ಅದೊಂದು ದಿನ ಬೆಂಗಳೂರಿಗೆ ಪಯಣಿಸಿ ಬೆಳಗಿನ ಝಾವ ಅರೆನಿದ್ದೆಯ ಮಂಪರಿನಲ್ಲಿ ವಿಮಾನ್ ನಿಲ್ದಾಣದ ಸಮೀಪ ಇಳಿದೆ. ವಿಮಾನ ನಿಲ್ದಾಣದ ಭವ್ಯ ಕಟ್ಟಡದಲ್ಲಿ ಎಲ್ಲೆಲ್ಲೂ ವಿದ್ಯುತ್ ದೀಪಗಳು. ‘ನಾವು ಭಾರತೀಯರು ವಿದ್ಯುತ್ ಶ್ರೀಮಂತರು’ ಎಂದೊಂದು ಕ್ಷಣ ಬೀಗುತ್ತಾ ಸುತ್ತ ಕಣ್ಣು ಹಾಯಿಸಿದೆ. ನಾವೇನೋ ಸ್ಪೆಶಲ್ ಜೀವಿಗಳೇನೋ ಎಂಬ ಹೆಮ್ಮೆಯಲ್ಲಿ ಉರುಳುವ ಹೋಲ್ಡಾಲನ್ನು ಎಳೆಮಕ್ಕಳಂತೆ ಎಳೆದೊಯ್ಯುವವವರು, ಬೆನ್ನುಬ್ಯಾಗಿಗೇ ಶರೀರ ಬೆಳೆದಂತೆ ಕಾಣುವವರು, ಆಗಾಗ ಜರಿವ ಬ್ಯಾಗನ್ನು ಹೆಗಲ ಮೇಲೇರಿಸುತ್ತ ಹೆಗಲುಬ್ಯಾಗ್ದಾರಿಗಳು.. ವಿವಿಧತೆಯಲ್ಲಿ ಏಕತೆ.. ಎಲ್ಲರೂ ಪ್ರಯಾಣಿಕರೆಂಬ ಸಮಾನತೆ!
ನಮ್ಮ ದೇಶದ ಪರಿಚಿತ ಚೆಹರೆಗಳ ಜೊತೆಗೆ ಅಲ್ಲಲ್ಲಿ ವಿದೇಶಿ ಪ್ರಜೆಗಳು ಕಾಣಿಸಿದರು. ಎಲ್ಲೆಲ್ಲೋ ಹರಿದ ಅಲ್ಲಲ್ಲ ಕತ್ತರಿಸಿದ ಬ್ರಾಂಡೆಡ್ ಜೀನ್ಸ ತೊಟ್ಟವರು, ಸೀರೆಯುಟ್ಟ ಅಪ್ಪಟ ಭಾರತೀಯ ನಾರಿಯರು, ಅರೆ ನಗ್ನತೆಯನ್ನೇ ಸಹಜತೆಯಾಗಿಸಿಕೊಂಡವರು, ಲಾಂಜಿನಲ್ಲಿ ಅಲ್ಲಲ್ಲಿ ಕುಸಿದು ಕುಳಿತವರು, ಜರ್ಕಿನ್ ಸಮೇತ ಬೇಂಚಿನ ಮೇಲೆ ಉರುಳಿಕೊಂಡವರು, ಮೊಬೈಲ್ ತೀಡುತ್ತಾ ತಪಗೈಯುವವರು…ಹೀಗೆ ಎಲ್ಲರತ್ತ ಆಗಾಗ ಕಿರುಗಣ್ಣು ಬಿಡುಗಣ್ಣು ಬಿಡುತ್ತ ಮೂರು ತಾಸು ವಿಮಾನ ನಿಲ್ದಾಣದಲ್ಲಿ ಕುಳಿತುಕೊಂಡೆ. ನನ್ನ ತಾಳ್ಮೆ ಪರೀಕ್ಷೆಯ ರಿಸಲ್ಟ ಬಂದಂತೆ ನಾವೇರುವ ವಿಮಾನು ಬಂದಿದೆ ಎಂಬ ಅಶರೀರವಾಣಿ ಕೇಳಿಸಿತು. ಕಳ್ಳ ಬೆಕ್ಕಿನಂತೆ ಸದ್ದುಗದ್ದಲ ಮಾಡದೇ ಸಾಗುವ ಇಲೆಕ್ಟ್ರಿಕ್ ಬಸ್ ಹತ್ತಿ ವಿಮಾನಿನ ಸಮೀಪ ಇಳಿದೆವು.
ವಿಮಾನಿನ ಏರುದಾರಿಯಲ್ಲಿ ನಡೆಯುತ್ತಲೇ ತುಂಡುಗೂದಲಿನ ಹುಡುಗಿಯೊಬ್ಬಳು ಒಂದು ಕೈಯಲ್ಲಿ ಕೂದಲನ್ನು ಒಪ್ಪವಾಗಿಸಿಕೊಳ್ಳುತ್ತಾ ಇನ್ನೊಂದು ಕೈಯಲ್ಲಿ ಸೆಲ್ಫಿ ಕ್ಲಿಕ್ಕಿಸಿದಳು. ‘ಯವ್ವಾ ಜಲ್ದಿ ಜಲ್ದಿ ನಡಿ ಒಳಕ್ಕ, ಇಲ್ಲೇನು ನಖರಾ ಶುರು ಹಚ್ಚೀದಿ’ ಎಂದು ಧಾರವಾಡ ಪ್ಯಾಟಿ ಶರಣವ್ವನ ಹಾಂಗ ಒಂದ ಡೈಲಾಗ್ ಒಗೆಯಬೇಕು ಎಂದು ನನ್ನ ಮನಸ್ಸಿಗೆ ಬಂದೇ ಬಿಟ್ಟಿತ್ತು, ಅಷ್ಟರಲ್ಲಿ ಅವಳು ಒಳಗೆ ಸರಿದಳು. ನಾವೂ ಸರ ಸರನೇ ವಿಮಾನಿನೊಳಗೇರಿ ಕುಳಿತೆವು. ಗಗನಸಖಿ ಬಂದು ಎಲ್ಲರೆದುರಿಗೆ ನಿಂತು ‘ಯುವರ್ ಅಟೆನ್‍ಷನ್ ಪ್ಲೀಸ್’ ಎನ್ನುವುದರೊಳಗೆ ಸೀಟ್ ಬೆಲ್ಟ ಹಾಕಿಕೊಂಡು ಶಿಸ್ತಾಗಿ ಕುಳಿತಿದ್ದ ನನ್ನ ಪತಿರಾಯ ನನಗೂ ಬೆಲ್ಟ ಬಿಗಿದುಕೊಟ್ಟ. ಹಕ್ಕಿಯಂತೆ ಹಾರುವ ವಿಮಾನಿನಲ್ಲಿ ಮನುಷ್ಯರು ವಿಗ್ರಹದಂತೆ ಕುಳಿತಿರಬೇಕು! ಕೈ ಕಾಲುಗಳನ್ನು ಮೂತಿಯನ್ನು ಅಲ್ಪ ಸ್ವಲ್ಪ ಆಡಿಸಬಹುದು ಅಷ್ಟೇ. ಹಿಂದೆಲ್ಲ ಕಿಡಿಗೇಡಿತನ ಮಾಡುವ ಪುಟ್ಟ ಮಕ್ಕಳ ಕಾಲಿಗೆ ಹಗ್ಗ ಹಾಕಿ ಕಡಗಲು ಕಂಬಕ್ಕೆ ಕಟ್ಟಿ ಮನೆಕೆಲಸ ಮಾಡುವ ನಮ್ಮೂರ ಹೆಂಗಸರು ನೆನಪಾದರು…. ಶರೀರ ಸುಮ್ಮನೇ ಕುಳಿತರೂ ಮನಸ್ಸು ಸುಮ್ಮನಿರಬೇಕಲ್ಲ, ಬಾಲ್ಯದ ನೆನಪಾಯಿತು.
ಅತಿ ಚಿಕ್ಕವಳಿದ್ದಾಗದ್ದಾಗ ಮನೆಯವರ ತೋಳ್ಗಳ ಮೇಲೆ, ಕೊಂಚ ದೊಡ್ಡವಳಾದ ಮೇಲೆ ಅಪ್ಪನ ಹೆಗಲೇರಿ ಊರೂರು ಸುತ್ತಿದ್ದಂತೂ ಮಧುರ ಸ್ಮೃತಿಯೇ ಸೈ….ಮನೆಯಿಂದಾಚೆ ಯಾರ ಮನೆಗೆ ಓಡಿ ಹೋಗುವುದಿದ್ದರೆ ಬಾಯಲ್ಲಿ ಬುರ್ರ್.. ಪೀಪೀಪ್ ಸಪ್ಪಳ ಮಾಡುವುದು, ಗೇರ್ ಬದಲಿಸಿದಂತೆ, ಸ್ಟೇರಿಂಗ್ ತಿರುಗಿಸಿದಂತೆ ನಟಿಸುವುದು ನಮ್ಮೂರಿನ ಎಲ್ಲಾ ಮಕ್ಕಳಿಗಂಟಿಂದ ಖಯಲಿಯೇ ಆಗಿತ್ತು. ಶಾಲೆ ಬಿಡುವ ಹೊತ್ತಿಗೆ ಎತ್ತುಗಳ ಕೊರಳ ಗಂಟೆಯ ಸಪ್ಪಳ ಕೇಳಿದರೆ ಸಾಕು. ‘ಎತ್ತಿನ ಗಾಡಿ ಬಂತಕ್ಕು’ ಎಂದು ಮನದ ನವಿಲು ಗರಿ ಬಿಚ್ಚುತ್ತಿತ್ತು. ಪಾಟೀ ಚೀಲ ಸಮೇತ ಓಡಿ ಗಾಡಿ ಏರುತ್ತಿದ್ದೆವು. ‘ಕುಣಿಬ್ಯಾಡಿ, ಗಾಡಿ ಮೂಕಹಾರ್ತದೆ’ ಎಂದು ಗಾಡಿ ಓಡಿಸುವನು ಬೊಬ್ಬೆ ಹೊಡೆಯುತ್ತಿದ್ದರೆ ನಾವು ಜಾಣ ಕಿವುಡರಾಗಿರುತ್ತಿದ್ದೆವು, ತರಲೆ ಮಾಡುತ್ತಿದ್ದೆವು. ಅತ್ತಿತ್ತ ಕಾಣುವ ಹಸಿರು ಗಿಡಮರಗಳನ್ನು ನೋಡುತ್ತಾ, ಉಪ್ಪಿನ ನೆಲ್ಲಿಕಾಯನ್ನೋ ಖಾರದಹುಣಿಸೆಹಣ್ಣನ್ನೋ ಮೆಲ್ಲುತ್ತಾ ಒಮ್ಮೊಮ್ಮೆ ನಸು ಮುನಿಯುತ್ತಾ ಮರುಘಳಿಗೆಗೆ ಎಲ್ಲವನ್ನೂ ಮರೆತು ಕಿಲ ಕಿಲನೆ ನಗುತ್ತಾ ಗಾಡಿಯಂಚಿಗೆ ಕಾಲು ಇಳಿಬಿಟ್ಟು, ಕಾಲ್ಕುಣಿಸುತ್ತಾ ಕುಳಿತುಕೊಂಡಾಗ ಸ್ವರ್ಗಕ್ಕೆ ಮೂರೇ ಗೇಣು ಎನಿಸುತ್ತಿತ್ತು.
ದಿನವೂ ಶಾಲೆಗೆ ನಡೆದುಕೊಂಡು ಹೋಗುವ ನಮ್ಮೆದುರಿಗೆ ಸರ ಸರನೇ ಸೈಕಲ್ ತುಳಿದುಕೊಂಡು ನಮ್ಮ ಸಹಪಾಠಿ ಗಂಡುಮಕ್ಕಳು ಸಾಗುತ್ತಲೇ ಹೆಮ್ಮೆಯಲ್ಲೊಮ್ಮೆ ಹೊರಳಿ ನೋಡಿ ನಡೆಯುವುದೇ ನಿಮ್ಮ ಪಾಡು ಎಂಬ ತಿರಸ್ಕಾರದಿಂದ ಕಿರುನಗೆ ಬೀರಿ ಸಾಗುತ್ತಿದ್ದರು. (ಆಗ ಹುಡುಗಿಯರಿಗೆ ಸೈಕಲ್ ಸವಾರಿ ನಿಷಿದ್ಧವಾಗಿತ್ತು. ಅಪರೂಪಕ್ಕೊಬ್ಬಬ್ಬರು ಪ್ರಯತ್ನಿಸಿದರೆ ಗಂಡುಬೀರಿಯ ಪಟ್ಟ ಸಿಗುತ್ತಿತ್ತು). ಇಂತಿಪ್ಪ ದಿನಗಳಲ್ಲಿಯೇ ನನ್ನಪ್ಪ ಜಾವಾ ಬೈಕ್ ಖರೀದಿಸಿದ್ದ. ಅಪ್ಪನ ಬೈಕು ಸಹಪಾಠಿಗಳ ಸೈಕಲ್ಲಿಗಿಂತ ವೇಗವಾಗಿ ಹೋಗುತ್ತದೆ ಎನ್ನುವುದೇ ನನಗೆ ಅತ್ಯಂತ ಸಂತೋಷದ ಸಂಗತಿಯಾಗಿತ್ತು. ಎಡಕಲ್ಲು ಗುಡ್ಡ ಸಿನಿಮಾ ನೋಡಿಕೊಂಡು ಬಂದ ಮೇಲಂತೂ ಬೈಕೇರಿದಾಗ ‘ಸಂತೋಷ ಆಹಾ ಓಹೋ….’ ಎಂದು ಹಾಡನ್ನು ಹಾಡಿದ್ದೇ ಹಾಡಿದ್ದು.
ಇದೆಲ್ಲಕ್ಕಿಂತಲೂ ಭಿನ್ನ ಅನುಭವ ನಮ್ಮನ್ನು ಊರಿಂದ ಊರಿಗೆ ಕರೆದೊಯ್ಯುವ ಕೆಂಪು ಬಸ್ಸಿನದ್ದು. ತುಂಬಿದ ಬಸುರಿಯಂತೆ ತೊನೆದಾಡುತ್ತಾ ಬರುವ ಬಸ್ಸಿಗೆ ಕೈ ಮಾಡಿ ‘ಹೋಪ್’ ಎಂದು ಎಂದು ಗಟ್ಟಿಯಾಗಿ ಕಿರುಚುತ್ತಿದ್ದೆವು. ಬಸ್ಸಿನ ಗಲಾಟೆಯಲ್ಲಿ ಅದು ಡ್ರೈವರನ ಕಿವಿಗೆ ತಲುತ್ತಿತ್ತೋ ಇಲ್ಲವೂ ಒಟ್ಟಿನಲ್ಲಿ ಅವನು ಬಸ್ ನಿಲ್ಲಿಸಿದರೆ ನಮ್ಮ ಹಿಗ್ಗು ಮುಗಿಲು ಮುಟ್ಟುತ್ತಿತ್ತು. ಧಡ್ ಎಂಬ ಸಪ್ಪಳದೊಂದಿಗೆ ಕಂಡೆಕ್ಟರ್ ತೆಗೆವ ಬಾಗಿಲಿನೊಳಗೆ ನುಸುಳಿ ಸೀಟಿದೆಯೋ ಕಣ್ಣು ಹಾಯಿಸಿ ನಿರಾಸೆಯಿಂದ ನಿಟ್ಟುಸಿರುಗರೆದು ನಿಲ್ಲುವುದಕ್ಕಾದರೂ ಜಾಗ ಸಿಕ್ಕಿದ್ದಕ್ಕೆ ಸಮಾಧಾನಪಡುತ್ತಾ ಸಾಗುವಾಗ ಪುಟ್ಟದೊಂದು ಜಗತ್ತಿನ ದರ್ಶನವಾಗುತ್ತಿತ್ತು. ತರಾವರಿ ಆಡುಗನ್ನಡದಲ್ಲಿ ಹೆಂಗಸರು ಪರಸ್ಪರ ಪರಿಚಯ ಮಾಡಿಕೊಂಡು ಸುದ್ದಿ ಶುರುವಿಟ್ಟುಕೊಂಡಿರುತ್ತಿದ್ದರು. ನಿಂತುಕೊಂಡ ಯಾರದೋ ಪುಟ್ಟ ಮಕ್ಕಳನ್ನು ಸಹಾಯ ಮಾಡಲೆಂದು ಮಡಿಲಿನ ಮೇಲೆ ಕೂರಿಸಿಕೊಂಡು ಲಲ್ಲೆಗರೆಯುವವರು, ಆಗಾಗ ಬಗ್ಗಿ ಬಗ್ಗಿ ತನ್ನ ಚೀಲವಿದೆಯೇ ಎಂದು ಪರೀಕ್ಷಿಸುವವರು, ಹಣವಿರುವ ಚೀಲವನ್ನು ಮುಟ್ಟಿ ಮುಟ್ಟಿ ಖಾತರಿಪಡಿಸಿಕೊಳ್ಳುತ್ತಾ ‘ಯನ್ನ ಕೇಳಿರೆ ನಮ್ಮ ಪ್ರಧಾನಮಂತ್ರಿ ಇಂಥಾ ನಿರ್ಣಯ ತಗಂಡಿದ್ದಲ್ಲ’ ಎಂದು ರಾಜಕೀಯದ ಮಾತಾಡುವವರು ಬಸ್ಸ ಹತ್ತಿದ ಕೂಡ್ಲೆ ವಾಂತಿ ಬಂದಾಂಗೆ ಆಗ್ತು ಎನ್ನುವ ಅಜ್ಜಿಗಳು, ಗಮ್ಯದವರೆಗೆ ಹಾಕಿದ ಕವಳದ ರಸ ಉಗಿಯಲಾರದೇ ಚಟಪಡಿಸುವವರು…ಒಂದೇ ಎರಡೇ ನೂರು ಕಥೆ ಬರೆಯುವಷ್ಟು ಸರಕು ಒಂದೊಂದು ಬಸ್ಸಿನಲ್ಲಿ ಪಯಣಿಸುತ್ತವೆ. ಸೀಟಿ ಹಿಡಿಯುವ ಕಸರತ್ತಿನಲ್ಲಿ ಕಿಡಕಿಯೊಳಗೆ ತೂರಿ ಹೋಗುವವರನ್ನು ಕಂಡಾಗ ಇವರು ಬೆಕ್ಕಿನ ಮೈಯವರೇ ಸೈ ಎಂದು ಅಜ್ಜ ಹೇಳುತ್ತಿದ್ದುದೂ ನೆನಪಾಗುತ್ತದೆ. ಟಿಣ್ ಟಿಣ್ ಎಂದು ಹಗ್ಗ ಜಗ್ಗಿ ಬೆಲ್ ಮಾಡುವುದರ ಬದಲು ಸೀಟಿ ಹೊಡೆದು ನಿಲ್ಲಿಸುವ ವ್ಯತ್ಯಾಸವಾಗಿದ್ದು ಬಿಟ್ಟರೆ ಬಸ್ಸಿನ ಪರಿಸ್ಥಿತಿಯಲ್ಲೇನೂ ಅಂದಿಗೂ ಇಂದಿಗೂ ಬಹಳ ಬದಲಾವಣೆಯೇನಿಲ್ಲ…
ಯಾರಾದರೂ, ಎಲ್ಲಾದರೂ ಹತ್ತಿ ಎಲ್ಲಾದರೂ ಇಳೀರಿ ನನ್ನ ಪಾಡಿಗೆ ನಾನು ಸಾಗುವೆ ಎನ್ನುವ ನಿರ್ಲಿಪ್ತ ಭಾವ ರೈಲಿನದು. ‘ಅರೇ ಇಷ್ಟು ಸಣ್ಣ ಸಣ್ಣ ಮಂಚ ಒಂದರ ಮೇಲೊಂದು! ಆರಾಮಾಗಿ ಮನಗಿಕ್ಯಂಡು ಎಷ್ಟೆಲ್ಲ ಜನರು ಊರಿಂದ ಊರಿಗೆ ಹೋಗುವ ಹಾಂಗೆ ಮಾಡಿದವ್ರ ತಲಿಗೆ ಎಂತಾ ಕೋಟ್ರೂ ಕೊಡಲಕ್ಕು ಅಲ್ದನೆ ಎಂದು ಮೊದಲ ಬಾರಿಗೆ ರೈಲೇರಿದ ನನ್ನ ಮಾವನವರು ಮುಗ್ಧತೆಯಿಂದ ನುಡಿದಿದ್ದು ರೈಲಿನ ಪ್ರಯಾಣ ಮಾಡುವಾಗಲೆಲ್ಲ ನೆನಪಾಗುತ್ತದೆ. ಮೊನ್ನೆ ಮೊನ್ನೆ ತಿರುವನಂತಪುರಕ್ಕೆ ಹೋಗುವಾಗ ರೈಲ್ವೇ ನಿಲ್ದಾಣದಲ್ಲಿ ಒಂದು ಕಡೆ ಇಬ್ಬರು ನಮಾಜು ಮಾಡುತ್ತಿದ್ದರು. ಇನ್ನೊಂದು ಕಡೆ ವೈದಿಕರೊಬ್ಬರು ಮಂತ್ರ ಹೇಳುತ್ತಿದ್ದರು! ಸರ್ವಧರ್ಮ ಸಮಾವೇಶ ನಡೆಯುತ್ತಿದ್ದಂತೆ ಭಾಸ. ವಿವಿಧ ಭಾಷೆ ಕಲಿಯಬೇಕೆಂದರೆ ರೈಲು ಪ್ರಯಾಣ ಮಾಡಿ ಅಕ್ಕ ಪಕ್ಕದವರನ್ನು ಪರಿಚಯ ಮಾಡಿಕೊಂಡರೂ ಸಾಕು.
ತೆಪ್ಪದಲ್ಲಿಯೂ ಬೋಟಿನಲ್ಲಿಯೋ ಸಾಗುವುದು ಭಿನ್ನ ಅನುಭವ. ನೀರಿನಾಳ ತಿಳಿಯದೇ ದೋಣಿದವನ ಮೇಲೆ ಭರವಸೆ ಇಡುವ ಈಜು ಬಾರದ ನನ್ನಂಥವರು ಮುಳುಗಿದರೆ ಎನ್ನುವ ಭಯದಲ್ಲಿ ದೇವರ ಸ್ಮರಣೆ ಮಾಡುತ್ತಾ ಕುಳಿತುಕೊಳ್ಳುತ್ತೇವೆ. ‘ದೋಣಿ ಸಾಗಲಿಮುಂದೆ ಹೋಗಲಿ ದೂರ ತೀರವ ಸೇರಲಿ’ ಎಂದು ಹಾಡಿದರೂ ಬೀಸು ಗಾಳಿಯ ಆನಂದವನ್ನು ಅಲೆಗಳ ಸೊಬಗನ್ನೂ ಎಂದೂ ಮನಸ್ಫೂರ್ತಿಯಾಗಿ ಅನುಭವಿಸಲಾಗುವುದೇ ಇಲ್ಲ. ಅಷ್ಟೋ ಇಷ್ಟೋ ದೂರ ಪ್ರವಾಸಕ್ಕೆ ಹೋದಾಗ ಬೋಟ್ ಹತ್ತುವ ನನ್ನ ಮನದ ಹಾಡು ‘ಅಂಬಿಗ ನಾ ನಿನ್ನ ನಂಬಿದೆ’… ಎಂದೇ ಆಗಿರುತ್ತದೆ. ತಿಂಗಳಾನುಗಟ್ಟಲೆ ನೀರಿನ ಮೇಲೆಯೇ ತೇಲುತ್ತ ಸಾಗುವ ಹಡಗಿನಲ್ಲಿ ಸಾಗುವವರ ಮನಸ್ಥಿತಿ ಹೇಗಿರುತ್ತದೆಯೊ ದೇವನೇ ಬಲ್ಲ!
ಕಳೆದ ವರ್ಷ ರಾಜಸ್ಥಾನದ ಥಾರ್ ಮರುಭೂಮಿಗೆ ಕಾರಿನಲ್ಲಿ ಪ್ರಯಾಣ ಮಾಡಿದೆವು. ಕಾರಿನಲ್ಲಿ ಏರಕಂಡಿಷನ್ ಹಾಕಿಕೊಂಡರೆ ನೆಗಡಿ, ತೆಗೆದರೆ ಧೂಳು, ಕಿಡಕಿ ಮುಚ್ಚಿ ಕುಳಿತರೆ ರಾಚುವ ಬಿಸಿಲು ಕಾರಿನಲ್ಲಿ ಸುಖ ಪ್ರಯಾಣ ಎನ್ನುವುದು ಭ್ರಮೆಯೇ ಸರಿ ಎನ್ನುತ್ತ ಇಳಿದವರು ಒಂಟೆಯನ್ನೇರಿದೆವು. ಮರಳಿನಲ್ಲಿ ಹುಗಿಯುವ ಕಾಲನ್ನು ನಿರಾಯಾಸವಾಗಿ ಕಿತ್ತಿಡುತ್ತಾ ಒಂಟೆ ಸಾಗುತ್ತಿದ್ದರೆ ನನಗೆ ತರಾವರಿ ಪ್ರಾಣಿ ಪಕ್ಷಿಗಳ ಮೇಲೆ ಸಾಗುವ ನಮ್ಮ ದೇವಾದಿ ದೇವತೆಗಳ ನೆನಪಾಗಲಾರಂಭಿಸಿತು ಇಲಿಯ ಮೇಲೇರಿ ¸ವಾರಿ ಮಾಡುವ ಗಣಪ, ನವಿಲೇರುವ ಸುಬ್ರಹ್ಮಣ್ಯ, ನಂದಿಯೇರುವ ಶಿವ, ಸಿಂಹವಾಹಿನಿ ದುರ್ಗೆ, ಹಂಸವಾಹಿನಿ ಸರಸ್ವತಿ ಐರಾವತವನ್ನೇರುವ ಇಂದ್ರ, ಕಾಕ ವಾಹನ ಶನಿ….. ಇವರ ಸವಾರಿ ಅನುಭವಗಳನ್ನೆಲ್ಲ ಕೇಳಿ ತಿಳಿದುಕೊಳ್ಳುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಸವಾರಿ ಮಾಡಿದಾಗ ದೇವರಿಗೆ ಮೈಕೈ ನೋವೇನಾದರೂ ಬರುತ್ತದೆಯೋ ಏನೋ? ಡೌಟು ಶುರುವಾಯ್ತು. ‘ನೋವೆಲ್ಲ್ಲ ನಮ್ಮಂಥಹ ಹುಲುಮಾನವರಿಗೆ ದೇವರಿಗಲ್ಲ ತಪ್ಪು ತಪ್ಪು ವಿಚಾರ ಮಾಡುತ್ತಿದ್ದೇನೆ’ ಎಂದು ಎರಡೂ ಕೈಗಳಿಂದ ಕೆನ್ನೆಗೆ ತಟ್ಟಿಕೊಂಡೆ. ಜಟಕಾ ಏರುವಾಗ ಆನೆ ಕುದುರೆ ಒಂಟೆಯ ಮೇಲೇರಿ ಸವಾರಿ ಮಾಡುವುದು ತಪ್ಪೋ ಸರಿಯೋ ಸದಾ ಗೊಂದಲ. ನನಗೆ.. ನಾವ್ಯಾರೂ ಅವುಗಳನ್ನೇರದಿದ್ದರೆ ಜನ ಅವುಗಳನ್ನು ಸಾಕುವುದಿಲ್ಲ. ಆ ಪ್ರಾಣಿಗಳ ಹಾಗೂ ಸಾಕಿದವರ ಹೊಟ್ಟೆ ತುಂಬುವುದಿಲ್ಲ… ನಾವು ಪ್ರಯಾಣ ಮಾಡುತ್ತಲೇ ಇದ್ದರೆ ಅವುಗಳಿಗೆ ನಮ್ಮನ್ನು ಹೊರುವ ಕಷ್ಟ ತಪ್ಪುವುದಿಲ್ಲ.
ಕಾಲ್ಗಾಡಿಯಲ್ಲಿ( ನಡಿಗೆಯಲ್ಲಿ) ಉಳವಿ, ಪಂಢರಾಪುರಕ್ಕೆ ತಿರುಪತಿಗೆ ಶಬರಿಮಲೆ.. ಮುಂತಾದ ಕ್ಷೇತ್ರಕ್ಕೆ ಹೋಗುವ ಭಕ್ತರ ನಂಬುಗೆಗೆ ಸಾಟಿ ಯಾವುದು? ವೈಷ್ಣೋದೇವಿ ದರ್ಶನ ಮಾಡುವುದಕ್ಕೆ ಬೆಟ್ಟವನ್ನು ಏರಲಾರದ ಅಶಕ್ತ ಭಕ್ತರನ್ನು ನಾಲ್ಕು ಜನ ಡೋಲಿಯಲ್ಲಿ ಹೊತ್ತು ಮೇಲೇರುವುದನ್ನು ನೋಡಿ ದಂಗು ಬಡಿದುಹೋಗಿದ್ದೆ. ಡೋಲಿಯ ಭಾರ ಹೊರುವವರ ಸಂಸಾರದ ಸಾರವನ್ನುಳಿಸುತ್ತದೆ!….
ಹೀಗೆಲ್ಲ ವಿಚಾರ ಮಾಡುವಷ್ಟರಲ್ಲಿ ಹತ್ತಿ ರಾಶಿಯಂಥಹ ಮೋಡಗಳ ನಿರ್ಜನವಾದ ದಾರಿಯಲ್ಲದ ದಾರಿಯಲ್ಲಿ ಸಾಗಿದ ವಿಮಾನ ನೆಲಕ್ಕಿಳಿಯುವ ಸಮಯವಾಗಿಹೋಗಿತ್ತು. ಈ ಪರಿಯ ಪಯಣದಲಿ ಯಾವುದು ಸುಖವೆಂಬೆ ಮನಸ್ಸಿಗೆ ಪ್ರಶ್ನಿಸಿಕೊಂಡೆ. …ಇಶ್ಯಿ ಅಷ್ಟು ಸುಲಭವಾ ಉತ್ತರ? ಪ್ರಯಾಣವೆಂದರೆ ಸಂಭ್ರಮ, ಸಡಗರ ಸಂತೋಷಗಳ ಮೊತ್ತ ಎಂದುಕೊಂಡಾಗ ‘ಪ್ರಯಾಸ ದಣಿವು’ ಪದಗಳು ನಮ್ಮನ್ನು ಮರೆತೆಯೇಕೆಂದು ಪಿಸುಗುಡಲಾರಂಭಿಸಿದವು!
1 thought on “ಪರಿ ಪರಿ ಪ್ರಯಾಣದ ಪರಿ….”
ಕಾಲು ನಡಿಗೆಯಿಂದ ವಿಮಾನ ಪ್ರಯಾಣದ ವರೆಗೆ ಎಲ್ಲಾ ಅನುಭವಗಳನ್ನು ಚಿಕ್ಕದಾಗಿ ಚೊಕ್ಕವಾಗಿ ಚಿತ್ರಿಸಿದ್ದಾರೆ. ರಾಕೆಟ್, ಕುದುರೆ, ಮೇನೇ ಹೀಗೆ ಇನ್ನೂ ಕೆಲವು ಉಳಿದಿವೆ. ಭಾಷಾ ಶೈಲಿ ಸೊಗಸಾಗಿದೆ. ಅಭಿನಂದನೆಗಳು.