ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣl ಹೊಂದಾಣಿಕೆಯಿಂದ ಸುಂದರ ಬದುಕು

ಮಾನವನಲ್ಲಿ ನಾಗರಿಕತೆ ಬೆಳೆದಂತೆ ಸಂಸ್ಕೃತಿ ಸಂಸ್ಕಾರಗಳು ಬೆಳೆದವು. ಮದುವೆ ನಮ್ಮ ಷೋಡಶ ಸಂಸ್ಕಾರಗಳಲ್ಲಿ ಒಂದು . ಸಂಸ್ಕಾರ ಸಮಾರಂಭಗಳು ಮನಸ್ಸಿನಲ್ಲಿ ಸಕಾರಾತ್ಮಕತೆಯನ್ನು ಉಂಟುಮಾಡುತ್ತವೆ . ಜೀವನದ ಪ್ರತಿ ಹಂತದಲ್ಲಿ ಬಾಲ್ಯ ,ಶಿಕ್ಷಣ ,ವೃತ್ತಿ, ವಿವಾಹ, ಮಾತೃತ್ವ ಅಥವಾ ಪಿತೃತ್ವ ವೃದ್ಧಾಪ್ಯ ಹೀಗೆ ಜೀವನದ ಪ್ರಯಾಣದಲ್ಲಿ ಯಶಸ್ಸು ಮತ್ತು ಸಾಮರಸ್ಯವನ್ನು ತರಲು ಸಂಸ್ಕಾರಗಳು ಕಾರಣವಾಗುತ್ತದೆ. ಷೋಡಶ ಸಂಸ್ಕಾರಗಳು ಆಳವಾದ ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿವೆ, ವ್ಯಕ್ತಿಯ ಗರ್ಭದಿಂದ ಹಿಡಿದು ಸಮಾಧಿವರೆಗೆ ಸಾಗಿ ಬರುವಂಥದ್ದು. ಇಷ್ಟು ಗಟ್ಟಿಯಾದ ನಮ್ಮ ಭಾರತೀಯ ಪರಂಪರೆಯ ವಿವಾಹ ಸಂಸ್ಕಾರವು ಇಂದು ಟೊಳ್ಳಾಗಲು ಕಾರಣವೇನು? ಚಿಂತಿಸುವ ವಿಷಯವಾಗಿದೆ.

ಅಂತರ್ಜಾತಿಯ ವಿವಾಹ, ಪ್ರೇಮ ವಿವಾಹ ಇನ್ನು ಹಲವಾರು ವಿವಾಹಗಳನ್ನು ಮೀರಿ ಸಲಿಂಗ ವಿವಾಹ ಸ್ವ ವಿವಾಹ (ಸೊಲೊಗ್ಯಾಮಿ) ನಡೆಯುತ್ತಿರುವ ಈ ಕಾಲದಲ್ಲಿ ಇನ್ನು ಯಾವುದೇ ಬಂಧನವೇ ಬೇಡ ಎಂದು ಲಿವಿಂಗ್ ಟುಗೆದರ್ ಎನ್ನುವ ಪಾಶ್ಚಾತ್ಯ ಸಂಸ್ಕೃತಿಗೆ ವಾಲುತ್ತಿರುವ ತಲೆಮಾರು ತಯಾರಾಗುತ್ತಿದೆ. ಇವೆಲ್ಲ ವಿವಾಹದ ಮೂಲ ಉದ್ದೇಶವನ್ನೇ ತಲೆಕೆಳಗಾಗಿಸಿವೆ. ಲೈಂಗಿಕ ತೃಪ್ತಿ , ವಂಶಾಭಿವೃದ್ಧಿ ಹಾಗು ಎರಡು ಕುಟುಂಬಗಳ ನಡುವಿನ ಸಾಮರಸ್ಯ ವಿವಾಹದ ಮೂಲ ಉದ್ದೇಶಗಳೆನ್ನಬಹುದು.

ಬೆಂಗಳೂರಿನ ಮುಖ್ಯ ರಸ್ತೆಯಲ್ಲಿರುವ ದೊಡ್ಡ ಮದುವೆ ಮಂಟಪ . ಥರಾವರಿ ಹೂವುಗಳ ಅಲಂಕಾರ ಐದು ಸಿಹಿ ಪಕ್ವಾನ್ನ ದ ಮದುವೆ ಊಟ ಹೀಗೆ ಭರ್ಜರಿಯಾಗಿ ನಮ್ಮ ಸ್ನೇಹಿತರೊಬ್ಬರ ಮಗಳ ಮದುವೆ ನಡೆಯಿತು. ತಂದೆ ತಾಯಿಯ ಅನುಮತಿಯಿಂದ ಹುಡುಗ ಹುಡುಗಿ ಒಪ್ಪಿಕೊಂಡು ಆದಂಥ ಮದುವೆಯಾಗಿತ್ತು. ಮರುವರ್ಷವೇ ಇವರು ವಿಚ್ಛೇದನ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ತಿಳಿಯಿತು. ಇಬ್ಬರಿಗೂ ಹೊಂದಾಣಿಕೆ ಆಗುತ್ತಿಲ್ಲವೆಂಬ ಕಾರಣಕ್ಕಾಗಿ.

ಮದುವೆ ಎಂದರೆ ಹಲವಾರು ವಿದ್ವಾಂಸರು ಹಲವಾರು ತರಹದ ವ್ಯಾಖ್ಯಾನ ಗಳನ್ನು ಕೊಡುತ್ತಾರೆ . ಅದೆಲ್ಲ ಬೇಡ ,ಸರಳವಾಗಿ ಹೊಂದಾಣಿಕೆ ಅಥವಾ ಒಬ್ಬರನ್ನೊಬ್ಬರು ಅರಿಯುವುದೇ ಮದುವೆ ಎನಿಸಿಕೊಳ್ಳುತ್ತದೆ ಅಲ್ಲವೇ ? ಗಂಡು ಮತ್ತು ಹೆಣ್ಣು ಇಬ್ಬರ ಪರಸ್ಪರ ಹೊಂದಾಣಿಕೆಯು ಅತ್ಯಂತ ಮಹತ್ವದ್ದಾಗುತ್ತದೆ. ಸಾಮಾಜಿಕವಾಗಿ ಇದು ಒಂದು ಬಂಧ .ಎರಡು ಕುಟುಂಬಗಳೊಡನೆ ಮನೆತನಗಳೊಡನೆ ಬೆಸೆಯುವ ನಂಟು . ಇದೆಲ್ಲದಕ್ಕೂ ಮೊದಲು ವೈಯಕ್ತಿಕವಾಗಿ ಒಬ್ಬರ ಮನಸ್ಸನ್ನು ಇನ್ನೊಬ್ಬರು ತಿಳಿಯಲೇಬೇಕು. ಅಲ್ಲಿ ಹೊಂದಾಣಿಕೆಗೆ ಅವಕಾಶ. ಆಗ ಮಾತ್ರ ದಾಂಪತ್ಯ ಸಾಧ್ಯ.

ಕವಿ ಕಾಳಿದಾಸನ ರಘುವಂಶದಲ್ಲಿ ಆರಂಭಿಕ ಶ್ಲೋಕ ನೆನಪಾಗುತ್ತದೆ.
ವಾಗರ್ಥವಿವ ಸಮ್ಪ್ರಕ್ತೌ
ವಾಗರ್ಥ ಪ್ರತಿಪತ್ತಯೇ
ಜಗತ: ಪಿತರೌ ವಂದೇ
ಪಾರ್ವತಿ ಪರಮೇಶ್ವರೌ

ಇದರಲ್ಲಿ ಕವಿ ಬೇರ್ಪಡಿಸಲಾಗದ ಒಂದು ಶಕ್ತಿಯನ್ನು ಕಾಣುತ್ತಾನೆ .ಒಂದು ಪದ ಮತ್ತು ಅದರ ಅರ್ಥವನ್ನು ಜಗತ್ತು ಬೇರ್ಪಡಿಸಲಾಗುವುದಿಲ್ಲ ಎಂದು ಇದರ ಅರ್ಥ ಪಾರ್ವತಿ ಪರಮೇಶ್ವರರು ಬ್ರಹ್ಮಾಂಡ ಪೋಷಕರು ಅಷ್ಟೇ ಅಲ್ಲ ಪದಗಳು ಮತ್ತು ಅವುಗಳ ಅರ್ಥದಂತೆ ಅಭೇದ್ಯ.

ಮದುವೆ ಎಂಬುದು ಆನಂದದ ಅಪೂರ್ವ ಬಂಧನ. ಆದರೆ ಇಂದಿನ ಅನೇಕ ಮದುವೆ ಮತ್ತು ಕುಟುಂಬ ಜೀವನಗಳನ್ನು ಗಮನಿಸಿದರೆ ಹೆಣ್ಣು ಹೆತ್ತವರಿಗೆ ಅಷ್ಟೇ ಅಲ್ಲ ಗಂಡು ಮಕ್ಕಳಿದ್ದವರಿಗೂ ಭಯವಾಗುತ್ತದೆ. ಪತಿ-ಪತ್ನಿಯರ ಸುಂದರ ಬಾಳಿನಲ್ಲಿ ಅದಾವ ಕ್ಷಣದಲ್ಲಿ ಅನಿಷ್ಟ ಘಟನೆಗಳು ನಡೆಯುತ್ತವೆ . ಅದಾರಿಗೆ ಗೊತ್ತು ! ಇಂದು ಬಡವ ಮತ್ತು ಶ್ರೀಮಂತರೆನ್ನದೆ ಎಲ್ಲರನ್ನೂ ಕಾಡುತ್ತಿರುವ ಭಯಾನಕ ಸಮಸ್ಯೆ .ಮಕ್ಕಳು ವಿದ್ಯಾವಂತರಾಗಿದ್ದಾಗಿಯೂ ಆರ್ಥಿಕವಾಗಿ ಸಬಲರಾಗಿದ್ದಾಗಲೂ ಈ ಸಮಸ್ಯೆ ಪಾಲಕರನ್ನು ಕಾಡುತ್ತಿದೆ.

ಇಂದಿನ ನಾಗಾಲೋಟದ ನಮ್ಮ ಜೀವನದಲ್ಲಿ ನಾವು ಮಾಡುತ್ತಿರುವುದೇನು? ಎಂದು ವಿಚಾರಿಸಿದಾಗ ಬೆಳಿಗ್ಗೆ ರಸ್ತೆಯಲ್ಲಿ ಓಡಾಡುತ್ತಾ ಸೌಂದರ್ಯಕ್ಕೆ ಮರುಳಾಗಿ ಕನ್ಯೆಯನ್ನು ಭೇಟಿ ಮಾಡಿ ಮಧ್ಯಾಹ್ನ ಚಲನಚಿತ್ರ ಮಂದಿರದಲ್ಲಿ ಚಲ್ಲು ಚೆಲ್ಲಾಗಿ ಪ್ರೇಮ ಮಾಡಿ ಸಾಯಂಕಾಲ ಫಲಹಾರ ಮಂದಿರದಲ್ಲಿ ಮದುವೆಯಾಗಿ ಮರುದಿನವೇ ಗಂಡ ಹೆಂಡಿರು ವಿವಾಹ ವಿಚ್ಛೇದನವಾಗುವ ಏರ್ಪಾಡು ಮಾಡಿಕೊಳ್ಳುತ್ತಾರೆ. ಎಂತಹ ದುರಂತ! ಆತುರ ನಿರ್ಧಾರ! ಇದರ ಅರ್ಥ ವಿವಾಹವಾಗುವ ಮತ್ತು ವಿವಾಹವಾಗಿರುವವರೆಲ್ಲ ಹೀಗೆ ಮನಸೋ ಇಚ್ಛೆ ವರ್ತಿಸುತ್ತಾರೆಂದೇನಲ್ಲ.

ಕೆಲವರು ಮದುವೆಯಾಗಿರುವವರು ತಮ್ಮ ಸಂಸಾರ ಜೀವನವನ್ನು ಬಹು ನಿಷ್ಠೆಯಿಂದ ,ಪ್ರೀತಿಯಿಂದ, ಕಾಳಜಿಯಿಂದ ಸಾಗಿಸುತ್ತಾರೆ. ಆದರೆ ಅಂತಹ ದಂಪತಿಗಳ ಆದರ್ಶ ಮತ್ತು ಕರ್ತವ್ಯ ನಿಷ್ಠೆಗಳನ್ನು ಬಹು ಜನರು ಅನುಸರಿಸುತ್ತಿಲ್ಲ. ವಿವಾಹವು ಪತಿಪತ್ನಿಯರ ನಡುವಿನ ಶಾಶ್ವತ ಒಡನಾಟದ ಬದ್ಧತೆಯಾಗಿದೆ. ಇದನ್ನೆಲ್ಲಾ ಆಳವಾಗಿ ಚಿಂತಿಸಬೇಕಾಗಿದೆ. ಕೆಲವು ವಿಪರೀತ ಸಂದರ್ಭ ಗಳಲ್ಲಿ ಹೊಂದಾಣಿಕೆಯು ಸಾಧ್ಯ ವಾಗದೇ ಹೋಗಬಹುದು. ಅಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಇಬ್ಬರ ಮಾನಸಿಕ ನೆಮ್ಮದಿಗಾಗಿ ವಿಚ್ಚೇದನಕ್ಕೆ ಮೊರೆಹೋಗಬೇಕಾಗುವುದು. ಕುಟುಂಬವು ಸಮಾಜದ ಒಂದು ಅತ್ಯಂತ ಚಿಕ್ಕ ಘಟಕ .ಸಮಾಜದ ಸ್ವಾಸ್ಥವನ್ನು ಕಾಪಾಡಲು ಕುಟುಂಬವು ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಹತ್ತಿರವಿದ್ದು ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲ್ಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ

ಜಿ.ಎಸ್.ಎಸ್ ಅವರ ಭಾವಗೀತೆ ವ್ಯಕ್ತಿಯ ಅಹಂಕಾರ ಮತ್ತು ಹೊಂದಾಣಿಕೆಯ ಕುರಿತು ಚೆನ್ನಾಗಿ ಹೇಳುತ್ತದೆ .
ಈ ಹೊಂದಾಣಿಕೆ ಎನ್ನುವುದು ಒಂದು ಕಛೇರಿಯಲ್ಲಾಗಲಿ ,ಸಂಸ್ಥೆಯಲ್ಲಾಗಲಿ ಇದ್ದಾಗಲೇ ಕೆಲಸ ಸುಗಮವಾಗುವುದು. ಹಾಗಾಗಿ ಕೇವಲ ಕುಟುಂಬದಲ್ಲಿ ಮಾತ್ತವಲ್ಲದೆ ಇತರ ಕ್ಷೇತ್ರದಲ್ಲಿಯೂ ಹೊಂದಾಣಿಕೆಯ ಅವಶ್ಯಕತೆಯಿದೆ. ಯಾಂತ್ರಿಕ ಜೀವನವನ್ನು ಮಿತಗೊಳಿಸಿ ನಿಸರ್ಗದತ್ತ ಮಾನವ ಸಹಜ ಪ್ರೀತಿ ,ವಿಶ್ವಾಸ ,ಗೌರವ ಭಾವನೆಗಳನ್ನು ಹಂಚಿಕೊಂಡು ಕುಟುಂಬದೊಡನೆ ಬೆರೆತು ಜೀವನ ಸಾಗಿಸುವುದೇ ಸಾರ್ಥಕ್ಯ. ಇದರೊಟ್ಟಿಗೆ ಸಮಾಜ ಮತ್ತು ಸಮಾನ ಮನಸ್ಕ ಸ್ನೇಹಿತರೊಡನೆ ಸೇರಿ ನಮ್ಮಿಂದಾದ ಅಲ್ಪ ಸಮಾಜಮುಖಿ ಕೈಂಕರ್ಯ ಮಾಡಲು ಮುಂದಾಗೋಣ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter