ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣl ‘ಸರದಿಗಾಗಿ ಕಾಯಬೇಕಿದೆ’

ನವರಾತ್ರಿ ಹಬ್ಬದ ಸಮಯ. ದೇವರ ದರ್ಶನ ಪಡೆಯಲು ಜನಸ್ತೋಮ ಸಾಲು ಸಾಲಾಗಿನಿಂತದೆ. ಧ್ವನಿವರ್ಧಕಗಳಲ್ಲಿ ಇಂಪಾದ ದೇವಿಸ್ತುತಿಗಳು . ಹೆಂಗಳೆಯರ ರೇಷ್ಮೆ ಉಡಿಗೆ. ಬಣ್ಣ ಬಣ್ಣದ ಅಲಂಕಾರ. ಘಮ ಘಮಿಸುವ ಮಲ್ಲಿಗೆ. ಬಾಲೆಯರ ಹೆಜ್ಜೆಯಲಿ ಗೆಜ್ಜೆಯ ಝಣತ್ಕಾರ . ಕಣ್ಮನ ಸೆಳೆಯುವ ದೃಶ್ಯಾವಳಿ. ಹಸೂಗೂಸುಗಳ ಚಿಲಿಪಿಲಿ ಸದ್ದು. ವೃದ್ಧರ ಮತ್ತು ಮಧ್ಯವಯಸ್ಕರ ಮನೆವಾರ್ತೆ ಸಲ್ಲಾಪಗಳು. ಪುರುಷರ ರಾಜಕೀಯ ಚರ್ಚೆಗಳು. ಕಿಶೋರರು ಮೊಬೈಲ್ ಗೇಮ್ ಗಳಲ್ಲಿ ಮಗ್ನರಾಗಿದ್ದಾರೆ. ಒಟ್ಟಾರೆ ಗಮನಿಸಿದಾಗ ಜೀವನದ ಮಜಲುಗಳನ್ನು ತೋರಿಸುವ ದರ್ಪಣದಂತೆ ಈ ‘ಸಾಲು’ (ಕ್ಯೂ) . ಸರದಿಯಲ್ಲಿ ನಿಂತು ಬದುಕಿನ ಪರಿವೀಕ್ಷಣೆ ಮಾಡಿದ ನಂತರ ಅಂತಿಮವಾಗಿ ತಾಯಿಯ ದರ್ಶನ ಭಾಗ್ಯ ಲಭಿಸುವುದು. ಸಾಲು ನಿರ್ವಹಣೆ ಮಾಡುವ ಸ್ವಯಂ ಸೇವಕನಿದ್ದಾನೆ. ಇಲ್ಲಿ ಸೂಚ್ಯವಾಗಿ ; ಸಾಲು – ಜೀವನವಾದರೆ , ನಿಯಂತ್ರಕ – ನಮ್ಮ ಮನಸ್ಸು ,ಎಂತಲೂ ಪರಿಭಾವಿಸ ಬಹುದು. ಭಕ್ತಾದಿಗಳಿಗೆ ದೇವಿ ದರ್ಶನ ಪಡೆಯುವ ತವಕವಿದೆ.

ಆದ್ದರಿಂದ ಸಾಲುಗಟ್ಟಿ ಕಾಯುತ್ತಿದ್ದಾರೆ. ಎಲ್ಲರಿಗೂ ಅವರವರ ಗುರಿ ಮುಟ್ಟುವ ಕಾತರವಿದೆ. ಇಂಥದ್ದರಲ್ಲಿ ಸರದಿಯನ್ನು ತಪ್ಪಿಸಿ ನುಸುಳುವ ಮಹಾಶಯರೂ ಇದ್ದಾರೆ. ಇದರಿಂದಾಗಿ ಸರದಿಯಲ್ಲಿ ನಿಂತಿರುವವರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ವಾದ, ವಿವಾದಗಳಾಗುತ್ತವೆ. ಶಾಂತಿ ನೆಮ್ಮದಿಯನರಸಿ ಬಂದ ಸ್ಥಳದಲ್ಲಿ ಕ್ರೋಧಿತರಾಗಿ ನಮ್ಮ ಶಾಂತಿ, ನೆಮ್ಮದಿಯನ್ನು ವಿನಾಕಾರಣ ಹಾಳು ಮಾಡಿಕೊಳ್ಳುತ್ತೇವೆ. ನಿರ್ವಾಹಕರು ಸೂಚಿಸುತ್ತಿರುವಂತೆ ಎಲ್ಲರೂ ಸರದಿಯಲ್ಲಿ ನಿಲ್ಲುವುದಿಲ್ಲ . ಕೆಲವರು ಬೇಗನೆ ಹೋಗಬೇಕೆಂಬ ಹಟದಿಂದ ಮಧ್ಯದಲ್ಲಿ ನುಸುಳುತ್ತಾರೆ. “ಯಾಕೆ ಹೀಗೆ ಮಾಡುತ್ತಾರೆ? ಎಲ್ಲರಿಗೂ ಅವಕಾಶ ಸಿಕ್ಕೇ ಸಿಗುತ್ತದೆ, ಎಲ್ಲರದೂ ಸರದಿ ಬರುತ್ತದೆ” ಎಂಬ ನಿರ್ವಾಹಕರ ಮಾತು ಕೇಳಿಸುವದಿಲ್ಲ. ಕೆಲವರಿಗೆ ತಾಳ್ಮೆ ಕಡಿಮೆ . ಇಂತಹವರು ಕೆಲವೊಂದನ್ನು ನಮ್ಮ ಸುತ್ತಲಿನ ಪ್ರಕೃತಿಯಿಂದ ನೋಡಿ ತಿಳಿಯಬಹುದಲ್ಲವೆ ? ಉದಾಹರಣೆಗೆ ಇರುವೆಯ ಸಾಲು, ಆಕಾಶದಲ್ಲಿ ಹಕ್ಕಿಗಳ ಸಾಲು, ಇವು ಎಂದಾದರೂ ಸರದಿಯನ್ನು ಮೀರುವುದುಂಟೇ! ನಾನು,’ನಾನು ಮೊದಲು’ ಎನ್ನುವ ಭಾವ ಮನುಷ್ಯನಲ್ಲಿ ಹೆಚ್ಚಾಗಿದೆ . ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಮೊದಲು ನಾನಾಗಬೇಕು ಎನ್ನುವ ಆಸೆ. ರೈಲ್ವೆನಿಲ್ದಾಣ, ಮಾಲ್, ಏರ್ಪೋರ್ಟ್, ಟ್ರಾಫಿಕ್ ನಲ್ಲಿ ಕೂಡ ಯಾರೂ ಸಾಲಿನಲ್ಲಿ ನಿಂತು ಕಾಯುವುದಿಲ್ಲ . ಈಗ ಯಾರಿಗೂ ಕಾಯುವುದೇ ಬೇಡವಾಗಿದೆ. ಬಹುತೇಕ ಎಲ್ಲ ಕೆಲಸಗಳು ಆನ್ಲೈನ್ ಆಗಿಹೋಗುತ್ತವೆ .

ಬ್ಯಾಂಕು, ಪೋಸ್ಟು, ಟಿಕೆಟ್ ಕೌಂಟರ್ ಗಳಲ್ಲಿ ನಿಲ್ಲುವ ವ್ಯವಧಾನವೂ ಇಲ್ಲ.ಅವಶ್ಯಕತೆಯೂ ಇಲ್ಲ. ಒಂದು ರೀತಿ ತಾಂತ್ರಿಕವಾಗಿ ನಾವು ಮುಂದುವರಿದ ಹಾಗೆ , ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಹಿಂದುಳಿಯುತ್ತಿಲ್ಲವೆ? ಟಿ.ವಿ ,ಕಂಪ್ಯೂಟರ್ , ಮೊಬೈಲ್ ಇವುಗಳಿಂದ ದೈಹಿಕವಾದ ಚಟುವಟಿಕೆಗಳೇ ಕುಂಠಿತವಾಗಿವೆ ! ಸಹಕಾರ ಮನೋಭಾವದಿಂದ ದೂರ ಉಳಿಯುತ್ತಿದ್ದೇವೆ. ಕೇವಲ ಅವಕಾಶಗಳ ಹಪಹಪಿಕೆ. ಅವಸರದ ಜೀವನ, ಆತುರಾತುರವಾಗಿ ಎಲ್ಲ ಕೆಲಸ ಮುಗಿಸುವ ಚಟವೋ ……..ಹಟವೋ …. ಬೆಳೆಯುತ್ತಿದೆ !

ಇದಕ್ಕೆ ನಮ್ಮ ಪಂಪಭಾರತದಲ್ಲಿ ( 10,25) ಯುದ್ಧದಲ್ಲಿ ಪಟ್ಟಗಟ್ಟುವ ಸಲುವಾಗಿ ನಡೆಯುವಂಥ ಭೀಷ್ಮ ಕರ್ಣರ ಸಂವಾದ ಅರ್ಥಪೂರ್ಣವೆನಿಸುತ್ತದೆ . ಜ್ಞಾನವಂತರೂ, ವಿವೇಕಿಗಳೂ ಹಾಗೂ ವಯೋವೃದ್ಧರೂ ಆದ ಭೀಷ್ಮರು ಕರ್ಣನ ಮಾತಿಗೆ “ಸೂಳ್ ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್” ( ಸೂೞ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್| ) ಎಂದು ಮಾರ್ಮಿಕವಾಗಿ ನುಡಿಯುತ್ತಾರೆ. ಸರದಿ ಪ್ರತಿಯೊಬ್ಬರಿಗೂ ಬಂದೇ ಬರುತ್ತದೆ. ಆ ಸರದಿಯಿಂದ ಯಾರೂ ಕೂಡ ತಪ್ಪಿಸಿಕೊಳ್ಳಲಾರರು. ಕರ್ಣ ದುರ್ಯೋಧನನನ್ನು ಕುರಿತು ” ಮುದುಕರಾಗಿರುವ ಭೀಷ್ಮರಿಗೆ ಯುದ್ಧ ಪಟ್ಟವನ್ನು ಕಟ್ಟುವ ಬದಲು ನನಗೆ ಪಟ್ಟ ಕಟ್ಟು , ಹಗೆಯವರಾದ ಪಾಂಡವರಿಗೆ ಸೋಲಿನ ರುಚಿ ತೋರಿಸುವದಾದರೆ ಇದು ಅಗತ್ಯ ಎನ್ನುತ್ತಾನೆ.” ಆಗ ಭೀಷ್ಮ ರು “ಯುದ್ಧಭೂಮಿಯಲ್ಲಿ ಹೋರಾಡುವ ಸರದಿ ನಿನಗೂ ಬರುತ್ತದೆ, ಅದಕ್ಕೆ ಕಾಯಬೇಕು” ಎನ್ನುತ್ತಾರೆ.

‘ಸೂಳ್’ ಎಂದರೆ ಸರದಿ ಎಂದು ಅರ್ಥ. ಕಾವ್ಯಮೀಮಾಂಸೆ ಪ್ರಕಾರ ಮಹಾಕವಿಗಳ ವಾಚ್ಯಾರ್ಥಕ್ಕಿಂತ ಬೇರೆಯಾಗಿಯೇ ಅರಿವಿಗೆ ಬರುವ ಧ್ವನ್ಯಾರ್ಥ ಇದರಲ್ಲಿದೆ .ಇದಕ್ಕೆ ಪ್ರತೀಯಮಾನ ಎನ್ನುವರು. . ‘ ಈ ಮಹಾಯುದ್ಧದಲ್ಲಿ ನಿನಗೂ ಸರದಿ ದೊರೆಯುವುದು ಕಾಣಯ್ಯ’ ಎಂದು ಭರವಸೆ ಹೇಳಿದ್ದಕಷ್ಟೆ ಇಲ್ಲಿ ವಾಚ್ಯಾರ್ಥ ಮುಗಿಯಿತು. ಆದರೆ ಭೀಷ್ಮನ ಮನಸ್ಸಿನಲ್ಲಿದ್ದ ಎಲ್ಲಾ ಅರ್ಥ ಮುಗಿಯಲಿಲ್ಲ. ಮಹಾಯುದ್ಧದಲ್ಲಿ ನಮಗೆ ಸಿಗುವುದು ವಿಜಯವಲ್ಲ ನಾವೆಲ್ಲ ಒಬ್ಬರಾದ ಮೇಲೆ ಒಬ್ಬರು ಪತನವಾಗುವುದು ಖಚಿತ , ಎನ್ನುವ ಗೂಡಾರ್ಥವನ್ನು ಕಾಣುತ್ತೇವೆ.

‘ಸೂಳ್’ ಎಂಬ ಪದದ ಪ್ರಯೋಗದಿಂದ ಅರ್ಥ ಹೊರಡುವ ಸ್ವಾರಸ್ಯವು, ಯುದ್ಧವೆಂದರೆ ಬದುಕಿನ ಯುದ್ಧ ಎಂತಲೂ ಆಗಬಹುದು . ಸರದಿ ಎಂಬ ಪದ ಇಡೀ ಬದುಕಿಗೆ ಅನ್ವಯವಾಗುವಂಥದ್ದು ; ಶೈಶವ, ಬಾಲ್ಯ ,ಕಿಶೋರಾವಸ್ಥೆ, ಯೌವ್ವನ , ಮುಪ್ಪು ಮತ್ತು ಸಾವು ಸರದಿಯಲ್ಲಿ ಬಂದೇ ಬರುತ್ತವೆ. ಇದರೊಂದಿಗೆ ಹಗಲು-ರಾತ್ರಿ, ಸೋಲು -ಗೆಲವು ,ನೋವು -ನಲಿವು, ಸಿಹಿ-ಕಹಿ,ಬಾಳಿನಲ್ಲಿ ಅನಿವಾರ್ಯ. ಇದು ಜಗದ ನಿಯಮ! ಅದಕ್ಕೆಲ್ಲಾ ನಾವು ತಯಾರಿರಬೇಕು ಎಂಬ ಧ್ವನಿಯೂ ಇಲ್ಲಿ ವ್ಯಕ್ತವಾಗುತ್ತದೆ.

ಜೀವನದಲ್ಲಿ ಎಲ್ಲರಿಗೂ ಅವಕಾಶ ಸಿಕ್ಕೇ ಸಿಗುತ್ತದೆ. ಅದು ನಮಗೆ ದಕ್ಕಿದಾಗ ವ್ಯರ್ಥ ಮಾಡದೆ, ಸದುಪಯೋಗ ಮಾಡಿಕೊಳ್ಳಬೇಕು. ಬದುಕನ್ನು ಸಾರ್ಥಕ ಗೊಳಿಸುವ ನಿಟ್ಟಿನಲ್ಲಿ ಭೀಷ್ಮರು ಹೇಳುವ ಮಾತು ಔಚಿತ್ಯಪೂರ್ಣವಾಗಿದೆ. ಸರದಿ ಎಂಬ ಪದ ಸಂಕೇತಿಕವಾಗಿ ನೋಡಿದರೆ ಸಾರ್ವಕಾಲಿಕವೆನಿಸುವಂಥದ್ದು. ಜನನ ಮತ್ತು ಮರಣ ಪ್ರಕೃತಿಯ ಕಟುಸತ್ಯ. ಶಾಶ್ವತವಲ್ಲದ ಈ ಜೀವನದಲ್ಲಿ ಅನ್ಯ ವಿಷಯಕ್ಕೆ ಬಗೆಸೋಲದೆ ಸತ್ಕರ್ಮಗಳಲ್ಲಿ ತೊಡಗಬೇಕು . ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಪೂರೈಸಿಕೊಳ್ಳಬೇಕು. ಜೀವನದ ಪ್ರತಿಯೊಂದು ಮಜಲುಗಳನ್ನು ಯಥಾವತ್ತಾಗಿ ಅನುಭವಿಸಲು ಅವಕಾಶ ಇದ್ದೇ ಇರುತ್ತದೆ. ಅತಿಯಾದ ಲೌಕಿಕ ಭೋಗಗಳಿಗೆ ನಮ್ಮ ಸಮಯವನ್ನು ವ್ಯಯ ಮಾಡದೆ ಸನ್ಮಾರ್ಗದಲ್ಲಿ ನಡೆಯಬೇಕು . ಅಳಿದ ಮೇಲೂ ಉಳಿಯುವಂತಹ ಜೀವನ ನಮ್ಮದಾಗಿರಬೇಕು.

(ಆಕರ ಗ್ರಂಥ- ಪಂಪಭಾರತ – ಎನ್. ಅನಂತರಂಗಾಚಾರ್ ಮತ್ತು ಭಾರತೀಯ ಕಾವ್ಯ ಮೀಮಾಂಸೆ – ತೀ.ನಂ . ಶ್ರೀಕಂಠಯ್ಯ)

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter