ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣlಅನಾಹುತಕ್ಕೆ ಅವಕಾಶ ಕೊಡದಿರಿ !

ಒಂದು ಊರಿನಲ್ಲಿ ದಯಾಳವೂ ಧರ್ಮಿಷ್ಠನೂ ಆದ ಗುಣಸೇನ ಎಂಬ ಶ್ರೀಮಂತ ವ್ಯಾಪಾರಿ ಇದ್ದನು. ಆದರೆ ಅವನ ಹೆಂಡತಿ ಅವನಿಗೆ ತದ್ವಿರುದ್ಧವಾಗಿ ಇದ್ದಳು. ಅವಳ ಸ್ವಭಾವ,ನಡತೆ ಸರಿಯಾಗಿರಲಿಲ್ಲ.   ಇವರಿಗೆ ರತ್ನಶಿಖೆ ಎಂಬ  ಮಗಳು ಇದ್ದಳು. ನೂಲಿನಂತೆ ಸೀರೆ ತಾಯಿಯಂತೆ ಮಗಳು , ಎಂಬಂತೆ  ರತ್ನಶಿಖೆಯು ತಾಯಿಯ ಹಾದಿಯನ್ನೇ ಹಿಡದಿದ್ದಳು. ಗುಣಸೇನನಿಗೆ ಹೆಂಡತಿ ಮತ್ತು ಮಗಳ ಸ್ವಭಾವ ತಿಳಿದಿತ್ತು. ತಂದೆಯಾದ ತನ್ನ ಕರ್ತವ್ಯವನ್ನು ಪೂರೈಸಲು ಮುಂದಾಗಿ ರತ್ನಶಿಖೆಗೆ  ಮದುವೆಯನ್ನು ಮಾಡಿದನು. ಮದುವೆಯಾದ  ಬಳಿಕವಾದರೂ ಮಗಳು ಸುಧಾರಿಸಬಹುದೆಂಬ ಸಣ್ಣ ನಂಬಿಕೆ ತಂದೆಯ ಮನದಲ್ಲಿತ್ತು. ಆದರೆ ಮದುವೆಯಾದ ನಂತರವೂ   ರತ್ನಶಿಖೆ  ಹಳೆಯ ಚಾಳಿಯನ್ನು ಬಿಡಲಿಲ್ಲ. ಕೆಲವು ದಿನಗಳು ಉರುಳಿದವು. ಗುಣಸೇನನ ಸೇವಕನೊಬ್ಬ ರತ್ನಶಿಖೆಯ ಮನೆಗೆ ಬಂದು ಅವಳನ್ನು ಸಂಧಿಸಿದನು.

 ಆ ಸೇವಕ ಅವಳ  ಹಿಂದಿನ ಪ್ರಿಯತಮನಾಗಿದ್ದನು. ಗಂಡನ ಮನೆಯಲ್ಲಿ ತನ್ನ ಹಳೆಯ ಸ್ನೇಹಿತನನ್ನು  ಭೇಟಿಯಾಗುವುದು ಅವಳಿಗೆ ಸ್ವಲ್ಪವೂ ಸಹಿಸಲಾಗಲಿಲ್ಲ. ಅವಳು ಹೊರಟು ಹೋಗು ಎಂದರೂ ಅವನು ಹೋಗಲಿಲ್ಲ. ಅಲ್ಲಿಂದ ಅವನು ಕದಲಲಿಲ್ಲವೆಂದಾಗ ಬೇಸತ್ತ ರತ್ನಶಿಖೆ ಹಾಲಿನಲ್ಲಿ ತೊಟ್ಟು ವಿಷ ಹಾಕಿ ಅವನಿಗೆ ಕುಡಿಯಲು ಕೊಟ್ಟಳು . ಹಾಲನ್ನು ಕುಡಿದೊಡನೆ  ಸೇವಕ ಸತ್ತು ಬಿದ್ದನು.  ಸ್ವಲ್ಪ ಹೊತ್ತಿನಲ್ಲಿಯೇ ರತ್ನಶಿಖೆಯ ಗಂಡ ಮನೆಗೆ ಹಿಂತಿರುಗಿದನು.  ಅವಳ ಕೈಕಾಲುಗಳು ಹೆದರಿಕೆಯಿಂದ ನಡಗುತ್ತಿದ್ದವು, ಆದರೂ ಅದನ್ನು ತೋರಿಗೊಡದೇ ಗಂಡನಿಂದ ಸೇವಕನ ಹೆಣವನ್ನು ಮರೆಮಾಚಿದಳು. ರಾತ್ರಿಯಾಯ್ತು. ರತ್ನ ಶಿಖೆಯು ಗಂಡ ನಿದ್ರೆಯಲ್ಲಿ ಇರಬೇಕಾದರೆ ; "ಅಯ್ಯೋ ನನ್ನ ಗಂಡ ನನ್ನ ತಂದೆಯ ಸೇವಕನನ್ನು ಕೊಂದುಬಿಟ್ಟಿದ್ದಾನೆ " ಎಂದು ಕೂಗಾಡುತ್ತಾ ಅಳುತ್ತಾ ಕುಳಿತುಬಿಟ್ಟಳು. 

ಅವಳ ಕಿರಚಾಟ ಕೇಳಿ ನೆರೆಹೊರೆಯವರೆಲ್ಲ ಬಂದು ಬಂದು ನೋಡುತ್ತಿದ್ದರು . ಏನೂ ತಿಳಿಯದ ರತ್ನಶಿಖೆಯ ಗಂಡ ನೆರೆದಿದ್ದ ಜನರಿಗೆ "ಈ ಸಾವು ಹೇಗೆ ಸಂಭವಿಸಿತೆಂದು ತನಗೆ ತಿಳಿಯದು" ಎಂದು ನುಡಿದನು . ರಾಜಭಟರು ಬಂದು ರತ್ನಶಿಖೆಯ ಮಾತನ್ನೇ ನಂಬಿ,  ಅವಳ ಗಂಡನನ್ನು ಬಂಧಿಸಿ ರಾಜ್ಯದ ನ್ಯಾಯಾಲಯಕ್ಕೆ ಕರೆದೊಯ್ದರು.

ಮಹಾರಾಜನು ಏನು ನಡೆಯಿತೆಂದು ಕೇಳಿದಾಗಲೂ ರತ್ನಶಿಖೆ ತನ್ನ ನೆರೆಹೊರೆಯವರ ಬಳಿ ಹೇಳಿದ್ದದನ್ನೇ ಪುನರುಚ್ಚರಿಸಿದಳು .  ಬೇರಾವ ಸಾಕ್ಷಾಧಾರಗಳಿಲ್ಲದ್ದರಿಂದ ರಾಜನು  ಅವಳ ಮಾತನ್ನೇ ನಂಬಿದನು. ರತ್ನಶಿಖೆಯ ಗಂಡನೇ ಗುಣಸೇನನ ಸೇವಕನನ್ನು ಕೊಲೆ ಮಾಡಿರುವನೆಂದು ಅವನಿಗೆ ಮರಣದಂಡನೆಯನ್ನು ವಿಧಿಸಿದನು.  ಛೆ !ನಿರಪರಾಧಿಗೆ ಶಿಕ್ಷೆ ಆಗಬೇಕೆ ? ಎಂದು  ತಕ್ಷಣ ರಾಜನ ಆಸ್ಥಾನಕ್ಕೆ ಒಬ್ಬ  ಕಳ್ಳನು ಬಂದು ರಾಜನಿಗೆ ನಿಜ ಸಂಗತಿಯನ್ನು ತಿಳಿಸಿದನು.  ರತ್ನಶಿಖೆ ಮತ್ತು ಗುಣಸೇನನ ಸೇವಕ ಇವರೊಬ್ಬರ ನಡುವೆ ಜರುಗಿದ ಮಾತುಕತೆಯನ್ನು ಹಿಂದಿನ ಸಂಜೆ ರತ್ನಶಿಖೆಯ ಮನೆಗೆ ಕಳ್ಳತನ ಮಾಡಲೆಂದು ಹೋಗಿದ್ದ ಒಬ್ಬ ಕಳ್ಳ ಕೇಳಿಸಿಕೊಂಡಿದ್ದನು.

ಈ  ಪ್ರಸಂಗಕ್ಕೆ ಅವನು ಸಾಕ್ಷಿಯಾಗಿದ್ದನು. ಮಹಾರಾಜನು ಸಾಕ್ಷವನ್ನು ಪರಿಶೀಲಿಸಿ ರತ್ನಶಿಖೆಯ ಗಂಡನನ್ನು ಬಿಡುಗಡೆ ಮಾಡಿದನು.  ಕಳ್ಳನು ಸಾಕ್ಷಿ ಹೇಳಿದ್ದರೂ ಅವನು ಕಳ್ಳತನಕ್ಕಾಗಿ ಬೇರೆಯವರ ಮನೆಯನ್ನ ಪ್ರವೇಶಿಸಿದ್ದನ್ನು ಗಮನಿಸಿ ಸೆರೆಮನೆಯ ಶಿಕ್ಷೆಯನ್ನು ಅವನಿಗೆ ವಿಧಿಸಿದನು. ರತ್ನಶಿಖೆಗೆ ಮರಣದಂಡನೆಯನ್ನು ವಿಧಿಸಲಾಯಿತು. ಮಾಡಿದ್ದುಣ್ಣೋ ಮಹರಾಯ! ಎನ್ನುವ  ಮಾತು ದಿಟವಾಯ್ತು.

ಸ್ನೇಹಿತರೆ,   ರತ್ನಶಿಖೆ ಅಪರಾಧಿ ಹೌದು. ನಿರಪರಾಧಿಯಾದ ಗಂಡನ ಮೇಲೆ ತಪ್ಪು ಹೊರೆಸಿದ್ದು , ಶಿಕ್ಷೆಯಾಗುವಂತೆ ಮಾಡಿದ್ದು ಮಹಾಪರಾಧವೇ ಸರಿ. ಮದುವೆಯಾದ  ನಂತರ ಹಳೆಯ ಸ್ನೇಹವನ್ನು ಮತ್ತೆ  ಕದ್ದು- ಮುಚ್ಚಿ ಮುಂದುವರಿಸಿದ್ದು ತಪ್ಪು. ಅವಳು   ನಾಟಕವಾಡಿ ಸುಳ್ಳನ್ನು ಸತ್ಯವೆಂದು ಸ್ಥಾಪಿಸಲು ಹುನ್ನಾರ ಮಾಡಿದ್ದೂ ಸರಿಯಲ್ಲ.  ಆದರೆ ಅವಳಿಗೆ ಅರಿವಿಲ್ಲದಂತೆ ಆ ದೈವವು ರತ್ನಶಿಖೆಯ  ದುರ್ಬುದ್ಧಿಗಳಿಗೆ ಸಾಕ್ಷ ಒದಗಿಸಿ ಪಾಠ ಕಲಿಸಿತ್ತು.

ಹಾಗಾದರೆ ಇದರಲ್ಲಿ ತಂದೆ ಗುಣಸೇನನ  ಪಾಲು ಇಲ್ಲವೆ ?  ಎಂಬ ಪ್ರಶ್ನೆ ಕಾಡುತ್ತದೆ. ಈ ಎಲ್ಲ ಘಟನೆಗಳಿಗೆ ಮೂಲ ಸೂತ್ರಧಾರ ಗುಣಸೇನನೆಂದರೆ ತಪ್ಪಾಗಲಾರದು. " ಅಪರಾಧಿ ನಾನಲ್ಲ  ಅಪರಾಧ  ಎನಗಿಲ್ಲ " ಅಂತ ಸುಮ್ಮನಿರುವುದು  ಎಷ್ಟರ  ಮಟ್ಟಿಗೆ ಸರಿ. ಮಗಳ ದುರ್ನಡತೆ ತಿಳಿದಿದ್ದರೂ ಮದುವೆ ಮಾಡಿಸಿ, ಬೇರೊಬ್ಬರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದಂತಾಯಿತು. ಇದು ಶಿಕ್ಷಾರ್ಹ.

 ಪ್ರಸ್ತುತದಲ್ಲಿ  ಹೀಗೆ ಮಾಡುವ ಎಷ್ಟೋ ಪಾಲಕರನ್ನ ನಮ್ಮ  ಸುತ್ತಮುತ್ತ ಕಾಣುತ್ತೇವೆ. ಮಗ/ ಮಗಳ ವರ್ತನೆ ಗೊತ್ತಿದ್ದರೂ ಮುಚ್ಚಿಟ್ಟು ಮದುವೆ ಮಾಡುತ್ತಾರೆ. ಇದರಿಂದ  ಆಗುವ ಅನರ್ಥಗಳು, ಅನಾಹುತಗಳು ಅನೇಕ.  ಮನಸ್ತಾಪ, ಆಸಿಡ್ ದಾಳಿ, ವಿವಾಹವಿಚ್ಛೇದನ, ಅಪಹರಣ, ಆತ್ಮಹತ್ಯೆ ಅಥವಾ ಹತ್ಯೆಗೆ ಎಡೆಮಾಡುತ್ತವೆ.  ಸೂಚನೆ ಸಿಕ್ಕ  ಕೂಡಲೇ ಪಾಲಕರು ಮಕ್ಕಳನ್ನು ತಿದ್ದಲು ಪ್ರಯತ್ನಿಸಬೇಕು.  ಮದುವೆ ಮಾಡಿ ಕೈತೊಳೆದುಕೊಳ್ಳಬೇಕೆಂಬ ಮನೋಭಾವ  ಬಿಡಬೇಕು. ಸಮಸ್ಯೆಯನ್ನು ಇನ್ನೊಬ್ಬರಿಗೆ ವರ್ಗಾಯಿಸಿದರೆ ಸಾಕು ಎನ್ನುವ  ಇಂಗಿತವು ಆ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದಂತಾಗುತ್ತದೆ. ತಂದೆ ತಾಯಿಯರು  ಈ ನಿಟ್ಟಿನಲ್ಲಿ, ನಿಧಾನವಾಗಿ ಯೋಚಿಸಿ ಮುಂದುವರೆಯಬೇಕು. ಮಕ್ಕಳ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕಾಗುತ್ತದೆ.  'ಸಾವಿರ ಸುಳ್ಳು ಹೇಳಿಯಾದರೂ  ಒಂದು ಮದುವೆ ಮಾಡೀಸಬೇಕೆಂಬ ಮಾತು ' ಇಂದು ಸುತರಾಂ ಪಾಲಿಸಲಾಗದು. 

ಈಗಿನ ಡಿಜಿಟಲ್ ಯುಗದಲ್ಲಿ ಪಾಲಕರು  ಹೊಸ ತಲೆಮಾರಿನವರನ್ನು ಅರ್ಥಮಾಡಿಕೊಳ್ಳುವದು ಬಲು ಕಷ್ಟ.  ಜೀವನದ ಬಗೆಗೆ ಸ್ಪಷ್ಟತೆ ಇರುವುದಿಲ್ಲ. ನಿರ್ಧಾರಗಳನ್ನು , ನಿಲುವುಗಳನ್ನ ಬಹಳ ಬೇಗ ಬದಲಾಯಿಸುತ್ತಾರೆ.  ಸುತ್ತಲಿನ   ವಾತಾವರಣ ಹಾಗಿದೆಯಾ, ಬೆಳೆಸುತ್ತಿರುವ ಪಾಲಕರ ತಪ್ಪೋ, ಸಹವಾಸ ದೋಷವೋ,ನಮ್ಮ  ಶಿಕ್ಷಣ ವ್ಯವಸ್ಥೆಯೋ! ನ್ಯೂಕ್ಲಿಯರ್ ಕುಟುಂಬದ ಪರಿಣಾಮವೋ! ಎಲ್ಲಿ ತಪ್ಪಾಗುತ್ತಿದೆ ? ಯೋಚಿಸಬೇಕಲ್ವೆ?

* ವಿಭಾ ಪುರೋಹಿತ 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣlಅನಾಹುತಕ್ಕೆ ಅವಕಾಶ ಕೊಡದಿರಿ !”

  1. Managala+Prakash+Shetty

    🙏🏼 ಸಾಮಾಜಿಕ ಕಳಕಳಿಯ ಚೊಕ್ಕದಾದ ಚಿಕ್ಕದಾದ ಬರಹ ಚೆನ್ನಾಗಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter