ನಿರಂಜನರ ‘ರಂಗಮ್ಮನ ವಠಾರ’

ಪ್ರಗತಿಶೀಲ ಪಂಥದ ಪ್ರಮುಖ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ನಿರಂಜನರು (ಕುಳಕುಂದ ಶಿವರಾಯ: 1924-1991) 1947ರಲ್ಲಿ ‘ಸಂಧಿಕಾಲ’ ಮತ್ತು ‘ರಕ್ತ ಸರೋವರ’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದಾಗ ಅವುಗಳಲ್ಲಿ ಹಸಿಯಾದ ನಿರೂಪಣೆ, ಕೋಪ ಮತ್ತು ಮಿತಿ ಮೀರಿದ ಅನುಕಂಪದ ಭಾವನೆಗಳು ತುಂಬಿದ್ದವು. ಅನುಭವವು ಬೆಳೆದಂತೆ ಅವರು ಕಾದಂಬರಿಯ ಪ್ರಕಾರಕ್ಕೆ ಕೈ ಹಾಕಿದಾಗ ಭಾಷೆಯನ್ನು ಸಂಯಮದಿಂದ ಬಳಸಿ ‘ವಿಮೋಚನೆ’, ‘ಚಿರಸ್ಮರಣೆ’, ‘ಮೃತ್ಯುಂಜಯ’, ‘ರಂಗಮ್ಮನ ವಠಾರ’ ಮುಂತಾದ ಕಾದಂಬರಿಗಳನ್ನು ರಚಿಸಿ ಕನ್ನಡದ ಮಹತ್ವದ ಲೇಖಕರೆನಿಸಿಕೊಂಡರು.

ಕನ್ನಡದ ವಿಶಿಷ್ಟ ಕಾದಂಬರಿಗಳಲ್ಲಿ ಒಂದಾಗಿರುವ ‘ರಂಗಮ್ಮನ ವಠಾರ’ (1954) ವು ಬದುಕಿನ ಕೆಳಸ್ತರದಲ್ಲಿರುವವರ ನೋವು ನಲಿವುಗಳ ಸಹಜ ಸ್ವಾರಸ್ಯ ಚಿತ್ರಣವಾಗಿದೆ. ಬೆಳಗ್ಗಿನ ಬೆಚ್ಚಗಿನ ವಾತಾವರಣದಲ್ಲಿ ನಿದ್ದೆಯಿಂದ ಎದ್ದೇಳುವ ಮನೆಮಂದಿಯ ಪರಿಚಯದೊಂದಿಗೆ ಕಾದಂಬರಿಯು ಆಪ್ತವಾಗಿ ಓದಿಸುತ್ತಾ ಸಾಗುತ್ತದೆ. ಟಿ. ಆರ್. ಮಿಲ್ಸ್ ಅಂಗಡಿಯ ನಾರಾಯಣ, ಅವನ ಬಡಕಲು ತಾಯಿ ಮತ್ತು ಮದುವೆ ಪ್ರಾಯಕ್ಕೆ ಬಂದ ತಂಗಿ ಅಹಲ್ಯಾ. ಮತ್ತೊಂದು ಮನೆಯಲ್ಲಿ ರಾಜಾಮಿಲ್ಸ್‍ನ ಸಮಯ ಪಾಲಕ ನಾಗರಾಜರಾಯ – ಪದ್ಮಾವತಿ ದಂಪತಿ. ಅವರ ಮನೆಗೆ ತಾಗಿಕೊಂಡಿರುವ ಕೊಠಡಿಯಲ್ಲಿ ಹಿಂದೂಸ್ಥಾನ ವಿಮಾನ ಕಾರ್ಖಾನೆಯ ಗುಮಾಸ್ತ ನಾರಾಯಣ – ಕಾಮಾಕ್ಷಿ. ಪಕ್ಕದಲ್ಲಿ ಒಂಟಿ ಹೆಂಗಸು ಕಮಲಮ್ಮ. ಅವಳ ಮತ್ತು ರಂಗಮ್ಮನ ಮನೆಯ ನಡುವೆ ಹಸ್ತಸಾಮುದ್ರಿಕ ಜ್ಯೋತಿಷಿ ಪದ್ಮನಾಭ, ಅವರ ಮನೆಗಳ ಕೆಳಗಿನ ಸಾಲಿನಲ್ಲಿ ವೆಂಕಟಸುಬ್ಬಮ್ಮ ಮತ್ತು ಮಕ್ಕಳು. ಎದುರಿನ ಮನೆಯಲ್ಲಿ ವಿಧವೆ ರಾಜಮ್ಮ ಮತ್ತು ವಯಸ್ಸಿಗೆ ಬಂದ ಇಬ್ಬರು ಗಂಡುಮಕ್ಕಳು. ಬಲಭಾಗದಲ್ಲಿ ಪೋಲೀಸ್ ಪೇದೆ ರಂಗಸ್ವಾಮಿ ಮತ್ತು ಅವನ ಹೆಂಡತಿ ಸರೋಜಮ್ಮ. ಎದುರು ಭಾಗದಲ್ಲಿ ಉಪಾಧ್ಯಾಯ ಲಕ್ಷ್ಮೀನಾರಾಯಣಯ್ಯ, ಅವನ ಐವರು ಮಕ್ಕಳು ಮತ್ತು ಗಂಡನಿಂದ ಉಪೇಕ್ಷಿತಳಾದ ತಂಗಿ ಸುಮಂಗಳ. ಆ ಮನೆಗಳ ಅಡ್ಡಗೋಡೆಯ ಆಚೆಗಿನ ಕೊಠಡಿಯಲ್ಲಿ ಮೂವರು ವಿದ್ಯಾರ್ಥಿಗಳು. ಎರಡನೇ ಕೊಠಡಿಯಲ್ಲಿ ವಿಮಾ ಸಂಸ್ಥೆಯ ಪ್ರತಿನಿಧಿ ಚಂದ್ರಶೇಖರಯ್ಯ. ಮೂರನೇ ಕೊಠಡಿಯಲ್ಲಿ ಸಾವಿತ್ರಮ್ಮ, ಅವರ ಮಗ ಜಯರಾಮು ಮತ್ತು ಅವನ ತಂಗಿ ರಾಧಾ. ವಠಾರದ ಹಿಂಭಾಗದ ಮನೆಯಲ್ಲಿ ಸುಬ್ಬುಕೃಷ್ಣಯ್ಯ ಮತ್ತು ಅವನ ಮನೆಯ ಮುಂದೆ ನಾರಾಯಣಿಯ ಸಂಸಾರ. ಇವರೆಲ್ಲರಿಗಿಂತ ಮೊದಲೇ ಏಳುವ ರಂಗಮ್ಮನು ಎಲ್ಲ ಸಂಸಾರಗಳನ್ನು ತನ್ನ ಅಧೀನಕ್ಕೆ ಒಳಪಡಿಸಿ ಅವರ ಬೇಕು ಬೇಡಗಳನ್ನು ತನ್ನಿಚ್ಛೆಯಂತೆ ನಡೆಸುವ ಮನೋಭಾವದವಳು.

ನಾರಾಯಣಿಯ ಅನಿರೀಕಿತ ಮರಣವು ರಂಗಮ್ಮನ ವಠಾರದವರ ದೈನಂದಿನ ಕೆಲಸಗಳನ್ನು ಅಸ್ತವ್ಯಸ್ತಗೊಳಿಸುತ್ತದೆ. ತಾಯಿಯನ್ನು ಕಳೆದುಕೊಂಡ ಮೂವರು ಮಕ್ಕಳನ್ನು ನೋಡಿ ಎಲ್ಲರೂ ಮರುಗುತ್ತಾರೆ. ಕಟ್ಟುನಿಟ್ಟಾಗಿ ಕಾನೂನು ಪಾಲಿಸುತ್ತಿರುವ ರಂಗಮ್ಮನೂ ಮೆದುವಾಗುತ್ತಾರೆ. ಬೆಳಗ್ಗೆ ಬೇಗನೆ ನೀರು ಬಿಡುತ್ತಾರೆ. ವಿದ್ಯುತ್ ನಿಲ್ಲಿಸದೆ ರಿಯಾಯಿತಿಗಳನ್ನು ತೋರಿಸುತ್ತಾರೆ. ನಿರ್ಗತಿಕನೂ ಬಡಪಾಯಿಯೂ ಆದ ನಾರಾಯಣಿಯ ಗಂಡನನ್ನು ಆಕೆಗೆ ವಠಾರದಲ್ಲೇ ಉಳಿಸಿಕೊಳ್ಳಬಹುದಿತ್ತು. ಹಾಗೆ ಮೊದಲಾದರೆ ಅದಕ್ಕೆ ಕೊನೆಯಿಲ್ಲ. ಎಲ್ಲರಂತೆ ಬಾಡಿಗೆಯನ್ನು ಕೊಡದೆ ಬದುಕುವುದೆಂದರೆ ಒಂದು ರೀತಿಯಲ್ಲಿ ಅದೂ ಅಸಮಾನತೆಯೇ ಆಗುವುದಲ್ಲದೆ ಇತರರ ಹೊಟ್ಟೆಕಿಚ್ಚಿಗೂ ತುತ್ತಾಗುವನು. ಆದ್ದರಿಂದ ಮೂರು ತಿಂಗಳುಗಳ ಬಾಡಿಗೆಯನ್ನು ಮನ್ನಾ ಮಾಡಿ, ಹೆಂಡತಿಯ ಶವ ಸಂಸ್ಕಾರಕ್ಕೆಂದು ಹಣ ನೀಡಿದ ಆಕೆಗೆ ತನ್ನೊಳಗಿನ ಕನಿಕರವನ್ನು ಬತ್ತಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ನಾರಾಯಣಿಯ ಗಂಡ ಮತ್ತು ಮಕ್ಕಳು ಮನೆಯನ್ನು ಖಾಲಿ ಮಾಡಿದಾಗ ರಂಗಮ್ಮನ ಗುಣಗಳಿಗೆ ಹೊಂದಿಕೊಂಡು ಹೋಗುವಂಥ ಶಂಕರನಾರಾಯಣಯ್ಯನು ಆಕೆಯ ಕರಾರುಗಳಿಗೆ ಒಪ್ಪಿ ಮುಂಗಡವಾಗಿ ಬಾಡಿಗೆಯನ್ನು ನೀಡಿ, ಕರಾರುಪತ್ರವನ್ನು ಬರೆಸಿಕೊಳ್ಳುವಾಗ ರಂಗಮ್ಮನು ನಾರಾಯಣಿ ತೀರಿಕೊಂಡ ವಿಚಾರವನ್ನು ಮುಚ್ಚಿಡುತ್ತಾಳೆ. ಸತ್ತ ಮನೆಯಲ್ಲಿ ಶಂಕರನಾರಾಯಣಯ್ಯನು ವಾಸಿಸಲಾರ ಎಂಬ ಭಯ ಆಕೆಗೆ ಇರುತ್ತದೆ. “ಅದರಲ್ಲಿ ಏನೀಗ ತಪ್ಪು? ಹುಟ್ಟೋದು ಎಷ್ಟು ಸ್ವಾಭಾವಿಕವೋ ಸಾಯೋದೂ ಅಷ್ಟೇ ಸ್ವಾಭಾವಿಕ. ಪಟ್ಟಣವಾಸದಲ್ಲಿ ಅದಕ್ಕೆಲ್ಲ ಮಹತ್ವ ಕೊಡಲಾಗುತ್ಯೇ?” (ಪುಟ 60) ಎನ್ನುವ ಶಂಕರನಾರಾಯಣಯ್ಯನ ಮಾತು ಆತನ ಮುಕ್ತ ಮನಸ್ಸನ್ನು ಸೂಚಿಸುತ್ತದೆ. ನಗರವಾಸಿಗಳ ಪಾಲಿಗೆ ವ್ಯಕ್ತಿಯ ಸಾವು ಮಾಮೂಲು ಸಂಗತಿ ಎಂಬ ಧ್ವನಿಯೂ ಇಲ್ಲಿದೆ. ಇಷ್ಟು ಕಡಿಮೆ ದರದಲ್ಲಿ ಶಂಕರನಾರಾಯಣಯ್ಯನಿಗೆ ಬೇರೆ ಮನೆಯು ಬಾಡಿಗೆಗೆ ಸಿಗಲಾರದು ಎಂಬುದೂ ಮುಖ್ಯವಾಗುತ್ತದೆ. ಬಾಡಿಗೆಯ ವಿಚಾರದಲ್ಲಿ ಕರಾರು ಪತ್ರವನ್ನು ಬರೆಸುವ ರಂಗಮ್ಮನು ಹಣದ ವಿಚಾರದಲ್ಲಿ ಬಿಗಿಯಾಗಿರುತ್ತಾಳೆ. ಆದರೆ ತನಗೆ ಸಹಿಯನ್ನು ಹಾಕಲು ಬರುವುದಿಲ್ಲವೆಂಬ ಕಾರಣವನ್ನು ನೀಡಿ ಅದನ್ನು ಹಾಗೆಯೇ ಇಟ್ಟುಕೊಳ್ಳುವ ಆಕೆಗೆ ಹೆಬ್ಬೆಟ್ಟಿನ ಗುರುತನ್ನು ಹಾಕಬಹುದಿತ್ತಲ್ಲವೇ ಎಂಬ ಪ್ರಶ್ನೆಯು ಮೂಡುತ್ತಿದ್ದಂತೆ ತಾವು ರೂಪಿಸುವ ಕಾನೂನು ಬೇರೆಯವರಿಗಾಗಿಯೇ ಹೊರತು ತಮಗೆ ಅನ್ವಯಿಸುವುದಿಲ್ಲ ಎಂಬ ಧೋರಣೆಯು ವ್ಯಕ್ತವಾಗುತ್ತದೆ. ನಾರಾಯಣಿಯ ಅಂತ್ಯಕರ್ಮಕ್ಕೆಂದು ರಂಗಮ್ಮನು ಹಣವನ್ನು ಕೊಡುವ ಸನ್ನಿವೇಶ, ತೋರಿಕೆಗಾದರೂ ಎಲ್ಲರ ಯೋಗಕ್ಷೇಮವನ್ನು ವಿಚಾರಿಸುವ ರೀತಿ, ಅಕ್ಕಪಕ್ಕದವರು ಕಾಯಿಲೆ ಬಿದ್ದಾಗ ಅವರು ನಡೆಸುವ ಆರೈಕೆಗಳಲ್ಲಿ ಅವರ ಧನಾತ್ಮಕ ಗುಣಗಳು ಪ್ರಕಟಗೊಂಡರೆ ನಾರಾಯಣಿಯ ಗಂಡ ಮಕ್ಕಳೊಡನೆ ಮನೆಬಿಟ್ಟು ಹೋಗುವಂತೆ ಮಾಡುವ, ಖಾಲಿ ಮನೆಯನ್ನು ನೋಡಲು ಬಂದಾಗ ಅವರನ್ನು ಒಪ್ಪಿಸಲು ಪ್ರಯೋಗಿಸುವ ವಾಕ್ಚಾತುರ್ಯ, ಮಳೆಗಾಲದಲ್ಲಿ ಸೋರುವ ಸೂರನ್ನು ಸರಿಪಡಿಸದೆ ‘ನಾನೇನು ಬಂಗಲೆಯಲ್ಲಿದ್ದೇನಾ? ಇವರು ಕೊಡುವ ಬಾಡಿಗೆಗೆ ಇಷ್ಟು ಸೌಕರ್ಯಗಳು ಧಾರಾಳ’ ಎಂದುಕೊಂಡು ವಠಾರದ ಕೆಂಗಣ್ಣಿಗೆ ಗುರಿಯಾಗಿ ತಟಸ್ಥರಾಗಿ ಉಳಿಯುವ ಮನೋಭಾವದಲ್ಲಿ ಅವರ ಋಣಾತ್ಮಕ ಸ್ವಭಾವಗಳು ವ್ಯಕ್ತವಾಗುತ್ತವೆ. ವ್ಯಕ್ತಿಯೊಬ್ಬರ ಹಲವು ಮುಖಗಳು ಅನಾವರಣಗೊಳ್ಳುತ್ತವೆ. ವಠಾರ ಭರ್ತಿಯಾದುದರಿಂದ ರಂಗಮ್ಮ ನೆಮ್ಮದಿಯನ್ನು ಅನುಭವಿಸಿದರೂ ನಾರಾಯಣಿಯಂತೆ ತಾನೂ ಮೂರು ಮಕ್ಕಳ ತಾಯಿ ಎಂಬ ವಿಚಾರದ ನೆನಪಿಗೆ ಬರುತ್ತಿದ್ದಂತೆಯೇ ತನ್ನ ಮಕ್ಕಳು, ಸೊಸೆಯಂದಿರ ನೆನಪಾಗಿ ಭಾವುಕಳಾಗುತ್ತಾಳೆ. ಅವರೆಲ್ಲರೂ ದೂರವಾಗಿರುವುದರಿಂದ ಏಕಾಂಗಿತನವನ್ನು ಅನುಭವಿಸುತ್ತಾಳೆ. ಆದರೆ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗದೆ ವಠಾರವನ್ನು ಶಿಸ್ತಿನಿಂದ ನಡೆಸಿಕೊಂಡು ಹೋಗುವ ಆಕೆಯು ಅಲ್ಲಿನ ಶಕ್ತಿಯ ಕೇಂದ್ರವಾಗಿದ್ದಾಳೆ.

ಶಂಕರನಾರಾಯಣಯ್ಯ ಮತ್ತು ಚಂಪಾ ದಂಪತಿ ಲವಲವಿಕೆ ಮತ್ತು ಜೀವಂತಿಕೆಯ ಪ್ರತೀಕವಾಗಿದ್ದಾರೆ. ಅಹಲ್ಯ ಹೆರಳು ಹಾಕಿಕೊಳ್ಳುತ್ತಾ ಹಾಡುವುದನ್ನು ಕೇಳಿಸಿಕೊಂಡ ಚಂಪಾ ಆಕೆಯನ್ನು ಮನೆಗೆ ಆಹ್ವಾನಿಸಿ ಹಾಡಿಸಿ ತಾನೂ ಮೈಮರೆತು ಹಾಡುತ್ತಾಳೆ. ವಠಾರದ ಹೆಂಗಸರೆಲ್ಲರೂ ತಮ್ಮ ಮನೆಗೆಲಸವನ್ನು ಮರೆತು ಅಲ್ಲಿಗೆ ಬಂದು ಹಾಡುಗಳನ್ನು ಕೇಳುತ್ತಾರೆ. ಮುದ್ದಣ ಮನೋರಮೆಯರನ್ನು ನೆನಪಿಸುವ ಶಂಕರನಾರಾಯಣಯ್ಯ ಮತ್ತು ಚಂಪಾ ದಂಪತಿಯ ಸರಸ ಹಲವರಲ್ಲಿ ಬೇರೆ ಸಂವೇದನೆಗಳನ್ನು ಎಬ್ಬಿಸುತ್ತವೆ. ಅವರು ತಮ್ಮ ಪರಿಸ್ಥಿತಿಗೆ ತಕ್ಕಂತೆ ಕರುಬುತ್ತಾರೆ. ನಾಗರಾಜರಾಯರ ಹೆಂಡತಿ ಪದ್ಮಾವತಮ್ಮನು ತನ್ನ ಯೌವನದ ದಿನಗಳನ್ನು ನೆನೆದುಕೊಳ್ಳುತ್ತಾಳೆ. ಅವಳ ಪಾಲಿಗೆ ಸವಿ ಎನ್ನುವುದು ಅಲ್ಪವಾಗಿತ್ತು. ಶಂಕರನಾರಾಯಣಯ್ಯ ಮತ್ತು ಚಂಪಾ ದಂಪತಿಯರು ತಮ್ಮಂತೆ ಬಡವರಾಗಿದ್ದರೂ ಅವರ ಒಲವಿಗೆ ಕಡಿಮೆಯಿರಲಿಲ್ಲ. ಅಂಥ ಪ್ರೀತಿ ಸಿಗದ ಕೊರಗು ಆಕೆಯನ್ನು ಕಾಡಿದರೆ ಚಂಪಾಳ ಮಗುವನ್ನು ನೋಡಿದಾಗ ಎಂದೋ ಸತ್ತ ಮಕ್ಕಳ ನೆನಪು ಕಮಲಮ್ಮನಿಗೆ ಯಾತನೆಯನ್ನು ಉಂಟುಮಾಡುತ್ತದೆ. ತನ್ನ ದನಿಯು ಚಂಪಾ ಮತ್ತು ಅಹಲ್ಯೆಯಷ್ಟು ಇಂಪಾಗಿಲ್ಲ ಎಂದು ಕಾಮಾಕ್ಷಿಯು ಅಸೂಯೆ ಪಡುತ್ತಾಳೆ. ಶಂಕರನಾರಾಯಣಯ್ಯ ಮತ್ತು ಚಂಪಾಳ ಪ್ರೇಮವನ್ನು ಕಂಡು ಉತ್ತೇಜಿತಳಾದ ಸುಮಂಗಲೆಯು ಗಂಡನ ಶಾರೀರಿಕ ಸುಖವನ್ನು ಬಯಸುತ್ತಾಳೆ. ಹಾಡನ್ನು ಕೇಳಲು ಹೋಗಿದ್ದಕ್ಕೆ ಸರೋಜಮ್ಮನು ಗಂಡನ ಏಟುಗಳನ್ನು ತಿಂದು ಬಳಲುತ್ತಾಳೆ. ಇವರು ಅನುಭವಿಸುವ ಸೋಲಿಗೆ ವಿರುದ್ಧ ಪ್ರತಿಮೆಯಾಗಿ ಮೂಡಿಬಂದಿರುವ ಶಂಕರನಾರಾಯಣಯ್ಯ ಮತ್ತು ಚಂಪಾ ಜೋಡಿಯ ಐಹಿಕ ಸುಖಕ್ಕೆ ವೈದೃಶ್ಯವಾಗಿ ನಿರ್ಮಿಸಿದ ಪಾತ್ರಗಳ ಮನೋಭಾವಗಳ ಹಿನ್ನೆಲೆಯಲ್ಲಿ ಪ್ರೀತಿಯ ತೀವ್ರತೆಯೊಂದಿಗೆ ಶೋಷಣೆ ಮತ್ತು ಭಂಡತನಗಳ ನೆಲೆಗಳನ್ನೂ ಅರ್ಥಮಾಡಿಕೊಳ್ಳಬೇಕಾಗಿದೆ. ಚಂಪಾಳ ಹಾಡು ಕೇಳಲು ಹೋದುದಕ್ಕೆ ಸರೋಜಮ್ಮನ ಮೇಲೆ ಅವಳ ಗಂಡ ಶಿವಸ್ವಾಮಿ ಹೆಂಡತಿಯ ಮೇಲೆ ತೋರಿಸುವ ದರ್ಪ ಮತ್ತು ಕ್ರೌರ್ಯವು ಹೆಣ್ಣಿನ ಶೋಷಣೆಯನ್ನು ನೇರವಾಗಿ ವಿವರಿಸಿದರೆ ತನ್ನನ್ನು ಬಿಟ್ಟು ಇನ್ನೊಬ್ಬಳನ್ನು ಮದುವೆಯಾದ ಗಂಡನಿಂದ ವಿಚ್ಛೇದನವನ್ನು ಪಡೆಯದಿದ್ದರೂ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ವಠಾರಕ್ಕೆ ಬಂದು ತವರುಮನೆಯವರ ನೆರವಿನಿಂದ ಬದುಕುವ ವೆಂಕಟಸುಬ್ಬಮ್ಮನು ಅನುಭವಿಸುವ ಶೋಷಣೆಯು ಸೂಕ್ಷ್ಮರೂಪದಲ್ಲಿ ಪ್ರಕಟಗೊಂಡಿದೆ. ಓದುವ ಹುಡುಗರ ಪೈಕಿ ರಾಜಶೇಖರನು ಸಂಭಾವಿತನಾಗಿದ್ದರೆ ದೇವಯ್ಯನು ಕಿಡಿಗೇಡಿಯಾಗಿದ್ದು ವಠಾರದ ಹುಡುಗಿಯರನ್ನು ಚುಡಾಯಿಸುತ್ತಾನೆ. ಧೂಮಪಾನವನ್ನು ಮಾಡುತ್ತಾನೆ. ಜೊತೆಯಲ್ಲಿರುವ ಚಿಕ್ಕ ಹುಡುಗನನ್ನು ಚಲನಚಿತ್ರಕ್ಕೆ ಕರೆದುಕೊಂಡು ಹೋಗುತ್ತಾನೆ. ಕ್ರಿಕೆಟ್ ಪಂದ್ಯದ ಹುಚ್ಚನ್ನು ಹಿಡಿಸುತ್ತಾನೆ. ತಂದೆತಾಯಿಯರ ಕಣ್ಣಳತೆಯಿಂದ ದೂರವಿದ್ದವರು ಕೆಟ್ಟವರ ಸಂಗವನ್ನು ಮಾಡಿ ಹಾಳಾಗುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿರುವ ಚಿಕ್ಕ ಹುಡುಗನ ಆರೋಗ್ಯವು ಕೆಟ್ಟಾಗ ಆರೈಕೆಯನ್ನು ಮಾಡುವವನು ರಾಜಶೇಖರನೇ ಹೊರತು ದೇವಯ್ಯನಲ್ಲ. ತಲೆಮಾರುಗಳ ನಡುವಿನ ಅಂತರ ಮತ್ತು ಆಶೋತ್ತರಗಳು ಭಿನ್ನವಾಗಿರುವುದು ಸಹಜವಾದರೂ ಕೆಡುಕಿನ ಹಾದಿಯನ್ನು ಆಯ್ದಕೊಂಡರೆ ಅವರನ್ನು ಎಚ್ಚರಿಸಬೇಕಾದ ಜವಾಬ್ದಾರಿಯನ್ನು ಹೊತ್ತಿರುವ ರಂಗಮ್ಮನು ದೇವಯ್ಯನ ದುಶ್ಚಟಗಳ ಬಗ್ಗೆ ಆತನ ತಂದೆಯ ಹತ್ತಿರ ಹೇಳುತ್ತಾಳೆ. ತಂದೆಯು ವಠಾರಕ್ಕೆ ಬಂದು, ದೇವಯ್ಯನಿಗೆ ಚೆನ್ನಾಗಿ ಹೊಡೆದು, ಒದ್ದು ಬುದ್ಧಿಯನ್ನು ಕಲಿಸುತ್ತಾರೆ. ಎಲ್ಲರೂ ಇಲ್ಲಿ ನೋವು ನುಂಗಿಕೊಂಡು ಬಾಳುತ್ತಿದ್ದು, ಎಲ್ಲರ ವೇದನೆಯೂ ಒಂದೊಂದು ರೀತಿಯಲ್ಲಿರುವುದರಿಂದ ಯಾರೂ ಸುಖಿಗಳಲ್ಲ ಎಂಬ ವಿಚಾರವು ಮುಖ್ಯವಾಗುತ್ತದೆ.

ದೈಹಿಕವಾಗಿ ಮತ್ತು ಮಾನಸಿಕವಾಗಿ ವಠಾರದ ಚೌಕಟ್ಟನ್ನು ಮೀರಿ ನಿಲ್ಲುವ ಪಾತ್ರವಾದ ಜಯರಾಮು ಪುಸ್ತಕ ಮಾರಾಟಗಾರನ ಮಗನಾಗಿದ್ದರೂ ಅವಗೆ ಓದಲು ಪುಸ್ತಕಗಳಿಲ್ಲ ಎಂಬ ವ್ಯಂಗ್ಯವು ಮನಕರಗಿಸುತ್ತದೆ. ಬಡತನದಿಂದ ಕುಗ್ಗಿಹೋದ ಆತನು ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಂಡಿರುತ್ತಾನೆ. ಬಡತನದಲ್ಲೂ ಮಗನ ಓದಿಗೆ ಹಣವನ್ನು ಹೊಂದಿಸುವ ಅಪ್ಪ, ಅವರ ಕಾಲ ಕಳೆದಂತೆ ತನ್ನ ಭವಿಷ್ಯ, ತಂಗಿಯ ಮದುವೆಯ ಬಗ್ಗೆ ನೆನೆದು ತಲ್ಲಣಿಸುತ್ತಾನೆ. ಬಡವರಾಗಿರುವುದರಿಂದ ಆತನ ತಂಗಿ ರಾಧೆಗೆ ವರನು ಸಿಗುವುದಿಲ್ಲ. ಬಡವರಿಗೆ ಕೊಡೋಣವೆಂದರೆ ಅವರಿಗೆ ವರದಕ್ಷಿಣೆಯ ಆಸೆ. ಆದರೂ ಅವನ ತಂದೆತಾಯಿಯರ ನಡುವೆ ಪ್ರೀತಿಯಿದೆ. ಅದು ಶಂಕರನಾರಾಯಣಯ್ಯ ಚಂಪಾ ದಂಪತಿಯರಂತೆ ಚೆಲ್ಲುಚೆಲ್ಲಾದ ಪ್ರೀತಿಯಲ್ಲ. ನೋವು ನಲಿವುಗಳು ಬೆರೆತ ಪ್ರೌಢ ಗಂಭೀರ ಪ್ರೀತಿ. ಮಧ್ಯ ವಯಸ್ಸು ಸಮೀಪಿಸುತ್ತಿರುವಾಗಲೂ ಬತ್ತದ ಸೆಲೆ. ಆದರೆ ಜಯರಾಮು ಹೆಣ್ಣಿನ ಪ್ರೀತಿಗೆ ಹಾತೊರೆಯುವವನಲ್ಲ. ಪರಿಸ್ಥಿತಿಯ ಅರಿವು, ನಿರುದ್ಯೋಗ ಸಮಸ್ಯೆಯು ಆತನ ಮನಸ್ಸನ್ನು ಘಾಸಿಗೊಳಿಸುತ್ತದೆ. ಆ ನೋವಿನಿಂದ ತಾತ್ಕಾಲಿಕ ಬಿಡುಗಡೆಯನ್ನು ಪಡೆಯಲು ಆತನು ಹೊರಗೆ ಅಡ್ಡಾಡುತ್ತಾನೆ “ವಾರಕ್ಕೊಮ್ಮೆಯೋ ಎರಡು ವಾರಗಳಿಗೊಮ್ಮೆಯೋ ಜಯರಾಮು ಅಲ್ಲಿಗೆ ಬರುವುದಿತ್ತು. ಮನಸ್ಸು ತುಂಬಾ ಉಲ್ಲಾಸವಾಗಿದ್ದಾಗ ಇಲ್ಲವೇ ಬಹಳ ಪ್ರಕ್ಷುಬ್ಧಗೊಂಡಿದ್ದಾಗ. ಮನಸ್ಸು ಸಂತೋಷದಿಂದ ಚಿಲಿಪಿಲಿಗುಡುತಿದ್ದ ದಿನ, ಬಾಡಿದ್ದರೂ ಸರಿಯೆ ಚಿಗುರಿದ್ದರೂ ಸರಿಯೆ ನಿಸರ್ಗ ಸುಂದರವಾಗಿ ಕಂಡು ಆತನನ್ನು ತನ್ಮಯಗೊಳಿಸುತ್ತಿತ್ತು ಮನುಷ್ಯನನ್ನು ಮಣ್ಣಿಗೆ ಬಿಗಿದಿರುವ ಅಗೋಚರ ತಂತುವಿನ ವಿಷಯಕ್ಕಾಗಿ ಆತ ವಿಸ್ಮಯಗೊಳ್ಳುತ್ತಿದ್ದ. ಕರಿಯ ಬಂಡೆಗಳು ಅವನಿಗೆ ಪ್ರಿಯವಾಗಿ ತೋರುತ್ತಿದ್ದವು. ಮನಸ್ಸು ಬೇಸರದಲ್ಲಿದ್ದಾಗ ಸುತ್ತುಮುತ್ತಲಿನ ಶೂನ್ಯವೂ ಒಂದು ಬಗೆಯ ನೆಮ್ಮದಿಯನ್ನು ದೊರಕಿಸುತ್ತಿದ್ದವು” (ಪುಟ 124) ನಿರಂಜನರ ಬಳಿಕ ಸಾಹಿತ್ಯದ ಮುಖ್ಯವಾಹಿನಿಗೆ ಬಂದ ಮಲಯಾಳಂ ಭಾಷೆಯ ಮಹತ್ವದ ಬರಹಗಾರರಾದ ಎಂ. ಟಿ. ವಾಸುದೇವನ್ ನಾಯರ್ ಅವರ ಕತೆಗಳ ಪಾತ್ರಗಳೊಂದಿಗೆ ಇವನ ಪರಿಸ್ಥಿತಿಯನ್ನು ಹೋಲಿಸಬಹುದು. ತಮಗೆ ಏನೂ ಇಲ್ಲ ಎಂಬ ಯೋಚನೆಯಿಂದ ನೊಂದುಕೊಳ್ಳುವ, ಸೀಮಿತ ಆಸೆಗಳು ಪೂರೈಸದಿದ್ದಾಗ ಸಂಕಟಪಡುವ, ಅರಕ್ಷಿತ ಭಾವದಿಂದ ತಲ್ಲಣಿಸುವ, ಮನೆಯ ಅವ್ಯವಸ್ಥೆ-ಅಸ್ವಸ್ಥತೆ-ಸುತ್ತುಮುತ್ತಲಿನವರ ಕಿರಿಕಿರಿಗಳಿಂದ ತಪ್ಪಿಸಿಕೊಂಡು ನಿಶ್ಚಿಂತರಾಗಲು ಹಲವಾರು ಜಾಗಗಳನ್ನು ಹುಡುಕಿಕೊಂಡು ಅಲೆಯುವ ‘ನರಿಯ ಮದುವೆ’ಯ ಕುಂಞ, ‘ಅಕ್ಕ’ ಕತೆಯ ಅಪ್ಪು, ‘ಕತ್ತಲ ಆತ್ಮ’ದ ವೇಲಾಯುಧನ್, ‘ಚಿಕ್ಕ ಚಿಕ್ಕ ಭೂಕಂಪಗಳು’ ಕತೆಯ ಜಾನಕಿ ಮೊದಲಾದವರ ಮನಸ್ಥಿತಿಯು ಇದಕ್ಕೆ ಉದಾಹರಣೆಗಳಾಗಿವೆ. ಆದರೆ ಜಯರಾಮು ತನ್ನೊಳಗೆ ಕರಗಿಹೋಗದೆ ಸಮಾಜವನ್ನು ತೆರೆದ ಕಣ್ಣುಗಳಿಂದ ಗಮನಿಸುತ್ತಾನೆ. ತನಗಿಂತಲೂ ಹೀನಸ್ಥಿತಿಯಲ್ಲಿ ಬಾಳುವವರು ಇದ್ದಾರೆ ಎಂಬ ಸತ್ಯವನ್ನು ಅರಿತುಕೊಳ್ಳುತ್ತಾನೆ. ಕಡಿಮೆ ಪೈಸೆಗಳನ್ನು ಕೊಡುತ್ತಿದ್ದುದರಿಂದ ಶೌಚಾಲಯವನ್ನು ಶುಚಿಗೊಳಿಸುವವಳು ಬಾರದಿದ್ದಾಗ “ಕಕ್ಕಸು ಹೊಲಸಾಗಿದೆ. ಒಬ್ಬೊಬ್ಬರೂ ಬಾಡಿಗೆ ಜೊತೆಗೆ ಎಂಟಾಣೆ ಕೊಡ್ಲಿ. ಆಗ ಒಂದು ರೂಪಾಯಿ ಕಕ್ಕಸ್ ತೊಳೆಯೋಳಿಗೆ ಕೊಡೋಕೆ ಆಗೋಲ್ವೇ?” (ಪುಟ 130) ಎಂದು ರಂಗಮ್ಮನ ಮುಂದೆ ಹೇಳುವ ದಿಟ್ಟತನವು ಪರಿಸ್ಥಿತಿಯಿಂದ ಹುಟ್ಟಿದ ಅರಿವಿನ ಫಲವಾಗಿದೆ. ನಾರಾಯಣಿಯ ಮೇಲೆ ಸೌದೆ ಕಳವಿನ ಆರೋಪವನ್ನು ಹೊರಿಸಿದಾಗ ಆಕೆಯ ಮೇಲೆ ಅನುಕಂಪವನ್ನು ತೋರಿಸುವುದು ಅವನೊಬ್ಬನೇ. ‘ನಾರಾಯಣಿ ಕದ್ದದ್ದು ಹಣ ಹಾರ ಸೀರೆಗಳನ್ನಲ್ಲ. ಎರಡು ತುಂಡು ಸೌದೆಗಳನ್ನು. ಒಳ್ಳೆಯವಳೆನಿಸಿದ ನಾರಾಯಣಿ ಕಳ್ಳಿಯಾದಳು’ ಎಂದು ಕೊರಗುವಲ್ಲಿ ಬಡತನವು ಮನುಷ್ಯನನ್ನು ಹೀನ ಸ್ಥಿತಿಗೆ ತಳ್ಳುವ ಚಿತ್ರಣವನ್ನು ಕಾಣಬಹುದು. ಇದೇ ವಿಷಯವನ್ನು ವಸ್ತುವಾಗಿಟ್ಟುಕೊಂಡು ಆತನು ಬರೆದ ‘ಒಂದು ತುಂಡು ಸೌದೆ’ ಎಂಬ ಕತೆಯು ವಾಸ್ತವದ ಪ್ರತಿಫಲನವಾಗಿದ್ದು ‘ಕಥಾವಳಿ’ ಸಂಚಿಕೆಯಲ್ಲಿ ಪ್ರಕಟವಾದರೂ ಅವನಿಗೆ ಗೌರವಪ್ರತಿ ಮತ್ತು ಸಂಭಾವನೆಯು ಸಿಗುವುದಿಲ್ಲ. ಬರಹಗಾರನಾಗಿ ಸ್ವತಂತ್ರ ಅಸ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ತನ್ನ ತಂಗಿಯ ಮದುವೆಯನ್ನು ಮಾಡಲು ಕಷ್ಟಪಡುವ ತಮ್ಮ ಬಗ್ಗೆ ಕತೆಯನ್ನು ಬರೆದು ತಂಗಿಗೆ ಮಾತ್ರ ಓದಿಸಿ ಅತ್ತುಬಿಡುತ್ತಾನೆ. ಸಾಹಿತ್ಯದ ಉದ್ದೇಶವೇ ಸಂವಾದ. ಆದರೆ ಈ ಅಸಂಬದ್ಧ ಸನ್ನಿವೇಶದಲ್ಲಿ ಅದರ ಸಾಧ್ಯತೆಗಳೇ ಇಲ್ಲದಿರುವುದು, ಕತೆಗಾರನಿಗೆ ಗೌರವವನ್ನು ಕೊಡುವುದಂತಿರಲಿ, ಅವನ ಅಸ್ತಿತ್ವವನ್ನೇ ಸಾಹಿತ್ಯ ಪ್ರಕಟಣೆಗೆ ಒಳಗಾದವರು ಅಲ್ಲಗೆಳೆಯುವುದು, ಇದರಿಂದಾಗಿ ನಲುಗುವ ಜಯರಾಮುವಿನ ಅನುಭವಿಸುವ ನಿರಾಸೆ ಮತ್ತು ಅವಮಾನಗಳು ಸಮಾಜದ ಸ್ವರೂಪವನ್ನು ಅನಾವರಣಗೊಳಿಸುತ್ತದೆ. ಸಾಹಿತ್ಯ ಎನ್ನುವುದು ಅನ್ನದ ಮೇಲೆ ಸುರಿಯುವ ತುಪ್ಪವೇ ಹೊರತು ಅನ್ನವಾಗಲು ಸಾಧ್ಯವಿಲ್ಲ ಎನ್ನುವ ವ್ಯಂಗ್ಯವನ್ನು ನಿರಂಜನರು ಮಾರ್ಮಿಕವಾಗಿ ಧ್ವನಿಸಿದ್ದಾರೆ.

ಶಂಕರನಾರಾಯಣಯ್ಯನು ಜಯರಾಮುವಿನ ಪಾತ್ರದ ವಿಸ್ತøತ ರೂಪ. ತನ್ನ ಸುಮಧುರ ದಾಂಪತ್ಯದ ಮೂಲಕ ವಠಾರದ ಮಂದಿಯ ಹೊಟ್ಟೆಯುರಿಗೆ ಕಾರಣವಾದ ಆತನ ಮನಸ್ಸಿನಲ್ಲೂ ಅತೃಪ್ತಿಯ ಜ್ವಾಲಾಮುಖಿ ಇದೆ. “ನಾನು ತೈಲಚಿತ್ರ ಬರೆಯೋಲ್ಲ ಜಯರಾಮು. ಚಿತ್ರ ಬರೆದು ಬದುಕೋಕೆ ಆಗೋದಿಲ್ಲ. ನಾನು ಬರೆಯೋದು ಸಿನಿಮಾ ಪೋಸ್ಟರು. ‘ಶನಿಮಹಾತ್ಮೆ’ಯ ದೊಡ್ಡ ಬೋರ್ಡು ನೋಡಿದೀರೋ ಇಲ್ವೋ? ಆನಂದರಾವ್ ಸರ್ಕಲಿನಲ್ಲೂ ಮೆಜೆಸ್ಟಿಕ್ಕಿನಲ್ಲೂ ಕಟ್ಟಿ ನಿಲ್ಲಿಸಿದಾರೆ ಆ ದೇವರ ಚಿತ್ರ ಬರೆದೋನು ನಾನೇ. ಇನ್ನೊಂದನ್ನೂ ನೀವು ನೋಡಿರಬೋದು ಜಣಕ್ ಜಣಕಾಂತ ಮೈ ಬಿಟ್ಟು ಕುಣಿಯೋದು. ಅದನ್ನು ಬರೆದೋನೂ ನಾನೇ” (ಪುಟ 164-165) ಎಂಬ ಮಾತು ಹಾಳು ಹೊಟ್ಟೆ ಎಂಥ ಪರಿಸ್ಥಿತಿಗೆ ತಳ್ಳಿಬಿಡುತ್ತದೆ ಎಂದು ಧ್ವನಿಸುತ್ತದೆ. ಆದರೆ ಅವನು ಮನಸ್ಸು ಕಹಿ ಮಾಡಿಕೊಳ್ಳದೆ ಸಿನೇಮಾ ಪೋಸ್ಟರುಗಳನ್ನು ಬರೆಯತೊಡಗಿದರೂ ಅದರ ಕೆಳಗೆ ತನ್ನ ಹೆಸರಿನ ಬದಲು ರೂಪ ಆಟ್ರ್ಸ್ ಎಂದೇ ಬರೆಯಬೇಕು. ತನ್ನ ಉತ್ಪನ್ನದ ಮೇಲೆ ಅವನಿಗೆ ಹಕ್ಕು ಇಲ್ಲ. ಚಿತ್ರಕಲೆಯ ಗಂಧಗಾಳಿ ಇಲ್ಲದಿದ್ದರೂ ಒಡೆಯನು ಅದನ್ನು ಕೊಂಡು ಮಾರಾಟವನ್ನು ಮಾಡಿ ಹಣವನ್ನು ಗಳಿಸುತ್ತಾನೆ. ವ್ಯವಹಾರವೆಲ್ಲವೂ ಅವನದ್ದೇ ಆಗಿದ್ದು ಶಂಕರನಾರಾಯಣಯ್ಯನು ಬರೇ ಯಂತ್ರವಾಗಿದ್ದಾನೆ. ವಸ್ತುಗಳು, ಸಂಸ್ಥೆಗಳು, ವಿಚಾರಗಳು ಮತ್ತು ಕಲೆ ಎಲ್ಲವೂ ಮನುಷ್ಯನ ಚಟುವಟಿಕೆಗಳಿಂದ ಸೃಷ್ಟಿಯಾಗುವ ಉತ್ಪಾದನೆಗಳಾಗಿದ್ದರೂ ಸೃಷ್ಟಿಕರ್ತನಿಂದ ಪ್ರತ್ಯೇಕಗೊಂಡು ಅವರ ಬದುಕನ್ನು ನಿಯಂತ್ರಿಸುವ ವಸ್ತುಗಳಾಗಿ ಮಾರ್ಪಡುವ ವಿದ್ಯಮಾನವನ್ನು ಕಾಣುತ್ತೇವೆ. ಶಂಕರನಾರಾಯಣಯ್ಯನು ಚಿತ್ರಕಲೆಯ ಮೂಲಕ ತನ್ನ ಭಾವನೆಯನ್ನು ಬಿಂಬಿಸುವಂತಿಲ್ಲ. ಹೆಚ್ಚು ಸಂಪಾದಿಸುವುದಕ್ಕಾಗಿ ಆತನು ತನ್ನ ವ್ಯಕ್ತಿತ್ವವನ್ನು ಕುಗ್ಗಿಸಿಕೊಳ್ಳಬೇಕಾಗುತ್ತದೆ. ಶನಿಮಹಾತ್ಮೆಯ ಚಿತ್ರದಂತೆ ನಗ್ನಕುಣಿತದ ಚಿತ್ರವನ್ನೂ ರಚಿಸಬೇಕಾಗುತ್ತದೆ. ಇಲ್ಲಿ ಮನುಷ್ಯನು ತನ್ನ ಶ್ರಮದಿಂದ ಉತ್ಪಾದನೆಗೊಳ್ಳುವ ವಸ್ತುಗಳಿಂದ ಪ್ರತ್ಯೇಕವೆನಿಸಿಕೊಳ್ಳಬೇಕಾಗಿ ಬರುವ ಪರಿಸ್ಥಿತಿಯು ನಿರ್ಮಾಣಗೊಳ್ಳುತ್ತದೆ. ಕೆಲಸವು ತನ್ನ ಹೊಟ್ಟೆ ಬಟ್ಟೆಗಳ ಅಗತ್ಯವನ್ನು ಪೂರೈಸುವುದಕ್ಕೆ ಮಾಡುವ ಕರ್ಮವಾಗುವುದೇ ಹೊರತು ವ್ಯಕ್ತಿತ್ವಕ್ಕೆ ಆತ್ಮತೃಪ್ತಿಯು ದೊರಕುವುದಿಲ್ಲ. ವ್ಯಕ್ತಿತ್ವದ ಅಭಿವ್ಯಕ್ತಿಯಾಗಬೇಕಿದ್ದ ಕೆಲಸವು ಇನ್ನೊಬ್ಬನಿಗೆ ಮಾರಾಟ ಮಾಡುವ ಉಪಕರಣವಾಗುತ್ತಿದ್ದರೂ ವ್ಯಕ್ತಿಯು ತನ್ನ ಹೊಟ್ಟೆಪಾಡಿಗಾಗಿ ಅದನ್ನು ಮಾಡಲೇಬೇಕಾಗುತ್ತದೆ. ಇದು ಬಹಳಷ್ಟು ಜನರ ಬಡತನಕ್ಕೆ ಮತ್ತು ಕೆಲವೇ ಮಂದಿಗಳ ಸಿರಿವಂತಿಕೆಗೆ ಕಾರಣವಾಗುತ್ತದೆ. ವ್ಯವಸ್ಥೆಯಲ್ಲಿ ವ್ಯಕ್ತಿಯ ಅಸ್ತಿತ್ವಕ್ಕೆ ಬೆಲೆಯಿಲ್ಲ ಎನ್ನುವ ಶಂಕರನಾರಾಯಣಯ್ಯನ ಮಾತುಗಳು ಹೊಮ್ಮಿಸುವ ನೋವಿನಲ್ಲಿ ಮಾಕ್ರ್ಸ್‍ವಾದಿ ನೆಲೆಗಟ್ಟನ್ನು ಕಾಣಬಹುದು. ಹಲವಾರು ವರ್ಷಗಳ ಕಾಲ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ದುಡಿದ ನಿರಂಜನರು ತಮ್ಮ ಪಾತ್ರವು ಅನುಭವಿಸುವ ಸಂಕಷ್ಟವನ್ನು ಮಾಕ್ರ್ಸ್‍ವಾದಿ ದೃಷ್ಟಿಯಿಂದ ನೋಡಿದ್ದಲ್ಲಿ ಆಚ್ಚರಿಯಿಲ್ಲ.

ಜಯರಾಮು ಮತ್ತು ಶಂಕರನಾರಾಯಣಯ್ಯನ ಪರಿಸ್ಥಿತಿಯನ್ನು ಕನ್ನಡದ ಎರಡು ಮಹತ್ವದ ಕತೆಗಳಲ್ಲಿ ಬರುವ ಸನ್ನಿವೇಶಗಳೊಂದಿಗೆ ಹೋಲಿಸಬಹುದು. ಕೊರಡ್ಕಲ್ ಶ್ರೀನಿವಾಸರಾಯರ ‘ಧನಿಯರ ಸತ್ಯನಾರಾಯಣ’ ಕತೆಯಲ್ಲಿ ಧಣಿಗಳ ಒಕ್ಕಲಾಗಿದ್ದ ಮಕ್ಕಳು ತಾವೇ ನೆಟ್ಟು ಬೆಳೆಸಿದ ಬಾಳೆಯ ಗಿಡದಲ್ಲಿ ಬಿಟ್ಟ ಗೊನೆಯನ್ನು ಧಣಿಗಳು ಪೂಜೆಯ ನೆಪದಲ್ಲಿ ತಮ್ಮ ಮನೆಗೆ ಸಾಗಿಸಿದಾಗ ಮಕ್ಕಳಿಗೆ ಆಗುವ ನಿರಾಸೆಯ ಅನುಭವದಂತೆ ಪುಸ್ತಕ ಮಾರಾಟಗಾರನ ಮಗನಾಗಿದ್ದೂ ಪುಸ್ತಕಗಳನ್ನು ಓದಲಾಗದ ಜಯರಾಮು ಮತ್ತು ರಾಧೆಯ ವೇದನೆಯೂ ಓದುಗರನ್ನು ತಟ್ಟುತ್ತದೆ. ಎರಡೂ ಕೃತಿಗಳಲ್ಲಿ ಧಣಿಗಳ ಅಧಿಕಾರ ದೃಷ್ಟಿ, ತಂದೆಯ ವಾಸ್ತವಜ್ಞಾನ, ಮಕ್ಕಳ ಮುಗ್ಧ ನ್ಯಾಯದ ದೃಷ್ಟಿಕೋನಗಳನ್ನು ಚಿತ್ರಿಸಿದ ರೀತಿಯು ಪರಿಣಾಮಕಾರಿಯಾಗಿದೆ. ಶಿವರಾಮ ಕಾರಂತರ ‘ಹೋಳಿಗೆ’ ಕತೆಯ ಸಣ್ಣಪ್ಪನು ಸಿಹಿಮೂತ್ರ ರೋಗಿಯಾಗಿರುವುದರಿಂದ, ಹೋಳಿಗೆಗಳನ್ನು ಮನೆಗೆ ಕೊಂಡು ಹೋಗಿ ಮಕ್ಕಳಿಗೆ ತಿನ್ನಿಸಿ ರೂಢಿಯಾದರೆ ತನ್ನ ಮನೆಯನ್ನು ಮಾರಿದರೂ ಅವರ ತಿಂಡಿಬಾಕತನವನ್ನು ಪೂರೈಸಲು ಸಾಧ್ಯವಿಲ್ಲ ಎಂಬ ಅರಿವು ಇರುವುದರಿಂದ ತಾನು ಉತ್ಪಾದಿಸಿದ ವಸ್ತುವಿನ ಮೇಲೆ ತನ್ನ ಅಧಿಕಾರವನ್ನು ಕಳೆದುಕೊಂಡಿದ್ದಾನೆ. ಬ್ರಾಹ್ಮಣನಾಗಿದ್ದರೂ ವೃತ್ತಿಯಲ್ಲಿ ಅಡುಗೆಯವನಾಗಿರುವುದರಿಂದ ಸಾಮಾಜಿಕ ಅಂತಸ್ತಿನಲ್ಲಿ ತನ್ನ ಒಡೆಯ ಸುಬ್ಬರಾಯನಿಗಿಂತ ಕೀಳಾಗಿದ್ದಾನೆ. ಆದ್ದರಿಂದ ಇತರರಿಗೆ ಲಭಿಸುವ ಮರ್ಯಾದೆಯು ಅವನಿಗೆ ಸಿಗುತ್ತಿಲ್ಲ. ಪ್ರತಿಭೆಗೆ ಹೊಗಳಿಕೆಯು ಸಲ್ಲುತ್ತಿದ್ದರೂ ಯೋಗ್ಯ ಅಂಗೀಕಾರವು ದೊರಕುತ್ತಿಲ್ಲ. ‘ರಂಗಮ್ಮನ ವಠಾರ’ದ ಶಂಕರನಾರಾಯಣಯ್ಯನದ್ದೂ ಇದೇ ಪರಿಸ್ಥಿತಿಯಾಗಿದೆ. ಹೊಟ್ಟೆಪಾಡು ಮತ್ತು ಆರ್ಥಿಕ ಸ್ಥಿತಿಯನ್ನು ಆಧರಿಸಿದ ವ್ಯವಸ್ಥೆಯು ಸಾಮಾಜಿಕ ಅಂತಸ್ತನ್ನು ನಿರ್ಧರಿಸುವ ಬಗ್ಗೆ ಆತನ ಅಸಹನೆ ಮತ್ತು ಸಾತ್ವಿಕ ಆಕ್ರೋಶವು ತಣ್ಣಗಿನ ಮಾತಿನಲ್ಲಿ ವ್ಯಕ್ತವಾಗುತ್ತದೆಯೇ ಹೊರತು ‘ಧನಿಯರ ಸತ್ಯನಾರಾಯಣ’ದಲ್ಲಿ ಬರುವ ಮಕ್ಕಳಂತೆ ಕ್ರಿಯಾತ್ಮಕವಾಗಿ ಅಲ್ಲ.

ರಾಜಮ್ಮನ ಮಗ ವೆಂಕಟೇಶ ಮತ್ತು ಅಹಲ್ಯೆಯ ಪ್ರೇಮ ಪ್ರಕರಣವನ್ನು ಪುಟಗಟ್ಟಲೆ ವಿವರಿಸದೆ ಸೂಕ್ಷ್ಮವಾಗಿ ತಂದಿರುವ ರೀತಿಯು ಮೆಚ್ಚುವಂತಿದೆ. ಅವರಿಬ್ಬರು ಜೊತೆಯಲ್ಲಿ ನಡೆದು ಬರುತ್ತಿರುವುದನ್ನು ನೋಡಿದ ವೆಂಕಟೇಶನ ತಾಯಿ ರಾಜಮ್ಮನು ದುಡುಕಿ ಬೈದು ಜಗಳವಾಡತೊಡಗಿದಾಗ ಪರಿಸ್ಥಿತಿಯು ವಿಕೋಪಕ್ಕೆ ಹೋಗುತ್ತದೆ. ವಠಾರದಲ್ಲಿಡೀ ಸುದ್ದಿ ಹಬ್ಬಿ ಇಬ್ಬರ ಕುಟುಂಬಕ್ಕೂ ನಾಚಿಕೆಗೇಡಿನ ಸಂಗತಿಯಾಗಿ ಪರಿಣಮಿಸುತ್ತದೆ. ಇಬ್ಬರಿಗೂ ಪರಿಸ್ಥಿತಿಯನ್ನು ಎದುರಿಸುವ ಧೈರ್ಯವಿಲ್ಲ. ಈ ಪ್ರಕರಣವನ್ನು ಬೆಳೆಸಿ ವಠಾರಕ್ಕೆ ಮಸಿ ಬಳಿಯಲು ತಯಾರಿಲ್ಲದ ರಂಗಮ್ಮನು ಮಧ್ಯ ಪ್ರವೇಶಿಸಿ ‘ನಮ್ಮಿಬ್ಬರ ನಡುವೆ ಏನೂ ಆಗಿಲ್ಲ’ ಎಂದು ದೇವರ ಮುಂದೆ ಆಣೆ ಮಾಡಿಸುವುದರೊಂದಿಗೆ ಸಮಸ್ಯೆಯನ್ನು ಬಗೆಹರಿಸುತ್ತಾರೆ. ವೆಂಕಟೇಶ ಮತ್ತು ಅಹಲ್ಯೆಯ ನಡುವೆ ಏನೂ ನಡೆಯದಿದ್ದರೂ ಸಾಮಾಜಿಕ ನಿಂದೆಗೆ ಭಯಪಟ್ಟ ಅಹಲ್ಯೆಯ ಹೆತ್ತವರು ಆಕೆಗೆ ಬೇರೊಬ್ಬನೊಂದಿಗೆ ಮದುವೆಯನ್ನು ಮಾಡಿಸುತ್ತಾರೆ. ಪ್ರೇಮದಂಥ ಪವಿತ್ರ ಭಾವನೆಗೂ ಬೆಲೆಯನ್ನು ತೆರಬೇಕಾಗಿ ಬರುವ ವಿಪರ್ಯಾಸವನ್ನು ಇಲ್ಲಿ ಕಾಣುತ್ತೇವೆ. ಆದರೆ ಚಂದ್ರಶೇಖರಯ್ಯ ಮತ್ತು ರಾಧಾ ಬಗ್ಗೆ ಹೀಗೆ ಹೇಳಲು ಸಾಧ್ಯವಿಲ್ಲ. ‘ಇದ್ದೂ ಇಲ್ಲದಂತಿರಬೇಕು’ ಎಂಬ ಮಾತಿಗೆ ತಕ್ಕಂತಿರುವ ಚಂದ್ರಶೇಖರಯ್ಯನು ಯಾರ ಕಣ್ಣಿಗೂ ಬೀಳದೆ ತನ್ನ ಪಾಡಿಗೆ ಇರುವ ವ್ಯಕ್ತಿ. ರಾಧೆಯ ಅಣ್ಣನೆಂಬ ನೆಲೆಯಲ್ಲೇ ಅವನು ಜಯರಾಮುವಿಗೆ ವಿಮಾ ಕಂಪೆನಿಯ ಗುಮಾಸ್ತನ ಹುದ್ದೆಯನ್ನು ಕೊಡಿಸಿ, ಅವನ ತಂಗಿಯ ಕೈಹಿಡಿಯಲು ಒಪ್ಪಿ ಅವರ ಬಾಳಿಗೆ ಬೆಳಕಾಗುತ್ತಾನೆ. ಅವನಿಗೆ ರಾಧೆಯ ಮೇಲೆ ಮೃದುಭಾವನೆ ಇದ್ದುದರಿಂದ ಈ ಪರಿವರ್ತನೆಯು ಸಾಧ್ಯವಾಗುತ್ತದೆ. ಪ್ರೀತಿ ಪ್ರೇಮಗಳಿಂದಲೇ ಬದಲಾವಣೆಯು ಸಾಧ್ಯ ಎಂಬ ಸಂದೇಶದೊಂದಿಗೆ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವ, ಪ್ರೇಮವನ್ನು ಕೊಟ್ಟು ಪಡೆಯಲು ಸಾಧ್ಯವಾಗುವ ಸಮಾಜವೊಂದನ್ನು ಕಟ್ಟುವ ಆಶಯವು ಇಲ್ಲಿದೆ. ನಾರಾಯಣಿಯು ‘ಸತ್ತ’ ಮನೆಯಲ್ಲಿ ಚಂಪಾ ‘ಹೆತ್ತ’ ಮಗು ಹೆಣ್ಣೆಂದು ತಿಳಿದಾಗ ಹೆಂಗಸರ ಮುಖ ಬಾಡಿದ್ದನ್ನು ನೋಡಿ “ಸೌಭಾಗ್ಯಲಕ್ಷ್ಮಿಯೇ ಸರಿ. ಹೆಣ್ಣು ಯಾವುದರಲ್ಲೂ ಗಂಡಿಗೆ ಕಮ್ಮಿ ಇಲ್ಲ ಸಂತೋಷ-ಸಂತೋಷ” (ಪುಟ 285) ಎಂಬ ರಂಗಮ್ಮನ ಮಾತಿನ ಮೂಲಕ ನಿರಂಜನರ ಸ್ತ್ರೀಪರ ನಿಲುವು ಪ್ರಕಟಗೊಳ್ಳುತ್ತದೆ.

282 ಪುಟಗಳ ಈ ಕೃತಿಯಲ್ಲಿ ಮಹಾಕಾದಂಬರಿಯನ್ನು ಒಳಗೊಳ್ಳುವಷ್ಟು ಪಾತ್ರ ವೈವಿಧ್ಯವಿದ್ದರೂ ಓದುಗನಿಗೆ ಗೊಂದಲವಾಗದಂತೆ ವಿಷಯವನ್ನು ನಿರೂಪಿಸಿದ ನಿರಂಜನರ ಕಥನಕೌಶಲವನ್ನು ಮೆಚ್ಚಬೇಕಿದೆ. ಅವರ ಕಾದಂಬರಿಗಳ ಸ್ವರೂಪಕ್ಕಿಂತ ಭಿನ್ನವಾಗಿರುವ ಈ ಕಾದಂಬರಿಯು ವಾಸ್ತವದ ಬದುಕನ್ನು ಅವಲಂಬಿಸಿದ ಕತೆಯಾಗಿದ್ದು ಸಮಾಜದ ಒಂದು ವಿಭಾಗಕ್ಕೆ ಸೇರಿದವರ ಬದುಕಿನ ಚಿತ್ರವು ನೆನಪಿಗೆ ಬರುತ್ತದೆ. ಆ ಪೈಕಿ ಹೆಚ್ಚಿನವರನ್ನು ನಮ್ಮ ಸುತ್ತುಮುತ್ತಲಿನಲ್ಲಿ ಕಂಡುಕೊಳ್ಳಬಹುದು. ಇತರ ಲೇಖಕರು ರಂಗಮ್ಮನನ್ನು ಹೇಗೆ ಚಿತ್ರಿಸುತ್ತಿದ್ದರೋ ಗೊತ್ತಿಲ್ಲ. ಆದರೆ ಯಾವುದೇ ಪಾತ್ರಗಳನ್ನು ಕೇವಲ ಕಪ್ಪಾಗಿ ಅಥವಾ ಬಿಳಿಯಾಗಿ ಚಿತ್ರಿಸುವುದು ವಾಸ್ತವವಾದಕ್ಕೆ ವಿರುದ್ಧವೆಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದ ನಿರಂಜನರು ರಂಗಮ್ಮನನ್ನು ಸಕಲ ಸದ್ಗುಣ ಸಂಪನ್ನೆ ಇಲ್ಲವೇ ದುರಾಚಾರದ ರಕ್ಕಸಿಯಾಗಿ ಚಿತ್ರಿಸಲಿಲ್ಲ. ಒಳ್ಳೆಯವರೆಂದಾಗ ಅವರಲ್ಲಿ ದುರ್ಗುಣಗಳಿಲ್ಲ ಎಂದಾಗಲೀ, ಕೆಟ್ಟವರು ಎಂದಾಗ ಒಳ್ಳೆಯ ಗುಣಗಳು ಇಲ್ಲವೆಂದಾಗಲೀ ಅರ್ಥವಲ್ಲ ಎಂಬ ನಿಲುವಿಗೆ ಅನುಗುಣವಾಗಿ ಮೂಡಿಬಂದಿರುವ ಈ ವಾಸ್ತವವಾದಿ ಕಾದಂಬರಿಯ ಕೇಂದ್ರ ಬಿಂದುವಾದ ರಂಗಮ್ಮನಿಗೆ ಒಳ್ಳೆಯ ಗುಣಗಳಿದ್ದರೂ ಆಕೆಯು ದೇವತೆಯಾಗಲಾರಳು. ಆಕೆಯ ಜೀವನ ವಿಧಾನ, ಆಕೆಯನ್ನು ಬಿಗಿಹಿಡಿದಿರುವ ಆರ್ಥಿಕ ಸೂತ್ರವು ಆಕೆಗೆ ಅಂಥ ಅವಕಾಶವನ್ನು ನೀಡುವುದಿಲ್ಲ. ಆದ್ದರಿಂದ ಕಾದಂಬರಿಯ ಎಲ್ಲ ಪಾತ್ರಗಳು ಸೂಚಿಸುವ ಬಹುಮುಖಿ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಕಾದಂಬರಿಯನ್ನು ಗ್ರಹಿಸಬೇಕಾಗುತ್ತದೆ. ಇವರೆಲ್ಲರೂ ನಿರ್ದಿಷ್ಟ ಚೌಕಟ್ಟಿನಲ್ಲಿದ್ದುಕೊಂಡು ಮಾನವೀಯ ಸಂಬಂಧಗಳ ವಾಸ್ತವ ಮತ್ತು ಸತ್ಯಗಳನ್ನು ಅನಾವರಣಗೊಳಿಸುವ ಪಾತ್ರಗಳಾಗಿವೆ. ಲೇಖಕರ ಲಕ್ಷ್ಯವು ವೈಯಕ್ತಿಕ ಉದ್ಧಾರ, ಸಾಮಾಜಿಕ ಬದಲಾವಣೆಗಳಿಗಿಂತಲೂ ಶಾಶ್ವತ ಮೌಲ್ಯಗಳಲ್ಲಿ ಕೇಂದ್ರಿತವಾಗಿರುವುದರಿಂದ ಈ ಕೃತಿಯು ಕ್ರಾಂತಿ ಮತ್ತು ದುರಂತದ ಸಾಧ್ಯತೆಗಳನ್ನು ಬಳಸಿಕೊಳ್ಳುವುದಿಲ್ಲ.

ವಾಸ್ತವವಾದ, ಮಾನವತಾವಾದ ಮತ್ತು ಆದರ್ಶವಾದಗಳು ನಿರಂಜನರ ಬರವಣಿಗೆಯ ತಾತ್ವಿಕತೆಯನ್ನು ಪ್ರಭಾವಿಸಿದ್ದವು. ಭದ್ರವಾದ ವಾಸ್ತವದ ನೆಲೆಗಟ್ಟಿನಿಂದ ಕೂಡಿದ ಈ ಕಾದಂಬರಿಯಲ್ಲಿ ವಸುನಿಷ್ಠವಾದ ಘಟನೆಗಳಿಗೆ ಹೆಚ್ಚಿನ ಆದ್ಯತೆ ಇದ್ದರೂ ಅವುಗಳು ಭಾವನೆಯನ್ನು ಪ್ರಚೋದಿಸುವುದಿಲ್ಲ. ಅಸಹಜ ತಿರುವಿಗೆ ಕಾರಣವಾಗುವುದಿಲ್ಲ. ಸಾಮಾಜಿಕ ಪ್ರಕ್ರಿಯೆಗಳಲ್ಲಿ ನಿರಂಜನರಿಗೆ ಇರುವ ಆಸ್ಥೆಗಳೇ ಇಲ್ಲಿಯೂ ಕಂಡುಬರುತ್ತದೆ. ಸಮಾಜದಲ್ಲಿ ತಲೆದೋರುವ ಒತ್ತಡಗಳು ತಾಕಲಾಟಗಳು ಇದ್ದರೂ ಅದರ ಸ್ವರೂಪವು ಕ್ಷುಲ್ಲಕವಾಗಿದೆ. ಈ ಕಾದಂಬರಿಯಲ್ಲಿ ನಿರಂಜನರು ಹೊರಜಗತ್ತಿಗೆ ಪ್ರಾಮುಖ್ಯತೆಯನ್ನು ಕೊಟ್ಟದ್ದರಿಂದ ಒಳಜಗತ್ತಿನ ಸಂಪರ್ಕವನ್ನು ಅಷ್ಟಾಗಿ ಕಾಣಲು ಸಾಧ್ಯವಿಲ್ಲದಿದ್ದರೂ ಕೆಲವು ಪಾತ್ರಗಳ ಅಂತರಂಗವನ್ನು ಹೊಕ್ಕು ನೋಡುವಲ್ಲಿ ಸಫಲರಾಗಿದ್ದಾರೆ. ಕಥಾವಸ್ತು ಗಟ್ಟಿ ಇಲ್ಲದಿದ್ದರೂ ಸಮಕಾಲೀನ ವಸ್ತುವಿನಿಂದಾಗಿ ಆಧುನಿಕ ಕೃತಿ ಎನಿಸಿಕೊಳ್ಳುವ ಈ ಕಾದಂಬರಿಯಲ್ಲಿ ಮೃದುವಾದ ಸಾಮಾಜಿಕ ಟೀಕೆಯೊಂದಿಗೆ ಮಾನವೀಯ ವ್ಯವಹಾರಗಳ ಸೂಕ್ಷ್ಮ ನಿರೀಕ್ಷಣೆಯೂ ಸೇರಿದ್ದು ಕಲ್ಪನೆಯೂ ಸಕ್ರಿಯವಾಗಿದೆ. ಕತೆ, ವಸ್ತು, ರಚನೆಗಳಿಗೆ ಹೊಸ ರೂಪವನ್ನು ಕೊಟ್ಟು ಜೀವವನ್ನು ತುಂಬಿದ ನಿರಂಜನರ ಸೂಕ್ಷ್ಮ ನಿರೀಕ್ಷಣೆಯ ಫಲವಾಗಿ ಈ ಕಾದಂಬರಿಯು ಮೂಡಿ ಬಂದಿದೆ. ಕಾದಂಬರಿಯ ಆಳವು ಕಡಿಮೆಯಾಗಿದ್ದರೂ, ಕೆಲವೆಡೆಗಳಲ್ಲಿ ವಿವರಗಳು ವರದಿಯಂತೆ, ದಿನಚರಿಯ ಪುಟಗಳಂತೆನಿಸಿದರೂ ಅನುಭವನಿಷ್ಠೆ ಮತ್ತು ವಾಸ್ತವ ನಿರೂಪಣೆ ಮತ್ತು ಭಾಷೆಯ ಮಿತವ್ಯಯಗಳ ಮೂಲಕ ಸತ್ವವನ್ನು ಪಡೆದುಕೊಂಡ ಕಾದಂಬರಿಯಲ್ಲಿ ಸುದೀರ್ಘ ವರ್ಣನೆ ಮತ್ತು ವಿಸ್ತøತ ಚರ್ಚೆಗಳಿಗೆ ಅವಕಾಶವಿಲ್ಲ. ಸುತ್ತಲಿನ ಜೀವನದಲ್ಲಿಯೇ ವಸ್ತುವನ್ನು ಹುಡುಕಿದ್ದರಿಂದ, ಆಧುನಿಕತೆಯನ್ನು ಒದಗಿಸುವ ದೃಷ್ಟಿಕೋನಗಳನ್ನು ಬಳಸುವ ತಾಂತ್ರಿಕ ಕೌಶಲ್ಯ, ಪಾತ್ರ ಮತ್ತು ಘಟನೆಗಳಿಂದ ದೂರವನ್ನು ಸಾಧಿಸುವ ಮೂಲಕ ಅವುಗಳನ್ನು ವಸ್ತುನಿಷ್ಠವಾಗಿ ನೋಡಲು ಸಹಕರಿಸುತ್ತದೆ. ಹೊಸ ಬಾಡಿಗೆದಾರನ ಆಗಮನದ ಬಗ್ಗೆ ಜನರ ಕುತೂಹಲ, ಊಹೆಗಳು, ನೀರು-ವಿದ್ಯುತ್ ದೀಪದ ವಿಚಾರಗಳಲ್ಲಿ ಕಟ್ಟುನಿಟ್ಟು ಮಾಡುವ ರಂಗಮ್ಮನ ಬಗ್ಗೆ ಅಸಹನೆ, ನೀರಿಗಾಗಿ ಸರತಿ ಸಾಲು, ಜಗಳ, ಹಾಲು ವ್ಯಾಪಾರ, ರಾಜಮ್ಮ ಮತ್ತು ಮಕ್ಕಳ ವೈಮನಸ್ಸು, ಗಂಡ ಊರಿಗೆ ಬಂದಾಗ ಕಮಲಮ್ಮನ ವಿರಸ, ನಾಗರಾಜರಾಯ ಪದ್ಮಾವತಮ್ಮನ ನಡುವಿನ ಅಪರೂಪದ ಕಲಹ ಮುಂತಾದ ದೈನಂದಿನ ಬದುಕಿನ ಸಹಜ ಚಿತ್ರಣಗಳು ಕಾದಂಬರಿಗೆ ವಾಸ್ತವದ ಆವರಣವನ್ನು ಒದಗಿಸುತ್ತದೆ. ಕಾದಂಬರಿಯ ಶರೀರದಲ್ಲಿಯೇ ಅನೇಕ ನೆಲೆಗಳನ್ನು ಸೃಷ್ಟಿಸುವ ಮೂಲಕ ನಿರಂಜನರು ಅದರ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಸ್ವರೂಪವನ್ನು ಗ್ರಹಿಸಿದ್ದಾರೆ. ದುಃಖಿತರ ಬಗ್ಗೆ ನಿರಂಜನರಿಗೆ ಇದ್ದ ಕಳಕಳಿ, ಕ್ಷುಲ್ಲಕತೆಗಳನ್ನು ಮೀರುವ ಔದಾರ್ಯ, ಆಶಾವಾದ ಮತ್ತು ಪ್ರಗತಿಯ ಹಂಬಲಗಳನ್ನು ಮಾತ್ರವಲ್ಲದೆ ಅವರ ವ್ಯಕ್ತಿತ್ವದ ಆದರ್ಶವಾದಿ ರೇಖೆಯನ್ನು ಗುರುತಿಸಬಹುದು.

ಔದ್ಯೋಗಿಕ ವ್ಯವಸ್ಥೆಯ ಒತ್ತಡಕ್ಕೆ ಸಿಲುಕಿದುದರ ಪರಿಣಾಮವಾಗಿ ಜೀವನ ಕ್ರಮವು ಈಗ ಬದಲಾಗಿದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರು ಮಾತ್ರ ವಾಸವಾಗಿರುವ ರಂಗಮ್ಮನ ವಠಾರದ ಬದಲು ಭಿನ್ನ ಜಾತಿ ಕೋಮುಗಳಿಗೆ ಸೇರಿದ ಜನರು ಒಂದೇ ಕಡೆಯಲ್ಲಿ ವಾಸವಾಗಿರುವ ವಠಾರಗಳು, ಜಾತಿಮತಗಳ ಕಟ್ಟುಪಾಡುಗಳನ್ನು ಸಡಿಲಗೊಳಿಸಿ, ಹಣ-ಅಂತಸ್ತುಗಳಿಗೆ ಮನ್ನಣೆಯನ್ನು ನೀಡುವ ಸಮಾಜ ವ್ಯವಸ್ಥೆಯಿಂದ ಕೂಡಿದ ‘ಚಾಳ್’ ಮತ್ತು ‘ಫ್ಲ್ಯಾಟ್’ನಲ್ಲಿ ಬದುಕುವವರ ಬಗ್ಗೆ ಬರೆಯಲು ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ, ಜಯಂತ ಕಾಯ್ಕಿಣಿ ಮುಂತಾದ ಬರಹಗಾರರಿಗೆ ದಾರಿಯನ್ನು ತೆರೆದರು. ನಿರಂಜನರೂ ಸೇರಿದಂತೆ ಅನೇಕ ಪ್ರಗತಿಶೀಲ ಲೇಖಕರು ಕತೆ ಕಾದಂಬರಿಗಳ ವಸ್ತುವಿನ ವ್ಯಾಪ್ತಿಯನ್ನು ವಿಸ್ತರಿಸಿದರು. ಅವುಗಳಿಗೆ ಸಾಮಾಜಿಕ ಪ್ರಸ್ತುತತೆಯನ್ನು ತಂದುಕೊಟ್ಟರು. ಹೊಸ ಕಥನ ತಂತ್ರಗಳನ್ನು ಬಳಸಿದರು. ಇವರ ಬರಹಗಳ ದೌರ್ಬಲ್ಯಗಳನ್ನು ಮೀರುವ ಮೂಲಕವೇ ನವ್ಯ ಮತ್ತು ಬಂಡಾಯ ದಲಿತ ಲೇಖಕರು ಒಳ್ಳೆಯ ಕೃತಿಗಳನ್ನು ನೀಡಲು ಶಕ್ತರಾದರು. “ಕನ್ನಡ ಇವತ್ತು ಏನಾಗಿದೆಯೋ, ನನ್ನಂಥ ಲೇಖಕರು ಏನಾಗಿದ್ದೇವೆಯೋ ಅದರ ಹಿಂದೆ ನಿರಂಜನರಂಥವರು ಇದ್ದಾರೆ” ಎಂದ ಯು. ಆರ್. ಅನಂತಮೂರ್ತಿಯವರ ಹೇಳಿಕೆಯು ಬರೇ ಔಪಚಾರಿಕ ಮಾತಲ್ಲ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on “ನಿರಂಜನರ ‘ರಂಗಮ್ಮನ ವಠಾರ’”

  1. Dr Madhavi S Bhandary

    ರಂಗಮ್ಮನ ವಠಾರದಲ್ಲಿ ತಿರುಗಿಬಂದ ಅನುಭವ ನೀಡಿದ ವಿಮರ್ಶೆ. ಲೇಖಕರಿಗೆ ಧನ್ಯವಾದಗಳು
    ಬಹಳ ಹಿಂದೆ ಓದಿದ ಕಾದಂಬರಿಯನ್ನು ಮತ್ತೆ ಮನಸೊಳಗೆ ಮೂಡುವಂತೆ ಮಾಡಿತು.

    1. ಡಾ. ಸುಭಾಷ್ ಪಟ್ಟಾಜೆ

      ಪ್ರೋತ್ಸಾಹದ ನುಡಿಗಳನ್ನು ಆಡಿದ ನಿಮಗೆ ವಂದನೆಗಳು.

    1. ಡಾ. ಸುಭಾಷ್ ಪಟ್ಟಾಜೆ

      ಧನ್ಯವಾದಗಳು ಮೇಡಂ. ಸಂತೋಷವಾಯಿತು.

    1. ಡಾ. ಸುಭಾಷ್ ಪಟ್ಟಾಜೆ

      ಧನ್ಯವಾದಗಳು ಸರ್. ನಿಮ್ಮ ಪ್ರೋತ್ಸಾಹ ವರ ಇದ್ದಂತೆ.

  2. ಸಂವೇದನಾಶೀಲ ಬರಹ.ತೌಲನಿಕ ಮಾತುಗಳು ಕೂಡ ಚೆನ್ನಾಗಿವೆ

    1. ಡಾ. ಸುಭಾಷ್ ಪಟ್ಟಾಜೆ

      ಧನ್ಯವಾದಗಳು ಸರ್. ಈ ಕಾದಂಬರಿಯ ಬಗ್ಗೆ ಬರೆಯಲು ಸೂಚಿಸಿದವರ ಪೈಕಿ ನೀವೂ ಒಬ್ಬರು. ನಿಮ್ಮ ಮಾತಿನ ಮೇಲೆ ಗೌರವವನ್ನು ಇಟ್ಟುಕೊಂಡು ಈ ಲೇಖನವನ್ನು ಬರೆದಿದ್ದೇನೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter