ವ್ಯಾಸರಾಯ ಬಲ್ಲಾಳ ಪ್ರಶಸ್ತಿ ಪ್ರದಾನ 

ಮುಂಬೈ ವಿವಿ ಕನ್ನಡ ವಿಭಾಗ, ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬೈ : ವ್ಯಾಸರಾಯ ಬಲ್ಲಾಳ ಶತಮಾನೋತ್ಸವ ಸಂಭ್ರಮ ಮತ್ತು ವ್ಯಾಸರಾಯ ಬಲ್ಲಾಳ ಪ್ರಶಸ್ತಿ ಪ್ರದಾನ 

ಮುಂಬೈ, ಡಿ.4: ಡಿ.1ರಂದು  ಮುಂಬೈ ವಿವಿ ಕನ್ನಡ ವಿಭಾಗ, ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬೈ ಇವರ ಸಂಯುಕ್ತ ಆಯೋಜನೆಯಲ್ಲಿ ಕಲೀನಾ ಕ್ಯಾಂಪಸ್ ನ ಜೆ. ಪಿ. ನಾಯಕ್ ಭವನದಲ್ಲಿ ‘ವ್ಯಾಸರಾಯ ಬಲ್ಲಾಳ  ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮ ಜರುಗಿತು. ಬಲ್ಲಾಳರ ಸ್ಮರಣಾರ್ಥ ಇಡೀ ದಿನ ನಡೆದ ಈ ಕಾರ್ಯಕ್ರಮದಲ್ಲಿ ಬಲ್ಲಾಳರ ಕನ್ನಡ ಕೈಂಕರ್ಯ, ಕತೆ, ಕಾದಂಬರಿಕಾರ, ಪತ್ರಕರ್ತರಾಗಿ ವ್ಯಾಸರಾಯ ಬಲ್ಲಾಳರು ಎಂಬ ವಿಷಯಗಳ ಮೇಲೆ ವಿವಿಧ ಉಪನ್ಯಾಸಗಳು  ಮತ್ತು ವ್ಯಾಸರಾಯ ಬಲ್ಲಾಳ ಪ್ರಶಸ್ತಿ ಪ್ರದಾನವನ್ನು ಹಮ್ಮಿಕೊಳ್ಳಲಾಗಿತ್ತು.  ನಾಮಾಂಕಿತ ಸಾಹಿತಿ, ವಿಮರ್ಶಕರು, ಚಿಂತಕರು ಆದ ಪ್ರೊ.ಕೃಷ್ಣಮೂರ್ತಿ ಹನೂರ, ಖ್ಯಾತ ವಿಮರ್ಶಕ, ಕಾದಂಬರಿಕಾರ ಡಾ.ಬಿ. ಜನಾರ್ದನ ಭಟ್, ಕರ್ನಾಟಕ ಸಂಘ ಮುಂಬೈಯಿಯ ಅಧ್ಯಕ್ಷರಾದ ಡಾ. ಭರತ್ ಕುಮಾರ್ ಪೊಲಿಪು,  ಮುಂಬೈ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ  ಉಪನ್ಯಾಸಗಳನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿವಿ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರೂ ಆದ ಡಾ. ಜಿ. ಎನ್. ಉಪಾಧ್ಯ ಅವರು ವಹಿಸಿದ್ದರು. 

‘ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ’ ಕೊಡಮಾಡುವ  ‘ವ್ಯಾಸರಾಯ ಬಲ್ಲಾಳ ಕತಾಪ್ರಶಸ್ತಿ’ಯನ್ನು ಪ್ರೊ.ಕೃಷ್ಣಮೂರ್ತಿ ಹನೂರ ಅವರಿಗೆ,  ‘ವ್ಯಾಸರಾಯ ಬಲ್ಲಾಳ ಕಾದಂಬರಿ ಪ್ರಶಸ್ತಿ’ಯನ್ನು ಡಾ.ಬಿ.ಜನಾರ್ದನ ಭಟ್ ಅವರಿಗೆ ನೀಡಿ ಗೌರವಿಸಲಾಯಿತು.. ‘ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ’ವನ್ನು ಮುಂಬೈ ವಿವಿ ಕನ್ನಡ ವಿಭಾಗ ಎಂ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಅವರಿಗೆ ನೀಡಲಾಯಿತು. ಎಲ್ಲ ಸನ್ಮಾನಿತರಿಗೆ ಶಾಲು ಹೊದಿಸಿ, ಫಲಕ, ನಗದು, ಕೃತಿ ನೀಡಿ ಗೌರವಿಸಲಾಯಿತು. ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ’ವು ಏರ್ಪಡಿಸಿದ್ದ ‘ವ್ಯಾಸರಾಯ ಬಲ್ಲಾಳ ಕತಾ ಸ್ಪರ್ಧೆ’ಯ ವಿಜೇತರ ಹೆಸರುಗಳನ್ನು  ಸಹ ಈ ಸಂದರ್ಭದಲ್ಲಿ  ಘೋಷಿಸಲಾಯಿತು. 

ಕಾರ್ಯಕ್ರಮದಲ್ಲಿ ಮುಂಬೈಯ ಹಿರಿಯ ಸಾಹಿತಿ, ಕಾದಂಬರಿಕಾರರಾದ ಮಿತ್ರಾ ವೆಂಕಟ್ರಾಜ್,  ಡಾ. ಸುನೀತಾ ಶೆಟ್ಟಿ,  ವ್ಯಾಸರಾಯ ಬಲ್ಲಾಳರ ಮಕ್ಕಳಾದ ಅರವಿಂದ ಬಲ್ಲಾಳ, ಪೂರ್ಣಿಮಾ ಹೆಬ್ಬಾರ್, ಅಂಜಲಿ ಅರುಣ್, ಹಿರಿಯ ಸಾಹಿತಿ ಡಾ. ಜೀವಿ ಕುಲಕರ್ಣಿ, ಯಜ್ಞನಾರಾಯಣ ಸುವರ್ಣ, ಡಾ. ಉಮಾ ರಾಮರಾವ್, ನಗರದ ಇನ್ನಿತರ ಅನೇಕ ಗಣ್ಯರು ಪಾಲ್ಗೊಂಡಿದ್ದರು.  ಬಲ್ಲಾಳರ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಈ ಕಾರ್ಯಕ್ರಮವು ವಿಭಾಗದ ಸಹಪ್ರಾಧ್ಯಪಕರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ಸಂಯೋಜನೆಯಲ್ಲಿ ನಡೆಯಿತು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter