ಹಿಮಾಲಯದ ಗುರುವಿನ ಗರಡಿಯಲ್ಲಿ…ಓರ್ವ ಯೋಗಿಯ ಆತ್ಮ ಕಥೆ

ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಮುಮ್ತಾಜ್ ಅಲಿ ಖಾನ್ ಕೇರಳದ ತಿರುವಂತಪುರಂನ ತಮ್ಮ ಹುಟ್ಟೂರಿನಿಂದ ಹಿಮಾಲಯಕ್ಕೆ ಹೋಗಿ ಯೋಗಿ ಆದ ಕಥೆ.’

ಪುಸ್ತಕದ ಹೆಸರು: ಹಿಮಾಲಯದ ಗುರುವಿನ ಗರಡಿಯಲ್ಲಿ: ಓರ್ವ ಯೋಗಿಯ ಆತ್ಮ ಕಥೆ

ಶ್ರೀ ಎಂ

ಲೇಖಕಿ: ಡಾ.ನಯನಾ ಕಾಶ್ಯಪ್(ಕನ್ನಡಕ್ಕೆ)

ಪ್ರಕಾಶಕರು: ಮೆಜೆಂತಾ ಪ್ರೆಸ್

ಬೆಲೆ: 340/-

ಮೊದಲ ಮುದ್ರಣ: ಮೇ 2013

ಹದಿನೇಳನೇ ಪರಿಷ್ಕೃತ ಮುದ್ರಣ: ಅಕ್ಟೋಬರ್ 2020

 ಕೆಟ್ಟದರಿಂದ ಒಳ್ಳೆಯ ಕಡೆಗೆ ಸಾಗುವುದು ಧಾರ್ಮಿಕ ಪ್ರಜ್ಞೆಯಾದರೆ,   ಕೆಟ್ಟದರಿಂದ, ಒಳ್ಳೆಯದರಿಂದ ಪೂರ್ಣತೆಯೆಡೆಗೆ ಸಾಗುವುದು ಆಧ್ಯಾತ್ಮಿಕತೆ  ಅಥವಾ ಪೂರ್ಣ ಪ್ರಜ್ಞೆ ಎನಿಸಿ ಕೊಳ್ಳುತ್ತದೆ. ಆಧ್ಯಾತ್ಮ ಎನ್ನುವುದು ಒಂದು ಸಂಸ್ಕೃತ ಶಬ್ದ. ಅಧಿ+ಆತ್ಮ ಎಂದು ಬಿಡಿಸಿದಾಗ ಆತ್ಮದ  ಕುರಿತಾದ ವಿಷಯ   ಅಥವಾ ಪರಮಾತ್ಮನ ಕುರಿತಾದ ವಿಷಯ ಎಂದಾಗುತ್ತದೆ. 

ಸಂಸ್ಕೃತ ದಲ್ಲಿ ಆತ್ಮ ಎಂದರೆ ‘self’ ಎಂಬ ಅರ್ಥವೂ ಇದೆ.ಅಂದರೆ ಆಧ್ಯಾತ್ಮ ಎಂದರೆ ತನ್ನನ್ನು   ತಾನು ತಿಳಿದು ಕೊಳ್ಳುವುದು ಎಂದೂ ಆಗುತ್ತದೆ.ಈ ಆಧ್ಯಾತ್ಮ ಎನ್ನುವುದು ಲೌಕಿಕದಲ್ಲಿ ಮುಳುಗಿದ ಪಾಮರರಿಗೆ ಕಬ್ಬಿಣದ ಕಡಲೆ ,  ಅರ್ಥವಾಗುವುದು ಕಠಿಣ. ಇಂಥ ಆಧ್ಯಾತ್ಮದ ಬೆನ್ನು ಹತ್ತಿ ತನ್ನನ್ನೇ ತಾನು ಮರೆತು ಜ್ಞಾನಿ, ಸಮರ್ಥ, ವಾತ್ಸಲ್ಯಮೂರ್ತಿಯಾದ ತನ್ನ ಮಹಾನ್ ಗುರುವನ್ನು ನಿಗೂಢ ಹಿಮಾಲಯ ಪರ್ವತದಲ್ಲಿ ಅರಸುತ್ತ ಹೋಗಿ ಭೇಟಿಯಾದ  ಯುವಕನೊಬ್ಬನ  ಆತ್ಮ ಕಥೆಯನ್ನು ಇಲ್ಲಿ ಪರಿಚಯಿಸಲು ಪ್ರಯತ್ನಿಸಿದ್ದೇನೆ.50 ಅಧ್ಯಾಯವಿರುವ, 361 ಪುಟಗಳ ಬೃಹತ್ ಹೊತ್ತಿಗೆ ಇದು.

ಆಧ್ಯಾತ್ಮದ ಕಡೆಗೆ ಒಲವು ತೋರಿ ಅದರಲ್ಲಿ ಸಾಕ್ಷಾತ್ಕಾರ ಪಡೆದ ಈ ಆತ್ಮ ಕಥೆಯ ರೂವಾರಿ’ ಶ್ರೀ ಎಮ್ ‘ ಎಂಬ ಹೆಸರಿನಿಂದ ಪ್ರಖ್ಯಾತರಾದ ಇವರು ಜನಿಸಿದ್ದು ಕೇರಳದ ತಿರುವನಂತಪುರದ ಒಂದು ಮುಸ್ಲಿಂ ಕುಟುಂಬದಲ್ಲಿ.ಅಂದಿನ ಇವರ ಹೆಸರು ಮುಮ್ತಾಜ್ ಅಲಿ ಖಾನ. ಇವರ ಗತ  ಜನ್ಮದ ಹೆಸರು ‘ಮಧು’ .ಕೇರಳದ ಯುವಕನೋರ್ವ‌ ತನ್ನ ಶ್ರದ್ದೆ, ಪ್ರಾಮಾಣಿಕತೆ, ಮತ್ತು  ಒಮ್ಮನಸ್ಸಿನ ಬಲ ಮಾತ್ರದಿಂದ ಆಧ್ಯಾತ್ಮಿಕವಾಗಿ  ‘ಬಡತನದಿಂದ ಸಿರಿತನಕ್ಕೆ’ ಬೆಳೆದು ಶ್ರೀ’ ಎಂ’  ಎಂಬ ಯೋಗಿಯಾಗಿ ಬೆಳೆಯುವ ಪರಿಯೇ ಈ ಪುಸ್ತಕದ ತಿರುಳು.ತಮ್ಮ ಹತ್ತೊಂಬತ್ತೂವರೆ ವರ್ಷ ಅವಧಿಯ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿ ಅಲ್ಲಿ ಹಿಮಾಲಯದ ಬದರಿನಾಥ ದೇಗುಲದ ಆಚೆ ಇರುವ ವ್ಯಾಸ ಗುಹೆಯಲ್ಲಿ ತಮ್ಮ ಗುರುವನ್ನು ಭೇಟಿ ಮಾಡಿ ಅವರೊಂದಿಗೆ ಹಿಮ ತುಂಬಿದ ಹಿಮಾಲಯದ ಉದ್ದಗಲಕ್ಕೂ ಓಡಾಡಿ ಮೂರೂವರೆ ವರ್ಷ‌ ಕಳೆಯುತ್ತಾರೆ. ಮಹೇಶ್ವರನಾಥ ಬಾಬಾಜಿಯವರಿಂದ ಗಳಿಸಿದ ಕಲಿಕೆಯು ಇವರ ಪ್ರಜ್ಞೆಯನ್ನು ಸಂಪೂರ್ಣ ಮಾರ್ಪಡಿಸುತ್ತದೆ. ಗುರುಗಳ ಆದೇಶದಂತೆ ಸಾಮಾನ್ಯ ಜೀವನಕ್ಕೆ ಮರಳುವ ಇವರು ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತ ತಾವು ಕಲಿತ ಹಾಗೂ ಅನುಭವಿಸಿದ  ಎಲ್ಲವನ್ನೂ ಇತರರಿಗೆ ಕಲಿಸಲು ಅಗತ್ಯವಿದ್ದ ತಯಾರಿ ಮಾಡಿಕೊಳ್ಳುತ್ತ ಬರುತ್ತಾರೆ. ಗುರುಗಳಿಂದ ಸೂಚನೆ ಸಿಕ್ಕ ನಂತರ  ಬೋಧನೆ ಪ್ರಾರಂಭಿಸಿ , ಇಂದು ತಮ್ಮ ಅನುಭವ ಹಾಗೂ ಜ್ಞಾನವನ್ನು ಹಂಚುತ್ತಾ ವಿಶ್ವದಾದ್ಯಂತ ಸಂಚರಿಸುತಿದ್ದಾರೆ. ಎಲ್ಲ ಪ್ರಮುಖ ಧರ್ಮಗಳ ಜ್ಞಾನವಿರುವ ಇವರು ಹೇಳುವುದು ‘ಒಳ ತಿರುಳನ್ನು ಗ್ರಹಿಸಬೇಕು,ಕೇವಲ ತತ್ವಗಳಿಂದ  ಉಪಯೋಗವಿಲ್ಲ’ ಎಂಬುದು.

        ‌   ಶ್ರೀ ಎಂ  ರವರಿಗೆ ಆಧ್ಯಾತ್ಮಿಕ ಕ್ಷೇತ್ರದಲ್ಲಿನ‌ ಉತ್ಕೃಷ್ಟ ಸೇವೆಗಾಗಿ 2020 ರ ಜನವರಿಯಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ  ‘ಪದ್ಮಭೂಷಣ’ ವನ್ನು ನೀಡಿ ಗೌರವಿಸಲಾಗಿದೆ.     ಶ್ರೀ ಎಂ ಅವರು ವಿವಾಹಿತರು, ಇಬ್ಬರು ಮಕ್ಕಳಿದ್ದಾರೆ.ಪ್ರವಚನ ನೀಡುವುದು ಹಾಗೂ ಗುಣ ಮಟ್ಟದ ಶಿಕ್ಷಣವನ್ನು  ಪೋಷಿಸುತ್ತಿರುವ ಅತ್ಯುನ್ನತ ಧ್ಯೇಯ್ಯಗಳಿರುವ  ‘ಸತ್ಸಂಗ ಪ್ರತಿಷ್ಠಾನದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಸರಳ ಬದುಕನ್ನು ಅಳವಡಿಸಿಕೊಂಡಿರುವ ಇವರು ಪ್ರಸ್ತುತ ಬೆಂಗಳೂರಿನಿಂದ  ಮೂರು  ಗಂಟೆಯಷ್ಟು ದೂರವಿರುವ ಆಂದ್ರಪ್ರದೇಶದ ಮದನಪಲ್ಲಿಯಲ್ಲಿ ನೆಲೆಸಿದ್ದಾರೆ.

 ಆತ್ಮ ಕಥೆಯ ಪ್ರಾರಂಭಕ್ಕೂ ಮುನ್ನ “ಅಸಾಧಾರಣ ವ್ಯಕ್ತಿಗಳನ್ನು ಭೇಟಿಮಾಡುತ್ತ, ನಂಬಲಸಾಧ್ಯವೆನಿಸುವ ವಿಚಿತ್ರ ಅನುಭವಗಳನ್ನು ಹಂಚಿಕೊಳ್ಳುತ್ತ ಭಾರತದ ದಕ್ಷಿಣ ಸಮುದ್ರತೀರದಿಂದ ಉತ್ತರದ ನಿಗೂಢ ಹಿಮಾಲಯ ಪರ್ವತ ಶ್ರೇಣಿಯ ಹಿಮಾಚ್ಛಾದಿತ ಶಿಖರಗಳನ್ನು ತಲುಪಿ ಪುನಃ ಹಿಂದಿರುಗುವ ಪಯಣವಿದು” ಎಂದು ಹೇಳುತ್ತಾರೆ.    ಆ ಸಮಯದಲ್ಲಿ ಆದ ಕೆಲವು ಅನುಭವಗಳನ್ನು ತಮ್ಮಲ್ಲಿಯೇ ಗೋಪ್ಯವಾಗಿಟ್ಟು ಕೊಂಡಿದ್ದ  ಇವರು, ಆತ್ಮ ಕಥೆ ಬರೆಯಲು    ಶ್ರೀ ಗುರು ಬಾಬಾಜಿಯವರ  ಸ್ಪಷ್ಟ  ಸೂಚನೆ ದೊರೆತ ನಂತರ ಬರೆಯಲೋ ಬೇಡವೋ ಎಂಬ ಸಂದಿಗ್ದತೆಯಲ್ಲಿ ಆರು ತಿಂಗಳು ಕಳೆದೆ ಎಂದು ಹೇಳುತ್ತಾರೆ.

ಕಾರಣ  : ೧. ಈ ಕಥಾನಕದ ರಮ್ಯತೆಗೆ ಸೆರೆಸಿಕ್ಕಿ ಪ್ರಾಮಾಣಿಕ ಅನ್ವೇಷಕರು ಎಲ್ಲಿ ಆಧ್ಯಾತ್ಮಿಕ ಪಯಣದ ವಾಸ್ತವ ಮತ್ತು ಅವಶ್ಯ ವಿಚಾರಗಳನ್ನು ಗಮನಿಸದೇ ಹೋಗುವರೋ ಎಂಬ ಆತಂಕ.

೨. ತೀರಾ ವಿಮರ್ಶಾ ದೃಷ್ಟಿಯ ಓದುಗರು  ಕಥಾನಕದ ಕೆಲ ಭಾಗಗಳನ್ನು ನಂಬದೇ ಇಡೀ ಪುಸ್ತಕವನ್ನೇ ಒಂದು ಕಟ್ಟು ಕಥೆ ಎಂದು ಉಪೇಕ್ಷೆ ಮಾಡುವ ಆತಂಕ.

 ಈ ಎಲ್ಲ ಆತಂಕದ ನಡುವೆಯೂ ತಾವು ಕಂಡದ್ದನ್ನು, ಅನುಭವಿಸಿದನ್ನು  ಬರೆಯುವುದು ಮಾತ್ರ ನನ್ನ ಕೆಲಸ; ಒಪ್ಪುವುದು ಬಿಡುವುದು ಓದುಗರಿಗೆ  ಬಿಟ್ಟಿದ್ದು, ಕೆಲವೇ ಜನ ಸಂಶಯದ ಓದುಗರನ್ನು ಲಕ್ಷ್ಯದಲ್ಲಿಟ್ಟುಕೊಂಡು ಇಡಿಯ ಓದುಗ ಸಮುದಾಯವನ್ನೇ ವಂಚಿಸಬಾರದೆಂದು ಬರೆದಿರುವ ಬಗ್ಗೆ ಹೇಳಿದ್ದಾರೆ. ತಾವಿರುವಾಗಲೇ ಓದುಗರು ಈ ಆತ್ಮಕಥೆಯನ್ನು ಓದಿ ತಮ್ಮ ಸಂಶಯವನ್ನು ನಿವಾರಿಸಿ ಕೊಳ್ಳುವ ,ತಮ್ಮನ್ನು ಮುಖತಃ ಬೇಟಿಯಾಗುವ ಅವಕಾಶವಿರುತ್ತದೆ ಎಂದು ಹೇಳುತ್ತಾರೆ‌.

ತೆರೆಮರೆಯಲ್ಲಿರುವ ಮಹಾನ್ ಗುರುಗಳಾದ ಬಾಬಾಜಿ ಹಾಗೂ ಶ್ರೀ ಗುರು ಬಾಬಾಜಿಯಂಥವರ ಅಸ್ತಿತ್ವದ ಬಗ್ಗೆ ಗೊತ್ತಿರುವುದು ಕೆಲವೇ ಕೆಲವರಿಗಷ್ಟೆ. ಆಧ್ಯಾತ್ಮಿಕ ಅಲೆಗಳಿಗೆ ಅವರು ಮೌನವಾಗಿ ನೀಡುತ್ತಿರುವ ಪ್ರೇರಣೆ, ಪ್ರಭಾವಗಳನ್ನು ಸಾಬೀತು ಪಡಿಸುವುದು ತಮ್ಮ ಕರ್ತವ್ಯ   ಎಂದು ಹೇಳುತ್ತಾರೆ. ಓದುಗರನ್ನು ವಿನಂತಿಸಿ ಕೊಳ್ಳುವ ಅವರು ನಂಬಲು ಕಷ್ಟವಾಗುವ ಭಾಗಗಳನ್ನು ಬಿಟ್ಟರೂ ಪರವಾಗಿಲ್ಲ, ಪ್ರಧಾನವಾಗಿ ಶ್ರೀ ಗುರು ಹಾಗೂ ಬಾಬಾಜಿಯವರ ಉಪದೇಶವಿರುವ ಭಾಗಗಳನ್ನು ಓದಿ ಎಂದು ಹೇಳುತ್ತಾರೆ. ತಮ್ಮ ಗುರುಗಳ, ತಾವೇ ಬಿಡಿಸಿದ  ಸಚಿತ್ರದೊಂದಿಗೆ ತಮ್ಮ ಅನುಭವಗಳನ್ನು ಈ ಆತ್ಮ ಕಥಾನಕದಲ್ಲಿ ಹಂಚಿಕೊಂಡಿದ್ದಾರೆ.

 ಇವರಿಗೆ ಹಿಮಾಲಯದ ಗುರುವಿನ ದರ್ಶನವಾಗುವುದು ಇವರು ಒಂಬತ್ತು ವರ್ಷದವರಾಗಿದ್ದಾಗ. ಮನೆಯ ಹಿಂದಿನ ತೋಟದಲ್ಲಿ ಆಡುತಿದ್ದಾಗ ಹಲಸಿನ ಮರದ ಕೆಳಗೆ ನಿಂತಿದ್ದ ಒಬ್ಬ ಯೋಗಿ ಇವರನ್ನು ಹತ್ತಿರ ಕರೆದು ಇವರ ತಲೆಯ ಮೇಲೆ,ಎದೆಯ ಮೇಲೆ ಕೈಯ್ಯಾಡಿಸಿ ‘ಕುಛ ಯಾದ ಆಯಾ ಕ್ಯಾ” ಎಂದು ಕೇಳಿದಾಗ ಇವರು ‘ನಹಿ’  ಎಂದು ಹೇಳುತ್ತಾರೆ. ‘ಬಾದಮೆ ಆಯೇಗಾ ಅಬ‌ ಘರ ಜಾವೋ’ ಎಂದಾಗ ಮಂತ್ರಮುಗ್ದರಂತೆ  ಮನೆ ಕಡೆಗೆ ಹೊರಟ ಅವರು ಮತ್ತೆ  ಕುತೂಹಲದಿಂದ  ಹಿಂತಿರುಗಿ ನೋಡಿದಾಗ ಆ ಯೋಗಿ ಅಲ್ಲಿರುವುದಿಲ್ಲ. ಈ ಯೋಗಿಯ ದರ್ಶನದ ನಂತರ ಅವರಿಗೆ ಬೀಳುತಿದ್ದ ಚಿತ್ರ ವಿಚಿತ್ರ ಕನಸುಗಳು ಬೀಳುವುದು ನಿಂತು ಹೋಗುತ್ತದೆ.ಯೋಗಿಯ ದರ್ಶನದ  ಬಗ್ಗೆ ಯಾರಿಗೇ ಹೇಳಲು ಇವರು ಪ್ರಯತ್ನಿಸಿದಾಗ ಹೇಳಲಾಗದೇ ಶಬ್ದಗಳು ಗಂಟಲಲ್ಲೇ ಉಳಿದು ಹೋಗುವ ಅನುಭವ ಉಂಟಾಗುತ್ತದೆ.

 ಒಂದು ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಇವರಿಗೆ ಹಿಂದೂ ಧರ್ಮದ ಆಧ್ಯಾತ್ಮಿಕತೆ,ಯೋಗ, ಧ್ಯಾನದ ಕಡೆಗಿನ‌ ಸೆಳೆತ ವಿಚಿತ್ರವೆನಿಸುತ್ತದೆ. ಇದಕ್ಕೆ ಹೋದ ಜನ್ಮದಲ್ಲಿ ನಡೆದ ಒಂದು ಘಟನೆ   ಕಾರಣ ಎನ್ನುವುದು ಇವರ ಗುರು ಮಹೇಶ್ವರನಾಥ ಬಾಬಾಜಿ ಹೇಳಿದ ಕಥೆಯಿಂದ ತಿಳಿದು ಬರುತ್ತದೆ.

 ಹತ್ತೊಂಬತ್ತು ವರ್ಷದ ಒಬ್ಬ ಯೋಗಿ ಹಿಮಾಲಯದ ತಪ್ಪಲಿನಲ್ಲಿ ಧ್ಯಾನದಲ್ಲಿ ಮಗ್ನನಾಗಿದ್ದಾಗ ಒಬ್ಬ ಬಡ ಫಕೀರ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಇವರ ಬಳಿ ಬಂದು ಇವರನ್ನು ಅಪ್ಪಿಕೊಂಡು ತನ್ನನ್ನು ಅವರ ಶಿಷ್ಯನನ್ನಾಗಿ  ಸ್ಬೀಕರಿಸಬೇಕೆಂದು ಗೋಗರೆದಾಗ  ಈ ಯುವ ಯೋಗಿ ತನ್ನ ಧ್ಯಾನ ಭಂಗವಾಯಿತೆಂದು ಸಿಟ್ಟಿನಿಂದ ಆ ಫಕೀರನಿಗೆ ಬೈದು ಅಲ್ಲಿಂದ ತೊಲಗಲು ಹೇಳುತ್ತಾನೆ. ಆ ಫಕೀರ ನೀನು ನನ್ನನ್ನು ಶಿಷ್ಯನನ್ನಾಗಿ ಮಾಡಿಕೊಂಡರೆ ಮಾತ್ರ ನನ್ನ ಜನ್ಮ ಪಾವನವಾಗುವುದು ಎಂದು ನನ್ನ ಗುರುಗಳು ಹೇಳಿದ್ದಾರೆ ದಯವಿಟ್ಟು ಶಿಷ್ಯನನ್ನಾಗಿ ಮಾಡಿಕೋ ಇಲ್ಲದಿದ್ದರೆ ಅಲ್ಲೇ ಹರಿಯುತಿದ್ದ ನದಿಯಲ್ಲಿ ಬಿದ್ದು ಪ್ರಾಣ ಕಳೆದು ಕೊಳ್ಳುತ್ತೇನೆ ಎಂದರೂ ಯುವ ಯೋಗಿ ಜಗ್ಗದಿದ್ದಾಗ ಆ ಫಕೀರ ನದಿಗೆ ಬಿದ್ದು ಪ್ರಾಣ ಕಳೆದು ಕೊಳ್ಳುತ್ತಾನೆ. ನೂರಾರು ವರ್ಷಗಳಿಂದ ಯೌವ್ವನವನ್ನು ಕಾಪಾಡಿಕೊಂಡ     ಹದಿನಾರು ವರ್ಷದ ಹುಡುಗನಂತೆ ಕಾಣುವ   ಶ್ರೀ ಗುರು ಬಾಬಾಜಿ  ಪ್ರತ್ಯಕ್ಷವಾಗಿ ಎಂಥ ಘೋರ ಕೆಲಸ ಮಾಡಿದಿಯಲ್ಲ ಮಧು ಎನ್ನುತ್ತಾರೆ. ಆಗ ಆ ಯುವ ಯೋಗಿಗೆ ತನ್ನ ತಪ್ಪಿನ ಅರಿವಾಗಿ ಕಣ್ತುಂಬಿ ಬರುತ್ತದೆ.ಆಗ ಬಾಬಾಜಿ “ಪರಮಾತ್ಮನ ಪರಮ ಭಕ್ತನೊಬ್ಬನನ್ನು ನೋಯಿಸಿದ್ದೀಯೆ. ಹಲವು ವರ್ಷಗಳ ನಿನ್ನ ತಪಶ್ಚರ್ಯೆಯ ಫಲವೆಲ್ಲ ಕ್ಷಣ ಮಾತ್ರದಲ್ಲಿ ಧ್ವಂಸವಾಗಿದೆ, ನೂರು ವರ್ಷಗಳ ಉಗ್ರ ಸಂಯಮಕ್ಕಿಂತ ಒಂದು ನಿಮಿಷದ ಕರುಣೆಯೇ ಮೇಲು. ಈಗ ನಡೆದಿರುವ ಅನಾಹುತಕ್ಕೆ ನೀನು ದಂಡ ತೆರಲೇ ಬೇಕು .ಆ ಫಕೀರ ಅನುಭವಿಸಿದ‌ಷ್ಡೇ ನೋವು,ಸಂಕಷ್ಟಗಳನ್ನು‌ ನೀನು  ಅನುಭವಿಸಲೇ ಬೇಕು ಅದಕ್ಕೆ ಸೂಕ್ತ ವಾತಾವರಣದಲ್ಲಿ  ನೀನು ಜನಿಸುವಂತೆ ಮಾರ್ಗದರ್ಶನ ‌ನೀಡುತ್ತೇನೆ.ಈಗ ಸಮಯ‌  ಹತ್ತಿರವಾಗಿದೆ ನೀನು ಖೇಚರಿ ಮುದ್ರೆಯ ಮೂಲಕ ದೇಹ ತ್ಯಾಗ ಮಾಡು ಎಂದಾಗ ,ಯುವ ಯೋಗಿ ಬಾಬಾಜಿ ಯಾವಾಗಲೂ ತನ್ನ ಜೊತೆಗೆ ಇರಬೇಕೆಂದು ಬೇಡಿಕೊಳ್ಳುತ್ತಾನೆ. ಆಗ ಬಾಬಾಜಿ ” ನನ್ನ ಪರಮಶಿಷ್ಯ ಮಹೇಶ್ವರನಾಥ ನಿನ್ನ ಪುನರ್ಜನ್ಮದ ಮೊದಲ ಅವಧಿಯಲ್ಲಿ ಭೇಟಿಯಾಗಿ ನಿನಗೆ ಮಾರ್ಗದರ್ಶನ ನೀಡುತ್ತಾನೆ.ಈಗ ನನ್ನನ್ನು ಕಂಡು ಮಾತನಾಡುತ್ತಿರುವಂತೆ ಮುಂದಿನ ಜನ್ಮದಲ್ಲೂ ನೀನು ನನ್ನನ್ನು ಯಾವಾಗಲಾದರೂ ಕಾಣುತ್ತಿ ಎಂದು ಹೇಳಿ ಅದೃಶ್ಯರಾಗುತ್ತಾರೆ. ನಂತರ ಉಸಿರನ್ನು ಪ್ರಯತ್ನಪೂರ್ವಕವಾಗಿ ಬಂಧಿಸುವ ಖೇಚರಿ  ಮುದ್ರೆಯೊಂದಿಗೆ ಯುವ ಯೋಗಿ ದೇಹ ತ್ಯಜಿಸುತ್ತಾನೆ. ಹೀಗೆ ದೇಹ ತ್ಯಜಿಸಿದ ಯೋಗಿಯೇ ಈಗ ಮುಸ್ಲಿಂ ಕುಟುಂಬದಲ್ಲಿ ಪುನರ್ ಜನ್ಮವೆತ್ತಿರುವ ಮುಮ್ತಾಜ್ ಅಲಿ ಖಾನ.

ಬಾಲ್ಯದಿಂದಲೇ ಹಿಂದೂ ಧಾರ್ಮಿಕ ವಿಧಿ, ವಿಧಾನ, ಶ್ಲೋಕ, ಹಿಂದೂ ಆಚರಣೆ, ದೇವರು, ಯೋಗ,ಧ್ಯಾನ ಇವುಗಳಿಂದ ಆಕರ್ಷಿತರಾಗುತ್ತಾರೆ. ಬಾಲ್ಯದಿಂದಲೇ ಹಿಂದೂ ಧರ್ಮವನ್ನು ಅನ್ವೇಷಿಸುವ ಇವರಿಗೆ‌ ಯೋಗಾಭ್ಯಾಸ ದ ಕುರಿತು ಅಥವಾ  ತತ್ವ ಶಾಸ್ತ್ರದ ಮತ್ತು ಧರ್ಮ ಶಾಸ್ತ್ರಗಳ  ಕುರಿತು ವಿವರಣೆ, ಸ್ಪಷ್ಟತೆ ಬೇಕೆನಿಸಿದಾಗಲೆಲ್ಲ ಅದಕ್ಕೆ ಪೂರಕವಾದ ಪುಸ್ತಕಗಳು ಸಿಗುತಿದ್ದವು ಎಂದು ಹೇಳುತ್ತಾರೆ. ಅವರಿಗೆ ಹದಿನಾಲ್ಕು ವರ್ಷವಾಗಿದ್ದಾಗಲೇ ಯೋಗ, ಅನುಭಾವ, ಧರ್ಮ ಮತ್ತು ತತ್ವಶಾಸ್ತ್ರ ಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿರುತ್ತಾರೆ. ತಮ್ಮ ಹತ್ತೊಂಬತ್ತನೆಯ‌ ವರ್ಷದವರೆಗೆ ಅಲ್ಲಿ, ಇಲ್ಲಿ ಸುತ್ತಾಡುತ್ತ ಆ ಸಮಯದಲ್ಲಿ ಸಿಗುವ ಸಂನ್ಯಾಸಿಗಳು, ಸೂಫಿ, ಸಂತರು ಯೋಗಿಗಳ ಒಡನಾಟದೊಂದಿಗೆ ಸಿಕ್ಕ ಆ ಅನುಭವಗಳು ಅವರನ್ನು ಆಧ್ಯಾತ್ಮದ  ಔನತ್ಯಕ್ಕೇರಲು ಸಹಾಯ ಮಾಡಿದವೆಂದು ಹೇಳುತ್ತಾರೆ.

ಶ್ರೀ ಎಂ’ ಅವರು  ಹತ್ತೊಂಬತ್ತೂವರೆ ವರ್ಷ ದವರಿದ್ದಾಗಲೇ  ಹಿಮಾಲಯದತ್ತ ಇವರ ಪಯಣ ಆರಂಭವಾಗುತ್ತದೆ. ಹಿಮಾಲಯಕ್ಕೆ ಹೋಗುವ ಮೊದಲು ತಂದೆ, ತಾಯಿ, ತಂಗಿಯರು ಕುಟುಂಬದ ಜೊತೆ, ಗೆಳೆಯರ ಜೊತೆ ಭಾವನಾತ್ಮಕ ಸಂಬಂಧಗಳನ್ನು ಕಡಿದು ಕೊಳ್ಳಲು ಇವರು ಆದಷ್ಟು ಮನೆಯಿಂದ ಹೊರಗಿದ್ದು, ಸೂಫಿ ಸಂತರು, ಅವಧೂತರು, ಮಾಯಿ ಮಾ ,ಗೋಪಾಲ ಸ್ವಾಮಿ  ,ಕಳದಿ ಮಸ್ತಾನ ಹೀಗೆ ಅನೇಕರ ಜೊತೆ ಮುಖಾ ಮುಖಿಯಾಗಿ ಅಧ್ಯಾತ್ಮದ ಮೆಟ್ಟಿಲೇರುತ್ತಾ ಸಾಗುತ್ತಾರೆ. ಈ ಎಲ್ಲ ಸಂತರ ಒಡನಾಟದಲ್ಲಿ ಮೈ ನವಿರೇಳಿಸುವಂತಹ ಅವರ ಅನುಭವಗಳನ್ನು ಓದಿಯೇ ಅರಿಯಬೇಕು. ಈ ಎಲ್ಲದರ ನಡುವೆಯೇ ಅವರಿಗೆ ಹಿಮಾಲಯದಲ್ಲಿ ಯಾರೋ ಅವರಿಗಾಗಿ ಕಾಯುತ್ತಿರುವ ಹಾಗೆ , ಕರೆಯುತ್ತಿರುವ    ಹಾಗೆ ಅನಿಸಿ ಹಿಮಾಲಯಕ್ಕೆ ಹೋಗಲು ಕಾತುರರಾಗಿರುತ್ತಾರೆ. ತಂದೆ ಪರೀಕ್ಷೆಗೆ ಕಟ್ಟಲು ಕೊಟ್ಟ ದುಡ್ಡನ್ನು ತಮ್ಮ ಬದುಕಿನ ದೊಡ್ಡ ಪರೀಕ್ಷೆಗೆ ಬಳಸುವ ನಿರ್ದಾರ ಮಾಡಿ, ಗೆಳೆಯ ರಂಜಿತ ಮಾಡಿದ ಅರ್ಥಿಕ ಸಹಾಯದಿಂದ  ಚೆನ್ನೈಎಕ್ಸಪ್ರೆಸ್ನಲ್ಲಿ ಹಿಮಾಲಯದತ್ತ ಪ್ರಯಾಣ ಬೆಳೆಸುತ್ತಾರೆ.

ದೆಹಲಿಯಿಂದ ಹರಿದ್ವಾರ ತಲುಪಿ ಅಲ್ಲಿ ಕ್ಷೌರದಂಗಡಿಗೆ ಹೋಗಿ ತಲೆ ಮತ್ತು ಮೀಸೆ ಬೋಳಿಸಿಕೊಂಡು ತಲೆ ಹಿಂದುಗಡೆ ಹಿಂದೂ ವಟುಗಳಂತೆ ಶಿಖೆ ಉಳಿಸಿ ಕೊಂಡು ಹಳದಿ ಬಣ್ಣದ ಧೋತಿ, ಹಳದಿ ಕುರ್ತಾ, ಹಾಗೂ ಹಳದಿ ಬಟ್ಟೆಚೀಲವನ್ನು ಖರೀದಿ ಮಾಡಿ ತಮ್ಮ ಬಾಹ್ಯ ರೂಪವನ್ನು ಒಬ್ಬ ಬ್ರಹ್ಮಚಾರಿಯಂತೆ ಬದಲಿಸಿಕೊಳ್ಳುತ್ತಾರೆ. ತಮ್ಮ ಗತ ಜೀವನದ ಪ್ಯಾಂಟು,ಶರ್ಟು, ಅಜ್ಜ ಕೊಟ್ಟಿದ್ದ ದುಬಾರಿ ವಾಚು ಎಲ್ಲವನ್ನೂ  ಸ್ನಾನ ಘಾಟಿನ ಮೆಟ್ಟಿಲ ಮೇಲಿಟ್ಟು ತಮ್ಮ ಗುರುವಿನ ಹುಡುಕಾಟಕ್ಕೆ ಹೊರಡುತ್ತಾರೆ.

 ಈ ಹುಡುಕಾಟದ ಸಮಯದಲ್ಲಿ ಹಿಮಾಲಯದ ತಪ್ಪಲಿನಲ್ಲಿ ಅನೇಕ ಸಾಧು ಸಂತರನ್ನು ಭೇಟಿಯಾಗುತ್ತಾರೆ.ಆದರೆ ತಾವು ಹುಡುಕುತ್ತಿರುವ ಬಾಬಾಜಿಯನ್ನು ಕಾಣದೆ ನಿರಾಶರಾಗುವ ಇವರು ಕೊನೆಗೆ ಬದರಿನಾಥದಿಂದ‌ ಆರೇಳು ಕಿ.ಮೀ. ದೂರ ನಡೆದು ಭಾರತದ ಕಟ್ಟ ಕಡೆಯ ಹಳ್ಳಿ ಮಾನಾಗೆ ಹೋಗಿ ಅಲ್ಲಿರುವ ಗವಿಗಳಲ್ಲಿ ಮಹಾನ್ ಯೋಗಿಗಾಗಿ ಹುಡುಕುವುದೆಂದು , ಮಹಾತ್ಮರು ಸಿಗದಿದ್ದರೆ ಅಲ್ಲೇ ಹರಿಯುವ ಅಲಕನಂದೆಯಲ್ಲಿ ಜಿಗಿದು ಪ್ರಾಣ ಕಳೆದು ಕೊಳ್ಳಬೇಕೆಂದು ನಿರ್ಧರಿಸುತ್ತಾರೆ. ಮಾನಾ ಹಳ್ಳಿಯಿಂದ ಮುಂದೆ ಸಾಗುವ ಇವರು ನೈಸರ್ಗಿಕ ವ್ಯಾಸ ಗುಹೆಯವರೆಗೆ ಬರುತ್ತಾರೆ. ಅಲ್ಲಿಂದ ಮುಂದೆ ಸಾಗಿದಾಗ  ಸುರಂಗವೊಂದರಿಂದ ಭೋರ್ಗರೆದು ಹರಿಯುತ್ತ ಹೊರ ಬರುವ ಸರಸ್ವತಿಯು ,ಅಲಕನಂದೆಯ ಜೊತೆ ಸೇರುವುದನ್ನು ಕಣ್ತುಂಬಿ ಕೊಳ್ಳುತ್ತಾರೆ.ಮತ್ತೆ ಹಾಗೇ ಮುಂದುವರೆದು ಯುದೀಷ್ಟಿರ ಸ್ವರ್ಗಾರೋಹಣ ಮಾಡಿದ ಸ್ಥಳವನ್ನು ತಲುಪಬೇಕೆನ್ನುತ್ತಿರುವಾಗಲೇ ಕತ್ತಲಾಗಿ,ಚಳಿ ಮಿತಿ ಮೀರುತ್ತದೆ. ಹೊಟ್ಟೆ ಹಸಿವು,ಚಳಿ ಗಾಳಿ,ಭಯ,ಸಂದೇಹ ಹೊತ್ತು ಕೊಂಡೇ “ನಿಜವಾದ ಮಹಾತ್ಮರು ಕಲ್ಪನೆಯಲ್ಲಿ ಇರುತ್ತಾರಲ್ಲದೆ ವಾಸ್ತವದಲ್ಲಿ ಅಲ್ಲ”,ಎಂದು ಕೊಳ್ಳುವ ಅವರು ಅಲಕನಂದೆಯಲ್ಲಿ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದಿಂದ ಮತ್ತೆ ವ್ಯಾಸ ಗುಹೆಯ ಕಡೆಗೆ  ವಾಪಸ್ಸು ಬರುತ್ತಾರೆ. ಇಲ್ಲೊಂದು ಅಚ್ಚರಿ ಕಾದಿರುತ್ತದೆ ಅವರಿಗೆ. ವ್ಯಾಸ ಗುಹೆಯ ಬಾಗಿಲಿನಲ್ಲಿ ‘ಧುನಿ’ಯೊಂದು ಪ್ರಕಾಶಮಾನವಾಗಿ ಜ್ವಲಿಸುತ್ತಿರುವುದು ಕಂಡು ಬರುತ್ತದೆ.ಅಲ್ಲಿ ಈ ಕೊರೆಯುವ ಚಳಿಯಲ್ಲಿ, ಈ ಗಾಡಾಂಧಕಾರದಲ್ಲಿಯಾರು ಬೆಂಕಿ ಹಚ್ಚಿರಬಹುದು ಎಂದು ಕೊಳ್ಳುತ್ತ ಬೆಂಕಿ ಕಾಯಿಸಲು ಅದರ ಹತ್ತಿರ ಹೋಗುತ್ತಾರೆ.ಆಗ ಗುಹೆಯೊಳಗಿಂದ ಒಂದು ಧ್ವನಿ ಕೇಳಿಸುತ್ತದೆ , ಅದು ಅವರಿಗೆ ಪರಿಚಿತವಾದಂತಹ ಧ್ವನಿ, ಮೆಲ್ಲಗೆ ನಡುಗುತ್ತ ಒಳಗೆ ಹೋದಾಗ ಅವರು ಕಂಡಿದ್ದು ಎತ್ತರ ನಿಲುವಿನ, ನೀಳಗೂದಲ, ಬರಿ ಮೈನಲ್ಲಿರುವ  ವ್ಯಕ್ತಿಯನ್ನು.ಆ ವ್ಯಕ್ತಿ ಸ್ಪಷ್ಟ ಹಿಂದುಸ್ತಾನಿಯಲ್ಲಿ ‘ಬಾ’ ಎಂದು ಕರೆದು, ಎಲ್ಲಿ ಅಲೆಯುತ್ತಿದ್ದೆ ‘ಮಧು’ ಎಂದು ಕೇಳುತ್ತಾರೆ. ಆಗ ಅವರಿಗೆ ಗತದಲ್ಲಿ ಈ ಹೆಸರು ಕೇಳಿದ ಹಾಗೆನಿಸುತ್ತದೆ, ನಾನು ಮಧು ಅಲ್ಲ ಮು… ಎನ್ನಬೇಕು ಅನ್ನುವಷ್ಟರಲ್ಲಿ  ‘ನನಗೆಲ್ಲ ಗೊತ್ತು, ನೀನು ಇಲ್ಲಿಗೆ ಬರುತ್ತಿ ಎಂದು ಗೊತ್ತಾಗಿ ನಿನ್ನನ್ನು ಕರೆದೊಯ್ಯಲು ಬಂದಿದ್ದೇನೆ.ನಾನಿರುವುದು ಬೇರೆಯ ಕಡೆ. ಈಗ ನೀನು  ಹಸಿದಿರುವೆ ‘ ಎಂದು ಹೇಳಿ  ,ಗವಿ ಒಳಗಡೆ ಹೋಗಿ ಕಮಂಡಲವನ್ನು ತಂದ ಅವರು ಅದರೊಳಗಿಂದ  ಎರಡು ಬಿಸಿ ಗೋಧಿ ರೊಟ್ಟಿ, ಆಲೂಗಡ್ಡೆ ಪಲ್ಯ  ಕೊಟ್ಟು   ಮಾತೃ ವಾತ್ಸಲ್ಯದಿಂದ ತಿನ್ನಲು ಹೇಳುತ್ತಾರೆ, ಆ ನಂತರ ಜಿಲೇಬಿಯನ್ನೂ ಕಮಂಡಲದಿಂದ   ತೆಗೆದು ‘ನೀನು ರೊಟ್ಟಿ ತಿನ್ನುವ ತನಕ ಜಿಲೇಬಿ ಕೈಯಲ್ಲಿ ಹಿಡಿದಿರುತ್ತೇನೆ’ ಎಂದು ಹೇಳುತ್ತಾರೆ.ತಾವು  ಒಂಬತ್ತು ವರ್ಷದವರಿದ್ದಾಗ ಮನೆಯ ಹಿತ್ತಲಿನಲ್ಲಿದ್ದ ಹಲಸಿನ ಮರದ ಕೆಳಗೆ ಭೇಟಿಯಾಗಿದ್ದ ಮನುಷ್ಯ ಇವರೇ ಎಂದು ಖಚಿತವಾಗಿ ಅವರಿಗೆ .. ನೀವೇ ನನ್ನ ಗುರು, ತಂದೆ, ತಾಯಿ , ಶಿಕ್ಷಕ, ನನ್ನ ಸರ್ವಸ್ವವೂ ನೀವೇ, ಎಂದು ಕಣ್ಣೀರುಗರೆಯುತ್ತ  ನಾನು ನಿಮಗೆ’ ಬಾಬಾಜಿ’ ಎಂದು ಕರೆಯುತ್ತೇನೆ ಎಂದು ಹೇಳಿ ನಮಸ್ಕರಿಸುತ್ತಾರೆ .  

ಈ ಪರಿಸರ ನನಗೆ ಪರಿಚಿತ ಅನಿಸುತ್ತದೆ ಆಗ ನೀವು ನನ್ನೊಂದಿಗೆ ಇದ್ದಿರೇ? ಎಂದು ಇವರು ಕೇಳಿದಾಗ “ನಾನಲ್ಲ ಸುಪ್ರಸಿದ್ಧ “ಶ್ರೀ ಗುರುಬಾಬಾಜಿ” ಆಗ ನಿನ್ನ ಜೊತೆಗಿದ್ದರು. ಆಗ ಅವರು ನಿನ್ನ ಗುರುವಾಗಿದ್ದರು.ನಾನು ಅವರ ಆರಂಭದ ಶಿಷ್ಯರಲ್ಲೊಬ್ಬ, ಹೆಸರು ಮಹೇಶ್ವರನಾಥ, ಭವಿಷ್ಯದಲ್ಲಿ  ಜನ ನಿನ್ನನ್ನು ‘ಎಂ’ ಎಂದು ಕರೆಯಲಿದ್ದಾರೆ. ನೀನು ಸಂಪೂರ್ಣ ತಯಾರಾಗುವ ತನಕ ‘ಶ್ರೀ ಗುರುಬಾಬಾಜಿ’ ನಿನ್ನನ್ನು ನನ್ನ ಸುಪರ್ದಿಗೆ ಬಿಟ್ಟಿದ್ದಾರೆ. ಅಗತ್ಯವಿದ್ದಾಗ ಅವರೇ ನಿನಗೆ ದರ್ಶನ ನೀಡುತ್ತಾರೆ ಎಂದು ಹೇಳುತ್ತಾರೆ.

ಮುಂದೆ ಮೂರೂವರೆ ವರ್ಷ ಅವರ ಜೊತೆಯಲ್ಲಿಯೇ ಹಿಮಾಲಯ ಪರ್ವತ ಶ್ರೇಣಿಯ ಲ್ಲಿದ್ದು ಚಿತ್ರ, ವಿಚಿತ್ರ ಅನುಭವಕ್ಕೆ ಒಳಗಾಗುತ್ತಾರೆ. ಟಿಬೇಟ್ ನ ತೋಲಿಂಗ ಮಠದಲ್ಲಿದ್ದಾಗ ತೀವ್ರ ಜ್ವರದಿಂದ ನರಳುತಿದ್ದಾಗ ಹಿಮಾಮಾನವ ಒಂದು ಬಂದು ಅವರ ಬಾಯಿಗೆ ಸಿಹಿ ಪದಾರ್ಥ ಹಾಕಿ ಹೋದ ನಂತರ ಇವರ ಜ್ವರ ಇಳಿದದ್ದು,   ಶಿರಡಿಯಲ್ಲಿ ಸಾಯಿ ಬಾಬಾರ ಬೀಗ ಹಾಕಿದ ದೇವಸ್ಥಾನದ ಬಾಗಿಲ ಒಳಹೊಕ್ಕು ಬಾಬಾರ  ದರ್ಶನ ಮಾಡಿದ್ದು, ನಾಗಲೋಕದಿಂದ ಬಂದ ನಾಗರಾಜನ ದರ್ಶನ ಇಂಥ ಅನೇಕ ನಂಬಲಸಾಧ್ಯವಾದ ಚಮತ್ಕಾರಗಳನ್ನು ಓದುತ್ತಾ ಹೋದಂತೆ ರೋಮಗಳು ನಿಮಿರುತ್ತವೆ. ಈಗ ನಾನು ಹೇಳಿದ್ದು ಕೆಲವೊಂದು ಉದಾಹರಣೆಗಳಷ್ಟೆ. ಸ್ವತಃ ಓದಿದಾಗ ನಿಮಗಾಗುವ ಅನುಭವಗಳು ನಿಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಹಿಮಾಲಯ ಪರ್ವತದ ಸೊಬಗು, ರಮಣೀಯ ದೃಶ್ಯಗಳ ವಿವರಣೆ ,ಕಡಿದಾದ ಪರ್ವತ ಶ್ರೇಣಿ ಗಳನ್ನು ಏರುವಾಗಿನ ಆತಂಕ,ಗದ ಗದ ನಡುಗಿಸುವ ಚಳಿ, ಸಿಕ್ಕರೆ ಊಟ,ಇಲ್ಲದಿರೆ ಉಪವಾಸ ಬರೀಗಾಲಲ್ಲಿ ನಡೆಯುವ ದಾರಿ ಈ ಎಲ್ಲವನ್ನೂ ಮೀರಿ ಕೇವಲ ತಮ್ಮ ಶ್ರದ್ದೆ,ಪ್ರಾಮಾಣಿಕತೆ, ಮನೋಬಲದಿಂದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿದ ಒಬ್ಬ ನಿಜ ಸಂತ ನಮ್ಮೊಡನೆ ಇರುವರೆಂಬುದೇ  ಈ ಕಲಿ ಯುಗದ ಒಂದು ಪವಾಡ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಪ್ರತಿಯೊಬ್ಬರೂ ಓದಲೇ ಬೇಕಾದ ಆಧ್ಯಾತ್ಮಿಕ ಹೊತ್ತಿಗೆ ಇದು. ಇನ್ನೂ ಮುಂದೆ ತುಂಬಾ ಇತ್ತು ಬರೆಯಲು.ಆದರೆ ನಾನೇ ಎಲ್ಲ ಬರೆದರೆ ನಿಮ್ಮ ಓದುವ  ಆಸಕ್ತಿಯನ್ನು ಕುಂದಿಸಿದಂತಾಗುತ್ತೆಂದು ಬರವಣಿಗೆಗೆ ವಿರಾಮ ನೀಡಿದ್ದೇನೆ  .

( ಕೊನೆಯದಾಗಿ  ಇಲ್ಲಿ ನಾನು ನಿಮಗೊಂದು ಸಂಗತಿ ಹೇಳ ಬಯಸುತ್ತೇನೆ. ಈಗ ಐವತ್ತು ವರ್ಷಗಳ ಹಿಂದೆ ನಮ್ಮ ಯಜಮಾನರು ಕಾಲೇಜಿನಿಂದ ಮೌಂಟನೇರಿಗಿಂಗೆ ಹೋದಾಗ ಗಂಗೋತ್ರಿ, ಗೋಮುಖ, ತಪೋವನ ಹಾಗೂ ಶಿವಲಿಂಗ ಶಿಖರದ ಪಾದದವರೆಗೂ ಹೋಗಿದ್ದರಂತೆ.ಈ ಎಲ್ಲದರ ವಿವರಣೆ ಈ ಪುಸ್ತಕದಲ್ಲಿದೆ . ಗಂಗೋತ್ರಿಯಲ್ಲಿ ಒಬ್ಬ ಸಂತ ತನ್ನ ಕಮಂಡಲದಿಂದ ಪ್ರಸಾದವಾಗಿ ಕಲ್ಲು ಸಕ್ಕರೆಯನ್ನು ಮೊಗೆ, ಮೊಗೆದು ಅಲ್ಲಿದ್ದ ಜನರಿಗೆಲ್ಲ ಕೊಟ್ಟರೂ ಮುಗಿಯಲಿಲ್ಲ ಎಂದು ಆಶ್ಚರ್ಯ ಪಟ್ಟು ಹೇಳುತ್ತಾರೆ.ಗಂಗೋತ್ರಿಯಿಂದ ಗೋಮುಖದ ಕಡೆಗೆ ನಡೆದಾಗ ಮಾರ್ಗ ಮಧ್ಯ ಸಿಕ್ಕ   ‘ಬೋಜ್ ಬಾಸಾ’ ಎಂದರೆ ಬರ್ಚ ಮರಗಳ ತೋಪು .ಈ ಬರ್ಚ ಮರಗಳ ವಿಶೇಷತೆ ಎಂದರೆ    ಪುರಾತನ ಕಾಲದಲ್ಲಿ  ಈ  ಭೋಜಬಾಸಾದ ತೊಗಟೆಯಿಂದ ಸಿಕ್ಕ  ತೆಳು ಹಾಳೆಗಳನ್ನು (ಬೋಜಪತ್ರ) ಬರೆಯಲು ಉಪಯೋಗಿಸುತಿದ್ದರಂತೆ.ಮರದ ಕಾಂಡವನ್ನು ಉದ್ದಕ್ಕೆ ಸೀಳಿ ಮೇಲೆ ವರ್ತುಲಾಕಾರವಾಗಿ ಕತ್ತರಿಸಿದಾಗ ಸಿಕ್ಕ ಮರದ ತೊಗಟೆಯನ್ನು ಅಗಲವಾಗಿರಿಸಿ  ಬೇರ್ಪಡಿಸಿದಾಗ ತೆಳುಹಾಳೆಗಳು ಸಿಕ್ಕಿದ್ದನ್ನು ಹೇಳುತ್ತಾರೆ.ಅಂದಿನ ಸ್ವಚ್ಚ, ಸುಂದರ, ಆಹ್ಲಾದಕರ ಪರಿಸರದ ಹಿಮಾಲಯವನ್ನು ನೋಡಿಬಂದ‌ ನಮ್ಮೆಜಮಾನರು ಇಂದು ಅತಿಯಾದ ಪ್ರವಾಸಿಗರಿಂದ ಕಲುಷಿತಗೊಂಡ ಹಿಮಾಲಯದ ಪರಿಸರದ ಬಗ್ಗೆ ಖೇದ ವ್ಯಕ್ತ ಪಡಿಸುತ್ತಾರೆ.)

  • ಪುಷ್ಪಾ ಹಾಲಭಾವಿ, ಧಾರವಾಡ.

            ‌ 

           ‌‌‌     

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter