿದ್ದೂ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ತಯಾರಿಲ್ಲ. ಏಳು ವರ್ಷದ ಸೂರಜ್ ನನ್ನ ಜೊತೆಗಿದ್ದರೆ ಐದು ವರ್ಷದ ಸಾನ್ವಿ ಅರವಿಂದನ ಜೊತೆಗಿದ್ದಾಳೆ. ಸೂರಜ್, ಸಾನ್ವಿ ಇಬ್ಬರ ರಂಪಾಟ ನಮಗಿನ್ನೂ ಅರ್ಥವಾಗಿಲ್ಲ. ನಮ್ಮಿಬ್ಬರ ಹೃದಯಗಳು ಮಿಡಿಯುತ್ತಿಲ್ಲ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತಂತೆ. ಹಾಗಾಗಿದೆ ನಮ್ಮಿಬ್ಬರಲ್ಲಿ. ಹೃದಯ, ಮನಸ್ಸಿಗೆ ಹತ್ತಿರದ ಹಲವು ಆತ್ಮೀಯರು ನಮ್ಮಿಬ್ಬರಲ್ಲಿ ಸಮನ್ವಯತೆಯನ್ನು ಮೂಡಿಸಲು ಪ್ರಯತ್ನಿಸಿದರು. ಅವರೇನೇ ತಿಪ್ಪರಲಾಗ ಹೊಡೆದರೂ ನಮ್ಮಿಬ್ಬರ ಕಲ್ಲು ಮನಸ್ಸುಗಳು ಕರಗಲೇ ಇಲ್ಲವಲ್ಲ? ಪೂರ್ವಾಗ್ರಹ ಪೀಡಿತರಾದವರನ್ನು ಬದಲಿಸಲು ಸಾಧ್ಯವೇ? ಸಂಶಯದ ಹುಳು ಅರವಿಂದನ ಮೆದುಳನ್ನು ತಿಂದು ತೇಗತೊಡಗಿವೆ. ಶಕ್ತಿಶಾಲಿಯಾದ ಸಂಶಯದ ಪ್ರತಾಪಕ್ಕೆ ಪ್ರೀತಿ, ಮಾನವೀಯತೆ, ಮೌಲ್ಯಗಳು ಚಿಂದಿಚಿಂದಿಯಾಗಿ ಬಿಟ್ಟಿವೆ. ಬೇರೆಯವರ ಪಾಲಿಗಿದ್ದ ನಮ್ಮ ಆದರ್ಶದ, ನೀತಿಯ ಹಿತವಚನಗಳು ಪುಸ್ತಕದ ಬದನೆಕಾಯಿಗಳಂತೆ ಬೊಗಳೆಯಾದವಲ್ಲವೇ? ನಾನೊಂದು ತೀರದಲ್ಲಿ, ಅವನೊಂದು ತೀರದಲ್ಲಿ ವಿಹರಿಸುತ್ತಿರುವ ನಾವಿಬ್ಬರೂ ಉತ್ತರಧ್ರುವ, ದಕ್ಷಿಣಧ್ರುವಗಳಂತಾಗಿದ್ದೇವೆ. ಇಬ್ಬರ ನಡುವಿನ ಅಂತರ ದಿನದಿಂದ ದಿನಕ್ಕೆ ಹಿಗ್ಗುತ್ತಲೇ ಸಾಗಿದೆ.”
“ಅಮ್ಮಾ ಸಮೀರ್ ಅಂಕಲ್ ಬಂದ್ರು” ಎಂದು ಸೂರಜ್ ತೋಳಿಡಿದು ಅಲುಗಾಡಿಸಿದಾಗ ನನ್ನ ಯೋಚನಾ ಲಹರಿಗೆ ತಡೆಬಿತ್ತು. ಸಮೀರ್ ಆಗಲೇ ನಮ್ಮನ್ನು ಸಮೀಪಿಸಿದ್ದ.
“ಅಯ್ಯೋ ಸಮೀರ್ ಭೈಯ್ಯಾ, ನೀವೇಕೆ ಇಲ್ಲಿಗೆ ಬಂದ್ರಿ? ನಿಮ್ಮನ್ನು ಕಂಡ್ರೆ ಅರವಿಂದನ ಹಾರಾಟ ಆಕಾಶದತ್ತೆರಕ್ಕೆ ಜಿಗಿಯುತ್ತದೆ. ಆದ್ರೂ ನಾನು ಹೀಗಂದೆ ಅಂತ ಬೇಸರ ಮಾಡಿಕೊಳ್ಳಬೇಡಿ.”
“ಛೇ, ಛೇ. ನಿಮ್ಮ ಮಾತಿನಿಂದ ನಂಗೇನೂ ಬೇಸ್ರ ಇಲ್ಲ. ಬೆಹನ್ಜೀ, ನಿಮ್ಮ ಕಷ್ಟ ನಂಗೆ ನೋಡ್ಲಿಕ್ಕೆ ಆಗ್ಲಿಲ್ಲ. ಬರಬಾರ್ದು ಅಂತ ಅಂದ್ಕೊಂಡಿದ್ರೂ ಕೊನೇ ಗಳಿಗೇಲಿ ಮನಸ್ಸಿಗೆ ತಡೆದುಕೊಳ್ಳಲಾಗ್ಲಿಲ್ಲ, ಅದಕ್ಕೇ ಬಂದೆ. ನನ್ನಿಂದ ನಿಮ್ಗೆ ತೊಂದ್ರೆಯಾಗ್ತಿದೆ ಅಂತ ಅನಿಸಿದ್ರೆ ನನ್ನ ಕ್ಷಮಿಸಿಬಿಡ್ರಿ. ಆ ಅಲ್ಲಾ ನಿಮ್ಗೆ ಒಳ್ಳೇದೇ ಮಾಡ್ತಾನೆ. ಎಲ್ಲಾ ಸರಿ ಹೋಗುತ್ತೆ. ಇನ್ನೇನು ನಿಮ್ಮ ಸಂಕಷ್ಟದ ದಿನಗಳು ದೂರವಾಗ್ತವೆ.” ಸಮೀರ್ ಪ್ರತಿಕ್ರಿಯಿಸಿದ್ದ.
“ಭೈಯ್ಯಾ, ಇಂದಲ್ಲ ನಾಳೆ ನನ್ನ ಸಂಸಾರ ಸರಿ ಹೋಗುತ್ತೆ ಅಂದ್ಕೊಂಡು ಜೀವನ ಸವೆಸುತ್ತಿದ್ದೇನೆ. ನೀವೇನೋ ಶುಭ ನುಡಿಯುತ್ತಿದ್ದೀರಿ. ಆದ್ರೆ ಆ ಒಳ್ಳೇ ದಿನಗಳು ಅದೆಂದು ಬರುತ್ತವೆಯೋ ಏನೋ? ನನಗೊಂದೂ ತಿಳಿಯುತ್ತಿಲ್ಲ?”
“ಬಹೆನ್ಜೀ, ಅಷ್ಟು ಬೇಗ ಹೃದಯವನ್ನು ಬರಿದಾಗಿಸಿಕೊಳ್ಳಬೇಡಿರಿ. ತಾಳ್ಮೆ ಇರ್ಲಿ. ನೀವೆಷ್ಟಾದರೂ ಕ್ಷಮಯಾಧರಿತ್ರಿ.”
“ಅಮ್ಮಾ, ಪಪ್ಪ, ಸಾನ್ವಿ ಬರ್ತಿದ್ದಾರೆ. ನಾನು ಸಾನ್ವಿ ಜೊತೆ ಮಾತಾಡ್ಬೇಕು, ಆಟ ಆಡ್ಬೇಕು” ಅಂತ ಹೇಳುತ್ತ ಸೂರಜ್ ಚೆಂಗನೆ ನೆಗೆದಿದ್ದ. ನನ್ನ, ಸಮೀರನ ಮಾತುಗಳು ನಿಂತಿದ್ದವು ತಟ್ಟನೇ.
“ಪುಟ್ಟಾ, ಮೆಲ್ಲಗೇ, ಮೆಲ್ಲಗೇ. ನಿಧಾನ ಕಣೋ.” ನನ್ನ ಮಾತನ್ನು ಕಿವಿಯಲ್ಲಿ ಹಾಕಿಕೊಳ್ಳದ ಸೂರಜ್ ಶರವೇಗದಲ್ಲಿ ಜಿಗಿಯುತ್ತ ಒಂದು ಕ್ಷಣದೊಳಗೆ ಅಪ್ಪನ ತೆಕ್ಕೆಯೊಳಗೆ ಸೇರಿಕೊಂಡು ಕೆಳಗಿಳಿದು ಸಾನ್ವಿಯ ಕೈಹಿಡಿದುಕೊಂಡು ನ್ಯಾಯಾಲಯದ ಆವರಣದಲ್ಲಿದ್ದ ಮರದ ನೆರಳಿನತ್ತ ಓಡಿದ. ಅರವಿಂದ್ ನನ್ನ ಮತ್ತು ಸಮೀರನ ಕಡೆಗೆ ದುರುಗುಟ್ಟಿ ನೋಡುತ್ತಾ ತನ್ನ ವಕೀಲರನ್ನು ಹುಡುಕುತ್ತಾ ಹೊರಟ.
ನ್ಯಾಯಾಧೀಶರು ಅರವಿಂದನ ವಕೀಲರ ವಾದವನ್ನು ಆಲಿಸಿ ಮುಂದಿನ ತಿಂಗಳ ಮೂವತ್ತಕ್ಕೆ ತೀರ್ಪನ್ನು ನೀಡುವುದಾಗಿ ಹೇಳಿದರು.
ಅರವಿಂದ್
ಅಂದು ಸಂಕ್ರಾಂತಿ ಹಬ್ಬದ ಮರುದಿನ. ಅಂಗಡಿಯಲ್ಲಿ ಅಂಥ ಬಿಸಿನೆಸ್ ಇರ್ಲಿಲ್ಲ. ಕೆಲಸದ ಹುಡುಗ ರಾಮೂ ಸಹ ಬಂದಿರಲಿಲ್ಲ. ಟೈಂಪಾಸ್ಗಾಗಿ ಅಂದಿನ ದಿನಪತ್ರಿಕೆಯನ್ನು ತಿರುವಿ ಹಾಕುತ್ತಿದ್ದೆ.
“ರೀ, ಒಂದಿಷ್ಟು ಈ ದಿನಸಿ ಸಾಮಾನು ಕೊಡ್ರಿ.” ಜೇನಂಥ ಇಂಪಾದ ದನಿಯೊಂದು ಕೇಳಿಬಂದಾಗ ಪತ್ರಿಕೆಯಲ್ಲಿ ನೆಟ್ಟಿದ್ದ ದೃಷ್ಟಿಯನ್ನು ತಟ್ಟನೇ ತೆಗೆದು ಕೌಂಟರಿನಾಚೆ ನೋಡಿದೆ. ಹುಡುಗಿ ತರಹದ ಸ್ತ್ರೀಯೊಬ್ಬರು ನಿಂತಿದ್ದರು. ಮುದ್ದಾದ ಮುಖ ಅಂತ ಮನಸ್ಸು ಥಟ್ಟಂತ ಗುರುತಿಸಿತ್ತು.
“ಹೇಳ್ರೀ ಮೇಡಂ, ಏನೇನು ಬೇಕಾಗಿತ್ತು?” ಅವರ ಮುಖದಲ್ಲೇ ಕಣ್ಣಿಟ್ಟು ಕೇಳಿದ್ದೆ.
“ಈ ಲಿಸ್ಟ್ ಪ್ರಕಾರ ಸಾಮಾನು ಕೊಡ್ರಿ” ಎಂದೆನ್ನುತ್ತಾ ಚೀಟಿಯೊಂದನ್ನು ನನ್ನ ಕೈಗೆ ಕೊಟ್ರು. “ಇವರು ಇದೇ ಮೊದಲ ಸಲ ನನ್ನ ಅಂಗಡಿಗೆ ಬರುತ್ತಿದ್ದುದು” ಎಂದು ಮನಸ್ಸು ಲೆಕ್ಕಾಚಾರ ಹಾಕುತ್ತಿತ್ತು.
“ಮೇಡಂ, ನೀವು ಈ ಏರಿಯಾಕ್ಕೆ ಹೊಸಬ್ರಾ…?”
“ಹೌದು, ನಾನು ಈ ಏರಿಯಾಕ್ಕೆ ಹೊಸಬಳು. ಈ ವಿವೇಕಾನಂದ ನಗರದ ಇಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ನಾನು ಶಿಕ್ಷಕಿ.” ಮೇಡಂ ಹೇಳಿದ್ದಳು.
ಅವರು ಹೇಳಿದ ಸಾಮಾನುಗಳನ್ನು ಪ್ಯಾಕ್ಮಾಡಿ ಕ್ಯಾರಿಬ್ಯಾಗೊಂದರಲ್ಲಿ ಹಾಕಿಕೊಡುತ್ತಾ, “ಮೇಡಂ, ನನ್ನ ಅಂಗ್ಡೀಲಿ ಎಲ್ಲಾ ಸಾಮಾನು ರೀಜನೆಬಲ್ ದರದಲ್ಲಿ ಸಿಗುತ್ತೆ. ನಿಮಗೆ ಅಂಗಡಿಗೆ ಬರಲು ಆಗದಿದ್ದರೆ ಫೋನ್ ಮಾಡಿ ಹೇಳಿದರೆ ನಮ್ಮ ಅಂಗಡಿಯ ಹುಡುಗನೊಂದಿಗೆ ಸಾಮಾನುಗಳನ್ನು ಮನೆಗೆ ತಲುಪಿಸುತ್ತೇನೆ. ದುಡ್ಡನ್ನು ತಿಂಗಳಿಗೊಮ್ಮೆ ಕೊಟ್ಟರೂ ನಡೆಯುತ್ತೆ ನಿಮ್ಮ ಸಂಬಳವಾದ ನಂತರ” ಎಂದಿದ್ದೆ.
“ಹಾಗೇ ಆಗಲಿ, ನೋಡುವಾ” ಅಂತ ಹೇಳಿ ಮುಗುಳುನಗೆ ಬೀರಿ ಮೇಡಂ ಹೆಜ್ಜೆ ಹಾಕಿದ್ದಳು ಲಗೇಜಿನೊಂದಿಗೆ.
ಮುಂದಿನ ಎರಡು-ಮೂರು ವಾರಗಳಲ್ಲಿ ಆ ಮೇಡಂ ಮೂರ್ನಾಲ್ಕು ಸಾರೆ ಅಂಗಡಿಗೆ ಬಂದು ಹೋದಳು. ಹೊಸದಾಗಿ ಬಂದಿದ್ರಿಂದ ಈ ಸಾಮಾನು, ಆ ಸಾಮಾನು ಅಂತ ನೆನಪಿಸಿಕೊಳ್ತಾ ತಿರುಗಾ-ಮುರುಗಾ ಬಂದಿದ್ದಳು. ಹಾಗೇ ಮಾತುಕತೆಗಳಲ್ಲಿ ನೇತ್ರಾ ಅಂತ ತನ್ನ ಹೆಸರನ್ನು ಹೇಳಿ ನನ್ನ ಹೆಸರನ್ನೂ ಕೇಳಿ ತಿಳಿದುಕೊಂಡಿದ್ದಳು. ಪ್ರತಿಸಾರೆ ಕ್ಯಾಷ್ ಅಂಡ್ ಕ್ಯಾರಿ ಅಂತ ನಗದು ವ್ಯಾಪಾರವನ್ನೇ ಮಾಡಿದ್ದಳು. ಮುಂದಿನ ತಿಂಗಳಿನಿಂದ ತಿಂಗಳಿಗೊಮ್ಮೆ ಹಣ ಕೊಡುವುದರ ಬಗ್ಗೆಯೂ ಹೇಳಿದ್ದಳು.
ನೇತ್ರಾ
ವಿಜಯಪುರ ಜಿಲ್ಲೆಯ ಕುಗ್ರಾಮವೊಂದು ನನ್ನ ಊರು. ಬಿಎ, ಡಿಎಡ್ ಮುಗಿಯುತ್ತಿದ್ದಂತೆ ನನಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ವಿವೇಕಾನಂದ ನಗರದ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಸಿಕ್ಕಿತ್ತು. ಅನಾಥಳಾಗಿದ್ದ ನಾನು ಹಿಂದೆ ಮುಂದೆ ಯೋಚಿಸದೇ ಥಟ್ಟಂತ ಇಲ್ಲಿನ ಶಾಲೆಗೆ ಸೇರಿಕೊಂಡಿದ್ದೆ. ಮುಂದಿನ ತಿಂಗಳಿನಿಂದ ದಿನಸಿ ಸಾಮಾನು ಖರೀದಿಸಿದ್ದನ್ನು ಅರವಿಂದ್ ಚಿಕ್ಕ ಪುಸ್ತಕವೊಂದರಲ್ಲಿ ಬರೆದು ಕೊಡುತ್ತಿದ್ದ. ಆ ತಿಂಗಳ ನಂತರ ಹಣವನ್ನು ಕೊಟ್ಟಿದ್ದೆ ನನ್ನ ಕೈಯಲ್ಲಿದ್ದ ದುಡ್ಡಿನಿಂದ. ನಾನು ಕರ್ತವ್ಯಕ್ಕೆ ಹಾಜರಾಗಿ ಮೂರು ತಿಂಗಳಾದರೂ ಸಂಬಳ ನನ್ನ ಕೈಸೇರಲಿಲ್ಲ. ಅರವಿಂದನಿಗೆ ಉದ್ರಿ ಹೇಳಿ ದಿನಸಿ ತರಬೇಕಾಗಿತ್ತು. ಅನಿವಾರ್ಯವೂ ಆಗಿತ್ತು. ನಾನು ಕೊಂಚ ಮುಜುಗರದಿಂದ ನನ್ನ ಅಸಹಾಯಕತೆಯನ್ನು ಅವನೆದುರು ತೋಡಿಕೊಂಡಾಗ, “ಮೇಡಂ, ಇದು ನನಗೇನು ಹೊಸದಲ್ಲ. ಹೊಸದಾಗಿ ಉದ್ಯೋಗಕ್ಕೆ ಸೇರಿಕೊಂಡ ಮೇಲೆ ನಿಮ್ಮ ಇಲಾಖೆಯಲ್ಲಿ ಸಂಬಳವಾಗಬೇಕಾದರೆ ಕನಿಷ್ಠ ಮೂರು ತಿಂಗಳಾದರೂ ಬೇಕು. ಸಂಬಳವಾದ ನಂತರ ಪೇಮೆಂಟ್ ಮಾಡಿರಿ” ಎಂದು ಹೇಳಿ ಮಾನವೀಯತೆ ಮೆರೆದಿದ್ದ.
ನಮ್ಮ ಶಾಲೆಯ ಸಹೋದ್ಯೋಗಿ ವಿನಯನ ಜೊತೆಗೆ ಬಿಇಓ ಮತ್ತು ತಾಲೂಕು ಉಪಖಜಾನೆ ಕಚೇರಿಗಳಿಗೆ ಹೋಗಿದ್ದೆ. ಆವಾಗ ಪರಿಚಯವಾದವರೇ ಸಮೀರ್ ಮತ್ತು ಸುಂದರ್. ಮುಂದಿನ ದಿನಗಳಲ್ಲಿ ಅದೇನೋ ಒಂದು ರೀತಿಯ ಅವಿನಾಭಾವ ಸಂಬಂಧ ಬೆಳೆಯಿತು ನಮ್ಮಲ್ಲಿ. ಬೆಹೆನ್ಜೀ ಎಂದು ಸಮೀರ್ ಆತ್ಮೀಯವಾಗಿ ಸಂಬೋಧಿಸಿದಾಗಲೇ ಅವನು ಮುಸ್ಲಿಂ ಧರ್ಮದವನೆಂದು ನನಗೆ ಗೊತ್ತಾಗಿತ್ತು. ಸುಂದರ್ ಯಾವಾಗಲೂ ಸಿಸ್ಟರ್, ಸಿಸ್ಟರ್ ಎಂದು ಅಕ್ಕರೆಯಿಂದ ಕರೆಯುತ್ತಿದ್ದ. ಅಣ್ಣ, ತಮ್ಮಂದಿರಿಲ್ಲದ ನನಗೆ ಅವರಿಬ್ಬರೂ ಅಣ್ಣಂದಿರಾಗಿಬಿಟ್ಟರು.
ತುಸು ದಿನಗಳಲ್ಲಿಯೇ ಅರವಿಂದ್ ತುಂಬಾ ಹತ್ತಿರದವನಾಗಿಬಿಟ್ಟ. ಅವನೂ ಉತ್ಸಾಹಿ ಕನಸುಗಾರ ಯುವಕನಾಗಿದ್ದ. ಅದೊಂದು ದಿನ ಮಾತಿನ ಸಮಯದಲ್ಲಿ, “ನೀವು ತುಂಬಾ ಲಕ್ಕಿ ನೋಡ್ರಿ ಮೇಡಂ. ಬಿಎ, ಡಿಎಡ್ ಮಾಡುತ್ತಲೇ ನೌಕರಿ ಗಿಟ್ಟಿಸಿಕೊಂಡಿರಿ. ಹೆಣ್ಮಕ್ಕಳಿಗೆ ಅನುಕಂಪ ಹೆಚ್ಚಲ್ಲವೇ? ನಾನು ಬಿಸ್ಸಿ, ಬಿಡ್ ಮಾಡಿಕೊಂಡು ಎರಡು ವರ್ಷವಾದರೂ ಕೆಲಸ ಸಿಗದ್ದರಿಂದ ಈ ಕಿರಾಣಿ ವ್ಯಾಪಾರಕ್ಕೆ ಇಳಿದೆ. ಇನ್ನೊಬ್ಬರ ಕೈಕೆಳಗೆ ನೌಕರಿ ಮಾಡುವುದಕ್ಕಿಂತಲೂ ಈ ನನ್ನ ಕೆಲಸವೇ ಚೆನ್ನ ಎಂದು ನನಗನಿಸಿದೆ.” ಎಂದಿದ್ದ ನಗುತ್ತ.
“ನನಗಂತೂ ನನ್ನ ಮೆರಿಟ್ ಆಧಾರದ ಮೇಲೆ ಕೆಲಸ ಸಿಕ್ಕಿದೆ. ನೀವ್ಹೇಳಿದಂತೆ ಸ್ವಯಂ ಉದ್ಯೋಗವೂ ಒಳ್ಳೆಯದೇ ಬಿಡಿ” ಎಂದು ಅಂದಿದ್ದೆ.
“ಅನುಕಂಪ ಅಂತ ತಮಾಷೆಗೆ ಹಾಗೆ ಹೇಳಿದೆ. ಡೋಂಟ್ ಟೇಕ್ ಇಟ್ ಟು ಹಾರ್ಟ” ಅಂತ ಸಮಜಾಯಿಸಿ ಹೇಳಿದ್ದ. ಅರವಿಂದ್ ತನ್ನ ಸಭ್ಯತೆ, ಶ್ರದ್ಧೆಯಿಂದ ವಿಶ್ವಾಸ ಗಳಿಸತೊಡಗಿದ್ದ. ಆಗಾಗ ಫೋನಲ್ಲೂ ದಿನಸಿಯ ಆರ್ಡರ್ ಕೊಟ್ಟು ಪ್ಯಾಕ್ ಮಾಡಿಸುತ್ತಿದ್ದೆ. ಶಾಲೆಯಿಂದ ಮನೆಗೆ ಹೋಗುವಾಗ ತೆಗೆದುಕೊಂಡು ಹೋಗುತ್ತಿದ್ದೆ. ಬೇಡವೆಂದರೂ ಕೆಲಸದ ಹುಡುಗನ ಜೊತೆಗೆ ಸಾಮಾನು ಕಳುಹಿಸಿ ಕೊಡುತ್ತಿದ್ದ.
ಅರವಿಂದ್
ನನಗೆ ಕೆಲಸ ಸಿಗದಿದ್ದಾಗ ಸ್ವಯಂ ಉದ್ಯೋಗ ಮಾಡುವುದಾಗಿ ಹೇಳಿದಾಗ ಅಣ್ಣ ಆಸ್ತಿಯನ್ನು ಭಾಗಮಾಡಿಕೊಟ್ಟು ಬೇರೆಯಾಗಿದ್ದ. ಅಮ್ಮ ನನ್ನ ಜೊತೆಗೆ ಉಳಿದುಕೊಂಡಳು. ಸಣ್ಣದಾಗಿ ಪ್ರಾರಂಭವಾದ ವ್ಯಾಪಾರ ಎರಡು ವರ್ಷಗಳಲ್ಲಿ ಅಭಿವೃದ್ಧಿಯ ಪಥದಲ್ಲಿ ಮುಂದುವರಿದಿತ್ತು. ನಮ್ಮಲ್ಲಿನ ಶಕ್ತಿ ತಿಳಿದರೆ ಸಿದ್ಧಿಪುರುಷರಾಗುತ್ತಾರೆ ಮತ್ತು ಸವಾಲುಗಳು ಬದುಕನ್ನು ಇನ್ನಷ್ಟು ಆಸಕ್ತಿದಾಯಕವಾಗಿ ಮಾಡುತ್ತವೆ ಎಂಬ ಹಿರಿಯರ ಉಕ್ತಿಗಳು ಅಕ್ಷರಶಃ ಸತ್ಯವಾಗಿವೆ ನನ್ನ ಜೀವನದಲ್ಲಿ. ನನ್ನ ಆರ್ಥಿಕ ಮಟ್ಟ ಒಂದು ಒಳ್ಳೇ ಹಂತ ತಲುಪಿದಾಗ ಅಮ್ಮ ನನಗಾಗಿ ಕನ್ಯಾನ್ವೇಷಣೆಗೆ ಮುಂದಾಗಿದ್ದಳು.
“ಅಮ್ಮಾ, ಇನ್ನೊಂದ್ನಾಲ್ಕು ವರ್ಷ ಕಳೀಲಿ. ನನ್ನ ವ್ಯಾಪಾರ ಇನ್ನೂ ವೃದ್ಧಿಯಾಗಲಿ. ಅಲ್ಲಿಯವರೆಗೆ ಮದುವೆಗೇಕೆ ಅವಸರ?”
“ಅಯ್ಯೋ ಹುಚ್ಚಪ್ಪಾ, ನಾನು ಮುದ್ಕಿಯಾಗಿ ಕೈಕಾಲು ಬಿದ್ದು ಹೋದಮೇಲೆ ಮದ್ವೆ ಮಾಡ್ಕೋ ಬೇಕೆಂದು ಕೊಂಡಿರುವಿಯಾ? ನಿನ್ನ ಮಕ್ಕಳನ್ನು ಎತ್ತಿ ಮುದ್ದಾಡುವುದು ಬೇಡವೇ?” ಎಂದು ಕೋಪ ವ್ಯಕ್ತಪಡಿಸಿದ್ದಾಗ ನಾನು ಕರಗಲೇ ಬೇಕಾಗಿತ್ತು. ಅಮ್ಮನ ಬಲವಂತಕ್ಕೆ ಸುಮಾರು ಹುಡುಗೀರನ್ನು ನೋಡಿದರೂ ಮನಸೆಳೆಯುವಂಥಹ ಒಬ್ಬಳೂ ನಮ್ಮ ಅದೃಷ್ಟದ ಬಾಗಿಲನ್ನು ತಟ್ಟಲಿಲ್ಲ. ನೇತ್ರಾ ಬಂದು ಆಗಲೇ ವರ್ಷವಾಗತೊಡಗಿತ್ತು. ಏಕೋ ಏನೋ ಅವಳು ನನ್ನ ಮನಸ್ಸನ್ನು ತುಂಬತೊಡಗಿದ್ದಳು. ಮೊದಲ ನೋಟದಲ್ಲೇ ನನ್ನ ಹೃದಯವನ್ನು ಆವರಿಸಿದ್ದಳು. “ಹೌದು, ನನಗೇನೋ ಅವಳು ಒಪ್ಪಿಗೆಯಾಗಿದ್ದಾಳೆ. ಅವಳ ಮನಸ್ಸಿನಲ್ಲಿ ಏನಿದೆಯೋ ಏನೋ? ಅನಾಥೆಯೆಂದು ಬೇರೆ ಹೇಳಿದ್ದಾಳೆ. ಒಂದುವೇಳೆ ಅವಳಿಗೂ ನಾನು ಇಷ್ಟವಾಗಿದ್ದರೆ ಅಮ್ಮ ಹೂಂ ಎನ್ನಬೇಕಲ್ಲ?” ಹೀಗೆ ಹಲವಾರು ಯೋಚನೆಗಳ ತೊಳಲಾಟದಲ್ಲಿದ್ದೆ.
ಅದೊಂದು ದಿನ ಸಂಜೆ ಅಮ್ಮ ಅಂಗಡಿಯಲ್ಲಿದ್ದಾಗ ನೇತ್ರಾ ದಿನಸಿ ಖರೀದಿಗೆ ಬಂದಿದ್ದಳು. ಅವಳಿಗೆ ಅಮ್ಮನ ಪರಿಚಯ ಮಾಡಿಕೊಟ್ಟಿದ್ದೆ. ನೇತ್ರಾ ಖುಷಿಖುಷಿಯಿಂದ ಅಮ್ಮನ ಜೊತೆಗೆ ಮಾತಾಡಿದ್ದಳು. ಅವಳು ಹೋದ ನಂತರ, “ಅರವಿಂದೂ, ಆ ಹುಡುಗಿ ತುಂಬಾ ಚೆಂದಾಗಿದೆ ನೋಡೋ? ಇಂಥ ಚೆಂದದ ಹುಡುಗಿ ನಿನಗೆ ಜೊತೆಯಾದರೆ ಒಳ್ಳೆಯದಲ್ಲವೇ?” ಎಂದು ತಟ್ಟಂತ ಹೇಳಿದ್ದಳು.
“ಹೌದೇ? ಹಾಗಾದರೆ ಅವಳಂಥವಳನ್ನೇ ಹುಡುಕಿದರಾಯಿತು” ಎಂದಿದ್ದೆ.
ನಮ್ಮಿಬ್ಬರ ನಡುವೆ ಈ ಮಾತುಗಳಾದ ನಂತರ ಎರಡು ಹುಡುಗಿಯರನ್ನು ನೋಡಿದ್ದೆವು. ಇಬ್ಬರಿಗೂ ಇಷ್ಟವಾಗಲಿಲ್ಲ. ಅದಾದ ನಂತರ ಅಂದು ಅಮ್ಮ ನನ್ನ ಜೊತೆಗೆ ಶಾಪಿನಲ್ಲಿದ್ದಾಗ ನೇತ್ರಾ ಮತ್ತೊಮ್ಮೆ ಬಂದಿದ್ದಳು. ಅಮ್ಮನೊಂದಿಗೆ ಕುಷಲೋಪರಿ ಮಾತಾಡುತ್ತಾ ದಿನಸಿ ಸಾಮಾನುಗಳನ್ನು ಕಟ್ಟಿಸಿಕೊಂಡು ಹೋಗಿದ್ದಳು.
“ಈ ಹುಡುಗಿ ಬಾಳ ಚೊಲೋ ಕಾಣ್ತಿದ್ದಾಳೆ. ಯಾವ ಊರು, ಯಾವ ಜಾತಿಯವಳು?” ಅಂತ ವಿಚಾರಿಸಿದಾಗ ನೇತ್ರಾಳ ಬಗ್ಗೆ ನನಗೆ ತಿಳಿದಷ್ಟನ್ನು ಹೇಳಿದ್ದೆ. ತನಗೆ ನೇತ್ರಾಳ ಬಗ್ಗೆ ಆಸಕ್ತಿ ಇದೆಯೆಂಬುದನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಳು. ಅದನ್ನೇ ಬಂಡವಾಳವನ್ನಾಗಿಟ್ಟುಕೊಂಡು ನೇತ್ರಾಳ ಹತ್ತಿರ ನನಗೆ ಅವಳ ಬಗೆಗಿದ್ದ ಪ್ರೀತಿಯನ್ನು ತಿಳಿಸಿದ್ದೆ ಅಳುಕುತ್ತಾ.
“ನೋಡ್ರೀ ಅರವಿಂದ್, ನನ್ನ ಜಾತಿ, ಕುಲ, ಗೋತ್ರಗಳ ಬಗ್ಗೆ ಒಂದೂ ಗೊತ್ತಿಲ್ಲ. ನಾನು ಅನಾಥಳೆಂದು ಈಗಾಗಲೇ ತಿಳಿಸಿದ್ದೇನೆ. ಇದನ್ನೆಲ್ಲವನ್ನು ಒಪ್ಪಿಕೊಂಡು ನಿಮ್ಮ ತಾಯಿ ನಮ್ಮನ್ನು ಹರಸಿದರೆ ನನಗೂ ಒಪ್ಪಿಗೆಯೇ ಎಂದು ತಿಳಿಸಿದ್ದಳು ಕಣ್ಣಂಚಿನಲ್ಲಿ ಖುಷಿ ತುಂಬಿಕೊಂಡು. ಮುಂದೆ ತುಸು ದಿನಗಳಲ್ಲೇ ನೇತ್ರಾ, ನಾನು ಸತಿ-ಪತಿಗಳಾಗಿ ದಾಂಪತ್ಯ ಜೀವನದ ಮಧುರತೆಯನ್ನು ಸವಿಯತೊಡಗಿದೆವು.
ನೇತ್ರಾ
ಸಾನ್ವಿಯ ಹೆರಿಗೆಯ ನಂತರ ಹೆರಿಗೆ ರಜೆ, ಹೆರಿಗೆಯ ಖರ್ಚಿನ ವೈದ್ಯಕೀಯ ಬಿಲ್ಲುಗಳ ಮಂಜೂರಿಯಲ್ಲಿ ತುಂಬಾ ತಡವಾದಾಗ ಸಮೀರ್, ಸುಂದರ್ ಮತ್ತು ವಿನಯ್ ನನಗಾಗಿ ಬಹಳಷ್ಟು ಹೆಣಗಾಡಿದ್ದರು. ಆಗ ಮೂವರೂ ನನಗೆ ಮತ್ತಷ್ಟೂ ಹತ್ತಿರವಾದರು. ಅವರು ತಮ್ಮ ಹೆಂಡತಿ, ಮಕ್ಕಳೊಡನೆ ಆಗಾಗ ನಮ್ಮ ಮನೆಗೆ ಬರುತ್ತಿದ್ದರು, ನಾವೂ ಸಹ ಅವರ ಮನೆಗೆ ಆಗಾಗ ಹೋಗಿ ಬರುತ್ತಿದ್ದೆವು. ಅದೇನೋ ಒಂಥರ ಆತ್ಮೀಯ ಬೆಸುಗೆ. ನಮ್ಮ ಈ ಪವಿತ್ರ ಸಂಬಂಧ ಯಾರ ಕಣ್ಣಿಗೆ ಕಿಸುರಾಯಿತೋ ಏನೋ? ಯಾರೋ ನನ್ನ ಸಂಸಾರದಲ್ಲಿ ಹುಳಿ ಹಿಂಡಿದರು. ಅರವಿಂದ್ ಸುಮ್ಮಸುಮ್ಮನೇ ನನ್ನ ನಡತೆಯ ಬಗ್ಗೆ ಅನುಮಾನ ಪ್ರದರ್ಶಿಸತೊಡಗಿದ. ನಾನೆಷ್ಟೇ ಹೇಳಿದರೂ ಅವನ ಹಳದಿ ಕಣ್ಣಲ್ಲಿ ನಾನು ತಪ್ಪಿತಸ್ಥಳಂತೆ ಕಾಣತೊಡಗಿದೆ. ಅವನ ಚುಚ್ಚು ಮಾತುಗಳು, ಅನುಮಾನದ ಕಣ್ಣೋಟ, ಬೇಹುಗಾರಿಕೆಯ ನಡತೆ ನನ್ನೆದೆಯನ್ನು ಇರಿಯ ತೊಡಗಿದವು.
“ನೀನು ಮೊದಲೇ ಅನಾಥೆ. ಯಾವ ಹಡಬಿಯ ತೃಷೆಗೆ ಜನಿಸಿದವಳೋ ಏನೋ? ಒಂದೂ ತಿಳಿದುಕೊಳ್ಳದೇ ನಾನು ಹಳ್ಳಕ್ಕೆ ಬಿದ್ದೆ, ಬಕರಾ ಆದೆ” ಅಂತ ಬಡಬಡಿಸತೊಡಗಿದ ಅರವಿಂದ್. ಅತ್ತೆ ಒಮ್ಮೊಮ್ಮೆ ನನ್ನ ಪರ ಬ್ಯಾಟ್ ಬೀಸಿದರೆ ಮತ್ತೊಮ್ಮೆ ಅರವಿಂದ್ನ ಪರ ಬ್ಯಾಟ್ ಬೀಸುತ್ತಿದ್ದರು.
“ಅರವಿಂದ್, ನನ್ನ ಹೆತ್ತವರ ಬಗ್ಗೆ ನಾನೇನನ್ನೂ ಹೇಳಲಾರೆ. ಆದರೆ ನಾನು ಮಾತ್ರ ಗಂಗೆಯಷ್ಟೇ ಪವಿತ್ರಳು. ನಿನ್ನನ್ನಲ್ಲದೇ ನಾನು ಕನಸು-ಮನಸಿನಲ್ಲಿಯೂ ಯಾರನ್ನೂ, ಯಾವತ್ತೂ ಬಯಸಿಲ್ಲ, ಬಯಸುವುದೂ ಇಲ್ಲ. ನೀನೇ ನನ್ನ ಆರಾಧ್ಯ ದೈವ” ಎಂದು ಪರಿಪರಿಯಾಗಿ ತಿಳಿಸಿ ಹೇಳಲು ಪ್ರಯತ್ನಿಸಿದ್ದೆ. ಅರವಿಂದನ ಮನಸ್ಸು ಕಠೋರವಾಗಿತ್ತು. ನನ್ನ ಅಳಲು ಅವನೆದೆಯನ್ನು ತಟ್ಟಲೇ ಇಲ್ಲ.
ಒಂದು ವಾರದಲ್ಲಿ ನ್ಯಾಯಾಲಯದಿಂದ ತೀರ್ಪು ಬರುವುದಿದೆ. ಮಕ್ಕಳು ಯಾರ ಪಾಲಾಗುವರೋ ಏನೋ? ನಾನಂತೂ ಮಕ್ಕಳು ನನ್ನ ಜೊತೆಗೇ ಇರಬೇಕೆಂದು ಕೇಳಿಕೊಂಡಿದ್ದೆ. ಇತ್ತ ಸೂರಜ್ ನನ್ನೊಂದಿಗೆ ಇರುವುದಾದರೂ, “ನನಗೆ ಪಪ್ಪ ಬೇಕು” ಎನ್ನುವ ಮಂತ್ರವನ್ನು ನಿರಂತವಾಗಿ ಜಪಿಸುತ್ತಿದ್ದರೆ, ಅತ್ತ ಅರವಿಂದನ ಜೊತೆಗಿರುವ ಸಾನ್ವಿ, “ನನಗೆ ಅಮ್ಮ ಬೇಕು” ಎಂದು ಪಠಿಸುತ್ತಿದ್ದಾಳಂತೆ. ಯಾರಾದರೂ ಒಬ್ಬರನ್ನು ಆರಿಸಿಕೊಳ್ಳಿರೆಂದು ಹೇಳಿದರೆ ಇಬ್ಬರೂ, “ನಮಗೆ ಪಪ್ಪ, ಅಮ್ಮ ಇಬ್ಬರೂ ಬೇಕು” ಅಂತ ಹೇಳ್ತಿದ್ದಾರೆ. ಮಕ್ಕಳಿಗಾಗಿಯಾದರೂ ನಾವು ಜೊತೆಯಾಗಿರೋಣ ಎಂದು ನಾನು ವಿನಯಪೂರ್ವಕವಾಗಿ ಪರಿಪರಿಯಾಗಿ ಅರವಿಂದನಿಗೆ ಬೇಡಿಕೊಳ್ಳುತ್ತಿದ್ದರೂ, “ನನಗೆ ನಿನ್ನಂಥಹ ಸೂ… ಬೇಡ. ವಿಚ್ಛೇದನ ಬೇಕು” ಎಂದು ಹೇಳಿದ್ದ ಒಂದು ದಿನ. ಆ ದಿನವಿಡೀ ನನ್ನ ಕಣ್ಣಿನಿಂದ ಗಂಗಾಮಾತೆ ಹರಿದಿದ್ದಳು. ಚಿನ್ನ, ರನ್ನ ಎಂದು ನನ್ನ ಸೆರಗನ್ನು ಹಿಡಿದುಕೊಂಡು ಸುತ್ತುತ್ತಿದ್ದ ಅರವಿಂದನಿಗೆ ನಾನು ಬೇಡವಾಗಿಬಿಟ್ಟಿದ್ದೇನೆ. ದೇವರೇ, ದಯವಿಟ್ಟು ನನ್ನ ಸಂಸಾರವನ್ನು ಸರಿಮಾಡು ತಂದೆ ಎಂದು ದಿನವಿಡೀ ದೇವರಲ್ಲಿ ಮೊರೆಯಿಡುತ್ತಿದ್ದೇನೆ.
“ಬೆಹೆನ್ಜೀ, ನೀವು ಅಷ್ಟು ಅಧೀರಳಾಗಬೇಕಿಲ್ಲ. ನಿಮ್ಮ ಸಂಸಾರ ಸರಿ ಹೋಗುತ್ತೆ. ಚಿಂತೆ ಬೇಡ.” ಸಮೀರ್, ಸುಂದರ್, ವಿನಯ್ ನನಗೆ ಧೈರ್ಯ ತುಂಬುತ್ತಲೇ ಇದ್ದರು. ಎಲ್ಲಾ ದೇವರಿಚ್ಛೆ ಎಂದು ಆಕಾಶದ ಕಡೆಗೆ ದೃಷ್ಟಿ ನೆಟ್ಟು, “ನೀವಂದಿದ್ದೇ ಸಂಭವಿಸಿದರೆ ನೀವೇ ನನ್ನ ಪಾಲಿನ ದೇವರುಗಳು” ಎಂದು ವಂದಿಸುತ್ತಿದ್ದೆ ಭಾವರಹಿತಳಾಗಿ.
ಅರವಿಂದ್
ಮೊದಮೊದಲು ನಾನೂ ಈ ಸಮೀರ್, ಸುಂದರ್, ವಿನಯ್ ಮತ್ತು ನೇತ್ರಾರ ಸಂಬಂಧ ಅಣ್ಣ-ತಂಗಿಯರ ಸಂಬಂಧವೆಂದೇ ತಿಳಿದುಕೊಂಡಿದ್ದೆ. ನನ್ನ ಗೆಳೆಯ ಕೇಶವ ಸಮೀರನ ಆಫೀಸಿಗೆ ವರ್ಗವಾಗಿ ಬಂದಮೇಲೆ ಇವರೆಲ್ಲರ ಬಣ್ಣವನ್ನು ಬಯಲು ಮಾಡಿದ್ದ.
“ಅರವಿಂದ್, ಅವರೆಲ್ಲರೂ ಗೋಮುಖವ್ಯಾಘ್ರರು, ಆಶಾಡಭೂತಿಗಳು. ಬೆಳ್ಳಗಿರುವುದನ್ನೆಲ್ಲ ಹಾಲೆಂದು ನಂಬಿರುವ ನಿನಗೆ ದೋಖಾ ಮಾಡುತ್ತಿದ್ದಾರೆ. ನೀನಂದುಕೊಂಡಂತೆ ನಿನ್ನ ಹೆಂಡತಿಯ ನಡತೆ ಚೆನ್ನಾಗಿಲ್ಲ. ಆಕೆ ಅನಾಥೆ ಎಂದು ನೀನೇ ಹೇಳಿರುವಿ. ಯಾರ ತೀಟೆಗೆ ಹುಟ್ಟಿದವಳೋ ಏನೋ? ಯಾವ ಹುತ್ತದಲ್ಲಿ ಯಾವ ಹಾವೋ? ನೂಲಿನಂತೆ ಸೀರೆ ಎಂಬಂತೆ ಇವಳೂ ಕವಲುದಾರಿಯಲ್ಲಿ ಹೆಜ್ಜೆ ಹಾಕಿ ಸುಖಿಸುತ್ತಿದ್ದಾಳೆ” ಎಂದು ಕೇಶವ ನನ್ನ ತಲೆಯಲ್ಲಿ ನೇತ್ರಾಳ ನಡತೆಯ ಬಗ್ಗೆ ಅನುಮಾನದ ಹುಳುಗಳನ್ನು ಬಿಟ್ಟಿದ್ದ. ಮುಂದಿನ ದಿನಗಳಲ್ಲಿ ನಾನು ನೇತ್ರಾಳ ಪ್ರತಿಯೊಂದು ನಡೆಯನ್ನು ಅನುಮಾನದ ತಕ್ಕಡಿಯನ್ನು ತೂಗಿ ನೋಡುವ ಪರಿಪಾಠವನ್ನು ಹಾಕಿಕೊಂಡೆ. ಆಕೆ ಸಮೀರ್, ಸುಂದರ್ ಮತ್ತು ವಿನಯ್ ಅವರ ಹೆಸರೆತ್ತಿದರೆ ನಾನು ಕೆಂಡಾಮಂಡಲವಾಗತೊಡಗಿದೆ, ಹರಿಹಾಯ ತೊಡಗಿದೆ. ಮನೆ ರಣರಂಗವಾಗತೊಡಗಿತು. ಅಂತೂ ನಾನು, ನೇತ್ರಾ ಬೇರೆಯಾಗಿಬಿಟ್ಟೆವು. ಸೂರಜ್ ಅವಳೊಂದಿಗೆ, ಸಾನ್ವಿ ನನ್ನೊಂದಿಗೆ ಇರುವ ವ್ಯವಸ್ಥೆಯನ್ನು ಮಾಡಿಕೊಂಡು ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿರುವೆ.
ನೇತ್ರಾಳ ಮೇಲೆ ಸೇಡು ತೀರಿಕೊಳ್ಳುವ ನೆಪದಲ್ಲಿ ಪುಂಡ ಗೆಳೆಯರ ಸಹವಾಸ ಮಾಡಿದೆ. ಬೆಲೆವೆಣ್ಣುಗಳ ಸಹವಾಸವನ್ನು ಮಾಡಲು ಗೆಳೆಯರು ಪ್ರೇರೇಪಿಸುತ್ತಿದ್ದಾರೆ. ನನಗೇಕೋ ನನ್ನ ಮೈಯನ್ನು ಮಲಿನಗೊಳಿಸಿಕೊಳ್ಳುವ ಇಚ್ಛೆ ಇಲ್ಲದ್ದರಿಂದ ನನ್ನತನವನ್ನು ಇನ್ನೂ ಉಳಿಸಿಕೊಂಡು ಬಂದಿದ್ದೇನೆ. ಇನ್ನೊಂದು ವಾರದಲ್ಲಿ ನ್ಯಾಯಾಲಯ ವಿಚ್ಛೇದನಕ್ಕೆ ಅನುಮತಿ ನೀಡುತ್ತದೆ. ಬೇರೊಬ್ಬಳನ್ನು ಮದುವೆಯಾಗಿ ಹಾಯಾಗಿರಬೇಕು ಎಂಬ ಹಪಹಪಿ ಬಹಳ ದಿನಗಳಿಂದ ನನ್ನ ಮನಸ್ಸನ್ನು ಕಾಡುತ್ತಿದೆ.
ಅಂದು ಮಧ್ಯಾಹ್ನದೂಟ ಮುಗಿಸಿ ಮನೆಯಲ್ಲಿದ್ದೆ. ಅಷ್ಟರಲ್ಲಿ ವಿನಯ್, ಸುಂದರ್ ಮತ್ತು ಸಮೀರ್ ವಕ್ರಿಸಿಕೊಂಡರು. “ಅರವಿಂದ್, ನೀವು ತುಂಬಾ ತಪ್ಪು ಮಾಡುತ್ತಿದ್ದೀರಿ. ನಿಮ್ಮ ತಪ್ಪು ನಿರ್ಧಾರದಿಂದ ನಿಮ್ಮ ಬದುಕೇ ನರಕವಾಗುತ್ತಿದೆ. ಈಗಾಗಿರುವ ತಪ್ಪಿನಿಂದ ಪಾಠ ಕಲಿತರೆ ಒಳ್ಳೆಯದಾಗುತ್ತದೆ. ಆ ನಿಮ್ಮ ಹಲ್ಕಟ್ ಗೆಳೆಯ ಕೇಶವ ಬಂಗಾರದಂಥ ನಿಮ್ಮ ಸಂಸಾರಕ್ಕೆ ಹುಳಿ ಹಿಂಡಿದ್ದಾನೆ. ಅವನ ಬಣ್ಣದ ಮಾತಿಗೆ ಮರುಳಾಗಿ ನೀವು ನಿಮ್ಮ ಕಾಲಮೇಲೆ ನೀವೇ ಕಲ್ಲು ಹಾಕಿಕೊಂಡಿದ್ದೀರಿ. ಅವನಂಥ ಭ್ರಷ್ಟ ಕೆಲಸಗಾರ ನಮ್ಮ ಕಚೇರಿಯಲ್ಲಿ ಯಾರೂ ಇಲ್ಲ. ಎಲ್ಲಾ ಶಾಲೆಯ ಶಿಕ್ಷಕವರ್ಗ ಮತ್ತು ಸಿಬ್ಬಂದಿಗಳ ಶೋಷಣೆ ಮಾಡುತ್ತಿದ್ದಾನೆ. ಕೆಲವೊಂದು ಮಹಿಳಾ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಎಸಗಿದ್ದಾನೆ. ನಾವಿರೋದ್ರಿಂದ ಅವನು ನಮ್ಮ ಸಹೋದರಿ ನೇತ್ರಾಳ ಮೇಲೆ ಕಣ್ಣು ಹಾಕಿಲ್ಲ. ಅವನ ಹೀನ ಕೃತ್ಯಗಳನ್ನು ಪ್ರತಿಭಟಿಸುತ್ತಿರುವ ನಮ್ಮ ಮೇಲೆ ಅವನು ಸೇಡುತೀರಿಸಿಕೊಳ್ಳಲು ಕತ್ತಿ ಮಸೆಯುತ್ತಿದ್ದ. ತಂಗಿ ನೇತ್ರಾ ಮತ್ತು ನಮ್ಮ ಆತ್ಮೀಯತೆಯನ್ನು ಹಳದಿ ಕಣ್ಣಿನಿಂದ ನೋಡಿದ ಅವನು ಅದರ ದುರುಪಯೋಗ ಪಡೆದುಕೊಳ್ಳಲು ಏನೇನೋ ಅಸಹ್ಯಗಳನ್ನು ತುಂಬಿ ಬಿಟ್ಟಿದ್ದಾನೆ ನಿಮ್ಮ ಕಿವಿ, ಮನಸ್ಸುಗಳಲ್ಲಿ. ಅವನ ಸ್ವೇಚ್ಛಾಚಾರದ ನಡೆ ನಿಮಗೂ ಗೊತ್ತಿರಬೇಕು. ಅವನಿಗೇನು ಗೊತ್ತು ಪವಿತ್ರ ಸಂಬಂಧದ ಮಹತ್ವ? ದಯವಿಟ್ಟು ನೀವು ನಿಮ್ಮ ಮನಃಸ್ಥಿತಿಯನ್ನು ಬದಲಿಸಿಕೊಳ್ಳಿರಿ. ನಿಮ್ಮ ಬಂಗಾರಂಥ ಸಂಸಾರಕ್ಕೆ ಮೊದಲಿನ ಮೆರುಗು ಬರಬೇಕು. ನಮಗೆ ಅಕ್ಕ-ತಂಗಿಯರಿಲ್ಲದಿರುವ ನಿರ್ವಾತವನ್ನು ನೇತ್ರಾ ಸಿಸ್ಟರ್ ತುಂಬಿದ್ದಾರೆ. ಪ್ರತ್ಯಕ್ಷ ಕಂಡರೂ ಪ್ರಮಾಣೀಕರಿಸಿ ನೋಡಿರಿ ಎಂದು ತಿಳಿದವರೇ ಹೇಳುತ್ತಾರೆ. ನೀವು ನಿಮ್ಮ ಗೆಳೆಯ ಕೇಶವನ ಬಾಯಿಯಿಂದ ಸತ್ಯವನ್ನು ಹೊರಗೆಳೆದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಅವಸರದ ನಿರ್ಧಾರ ಬೇಡಿರಿ.” ಸಮೀರ್ ಕಳಕಳಿಯಿಂದ ಬೇಡಿಕೊಂಡಿದ್ದಕ್ಕೆ ವಿನಯ್ ಮತ್ತು ಸುಂದರ್ ಸಹ ಧ್ವನಿಗೂಡಿಸಿ ಅಲ್ಲಿಂದ ಕಾಲ್ತೆಗೆದಿದ್ದರು.
ಆ ಮೂವರ ಮಾತುಗಳು ನನ್ನನ್ನು ಚಿಂತನೆಗೆ ಹಚ್ಚಿದವು. ತಕ್ಷಣ ಕೇಶವನನ್ನು ಕರೆಸಿದೆ. ಮಾತಾಡಿದೆ. ನಿಜ ತಿಳಿಸಲು ಖಡಕ್ಕಾಗಿ ಹೇಳಿದೆ. ಕೇಶವ ತನ್ನ ತಪ್ಪೊಪ್ಪಿಕೊಂಡ.
“ನಂಬಿಕೆಗಿಂತ ಸಂದೇಹವೇ ಜಾಸ್ತಿಯಾದರೆ ಯಾವ ಸಂಬಂಧವೂ ಉಳಿಯುವುದಿಲ್ಲ. ಸಂದೇಹದ ನಡುವೆ ನಂಬಿಕೆ ಗಟ್ಟಿಯಾದರೆ ಯಾವ ಮನಸ್ಸೂ ಮುರಿಯುವುದಿಲ್ಲ” ಎಂದು ನೇತ್ರಾ ಹೇಳಿದ ಮಾತು ನನ್ನ ಮನಸ್ಸಿನಲ್ಲಿ ಸುಳಿದು ಹೋಯಿತು. ಅದು ಸತ್ಯ ಎಂದೆನಿಸತೊಡಗಿದಾಗ ನನ್ನ ಬಗ್ಗೆ ನನಗೇ ಅಸಹ್ಯ ಮೂಡತೊಡಗಿತು.
ನೇತ್ರಾ
ಅಂದು ಯುಗಾದಿ ಹಬ್ಬ. ಗುರುವಾರ. ಬರುವ ಸೋಮವಾರವೇ ನ್ಯಾಯಾಲಯದಲ್ಲಿ ತೀರ್ಪಿದೆ. ಏನು ಕಾದಿದೆಯೋ ಏನೋ? ಈ ಯುಗಾದಿಯಾದರೂ ನನ್ನ ಜೀವನದಲ್ಲಿ ಹರ್ಷ ತಂದರೆ ಚೆನ್ನ ಎಂದು ಮನಸ್ಸು ಹಂಬಲಿಸುತ್ತಿದೆ. ಅನಾಥೆಯಾಗಿದ್ದ ನನಗೆ ಅರವಿಂದ್ ಬಾಳನ್ನು ಕೊಟ್ಟ. ಆ ಬಾಳು ಇನ್ನೇನು ಕೊನೆಯಾಗುವುದೋ ಏನೋ? ಹಾಗಾಗದಿರಲಿ ಎಂದು ಮನಸ್ಸು ಪರಿತಪಿಸುತ್ತಿದೆ. ಹಬ್ಬದಡುಗೆಯ ತಯಾರಿಯಲ್ಲಿದ್ದೆ. ಸೂರಜ್ ಹೊರಗಡೆ ತನ್ನ ಸ್ನೇಹಿತರ ಜೊತೆಗಿದ್ದ. ಸಮಯ ಆಗಲೇ ಹನ್ನೊಂದಾಗುತ್ತಲಿತ್ತು. ಯುಗಾದಿಯ ಬಿಸಿಲ ಪ್ರಖರತೆ ಜಾಸ್ತೀನೇ ಇತ್ತು. ಹೊರಗಡೆ ಬಂದು ಸೂರಜ್ನಿಗಾಗಿ ಕಣ್ಣಾಡಿಸಿದೆ, ಕೂಗು ಹಾಕಿದೆ. ಅವನ ಸುಳಿವಿಲ್ಲ. ಪಕ್ಕದ ಮನೆಗಳ ಹುಡುಗರು ರಸ್ತೆ ಪಕ್ಕದ ಮರದ ನೆರಳಿನಲ್ಲಿ ಇನ್ನೂ ಆಟವಾಡುತ್ತಿದ್ದರು. ಅವರನ್ನು ವಿಚಾರಿಸಿದಾಗ ಸೂರಜ್ ಇಲ್ಲಿಂದ ಹೋಗಿ ಬಹಳ ಹೊತ್ತಾಗಿದೆ ಎಂದು ಹೇಳಿದಾಗ ನನ್ನ ಎದೆ ಧಸಕ್ಕೆಂದಿತು. ಹುಡುಗರು ನನ್ನ ಜೊತೆಗೆ ಅವನಿಗಾಗಿ ಹುಡುಕಾಟ ನಡೆಸಿದರೂ ಅವನ ಸುಳಿವೇ ಸಿಗಲಿಲ್ಲ. ಮನದಲ್ಲೇನೋ ಅಳುಕು. ವಿನಯ್, ಸಮೀರ್ ಮತ್ತು ಸುಂದರ್ಗೆ ಫೋನಾಯಿಸಿ ವಿಷಯ ತಿಳಿಸಿ ತಕ್ಷಣ ಬರಬೇಕೆಂದು ಕೇಳಿಕೊಂಡೆ. ಅಷ್ಟೊತ್ತಿಗೆ ಅರವಿಂದ್ನ ಅಂಗಡಿಯ ರಾಮು ಸಾನ್ವಿಯನ್ನು ಕೇಳಿಕೊಂಡು ಬಂದ. ಅವಳೂ ಮನೆಯಲ್ಲಿಲ್ಲವಂತೆ. ನನ್ನೆದೆ ಇನ್ನೂ ಜೋರಾಗಿ ಬಡಿದುಕೊಳ್ಳತೊಡಗಿತು.
ನಮ್ಮ ಬಡಾವಣೆಯಲ್ಲಿನ ಉದ್ಯಾನವನ, ಶಾಲೆಯ ಆವರಣಗಳಲ್ಲಿ ಹುಡುಕಾಡಿದೆವು. ಸಾನ್ವಿ, ಸೂರಜರ ಸುಳಿವು ಸಿಗಲಿಲ್ಲ. ಹುಡುಕುತ್ತಾ ಪಕ್ಕದ ಶಿವನಗರದ ಉದ್ಯಾನವನ ತಲುಪಿ ಮೂಲೆ ಮೂಲೆ ಹುಡುಕಲು ಮುಂದಾದೆ. ಕೊನೆಯ ಮೂಲೆಯಲ್ಲಿ ಸಾನ್ವಿ, ಸೂರಜ್ ಅಳುತ್ತಾ ಕುಳಿತಿದ್ದ ದೃಶ್ಯ ಕಣ್ಣಿಗೆ ಬಿದ್ದಾಗ ನನಗೆ ಹೃದಯ ಕೈಗೆ ಬಂದಂತಾಯಿತು. ಓಡೋಡುತ್ತಾ ಇಬ್ಬರನ್ನೂ ಎದೆಗವುಚಿಕೊಳ್ಳಲು ಮುಂದಾದಾಗ ಇಬ್ಬರೂ ಬೇಡವೆಂದು ಪ್ರತಿಭಟಿಸಬೇಕೇ? ಅಷ್ಟರಲ್ಲಿ ಅರವಿಂದ್, ನನ್ನ ಮೂವರೂ ಅಣ್ಣಂದಿರು ಅಲ್ಲಿಗೆ ಬಂದರು.
“ಅಮ್ಮಾ, ಹತ್ತಿರ ಬರಬೇಡ. ನೀನು, ಪಪ್ಪ ಇಬ್ಬರೂ ನಮ್ಮ ಮಾತು ಕೇಳುವುದಾದರೆ ಮಾತ್ರ ಹತ್ತಿರ ಬನ್ನಿರಿ. ಇಲ್ಲದಿದ್ದರೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ” ಎಂದ ಸೂರಜ್ ತೊದಲುತ್ತಾ.
“ಅದೇನು ಕಂದಾ?” ತಕ್ಷಣ ಹೊರಹೊಮ್ಮಿತ್ತು ನನ್ನ ಬಾಯಿಯಿಂದ. ಅರವಿಂದ್ ಮೂಕ ಪ್ರೇಕ್ಷಕನಂತೆ ನಿಂತಿದ್ದ.
“ನಮಗೆ ನೀವಿಬ್ಬರೂ ಬೇಕು. ಡೈವೋರ್ಸ ತೊಗೋಬಾರದು. ಒಂದೇ ಮನೆಯಲ್ಲಿರಬೇಕು. ಇಲ್ಲದಿದ್ದರೆ ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತೇವೆ. ನೀವಿಬ್ಬರೇ ಆರಾಮವಾಗಿರಿ.” ಸಾನ್ವಿ, ಸೂರಜ್ ಒಕ್ಕೊರಲಿನಿಂದ ಹೇಳಿದಾಗ ಅಲ್ಲಿದ್ದವರೆಲ್ಲರೂ ತಬ್ಬಿಬ್ಬು. ನಾನು, ಅರವಿಂದ್ ಮುಖ, ಮುಖ ನೋಡುತ್ತಾ ನಿಂತೆವು.
ಅಷ್ಟರಲ್ಲಿ ಅರವಿಂದ್, “ಮಕ್ಕಳೇ ತಪ್ಪೆಲ್ಲಾ ನಂದೇ. ನನ್ನ ದುಡುಕು ಬುದ್ಧಿಯಿಂದ ನಿಮ್ಮ ಅಮ್ಮನನ್ನು ಸಂಶಯದಿಂದ ನೋಡಿದೆ. ನನಗೀಗ ನನ್ನ ತಪ್ಪಿನ ಅರಿವಾಗಿದೆ. ನಿಮ್ಮ ಬೇಡಿಕೆಯನ್ನು ಈಡೇರಿಸಲು ನಾವು ಸಿದ್ಧ” ಎಂದು ಮಕ್ಕಳಿಬ್ಬರಿಗೂ ಹೇಳುತ್ತಾ, “ನೇತ್ರಾ, ನೀನು ಕ್ಷಮಯಾಧರಿತ್ರಿ. ನಿನ್ನ ಮನಸ್ಸು ವಿಶಾಲವಾದದ್ದು. ನನ್ನನ್ನು ಕ್ಷಮಿಸಿಬಿಡು. ವಿಚ್ಛೇದನದ ಅರ್ಜಿಯನ್ನು ವಾಪಾಸು ಪಡೆಯೋಣ” ಎಂದಾಗ ಆನಂದದ ಅತಿರೇಕದಿಂದ ನನ್ನ ಕಣ್ಣಲ್ಲಿ ಹರ್ಷಧಾರೆ ಜಿನುಗತೊಡಗಿತು.
“ಯುಗಾದಿ ನಿಮ್ಮ ಬಾಳಲ್ಲಿ ಹೊಸ ಹರುಷ ತಂದಿದೆ. ಶುಭವಾಗಲಿ” ಎಂದು ಸಹೋದರ ತ್ರಯರಾದ ಸಮೀರ್, ಸುಂದರ್, ವಿನಯ್ ಹಾರೈಸಿದಾಗ ನಮ್ಮೆಲ್ಲರ ಹೃದಯಗಳಲ್ಲಿ ಹರ್ಷದ ಹೊನಲು ಜಿನುಗತೊಡಗಿತು. ಯುಗಾದಿಯ ಬೆಲ್ಲದ ಸವಿ ತುಂಬಾ ಮಧುರವೆನಿಸತೊಡಗಿತು. ಬೆಳಗಿನ ಬಾಲ ಸೂರ್ಯನ ಹೊಂಗಿರಣದ ಶಾಖಕ್ಕೆ ಕರಗುವ ಮಂಜಿನಂತೆ ಮಕ್ಕಳ ಮೇಲಿನ ಮಮಕಾರದಿಂದ ಅರವಿಂದನ ಹೃದಯದಲ್ಲಿನ ಕಲ್ಮಶ ಕರಗಿ ಹೋಗಿತ್ತು. ಮಕ್ಕಳು ಮತ್ತು ಅರವಿಂದನನ್ನು ಎದೆಗವುಚಿ ಹಿಡಿದುಕೊಂಡು ಸಹೋದರರತ್ತ ಕೃತಜ್ಞತೆಯ ದೃಷ್ಟಿ ಬೀರಿದಾಗ ನಮ್ಮೆಲ್ಲರ ಸಂಭ್ರಮಕ್ಕೆ ಕೊನೆಯುಂಟೇ?
- ಶೇಖರಗೌಡ ವೀ ಸರನಾಡಗೌಡರ್
4 thoughts on “ಕರಗಿದ ಮಂಜು”
Marriage and divorce ಕನ್ನಡ ಕಥೆ ಚನ್ನಾಗಿದೆ. ಸರಳವಾದ ಸಹಜವಾಗಿ ಓದಿಸಿಕೊಂಡು ಹೋಗುತ್ತದೆ.
ಸಮಾಜದಲ್ಲಿ ಸಾಕಷ್ಟು ಪ್ರಕರಣಗಳು ಈ ತರಹ
ನಡೆಯುತ್ತಿರುತ್ತವೆ. ಆದರೆ ತಮ್ಮ ಸಂಸಾರ ಕೆಲ ಕುಹಕಿಗಳ ಸ್ವಾರ್ಥಕ್ಕೆ ಹಾಳು ಗೆಡವಿ ಅದೇನು ಸುಖ ಕಾಣುತ್ತಾರೋ ಏನೋ. ಅಂತಿಮವಾಗಿ ಮಕ್ಕಳ ಒತ್ತಾಸೆ ಹಾಗೂ ಅಪ್ಪ ಅರವಿಂದನ ಬದಲಾದ ನಿಲುವು ಮತ್ತೆ ದಾಂಪತ್ಯ ಒಂದುಗೂಡಿಸಿ ಕತೆಯನ್ನು ಅಂತಿಮಗೊಳಿಸಿದ್ದು ತುಂಬಾನೆ ಇಷ್ಟವಾಯ್ತು.
ಹೊಂದಾಣಿಕೆಯೊಂದಿದ್ದರೆ ಜೀವನ ಸುಗಮವಾಗಿರುತ್ತದೆ, ಕಥೆ ಚೆನ್ನಾಗಿದೆ sir
ಸರಳ ಮತ್ತು ಸುಂದರ ನಿರೂಪಣೆ. ಕಥೆಯ ಹಂದರ ಹೊಸತೇನಲ್ಲ.. ಆದರೆ ಹೆಣೆದ ರೀತಿ ತುಂಬಾ ಚೆನ್ನಾಗಿದೆ.