ಭಿನ್ನರೇಖೆಗಳು (ಕಥಾ ಸಂಕಲನ)
ಲೇಖಕರು: ಧರ್ಮಾನಂದ ಶಿರ್ವ, ಪ್ರಕಾಶಕರು: ವರ್ಣ ಪಬ್ಲಿಕೇಷನ್, ಬೆಂಗಳೂರು, ಪುಟ: 214 + 4 ಬೆಲೆ: ರೂ.210
ಪ್ರತಿಗಳಿಗಾಗಿ ಸಂಪರ್ಕ ಸಂಖ್ಯೆ: ಧರ್ಮಾನಂದ ಶಿರ್ವ – 98458 97021
ವರ್ಣ ಪಬ್ಲಿಕೇಷನ್ – 93437 04216
ಈ ನವಮಾಧ್ಯಮ ಯುಗದಲ್ಲಿ ಫೇಸ್‍ಬುಕ್, ವಾಟ್ಸ್ಯಾಪ್‍ನಲ್ಲಿ ಪುಟ್ಟ ಪುಟ್ಟ ಕಥೆಗಳನ್ನು ಓದುವವರೇ ಜಾಸ್ತಿ. ಕಥೆ, ಕಾದಂಬರಿಗಳನ್ನು ಯಾರು ಓದುತ್ತಾರೆ ಎಂಬ ನಿರಾಶಾವಾದದ ಮಧ್ಯೆ ಕಥಾ ಸಂಕಲನಗಳು, ಕಾದಂಬರಿಗಳು ಅದರಲ್ಲೂ ಚಾರಿತ್ರಿಕ ಕಾದಂಬರಿಗಳು ಹೆಚ್ಚು ಹೆಚ್ಚು ಪ್ರಕಟವಾಗುತ್ತಿವೆ. ಪುಸ್ತಕ ಬಿಡುಗಡೆ ನಡೆಯದ ಭಾನುವಾರಗಳೇ ಇಲ್ಲ ಎನ್ನಬಹುದು. ಇವೆಲ್ಲದರ ಮಧ್ಯೆ ಓದಲೇಬೇಕಾದ ಕೃತಿಗಳು ಯಾವುವು ಎನ್ನುವ ಗೊಂದಲಕ್ಕೆ ಒಳ್ಳೆಯ ಓದುಗ ಸಿಲುಕುತ್ತಾನೆ.
ಧರ್ಮಾನಂದ ಶಿರ್ವ ಅವರು ತಮ್ಮ ಸುತ್ತಮುತ್ತ ನಡೆದ ವಿದ್ಯಮಾನಗಳಿಗೆ ಕಲ್ಪನೆಯ ಲೇಪ ಕೊಟ್ಟು ತಮ್ಮ ಚಿಂತನೆ, ಸಂವಾದ ಮತ್ತು ವಿಚಾರ ಬೆರೆಸಿ ಭಿನ್ನರೇಖೆಗಳು' ಎಂಬ ಒಂದು ಸತ್ವಯುತ ಕಥಾ ಸಂಕಲನವನ್ನು ಕೊಟ್ಟಿದ್ದಾರೆ. ಪ್ರೀತಿ, ಪ್ರೇಮದ ವಸ್ತು ಉಳ್ಳ ಸಾವಿರಾರು ಕಥೆಗಳು ಪ್ರಕಟವಾಗಿವೆ. ಇನ್ನೂ ಬೆಳಕು ಕಾಣಲಿವೆ.
‘ಬದುಕು-ಬಯಕೆ’ ಈ ಕಥಾ ಸಂಕಲನದ ಒಂದು ಒಳ್ಳೆಯ ಕಥೆ. ಹೊಸ ಬದುಕನ್ನು ಕಟ್ಟಬೇಕೆಂದು ಬಯಸಿ ರಾಯಪುರಕ್ಕೆ ಬಂದ ಮಮತಾ ಚಾದಂಗಡಿ ನಡೆಸುತ್ತಾಳೆ. ತನ್ನ ತಮ್ಮನ ಜೊತೆ ಬಂದ ಆಕೆ ಒಂಟಿ ಹೆಣ್ಣು ಬದುಕನ್ನು ಸಾಗಿಸುವುದು ಕಷ್ಟ ಎಂದು ಪುರುಷ ವೇಷಧಾರಿಯಾಗಿ ವ್ಯಾಪಾರ ನಡೆಸುವಾಗ ತನ್ನ ತಾಯಿಯಂತೆ ವೇಶ್ಯೆಯಾಗಿ ಬದುಕು ಸಾಗಿಸಬಾರದು ಎಂದು ಮೈಯೆಲ್ಲ ಕಣ್ಣಾಗಿ ಎಚ್ಚರಿಕೆಯಿಂದ ಇರುವಾಗ ಟ್ರಕ್ ಚಾಲಕನ ಪರಿಚಯವಾಗುತ್ತದೆ. ಸಹಾನುಭೂತಿಯಿಂದ ನೆರವಿಗೆ ಬಂದ ಆತನಿಗೆ ಆಕೆ ಆಕಸ್ಮಿಕವಾಗಿ ಅವಳು ಅವನಲ್ಲ, ಅವಳು ಎನ್ನುವುದು ಗೊತ್ತಾಗುತ್ತದೆ. ವಾಸ್ತವ ಬಯಲಾದಾಗ ಅವನು ಕೇವಲ ಗಂಡಸಾಗಿ ವರ್ತಿಸುತ್ತಾನೆ. ಇಬ್ಬರಲ್ಲಿಯೂ ಕಾಮ ಹೆಡೆ ಎತ್ತುವಾಗ ಆಕೆ ಎಚ್ಚೆತ್ತುಕೊಳ್ಳುವುದಿಲ್ಲ. ಇಬ್ಬರೂ ಅದಕ್ಕೆ ಮಣಿಯುತ್ತಾರೆ. ತನ್ನ ಅಮ್ಮನಿಗಿಂತ ತಾನು ಭಿನ್ನ ಆಗಲಿಲ್ಲ ಎನ್ನುವುದನ್ನು ತನಗೆ ತಾನೇ ಹೇಳಿಕೊಂಡು ಕಣ್ಣೀರಾಗುತ್ತಾಳೆ. ಬದುಕು-ಬಯಕೆಯ ಮಧ್ಯೆ ನಡೆಯುವ ಸಂಘರ್ಷವೇ ಇದರ ಮೂಲ ಧಾತು.
‘ಪ್ರಭಾವ' ಕಥೆಯ ನಾಗೇಶನಿಗೆ ತನ್ನ ತಂದೆಗೆ ಸಾಧ್ಯವಾಗಿರುವುದು ತನಗೆ ಯಾಕೆ ಸಾಧ್ಯವಾಗಿಲ್ಲ ಎನ್ನುವ ಜಿಜ್ಞಾಸೆ. ಅಪ್ಪ ಮುತ್ತು ಎಂಬ ಹೆಣ್ಣಿನ ಜೊತೆ ಕೂಡುವಾಗ ಇಲ್ಲದ ಪಾಪ ಪ್ರಜ್ಞೆ ಅಥವಾ ಹೆದರಿಕೆ ತಾನು ಮೋನಿಯ ಸಂಪರ್ಕಕ್ಕೆ ಬಂದಾಗ ಒಂದಾಗಲು ಯಾಕೆ ತಡೆ ಒಡ್ಡುತ್ತದೆ? ತಾನು ತಪ್ಪು ಮಾಡಿದೆ ಎಂದು ತನಗೆ ಅನಿಸಲು ಅಮ್ಮನ ವ್ಯಕ್ತಿತ್ವದ ಪ್ರಭಾವ ಕಾರಣವೇ ಎಂಬ ಜಿಜ್ಞಾಸೆಗೆ ಒಳಗಾಗುತ್ತಾನೆ. ಉತ್ತರ ಸಿಗದ ಪ್ರಶ್ನೆಯೊಂದಿಗೆ ಮನೆ ಸೇರುತ್ತಾನೆ. ತನ್ನ ಬದುಕನ್ನು ತಾನು ಕಟ್ಟಲೇ ಬೇಕು, ತನ್ನ ಕಾಲ ಮೇಲೆ ತಾನು ನಿಲ್ಲಲೇ ಬೇಕು ಎಂದು ಹೊರಟ ದಲಿತ ತನಿಯ ಕುರಿ ಸಾಲ ಪಡೆದು ಸರ್ಕಾರದ ಯೋಜನೆಯ ನೆರವಿನಿಂದ ಬದುಕು ಕಟ್ಟಲು ಹೊರಡುತ್ತಾನೆ. ಆದರೆ ವಾಸ್ತವ ಸುತ್ತಿಗೆಯಲ್ಲಿ ತಲೆಗೆ ಹೊಡೆದಂತೆ ಹೊಡೆದಾಗ ವಾಸ್ತವದ ಭ್ರಷ್ಟ ಪ್ರಪಂಚಕ್ಕೆ ಇಳಿಯುತ್ತಾನೆ. ಬಡತನ ಅಳಿಸುವ ಯೋಜನೆಗಳು ಕೇವಲ ಕಾಗದ ಪತ್ರಗಳಲ್ಲಿ ಉಳಿದು ಬಡವ ಬಡವನಾಗಿಯೇ ಜೀವನ ಸಾಗಿಸುವ ಕಥೆ
‘ಕುರಿ ಸಾಲ’. ಹೇಗಾದರೂ ಸಾರ್ವಜನಿಕ ವ್ಯಕ್ತಿಯಾಗಬೇಕು, ಬಿಟ್ಟಿ ಪ್ರಚಾರದಿಂದಲಾದರೂ ಎಂಬ ಹುಸಿ ಮರಿ ನಾಯಕನ ಭ್ರಮನಿರಸನದ ಕಥೆ ‘ಚಳವಳಿ'.
ಪರಿವರ್ತನೆ’ ಶ್ರೀಪತಿರಾಯರಿಗೆ ಲೌಕಿಕದ ಸೀಮೆಯ ಅರಿವಾಗಿ ಪರಿವರ್ತನೆ ಇಲ್ಲದ ಸಾಧನೆ ಸಾಧನೆಯೇ ಅಲ್ಲ, ಆಂತರಿಕ ಪರಿವರ್ತನೆ ನಿಜವಾದ ಸಾಧನೆಯತ್ತ ನಮ್ಮನ್ನು ಕೊಂಡೊಯ್ಯುತ್ತದೆ ಎನ್ನುವ ಜ್ಞಾನೋದಯ ಉಂಟು ಮಾಡಿದ ವಸ್ತು ಉಳ್ಳ ಕಥೆ. ಗೆಳೆಯನ ಉಡುಗೊರೆ' ಸಾಧಾರಣ ಕಥಾವಸ್ತುವಿನ ಸಾಧಾರಣ ಕಥೆ.
ಅನ್ವೇಷಣೆ’ ಒಂದು ಲವಲವಿಕೆಯ ಸತ್ವಯುತ ಕಥೆ. ಇದರಲ್ಲಿ ಧರ್ಮಾನಂದ ಅವರು ತಮ್ಮ ಕಥಾಗಾರಿಕೆಯ ಕಸುಬನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ‘ನಾನು ಮತ್ತು ರಾಜಿ' ಕಥೆಯಲ್ಲಿ ಕಥಾ ನಾಯಕಿ ಗಂಡನನ್ನು ಕಳೆದುಕೊಂಡ ಬಳಿಕ ಕಾಮವನ್ನು ಹತ್ತಿಕ್ಕಲಾಗದೆ ಗಂಡಸರ ಕಾಮದ ಬೇಡಿಕೆಗಳಿಗೆ ತಾನಾಗಿಯೇ ಓಗೊಡುತ್ತಾಳೆ. ಇದರಿಂದ ಲೈಂಗಿಕ ರೋಗಕ್ಕೆ ತುತ್ತಾಗಿ ಕಾಲೇಜು ದಿನದಲ್ಲಿ ಗೆಳೆಯನಾಗಿದ್ದವನ ಬಳಿ ತನ್ನ ಸಂಕಷ್ಟ ತೋಡಿಕೊಳ್ಳುತ್ತಾಳೆ. ಆತನ ಒಳ್ಳೆಯ ಗೆಳತಿಯಾಗಿದ್ದ ಆಕೆ ಕಾಯಿಲೆ ಗುಣವಾದ ಬಳಿಕ ಅಣ್ಣನ ಬಳಿ ಹೋಗುತ್ತೇನೆ ಎಂದಾಗ ನಿರ್ವಾತ ಆವರಿಸಿದ ಭಾವ ಅವನಲ್ಲಿ. ನಿರಾಸೆ ಆತನನ್ನು ಕಾಡುತ್ತದೆ. ಬದುಕಿನಲ್ಲಿ ಎರಡು ಬಾರಿ ಸಾಂತ್ವನಕ್ಕಾಗಿ ಮಾತ್ರ ನಾನು ಅವಳಿಗೆ ಬೇಕಾಯಿತೇ? ಪರಿಚಿತಳಾಗಿದ್ದುಕೊಂಡು ಬಂದ ಅವಳು ಹಾಗೇ ಹೋಗಬೇಕೇ? ಇದರ ಹೊರತಾಗಿ ನನ್ನ ಮತ್ತು ಅವಳ ಸಂಬಂಧ ಏನೂ ಅಲ್ಲವೇ... ಎನ್ನುವ ಯೋಚನೆ ಯೋಚನೆಯಾಗಿಯೇ ಉಳಿಯುತ್ತದೆ.
‘ಕರ್ಣಾತ್ಮಾವಲೋಕನ’ ಎಲ್ಲರಿಗೂ ಗೊತ್ತಿರುವ ಕರ್ಣನ ಕಥೆ. ಆದರೆ ಧರ್ಮಾನಂದರು ತಮ್ಮ ವಿಚಾರಗಳ ಲೇಪನದಿಂದ ವಿಭಿನ್ನವಾಗಿ ಕಟ್ಟಿಕೊಡಲು ಯತ್ನಿಸಿದ್ದಾರೆ. ಕರ್ಣ ಎನ್ನುವ ಹೆಸರು ನನಗೆ ಅನ್ವರ್ಥಕವಾಗಿಯೇ ಇದೆ. ಯಾಕೆಂದರೆ ಎಲ್ಲರ ಮಾತಿಗೆ ನಾನು ಕಿವಿಯಾದೆನೇ ಹೊರತು ನನ್ನ ಆಂತರ್ಯದಲ್ಲಿ ಮಿಡುಕುವ ಭಾವನೆಗಳಿಗೆ ಸ್ಪಂದಿಸುವ ಜೀವ ಕೊನೆವರೆಗೂ ದಕ್ಕಲಾರದೆ ಹೋಯಿತು. ಎಲ್ಲವನ್ನೂ ಇತರರ ಸ್ವಾರ್ಥಕ್ಕೆ ಕಳಕೊಂಡ ನನ್ನಲ್ಲಿ ಕೊನೆಗೆ ಉಳಿದದ್ದು ದಾನಶೂರ ಕರ್ಣ ಎನ್ನುವ ಬಿರುದು ಮಾತ್ರ' ಎನ್ನುತ್ತಾನೆ. ಎಂತಹ ಅರ್ಥಪೂರ್ಣ ಸ್ವಗತ.
ತಿರುವು’ ಕಥೆಯ ಅಂಜಲಿ ಗಂಡನಿಂದ ಬದುಕಿನ ಪೂರ್ವಾರ್ಧದಲ್ಲಿ ಪ್ರೀತಿ, ಪ್ರೇಮ, ಕಾಮವನ್ನು ಸಂತೃಪ್ತಿಯಾಗುವಷ್ಟು ಅನುಭವಿಸಿದವಳು. ಆದರೆ ಕ್ರಮೇಣ ದುಶ್ಚಟದ ದಾಸನಾದ ಗಂಡ ದಿನ ಹೋದಂತೆ ದೂರವಾದಾಗ ಆಕೆಗೆ ಈ ಎಲ್ಲದರ ತೀವ್ರ ಕೊರತೆ ಕಾಡುತ್ತದೆ. ಇದನ್ನು ಬೇರೊಬ್ಬ ಪುರುಷನಿಂದ ಪಡೆಯುವುದು ತಪ್ಪಲ್ಲ ಎನ್ನುವ ತೀರ್ಮಾನಕ್ಕೆ ಬಂದು ಕೊನೆಯಲ್ಲಿ ತನಗೆ ಗೌರವ, ಪ್ರೀತಿ ಎರೆಯುವವನನ್ನು ಕಂಡುಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾಳೆ.
‘ನಿರ್ಧಾರ' ಕಥೆಯ ಪ್ರಣತಿ ಗಟ್ಟಿಗಿತ್ತಿ. ಆಕೆ ಉದ್ಯೋಗದಲ್ಲಿ ಬಡ್ತಿಯ ಮೇಲೆ ಬಡ್ತಿ ಪಡೆಯುವುದೇ ಬದುಕಿನ ದೊಡ್ಡ ಗುರಿ ಅಂದುಕೊಂಡವಳು. ತನ್ನ ಸೋದರಿಯ ಮಗುವಿನ ಹುಟ್ಟುಹಬ್ಬಕ್ಕೆ ಹೋದಾಗ ಬದುಕು ಎಂದರೆ ಕೇವಲ ಬಡ್ತಿ ಪಡೆದು ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುತ್ತಾ ವೈಯಕ್ತಿಕ ಬದುಕನ್ನು ನಿರ್ಲಕ್ಷ್ಯ ಮಾಡುವುದಲ್ಲ ಎನ್ನುವ ಸತ್ಯದ ಗೋಚರದಿಂದ ಮಗುವನ್ನು ಹೊಂದುವ ತೀರ್ಮಾನಕ್ಕೆ ಬರುತ್ತಾಳೆ. ಇದು ಈ ಶತಮಾನದ ಕೆಲವು ಹೆಣ್ಣುಗಳು ಗೆಲ್ಲಬೇಕಾದ ಕಡೆ ಸೋಲುವತ್ತ ಸಾಗುತ್ತಿರುವುದಕ್ಕೆ ಹಿಡಿದ ಕನ್ನಡಿ. ಆದರೆ ಇಲ್ಲಿ ಆಕೆ ಸಕಾಲದಲ್ಲಿ ಎಚ್ಚೆತ್ತುಕೊಳ್ಳುತ್ತಾಳೆ.
ಅಪಘಾತ’ ಓದುಗನ ಮೆಚ್ಚುಗೆಯನ್ನು ಪಡೆಯುತ್ತದೆ. ಇದು ನಡೆದ ಘಟನೆಗೆ ಕಥೆಯ ರೂಪಕೊಟ್ಟ ಕಥನ. ಇದು ನಡೆದ ಘಟನೆ ಆಧಾರಿತ ಎಂದು ಹೇಳದೇ ಇದ್ದಿದ್ದರೆ ಓದುಗ ದೊರೆ ಇದು ಕಲ್ಪನೆಯಲ್ಲಿ ಮಾತ್ರ ಸಾಧ್ಯ ಎಂದು ತಳ್ಳಿಹಾಕುತ್ತಿದ್ದನೋ ಏನೋ! `ಭಾವತಂತು’ ಕಥೆಯಲ್ಲಿ ಸಮಕಾಲೀನ ಸಮಸ್ಯೆಯೊಂದನ್ನು ಕಥೆಗಾರ ಹೇಳುತ್ತಾ ಕೊನೆಗೆ ನಾಟಕೀಯ ಸುಖಾಂತ್ಯದೊಂದಿಗೆ ಕಥೆ ಮುಗಿಸುತ್ತಾನೆ. ಅತ್ತೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದರಲ್ಲಿ ಯಾವ ತಪ್ಪೂ ಕಾಣದ ಗೃಹಿಣಿ ತನ್ನ ಸ್ವಂತ ತಾಯಿ ಕೂಡಾ ವೃದ್ಧಾಶ್ರಮ ಸೇರುವ ಸನ್ನಿವೇಶ ಬಂದಾಗ ವ್ಯಥಿತಳಾಗಿ ಅತ್ತೆಯನ್ನು ವೃದ್ಧಾಶ್ರಮದಿಂದ ಕರೆತರುವಂತೆ ಕೇಳಿಕೊಳ್ಳುತ್ತಾಳೆ. ಆಕೆಯ ಗಂಡ ಪರಿಸ್ಥಿತಿಯನ್ನು ಜಾಣತನದಿಂದ ನಿಭಾಯಿಸುವುದು ಕಥೆಗೆ ರೋಚಕ ಅಂತ್ಯ ತರುತ್ತದೆ.
ಧರ್ಮಾನಂದ ಶಿರ್ವ ಅವರಲ್ಲಿ ಒಳ್ಳೆಯ ಕಥೆಗಾರನಲ್ಲಿ ಇರಬೇಕಾಗಿರುವ ಕಸುಬುಗಾರಿಕೆ ಇರುವ ಕಾರಣದಿಂದಲೇ ಕಥೆಗಳು ಗೆಲ್ಲುತ್ತವೆ. ಕಳೆದ ನಲವತ್ತೆರಡು ವರ್ಷಗಳಲ್ಲಿ ಪ್ರಕಟವಾಗಿರುವ ಕಥೆಗಳ ಆಯ್ಕೆಯ ಸಂದರ್ಭದಲ್ಲಿ ಒಳ್ಳೆಯ ಸಂಪಾದಕನ ಚಾತುರ್ಯ ತೋರಿಸಿದ್ದಾರೆ. ದೊಡ್ಡ ಮೊತ್ತದ ಬಹುಮಾನದ ಯುಗ ಇದು. ಒಳ್ಳೆಯ ಕಥೆಗಳಿಗೆ ಬಹುಮಾನ ಸಿಗಬೇಕೆಂಬ ನಿಯಮ ಇಲ್ಲ. ದಿನಕ್ಕೆ ಎರಡು ಪುಟಗಳಷ್ಟು ಕಥೆ ಪೋಣಿಸಿ ಎರಡು ಮೂರು ವಾರಗಳ ನಂತರ ಕಥೆ ಮುಗಿಸಿದರೆ ಅದೇ ಈ ದಿನಮಾನದ ಕಥೆ ಪೋಣಿಸುವ ಮಾದರಿ ಎಂದು ಭಾವಿಸುವವರು ನಮ್ಮ ನಡುವೆ ಇದ್ದಾರೆ. ಸದ್ಯ ನಿಜವಾದ ಕಥೆಗಾರರು ಮರೆಗೆ ಸಂದರೂ ಅದು ತಾತ್ಕಾಲಿಕ. ಈ ಸಂಕಲನ ಯಾರಿಗೂ ಅತೃಪ್ತಿ ಉಂಟು ಮಾಡುವುದಿಲ್ಲ. ಇದು ಹಣಕ್ಕೆ ಮತ್ತು ಸಮಯಕ್ಕೆ ಬೆಲೆ ಕೊಡುವ ಓದುಗನ ಹೃದಯವನ್ನು ಗೆಲ್ಲುವುದು ಖಚಿತ.
2 thoughts on “ಹೃದಯ ಗೆಲ್ಲುವ ಸತ್ವಯುತ `ಭಿನ್ನರೇಖೆಗಳು’”
ಧರ್ಮಾನಂದ ಶಿರ್ವ ಅವರ ಕಥೆಗಳ ಬಗ್ಗೆ ಒಳ್ಳೆಯ ವಿಮರ್ಶೆ. ಎಲ್ಲಾ ಕಥೆಗಳು ಸೂಪರ್.
ಶ್ರೀ ಧರ್ಮಾನಂದ ಶಿರ್ವ ಅವರ ಭಿನ್ನರೇಖೆಗಳು ಕಥಾ ಸಂಕಲನ ಓದಿ ಸಂತಸ ಪಟ್ಟಿದ್ದೆವು. ಈಗ ಅದರಷ್ಟೇ ಸೊಗಸಾಗಿ ಮತ್ತು ಅರ್ಥಗರ್ಭಿತವಾಗಿ ಬಂದ ಶ್ರೀ ಪಿ ಶ್ರೀಧರ್ ನಾಯಕ್ ಅವರ ವಿಮರ್ಶಾ ಲೇಖನ ಓದಿ ಖುಷಿಯಾಯಿತು.
ಕಥೆಗಾರರು ಹಾಗೂ ವಿಮರ್ಶಕರು ಇಬ್ಬರಿಗೂ ಅಭಿನಂದನೆಗಳು.