ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳು

ಸಾಹಿತ್ಯ ಮತ್ತು ಪತ್ರಿಕೆಗಳ ನಡುವಿನ ಸಂಬಂಧ ತುಂಬ ಹಳೆಯದು. ಸಾಹಿತ್ಯ ಪ್ರಸರಣ ಮತ್ತು ಪ್ರಚಾರ ಕಾರ್ಯದಲ್ಲಿ ಪತ್ರಿಕೆಗಳು ತುಂಬ ಮಹತ್ವದ ಪಾತ್ರ ವಹಿಸುತ್ತ ಬಂದಿವೆ. ಆಧುನಿಕ ಕನ್ನಡ ಸಾಹಿತ್ಯದ ವಿಕಸನ ಮತ್ತು ಪ್ರಸರಣ ಕಾರ್ಯದಲ್ಲಿ ಪತ್ರಿಕೆಗಳು ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ಮತ್ತು ಸುಧಾರಣೆಗಳು ಕಂಡುಬಂದವು. ಹೊಸತನದ ಹುಡುಕಾಟದಲ್ಲಿದ್ದ ಕನ್ನಡ ಸಾಹಿತ್ಯದ ಪ್ರಸರಣಕ್ಕೆ ವೇದಿಕೆಯೊದಗಿಸಿದ್ದು ಕನ್ನಡ ಪತ್ರಿಕೆಗಳು.

‘ಸಂಯುಕ್ತ ಕರ್ನಾಟಕ’, ‘ಪ್ರಜಾವಾಣಿ’, ‘ಉದಯವಾಣಿ’, ‘ಕನ್ನಡ ಪ್ರಭ’, ‘ಕರ್ಮವೀರ’, ‘ಸುಧಾ’, ‘ತರಂಗ’, ‘ಪ್ರಜಾಮತ’, ‘ಕಸ್ತೂರಿ’, ‘ಮಯೂರ’, ‘ತುಷಾರ’ ಮತ್ತು ‘ಮಲ್ಲಿಗೆ’ಯಂತಹ ಪತ್ರಿಕೆಗಳು ಕನ್ನಡ ಸಾಹಿತ್ಯ ಪ್ರಸರಣದಲ್ಲಿ ನೀಡಿದ ಕೊಡುಗೆ ಅಪಾರ. ‘ಪ್ರಜಾವಾಣಿ’ ಪತ್ರಿಕೆ ಒಂದು ಕಾಲಘಟ್ಟದಲ್ಲಿ ನವ್ಯ ಸಾಹಿತ್ಯದ ಮುಖವಾಣಿಯಂತೆ ಕೆಲಸ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ತುಂಬ ಜನ ಉದಯೋನ್ಮುಖ ಲೇಖಕ/ಕಿಯರು ತಮ್ಮ ಬರವಣಿಗೆಯನ್ನು ಆರಂಭಿಸಿದ್ದೇ ಇಂತಹ ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ ಅಥವಾ ಲೇಖನಗಳನ್ನು ಪ್ರಕಟಿಸುವ ಮೂಲಕ.

ಒಂದು ಕಾಲಘಟ್ಟದಲ್ಲಿ ‘ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ’ಗೆ ತನ್ನದೇ ಆದ ವರ್ಚಿಸ್ಸಿತ್ತು. ಕಥಾ ಸ್ಪರ್ಧೆಯಲ್ಲಿ ವಿಜೇತರಾಗುವುದು ಲೇಖಕರಿಗೆ ಒಂದು ಹೆಮ್ಮೆಯ ಸಂಗತಿಯೆನಿಸಿತ್ತು. ಉದಯವಾಣಿ ಕಥಾ ಸ್ಪರ್ಧೆ’ಗೆ ಸಹ ತುಂಬ ಒಳ್ಳೆಯ ಹೆಸರಿತ್ತು. ಕನ್ನಡದ ತುಂಬ ಜನ ಪ್ರಸಿದ್ಧ ಲೇಖಕ/ಕಿಯರು ‘ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ’ ಮತ್ತು ‘ಉದಯವಾಣಿ ಕಥಾ ಸ್ಪರ್ಧೆ’ಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರ

‘ಸಂಯುಕ್ತ ಕರ್ನಾಟಕ’, ‘ಪ್ರಜಾವಾಣಿ’, ‘ಉದಯವಾಣಿ’ ಮತ್ತು ‘ಕನ್ನಡ ಪ್ರಭ’ ಪತ್ರಿಕೆಗಳು ಸಾಹಿತ್ಯಕ್ಕೆ ತುಂಬ ಮಹತ್ವ ಕೊಡುತ್ತಿದ್ದವು. ಭಾನುವಾರದ ಸಾಹಿತ್ಯ ಪುರವಣಿಗಳು ತುಂಬ ಚೆನ್ನಾಗಿ ಬರುತ್ತಿದ್ದವು. ಸಮಕಾಲೀನ ಸಾಹಿತ್ಯದ ಆಗುಹೋಗುಗಳನ್ನು, ಪುಸ್ತಕ ಪರಿಚಯವನ್ನು ಮತ್ತು ಹೊಸದಾಗಿ ಬಿಡುಗಡೆಯಾದ ಪುಸ್ತಕಗಳ ಮಾಹಿತಿಯನ್ನು ಪಡೆಯಲು ಇಂತಹ ಭಾನುವಾರದ ಪುರವಣಿಗಳು ತುಂಬ ಉಪಯುಕ್ತವಾಗಿದ್ದವು. ಈ ಭಾನುವಾರದ ಪುರವಣಿಗಳ ಮತ್ತೊಂದು ವಿಶೇಷತೆಯೆಂದರೆ ಅವುಗಳಲ್ಲಿ ಪ್ರಕಟವಾಗುತ್ತಿದ್ದ ಕವಿತೆ, ಕಥೆ, ಪ್ರಬಂಧ ಮತ್ತು ಲೇಖನಗಳು. ತುಂಬ ಜನ ಲೇಖಕ/ಕಿಯರು ಇಂತಹ ಭಾನುವಾರದ ಪುರವಣಿಗಳಲ್ಲಿ ತಮ್ಮದೊಂದು ಕವಿತೆ, ಕಥೆ, ಪ್ರಬಂಧ ಅಥವಾ ಲೇಖನ ಪ್ರಕಟವಾಗಲಿ ಎಂದು ಬಯಸುತ್ತಿದ್ದರು. ಇಂತಹ ಬರಹಗಳನ್ನು ತುಂಬ ಪ್ರೀತಿಯಿಂದ ಓದುವ ದೊಡ್ಡ ಓದುಗರ ಬಳಗ ಸಹ ಆ ಕಾಲದಲ್ಲಿತ್ತು.

‘ಕರ್ಮವೀರ’, ‘ಸುಧಾ’, ‘ತರಂಗ’ ಮತ್ತು ‘ಪ್ರಜಾಮತ’ ವಾರಪತ್ರಿಕೆಗಳು ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ತುಂಬ ಜನಪ್ರಿಯತೆ ಪಡೆದಿದ್ದವು. ಧಾರಾವಾಹಿ ಕಾದಂಬರಿಗಳು ಈ ವಾರಪತ್ರಿಕೆಗಳ ವಿಶೇಷ ಆಕರ್ಷಣೆ. ಟಿ. ಕೆ. ರಾಮರಾವ್, ನಾ. ಡಿಸೋಜಾ, ಕೆ. ಟಿ. ಗಟ್ಟಿ, ಬಿ. ಎಲ್. ವೇಣು, ಸುದರ್ಶನ ದೇಸಾಯಿ, ಎಚ್. ಕೆ. ಅನಂತರಾವ್, ಅಶ್ವಿನಿ, ಸಾಯಿಸುತೆ, ಉಷಾ ನವರತ್ನರಾಂ, ಎಚ್. ಜಿ. ರಾಧಾದೇವಿ, ಎನ್. ಪಂಕಜ, ಕಾಕೋಳು ಸರೋಜಾ ರಾವ್ ಮತ್ತು ರೇಖಾ ಕಾಖಂಡಕಿಯವರಂತಹ ಜನಪ್ರಿಯ ಲೇಖಕ/ಕಿಯರ ಧಾರಾವಾಹಿ ಕಾದಂಬರಿಗಳು ಆಗ ತುಂಬ ಜನಪ್ರಿಯತೆ ಪಡೆದಿದ್ದವು. ಟಿ. ಕೆ. ರಾಮರಾವ್ ಮತ್ತು ಕೆ. ಟಿ. ಗಟ್ಟಿಯವರಿಗೆ ತಾರಾ ವರ್ಚಸ್ಸು ಪ್ರಾಪ್ತವಾಗಿದ್ದೇ ಇಂತಹ ವಾರಪತ್ರಿಕೆಗಳಿಂದ ಎಂಬುದನ್ನು ಮರೆಯುವಂತಿಲ್ಲ. ಎಂಬತ್ತರ ದಶಕದಲ್ಲಿ ಯಂಡಮೂರಿ ವೀರೇಂದ್ರನಾಥ್ ಕನ್ನಡಕ್ಕೆ ಅನುವಾದಗಳ ಮೂಲಕ ಪರಿಚಿತರಾಗಿ ಜನಪ್ರಿಯತೆಯಲ್ಲಿ ಕನ್ನಡ ಲೇಖಕರನ್ನು ಸಹ ಮೀರಿಸಿದರು. ಯಂಡಮೂರಿಯವರಿಗೆ ಈ ಪರಿಯ ಜನಪ್ರಿಯತೆ ಸಿಗಲು ಕನ್ನಡ ಪತ್ರಿಕೆಗಳೇ ಕಾರಣ. ಸದ್ಯ ತೆಲುಗಿನ ಓದುಗರು ಯಂಡಮೂರಿಯವರ ಪುಸ್ತಕಗಳನ್ನು ಓದುವುದನ್ನು ನಿಲ್ಲಿಸಿದ್ದರೂ ಕನ್ನಡ ಓದುಗರು ಮಾತ್ರ ಇನ್ನೂ ಯಂಡಮೂರಿಯವರನ್ನು ತಲೆಯ ಮೇಲೆ ಕೂರಿಸಿಕೊಂಡಿದ್ದಾರೆ! ಯಂಡಮೂರಿಯವರ ಕಾದಂಬರಿಗಳು ತೆಲುಗಿನಲ್ಲಿ ಮರುಮುದ್ರಣ ಕಾಣುತ್ತಿಲ್ಲ ಆದರೆ ಕನ್ನಡದಲ್ಲಿ ಹತ್ತು ಹಲವು ಮುದ್ರಣ ಕಂಡಿವೆ!

‘ಕಸ್ತೂರಿ’, ‘ಮಯೂರ’, ‘ತುಷಾರ’ ಮತ್ತು ‘ಮಲ್ಲಿಗೆ’ ಪತ್ರಿಕೆಗಳು ಕಾವ್ಯ, ಕಥೆ ಮತ್ತು ಪ್ರಬಂಧಗಳಿಗೆ ವಿಶೇಷ ಮಹತ್ವ ಕೊಟ್ಟವು. ಒಂದು ಕಾಲಘಟ್ಟದಲ್ಲಿ ಈ ಮಾಸ ಪತ್ರಿಕೆಗಳಲ್ಲಿ ತುಂಬ ಒಳ್ಳೆಯ ಕವಿತೆ, ಕಥೆ ಮತ್ತು ಪ್ರಬಂಧಗಳು ಪ್ರಕಟವಾಗುತ್ತಿದ್ದವು. ಕನ್ನಡದ ಬಹುತೇಕ ದೊಡ್ಡ ಲೇಖಕ/ಕಿಯರೆಲ್ಲ ಈ ಮಾಸ ಪತ್ರಿಕೆಗಳಿಗೆ ಬರೆದಿದ್ದಾರೆ. ಕೆಲವು ವರ್ಷಗಳ ಕಾಲ ‘ತುಷಾರ’ ಪತ್ರಿಕೆ ಧಾರಾವಾಹಿ ಕಾದಂಬರಿಗಳನ್ನು ಸಹ ಪ್ರಕಟಿಸಿತು. ‘ಮಯೂರ’ ಪತ್ರಿಕೆಯಲ್ಲಿ ಟಿ. ಕೆ. ರಾಮರಾವ್ ಅವರ ಕೆಲವು ಪತ್ತೇದಾರಿ ಕಿರು ಕಾದಂಬರಿಗಳು ಎರಡು ಕಂತುಗಳಲ್ಲಿ ಪ್ರಕಟವಾಗಿವೆ. ‘ಕಸ್ತೂರಿ’ ಪತ್ರಿಕೆಯ ‘ಪುಸ್ತಕ ವಿಭಾಗ’ದಲ್ಲಿ ತುಂಬ ಒಳ್ಳೆಯ ಕೃತಿಗಳ ಸಂಗ್ರಹ ಭಾಗಗಳು ಪ್ರಕಟವಾಗುತ್ತಿದ್ದವು. ೧೯೭೭-೭೮ರಲ್ಲಿ ಡಾ. ನಾ. ಮೊಗಸಾಲೆಯವರ ‘ನನ್ನದಲ್ಲದ್ದು’ ಕಾದಂಬರಿಯ ಸಂಗ್ರಹ ಭಾಗ ‘ಕಸ್ತೂರಿ’ಯಲ್ಲಿ ಪ್ರಕಟವಾಗಿದ್ದರಿಂದ ಕರ್ನಾಟಕದಾದ್ಯಂತ ಅವರನ್ನು ಕಾದಂಬರಿಕಾರರೆಂದು ಗುರುತಿಸುವಂತಾಯಿತು.

‘ಮಲ್ಲಿಗೆ’ ಪತ್ರಿಕೆ ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜರಿಂದ ವಿಮರ್ಶಾ ಟಿಪ್ಪಣಿ ಬರೆಸಿ ‘ಮರೆಯಬಾರದ ಹಳೆಯ ಕಥೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡದ ಹಳೆಯ ಮತ್ತು ಮಹತ್ವದ ಕಥೆಗಳನ್ನು ಮತ್ತೊಮ್ಮೆ ಕನ್ನಡ ಓದುಗರಿಗೆ ನೀಡಿತು. ಈ ಎಲ್ಲ ಕಥೆಗಳು ಸೇರಿ ಗಿರಡ್ಡಿ ಗೋವಿಂದರಾಜರ ಸಂಪಾದಕತ್ವದಲ್ಲಿ ‘ಮರೆಯಬಾರದ ಹಳೆಯ ಕಥೆಗಳು’ ಎಂಬ ಹೆಸರಿನಲ್ಲಿ ಪುಸ್ತಕವಾಗಿದೆ.

ಕನ್ನಡದಲ್ಲಿ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳು ತುಂಬ ಕಡಿಮೆ. ಕೆಲವು ಸಾಹಿತ್ಯಕ ಪತ್ರಿಕೆಗಳು ತುಂಬ ಚೆನ್ನಾಗಿ ಬಂದರೂ ಅವುಗಳು ಬಹುಬೇಗ ಪ್ರಕಟಣೆ ನಿಲ್ಲಿಸಿದವು. ಪೂರ್ಣಚಂದ್ರ ತೇಜಸ್ವಿ ಮತ್ತು ಕಡಿದಾಳು ಶಾಮಣ್ಣ ಇಬ್ಬರೂ ಸೇರಿ ಅರವತ್ತರ ದಶಕದಲ್ಲಿ ‘ಲಹರಿ’ ಎಂಬ ಒಳ್ಳೆಯ ಸಾಹಿತ್ಯಕ ಪತ್ರಿಕೆಯನ್ನು ಆರಂಭಿಸಿದರು. ದುರ್ದೈವಶಾತ್ ನಾಲ್ಕಾರು ಸಂಚಿಕೆಗಳಿಗೇ ಈ ಪತ್ರಿಕೆ ನಿಂತು ಹೋಯಿತು. ಹಿಂದಿಯ ‘ಸಾರಿಕಾ’ ಎಂಬ ಸಾಹಿತ್ಯ ಪತ್ರಿಕೆಯಿಂದ ಪ್ರೇರಣೆ ಪಡೆದ ‘ಲಹರಿ’ ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಅನುವಾದದಲ್ಲಿ ನೀಡಲು ಬಯಸಿತ್ತು. ತೇಜಸ್ವಿಯವರು ಅರವತ್ತರ ದಶಕದಲ್ಲಿಯೇ ಇಂಗ್ಲಿಷ್ ಆ್ಯಂಥಾಲಜಿಯೊಂದರಿಂದ ‘ರೈಟೇಯಾ’ ಎಂಬ ಕಿರು ಕಾದಂಬರಿಯೊಂದನ್ನು ಅನುವಾದಿಸಿದ್ದರು. ‘ಲಹರಿ’ ಪತ್ರಿಕೆ ನಿಂತದ್ದರಿಂದ ಅದು ಪ್ರಕಟವಾಗಲಿಲ್ಲ. ಮುಂದೆ ಮೂವತ್ತೈದು ವರ್ಷಗಳ ನಂತರ ತೇಜಸ್ವಿಯವರು ಅದನ್ನು ಮಿಲನಿಯಂ ಸರಣಿಯ ‘ಫೆಸಿಫಿಕ್ ದ್ವೀಪಗಳು’ ಎಂಬ ಪುಸ್ತಕದಲ್ಲಿ ಪ್ರಕಟಿಸಿದರು.

ಕನ್ನಡದ ಖ್ಯಾತ ಕವಿಗಳಾದ ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಬಂದ ‘ಸಾಕ್ಷಿ’ ಪತ್ರಿಕೆಗೆ ವಿಶೇಷ ಮಹತ್ವವಿದೆ. ಎಪ್ಪತ್ತರ ದಶಕದಲ್ಲಿ ‘ಸಾಕ್ಷಿ’ ಪತ್ರಿಕೆಗೆ ತುಂಬ ಕ್ರೇಜಿತ್ತು. ಕನ್ನಡದ ತುಂಬ ಜನ ಲೇಖಕ/ಕಿಯರು ‘ಸಾಕ್ಷಿ’ಯಲ್ಲಿ ತಮ್ಮದೊಂದು ಕವಿತೆ, ಕಥೆ, ಪ್ರಬಂಧ ಅಥವಾ ಲೇಖನ ಪ್ರಕಟವಾಗಲೆಂದು ತುಂಬ ಕಾತರದಿಂದ ಕಾಯುತ್ತಿದ್ದರು. ‘ಸಾಕ್ಷಿ’ ಪತ್ರಿಕೆ ವಿಮರ್ಶಾ ಲೇಖನಗಳಿಗೆ ತುಂಬ ಮಹತ್ವ ಕೊಟ್ಟಿತು. ‘ಸಾಕ್ಷಿ’ ಪತ್ರಿಕೆಯ ಆರಂಭದ ಕೆಲವು ಸಂಚಿಕೆಗಳಂತೂ ತುಂಬ ಚೆನ್ನಾಗಿ ಬಂದವು. ಒಳ್ಳೊಳ್ಳೆಯ ಕವಿತೆ, ಕಥೆ ಮತ್ತು ವಿಮರ್ಶಾ ಲೇಖನಗಳು ಪ್ರಕಟವಾದವು. ಸಹಜವಾಗಿಯೇ ಇದರಿಂದ ‘ಸಾಕ್ಷಿ’ ಪತ್ರಿಕೆಯ ವರ್ಚಸ್ಸು ಹೆಚ್ಚಿತು. ಬಹುತೇಕ ನವ್ಯ ಲೇಖಕರೆಲ್ಲ ‘ಸಾಕ್ಷಿ’ ಪತ್ರಿಕೆಗೆ ಬರೆದಿದ್ದಾರೆ. ‘ಸಾಕ್ಷಿ’ ಪತ್ರಿಕೆಗೆ ನವ್ಯ ಸಾಹಿತ್ಯದ ಮುಖವಾಣಿಯೆಂಬ ಹೆಸರಿತ್ತು. ನವ್ಯ ಸಾಹಿತ್ಯದ ಒಲವು ನಿಲುವುಗಳನ್ನು ಪೋಷಿಸುವ ಕೆಲಸವನ್ನು ‘ಸಾಕ್ಷಿ’ ತುಂಬ ಉತ್ಸಾಹದಿಂದ ಮಾಡಿತು. ಉತ್ತಮ ಅಭಿರುಚಿಯುಳ್ಳ ಅಡಿಗರು ‘ಸಾಕ್ಷಿ’ಯನ್ನು ಕನ್ನಡದ ಒಂದು ಅತ್ಯುತ್ತಮ ಸಾಹಿತ್ಯ ಪತ್ರಿಕೆಯನ್ನಾಗಿ ಮಾಡುವ ಕನಸು ಕಂಡರು ಮತ್ತು ಅದರಲ್ಲಿ ಭಾಗಶಃ ಯಶಸ್ವಿಯಾದರು. ‘ಸಾಕ್ಷಿ’ ಪತ್ರಿಕೆ ಸಹ ತುಂಬ ವರ್ಷಗಳ ಕಾಲ ನಡೆಯಲಿಲ್ಲ. ಇಪ್ಪತ್ತೈದು-ಮೂವತ್ತು ಸಂಚಿಕೆಗಳಾಗುವಷ್ಟರಲ್ಲಿ ಪ್ರಕಟಣೆ ನಿಲ್ಲಿಸಿತು.

ದಲಿತ-ಬಂಡಾಯದ ಮುಖವಾಣಿಯಂತೆ ಕೆಲಸ ಮಾಡಿದ ‘ಸಂಕ್ರಮಣ’ ಹೆಚ್ಚು ಕಡಿಮೆ ಐವತ್ತೈದು ವರ್ಷಗಳ ಕಾಲ ನಡೆದಿದ್ದು ಸಾಮಾನ್ಯ ಸಂಗತಿಯಲ್ಲ. ‘ಸಂಕ್ರಮಣ’ ಪತ್ರಿಕೆಯನ್ನು ೧೯೬೪ರಲ್ಲಿ ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ ಮತ್ತು ಸಿದ್ದಲಿಂಗ ಪಟ್ಟಣಶೆಟ್ಟಿಯವರು ಸೇರಿ ಆರಂಭಿಸಿದರೂ ಗಿರಡ್ಡಿ ಮತ್ತು ಪಟ್ಟಣಶೆಟ್ಟಿಯವರು ಬಹುಬೇಗ ಅದರಿಂದ ಹೊರಬಂದರು. ಮುಂದೆ ಚಂಪಾ ಅವರೊಬ್ಬರೇ ಅದನ್ನು ಕೆಲವು ದಶಕಗಳ ಕಾಲ ನಡೆಸಿದರು.

ದಲಿತ-ಬಂಡಾಯ ಚಳುವಳಿಯ ಸಂದರ್ಭದಲ್ಲಿ ಆ ಲೇಖಕರಿಗೊಂದು ವೇದಿಕೆಯೊದಗಿಸಿದ್ದು ‘ಸಂಕ್ರಮಣ’ ಪತ್ರಿಕೆ. ತುಂಬ ಜನ ಹೊಸ ಲೇಖಕರಿಗೆ ‘ಸಂಕ್ರಮಣ’ದಲ್ಲಿ ಅವಕಾಶ ನೀಡಿದ ಚಂಪಾ ಅವರು ತಮ್ಮ ವಿರೋಧಿಗಳನ್ನು ಹಣಿಯಲು ಸಹ ‘ಸಂಕ್ರಮಣ’ವನ್ನು ಬಳಸಿಕೊಂಡರು. ಇರಲಿ, ಒಂದು ಕಿರು ಸಾಹಿತ್ಯಕ ಪತ್ರಿಕೆ ಕನ್ನಡಿಗರಂತಹ ನಿರುತ್ಸಾಹಿ ಮಂದಿಯ ನಡುವೆ ಐವತ್ತೈದು ವರ್ಷಗಳ ಕಾಲ ಬದುಕಿತ್ತು ಎಂದರೆ ಅದರ ಸಂಪೂರ್ಣ ಶ್ರೇಯಸ್ಸು ಚಂಪಾ ಅವರಿಗೇ ಸಲ್ಲಬೇಕು.

ಕನ್ನಡದ ಖ್ಯಾತ ಕಥೆಗಾರರಾದ ರಾಘವೇಂದ್ರ ಪಾಟೀಲರು ಮಲ್ಲಾಡಿಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಸತತವಾಗಿ ಹದಿನೈದು ವರ್ಷಗಳ ಕಾಲ ನಡೆಸಿದ ಸಾಹಿತ್ಯಕ ಪತ್ರಿಕೆ ‘ಸಂವಾದ’. ಇದೊಂದು ಸದಭಿರುಚಿಯ ಸಾಹಿತ್ಯಕ ಪತ್ರಿಕೆ. ನವ್ಯೋತ್ತರ ಕಾಲಘಟ್ಟದ ಬಹುತೇಕ ಎಲ್ಲ ಲೇಖಕರು ‘ಸಂವಾದ’ದಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿದ್ದಾರೆ. ರಾಜಕೀಯದಿಂದ ದೂರವಿದ್ದುಕೊಂಡು ಸಾಹಿತ್ಯಕ್ಕೆ ಮಾತ್ರ ಆದ್ಯತೆ ನೀಡಿತೆಂಬುದು ‘ಸಂವಾದ’ ಪತ್ರಿಕೆಯ ವಿಶೇಷತೆ. ಸುಮಾರು ಇಪ್ಪತ್ತು ವರ್ಷಗಳ ನಂತರ ರಾಘವೇಂದ್ರ ಪಾಟೀಲರು ಧಾರವಾಡದಿಂದ ‘ಸಮಾಹಿತ’ ಪತ್ರಿಕೆಯನ್ನು ತುಂಬ ಚೆನ್ನಾಗಿ ತಂದರು. ಈ ಪತ್ರಿಕೆ ಸಹ ಕನ್ನಡಿಗರ ನಿರುತ್ಸಾಹದಿಂದ ಮೂರೇ ವರ್ಷಗಳಿಗೆ ಪ್ರಕಟಣೆ ನಿಲ್ಲಿಸಿತು.

ಕನ್ನಡದ ಮತ್ತೊಬ್ಬ ಖ್ಯಾತ ಕಥೆಗಾರರಾದ ವಿವೇಕ ಶಾನಭಾಗರು ಐದು ವರ್ಷಗಳ ಕಾಲ ‘ದೇಶ ಕಾಲ’ ಎಂಬ ಸಾಹಿತ್ಯಕ ಪತ್ರಿಕೆಯನ್ನು ನಡೆಸಿದರು. ತುಂಬ ಚೆನ್ನಾಗಿ ಬರುತ್ತಿದ್ದ ‘ದೇಶ ಕಾಲ’ ಕೇವಲ ಐದೇ ವರ್ಷಗಳಿಗೆ ಪ್ರಕಟಣೆ ನಿಲ್ಲಿಸಿತು. ‘ಸಮಾಹಿತ’ ಮತ್ತು ‘ದೇಶ ಕಾಲ’ ಪತ್ರಿಕೆಗಳು ಸಾಹಿತ್ಯಕ ಗುಣಮಟ್ಟ, ವಿನ್ಯಾಸ ಮತ್ತು ಮುದ್ರಣಗಳ ವಿಚಾರದಲ್ಲಿ ಇಂಗ್ಲಿಷ್ ಪತ್ರಿಕೆಗಳಿಗೆ ಸರಿ ಮಿಗಿಲಾಗುವಂತೆ ಬಂದದ್ದು ಗಮನಾರ್ಹ. ‘ಸಂವಾದ’, ‘ದೇಶ ಕಾಲ’ ಮತ್ತು ‘ಸಮಾಹಿತ’ ಪತ್ರಿಕೆಗಳು ಅಲ್ಪಾಯುಷಿಗಳಾದರೂ ಸಹ ಅಡಿಗರ ‘ಸಾಕ್ಷಿ’ ಪತ್ರಿಕೆಯ ಆಶಯವನ್ನು ಇನ್ನಷ್ಟು ಅರ್ಥಪೂರ್ಣವಾಗಿ ವಿಸ್ತರಿಸಿದವು.

ಬಾಕಿನ ಅವರ ‘ಕವಿತಾ’, ಸುಮತೀಂದ್ರ ನಾಡಿಗರ ‘ಗಾಂಧಿ ಬಜಾರ್’, ಸಿದ್ದಲಿಂಗ ಪಟ್ಟಣಶೆಟ್ಟಿಯವರ ‘ಸಂಕಲನ’ ಮತ್ತು ಪ್ರಹ್ಲಾದರ ‘ಸಂಚಯ’ ಪತ್ರಿಕೆಗಳು ಸಹ ಚೆನ್ನಾಗಿಯೇ ಬಂದವು. ‘ಸಂಚಯ’ ಪತ್ರಿಕೆ ಕನ್ನಡದ ಕೆಲವು ಖ್ಯಾತ ಲೇಖಕರ ಕುರಿತು ವಿಶೇಷ ಸಂಚಿಕೆಗಳನ್ನು ಪ್ರಕಟಿಸಿತು. ‘ಶೂದ್ರ’, ‘ಅರುಹು ಕುರುಹು’, ‘ಸಮಾಜಮುಖಿ’, ‘ಚಿಂತನ ಬಯಲು’ ಮತ್ತು ‘ಸಂಗಾತ’ ಸೇರಿದಂತೆ ಹಲವು ಪತ್ರಿಕೆಗಳು ಕನ್ನಡದಲ್ಲಿ ಬಂದರೂ ಇವುಗಳ ಗುಣಮಟ್ಟ ಅಷ್ಟೊಂದು ತೃಪ್ತಿಕರವಾಗಿಲ್ಲ!

ಲಂಕೇಶರ ಸಂಪಾದಕತ್ವದಲ್ಲಿ ಬಂದ ‘ಲಂಕೇಶ್ ಪತ್ರಿಕೆ’ಗೆ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ಇದೊಂದು ಟ್ಯಾಬ್ಲಾಯ್ಡ್ ಪತ್ರಿಕೆಯಾದರೂ ಅದರ ಮಿತಿಗಳನ್ನೆಲ್ಲ ಮೀರಿ ಕರ್ನಾಟಕದಾದ್ಯಂತ ತುಂಬ ಜನಪ್ರಿಯತೆ ಗಳಿಸಿಕೊಂಡಿತು. ‘ಲಂಕೇಶ್ ಪತ್ರಿಕೆ’ಯಲ್ಲಿ ಸಾಹಿತ್ಯ, ಸಂಸ್ಕೃತಿ, ಸಿನಿಮಾ, ರಾಜಕೀಯ ಮತ್ತು ಕ್ರೀಡೆಗೆ ಸಂಬಂಧಿಸಿದಂತೆ ತುಂಬ ರೋಚಕ ಸುದ್ದಿಗಳು ಪ್ರಕಟವಾಗುತ್ತಿದ್ದವು. ಲಂಕೇಶರು ತಮ್ಮ ಪತ್ರಿಕೆಯಲ್ಲಿ ಸಾಹಿತ್ಯ, ಸಿನಿಮಾ ಮತ್ತು ರಾಜಕೀಯಕ್ಕೆ ಹೆಚ್ಚು ಒತ್ತು ನೀಡಿದರು.

ಆ ಕಾಲಘಟ್ಟದ ತುಂಬ ಜನ ಹೆಸರಾಂತ ಲೇಖಕ/ಕಿಯರ ಕವಿತೆ, ಕಥೆ, ಪ್ರಬಂಧ ಮತ್ತು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದವು. ಖ್ಯಾತ ಸಾಹಿತಿಗಳಾದ ತೇಜಸ್ವಿಯವರು ಸಹ ‘ಲಂಕೇಶ್ ಪತ್ರಿಕೆ’ಗೆ ಕೆಲವು ವರ್ಷಗಳ ಕಾಲ ಖಾಯಮ್ಮಾಗಿ ಬರೆದರು. ಕನ್ನಡದ ಅಭಿಜಾತ ಕೃತಿಯಾದ ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’ ಕಾದಂಬರಿ ‘ಲಂಕೇಶ್ ಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು.

ಒಂದು ಹಂತದಲ್ಲಿ ‘ಲಂಕೇಶ್ ಪತ್ರಿಕೆ’ಯ ಪ್ರಸರಣ ಸಂಖ್ಯೆ ಒಂದೂವರೆ ಲಕ್ಷ ದಾಟಿತ್ತು ಎಂಬುದು ತುಂಬ ಆಶ್ಚರ್ಯ ಮತ್ತು ಸಂತೋಷದ ಸಂಗತಿ. ಲಂಕೇಶರು ಪತ್ರಿಕೆಯಿಂದ ಆರ್ಥಿಕವಾಗಿ ಮತ್ತು ಸಾಹಿತ್ಯಕವಾಗಿ ಸಾಕಷ್ಟು ಲಾಭ ಪಡೆದಿದ್ದಾರೆ. ಪತ್ರಿಕೆಯ ಜನಪ್ರಿಯತೆ ಹೆಚ್ಚಿದಂತೆ ಲಂಕೇಶರು ಸಹ ತುಂಬ ಪ್ರಭಾವಶಾಲಿಯಾದರು. ಎಂಬತ್ತರ ದಶಕದಲ್ಲಿ ಸಾಹಿತ್ಯ ಮತ್ತು ರಾಜಕೀಯ ವಲಯದ ತುಂಬ ಜನರಿಗೆ ಲಂಕೇಶರ ಕುರಿತು ಭಯಮಿಶ್ರಿತ ಗೌರವವಿತ್ತೆಂದು ಹೇಳಲಾಗುತ್ತದೆ. ಇದು ಲಂಕೇಶರು ದೊಡ್ಡ ಲೇಖಕರು ಎಂಬ ಭಾವನೆಯಿಂದ ಉತ್ಪನ್ನವಾದ ಗೌರವವಲ್ಲ! ಬದಲಾಗಿ ತಮ್ಮ ಬಗ್ಗೆ ಪತ್ರಿಕೆಯಲ್ಲಿ ಏನಾದರೂ ಬರೆದಾರು ಎಂಬ ಭಯದಿಂದ ಉತ್ಪನ್ನವಾದ ಗೌರವ! ಲಂಕೇಶರು ಸಹ ಚಂಪಾ ಅವರಂತೆಯೇ ತಮ್ಮ ವಿರೋಧಿಗಳನ್ನು ಹಣಿಯಲು ಪತ್ರಿಕೆಯನ್ನು ಬಳಸಿಕೊಂಡರು.

ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳ ನಡುವಿನ ಸಂಬಂಧದ ಕುರಿತು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ತೀರ ನಿರಾಸೆಯಾಗುತ್ತದೆ. ಸಾಹಿತ್ಯ ಮತ್ತು ಪತ್ರಿಕೆಗಳ ನಡುವೆ ಈಗ ಮೊದಲಿನ ಹಾಗೆ ಮಧುರ ಸಂಬಂಧ ಉಳಿದಿಲ್ಲ. ತುಂಬ ಪತ್ರಿಕೆಗಳು ಸಾಹಿತ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಎಷ್ಟೋ ಪತ್ರಿಕೆಗಳು ಭಾನುವಾರದ ಪುರವಣಿಯನ್ನೇ ನಿಲ್ಲಿಸಿವೆ. ಕೆಲವು ಪತ್ರಿಕೆಗಳು ಪುರವಣಿಗಳನ್ನು ತಂದರೂ ಅವುಗಳ ಗುಣಮಟ್ಟ ತೀರ ಕಳಪೆ. ವಾರಪತ್ರಿಕೆ, ಮಾಸಪತ್ರಿಕೆ ಮತ್ತು ಸಾಹಿತ್ಯಕ ಪತ್ರಿಕೆಗಳಿಂದಲೂ ಅಂತಹ ಒಳ್ಳೆಯ ಗುಣಮಟ್ಟದ ಸಾಹಿತ್ಯ ಬರುತ್ತಿಲ್ಲ. ಕನ್ನಡದ ಬಹುತೇಕ ಪತ್ರಿಕೆಗಳು ಎಡಪಂಥ – ಬಲಪಂಥವೆಂದು ಇಬ್ಬಾಗವಾಗಿವೆ. ಇಂತಹ ಪತ್ರಿಕೆಗಳು ಸಾಹಿತ್ಯಕ್ಕಿಂತ ರಾಜಕೀಯ ಒಲವು ನಿಲುವುಗಳನ್ನು ಪೋಷಿಸುವ ಕೆಲಸವನ್ನು ತುಂಬ ಉತ್ಸಾಹದಿಂದ ಮಾಡುತ್ತಿವೆ.

ಕನ್ನಡದ ಬಹುತೇಕ ಪತ್ರಿಕೆಗಳು ಸ್ವಜನ ಪಕ್ಷಪಾತ, ಜಾತೀಯತೆ ಮತ್ತು ರಾಜಕೀಯ ವ್ಯಸನದಿಂದ ಬಳಲುತ್ತಿವೆ. ಇತ್ತೀಚೆಗೆ ಪತ್ರಿಕೆಗಳು ಸಾಹಿತ್ಯಿಕ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ. ಬಹುತೇಕ ಪತ್ರಿಕೆಗಳ ಸಂಪಾದಕರು, ಉಪ ಸಂಪಾದಕರು ಮತ್ತು ಸಾಹಿತ್ಯ ವಿಭಾಗ ನೋಡಿಕೊಳ್ಳುವವರ ವೈಫಲ್ಯವೇ ಇದಕ್ಕೆ ಕಾರಣ! ಪತ್ರಿಕೆಗಳಲ್ಲಿ ಕೆಲಸ ಮಾಡುವ ತುಂಬ ಜನರಿಗೆ ಸಾಹಿತ್ಯದ ಗಾಳಿ ಗಂಧವೇ ಇಲ್ಲ, ತಾವು ಬಹಳ ದೊಡ್ಡವರು ಎಂಬ ಭ್ರಮೆಯಿದೆ. ದ್ವಿತೀಯ ದರ್ಜೆಯ ಲೇಖಕ/ಕಿಯರು ತಮ್ಮ ಬರಹಗಳ ಪ್ರಕಟಣೆಗಾಗಿ ಇಂತಹವರನ್ನು ಓಲೈಸುವುದೇ ಇದಕ್ಕೆ ಕಾರಣ!

ಇತ್ತೀಚೆಗೆ ತುಂಬ ಹಣವಿರುವ ಉದ್ಯಮಿಗಳು ಹೇಗಾದರೂ ಹೆಸರು ಮಾಡಬೇಕೆಂಬ ಆಸೆಯಿಂದ ಸಾಹಿತ್ಯ ಲೋಕಕ್ಕೆ ಬರುತ್ತಿದ್ದಾರೆ. ಇಂತಹ ಬಂಡವಾಳಶಾಹಿ ಮನೋಭಾವದ ಉದ್ಯಮಿಗಳಿಗೆ ಸಾಥ್ ಕೊಡುವವರು ಪತ್ರಿಕೆಗಳವರು. ಇಂತಹ ಹಣವಂತರ ಜೊತೆ ಸೇರಿ ಪತ್ರಿಕೆಗಳವರು ದೊಡ್ಡ ಮೊತ್ತದ ಬಹುಮಾನವಿರುವ ಸ್ಪರ್ಧೆಗಳನ್ನು ನಡೆಸುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಅನಾರೋಗ್ಯಕರ ವಾತಾವರಣವನ್ನು ನಿರ್ಮಿಸಿದ್ದಾರೆ. ಹೆಚ್ಚು ಹಣ ಖರ್ಚು ಮಾಡುವುದರಿಂದ ಅಥವಾ ಹೆಚ್ಚಿನ ಮೊತ್ತದ ಬಹುಮಾನ ಕೊಡುವುದರಿಂದ ಸಾಹಿತ್ಯ ಅಥವಾ ಸಾಹಿತಿಗಳ ಗುಣಮಟ್ಟ ಹೆಚ್ಚಾಗುವುದಿಲ್ಲ.

ಪ್ರಸ್ತುತ ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳ ನಡುವಿನ ಸಂಬಂಧ ಮತ್ತೆ ಮಧುರವಾಗುವಂತಾಗಲಿ ಎಂದು ಬಯಸುವುದು ಕೂಡ ಕಷ್ಟವಾದಂತಹ ಪರಿಸ್ಥಿತಿಯಿದೆ. ಸಾಹಿತ್ಯಕ ಪತ್ರಿಕೆಗಳಿಗೆ ಮತ್ತೆ ಒಳ್ಳೆಯ ದಿನಗಳು ಬರುವಂತಾಗಲಿ ಎಂದು ಆಶಿಸಬಹುದಷ್ಟೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳು”

  1. ಗೋಪಾಲ ತ್ರಾಸಿ

    ವಾಹ್ ವಾಹ್… ಉಪಯುಕ್ತ ಮಾಹಿತಿಪೂರ್ಣ ಲೇಖನ…ಅಭಿನಂದನೆ ಲೇಖಕರಿಗೆ. ಆದರೆ
    ದಶಕದಿಂದೀಚೆಗೆ ಎಲ್ಲಾ ಮಾಧ್ಯಮಗಳಂತೆ ಪತ್ರಿಕಾರಂಗ ಸಹ ಒಂದು ಪಕ್ಷದ ಮುಖವಾಣಿಗಳಂತೆ ವರ್ತಿಸುತ್ತಿರುವ ಸತ್ಯಾಂಶ ನಮ್ಮ ಕಣ್ಣೆದುರಿಗಿದೆ. ಇದಕ್ಕೆ ಕಾರಣ ಹಿಡನ್ ರಾಜಕೀಯ ಆಮಿಷ, ಹಣ, ಬೆದರಿಕೇನೂ ಇರಬಹುದು..

  2. ಮೂಡಿತ್ತಾಯ ಪಿ ಎನ್

    ಒಂದು ಸಮಗ್ರ ನೋಟ ಈ ರೂಪದಲ್ಲಿ ಆಕರ್ಷಿಸಿದೆ ಸಾಮಾಜಿಕ ಜಾಲತಾಣ ಲೇಖಕರಿಗೆ ಮತ್ತು ಓದುಗರಿಗೆ ಕೊಟ್ಟ ಸ್ವಾತಂತ್ರ್ಯ ಅಮೋಘವಾದದ್ದು . ನಾನು ಕೂಡ ಸಾವಿರಾರು ಲೇಖನ ಬರೆದು ಹಲವನ್ನು ವಿವಿಧ ಪತ್ರಿಕೆಗಳಿಗೆ ಕೊಡುತ್ತಿದ್ದವನುಆ ಉಸಾಬರಿ ಬಿಟ್ಟು ಫೇ ಬುಗೆ ಸೀಮಿತನಾಗಿದ್ದೇನೆ . ಪಂಥ ಸಿದ್ಧಾಂತ ರಾಜಕೀಯ ಕೆಸರು ಪತ್ರಿಕೆಗಳ ಉಸಾಬರಿಗೆ ಹೋಗದಂತೆ ಮಾಡಿವೆ . ಪತ್ರಿಕೆಗಳ ಮೇಲೆ ಕೋವಿಡ್ ಕೊಟ್ಟ ಏಟು ಸಾಮಾನ್ಯವಲ್ಲ . ಅದರಿಂದಾಗಿ ಅವು ಈಗ ಪಟ್ಟಭದ್ರ ಹಿತಾಸಕ್ತರ ಖಾಸಗಿ ಸೊತ್ತಿನಂತಾಗಿಬಿಟ್ಟಿವೆ

    1. Raghavendra Mangalore

      ಒಳ್ಳೆಯ ಉತ್ತಮ ಮಾಹಿತಿ ಹೊತ್ತ ಲೇಖನ. ಆದರೆ ರವಿ ಬೆಳೆಗೆರೆ ಅವರ ‘ ಹಾಯ್ ಬೆಂಗಳೂರು ‘ ಹಾಗೂ ವೈಕುಂಠ ರಾಜು ಅವರ ಪತ್ರಿಕೆಯ ಉಲ್ಲೇಖ ಇಲ್ಲ…ಆದರೂ ಒಂದು ವಿಶಿಷ್ಟ ಬರಹ. ಅದರಲ್ಲಿ ಎರಡು ಮಾತಿಲ್ಲ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter