"ವೈದೇಹಿ, ನಿನಗೆ ಕತ್ತೆಯಂಗೆ ವಯಸ್ಸಾಯಿತೇ ವಿನಃ ಬುದ್ಧಿ ಬರಲಿಲ್ಲ. ಆ ಆಂಡವಾ ನಿನ್ನ ಮಿದುಳಲ್ಲಿ ಸಗಣಿ ತುಂಬಿದ್ದಾನೇನೋ? ಪಾವನಿಯ ತಾಳಕ್ಕೆ ನೀನೂ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಿದ್ದೆಯಲ್ಲವೇ? ಈಗ ಅವಳು ಹೇಳಿದ್ದನ್ನು ಕೇಳಿಸಿಕೊಂಡೆಯಲ್ಲ? ಅಮೃತಧಾರೆ ಎರೆದಂಗೆ ಆಗಿರಬೇಕು. ಬ್ರಾಹ್ಮಣತ್ವದ ನಮ್ಮ ಶ್ರೇಷ್ಠತೆಗೆ ಮಸಿ ಹಚ್ಚಿ ಬಿಟ್ಟಳಲ್ಲ? ಈ ಇಳಿ ವಯಸ್ಸಿನಲ್ಲಿ ಜಾತಿ ಬಿಟ್ಟು ಅನ್ಯ ಜಾತಿಯವರೊಂದಿಗೆ ಸಂಬಂಧ ಬೆಳೆಸುವುದು ಚೆಂದವೇ? ಶತಮಾನಗಳ ಇತಿಹಾಸವಿರುವ ಭಾರತೀಯ ಧರ್ಮಗಳಲ್ಲಿ ಬ್ರಾಹ್ಮಣ ಜಾತಿ ಅತ್ಯಂತ ಶ್ರೇಷ್ಠವಾದದ್ದು. ಪುರಾತನ ಕಾಲದಿಂದಲೂ ರಾಜ-ಮಹಾರಾಜರುಗಳಿಗೆ, ಮೊಗಲರಿಗೆ, ಸುಲ್ತಾನ-ಶಾಹಿಗಳಿಗೆ ನಮ್ಮವರೇ ರಾಜಪುರೋಹಿತರಾಗಿದ್ದರು, ದಾರ್ಶನಿಕರಾಗಿದ್ದರು. ಈಗಲೂ ಸಮಾಜದ ಎಲ್ಲಾ ರಂಗಗಳಲ್ಲಿ ನಮ್ಮವರೇ ಉನ್ನತ ಸ್ಥಾನದಲ್ಲಿದ್ದಾರೆ. ಇಡೀ ದೇಶವೇ ನಮ್ಮ ಹಿಡಿತದಲ್ಲಿದೆ ಎಂದರೆ ತಪ್ಪಾಗಲಾರದು. ಅಂಥಹುದರಲ್ಲಿ ಶ್ರೇಷ್ಠ ಸಂಪ್ರದಾಯದ ಅಯ್ಯರ್ ಮನೆತನದಲ್ಲಿ ಹುಟ್ಟಿ ಬೆಳೆದ ಈ ನಿನ್ನ ಮುದ್ದಿನ ಮಗಳು ಆ ಚೆಟ್ಟಿಯಾರ್ ಮನೆತನದ ಹುಡುಗನನ್ನು ಪ್ರೀತಿಸುವುದೆಂದರೇನು? ಇದಕ್ಕೆ ನಿನ್ನ ಕುಮ್ಮಕ್ಕು ಇದೆಯೆಂಬ ಗುಮಾನಿ ನನಗೆ. ನಿನ್ನ ಕೈಯಾರೆ ಮಗಳ ಭವಿಷ್ಯವನ್ನು ಹಾಳು ಮಾಡುತ್ತಿರುವುದು ನಿನ್ನ ಅಲ್ಪ ಬುದ್ಧಿಗೆಲ್ಲಿ ಹೊಳೆಯಬೇಕು? ರಾಮಚಂದ್ರ, ನೀನೇ ಕಾಪಾಡು ತಂದೆ." ಹೆಂಡತಿಗೆ ಗುಡುಗುತ್ತಿದ್ದ ಕೇಶವನ್ ಅಯ್ಯರ್ ಮುಖ ನಿಗಿನಿಗಿ ಕೆಂಡದಂಥಾಗಿತ್ತು.
"ನಾನು ಹೇಳಿದೆನೇ ನಿಮ್ಮ ಮುದ್ದಿನ ಮಗಳಿಗೆ ಆ ಚೆಟ್ಟಿಯಾರ್ ಹುಡುಗನನ್ನು ಲವ್ ಮಾಡು ಎಂದು? ಈ ಮನೆಯಲ್ಲಿ ಏನೇ ಅವಘಡ ಸಂಭವಿಸಿದರೂ ಅದು ನನ್ನ ಕೊರಳಿಗೆ ಸುತ್ತಿಕೊಳ್ಳುತ್ತದೆ. ಪಾವನಿ ತನ್ನ ಲವ್ ಪುರಾಣ ನಿಮ್ಮುಂದೆ ಹೇಳಿದಾಗಲೇ ನನಗೂ ಗೊತ್ತಾಗಿದ್ದು. ದೂರ್ವಾಸ ಮುನಿಯಂಥ ನಿಮ್ಮಂಥ ಕೋಪಿಷ್ಠರ ಜೊತೆಗೆ ಏಗಿ ಏಗಿ ನನಗಂತೂ ಜೀವನ ಸಾಕಾಗಿ ಹೋಗಿದೆ. ರಾಮ ರಾಮಾ. ಹಗಲೂ, ರಾತ್ರಿ ಈ ಸಂಸಾರಕ್ಕೆ ಜೀವ ತೇಯ್ದು ತೇಯ್ದೂ ಬೇಸರ ಬಂದ್ಬಿಟ್ಟಿದೆ. ಶ್ರೀಹರಿ, ಆದಷ್ಟು ಬೇಗ ನನ್ನನ್ನು ಕರ್ಕೊಂಡು ಮುಕ್ತಿ ಕಾಣಿಸಿಬಿಡು ತಂದೆ." ಗಂಡನ ಮಾತಿನಿಂದ ವೈದೇಹಿ ತುಂಬಾ ನೊಂದುಕೊಂಡು ಮಾತಾಡುವಷ್ಟರಲ್ಲಿ ಕಣ್ಣೀರು ಕಪಾಳಕ್ಕೆ ಬಂದಿತ್ತು. ಪಾವನಿ ತಾಯಿಯ ಕಣ್ಣೀರು ಒರೆಸಲು ಮುಂದಾಗಿದ್ದಳು.
"ಇದೆಲ್ಲ ಪ್ರಹಸನ ಬೇಡ. ನನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳುತ್ತೇನೆ. ತಾಯಿ, ಮಗಳಿಬ್ಬರೂ ಕಿವಿಗೊಟ್ಟು ಕೇಳಿಸಿಕೊಳ್ಳಿರಿ. ಒಂದು ವೇಳೆ ಪಾವನಿ ಅದೇ ಚೆಟ್ಟಿಯಾರ್ ಹುಡುಗನನ್ನು ಮದುವೆಯಾಗುವುದಾದರೆ ನನ್ನ ಹೆಣ ಬೀಳುತ್ತೆ. ನನ್ನ ಚೆಟ್ಟದ ಮುಂದೆ ಅವನೊಂದಿಗೆ ತಾಳಿ ಬಿಗಿಸಿಕೊಳ್ಳಬೇಕು ಅಷ್ಟೇ" ಎಂದು ಗುಡುಗಿದ ಕೇಶವನ್ ಅಯ್ಯರ್ ತಮ್ಮ ಕೋಣೆಯನ್ನು ಸೇರಿಕೊಂಡು ಧಡಾರಂತ ಬಾಗಿಲಿಕ್ಕಿಕೊಂಡರು. ತಾಯಿ-ಮಗಳಿಬ್ಬರೂ ಮಿಕಿಮಿಕಿ ಮುಖ ನೋಡಿಕೊಂಡರು. ಏನೂ ಮಾತಾಡದೇ ಪಾವನಿ ಸಹ ತನ್ನ ಕೋಣೆ ಸೇರಿಕೊಂಡಳು.
*****
ಪಾವನಿಯ ಮನಸ್ಸು ತಾಕಲಾಟದಲ್ಲಿ ಮುಳುಗಿತ್ತು. "ನನ್ನ ಪ್ರೀತಿಯನ್ನು ತ್ಯಾಗ ಮಾಡಲೇ ಅಥವಾ ತಂದೆ-ತಾಯಿಗಳ ಸಂಬಂಧ ಕಡಿದುಕೊಳ್ಳಲೇ?" ಅಡಕೊತ್ತಿನಲ್ಲಿ ಸಿಕ್ಕ ಅಡಕೆಯಂತಾಗಿತ್ತು. ಎತ್ತೆತ್ತಲೋ ಜಿಗಿದಾಡುತ್ತಿದ್ದ ಅವಳ ಮನಸ್ಸಿನಲ್ಲಿ ಮಾಧವನ್ ಪರಿಚಯವಾದದ್ದು, ಗೆಳೆತನ ಬೆಳೆದಿದ್ದು, ಪ್ರೀತಿ ಅಂಕುರಿಸಿದ್ದು ರೀಲು ರೀಲಾಗಿ ಸುತ್ತತೊಡಗಿದವು.
ಅಂದು ಬೆಂಗಳೂರಿನ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವದ ವಿಜೃಂಭಣೆಯ ಸಮಾರಂಭ. ಬೆಳಿಗ್ಗೆಯಿಂದ ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಘನವೆತ್ತ ರಾಜ್ಯಪಾಲರ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಖ್ಯ ಮಂತ್ರಿಗಳ, ಕಾಲೇಜಿನ ಅಧ್ಯಕ್ಷರ ಮತ್ತು ಪ್ರಾಂಶುಪಾಲರ ಭಾಷಣಗಳು ಮಧ್ಯಾಹ್ನದವರೆಗೆ ವಿಜೃಂಭಿಸಿದ್ದರೆ ಸಂಜೆ ಆರರಿಂದ ವರ್ಣರಂಜಿತ ಮನೋರಂಜನೆ, ಸಾಂಸ್ಕøತಿಕ ಕಾರ್ಯಕ್ರಮಗಳು ರಂಗೇರತೊಡಗಿದ್ದವು. ಪ್ರಸಿದ್ಧ ಕನ್ನಡ ಚಲನಚಿತ್ರ ಗಾಯಕ ಅನೂಪ್ ಮತ್ತು ಗಾಯಕಿ ಅಲಕನಂದಾ ಅವರಿಂದ ಸಂಗೀತ ಸಂಜೆ ಇದ್ದುದರಿಂದ ಕಾಲೇಜಿನ ಆಡಿಟೋರಿಯಂ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಅದಲ್ಲದೇ ವಿದ್ಯಾರ್ಥಿಗಳ ರಸಮಂಜರಿ ಕಾರ್ಯಕ್ರಮಗಳು ವಾರ್ಷಿಕೋತ್ಸವದ ಸಮಾರಂಭಕ್ಕೆ ಮೆರುಗು ತಂದಿದ್ದವು.
ಆರನೇ ಸೆಮ್‍ನ ಇಅಂಡ್‍ಸಿಯಲ್ಲಿ ಓದುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ ತಮಿಳು ತಂಬಿ ಮಾಧವನ್ ಚೆಟ್ಟಿಯಾರ್ ತ್ಯಾಗರಾಜರ ಕೀರ್ತನೆಗಳನ್ನು ತನ್ನ ಮಧುರ ಕಂಠದಿಂದ ಹಾಡಿ ಸಂಗೀತ ಪ್ರೇಮಿಗಳ ಮನಸ್ಸನ್ನು ತಣಿಸಿದ್ದ.
ಎರಡನೇ ಸೆಮ್‍ನ ಕಂಪ್ಯೂಟರ್ ಸೈನ್ಸ್‍ನಲ್ಲಿ ಓದುತ್ತಿದ್ದ ಪಾವನಿ ಅಯ್ಯರ್ ಭರತನಾಟ್ಯದಿಂದ ಅಲ್ಲಿದ್ದವರ ಮನಸ್ಸುಗಳನ್ನು ಆವರಿಸಿದ್ದಳು. ಅವಳು ಅದೇ ಮೊದಲ ಸಾರೆ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು. ಅವಳ ನಾಟ್ಯ ಶೈಲಿ ನಾಟ್ಯರಾಣಿ ಶಾಂತಲೆಯ ನೆನಪನ್ನು ಮರುಕಳಿಸುವಂತೆ ಮಾಡಿತ್ತು. ಹಾಲಿನ ಬಣ್ಣದ ರೂಪಸಿ ಪಾವನಿ. ಬೇಲೂರು ಶಿಲಾಬಾಲಿಕೆಯರಂತೆ ಕಡೆದಿಟ್ಟ ಮೈಮಾಟದ ಚೆಲುವೆ. ವೈಭವೋಪೇತ ಭರತನಾಟ್ಯದ ಆ ಉಡುಗೆ-ತೊಡುಗೆಗಳಲ್ಲಿ ಪಾವನಿ ಮತ್ತಷ್ಟು ಮುದ್ದು ಮುದ್ದಾಗಿ ಕಂಡಿದ್ದಳು. ಹೆಜ್ಜೆಯ, ಗೆಜ್ಜೆಯ ನಾದಕ್ಕೆ ನವಿಲಿನಂತೆ ಮನಮೋಹಕವಾಗಿ ನರ್ತಿಸಿದ್ದಳು. ಅರ್ಧತಾಸಿನ ನೃತ್ಯ ಮುಗಿಯುತ್ತಿದ್ದಂತೆ ಪ್ರೇಕ್ಷಕರ ಹರ್ಷದ ಹೊನಲಿನ ಜೊತೆಗೆ ಕಿವಿಗಡಚಿಕ್ಕುವ ಕರತಾಡನ ಮತ್ತು ಒನ್ಸ್ ಮೋರ್ ಬೇಡಿಕೆ. ಕಲಾರಸಿಕರ ಮನದಿಚ್ಛೆಗೆ, ಕಾರ್ಯಕ್ರಮದ ಆಯೋಜಕರ ಬೇಡಿಕೆಯ ಮೇರೆಗೆ ಪಾವನಿ ಮತ್ತೆ ತುಸು ಹೊತ್ತು ಭರತನಾಟ್ಯದ ದೇವತೆಯಂತೆ ವಿಜೃಂಭಿಸಿದ್ದಳು. ಬಳುಕುವ ಬಳ್ಳಿಯಂಥಹ ಸಹಜ ಚೆಲುವೆಯ ಅಂಕು-ಡೊಂಕಿನ ಅವಳ ದೇಹ ನಾಟ್ಯದಲ್ಲಿ ತನ್ಮಯವಾಗಿದ್ದನ್ನು ಪ್ರೇಕ್ಷಕರೆಲ್ಲರೂ ಕಣ್ಮನಗಳಲ್ಲಿ ತುಂಬಿಕೊಂಡು ಆನಂದಿಸಿದ್ದರು. ನಾಟ್ಯ ಸರಸ್ವತಿಯೇ ಧರೆಗಿಳಿದು ಬಂದಂತೆನಿಸಿತ್ತು. ನಾಟ್ಯರಾಣಿ ಶಾಂತಲೆ ಮೈದುಂಬಿದ್ದಳು ಪಾವನಿಯಲ್ಲಿ. ಪ್ರೇಕ್ಷಕರ ಹರ್ಷೋದ್ಘಾರಕ್ಕೆ ಮಿತಿಯೇ ಇರಲಿಲ್ಲ.
"ಅರೇ ದೋಸ್ತ್, ಈ ಅಯ್ಯರ್ ಹುಡುಗಿ ಯಾರೋ?" ಮಾಧವನ್ ಪಕ್ಕದಲ್ಲಿದ್ದ ತನ್ನ ಆತ್ಮೀಯ ಗೆಳೆಯ ಸಾಗರನನ್ನು ವಿಚಾರಿಸಿದ್ದ. ನಾಟ್ಯದ ವಿವಿಧ ಭಂಗಿಗಳಲ್ಲಿ ಢಾಳಾಗಿ ಕಾಣುತ್ತಿದ್ದ ಪಾವನಿಯ ಚೆಲುವಿಗೆ ಮನಸೋತಿದ್ದ. ವಿವಿಧ ನಾಟ್ಯ ಭಂಗಿಗಳು ಅವನ ಕಣ್ಮನಗಳಲ್ಲಿ ಅಚ್ಚೊತ್ತಿದ್ದವು.
"ನೀನೇನಪಾ ಬರೀ ಕುಡುಮಿ, ಬುಕ್ ವರ್ಮ. ಕಾಲೇಜ್, ಲೈಬ್ರರಿ, ನೀನಾಯಿತು, ನಿನ್ನ ಓದಾಯಿತು ಎಂಬಂತಿರುತ್ತಿರುವಿ. ನಿನ್ನ ಸಹಪಾಠಿಗಳ ಪರಿಚಯವೇ ನಿನಗಿಲ್ಲದಿರುವಾಗ ಹುಡುಗಿಯರ ಪರಿಚಯ ಅದ್ಹೇಗೆ ಸಾಧ್ಯ? ಪಾವನಿ ಅಯ್ಯರ್ ಸಹ ತಮಿಳು ತಂಬಿಯೇ." ಗೆಳೆಯನನ್ನು ಛೇಡಿಸುತ್ತಾ ಸಾಗರ್ ಚುಟುಕಾಗಿ ಪಾವನಿಯ ಬಗ್ಗೆ ಹೇಳಿದ್ದ.
"ನಿನಗೆ ಇವಳು ಗೊತ್ತೇನೋ?"
"ಡಿಟೇಲ್ಸ್ ಗೊತ್ತಿಲ್ಲ. ಸ್ವಲ್ಪ ಸ್ವಲ್ಪ ಗೊತ್ತು ಅಷ್ಟೇ."
"ಇದುವರೆಗೆ ಅವಳ ಬಗ್ಗೆ ನನಗೆ ಹೇಳಲೇ ಇಲ್ಲವಲ್ಲ...?"
"ಅಂಥ ಸಂದರ್ಭ ಕೂಡಿ ಬಂದಿದ್ದಿಲ್ಲವಲ್ಲ?"
"ಅವಳ ಪರಿಚಯ ಇಂದೇ ಮಾಡಿಕೊಡಲ್ಲ?"
"ಅವಳ ಬಗ್ಗೆ ನಿನಗ್ಯಾಕಿಷ್ಟು ಆಸಕ್ತಿ...?"
"ನಾಟ್ಯ ಸರಸ್ವತಿಯ ಪರಿಚಯವಿದ್ದರೆ ಚೆನ್ನ ಅಲ್ಲವೇನೋ?"
"ಅದು ಸರೀನೇ? ನಡೆ ಅಲ್ಲೇ ಗ್ರೀನ್ ರೂಮಿನತ್ತ ಹೋಗೋಣ." ಗೆಳೆಯರಿಬ್ಬರೂ ವೇದಿಕೆಗೆ ಹೊಂದಿಕೊಂಡಿದ್ದ ಗ್ರೀನ್ ರೂಮಿನತ್ತ ಹೆಜ್ಜೆ ಹಾಕಿದರು. ಪಾವನಿ ಮೇಕಪ್ ತೆಗೆದು ಸ್ವಲ್ಪ ಹೊತ್ತಿಗೆ ಹೊರಗಡೆ ಬಂದಳು. ಸಾಗರ್‍ನನ್ನು ನೋಡುತ್ತಲೇ ಪರಸ್ಪರ ಹಾಯ್, ಹಲೋಗಳ ವಿನಿಮಯವಾಯಿತು.
"ಪಾವನಿ, ಇವನು ಮಾಧವನ್ ಚೆಟ್ಟಿಯಾರ್ ಅಂತ, ನನ್ನ ಕ್ಲಾಸ್ಮೇಟ್. ಮಾಧವನ್, ಇವಳು ಪಾವನಿ ಅಂತ. ಎರಡನೇ ಸೆಮ್‍ಲ್ಲಿ ಓದುತ್ತಿದ್ದಾಳೆ" ಅಂತ ಪರಸ್ಪರ ಪರಿಚಯ ಮಾಡಿಕೊಟ್ಟಿದ್ದ ಸಾಗರ್. ಮತ್ತೆ ಹಾಯ್, ಹಲೋಗಳ ವಿನಿಮಯ ಪಾವನಿ, ಮಾಧವನ್‍ರ ಮಧ್ಯೆ.
"ಮಾಧವನ್, ನಿಮ್ಮ ಹಾಡನ್ನು ಕೇಳಿಸಿಕೊಂಡ ನಂತರ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮ ಪರಿಚಯ ಮಾಡಿಕೊಳ್ಳಬೇಕೆಂದಿದ್ದೆ. ರೋಗಿ ಬಯಸಿದ್ದು ಹಾಲು ಅನ್ನ, ಡಾಕ್ಟರ್ ಹೇಳಿದ್ದೂ ಹಾಲು, ಅನ್ನ ಎಂಬಂತೆ ಸಾಗರ್ ನಿಮ್ಮನ್ನು ಪರಿಚಯಿಸಿದ. ಸಾಗರ್ ತುಂಬಾ ಥ್ಯಾಂಕ್ಸ್" ಎಂದೆನ್ನುತ್ತಾ ಪಾವನಿ ಇಬ್ಬರ ಮುಖದೆಡೆ ಮೆಚ್ಚುಗೆಯ ನೋಟ ಹರಿಸಿದ್ದಳು.
"ನೀವು ನನ್ನನ್ನು ಭೆಟ್ಟಿಯಾಗಬೇಕೆಂದಿದ್ದೀರಾ...?" ಮಾಧವನ್ ರಾಗವೆಳೆದ. ಭರತ ನಾಟ್ಯದ ಡ್ರೆಸ್ ತೆಗೆದು ಕೆನೆ ಬಣ್ಣದ ಟಾಪ್ ಮತ್ತು ಗಾಢ ಹಸಿರು ಬಣ್ಣದ ಲೆಗ್ಗಿನ್ಸ್‍ನಲ್ಲಿ ಇಮ್ಮಡಿಗೊಂಡಿದ್ದ ಅವಳ ಚೆಲುವಿನ ಆರಾಧನೆಯಲ್ಲಿ ಮುಳುಗಿದ್ದ ಮಾಧವನ್.
"ನೀವು ತ್ಯಾಗರಾಜರ ಕೀರ್ತನೆಗಳನ್ನು ತುಂಬಾ ಮಧುರವಾಗಿ ಮನದುಂಬಿ ಹಾಡಿದಿರಿ. ಹಾಡಿನಲ್ಲಿನ ನಿಮ್ಮ ತನ್ಮಯತೆ, ಭಾವ ತುಂಬಾ ಇಷ್ಟವಾದವು. ಅಭಿನಂದಿಸಲು ಭೆಟ್ಟಿಯಾಗಬೇಕೆಂದಿದ್ದೆ" ಎಂದೆನ್ನುತ್ತಾ ಪಾವನಿ ಮಾಧವನ್‍ನನ್ನು ಅಭಿನಂದಿಸಿದರೆ, "ನಿಮ್ಮ ಭರತನಾಟ್ಯ ತುಂಬಾ ಇಂಪ್ರೆಸ್ಸಿವ್ ಆಗಿತ್ತು. ನಾಟ್ಯರಾಣಿ ಶಾಂತಲಾ ಅವರನ್ನು ನಿಮ್ಮಲ್ಲಿ ಕಂಡೆ." ಖುಷಿಯಿಂದ ಮಾಧವನ್ ಪಾವನಿಯನ್ನು ಅಭಿನಂದಿಸಿದ್ದ.
"ನಿಮ್ಮ ಪರಿಚಯ ಮಾಡಿಕೊಡಬೇಕೆಂದು ಮಾಧವನ್ ದುಂಬಾಲು ಬಿದ್ದ. ಅದಕ್ಕೇ ಓಡೋಡಿ ಬಂದೆವು. ನಿಮ್ಮ ನಾಟ್ಯ ರಿಯಲೀ ಸೂಪರ್" ಎಂದೆನ್ನುತ್ತಾ ಸಾಗರ್ ಪಾವನಿಯನ್ನು ಅಭಿನಂದಿಸಿದ. ಮಾಧವನ್‍ನ ಹಾಡುಗಾರಿಕೆಯನ್ನು ಪಾವನಿ, ಪಾವನಿಯ ನಾಟ್ಯವನ್ನು ಮಾಧವನ್ ಹೊಗಳಿದ್ದೇ ಹೊಗಳಿದ್ದು. ಹಾಗೇ ಮಾತಾಡುತ್ತಾ ಮೂವರೂ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ರಸಮಂಜರಿ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದರು.
ಪಾವನಿ ಮತ್ತು ಮಾಧವನ್‍ರ ಮನಸ್ಸುಗಳು ಗೆಳೆತನಕ್ಕೆ ಪರಸ್ಪರ ಎಳಸತೊಡಗಿದ್ದವು. ಮನಸ್ಸುಗಳು ಇಷ್ಟಪಟ್ಟ ಮೇಲೆ ದೂರ ದೂರ ಉಳಿದಾವೆ? ಪರಿಚಯ ಗೆಳೆತನಕ್ಕೆ, ಗೆಳೆತನ ಆತ್ಮೀಯತೆಗೆ, ಆತ್ಮೀಯತೆ ಪರಸ್ಪರ ಇಷ್ಟವಾಗುವುದಕ್ಕೆ, ಇಷ್ಟವಾಗುವಿಕೆ ಪ್ರೀತಿಯಲ್ಲಿ ಮಾರ್ಪಡುವುದಕ್ಕೆ ಬಹಳ ದಿನಗಳೇನೂ ಬೇಕಾಗಲಿಲ್ಲ. ಮಾಧವನ್‍ಗೆ ತನ್ನೆದೆಯ ಪುಲಕವನ್ನು ಹಂಚಿಕೊಳ್ಳಲು ಹಿಂಜರಿಕೆ. ಅದೊಂದು ದಿನ ಸಂಜೆ ವ್ಹಾಟ್ಸಪ್‍ನಲ್ಲಿ ಚಾಟ್ ಮಾಡುತ್ತಿದ್ದಾಗ, "ಮಾಧವನ್, ಇನ್ಮುಂದೆ ನಾವು ಸಿಂಗುಲರ್‍ನಲ್ಲಿ ಮಾತಾಡೋಣವೇ?"
"ವ್ಹಾಯ್ ನಾಟ್ ಪಾವನಿ?"
"ಮಾಧು ಎನ್ನಲೇ?"
"ಹಾಗೆ ಕರೆದರೆ ಸಂಭ್ರಮಿಸುವವನು ನಾನು."
"ಮಾಧು, ನಾನು ನಿನ್ನನ್ನು ತುಂಬಾ ತುಂಬಾ ಪ್ರೀತಿಸುತ್ತಿದ್ದೇನೆ."
"ಪಾವನಿ, ನೀನು ತುಂಬಾ ಸಂಪ್ರದಾಯಸ್ಥ ಅಯ್ಯರ್ ಕುಟುಂಬದಿಂದ ಬಂದವಳು."
"ಹೌದು, ಈಗೇನೀಗ?"
"ನಿಮ್ಮ ಮನೆಯಲ್ಲಿ ಸರ್ವಥಾ ನಮ್ಮ ಪ್ರೀತಿಯನ್ನು ಒಪ್ಪುವುದಿಲ್ಲ."
"ನೀನೂ ಸಂಪ್ರದಾಯಸ್ಥ ವೈಶ್ಯ ಕುಟುಂಬದಿಂದ ಬಂದಿಲ್ಲೇನು? ನಿಮ್ಮ ಮನೆಯಲ್ಲಿ ಒಪ್ತಾರೆಯೇ?"
"ನಮ್ಮ ಮನೆಯಲ್ಲೂ ಒಪ್ಲಿಕ್ಕಿಲ್ಲ."
"ಅದೇ ಮತ್ತೆ. ಇಬ್ಬರ ಮನೆಯಲ್ಲೂ ಒಪ್ಪುವುದಿಲ್ಲ. ಆದರೂ ನಮ್ಮ ಪ್ರೀತಿ ಉಳೀಬೇಕು ಅಷ್ಟೇ. ಒಪ್ಪಿಸಲು ಪ್ರಯತ್ನಿಸೋಣ. ನೀನು ನನ್ನನ್ನು ಪ್ರೀತಿಸುವುದಂತೂ ಗ್ಯಾರಂಟಿ ಅಲ್ವಾ ಮಾಧೂ...?"
"ಹೌದು."
"ಮ್ಯಾಡಿ, ನಾವಿಬ್ಬರೂ ಇಂದಿನಿಂದ ಲವರ್ಸ್. ಓಕೇನಾ?"
ಈ ಹೊತ್ತಿಗೆ ಇಬ್ಬರದೂ ಪದವಿ ಮುಗಿದು ಇಬ್ಬರೂ ಒಳ್ಳೊಳ್ಳೆ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದ್ದರು. ಪಾವನಿ ಮತ್ತು ಮ್ಯಾಧವನ್‍ರ ಪ್ರೀತಿ ಹೆಮ್ಮರವಾಗತೊಡಗಿತ್ತು.
ಪಾವನಿ ತನ್ನ ಯೋಚನಾ ಲಹರಿಯಿಂದ ಹೊರಬಂದಿದ್ದಳು.
"ಒಂದೂ ಅರ್ಥವಾಗುತ್ತಿಲ್ಲ, ಈಗೇನು ಮಾಡುವುದು? ನಾಳೆ ಹೇಗೂ ಶನಿವಾರ. ನಾನು, ಮಾಧೂ ಇಬ್ಬರೂ ಮೀಟ್ ಮಾಡುವ ಯೋಜನೆಯಂತೂ ಇದೆಯಲ್ಲ? ಏನಾದರೂ ಒಂದು ಗಟ್ಟಿ ನಿರ್ಧಾರಕ್ಕೆ ಬರುವುದು ಒಳ್ಳೆಯದು. ಅಪ್ಪ-ಅಮ್ಮನನ್ನು ಉಳಿಸಿಕೊಳ್ಳಬೇಕೋ, ಮಾಧೂನನ್ನು ಉಳಿಸಿಕೊಳ್ಳಬೇಕೋ? ಇಬ್ಬರೂ ಭೆಟ್ಟಿಯಾದಾಗ ನಿರ್ಧರಿಸೋಣ." ಪಾವನಿ ತನ್ನಷ್ಟಕ್ಕೆ ತಾನೇ ಸಮಾಧಾನ ಮಾಡಿಕೊಂಡಳು.
*****
ಪಾವನಿ, ಮಾಧವನ್ ಇಬ್ಬರೂ ಲಾಲ್‍ಬಾಗ್‍ಗೆ ಹೋಗಿ ಕುಳಿತುಕೊಂಡರು. "ಏನ್ರೀ ಅಯ್ಯರ್ ಮೇಡಂ, ತುಂಬಾ ಗಂಭೀರ ಯೋಚನೆಯಲ್ಲಿರುವ ಹಾಗಿದೆ...?" ಎಂದ ಮಾಧವನ್ ಅವಳ ಮುಖದಲ್ಲಿನ ಭಾವನೆಗಳನ್ನು ಓದಿದವನಂತೆ.
"ಹೌದು ಕಣೋ, ಮ್ಯಾಟರ್ ತುಂಬಾ ಸೀರಿಯಸ್ಸಾಗೇ ಇದೆ" ಎಂದೆನ್ನುತ್ತಾ ಪಾವನಿ ತನ್ನ ಮನೆಯಲ್ಲಿ ತಮ್ಮ ಪ್ರೀತಿಯ ಬಗ್ಗೆ ನಡೆದ ಬಿಸಿಬಿಸಿ ಮಾತುಕತೆಗಳನ್ನು ವಿವರಿಸಿ, "ಮಾಧೂ, ನನಗೆ ಆತಂಕವಾಗಿಬಿಟ್ಟಿದೆ. ದಿಕ್ಕೇ ತೋಚದಂತಾಗಿದೆ" ಎಂದೆನ್ನುವಷ್ಟರಲ್ಲಿ ಪಾವನಿಯ ಕಣ್ಣುಗಳು ಕಡಲಾಗಿದ್ದವು. ಮಾಧವನ್ ಮಾತಿಲ್ಲದೇ ಅವಳ ಕಣ್ಣೀರು ತೊಡೆದ. ಮೌನದಲ್ಲಿ ತುಸು ಹೊತ್ತು ಸರಿಯಿತು. ಇಬ್ಬರ ದೃಷ್ಟಿ ಎತ್ತಲೋ ನೆಟ್ಟಿದ್ದವು.
"ನಾನು ಮೊದಲೇ ಈ ಮಾತುಗಳನ್ನು ಹೇಳಿದ್ದೆ. ನೀನು ಕೇಳಲಿಲ್ಲ. ದೂರ್ವಾಸ ಮುನಿಯಂಥ ನಿನ್ನಪ್ಪನ ಕೆಂಗಣ್ಣಿನ ಕೋಪ, ಶಾಪಕ್ಕೆ ನಾವು ಬಲಿಪಶುಗಳಾಗಬೇಕಿದೆಯೇನೋ? ಈಗಲಾದರೂ ಒಂದು ಗಟ್ಟಿ ನಿರ್ಧಾರಕ್ಕೆ ಬಾ. ಅಪ್ಪ-ಅಮ್ಮನೋ, ಅಥವಾ ಈ ಮಾಧೂನೋ ಎಂದು?"
"ನಿನ್ನ ಅಭಿಪ್ರಾಯವೇ ನನ್ನ ಅಭಿಪ್ರಾಯ ಕಣೋ."
"ಇಳಿ ವಯಸ್ಸಿನಲ್ಲಿ ತಂದೆ-ತಾಯಿಗಳ ಮನಸ್ಸನ್ನು ನೋಯಿಸದೇ ಇರುವುದು ಒಳ್ಳೆಯದು ಎಂಬುದು ನನ್ನ ಭಾವನೆ."
"ನೀನು ಹೀಗೆ ಅಂದರೆ ಹೇಗೋ? ಇಷ್ಟೇನಾ ನಿನ್ನ ಪ್ರೀತಿ...? ಇಂಥ ಕಠಿಣ ನಿರ್ಧಾರ ಬೇಕೇ ಈ ಶತಮಾನದಲ್ಲೂ...?"
"ಪಾವನಿ, ನಾವಿಬ್ಬರೂ ಹಿರಿಯರ ಮಾತುಗಳಿಗೆ ಬೆಲೆ ಕೊಡುವುದು ಸರಿ ಅನಿಸುತ್ತಿದೆ. ಆದರೂ ಒಂದು ಮಾತು. ನಾನು ಈ ಜನ್ಮದಲ್ಲಿ ನಿನ್ನನ್ನು ಹೊರತು ಪಡಿಸಿ ಬೇರೆ ಯಾರನ್ನೂ ಪ್ರೀತಿಸುವುದಿಲ್ಲ. ನಾವಿಬ್ಬರು ಹೀಗೇ ಪ್ರೀತಿಸುತ್ತ ಇದ್ದು ಬಿಡೋಣ."
"ಇದೇ ಸರೀನಾ...?"
"ಸದ್ಯದ ಪರಿಸ್ಥಿತಿಯಲ್ಲಿ ಇದೇ ಸರಿಯಾದದ್ದು ಎಂದೆನಿಸುತ್ತಿದೆ. ಅತಿ ನೋವು ತಿಂದು ನಲಿವು ಕೊಡುವ ತಾಯಿಗೆ, ಕಡುಕಷ್ಟ ತಿಂದು ಬಲು ಇಷ್ಟ ಪಡುವ ತಂದೆಗಾಗಿ ನಮ್ಮ ಪ್ರೀತಿಯನ್ನು ತ್ಯಾಗ ಮಾಡೋಣ."
"ಕಹಿ ಮಣ್ಣು ತಿಂದು ಸಿಹಿ ಹಣ್ಣು ಕೊಡುವ ಮರದ ಹಾಗೆ; ಕಗ್ಗತ್ತಲೆ ತಿಂದು ಹೊಂಬೆಳಕು ನೀಡುವ ಸೂರ್ಯನ ಹಾಗೆ ಎಂದು ನಿನ್ನ ಮಾತಿನ ಅರ್ಥವೇ...?"
ನೋವುಂಡ ಇಬ್ಬರೆದೆಗಳು ಭಾರವಾದ ಹೆಜ್ಜೆ ಹಾಕುತ್ತಾ ಅಲ್ಲಿಂದ ಕದಲಿದ್ದವು.
*****
ಪಾವನಿ, ಮಾಧವನ್ ಮಧ್ಯೆ ಮಾತುಗಳಾಗಿ ಎರಡು ದಿನಗಳಾಗಿದ್ದವು.
"ಮಗಳೇ, ನಾವು ಸಂಪ್ರದಾಯಸ್ಥರೆಂದು ಗೊತ್ತಿದ್ದೂ, ಆ ಹುಡುಗನನ್ನು ಪ್ರೀತಿಸುವ ಮುಂಚೆ ಒಂದು ಕ್ಷಣ ಯೋಚಿಸಬೇಕಿತ್ತು. ನೀನು ತುಂಬಾ ತಪ್ಪು ಮಾಡಿಬಿಟ್ಟಿ." ಪಾವನಿಗೆ ವೈದೇಹಿಯ ಹಿತೋಪದೇಶ.
"ಅಮ್ಮಾ, ಪ್ರೀತಿ ಅನ್ನೋದೇನು ಹೇಳಿ ಕೇಳಿ ಬರುತ್ತದೆಯೇ? ಪ್ರೀತಿಗೆ ಕಣ್ಣಿಲ್ಲ. ಅದು ಜಾತಿ-ಮತ ಒಂದೂ ಕೇಳೋದಿಲ್ಲ. ಆಸ್ತಿ-ಅಂತಸ್ತಿನ ಬಗ್ಗೆಯೂ ಯೋಚಿಸುವುದಿಲ್ಲ. ನಾನು ಚೆಟ್ಟಿಯಾರ್ ಹುಡುಗನನ್ನು ಪ್ರೀತಿಸಿ ತಪ್ಪು ಮಾಡಿರಬಹುದು. ಆದರೆ ಅವನು ಅಪರಂಜಿ. ನಿಮ್ಮ ಕಾಲವೇ ಬೇರೆ, ನಮ್ಮ ಕಾಲವೇ ಬೇರೆ. ನೀವಿನ್ನೂ ನಿಮ್ಮ ಕಾಲದಲ್ಲೇ ಇದ್ದೀರಿ. ಶಾಂತಚಿತ್ತದಿಂದ ನಮ್ಮ ಬಗ್ಗೆಯೂ ಆಲೋಚಿಸಿರಿ. ಮನಸಾರೆ ಪ್ರೀತಿಸುವುದೊಂದನ್ನು ಬಿಟ್ಟರೆ ಬೇರೆ ಯಾವ ತಪ್ಪೂ ಮಾಡಿಲ್ಲ. ನಾನೀಗ ಏನು ಮಾಡಬೇಕೆಂದು ಹೇಳಿದರೆ ಅದರಂತೆ ನಡೆದುಕೊಳ್ಳುವೆ." ಹೃದಯ ಘಾಸಿಗೊಂಡಿದ್ದರೂ ತಂದೆ-ತಾಯಿಗಳ ಮನಸ್ಸಿನಂತೆ ನಡೆಯಬೇಕೆಂದು ತೀರ್ಮಾನಿಸಿಕೊಂಡಿದ್ದಳು ಪಾವನಿ.
"ನಿನ್ನ ಪ್ರೀತಿಯನ್ನು ತ್ಯಾಗ ಮಾಡಿದರೆ ಸಂಕಟವು ಕೊನೆಗೊಂಡುಬಿಡುತ್ತದೆ." ನಿಷ್ಕರುಣೆಯಿಂದ ಹೇಳಿ ವೈದೇಹಿ ಮಗಳ ಪ್ರತಿಕ್ರಿಯೆಗೆ ಕಾದಳು.
ತಾಯಿಯ ಮಾತಿನ ತೆರೆ ಅವಳೆದೆಗೆ ರಭಸವಾಗಿ ಅಪ್ಪಳಿಸಿತು ಸಮುದ್ರದ ತೆರೆ ಬಂಡೆಗೆ ಅಪ್ಪಳಿಸುವಂತೆ. ಮೊದಲೇ ಮನಸ್ಸನ್ನು ಬಂಡೆಯಂತೆ ಕಲ್ಲಾಗಿಸಿಕೊಂಡಿದ್ದ ಪಾವನಿ, "ನಿಮ್ಮಿಷ್ಟದಂತೆಯೇ ಆಗಲಿ ಅಮ್ಮ" ಎಂದೆನ್ನುತ್ತಾ ಮೌನಕ್ಕೆ ಜಾರಿದಳು. ತ್ಯಾಗದಲ್ಲಿ ಸುಖವನ್ನು ಕಂಡುಕೊಳ್ಳಬೇಕೆಂದುಕೊಂಡಿದ್ದಳೇನೋ?
ಮಗಳ ಪರಾಮರ್ಶಿತ ನಿರ್ಧಾರ ಕೇಶವನ್ ಅಯ್ಯರಿಗೆ ಸಂತಸ ನೀಡಿತ್ತು. ಮಗಳಿಗೆ ಮೆಚ್ಚುಗೆಯ ಮಾತು ಹೇಳಿದರು. ಪಾವನಿ ಮಾತಿಲ್ಲದೇ ತಂದೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತ ತನ್ನ ಕೋಣೆ ಸೇರಿಕೊಂಡಿದ್ದಳು. ಮಗಳ ಮುಖದಲ್ಲಿನ ಭಾವನೆಗಳು ಹೆತ್ತ ತಾಯಿ ಕರುಳಿಗೆ ಅರ್ಥವಾಗದೇ ಇರಬಲ್ಲದೇ?
"ಅಂತೂ, ನಿಮ್ಮದೇ ಹಟವನ್ನು ಸಾಧಿಸಿ ಒಲಿದ ಹೃದಯಗಳೆರಡನ್ನೂ ಅಗಲಿಸಿ ಬಿಟ್ಟಿರಿ. ನಿಮಗೆ ಹೋಳಿಗೆ-ತುಪ್ಪ ಉಂಡಷ್ಟು ಖುಷಿಯಾಗಿರಬಹುದಲ್ಲವೇ?" ವೈದೇಹಿಯ ನೋಟ ತೀಕ್ಷಣವಾಗಿತ್ತು ಗಂಡನ ಕಡೆಗೆ.
"ನನ್ನ ಮಾತಿನಲ್ಲಿ ತಪ್ಪೇನಿದೆ? ಮಹಾ ವೈಷ್ಣವರಾಗಿರುವ ನಾವು ವೈಶ್ಯ ಕುಲದವರೊಂದಿಗೆ ಸಂಬಂಧ ಬೆಳೆಸುವುದು ತಪ್ಪಿತು. ಅಂತೂ ಪಾವನಿ ನನ್ನ ಮನೆತನದ ಮಾನ, ಮರ್ಯಾದೆಗಳನ್ನು ಉಳಿಸಿದಳು." ಸಂತಸದಿಂದ ಬೀಗುತ್ತಿದ್ದರು ಕೇಶವನ್ ಅಯ್ಯರ್.
"ಹೌದೌದು, ನೀವು ಮಹಾವೈಷ್ಣವರು! ರೀ, ತುಸು ಬಾಯಿ ಮುಚ್ಕೊಂಡು ಸುಮ್ನೇ ಇರ್ತೀರಾ? ಚೆಟ್ಟಿಯಾರ್ ನಿಮಗಿಂತಲೂ ಶ್ರೇಷ್ಠರಾದ ಮಹಾವೈಷ್ಣವರು. ಅವರಿಲ್ಲದಿದ್ದರೆ ನಿಮ್ಮದೇನಿದೆ ಈ ಜಗತ್ತಿನಲ್ಲಿ...? ಅವರು ಮಹಾನ್ ಕಾಯಕ ಯೋಗಿಗಳು. ಜೊತೆಗೆ ಮಹಾನ್ ದಾನಿಗಳು. ಅವರ ದಾನ-ಧರ್ಮಗಳಿಂದಲ್ಲವೇ ನಿಮ್ಮ ಬೇಳೆ ಬೇಯುತ್ತಿರುವುದು? ಅವರಿಲ್ಲದಿದ್ದರೆ ನಿಮ್ಮ ಬ್ರಾಹ್ಮಣತ್ವಕ್ಕೇನು ಬೆಲೆ? ನಿಮಗಿಂತಲೂ ಅವರೇ ಶ್ರೇಷ್ಠರು. ಶ್ರೀ ವಿಷ್ಣುವಿಗೆ ಹತ್ತಿರವಾಗಿರುವ ಅವರೇ ನಿಜವಾದ ಬ್ರಾಹ್ಮಣರು. ಪೌರೋಹಿತ್ಯದ ಹೆಸರಲ್ಲಿ ಅವರನ್ನು ಶೋಷಿಸುತ್ತಿರುವವರು ನೀವು." ವೈದೇಹಿ ಗಂಡನನ್ನು ಮೂದಲಿಸುತ್ತ ಅಡುಗೆ ಮನೆ ಸೇರಿಕೊಂಡಿದ್ದಳು. ಅಯ್ಯರ್ ಬಾಯಿಯ ಮೇಲೆ ಬೆರಳಿಟ್ಟುಕೊಂಡರು.
ಮುಂದಿನ ಎರಡು ದಿನಗಳಲ್ಲಿ ಅಯ್ಯರ್ ಮನೆಯಲ್ಲಿ ಗಂಡ-ಹೆಂಡತಿ, ತಂದೆ-ಮಗಳು, ತಾಯಿ-ಮಗಳಲ್ಲಿ ಯಾವುದೇ ಮಾತಿಲ್ಲ, ಕತೆಯಿಲ್ಲ. ಕ್ಷಣಗಳು ಯಾಂತ್ರಿಕವಾಗಿ ಚಲಿಸುತ್ತಿದ್ದವು. ಮೂರನೇ ದಿನ ಎಂದಿನಂತೆ ಸೂರ್ಯ ನೀಲಾಕಾಶದಲ್ಲಿ ಹೊಂಬಣ್ಣ ಹರಡಿ ಮೇಲೇಳತೊಡಗಿದ್ದ. ಮಾಮೂಲಿನಂತೆ ಏಳು ಗಂಟೆಗೆ ಎದ್ದ ಪಾವನಿ ಬಚ್ಚಲು ಮನೆಗೆ ಹೋಗಿ ಬಂದು ಅಡುಗೆ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾಗ ಚಿಟ್ಟನೇ ಚೀರುತ್ತಾ ಧೊಪ್ಪೆಂದು ಕುಸಿದು ಕುಳಿತಳು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗಳನ್ನು ಕಂಡ ವೈದೇಹಿ ಜೋರಾಗಿ ಕೂಗು ಹಾಕಿ ಗಂಡನನ್ನು ಕರೆದಳು. ತಕ್ಷಣ ಸಮೀಪದಲ್ಲಿದ್ದ ಆಸ್ಪತ್ರೆಗೆ ಸೇರಿಸಿದಾಗ ಪಾವನಿಯ ಬಿಪಿ ಚೆಕ್ ಮಾಡಿದ ಡಾಕ್ಟರ್, "ಲೋ ಬಿಪಿಯಾಗಿದೆ" ಎಂದೆನ್ನುತ್ತಾ ಮುಂದಿನ ಚಿಕಿತ್ಸೆಗೆ ಮುಂದಾದರು. ಐಸಿಯುನಲ್ಲಿ ಒಂದು ವಾರದವರೆಗೆ ಪಾವನಿಗೆ ಚಿಕಿತ್ಸೆ ಮುಂದುವರಿಯಿತು. ಮೌನಿಯಾಗಿ ಬಿಟ್ಟಳು ಪಾವನಿ.
"ತನ್ನ ಪ್ರೀತಿ ಘಾಸಿಗೊಂಡಿದ್ದಕ್ಕೆ ಇವಳು ಜೀವನಪರ್ಯಂತ ಕೊರಗುವುದಕ್ಕಿಂತ ಇಲ್ಲೇ ಹೀಗೇ ಕಣ್ಮುಚ್ಚಿಬಿಟ್ಟರೆ ಚೆಂದವೇನೋ?" ಎಂಬ ವಿಚಾರ ವೈದೇಹಿಯ ಮನದಲ್ಲಿ ಮಿಂಚಿ ಮಾಯವಾದಾಗ ತನ್ನ ದಿಢೀರ್ ಆಲೋಚನೆಗೆ ಗಾಬರಿಗೊಂಡಳು ಮರುಕ್ಷಣ.
"ಥೂ, ನನ್ನ ಜನ್ಮಕ್ಕಿಷ್ಟು ಬೆಂಕಿಹಾಕ. ಹೆತ್ತ ಮಗಳ ಬಾಳನ್ನೇ ಚಿವುಟಲು ಆಲೋಚಿಸುತ್ತಿರುವ ನಾನೊಬ್ಬ ತಾಯಿಯೇ? ನಾನೊಂದು ಹೆಣ್ಣಾ? ಇಲ್ಲ, ಇಲ್ಲ. ಕೃಷ್ಣಾ, ಇಂಥಹ ಯೋಚನೆಗಳು ಮನದಲ್ಲಿ ಸುಳಿಯದಂತೆ ಮಾಡು ತಂದೆ. ನನ್ನ ಮಗಳ ಪ್ರೀತಿ ಉಳಿಯಬೇಕು. ಅವಳ ಬಾಳು ಅವಳಿಚ್ಛೆಯಂತೆಯೇ ಬೆಳಗಬೇಕು. ಜಾತಿಯನ್ನು ಧಿಕ್ಕರಿಸಿ ಪಾವನಿ ತನ್ನ ಪ್ರೇಮಿಯನ್ನೇ ಮದುವೆಯಾಗಲಿ. ನಾವು ಇಂದೋ, ನಾಳೆಯೋ ಉದುರಿ ನೆಲ ಸೇರಲಿರುವ ಹಣ್ಣೆಲೆಗಳು. ಅವಳಿನ್ನೂ ಚಿಗುರೆಲೆ. ಅವಳ ಜೀವನದ ಬಳ್ಳಿ ತಾನು ನಂಬಿಕೊಂಡಿರುವ ಮರವನ್ನು ಅಪ್ಪಿಕೊಂಡು ಚಿಗುರಿ, ಮೊಗ್ಗು ಮೂಡಿಸಿ, ಹೂವರಳಿಸಿ, ಕಾಯಿ-ಹಣ್ಣುಗಳಾಗಿ ಫಲಿಸಿ ಸಾರ್ಥಕ ಜೀವನ ಕಂಡುಕೊಳ್ಳಬೇಕು. ಅವಳು ಬಾಳಿ ಬದುಕಬೇಕು. ಅವಳ ಜೀವನ ಹಸನಾಗಬೇಕು. ಪಾವನಿಯ ಮೊಗದಲ್ಲಿ ಮತ್ತೆ ನಗು ಅರಳಬೇಕು. ನಾನು ಅವಳ ಅಪ್ಪನಿಗೆ ತಿಳಿಸಿ ಹೇಳಬೇಕು." ಹೀಗೆ ವಿಚಾರಗಳು ವೈದೇಹಿಯ ಮನದಲ್ಲಿ ಮೂಡಿದಾಗ ಅದೇನೋ ಗೆಲುವು ಮೊಗದಲ್ಲಿ.
ಪಾವನಿಗೆ ಆರಾಮ ಇಲ್ಲದೇ ಆಸ್ಪತ್ರೆಗೆ ಸೇರಿಕೊಂಡ ಸುದ್ದಿ ಮಾಧವನ್‍ಗೆ ತಿಳಿದು ಆಸ್ಪತ್ರೆಗೆ ದೌಡಾಯಿಸಿ ಬಂದಿದ್ದ. ದೇಹದಲ್ಲಿ ರಕ್ತವೇ ಇಲ್ಲವೇನೋ ಎಂಬಂತೆ ಬಿಳುಚಿಕೊಂಡು ಬಸವಳಿದು ಮಲಗಿದ್ದ ಅವಳಿಗೆ ಸಾಂತ್ವನ ಹೇಳಿ ಹೋಗಿದ್ದ. ಪಾವನಿಯ ಜೊತೆಗಿದ್ದ ಅವಳ ತಾಯಿಗೆ ತನ್ನ ಪರಿಚಯ ಹೇಳಿಕೊಂಡಿದ್ದ. ವಿನಯವಂತ, ಸುರಸುಂದರಾಂಗ ಮಾಧವನ್ ತುಂಬಾ ಇಷ್ಟವಾಗಿದ್ದ ವೈದೇಹಿಗೆ. ಮಗಳ ಆಯ್ಕೆ ಸೂಪರ್ ಎಂದು ಮನದಲ್ಲೇ ಮೆಚ್ಚಿಕೊಂಡಳು.
"ಈಕೆ ಮನಸ್ಸಿನಲ್ಲಿ ಏನನ್ನೋ ಇಟ್ಟುಕೊಂಡು ಕೊರಗುತ್ತಿದ್ದಾಳೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿ ಆರಾಮವಾಗಿದ್ದರೂ ಆರೋಗ್ಯ ತುಂಬಾ ಸೂಕ್ಷ್ಮವಾಗಿದೆ. ತುಂಬಾ ಎಚ್ಚರಿಕೆಯಿಂದ ಇವಳನ್ನು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅದೇ ಕೊರಗಲ್ಲಿ ಈಕೆಯ ಆರೋಗ್ಯದಲ್ಲಿ ಮತ್ತೆ ಏರು-ಪೇರಾದರೆ ತುಂಬಾ ಕಷ್ಟ. ಮಗಳ ಭವಿಷ್ಯ ನಿಮ್ಮ ಕೈಯಲ್ಲಿದೆ" ಎಂದು ಪಾವನಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಅಯ್ಯರ್ ಮತ್ತು ವೈದೇಹಿಯವರಿಗೆ ತಿಳಿಸಿ ಆಸ್ಪತ್ರೆಯಿಂದ ಕಳುಹಿಸಿಕೊಟ್ಟಿದ್ದರು.
"ನೋಡ್ರೀ, ನಮ್ಮದು ಬಹಳವೆಂದರೆ ಹತ್ತು-ಹದಿನೈದು ವರ್ಷಗಳ ಜೀವನ. ಪಾವನಿಯ ಬಾಳ ಪಯಣ ಈಗಷ್ಟೇ ಶುರುವಾಗಬೇಕಿದೆ. ನೀವು ನಿಮ್ಮ ಹಟಮಾರಿ ಧೋರಣೆಯನ್ನು ಬದಲಿಸಿ ಅವಳಿಚ್ಛೆಯಂತೆ ಅದೇ ಚೆಟ್ಟಿಯಾರ್ ಹುಡುಗನ ಜೊತೆಗೆ ಮದುವೆ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ ನಮ್ಮ ಮಗಳು ನಮಗೆ ದಕ್ಕುವುದು ಕಷ್ಟದ ಮಾತೇ. ಇದರ ಮೇಲೆ ನಿಮ್ಮಿಚ್ಛೆ...?" ವೈದೇಹಿ ತುಂಬಾ ವಿನೀತಳಾಗಿ ಅಷ್ಟೇ ಕಟುವಾಗಿ ಹೇಳಿದ್ದಳು ಗಂಡನಿಗೆ.
"ಸರಿ ಸರಿ ನಿಮ್ಮಿಷ್ಟ. ನನ್ನದೇನಿದೆ? ಎಲ್ಲವೂ ಶ್ರೀಹರಿಯ ಇಚ್ಛೆಯಂತೆ ನಡೆಯುವುದಲ್ಲವೇ? ಆದರೂ ಮನಸಾರೆ ಒಪ್ಪಿಕೊಳ್ಳಲಾರೆ." ಕೇಶವನ್ ಅಯ್ಯರ್ ಮನಸ್ಸಿಲ್ಲದೇ ಪಾವನಿಯ ಮದುವೆಗೆ ಒಪ್ಪಿಕೊಂಡಿದ್ದರು. ಮಾಧವನ್‍ನ ತಂದೆ-ತಾಯಿಗಳು ಆಗರ್ಭ ಶ್ರೀಮಂತರಿದ್ದರೂ ಮಗನಿಚ್ಛೆಯಂತೆ ಪಾವನಿ ಮತ್ತು ಮಾಧವನ್‍ರ ಮದುವೆಯನ್ನು ಸಿಂಪಲ್ಲಾಗಿ ನೆರವೇರಿಸಿ ಪಾವನಿಯನ್ನು ಮನೆ ತುಂಬಿಸಿಕೊಂಡಿದ್ದರು. ಯುಎಸ್‍ದಲ್ಲಿದ್ದ ಪಾವನಿಯ ಒಬ್ಬನೇ ಅಣ್ಣ ಅರವಿಂದ್ ತನಗೆ ರಜೆ ಸಿಗಲಿಲ್ಲವೆಂಬ ಕಾರಣವನ್ನು ಮುಂದಿಟ್ಟುಕೊಂಡು ತಂಗಿಯ ಮದುವೆಗೆ ಬರಲಿಲ್ಲ. ಮುದ್ದು ಮಗನ ಮನದಾಸೆಯಂತೆ ಕೇಶವನ್ ಅಯ್ಯರ್ ಶ್ರೀಮಂತ ಮನೆತನದ ಹುಡುಗಿಯನ್ನು ಸೊಸೆಯನ್ನಾಗಿ ಮಾಡಿಕೊಂಡಿದ್ದರು. ಚೆನ್ನೈನಲ್ಲಿ ವಾಸಿಸುತ್ತಿದ್ದ ಸೊಸೆಯ ತಂದೆ-ತಾಯಿಗಳ ಶ್ರೀಮಂತಿಕೆ ಕೇಶವನ್ ಅಯ್ಯರ್‍ಗೆ ತುಂಬಾ ಇಷ್ಟವಾಗಿತ್ತು. ಹೆಂಡತಿಯೊಂದಿಗೆ ವಿದೇಶಕ್ಕೆ ಹಾರಿದ್ದ ಅರವಿಂದ್ ತಂದೆ-ತಾಯಿಗಳನ್ನು ನೋಡಲು ಬಂದಿದ್ದು ಒಂದೇ ಒಂದು ಸಾರೆ ಅದೂ ಎರಡು ವರ್ಷಗಳ ಹಿಂದೆ; ಅದೂ ಹೆಂಡತಿಯ ತಂಗಿಯ ಮದುವೆ ಬೆಂಗಳೂರಿನಲ್ಲಿ ಜರುಗಿದ್ದುದರಿಂದ.
"ವೈದೂ, ನಾನೆಲ್ಲಿ ಇರುವೆ? ಇದೇನಿದು ನಳಿಗೆಗಳು...?"
"ರೀ, ನಿಮಗೆ ಹುಷಾರಿರಲಿಲ್ಲ. ಅದಕ್ಕೀಗ ಆಸ್ಪತ್ರೆಯಲ್ಲಿರುವಿರಿ."
"ಹೌದೇ? ನನಗೇನಾಗಿದೆ? ಅರವಿಂದ್ ಬಂದಿರುವನೇ?"
"ಅಂಥಹದ್ದೇನೂ ಆಗಿಲ್ಲ. ಅರವಿಂದ್ ಬಂದಿಲ್ಲ. ಹೆಚ್ಚಿಗೆ ಮಾತಾಡಿ ಆಯಾಸ ಮಾಡಿಕೊಳ್ಳಬೇಡಿರಿ. ತುಸು ಹುಷಾರಾದ ಮೇಲೆ ನಾನೇ ಎಲ್ಲವನ್ನೂ ಹೇಳುವೆ."
"ಹೌದೇ? ಅವನು ಬಂದಿಲ್ಲವೇ...?" ಎಂದೆನ್ನುತ್ತಾ ಕೇಶವನ್ ಅಯ್ಯರ್ ನಿದ್ರೆಗೆ ಜಾರಿದ್ದರು.
ಮೂರು ದಿನಗಳ ಹಿಂದೆ ಕೇಶವನ್ ಅಯ್ಯರ್‍ಗೆ ಲಘು ಹೃದಯಾಘಾತವಾಗಿತ್ತು. ತಕ್ಷಣ ಮಗಳು ಪಾವನಿ, ಅಳಿಯ ಮಾಧವನ್ ಅವರ ಸಹಾಯಕ್ಕೆ ದೌಡಾಯಿಸಿ ಆಸ್ಪತ್ರೆಗೆ ಸೇರಿಸಿದ್ದರು. ಎರಡು ದಿನಗಳವರೆಗೆ ಅಯ್ಯರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಈಗ್ಗೆ ಆರು ತಿಂಗಳುಗಳ ಹಿಂದೆ ಕೇಶವನ್ ಅಯ್ಯರ್‍ಗೆ ನ್ಯೂಮೋನಿಯಾ ಆಗಿ ಹತ್ತು ದಿನಗಳವರೆಗೆ ಆಸ್ಪತ್ರೆಯಲ್ಲಿದ್ದರು. ಆಗಲೂ ಅವರು ಯುಎಸ್‍ನಲ್ಲಿದ್ದ ಮಗ ಅರವಿಂದ್‍ನ ಕನವರಿಕೆಯಲ್ಲಿದ್ದರು. ಇತ್ತೀಚಿಗೆ ತಂದೆ-ತಾಯಿಗಳೊಂದಿಗೆ ಅವನ ಮಾತುಕತೆಗಳೇ ಬಂದಾಗಿ ಹೋಗಿದ್ದವು. ಶ್ರೀಮಂತ ಮನೆತನದ ಹೆಂಡತಿಯ ಕೈಗೊಂಬೆಯಾಗಿದ್ದ. ಆಕೆಗೆ ಅವನ ಮನೆಯವರ ಬಗ್ಗೆ ಮೊದಲಿನಿಂದಲೂ ಒಂಥರ ತಾತ್ಸಾರ. ತನ್ನವರನ್ನು ಮರೆತು ಬಿಡಲು ಅವಳು ಅವನಿಗೆ ತಾಕೀತು ಮಾಡಿದ್ದಳು. ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸುದ್ದಿ ತಲುಪಿದ್ದರೂ ಅರವಿಂದ್ ಔಪಚಾರಕ್ಕೂ ಅವರ ಯೋಗ-ಕ್ಷೇಮ ವಿಚಾರಿಸಲಿಲ್ಲ. ಅವನ ಇತ್ತೀಚಿನ ನಡೆ ವಿಚಿತ್ರವೆನಿಸುತ್ತಿರುವುದನ್ನು ಸೂಕ್ಷ್ಮಗ್ರಾಹಿ ವೈದೇಹಿಯ ಮಾತೃ ಹೃದಯಕ್ಕೆ ಅರ್ಥವಾಗದೇ ಇರಲಿಲ್ಲ. ಮಗಳು ಪಾವನಿ, ಅಳಿಯ ಮಾಧವನ್ ಹಗಲು-ರಾತ್ರಿ ಎನ್ನದೇ ಕೇಶವನ್ ಅಯ್ಯರ್ ಆರೈಕೆಗೆ ಕಂಕಣ ತೊಟ್ಟು ನಿಂತಿದ್ದರು. ಮಾಧವನ್‍ನ ಸೇವಾ ಮನೋಭಾವ ಅಯ್ಯರ್ ಗಮನಕ್ಕೆ ಬಂದಿದ್ದರೂ ಅವನನ್ನು ಅಳಿಯ ಎಂದು ಸ್ವೀಕರಿಸಲು ಅದೇನೋ ಬಿಗುಮಾನ. ಅಳಿಯನ ಗುಣಗಾನ ಮಾಡಲು ಆಗದ ಸಂಕುಚಿತ ಮನೋಭಾವ.
ಪಾವನಿ ಮತ್ತು ಮಾಧವನ್ ಇಬ್ಬರಿಗೂ ಯುಕೆಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಹೊರಡುವ ತಯಾರಿಯಲ್ಲಿದ್ದ ಅವರಿಗೆ ಅಯ್ಯರ್ ಆರೋಗ್ಯ ಆಘಾತ ನೀಡಿತ್ತು. ಅರವಿಂದ್ ಅಂತೂ ಇಲ್ಲಿಗೆ ಬರುವ ಲಕ್ಷಣ ಕಾಣುತ್ತಿಲ್ಲ. ಇಂಥಹ ಸಮಯದಲ್ಲಿ ತಾವೂ ವಿದೇಶಕ್ಕೆ ಹೋದರೆ ತಾಯಿಗೆ ಮನೋಸ್ಥೈರ್ಯ ನೀಡುವವರಾರು ಎಂದು ಮಾಧವನ್ ಜೊತೆಗೆ ಆಲೋಚಿಸಿದ ಪಾವನಿ ಇಬ್ಬರೂ ಇಲ್ಲೇ ಉದ್ಯೋಗ ಮುಂದುವರಿಸುವ ತೀರ್ಮಾನ ತೆಗೆದುಕೊಂಡು ಯುಕೆಯ ಆಫರ್‍ನ್ನು ತಿರಸ್ಕರಿಸಿ ಅಯ್ಯರ್ ಸೇವೆಗೆ ಮುಂದಾಗಿದ್ದರು. ನಿದ್ರೆ, ನೀರಡಿಕೆ ಇಲ್ಲದೇ ಆಸ್ಪತ್ರೆ, ಮನೆಗೆ ಎಡತಾಕಿದ್ದರು. ವೈದೇಹಿಯ ಮನೋಬಲ ಹೆಚ್ಚಿಸಿದ್ದರು.
ತುಸು ಆರಾಮ ಎನಿಸಿದ ದಿನ ಕೇಶವನ್ ಅಯ್ಯರ್ ಪುನಃ ಅರವಿಂದ್‍ನ ಬಗ್ಗೆ ವಿಚಾರಿದರು.
"ರೀ, ಹೆತ್ತ ಮಗನಲ್ಲಿ ನಿಮ್ಮ ಬಗ್ಗೆ ಪ್ರೀತಿ, ಮಮಕಾರದ ಸೆಲೆಯೇ ಬತ್ತಿ ಹೋಗಿದೆ. ನಿಮ್ಮ ಮಗ ಯಾವತ್ತು ಶ್ರೀಮಂತರ ಮನೆಯ ಆ ಬಣ್ಣದ ಚಿಟ್ಟೆಯ ಬೆನ್ನುಹತ್ತಿ ವಿದೇಶಕ್ಕೆ ಹಾರಿ ಹೋದನೋ ಅಂದೇ ನಾನು ಅವನನ್ನು ಹೆಚ್ಚು ಕಡಿಮೆ ಮರೆತಿರುವೆ. ಅವನು ನಮ್ಮನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾನೆ. ಹೆಂಡತಿಯೇ ಅವನಿಗೆ ಸರ್ವಸ್ವ.
ನಿಮ್ಮ ಆರೋಗ್ಯ ಏರು-ಪೇರಾಗಿ ಆಸ್ಪತ್ರೆಗೆ ಸೇರಿಸಿದ್ದನ್ನು ನಿಮ್ಮ ಮಗರಾಯನಿಗೆ ಅಂದೇ ತಿಳಿಸಿದಳಂತೆ ಪಾವನಿ. `ಅಪ್ಪಾಜಿ ನಿನ್ನನ್ನು ತುಂಬಾ ನೆನಪಿಸಿಕೊಳ್ಳುತ್ತಿದ್ದಾರೆ, ತಕ್ಷಣ ಹೊರಟು ಬಾ’ ಎಂದು ಕೇಳಿಕೊಂಡಳಂತೆ. ಅದಕ್ಕೆ ಅರವಿಂದ್, `ನಾನು ಅಲ್ಲಿಗೆ ಬಂದು ಮಾಡುವುದೇನಿದೆ? ನಾನೇ ಬರಬೇಕೇನು ಅವರ ಆರೈಕೆ ಮಾಡಲು? ನೀವೆಲ್ಲ ಅಲ್ಲೇ ಇದ್ದೀರಲ್ಲಾ, ನಿಮಗೇನಾಗಿದೆ ಧಾಡಿ? ಅವರು ಹೇಗಿದ್ದರೂ ನನಗೇನಾಗಬೇಕಿದೆ? ಆ ದರಿದ್ರ ದೇಶಕ್ಕೆ ನಾನು ಕಾಲಿಡುವುದಿಲ್ಲ. ಹಾಗೇನಾದರೂ ಬಂದಿದ್ದೇ ಆದರೆ ಅದು, ಅಪ್ಪನ ಆಸ್ತಿಯನ್ನು ಮಾರಿಕೊಂಡು ಹೋಗಲು ಬರುವೆ ಅಷ್ಟೇ. ಸುಮ್ಮಸುಮ್ಮನೇ ಫೋನ್‍ಮಾಡಿ ನನ್ನನ್ನು ಡಿಸ್ಟರ್ಬ ಮಾಡಬೇಡಿ’ ಎಂದು ಹಾಗೆ, ಹೀಗೆ ಪಾವನಿಗೇ ಜೋರು ಮಾಡಿದನಂತೆ ಆ ಅವಿವೇಕಿ ಅನಾಗರೀಕ ಮನುಷ್ಯ. ಅವನು ಮಾನವೀಯತೆಯನ್ನು ಮರೆತಿದ್ದಾನೆ.
ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲಾ ತಿರುಗಿದರಂತೆ, ಹಾಗಾಯ್ತು ನಿಮ್ಮ ಕಥೆ. ಕಣ್ಣಿಗೆ ಕಣ್ಣು ಹಚ್ಚದೇ ಹಗಲೂ ರಾತ್ರಿ ನಿಮ್ಮ ಸೇವೆ, ಆರೈಕೆ ಮಾಡಿದವರು ನಿಮಗೆ ಕಾಣುತ್ತಿಲ್ಲವೇ? ಮಗನಿಗಿಂತಲೂ ಹೆಚ್ಚಿನ ಪ್ರೀತಿ, ಧೈರ್ಯ ಕೊಡುತ್ತಿರುವ ಅಳಿಯನಿದ್ದು ಅವನ ಪ್ರೀತಿಯನ್ನು ಮನಸಾರೆ ಸ್ವೀಕರಿಸದೇ ಸುಮ್ಮಸುಮ್ಮನೇ ಅರವಿಂದ್, ಅರವಿಂದ್ ಎಂದು ಹಲಬುತ್ತಿರುವಿರಲ್ಲ? ಹೃದಯಕ್ಕೆ ತಾಕುತ್ತಿರುವ ಪ್ರಾಂಜಲ ಪ್ರೀತಿಯನ್ನು ಅನುಭವಿಸದೇ ಕಾಣದ ಪ್ರೀತಿಗೆ ಹಂಬಲಿಸುತ್ತಿರುವಿರಲ್ಲ, ಇದು ಸರಿಯೇ? ಮಾಧವನ್‍ನನ್ನು ಅಳಿಯ ಎಂದು ಈಗಲಾದರೂ ಹೃದಯಪೂರ್ವಕವಾಗಿ ಒಪ್ಪಿಕೊಳ್ಳಿರಿ. ಇಳಿ ವಯಸ್ಸಿನ ನಮ್ಮಿಬ್ಬರ ಯೋಗ-ಕ್ಷೇಮ ನೋಡಿಕೊಳ್ಳುವುದಕ್ಕಾಗಿ ಅಳಿಯ, ಮಗಳು ಇಬ್ಬರೂ ಫಾರಿನ್‍ಗೆ ಹೋಗುವುದನ್ನೂ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಮಾಧವನ್, ಮನೆ ಮಗನಿಗಿಂತಲೂ ಹೆಚ್ಚು ನಮಗೀಗ" ಎಂದು ವೈದೇಹಿ ಗಂಡನಿಗೆ ಉಪದೇಶಕ್ಕೆ ಮುಂದಾಗಿದ್ದಳು.
"ಹೌದೇ, ಅರವಿಂದ್ ಹಾಗೆ ಹೇಳಿದನೇ? ಅವನಲ್ಲಿ ಏನೇನೋ ನಿರೀಕ್ಷೆ ಇಟ್ಟುಕೊಂಡಿದ್ದೆ. ಎಲ್ಲವೂ ಭಗ್ನಗೊಂಡವು. ನನ್ನ ಬುದ್ಧಿಗೆ ಮಂಕು ಕವಿದಿತ್ತೆಂದು ಅನಿಸುತ್ತೆ. ವೈದೂ, ಮಾಧವನ್ ನಿಜವಾಗಿಯೂ ಮಾನವಂತ. ಪಾವನಿ, ಮಾಧವನ್ ನನ್ನ ಎರಡು ಕಣ್ಣುಗಳಿದ್ದಂತೆ. ಈಗೆಲ್ಲಿದ್ದಾರೆ ಅವರು...?"
"ನೀವು ತುಸು ಗೆಲುವಾಗಿರುವುದರಿಂದ ಅವರು ಇಂದಷ್ಟೇ ಕೆಲಸಕ್ಕೆ ಹೋಗಿದ್ದಾರೆ. ಸಂಜೆಗೆ ಬರುತ್ತಾರೆ. ಮೇಲಾಗಿ ನಾಳೆ ನಿಮ್ಮನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡ್ತಾರಂತೆ."
"ಹೌದೇ? ಆ ಭಗವಂತ ಯಾವುದಾದರೂ ರೂಪದಲ್ಲಿ ಬಂದು ತನ್ನ ಭಕ್ತರನ್ನು ಕಾಪಾಡುತ್ತಾನಂತೆ. ಮಾಧವನ್ ಆಪದ್ಬಾಂಧವನಂತೆ ಬಂದು ನಮ್ಮನ್ನು ಕಾಪಾಡುತ್ತಿದ್ದಾನೆ. ಇದೊಂದು ಅಪರೂಪದ ಮಧುರ ಬಾಂಧವ್ಯ ಅಲ್ಲವೇ ವೈದೂ...?" ಎಂದೆನ್ನುವಷ್ಟರಲ್ಲಿ ಕೇಶವನ್ ಅಯ್ಯರ್ ಅವರ ಕಣ್ಣುಗಳು ನೀರಾಗಿದ್ದವು.
"ಹೌದ್ರೀ, ಮಾಧವನ್ ನಿಜವಾಗಿಯೂ ಆಪದ್ಬಾಂಧವ. ಸಮಾಧಾನ ಮಾಡಿಕೊಳ್ಳಿರಿ" ಎಂದೆನ್ನುತ್ತಾ ವೈದೇಹಿ ಗಂಡನ ಕಣ್ಣೀರು ತೊಡೆಯಲು ಮುಂದಾದಾಗ ಇಬ್ಬರ ಕಂಗಳಲ್ಲಿ ಅದೇನೋ ಹೊಸ ಹೊಳಪಿನ ಸಂಚಲನವಾಗಿತ್ತು.
* ಶೇಖರಗೌಡ ವೀ. ಸರನಾಡಗೌಡರ್,
ತಾವರಗೇರಾ-583279, ತಾ: ಕುಷ್ಟಗಿ, ಜಿ: ಕೊಪ್ಪಳ.
3 thoughts on “ಆದದ್ದೆಲ್ಲ ಒಳ್ಳೆಯದಕ್ಕೆ”
ಆದದ್ದೆಲ್ಲ ಒಳ್ಳೆಯದಕ್ಕೆ ಕಥೆ ಚನ್ನಾಗಿದೆ. ಇಂತಹ ವಿಷಯದ ಕಥೆಗಳು ಬಂದಿವೆ. ಆದರೂ ಕಥೆ ಹೇಳಿದ ರೀತಿ ಸೊಗಸಾಗಿದೆ. ಅಭಿನಂದನೆಗಳು ಗೌಡರಿಗೆ.
ಹಿರಿಯರ ಮಾತಿನ ವರಸೆ ಹಿಡಿದು ಬರೆದ ಕಥೆ ಸರಳ ನಿರೂಪಣೆಯೊಂದಿಗೆ ಮನ ಸೆಳೆಯಿತು.
ಸರಾಗವಾಗಿ ಓದಿಸಿಕೊಂಡು ಹೋಗುವ ಕಥೆ ಚೆನ್ನಾಗಿದೆ.
ಅಭಿನಂದನೆಗಳು