ಸಾಹಿತ್ಯ ವಿದ್ಯಾರ್ಥಿಗಳು ಕಂಡಂತೆ ‘ಭೈರಪ್ಪನವರ ಸಾಹಿತ್ಯ’

ಕೃತಿ: ಭಾಷೆಗಳ ಗಡಿ ಗೆದ್ದ ಭಾರತೀಯ
ಸಂಪಾದನೆ: ಡಾ. ಜಿ. ಎನ್. ಉಪಾಧ್ಯ
ಸಹ ಸಂಪಾದನೆ: ಡಾ. ಉಮಾ ರಾಮರಾವ್
ಪ್ರಕಾಶಕರು: ಕನ್ನಡ ವಿಭಾಗ,
ಮುಂಬೈ ವಿಶ್ವವಿದ್ಯಾಲಯ, ಮುಂಬೈ. ಮೊದಲ ಮುದ್ರಣ: 2022
ಬೆಲೆ: ರೂ. 250/-

ವಿಶ್ವ ಸಾಹಿತಿ ಡಾ. ಎಸ್. ಎಲ್. ಭೈರಪ್ಪನವರ ವಿಭಿನ್ನ ಆಯಾಮ, ಆಳಗಳಿರುವ ವಿವಿಧ ಕೃತಿಗಳನ್ನು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಕೆಲವು ವಿದ್ಯಾರ್ಥಿ ಮಿತ್ರರು ಅವಲೋಕಿಸಿ, ತಮ್ಮ ದೃಷ್ಟಿಯಿಂದ ನಿರೂಪಿಸಿರುವ ವಿಶಿಷ್ಟವಾದ ಕೃತಿ ಇದಾಗಿದೆ.

‘ಭಾಷೆಗಳ ಗಡಿ ಗೆದ್ದ ಭಾರತೀಯ’ – ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರು ಪ್ರಸ್ತಾವಿಸಿರುವಂತೆ, ಆಧುನಿಕ ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರಾದ ಡಾ.ಎಸ್.ಎಲ್. ಭೈರಪ್ಪನವರು ತೊಂಬತ್ತು ಸಂವತ್ಸರಗಳನ್ನು ದಾಟಿ ಬಂದಿರುವ ಶುಭ ಸಂದರ್ಭದಲ್ಲಿ ವಿಭಾಗದ ಸಾಹಿತ್ಯಾಸಕ್ತರು ರಚಿಸಿ ಅರ್ಪಿಸಿದ ಗ್ರಂಥಬಾಗಿನ ಈ ಕೃತಿ. ಕನ್ನಡದ ಕಡು ಹೆಮ್ಮೆಯ ಕಾದಂಬರಿಕಾರರಾದ ಒಳನಾಡಿನ ಧೀಮಂತ ಪ್ರತಿಭೆಯ ಅಡಿಗಳಲ್ಲಿ ಹೊರನಾಡ ಕನ್ನಡಿಗರು ಅರ್ಪಿಸುತ್ತಿರುವ ಕುಸುಮಾಂಜಲಿ ಇದೆಂದು ಡಾ.ಉಮಾ ರಾಮರಾವ್ ಅವರು ನಲ್ಮೆಯಿಂದ ನುಡಿದಿದ್ದಾರೆ. ವಿಭಾಗದ 92ನೆಯ ಪ್ರಕಟಣೆಯಾಗಿ ಬೆಳಕು ಕಂಡಿರುವ ಕೃತಿಯಲ್ಲಿ ಒಟ್ಟು ಹದಿನಾಲ್ಕು ಬಿಡಿ ಲೇಖನಗಳಿವೆ. ಭೈರಪ್ಪನವರ ಬದುಕು, ಬರಹಗಳನ್ನು ಮತ್ತು ಭೈರಪ್ಪನವರು ತಮ್ಮ ಮೇಲೆ ಮಾಡಿರುವ ಪ್ರಭಾವಗಳನ್ನು ಕುರಿತು ವಿಭಾಗದ ಹದಿನಾಲ್ಕು ಹಿರಿ-ಕಿರಿ ಲೇಖಕರು ಇಲ್ಲಿ ಆಪ್ತವಾಗಿ ಹಂಚಿಕೊಂಡಿದ್ದಾರೆ.

‘ಮೇರು ಸಾಹಿತಿ ಭೈರಪ್ಪನವರಿಗೆ’ ಎಂಬ ಕೃತಿಯ ಪ್ರಾರಂಭದಲ್ಲಿರುವ ಸುಂದರ ಕವನ ಮನಸೆಳೆಯುತ್ತದೆ. ಭೈರಪ್ಪನವರ ಎಲ್ಲ 24 ಕಾದಂಬರಿಗಳು ಹಾಗೂ ಆತ್ಮಕಥೆಯ ಶೀರ್ಷಿಕೆಗಳನ್ನು ಅವರ ಜೀವನದೊಂದಿಗೆ ಅರ್ಥಪೂರ್ಣವಾಗಿ ಬೆಸೆದು ಈ ಕವನವನ್ನು ಹೊಸೆಯಲಾಗಿದೆ. ಈ ಕವನದ ಕರ್ತೃವಾದ ಡಾ.ಉಮಾ ರಾಮರಾವ್ ಅವರೇ ‘ವಿಶ್ವದೊಳನುಡಿಯಾಗಿ ಕನ್ನಡಿಸುತಿಹರಿಲ್ಲಿ’ ಎಂಬ ಸುಂದರ ಶೀರ್ಷಿಕೆ ಹೊತ್ತ ಲೇಖನವನ್ನು ರಚಿಸಿದ್ದಾರೆ. ವಿಶ್ವ ಸಾಹಿತಿ, ಭಾಷೆಗಳ ಗಡಿ ಗೆದ್ದ ಭಾರತೀಯ ಎಂಬೆಲ್ಲ ವಿಶೇಷಣಗಳಿಗೆ ಭೈರಪ್ಪನವರು ಯಾಕೆ ಭಾಜನರಾಗಿದ್ದಾರೆ ಅನ್ನೋದನ್ನ ಶ್ರೀಮತಿ ವಿಜಯಾ ಹರನ್ ಅವರು ಸಂಪಾದಿಸಿದ ‘Giant genius Bhyrappa and Mirrors of his Novels’ ಎಂಬ ಕೃತಿಯಿಂದ ಆಯ್ದುಕೊಂಡ ಸಾಕ್ಷಿಗಳ ಮೂಲಕ ಇಲ್ಲಿ ಸಾದರಪಡಿಸಿದ್ದಾರೆ. ಭೈರಪ್ಪನವರ ಕೃತಿಗಳನ್ನು ಯಾವ ಯಾವ ಭಾಷೆಗಳಿಗೆ ಯಾರ್ಯಾರು ಅನುವಾದ ಮಾಡಿದ್ದಾರೆ, ಅನುವಾದ ಮಾಡುವಾಗ ಅನುವಾದಕರ ವಿಶೇಷ ಅನುಭವಗಳು ಏನೇನು ಎಂಬುದನ್ನೆಲ್ಲ ಇಲ್ಲಿ ದಾಖಲಿಸಿದ್ದಾರೆ. ಎಲ್ಲ ಅನುವಾದಕರೂ ಭೈರಪ್ಪನವರೊಂದಿಗೆ ತಮ್ಮ ಒಡನಾಟ ಎಷ್ಟು ಸೌಹಾರ್ದಯುತವಾಗಿತ್ತು, ಎಷ್ಟೆಲ್ಲ ಜನಪ್ರಿಯತೆ, ಮನ್ನಣೆಗಳಿದ್ದರೂ ಅವರೆಷ್ಟು ಸರಳರು ಎಂದು ಉಲ್ಲೇಖಿಸಿರುವುದು ಭೈರಪ್ಪನವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

‘ಅಗ್ನಿಯಿಂದೆದ್ದು ಬಂದ ಅಪರಂಜಿ’ ಎನ್ನುವ ಲೇಖನದಲ್ಲಿ ಶ್ರೀಮತಿ ಶಶಿಕಲಾ ಹೆಗಡೆಯವರು ಭೈರಪ್ಪನವರ ಆತ್ಮಕಥನ ಭಿತ್ತಿಯ ಪ್ರಮುಖ ಅಂಶಗಳನ್ನು ಹೇಳುತ್ತಾ ಅವರ ವ್ಯಕ್ತಿತ್ವದ ಹೆಚ್ಚುಗಾರಿಕೆಗಳನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ. ‘ವಿದ್ವತ್ತಿನ ವಿರಾಟ ವ್ಯಕ್ತಿತ್ವ’ ಎಂಬ ಲೇಖನದಲ್ಲಿ ಡಾ. ವಿಶ್ವನಾಥ ಕಾರ್ನಾಡ್ ಅವರು ಭೈರಪ್ಪನವರನ್ನು ಕನ್ನಡ ಕಾದಂಬರಿಗಳ ಸಾಮ್ರಾಟ, ಸಾಹಿತ್ಯ ಲೋಕದ ರಾಜಋಷಿ ಎಂದೆಲ್ಲ ಕೊಂಡಾಡಿದ್ದಾರೆ. ಭೈರಪ್ಪನವರೊಂದಿಗಿನ ಅವರ ಸೌಹಾರ್ದ ಒಡನಾಟವನ್ನೂ ನೆನೆದಿದ್ದಾರೆ. ‘ನೆಚ್ಚಿನ ಕಾದಂಬರಿಕಾರನಿಗೊಂದು ನುಡಿ ನಮನ’ ಲೇಖನದಲ್ಲಿ ಶ್ರೀಮತಿ ನಳಿನಾ ಪ್ರಸಾದ್ ಅವರು ತಾವು ಕಂಡಂತೆ ಭೈರಪ್ಪನವರ ಕಾದಂಬರಿಗಳ ಕುರಿತು, ಅವರನ್ನು ಭೇಟಿ ಮಾಡಿದ ಸಂದರ್ಭದ ಕುರಿತು ಹೇಳಿದ್ದಾರೆ. ಹೊರನಾಡ ಕನ್ನಡಿಗರಿಗೆ ತಮ್ಮನ್ನು ಕಳೆದುಕೊಳ್ಳಲು, ಪಡೆದುಕೊಳ್ಳಲು, ಹೊಂದಿಕೊಳ್ಳಲು, ಬೆರೆಯಲು, ವಿರೋಧಾಭಾಸಗಳ ನಡುವೆಯೂ ಎಲ್ಲರೊಳಗೊಂದಾಗಲು, ವಿಶೇಷವಾಗಿ ನಿಲ್ಲಲು, ಅಸ್ಮಿತೆ ರೂಪಿಸಿಕೊಳ್ಳಲು ಭೈರಪ್ಪನವರ ಕೃತಿಗಳು ಸಹಾಯ ಮಾಡುತ್ತವೆ ಎಂದಿದ್ದಾರೆ.

‘ಸಂಗೀತದಂತಹ ಸಾಹಿತ್ಯ ಮಂದ್ರ’ ಎಂಬ ಇಂಪಾದ ಶೀರ್ಷಿಕೆಯುಳ್ಳ ಲೇಖನದಲ್ಲಿ ಕಲಾ ಭಾಗ್ವತ್ ಅವರು ಮಂದ್ರ ಕಾದಂಬರಿಯನ್ನು ಬಹಳ ಮನೋಜ್ಞವಾಗಿ ವಿಶ್ಲೇಷಣೆ ಮಾಡಿದ್ದಾರೆ. ಕಾದಂಬರಿಯ ಪಾತ್ರಸೃಷ್ಟಿಯಲ್ಲಿ ರಾಗ ರಾಗಿಣಿಯರ ಪರಿಕಲ್ಪನೆ ಹೇಗೆ ಮೂಡಿಬಂದಿವೆ, ನೂರೈವತ್ತಕ್ಕೂ ಹೆಚ್ಚಿನ ಸಂಗೀತಕ್ಕೆ ಸಂಬಂಧಿಸಿದ ಅಲಂಕಾರಗಳನ್ನು ಕಾದಂಬರಿಯಲ್ಲಿ ಹೇಗೆ ಬಳಸಿಕೊಳ್ಳಲಾಗಿದೆ ಮುಂತಾದ ಆಳವಾದ ಒಳನೋಟವನ್ನು ಅವರಿಲ್ಲಿ ನೀಡಿದ್ದಾರೆ. ‘ಪರ್ವದಲ್ಲಿ ಕೃಷ್ಣದರ್ಶನ’ ಎನ್ನುವ ಲೇಖನದಲ್ಲಿ ಡಾ.ಮಮತಾ ರಾವ್ ಅವರು ಪರ್ವದಲ್ಲಿ ಭೈರಪ್ಪನವರು ಸೃಷ್ಟಿಸಿದ ಕೃಷ್ಣ ದೈವ ಸಂಭೂತನಲ್ಲದೆ, ಅಸಾಮಾನ್ಯನೂ ಅಲ್ಲದೆ, ವ್ಯಾಸರ ಕೃಷ್ಣನಿಗಿಂತ ಭಿನ್ನವಾಗಿದ್ದೂ ತನ್ನ ಉದಾತ್ತ ವ್ಯಕ್ತಿತ್ವ, ಉತ್ತಮ ನಾಯಕತ್ವ, ದೂರದೃಷ್ಟಿ, ಛಲ, ಎದೆಗಾರಿಕೆ, ಮುತ್ಸದ್ದಿತನ, ಮಾನವೀಯ ನಡತೆ, ನಿರ್ಮೋಹಿತ್ವದಂತಹ ಗುಣಗಳಿಂದ ಹೇಗೆ ತನ್ನ ವಿಶ್ವರೂಪ ದರ್ಶನ ಮಾಡಿಸುತ್ತಾನೆ ಎನ್ನುವುದನ್ನು ಅನೇಕ ಸಮರ್ಥನೆಗಳ ಮೂಲಕ ಬಹಳ ಸಮರ್ಥವಾಗಿ ತೋರಿಸಿದ್ದಾರೆ. ಡಾ. ಶಾಂತಲಾ ಹೆಗಡೆ ಅವರು ಉತ್ತಮ ಸಾಹಿತ್ಯ ಹೇಗೆ ಜನರ ಜೀವನವನ್ನು ಬದಲಿಸಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿ ‘ವಂಶವೃಕ್ಷ’ ಕಾದಂಬರಿಯನ್ನು ಉಲ್ಲೇಖಿಸಿದ್ದಾರೆ. ಈ ಕಾದಂಬರಿ ಸಣ್ಣ ವಯಸ್ಸಿನಲ್ಲಿ ಪತಿವಿಯೋಗಕ್ಕೆ ತುತ್ತಾದ ತಮ್ಮ ಗೆಳತಿಯ ತಂದೆಯವರ ಮನಃಪರಿವರ್ತನೆ ಮಾಡಿ ಗೆಳತಿಗೆ ಮರು ಮಾಡುವೆ ಮಾಡಿಸಿತು ಎಂಬುದನ್ನು ಅವರು ಹೆಮ್ಮೆಯಿಂದ ಆಪ್ತವಾಗಿ ಹಂಚಿಕೊಂಡಿದ್ದಾರೆ. ಶ್ರೀ ವಿಕ್ರಮ್ ಜೋಶಿಯವರು ಯಾನ ಕಾದಂಬರಿಯನ್ನು ವಿಶ್ಲೇಷಣೆ ಮಾಡುತ್ತ ಕಾದಂಬರಿಯಲ್ಲಿ ಎಳೆ ವಯಸ್ಸಿನ ಆಕಾಶ ಎಂಬ ಪಾತ್ರಕ್ಕೆ ಆಗುವ ಆತ್ಮಬೋಧೆಯು ಯೋಗವಾಸಿಷ್ಠದ ಬೋಧನೆಯಿಂದ ಶ್ರೀರಾಮನಿಗೆ ಆದ ಆತ್ಮಸಾಕ್ಷಾತ್ಕಾರಕ್ಕೆ ಸಮ, ಅಂತೆಯೇ ಈ ಕಾದಂಬರಿಯನ್ನು ‘ಆಧುನಿಕ ಯೋಗವಾಸಿಷ್ಠ ಗ್ರಂಥ’ ಎನ್ನಲು ಅಡ್ಡಿಯಿಲ್ಲ ಎಂದಿರುವುದು ಗಮನಾರ್ಹವಾಗಿದೆ.

ಡಾ.ಪೂರ್ಣಿಮಾ ಶೆಟ್ಟಿ ಅವರು ಒಂದು ಕೃತಿ ಹೊರತರುವ ಹಿಂದೆ ಭೈರಪ್ಪನವರು ಮಾಡುವ ಶೋಧನೆ, ಪ್ರವಾಸ ಮತ್ತು ಕ್ಷೇತ್ರ ಕಾರ್ಯಗಳ ಮೇಲೆ ವಿಸ್ತೃತವಾಗಿ ಬೆಳಕು ಚೆಲ್ಲಿದ್ದಾರೆ. ಹಕ್ಕಿಯಂತೆ ಗರಿ ಬಿಚ್ಚಿ ಹಾರಾಡಿ, ಹುಲ್ಲೆಯಂತೆ ಮನಸ್ಸನ್ನು ಚಿಮ್ಮಲು ಬಿಟ್ಟು ಹೊರಜಗತ್ತನ್ನೆಲ್ಲ ಕಣ್ತೆರೆದು ನೋಡುವುದರಲ್ಲಿ ಅವರಿಗೆ ವಿಶೇಷ ಆಸ್ಥೆ, ಕಷ್ಟಪಟ್ಟು ಕಲ್ಲಿಗೊಂದು ಸುಂದರ ರೂಪ ನೀಡುವ ಶಿಲ್ಪಿಗೆ ಆಗುವ ಅಪೂರ್ವ ಸಂತಸ ಭೈರಪ್ಪನವರಿಗೆ ಸಿದ್ಧಿಸಿದೆ ಎಂದು ಕಾವ್ಯಾತ್ಮಕವಾಗಿ ವಿವರಿಸಿದ್ದಾರೆ. ಡಾ. ರಮಾ ಉಡುಪ ಅವರು ಭೈರಪ್ಪ ಮತ್ತು ಶಿವರಾಮ ಕಾರಂತರ ಮುಂಬೈಯೊಂದಿಗಿನ ನಂಟನ್ನು ಕುರಿತು ದಾಖಲಿಸಿದ್ದಾರೆ. ಭೈರಪ್ಪನವರು “ವರ್ಷಕ್ಕೊಮ್ಮೆಯಾದರೂ ಮುಂಬೈ ನೋಡದಿದ್ದರೆ ಏನೋ ಕಳೆದುಕೊಂಡಂತಹ ಭಾವನೆ ನನಗೆ” ಎಂದಿರುವುದನ್ನು ಸ್ಮರಿಸುತ್ತ ರಮಾ ಅವರು ಯಾಂತ್ರಿಕ ನಗರವಾದರೂ ಮುಂಬೈ ಜನತೆಯ ಹೃದಯದಲ್ಲಿ ಇಂದಿಗೂ ಸ್ನೇಹ, ಪ್ರೀತಿ, ವಿಶ್ವಾಸದ ಅಂತಃಸೆಲೆಗಳು ಬತ್ತಿಲ್ಲ ಎನ್ನುವುದು ಖುಷಿಯ ಸಂಗತಿ ಎಂದಿರುವುದು ಸೂಕ್ತವಾಗಿದೆ. ಭೈರಪ್ಪನವರ ಏಳು ಸೃಜನೇತರ ಸಾಹಿತ್ಯ ಕೃತಿಗಳನ್ನು ಸಮರ್ಥವಾಗಿ ವಿಶ್ಲೇಷಿಸಿರುವ ಶ್ರೀಮತಿ ಅನಿತಾ ತಾಕೊಡೆ ಅವರು ಸೃಜನೇತರ ಸಾಹಿತ್ಯದಲ್ಲೂ ಇರುವ ಸೃಜನಶೀಲತೆಯನ್ನು ಗುರುತಿಸಿದ್ದಾರೆ. ಭೈರಪ್ಪನವರ ಎಲ್ಲಾ ಕೃತಿಗಳಲ್ಲೂ ಅಂತಃಸತ್ವವಿದೆ ಎನ್ನುತ್ತಾ, ಎಲ್ಲ ಏಳು ಕೃತಿಗಳ ಗಮನೀಯ ಅಂಶಗಳನ್ನು ಅನಿತಾ ವಿಸ್ತೃತವಾಗಿ ದಾಖಲಿಸಿದ್ದಾರೆ. ಭೈರಪ್ಪನವರ ಉನ್ನತ ಮಟ್ಟದ ಪ್ರತಿಭೆಯ ಕಾರಣದಿಂದಲೇ ಸಾಹಿತ್ಯ ಸೃಷ್ಟಿಗೆ ಜೀವನದಲ್ಲಿ ಘಟಿಸಿ ಹೋದ ಅಂಶಗಳ ಹಂಗಿಲ್ಲದೆಯೂ ಬರವಣಿಗೆ ನಿರಂತರವಾಗಿರುವುದು, ಅದೇ ಅವರ ಮೇರು ವ್ಯಕ್ತಿತ್ವದ ಹೆಗ್ಗುರುತು ಎಂದು ಸಮಂಜಸವಾಗಿ ಗುರುತಿಸಿದ್ದಾರೆ. ‘ತಮಸೋಮಾ ಜ್ಯೋತಿರ್ಗಮಯಾ’ ಲೇಖನ ನಿವೇದಿತಾ ಮುತಾಲಿಕ್ ಅವರ ಮರಾಠಿ ಲೇಖನದ ಅನುವಾದ. ಭೈರಪ್ಪನವರ ಗದ್ಯ ಬರಹಗಳಲ್ಲೂ ಅಂತರ್ಗತವಾಗಿರುವ ಲಯ, ದೃಷ್ಟಿಕೋನ, ಸೂಕ್ಷ್ಮ ಅರ್ಥಗಳಿಗೆ ಮಾರುಹೋಗಿದ್ದೇನೆ ಎನ್ನುವ ನಿವೇದಿತಾ ನಿಜವಾದ ಸುಖ ಏನು ಎಂಬುದನ್ನು, ಜೀವ ಮತ್ತು ಪರಮಾತ್ಮನ ನಡುವಿನ ಅದ್ವೈತ ಭಾವದ ಅರಿವನ್ನು, ವಿನೀತ ಭಾವವನ್ನು ಅವರ ಸಾಹಿತ್ಯ ನನ್ನಲ್ಲಿ ಮೂಡಿಸಿದೆ ಎಂದಿದ್ದಾರೆ.

ಭೈರಪ್ಪನವರೊಡನೆ ಡಾ.ಉಮಾ ರಾಮರಾವ್ ಅವರು ಪರ್ವದ ಕುರಿತಾಗಿ ಮಾಡಿದ ಪ್ರಶ್ನೋತ್ತರ ಒಂದು ಲೇಖನವಾಗಿ ಈ ಕೃತಿಯಲ್ಲಿದೆ. ಜೊತೆಗೆ ಮುಂಬೈಯಲ್ಲಿ ಅವರೊಂದಿಗೆ ಡಾ. ಜಿ .ಎನ್. ಉಪಾಧ್ಯ ಅವರು ಮತ್ತು ಕನ್ನಡ ವಿಭಾಗದ ಕೆಲ ವಿದ್ಯಾರ್ಥಿಗಳು ನಡೆಸಿದ ಮಾತುಕತೆಯನ್ನು ಗೀತಾ ಮಂಜುನಾಥ್ ಅವರು ಲೇಖನ ರೂಪದಲ್ಲಿ ದಾಖಲಿಸಿದ್ದಾರೆ. ಈ ಎರಡೂ ಲೇಖನಗಳಲ್ಲಿ ಭೈರಪ್ಪನವರು ಹಂಚಿಕೊಂಡ ವಿಚಾರಗಳು ವಿಶೇಷವಾಗಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನ ಮತ್ತು ಸಾಹಿತ್ಯಿಕ ಅಭಿರುಚಿಯನ್ನು ಉತ್ತಮಗೊಳಿಸಿಕೊಳ್ಳಲು ಅವಶ್ಯಕವಾದ ಅತ್ಯಮೂಲ್ಯ ಮಾಹಿತಿಯ ಕಣಜವೇ ಆಗಿದೆ. ಇನ್ನುಳಿದಂತೆ ಮೂರು ಅನುಬಂಧಗಳಲ್ಲಿ ಭೈರಪ್ಪನವರ ಜೀವನ, ಕೃತಿಗಳ ವಿವರ, ಅವರಿಗೆ ಸಂದ ಪ್ರಶಸ್ತಿಗಳು, ಇತರ ಭಾಷೆಗಳಲ್ಲಿ ಅವರ ಕಾದಂಬರಿಗಳ ವಿವರಗಳನ್ನು ನೀಡಲಾಗಿದೆ.

ಕೃತಿಯ ಬೆನ್ನುಡಿಯಲ್ಲಿ ಗುರುತಿಸಿರುವಂತೆ ಇಲ್ಲಿಯ ಲೇಖನಗಳಲ್ಲಿ ವೈವಿಧ್ಯವಿದೆ, ಆಪ್ತತೆಯಿದೆ, ಪ್ರಾಮಾಣಿಕತೆಯಿದೆ, ಮುಗ್ಧತೆಯಿದೆ. ಇದೆಲ್ಲದರ ಜೊತೆಗೆ ಭೈರಪ್ಪನವರ ಕೃತಿಗಳನ್ನು ಓದಿ ಆಳವಾಗಿ ವಿಶ್ಲೇಷಿಸಬಲ್ಲ, ವಿವೇಚಿಸಬಲ್ಲ ಪರಿಣಿತಿಯೂ ಸಹ ಎಲ್ಲಾ ಲೇಖಕರಲ್ಲೂ ಕಾಣಿಸುವುದು ಈ ಕೃತಿಯ ವೈಶಿಷ್ಟ್ಯ. ಪರ್ವ, ಮಂದ್ರ, ಯಾನದಂತಹ ವಿಭಿನ್ನ ಆಯಾಮ, ಆಳಗಳಿರುವ ಕೃತಿಗಳನ್ನು ಅವಲೋಕಿಸುವಲ್ಲಿ ವಿಭಾಗದ ಸದಸ್ಯರು ತಮ್ಮ ಸಾಹಿತ್ಯಾಧ್ಯಯನದ ಆಸಕ್ತಿ, ಶ್ರದ್ಧೆ ಮತ್ತು ಪ್ರೌಢಿಮೆಯನ್ನು ಮೆರೆದಿದ್ದಾರೆ. ಅಂತೆಯೇ ಅವರ ಸೃಜನೇತರ ಸಾಹಿತ್ಯದ ಕುರಿತು ಬರೆಯುವಲ್ಲಿ, ಅವರ ಬದುಕು, ಕಾರ್ಯಕ್ಷೇತ್ರವನ್ನು ತಮ್ಮ ದೃಷ್ಟಿಯಿಂದ ನಿರೂಪಿಸುವಲ್ಲಿ ಸಹ ಗಟ್ಟಿತನ ತೋರಿದ್ದಾರೆ. ಅವರ ಈ ಲೇಖನಗಳನ್ನು ಕೃತಿ ರೂಪದಲ್ಲಿ ಪ್ರಕಟಿಸಿ ಅವರನ್ನು ಪ್ರೋತ್ಸಾಹಿಸುವುದರ ಜೊತೆಗೆ ಡಾ.ಉಪಾಧ್ಯ ಅವರು ವಿಭಾಗದ ಎಲ್ಲ ಕಿರಿಯ ವಿದ್ಯಾರ್ಥಿಗಳಿಗೆ ಇದರಿಂದ ಪ್ರೇರಣೆಯನ್ನು ಕೂಡ ನೀಡಿದ್ದಾರೆ. ಈ ಕೃತಿಯ ಎಲ್ಲ ಲೇಖಕರ ಜೊತೆಗೆ ಆಕರ್ಷಕವಾದ ರಕ್ಷಾ ಪುಟದ ವಿನ್ಯಾಸವನ್ನು ಮಾಡಿರುವ ಶ್ರೀ ಜಯ ಸಾಲಿಯಾನ್ ಮತ್ತು ಲೇಖನಗಳನ್ನು ಟೈಪ್ ಮಾಡಿ ಅಚ್ಚುಕಟ್ಟಾಗಿ ಪೇಜ್ ಸೆಟ್ಟಿಂಗ್ ಮಾಡಿರುವ ಶ್ರೀಮತಿ ಸವಿತಾ ಶೆಟ್ಟಿ ಅವರೂ ಕನ್ನಡ ವಿಭಾಗದ ಸದಸ್ಯರೇ ಆಗಿರುವುದು ಕೂಡ ಒಂದು ಹೆಗ್ಗಳಿಕೆ. ಒಟ್ಟಿನಲ್ಲಿ ಎಲ್ಲ ನಿಟ್ಟಿನಿಂದಲೂ ಇದೊಂದು ಅಪೂರ್ವ ಕೃತಿ ಎನ್ನುವುದರಲ್ಲಿ ಸಂಶಯವಿಲ್ಲ.

  • ವಿದ್ಯಾ ರಾಮಕೃಷ್ಣ
    ದ್ವಿತೀಯ ಎಂ. ಎ ವಿದ್ಯಾರ್ಥಿ
    ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter