ಪಡಸಾಲೆಯ ತುದಿಯ ಕತ್ತಲ ಕೋಣೆಯಿಂದ ಹೆಣ್ಣು ಜೀವವೊಂದು ಕಿಟಾರನೆ ಚೀರಿದ ಧ್ವನಿಯಿಂದ,ಅದರ ಹಿಂದೆಯೇ ಕೇಳಿ ಬಂದ “ಉವ್ವೆ…..,ಅವ್ವೆ …’ ಎಂಬ ಕೀರಲು ಸ್ವರದಿಂದ …ಹಸುಗೂಸೊಂದು ಇಳೆಯ ಮಡಿಲಿಗೆ ಜಾರಿತೆಂದು ದೃಢವಾಯಿತು. ಮನೆಯ ಹಿರಿ ಸೊಸೆ ಗೌರಿಯ ಬದುಕಲ್ಲಿ ಮೂರನೆಯ ಹೆರಿಗೆಯ ಮಹತ್ತರ ಘಟ್ಟವದು. ಏನೋ ಒಂದು ದೊಡ್ಡ ನಿರೀಕ್ಷೆಯಲ್ಲಿ ಎದುರುಗಡೆ ಅಂಗಳದಲ್ಲಿ ಶತಪಥ ತಿರುಗುತ್ತಿದ್ದ ಶ್ರೀನಿವಾಸ ರಾಯರು, ಬೆಳಗಿನ ಜಾವದಿಂದ ಒಂದು ಕುಡತೆ ನೀರು ಕುಡಿಯದೆ ಗೋಡೆಗೆ ಕಿವಿ ಆನಿಸಿ ನಿಂತ ಪದ್ಮಾವತಮ್ಮ ಜೊತೆಗೆ ಅವರ ದೊಡ್ಡ ಮಗಳು (ಗಂಡನ ಬಿಟ್ಟವಳು ) ಕಿರಿಯ ಸೊಸೆ ಸುಜಾತ (ಹೊಸದಾಗಿ ಆ ಮನೆ ಹೊಸ್ತಿಲು ತುಳಿದವಳು) ನೆರಮನೆ ಮೀನಾಕ್ಷಿ, ಆಚೆ ಕೇರಿ ಸವಿತಾ ಎಲ್ಲರೂ ಒಟ್ಟಿಗೆ ಒಮ್ಮೆ ನಿಟ್ಟುಸಿರಿಟ್ಟರು.
ಸೂಲಗಿತ್ತಿ ಹೊರಬರುವುದನ್ನೇ ಕಾಯುತ್ತಿದ್ದವರಿಗೆ ಬಿಳಿವಸ್ತ್ರದಿ ಸುತ್ತಿದ ಮಾಂಸದ ಮುದ್ದೆಯೊಂದನ್ನು ಭದ್ರವಾಗಿರಿಸಿ ಎದೆಗವಚಿ , ಬೆವರನೊರೆಸುತ್ತಲೇ ಧಾವಿಸಿದ ಹಾಲವ್ವನ ಕಂಡು ಒಬ್ಬರ ಮೇಲೊಬ್ಬರು ಪೈಪೋಟಿಗೆ ಬಿದ್ದವರಂತೆ ಕೈ ಚಾಚಿದರು. ಆದರೆ ಸೂಲಗಿತ್ತಿಯ ಕಣ್ಣು ಮಗುವಿನ ಅಪ್ಪನ ಅರಸುತಿತ್ತು “ಸರಿಯಿರಿ ಸರಿಯಿರಿ ಮೊದಲು ಕೂಸಿನ ಅಪ್ಪನ ಸರದಿ”. ಆಕೆಯ ನೇರ ಮಾತಿಗೆ ನೆರೆದ ಹಲವರ ಮುಖ ಕಪ್ಪಿಟ್ಟರೆ , ಅಧಿಕ ಪ್ರಸಂಗಿ ಎಂದು ಕುಹಕದ ಬಿರುನುಡಿ ಮತ್ತೊಬ್ಬರದು!
ದೂರದಿ ಕಂಬಕ್ಕೆ ಒರಗಿ ನಿಂತಿದ್ದ ಪುರುಷೋತ್ತಮ ಅಳುಕುತ್ತಾ ಮುಂದೆ ಬಂದು ಎರಡೂ ಕೈಗಳಿಂದ ಮಗುವ ಎತ್ತಿಕೊಂಡ ಮತ್ತೊಮ್ಮೆ ತಾನು ಅಪ್ಪನಾದ ಖುಷಿಗೆ ಅದರ ನೊಸಲಿಗೆ ಮುತ್ತನ್ನಿಟ್ಟು, ನೆತ್ತಿಯನ್ನೊಮ್ಮೆ. ಪ್ರೀತಿಯಲಿ ಸವರಿ, ಪುಟ್ಟ ಕೈಕಾಲುಗಳಿಗೆ ಹೂ ಮುತ್ತನಿಕ್ಕಿ ಸಂತೃಪ್ತಿಯಲಿ ಬಿಕ್ಕುವಾಗ….. ಜಾಗೃತವಾಯಿತು ಅವನ ಮನಸ್ಸು. ಮಗುವನೆತ್ತಿಕೊಂಡೇ ಪ್ರಸೂತಿ ಗೃಹದ ಕಡೆ ಇಣುಕಿದ. ನೋವು ಕಳೆದು ಕೊಂಡು ಸಂತೃಪ್ತಿಯಲಿ ಮಲಗಿದ್ದ ಅರ್ಧಾoಗಿಯನ್ನೊಮ್ಮೆ ಕಣ್ತುಂಬಿಕೊಂಡ. “ಎಷ್ಟು ನೋವು ಎಷ್ಟು ಸಂಕಟ ಅನುಭವಿಸಿದ್ದಾಳೆ ಜಗಕೆ ಜೀವ ವೊಂದನ್ನು ಹೊತ್ತು ತರುವಾಗ ಮನಸ್ಸು ಸಂಭ್ರಮಿಸಿದರೂ ಅದರ ಹಿಂದೆ ಅನುಭವಿಸಿದ ಯಾತನೆ ಎಷ್ಟು’.ಎಂದು ಮರುಗಿದ.
ಅಷ್ಟರಲ್ಲಿ ಗದ್ದಲ ಶುರುವಾಯಿತು “ಕೊಡಿಲ್ಲಿ ಪುರುಷ ಮಗು ನಿಂದಾದರೂ ನೋಡುವ ಹಕ್ಕು ನಮಗಿಲ್ಲವೇ???” ಅತ್ತ ಕಸಿದುಕೊಂಡು ಲೊಚ ಲೊಚ ಮುತ್ತಿಕ್ಕಿ “ಮಗು ಯಾವುದು ಗಂಡೋ ಹೆಣ್ಣೋ!!” ಪ್ರಶ್ನೆಗಳ ಮೇಲೊಂದು ಪ್ರಶ್ನೆ ತೂರಿ ಬಂತು ಲಿಂಗ ಯಾವುದೆಂದು ನೋಡುವ ಕಾತುರ ಅವರದ್ದು. ಹಿರಿಯಾಕೆ ನೇತ್ರಾವತಿ ಮೊದಲು ಎತ್ತಿ ನೋಡಿ “ಓ.. ಇದೂ ಹೆಣ್ಣು” ಎಂದು ಉದ್ಗಾರವೆತ್ತಲು ಒಂದು ಕ್ಷಣ ವಾತಾವರಣವೇ ಸ್ಥಬ್ಧವಾಯಿತು. ಹೆಣ್ಣೆoಬ ಶಬ್ಧ ಕೇಳಿದೊಡನೆ ಕೋಣೆಯಲಿ ಮೊದಲೇ ಅಸ್ವಸ್ಥಳಾಗಿ ಮುದುಡಿ ಮಲಗಿದ್ದ ಬಾಣಂತಿಯ ಎದೆ ಧಸಕ್ ಎಂದಿತು. ಪದ್ಮಾವತಮ್ಮ ” ನನಗಂತೂ ಈ ಬಾರಿ ಬಾಣಂತನ ಮಾಡಲು ಸೊಂಟ ಇಲ್ಲ ಬೇಕಾದ್ರೆ ಬೀಗಿತ್ತಿಯನ್ನು ಕರೆಸಿಕೊಳ್ಳಲಿ ” ಲಟಿಕೆ ಮುರಿಯುತ್ತ ….. ಗಂಡು ಹುಟ್ಟಲಿ ಎಂದು ಸುಳಿದಿಟ್ಟ ಸಿಪ್ಪೆ ತೆಂಗಿನಕಾಯಿ ಕಡೆ ಒಮ್ಮೆ ದುರುಗುಟ್ಟಿ ನೋಡಿದರೆ, ರಾಯರು ಕೆಂಗಣ್ಣು ಬಿಡುತ್ತ ಬಿರ ಬಿರನೆ ತೋಟದ ಕಡೆ ನಡೆದೇ ಬಿಟ್ಟರು. “ಹೆಣ್ಣು ಹೆತ್ತು ಎಲ್ಲರ ಆಸೆಯ ಚಿವುಟಿ ಹಾಕಿದಳು” ಕಿಸಿ… ಪಿಸಿ.. ತಲೆಗೊಂದು ಮಾತುಗಳು ಬರತೊಡಗಿದವು. ನಾಜೂಕಿನಿಂದ ಹಿಡಿದು ಕೊಂಡಿದ್ದ ಸುತ್ತಲಿನವರ ಕೈ ಈಗ ಸಡಿಲವಾಗ ತೊಡಗಿತು. ಮಗು ಒಬ್ಬರ ಕೈ ನಿಂದ ಮತ್ತೊಬ್ಬರ ಕೈಗೆ ಜಾರ ತೊಡಗಿತು.
ಶಿಶುವನ್ನು ದಡಬಡಿಸಿ ಕೈನಲ್ಲಿ ಇರಿಸಿಕೊಂಡವರು ಅಷ್ಟೇ ವೇಗದಿಂದ ತಂದು ತಾಯಿಯ ಪಕ್ಕ ಕುಕ್ಕಿ “ಮೂರನೇದು ಹೆಣ್ಣು ಹಡೆದು ಬಿಟ್ಟೆಯಲ್ಲೇ ಗಂಡಾಗುವುದೆಂದು ಎಷ್ಟು ಅಸೆ ಪಟ್ಟಿದ್ದೆವು… ಈ ಸಂಭ್ರಮಕ್ಕೆ ನಾವೆಲ್ಲ ಕಾಯಬೇಕಿತ್ತಾ ವಂಶೋದ್ಧಾರಕನ ಕನಸು ಕಂಡ ನಮ್ಮ ಸ್ಥಿತಿ ನಿನಗೆಲ್ಲಿ ಅರ್ಥವಾಗಬೇಕು ಬಿಡು. ನಿನ್ನ ಮುದ್ದಿನ ಮಗಳ ನೀನೆ ಇಟ್ಟುಕೋ” ಎಂದು ತಿರುಗಿ ನೋಡದೆ ಅತ್ತೆ ನಾದಿನಿ ಉಳಿದ ಹೆಂಗಸರು ಪೂರ್ತಿ ಹೊರ ನಡೆದರು. ಆದರೆ ಇತ್ತ ಜಗುಲಿಯಲ್ಲಿ ಇದಾವುದರ ಗೊಡವೆ ಇಲ್ಲದೆ ಗೌರಿಯ ಇನ್ನೆರಡು ಹೆಣ್ಣು ಮಕ್ಕಳಾದ ಅಚಲ, ನಿಶ್ಚಲ “ತಂಗಿ ಬಂದಳು ” ಎಂದು ಚಪ್ಪಾಳೆ ತಟ್ಟಿಕೊಂಡು ಕುಣಿಯುತ್ತಿದ್ದವು.
‘ನೋವಿನ ಮೇಲೊಂದು ನೋವು… ಹೆಣ್ಣಾಗಿ ಹುಟ್ಟಿದ್ದೇ ನನ್ನ ತಪ್ಪು ಎನ್ನುವಾಗಲೇ ನಾನೊಂದು ಹೆಣ್ಣು ಹೆತ್ತು ಬಿಟ್ಟೆನಲ್ಲಾ’ ತಾಯಿ ಹೃದಯ ಮರುಗಿತು… ಗಂಡ ಈಗ ಬಂದಾನು… ಕ್ಷಣದೊಳಗೆ ಪುಟ್ಟಗೂಸನ್ನು ಎತ್ತಿಕೊಂಡು ಮುಗುಳ್ನಕ್ಕು ಕೈ ಹಿಡಿದು ತನಗೆ ಧೈರ್ಯ ತುಂಬಿಯಾನು ಎಂದು ಗೌರಿ ಅಸಹಾಯಕ ನೋಟ ಬೀರುತ್ತಿದ್ದರೆ ಇತ್ತ ಅಪ್ಪನೆನಿಸಿಕೊಂಡವ ತಾಯಿ ಪದ್ಮಾವತಮ್ಮನ ದುಮುಗುಡುವ ನೋಟ, ಅಕ್ಕ ನೇತ್ರಳ ಕ್ರೂರ ದೃಷ್ಟಿಯನ್ನ ಎದುರಿಸಲಾಗದೆ ನಡುಗುತ್ತಾ ನಿಂತಿದ್ದ. ತಕ್ಕ ಮಟ್ಟಿಗೆ ವಿದ್ಯೆ ಕಲಿತ ಪುರುಷೋತ್ತಮನಿಗೆ ಹೆಂಗಸರೆಲ್ಲರ ವರ್ತನೆ ನೋಡಿ “ಹೆಣ್ಣಾಗಿ ಹುಟ್ಟಿ… ಹೆಣ್ಣಿಗೆ ಜನ್ಮ ಕೊಟ್ಟು ಒಂದು ಹೆಣ್ಣೇ ಹೆಣ್ಣು ಮಗುವೆಂದು ಹೀಗಳೆಯುವುದೇಕೆ..””ಎಂದು ಸಿಟ್ಟು ನೆತ್ತಿಗೇರಿದರೂ ತತ್ ಕ್ಷಣಕ್ಕೆ “ಇಷ್ಟೆಲ್ಲಾ ತೋಟ ಮನೆ, ಆಸ್ತಿಗೆ ಮುಂದೆ ವಾರಸುದಾರರು ಯಾರು? ‘ಎಂಬ ಪ್ರಶ್ನೆ ಕಾಡಿ ಚಿಂತಾಕ್ರಾಂತನಾದ. ಒಡಲಾಗ್ನಿಯ ತಾಳಲಾಗದೆ ಬೇಸತ್ತು ನೆರೆದವರ ಕಡೆಗೊಮ್ಮೆ ನೋಡಿ ಪುರುಷೋತ್ತಮ ಕಾಲು ಜಾಡಿಸಿ ದೂರ ಸರಿದು ಹೋಗುತ್ತಿದ್ದಂತೆ… ನೇತ್ರಾವತಿ ತನ್ನ ಹತ್ತುವರುಷದ ಮಗನ ಕೈ ಗಟ್ಟಿಯಾಗಿ ಹಿಡಿದುಕೊಂಡು “ಜಯ ತನ್ನದೇ” ಎಂಬಂತೆ ಮನದಲ್ಲೇ ಬೀಗಿದಳು.
ಅವರವರೇ ಗುಸುಗುಸುಗುಡುತ್ತ ಅಶೌಚ ತೊಳೆದು ಕೊಳ್ಳಲು ಬಚ್ಚಲ ಮನೆ ಸೇರುತ್ತಿದ್ದಂತೆ ಅಷ್ಟೊತ್ತಿನಿಂದ ಅಡುಗೆ ಕೋಣೆಯಲಿ ಮೊಣಕಾಲೊಳಗೆ ತಲೆ ಹುದುಗಿಸಿ ಕೂತಿದ್ದ ಎರಡನೇ ಸೊಸೆ ವಾಸಂತಿಯ (ಬಂಜೆಯ ಪಟ್ಟ ಹೊತ್ತವಳು) ಹೆಜ್ಜೆಗಳು ಈಗ ತನಗಿಲ್ಲದ ಭಾಗ್ಯವ ಕಣ್ಣಲ್ಲಾದರೂ ಕಂಡು ಸಂಭ್ರಮಿಸೋಣ ಎಂಬಾಸೆಯಲಿ ಪಡಸಾಲೆಯ ಕಡೆಗೆ ಚುರುಕಾದವು.
ವಾತಾವರಣ ಸ್ವಲ್ಪ ತಣ್ಣಗಾಗುತ್ತಿದ್ದಂತೆ ಗೌರಿ ನೋವಿನಿಂದಲೇ ತನ್ನ ಮಗುವತ್ತ ಕಣ್ಣಾಡಿಸಿದಳು.ಕಣ್ಮುಚ್ಚಿ ಮಲಗಿದ ಹಸುಗೂಸು ನಿದ್ದೆ ಯಲ್ಲಿ ಒಮ್ಮೆ ನಕ್ಕಿತು. ಪ್ರಯಾಸದಲಿ ಮೇಲೆದ್ದು ಕುಳಿತು ಶಿಶುವ ಬರಸೆಳೆದು ಅಪ್ಪಿ ತೊಡೆಯ ಮೇಲಿರಿಸಿಕೊಂಡು ಬಗ್ಗಿ ಮೊಲೆಹಾಲು ಕುಡಿಸತೊಡಗಿದಳು. ಮಗು ಚಪ್ಪರಿಸಿ ಚಪ್ಪರಿಸಿ ಹಾಲು ಕುಡಿವಾಗ ಹೃದಯದಾಳದ ಜೀವಜಲ ಕೂಸಿನೊಳಗೆ ಹೋದಂತೆ! ಸ್ವರ್ಗದಲಿ ತೇಲಿದಂತೆ.. ಏನೋ ದಕ್ಕಿಸಿಕೊಂಡಂತೆ ಸಂತೃಪ್ತಿಯಲಿ ಜಗವ ಮರೆತಳು.
ಬಿಗಿದಪ್ಪಿ ಮೈಮರೆತು ಕೂತವಳಿಗೆ ತಟ್ಟನೆ ಮೈ ಬೆವರತೊಡಗಿ ವಾಸ್ತವದ ನೆನಪಾಯಿತು ಗಂಡಾಗ ಬಾರದಿತ್ತೆ ನನಗೆ.. ಹೆಣ್ಣಾಗಿ ಹುಟ್ಟಿ ನಾ ಅನುಭವಿಸಿದ ಕಷ್ಟದ ಪಾಡು ನಿನಗೂ ಸುತ್ತಿಕೊಂಡಿತು ಯಾಕೆ ಹುಟ್ಟಿದೆಯೇ ಅನಿಷ್ಟ??ಹೆಣ್ಣಾಗಿ ನನಗೆ ಹುಣ್ಣಾಗಿ..ತಟಕ್ಕನೆ ವಾಸ್ತವದ ಅರಿವಾಗಿ ಮಗುವ ಬದಿಗೊತ್ತಿ ಜೋರಾಗಿ ರೋಧಿಸ ತೊಡಗಿದಳು.
ಹಸುಗೂಸು ಪಕ್ಕನೆ ತನ್ನೆಲ್ಲ ಶಕ್ತಿಯನೊಮ್ಮೆ ಒಗ್ಗೂಡಿಸಿ ಜನ್ಮ ಕೊಟ್ಟಾಕೆಯತ್ತ ಅನಾಥ ಭಾವದಿ ನೋಡುವಾಗ ಅಲ್ಲೇ ಮರೆಯಲ್ಲಿ ನಿಂತಿದ್ದ (ತಾಯ್ತನವನ್ನು ಅನುಭವಿಸದ) ವಾಸಂತಿಯ ಹೆಂಗರುಳು ಚುರುಕ್ ಎಂದಿತೊಮ್ಮೆ “ಅಕ್ಕಾ ಈ ಮಗುವ ನಾ ಸಾಕಿಕೊಳ್ಳಲೇ???” ಎನ್ನುವಾಗ ತಾಯಿ ಮಡಿಲು ತುಂಬಿದಂತೆ ಕೊಠಡಿ ತುಂಬೆಲ್ಲ ಒಂದು ಬಗೆಯ ಧನ್ಯತಾ ಭಾವ ಆವರಿಸಿತು.
✍️ ಕುಸುಮಾ. ಜಿ.ಭಟ್, ಸಾಗರ
(ನಾಲ್ಕೈದು ದಶಕಗಳ ಹಿಂದಿನ ಒಂದು ಹೆಣ್ಣು ಮಗು ಜನನ ಸನ್ನಿವೇಶ)
6 thoughts on “ಹೆಣ್ಣು”
ಕಣ್ಣಂಚಿನಲ್ಲಿ ನೀರು ತರಿಸಿದ ಉತ್ತಮ ಕತೆ
Very Nice
ಮನಕಲಕುವ ಕಥೆ
ಪುರುಷ ಪ್ರಧಾನ ವ್ಯವಸ್ಥೆ ಹೊಂದಿರುವ ಈ ನಮ್ಮ ದೇಶದ ಇಂದಿನ ಹಿಂದಿನ ಮನಸ್ಥಿತಿ ಬದಲಾಗಬೇಕಿದೆ.. ಬಂಜೆಯ ಭಾವನೆ ಓದುವಾಗ ನಿಜಕ್ಕೂ ಭಾವನೆಗಳು ಚುರ್ ಎಂದವು.. ಅದ್ಭುತ ರಚನೆ..👌🙏
ನಿಮ್ಮ ಬರವಣಿಗೆಯ ಶೈಲಿಯಲಿ ಸಾಹಿತ್ಯದ ಸೊಗಡಿದೆ
ಕಮ್ಮನೆ ಘಮಿಸುವ ಮಾಗಿದ ವೇಗ, ಓಘಗಳ ಓಜವಿದೆ
ಮೆಲ್ಲನೆ ಓದಿಸಿಕೊಂಡು, ತನ್ನತ್ತ ಸೆಳೆವ ಪದಗಳ ಚೆಲುವಿದೆ
ನಲ್ಲೆಗೆ ಇರದಂಥಾ ವಿಶೇಷ ಶಬ್ದಾಲಂಕಾರದ ಗುಣವಿದೆ
ಕೆಲವೊಮ್ಮೆ ಪದಗಳನೂ ಮೀರಿಸಿದ ಭಾವನೆಗಳ ಸೆಳೆತವಿದೆ
ಎಲ್ಲ ರಸಗಳನು ಬರಸೆಳೆವ ಬರವಣಿಗೆಯ ಮೆರವಣಿಗೆಯಿದೆ
ಒಟ್ಟಿನಲಿ ಚಿಟ್ಟೆಗಳು ಮಧುವಿನತ್ತ ಹಾರಾಡುತ ಬಂರುವಂತಿದೆ
ಪಟ್ವು ಬಿಟ್ಟು ವಧುವ ಅರಸಿ ಹಾತೊರೆವ ಧಾವಂತವಿದೆ.
ಕಥೆ ನಾಲ್ಕು ದಶಕಗಳ ಹಿಂದಿನದಾದ್ರು, ಮಾನವನ ಆಸೆಗಳಿಗೆ ಕೊನೆಯಲ್ಲಿ!! ಈ ಕಥೆ ಪ್ರಸ್ತುತ ಸಮಾಜಕ್ಕೊಂದು ಅದ್ಭುತ ಕನ್ನಡಿ.