ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಉಪದೇಶ

ನಮ್ಮ ದೇಶದಲ್ಲಿ ಉಪದೇಶ ನೀಡುವವರು ತುಂಬ ಜನ. ಉಪದೇಶ ಪಡೆಯುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಉಪದೇಶ ನೀಡುವುದು ಮತ್ತು ಪಡೆಯುವುದು ಭಾರತೀಯರಲ್ಲಿ ರಕ್ತಗತವಾಗಿ ಬಂದಿದೆ. ಉಪದೇಶ ಸಂಪೂರ್ಣ ಉಚಿತವಾಗಿರುವುದರಿಂದ ಯಾರು ಬೇಕಾದರೂ ಉಪದೇಶ ನೀಡಬಹುದು ಎಂಬಂತಾಗಿದೆ. ಕೆಲವರು ಉಪದೇಶವನ್ನು ಕೇಳಿ ಮರೆತು ಬಿಡುತ್ತಾರೆ. ಇನ್ನೂ ಕೆಲವರು ಉಪದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಒಳ್ಳೆಯ ಉಪದೇಶವಾದರೆ ತೊಂದರೆಯಿಲ್ಲ, ಅದನ್ನು ಪಡೆದವನಿಗೆ ಒಳ್ಳೆಯದಾದರೆ, ಅದನ್ನು ನೀಡಿದವನಿಗೆ ಗೌರವ ಲಭಿಸುತ್ತದೆ. ಕೆಟ್ಟ ಉಪದೇಶವಾದರೆ ಅದನ್ನು ಪಡೆದವನಿಗೆ ತೊಂದರೆಯಾದರೆ, ಅದನ್ನು ನೀಡಿದವನಿಗೆ ಮಾತ್ರ ಅಪಾಯ ತಪ್ಪಿದ್ದಲ್ಲ!

ನಮ್ಮ ದೇಶದಲ್ಲಿ ವಿದ್ಯಾರ್ಥಿಗಳಿಗೆ ಉಪದೇಶದ ಉಪಟಳ ಬಹಳ. ಪಾಲಕರು, ಶಿಕ್ಷಕರು, ಹತ್ತಿರದ ಬಂಧುಗಳು, ದೂರದ ಬಂಧುಗಳು, ನೆರೆಹೊರೆಯವರು ಸೇರಿದಂತೆ ಎಲ್ಲರೂ ಉಪದೇಶ ನೀಡುವವರೇ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಉಪದೇಶದ ಕಾಟ ಎಷ್ಟಿರುತ್ತದೆಂದರೆ ಅವರಿಗೆ ಒಮ್ಮೆ ಈ ಪರೀಕ್ಷೆಗಳು ಮುಗಿದು ಹೋದರೆ ಸಾಕು ಅನಿಸಿಬಿಟ್ಟಿರುತ್ತದೆ.

ನನ್ನ ಹಿರಿಯ ಮಿತ್ರ ಡಾ.ನಾಗರಾಜನಿಗೆ ಈಗಲೂ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ದಿನಗಳ ನೆನಪಾದರೆ ಕಣ್ಣಲ್ಲಿ ನೀರು ಬರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಅವನಿಗೆ ಎಷ್ಟು ಮಂದಿ, ಎಷ್ಟು ವಿಧದಲ್ಲಿ ಉಪದೇಶ ನೀಡಲು ಸಾಧ್ಯವೋ ಅಷ್ಟು ವಿಧದಲ್ಲಿ ಉಪದೇಶ ನೀಡಿದ್ದರು. ಬೆಳಿಗ್ಗೆ ಹಾಲು ತರಲು ಹೋದಾಗ ಹಾಲಿನಂಗಡಿಯ ಗಂಗಾಧರ, “ಅಭ್ಯಾಸ ಹೆಂಗ ನಡೆದದs ನಾಗರಾಜ, ಎಸ್.ಎಸ್.ಎಲ್.ಸಿ. ಇದ್ದೀ ಫಸ್ಟ್ ಕ್ಲಾಸ್ ಬರಬೇಕಪಾs…” ಎಂದು ಉಪದೇಶಿಸುತ್ತಿದ್ದ. ಸಂಜೆ ಕಿರಾಣಿ ಅಂಗಡಿಗೆ ಸಾಮಾನು ತರಲು ಹೋದಾಗ ಅಂಗಡಿ ಮಾಲೀಕ ಆಂಜನಪ್ಪ ಒಂದು ಮುಟಗಿ ಪುಟಾಣಿ ತಿನ್ನಲು ಕೊಟ್ಟು, “ನಾಗರಾಜ, ಈ ಸಲ ಎಸ್.ಎಸ್.ಎಲ್.ಸಿ. ಪರೀಕ್ಷಾದಾಗs ತಾಲೂಕಿಗೇ ನಂಬರ್ ಹಚ್ಚಬೇಕಪಾs…” ಎಂದು ಬೋಧಿಸುತ್ತಿದ್ದ.

ನಾಗರಾಜ ತನ್ನ ತಾಯಿಯ ಜೊತೆಗೆ ದೂರದ ಬಂಧುವೊಬ್ಬರ ಮದುವೆಗೆ ಬಳ್ಳಾರಿಗೆ ಹೋಗಿದ್ದ. ದೂರದ ಸಂಬಂಧದ ಅತ್ತೆಯೊಬ್ಬಳು ನಾಗರಾಜನ ತಲೆಯ ಮೇಲೆ ಮಮತೆಯಿಂದ ಕೈಯಾಡಿಸಿ, “ಎಷ್ಟು ಬೆಳೆದುಬಿಟ್ಟಿಯಲ್ಲೋ ರಾಜಾs ನಾನು ನೋಡಿದಾಗ ಭಾಳ ಸಣ್ಣವ ಇದ್ದೀ…” ಎಂದು ಪ್ರೀತಿ ತೋರಿಸಿದಳು. ಅವಳ ಗಂಡ ಮಾತ್ರ ನಾಗರಾಜ ಎಸ್.ಎಸ್.ಎಲ್.ಸಿ. ಓದುತ್ತಿದ್ದಾನೆಂದು ತಿಳಿದು ಹುಬ್ಬು ಗಂಟಿಕ್ಕಿದರು. ನಾಗರಾಜನನ್ನು ಪಕ್ಕಕ್ಕೆ ಕರೆದು, “ಲೇ ನಾಗರಾಜ, ಇನ್ನು ಮೂರು ತಿಂಗಳಾದಾಗ ಪರೀಕ್ಷಾ ಅದಾವು. ಅಂತಾದಾರೊಳಗ ನೀನು ಮದುವಿಗೆ ಬಂದು ಚೈನೀ ಹೋಡಿಯಾಕತ್ತಿದ್ದಿs. ಹಿಂಗಾದರ ನೀನು ಪರೀಕ್ಷಾ ಪಾಸಾಗೂದು ಹೆಂಗs? ನಿನಗ ನೌಕರಿ ಸಿಗೂದು ಹೆಂಗs? ಮುಂದ ನಿನಗ ಕನ್ಯಾ ಯಾರು ಕೊಡ್ತಾರs?” ಎಂದು ಒಂದೂ ಕಾಲು ಗಂಟೆ ಉಪದೇಶ ನೀಡಿದ. ಅಂದು ನಾಗರಾಜನಿಗೆ ಈ ದೂರದ ಮಾವನನ್ನು ಕೊಂದು ಹಾಕುವಷ್ಟು ಸಿಟ್ಟು ಬಂದಿತ್ತು ಆದರೆ ಅತ್ತೆ ಮತ್ತು ಅವಳ ಸುಂದರಿಯಾದ ಮಗಳು ರೇಣುಕಳ ಮುಖ ನೋಡಿ ಅವನಿಗೆ ಜೀವದಾನ ಮಾಡಿದ!

ಅಕ್ಟೋಬರ್ ತಿಂಗಳ ರಜೆಯಲ್ಲಿ ಒಂದು ದಿನ ನಾಗರಾಜ ಸಂಗನಗೌಡನ ಹಿತ್ತಲಲ್ಲಿ ಕ್ರಿಕೆಟ್ ಆಡುತ್ತಿದ್ದ. ಇವನು ಬ್ಯಾಟಿಂಗ್ ಮಾಡುವಾಗ ಸಂಗನಗೌಡನ ಮಗಳು ದಿವ್ಯ ಮಹಡಿಯ ಮೇಲೆ ಗೆಳತಿಯರೊಂದಿಗೆ ಕುಂಟಾಬಿಲ್ಲೆ ಆಡುತ್ತಿದ್ದಳು. ನಡುವೆ ಒಂದೆರಡು ಬಾರಿ ದಿವ್ಯ ನಾಗರಾಜನನ್ನು ನೋಡಿ ಮುಗುಳ್ನಗೆ ಚೆಲ್ಲಿದಳು. ಅವಳ ಮುಗುಳ್ನಗೆಯಿಂದ ಉತ್ತೇಜಿತನಾದ ನಾಗರಾಜ ತುಂಬ ಉತ್ಸಾಹದಿಂದ ಬ್ಯಾಟ್ ಬೀಸತೊಡಗಿದ. ಅಂದು ಕೇವಲ ಹದಿನೇಳು ಎಸೆತಗಳಲ್ಲಿ ಮೂವತ್ತೆಂಟು ರನ್ನು ಬಾರಿಸಿ ತಮ್ಮ ಬೆಂಕಿ ಬಾಯ್ಸ್ ಟೀಮು ಗೆಲ್ಲುವಂತೆ ಮಾಡಿದ. ದುರ್ದೈವಶಾತ್ ನಾಗರಾಜನಿಗೆ ಟೀಮಿನ ಗೆಲುವು ಮತ್ತು ದಿವ್ಯಳ ಒಲವು ದೊರೆತ ಸಂತೋಷ ತುಂಬ ಕಾಲ ಉಳಿಯಲಿಲ್ಲ.

ಸಂಗನಗೌಡನ ಹಿತ್ತಲ ದಾರಿಯಲ್ಲಿ ಸಂತೆ ಮುಗಿಸಿ ಹೊರಟಿದ್ದ ಚಂದ್ರಣ್ಣನಿಗೆ ನಾಗರಾಜ ಉತ್ಸಾಹದಿಂದ ಬ್ಯಾಟ್ ಮಾಡುವುದೂ, ನಡುವೆ ದಿವ್ಯ ಮುಗುಳ್ನಕ್ಕು ಪ್ರೋತ್ಸಾಹಿಸುವುದೂ ನೋಡಿ ತುಂಬ ಕಸಿವಿಸಿಯಾಯಿತು. ಅವನಿಗೆ ಮೂವತ್ತು ಕಳೆದರೂ ಎಲ್ಲೂ ಕನ್ಯೆ ಸಿಕ್ಕಿರಲಿಲ್ಲ. ಮದುವೆಯಿಲ್ಲದೇ ಕಂಗಾಲಾದ ಅವನಿಗೆ ಹರೆಯದ ಹುಡುಗ-ಹುಡುಗಿಯರು ಸಲುಗೆಯಿಂದಿರುವುದನ್ನು ನೋಡಿದರೆ ಹೊಟ್ಟೆಯಲ್ಲಿ ಖಾರ ಕಲಸಿದಂತಾಗುತ್ತಿತ್ತು. ಅವನು ಮನೆಯಲ್ಲಿ ಸಂತೆಯ ಚೀಲವಿಟ್ಟು, ಚಹ ಸಹ ಕುಡಿಯದೇ ನಾಗರಾಜನ ಮನೆಗೆ ಹೋದ. ಅವನ ತಂದೆ-ತಾಯಿಗೆ, “ಎಸ್.ಎಸ್.ಎಲ್.ಸಿ. ಓದೂs ನಾಗರಾಜ ಕ್ರಿಕೆಟ್ ಆಡಕೋತs ಹುಡುಗಿ ನೋಡಕೋತs ಟೈಮು ಹಾಳು ಮಾಡಕತ್ಯಾನs. ಇಷ್ಟು ಶಾಣ್ಯಾ ಹುಡುಗ ಹಿಂಗs ಹಾಳಾಗೂದು ನೋಡಲಾರದs, ಇದನ್ನ ಹೇಳಬೇಕಂತನs ಸಂತ್ಯಾಗಿಂದ ಮನಿಗೆ ಬಂದವ, ಚಾ ಸೈತ ಕುಡೀಲಾರದs ಇಲ್ಲಿಗೆ ಬಂದೀನಿ ನೋಡ್ರಿ ಮಾವಾs…” ಎಂದು ನಾಗರಾಜನ ಹಿತೈಷಿಯೆಂಬಂತೆ ಮಾತಾಡಿದ.

ನಾಗರಾಜನ ತಂದೆ-ತಾಯಿ ಚಂದ್ರಣ್ಣನ ಮಾತು ಕೇಳಿ ಹೌಹಾರಿದರು. ಮಗನ ಒಳಿತನ್ನು ಬಯಸಿ ಮನೆಗೆ ಬಂದು ವಿಷಯ ತಿಳಿಸಿದ ಚಂದ್ರಣ್ಣನ ಒಳ್ಳೆಯತನವನ್ನು ಹೊಗಳಿದರು. ಚಂದ್ರಣ್ಣನಿಗೆ ರುಚಿಕರವಾದ ತರಕಾರಿ ಉಪ್ಪಿಟ್ಟು ಮತ್ತು ಶುಂಠಿ ಚಹವನ್ನು ಕೊಟ್ಟು ಸತ್ಕರಿಸಿದರು. ಅವನು ನಾಗರಾಜನ ಪ್ರೇಮಭಂಗ ಮಾಡಿದ ಸಮಾಧಾನದೊಂದಿಗೆ ಮನೆಗೆ ಹಿಂದಿರುಗಿದ.

ಅಂದು ಸಂಜೆ ತುಂಬ ಖುಷಿಯಲ್ಲಿ ಹ್ಯಾಟ್ರಿಕ್ ಹೀರೊ ಶಿವಣ್ಣನ ‘ಸಿಂಹದ ಮರಿ’ ಸಿನಿಮಾದ ಹಾಡೊಂದನ್ನು ಗುನುಗುತ್ತಾ ಮನೆಗೆ ಬಂದ ನಾಗರಾಜನಿಗೆ ಮನೆಗೆ ಕಾಲಿಟ್ಟೊಡನೆ ಅವನ ತಂದೆ ಕೆನ್ನೆಗೊಂದು ಬಾರಿಸಿದರು. ನಾಗರಾಜ ಅಳುಮುಖ ಮಾಡಿಕೊಂಡು, “ಅವ್ವಾs ನೋಡು ಅಪ್ಪ ನನಗs ಸುಮ್ಮನ ಹೊಡಿಯಾಕತ್ತಾನs…” ಎನ್ನುವಷ್ಟರಲ್ಲಿ ಅವನ ತಾಯಿ ಇನ್ನೊಂದು ಕೆನ್ನೆಗೆ ಬಾರಿಸಿದರು! ನಂತರ ಅವನ ತಂದೆ-ತಾಯಿ ಒಂದು ಗಂಟೆ ನಲವತ್ತೆರಡು ಮಿನಿಟುಗಳ ಕಾಲ ಅವನಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಹೆಚ್ಚಿನ ಅಂಕಗಳೊಂದಿಗೆ ಪಾಸಾಗುವುದು ಎಷ್ಟು ಮುಖ್ಯವೆಂದೂ, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಸಂಬಂಧಿಗಳ ಎದುರು ತಾವು ಹೇಗೆ ತಲೆ ತಗ್ಗಿಸಬೇಕಾಗುತ್ತದೆಂದೂ, ಒಳ್ಳೆಯ ಕೋರ್ಸು ಮಾಡದಿದ್ದರೆ ನೌಕರಿ ಸಿಗದೇ, ಕನ್ಯಾ ಸಿಗದೇ ಉಡಾಳ ಬಸ್ಯಾನಂತೆ ಆಗುವ ಪರಿಸ್ಥಿತಿ ಬರುತ್ತದೆಂದೂ ಸುದೀರ್ಘ ಉಪದೇಶ ನೀಡಿದರು.

ನಾಗರಾಜನಿಗೆ ಇದೆಲ್ಲ ಆಗಿದ್ದು ಚಂದ್ರಣ್ಣನ ಉಪದೇಶದ ಪ್ರಭಾವದಿಂದ ಎಂದು ತಿಳಿದು ಅವುಡುಗಚ್ಚಿದ. ಎಲ್ಲಿ ಹೋದರೂ ಬೆಂಬತ್ತಿದ ಬೇತಾಳದಂತೆ ಕಾಡುವ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಅವನು ಒಂದು ಸವಾಲಾಗಿ ಸ್ವೀಕರಿಸಿದ. ತುಂಬ ಕಷ್ಟಪಟ್ಟು ಅಭ್ಯಾಸ ಮಾಡಿ, ಚೆನ್ನಾಗಿ ಪರೀಕ್ಷೆ ಬರೆದ. ಫಲಿತಾಂಶ ಬಂದಾಗ ಅವನಿಗೆ ತುಂಬ ಸಂತೋಷವಾಯಿತು. ಪರೀಕ್ಷೆಯಲ್ಲಿ ಅವನು ಶೇಕಡ ಎಂಬತ್ತೇಳರಷ್ಟು ಅಂಕ ಗಳಿಸಿದ್ದ. ದುರ್ದೈವಶಾತ್ ಅವನ ಮನೆಯವರು ಮತ್ತು ಬಂಧು-ಬಳಗಕ್ಕೆ ಈ ಫಲಿತಾಂಶದಿಂದ ಸಂತೋಷವಾಗಲಿಲ್ಲ! ನಾಗರಾಜ ಶೇಕಡ ತೊಂಬತ್ತರಷ್ಟು ಅಂಕ ಗಳಿಸಲು ಏಕೆ ಸಾಧ್ಯವಾಗಲಿಲ್ಲ ಎಂಬ ಪರಾಮರ್ಶೆ ನಡೆಯತೊಡಗಿತು. ಅವನಿಗೆ ಉಪದೇಶ ನೀಡಿದ ಹಲವರು, “ಇರಲಿ ಬಿಡಲೇ ನಾಗರಾಜ, ಎಸ್.ಎಸ್.ಎಲ್.ಸಿ.ಗಿಂತ ಪಿ.ಯು.ಸಿ. ಭಾಳ ಮುಖ್ಯ ಅದs, ಅಲ್ಲಿ ನೈಂಟಿ ಪರ್ಸೆಂಟ್ ಮಾಡಾಕs ಬೇಕು ನೋಡು…” ಎಂದು ಮತ್ತೆ ಉಪದೇಶ ನೀಡಲು ಶುರು ಮಾಡಿದರು.

ನಾಗರಾಜ ಉಪದೇಶ ನೀಡುವವರ ಕಾಟ ತಾಳಲಾರದೇ ತಮ್ಮ ಊರಿನಲ್ಲಿ ಸಾಕಷ್ಟು ಸೈನ್ಸು ಕಾಲೇಜುಗಳಿದ್ದರೂ ಕೂಡ ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿಗೆ ಬಂದು ಸೇರಿದ. ಅವನು ರಜೆಯಲ್ಲಿ ಊರಿಗೆ ಹೋದಾಗ ಉಪದೇಶ ನೀಡುವವರು ಆಗಾಗ ಅಟಕಾಯಿಸಿಕೊಳ್ಳುತ್ತಿದ್ದರು. ಇಂತಹ ಎಲ್ಲ ಅಡೆ ತಡೆಗಳನ್ನು ಮೀರಿ ಅವನು ರಸಾಯನಶಾಸ್ತ್ರದಲ್ಲಿ ಸಂಶೋಧನೆ ಮಾಡಿ ಪಿ.ಎಚ್.ಡಿ. ಪಡೆದಿದ್ದಾನೆ. ಸದ್ಯ ರಸಾಯನಶಾಸ್ತ್ರ ಉಪನ್ಯಾಸಕನಾಗಿರುವ ಡಾ.ನಾಗರಾಜ ತನ್ನ ವಿದ್ಯಾರ್ಥಿಗಳಿಗೆ ಉಪದೇಶ ನೀಡುವ ಮೂಲಕ ಭೂತಕಾಲದ ಉಪದೇಶ ಸಂಬಂಧೀ ಕಹಿ ನೆನಪುಗಳನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾನೆ!

ನನ್ನ ಮತ್ತೊಬ್ಬ ಮಿತ್ರ ಪ್ರವೀಣ ಚಿಕ್ಕಮಠನಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡ ಎಪ್ಪತ್ತೈದರಷ್ಟು ಅಂಕಗಳು ಬಂದವು. ಅಷ್ಟು ಅಂಕಗಳು ಬಂದರೂ ಅವನಿಗೆ ಗಣಿತ ಮತ್ತು ವಿಜ್ಞಾನದಲ್ಲಿ ಅಷ್ಟೊಂದು ಆಸಕ್ತಿಯಾಗಲೀ, ಜಾಣತನವಾಗಲೀ ಇರಲಿಲ್ಲ. ಪ್ರವೀಣ ತನ್ನ ಏರಿಯಾದಲ್ಲಿ ಉಚಿತ ಉಪದೇಶ ನೀಡುತ್ತ ಮಾಸ್ಟರ್ ಮೈಂಡ್ ಎಂದೇ ಖ್ಯಾತಿ ಪಡೆದ ಮಂಜುಮಾಮಾನ ಬಳಿ ಯಾವ ಕೋರ್ಸಿಗೆ ಸೇರಬೇಕೆಂದು ಸಲಹೆ ಕೇಳಿದ. ಮಂಜುಮಾಮಾ ಜ್ಯೋತಿಷಿ ಜಾತಕ ನೋಡಿ ಭವಿಷ್ಯ ಹೇಳುವವನಂತೆ ಇವನ ಅಂಕಪಟ್ಟಿ ನೋಡಿ, “ಅಳಿಯ, ನೀನು ವಿಜ್ಞಾನ ವಿಭಾಗಕ್ಕೆ ಸೇರು. ನಿನಗೆ ಉಜ್ವಲ ಭವಿಷ್ಯವಿದೆ!” ಎಂದು ಹೇಳಿದ.

ಪ್ರವೀಣನಿಗೆ ತನ್ನ ಟ್ಯೂಶನಮೇಟಾದ ಸುಂದರಿ ಸೌಮ್ಯ ವಿಜ್ಞಾನ ವಿಭಾಗಕ್ಕೆ ಸೇರುತ್ತಿರುವುದರಿಂದ ತಾನೂ ಕೂಡ ಸೇರಬೇಕೆಂಬ ಆಸೆಯಿತ್ತು. ಈಗ ಮಂಜುಮಾಮಾನ ಪ್ರೋತ್ಸಾಹವೂ ದೊರೆತಿತ್ತು. ಅವನು ತುಂಬ ಉತ್ಸಾಹದಿಂದ ಕಾಲೇಜು ಸೇರಿದ. ಪಿ.ಸಿ.ಎಂ.ಬಿ. ಕಾಂಬಿನೇಶನ್ ಮತ್ತು ಅದರ ಸಿಲೆಬಸ್ ನೋಡಿ ಅವನಿಗೆ ತಲೆ ತಿರುಗಿ ಬೀಳುವಂತಾಯಿತು. ಸೌಮ್ಯ ಮತ್ತು ಮಂಜುಮಾಮಾರಿಗೆ ಮನಸ್ಸಿನಲ್ಲೇ ಶಪಿಸಿದ. ಮುಂದೆ ಅವನಿಗೆ ವಿಜ್ಞಾನ ವಿಷಯ ಓದುವುದೇ ಕಷ್ಟವಾಯಿತು. ಹತ್ತು ಹಲವು ದೇವರಿಗೆ ಹರಕೆ ಹೊತ್ತು, ತುಂಬ ಕಷ್ಟದಿಂದ ಪಾಸ್ ಕ್ಲಾಸಿನಲ್ಲಿ ಪಾಸಾಗುವಷ್ಟರಲ್ಲಿ ಅವನಿಗೆ ಸಾಕಾಗಿ ಹೋಗಿತ್ತು.

ರಿಸಲ್ಟ್ ಬಂದ ನಂತರ ಮಾಸ್ಟರ್ ಮೈಂಡ್ ಮಂಜುಮಾಮಾ ಪ್ರವೀಣನಿಗೆ ಬಿ.ಎಸ್.ಸಿ. ಮಾಡಬೇಕೆಂದು ಪುಕ್ಕಟೆ ಸಲಹೆ ನೀಡಿದ. ಈ ಸಲಹೆಯಿಂದ ಪ್ರವೀಣನಿಗೆ ಎಷ್ಟು ಕೋಪ ಬಂತೆಂದರೆ ಅವನು ಮಂಜುಮಾಮಾನ ಕಪಾಳಕ್ಕೆ ಒಂದು ತಪರಾಕಿ ಕೊಟ್ಟ. ಪ್ರವೀಣ ಸೌಮ್ಯಳ ಆಕರ್ಷಣೆ ಮತ್ತು ಮಂಜುಮಾಮಾನ ಉಪದೇಶವನ್ನೂ ಮೀರಿ ಕನ್ನಡದಲ್ಲಿ ಬಿ.ಎ., ಬಿ.ಇಡಿ. ಮಾಡಿ ಕನ್ನಡ ಶಿಕ್ಷಕನಾದ. ಮುಂದೆ ಮೂರ್ನಾಲ್ಕು ವರ್ಷಗಳ ನಂತರ ಅವನು ಬಿ.ಎಸ್.ಸಿ., ಬಿ.ಇಡಿ. ಮಾಡಿ ವಿಜ್ಞಾನ ಶಿಕ್ಷಕಿಯಾದ ತನ್ನ ಹಳೆಯ ಪ್ರೇಮಿ ಸೌಮ್ಯಳನ್ನೇ ಮದುವೆಯಾದ.

ಇನ್ನು ಗಮನಿಸಬೇಕಾದ ಅಂಶವೆಂದರೆ ಸೌಮ್ಯ ಮತ್ತು ಪ್ರವೀಣ ಇಬ್ಬರ ಮನೆಯವರಿಗೂ ಸಾಕಷ್ಟು ಉಪದೇಶ ನೀಡಿ ಇವರಿಬ್ಬರ ವಿವಾಹ ಮಾಡಿಸಿದವನು ಮಾಸ್ಟರ್ ಮೈಂಡ್ ಮಂಜುಮಾಮಾ! ಸೌಮ್ಯ ಮತ್ತು ಪ್ರವೀಣ ಮದುವೆಯಾಗಿ ತಕ್ಕಮಟ್ಟಿಗೆ ಸುಖವಾಗಿಯೇ ಇದ್ದಾರೆ. ಮಂಜುಮಾಮಾ ಮಾತ್ರ ಇತ್ತೀಚೆಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಹುಡುಗರಿಗೆ ಉಪದೇಶ ನೀಡುವುದನ್ನು ಬಿಟ್ಟಿದ್ದಾನೆ. ಓದುವ ಹುಡುಗರಿಗೆ ಉಪದೇಶ ನೀಡುವುದು ರಿಸ್ಕಿನ ಕೆಲಸ ಎಂಬುದು ಮಂಜುಮಾಮಾನ ಅಭಿಪ್ರಾಯ.

ವೀರ ಸಂಗಪ್ಪ ದಾವಣಗೆರೆಯಲ್ಲಿ ಮನೆಯೊಂದನ್ನು ಕಟ್ಟಿಸಲು ಶುರು ಮಾಡಿದ. ಅವನು ಮನೆ ಕಟ್ಟುವ ವಿಚಾರ ತಿಳಿದ ಹಿತೈಷಿಗಳು ಒಬ್ಬೊಬ್ಬರಾಗಿ ಬಂದು ಉಪದೇಶ ಕೊಡತೊಡಗಿದರು. ಮನೆಗೆ ಬುನಾದಿ ಹಾಕುವಾಗಲೇ ಮೂರು ಬಾರಿ ಪ್ಲಾನು ಬದಲಾಯಿತು. ಅಡುಗೆ ಮನೆಯ ಜಾಗದಲ್ಲಿ ಬೆಡ್ ರೂಮು, ಬೆಡ್ ರೂಮಿರುವ ಜಾಗದಲ್ಲಿ ಸ್ಟೋರ್ ರೂಮು ಬಂದವು. ಒಬ್ಬ ಕಡಪಾ ಕಲ್ಲು ಉತ್ತಮ ಎಂದು ಹೇಳಿದರೆ, ಮತ್ತೊಬ್ಬ ತಾಂಡೂರು ಕಲ್ಲು ಅತ್ಯುತ್ತಮ ಎಂದು ಹೇಳಿದ. ಬೋರ್ ವೆಲ್ ವಾಯವ್ಯ ದಿಕ್ಕಿನಲ್ಲಿರಬೇಕೆಂದು ಒಬ್ಬ ಹೇಳಿದರೆ, ಅದು ನೈಋತ್ಯದಲ್ಲಿರಬೇಕು ಎಂದು ಮತ್ತೊಬ್ಬ ಹೇಳಿದ. ಹೀಗೆ ವೀರ ಸಂಗಪ್ಪ ಮನೆ ಕಟ್ಟಿಸುವಾಗ ಅಲ್ಲಿ ಓಡಾಡುವ ದಾರಿಹೋಕರೆಲ್ಲ ಬಂದು ತಮಗೆ ತಿಳಿದಂತೆ ಉಪದೇಶ ನೀಡತೊಡಗಿದರು.

ಒಬ್ಬ ಮಹಾಶಯನಂತೂ, “ಸಂಗಪ್ಪನವರೇ, ನೀವು ಮನೆ ಕಟ್ಟಿಸುತ್ತಿರುವ ಜಾಗದಲ್ಲಿ ಹಿಂದೊಮ್ಮೆ ಹಾವಿನ ಹುತ್ತವಿತ್ತು ಆದ್ದರಿಂದ ನಾಗಶಾಂತಿ ಮಾಡಿಸಬೇಕು. ಇಲ್ಲದಿದ್ದರೆ ನಾಗದೇವತೆಯ ಶಾಪದಿಂದ ನಿಮ್ಮ ಕುಟುಂಬ ಹಾಳಾಗುವುದು ನಿಶ್ಚಿತ ಕಣ್ರೀ…” ಎಂದು ಸರಿಯಾಗಿ ಹೆದರಿಸಿದ. ವೀರ ಸಂಗಪ್ಪ ನಾಗರ ಶಾಪಕ್ಕೆ ಹೆದರಿ ಮೂವತ್ತು ಸಾವಿರ ರೂಪಾಯಿ ಖರ್ಚು ಮಾಡಿ ನಾಗಶಾಂತಿ ಮಾಡಿಸಿದ. ಹತ್ತು ಹಲವು ಜನರ ಉಪದೇಶ ಕೇಳಿ ಅದರಂತೆ ಮನೆ ಕಟ್ಟಿಸಿ ಮುಗಿಸುವಷ್ಟರಲ್ಲಿ ವೀರ ಸಂಗಪ್ಪ ಕಂಗಾಲಾಗಿ ಹೋಗಿದ್ದ.

ಇತ್ತೀಚೆಗೆ ವ್ಯಕ್ತಿತ್ವ ವಿಕಸನವೆಂಬ ಪದಕ್ಕೆ ಸಮಾನಾರ್ಥಕವಾಗಿ ಉಪದೇಶವೆಂಬ ಪದ ಬಳಕೆಯಾಗುತ್ತಿದೆ. ವ್ಯಕ್ತಿತ್ವ ವಿಕಸನಕ್ಕೂ, ಉಪದೇಶಕ್ಕೂ ಈಗ ಯಾವುದೇ ಬೇಧ ಉಳಿದಿಲ್ಲ! ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಹವ್ಯಾಸಿ ಲೇಖಕ/ಕಿಯರು ವ್ಯಕ್ತಿತ್ವ ವಿಕಸನದ ಕುರಿತು ಉತ್ಸಾಹದಿಂದ ಬರೆಯುತ್ತಾರೆ. ಸ್ವಲ್ಪ ಜನ ವ್ಯಕ್ತಿತ್ವ ವಿಕಸನದ ಕುರಿತು ಭರ್ಜರಿ ಭಾಷಣ ಮಾಡುತ್ತಾರೆ. ಇನ್ನೂ ಕೆಲವರು ವ್ಯಕ್ತಿತ್ವ ವಿಕಸನದ ಕುರಿತು ವರ್ಷಕ್ಕೆ ಮೂರ್ನಾಲ್ಕು ಪುಸ್ತಕಗಳನ್ನು ಬರೆದು ಬಿಸಾಕುತ್ತಾರೆ. ಪತ್ರಿಕಾ ಬರಹ, ಭಾಷಣ ಮತ್ತು ಪುಸ್ತಕ ಯಾವುದೇ ಇರಲಿ, ವ್ಯಕ್ತಿತ್ವ ವಿಕಸನದ ಹೆಸರಿನಲ್ಲಿ ಉಪದೇಶ ನೀಡುವ ಕೆಲಸ ನಡೆಯುತ್ತದೆ. ಬೇಕಾದರೆ ಇದನ್ನು ಹಿತೋಪದೇಶ ಎಂದು ಧಾರಾಳವಾಗಿ ಕರೆಯಬಹುದು. ಹೀಗೆ ಉಪದೇಶ ನೀಡುವವರೆಲ್ಲ ಯೋಗ್ಯರಾಗಿರುವುದಿಲ್ಲ! ಅದೂ ಅಲ್ಲದೇ ಇಂತಹವರೆಲ್ಲ ವ್ಯಕ್ತಿತ್ವ ವಿಕಸನದ ಹೆಸರಿನಲ್ಲಿ ನೀಡುವ ಉಪದೇಶ ಸಹ ಕದ್ದ ಮಾಲು!

ತೆಲುಗಿನ ಜನಪ್ರಿಯ ಸ್ಟಾರ್ ನಟನೊಬ್ಬನಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಈ ಸ್ಟಾರ್ ನಟ ನಟನೆಯ ಜೊತೆ ಜೊತೆಗೆ ಹತ್ತು ಹಲವು ಸಮಾಜಮುಖಿ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದ್ದಾನೆ. ಹೆಣ್ಣನ್ನು ತುಂಬ ಗೌರವಿಸುವ ಈ ನಟ ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಮತ್ತು ಅದರ ವಿರುದ್ಧ ನಡೆಯುವ ಹೋರಾಟದ ಕುರಿತ ಮಸಾಲಾ ಚಿತ್ರವೊಂದರಲ್ಲಿ ನಟಿಸಿದ. ಇದು ಗಲ್ಲಾಪೆಟ್ಟಿಗೆಯಲ್ಲಿ ತುಂಬ ಸದ್ದು ಮಾಡಿ, ಸಾಕಷ್ಟು ಹಣ ಬಾಚಿಕೊಂಡಿತು. ಈ ಚಿತ್ರ ಯಶಸ್ಸು ಗಳಿಸಿದ ಸಂಭ್ರಮದಲ್ಲಿ ಹೈದರಾಬಾದಿನಲ್ಲಿ ಅದ್ದೂರಿ ಸಮಾರಂಭ ನಡೆಯಿತು. ಸ್ಟಾರ್ ನಟ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತ, “ನಾವು ಹೆಣ್ಣನ್ನು ಗೌರವಿಸಬೇಕು, ಹೆಣ್ಣಿನ ಮೇಲೆ ನಡೆಯುವ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ದೌರ್ಜನ್ಯವನ್ನು ತಡೆಗಟ್ಟಬೇಕು. ಹೆಣ್ಣಿನ ಶೋಷಣೆ ಮಾಡುವವರಿಗೆ ಮರಣ ದಂಡನೆಯೇ ಸರಿಯಾದ ಶಿಕ್ಷೆ!” ಎಂದು ಸಿನಿಮಾ ಸ್ಟೈಲಿನಲ್ಲಿ ಆವೇಶದಿಂದ ಡೈಲಾಗ್ ಹೊಡೆದ. ನಟನ ಮಾತುಗಳಿಗೆ ಅಭಿಮಾನಿಗಳು ತುಂಬ ಪುಳಕಿತರಾಗಿ ಸೂರು ಕಿತ್ತು ಹೋಗುವಂತೆ ಕೇಕೆ ಹಾಕುತ್ತ, ಜೋರಾಗಿ ಚಪ್ಪಾಳೆ ತಟ್ಟಿದರು.

ಅಭಿಮಾನಿಗಳ ಪ್ರೋತ್ಸಾಹದಿಂದ ಉತ್ತೇಜಿತನಾದ ಸ್ಟಾರ್ ನಟ, “ಮೂರು ಮದುವೆಯಾಗಿರುವ ನಾನು ನಿಮಗೆ ಹೆಣ್ಣಿನ ಬಗ್ಗೆ ಇಷ್ಟೆಲ್ಲ ಹೇಳಲು ಯಾವ ಹಕ್ಕಿದೆ ಎಂದು ನೀವು ಕೇಳಬಹುದು. ನಾನು ಮೂರು ಮದುವೆಯಾದದ್ದು ನನ್ನ ಕರ್ಮ ಕಣ್ರೋ! ನೀವು ಯಾರೂ ನನ್ನಂತಾಗಬೇಡಿ. ನೀವೆಲ್ಲ ಪ್ರಭು ಶ್ರೀರಾಮಚಂದ್ರನಂತೆ ಏಕಪತ್ನಿವ್ರತಸ್ಥರಾಗಬೇಕು! ನಿಮ್ಮನ್ನೇ ನಂಬಿ ಬಂದ ಹೆಂಡತಿಯನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು ಕಣ್ರೋ…” ಎಂದು ಬಹಳ ಭಾವನಾತ್ಮಕವಾಗಿ ಮಾತನಾಡಿ ಭಾಷಣ ಮುಗಿಸಿದ. ಈ ಮಾತುಗಳು ಅಭಿಮಾನಿಗಳ ಮೇಲೆ ತುಂಬ ಪ್ರಭಾವ ಬೀರಿದವು.

ಸ್ಟಾರ್ ನಟ ಒಂದಾದ ಮೇಲೊಂದರಂತೆ ಮೂರು ಮದುವೆಯಾಗಿದ್ದ. ಅವನು ಒಬ್ಬಳಿಗೆ ವಿಚ್ಛೇದನ ಕೊಟ್ಟ ನಂತರವೇ ಮತ್ತೊಬ್ಬಳೊಂದಿಗೆ ಮದುವೆಯಾಗಿದ್ದ. ವಿಚ್ಛೇದನ ಕೊಡುವಾಗ ಅವನು ಬೇಡವಾದ ಹೆಂಡತಿ ಜೀವನಪರ್ಯಂತ ಸುಖವಾಗಿರುವಂತೆ ಸಾಕಷ್ಟು ದೊಡ್ಡ ಮೊತ್ತದ ಹಣವನ್ನು ಸಹ ಕೊಟ್ಟಿದ್ದ. ಮುಂದೆಯೂ ಆ ವಿಚ್ಛೇದಿತ ಹೆಂಡತಿಯೊಂದಿಗೆ ಒಳ್ಳೆಯ ಸ್ನೇಹವಿರಿಸಿಕೊಂಡಿದ್ದ. ಇದೆಲ್ಲವನ್ನು ಅವನು ಬಹಿರಂಗವಾಗಿಯೇ ಮಾಡಿದ್ದ. ಸ್ಟಾರ್ ನಟ ಸುಮಾರು ಒಂದು ಲಕ್ಷ ಜನ ಕಿಕ್ಕಿರಿದು ತುಂಬಿದ್ದ ಬಹಿರಂಗ ಸಭೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡು, ಅಭಿಮಾನಿಗಳು ತನ್ನಂತಾಗಬಾರದೆಂದು ಉಪದೇಶ ನೀಡಿದ್ದು ಖಂಡಿತ ಸಾಮಾನ್ಯ ಸಂಗತಿಯಲ್ಲ. ನಿಜಕ್ಕೂ ಇದೊಂದು ಹಿತೋಪದೇಶ! ಜನಪ್ರಿಯ ಸ್ಟಾರ್ ನಟ ಮತ್ತು ಅವನ ಕೋಟ್ಯಂತರ ಅಭಿಮಾನಿಗಳಿಗೆ ತಿರುಪತಿ ತಿಮ್ಮಪ್ಪ ಒಳ್ಳೆಯದು ಮಾಡಲಿ!

ಉಪದೇಶ ನೀಡುವುದು ತುಂಬ ಸುಲಭವಾದರೂ ಅದನ್ನು ಪಾಲಿಸುವುದು ತುಂಬ ಕಷ್ಟ. ಉಪದೇಶ ನೀಡುವುದರಲ್ಲಿ ಯಾವುದೇ ರಿಸ್ಕಿಲ್ಲ. ಎಷ್ಟೋ ವೇಳೆ ಉಪದೇಶ ನೀಡಿದವನಿಗೇ ಮರುದಿನ ಅದು ಮರೆತು ಹೋಗಿರುತ್ತದೆ. ಆದರೆ ಉಪದೇಶ ಪಾಲಿಸುವಲ್ಲಿ ಮಾತ್ರ ತುಂಬ ರಿಸ್ಕಿದೆ. ಹೀಗಾಗಿಯೇ ನಮ್ಮ ದೇಶದಲ್ಲಿ ಉಪದೇಶ ನೀಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕನ್ನಡದ ಖ್ಯಾತ ಲೇಖಕರಾದ ರಾಘವೇಂದ್ರ ಪಾಟೀಲರು ಹೇಳಿದಂತೆ “ಉಪದೇಶ ಉಚಿತ, ನಷ್ಟ ಖಚಿತ!” ಎಂಬ ಮಾತು ಖಂಡಿತವಾಗಿಯೂ ಸತ್ಯ!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter