ದಶಮಾನದ ಹಿಂದೆ ದೇಸೀ ಮಹಾಕಾವ್ಯ ಚಾರುವಸಂತವನ್ನು ಕನ್ನಡದ ಖ್ಯಾತ ಸಂಶೋಧಕ, ಸಾಹಿತಿ ಹಂಪನಾಗರಾಜಯ್ಯನವರು ಭುವಿಗಿಳಿಸಿದಾಗ ʻಇಂಥ ಕಾವ್ಯಗಳನ್ನೆಲ್ಲ ಓದುವ ಕ್ಷಮತೆ ಈಗಿಲ್ಲವಯ್ಯʼ ಎಂದುಕೊಳ್ಳುತ್ತಾ ಕೆಲವು ಪುಟಗಳನ್ನಷ್ಟೆ ಓದಿ ಕಪಾಟಿನಲ್ಲಿ ಜೋಡಿಸಿಟ್ಟಿದ್ದೆ. ಅದು ಮತ್ತೊಮ್ಮೆ ಹೊರಬಂದುದು ʻಚಾರುವಸಂತ ಹದಿನಾರು ಭಾಷೆಗಳಿಗೆ ಅನುವಾದಗೊಂಡಿದೆ – ಗೊಳ್ಳುತ್ತಲಿದೆʼ- ಎಂಬ ಸುದ್ದಿ ಕೇಳಿದಾಗಲಷ್ಟೇ ಅಲ್ಲ; ಹಂಪನಾ ಅವರು ದೂರವಾಣಿಸಿ, ʻಇದಕ್ಕೊಂದು ರಂಗರೂಪ ಕೊಡಪ್ಪಾ. ನಿನ್ನಿಂದ ಅದು ಸಾಧ್ಯ. ಮುಂದೆ ಅದರ ರಂಗಪ್ರಯೋಗವನ್ನು ಯಾರಿಂದಲಾದರೂ ಮಾಡಿಸೋಣʼ ಎಂದಾಗಲೂ ಅಲ್ಲ; ನೋಡಪ್ಪಾ ನಾದಾ, ನನಗೋ ಎಂಬತ್ತೈದು (ಎರಡು ವರ್ಷಗಳ ಹಿಂದಿನ ಮಾತು). ಜೀವಿತಾವಧಿಯಲ್ಲಿ ಇದರ ರಂಗರೂಪವನ್ನೊಮ್ಮೆ ವೇದಿಕೆಯಲ್ಲಿ ಕಾಣಬೇಕೆಂಬುದು ನನ್ನಾಸೆ. ಈಡೇರಿಸಿಕೊಡುವ ತಾಕತ್ತು ನಿನ್ನಲ್ಲಿದೆʼ ಎಂದಾಗಲೆ.
ಹಂಪನಾ ಅವರು ನನ್ನಲ್ಲಿಟ್ಟ ನಂಬಿಕೆಯನ್ನು -ಅಧೈರ್ಯ ಬಾಧಿಸಿದರೂ- ಹುಸಿಗೊಳಿಸಲಾಗಲಿಲ್ಲ. ಚಾರುವಸಂತವನ್ನು ಅನಿವಾರ್ಯವಾಗಿ ಮತ್ತೊಮ್ಮೆ ಕೈಗೆತ್ತಿಕೊಂಡೆ. ಓದಿದೆ, ಓದಿದೆ. ಅರಿವಾಯಿತು; ಬರಿದೇ ಇದು ಹದಿನಾರು ಭಾಷೆಗಳಿಗೆ ಅನುವಾದಗೊಂಡುದಲ್ಲ ಎಂಬುದು. ಒಂದೊಂದು ದೃಶ್ಯದಲ್ಲೂ ಒಂದೊಂದು ನಾಟಕವಾಗುವಷ್ಟು ವಿಷಯಗಳಿದ್ದುವು. ಎಲ್ಲಿ ಯಾವುದನ್ನು ಮುರಿಯಲಿ, ಮುರಿದು ಹೇಗೆ ಕಟ್ಟಲಿ? ನಾ ಮುರಿದ ಭಾಗವನ್ನೇ ಗಮನಿಸಿ ಹಂಪನಾ ಅವರು ʻ ಏನಪ್ಪಾ ನಾನಿಷ್ಟು ಪ್ರೀತಿಯಿಂದ ಕಟ್ಟಿದ ಭಾಗಗಳನ್ನೇ ನೀನು ತಿಂದು ಮುಕ್ಕಿದೆಯಲ್ಲ; ಹೀಗೆ ಮಾಡಿದರೆ ನಾಗರಹಾವು ಕೇರೆ ಹಾವಾಗದೇ?ʼ ಎಂದುಬಿಟ್ಟರೆ? ಎಂಬ ಭಯ ನನ್ನನ್ನು ಕಾಡತೊಡಗಿತು. (ಅವರೆಂದೂ ಹಾಗನ್ನಲಿಲ್ಲ. ರಂಗಕ್ಕೆ ಅಳವಡಿಸಿದಷ್ಟನ್ನು ಅಪ್ಪಡಿ ಸ್ವೀಕರಿಸಿದರು).
ಮುನ್ನೂರ ನಲುವತ್ತ ನಾಲ್ಕು ಪುಟಗಳ ಬೃಹತ್ ಕಾವ್ಯವದು, ಚಾರುವಸಂತ. ಮಹಾಕಾವ್ಯದ ಲಕ್ಷಣಗಳೆಲ್ಲವೂ ಓತಪ್ರೋತಗೊಂಡಿವೆ. ಕ್ರಿಸ್ತಪೂರ್ವದ ವಸಂತಸೇನೆ-ಚಾರುದತ್ತರು ಆಧುನಿಕ ಪರಿವೇಷಗಳೊಂದಿಗೆ, ಜಾತಿ ಮತಗಳ ಸಾಮರಸ್ಯತೆಯೊಂದಿಗೆ, ಪ್ರಣಯದ ಪರಾಕಾಷ್ಠೆಯೊಂದಿಗೆ ಇಳಿದು ಬಂದಿದ್ದಾರೆ. ಚಾರುದತ್ತನ ತಂದೆ ಭಾನುದತ್ತ, ತಾಯಿ ದೇವಿಲೆ, ಮಾವ ಸಿದ್ಧಾರ್ಥ, ಸೋದರ ಮಾವ ರುದ್ರದತ್ತ, ನಿಜದ ಪತ್ನಿ ಮಿತ್ರಾವತಿ ಇವಿಷ್ಟು ವೈಶ್ಯಕುಲದ ಪ್ರಮುಖ ಪಾತ್ರಗಳಾದರೆ, ವೇಶ್ಯೆ ಅನಾಮಿಕೆ, ಆಕೆಯ ಮಗಳು ವಸಂತಸೇನೆ,ತುಂಡರಸರು, ಋಷಿಗಳು, ಖೇಚರರು, ಗೆಳೆಯರು ಮೊದಲಾದ ಎಷ್ಟೊಂದು ಪಾತ್ರಗಳು! ಪ್ರತಿ ಪಾತ್ರಕ್ಕೂ ಮತ್ತೊಂದು ಪಾತ್ರ ಸುತ್ತಿಕೊಂಡಿದೆ. ವರ್ಣನೆಯ ಭಾಗಗಳನ್ನೆಲ್ಲ ಬದಿಗಿಟ್ಟು ಕ್ರಿಯಾತ್ಮಕ ಅಂಶಗಳನ್ನಷ್ಟೇ ಉಳಿಸಿಕೊಂಡು ನಾಟಕ ರಚಿಸಬಹುದೆ? ಎಂದುಕೊಂಡರೆ ಪ್ರತಿಯೊಂದು ವರ್ಣನೆಯೂ ಹಿಂದಿಲ್ಲ; ಮುಂದಿಲ್ಲ ಎಂಬಂತಿದೆ. ಕಥಾವಸ್ತುವನ್ನಷ್ಟೇ ಉಳಿಸಿಕೊಂಡು ಮಿಕ್ಕಂತೆ ಸ್ವತಂತ್ರ ರಚನೆಯಾಗಿಸಿದರೆ ಹೇಗೆ? ಎಂದುಕೊಂಡರೆ ಹಂಪನಾ ಅವರು ಬಳಸಿದ ಅದ್ಭುತ ತಿರುಳ್ಗನ್ನಡವನ್ನು ಹಿಂದೆಸರಿಸಿ ನಾಟಕ ರಚಿಸಿದರೆ ಅದಕ್ಕೆ ಕಾವ್ಯಾತ್ಮಕ ಪೊರುಳುಂಟೆ?
ಹಂಪನಾ ಅವರು ಬಳಸಿದ ಕಾವ್ಯಭಾಷೆಗೆ ಲೋಪವಾಗದೊಲು, ಕಥಾವಸ್ತುವಿಗೆ ಚ್ಯುತಿ ಬಾರದವೊಲು, ಕಾವ್ಯದ ʻದೀರ್ಘʼ ವರ್ಣನೆಗಳನ್ನು ಹೃಸ್ವಗೊಳಿಸುತ್ತ, ಅದಾಗಲೇ ದೃಶ್ಯಕಟ್ಟುವ ಕ್ರಿಯೆಯಲ್ಲಿ ಪರಿಣತರೆಂದು ಖ್ಯಾತಿವೆತ್ತ ಜೀವನರಾಮ್ ಸುಳ್ಯ ಅವರ ಮನದ ಕಾಣ್ಕೆಯನ್ನು ನಾನೂ ಸಾಧ್ಯವಾದಷ್ಟು ಅಂತರ್ಚಕ್ಷುವಿನಿಂದ ನೋಡಿಕಂಡು, ಅವರಿಂದಲ್ಲದೆ ಕರ್ನಾಟಕದ ಇನ್ನೊಬ್ಬ ನಿರ್ದೇಶಕರಿಗೆ ಮಹಾಕಾವ್ಯದ ಅಂತಃಸತ್ವವನ್ನು ʻಕೈಸೆರೆ ಹಿಡಿದು, ಬಿಡುಗಡೆಗೊಳಿಸುವʼ ಕಸುವು ಸುಲಭ ಸಾಧ್ಯವಾದದ್ದಲ್ಲ ಎಂಬುದನ್ನೂ ಮನಗಂಡು- ದೃಶ್ಯ ಕಟ್ಟ ತೊಡಗಿದೆ. ವೇದಿಕೆಯಲ್ಲಿ ಹೀಗೆ ಕಾಣಿಸಬಹುದೆಂದು ಮನದಲ್ಲಿ ಮಂಡಿಗೆ ಮೆದ್ದದ್ದು ನಾನಾಗಿದ್ದರೆ ಅದನ್ನು ನಿಜದ ನೆಲೆಯಲ್ಲಿ ಮೆಲ್ಲಿಸಿದ್ದು ನಿರ್ದೇಶಕ ಜೀವನ್ ರಾಮ್ ಸುಳ್ಯರೆ!
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ಥಾಪಕರೂ ನಾಡಿನ ಪ್ರಮುಖ ಸಾಂಸ್ಕೃತಿಕ ಚಿಂತಕರೂ ಆದ ಡಾಕ್ಟರ್ ಮೋಹನ್ ಆಳ್ವಾರನ್ನು ಹಂಪನಾ ಅವರು ಭೇಟಿ ಮಾಡಿ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದರು. ಆ ದಿನವೇ ಸುದಿನವಾಗಿ ನಾಟಕ ರಂಗವೇರುವ ಮುನ್ಸೂಚನೆ ಸಿಕ್ಕಿತು. ಜೀವನ್ ರಾಮ್ ಕಾರ್ಯಪ್ರವೃತ್ತರಾದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಷ್ಟೇ ಇದ್ದರೆ ಸಾಲದೆಂದು ಮುಖ್ಯ ಪಾತ್ರಗಳಿಗೆ ಪರಿಣತ ಕಲಾವಿದರನ್ನು ಆಯ್ದುಕೊಂಡರು. ಒಂದು ತಿಂಗಳ ಕಾಲ ಕಲಾವಿದರು ಕೇಂದ್ರದಲ್ಲೇ ಠಿಕಾಣಿ ಹೂಡಿದರು. ತಾನು ಕುಣಿದು ತೋರಿಸಿ ಕಲಾವಿದರನ್ನು ಕುಣಿಸುವ ತಮ್ಮ ನಿರ್ದೇಶನ ಶೈಲಿಯ ತಂತ್ರಗಾರಿಕೆ ನಿಮಿತ್ತವಾಗಿ ಮೊಣಗಂಟಿನ ನೋವನ್ನು ಆಹ್ವಾನಿಸಿದ ಜೀವನರಾಮ್ ಕೊನೆವರೆಗೂ ಅದನ್ನು ಉಳಿಸಿಕೊಂಡೇ ನಾಟಕ ನಿರ್ದೇಶಿಸಿದರು.
ಹಂಪನಾ ಅವರು ಚಾರುವಸಂತವನ್ನು ಕಟ್ಟುವಾಗ ಗುಣಾಢ್ಯ, ಜಿನಸೇನಾಚಾರ್ಯ, ಆದಿಗುಣವರ್ಮ, ಕರ್ಣಪಾರ್ಯ, ಬಂಧುವರ್ಮ, ನಾಗರಾಜ, ಮಹಾಬಲ, ಸಾಳ್ವ, ಮಂಗರಸ ಮೊದಲಾದ ಕವಿಗಳು ಅವರ ಕಣ್ಣಮುಂದೆ ಹಾದುಹೋಗಿದ್ದಾರೆ. ಆದರೂ ಹಂಪನಾ ಅವರ ಕಾಣ್ಕೆ ಆಧುನಿಕ ಕಾಲದ ಸಂವೇದನೆಗಳ ಮೊತ್ತವಾಗಿತ್ತು ಎಂಬುದು ಮುಖ್ಯ.
ಹಂಪನಾ ಅವರು ಎಲ್ಲೆಲ್ಲಿ ಘಟನೆಗಳನ್ನು ಕಟ್ಟಿ ಕೊಡುತ್ತಾರೋ ಅಲ್ಲಿ ನಾಟಕಕಾರನಿಗೆ ಆಹಾರವೊದಗುತ್ತದೆ. ಭಾನುದತ್ತ- ದೇವಿಲೆಯರ ನಗರ ಸಂಚಾರ, ಮಲಹೊರುವ ಪದ್ಧತಿಯ ದೃಶ್ಯ, ಚಾರಣ ಋಷಿಗಳ ಆಶ್ರಮ, ಚಾರುದತ್ತನ ಜನನ ಸಂಭ್ರಮ, ಚಾರುದತ್ತ ತನ್ನ ಸಹಚರರ ಮನಃಪರಿವರ್ತನೆ ಮಾಡುವ ಸಂದರ್ಭ, ಖೇಚರನ ನರಕ ದರ್ಶನ ಹಾಗೂ ವಿಮೋಚನೆ, ಚಾರುದತ್ತ-ಮಿತ್ರಾವತಿ ವಿವಾಹ, ಚಾರುದತ್ತನ ಸಾಂಸಾರಿಕ ವಿರಕ್ತಿ, ರುದ್ರದತ್ತನ ಕುಟಿಲನೀತಿ, ವೇಶ್ಯಾಗೃಹ ದರ್ಶನ, ವಸಂತಸೇನೆ-ಚಾರುದತ್ತರ ಪ್ರಣಯ, ದೇವಿಲೆ-ಮಿತ್ರಾವತಿಯರ ಅಳಲು, ನಿರ್ಗತಿಕನಾದ ಚಾರುದತ್ತ ಮರಳಿ ಮನೆಗೆಯ್ದುವುದು, ವಸಂತಸೇನೆಯ ವಿರಹ, ವೇಶ್ಯೆ ಅನಾಮಿಕೆಯ ಮನಃಪರಿವರ್ತನೆ, ಮಗಳನ್ನು ಚಾರುದತ್ತನಿಗೆ ಮರಳಿ ಒಪ್ಪಿಸುವುದು, ವಸಂತಸೇನೆ- ಚಾರುದತ್ತ-ಮಿತ್ರಾವತಿಯರ ಕೂಡಿಬಾಳು, ಮಾವ ಸಿದ್ಧಾರ್ಥ -ಚಾರುದತ್ತರ ಆರ್ಥಿಕ ಜೈತ್ರಯಾತ್ರೆ, ಸಮುದ್ರದಲ್ಲಿ ದಿಕ್ಕುಪಾಲಾಗುವುದು, ಚಾರು ಎದುರಿಸಿದ ಸಂಕಷ್ಟಗಳು, ಮರಳಿ ಖೇಚರ ದರ್ಶನ, ಚಾರುದತ್ತ ಮರಳಿ ಹೆಂಡತಿಮಕ್ಕಳನ್ನು ಸೇರುವುದು- ಈ ಮುಂತಾದ ಘಟನೆಗಳನ್ನು ಆಯ್ದು ಅವುಗಳಲ್ಲಿನ ಕ್ರಿಯಾತ್ಮಕ ಅಂಶಗಳೊಂದಿಗೆ ನಿರೂಪಿಸುತ್ತ ನಾಟಕ ರಚನೆ ಮಾಡಿದೆ.
‘ಚಾರುವಸಂತʼ ನಾಟಕದ ಸಿದ್ಧತೆಯೆಂಬುದು ಸರಳ ಸಂಗತಿಯಾಗಿರಲಿಲ್ಲ. ಹಸ್ತಪ್ರತಿಯನ್ನು ಓದುತ್ತ ನಿರ್ದೇಶಕ ಜೀವನರಾಮ್ ಸುಳ್ಯ ಅವರು ಮನದಲ್ಲಿ ದೃಶ್ಯಗಳನ್ನು ರೂಪಿಸುತ್ತ ಹೋದಾಗಲೇ ಇದು ಲಕ್ಷಗಟ್ಟಲೆ ಖರ್ಚು ಬಯಸುವ ನಾಟಕವೆಂಬುದು ಅವರಿಗೆ ಮನವರಿಕೆಯಾಯಿತು. ಹಂಪನಾ ಹಾಗೂ ಮೋಹನ ಆಳ್ವಾ ಅವರು ಅದರ ಆರ್ಥಿಕ ನೊಗವನ್ನು ಹೊತ್ತುಕೊಂಡರು. ರಂಗಾಧ್ಯಯನ ಕೇಂದ್ರದಲ್ಲಿ ಹಗಲಿರುಳೆನ್ನದೆ ಕಲಾವಿದರು ನಿಸ್ವಾರ್ಥ ಮನೋಭಾವದಿಂದ ದುಡಿದರು. ಅರಮನೆ, ವೇಶ್ಯಾಗೃಹ, ಆಶ್ರಮ, ಬಾವಿ, ಉಡ, ಪುಷ್ಪಕ ವಿಮಾನ- ಹೀಗೆ ಒಂದರ ಮೇಲೊಂದು ದೃಶ್ಯಗಳು ಕ್ಷಿಪ್ರಗತಿಯಲ್ಲಿ ಮೂಡುತ್ತಿದ್ದವು. ಪುಟಿಯುವ ಉತ್ಸಾಹವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದ ಕಲಾವಿದರು ಅತ್ತ ರಂಗವಿನ್ಯಾಸ ಪಲ್ಲಟಗಳನ್ನೂ ಇತ್ತ ಸಂಭಾಷಣೆ, ಅಭಿನಯಗಳನ್ನೂ ಏಕಕಾಲಕ್ಕೆ ನಿಭಾಯಿಸುತ್ತಿದ್ದ ಪರಿ ಬೆರಗು ಮೂಡಿಸುವಂತಿತ್ತು.
ಕರ್ನಾಟಕದ ಪ್ರಮುಖ ಕೇಂದ್ರಗಳಲ್ಲಿ ಒಂದು ಸುತ್ತು ಪ್ರದರ್ಶನ ಮುಗಿಸಿದೆ ಆಳ್ವಾಸ್ ರಂಗತಂಡ. ಇದೀಗ ಎರಡನೆಯ ಸುತ್ತಿಗೆ ಅಣಿಯಾಗಬೇಕೆಂಬ ಬೇಡಿಕೆ ರಾಜ್ಯದ ಉದ್ದಗಲಗಳಿಂದ ಬರುತ್ತಿದ್ದು ಮಹಾಕಾವ್ಯ ಬರೆದ ನಾಡೋಜ ಹಂಪನಾ ಅವರಾಗಲೀ ಆಳ್ವಾಸ್ ಶಿಕ್ಷಣಸಂಸ್ಥೆಯ ಡಾ. ಮೋಹನ್ ಆಳ್ವಾ ಅವರಾಗಲೀ, ನಿರ್ದೇಶಕ ಜೀವನ್ ರಾಮ್ ಸುಳ್ಯ ಅವರಾಗಲೀ ರಂಗನಾಟಕ ರಚಿಸಿದ ನಾನಾಗಲೀ ಪರಮತೃಪ್ತರು ಎನ್ನುವುದನ್ನು ಉಲ್ಲೇಖಿಸದಿರಲಾಗದು.
1 thought on “ಹಂಪನಾ ಮಹಾಕಾವ್ಯʻಚಾರುವಸಂತʼ ಅರಳಿದ ಬಗೆ”
ಕನ್ನಡ ಪ್ರಶಿಕ್ಷಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಸುದೀರ್ಘ ಕಾಲ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪೋಷಕರಾಗಿ, ಅನೇಕ ಸಾಹಿತ್ಯ ಕೃತಿಗಳನ್ನು ಸಂಪಾದಿಸಿ, ಸಾಹಿತ್ಯದ ಆರಾಧಕರಾಗಿ, ಕನ್ನಡದ ಜತೆ, ಇಂಗ್ಲಿಷ್, ಸಂಸ್ಕೃತ, ಪ್ರಾಕೃತ ಭಾಷಾ ಪ್ರವೀಣರಾಗಿ, ಜೈನ ಧರ್ಮ, ಜೈನ ವಾಸ್ತು ಶಾಸ್ತ್ರದ ವಿಧ್ಯಾರ್ಥಿಯಾಗಿ, ಸಂಶೋಧಕರಾಗಿದ್ದ, ಚಿಂತಕ ಸಾಹಿತಿ ‘ಹಂಪನಾ’ ಅವರು ಬರೆದ ದೇಸೀ ಮಹಾ ಕಾವ್ಯ : ‘ಚಾರು ವಸಂತ’. ಈ ಕಾವ್ಯ 16 ಭಾಷೆಗಳಲ್ಲಿ ತರ್ಜುಮೆಗೊಂಡಿದ್ದರೂ, ‘ಚಾರು -ವಸಂತ’ರನ್ನು ರಂಗದ ಮೇಲೆ ನೋಡುವ ಅವರ ಉತ್ಕಟ ಆಶಯ, ಅಭಿಲಾಷೆಯನ್ನು ಲೇಖಕರೊಡನೆ ಹಂಚಿಕೊಂಡ ನಂತರದ, ಕಾವ್ಯದ ಇಡೀ ವಸ್ತುವನ್ನು ನಾಟಕದ ಉದ್ದಗಲಗಳಿಗೆ ಇಳಿಸುವ ಚಿಂತನೆಯ ಮಂಥನದ ಬೀಜದ ತಳಪಾಯದಲ್ಲಿ, ಧುಮ್ಮಿಕ್ಕಿದ ಸಹಜ ತುಮುಲ, ದಿಗಿಲು, ಆತಂಕ, ಕಾಳಜಿಯ ಸನ್ನಿವೇಶಗಳನ್ನೆಲ್ಲ ಕ್ರೋಢೀಕರಿಸುತ್ತ, ಗುರಿ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಹೂ ಬಿಟ್ಟು, ಕಾಯಿ, ಹಣ್ಣಾಗುವ ಪರಿವೇಷದ ಪರಿಧಿಯನ್ನು ಯೋಚಿಸುತ್ತಿರುವಾಗ, ‘ಹಂಪನಾ’ ಅವರ ಸತತ ಬೆಂಬಲದಿಂದ, ಒಂದೊಂದಾಗಿ ಕೊಂಡಿಯಾಗುವ ಸಂಕೇತಗಳನ್ನೆಲ್ಲ ಪ್ರಾಯೋಗಿಕವಾಗಿ ಮನದ ಮೂಸೆಯಲ್ಲಿ ಕಂಡಕ್ಷಣವೇ, ಮುಂದಿನ ಸಾಹಸಕ್ಕೆ ಕೈ ಹಾಕಿದ ‘ನಾದಾ’ ಅವರ ಕಾಯಕದ, ‘ಹಂಪನಾ’ ಅವರ, ಸಂಕಲ್ಪ ಸಿಧ್ಧಿಗೆ ಈ ಲೇಖನ ಒಂದು ಸಾಕ್ಷಿ!
ಕಾವ್ಯವೆಂಬ ಪ್ರಕಾರದಿಂದ, ನಾಟಕವೆಂಬ (ನಾಟಕವೂ ಕಾವ್ಯದ ಪ್ರಕಾರವೇ – ‘ಕಾವ್ಯೇಷು ನಾಟಕಂ ರಮ್ಯಮ್’ ಎಂಬಂತೆ ) ಪ್ರತಿಗ್ರಾಹ್ಯಕ್ಕೆ ರೂಪಾಂತರಿಸುವದು ಅಂದರೆ, ಬಣ್ಣ, ಲಯ, ಆಕಾರದ ಆಯಾಮಗಳು ಪೂರ್ತಿ ಬದಲಾಗುವ ಪ್ರಕ್ರಿಯೆಯಲ್ಲಿ , ಅತ್ಯಗತ್ಯ ಜವಾಬ್ದಾರಿಯಿರುವದು, ಓದುಗನಿಗೆ ಒದಗಿದ ಮೂಲಕೃತಿಯ ಮೋಹಾಕರ್ಷಕ ಸುಗಂಧವನ್ನು, ಪ್ರೇಕ್ಷಕ ಅಘ್ರಾಣಿಸುವಾಗ ಅದೇ ಸಮಗ್ರ ಸಮುಚ್ಚಯ ಅತಿರಿಕ್ತವಾಗದಂತೆ, ಸಂಧಾನವಿರದ ಸಂವಹನವಿರಬೇಕು. ಇದೇ ಲಕ್ಷ್ಯ! ಈ ಸುಗಂಧದ ಅನುಭೂತಿಯಾಗುವದು ರಂಗಭೂಮಿಯಲ್ಲಿ, ಕಾವ್ಯದ ‘ಆತ್ಮ’ದ ಪರಕಾಯ ಪ್ರವೇಶವಾದಾಗಲೇ!
ಇಲ್ಲಿ ಲೇಖಕರೊಡನೆ,ಕರ್ತ್ರರ ಸಂವೇದನೆಯ ನಿವೇದನೆಯಿದೆ; ನಿರ್ದೇಶನದ ಚಾಣಾಕ್ಷ ಮತಿ ಜೀವನರಾಮ್ ಸುಳ್ಯರ ದೃಶ್ಯ ಕಟ್ಟುವ ಚಾಕಚಕ್ಯತೆಯಿದೆ; ಸಾಂಸ್ಕೃತಿಕ ಚಿಂತಕ ಡಾ.ಮೋಹನ್ ಆಳ್ವಾ’ರ ಸಂಘಟನಾ ಚಾತುರ್ಯದ ಜತೆಗೆ, ಬೆನ್ನೆಲುಬಾದ ‘ಹಂಪನಾ’ರ ಸಂಗಡದ ಆರ್ಥಿಕ ನೊಗ ಹಿಡಿಯುವ ಸಂಯುಕ್ತತೆಯಿದೆ; ಪರಿಣತ ಕಲಾವಿದರನ್ನು ಒಟ್ಟುಗೂಡಿಸುವ ಕಲಾ ಪ್ರೇಮವಿದೆ; ರಂಗ ವಿನ್ಯಾಸ, ಅಭಿನಯ, ಸಂಭಾಷಣೆಗಳ ಕಾಳಜಿಗೆ ಪ್ರೀತಿಯಿಂದ ಮನಸಾ ದುಡಿಯುವ ಕಲಾವಿದ ಸಂಪತ್ತಿದೆ; ನಿಚ್ಚಳವಾಗಿ ಕಾಣುವ ಲೇಖಕರ ಅಪಾರ ಶ್ರದ್ಧೆ ಹಾಗೂ ಛಲವೆಂಬ ಮನೋಶಕ್ತಿಯಿದೆ!
ಈ ಸಂಪೂರ್ಣ ಘಟನಾವಳಿಗಳ ಸಾಂದ್ರೀಕೃತ ವೃತ್ತ ಪತ್ರವೇ ಈ ಲೇಖನ. ಪ್ರಾಂಜಲತೆಯೇ ಅದರ ಜೀವಾಳ. ಇಚ್ಛೆ ಈಡೇರಿದ ಉತ್ಸಾಹವಿರಲಿ; ಹರ್ಷವಿರಲಿ, ಸಮಾಧಾನವಿರಲಿ, ಕ್ರಿಯಾಶೀಲತೆಯ ಬೆಳವಣಿಗೆಗೆ ಸರ್ವದಾ ಸಾಧಕವಾಗುವ ತೃಪ್ತಿ ಯಾವಾಗಲೂ ಇರಲಿ!
………………………………………………………………………………………………………………………………………………………………………………………………………………………………………………
ಒಂದು ಸುಂದರ ನೆನಪು : ಮುಂಬಯಿಗೆ ಬರುವ ಮುನ್ನ, ೧೯೮೦ರ ಸಂಕ್ರಾಂತಿಯ ದಿನದಂದು, ಶಿಕ್ಷಕ ವಿಷ್ಣು ನಾಯಕರು, ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಆಶ್ರಯದಲ್ಲಿ, ಏರ್ಪಡಿಸಿದ ಮೂರು ದಿನಗಳ ‘ಸಾಹಿತ್ಯ ಕಮ್ಮಟ’’ದ ಕೊನೆಯ ದಿನದಂದು, ಆ ಶಿಬಿರ ಕಾರ್ಯಕ್ರಮಕ್ಕೆ, ಕ.ಸಾ.ಪ. ದ ಅಧ್ಯಕ್ಷರಾದ ಹಂಪನಾ ಅವರ ಮುಖ್ಯ ಆತಿಥೇಯ ಸಮಾರೋಪ ಭಾಷಣವಿತ್ತು. ನಂತರ, ಸಮೀಪದ ಅಂಬಿಕಾ ನಗರಕ್ಕೆ ಹೋಗಿ ಅವರ ಸಂಗಡ ನಾವೆಲ್ಲರೂ ಕಾಳಿ ನದಿಯ ಮನೋಹರ ತಿರುವುಗಳ ವಿಹಂಗಮ ದೃಶ್ಯ ಕಾಣುವ, ‘ಸೈಕ್ಸ್ ಪಾಯಿಂಟಿಗೂ ಭೇಟಿ ನೀಡಿದ್ದೆವು.