ಅವಿನೀತೆ

ಚಿತ್ರ: ಮಂಗಳಾ ಶೆಟ್ಟಿ

ಸುಶಾಂತ್ ಆತ್ಮೀಯ ಸಹೋದ್ಯೋಗಿ ಸ್ನೇಹಿತರಾದ ಪ್ರಣೀತಾ ಮತ್ತು ಪ್ರಭಾಸರ ಜೊತೆಗೆ ಕಾಲೇಜಿನ ಕ್ಯಾಂಟೀನಿನತ್ತ ಹೆಜ್ಜೆ ಹಾಕತೊಡಗಿದ್ದ. ಮೂವರೂ ಧಾರವಾಡದ ಪ್ರತಿಷ್ಠಿತ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಮೂವರಲ್ಲಿ ಸುಶಾಂತನೇ ಸೀನಿಯರ್. ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತುಕತೆಗಳು ಸಾಗಿದ್ದು ಪ್ರಣೀತಾ ಮತ್ತು ಪ್ರಭಾಸ್ ಕ್ರಿಯಾಶೀಲರಾಗಿ ಭಾಗವಹಿಸಿದ್ದರೆ ಸುಶಾಂತ್ ಮಾತ್ರ ಅನ್ಯಮನಸ್ಕನಾಗಿ ತೆಪ್ಪಗೆ ಹೆಜ್ಜೆ ಇಡತೊಡಗಿದ್ದ. ಹಾಗೊಮ್ಮೆ ಹೀಗೊಮ್ಮೆ ಬರೀ ಹಾಂ, ಹೂಂ ಎಂದೆನ್ನುತ್ತಿದ್ದ. ಗೆಳೆಯನ ಮೌನ, ಅನ್ಯಮನಸ್ಕತೆ ಇಬ್ಬರ ಗಮನಕ್ಕೆ ಬರದೇ ಇರಲಿಲ್ಲ. ಕ್ಯಾಂಟೀನ್‍ನಲ್ಲಿ ಮೂಲೆಯ ಮೇಜನ್ನು ಆಯ್ದುಕೊಂಡು ಕುಳಿತರು.
“ಸು ಬ್ರದರ್, ಏನು ಬೇಕು ತಿನ್ನಲಿಕ್ಕೆ..?” ಪ್ರಣೀತಾ ಕೇಳಿದ್ದಕ್ಕೆ, “ಸದ್ಯ ನನಗೇನೂ ತಿನ್ನಲು ಮನಸಿಲ್ಲ. ಆದರೂ ನಿಮಗೇನು ಬೇಕೋ, ಅದನ್ನೇ ತೆಗೆದುಕೊಂಡು ಬಾ” ಎಂದ ಸುಶಾಂತ್ ಭಾವನೆಗಳಿಲ್ಲದ ಧ್ವನಿಯಲ್ಲಿ. ತಾವು ಮೂವರಷ್ಟೇ ಇರುವಾಗ ಪ್ರಣೀತಾ ಸುಶಾಂತನನ್ನು ಬರೀ “ಸು” ಎಂದೇ ಕರೆಯುತ್ತಿದ್ದಳು ಪ್ರೀತಿಯಿಂದ. ಅವಳಿಗೋ ಒಡಹುಟ್ಟಿದ ಅಣ್ಣ-ತಮ್ಮಂದಿರು ಇರದೇ ಇದ್ದುದರಿಂದ ಪರಿಚಯವಾದ ಮೊದಲ ದಿನದಿಂದಲೇ ಅವರಿಬ್ಬರಲ್ಲಿ ಪವಿತ್ರ ಸಂಬಂಧವೊಂದು ಸೃಷ್ಟಿಯಾಗಿ ಅವನನ್ನು ಅಣ್ಣನನ್ನಾಗಿ ಮಾಡಿಕೊಂಡಿದ್ದಳು. ಪ್ರಭಾಸ್ ಅವಳನ್ನು ಪ್ರೀತಿಸುವ ಹುಡುಗ. ಅವರಿಬ್ಬರ ಪ್ರೀತಿಗೆ ಇವನೇ ಕೊಂಡಿಯಾಗಿದ್ದ.
ಸ್ವ-ಸೇವಾ ಪದ್ಧತಿಯ ಕ್ಯಾಂಟೀನ್. ಪ್ರಣೀತಾ ಕೌಂಟರಿನತ್ತ ಹೋಗಿ ಚೀಟಿ ಪಡೆದು ತಿಂಡಿ ತಂದರೆ ಪ್ರಭಾಸ್ ಕುಡಿಯಲು ನೀರು ತಂದ. ಸುಶಾಂತನ ದೃಷ್ಟಿ ಎತ್ತಲೋ ಇತ್ತು. ಒಲ್ಲದ ಮನಸ್ಸಿನಿಂದ ಸುಶಾಂತ್ ತಿಂಡಿ ತಿನ್ನಲು ಮುಂದಾದ. ಬಿಸಿಬಿಸಿಯಾದ ಘಮಘಮಿಸುವ ಉಪ್ಪಿಟ್ಟಿನ ಜೊತೆಗೆ ಪಕೋಡ ತಂದಿದ್ದಳು ಪ್ರಣೀತಾ.
“ಸು ಅಣ್ಣ, ಇದೇನು ಇಷ್ಟೊಂದು ಮೌನ? ಯಾವುದಾದರೂ ಯೋಗ ತರಬೇತಿ ಶಿಬಿರಕ್ಕೇನಾದರೂ ಹೋಗಿ ಬಂದಿರುವಿಯಾ ಹೇಗೆ? ಗಂಭೀರವಾದ ಧ್ಯಾನದ ಜೊತೆಗೆ ಮೌನಾಚರಣೆ ಶುರುವಾದ ಹಾಗಿದೆ…?”
“ಹಾಗೇನೂ ಇಲ್ಲ.” ಚುಟುಕಾಗಿತ್ತು ಸುಶಾಂತನ ಮಾತು.
“ಇವ ಹೀಗೆ ಇಷ್ಟು ಗಂಭೀರನಾಗಿರುವನೆಂದರೆ ಏನೋ ಆಗಬಾರದ್ದು ಆಗಿದೆ. ಮನಸ್ಸಿಗೆ ಭಾರೀ ನಿರಾಸೆ, ನೋವು ಆಗಿರಬೇಕು. ಏನಾಗಿರಬಹುದು…? ಸು, ಬಾಯಿಬಿಟ್ಟು ಹೇಳೋ?” ಮತ್ತೆ ಪ್ರಣೀತಾಳೇ ಪ್ರತಿಕ್ರಿಯಿಸಿದಾಗಲೂ ಸುಶಾಂತ್ ಸುಮ್ಮನೇ ಇದ್ದ.
“ಲವ್ ಫೇಲ್ಯೂರ್ ಆಗಿರಬೇಕು. ಮತ್ತಿನ್ನೇನು…?” ಪ್ರಭಾಸ್ ತಟ್ಟಂತ ಉಸುರಿಬಿಟ್ಟು ತಕ್ಷಣ ನಾಲಿಗೆ ಕಚ್ಚಿಕೊಂಡ. ಆಗಲೂ ಸುಶಾಂತ್ ಸುಮ್ಮನಿದ್ದ. ಎತ್ತಲೋ ನೋಡತೊಡಗಿದ್ದ. ನೋಟದಲ್ಲಿ ಹೊಳಪಿರಲಿಲ್ಲ.
“ಸು, ನೀ ಹೀಗೆ ಗುಮ್ಮನ ಗುಸುಗಂತೆ ಸುಮ್ಮನೇ ಕುಳಿತರೆ ಎದೆಯೊಳಗಿನ ಕಿಚ್ಚು ಶಾಂತವಾಗುತ್ತದೆಯೇ? ಆತ್ಮೀಯರ ಮುಂದೇನೇ ಬಾಯಿಬಿಡದವ ಬೇರೆಯವರ ಮುಂದೆ ನಿನ್ನ ಮನದಾಳದ ನೋವನ್ನು ಹಂಚಿಕೊಳ್ಳಲು ಸಾಧ್ಯವೇ?” ಪ್ರಣೀತಾ ಮುಂದುವರಿಸಿದ್ದಳು ತನ್ನ ವಾಗ್ಝರಿ.
“ಸಾಕು, ಸಾಕು ನಿಮ್ಮ ಪ್ರಲಾಪ. ಇಲಿಗೆ ಪ್ರಾಣ ಸಂಕಟವಾದರೆ ಬೆಕ್ಕಿಗೆ ಚೆಲ್ಲಾಟವಂತೆ.” ಸುಶಾಂತ್ ಒಮ್ಮೆಲೇ ಕಿರುಚಿದ್ದ. ಸುತ್ತಮುತ್ತಲಿದ್ದವರು ಇವರ ಕಡೆಗೇ ದೃಷ್ಟಿ ಹರಿಸಬೇಕಾಯಿತು. ಸುಶಾಂತ್ ತಲೆ ಕೆಳಗೆ ಹಾಕಿಕೊಂಡ. ಮೂವರಲ್ಲಿ ಮಾತು ನಿಂತು ಹೋಯಿತು. ಪ್ರಭಾಸ್, ಪ್ರಣೀತಾ ಬಾಯಿಗೆ ಬೀಗ ಹಾಕಿಕೊಂಡರು. ಮೌನದಲ್ಲಿ ತಿಂಡಿಯ ಸೇವನೆ ಮುಂದುವರಿಯಿತು.
“ಸಾರಿ ಪ್ರಣೀ, ಪ್ರಭು.”
“ಓಕೇ ಓಕೆ. ದಟ್ಸ್ ಓಕೆ. ನಿನಗೆ ನೋವಾಗುವಂತೆ ಮಾತಾಡಿದೆವು. ನಮ್ಮ ಮಾತಿನ ಉದ್ದೇಶ ನಿನ್ನ ಮನಸ್ಸನ್ನು ನೋಯಿಸುವುದು ಆಗಿರಲಿಲ್ಲ. ನಿನ್ನೆದೆಯೊಳಗಿನ ನೋವು ಹೊರಗೆ ಬರಲಿ ಅಂತ. ಆತ್ಮೀಯರೊಂದಿಗೆ ಮನವನ್ನು ತೆರೆದಿಟ್ಟರೆ ತಾನೆ ನೋವಿಗೆ ಶಮನ ಸಿಗಬಹುದು. ಅದಾಗದಿದ್ದರೆ ನಾವು ನಿನಗೆ ಆತ್ಮೀಯರಾಗಿದ್ದೂ ಪ್ರಯೋಜನವೇನು?” ಮೇಜಿನ ಮೇಲಿದ್ದ ಸುಶಾಂತನ ಕೈ ಅಮುಕಿ ಪ್ರಣೀತಾ ಮೆಲ್ಲಗೇ ಉಸುರಿದಳು.
“ಇಲ್ಲಿ ಮಾತು ಬೇಡ. ಕಾಲೇಜಿನ ಉದ್ಯಾನವನದಲ್ಲಿ ಕುಳಿತು ಮಾತಾಡೋಣ.” ಸುಶಾಂತ್ ಹೇಳಿದಾಗ ಮೂವರೂ ಗಡಬಡ ಅಂತ ತಿಂಡಿ ತಿಂದು ಕಾಫಿ ಕುಡಿದು ಹೊರಗೆ ಹೆಜ್ಜೆ ಹಾಕಿದರು. ಸುಶಾಂತನ ಮನಸ್ಸಿನಲ್ಲಿ ಯುದ್ಧವೇ ಶುರುವಾಗಿದ್ದರೆ ಅವನೆದೆಯೊಳಗಿನ ನೋವನ್ನು ಕೇಳುವ ತವಕದಲ್ಲಿದ್ದರು ಪ್ರಣೀತಾ ಮತ್ತು ಪ್ರಭಾಸ್.


ಉದ್ಯಾನವನದ ಮೂಲೆಯಲ್ಲಿನ ಕಲ್ಲಿನ ಬೆಂಚನ್ನು ಆಯ್ದುಕೊಂಡು ಕುಳಿತರು ಮೂವರೂ. ಮಧ್ಯದಲ್ಲಿ ಸುಶಾಂತ್, ಬಲಕ್ಕೆ ಅವನ ಮುದ್ದಿನ ಮಾನಸ ಸಹೋದರಿ ಪ್ರಣೀತಾ, ಎಡಗಡೆಗೆ ಜೀವದ ಗೆಳೆಯ ಪ್ರಭಾಸ್. ಸುಶಾಂತನ ಮಾತುಗಳನ್ನು ಕೇಳುವ ಕಾತುರದಲ್ಲಿದ್ದ ಪ್ರಣೀತಾ ಅವನ ಮುಖವನ್ನೇ ದಿಟ್ಟಿಸತೊಡಗಿದ್ದಳು.
"ಪ್ರಣೀ ಮತ್ತು ಪ್ರಭು, ನನಗೆ ಲವ್ ಧೋಕಾ ಆಗಿದೆ. ನನ್ನ ತನು-ಮನಗಳಲ್ಲಿ ತುಂಬಿದ್ದ ನನ್ನ ಕವಿತಾ ಕುತ್ತಿಗೆಯನ್ನೇ ಕೊಯ್ದುಬಿಟ್ಟಳು." ಸುಶಾಂತ್ ಮೆಲ್ಲಗೇ ಶುರುವಿಕ್ಕಿಕೊಂಡ. 
"ಹೌದೇ? ಅದ್ಹೇಗೆ ಸಾಧ್ಯ...? ನಿನ್ನನ್ನು ಹಾಡಿ ಹೊಗಳಿ ಆರಾಧಿಸುತ್ತಿದ್ದಳಲ್ಲ, ಅವಳು ಅದ್ಹೇಗೆ ತನ್ನ ಮನಸ್ಸನ್ನು ಬದಲಾಯಿಸಿದಳು?" ಪ್ರಭಾಸ್ ಸುಶಾಂತನ ಮುಖವನ್ನೇ ದಿಟ್ಟಿಸುತ್ತ ಪ್ರಶ್ನಿಸಿದ.
"ನನ್ನ ಪ್ರೇಮಕಥೆ ಇತಿಶ್ರೀ ಆಗಿದೆ. ನನ್ನ ಜೀವನದ ಹಡಗು ಮುಳುಗುತ್ತಿದೆ. ನೀರಲ್ಲಿ ತೋಯಿಸಿಕೊಂಡವನಿಗೆ ಚಳಿಯೇನು, ಮಳೆಯೇನು?" ಎಂದೆನ್ನುವಷ್ಟರಲ್ಲಿ ಸುಶಾಂತ್ ಭಾವೋದ್ವೇಗಕ್ಕೆ ಒಳಗಾಗಿದ್ದ. ಮಗ್ಗಲು ಕುಳಿತಿದ್ದ ಇಬ್ಬರೂ ಅವನ ಬೆನ್ನು ನೇವರಿಸುತ್ತ ಸಾಂತ್ವನಕ್ಕೆ ಮುಂದಾಗಿದ್ದರು. ತುಸು ಸಮಯ ಹೀಗೇ ಕಳೆದು ಹೋಯಿತು. ನಿಧಾನವಾಗಿ ಚೇತರಿಸಿಕೊಂಡ ಸುಶಾಂತನ ಮನಸ್ಸು ನೆನಪಿನ ಗಂಟನ್ನು ಸಡಿಲಿಸತೊಡಗಿತು.

ಸುಶಾಂತ್ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಮುಗಿಸಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಕೆಲಸದ ಜೊತೆಗೆ ಪಿಎಚ್ಡಿನೂ ಮುಂದುವರಿಸಿದ್ದ. ಪಿಎಚ್ಡಿಯಲ್ಲಿ ಎರಡು ವರ್ಷ ಮುಗಿಸಿದ್ದ. ಮದುವೆಗೆ ಅಪ್ಪ-ಅಮ್ಮನ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತ್ತು. ಡಾಕ್ಟರೇಟ್ ಮುಗಿಸಿಕೊಂಡ ನಂತರ ಮದುವೆಯ ಬಗ್ಗೆ ಯೋಚಿಸಿದರಾಯಿತೆಂದುಕೊಂಡವ ತಂದೆ-ತಾಯಿಗಳ ಮನಸ್ಸು ನೋಯಿಸಲು ಇಚ್ಛಿಸದೇ ಕನ್ಯೆ ನೋಡಲು ಹೂಂ ಎಂದಿದ್ದ. 
ಸುಶಾಂತ್ ಒಂದೇ ದಿನ ಮೂವರು ಹುಡುಗಿಯರನ್ನು ನೋಡಿದ ತಂದೆ-ತಾಯಿಗಳ ಜೊತೆಗೆ. ಮೊದಲೆರಡು ಹುಡುಗಿಯರು ಅವನಿಗೆ ಇಷ್ಟವೇ ಆಗಲಿಲ್ಲ. ಮೂರನೇ ಹುಡುಗಿ ಮೊದಲ ನೋಟದಲ್ಲೇ ಅವನ ಮನಸೆಳೆದು ಅವನ ಹೃನ್ಮನಗಳನ್ನು ತುಂಬಿದಳೆಂದರೆ ತಪ್ಪಾಗಲಿಕ್ಕಿಲ್ಲ.  
ಹುಡುಗಿಯ ಕೆಂಪನೆಯ ಮೈ ಬಣ್ಣ, ಶಿಲಾ ಬಾಲಿಕೆಯನ್ನೇ ನಾಚಿಸುವಂಥಹ ಚೆಲುವು, ನೋಡಿದವರ ಭಾವನೆಗಳನ್ನು ಕೆಣಕುವ ಚಿಗರೆ ಕಣ್ಣುಗಳು, ಬಿಲ್ಲಿನಾಕಾರದ ಹುಬ್ಬುಗಳು, ಹೋಮ್ಲಿ ಲುಕ್ ಕೊಡುವ ಮೈಮಾಟ, ಮೈಮಾಟದ ನಡುವೆಯೇ ಇಣುಕುವ ಗ್ಲಾಮರ್ ಲುಕ್, ತುಟಿಯಂಚಿನಲ್ಲಿ ಲಾಸ್ಯವಾಡುವ ಮುಗುಳು ನಗು ಎಲ್ಲವೂ ಇಷ್ಟವಾಗಿದ್ದವು ಸುಶಾಂತನಿಗೆ. ಆ ಸೌಂದರ್ಯ ಖಣಿಯೇ ಕವಿತಾ.
ಆದರೆ ಎರಡು ವಿಚಾರಗಳಿಂದ ಅವನ ತಂದೆ-ತಾಯಿಯವರು ಆ ಸಂಬಂಧವನ್ನು ಬೆಳೆಸಲು ಆಸಕ್ತಿ ತೋರಿಸಲಿಲ್ಲ. ಮೊದಲನೆಯದಾಗಿ ಹುಡುಗಿ ಬಿಎಸ್ಸಿ ಮೊದಲನೇ ವರ್ಷದವರೆಗೆ ಮಾತ್ರ ಅಭ್ಯಾಸ ಮಾಡಿ ನಂತರ ಕಾಲೇಜಿಗೆ ಹೋಗದೇ ಎರಡು ವರ್ಷಗಳಾಗಿದ್ದವಂತೆ. ಮಗನ ವಿದ್ಯಾಭ್ಯಾಸಕ್ಕೆ ಹೋಲಿಸಿದರೆ ಅವಳಿಗೆ ವಿದ್ಯೆ ಕಡಿಮೆ ಎಂದರು. 
ಎರಡನೆಯದಾಗಿ ಕವಿತಾಳ ತಂದೆ ಅಷ್ಟಾಗಿ ಶ್ರೀಮಂತನಾಗಿರಲಿಲ್ಲ. ತಮ್ಮ ಮನೆತನದ ಗೌರವ, ಘನತೆಗೆ ಅವರದು ತಕ್ಕ ಮನೆತನವಲ್ಲವೆಂದು ಆ ಸಂಬಂಧ ಬೇಡವೆಂದು ತಮ್ಮೊಳಗೇ ಮಾತಾಡಿಕೊಂಡರು. ಆ ರೀತಿಯ ಸಂದೇಶ ಹುಡುಗಿಯ ಮನೆಗೆ ರವಾನೆಯೂ ಆಗಿತ್ತು.
ಸುಶಾಂತ್ ಮಾತ್ರ ದಿಟ್ಟ ನಿಲುವನ್ನು ತಳೆದಿದ್ದ, ತಾನು ಮದುವೆಯಾದರೆ ಅದೇ ಹುಡುಗಿಯನ್ನು ಎಂದು. "ಅವಳ ಮನೆತನದ ಶ್ರೀಮಂತಿಕೆಯನ್ನು ತೆಗೆದುಕೊಂಡು ನಾವೇನು ಮಾಡಬೇಕಿದೆ? ಅದೇನೋ ಅನಾನುಕೂಲತೆಯಿಂದ ಅವಳ ವಿದ್ಯಾಭ್ಯಾಸ ಕುಂಠಿತಗೊಂಡಿರಬೇಕು. ಆಸಕ್ತಿ ಇದ್ದರೆ ಅವಳು ಮುಂದೇನೂ ಕಲಿಯಬಹುದು" ಎಂದಿದ್ದ ದೃಢವಾಗಿ. ಅವನ ನಿರ್ಧಾರ ಅಚಲವಾಗಿತ್ತು. ತಂದೆ-ತಾಯಿ, ಮಗನ ನಡುವಿನ ಹಗ್ಗ-ಜಗ್ಗಾಟದ ಮಾತುಗಳ ನಂತರ ಒಲ್ಲದ ಮನಸ್ಸಿನಿಂದ ಹಡೆದವರು ಮಗನ ಮನದಭೀಷ್ಟೆಗೆ ಅಸ್ತು ಎಂದಿದ್ದರು. ಈ ಶುಭ ಸಮಾಚಾರ ಹುಡುಗಿಯ ಮನೆಗೂ ತಲುಪಿದಾಗ ಅವರಿಗೆ ಆಕಾಶಕ್ಕೆ ಹಾರಿದ ಅನುಭವ. ಖುಷಿಯ ಪರಾಕಾಷ್ಠೆ ಮೇಳೈಸಿತ್ತು ಕುಟುಂಬದ ಸದಸ್ಯರಲ್ಲಿ. ಮೊದಲ ಮಳೆಗೆ ಗರಿಬಿಚ್ಚಿ ನರ್ತಿಸುವ ನವಿಲಿನಂತಾಗಿದ್ದಳು ಕವಿತಾ. ಆಲೋಚಿಸುವ ಮೊದಲೇ ಅವಳ ಜೀವನ ತಾನಾಗಿಯೇ ಹುತ್ತ ಕಟ್ಟಿಕೊಂಡುಬಿಟ್ಟಿತ್ತು. ಸುದ್ದಿ ತಲುಪಿ, ಅವಳೆದೆಯ ಬಡಿತ ಹೆಚ್ಚಾಗಿ ಖುಷಿ ಅನುಭವಿಸಿದ ಮಾರನೇ ದಿನವೇ ಸುಶಾಂತನ ಮೊಬೈಲ್ ನಂಬರನ್ನು ಸಂಗ್ರಹಿಸಿ ಫೋನಾಯಿಸಿದ್ದಳು.
"ಸರ್, ನಿಮಗೆ ಹೇಗೆ ಕೃತಜ್ಞತೆ ತಿಳಿಸಬೇಕೋ ಎಂದು ತಿಳಿಯುತ್ತಿಲ್ಲ. ನಿಮ್ಮಂಥಹ ಆದರ್ಶವಾದಿ ಯುವಕ ನನ್ನ ಬಾಳ ಸಂಗಾತಿಯಾಗುತ್ತಿರುವುದಕ್ಕೆ ನನ್ನಂಥಹ ಭಾಗ್ಯಶಾಲಿ ಯಾರೂ ಇಲ್ಲವೆಂಬುದು ನನ್ನ ಹೃದಯಾಂತರಾಳದ ಮಾತು. ನಿಮಗೆ ಕೋಟಿ ಕೋಟಿ ಧನ್ಯವಾದಗಳು ಮತ್ತು ನಮಸ್ಕಾರಗಳು" ಎಂದು ಹರ್ಷತುಂದಿಲಳಾಗಿ ಕವಿತಾ ಉಸುರಿದ್ದಳು ತನ್ನ ಜೇನದನಿಯಲ್ಲಿ. ಅಂದಿನಿಂದ ಸುಶಾಂತ್ ಮತ್ತು ಕವಿತಾ ಇಬ್ಬರಲ್ಲಿ ಎಗ್ಗಿಲ್ಲದೇ ಮಾತುಗಳು ಶುರುವಾಗದೇ ಇರುತ್ತವೆಯೇ?
ಮುಂದೆ ಕೆಲವೇ ದಿನಗಳಲ್ಲಿ ಎರಡೂ ಕುಟುಂಬಗಳಲ್ಲಿ ಮಾತುಕತೆಗಳಾಗಿ ಮದುವೆಯ ದಿನಾಂಕವೂ ನಿಶ್ಚಯವಾಗಿಬಿಟ್ಟಿತು. ಸುಶಾಂತ್ ಮತ್ತು ಕವಿತಾ ಹಸೆಮಣೆ ಏರುವ ಕನಸಿನಲ್ಲಿದ್ದಾಗ ಒಂದು ಅವಘಡ ಘಟಿಸಬೇಕೇ ಕವಿತಾಳ ಕುಟುಂಬದಲ್ಲಿ! ಕವಿತಾಳ ಅಣ್ಣ ತನ್ನ ಹೆಂಡತಿಯ ಶೀಲ ಶಂಕಿಸಿ ಅವಳನ್ನು ಕೊಲೆಮಾಡಿ ಜೈಲು ಪಾಲಾಗಿದ್ದ. ಮಾನ, ಮರ್ಯಾದೆ ಒಂದೂ ಇಲ್ಲದ ಆ ಮನೆಯವರ ಜೊತೆಗೆ ಸಂಬಂಧ ಬೇಡವೆಂದರು ಸುಶಾಂತನ ತಂದೆ-ತಾಯಿಗಳು. ಸುಶಾಂತನಿಗೆ ದಿಕ್ಕೇ ತೋಚದಂತಾಗಿತ್ತು. ಅವನು ಒಂದು ರೀತಿ ಮೌನಿಯಾಗಿಬಿಟ್ಟ. ತುಸು ದಿನಗಳವರೆಗೆ ಸುಶಾಂತ್ ಮತ್ತು ಕವಿತಾರ ಫೋನ್‍ಗಳು ರಿಂಗಣಿಸಲೇ ಇಲ್ಲ. 

ಆ ದಿನ ರಾತ್ರಿ ಸುಶಾಂತ್ ಮಲಗುವ ಹುನ್ನಾರದಲ್ಲಿದ್ದ. ಕವಿತಾಳಿಂದ ಫೊನ್ ಬಂದಿತ್ತು. "ಸರ್, ನಮ್ಮಣ್ಣನ ತಪ್ಪಿಗೆ ನನಗೂ ಶಿಕ್ಷೆಯೇ? ನಿಶ್ಚಯವಾಗಿರುವ ಮದುವೆಯನ್ನು ಮುರಿದುಕೊಂಡರೆ ಹುಡುಗಿಯನ್ನು ಮದುವೆಯಾಗಲು ಬೇರೆಯವರೂ ಅನುಮಾನ ಪಡುವುದಿಲ್ಲವೇ? ಇದೇ ಪರಿಸ್ಥಿತಿ ನಿಮ್ಮ ತಂಗಿಗೂ ಆಗಿದ್ದರೆ ಹೇಗೆಂದು ಆಲೋಚಿಸಿರುವಿರಾ? ನನ್ನ ಖಾಲಿ ಹೃದಯಕ್ಕೆ ಭಾವನೆಗಳ ಬಣ್ಣತುಂಬಿ ಪ್ರೀತಿಯನ್ನು ಬಿತ್ತಲು ಅವಕಾಶ ಮಾಡಿಕೊಟ್ಟ ದೇವರು ನೀವು. ದಯವಿಟ್ಟು ಈ ದಿಶೆಯಲ್ಲಿ ವಿಚಾರಮಾಡಿ ನಿರ್ಧಾರ ತೆಗೆದುಕೊಳ್ಳಿರಿ." ಕವಿತಾ ವಿನಮ್ರವಾಗಿ ಬೇಡಿಕೊಂಡಿದ್ದಳು. 
ಕವಿತಾಳ ಮಾತು ಸುಶಾಂತನಿಗೆ ವಿಚಾರದ ಒರೆಗೆ ಹಚ್ಚಿತ್ತು. ಅಂದು ಅವ ಇಡೀ ರಾತ್ರಿ ನಿದ್ದೆ ಮಾಡಲಿಲ್ಲ. ಅವಳ ಮಾತುಗಳು ಮತ್ತೆ ಮತ್ತೆ ಅವನ ಮನಸಿನಲ್ಲಿ ರಿಂಗಣಿಸತೊಡಗಿದ್ದವು. "ಅವಳ ಅಣ್ಣ ತಪ್ಪು ಮಾಡಿದ, ಶಿಕ್ಷೆಗೆ ಒಳಗಾದ. ಇವಳಿಗೂ ಶಿಕ್ಷೆ ಏಕೆ? ಒಬ್ಬರ ತಪ್ಪಿಗೆ ಎಲ್ಲರಿಗೂ ಶಿಕ್ಷೆಯೇ? ಸರಿಯಲ್ಲ. ಕವಿತಾಳ ವಿಚಾರಧಾರೆ ಸರಿ ಇದೆ" ಎಂದು ತನ್ನೊಳಗೇ ವಿಚಾರ ಮಂಥನ ನಡೆಸಿದ ಸುಶಾಂತ್ ಬೆಳಗಾಗುವುದರೊಳಗೆ ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದ. ಹೊಸ ಹೊಸ ಆಶಾ ಭಾವನೆಗಳೊಂದಿಗೆ ಉದಯಿಸಿದ ರವಿಯಂತೆ ಸುಶಾಂತ್ ಸಹ ಹೊಸ ಚೈತನ್ಯದೊಂದಿಗೆ ಹಾಸಿಗೆಯಿಂದ ಎದ್ದಿದ್ದ. ಅಪ್ಪ-ಅಮ್ಮ, ಹಿರಿಯರೊಂದಿಗೆ ಮಾತಾಡಿದ್ದ. ತನ್ನ ವಿಚಾರಗಳನ್ನು ಮಂಡಿಸಿದ್ದ. ವಾದ ಮಾಡಿದ, ಹಟ ಹಿಡಿದ. ಕೊನೆಗೂ ತನ್ನ ಇಷ್ಟದಂತೆ ಎಲ್ಲರನ್ನೂ ಒಪ್ಪಿಸಿದ್ದ. ಮತ್ತೆ ಸುಶಾಂತ್ ಮತ್ತು ಕವಿತಾರ ಮದುವೆ ಮಾತುಗಳು ಗರಿಗೆದರಿದ್ದವು. ಎರಡು ವರ್ಷಗಳ ತರುವಾಯ ಮದುವೆಯನ್ನು ನೆರವೇರಿಸಲು ಹಿರಿಯರು ತೀರ್ಮಾನಿಸಿದ್ದರು. ಯುದ್ಧದಲ್ಲಿ ಗೆದ್ದಂತೆ ಸಂಭ್ರಮಿಸಿದ್ದ ಸುಶಾಂತ್. ಕವಿತಾಳ ಆನಂದಕ್ಕೆ ಪಾರವೇ ಇರಲಿಲ್ಲ. ಫೋನಲ್ಲೇ ಮುತ್ತಿನ ಮಳೆಗರೆಯುತ್ತ ಧನ್ಯವಾದ ಹೇಳಿದ್ದಳು. ಒಲಿದ ಜೀವಗಳೆರಡು ಮತ್ತೆ ಒಂದಾಗುವ ಯೋಗ ಕೂಡಿ ಬಂದಿತ್ತು. 
ಅದೊಂದು ದಿನ ರಾತ್ರಿ ಮಾಮೂಲಿನಂತೆ ಕವಿತಾ ಮಾತಿಗೆ ಶುರುವಿಟ್ಟುಕೊಳ್ಳುತ್ತಿದ್ದಂತೆ, "ಸರ್, ಒಂದು ಮಾತು..." ಅಂತ ಅಂದಳು.
"ಅದೇನು ಸರ್, ಸರ್ ಅಂತ ಬಡ್ಕೊಳ್ತೀದಿ...?"
"ಮತ್ತೇನಂತ ಕರೀಲಿ ಸರ್."
"ಮತ್ತದೇ ಸರ್. ಸಿಂಪಲ್ಲಾಗಿ ಸು, ಇಲ್ಲವೇ ಶಾಂತ್, ಇಲ್ಲವೇ ಸುಶಾಂತ್ ಅಂತ ಕರೆದ್ರೆ ಸಾಕಾಗುವುದಿಲ್ಲವೇ?"
"ಅಯ್ಯೋ ಸರ್, ನೀವು ಪಿಎಚ್ಡಿ, ನಾನು ಬರೀ ಬಿಎಸ್ಸಿ ಒನ್ ಅಷ್ಟೇ." 
"ಕವಿ, ನಾನೂ, ನೀನು ಬಾಳ ಸಂಗಾತಿಯಾಗೋರು. ನಾನೇನು ನಿನ್ನ ಕಾಲೇಜ್ ಉಪನ್ಯಾಸಕನಲ್ಲ. ತಿಳಿಯಿತೇ?"
"ಹಾಗಂತೀರಾ ಸರ್..." ಎಂದೆನ್ನುತ್ತಾ ಕವಿತಾ ನಾಲಿಗೆ ಕಚ್ಚಿಕೊಂಡಿದ್ದು ಸುಶಾಂತನಿಗೇನು ಕಾಣುವಂತಿರಲಿಲ್ಲ. 
"ನಾಯಿ ಬಾಲ ಡೊಂಕು ಅಂತಾರಲ್ಲ, ಹಾಗೆ ನಿಂದು. ಇರಲಿ, ಅದೇನು ಅಂತ ವಿಷಯ ಹೇಳು ಪುಟ್ಟಾ."       
"ಸು, ಅದು, ಅದು..." 
"ಗುಡ್ ಗರ್ಲ, ಅದೇ ಅದು ಏನು?"
"ನಾನು ಓದುವುದನ್ನು ಮುಂದುವರಿಸಬೇಕೆಂದಿದ್ದೇನೆ..." ಕವಿತಾ ಅಳುಕುತ್ತಾ ತನ್ನ ಮನದಿಂಗಿತವನ್ನು ಬಯಲಿಗಿಟ್ಟಿದ್ದಳು.
"ಹೌದಾ? ಹಾಗಾದರೆ ಇದೊಂದು ಶುಭ ಸಮಾಚಾರ. ಓಕೇ, ಓದು. ಬೇಡವೆನ್ನುವವರಾರು? ಇದರಿಂದ ನನಗೆ ತುಂಬಾ ಖುಷಿ."
"ಆದರೆ ಒಂದು ವಿಷಯ..." ರಾಗ ಎಳೆದಳು ಕವಿತಾ.
"ಮತ್ತೇನು ತೊಡಕು...?"
"ಅದೇ ನಾನು ನಮ್ಮ ಜಿಲ್ಲಾ ಕೇಂದ್ರದ ಒಳ್ಳೇ ಕಾಲೇಜೊಂದಕ್ಕೆ ಸೇರಿಕೊಳ್ಳಬೇಕೆಂದಿದ್ದೇನೆ. ಅದಕ್ಕೇ ಆರ್ಥಿಕ ಸಹಾಯ..." ಮತ್ತೆ ಕವಿತಾಳ ರಾಗ.
"ನಿಮ್ಮ ಊರಿಗೆ ಸಮೀಪದ ತಾಲೂಕು ಕೇಂದ್ರದ ಕಾಲೇಜು ಬೇಡವೇ?"
"ಅಲ್ಲಿ ಕಾಲೇಜುಗಳು ಅಷ್ಟಾಗಿ ಸರಿ ಇಲ್ಲ."
"ಓಕೇ, ನಿನ್ನ ಮಾತಿನ ಅರ್ಥ ತಿಳಿಯಿತು. ಅಷ್ಟೇ ಮಾಡು. ನಾನು ನಿನ್ನ ವಿದ್ಯಾಭ್ಯಾಸಕ್ಕೆ ಹಣದ ವ್ಯವಸ್ಥೆ ಮಾಡುವೆ. ಸರೀನಾ?" 
"ನಿಮಗೆ ಅನಂತಾನಂತ ಧನ್ಯವಾದ ಹೇಳಲು ಮೈ ಉಬ್ಬುತ್ತಿದೆ."
"ನೀನು ಜೊತೆಗಿದ್ದಾಗ ಬಡ್ಡೀ ಸಮೇತ ಧನ್ಯವಾದ ಪಡೆಯುತ್ತೇನೆ. ಚಿಂತೆ ಬೇಡ."
"ಸರ್ ಮತ್ತೆ. ಸಾರಿ, ಸಾರಿ. ಸು ಮತ್ತೆ ನನಗೆ...?"
"ಅದೇನು ಅಂತ ಬಾಯಿಬಿಟ್ಟು ಹೇಳೇ ಹುಡುಗಿ? ಇಷ್ಟ್ಯಾಕೆ ಮುಜುಗರ ಮಾಡಿಕೊಳ್ಳುತ್ತಿರುವಿ?"
"ಈಗಿನ ಟ್ರೆಂಡ್ ಪ್ರಕಾರ ಕಾಲೇಜಿಗೆ ಹೋಗಬೇಕಾದರೆ ಲೇಟೆಸ್ಟ್ ಟ್ರೆಂಡ್‍ನ ಮಾಡ್ ಮಾಡ್ ಡ್ರೆಸ್‍ಗಳು, ಪಾಕೆಟ್ ಮನಿ, ಒಂದೊಳ್ಳೆಯ ಎಂಡ್ರೊಯ್ಡ್ ಮೊಬೈಲ್ ಸೆಟ್ ಬೇಕಲ್ಲವೇ? ಅದೂ ಅಲ್ಲದೇ ಕೊರಳಲ್ಲಿ ಒಂದೆಳೆ ಸರವೂ ಇದ್ದರೆ ಈ ನಿಮ್ಮ ಹುಡುಗಿಯ ಲುಕ್ ಚೆನ್ನಾಗಿರುತ್ತೆ? ಕೋಳಿಗೂಡಿನಂತಿರುವ ಕಾಲೇಜಿನ ಹಾಳು ಹಾಸ್ಟೆಲ್‍ಗಿಂತ ಪಿಜಿಯಲ್ಲಿ ಇರುವುದು ಒಳ್ಳೆಯದಲ್ಲವೇ? ಅದಕ್ಕೆಲ್ಲ ದುಡ್ಡನ್ನು ಜೋಡಿಸುವ ಶಕ್ಯತೆ ನನ್ನಪ್ಪನಿಗೆ ಇಲ್ಲ. ಹೇಗೆ ಮಾಡಲಿ...?"
"ತಥಾಸ್ತು ಚಿನ್ನಾ. ಅದರ ಬಗ್ಗೆ ನೀನು ಚಿಂತಿಸಬೇಡ. ಮೈ ಹೂಂ ನಾ?" ಎಂದಿದ್ದ ಸುಶಾಂತ್. ಕವಿತಾಳದು ಕನಸು ಕಾಣುವ ವಯಸ್ಸು. ಅವಳ ಬೇಡಿಕೆಗಳು ಈಗಿನ ಜಮಾನದಲ್ಲಿ ಮಿನಿಮಮ್ ರಿಕ್ವೈರಮೆಂಟ್ಸ್ ಎಂಬ ಅರಿವು ಅವನಿಗೆ ಇತ್ತಲ್ಲವೇ? ಸುಶಾಂತ್ ಕವಿತಾಳಿಗೆ ದೇವಲೋಕದಿಂದ ಧರೆಗಿಳಿದ ದೇವರಂತೆ ಕಂಡಿದ್ದ. ಅವಳ ಸಂತೋಷಕ್ಕೆಲ್ಲಿ ಕೊನೆ! ಖುಷಿಯಲ್ಲಿ ಅಂದು ಕುಣಿದು ಕುಪ್ಪಳಿಸಿ ನಲಿದಿದ್ದಳು.
ಸುಶಾಂತನ ಕೃಪಾಪೋಷಿತ ಮಂಡಳಿಯಲ್ಲಿ ಕವಿತಾಳ ವಿದ್ಯಾ ಅಭಿಯಾನ ಟೇಕ್ ಆಫ್ ಆಗಿತ್ತು. ಅವಳ ಮನದಿಚ್ಛೆಗಳೆಲ್ಲವನ್ನೂ ಈಡೇರಿಸಿದ್ದ ಸುಶಾಂತ್. ಅವಳಿಗಾಗಿ ಒಂದೊಳ್ಳೆಯ ಪಿಜಿಯನ್ನೂ ಗೊತ್ತು ಮಾಡಿದ. ಮೊದಲ ಸಲ ಕಾಲೇಜಿಗೆ ಕವಿತಾಳನ್ನು ಸೇರಿಸುವಾಗ ಜೊತೆಗೆ ಹೋಗಿ ಅವಳಿಗೆ ಬೇಕಾದ ಲೇಟೆಸ್ಟ್ ಟ್ರೆಂಡಿನ ಲೆಗ್ಗಿನ್ಸ್, ಚೂಡಿ, ಜೀನ್ಸ್ ಇತರೆ ಡ್ರೆಸಸ್ ಕೊಡಿಸಿದ್ದ. ಒಳ್ಳೇ ಮೊಬೈಲ್ ಸೆಟ್‍ನ್ನೂ ಕೊಡಿಸಿದ. ಒಂದೆಳೆ ಚಿನ್ನದ ಸರವನ್ನು ಅವಳ ಮಾಟವಾದ ಕೊರಳಿಗೆ ತೊಡಿಸಿದ. ಜೊತೆಗೆ ಅವಳು ಕೇಳಿದಷ್ಟು ಪಾಕೆಟ್ ಮನಿಯನ್ನೂ ಕೊಟ್ಟು ಬಂದಿದ್ದ. ಸಾರ್ಥಕತೆಯ ಭಾವ ಸುಶಾಂತನ ನೋಟದಲ್ಲಿದ್ದರೆ ಧನ್ಯತೆಯ ಭಾವ ಕವಿತಾಳ ಕಣ್ಣುಗಳ ಹೊಳಪಿನಲ್ಲಿತ್ತು. ಕವಿತಾಳ ಕಾಲೇಜಿನ ವಿದ್ಯಾಭ್ಯಾಸ ನಿರಾತಂಕವಾಗಿ ಮುಂದುವರಿಯಿತು. 
ವರ್ಷದಲ್ಲಿ ಒಂದೆರಡು ಸಾರೆ ಕಾಲೇಜಿಗೆ ಹೋಗಿ ಯೋಗ-ಕ್ಷೇಮ ವಿಚಾರಿಸುವುದರ ಜೊತೆಗೆ ಆಧುನಿಕ ವಿನ್ಯಾಸದ ವಸ್ತ್ರಗಳಲ್ಲಿ ಒಡೆದು ಕಾಣುತ್ತಿದ್ದ ಕವಿತಾಳ ಚೆಲುವನ್ನು ಕಣ್ಮನಗಳಲ್ಲಿ ತುಂಬಿಕೊಂಡು ಬರುತ್ತಿದ್ದ ಸುಶಾಂತ್. ಅವಳ ಮುದ್ದಾದ ಪುಟ್ಟ ಬಾಯಿಯಿಂದ ಬರುತ್ತಿದ್ದ ಜೇನಂಥಹ ಮಾತುಗಳಿಗೆ ಅವನ ಮನಸ್ಸು ಗರಿಗೆದರುತ್ತಿತ್ತು. ಫೋನಲ್ಲಿ ಮಾತುಗಳಂತೂ ಮಳೆಗಾಲದ ನದಿಗಳಂತೆ ಭೋರ್ಗರೆಯುತ್ತಿದ್ದವು. 
"ಸು, ಮುಳುಗುತ್ತಿದ್ದ ನನ್ನ ಬಾಳದೋಣಿಯನ್ನು ಮೇಲೆತ್ತಿ ಮುನ್ನಡೆಸುತ್ತಿರುವ ನೀನು ನನ್ನ ಬಾಳ ಬಂಗಾರ, ಹಣೆಯ ಸಿಂಗಾರ. ನಮ್ಮಿಬ್ಬರ ಪ್ರೀತಿ ಇದಕ್ಕೆ ಕಾರಣವಲ್ಲವೇ? ಇಲ್ಲದಿದ್ದರೆ ನೀನೆಲ್ಲೋ, ನಾನೆಲ್ಲೋ ಆಗುತ್ತಿದ್ದೆವು. ಪ್ರೀತಿ ಎಂಬ ಎರಡಕ್ಷರದಲ್ಲಿ ಒಂದು ನಾನು, ಇನ್ನೊಂದು ನೀನು. ನಮ್ಮಿಬ್ಬರ ಮನದ ತುಡಿತ ಬೇರೆ ಆಗಿದ್ದರೆ ಪ್ರೀತಿಗೆ ಅರ್ಥವಿರುತ್ತಿತ್ತೇ? ನೀನೇ ನನ್ನ ಬಾಳಿನ ಆರಾಧ್ಯ ದೈವ" ಎಂದು ಕವಿತಾ ಸುಶಾಂತನನ್ನು ಹಾಡಿಹೊಗಳುತ್ತಿದ್ದಳು.
ಕವಿತಾಳ ರೂಪರಾಶಿಗೆ ಮನಸೋತಿದ್ದ ಸುಶಾಂತನಿಗೆ ಅವಳ ಮಾತುಗಳೆಲ್ಲವೂ ಮಧುರವೆನಿಸದೇ ಇರುತ್ತಿದ್ದವೇ? 
ಹೀಗೇ ಎರಡು ಎರಡು ವರ್ಷ ಸರಿದು ಹೋಗಿದ್ದು ಗೊತ್ತೇ ಆಗಲಿಲ್ಲ. ಕವಿತಾಳ ಬಿಎಸ್ಸಿ ಮುಗಿದಿತ್ತು. ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿ ಸುಶಾಂತನ ಮನಸ್ಸಿಗೆ ಖುಷಿ ಹಂಚಿದ್ದಳು. ಅವನು ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ, "ಹೇಗೂ ಅಣ್ಣ ಮುಂದಿನ ವರ್ಷ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾಗಿ ಬರುತ್ತಾನೆ. ಅವನೂ ನನ್ನ ಮದುವೆಯಲ್ಲಿ ಪಾಲ್ಗೊಂಡರೆ ಚೆನ್ನ ಎಂದು ನನ್ನ ಮನಸ್ಸು ಆಶಿಸುತ್ತಿದೆ. ಎಷ್ಟಾದರೂ ಅವನು ನನಗೆ ಒಡಹುಟ್ಟಿದವನಲ್ಲವೇ? ಆದರೂ ನಿಮ್ಮ ಅಂತಿಮ ನಿರ್ಧಾರಕ್ಕೆ ನಾನು ಬದ್ಧ" ಎಂದು ತನ್ನ ಮನದಿಂಗಿತವನ್ನು ಹೊರಗೆಡವಿದಾಗ ಸುಶಾಂತನಿಗೆ ಅವಳ ಮಾತು ಸಮಂಜಸವೆನಿಸಿತ್ತು. ನಿನ್ನಿಷ್ಟದಂತೆಯೇ ಆಗಲಿ ಎಂದಿದ್ದ. 
"ಖಾಲಿ ಕುಳಿತುಕೊಳ್ಳುವುದೇನು, ನಾನು ಬಿಎಡ್ ಮಾಡಿಕೊಂಡು ಬಿಡುತ್ತೇನೆ" ಎಂದು ಕವಿತಾ ಹೊಸ ಪೀಠಿಕೆ ಹಾಕಿದಾಗ ಅದೂ ಸರಿಯೆನಿಸಿತ್ತು ಸುಶಾಂತನಿಗೆ. ಸುಶಾಂತ್ ಅವಳನ್ನು ಬಿಎಡ್‍ಗೂ ಸೇರಿಸಿದ. ಮತ್ತೆ ಖರ್ಚಿನ ಬಾಬತ್ತು ಶುರುವಾಗಿತ್ತು.  
ಆ ಸಾರೆ ಸುಶಾಂತ್ ಅವಳನ್ನು ಭೆಟ್ಟಿಯಾಗಲು ಹೋಗಿದ್ದಾಗ, "ನಿನ್ನೊಡನೆ ಮಾತಾಡಲು, ಗುದ್ದಾಡಲು, ಮುದ್ದಾಡಲು ಬಯಸುತ್ತಿದೆ ಮನಸು. ತೋರದಿರು ಮುನಿಸು. ಮರದಂತೆ ನೀನು, ಪಾದದಡಿಯ ಬಳ್ಳಿ ನಾನು. ನಿನ್ನ ನೋಡುತ್ತಲೇ ಹಬ್ಬುವೆನು, ನಿನ್ನ ತೋಳ ತೆಕ್ಕೆಯಲಿ ಉಬ್ಬುವೆನು. ನನ್ನ ಉಸಿರಿಂದು ನಿನ್ನ ಕೈಯಲಿ. ನೀನಿಲ್ಲದಿದ್ದರೆ ನಾನೆಲ್ಲಿ? ಸು, ನೀ ನನಗೆ ತುಂಬಾ ಬೇಕೆನಿಸುತ್ತಿದೆ. ನಿನ್ನ ಸಾಂಗತ್ಯಕ್ಕೆ ನನ್ನ ಮೈ, ಮನಗಳು ಹುಚ್ಚೆದ್ದು ಕುಣಿಯುತ್ತಿವೆ" ಎಂದು ಸುಶಾಂತನ ಕೊರಳನ್ನು ತಬ್ಬಿ ಪಿಸುಗುಟ್ಟಿದ್ದಳು. 
"ಆಯಿತು ಚಿನ್ನಾ, ಇನ್ನೇನು ತುಸು ದಿನಗಳು ಅಷ್ಟೇ. ಅಲ್ಲಿಯವರೆಗೆ ಸಂಯಮವಿರಲಿ. ಮುಂದಿನ ದಿನಗಳೆಲ್ಲವೂ ನಮ್ಮವೇ. ಅಲ್ಲಿಯವರೆಗೆ ಭಾವೀ ಬದುಕಿನ ಬಗ್ಗೆ ಕನಸುಗಳನ್ನು ಕಟ್ಟೋಣ." ತನ್ನೆದೆಯೊಳಗೆ ಸೇರಿಕೊಂಡಿದ್ದ ಕವಿತಾಳ ಮುಂಗುರು ನೇವರಿಸುತ್ತ ಸಮಾಧಾನ ಮಾಡಿದ್ದ ಸುಶಾಂತ್. ಅವನು ಪ್ರೀತಿಯ ಸ್ಪರ್ಶದ ಗುಂಗಿನಲ್ಲಿದ್ದಾಗ ಅವಳು ತನಗೆ ತಕ್ಷಣ ಇಪ್ಪತ್ತು ಸಾವಿರ ರೂಪಾಯಿಗಳು ಬೇಕೆಂದು ಬೇಡಿಕೆ ಇಟ್ಟಿದ್ದಳು. "ಅಷ್ಟ್ಯಾಕೆ?" ಎಂದು ಕೇಳಿದಾಗ, "ನನಗೆ ಬೇಕು ಅಷ್ಟೇ" ಎಂದಿದ್ದಳು. ಅವನು ಸುಮ್ಮನೇ ಅಸ್ತು ಎಂದಿದ್ದ.  

"ಹೇಗಿದೆ ನಮ್ಮ ಪ್ರೇಮ ಪುರಾಣ?" ಸುಶಾಂತ್ ಪ್ರಣೀತಾ ಮತ್ತು ಪ್ರಭಾಸ್‍ಗೆ ಹೇಳಿದಾಗ, "ರೊಮ್ಯಾಂಟಿಕ್, ಬೊಂಬಾಟ್" ಎಂದು ಪ್ರಣೀತಾ ಉದ್ಘರಿಸಿದರೆ, "ನವಿರು ಪ್ರೇಮ ಕಾವ್ಯದಂತಿದೆ" ಎಂದು ಹೇಳುತ್ತಾ ಪ್ರಭಾಸ್ ಕಣ್ಣುಬ್ಬು ಹಾರಿಸಿದ್ದ.
"ಇಷ್ಟೊಂದು ಸೊಗಸಾಗಿರುವಾಗ, ಅದೇನೋ ಲವ್ ಧೋಕಾ ಆಯಿತು ಎಂದು ಹೇಳಿದೆಯಲ್ಲ? ನನಗೊಂದೂ ಅರ್ಥವಾಗುತ್ತಿಲ್ಲ...?" ಪ್ರಭಾಸ್ ರಾಗವೆಳೆದ.
"ಕೇಳು ಜನಮೇಜಯ, ಮುಂದಿನ ರೋಮಾಂಚನಕಾರಿ ಬೀಭತ್ಸ ಕಥೆ ಕೇಳು" ಎಂದೆನ್ನುತ್ತಾ ಸುಶಾಂತ್ ಶುರುಮಾಡಿದ.
"ಕವಿತಾಳ ಬಿಎಡ್ ಮುಗಿಯುವ ಹಂತದಲ್ಲಿದ್ದಾಗ ಅವಳ ಅಣ್ಣ ಬಿಡುಗಡೆಯಾಗುವ ದಿನಾಂಕದ ಲೆಕ್ಕಾಚಾರದ ಮೇಲೆ ಮದುವೆಯ ದಿನಾಂಕವನ್ನೂ ಗೊತ್ತು ಮಾಡಿದೆವು. ನಿಗದಿಯಾದಂತೆ ಅವಳ ಅಣ್ಣನೂ ಬಿಡುಗಡೆಯಾಗಿ ಬಂದಿದ್ದ. ಅವಳ ಬಿಎಡ್ ಸಹ ಮುಗಿದಿತ್ತು. ಅಷ್ಟರಲ್ಲಿ ಅವಳು ಓದುತ್ತಿದ್ದ ಜಿಲ್ಲಾ ಕೇಂದ್ರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿ ಕೆಲಸವೂ ಲಭಿಸಿತ್ತು. ನಿನಗೇಕೆ ಈ ಕೆಲಸ, ಮದುವೆಯ ನಂತರ ಧಾರವಾಡದಲ್ಲೇ ಕೆಲಸ ಹುಡುಕಿಕೊಂಡರಾಯಿತು ಎಂದಾಗ, "ಸು, ಅಲ್ಲಿಯವರೆಗೆ ಖಾಲಿ ಕುಳಿತುಕೊಳ್ಳುವುದೇಕೆ? ಮದುವೆಯಾಗುವವರೆಗೆ ಇಲ್ಲಿ ಕೆಲಸ ನಿರ್ವಹಿಸುತ್ತೇನೆ. ನಂತರ ನಿನ್ನೊಂದಿಗೆ ಅಲ್ಲೇ ಕೆಲಸ ನೋಡಿಕೊಳ್ಳುವೆ" ಎಂದಾಗ ನಾನು ಹೂಂ ಅಂದಿದ್ದೆ. ಮದುವೆಗಾಗಿ ಕಲ್ಯಾಣ ಮಂಟಪ, ಅಡಿಗೆಯವರನ್ನೂ ಬುಕ್ ಮಾಡಿದೆವು. ಬಟ್ಟೆ, ಒಡವೆಗಳ ಖರೀದಿಗಾಗಿ ಓಡಾಡತೊಡಗಿದೆವು. ಇನ್ನೇನು ಮದುವೆಗೆ ಒಂದು ತಿಂಗಳಷ್ಟೇ ಬಾಕಿ ಉಳಿದಿತ್ತು. ಆಗ ನನ್ನ ಕವಿ ತನಗೆ ಅರ್ಜೆಂಟಾಗಿ ಐವತ್ತು ಸಾವಿರ ರೂಪಾಯಿಗಳು ಬೇಕೆಂದಳು ಒಂದು ದಿನ ರಾತ್ರಿ ಫೋನಿನಲ್ಲಿ. ಮದುವೆಯ ಖರ್ಚಿಗಾಗಿ ಆಗಲೇ ಕೈಗೆ, ಬಾಯಿಗೆ ಎಂಬಂತಾಗಿತ್ತು. ಈಗೇಕೆ ಇಷ್ಟು ಮೊತ್ತದ ದುಡ್ಡು? ತುಸು ದಿನಗಳ ನಂತರ ಕೊಡುವೆ ಎಂದು ಹೇಳಿದ್ದೆ. ಅಷ್ಟಕ್ಕೇ ದೂರ್ವಾಸ ಮುನಿಗಳಂತೆ ಅವಳಿಗೆ ಭಾರೀ ಕೋಪ ಬರಬೇಕೇ? ನನ್ನೆದೆಯ ಉಸಿರಾಗಿದ್ದ ನನ್ನ ಕವಿತಾ ಏನಂದಳು ಗೊತ್ತೇ...?" ಎಂದೆನ್ನುತ್ತಾ ಸುಶಾಂತ್ ಪ್ರಭಾಸ್ ಮತ್ತು ಪ್ರಣೀತಾಳ ಮುಖ ದಿಟ್ಟಿಸಿದ. ಇಬ್ಬರ ಮುಖಗಳಲ್ಲಿ ಆಶ್ಚರ್ಯದ ಚಿನ್ಹೆ. ಭಾವಗಳಲ್ಲಿ ಕಾರ್ಮೋಡ ಕವಿದಂತೆ. ಅವರೆದೆಗಳು ಗಾಬರಿಯಿಂದ ಡವಡವ ಬಡಿದುಕೊಳ್ಳತೊಡಗಿದವು. ತುಸು ಹೊತ್ತಿನ ಮೌನ ಆತ್ಮೀಯರ ಮಧ್ಯೆ.
"ಹಾಂ, ಏನಂದಳು ನಿನ್ನ ಮನದನ್ನೆ...?" ಪ್ರಣೀತಾ ಬಿಟ್ಟು ಬಿಟ್ಟು ಮಾತಾಡಿದಳು. 
"ಮಿಸ್ಟರ್ ಸುಶಾಂತ್, ನಿನ್ನಂಥಹ ಕಂಜೂಸ್ ಹುಡುಗ ನನಗೀಗ ಬೇಕಿಲ್ಲ. ನೀನೂ ಬೇಡ, ನಿನ್ನ ದುಡ್ಡೂ ಬೇಡ. ನಿನ್ನ ಪ್ರೀತೀನೂ ಬೇಡ. ನಿನ್ನ ಮುಖ ಕಂಡರೆ ನನಗಾಗುವುದಿಲ್ಲ. ನೀನು ನನಗಿಷ್ಟವಿಲ್ಲ. ನಾನು ಕೇಳಿದಷ್ಟು ದುಡ್ಡು, ಸುಖ ಕೊಡುವ ಪಂಚಪಾಂಡವರು ನನ್ನ ಜೀವನದಲ್ಲಿ ಬಂದು ಹೋಗಿದ್ದಾರೆ. ನೀನು ಆರನೆಯವನಾಗಲು ನನಗಿಷ್ಟವಿಲ್ಲ. ಇದೇ ಕೊನೆ ಮಾತು. ಇನ್ನೆಂದೂ ನೀನು ನನ್ನೊಂದಿಗಾಗಲೀ, ನನ್ನ ಹೆತ್ತವರೊಂದಿಗಾಗಲೀ ಮಾತಾಡುವ ಪ್ರಯತ್ನ ಮಾಡಬೇಡ. ಶನಿ, ತೊಲಗಿ ಹೋಗು. ಮತ್ತೆ ವಕ್ರಿಸಿಕೊಳ್ಳಬೇಡ ಎಂದೆನ್ನುತ್ತ ಫೋನ್ ಕಟ್ ಮಾಡಿದ್ದಳು. ಮತ್ತೆಂದೂ ಅವಳ ಫೋನ್ ಸಂಪರ್ಕಕ್ಕೆ ಸಿಗಲೇ ಇಲ್ಲ. ಆ ನಂಬರ್ ಅಸ್ತಿತ್ವದಲ್ಲಿ ಇಲ್ಲ ಎಂಬ ಸುದ್ದಿ ಬರುತ್ತಿತ್ತು. 
ನಾ ನುಡಿವ ಮಾತಿನಲಿ ಒಲವು ನೀನಾಗಿರಲಿ; ನಾ ಬರೆದ ಸಾಲಿನಲಿ ನಿನ್ನ ಬಿಂಬ ಕಾಣುತಿರಲಿ; ನಾ ನಲಿವ ಹೆಜ್ಜೆಯಲಿ ಗೆಜ್ಜೆ ನೀನಾಗಿರಲಿ; ದೇವಾ ನೀನಿರಲು ಬಾಳಲಿ ನಿತ್ಯವೂ ದೀಪಾವಳಿ ಎಂದು ಹೇಳುತ್ತಿದ್ದವಳು ಇವಳೇನಾ ಎಂದೆನಿಸುತ್ತಿದೆ. ಆ ಹಲ್ಕಟ್ ರಂಡೆಯ ಹೆತ್ತವರೊಂದಿಗೆ ನನ್ನ ತಂದೆ-ತಾಯಿಗಳು ಮಾತಾಡಲು ಮುಂದಾದಾಗ, ನಮ್ಮ ಹುಡುಗಿಗೆ ಈ ಸಂಬಂಧ ಇಷ್ಟವಿಲ್ಲ. ನಾವೇನೂ ಮಾಡಲಾರೆವು. ಋಣಾನುಬಂಧವಿಲ್ಲವೆಂದು ಹೇಳಿ ಕೈ ತೊಳೆದುಕೊಂಡಿದ್ದರು. ಇದು ಲವ್ ಧೋಕಾ ಅಲ್ಲವೇ?" ಸುಶಾಂತ್ ಮಾತು ಮುಗಿಸಿದಾಗ ಯಾರೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ.      
ಹೈವೋಲ್ಟೇಜ್ ತಂತಿಯಿಂದ ಶಾಕ್ ಹೊಡೆಸಿಕೊಂಡಂತೆ ಆಗಿದ್ದರು ಪ್ರಭಾಸ್ ಮತ್ತು ಪ್ರಣೀತಿ. ಗಟ್ಟಿಗ ಸುಶಾಂತನ ಕಣ್ಣಲ್ಲಿ ಗಂಗಾಮಾತೆ ಧಾರೆಯಾಗಿ ಇಳಿಯತೊಡಗಿದ್ದಳು. ಅವನ ಅನಿರೀಕ್ಷಿತ ನಡತೆಗೆ ಇಬ್ಬರೂ ಅಧೀರರಾಗಿಬಿಟ್ಟರು. ಪ್ರಭಾಸ್ ಅವನನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಸಂತೈಸಲು. ಪ್ರಣೀತಾಳೂ ಹಿಂದೆ ಬೀಳಲಿಲ್ಲ. 
"ಹಾಂ, ನಿನ್ನೊಲವಿನ ಬಳ್ಳಿ ಹೀಗೆ ಹೇಳಿತೇ? ಆ ಮುಗ್ಧ ಸೊಬಗಿನಲ್ಲಿ ಇಂಥಹ ಕ್ರೌರ್ಯವೇ? ಸುಂದರ ಹೂವಿನ ಮುಖವಾಡದ ಹಿಂದೆ ಡಬ್ಬಣದಂಥ ಮುಳ್ಳುಗಳು. ನಂಬಲಸಾಧ್ಯ" ಎಂದು ಪ್ರಣೀತಾ ಉದ್ಘರಿಸುತ್ತಾ ಮಾತು ಮುಂದುವರಿಸಿದ್ದಳು. 
"ಸು, ಅಣ್ಣಾ, ಅದೇನೋ ಗೊತ್ತಿಲ್ಲ, ನೀನು ಮೊದಲಬಾರಿಗೆ ಕವಿತಾಳನ್ನು ಪರಿಚಯಿಸಿದಾಗಲೇ ನನ್ನ ಆರನೇ ಇಂದ್ರಿಯ ಅವಳ ಬಗ್ಗೆ ನನ್ನಲ್ಲಿ ಸಂಶಯ ಹುಟ್ಟುಹಾಕಿತ್ತು. ಅವಳು ನಿನಗೆ ತಕ್ಕವಳಲ್ಲ, ಬಣ್ಣದ ಚಿಟ್ಟೆ ಇದ್ದ ಹಾಗಿದ್ದಾಳೆ ಎಂದು ಅನಿಸಿತ್ತು. ಅಂದಿನ ನನ್ನ ಅನಿಸಿಕೆ ಈಗ ನಿಜವಾಗಿದೆ." 
"ಸು, ಸಮಾಧಾನ ಮಾಡಿಕೋ. ಆ ನಿನ್ನ ಕವಿತಾ ಇಂಥಹವಳೆಂದು ಊಹಿಸಲು ಸಾಧ್ಯವೇ ಇಲ್ಲ. ನನಗಂತೂ ಅತೀವ ಆಘಾತವಾಗಿದೆ. ನಿನ್ನ ದುಃಖದಲ್ಲಿ ನಾವಿಬ್ಬರೂ ಭಾಗಿಗಳೇ. ಹಿರಿಯರು ಅದೇನೋ ಹೇಳ್ತಾರಲ್ಲ, ಗುಣನೋಡಿ ಹೆಣ್ಣು ತರಬೇಕು, ಯಾರದ್ದೇ ಸಂಬಂಧ ಬೆಳೆಸುವ ಮುನ್ನ ಅವರ ಪೂರ್ವಾಪರ ತಿಳಿದುಕೊಂಡು ನಂಬಿಕೆಗೆ ಅರ್ಹರೆಂದು ಖಚಿತಪಟ್ಟಾಗ ಮಾತ್ರ ಸಂಬಂಧ ಬೆಳೆಸಬೇಕೆಂದು. ಆ ಹುಡುಗಿಯ ಅತ್ತಿಗೆಯ ನಡತೆ ಸರಿ ಇಲ್ಲದ್ದಕ್ಕೆ ಅವಳನ್ನು ಕೊಲೆಮಾಡಿ ಅವಳಣ್ಣ ಜೈಲಿಗೆ ಹೋದಾಗಲೇ ನೀವು ಆಳವಾಗಿ ಅವರ ಮನೆತನದ ಬಗ್ಗೆ ವಿಚಾರಿಸಿದ್ದರೆ ಒಳ್ಳೆಯದಿತ್ತೇನೋ? ನೀನು ಅವಳ ಚೆಲುವಿಗೆ, ಮೋಡಿ ಮಾಡುವ ಮಾತಿಗೆ ಮರುಳಾಗಿಬಿಟ್ಟಿ ಎಂದೆನಿಸುತ್ತಿದೆ. ಒಂದು ಕಲ್ಲು ಸಾಕು ಒಂದು ಗಾಜು ಒಡೆಯಲು, ಒಂದು ಮಾತು ಸಾಕು ಒಂದು ಹೃದಯ ಮುರಿಯಲು. ಹಾಗೆ ಮಾಡಿಬಿಟ್ಟಳು ಆ ನಿನ್ನ ಕವಿತಾ. ಧೈರ್ಯದಿಂದ ಸತ್ಯವನ್ನು ಒಪ್ಪಿಕೊಂಡು ನೀನು ಮುನ್ನಡೆಯಬೇಕು ಅಷ್ಟೇ." ಪ್ರಭಾಸ್ ಮಾತಾಡಿದ್ದ.
ಪ್ರಭಾಸ್ ಮಾತಾಡುವಾಗ ಪ್ರಣೀತಾ ತುಸು ದೂರ ಹೋಗಿ ಮೊಬೈಲಿನಲ್ಲಿ ಮಾತಾಡಿ ಬಂದಳು.
"ಸು ಅಣ್ಣ, ಜನ್ಮಕೊಟ್ಟ ತಂದೆ, ತುತ್ತು ಕೊಟ್ಟ ತಾಯಿ, ಬದುಕುಕೊಟ್ಟ ಭಗವಂತ, ವಿದ್ಯೆ ಕೊಟ್ಟ ಗುರು, ಕನಸುಕೊಟ್ಟ ಸಂಗಾತಿ ಮರೆತರೆ ಅವರ ಜೀವನ ಭೂಮಿಗೆ ಭಾರ ಎಂದೆನ್ನುತ್ತಾರೆ. ಹಾಗೆ ಆದಳು ನಿನ್ನ ಕವಿತಾ. ಮರಕ್ಕಿರುವಷ್ಟು ವಿಶಾಲ ಹೃದಯ ಮನುಷ್ಯನಿಗಿಲ್ಲ. ಅನೇಕ ಪಕ್ಷಿಗಳಿಗೆ ಆಶ್ರಯ ನೀಡಿ ಬಾಳುವುದು ಅದೆಂಥಹ ನಿಸ್ವಾರ್ಥ ಪ್ರೇಮ! ಮಳೆ-ಬಿಸಿಲಲ್ಲಿ ತಾನು ನಿಂತು ಮನುಷ್ಯನಿಗೆ, ಪ್ರಾಣಿಗಳಿಗೆ ಆಶ್ರಯ ನೀಡುವುದು ಅದೆಷ್ಟು ತ್ಯಾಗಮಯ ಜೀವನ! ಕಡಿದರೂ ನೊಂದುಕೊಳ್ಳದೇ ಮತ್ತೆ ಚಿಗುರುವುದು ಅದೆಷ್ಟು ಕಷ್ಟ ಸಹಿಷ್ಣು! ಇದ್ದಾಗಲೂ ಮನುಷ್ಯನಿಗೆ ಉಪಯೋಗವಾಗಬಲ್ಲ, ಸತ್ತರೂ ಸಹಾಯವಾಗಬಲ್ಲ ಮರಕ್ಕೆ ಮನುಷ್ಯ ಯಾವುದೇ ರೀತಿಯಿಂದ ಸಾಟಿಯಾಗಲಾರನು. ಈ ಎಲ್ಲಾ ಸದ್ಗುಣಗಳು ಕವಿತಾಳಲ್ಲಿದ್ದರೆ ಅವಳಿಷ್ಟು ಕೃತಘ್ನಳಾಗುತ್ತಿದ್ದಿಲ್ಲ. ಅವಳು ಕೇಳಿಕೇಳಿದಾಗೆಲ್ಲಾ ನೀನು ಹಣ ಸುರಿದದ್ದು ತಪ್ಪೇನೋ? ಕೊಂಡೂ ಹೋದಳು, ಉಂಡು ಹೋದಳು." ಹಿರಿಯಕ್ಕನಂಥ ಸಮಾಧಾನದ ಮಾತುಗಳು ಪ್ರಣೀತಾಳದು. 
"ವರದಕ್ಷಿಣೆಗಾಗಿ ಪೀಡಿಸುವ, ದೌರ್ಜನ್ಯ ಎಸಗುವ ಗಂಡಸಿಗೆ ಕಾನೂನಿನಡಿಯಲ್ಲಿ ಶಿಕ್ಷೆ ಇದೆ. ಆದರೆ ಇಂಥವಳಿಗೆ ಯಾವ ಶಿಕ್ಷೆ ಇದೆ?" ಸುಶಾಂತ್ ಹಲುಬುತ್ತ ಕೇಳಿದ. 
"ಸು, ಆದದ್ದು ಆಗಿ ಹೋಗಿದೆ. ಆದದ್ದೆಲ್ಲಾ ಒಳ್ಳೆಯದಕ್ಕೇ ಅಂತ ಹಿರಿಯರು ಹೇಳಿದ್ದು ಅಕ್ಷರಶಃ ನಿಜ. ಮದುವೆಯಾದ ಮೇಲೆ ಅವಳೊಬ್ಬ ಅವಿನೀತೆ ಎಂದು ಗೊತ್ತಾಗಿದ್ದರೆ...? ಆಗ ನಿನ್ನ ಬದುಕೇ ನರಕವಾಗುತ್ತಿತ್ತಲ್ಲ? ನೀನೂ ಅವಳಣ್ಣನಂತೆ ಕೊಲೆಮಾಡಿ ಜೈಲಿಗೆ ಹೋಗುತ್ತಿದ್ದಿಯೇನು...? ದೇವರ ದಯೆಯಿಂದ ಅದು ಹೇಗೋ ತಪ್ಪಿದೆ. ಮೂರು ವರ್ಷದಲ್ಲಿ ನೂರು ಅನುಭವಗಳಾಗಿವೆ. ಮೂರು ವರ್ಷ ಜೀವನ ಬರಡಾಗಿದ್ದರೂ ಪರವಾಗಿಲ್ಲ, ಮುಂದೆ ಇಡೀ ಬದುಕೇ ಹಾಸಿಕೊಂಡಿದೆ. ಗಟ್ಟಿ ಮನಸ್ಸು ಮಾಡಿ ಅದೊಂದು ಕೆಟ್ಟ ಕನಸೆಂದುಕೊಂಡು ಅವಳನ್ನು ಮನಸ್ಸಿನಿಂದ ತೆಗೆದು ಹಾಕಿಬಿಡು. ಎಲ್ಲಾ ತಾನಾಗಿಯೇ ಸರಿಹೋಗುತ್ತೆ. ಅವಳಿಗಿಂತ ಚೆಂದದ ಹುಡುಗಿಯೇ ನಿನ್ನವಳಾಗುತ್ತಾಳೆ. ಆಶಾಭಾವವಿರಲಿ." ಪ್ರಭಾಸ್ ಹಿರಿಯಣ್ಣನಂತೆ ಹಿತವಚನ ನೀಡಿದ.
"ಸು ಅಣ್ಣಾ, ಈಗಲಾದರೂ ನೀನು ದೊಡ್ಡ ಮನಸ್ಸುಮಾಡಿ ಈ ತಂಗಿಯ ಬೇಡಿಕೆಯೊಂದನ್ನು ಈಡೇರಿಸುವಿಯಾ...?" ಪ್ರಣೀತಾಳ ದಿಢೀರ್ ಮಾತು ಕುತೂಹಲ ಮೂಡಿಸಿತ್ತು ಆ ಹೆಪ್ಪುಗಟ್ಟಿದ ವಾತಾವರಣದಲ್ಲಿ.
"ಅದೇನು...?" ಸುಶಾಂತ್ ಅಳುಕುತ್ತ ಕೇಳಿದ.
"ಅದೇ, ನಮ್ಮ ಸಹೋದ್ಯೋಗಿ ಗಿರಿಜಾ ನಿನ್ನ ಇಷ್ಟಪಟ್ಟು ಪ್ರೋಪೋಸ್ ಮಾಡಿದಾಗ ನಿನ್ನ ಮದುವೆ ಆಗಷ್ಟೇ ಕವಿತಾಳೊಂದಿಗೆ ನಿಶ್ಚಯವಾಗಿತ್ತು. ಅದೇನೋ ಗೊತ್ತಿಲ್ಲ, ಆಗಿನಿಂದ ಗಿರಿಜಾ ಇದುವರೆಗೂ ಮತ್ಯಾರನ್ನೂ ಒಪ್ಪಿಲ್ಲ. ರೂಪ, ವಿದ್ಯೆ, ಗುಣ ಎಲ್ಲದರಲ್ಲೂ ಗಿರಿಜಾಳಿಗೆ ಯಾರೂ ಸಾಟಿಯಾಗುವುದಿಲ್ಲ." ಪ್ರಣೀತಾಳ ಮಾತು ಮುಗಿಯುವಷ್ಟರಲ್ಲಿ ಗಿರಿಜಾ ಅವರೆಡೆಗೆ ನವಿಲ ನಡಿಗೆಯಲ್ಲಿ ಬರುತ್ತಿರುವುದು ಕಂಡು ಬಂತು. ಪ್ರಣೀತಾ ಆಗಲೇ ಫೋನಲ್ಲಿ ಮಾತಾಡಿದ್ದು ಗಿರಿಜಾಳೊಂದಿಗೇ ಎಂದು ಸುಶಾಂತ್ ಮತ್ತು ಪ್ರಭಾಸ್ ಊಹಿಸಿಕೊಂಡರು. ಸುಶಾಂತ್‍ನ ನೋಟ ಅವಳಲ್ಲೇ ನೆಟ್ಟಿತ್ತು. 
"ತ್ರಿಮೂರ್ತಿಗಳ ಹೃದಯದ ಮಾತುಗಳಿನ್ನೂ ಮುಗಿದಿಲ್ಲವೇ? ಮೂವರ ಮುಖಗಳು ಅದೇಕೋ ರಸತೆಗೆದ ಕಬ್ಬಿನ ಜಲ್ಲೆಯಂತಾಗಿರುವಿಯಲ್ಲ...? ಎಲ್ಲಾ ಸರಿ ಇದೆ ತಾನೇ?" ಎಂದೆನ್ನುತ್ತಾ ಗಿರಿಜಾ ಆ ಮೂವರನ್ನೂ ಕೂಡಿಕೊಂಡಳು. ಪ್ರಣೀತಾ ಚುಟುಕಾಗಿ ಸುಶಾಂತನ ಲವ್ ಸ್ಟೋರಿಯ ಬಗ್ಗೆ ವಿವರಿಸಿದಳು. 
"ಹೌದೇ? ಸಾರಿ ಸು. ನೀ ಮೊದಲೇ ಮೆದು ಹೃದಯದ ಮನುಷ್ಯ. ಎದೆಯನ್ನು ಗಟ್ಟಿಮಾಡಿಕೊ." ಗಿರಿಜಾಳೂ ಸಾಂತ್ವನಕ್ಕೆ ಮುಂದಾಗಿದ್ದಳು.
"ಗಿರಿ, ನೀನೀಗ ಸುನ ಎದೆಯ ಹುಣ್ಣಿಗೆ ಪ್ರೀತಿಯ ಮುಲಾಮು ಹಚ್ಚಿ ವಾಸಿ ಮಾಡಬೇಕಿದೆ. ನಿಮ್ಮಿಬ್ಬರ ಹೃದಯಗಳು ಪರಸ್ಪರ ಸ್ಪಂದಿಸಬೇಕಿದೆ ಅಷ್ಟೇ" ಎಂದು ಪ್ರಣೀತಾ ಹೇಳಿದಾಗ ಪ್ರಭಾಸ್ ಸಹ ಅವಳ ಮಾತಿಗೆ ಸೋ ಹಾಡಿದ. ಸುಶಾಂತ್, ಗಿರಿಜಾ ಪರಸ್ಪರ ದಿಟ್ಟಿಸತೊಡಗಿದ್ದರು. 
"ಹೃದಯಪೂರ್ವಕವಾಗಿ ನಾನು ಒಪ್ಪಿಕೊಂಡಿದ್ದೇನೆ" ಎಂದು ಸುಶಾಂತ್ ಮತ್ತು ಗಿರಿಜಾ ಒಂದೇ ಬಾರಿಗೆ ಹೇಳಿದಾಗ ಪ್ರಣೀತಾ, ಪ್ರಭಾಸ್ ಇಬ್ಬರನ್ನೂ ತಬ್ಬಿಕೊಂಡು ಅಭಿನಂದಿಸಿ ಗಿರಿಜಾ ಕಲ್ಯಾಣದ ತಯಾರಿಗೆ ಯೋಜನೆ ರೂಪಿಸತೊಡಗಿದರು.          

ಶೇಖರಗೌಡ ವೀ ಸರನಾಡಗೌಡರ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಅವಿನೀತೆ”

  1. Raghavendra Mangalore

    ಹೆಣ್ಣು ಮಕ್ಕಳ ಇತ್ತೀಚಿನ ಹೊಸ ಧೋಕದ ಅನಾವರಣ ಚೆನ್ನಾಗಿ ಮಾಡಿದ್ದೀರಿ. ಕಥೆ ಸರಾಗವಾಗಿ ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಎಂದಿನಂತೆ ತಮ್ಮ ಕಥೆ ಸುಖಾಂತದಲ್ಲಿ ಮುಕ್ತಾಯವಾಗಿದೆ.

  2. ಪಿ. ಜಯರಾಮನ್

    ಕಥಾನಾಯಕ ಮದುವೆಗೆ ಮುಂಚೆಯೆ ಹಣ ಕೊಡುವುದು, ಮಾಡ್ರನ್ ಡ್ರೆಸ್, ಮೊಬೈಲ್, ಕಾಲೇಜಿನ ಹಾಗೂ ಹಾಸ್ಟೆಲ್ ಫೀಸ್ ಕೊಟ್ಟಿದ್ದು ಸರಿಯಲ್ಲ ಎಂಬುದು ನನ್ನ ಅನಿಸಿಕೆ. ನಾಲ್ಕೈದು ವರ್ಷಗಳ ಒಡನಾಟ ಹಾಗೂ ಹಣದ ವ್ಯವಹಾರ ಇರುವಾಗ, ಎಲ್ಲಾದರೂ ಒಂದು ಕಡೆ ಆ ಹುಡುಗಿಯ ನಡತೆ, ಗುಣದ ಬಗ್ಗೆ ಅನುಮಾನಗಳು ಬಂದಿರಲೇ ಬೇಕು. ಕಥಾನಾಯಕ ಅವುಗಳನ್ನು ಗಮನಿಸಲಿಲ್ಲವೆಂದೆನಿಸುತ್ತದೆ.

    ಒಟ್ಟಿನಲ್ಲಿ ಈಗಿನ ಹುಡುಗಿಯರ ನಿಜ ಮುಖವನ್ನು ಬಿಂಬಿಸುತ್ತದೆ ಈ ಕಥೆ.
    ಅಭಿನಂದನೆಗಳು ಸರ್.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter