ಅಂದೆಂದೋ ಪಿಸುಮಾತಲಿ ನೀ
ಉಸಿರಿದ ಮಾತು ನನ್ನ ಎದೆ ತಾಕುವ ಮೊದಲೇ
ಆರಿಹೋಯಿತು
ಜಗತ್ತಿಗೆ ಕೇಳಿಸುವಂತೆ ಆಡಿದ
ಮಾತು
ಎದೆಯಾಳಕ್ಕಿಳಿದು, ಕಸಿವಿಸಿಯಾಯಿತು
ಅಪಮಾನದ ಮಾತಿಗೆ ಶಬ್ದ ಹೆಚ್ಚು
ಪ್ರಶಂಶೆಯ ಆಡಂಬರ ಅಗತ್ಯವಿಲ್ಲದಿದ್ದರೂ
ಅದು ಮನಸಿಗೆ ಹಿತ ತರುವುದು ಸಹಜ
ಏಕಾಂತದಲಿ ಕೈ ಹಿಡಿದರೂ
ಆ ಪ್ರೀತಿಗೆ ಗುಂಪಿನಲಿ ಸ್ವಲ್ಪ ಒಗ್ಗರಣೆ ಮುಖ್ಯ
ತನ್ನ ಬಣ್ಣಿಸುವ ಪ್ರಕ್ರಿಯೆ
ಜಗದಲಿ ಶುರುವಾಗಿ ಯುಗಗಳಾಯಿತು
ಮುಜುಗರ ಮಾರು ದೂರವಾಗಿ,
ಒಂದು ಪೆಕರ ನಗೆ ಮೂಡೇ ಮೂಡುತ್ತದೆ ಪ್ರಶೆಂಸೆಗೆ,
ಅದೊಂದು ಜಗವ ಗೆದ್ದ ಹೆಮ್ಮೆ
ನುಡಿದು ಬಿಡಬೇಕು ಆ ಒಂದು ಮಾತು
ಒಪ್ಪಿಗೆಯೋ, ತಿರಸ್ಕಾರವೋ ಏನೋ ಒಂದು
ಸಂಭವಿಸುತ್ತದೆ
ಕಾಲ ಸರಿದಮೇಲೆ ಎಂತಹ ಗಟ್ಟಿ ಮಾತಿಗೂ
ಬೆಲೆಯಿರುವುದಿಲ್ಲ
ಕವಿತೆ ಹುಟ್ಟುವುದಿಲ್ಲ, ಮೌನವಿಲ್ಲದೆ
ಲೌಕಿಕ ಗದ್ದಲದಲ್ಲಿ ಮೌನವ
ಹುಡುಕಬೇಕು
ಮಾತಿಗೆ ಮಾತನು ಪೋಣಿಸಿ
ದಾರಿ ಕಾಯ್ದ ಮಾತನು
ಬಿಡುಗಡೆ ಮಾಡಬೇಕು
- ಎಂ.ವಿ. ಶಶಿಭೂಷಣ ರಾಜು
ಪೆನ್ಸಿಲ್ವೇನಿಯ, ಅಮೇರಿಕ
2 thoughts on “ದಾರಿ ಕಾಯ್ದ ಮಾತು”
ಕವಿತೆ ಸುಂದರವಾಗಿದೆ. ಪಶ್ಚಿಮದ ಗಾಳಿಯಲ್ಲೂ ಪೂರ್ವದ ಗಾಳಿ ಇದರಲ್ಲಿ ಅಡಕವಾಗಿದೆ. ಅಭಿನಂದನೆಗಳು.
ತುಂಬು ಹೃದಯದ ಧನ್ಯವಾದಗಳು 🙏