ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಮುನ್ನುಡಿಯ ವೃತ್ತಾಂತ

ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಮುನ್ನುಡಿಗೆ ತನ್ನದೇ ಆದ ಸ್ಥಾನವಿದೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಮತ್ತು ನವ್ಯೋತ್ತರ ಕಾಲಘಟ್ಟದಲ್ಲಿ ಮುನ್ನುಡಿಯ ಸ್ವರೂಪ ಬದಲಾಗುತ್ತ, ಬೆಳೆಯುತ್ತ ಬಂದಿದೆ. ನವೋದಯ ಮತ್ತು ಪ್ರಗತಿಶೀಲ ಪಂಥದ ದಿಗ್ಗಜ ಲೇಖಕರು ತಮ್ಮ ಸಮಕಾಲೀನ ಮತ್ತು ಕಿರಿಯ ಸಾಹಿತಿಗಳನ್ನು ಪ್ರೋತ್ಸಾಹಿಸಲು ಮುನ್ನುಡಿ ಬರೆಯುತ್ತಿದ್ದರು. 

ಕನ್ನಡದ ಹಿರಿಯ ಲೇಖಕರು ಕೃತಿಯೊಂದನ್ನು ಆಮೂಲಾಗ್ರವಾಗಿ ಓದಿ, ಟಿಪ್ಪಣಿ ಮಾಡಿಕೊಂಡು ತುಂಬ ಗಂಭೀರವಾಗಿ ಮುನ್ನುಡಿ ಬರೆದು ಕೊಡುತ್ತಿದ್ದರು. ಈ ಹಿರಿಯ ಸಾಹಿತಿಗಳು ಕೃತಿಯ ಗುಣದೋಷಗಳಲ್ಲಿ ಗುಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ದೋಷಗಳ ಬಗ್ಗೆ ಮೇಷ್ಟ್ರು ವಿದ್ಯಾರ್ಥಿಗಳಿಗೆ ತಿಳಿ ಹೇಳುವಂತೆ ತುಂಬ ಅಕ್ಕರೆಯಿಂದ ತಿಳಿ ಹೇಳಿ ಅವರ ಬರವಣಿಗೆ ಸುಧಾರಿಸಲು ನೆರವಾಗುತ್ತಿದ್ದರು. ಸಹೃದಯಿಗಳೂ, ಗುಣಗ್ರಾಹಿಗಳೂ ಆದ ನಮ್ಮ ಹಿರಿಯ ಲೇಖಕರು ತಮ್ಮ ಪ್ರೋತ್ಸಾಹದಾಯಕ ಮುನ್ನುಡಿಯ ಮೂಲಕ ಅನೇಕ ಹೊಸ ಲೇಖಕರನ್ನು ಬೆಳೆಸಿದರು. ಇಂತಹ ಮುನ್ನುಡಿಗೆ ಸಂಬಂಧಿಸಿದ ಕೆಲವು ಪ್ರಸಂಗಗಳು ತುಂಬ ಸ್ವಾರಸ್ಯಕರವಾಗಿವೆ. 

ವರಕವಿ ಬೇಂದ್ರೆಯವರು ಮುನ್ನುಡಿ ಬರೆಯುವ ಕ್ರಮವೇ ತುಂಬ ವಿಶಿಷ್ಟ ಮತ್ತು ಅನನುಕರಣೀಯ. ಯಾರಾದರೂ ಲೇಖಕರು ತಮ್ಮ ಪುಸ್ತಕಗಳಿಗೆ ಮುನ್ನುಡಿ ಬೇಕೆಂದು ಅವರ ಬಳಿ ಹಸ್ತಪ್ರತಿ ತೆಗೆದುಕೊಂಡು ಹೋದರೆ ಬೇಂದ್ರೆಯವರು ಅಂತಹ ಲೇಖಕರನ್ನು ತುಂಬ ಅಕ್ಕರೆಯಿಂದ ಮಾತನಾಡಿಸಿ ಮುನ್ನುಡಿ ಬರೆದು ಕೊಡುವುದಾಗಿ ಹೇಳುತ್ತಿದ್ದರು. ಬೇಂದ್ರೆಯವರಿಗೆ ಆ ಕೃತಿ ಮೆಚ್ಚುಗೆಯಾದರೆ ಮುನ್ನುಡಿ ಬರೆಯುತ್ತಿದ್ದರು. ಒಂದು ವೇಳೆ ಆ ಕೃತಿ ಅವರಿಗೆ ಇಷ್ಟವಾಗದಿದ್ದರೆ ಒಂದು ಕವಿತೆ ಬರೆದು ಅದನ್ನೇ ಮುನ್ನುಡಿಯನ್ನಾಗಿ ಬಳಸಿಕೊಳ್ಳುವಂತೆ ಹೇಳುತ್ತಿದ್ದರು!

ಬೇಂದ್ರೆಯವರು ಎಷ್ಟಾದರೂ ವರಕವಿಗಳು. ಸಹೃದಯರಾದ ಅವರು ತಮ್ಮ ಬಳಿ ಬಂದ ಯಾರಿಗೂ ನಿರಾಸೆ ಮಾಡುತ್ತಿರಲಿಲ್ಲ. ಬೇಂದ್ರೆಯವರು ತಮ್ಮ ಬಳಿ ಮುನ್ನುಡಿ ಬೇಡಿ ಬಂದವರಿಗೆ ಮುನ್ನುಡಿ ಅಥವಾ ಕವಿತೆಯೊಂದಿಗೆ ಕಲ್ಲುಸಕ್ಕರೆ ಕೊಟ್ಟು ಆಶೀರ್ವದಿಸಿ ಕಳಿಸುತ್ತಿದ್ದರು. ಒಟ್ಟಿನಲ್ಲಿ ಬೇಂದ್ರೆಯವರ ಬಳಿ ಹೋದ ಯಾವ ಲೇಖಕರಿಗೂ ನಿರಾಸೆಯಾಗುತ್ತಿರಲಿಲ್ಲ. ಮುನ್ನುಡಿ ಅಥವಾ ಕವಿತೆ ಎರಡರಲ್ಲೊಂದು ಖಚಿತವಾಗಿ ಸಿಗುತ್ತಿತ್ತು!

ಕನ್ನಡದ ಮೊದಲ ಕಥೆಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಕೊಡಗಿನ ಗೌರಮ್ಮನವರು ತುಂಬ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು. ಗೌರಮ್ಮನವರ 'ಚಿಗುರು' ಮತ್ತು 'ಕಂಬನಿ'ಯೆಂಬ ಎರಡು ಕಥಾಸಂಕಲನಗಳು ಮಾತ್ರ ಪ್ರಕಟವಾಗಿವೆ. ಗೌರಮ್ಮನವರ ಮರಣಾನಂತರ ಪ್ರಕಟವಾದ ಅವರ ಕಥಾಸಂಕಲನ 'ಕಂಬನಿ'ಗೆ ವರಕವಿ ಬೇಂದ್ರೆಯವರು ಮುನ್ನುಡಿ ಮತ್ತು ಕವಿತೆ ಎರಡನ್ನೂ ಬರೆದು ಕೊಟ್ಟಿದ್ದರು.
 
ರಾಷ್ಟ್ರಕವಿ ಕುವೆಂಪು ಸಾಮಾನ್ಯವಾಗಿ ಯಾರಿಗೂ ಮುನ್ನುಡಿ ಬರೆದು ಕೊಡುತ್ತಿರಲಿಲ್ಲ. ಕುವೆಂಪುರವರು ಇತರರ ಕೃತಿಗಳಿಗೆ ಮುನ್ನುಡಿ ಬರೆದದ್ದು ತೀರ ಕಡಿಮೆ. ಜಾನಪದ ತಜ್ಞರೂ, ಖ್ಯಾತ ಲೇಖಕರೂ ಆಗಿದ್ದ ಎಚ್.ಎಲ್.ನಾಗೇಗೌಡರು ತಮ್ಮ 'ನನ್ನೂರು' ಎಂಬ ಕೃತಿಗೆ ಮುನ್ನುಡಿ ಬರೆದು ಕೊಡಬೇಕೆಂದು ಕುವೆಂಪುರವರಿಗೆ ಕೇಳಿದರು. ಕುವೆಂಪುರವರು ನಾಗೇಗೌಡರಿಗೆ ತುಂಬ ವಿನಯದಿಂದಲೇ ಕಾರ್ಯಬಾಹುಳ್ಯದ ಕಾರಣ ಮುನ್ನುಡಿ ಬರೆಯಲಾಗುವುದಿಲ್ಲವೆಂದು ತಿಳಿಸಿ 'ನನ್ನೂರು' ಕೃತಿಯ ಕುರಿತು ನಾಲ್ಕು ಒಳ್ಳೆಯ ಮಾತುಗಳಿರುವ ಒಂದು ಚಿಕ್ಕ ಪತ್ರ ಬರೆದರು. ನಾಗೇಗೌಡರಿಗೆ ಕುವೆಂಪುರವರ ಪತ್ರ ಎಷ್ಟು ಇಷ್ಟವಾಯಿತೆಂದರೆ, ಆ ಪತ್ರವನ್ನೇ ಅವರು ಮುನ್ನುಡಿಯ ಬದಲಾಗಿ ಹೊನ್ನುಡಿ ಎಂದು ತಮ್ಮ 'ನನ್ನೂರು' ಕೃತಿಯಲ್ಲಿ ತುಂಬ ಸಂತೋಷದಿಂದ ಹಾಕಿಕೊಂಡರು. 

ನವೋದಯದ ಹಿರಿಯ ಲೇಖಕರೊಬ್ಬರು ಹೊಸ ಲೇಖಕರೊಬ್ಬರ ಕೃತಿಗೆ ಮುನ್ನುಡಿ ಬರೆಯುತ್ತ ಕೆಲವು ಮೆಚ್ಚುಗೆಯ ಮಾತುಗಳನ್ನಾಡಿ ಪ್ರೋತ್ಸಾಹಿಸಿದ್ದರು. ವಿಶ್ವವಿದ್ಯಾಲಯವೊಂದರಲ್ಲಿ ಪ್ರಾಧ್ಯಾಪಕನಾಗಿದ್ದ ನವ್ಯ ವಿಮರ್ಶಕನೊಬ್ಬನಿಗೆ ಇದು ಸರಿ ಕಾಣಲಿಲ್ಲ. ನವ್ಯ ವಿಮರ್ಶಕ ಹಿರಿಯ ಲೇಖಕರಲ್ಲಿ ನೇರವಾಗಿ, “ಸರ್, ಅದೊಂದು ಸಾಧಾರಣ ಕೃತಿ. ಅದಕ್ಕೆ ನೀವು ಇಂತಹ ಮುನ್ನುಡಿ ಬರೆಯಬಹುದೇ?” ಎಂದು ಪ್ರಶ್ನಿಸಿದ. ಅದಕ್ಕೆ ಹಿರಿಯ ಲೇಖಕರು, “ಅಣ್ಣಾ, ಆ ಲೇಖಕ ಇನ್ನೂ ಚಿಕ್ಕವನು. ನಾನು ಅವನನ್ನು ಪ್ರೋತ್ಸಾಹಿಸಲೆಂದೇ ಮುನ್ನುಡಿ ಬರೆದಿದ್ದೇನೆ. ಯೋಗ್ಯತೆ ಮತ್ತು ಯೋಗವಿದ್ದರೆ ಅವನು ಮುಂದೆ ಒಳ್ಳೆಯ ಲೇಖಕನಾದರೂ ಆಗಬಹುದು” ಎಂದು ಹೇಳಿದರು. ಹಿರಿಯ ಲೇಖಕರ ಉತ್ತರದಿಂದ ತೃಪ್ತನಾಗದ ನವ್ಯ ವಿಮರ್ಶಕ ಅಸಹನೆಯಿಂದ ಗೊಣಗುಟ್ಟುತ್ತ ಅಲ್ಲಿಂದ ಜಾಗ ಖಾಲಿ ಮಾಡಿದ. 

ಕಾದಂಬರಿ ಸಾರ್ವಭೌಮರೆಂದೇ ಖ್ಯಾತರಾದ ಅ.ನ.ಕೃಷ್ಣರಾಯರು ಕನ್ನಡದ ಅನೇಕ ಲೇಖಕರಿಗೆ ಮುನ್ನುಡಿ ಬರೆದು ಪ್ರೋತ್ಸಾಹಿಸಿದ್ದಾರೆ. ಅ.ನ.ಕೃಷ್ಣರಾಯರ ಮತ್ತೊಂದು ವಿಶೇಷತೆಯೆಂದರೆ ಅವರು ತಮ್ಮ ಕೃತಿಗಳಿಗೆ ತಾವೇ ಮುನ್ನುಡಿ ಬರೆದುಕೊಳ್ಳುತ್ತಿದ್ದರು! ಮೇಲ್ನೋಟಕ್ಕೆ ಅ.ನ.ಕೃಷ್ಣರಾಯರ ಮುನ್ನುಡಿಗಳು ಅವರ ವಿಚಾರಧಾರೆಯ ಸಮರ್ಥನೆಯೆಂಬಂತೆ ಕಂಡರೂ ಅಂತಹ ಮುನ್ನುಡಿಗಳು ಸಾಕಷ್ಟು ಅಭ್ಯಾಸಪೂರ್ಣವೂ, ವಿಮರ್ಶಾತ್ಮಕವೂ ಆಗಿರುತ್ತದ್ದವೆಂಬುದು ಗಮನಾರ್ಹ.

ಗೋಪಾಲಕೃಷ್ಣ ಅಡಿಗರು ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಕವಿಗಳಲ್ಲೊಬ್ಬರು. ನವ್ಯ ಸಾಹಿತ್ಯ ಚಳುವಳಿಯ ನೇತಾರರಾದ ಅಡಿಗರು ತುಂಬ ಜನ ಹೊಸ ಲೇಖಕರನ್ನು ಬೆಳೆಸಿದ್ದಾರೆ. ಯಾವುದೇ ಲೇಖಕರು ಸಾಮಾನ್ಯವಾಗಿ ತಮಗಿಂತ ಹಿರಿಯರಾದ ಮತ್ತು ಖ್ಯಾತರಾದ ಲೇಖಕರಿಂದ ಮಾತ್ರ ತಮ್ಮ ಕೃತಿಗಳಿಗೆ ಮುನ್ನುಡಿ ಬರೆಯಿಸುತ್ತಾರೆ. ಆದರೆ ಪ್ರಯೋಗಶೀಲರಾದ ಅಡಿಗರು ಮಾತ್ರ ಈ ಸಂಪ್ರದಾಯವನ್ನು ಮುರಿದು ಹಾಕಿ ತಮಗಿಂತ ಕಿರಿಯರಾದ ಮತ್ತು ಅಷ್ಟೇನೂ ಖ್ಯಾತರಲ್ಲದ ಲೇಖಕರಿಂದ ತಮ್ಮ ಕೃತಿಗಳಿಗೆ ಮುನ್ನುಡಿ ಬರೆಯಿಸುವ ಮೂಲಕ ಕನ್ನಡದಲ್ಲಿ ಹೊಸ ಸಂಪ್ರದಾಯವನ್ನೇ ಆರಂಭಿಸಿದರು. 

ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಖ್ಯಾತಿ ಪಡೆದ, ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕರಾದ ಯು.ಆರ್.ಅನಂತಮೂರ್ತಿಯವರು ಮುನ್ನುಡಿ ಬರೆಯುವ ಶೈಲಿಯೇ ತೀರ ವಿಭಿನ್ನ ಮತ್ತು ವಿಶಿಷ್ಟ. ಅನಂತಮೂರ್ತಿಯವರು ತಮಗೆ ಇಷ್ಟವಾದ ಕೃತಿಯ ಕುರಿತು ಸಾಕಷ್ಟು ಒಳನೋಟಗಳಿರುವ ವಿಮರ್ಶಾತ್ಮಕ ಮುನ್ನುಡಿ ಬರೆಯುತ್ತಿದ್ದರು. ಒಂದು ವೇಳೆ ಅನಂತಮೂರ್ತಿಯವರಿಗೆ ಆ ಕೃತಿ ಇಷ್ಟವಾಗದಿದ್ದರೂ ಸಹ ಮುನ್ನುಡಿಯಲ್ಲಿ ಆ ಕೃತಿಯ ಕುರಿತು ಪ್ರಸ್ತಾಪವನ್ನೇ ಮಾಡದೆ ಪ್ರಚಲಿತ ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಿಚಾರಗಳ ಕುರಿತು ಗಂಭೀರವಾಗಿ ಚರ್ಚಿಸುತ್ತಿದ್ದರು.  ಮುನ್ನುಡಿಯ ಕೊನೆಯ ಕೆಲವು ಪ್ಯಾರಾಗ್ರಫುಗಳಲ್ಲಿ ಮಾತ್ರ ಆ ಪುಸ್ತಕದ ಗುಣದೋಷಗಳ ಕುರಿತು ಒಂದೆರಡು ಮಾತು ಹೇಳಿ ಮುಗಿಸುತ್ತಿದ್ದರು. ಅನಂತಮೂರ್ತಿಯವರದು ಮೊದಲೇ ತುಂಬ ಚಂದದ ಗದ್ಯ. ಅವರು ಬರೆದ ಮುನ್ನುಡಿಗಳು  ಲೇಖಕರಿಗಂತೂ ತುಂಬ ಸಂತೋಷ ನೀಡುತ್ತಿದ್ದವು. ಇಂತಹ ಬೆಡಗಿನ ಮುನ್ನುಡಿ ಬರೆಯುವ ಕಲೆ ಅನಂತಮೂರ್ತಿಯವರಿಗೆ ಸಿದ್ಧಿಸಿತ್ತು. ಅನಂತಮೂರ್ತಿಯವರು 'ನವ್ಯಾಲೋಕ' ಎಂಬ ಮುನ್ನುಡಿಗಳ ಸಂಕಲವನ್ನು ಸಹ ಪ್ರಕಟಿಸಿದ್ದಾರೆ. 

ಕನ್ನಡದಲ್ಲಿ ಅತಿ ಹೆಚ್ಚು ಮುನ್ನುಡಿ ಬರೆದ ವಿಮರ್ಶಕ ಬಹುಶಃ ಕೀರ್ತಿನಾಥ ಕುರ್ತಕೋಟಿಯವರೇ ಇರಬೇಕು. ಕುರ್ತಕೋಟಿಯವರು ಕರ್ನಾಟಕದ ಖ್ಯಾತ ಪ್ರಕಾಶನ ಸಂಸ್ಥೆಯಾದ ಧಾರವಾಡದ ಮನೋಹರ ಗ್ರಂಥ ಮಾಲಾದ ಸಾಹಿತ್ಯಕ ಸಲಹೆಗಾರರರಾಗಿದ್ದರು. ಮನೋಹರ ಗ್ರಂಥ ಮಾಲಾದಿಂದ ಪ್ರಕಟವಾದ ಶೇಕಡಾ ಎಂಬತ್ತರಷ್ಟು ಪುಸ್ತಕಗಳಿಗೆ ಕುರ್ತಕೋಟಿಯವರೇ ಮುನ್ನುಡಿ ಬರೆದಿದ್ದಾರೆ. ಸಾಹಿತ್ಯ ಲೋಕದ ಹಿರಿಯರನೇಕರು ಹೇಳುವಂತೆ ಮುನ್ನುಡಿಯ ವಿಚಾರದಲ್ಲಿ ಕುರ್ತಕೋಟಿಯವರು ಯಾರಿಗೂ ನಿರಾಸೆ ಮಾಡಿದವರಲ್ಲ. ನಿಗದಿತ ಸಮಯಕ್ಕೆ ಮೊದಲೇ ಮುನ್ನುಡಿ ಬರೆದು ಕೊಡುವವರೆಂಬ ವಿಶಿಷ್ಟ ಖ್ಯಾತಿಯೂ ಕುರ್ತಕೋಟಿಯವರಿಗಿತ್ತು. ಕನ್ನಡದ ಬಹಳಷ್ಟು ಹೊಸ ಲೇಖಕರಿಗೆ ಮುನ್ನುಡಿ ಬರೆಯುವುದರ ಮೂಲಕ ಕುರ್ತಕೋಟಿಯವರು ಸಾಕಷ್ಟು ಪ್ರೋತ್ಸಾಹ ನೀಡಿದರು.

ಧಾರವಾಡದ ಮತ್ತೊಬ್ಬ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜರಿಗೆ ಮುನ್ನುಡಿ ಬರೆಯುವುದಿಲ್ಲವೆಂಬ ವಿಶಿಷ್ಟ ಖ್ಯಾತಿಯಿತ್ತು. ಗಿರಡ್ಡಿಯವರು ಮುನ್ನುಡಿ ಬರೆಯುವುದಿಲ್ಲವೆಂಬುದು ಗೊತ್ತಿದ್ದರೂ ಕೆಲವು ಲೇಖಕರು ಅವರ ಬಳಿ ಮುನ್ನುಡಿ ಬರೆಯಿಸಬೇಕೆಂದು ಪ್ರಯತ್ನಿಸಿ ವಿಫಲರಾಗಿದ್ದರು. ಗಿರಡ್ಡಿಯವರು ಮುಂದೆ ಅನಿವಾರ್ಯವಾಗಿ ಕೆಲವು ತೀರಿ ಹೋದ ಲೇಖಕರ ಪುಸ್ತಕಗಳಿಗೆ ಮುನ್ನುಡಿ ಬರೆಯಬೇಕಾಯಿತು. ನಂತರದ ದಿನಗಳಲ್ಲಿ ಗಿರಡ್ಡಿಯವರು ತೀರಿ ಹೋದ ಲೇಖಕರ ಕೃತಿಗಳಿಗೆ ಮಾತ್ರ ಮುನ್ನುಡಿ ಬರೆಯುವ ಮೂಲಕ 'ಮರಣೋತ್ತರ ಮುನ್ನುಡಿಕಾರ' ಎಂದು ಪ್ರಸಿದ್ಧಿ ಪಡೆದದ್ದು ವಿಶೇಷವೇ ಸರಿ!

ಕನ್ನಡದಲ್ಲಿ ಇತ್ತೀಚೆಗಂತೂ ಮುನ್ನುಡಿಯ ಹಾವಳಿ ಹೆಚ್ಚಾಗಿದೆ. ಮುನ್ನುಡಿಗಳಿಲ್ಲದ ಕನ್ನಡ ಪುಸ್ತಕಗಳನ್ನು ಕಾಣುವುದು ದುರ್ಲಭವಾಗುತ್ತಿದೆ. ಎಷ್ಟೋ ಪುಸ್ತಕಗಳ ಪ್ರಕಟಣೆ ಮುನ್ನುಡಿಯಿಂದಾಗಿಯೇ ವಿಳಂಬವಾಗುವುದುಂಟು. ಕನ್ನಡದಲ್ಲಿ ಮೊದಲು ಒಂದು ಪುಸ್ತಕ ಒಂದು ಮುನ್ನುಡಿಯೊಂದಿಗೆ ಪ್ರಕಟವಾಗುತ್ತಿತ್ತು ಆದರೆ ಈಗೀಗ ಉದಯೋನ್ಮುಖ ಲೇಖಕರ  ಪುಸ್ತಕಗಳು ಎರಡು ಅಥವಾ ಮೂರು ಮುನ್ನುಡಿಗಳೊಂದಿಗೆ ಪ್ರಕಟವಾಗುವುದೂ ಉಂಟು!

ಕನ್ನಡದ ಹಿರಿಯ ಕವಿಯೊಬ್ಬರು ಸಹೃದಯರೆಂದು ಹೆಸರಾಗಿದ್ದಾರೆ. ಇವರು ಸಾಮಾನ್ಯವಾಗಿ ತಮ್ಮ ಬಳಿ ಮುನ್ನುಡಿ ಕೇಳಿಕೊಂಡು ಬರುವ ಕಿರಿಯ ಮತ್ತು ಉದಯೋನ್ಮುಖ ಲೇಖಕರಿಗೆ ನಿರಾಸೆ ಮಾಡುವುದಿಲ್ಲ. ಸ್ವಲ್ಪ ತಡವಾದರೂ ಪರವಾಗಿಲ್ಲ ಮುನ್ನುಡಿ ಬರೆದು ಕೊಡುತ್ತಾರೆ. ಇತ್ತೀಚೆಗೆ ಉತ್ತರ ಕರ್ನಾಟಕದ ಉದಯೋನ್ಮುಖ ಕವಿಯೊಬ್ಬ ಈ ಹಿರಿಯರ ಬಳಿ ತನ್ನ ಕವನಸಂಕಲನಕ್ಕೆ ಮುನ್ನುಡಿ ಬೇಕೆಂದು ಕೇಳಿದ. 

ಹಿರಿಯರು ಉದಯೋನ್ಮುಖನಿಗೆ, "ಹೊಸ ಕವನಸಂಕಲನದಲ್ಲಿ ಒಟ್ಟು ಎಷ್ಟು ಕವನಗಳಿವೆ ತಮ್ಮಾ?" ಎಂದು ಕೇಳಿದರು. ಉದಯೋನ್ಮುಖ, "ಒಟ್ಟು ಎಪ್ಪತ್ತೆಂಟು ಕವನಗಳಿವೆ ಸರ್" ಎಂದು ವಿನಯದಿಂದ ಹೇಳಿದ. ಹಿರಿಯರು, "ಆಗಲಿ ತಮ್ಮಾ, ಆ ಎಪ್ಪತ್ತೆಂಟು ಕವನಗಳಲ್ಲಿ ಅತ್ಯುತ್ತಮವಾದ ಇಪ್ಪತ್ತು ಕವನಗಳನ್ನು ಮಾತ್ರ ಆರಿಸಿ ಕಳಿಸು. ನಾನು ಇನ್ನೆರಡು ತಿಂಗಳಲ್ಲಿ ಮುನ್ನುಡಿ ಬರೆದು ಕೊಡುವೆ" ಎಂದು ಹೇಳಿದರು. ಉದಯೋನ್ಮುಖ ಕವಿ ಹಿರಿಯರು ಹೇಳಿದಂತಯೇ ಆಯ್ದ ಇಪ್ಪತ್ತು ಕವನಗಳನ್ನು ಮಾತ್ರ ಕಳಿಸಿದ. ಹಿರಿಯರು ತಾವು ಕೊಟ್ಟ ಮಾತಿನಂತೆ ಎರಡು ತಿಂಗಳಲ್ಲಿ ಇಪ್ಪತ್ತು ಕವನಗಳನ್ನು ಮಾತ್ರ ಓದಿ ಒಂದು ಪ್ರೋತ್ಸಾಹದಾಯಕ ಮುನ್ನುಡಿ ಬರೆದು ಕೊಟ್ಟರು!

ಬಳ್ಳಾರಿಯ ಕವಿಯೊಬ್ಬ ಬೆಂಗಳೂರಿನ ವಿಮರ್ಶಕರೊಬ್ಬರ ಬಳಿ ಮುನ್ನುಡಿಗಾಗಿ ಹಸ್ತಪ್ರತಿ ಕಳಿಸಿದ. ಬೆಂಗಳೂರಿನ ವಿಮರ್ಶಕ ಬಳ್ಳಾರಿಯ ಕವಿಗೆ ಹಸ್ತಪ್ರತಿ ತಲುಪಿದೆಯೆಂದೂ ಶೀಘ್ರದಲ್ಲೇ ಮುನ್ನುಡಿ ಬರೆದು ಕೊಡುವೆನೆಂದೂ ಹೇಳಿದರು. ಬಳ್ಳಾರಿಯ ಕವಿ ಮುನ್ನುಡಿಗಾಗಿ ಕಾಯತೊಡಗಿದ. ಆರು ತಿಂಗಳಾದರೂ ಮುನ್ನುಡಿಯ ಸುದ್ದಿಯಿಲ್ಲ. ಕೊನೆಗೆ ಬಳ್ಳಾರಿಯ ಕವಿ ಒಂದು ಭಾನುವಾರ ನೇರವಾಗಿ ಬೆಂಗಳೂರಿನ ವಿಮರ್ಶಕರ ಮನೆಗೇ ಹೋದ. 

ಬಳ್ಳಾರಿಯ ಕವಿಗೆ ತಿಂಡಿ, ಕಾಫಿ ಕೊಟ್ಟು ಸತ್ಕರಿಸಿದ ವಿಮರ್ಶಕರು, "ಏನು ಇಷ್ಟು ದೂರ ಬರೋಣವಾಯಿತು?" ಎಂದು ಕೇಳಿದರು. ಕವಿ, "ಸರ್, ನಾನು ಕವನಸಂಕಲನದ ಹಸ್ತಪ್ರತಿ ಕಳಿಸಿದ್ದೆ. ನೀವು ಮುನ್ನುಡಿ ಬರೆದು ಕೊಟ್ಟರೆ ಪ್ರೆಸ್ಸಿಗೆ ಕಳಿಸಬೇಕು" ಎಂದ. ವಿಮರ್ಶಕರು, "ನೀವು ಹಸ್ತಪ್ರತಿ ಕಳಿಸಿದ್ದಿರಾ?" ಎಂದು ಕೇಳಿದಾಗ ಬಳ್ಳಾರಿಯ ಕವಿ ಬೆಚ್ಚಿಬಿದ್ದ! ವಿಮರ್ಶಕರು ನಾಲ್ಕು ತಿಂಗಳಾದರೂ ಸಹ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಬಂದ ಕವನಸಂಕಲನದ ಹಸ್ತಪ್ರತಿಯ ಪಾರ್ಸಲನ್ನು ಬಿಚ್ಚಿ ನೋಡಿರಲೇ ಇಲ್ಲ! ಆ ಹಸ್ತಪ್ರತಿಯ ಪಾರ್ಸಲ್ಲು ಧೂಳು ತಿನ್ನುತ್ತ ಹಳೆಯ ಪುಸ್ತಕಗಳ ನಡುವೆ ಸೇರಿಹೋಗಿತ್ತು!

ವಿಮರ್ಶಕರು ಕೊನೆಗೆ ಅವನ ಮುಂದೆಯೇ ಹಸ್ತಪ್ರತಿಯ ಪಾರ್ಸಲು ಬಿಚ್ಚಿ ನೋಡಿ ಇನ್ನೆರಡು ತಿಂಗಳಲ್ಲಿ ಮುನ್ನುಡಿ ಬರೆದು ಕೊಡುವುದಾಗಿ ಹೇಳಿ ಅವನನ್ನು ಸಾಗಹಾಕಿದರು. ಬಳ್ಳಾರಿಯ ಕವಿ ಮುಂದೆ ವಿಮರ್ಶಕರನ್ನು ಮುನ್ನುಡಿಗಾಗಿ ನಕ್ಷತ್ರಿಕನಂತೆ ಕಾಡಿದ. ಬೆಂಗಳೂರಿನ ವಿಮರ್ಶಕರು ಅಂತೂ ಇಂತೂ ಒಂದು ವರ್ಷ ಕಾಡಿಸಿದ ನಂತರ ಎಂಟು ಪುಟಗಳ ಪ್ರೋತ್ಸಾಹದಾಯಕ ಮುನ್ನುಡಿ ಬರೆದು ಕೊಟ್ಟರು. ಬೆಂಗಳೂರಿನ ವಿಮರ್ಶಕ ಬಳ್ಳಾರಿಯ ಕವಿಯ ಕವನಗಳ ಕುರಿತು ಹೊಗಳಿ ಮುನ್ನುಡಿ ಬರೆದಿದ್ದರಿಂದ ಕವಿಗೆ ತಡವಾಗಿ ಮುನ್ನುಡಿ ಬರೆದು ಕೊಟ್ಟ ಬೇಸರ ಮಾಯವಾಯಿತು.

ಕನ್ನಡದ ಇಬ್ಬರು ಲೇಖಕರು ಸುಮಾರು ಇಪ್ಪತ್ತೈದು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಒಬ್ಬ ಕವಿಯಾದರೆ ಮತ್ತೊಬ್ಬ ವಿಮರ್ಶಕ. ಪರಸ್ಪರರ ಕೃತಿಗಳನ್ನು ಪ್ರಕಟಣಪೂರ್ವದಲ್ಲಿ ಓದಿ, ಚರ್ಚಿಸಿ, ಏನಾದರೂ ತಿದ್ದುಪಡಿಗಳಿದ್ದರೆ ಮಾಡಿ ನಂತರ ಪ್ರಕಟಣೆಗೆ ಕಳಿಸುತ್ತಿದ್ದರು. ಕವಿಗೆ ವಿಮರ್ಶಕ ಮೊದಲ ಓದುಗನಾದರೆ, ವಿಮರ್ಶಕನಿಗೆ ಕವಿ ಮೊದಲ ಓದುಗ. 

ಕವಿ ತನ್ನ ಹೊಸ ಕವನ ಸಂಕಲನವೊಂದಕ್ಕೆ  ವಿಮರ್ಶಕ ಮಿತ್ರನ ಹತ್ತಿರ ಮುನ್ನುಡಿ ಕೇಳಿದ. ವಿಮರ್ಶಕ ತುಂಬ ಸಂತೋಷದಿಂದ ದೀರ್ಘ ಮುನ್ನುಡಿಯೊಂದನ್ನು ಬರೆದು ಕೊಟ್ಟ. ಕವಿ ಮುನ್ನುಡಿ ಓದಿ ತೀವ್ರ ನಿರಾಶನಾದ. ಏಕೆಂದರೆ ಆ ದೀರ್ಘ ಮುನ್ನುಡಿಯಲ್ಲಿ ಕವಿಯ ಕುರಿತಾಗಲೀ, ಕವನಗಳ ಕುರಿತಾಗಲೀ ಒಂದೇ ಒಂದು ಒಳ್ಳೆಯ ಮಾತಿರಲಿಲ್ಲ. ವಿಮರ್ಶಕ ಸೆಕ್ಯುಲರಿಸಂ, ಕೋಮುವಾದ, ಅಭಿವ್ಯಕ್ತಿ ಸ್ವಾತಂತ್ರ್ಯ, ಬುದ್ಧಿಜೀವಿಗಳ ತಲ್ಲಣ, ಅತಂತ್ರ ಪರಿಸ್ಥಿತಿ ಮತ್ತು ಎಡ-ಬಲ ರಾಜಕೀಯ ಎಂದೆಲ್ಲ ಅಸಂಬದ್ಧವಾಗಿ, ಜಾಳುಜಾಳಾಗಿ ಮುನ್ನುಡಿ ಬರೆದಿದ್ದ.

ಕವಿ ತನ್ನ ಮಿತ್ರನಿಗೆ ಹೊಸ ಕವನಸಂಕಲನದಲ್ಲಿ ಮುನ್ನುಡಿಯನ್ನು ಹಾಕಲಾಗುವುದಿಲ್ಲವೆಂಬ ವಿಷಯವನ್ನು ತುಂಬ ಸಂಕೋಚದಿಂದ ತಿಳಿಸಿದ. ಕವಿಯ ಮಾತಿನಿಂದ ವಿಮರ್ಶಕನಿಗೆ ತುಂಬ ಕಸಿವಿಸಿಯಾದರೂ ಆಗಬಹುದೆಂದು ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದ. ಈ ಮುನ್ನುಡಿಯ ಪ್ರಕರಣವಾದ ನಂತರ ಇಬ್ಬರ ನಡುವೆ ಮೊದಲಿದ್ದ ಸ್ನೇಹ-ಸೌಹಾರ್ದ ಈಗ ಉಳಿದಿಲ್ಲ. ಕೇವಲ ಒಂದು ಮುನ್ನುಡಿಯ ಕಾರಣದಿಂದ ಇಪ್ಪತ್ತೈದು ವರ್ಷಗಳ ಗೆಳತನಕ್ಕೆ ಕುತ್ತು ಬಂದದ್ದು ವಿಷಾದದ ಸಂಗತಿ.

ಕರ್ನಾಟಕದಲ್ಲಿ ಹಲವು ಬುದ್ಧಿಜೀವಿಗಳಿದ್ದಾರೆ. ಬಹುತೇಕ ಬುದ್ಧಿಜೀವಿಗಳಿಗೆ ತಮ್ಮದೇ ಆದ ಐಡಿಯಾಲಜಿಗಳಿವೆ. ಸಾಮಾನ್ಯವಾಗಿ ಬುದ್ಧಿಜೀವಿಗಳು ತಮ್ಮ ಐಡಿಯಾಲಜಿಗಳಿಗೆ ಹೊರತಾದ ಕೃತಿಗಳನ್ನು ಸಾರಾಸಗಟಾಗಿ ನಿರಾಕರಿಸುತ್ತಾರೆ. ಈ ಮಹಾಶಯರು ತಮ್ಮ ಐಡಿಯಾಲಜಿಗಳನ್ನು ಸಮರ್ಥಿಸಿಕೊಳ್ಳಲು ಕೆಲವೊಮ್ಮೆ ಅತಿರೇಕದ ಮಟ್ಟಕ್ಕೂ ಹೋಗುವುದುಂಟು. ಬುದ್ಧಿಜೀವಿಗಳು ವಿಶ್ವವಿದ್ಯಾಲಯ, ಅಕಾಡೆಮಿ, ಪ್ರಾಧಿಕಾರ ಮತ್ತು ಟ್ರಸ್ಟುಗಳು ಸೇರಿದಂತೆ ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಲ್ಲಿ ಸುಖವಾಗಿ ಕಾಲಯಾಪನೆ ಮಾಡುತ್ತಾರೆ. 

ಬುದ್ಧಿಜೀವಿಗಳ ಕುರಿತು ಭಯಮಿಶ್ರಿತ ಗೌರವ ಹೊಂದಿರುವ ಕೆಲವು ಉದಯೋನ್ಮುಖ ಸಾಹಿತಿಗಳು ತಮ್ಮ ಕೃತಿಗಳಿಗೆ ಬುದ್ಧಿಜೀವಿಗಳ ಮುನ್ನುಡಿ ಬೇಕೆಂದು ಬಯಸುತ್ತಾರೆ. ಉದಯೋನ್ಮುಖರು ಬುದ್ಧಿಜೀವಿಗಳ ಬಳಿ ಮುನ್ನುಡಿ ಕೇಳಿದಾಗ ಅವರು ಬಡಪೆಟ್ಟಿಗೆ ಒಪ್ಪುವುದಿಲ್ಲ. ವಾಸ್ತವವಾಗಿ ಕೆಲಸವಿಲ್ಲದೆ ಖಾಲಿಯಿದ್ದರೂ ತುಂಬ ಕೆಲಸವಿರುವವರಂತೆ ನಟಿಸುತ್ತಾರೆ. ಉದಯೋನ್ಮುಖರು ತುಂಬ ಬೇಡಿಕೊಂಡ ನಂತರ ಕೊನೆಗೂ ಏನೋ ದೊಡ್ಡ ಮನಸ್ಸು ಮಾಡಿ ಮುನ್ನುಡಿ ಬರೆಯಲು ಒಪ್ಪುತ್ತಾರೆ. ಮೂರು ತಿಂಗಳು, ಆರು ತಿಂಗಳು, ಒಂಬತ್ತು ತಿಂಗಳು ಅಥವಾ ಒಂದು ವರ್ಷದ ನಂತರ ಮುನ್ನುಡಿ ಬರೆದು ಕೊಡುತ್ತಾರೆ. 

ಬುದ್ಧಿಜೀವಿಗಳು ಬರೆದ ಮುನ್ನುಡಿಗಳು ಹೇಗಿರುತ್ತವೆಂದರೆ ಓದುಗರಿಗಿರಲಿ, ಮುನ್ನುಡಿ ಬರೆಯಿಸಿಕೊಂಡ ಲೇಖಕರಿಗೂ ಅರ್ಥವಾಗುವುದಿಲ್ಲ! ಆ ಕೃತಿಯ ಕುರಿತಾಗಲೀ, ಲೇಖಕರ ಕುರಿತಾಗಲೀ ಒಂದೇ ಒಂದು ಮಾತು ಮುನ್ನುಡಿಯಲ್ಲಿರುವುದಿಲ್ಲ! 
ಮುನ್ನುಡಿಯ ಹೆಸರಿನಲ್ಲಿ ತಮ್ಮ ಐಡಿಯಾಲಜಿಗಳನ್ನು ಸಮರ್ಥಿಸಿಕೊಳ್ಳುವ ಲೇಖನ ಬರೆದಿರುತ್ತಾರೆ. ತುಂಬ ಜನ ಲೇಖಕರಿಗೆ ಇದು ಅರ್ಥವಾದರೂ ತಾವಾಗಿಯೇ ಕೇಳಿ ಬರೆಯಿಸಿಕೊಂಡ ಕಾರಣ ಪುಸ್ತಕದಲ್ಲಿ ಮುನ್ನುಡಿ ಹಾಕಲೇಬೇಕಾಗುತ್ತದೆ. ಪ್ರಚಂಡರಾದ ಬುದ್ಧಿಜೀವಿಗಳನ್ನು ಎದುರು ಹಾಕಿಕೊಳ್ಳುವ ಸಾಮರ್ಥ್ಯವೂ ಉದಯೋನ್ಮುಖರಿಗಿರುವುದಿಲ್ಲ. 

ಬುದ್ಧಿಜೀವಿಗಳು ಲೇಖಕಿಯರ ಕೃತಿಗಳಿಗೆ ಮುನ್ನುಡಿ ಬರೆಯುವಾಗ ಮಾತ್ರ ತುಂಬ ಪ್ರೀತಿ ತೋರಿಸುತ್ತಾರೆ. ಕೆಲವು ಲೇಖಕಿಯರ ಕೃತಿಗಳು ಕಳಪೆಯಾಗಿದ್ದರೂ ಅವು ಒಳ್ಳೆಯ ಕೃತಿಗಳು ಎಂದು ಹೊಗಳಿ ಮುನ್ನುಡಿ ಬರೆಯುತ್ತಾರೆ. ಲೇಖಕರಿಗೆ ಮುನ್ನುಡಿ ಬರೆದು ಕೊಡಲು ಸತಾಯಿಸುವ ಬುದ್ಧಿಜೀವಿಗಳು ಲೇಖಕಿಯರ ವಿಷಯದಲ್ಲಿ ಮಾತ್ರ ತುಂಬ ಸಹೃದಯತೆ ತೋರಿಸುತ್ತಾರೆ. ಲೇಖಕಿಯರ ಕೃತಿಗಳಿಗೆ ಕೇಕೆ ಹಾಕಿ ಮುನ್ನುಡಿ ಬರೆದುಕೊಡುವ ಬುದ್ಧಿಜೀವಿಗಳು ಬೆಂಗಳೂರಿನಲ್ಲಿ ತುಂಬ ಜನ ಇದ್ದಾರೆ ಎಂಬ ಮಾತಿದೆ ಮತ್ತು ಆ ಮಾತು ಸುಳ್ಳಲ್ಲ ಎಂಬುದು ಗಮನಾರ್ಹ. 

ಕನ್ನಡದ ಬಂಡಾಯ ಕವಿಯೊಬ್ಬರು "ಮುನ್ನುಡಿ ಸ್ಪೆಷಲಿಸ್ಟ್" ಎಂದೇ ಖ್ಯಾತಿ ಪಡೆದಿದ್ದಾರೆ. ಹೊಸಬರ ಕೃತಿಗಳನ್ನು ಯದ್ವಾತದ್ವಾ ಹೊಗಳಿ ಮುನ್ನುಡಿ ಬರೆಯುತ್ತಿದ್ದುದೇ ಈ ಖ್ಯಾತಿಗೆ ಕಾರಣ. ಈ ಬಂಡಾಯ ಕವಿ ಹೊಸಬರು ಕೇಳಿದರೂ ಸರಿ, ಕೇಳದಿದ್ದರೂ ಸರಿ ಮುನ್ನುಡಿ ಬರೆದು ಕೊಡುತ್ತಾರೆ! ಅನೇಕ ಜನ ಲೇಖಕರಿಗೆ ಮುನ್ನುಡಿ ಬರೆಯುವುದು ತಲೆನೋವಿನ ಸಂಗತಿಯಾದರೆ, ಈ ಬಂಡಾಯ ಕವಿಗೆ ಮಾತ್ರ ಮುನ್ನುಡಿ ಬರೆಯುವುದು ತುಂಬ ಸಂತೋಷ ನೀಡುತ್ತಿತ್ತು. ಪ್ರತಿ ತಿಂಗಳು ಎರಡ್ಮೂರು ಮುನ್ನುಡಿ ಬರೆದು ಕೊಡುವುದು ಇವರಿಗೆ ರೂಢಿಯಾಗಿಬಿಟ್ಟಿದೆ. ಉದಯೋನ್ಮುಖ ಲೇಖಕರನೇಕರ ಕಳಪೆ ಕೃತಿಗಳಿಗೆ ಮುನ್ನುಡಿ ಬರೆದು, ಬರೆದು ಈ ಬಂಡಾಯ ಕವಿಯ ಅಭಿರುಚಿಯೇ ಕೆಟ್ಟು ಹೋಗಿದೆ! ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲೇ ಕಳೆದ ತಿಂಗಳು ಹೊಸಬರ ಹದಿನಾರು ಕವನಸಂಕಲನಗಳು ಪ್ರಕಟವಾದವು. ಆ ಹದಿನಾರು ಪುಸ್ತಕಗಳಲ್ಲಿ ಹನ್ನೆರಡು ಪುಸ್ತಕಗಳಿಗೆ ಈ ಬಂಡಾಯ ಕವಿಯೇ ಮುನ್ನುಡಿ ಬರೆದಿದ್ದರು! ಇವರ ಮುನ್ನುಡಿ ಬರೆಯುವ ಉತ್ಸಾಹ ಮತ್ತು ವೇಗ ಕಂಡು ಬೆಂಗಳೂರಿನ ಲೇಖಕರೊಬ್ಬರು ತುಂಬ ಮೆಚ್ಚುಗೆ ವ್ಯಕ್ತಪಡಿಸಿ "ವೃತ್ತಿಪರ ಮುನ್ನುಡಿಕಾರ" ಎಂಬ ಬಿರುದು ನೀಡಿದರು. ಬಂಡಾಯ ಕವಿ ತುಂಬ ಸಂತೋಷದಿಂದಲೇ ಆ ಬಿರುದನ್ನು ಸ್ವೀಕರಿಸಿದರು! 

ಉದಯೋನ್ಮುಖ ಕವಯತ್ರಿಯೊಬ್ಬಳು ಇತ್ತೀಚೆಗೆ ಎಂಬತ್ತೆಂಟು ಪುಟಗಳ ಕವನ ಸಂಕಲನ ಪ್ರಕಟಿಸಿದಳು. ಈ ಕವನ ಸಂಕಲನದ ವಿಶೇಷತೆಯೇನೆಂದರೆ ಮುನ್ನುಡಿ ಸ್ಪೇಷಲಿಸ್ಟನಾದ ಬಂಡಾಯ ಕವಿಯೂ ಸೇರಿದಂತೆ ನಾಲ್ಕು ಜನ ಲೇಖಕರು ಮುನ್ನುಡಿ ಬರೆದಿದ್ದರು. ಆರು ಜನ ಲೇಖಕರು ಪ್ರತಿಕ್ರಿಯೆ ಬರೆದಿದ್ದರು. ಇಬ್ಬರು ಬ್ಲರ್ಬ್ ಬರೆದಿದ್ದರು. ಎಂಬತ್ತೆಂಟು ಪುಟಗಳ ಈ ಪುಸ್ತಕದಲ್ಲಿ ಕವನಗಳಿರುವುದು ಬರೀ  ನಲವತ್ತೆರಡು ಪುಟಗಳು ಮಾತ್ರ. ಉಳಿದ ನಲವತ್ತಾರು ಪುಟಗಳೆಲ್ಲ ಮುನ್ನುಡಿ ಮತ್ತು ಪ್ರತಿಕ್ರಿಯೆಗಳಿಗೆ ಮೀಸಲು. ಈ ನಾಲ್ಕು ಮುನ್ನುಡಿ, ಆರು ಪ್ರತಿಕ್ರಿಯೆ ಮತ್ತು ಎರಡು ಬ್ಲರ್ಬುಗಳಲ್ಲಿ ಕವಯತ್ರಿಯ ಸಾಧಾರಣ ಕವಿತೆಗಳನ್ನು ಯದ್ವಾತದ್ವಾ ಹೊಗಳಿ ಅವಳನ್ನು ಅಟ್ಟಕ್ಕೇರಿಸಲಾಗಿತ್ತು. ಸದ್ಯ ಕನ್ನಡದಲ್ಲಿ ಇಂತಹ ಸಾಧಾರಣ ಕವಯತ್ರಿಯರ ಕಳಪೆ ಕವನಸಂಕಲನಗಳು ಪುಂಖಾನುಪುಂಖವಾಗಿ ಪ್ರಕಟವಾಗುತ್ತಿವೆ. 

ಮುನ್ನುಡಿಯ ಕುರಿತ ಹಪಾಹಪಿ ಉದಯೋನ್ಮುಖ ಸಾಹಿತಿಗಳಲ್ಲಿ ಅದರಲ್ಲೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಉದಯೋನ್ಮುಖ ಸಾಹಿತಿಗಳು ಹಿರಿಯ ಸಾಹಿತಿಗಳನ್ನು ಇನ್ನಿಲ್ಲದಂತೆ ಕಾಡಿ ಬೇಡಿ ಮುನ್ನುಡಿ ಬರೆಸಿಕೊಳ್ಳುತ್ತಾರೆ. ಎಷ್ಟೋ ಜನ ಉದಯೋನ್ಮುಖ ಲೇಖಕರು ಮುನ್ನುಡಿಗಾಗಿ ಹಿರಿಯ ಲೇಖಕರಿಗೆ ನಕ್ಷತ್ರಿಕರಂತೆ ಕಾಟ ಕೊಡುತ್ತಾರೆ. ಎಷ್ಟೋ ವೇಳೆ ಹಿರಿಯರ ಲೇಖಕರು ಇಂತಹ ನಕ್ಷತ್ರಿಕರ ಉಪದ್ರವಕ್ಕೆ ಬೇಸತ್ತು ಮುನ್ನುಡಿ ಬರೆದು ಕೊಡುತ್ತಾರೆ. ಕೆಲವು ಉದಯೋನ್ಮುಖರು ಮುನ್ನುಡಿಗೋಸ್ಕರ ವರ್ಷಾನುಗಟ್ಟಲೆ ಕಾಯುತ್ತಾರೆ.  ಕೆಲವು ಹಿರಿಯ ಲೇಖಕರು ಪಾಪ, ತಮ್ಮ ಒಂದು ಮುನ್ನುಡಿಗೋಸ್ಕರ ವರ್ಷಾನುಗಟ್ಟಲೆ ಕಾಯುತ್ತಿದ್ದಾರೆ ಎಂದು ಕನಿಕರದಿಂದ ಮುನ್ನುಡಿ ಬರೆದು ಕೊಡುತ್ತಾರೆ. ಮತ್ತೆ ಕೆಲವು ಹಿರಿಯ ಲೇಖಕರು ಮಾತ್ರ ಹೊಸಬರನ್ನು ಪ್ರೋತ್ಸಾಹಿಸಲೆಂದು ಉದಯೋನ್ಮುಖರಿಗೆ ಪ್ರೀತಿಯಿಂದ ಮುನ್ನುಡಿ ಬರೆದು ಕೊಡುತ್ತಾರೆ. ಏನೇ ಆದರೂ ಪ್ರೀತಿಯಿಂದ ಮುನ್ನುಡಿ ಬರೆದು ಕೊಡುವವರು ಬೆರಳೆಣಿಕೆಯಷ್ಟು ಜನ ಸಾಹಿತಿಗಳು ಮಾತ್ರ. 

ಮುನ್ನುಡಿಯ ಬಗ್ಗೆ ಇಷ್ಟೆಲ್ಲ ಹೇಳಿದ ನನಗೆ ಕೂಡ ಮುನ್ನುಡಿಯೊಂದಿಗೆ ವಿಶೇಷ ನಂಟಿದೆ. ಕನ್ನಡದ ಮಹತ್ವದ ಲೇಖಕರಲ್ಲೊಬ್ಬರಾದ ಡಾ.ನಾ.ಮೊಗಸಾಲೆಯವರು 2022ರಲ್ಲಿ ಪ್ರಕಟವಾದ ತಮ್ಮ ಬೃಹತ್ ವ್ಯಕ್ತಿಚಿತ್ರಗಳ ಸಂಪುಟ 'ಹೂ ಬಿಸಿಲಿನ ಕೆಳಗೆ' ಕೃತಿಗೆ ನನ್ನಿಂದಲೇ ಮುನ್ನುಡಿ ಬರೆಸಿದ್ದಾರೆ. ತುಂಬ ಒಳ್ಳೆಯ ಓದುಗನಾದ ನಾನು ಇತ್ತೀಚೆಗೆ ಬರೆಯಲಾರಂಭಿಸಿದರೂ ಒಂದೇ ಒಂದು ಪುಸ್ತಕವನ್ನೂ ಪ್ರಕಟಿಸಿಲ್ಲ. 

ಹಿರಿಯರೂ, ಆತ್ಮೀಯರೂ ಆಗಿರುವ ಮೊಗಸಾಲೆಯವರ ವ್ಯಕ್ತಿಚಿತ್ರಗಳ ಕುರಿತು ನಾನು ಅವರೊಂದಿಗೆ ಆಗಾಗ ಚರ್ಚಿಸುತ್ತಿದ್ದೆ. ಇದ್ದಕ್ಕಿದ್ದಂತೆ ಒಂದು ದಿನ ಕರೆ ಮಾಡಿದ ಮೊಗಸಾಲೆಯವರು, "ಅಣ್ಣಾ, 'ಹೂ ಬಿಸಿಲಿನ ಕೆಳಗೆ' ಪ್ರಕಟಣೆಗೆ ಸಿದ್ಧವಾಗಿದೆ. ನೀವೇ ಅದಕ್ಕೆ ಮುನ್ನುಡಿ ಬರೆಯಬೇಕು" ಎಂದು ಹೇಳಿದರು. ಹಿರಿಯ ಲೇಖಕರಾದ ಮೊಗಸಾಲೆಯವರ ಕೃತಿಗೆ ನನ್ನಂತಹ ಕಿರಿಯ ಮುನ್ನುಡಿ ಬರೆಯುವುದೆಂದರೆ ಸಾಮಾನ್ಯ ಮಾತಲ್ಲ. ನಾನು ಮುನ್ನುಡಿ ಬರೆಯುವುದರಿಂದ ಪಾರಾಗಲು ಸಾಕಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಕೊನೆಗೂ ನಾನು ಮೊಗಸಾಲೆಯವರ ಪ್ರೀತಿಯ ಮುಂದೆ ಶರಣಾಗಲೇಬೇಕಾಯಿತು. ಮೊಗಸಾಲೆಯವರಿಗೆ ಯುವ ತಲೆಮಾರಿನ ಓದುಗ ಮತ್ತು ಲೇಖಕರ ಕುರಿತು ಅಪಾರ ಪ್ರೀತಿಯಿದೆ. ಮೊಗಸಾಲೆಯವರು ತಮ್ಮ ಅನೇಕ ಕೃತಿಗಳಿಗೆ ನನ್ನಂತಹ ಹಲವು ಉದಯೋನ್ಮುಖ ಲೇಖಕರಿಂದ ಮುನ್ನುಡಿ ಬರೆಸುತ್ತ ಬಂದಿದ್ದಾರೆ. ಆ ಮೂಲಕ ತುಂಬ ಜನ ಉದಯೋನ್ಮುಖ ಲೇಖಕರಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಮೊಗಸಾಲೆಯವರ ಪ್ರೀತಿ ನಿಜಕ್ಕೂ ತುಂಬ ದೊಡ್ಡದು. ಬಹುಶಃ ಒಂದೂ ಪುಸ್ತಕ ಪ್ರಕಟಿಸದೇ ಹಿರಿಯ ಲೇಖಕರ ಒಳ್ಳೆಯ ಕೃತಿಯೊಂದಕ್ಕೆ ಮುನ್ನುಡಿ ಬರೆಯುವ ಮೂಲಕ ಸಾಹಿತ್ಯಕ ಕರಿಯರ್ ಆರಂಭಿಸಿದ ವಿರಳರಲ್ಲಿ ನಾನೂ ಒಬ್ಬನಿರಬಹುದು! 

ಇರಲಿ, ಮುನ್ನುಡಿಯ ವೃತ್ತಾಂತ ಒಂದು ಪ್ರಬಂಧದಲ್ಲಿ ಹೇಳಿ ಮುಗಿಸುವಂತದ್ದಲ್ಲ. ಮುನ್ನುಡಿಯ ಕುರಿತ ಕಥೆಗಳು ಇನ್ನೂ ಸಾಕಷ್ಟಿವೆ ಮತ್ತು ಸ್ವಾರಸ್ಯಕರವಾಗಿವೆ. ಏನೇ ಆದರೂ ನನಗೆ ಮುನ್ನುಡಿಗಿಂತ ಅದರ ಹಿಂದಿರುವ ಕಥೆಗಳ ಕುರಿತು ವಿಪರೀತ ಆಸಕ್ತಿ ಮತ್ತು ಕುತೂಹಲವಿದೆ. 





ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಮುನ್ನುಡಿಯ ವೃತ್ತಾಂತ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter