ಕೆ.ಸತ್ಯನಾರಾಯಣ ನವ್ಯೋತ್ತರ ಕಾಲಘಟ್ಟದ ಒಳ್ಳೆಯ ಕಥೆಗಾರರಲ್ಲೊಬ್ಬರು. ಈಗಾಗಲೇ ಕಥಾಸಂಕಲನ, ಕಾದಂಬರಿ, ಲಲಿತ ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ ಮತ್ತು ವಿಮರ್ಶಾ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರು. ಸತ್ಯನಾರಾಯಣರು ತಮ್ಮ ಬರವಣಿಗೆಯಲ್ಲಿ ನಿರಂತರ ಪ್ರಯೋಗಶೀಲರು. ವಿಶೇಷವಾಗಿ ಅವರ ಕಥೆ-ಕಾದಂಬರಿಗಳಲ್ಲಿ ಇಂತಹ ಪ್ರಯೋಗಶೀಲತೆ ಎದ್ದು ಕಾಣುತ್ತದೆ. ‘ಮನುಷ್ಯರು ಬದಲಾಗುವರೆ?’ ಸತ್ಯನಾರಾಯಣರ ಒಂಬತ್ತನೇ ಕಥಾಸಂಕಲನ. ಈ ಕಥಾಸಂಕಲನದಲ್ಲಿ ವಿಭಿನ್ನ ಮತ್ತು ವೈವಿಧ್ಯಮಯ ಕಥಾವಸ್ತು ಹೊಂದಿರುವ ಹದಿನೈದು ಕಥೆಗಳಿವೆ.
ಮೊದಲ ಕಥೆ ‘ವಾಷಿಂಗ್‌ಟನ್ ಮೆಮೋರಿಯಲ್ ಮುಂದೆ’ ಗುಡಿಬಂಡೆ ದಿವಾಕರನ ಜೀವನಯಾತ್ರೆಯ ಕಥೆ. ನಿವೃತ್ತ ನ್ಯಾಯಾಧೀಶನಾದ ನಿರೂಪಕನಿಗೆ ದಶಕಗಳ ನಂತರ ಒಂದು ಕಾಲದಲ್ಲಿ ವಕೀಲನಾಗಿದ್ದ ಗುಡಿಬಂಡೆ ದಿವಾಕರ್ ವಾಷಿಂಗ್‌ಟನ್ ನಗರದಲ್ಲಿ ಭೇಟಿಯಾಗುತ್ತಾನೆ. ವಕೀಲನಾಗಿ ಯಶಸ್ಸು ಪಡೆಯುವಲ್ಲಿ ವಿಫಲನಾದ ದಿವಾಕರ್ ತನ್ನ ಮಾತುಗಾರಿಕೆ ಮತ್ತು ಚಾಣಾಕ್ಷತನದಿಂದ ದೂರದರ್ಶನದ ಸಂದರ್ಶಕನಾಗಿ ಯಶಸ್ಸು ಪಡೆಯುತ್ತಾನೆ. ಈ ಯಶಸ್ಸು ದಿವಾಕರನ ಜೀವನಪಥವನ್ನೇ ಬದಲಿಸುತ್ತದೆ. ಟೂರ್ ನೆಟವರ್ಕ್ ಕೊ-ಆರ್ಡಿನೇಟರ್ ಎಂಬ ವಿಶಿಷ್ಟ ಕೆಲಸ ಅವನನ್ನು ಅಮೇರಿಕೆಗೆ ಕರೆ ತರುತ್ತದೆ. ದಿವಾಕರ್ ಮುಂದೆ ಫ್ಯಾಮಿಲಿ ಕೌನ್ಸೆಲರ್ ಆಗಿ ಅಮೇರಿಕದವಳನ್ನೇ ಮದುವೆಯಾಗುತ್ತಾನೆ.
ಗುಡಿಬಂಡೆ ದಿವಾಕರ್ ಇಷ್ಟೆಲ್ಲಾ ಕಥೆಯನ್ನು ದಶಕಗಳ ನಂತರ ನಿರೂಪಕನಿಗೆ ನಿರುದ್ವಗ್ನವಾಗಿ ಹೇಳುತ್ತಾನೆ. ಮನುಷ್ಯನಿಗೆ ಬದುಕಲ್ಲಿ ನೆಮ್ಮದಿ ಮುಖ್ಯ ಉಳಿದದ್ದೆಲ್ಲ ಗೌಣ ಎಂಬ ದಿವಾಕರನ ಸರಳ ಮತ್ತು ವಾಸ್ತವದ ತಿಳುವಳಿಕೆ ನಿರೂಪಕನಿಗೆ ತುಂಬ ಹಿಡಿಸುತ್ತದೆ. ಕೊನೆಯಲ್ಲಿ ದಿವಾಕರ ಮದುವೆ, ದಾಂಪತ್ಯದ ಕುರಿತು ಹೇಳುವ ಮಾತು ಗಮನಾರ್ಹವಾದದ್ದು. ಇದು ಗುಡಿಬಂಡೆ ದಿವಾಕರನ ಕಥೆ ಮಾತ್ರವಲ್ಲ, ನಮ್ಮ ಸಮಾಜದಲ್ಲಿರುವ ಗುಡಿಬಂಡೆ ದಿವಾಕರನಂತಹ ಹಲವು ವ್ಯಕ್ತಿಗಳ ಜೀವನಕಥೆ.
ಮೊದಲ ಕಥೆ ‘ವಾಷಿಂಗ್‌ಟನ್ ಮೆಮೋರಿಯಲ್ ಮುಂದೆ’ ಗುಡಿಬಂಡೆ ದಿವಾಕರನ ಜೀವನಯಾತ್ರೆಯ ಕಥೆ. ನಿವೃತ್ತ ನ್ಯಾಯಾಧೀಶನಾದ ನಿರೂಪಕನಿಗೆ ದಶಕಗಳ ನಂತರ ಒಂದು ಕಾಲದಲ್ಲಿ ವಕೀಲನಾಗಿದ್ದ ಗುಡಿಬಂಡೆ ದಿವಾಕರ್ ವಾಷಿಂಗ್‌ಟನ್ ನಗರದಲ್ಲಿ ಭೇಟಿಯಾಗುತ್ತಾನೆ. ವಕೀಲನಾಗಿ ಯಶಸ್ಸು ಪಡೆಯುವಲ್ಲಿ ವಿಫಲನಾದ ದಿವಾಕರ್ ತನ್ನ ಮಾತುಗಾರಿಕೆ ಮತ್ತು ಚಾಣಾಕ್ಷತನದಿಂದ ದೂರದರ್ಶನದ ಸಂದರ್ಶಕನಾಗಿ ಯಶಸ್ಸು ಪಡೆಯುತ್ತಾನೆ. ಈ ಯಶಸ್ಸು ದಿವಾಕರನ ಜೀವನಪಥವನ್ನೇ ಬದಲಿಸುತ್ತದೆ. ಟೂರ್ ನೆಟವರ್ಕ್ ಕೊ-ಆರ್ಡಿನೇಟರ್ ಎಂಬ ವಿಶಿಷ್ಟ ಕೆಲಸ ಅವನನ್ನು ಅಮೇರಿಕೆಗೆ ಕರೆ ತರುತ್ತದೆ. ದಿವಾಕರ್ ಮುಂದೆ ಫ್ಯಾಮಿಲಿ ಕೌನ್ಸೆಲರ್ ಆಗಿ ಅಮೇರಿಕದವಳನ್ನೇ ಮದುವೆಯಾಗುತ್ತಾನೆ.
ಗುಡಿಬಂಡೆ ದಿವಾಕರ್ ಇಷ್ಟೆಲ್ಲಾ ಕಥೆಯನ್ನು ದಶಕಗಳ ನಂತರ ನಿರೂಪಕನಿಗೆ ನಿರುದ್ವಗ್ನವಾಗಿ ಹೇಳುತ್ತಾನೆ. ಮನುಷ್ಯನಿಗೆ ಬದುಕಲ್ಲಿ ನೆಮ್ಮದಿ ಮುಖ್ಯ ಉಳಿದದ್ದೆಲ್ಲ ಗೌಣ ಎಂಬ ದಿವಾಕರನ ಸರಳ ಮತ್ತು ವಾಸ್ತವದ ತಿಳುವಳಿಕೆ ನಿರೂಪಕನಿಗೆ ತುಂಬ ಹಿಡಿಸುತ್ತದೆ. ಕೊನೆಯಲ್ಲಿ ದಿವಾಕರ ಮದುವೆ, ದಾಂಪತ್ಯದ ಕುರಿತು ಹೇಳುವ ಮಾತು ಗಮನಾರ್ಹವಾದದ್ದು. ಇದು ಗುಡಿಬಂಡೆ ದಿವಾಕರನ ಕಥೆ ಮಾತ್ರವಲ್ಲ, ನಮ್ಮ ಸಮಾಜದಲ್ಲಿರುವ ಗುಡಿಬಂಡೆ ದಿವಾಕರನಂತಹ ಹಲವು ವ್ಯಕ್ತಿಗಳ ಜೀವನಕಥೆ.
“ಯಾವ ಮದುವೇನೂ ಶೇಕಡ ೫೧ಕ್ಕಿಂತ ಹೆಚ್ಚು ಯಶಸ್ವಿಯಾಗೋಲ್ಲ. ಎಲ್ಲ ಕಾಲದಲ್ಲೂ, ಎಲ್ಲ ಸಂಸ್ಕೃತಿಯಲ್ಲೂ ದಾಂಪತ್ಯ ಜೀವನದ Peak Performance ಅಷ್ಟೇ. ಮನುಷ್ಯನ ಜಾಣತನ ಎಲ್ಲಿದೆ ಅಂದರೆ, ಅದು ಯಾವತ್ತೂ ಶೇಕಡ 49ಕ್ಕಿಂತ ಕಡಿಮೆ ಆಗದಂತೆ ನೋಡಿಕೊಳ್ಳೋದು.”
(ಮನುಷ್ಯರು ಬದಲಾಗುವರೆ, ಪುಟ ೧೩)
‘ಫೋಟೋ ವಲಸೆ’ ಎಂದೋ ಸತ್ತು ಹೋದ ಅಪ್ಪ ಮತ್ತು ಅಪ್ಪನ ಕುರಿತು ಪ್ರೀತಿ, ದ್ವೇಷದಂತಹ ಸಮ್ಮಿಶ್ರ ಭಾವನೆಗಳನ್ನಿಟ್ಟುಕೊಂಡು ಅಪ್ಪನನ್ನು ಅತ್ತ ಪ್ರೀತಿಸಲೂ ಆಗದೆ ಇತ್ತ ನಿರಾಕರಿಸಲೂ ಆಗದೆ ಒದ್ದಾಡುವ ಮಗನ ಕಥೆ. ತುಂಬ ಬಡವ, ಅಂಗವಿಕಲ ಮತ್ತು ನಾಟಕದ ಮೇಷ್ಟ್ರಾದ ತನ್ನ ಅಪ್ಪನ ಕುರಿತು ನಿರೂಪಕನಿಗೆ ತುಂಬ ಗೌರವವಿದೆ. ಹಿಂದೆಂದೋ ಮದುವೆಯಾಗಬೇಕಿದ್ದ ಜಯಮ್ಮಳಿಗೆ ತನ್ನಪ್ಪನ ಫೋಟೋ ಕೊಟ್ಟು ಕೈತೊಳೆದುಕೊಳ್ಳಲು ಹವಣಿಸುವ ಮಗನಿಗೆ ನಿರೂಪಕ ಪದೇ ಪದೇ ಅಪ್ಪನ ಫೋಟೋದ ಕುರಿತು ಪ್ರಸ್ತಾಪ ಮಾಡಿದಾಗ ತುಂಬ ಕಿರಿಕಿರಿಯುಂಟಾಗುತ್ತದೆ. ಅಪ್ಪ ಸತ್ತರೂ ಮಕ್ಕಳನ್ನು ಸಹ ಅವನಂತೆಯೇ ಕಾಣುತ್ತ ಬಂದ ಬಂಧು-ಬಳಗ ಮತ್ತು ಸಮಾಜದ ಕುರಿತು ಮಗನಿಗೆ ತುಂಬ ರೋಷವಿದೆ. ಇದಕ್ಕೆಲ್ಲ ಕಾರಣ ಅಪ್ಪನೆಂಬ ವ್ಯಕ್ತಿ ಎಂಬ ಭಾವನೆಯಿಂದ ಅವನಿಗೆ ಅಪ್ಪನ ಕುರಿತು ತುಂಬ ರೋಷವಿದೆ.
ನಿರೂಪಕನೊಂದಿಗೆ ತಾನು ಅನುಭವಿಸಿದ ಕಿರುಕುಳ ಮತ್ತು ಸಾಮಾಜಿಕ ಕ್ರೌರ್ಯದ ಕುರಿತು ವಿವರವಾಗಿ ಮಾತನಾಡುವ ಮಗನಿಗೆ ಅಪ್ಪನ ಕುರಿತು ಹೃದಯಾಂತಾರಳದಲ್ಲಿ ತುಂಬ ಪ್ರೀತಿಯೂ ಇದೆ. ಅಪ್ಪನ ಹೆಣದೊಟ್ಟಿಗಿಟ್ಟಿದ್ದ ತಲೆದಿಂಬನ್ನು ಕಾಪಾಡಿಕೊಳ್ಳುವ ವಿಚಿತ್ರ ರೀತಿಯಲ್ಲಿ ಇಂತಹ ಪ್ರೀತಿ ವ್ಯಕ್ತವಾಗುತ್ತದೆ. ಮನಸ್ಸಿನಲ್ಲಿ ಭಾರವಾಗಿ ಕುಳಿತಿರುವ ಅಪ್ಪನ ನೆನಪುಗಳೊಂದಿಗೆ ಬದುಕುತ್ತಿರುವ ಮಗ ನಿರೂಪಕನಿಗೆ ತನ್ನ ಕಥೆ ಹೇಳುವ ಮೂಲಕ ಮನಸ್ಸು ಹಗುರ ಮಾಡಿಕೊಳ್ಳುತ್ತಾನೆ.
ಕಥೆಯ ಕೊನೆಯಲ್ಲಿ ಅಪ್ಪನ ಫೋಟೋದ ಇನ್ನೊಂದು ಪ್ರತಿ ಮಾಡಿಸಿ ತಂದು ಹಾಕುವ ಮತ್ತು ತಲೆದಿಂಬನ್ನು ಕಾಪಾಡಿಕೊಳ್ಳುವ ಮಗನ ನಿರ್ಧಾರ ಅರ್ಥಪೂರ್ಣವೆನಿಸುತ್ತದೆ. ಮೇಲ್ನೋಟಕ್ಕೆ ತಂದೆ-ಮಗನ ಭಾವನಾತ್ಮಕ ಸಂಬಂಧವನ್ನು ಕುರಿತು ಹೇಳುವ ಕಥೆಯಂತೆ ಕಂಡರೂ ವ್ಯಕ್ತಿಯೊಬ್ಬ ಅನುಭವಿಸಿದ ಸಾಮಾಜಿಕ ಕ್ರೌರ್ಯದ ಕುರಿತು ಸಹ ಕಥೆ ಬೆಳಕು ಚೆಲ್ಲಲು ಯತ್ನಿಸಿರುವುದು ಗಮನಾರ್ಹ.
‘ಸಲಿಂಗ ರತಿ, ಮುಷ್ಟಿ ಮೈಥುನದ ತಂದೆ’ ಸದ್ಯ ತುಂಬ ಚರ್ಚೆಯಲ್ಲಿರುವ ಸಲಿಂಗಕಾಮದ ಕುರಿತ ಕಥೆ. ಸಲಿಂಗಕಾಮಿ ತಂದೆಯಿಂದ ನಿರೂಪಕನ ಕುಟುಂಬ ಸಾಕಷ್ಟು ನೋವನುಭವಿಸಿದೆ. ನಿರೂಪಕನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಸಹ ಅವನ ತಂದೆಯ ವಿಕೃತವೆನ್ನಬಹುದಾದ ಸಲಿಂಗಕಾಮವೇ ಕಾರಣ. ಇದರಲ್ಲಿ ನಿರೂಪಕನ ತಪ್ಪಿಲ್ಲದಿದ್ದರೂ ಅವನ ಹೆಂಡತಿ ವಿನುತಳಿಗೆ ಮುಂದೆ ತಂದೆಯಂತೆ ಇವನೂ ಸಹ ಸಲಿಂಗಕಾಮಿಯಾದರೆ ಎಂಬ ವಿಚಾರವೇ ಅಸಹ್ಯ ಮತ್ತು ಅಭದ್ರತೆಯುಂಟುಮಾಡಿದೆ. ನಿರೂಪಕ ಹೆಂಡತಿಯ ಮನವೊಲಿಸಲು ಎಷ್ಟೇ ಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ.
ನಿರೂಪಕನ ಚಿಕ್ಕಪ್ಪನ ಮಗ ದತ್ತಾತ್ರೇಯಯನ್ನು ತಂದೆ ದುರುಪಯೋಗ ಪಡಿಸಿಕೊಂಡದ್ದು ಅವಳ ದೃಷ್ಟಿಯಲ್ಲಿ ಅಕ್ಷಮ್ಯ. ಕೊನೆಗೆ ದತ್ತಾತ್ರೇಯಯನ್ನು ನೋಡಲು ಹೋದಾಗ ಅವನ ಬದಲಾದ ಆರೋಗ್ಯಕರ ಜೀವನಶೈಲಿಯನ್ನು ಕಂಡು ನಿರೂಪಕ ಮತ್ತು ಅವನ ಹೆಂಡತಿಗೆ ಸಮಾಧಾನವಾಗುತ್ತದೆ. ಕೌಟುಂಬಿಕ ಕ್ರೌರ್ಯದಿಂದ ನೊಂದ ದತ್ತಾತ್ರೇಯ ಬಂಧು-ಬಳಗದವರಿಂದ ದೂರವಿರಲು ಬಯಸುವುದು ಸಹಜ. ಒಂದರ್ಥದಲ್ಲಿ ಆಶ್ರಮದ ಜೀವನ ಅವನಿಗೆ ತುಂಬ ನೆಮ್ಮದಿ ನೀಡಿದೆ.
ಸಲಿಂಗಕಾಮದಂತಹ ಸೂಕ್ಷ್ಮ ವಿಚಾರದ ಕುರಿತು ಬರೆಯುವುದು ಇನ್ನೂ ನಮ್ಮಲ್ಲಿ ಸ್ವಲ್ಪ ಕಷ್ಟವೇ, ಆದರೆ ಇಂತಹ ವಿಷಯದ ಕುರಿತು ಕಥೆ ಬರೆಯುವಲ್ಲಿ ಸತ್ಯನಾರಾಯಣರು ತೋರುವ ಸಂಯಮ ಮಾತ್ರ ಮೆಚ್ಚತಕ್ಕದ್ದು. ಕನ್ನಡದಲ್ಲಿ ಸಲಿಂಗಕಾಮದ ಕುರಿತು ಅಧಿಕೃತವಾಗಿ ಬರೆಯಬಲ್ಲವರೆಂಬ ಖ್ಯಾತಿ ಪಡೆದ ಜನಪ್ರಿಯ ಲೇಖಕ ವಸುಧೇಂದ್ರರ ಈ ಮಾದರಿಯ ಕಥೆಗಳಿಗಿಂತ ಸತ್ಯನಾರಾಯಣರ ಈ ಕಥೆ ತುಂಬ ಮೇಲ್ಮಟ್ಟದಲ್ಲಿದೆ.
‘ಶಿವಗಾಮಿ ಬದಲಾದರೆ(ಳೆ)?’ ಕೂಡ ಒಂದು ಗಮನಾರ್ಹ ಕಥೆ. ಶಿವಗಾಮಿಯೆಂಬ ಮಹತ್ವಾಕಾಂಕ್ಷಿ ತಮಿಳು ಮಹಿಳೆಯ ಬದುಕನ್ನು ಚಿತ್ರಿಸುವ ಈ ಕಥೆಯ ವಸ್ತು ಇಂದಿಗೂ ಪ್ರಸ್ತುತ. ಶಿವಗಾಮಿ ತುಂಬ ಲವಲವಿಕೆಯ ಮತ್ತು ಮಹತ್ವಾಕಾಂಕ್ಷಿ ಹೆಣ್ಣು. ಕಥೆಯ ಆರಂಭದಲ್ಲಿ ಸರಳವಾಗಿ ಕಾಣುವ ಶಿವಗಾಮಿಯ ಪಾತ್ರ ಬರಬರುತ್ತ ಸಂಕೀರ್ಣವಾಗಿ ಕಾಣತೊಡಗುತ್ತದೆ. ಹತ್ತು ಹಲವು ಇಲಾಖೆಗಳಲ್ಲಿ ಉನ್ನತ ಅಧಿಕಾರಿಯಾಗಿ ಕೆಲಸ ಮಾಡುವ ಶಿವಗಾಮಿ ಒಂದು ಹಂತದಲ್ಲಿ ಉನ್ನತ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಧುಮುಕುತ್ತಾಳೆ. ಹಿತಶತ್ರುಗಳ ಕಾಟದಿಂದ ರಾಜಕೀಯದಲ್ಲಿ ವಿಫಲಳಾಗುವ ಶಿವಗಾಮಿ ಕೋಚಿಂಗ್ ಸೆಂಟರಿನಲ್ಲಿ ತರಬೇತುದಾರಳಾಗಿ ಸೇರುತ್ತಾಳೆ.
ಕೊನೆಗೆ ಸುಪ್ರೀಂ ಕೋರ್ಟಿನ ವಕೀಲಳಾಗುವ ಶಿವಗಾಮಿ ಕೇರಳದ ಮಹಿಳಾ ಜಗದ್ಗುರುವೊಬ್ಬರ ಆಪ್ತ ಸಲಹೆಗಾರಳಾಗುತ್ತಾಳೆ. ತುಂಬ ಹಿಂದುಳಿದ ವರ್ಗದಿಂದ ಬಂದು ಮೇಲ್ವರ್ಗದವರನ್ನು ವಿರೋಧಿಸುತ್ತಾ ಬೆಳೆದುಬಂದ ಶಿವಗಾಮಿ ಮಹಿಳಾ ಜಗದ್ಗುರುವೊಬ್ಬರ ಆಪ್ತ ಸಲಹೆಗಾರಳಾಗುವುದು ಚೋದ್ಯದ ಸಂಗತಿ. ಕಥೆಯ ಕೊನೆಯಲ್ಲಿ ಮಹಿಳಾ ಜಗದ್ಗುರುಗಳ ಕೃತಿಗಳ ಭಾಷಾಂತರಕ್ಕೆ ಬ್ರಾಹ್ಮಣ ಅನುವಾದಕರೇ ಬೇಕೆಂದು ನಿರೂಪಕನನ್ನು ಸಂಪರ್ಕಿಸುವ ಶಿವಗಾಮಿ ನಿಜಕ್ಕೂ ಬದಲಾಗಿದ್ದಾಳೆ ಎಂಬುದು ಓದುಗರಿಗೆ ವೇದ್ಯವಾಗುತ್ತದೆ.
ಶಿವಗಾಮಿಯಂತಹ ಮಹತ್ವಾಕಾಂಕ್ಷಿ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುವ ಮಹಿಳೆಯರು ಇಂದಿಗೂ ನಮ್ಮ ಸಾಹಿತ್ಯ, ಸಮಾಜ ಮತ್ತು ರಾಜಕೀಯ ವಲಯಗಳಲ್ಲಿದ್ದಾರೆ. ಗಟ್ಟಿಗಿತ್ತಿಯಾದ ಶಿವಗಾಮಿ ವೈಯಕ್ತಿಕ ಯಶಸ್ಸು, ಸಮುದಾಯದ ಯಶಸ್ಸಿಗಿಂತ ಮುಖ್ಯ ಎಂದು ನಂಬಿ ಹಾಗಾಗಲು ಬಯಸುವ ಹಲವು ಮಹಿಳೆಯರ ಪ್ರತಿನಿಧಿಯಂತೆ ಕಾಣುತ್ತಾಳೆ.
‘ಹನಿ ಟ್ರ್ಯಾಪ್’ ರಾಮಸಿಂಗ್-ಕ್ಯಾಥರೀನ್ ದಂಪತಿಗಳ ಕಥೆ. ಇದು ರಾಮಸಿಂಗ್-ಕ್ಯಾಥರೀನ್ ಜೋಡಿಯ ಪ್ರೇಮಕಥೆಯನ್ನೂ ಮೀರಿ ಅಂತರಾಷ್ಟ್ರೀಯ ಸಂಬಂಧಗಳು, ಕಾಲಕಾಲಕ್ಕೆ ಬದಲಾಗುವ ಸರ್ಕಾರದ ಒಲವು-ನಿಲವುಗಳು, ಗೂಢಚಾರಿಕೆ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳ ಸುತ್ತ ಹೆಣೆದ ಕಥೆ. ಹನಿ ಟ್ರ್ಯಾಪ್ ಆರೋಪಕ್ಕೊಳಗಾಗಿ ಭಾರತೀಯ ಪೌರತ್ವ ಕಳೆದುಕೊಂಡ ಸರ್ಕಾರದ ಮಾಜೀ ಉನ್ನತಾಧಿಕಾರಿ ರಾಮಸಿಂಗ್ ಮತ್ತು ವಿದೇಶೀ ಪತ್ರಕರ್ತೆ ಕ್ಯಾಥರೀನರ ಮಧುರ ದಾಂಪತ್ಯದ ಹಿಂದೆ ಹಲವು ರಹಸ್ಯಗಳಿವೆ.
ಕಥೆಯ ನಿರೂಪಕನಿಗೆ ರಾಮಸಿಂಗರ ಪುಸ್ತಕಗಳು ಮತ್ತು ಲೇಖನಗಳ ಮೂಲಕ ಈ ಎಲ್ಲ ಆಫ್ ದಿ ರೆಕಾರ್ಡ್ ಮಾಹಿತಿ ಸಿಗುತ್ತದೆ. ಹೊರ ಜಗತ್ತಿಗೆ ಬೇರೆ ರೀತಿಯಾಗಿ ಕಾಣುವ ರಾಮಸಿಂಗ್-ಕ್ಯಾಥರೀನ್ ದಂಪತಿಗಳ ಬದುಕನ್ನು ನಿರೂಪಕ ತುಂಬ ಸಹಾನುಭೂತಿಯಿಂದ ನೋಡುವ ಮೂಲಕ ಅದಕ್ಕೊಂದು ಬೇರೆಯದೇ ಆದ ಅರ್ಥ ನೀಡಬಯಸುವುದು ಸಹಜವಾಗಿ ಮೂಡಿ ಬಂದಿದೆ.
‘ಕದ್ದು(!) ಕೇಳಿಸಿಕೊಂಡ ಕಥೆ’ ಮುಖವಾಡ ತೊಟ್ಟುಕೊಂಡು ಬದುಕುವ ಮೇಲ್ಮಧ್ಯಮವರ್ಗದ ಕುಟುಂಬವಾದ ಸಂಧ್ಯಾ ಮತ್ತು ಪ್ರಶಾಂತ ನಾಗಲಾಪುರರ ಕಥೆ. ಇಂತಹ ಸಂಧ್ಯಾಳ ಕುಟುಂಬದ ಕಥೆಯನ್ನು ನಿರೂಪಕ ಅನಿರೀಕ್ಷಿತವಾದ ರೀತಿಯಲ್ಲಿ ಕದ್ದು(!) ಕೇಳಿಸಿಕೊಳ್ಳುತ್ತಾನೆ. ಭಾಷಣ ಮಾಡುತ್ತ, ಫೇಸ್‌ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆದಿರುವ ಸಂಧ್ಯಾಳ ಕುಟುಂಬದ ಬದುಕು ಒಳಗಿನಿಂದ ಎಷ್ಟು ಟೊಳ್ಳು ಎಂಬುದು ಅವಳ ಮಕ್ಕಳು ಮತ್ತು ಕುಟುಂಬದ ಕುರಿತ ವಾಸ್ತವದ ವಿಷಯ ಅರಿತಾಗಲೇ ತಿಳಿಯುತ್ತದೆ. ಸಾಮಾಜಿಕ ಸ್ಥಾನಮಾನ, ಆಸ್ತಿ, ಹಣ, ವರ್ಚಸ್ಸು ಎಲ್ಲ ಇದ್ದರೂ ಇಂತಹ ಜನಕ್ಕೆ ನೆಮ್ಮದಿಯಿಲ್ಲ. ನಮ್ಮ ಸಮಾಜದಲ್ಲಿ ಹುಸಿ ಪ್ರತಿಷ್ಠೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬದುಕುವ ಇಂತಹ ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗದವರು ತುಂಬ ಜನರಿದ್ದಾರೆ.
‘ಆನಂದರಾಮು ಮತ್ತು ಜೇಮ್ಸ್ ಮೇನರ್’ ಈ ಸಂಕಲನದ ಒಂದು ವಿಶಿಷ್ಟ ಕಥೆ. ಕರಾವಳಿಯವರಾದರೂ ಬಯಲುಸೀಮೆಯಲ್ಲಿಯೇ ಹುಟ್ಟಿ, ಬೆಳೆದು, ವೃತ್ತಿ ಜೀವನ ನಡೆಸಿ, ನಿವೃತ್ತರಾದ ಆನಂದರಾಮ ನಾವಡರು ಇತರೆ ಕರಾವಳಿ ವ್ಯಕ್ತಿಗಳಂತಲ್ಲ ಎಂಬುದು ನಿರೂಪಕನ ಅಭಿಪ್ರಾಯ. ನಿರೂಪಕನ ಇಂತಹ ಅಭಿಪ್ರಾಯದ ಕುರಿತು ಸ್ಪಷ್ಟೀಕರಣ ನೀಡುತ್ತಾ ಆನಂದರಾಮರು ಕರಾವಳಿ ಜನರ ಕುರಿತು ಹೇಳುವ ಮಾತುಗಳು ಮಾರ್ಮಿಕವಾದರೂ ಅರ್ಥಪೂರ್ಣವಾದುವು. ಕರಾವಳಿಯ ಜನ ಇದನ್ನು ಒಪ್ಪುವುದು ಕಷ್ಟವಾದರೂ ಅವರೊಂದಿಗೆ ಒಡನಾಡಿದವರಿಗೆ ಈ ಮಾತಿನಲ್ಲಿ ಸತ್ಯವಿದೆ ಎಂದು ಅನಿಸದೆ ಇರಲಾರದು. ಏಕೆಂದರೆ ಕರಾವಳಿ ಜನರ ಸ್ವಭಾವ ಅಷ್ಟೊಂದು ಜಗತ್ಪ್ರಸಿದ್ಧವಾದುದು.
“ನಮ್ಮ ಕರಾವಳಿಯ ಮಂದಿಯಲ್ಲಿ ನೀವು ಒಂದಂಶವನ್ನು ಗಮನಿಸಬೇಕು. ಯಾವುದೇ ಜಾತಿ-ವರ್ಗದವರಾಗಿರಲಿ, ಯಾವುದೇ ವೈಚಾರಿಕ ಬಣಕ್ಕೆ ಸೇರಿರಲಿ, ಯಾವುದೇ ವೃತ್ತಿಯಲ್ಲಿರಲಿ, ಕೊನೆಗೆ ಎಲ್ಲರೂ ಒಂದೇ ರೀತಿಯ ಯಶಸ್ಸನ್ನು ಪಡೆಯುತ್ತಾರೆ. ಲೌಕಿಕ ಸ್ಥಾನಮಾನಗಳನ್ನು, ಪ್ರಸಿದ್ಧಿಯನ್ನು ತಲುಪೇ ತಲುಪುತ್ತಾರೆ. ತಮ್ಮ ಮಾತಿಗೆ ಉದಾಹರಣೆಯಾಗಿ ತಮ್ಮ ಸೀಮೆಯ ನಾನಾ ರೀತಿಯ ಪ್ರತಿಭಾವಂತರನ್ನು ಉದಾಹರಣೆಯಾಗಿ ನೀಡಿದರು. ಇವರೆಲ್ಲರೂ ನನಗೂ ಪರಿಚಯವಿದ್ದವರೇ!”
(ಮನುಷ್ಯರು ಬದಲಾಗುವರೆ?, ಪುಟ ೯೭)
ಈ ಕಥೆಯ ಮತ್ತೊಂದು ಮುಖ್ಯ ಪಾತ್ರ ಜೇಮ್ಸ್ ಮೇನರ್ ಅವರದು. ವಿಶ್ವವಿಖ್ಯಾತ ರಾಜ್ಯಶಾಸ್ತ್ರಜ್ಞರಾದ ಜೇಮ್ಸ್ ಮೇನರರ ಚಿಂತನೆಗಳು ತುಂಬ ಪ್ರಖರವಾದುವು. ಕರ್ನಾಟಕದ ರಾಜಕೀಯ ಮತ್ತು ಇತಿಹಾಸವನ್ನು ತುಂಬ ಚೆನ್ನಾಗಿ ತಿಳಿದುಕೊಂಡಿರುವ ಮೇನರರು ಪ್ರಸ್ತುತ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶದ ಕುರಿತು ಹೇಳುವ ಮಾತುಗಳು ತುಂಬ ಅರ್ಥಪೂರ್ಣ ಮತ್ತು ಸತ್ಯವಾಗಿವೆ.
“ನಾನು 70-80ರ ದಶಕಗಳಲ್ಲಿ ಭೇಟಿ ಮಾಡುತ್ತಿದ್ದ ಸುಧಾರಣಾ ಪ್ರಿಯರು, ಪ್ರಗತಿವಾದಿಗಳೆಲ್ಲ ಈಗ ಇಲ್ಲ ಭ್ರಷ್ಟರಾಗಿದ್ದಾರೆ ಅಥವಾ ಜಾತಿವಾದಿಗಳಾಗಿದ್ದಾರೆ. ಇನ್ನು ಕೆಲವರು ತಮ್ಮ ತಮ್ಮ ಕುಟುಂಬ, ವ್ಯಾಪಾರ, ಆಸ್ತಿಗಳಲ್ಲೇ ಮುಳುಗಿ ಹೋಗಿದ್ದಾರೆ, ಇಲ್ಲ ವ್ಯವಸ್ಥೆಯ ಜೊತೆ ಸೂಕ್ಷ್ಮವಾದ ಹೊಂದಾಣಿಕೆ ಮಾಡಿಕೊಂಡುಬಿಟ್ಟಿದ್ದಾರೆ. ತಮಾಷೆ ಏನು ಗೊತ್ತಾ, ಮಕ್ಕಳಿಗೆ ಅಂತರ್ಜಾತಿ ವಿವಾಹ ಮಾಡಿಕೊಟ್ಟವರೂ ಕೂಡ ಈಗ ಸಂತೋಷದಿಂದ, ಹೆಮ್ಮೆಯಿಂದ, ಜಾತಿವಾದಿಗಳಾಗುತ್ತಿರುವವರು, ಜಾತಿಯ ಅಧಿಕಾರ, ಅನುಭವದ ಲಯದಳೊಗೇ, ಸುಖವಾಗಿ ಇದ್ದು ಬಿಡುವರು. Horrible really horrible.”
(ಮನುಷ್ಯರು ಬದಲಾಗುವರೆ?, ಪುಟ ೧೦೨)
ಪ್ರಸ್ತುತ ಕರ್ನಾಟಕದ ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ನೋಡಿದಾಗ ಜೇಮ್ಸ್ ಮೇನರರ ಮಾತುಗಳು ಎಷ್ಟೊಂದು ಅರ್ಥಪೂರ್ಣ ಮತ್ತು ತೂಕದಿಂದ ಕೂಡಿವೆ ಎಂಬುದು ಪ್ರಜ್ಞಾವಂತರಾದ ಓದುಗರಿಗೆ ವೇದ್ಯವಾಗದೇ ಇರದು.
‘ನಾಲ್ವಡಿಯವರ ವಿವೇಚನೆ’ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಕುರಿತ ಒಂದು ಹೃದ್ಯ ಕಥೆ. ಇದನ್ನು ಕಥೆಯೆನ್ನುವುದಕ್ಕಿಂತ ಚರಿತ್ರೆಯ ಒಂದು ಅಧ್ಯಾಯ ಎನ್ನುವುದು ಹೆಚ್ಚು ಸೂಕ್ತ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಾಮಾಣಿಕತೆ, ದಕ್ಷತೆ, ಆಡಳಿತದ ವೈಖರಿ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿವೇಚನಾ ಶಕ್ತಿ ಮತ್ತು ಸೂಕ್ಷ್ಮ ಪ್ರಸಂಗಗಳನ್ನು ಚಾಣಾಕ್ಷತನದಿಂದ ನಿರ್ವಹಿಸುವ ರೀತಿ ಮುಂತಾದವುಗಳ ಕುರಿತು ಸತ್ಯನಾರಾಯಣರು ಜೇಮ್ಸ್ ಮೇನರರ ಬರಹಗಳಿಂದ ಮರುನಿರೂಪಣೆ ಮಾಡಿ ಹೇಳಿದ್ದಾರೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ಗೌರವ ಹೆಚ್ಚಿಸುವ ಅನೇಕ ಅಂಶಗಳು ಇಲ್ಲಿವೆ.
‘ಜಯನಗರದ ಕ್ರಾಸಿಂಗಿನಲ್ಲಿ’, ‘ಹನುಮಂತಾಚಾರ್ ಉಯಿಲು’, ‘ಕಾಮತರ ಪಂಜಾಬಿ ಸೊಸೆ’, ‘ಎರಡನೆ ಅಳಿಯ’, ‘ಪುನರ್ಮುದ್ರಣ’, ‘ಒಂದು ಭೋಜನ ಮೀಮಾಂಸೆ’ ಮತ್ತು ‘ರಾಕ್ಸ್ ಮದಾಂಗಳು’ ಕಥೆಗಳು ವಿಭಿನ್ನ ಕಥಾವಸ್ತು ಹೊಂದಿದ್ದು ವರ್ತಮಾನದ ಸಾಮಾಜಿಕ ಪರಿಸ್ಥಿತಿ ಮತ್ತು ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತವೆ. ‘ಮನುಷ್ಯರು ಬದಲಾಗುವರೆ?’ ಸಂಕಲನದ ಬಹುತೇಕ ಕಥೆಗಳ ವಸ್ತು ವರ್ತಮಾನದ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳಿಗೆ ತೀವ್ರವಾಗಿ ಸ್ಪಂದಿಸುವ ಗುಣ ಹೊಂದಿರುವುದರಿಂದ ಈ ಸಂಕಲನದ ಕಥೆಗಳನ್ನು ವರ್ತಮಾನದ ಕಥೆಗಳು ಎಂದು ಧಾರಾಳವಾಗಿ ಕರೆಯಬಹುದು.
ಪ್ರಯೋಗಶೀಲ ಕಥೆಗಾರರಾದ ಸತ್ಯನಾರಾಯಣರ ಬಹುತೇಕ ಕಥೆಗಳ ತಂತ್ರ ಮಾಸ್ತಿಯವರ ಕಥನತಂತ್ರವನ್ನು ನೆನಪಿಗೆ ತರುತ್ತದೆ. ಬಹುತೇಕ ಕಥೆಗಳಲ್ಲಿ ನಿರೂಪಣೆ, ಮರುನಿರೂಪಣೆಗಳ ಮೂಲಕ ಸಾಗುವ ಸತ್ಯನಾರಾಯಣರ ಕಥನ ತಂತ್ರ ತುಂಬ ಹಳೆಯದಾದರೂ ವಸ್ತು ಮತ್ತು ಭಾಷೆ ಹೊಸದು. ಪ್ರಯೋಗಶೀಲತೆ ಸತ್ಯನಾರಾಯಣರ ಶಕ್ತಿಯೂ ಹೌದು, ಮಿತಿಯೂ ಹೌದು. ಇಂತಹ ಕೆಲವು ದೌರ್ಬಲ್ಯಗಳನ್ನು ಮೀರಿಯೂ ಒಳ್ಳೆಯ ಕಥೆಗಳನ್ನು ನೀಡುವ ಕಥನಕಲೆ ಸತ್ಯನಾರಾಯಣರಿಗೆ ಸಿದ್ಧಿಸಿದೆ. ‘ಮನುಷ್ಯರು ಬದಲಾಗುವರೆ?’ ಸಂಕಲನದಲ್ಲೇ ಅಂತಹ ಕೆಲವು ಒಳ್ಳೆಯ ಕಥೆಗಳಿವೆ.
ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತ ಬಂದಿರುವ ಸತ್ಯನಾರಾಯಣರ ಒಂಬತ್ತನೇ ಕಥಾಸಂಕಲನ ‘ಮನುಷ್ಯರು ಬದಲಾಗುವರೆ?’ ಇದು ಈ ವರ್ಷ ಕನ್ನಡದಲ್ಲಿ ಬಂದ ಉತ್ತಮ ಕೃತಿಗಳಲ್ಲೊಂದು. ಕನ್ನಡದ ಒಳ್ಳೆಯ ಕಥೆಗಾರರಾದ ಸತ್ಯನಾರಾಯಣರಿಂದ ಹತ್ತನೆಯ ಕಥಾಸಂಕಲನವೂ ಶೀಘ್ರವಾಗಿ ಹೊರಬರಲಿ ಎಂಬುದು ನನ್ನ ಆಶಯ ಏಕೆಂದರೆ ಪ್ರಯೋಗಶೀಲ ಕಥೆಗಾರರಾದ ಸತ್ಯನಾರಾಯಣರು ಇನ್ನೂ ಸಾಕಷ್ಟು ಕಥೆಗಳನ್ನು ಹೇಳಲಿಕ್ಕಿದೆ.