ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಏರುತಿಹುದು ಹಾರುತಿಹುದು ಕನ್ನಡದ ಬಾವುಟ!

ಕರ್ನಾಟಕ ರಾಜ್ಯ ಉದಯವಾಗಿ ನವೆಂಬರ್ ಒಂದಕ್ಕೆ ಅರವತ್ತೇಳು ವಸಂತಗಳು ಪೂರೈಸುತ್ತಿವೆ. ವಿಶಾಲ ಮೈಸೂರು ಪ್ರಾಂತ್ಯ ಅರ್ಥಾತ್ ಮೈಸೂರು ರಾಜ್ಯ ಎಂಬ ಹೆಸರು ಕರ್ನಾಟಕ ಎಂದು ಮರುನಾಮಕರಣವಾಗಿ ಐವತ್ತು ವಸಂತಗಳು ಪೂರೈಸುತ್ತಿವೆ. ಕರ್ನಾಟಕ ರಾಜ್ಯೋತ್ಸವ ಮತ್ತು ಕರ್ನಾಟಕದ ಮರುನಾಮಕರಣದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕನ್ನಡದ ನಿನ್ನೆಗಳನ್ನು ನೆನೆದರೆ ಹೆಮ್ಮೆ ಮತ್ತು ನಾಳೆಗಳನ್ನು ನೆನೆದರೆ ಆತಂಕ ಒಟ್ಟೊಟ್ಟಿಗೇ ಉಂಟಾಗುತ್ತವೆ.

ಕರ್ನಾಟಕದ ಉಜ್ವಲ ಇತಿಹಾಸ, ಭವ್ಯ ಸಾಂಸ್ಕೃತಿಕ ಪರಂಪರೆ, ದಿವ್ಯ ಸಾಹಿತ್ಯ ಪರಂಪರೆ, ಅದ್ಭುತವಾದ ಪ್ರಕೃತಿ ಸೌಂದರ್ಯ ಮತ್ತು ನೆನೆದರೆ ರೋಮಾಂಚನಗೊಳಿಸುವ ಕನ್ನಡಿಗರ ಕ್ಷಾತ್ರತೇಜ ಹಾಗೂ ಉದಾರತೆ ನಮಗೆ ಸಾಕಷ್ಟು ಹೆಮ್ಮೆಯುಂಟಾಗುತ್ತದೆ. ಅದೇ ರೀತಿ ಪ್ರಸ್ತುತ ಸಂದರ್ಭದಲ್ಲಿ ಕನ್ನಡದ ಬಗೆಗೆ ಕನ್ನಡಿಗರಿಗಿರುವ ನಿರ್ಲಕ್ಷ್ಯ, ನಿರಭಿಮಾನ ಮತ್ತು ಇತರೆ ಭಾಷೆಗಳ ಬಗೆಗಿರುವ ವ್ಯಾಮೋಹ ನೆನೆದರೆ ಆತಂಕವುಂಟಾಗುತ್ತದೆ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಮತ್ತು ಕನ್ನಡವೇ ಸಾರ್ವಭೌಮ ಭಾಷೆಯೆಂಬ ಹೇಳಿಕೆ ಕೇವಲ ಹೇಳಿಕೆಯಾಗಷ್ಟೆ ಉಳಿದಿದೆಯೇ ಹೊರತು ಆಚರಣೆಯಲ್ಲಿದೆಯೇ ಎಂಬುದನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸಬೇಕಿದೆ. ಎಷ್ಟೋ ಜನ ಕನ್ನಡಿಗರಿಗೆ ಕನ್ನಡ ಭಾಷೆಯನ್ನು ಸರಿಯಾಗಿ ಬಳಸುವುದು ಗೊತ್ತಿಲ್ಲ ಎಂಬುದು ಕಹಿ ಸತ್ಯ. ಬೆಂಗಳೂರು ಕನ್ನಡಿಗರು ಬಳಸುವ ಕನ್ನಡ ದೇವರಿಗೇ ಪ್ರೀತಿ! ಇವರ ಬಾಯಲ್ಲಿ ಹಾಸನ ಆಸನವಾದರೆ, ಅರಸೀಕೆರೆ ಹರಸೀಕೆರೆ ಆಗುತ್ತದೆ! ಆದರ ಹಾದರವಾದರೆ ಅವಕಾಶ ಅವಕಾಸವಾಗುತ್ತದೆ. ರಾಜ್ಯೋತ್ಸವವನ್ನು ರಾಜ್ಯೋಸ್ತವ ಎಂದು ಉಚ್ಚರಿಸುವ ಮಹಾನುಭಾವರಿದ್ದಾರೆ. ಕನ್ನಡ ಕಲಿಸುವ ಶಿಕ್ಷಕರು ಮತ್ತು ಕನ್ನಡದಲ್ಲಿ ಬರೆಯುವ ಲೇಖಕ/ಲೇಖಕಿಯರಿಗೇ ಸರಿಯಾಗಿ ಕನ್ನಡ ಮಾತನಾಡಲು ಮತ್ತು ಬರೆಯಲು ಬರುವುದಿಲ್ಲ ಎಂಬುದನ್ನು ಕಷ್ಟವಾದರೂ ಒಪ್ಪಿಕೊಳ್ಳಲೇಬೇಕು.

ಇಂದು ಕನ್ನಡ ಭಾಷೆ ಏನಾದರೂ ಉಳಿದಿದ್ದರೆ ಅದು ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಮಾತ್ರ. ವಾಯವ್ಯ ಮತ್ತು ಈಶಾನ್ಯ ಕರ್ನಾಟಕದಲ್ಲಿ ದೇಸಿ ಸೊಗಡಿನ ಕನ್ನಡ ಈಗಲೂ ಜೀವಂತವಾಗಿದೆ. ಕರಾವಳಿ ಕರ್ನಾಟಕದಲ್ಲಿ ಕೊಂಕಣಿ ಮತ್ತು ತುಳು ಭಾಷೆಯಿದ್ದರೂ ಕನ್ನಡವನ್ನು ಶುದ್ಧ ರೂಪದಲ್ಲಿ ಉಳಿಸಿಕೊಂಡು ಬರಲಾಗಿದೆ. ಇದೇ ಮಾತನ್ನು ಬೆಂಗಳೂರು ಮತ್ತು ಮೈಸೂರು ಮಹಾನಗರಗಳಿರುವ ಹಳೆ ಮೈಸೂರು ಪ್ರಾಂತ್ಯದ ಬಗ್ಗೆ ಹೇಳುವುದು ಕಷ್ಟ.

ಬೆಂಗಳೂರಿನಲ್ಲಿ ಶೇಕಡ ಐವತ್ತರಷ್ಟಾದರೂ ಕನ್ನಡಿಗರಿದ್ದಾರೆಯೇ ಎಂದರೆ ಅದಕ್ಕೆ ಸಿಗುವ ಉತ್ತರ ಖಂಡಿತ ಇಲ್ಲ! ಏಕೆಂದರೆ ಬರುಬರುತ್ತ ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಕನ್ನಡೇತರರ ಸಂಖ್ಯೆ ಹೆಚ್ಚಾಗುತ್ತಿದೆ. ತೆಲುಗು, ತಮಿಳು ಮತ್ತು ಮಲಯಾಳಿಗಳಿಗೆ ಬೆಂಗಳೂರು ತವರು ಮನೆಯಿದ್ದಂತೆ. ಉತ್ತರ ಭಾರತೀಯರ ಸಂಖ್ಯೆಯೇನೂ ಕಡಿಮೆಯಿಲ್ಲ. ಅವರು ದಕ್ಷಿಣದವರಿಗೆ ಸ್ಪರ್ಧೆಯೊಡ್ಡುವಷ್ಟು ಸಂಖ್ಯೆಯಲ್ಲಿದ್ದಾರೆ. ಸಂಖ್ಯಾಬಾಹುಳ್ಯದ ದೃಷ್ಟಿಯಿಂದ ಕನ್ನಡೇತರರೇ ಅಧಿಕವಾಗಿರುವ ಬೆಂಗಳೂರಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರು!

ಇತ್ತೀಚೆಗೆ ಬೆಂಗಳೂರಿನ ಜೊತೆ ಜೊತೆಗೆ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸಹ ಕನ್ನಡೇತರರು ಅತ್ಯಧಿಕ ಪ್ರಮಾಣದಲ್ಲಿ ಬಂದು ಸೇರಿಕೊಳ್ಳುತ್ತಿದ್ದಾರೆ. ತಮಿಳರಿಗೆ ಮೈಸೂರು, ಮಲಯಾಳಿಗೆ ಮಂಗಳೂರು ಮತ್ತು ತೆಲುಗರಿಗೆ ಹುಬ್ಬಳ್ಳಿ ನೆಚ್ಚಿನ ತಾಣಗಳು. ದಕ್ಷಿಣ ಭಾರತದ ಇತರೆ ರಾಜ್ಯಗಳ ಸಿನಿಮಾ ನಟರು ಮತ್ತು ರಾಜಕಾರಣಿಗಳ ಅಪಾರ ಆಸ್ತಿಪಾಸ್ತಿಯಿರುವುದು ಬೆಂಗಳೂರಿನಲ್ಲಿ ಎಂಬುದು ಆಶ್ಚರ್ಯದ ಮಾತಲ್ಲ. ಭಾರತದ ಬಹುತೇಕ ಖ್ಯಾತನಾಮರು ಬೆಂಗಳೂರಿನಲ್ಲಿ ಒಂದು ದೊಡ್ಡ ಮನೆ, ಅಪಾರ್ಟ್ಮೆಂಟ್, ಫಾರ್ಮ್ ಹೌಸ್, ರಿಯಲ್ ಎಸ್ಟೇಟ್ ಏಜೆನ್ಸಿ, ಆಸ್ಪತ್ರೆ, ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ಕೆಲವು ನೇರವಾಗಿ ಅವರ ಹೆಸರಿನಲ್ಲಿದ್ದರೆ ಇನ್ನೂ ಕೆಲವು ಅವರಿಗೆ ಬೇಕಾದವರ ಹೆಸರಿನಲ್ಲಿ ಇರುತ್ತವೆ. ಇಂತಹ ಸಾವಿರಾರು ಕೋಟಿ ಮೌಲ್ಯದ ಬೇನಾಮಿ ಚರಾಸ್ತಿ, ಸ್ಥಿರಾಸ್ತಿ ಬೆಂಗಳೂರಿನಲ್ಲಿರುವುದು ತುಂಬ ಜನಕ್ಕೆ ಗೊತ್ತಿಲ್ಲ. ಮಲಯಾಳಂ ಸೂಪರಸ್ಟಾರುಗಳಾದ ಮಮ್ಮುಟ್ಟಿ, ಮೋಹನಲಾಲರ ಅರ್ಧಕ್ಕಿಂತ ಅಧಿಕ ಆಸ್ತಿಯಿರುವುದೇ ಬೆಂಗಳೂರಿನಲ್ಲಿ!

ಇರಲಿ, ಉದ್ಯೋಗ, ವ್ಯಾಪಾರ ಮತ್ತು ಶಿಕ್ಷಣಕ್ಕೆ ಎಂದು ಬರುವ ಈ ಅನ್ಯ ಭಾಷೆಯವರಿಗೆ ಕರ್ನಾಟಕದ ಕುರಿತಾಗಲೀ, ಕನ್ನಡಿಗರ ಕುರಿತಾಗಲೀ ಸ್ವಲ್ಪವೂ ಗೌರವವಿಲ್ಲ. ಕನಿಷ್ಠ ಅನ್ನದ ಋಣ ಮತ್ತು ಪಾಪಪ್ರಜ್ಞೆಯೂ ಈ ಅನ್ಯ ಭಾಷಿಕರಿಗೆ ಇರದಿರುವುದು ಖೇದದ ಸಂಗತಿ. ಕನ್ನಡಿಗರ ಅತಿಯಾದ ಉದಾರತೆ ಮತ್ತು ನಿರಭಿಮಾನ ಅನ್ಯಭಾಷಿಕರ ಆರ್ಭಟ ಹೆಚ್ಚಾಗುವಂತೆ ಮಾಡಿದೆ. ಕನ್ನಡದ ಕುರಿತು ಕನ್ನಡಿಗರಿಗೇ ಇರದ ಪ್ರೀತಿ ಮತ್ತು ಅಭಿಮಾನವನ್ನು ಕನ್ನಡೇತರರಿಂದ ನಿರೀಕ್ಷಿಸಲು ಸಾಧ್ಯವೇ?

ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಾದವರು ಕನ್ನಡಿಗರೇ ಹೊರತು ಅನ್ಯರಲ್ಲ! ಈ ಸರಳ ಸತ್ಯದ ಅರಿವು ಕನ್ನಡಿಗರಿಗಿಲ್ಲ ಅಥವಾ ಇದ್ದರೂ ಅದನ್ನು ಒಪ್ಪಿಕೊಳ್ಳುವ ಧೈರ್ಯವಿಲ್ಲ. ಭಾಷೆ ಉಳಿಯುವುದು ಮತ್ತು ಬೆಳೆಯುವುದು ಸಾಮಾನ್ಯ ಜನರಿಂದ ಅದಕ್ಕೆ ಒತ್ತಾಸೆಯಾಗಿ ನಿಲ್ಲುವುದು ಆ ಭಾಷೆಯ ಸಾಹಿತ್ಯ ಮತ್ತು ಸಿನಿಮಾ. ಸುದೈವವಶಾತ್ ಕನ್ನಡ ಸಾಹಿತ್ಯ ಮತ್ತು ಸಿನಿಮಾ ಹಲವು ಮಿತಿಗಳ ನಡುವೆಯೂ ತುಂಬ ಶ್ರೀಮಂತವಾಗಿದ್ದು ಕನ್ನಡ ಭಾಷೆ ಬೆಳೆಯಲು ಅಪಾರ ಕೊಡುಗೆ ನೀಡಿವೆ. ಸಾಹಿತ್ಯದಲ್ಲಿ ಕುವೆಂಪು ಮತ್ತು ಸಿನಿಮಾದಲ್ಲಿ ಡಾ. ರಾಜಕುಮಾರರು ಕನ್ನಡದ ರಾಯಭಾರಿಗಳಾಗಿ ಕನ್ನಡಕ್ಕೆ ಅಪಾರ ಖ್ಯಾತಿ ತಂದಿದ್ದಾರೆ.

ಸರ್ಕಾರಿ ಸುತ್ತೋಲೆಗಳು, ಆದೇಶಗಳು, ಕಾರ್ಯಕ್ರಮಗಳು, ಯೋಜನೆಗಳು ಮತ್ತು ಅನುದಾನಗಳಿಂದ ಕನ್ನಡ ಬೆಳೆಯುವುದಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕಾವಲು ಸಮಿತಿ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ಕನ್ನಡಕ್ಕಾಗಿಯೇ ಹಲವು ಸಂಸ್ಥೆಗಳಿವೆ. ಪ್ರತಿ ವರ್ಷ ಸರ್ಕಾರ ಇಂತಹ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ಇತ್ತೀಚೆಗೆ ಜಿಲ್ಲೆಗೊಂದು ವಿಶ್ವವಿದ್ಯಾಲಯ ನೀಡುವುದಾಗಿ ಘನ ಸರ್ಕಾರ ಘೋಷಿಸಿದೆ. ಇಂತಹ ಅವೈಜ್ಞಾನಿಕ ಮತ್ತು ಮೂರ್ಖ ನಿರ್ಧಾರಗಳ ಬಗ್ಗೆ ಚರ್ಚಿಸದಿರುವುದೇ ಒಳಿತು!

ದುರ್ದೈವಶಾತ್ ಇತ್ತೀಚೆಗೆ ಈ ಸರ್ಕಾರಿ ಸಂಸ್ಥೆಗಳಿಂದ ಕನ್ನಡಕ್ಕೆ ಏನೂ ಪ್ರಯೋಜನವಾಗುತ್ತಿಲ್ಲ. ಸಾಹಿತ್ಯ ಸಂಬಂಧೀ ಸಂಸ್ಥೆಗಳು ಪ್ರಶಸ್ತಿ ನೀಡುವುದು ಮತ್ತು ಪುಸ್ತಕ ಪ್ರಕಟಣೆ ಮಾಡುವಷ್ಟಕ್ಕೆ ಮಾತ್ರ ಸೀಮಿತವಾಗಿವೆ. ಕನ್ನಡಪರ ಸಂಸ್ಥೆಗಳು ಅದ್ದೂರಿಯಾಗಿ ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳುತ್ತವೆ. ಈ ಸಾಹಿತ್ಯಕ ಮತ್ತು ಕನ್ನಡಪರ ಸಂಸ್ಥೆಗಳ ಚಟುವಟಿಕೆಗಳಿಂದ ಜನರ ದುಡ್ಡು ಪೋಲಾಗುತ್ತಿದೆಯೇ ಹೊರತು ಕನ್ನಡಕ್ಕೆ ನಯಾ ಪೈಸೆ ಪ್ರಯೋಜನವಿಲ್ಲ! ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಕನ್ನಡಪರ ಹೋರಾಟಗಾರರೆಂದು ಬೀಗುವ ಡೋಂಗಿ ಮಂದಿಗೆ ಇದರಿಂದ ತುಂಬ ಪ್ರಯೋಜನವಿದೆ. ಅದಕ್ಕೆ ಅಲ್ಲವೇ ಇವರೆಲ್ಲ ಆಡವಾರದ ಆಟವಾಡಿ, ಮಾಡಬಾರದ ಕೆಲಸ ಮಾಡಿ ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಲ್ಲಿ ಸ್ಥಾನ ಗಿಟ್ಟಿಸಲು ಮಾನಮರ್ಯಾದೆ ಗಾಳಿಗೆ ತೂರಿ ರಾಜಕಾರಣಿಗಳ ಹಿಂಬಾಲಕರಾಗುವುದು.

ಇತ್ತೀಚೆಗೆ ಇಂತಹ ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಅರಿವು ಮತ್ತು ಕಾಳಜಿಯಿಲ್ಲದ ಡೋಂಗಿ ವಿಚಾರವಾದಿಗಳು, ಭ್ರಷ್ಟ ಬುದ್ಧಿಜೀವಿಗಳು, ಲಂಚಕೋರ ಅಧಿಕಾರಿಗಳು ಮತ್ತು ದುರಾಸೆಯ ರಾಜಕಾರಣಿಗಳು ಬಂದು ಕೂರುತ್ತಿರುವುದು ಹೆಚ್ಚಾಗಿದೆ. ಇದು ಸ್ವಯಂಘೋಷಿತ ನಾಡೋಜರ ಕಾಲ!
ಕನ್ನಡದ ಹೆಮ್ಮೆಯ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಬಗೆಗೆ ನೆನೆದರೆ ತುಂಬ ಖೇದವಾಗುತ್ತದೆ. ಹಿಂದೆ ಎಂತೆಂತಹವರು ಇದ್ದರು ಮತ್ತು ಈಗ ಎಂತೆಂತಹವರು ಇದ್ದಾರೆ! ಸಾಹಿತ್ಯದೊಂದಿಗೆ ಯಥಾರ್ಥ ಸಂಬಂಧವಿಲ್ಲದ ಜನ ಹೋಬಳಿ, ನಗರ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಪರಿಷತ್ತಿನ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಸದಸ್ಯರಾಗುತ್ತಾರೆ. ಕನ್ನಡದ ಹೆಸರಿನಲ್ಲಿ ಹೆಸರು ಮತ್ತು ಹಣ ಮಾಡಿಕೊಳ್ಳುತ್ತಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಂತೂ ಅರ್ಥವನ್ನೇ ಕಳೆದುಕೊಳ್ಳುತ್ತಿದೆ.

ಇನ್ನು ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಸಮ್ಮೇಳನದ ಬಗ್ಗೆ ಮಾತಾಡದಿರುವುದೇ ಒಳಿತು. ಭಾರತದ ಬೇರಾವುದೇ ಭಾಷೆಗಳಲ್ಲೂ ಇಷ್ಟೊಂದು ಅದ್ದೂರಿಯಾಗಿ ಸಮ್ಮೇಳನ ನಡೆಯುವುದಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಸಾಹಿತಿಗಳಿಗಿಂತ ಹೆಚ್ಚಾಗಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಬುದ್ಧಿಜೀವಿಗಳು ತುಂಬಿರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಅತೃಪ್ತರ ಕೂಟದ ಆರ್ಭಟ. ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಿಗಿಂತ ಊಟ-ತಿಂಡಿಯ ಕೌಂಟರುಗಳ ಮುಂದೆ ಜನ ಕಿಕ್ಕಿರಿದು ಜಮಾಯಿಸಿರುತ್ತಾರೆ.

ಕವಿಗೋಷ್ಠಿ, ವಿಚಾರಗೋಷ್ಠಿಗಳಲ್ಲಿ ಅತೃಪ್ತ ಲೇಖಕ/ಲೇಖಕಿಯರು ಮತ್ತು ಅಯೋಗ್ಯರ ಸಂಖ್ಯೆಯೇ ಜಾಸ್ತಿ. ಇದು ದಸರಾ ಕವಿಗೋಷ್ಠಿಯಲ್ಲಿ ಸಹ ಪುನರಾವರ್ತನೆಯಾಗುತ್ತದೆ. ಇಂತಹವರು ಸಮ್ಮೇಳನ ಅಥವಾ ದಸರಾ ಕವಿಗೋಷ್ಠಿ ಮುಗಿದ ನಂತರ ಒಂದು ತಿಂಗಳ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಾಧನೆಯ ಡಂಗುರ ಹೊಡೆಯುತ್ತ ಬಂಧುಗಳು, ಸ್ನೇಹಿತರು ಮತ್ತು ಜಾಲತಾಣಿಗರಿಗೆ ಇನ್ನಿಲ್ಲದಂತೆ ಕಿರುಕುಳ ಕೊಡುತ್ತಾರೆ.

ಸಮ್ಮೇಳನದ ಹೆಸರಲ್ಲಿ ಕೋಟ್ಯಂತರ ರೂಪಾಯಿ ಜನರ ದುಡ್ಡನ್ನು ಪೋಲು ಮಾಡಲಾಗುತ್ತದೆ. ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಅತೃಪ್ತರ ಕೂಟ ಹಣ ತಿಂದು ಶ್ರೀಮಂತವಾಗುತ್ತದೆ. ಒಟ್ಟಿನಲ್ಲಿ ಕನ್ನಡಕ್ಕೆ ಬಡತನ ಮತ್ತು ಬವಣೆ ತಪ್ಪುವುದಿಲ್ಲ. ಪಕ್ಕದ ಮರಾಠಿ ಭಾಷೆಯ ಸಾಹಿತ್ಯ ಸಮ್ಮೇಳನದಿಂದ ನಮ್ಮವರು ಕಲಿಯುವುದು ಸಾಕಷ್ಟಿದೆ. ಆದರೆ ದಪ್ಪ ಚರ್ಮದ ನಮ್ಮವರಿಗೆ ಸತ್ತರೂ ಅಂತಹ ಒಳ್ಳೆಯ ಬುದ್ಧಿ ಬರುವುದಿಲ್ಲ! ಒಟ್ಟಿನಲ್ಲಿ ಅತೃಪ್ತರು ಮೂರು ದಿನಗಳ ಕಾಲ ಕನ್ನಡದ ಹೆಸರಲ್ಲಿ ಹಬ್ಬ ಹುಡಿ ಹಾರಿಸುತ್ತಾರೆ!

ಇನ್ನು ಕನ್ನಡದ ಬಗ್ಗೆ ಉದ್ದುದ್ದ ಭಾಷಣ ಮಾಡುವ, ಆವೇಶದಿಂದ ಕನ್ನಡಕ್ಕೆ ಜೈಕಾರ ಹಾಕುವ, ಕನ್ನಡ ಗೀತೆಗಳನ್ನು ಕೇಳಿ ಕಣ್ಣೀರು ಸುರಿಸುವ, ಕನ್ನಡ ಶಾಲನ್ನು ಹೊದ್ದು ವೇದಿಕೆಯ ಮೇಲೆ ಮದುವಣಿಗ ಅಥವಾ ಮದುವಣಗಿತ್ತಿಯರಂತೆ ಮಿಂಚುವ ತುಂಬ ಜನ ರಾಜಕಾರಣಿಗಳು, ಅಧಿಕಾರಿಗಳು, ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಕನ್ನಡ ಹೋರಾಟಗಾರರ ಮಕ್ಕಳು, ಮೊಮ್ಮಕ್ಕಳಿಗೆ ಕನ್ನಡ ಗೊತ್ತಿಲ್ಲ! ಇಂತಹವರ ಮಕ್ಕಳು ಶ್ರೀಮಂತರಿಗೆ ಮೀಸಲಾದ ಐ.ಸಿ.ಎಸ್.ಸಿ., ಸಿ.ಬಿ.ಎಸ್.ಸಿ. ಶಾಲೆಗಳಲ್ಲಿ ಓದುತ್ತಾರೆ. ಇವರಿಗೆ ಕನ್ನಡವೆಂದರೆ ಅಲರ್ಜಿ. ಕನ್ನಡದ ಹೆಸರಲ್ಲಿ ಇವರಿಗೆ ಹಣ, ಪ್ರಶಸ್ತಿ ಮತ್ತು ಪ್ರಸಿದ್ಧಿ ಬೇಕು ಆದರೆ ಕನ್ನಡ ಮಾತ್ರ ಬೇಡ! ಕನ್ನಡದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕನ್ನಡ ಹೋರಾಟಗಾರನ ಮಕ್ಕಳಿಗೆ ಕನ್ನಡ ಬರುವುದಿಲ್ಲ. ಇಂಗ್ಲಿಷ್ ಗೊತ್ತಿಲ್ಲದ ಹುಂಬ ರಾಜಕಾರಣಿಯ ಮೊಮ್ಮಕ್ಕಳಿಗೆ ಕನ್ನಡ ತಿಳಿಯುವುದಿಲ್ಲ. ಕನ್ನಡದಲ್ಲಿ ಕಥೆಗಳನ್ನು ಬರೆದು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಪ್ರಸಿದ್ಧ ಲೇಖಕನೊಬ್ಬನ ಮಕ್ಕಳಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ.

ಕನ್ನಡ ಶಾಲೆಗಳು ಇಂದು ದಯನೀಯ ಸ್ಥಿತಿಯಲ್ಲಿವೆ. ಶೇ. ಎಂಬತ್ತರಷ್ಟು ಶಾಲೆಗಳು ಮುಚ್ಚಿವೆ ಅಥವಾ ಮುಚ್ಚುವ ಹಂತದಲ್ಲಿವೆ. ಕನ್ನಡದಲ್ಲಿ ಎಂ.ಎ., ಪಿ.ಎಚ್.ಡಿ. ಮಾಡಿದವರಿಗೆ ಉದ್ಯೋಗ ಸಿಗುತ್ತಿಲ್ಲ. ಕನ್ನಡ ಭಾಷೆ ಬರುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರ ನಡುವೆ ಕನ್ನಡ ಮಾಧ್ಯಮದಲ್ಲಿ ಓದಿದ್ದೇವೆ ಅಥವಾ ಓದುತ್ತಿದ್ದೇವೆ ಎಂದು ನಾಚಿಕೆ ಪಡುವ ಸ್ಥಿತಿಯಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಕನ್ನಡ ಮಾತಾಡುವುದೇ ದುಸ್ತರವೆಂಬ ಪರಿಸ್ಥಿತಿಯಿದೆ. ಅನ್ಯ ಭಾಷಿಗರು ಕರ್ನಾಟಕಕ್ಕೆ ವಲಸೆ ಬಂದು ಇಲ್ಲಿರುವ ಕನ್ನಡಿಗರ ಮೇಲೆಯೇ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕೇಂದ್ರ ಸರಕಾರದ ರೈಲ್ವೆ ಇಲಾಖೆ, ದೂರಸಂಪರ್ಕ ಇಲಾಖೆ, ಬ್ಯಾಂಕುಗಳು ಮತ್ತು ಪೋಸ್ಟ್ ಆಫೀಸುಗಳಲ್ಲಿ ಕನ್ನಡೇತರರೇ ತುಂಬಿ ತುಳುಕುತ್ತಿದ್ದಾರೆ. ಈ ಎಲ್ಲ ಇಲಾಖೆಗಳಲ್ಲಿ ಕನ್ನಡಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸದ್ಯ ಕರ್ನಾಟಕದಲ್ಲಿರುವ ಅವರು ಕನ್ನಡ ಕಲಿಯುವುದಿರಲೀ, ಅವರಿಗೋಸ್ಕರ ಕನ್ನಡಿಗರೇ ಹಿಂದಿ ಕಲಿಯಬೇಕಾದ ಅನಿವಾರ್ಯತೆಯಿದೆ.

ಇನ್ನು ಕೇಂದ್ರ ಸರ್ಕಾರಗಳು (ಬಿಜೆಪಿ, ಕಾಂಗ್ರೆಸ್ ಅಥವಾ ಯಾವುದೇ ಕಿಚಡಿ ಸರ್ಕಾರವಿದ್ದರೂ ಅಷ್ಟೇ) ಸದಾ ಪ್ರಾದೇಶಿಕ ಭಾಷೆಗಳ ಮೇಲೆ ಒತ್ತಾಯಪೂರ್ವಕವಾಗಿ ಹಿಂದಿಯನ್ನು ಹೇರಿಕೆ ಮಾಡುತ್ತ ಬಂದಿವೆ. ಕೇಂದ್ರ ಸರಕಾರದ ಎಷ್ಟೋ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಸೇರಿದಂತೆ ಯಾವುದೇ ಪ್ರಾದೇಶಿಕ ಭಾಷೆಗಳಿಗೆ ಅವಕಾಶವಿಲ್ಲ. ಇದರಿಂದ ಕೋಟ್ಯಂತರ ಜನ ಉದ್ಯೋಗ ವಂಚಿತರಾಗುತ್ತಿದ್ದಾರೆ. ಇಂತಹ ಎಷ್ಟೋ ಅನ್ಯಾಯಗಳು ನಡೆದಿವೆ ಮತ್ತು ನಡೆಯುತ್ತಲೇ ಇವೆ.

ಕರ್ನಾಟಕದಿಂದ ಚುನಾಯಿತರಾಗಿ ಹೋಗುವ ಎಲ್ಲ ಪಕ್ಷಗಳ ಸಂಸದರು ಇಂತಹ ಅನ್ಯಾಯದ ಬಗ್ಗೆ ದನಿಯೆತ್ತಬೇಕಿದೆ. ಸರ್ಕಾರ ಕರ್ನಾಟಕದಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ ನೀಡಬೇಕಿದೆ. ಕನ್ನಡ ನೆಲದಲ್ಲಿ ಅನ್ಯ ಭಾಷಿಕರ ಆಟಾಟೋಪ ಹತ್ತಿಕ್ಕಬೇಕಿದೆ. ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡ ಮಾತನಾಡಲು ಓದಲು ಮತ್ತು ಬರೆಯಲು ಕಲಿಯಬೇಕಾದ ಅಗತ್ಯವಿದೆ. ಇದೆಲ್ಲ ಕನ್ನಡಿಗರ ದೃಢ ಸಂಕಲ್ಪದಿಂದ ಮಾತ್ರ ಸಾಧ್ಯ. ನಿರಭಿಮಾನಿಗಳಾದ ಕನ್ನಡಿಗರಲ್ಲಿ ಈಗಲಾದರೂ ಕನ್ನಡಪ್ರಜ್ಞೆ ಎಚ್ಚೆತ್ತು ಅವರು ಕನ್ನಡವನ್ನು ಉಳಿಸುವ ಮತ್ತು ಬೆಳೆಸುವ ದೃಢ ಸಂಕಲ್ಪ ಮಾಡಲಿ ಹಾಗೂ ಆ ಸಂಕಲ್ಪ ಸಾಕಾರವಾಗಲಿ ಎಂದು ಆಶಿಸುತ್ತೇನೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಏರುತಿಹುದು ಹಾರುತಿಹುದು ಕನ್ನಡದ ಬಾವುಟ!”

  1. Raghavendra Mangalore

    ಜಡ ಮತ್ತು ಸೋಮಾರಿ ಕನ್ನಡಿಗನನ್ನು
    ಬಡಿದೆಬ್ಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ ಲೇಖಕರಿಗೆ ಹೃತ್ಪೂರ್ವಕ ಧನ್ಯವಾದಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter