ಒಂದು ಕಾಡಿನಲ್ಲಿ ಜಿಂಕೆ, ಆಮೆ, ಇಲಿ ಮತ್ತು ಕಾಗೆಗಳ ಮಿತ್ರವೃಂದವಿತ್ತು. ಕಷ್ಟದಲ್ಲಿದ್ದಾಗ ಒಂದಕ್ಕೊಂದು ಸಹಾಯವಾಗುತ್ತಿದ್ದವು .ಒಂದು ಸಲ ಆಮೆಯೂ ಕೊಳದ ಸಮೀಪ ನಿಧಾನವಾಗಿ ನೆಲದ ಮೇಲೆ ನಡೆಯುತ್ತಿದ್ದಾಗ ಒಬ್ಬ ಬೇಡನು ಆಮೆಯನ್ನು ನೋಡಿ ಬಲೆಯನ್ನು ಕಟ್ಟಿದನು. ಉಳಿದ ಪ್ರಾಣಿಗಳು ತಮ್ಮ ಮಿತ್ರನ ಪ್ರಾಣ ಕಷ್ಟದಲ್ಲಿದೆ , ಹೇಗೆ ಪಾರು ಮಾಡುವುದು ಎಂದು ವಿಚಾರಿಸಿದವು . ಒಂದು ಉಪಾಯವನ್ನು ಹೂಡಿದವು.
ಜಿಂಕೆಯು ವೇಗವಾಗಿ ಬೇಡನು ಹೋಗುತ್ತಿರುವ ದಾರಿಯ ಬದಿಯಲ್ಲಿ ಸತ್ತಂತೆ ಬಿದ್ದಿರಬೇಕು. ಆಗ ಕಾಗೆ ಅದರ ತಲೆಯ ಮೇಲೆ ಕುಳಿತಿರುವುಬೇಕು. ಕಾ ಕಾ ಎಂದು ಕಾಗೆ ಕೂಗಿದ್ದನ್ನು ಕೇಳಿ ಬೇಡನು ಖಂಡಿತವಾಗಿ ಆ ಕಡೆ ತಿರುಗಿ ನೋಡುತ್ತಾನೆ . ಜಿಂಕೆಯ ಮಾಂಸದ ಬಗ್ಗೆ ಅವನಿಗೆ ಆಸೆ ಉಂಟಾಗುವುದು. ಅವನು ಜಿಂಕೆಯ ಬಳಿಗೆ ಹೋದಾಗ ಇಲಿಯು ನೆಲದಲ್ಲಿಟ್ಟ ಬಲೆಯನ್ನು ಕತ್ತರಿಸಿದರೆ ಆಮೆ ಬಿಡಿಸಿಕೊಳ್ಳಲು ಸಾಧ್ಯವಾಗುವುದು. ಗೆಳೆಯರು ಒಟ್ಟಾದರು.
ಸೂಚನೆಯಂತೆ ಎಲ್ಲಾ ಕಾರ್ಯವು ಸಾಗಿತು. ಬೇಡನು ಬಲೆಯಲ್ಲಿದ್ದ ಆಮೆಯನ್ನು ನೆಲದಲ್ಲಿಟ್ಟು ಜಿಂಕೆ ಇದ್ದಲ್ಲಿ ಹೊರಟನು. ಆ ಸಮಯವನ್ನೇ ಕಾಯುತ್ತಿದ್ದ ಇಲಿ ಬಲೆಯನ್ನು ಕತ್ತರಿಸಿತು. ಕಾಗೆ ಕಾ ಕಾ ಎಂದು ಹಾರಿಹೋಯಿತು. ಜಿಂಕೆ ಸಹ ಎದ್ದು ವೇಗವಾಗಿ ಓಡಿ ತಪ್ಪಿಸಿಕೊಂಡಿತು. ಆಮೆ ಬಲೆಯಿಂದ ಹೊರಗೆ ಬಂದು ಸುಮ್ಮನೆ ಅಡಗಿಕೊಂಡಿತ್ತು. ನಿರಾಸೆಯಿಂದ ಬೇಡನು ಮನೆಯ ದಾರಿ ಹಿಡಿದನು .
ಸ್ನೇಹಿತರೆ ಇಲ್ಲಿ ಎರಡು ಅಂಶಗಳು ಗಮನಕ್ಕೆ ಬರುತ್ತವೆ ಒಂದು ಒಗ್ಗಟ್ಟಿನಲ್ಲಿ ಬಲವಿದೆ ಇನ್ನೊಂದು ಒಳ್ಳೆಯ ಗೆಳೆಯರು ಜೀವನದಲ್ಲಿ ಬಹುಮುಖ್ಯ. ದುಃಖದಿಂದ ದೂರ ಮಾಡುವವನೇ ನಿಜವಾದ ಮಿತ್ರ . ‘ ಸಜ್ಜನರ ಸಂಗವು ಹೆಜ್ಜೇನು ಸವಿದಂತೆ ‘ ಎಂಬ ಗಾದೆಯ ಮಾತೇ ಇದೆ.
ಬದುಕಿನಲ್ಲಿ ಬೇರೇನೂ ಗಳಿಸಿಲ್ಲವಾದರೂ ಒಳ್ಳೆಯ ಸ್ನೇಹಿತರನ್ನು ಗಳಿಸಬೇಕು ಎಂದು ತಿಳಿದವರು ಹೇಳುತ್ತಾರೆ . ಅದು ನಿಜವೂ ಕೂಡ! ನಮ್ಮ ಬಂಧುಗಳು, ದಾಯಾದಿಗಳು ನಮ್ಮ ಕೆಟ್ಟ ಸಮಯದಲ್ಲಿ ಸಹಾಯಕ್ಕೆ ಬರುವುದಿಲ್ಲ, ಆದರೆ ಒಳ್ಳೆಯ ಸ್ನೇಹಿತನಿದ್ದರೆ ಮಾತ್ರ ಅವನು ನಮ್ಮ ಸಹಾಯಕ್ಕೆ ಬರುತ್ತಾನೆ. ‘ Friend in need is friend indeed ‘ ಅನ್ನುವುದು ಅದಕ್ಕೆ ಅನ್ಸುತ್ತೆ .ದುರಿತ ಕಾಲದಲ್ಲಿ ನೆರವಾದವನೇ ಸಮ್ಮಿತ್ರ.
ಈ ಗೆಳೆತನ ಎಂಬುದು ಕೇವಲ ಮನುಷ್ಯನೊಂದಿಗೆ ಮಾತ್ರ ಆಗಬೇಕು ಎಂದಿಲ್ಲ . ಪ್ರಾಣಿಗಳೊಡನೆ ಆಗಬಹುದು ,ಗಿಡಗಳೊಡನೆ , ಪುಸ್ತಕಗಳೊಡನೆ ಆಗಬಹುದು ಮನೆಯಲ್ಲಿ ಸಾಕಿರುವ ನಾಯಿ, ಬೆಕ್ಕು ಪಕ್ಷಿಗಳು ನಮಗೆ ಆಪ್ತವಾಗಿರುತ್ತವೆ. ಮನೆಯ ಅಂಗಳದಲ್ಲಿ, ಮನೆಯ ಟೆರೇಸಿನ ಮೇಲೆ, ಕೈ ತೋಟದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಾರೆ. ಗಿಡಗಳೊಂದಿಗೆ ಮಾತನಾಡುತ್ತಾ , ನೀರುಣಿಸುತ್ತಾ ಪೋಷಣೆಯನ್ನು ಮಾಡುತ್ತಾರೆ. ಒಂದು ರೀತಿ ಅವರು ಗಿಡದೊಂದಿಗೆ ಗೆಳೆತನ ಬೆಳೆಸಿಕೊಳ್ಳುತ್ತಾರೆ . ಮನುಷ್ಯರಿಗಿಂತ ಈ ಥರಹದ ಗೆಳೆತನವೇ ಮೇಲು ಅಲ್ಲವೆ! ಇನ್ನು ಪುಸ್ತಕಗಳ ಗೆಳೆತನದ ಮಹಿಮೆ ಎಷ್ಟು ಹೇಳಿದರೂ ತೀರದ್ದು ! ಪುಸ್ತಕಗಳ ಒಳ್ಳೆಯ ಗೆಳೆಯರಾಗಿ ಮಹಾನ್ ವ್ಯಕ್ತಿಗಳು ಬೆಳೆದಿದ್ದುಂಟು.
ಮಹಾತ್ಮ ಗಾಂಧಿ , ವಿವೇಕಾನಂದರು , ಅಬ್ದುಲ್ ಕಲಾಂ…. ಹೀಗೆ ಸಾಕಷ್ಟು ಜನರು ಪುಸ್ತಕ ಪ್ರೀತಿ ಉಳ್ಳವರು. ಪುಸ್ತಕದೊಂದಿಗೆ ಗೆಳೆತನ ಮಾಡಿದವರು. ಬಹುಶಃ ಚಂದ್ರಾರ್ಕರಿರುವರೆಗೂ ಅವರ ಹೆಸರುಗಳನ್ನು ಹೇಳದೇ ಇರುವುದಿಲ್ಲ ” ಒಂದು ಪುಸ್ತಕವಿದ್ದರೆ ನೂರು ಒಳ್ಳೆಯ ಸ್ನೇಹಿತರಿದ್ದಂತೆ ಒಬ್ಬ ಒಳ್ಳೆಯ ಸ್ನೇಹಿತನಿದ್ದರೆ ಒಂದು ಗ್ರಂಥಾಲಯವೇ ಇದ್ದಂತೆ ” ಎಂದು ಡಾ. ಅಬ್ದುಲ್ ಕಲಾಂ ಹೇಳುತ್ತಾರೆ.
ಗೆಳೆತನ ಇಂದು ನಿನ್ನೆಯದಲ್ಲ. ಪುರಾಣ ಕಾಲದಿಂದಲೂ ಕಾಣಬಹುದು. ಮಹಾಭಾರತದಲ್ಲಿ ಕರ್ಣ-ದುರ್ಯೋಧನರ ಸ್ನೇಹ ಮತ್ತು ಕೃಷ್ಣ ಸುಧಾಮರ ಸ್ನೇಹವಂತು ಎಲ್ಲರಿಗೂ ತಿಳಿದಿರುವ ವಿಷಯ. ಬಡವ -ಶ್ರೀಮಂತ, ಪಂಡಿತ -ಪಾಮರ ಮೇಲು- ಕೀಳು ,ಎಂಬ ಭಾವನೆಗೆ ಇಲ್ಲಿ ಎಡೆಯಿಲ್ಲ. ಭಾವ ಶುದ್ಧ ಸ್ಪಟಿಕ ಪ್ರೀತಿಯಿದು . ಜನ್ಮ ನೀಡಿದ ತಂದೆ ತಾಯಿಯರನ್ನು ಮೀರಿಸಿದಂತಹ ಬಾಂಧವ್ಯ ಗೆಳೆತನದ್ದು.
ಸ್ನೇಹಿತರೆ ಈ ಗೆಳೆತನವನ್ನು ಕೇವಲ ವೈಯಕ್ತಿಕವಾಗಿ ನೋಡದೆ ಆಧ್ಯಾತ್ಮಿಕವಾಗಿ ಹಾಗೂ ಜಾಗತಿಕವಾಗಿ ನೋಡಿದರೆ ಹಿತವಾಗಬಹುದಲ್ಲವೇ! ಆತ್ಮೋನ್ನತಿ ಹಾಗೂ ವಿಶ್ವ ಕಲ್ಯಾಣಕ್ಕೆ ದಾರಿಯಾಗಬಲ್ಲದು. ವಿದ್ಯೆ,ವಿನಯ ,ವಿವೇಕ,,ಧೈರ್ಯ, ಸತ್ಕಾರ್ಯ, ಪ್ರಾಮಾಣಿಕತೆಗಳ ಸ್ನೇಹ ಮಾಡಬೇಕೆಂಬ ಮಾತನ್ನು ದಾರ್ಶನಿಕರು ಹೇಳುತ್ತಾರೆ.ಈ ಎಲ್ಲ ಸದ್ಗುಣಗಳು ಮನುಷ್ಯನನ್ನು ವಿಪತ್ತಿನಿಂದ ಕಾಪಾಡುತ್ತವೆ . ನಮ್ಮ ಜ್ಞಾನ ,ಸಂಯಮ,ಬುದ್ಧಿವಂತಿಕೆ ,ಧೈರ್ಯಗಳು ಸದಾ ನಮ್ಮನ್ನು ರಕ್ಷಿಸುವ ಗೆಳೆಯರಾಗಬೇಕು.
ಹಾಗೆ ನೋಡಿದರೆ ಜಗತ್ತು ಇಂದು ಭಯ ಆತಂಕದಿಂದ ತುಂಬಿಕೊಂಡಿದೆ . ಯುದ್ಧಭಯವಂತು ಎಡಬಿಡದೆ ಕಾಡುತ್ತಿದೆ. ರಾಜ್ಯಗಳ ನಡುವೆ ವೈರತ್ವ , ದೇಶಗಳ ನಡುವೆ ಸಮರಗಳು ನಡೆಯುತ್ತಿವೆ. ಸಾಮರಸ್ಯವನ್ನು ಮೂಡಿಸಬಹುದಾದ ಒಂದು ಬೆಳಕಿನ ಕಿರಣದಂತೆ ಗೆಳೆತನ ಕಾಣಿಸುತ್ತದೆ. ಗೆಳೆತನವೆಂಬುದು ಅಮೃತತ್ವ. ಯಾಕೆ ಈ ಅಮೃತತ್ವವನ್ನು ನಾವು ಮಾನವರು ನಮ್ಮೊಳಗೆ ಇಳಿಸಿಕೊಳ್ಳುವುದಿಲ್ಲ.
ಗೆಳೆತನದ ಕುರಿತಾಗಿ ಹಿರಿಯ ಕವಿ ಚೆನ್ನವೀರ ಕಣವಿ ಅವರ ಸಾಲುಗಳು ಹೀಗಿವೆ.
“ಗೆಳೆತನವೆ ಇಹಲೋಕಕಿರುವ ಅಮೃತಅದನುಳಿದರೇನಿಹುದು ಜೀವನ್ಮೃತ “ ಈ ಲೋಕದಲ್ಲಿ ಅಮೃತವೆಂದರೆ ಗೆಳೆತನ.ಬದುಕಿನಲ್ಲಿ ಗೆಳೆತನವಿಲ್ಲದಿದ್ದರೆ ಬದುಕಿದ್ದರೂ ಸತ್ತಂತೆ ಎಂದು ಗೆಳೆತನದ ಮಹತ್ವವನ್ನು ಬಣ್ಣಿಸಿದ್ದಾರೆ.
ಇತ್ತೀಚಿಗಿನ ವರ್ಷಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಗೆಳೆತನಕ್ಕೂ ಒಂದು ದಿನವನ್ನು ಮೀಸಲಾಗಿಟ್ಟು, ಜಗತ್ತಿನಾದ್ಯಂತ ಗೆಳೆತನದ ದಿನ ‘International Friendship day’ ಅಂತ ಆಚರಿಸಲಾಗುತ್ತದೆ. ಗೆಳೆತನವು ಜಗತ್ತಿನ ಜನರ ಹೃದಯದ ಮಿಡಿತವಾದರೆ ಎಷ್ಟು ಚೆನ್ನ! ಧರೆಯು ಸ್ವರ್ಗ ವಾಗುವುದಲ್ಲವೆ ?