ವನಪರ್ವದಲ್ಲಿ ಬರುವಂತೆ ಯುಧಿಷ್ಠಿರನ ಆಜ್ಞಾನುಸಾರ ಯಕ್ಷನ ವಿಷ ಸರೋವರಕ್ಕೆ ನೀರು ತರಲು ಹೋದ ಭೀಮಾರ್ಜುನ ನಕುಲ ಸಹದೇವರು ಯಕ್ಷನ ಪ್ರಶ್ನೆಗೆ ಉತ್ತರ ಕೊಡದೆ ನೀರನ್ನು ಕುಡಿದು ಎಚ್ಚರತಪ್ಪಿ ಬೀಳುವರು. ಇತ್ತ ದುರ್ಯೋಧನನು ಅಥರ್ವಣ ವೇದ ಪಂಡಿತನಾದ ಕನಕ ಸ್ವಾಮಿಯನ್ನು ಕರೆಯಿಸಿ ಪಾಂಡವರನ್ನು ಕೊಲ್ಲಲು ಸಂಚು ಹೂಡುತ್ತಾನೆ. ಅದಕ್ಕಾಗಿ ಕನಕಸ್ವಾಮಿ ಯಜ್ಞವನ್ನು ಮಾಡುತ್ತಾನೆ. ಆ ಯಜ್ಞದಿಂದ ‘ಕೀರ್ತಿಗೆ ‘ಎಂಬ ಉಗ್ರ ದೇವತೆ ಪ್ರಕಟವಾಗುತ್ತಾಳೆ . ಪ್ರಕಟವಾಗುತ್ತಲೇ “ಹಸಿವು ಹಸಿವು ಯಾರನ್ನು ತಿನ್ನಲಿ” ಎಂದಾಗ ಕನಕಸ್ವಾಮಿ ಪಾಂಡವರನ್ನು ತಿನ್ನುವಂತೆ ಆದೇಶಿಸುತ್ತಾನೆ. ಕೀರ್ತಿಗೆಯು ಬಂದು ಕೊಳದ ತಡಿಯಲ್ಲಿ ಬಿದ್ದಿದ್ದ ನಾಲ್ವರನ್ನು ತಿನ್ನಲು ಮುಂದಾಗುತ್ತಾಳೆ.
ಆಗ ಆ ಸರೋವರ ದೇವತೆ ಪ್ರತ್ಯಕ್ಷವಾಗಿ “ಅವರನ್ನು ಈ ಸ್ಥಿತಿಗೆ ತಂದವಳು ನಾನು ,ಅವರೆಲ್ಲ ಈಗ ನನ್ನ ಅಧೀನರು,ನನ್ನ ಆಜ್ಞೆಯಿಲ್ಲದೆ ನೀನು ಅವರನ್ನು ಮುಟ್ಟುವಂತಿಲ್ಲ . ” ಎನ್ನುತ್ತಾಳೆ . ಕೀರ್ತಿಗೆ ಹಸಿವು ಹಸಿವು ಎಂದು ಪರಿತಪಿಸುವಂತಾದಳು. ಆಗ ಆ ಸರೋವರ ದೇವತೆ “ಯಾವನು ಹುಟ್ಟಿಸಿದನು ಅವನನ್ನೇ ತಿನ್ನು” ಎಂದು ಹೇಳಲು ಕೀರ್ತಿಗೆಯು ಹಾಗೆಯೇ ಹಿಂದಿರುಗಿ ಕನಕಸ್ವಾಮಿಯನ್ನೇ ತಿಂದು ಬಿಟ್ಟಳು. ಈ ಕಥೆ ಪಂಪಭಾರತದಲ್ಲಿ ಇದೆ. ನಮ್ಮ ಹಿರಿಯರು ಹೇಳುತ್ತಿದ್ದ ” ಕನಕನ ಯಜ್ಞ ಕನಕನನ್ನೇ ತಿಂದಿತು” ಎನ್ನುವ ಮಾತಿನ ಹಿಂದೆ ಈ ನೀತಿಕಥೆ ಅಡಗಿದೆ.
ಸ್ನೇಹಿತರೆ, ಇಲ್ಲಿ ಮತ್ಸರದ ಫಲವೇನೆಂದು ಗ್ರಹಿಸಬಹುದು ! ರಾಜ್ಯಗದ್ದುಗೆಯ ದುರಾಸೆಯಿಂದ ದುರ್ಯೋಧನನು ಪಾಂಡವರನ್ನು ಸದಾ ಕಾಲ ದ್ವೇಷ, ಅಸೂಯೆಗಳಿಂದ ಕಾಣುತ್ತಾನೆ. ಅಧಿಕಾರ ಮೋಹ ಮತ್ತು ಸಂಪತ್ತಿನ ದಾಹ ಮನುಷ್ಯನನ್ನು ಈ ರೀತಿ ಮಾಡುವಂತೆ ಪ್ರೇರೇಪಿಸುತ್ತವೆ. ಇಂದಿಗೂ ಪ್ರತಿನಿತ್ಯ ಪತ್ರಿಕೆಯಲ್ಲಿ ಆಸ್ತಿ ವಿಚಾರವಾಗಿ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯಗಾಣುವುದನ್ನು ಓದುತ್ತೇವೆ, ಕೇಳುತ್ತೇವೆ. ಮನುಷ್ಯ ತನ್ನ ಮೂಲಭೂತವಾದ ‘ಮಾನುಷ ಪ್ರೀತಿ’ ನ್ನೇ ಮರೆಯುತ್ತಿರುವುದು ಅಪಾಯಕಾರಿ ಸಂಗತಿ. ಕುಟುಂಬಗಳಲ್ಲಿ ಅಷ್ಟೇ ಅಲ್ಲ, ಹೊರಗೆ ನಾವು ಕೆಲಸ ನಿರ್ವಹಿಸುವ ಜಾಗಗಳಲ್ಲಿ, ಸಂಘ, ಸಂಸ್ಥೆಗಳಲ್ಲಿ, ಕಛೇರಿಗಳಲ್ಲಿ ಹೀಗೆ ಎಲ್ಲೆಡೆ ಪರರ ಕೇಡು ಬಯಸುವರಿರುತ್ತಾರೆ. ಇನ್ನೊಬ್ಬರು ಪ್ರಗತಿಪಥದತ್ತ ಧಾವಿಸುವಾಗ ಮತ್ಸರದಿಂದ ಅಡ್ಡಗಾಲು ಹಾಕುತ್ತಾರೆ. ಯಾವುದಾದರೂ ರೀತಿಯಿಂದ ಕೆಡಕು ಮಾಡಲು ಹೊಂಚುಹಾಕುತ್ತಾರೆ. ತನ್ನ ಬಳಿ ಎಷ್ಟೆಲ್ಲ ವೈಭವವಿದ್ದರೂ, ಅದರಿಂದ ತೃಪ್ತಿ ಪಡದೆ, ಇನ್ನೊಬ್ಬರ ಸಂತಸ,ಸಂಪತ್ತು ವೃದ್ಧಿಯಾಗಬಾರದೆಂಬ ಈರ್ಷಾಭಾವದ ಮನಸ್ಥಿತಿಯವರಿದ್ದಾರೆ. ಇದಕ್ಕಾಗಿ ಏನೆಲ್ಲ ಪಿತೂರಿಗಳನ್ನು ನಡೆಸುತ್ತಾರೆ. ಆದರೆ ಮುಂದೆ ಅದೇ ಅವರಿಗೆ ತಿರುಮಂತ್ರವಾಗುತ್ತದೆಂಬ ಕಟುಸತ್ಯವನ್ನು ಗಮನಿಸುವದಿಲ್ಲ. ಹೊಟ್ಟೆಕಿಚ್ಚು ಅತ್ಯಂತ ಅಪಾಯಕಾರಿಯಾದುದು.
ಇಲ್ಲಿ ಬಸವಣ್ಣನವರ ಪ್ರಸಿದ್ಧ ವಚನ ನೆನಪಾಗುತ್ತದೆ.
ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರು ಹಳಿಯಲು ಬೇಡ
ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಇದೇ ನಮ್ಮ ಕೂಡಲಸಂಗಮದೇವನೂಲಿಸುವ ಪರಿ
ಇದರ ತಾತ್ಪರ್ಯ, ಇತರರ ವಸ್ತುಗಳನ್ನು ಕಳುವು ಮಾಡಬೇಡ, ಜೀವಿಗಳನ್ನು ಕೊಲ್ಲಬೇಡ, ಹಿಂಸಿಸಬೇಡ. ಸುಳ್ಳು ಮಾತುಗಳಿಂದ ಇತರಿಗೆ ಕೆಡುಕು ಮಾಡಬೇಡ. ಕೋಪಗೊಳ್ಳಬೇಡ ಇತರರನ್ನು ಕೆಟ್ಟ ಭಾವನೆಯಿಂದ ಕಾಣಬೇಡ. ಇತರರನ್ನು ನಿಂದಿಸುವದು ತರವಲ್ಲ.ಇದೇ ದೇವರಿಗರ್ಪಿಸುವ ಭಕ್ತಿ.ಇದೇ ದೇವನನ್ನು ಒಲಿಸಿಕೊಳ್ಳುವ ಕ್ರಮ. ಈ ಮೌಲ್ಯಗಳನ್ನು ಬದುಕಲ್ಲಿ ಅಳವಡಿಸಿಕೊಳ್ಳುವರು ತುಂಬ ವಿರಳ. ಆದರೆ ಪಾಲಿಸಿದಲ್ಲಿ ಮನುಷ್ಯನ ಬಾಹ್ಯ ವೃತ್ತಿಗಳ ಜೊತೆಗೆ ಆಂತರ್ಯವೂ ಪರಿಶುದ್ಧವಾಗುತ್ತದೆ. ಆಗ ಜೀವನದಲ್ಲಿ ಎಲ್ಲ ರೀತಿಯ ಔನ್ನತ್ಯವು ಸಾಧ್ಯವಾಗುತ್ತದೆ.
ಇಂತಹ ಅಮೂಲ್ಯ ವಾದ ಜೀವನ ಮೌಲ್ಯಗಳನ್ನು ತಿಳಿಸುವ ಶರಣರ ವಚನಗಳು ಮತ್ತು ದಾಸರಪದಗಳು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ. ಬಾಲ್ಯದಿಂದ ಕಲಿತಿರುತ್ತೇವೆ. ದೊಡ್ಡವರಾಗುತ್ತಿದಂತೆ “ರಾಯರ ಕುದುರೆ ಬರುತ್ತಾ ಬರುತ್ತಾ ಕತ್ತೆಯಾಯ್ತು” ಎನ್ನುವಂತೆ ಮೂಲಭೂತ ಮಾನವೀಯ ಧೋರಣೆಗಳನ್ನು ತೊರೆದು ಮತ್ಸರ ಸಾಧಿಸುತ್ತೇವೆ. ಕೇವಲ ಆಧುನಿಕ ಆಡಂಬರದ ವಸ್ತುಗಳ ಹಿಂದೆ ನಾಗಾಲೋಟದಲ್ಲಿದ್ದೇವೆ. ಮನುಷ್ಯನ ಈ ಪ್ರವೃತ್ತಿ ಅರ್ಥವಾಗುವದಿಲ್ಲ ! ಇದರ ಅಂತ್ಯ ವಿನಾಶಕಾರಿ, ಆಘಾತಕಾರಿ ಎಂದು ತಿಳಿದಿದ್ದರೂ,ಈ ತಪ್ಪನ್ನು ಮನುಷ್ಯ ಮತ್ತೆ ಮತ್ತೆ ಮಾಡುತ್ತಾನೆ.
ಜನರು ತಮ್ಮಲ್ಲಿ ಇಲ್ಲದ ಸಂಪತ್ತಿನ ಬಗೆಗೆ ಹಂಬಲಿಸುವ ಬದಲು ಇದ್ದ ಅಧಿಕಾರ, ಹಣಕಾಸನ್ನು ಸೂಕ್ತವಾಗಿ ಬಳಸಿಕೊಂಡು ಸುಖ ಸಂತೋಷದಿಂದ ಬಾಳ್ವೆಮಾಡಬಹುದು . ಮತ್ತೊಬ್ಬರಿಗೆ ಕೇಡು ಬಯಸಿದರೆ , ತಮಗೇ ಕೇಡಾಗುವದು ನಿಶ್ಚಿತ.
ವಿಭಾ ಪುರೋಹಿತ