‘ಅತಿಯಾದ ಒಳ್ಳೆಯತನವೂ ದುರಂತಕ್ಕೆ ಕಾರಣವಾಗಬಹುದು ‘
ಬಾಲಕಿ ಹಿರಿದಿಮ್ಮಿ ದನಮೇಯಿಸುವಾಗ ಸುಸ್ತಾಗಿ ಆಲದ ಮರದ ಕೆಳಗೆ ಮಲಗಿರುತ್ತಾಳೆ. ಅದೇ ಸಂದರ್ಭದಲ್ಲಿ ಮರದ ಮೇಲೆ ಕುಳಿತಿದ್ದ ಬೇಡರ ಬೊಮ್ಮೇಲಿಂಗ ಎಂಬ ಬಾಲಕನ ಪರಿಚಯ ಆಕೆಗೆ ಆಗುತ್ತದೆ. ತಾನೊಬ್ಬ ಅನಾಥ ಎಂದು ದೈನ್ಯದಿಂದ ಪರಿಚಯ ಮಾಡಿಕೊಳ್ಳುತ್ತಾನೆ. ಆಕೆ ತನ್ನ ಮನೆಯ ದನ ಕಾಯುವ ಕೆಲಸ ಕೊಡುತ್ತಾಳೆ .ಅಣ್ಣ ಮತ್ತು ಅತ್ತಿಗೆಯರು ಊರ ಉಸಾಬರಿ ಏಕೆ ಎಂದು ಎಷ್ಟು ಹೇಳಿದರು ಕೇಳುವುದಿಲ್ಲ. ಅವರೆಲ್ಲರನ್ನು ಓಲೈಸಿ ನಿರ್ಗತಿಕನಿಗೆ ಆಸರೆಯಾಗುತ್ತಾಳೆ . ಅಪರಿಚಿತನನ್ನು ಕಂಡು ಹಿರಿದಿಮ್ಮಿ ಬೆದರದೆ ಹೃದಯ ವೈಶಾಲ್ಯದಿಂದ ಅವನ ಸಲುಹಲು ಮುಂದಾಗುತ್ತಾಳೆ. ಅತ್ತಿಗೆಯರ ನಿರಾಕರಣೆಯ ನಡುವೆಯೂ ಊಟ ತೆಗೆದುಕೊಂಡು ಹೋದಾಗ ಬೊಮ್ಮೇಲಿಂಗ ಅವಳ ಕೈ ಹಿಡಿದು ಅವಳ ಸೆರಗನ್ನು ಎಳೆಯಲು ಪ್ರಯತ್ನಿಸುತ್ತಾನೆ. ಹಿರಿದಿಮ್ಮಿಗೆ ಇವನೊಬ್ಬ ಕಾಮ ಪಿಪಾಸು ಎಂದು ಆಗ ಅರಿವಾಗುತ್ತದೆ. ಹಿರಿದಿಮ್ಮಿ ನಮ್ಮ ಜಾನಪದ ಕಥೆಯಲ್ಲಿ ಬರುವ ಧೈರ್ಯವಂತೆ ಹುಡುಗಿಯ ಪಾತ್ರ.
ಹಿರಿದಿಮ್ಮಿ ಅವನ ನಡವಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳೋದೆ ತಿದ್ದಲು ಯತ್ನಿಸುತ್ತಾಳೆ, ಆದರೆ ಎಚ್ಚರಿಕೆಯನ್ನು ಮಾತ್ರ ನೀಡುತ್ತಾಳೆ . ” ನನ್ನ ಅಣ್ಣಂದಿರಿಗೆ ವಿಷಯ ಗೊತ್ತಾದರೆ ನಿನ್ನ ತಲೆಯನ್ನು ಚೆಂಡಾಡುತ್ತಾರೆ ” ಎಂದು ಹೆದರಿಸುತ್ತಾಳೆ . ನಡೆದ ಸಂಗತಿಯನ್ನು ಅಣ್ಣಂದಿರ ಮುಂದೆ ಹೇಳದೆ ಸುಮ್ಮನಾಗುತ್ತಾಳೆ. ಮುಂದೆ ಆತ ತಪ್ಪನ್ನು ತಿದ್ದಿಕೊಳ್ಳುತ್ತಾನೆ ಎಂಬ ಸಣ್ಣ ಭರವಸೆ ಅವಳಲ್ಲಿತ್ತು.
ಮೂಲತಃ ಹಿರಿದಿಮ್ಮಿಗೆ ಬಾಲ್ಯ ವಿವಾಹವಾಗಿತ್ತು. ಅವಳು ತಂದೆಯ ಮನೆಯಲ್ಲಿರುತ್ತಿದ್ದಳು. ಮುಂದಿನ ದಿನಗಳಲ್ಲಿ ಅವಳು ಋತುಮತಿಯಾಗುತ್ತಾಳೆ. ನಂತರ ಗಂಡನ ಮನೆಗೆ ಕಳುಹಿಸಿ ಕೊಡುವ ಸಿದ್ಧತೆ ನಡೆಯುತ್ತದೆ. ಹಿರಿದಿಮ್ಮಿ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿಯೂ ಆಕೆಯನ್ನು ಬೆನ್ನು ಹತ್ತಿದ, ಬೇತಾಳನಂತೆ ಬೊಮ್ಮೇಲಿಂಗ ಕಾಡುತ್ತಾನೆ. ನಾಯಿಯನ್ನು ಬಲವಂತವಾಗಿ ಅಟ್ಟುವಂತೆ ಇವಳು ಬೊಮ್ಮೇಲಿಂಗನನ್ನು ಅಟ್ಟಬಹುದಿತ್ತು . ಅಲ್ಲಿಯೂ ಕ್ಷಮಿಸುವ ಔದಾರ್ಯ ತೋರುತ್ತಾಳೆ. ಹಾಳಾಗಿ ಹೋಗಲಿ ಎಂದು ಗಂಡನಿಗೆ ಊಟಕ್ಕೆ ಹಾಕಿದಂತೆ ಬೊಮ್ಮೇಲಿಂಗನಿಗೂ ಊಟಕ್ಕೆ ನೀಡುತ್ತಾಳೆ .
ಆದರೆ ಆತ ತನ್ನ ಕುಬುದ್ಧಿಯನ್ನು ತೋರಿಸಿಯೇ ಬಿಡುತ್ತಾನೆ. ಕಾಮಾಂಧನಾಗಿ ಸಮಯ ಸಾಧಿಸಿ ಹಿರಿದಿಮ್ಮಿಯ ಗಂಡನನ್ನು ಕೊಂದುಬಿಡುತ್ತಾನೆ . ಗಂಡನ ಪ್ರಾಣವನ್ನು ಕಿತ್ತುಕೊಂಡ ಬೊಮ್ಮೇಲಿಂಗನ ಮೇಲೆ ಹಿರಿದಿಮ್ಮಿಗೆ ಅಸಾಧ್ಯ ಕೋಪ ಬರುತ್ತದೆ. ಔದಾರ್ಯ ತೋರಿದ್ದೇ ಮುಳುವಾಯಿತಲ್ಲ , ಎಂದು ಚಾಣಾಕ್ಷತನದಿಂದ ಸಮಯಸಾಧಿಸಿ ಬೊಮ್ಮೇಲಿಂಗನ ತಲೆಯನ್ನು ಹಾರಿಸಿ ಬಿಡುತ್ತಾಳೆ. ಮನುಷ್ಯರೂಪಿ ಕೃತಘ್ನ ಮೃಗವನ್ನು ಕೊಂದು ಬಿಡುತ್ತಾಳೆ. ಗಂಡನ ರುಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡು ಬೊಮ್ಮೇಲಿಂಗನ ತಲೆಯನ್ನು ಕಾಲಿನಲ್ಲಿ ಒದ್ದುಕೊಂಡು ತವರುಮನೆಗೆ ಬರುತ್ತಾಳೆ. ಕೊನೆಗೆ ಆಕೆ ಚಿತೆ ಏರುವಾಗ ಗಂಡನ ತಲೆಯನ್ನು ತನ್ನ ತಲೆಯ ಬಳಿ ಬೊಮ್ಮೇಲಿಂಗನ ತಲೆಯನ್ನು ತನ್ನ ಕಾಲ ಬಳಿ ಇರಿಸಿಕೊಳ್ಳುತ್ತಾಳೆ.
ಸ್ನೇಹಿತರೆ, ನಾರಿ ಕ್ಷಮಯಾಧರಿತ್ರಿಯೂ ಹೌದು ನಾರಿ ದುಷ್ಟಸಂಹಾರಿಣಿ ದುರ್ಗೆಯೂ ಹೌದು. ಮೇಲಿನ ಎರಡೂ ಮಾತುಗಳಿಗೆ ಹಿರಿದಿಮ್ಮಿ ಒಳ್ಳೆಯ ಉದಾಹರಣೆಯಾಗಿದ್ದಾಳೆ. ಪರಸ್ತ್ರೀ ಮೇಲೆ ಕಣ್ಣಿಟ್ಟ ಕಾಮುಕ ಬೊಮ್ಮೇಲಿಂಗನಿಗೆ ಹಿರಿದಿಮ್ಮಿ ತಿದ್ದಿಕೊಳ್ಳಲು ಅವಕಾಶಗಳನ್ನು ನೀಡಿದರೂ ಪ್ರಯೋಜನವಾಗಲಿಲ್ಲ.
ಬೊಮ್ಮೇಲಿಂಗ ತಿದ್ದಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ. ಹಲವು ಬಾರಿ ಎಚ್ಚರಿಕೆಯನ್ನ ಸಹ ನೀಡುತ್ತಾಳೆ. ಬಹುಶ: ಅವನ ಬಗೆಗೆ ತಾತ್ಸಾರ ಮನೋಭಾವ ತಳೆದ ಹಿರಿದಿಮ್ಮಿಯದು ತಪ್ಪಾಯಿತು. ಬೊಮ್ಮೇಲಿಂಗನ ವಿಕೃತ ಮನಸ್ಥಿತಿ ಹಿರಿದಿಮ್ಮಿಗೆ ಅರ್ಥವಾಗಲಿಲ್ಲ.
ಇಂತಹ ಹಲವಾರು ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಿರುತ್ತವೆ. ಅತಿರೇಕಕ್ಕೆ ಹೋದ ಮೇಲೆ ಸಮಸ್ಯೆಯ ತೀವ್ರತೆ ಅರಿವಾಗುತ್ತದೆ. ಆರಂಭಿಕ ಹಂತದಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಮಾಡಿದ್ದರೆ ಹಿರಿದಿಮ್ಮಿಯು ದುರಂತದಿಂದ ತಪ್ಪಿಸಿಕೊಳ್ಳಬಹುದಿತ್ತು. ತನ್ನ ಮನೆಯಿಂದ ಆತನನ್ನು ಓಡಿಸಿಬಿಡಬಹುದಿತ್ತು. ಹಿರಿದಿಮ್ಮಿಯ ಹಿರಿಯತನ ಹಾಗೆ ಮಾಡಲಿಲ್ಲ ಉದಾರಭಾವ ತೋರುತ್ತಾಳೆ. ಕೆಟ್ಟದ್ದೆಲ್ಲ ಶಿಕ್ಷೆ ಅನುಭವಿಸಬೇಕು ಎನ್ನುವದು ಒಪ್ಪತಕ್ಕ ಮಾತು, ಆದರೆ ಎಷ್ಟೋ ಸಂದರ್ಭಗಳಲ್ಲಿ ಅದರೊಂದಿಗೆ ಒಳ್ಳೆಯದೂ ದುರಂತ ಕಾಣಬೇಕಾಗುತ್ತದೆ ಎನ್ನುವದು ವಿಷಾದಕರ.
ಬ್ರ್ಯಾಡ್ಲೆ ಹೇಳಿದ ಮಾತು ನೆನಪಾಗುತ್ತದೆ.” The waste of virtue and the wreck of vice” ಎಲ್ಲ ರುದ್ರರೂಪಕಗಳ ಅಡಿಗಲ್ಲಾಗಿದೆ. ಒಳ್ಳೆಯದೆಲ್ಲ ವಿನಾಕಾರಣ ಹಾಳಾಗುವದೇಕೆಂಬುದು ಇಡಿ ವಿಶ್ವದಲ್ಲಿ ಒಡೆಯದ ಒಗಟಾಗಿದೆ. ಪ್ರತಿಭಾವಂತರು, ಸದ್ಗುಣಿಗಳು ಬಹುಬೇಗ ಅವಸಾನವಾಗುತ್ತಾರೆ. ಆದರೆ ಮತ್ತೆ ಬ್ರ್ಯಾಡ್ಲೆ ಹೇಳಿದಂತೆ “The inward is all” – ಮನುಷ್ಯನ ಸದ್ಗುಣಗಳೇ ಸಂಪತ್ತಾಗಿವೆ. ಪುಟಕ್ಕೆ ಹಾಕಿದ ಚಿನ್ನದಂತೆ ಯಾತನೆಗೀಡಾದ ಸದ್ಗುಣಿತ್ವವು ಹೆಚ್ಚು ಹೆಚ್ಚು ಪರಿಶುದ್ಧವಾಗಿ ಜನರಿಗೆ ಮತ್ತಷ್ಟು ಎದ್ದು ಕಾಣುತ್ತದೆ. ಕೆಡುಕಿನ ಜೊತೆಯಲ್ಲಿ ಒಳಿತು ಇದ್ದೇ ಇರತ್ತದೆಂಬುದು ಸೃಷ್ಟಿ ನಿಯಮ.
2 thoughts on “ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣl”ಹಿರಿದಿಮ್ಮಿ””
Nice article! It seems reading people very early on is required to save yourself instead of trying to correct someone which is hard after they become adults.
ನಿಜ ಸರ್ , ಧನ್ಯವಾದ