ಕನ್ನಡ ಪ್ರಗತಿಶೀಲ ಸಾಹಿತ್ಯದ ಶಿಲ್ಪಿಗಳಲ್ಲಿ ಒಬ್ಬರಾದ ನಿರಂಜನರು (ಕುಳಕುಂದ ಶಿವರಾಯ) ಕನ್ನಡದ ಮಹತ್ವದ ಮತ್ತು ಜನಪ್ರಿಯ ಕಾದಂಬರಿಕಾರರು. ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ದಂಥ ಸಾರ್ಥಕ ಕೃತಿಗಳನ್ನು ಕೊಟ್ಟವರು. ಅವರು ತಮ್ಮ ಇಪ್ಪತೊಂಭತ್ತನೇ ವಯಸ್ಸಿನಲ್ಲಿ ಬರೆದ ಚೊಚ್ಚಲ ಕಾದಂಬರಿ ‘ವಿಮೋಚನೆ’ (1953) ಯು ರಷ್ಯನ್ ಭಾಷೆಗೆ ಅನುವಾದಗೊಂಡ ಕನ್ನಡದ ಮೊದಲ ಕಾದಂಬರಿಯಾಗಿದೆ. ‘ರಂಗಮ್ಮನ ವಠಾರ’, ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕಾದಂಬರಿಗಳು ಮಲಯಾಳಕ್ಕೆ ಭಾಷಾಂತರಗೊಂಡಿವೆ. ಮಲಯಾಳಂನಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದ ‘ಚಿರಸ್ಮರಣೆ’ಯು ನಿರಂಜನರನ್ನು ಕೇರಳದಲ್ಲಿ ಮಲಯಾಳಂ ಲೇಖಕರಷ್ಟೇ ಪ್ರಸಿದ್ಧರನ್ನಾಗಿಸಿದೆ. ಕನ್ನಡದಲ್ಲಿ ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕೃತಿಗಳು ಮಾತ್ರ ಲಭ್ಯವಿದ್ದರೆ ಕನ್ನಡದಿಂದ ಅನುವಾದಗೊಂಡ ಅವರ ಎಲ್ಲ ಕೃತಿಗಳೂ ಮಲಯಾಳಂನಲ್ಲಿ ಲಭ್ಯವಿವೆ. ಅವರು ಹುಟ್ಟಿ ನೂರು ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ ಅವರ ಕಾದಂಬರಿಯ ಬಗ್ಗೆ ಚರ್ಚಿಸುವುದು ಅರ್ಥಪೂರ್ಣವೆನಿಸುತ್ತದೆ. ಅ. ನ. ಕೃಷ್ಣರಾಯರ ಶೈಲಿಯ ನಯ-ನುಣುಪು, ತ. ರಾ. ಸು ಅವರ ರಚನೆಗಳಲ್ಲಿರುವ ಕಾವ್ಯಾತ್ಮಕತೆ-ಚಿತ್ರಮಯತೆಗಳು ನಿರಂಜನರ ಬರಹಗಳಿಗೆ ಇಲ್ಲದಿದ್ದರೂ ಅವುಗಳಿಗೆ ಅಸಾಧಾರಣ ಶಕ್ತಿಯಿದೆ. ಅನುಭವವು ಚಿಂತನೆಯನ್ನು ಆಹ್ವಾನಿಸಿದಾಗ ಅವರು ಒಳ್ಳೆಯ ಕೃತಿಯನ್ನು ಬರೆಯಬಲ್ಲರು ಎಂಬುದಕ್ಕೆ ಅವರ ‘ವಿಮೋಚನೆ’ಯು ಸಾಕ್ಷಿಯಾಗುತ್ತದೆ. ಇದರಲ್ಲಿ ಆಕರ್ಷಕ ಕಥಾವಸ್ತುವಿಲ್ಲ. ಆಕರ್ಷಕ ಕತೆಯನ್ನು ಹೇಳುವ ಉದ್ದೇಶವೂ ಇಲ್ಲ. ಕಾದಂಬರಿಯ ನಾಯಕ ಚಂದ್ರಶೇಖರನ ಬದುಕಿನ ಪರಿಸ್ಥಿತಿಯ ವರ್ಣನೆ, ನಿರೂಪಣೆಗಳಲ್ಲಿ ವಾಸ್ತವತೆಯಿದ್ದರೂ ಇಂಥ ವೈಷಮ್ಯಪೂರಿತ ಜಗತ್ತಿನಲ್ಲಿ ಬಾಳಬೇಕಾದರೆ ಪ್ರೀತಿ ಮಾತ್ರವಲ್ಲ ಹಣವೂ ಬೇಕು ಎಂಬ ಅನುಭವವು ಮುಖ್ಯವಾಗುತ್ತದೆ. 1947ರ ಸ್ವಾತಂತ್ರ್ಯ ದೊರಕಿದ ವರ್ಷವೇ ಸೆರೆಮನೆಗೆ ಸೇರಿದ ಅತನ ಬಾಳ ಕತ್ತಲೆಯನ್ನು ಮನಗಾಣಿಸಿದ ರೀತಿಯು ಅರ್ಥಪೂರ್ಣವಾಗಿದೆ. ಬದುಕು ಉತ್ತಮಗೊಳ್ಳಲಾರದೆಂಬ ನಿರಾಶೆ ಮತ್ತು ಬದುಕಿನ ಉರಿಯಲ್ಲಿ ಬತ್ತುವ ಪ್ರೇಮ ಅಂತಃಕರಣಗಳು ಕಟು ವಾಸ್ತವಕ್ಕೆ ಕನ್ನಡಿಯನ್ನು ಹಿಡಿಯುತ್ತವೆ. ಚಿಕ್ಕಂದಿನಲ್ಲಿ ಚಂದ್ರಶೇಖರನು ತನ್ನ ತಂದೆತಾಯಿಯರೊಂದಿಗೆ ನಗರಕ್ಕೆ ಬರುವಾಗ ಅವನ ತಾಯಿಯು ಹೇಮಾವತಿ ನದಿಯ ಸುಳಿಗೆ ಸಿಕ್ಕಿ ಕೊಚ್ಚಿಕೊಂಡು ಹೋಗುತ್ತಾಳೆ. ಆಸರೆಗಾಗಿ ಅಲೆದಾಡುತ್ತಿರುವ ಸಂದರ್ಭದಲ್ಲಿ ಇವರ ಪರಿಸ್ಥಿತಿಯನ್ನು ಕಂಡು ಮನಕರಗಿದ ಅಜ್ಜಿಯೊಬ್ಬಳು ಇವರನ್ನು ತನ್ನ ಮನೆಯಲ್ಲಿ ಉಳಿಸಿಕೊಳ್ಳುತ್ತಾಳೆ. ತಂದೆಗೆ ಬಟ್ಟೆ ತಯಾರಿಯ ಹೊಸ ಕಾರ್ಖಾನೆಯಲ್ಲಿ ಹತ್ತಿಯನ್ನು ಹಿಂಜುವ ಕೆಲಸ ಸಿಗುತ್ತದೆ. ಹುಡುಗ ಚಂದ್ರಶೇಖರನು ಆಕೆಯ ಮನೆವಾರ್ತೆಗೆ ನೆರವಾಗುತ್ತಾ ಶಾಲೆಗೆ ಹೋಗುತ್ತಾನೆ. ಬಡವನಾದ ತನ್ನನ್ನು ಕೆಣಕಿದ ಸಿರಿವಂತ ಹುಡುಗರಿಗೆ ಹೊಡೆಯುತ್ತಾನೆ. ಅಧ್ಯಾಪಕರು ಅವನ ಮೇಲೆಯೇ ತಪ್ಪು ಹೊರಿಸಿ ಅವನನ್ನು ಹೊರಗೆ ಹಾಕುತ್ತಾರೆ. ಕ್ಷಮಾಪಣೆಯನ್ನು ಕೇಳಲು ಬಂದ ತಂದೆಯ ಕೈಯಿಂದ ಸೌದೆಯನ್ನು ಒಡೆಸಿ ಪ್ರತಿ ತಿಂಗಳು ಬಿಟ್ಟಿಯಾಗಿ ಸೌದೆ ಒಡೆದರೆ ಮಗನ ವಿದ್ಯಾಭ್ಯಾಸವನ್ನು ಮುಂದುವರಿಸಲು ಬಿಡುವುದಾಗಿ ಒಪ್ಪುತ್ತಾನೆ. ವರ್ಷ ವರ್ಷಕ್ಕೂ ಮಗ ಉತ್ತೀರ್ಣನಾಗುತ್ತಾ ಹೋದಂತೆ ಕ್ಷಯರೋಗಕ್ಕೆ ಬಲಿಯಾದ ತಂದೆಯ ಆರೋಗ್ಯವು ಹದಗೆಡುತ್ತಾ ಹೋಗುತ್ತದೆ. ಮೇಷ್ಟ್ರ ಬಾಲ್ಯ ಸ್ನೇಹಿತನೂ, ಶ್ರೀಮಂತನೂ, ಕಷ್ಟ ಬಂದಾಗ ಸಹಾಯವನ್ನು ಮಾಡುವೆನೆಂದು ಮಾತನ್ನೂ ಕೊಟ್ಟಿದ್ದ ಲೋಕಪಾರಾಯಣ ರಾಮಸ್ವಾಮಿಯ ಹತ್ತಿರ ಸಹಾಯವನ್ನು ಕೇಳಲು ಹೋದಾಗ ಆತನು ಎರಡು ರೂಪಾಯಿಗಳನ್ನು ಮಾತ್ರ ಕೊಡುತ್ತಾನೆ. ತಂದೆಯ ಚಿಕಿತ್ಸೆಗೆ ಬೇರೆ ದಾರಿಯನ್ನು ಕಾಣದ ಚಂದ್ರಶೇಖರನು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸದೆ ಪತ್ರಿಕೆಗಳನ್ನು ಮಾರತೊಡಗುತ್ತಾನೆ. ಶಿಕ್ಷಣವನ್ನು ಪಡೆದ ಹುಡುಗನಾಗಿರುವುದರಿಂದ ಅನಕ್ಷರಸ್ಥ ಕೆಲಸಗಾರರ ಅಸೂಯೆಗೆ ಗುರಿಯಾಗುತ್ತಾನೆ. ಜೇಬುಗಳ್ಳತನವನ್ನು ಮಾಡಿದನೆಂದು ತಪ್ಪು ತಿಳಿದುಕೊಂಡ ಪೋಲೀಸರು ಅವನನ್ನು ಬಂಧಿಸಿ ಸೆರೆಮನೆಗೆ ತಳ್ಳುತ್ತಾರೆ. ಪತ್ರಿಕೆಗಳನ್ನು ಮಾರಿ ಸಂಪಾದಿಸಿದ ಚಿಲ್ಲರೆ ನಾಣ್ಯಗಳನ್ನು ಕಸಿದುಕೊಂಡು ಹೊರಬಿಡುತ್ತಾರೆ. ಕೆಲವು ದಿನಗಳ ನಂತರ ತಂದೆ ತೀರಿ ಹೋಗುತ್ತಾರೆ. ಊರಿನ ಬಗ್ಗೆ ರೋಸಿದ ಚಂದ್ರಶೇಖರನು ಮುಂಬಯಿಗೆ ತೆರಳಿ ಹಮಾಲಿಯಾಗಿ ದುಡಿಯುತ್ತಾನೆ. ಜೇಬುಗಳ್ಳ ಅಮೀರನ ಸ್ನೇಹದಿಂದ ಪ್ರಭಾವಿತನಾಗಿ ಜೇಬುಗಳ್ಳನಾಗುತ್ತಾನೆ. ಸ್ವಾತಂತ್ರ್ಯ ಹೋರಾಟಗಾರರ ಸಭೆಗೆ ಜೇಬು ಕತ್ತರಿಸಲು ಹೋದಾಗ ಪ್ರತಿಭಟನಕಾರರ ಜೊತೆಯಲ್ಲಿ ಸೆರೆಮನೆಯನ್ನು ಸೇರಿ ಸ್ವಾತಂತ್ರ್ಯ ಹೋರಾಟಗಾರನೆನಿಸಿಕೊಳ್ಳುತ್ತಾನೆ. ಅಜ್ಜಿಗೆ ಹುಷಾರಿಲ್ಲವೆಂಬ ತಂತಿಯು ಬಂದಾಗ ಮುಂಬಯಿಯಿಂದ ಹಿಂತಿರುಗುತ್ತಾನೆ. ಆಕೆ ತೀರಿಕೊಂಡ ಬಳಿಕ ಅಂತ್ಯಕ್ರಿಯೆಗಳನ್ನು ಮಾಡುತ್ತಾನೆ. ಕೆಟ್ಟ ಕೆಲಸಗಳನ್ನು ಮಾಡಲು ಮನಸ್ಸಿಲ್ಲದೆ ಗುಮಾಸ್ತನ ಉದ್ಯೋಗಕ್ಕೆ ಅರ್ಜಿಯನ್ನು ಹಾಕಿದರೂ ಫಲಕಾರಿಯಾಗದೆ ಜೇಬುಗಳ್ಳನಾಗಿ ಮುಂದುವರಿಯುತ್ತಾನೆ. ಕಳಂಕಿತ ಹೆಣ್ಣಿಗೆ ಹೊಡೆಯುವ ಸಂದರ್ಭದಲ್ಲಿ ಚಂದ್ರಶೇಖರನು ಆಕೆಯನ್ನು ಗಂಡಸರ ಕೈಯಿಂದ ಪಾರುಮಾಡಿದರೂ ಆತನು ಆ ಹೆಂಗಸನ್ನು ಇಟ್ಟುಕೊಂಡಿದ್ದಾನೆ ಎಂಬ ಆರೋಪದಲ್ಲಿ ಸೆರೆಮನೆಗೆ ಹೋಗಬೇಕಾಗುತ್ತದೆ. ಚಲಂ ಎಂಬ ದರೋಡೆಕೋರನ ಪರಿಚಯವಾಗಿ ಅವರ ಸಂಗಡಿಗರ ಜೊತೆ ದುಡಿಯುತ್ತಾನೆ. ಪ್ರತಿಷ್ಠಿತ ವ್ಯಕ್ತಿಯ ಸೋಗಿನಲ್ಲಿ ದರೋಡೆಯನ್ನು ಮಾಡುತ್ತಾ, ಆ ಸೋಗಿನ ಮರೆಯಲ್ಲಿ ಪೋಲೀಸಿರ ಕಣ್ಣಿಗೆ ಮಣ್ಣೆರಚಿ ತಿರುಗುತ್ತಿರುವಾಗ ಜ್ವರದಿಂದ ನರಳುತ್ತಿದ್ದ ಮುರಳಿಯನ್ನು ಕಾಣುತ್ತಾನೆ. ಆತನನ್ನು ಮನೆಗೆ ಕರೆದುಕೊಂಡು ಹೋದಾಗ ಅವನ ತಂಗಿ ವನಜಳ ಪರಿಚಯವಾಗಿ ಆಕೆಯನ್ನು ಪ್ರೀತಿಸತೊಡಗುತ್ತಾನೆ. ಆಕೆಯನ್ನು ಮದುವೆಯಾಗಿದ್ದರೆ ಬಾಳು ಶೂನ್ಯ ಎನಿಸುತ್ತದೆ. ಆಕೆಯನ್ನು ಮದುವೆಯಾಗಬೇಕಿದ್ದರೆ ಸಂಭಾವಿತನಾಗಬೇಕಾಗುತ್ತದೆ. ತನ್ನ ಗತಜೀವನ, ಜಾತಿಕುಲಗೋತ್ರಗಳು, ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ ಬಳಿಕ ತಾನು ಕೈಗೊಂಡ ವೃತ್ತಿಗಳ ಬಗ್ಗೆ ಬೆಲೆಬಾಳುವ ಪೋಷಾಕಿನೊಳಗೆ ಗ್ರಹಣಗೊಂಡ ಹೃದಯದ ಬಗ್ಗೆ ಅರಿವಾದಾಗ ಏನಾಗಬಹುದು ಎಂಬ ಚಿಂತೆಯಿಂದ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಆಗಷ್ಟೇ ಬಂಧಿತನಾದ ಚಲಂನ ಬಿಡುಗಡೆಗಾಗಿ ವಕೀಲರನ್ನು ಕಾಣಲು ಹೋದಾಗ ಅಲ್ಲಿದ್ದ ವನಜಳ ತಂದೆಗೆ ಚಂದ್ರಶೇಖರನು ಸಮಾಜಕಂಟಕನಾದ ಚಲಂನ ಸಂಗಡಿಗನೆಂದು ತಿಳಿದು ಅವನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ವನಜಳು ಅವನನ್ನು ದ್ವೇಷಿಸುತ್ತಾಳೆ. ಇದರಿಂದ ನೊಂದ ಚಂದ್ರಶೇಖರನು ಕುಡಿತದ ಚಟವನ್ನು ಬೆಳೆಸಿಕೊಳ್ಳುತ್ತಾನೆ. ಈ ಯಾತನೆಯಲ್ಲಿರುವಾಗ ಬಾಲ್ಯದ ಗೆಳೆಯನೂ, ಕೈಗಾರಿಕೋದ್ಯಮಿಯೂ ಆಗಿರುವ ಶ್ರೀಕಂಠನು ಆತನನ್ನು ತನ್ನ ಕಾರ್ಯದರ್ಶಿಯನ್ನಾಗಿಸುತ್ತಾನೆ. ಲಕ್ಷಗಳಲ್ಲಿ ವ್ಯವಹಾರಗಳನ್ನು ಮಾಡುತ್ತಿರುವ ಆತನು ಸರಕಾರಕ್ಕೂ ಸ್ವಾತಂತ್ರ್ಯ ಹೋರಾಟಗಾರರಿಗೂ ಬೇಕಾದವನಾಗಿರುತ್ತಾನೆ. ಅಪಾರ ಸಂಪತ್ತಿಗೆ ಒಡೆಯನಾದರೂ ಮನೆಯಲ್ಲಿ ವಿಷಮದಾಂಪತ್ಯ ತಾಂಡವವಾಡುತ್ತಿರುತ್ತದೆ. ಆತನ ಹೆಂಡತಿ ಶಾರದೆಯು ಆಧುನಿಕ ಮನೋಭಾವದವಳಾಗಿದ್ದು ಸಮಾಜದ ಪ್ರತಿಷ್ಠಿತ ವ್ಯಕ್ತಿಗಳೊಂದಿಗೆ ಸಂಬಂಧವನ್ನು ಇಟ್ಟುಕೊಂಡಿರುತ್ತಾಳೆ. ಹೊರಗೆ ಅವರು ನಿಷ್ಠಾವಂತರಾದ ರಾಜಭಕ್ತರಾಗಿದ್ದರೂ ಗುಪ್ತವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೆರವಾಗುತ್ತಾ ಇರುತ್ತಾರೆ. ಯುದ್ಧದ ಕಾಲವಾಗಿದ್ದುದರಿಂದ ನಿರುದ್ಯೋಗಿಗಳಾಗಿದ್ದ ಕಾರ್ಮಿಕರು ತಮಗೆ ಮೂರು ತಿಂಗಳ ಭತ್ಯೆ ಮತ್ತು ಯುದ್ಧದ ಕಾಲದ ಲಾಭದ ಪಾಲನ್ನು ಕೊಡಬೇಕೆಂದು ಮುಷ್ಕರವನ್ನು ಹೂಡಿ ಗೆಲ್ಲುತ್ತಾರೆ. ಭತ್ಯೆಯನ್ನು ಕೊಟ್ಟಾಗ ಶ್ರೀಕಂಠನ ಪಾಲಿಗೆ ಎರಡೂವರೆ ಲಕ್ಷ ರೂಪಾಯಿಗಳ ನಷ್ಟವಾಗುತ್ತವೆ. ಇದರಿಂದ ಸಿಟ್ಟುಗೊಂಡ ಶ್ರೀಕಂಠನು ಕಾರ್ಖಾನೆಯ ಮೂರನೇ ಪಾಳಿಯ ಕೆಲಸವನ್ನು ಮೊಟಕುಗೊಳಿಸಿ ಮೂರರಲ್ಲಿ ಎರಡಂಶ ಕಾರ್ಮಿಕರನ್ನು ವಜಾಗೊಳಿಸುತ್ತಾನೆ. ಕಾರ್ಮಿಕ ಸಂಘದ ಮಾನ್ಯತೆಯನ್ನು ರದ್ದುಗೊಳಿಸುತ್ತಾನೆ. ಭತ್ಯೆಯನ್ನು ಕೊಟ್ಟಿರುವುದರಿಂದ ಕಾರ್ಮಿಕರ ಒಂದು ಗುಂಪು ಇದರ ವಿರುದ್ಧ ಸೊಲ್ಲೆತ್ತದೆ ಸುಮ್ಮನಾದರೆ ಮತ್ತೊಂದು ಗುಂಪು ಉಗ್ರ ಹೋರಾಟಕ್ಕೆ ಕರೆ ಕೊಡುತ್ತದೆ. ಆದರೆ ಸಂಘಟನೆಯ ಬಲವು ಎರಡು ಗುಂಪುಗಳ ನಡುವಿನ ಹೊಡೆದಾಟದಲ್ಲಿ ಅಂತ್ಯವಾಗುತ್ತದೆ. ಒಗ್ಗಟ್ಟಿಲ್ಲದ ಹೋರಾಟವನ್ನು ಆರಕ್ಷಕರು ಸುಲಭವಾಗಿ ಹತ್ತಿಕ್ಕುತ್ತಾರೆ. ಮಾಲೀಕರ ಪರವಾಗಿ ನಿಂತುಕೊಳ್ಳುವ ಗುಂಪು ಅಧಿಕಾರಕ್ಕೆ ಬರುತ್ತದೆ. ಹೀಗಿರಲು ಒಂದು ದಿನ ಪರಪುರುಷನ ಸಂಗ ಮಾಡಿ ಬಂದ ಶಾರದೆಯನ್ನು ಶ್ರೀಕಂಠನು ಕೊಲ್ಲುತ್ತಾನೆ. ಆಕೆಯು ಸತ್ತಳೆಂದು ಇನ್ನೊಂದು ಜೀವಕ್ಕೆ ಹಾನಿ ಒದಗುವುದನ್ನು, ಶ್ರೀಕಂಠನ ವ್ಯಕ್ತಿತ್ವಕ್ಕೆ ಕುಂದು ಬರುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಲಾರದೆ ಚಂದ್ರಶೇಖರನು ಕೊಲೆಯ ಆರೋಪವನ್ನು ತಾನೇ ಹೊತ್ತುಕೊಂಡು ಸೆರೆಮನೆಯನ್ನು ಸೇರುತ್ತಾನೆ. ಕರುಳಿನ ಬಾಧೆಯು ಉಲ್ಬಣಿಸಿ ಅಲ್ಲೇ ಸಾಯುತ್ತಾನೆ. ಚಂದ್ರಶೇಖರನ ಬಾಲ್ಯ ಜಗತ್ತಿನ ಮೇಲೆ ಸಹಪಾಠಿಗಳು, ಮೇಷ್ಟ್ರು, ಆರಕ್ಷಕರು ಮಾಡುವ ಆಘಾತಗಳು ಬೇರೆ ಬೇರೆ ಸ್ತರಗಳಲ್ಲಿ ಓದುಗರನ್ನು ತಟ್ಟುತ್ತವೆ. ಸಾಮಾಜಿಕ ಅಸಮಾನತೆಯನ್ನು ಇಲ್ಲವಾಗಿಸಬೇಕಿದ್ದ ಶಾಲೆಯೇ ಸಾಮಾಜಿಕ ಅಸಮಾನತೆಯ ತಾಣವಾಗಿರುವ ವ್ಯಂಗ್ಯವನ್ನು ಕಾಣುತ್ತೇವೆ. ಸತ್ಯವನ್ನು ಹೇಳಿದರೆ ನಷ್ಟಗಳನ್ನು ಅನುಭವಿಸುವ, ಬಡತನವನ್ನು ಅಣಕಿಸುವ ಶಕ್ತಿಯ ಮುಂದೆ ಬಾಗುವ ಪರಿಸ್ಥಿತಿಯನ್ನು ಉರಿಯುತ್ತಿರುವ ವಿಷಾದದ ಹಿನ್ನೆಲೆಯಲ್ಲಿ ವಿವರಿಸುತ್ತದೆ. “ಹಳ್ಳಿಯಲ್ಲೂ ಒರಟುತನವಿದೆ. ಆದರೆ ಒರಟುತನವನ್ನು ಬಚ್ಚಿಟ್ಟುಕೊಳ್ಳುವ ಸೋಗು ಮಾತ್ರ ಹಾಕಿಕೊಳ್ಳುತ್ತಿರಲಿಲ್ಲ. ಆದರೆ ಇಲ್ಲಿ ಸೋಗಿತ್ತು. ಬರಿಯ ನಟನೆ. ತೊಲಗಿ ಹೋಗು ಎಂದು ಹೇಳುವ ಇಚ್ಛೆಯಿದ್ದರೂ ಹಾಗೆ ಯಾರೂ ಹೇಳುತ್ತಿರಲಿಲ್ಲ” (ಪುಟ 30) ಎಂಬ ಮಾತು ಹಳ್ಳಿ ಮತ್ತು ನಗರಗಳ ನಡುವಿನ ಅಂತರವನ್ನು ಕೆಲವೇ ಮಾತುಗಳಲ್ಲಿ ಹೇಳುತ್ತಿದ್ದರೂ ನಿರಂಜನರು ಹಳ್ಳಿಯ ಬದುಕನ್ನು ವಿಜೃಂಭಿಸಿ ಬರೆಯುವುದಿಲ್ಲ. ಜಾತಿ ಮತ ಅಂತಸ್ತುಗಳನ್ನು ಮೀರಿದ ಅಜ್ಜಿ, ಅಮೀರ್- ಶೀಲಾ ದಂಪತಿ, ಮದರಾಸಿನ ಸೂಳೆಯ ಗುಹ್ಯರೋಗಗಳಿಗೆ ಚಿಕಿತ್ಸೆಯನ್ನು ಮಾಡಿ ಆಕೆಯನ್ನೇ ಮದುವೆಯಾದ ಚಲಂ, ಶ್ರೀಕಂಠ ಮುಂತಾದವರಿಂದ ದೊರಕುವ ಮಾನವೀಯ ಪ್ರೇಮದ ಸವಿ, ಗೆಳೆತನದ ಸಂಬಂಧಗಳು ನಗರವನ್ನು ನಕಾರಾತ್ಮಕವಾಗಿ ಗ್ರಹಿಸುವುದನ್ನು ತಪ್ಪಿಸುತ್ತವೆ. ಜೇಬುಗಳ್ಳ ಅಮೀರನು ಚಂದ್ರಶೇಖರನಿಗೆ ನೂರು ರೂಪಾಯಿಗಳನ್ನು ಕೊಡುವಾಗ ತನ್ನ ತಂದೆಯ ಔಷಧಿಗೆ ಅಗತ್ಯವಿದ್ದ ನೂರು ರೂಪಾಯಿಯನ್ನು ಕೊಡದೆ ಬರೇ ಎರಡು ರೂಪಾಯಿಯನ್ನು ಕೊಟ್ಟ ರಾಮಸ್ವಾಮಿಯನ್ನು ನೆನೆಯುತ್ತಾನೆ. ಒಳ್ಳೆಯವರೆನಿಸಿಕೊಂಡವರ ಕೆಟ್ಟ ಮುಖ ಮತ್ತುಕೆಟ್ಟವರೆನಿಸಿಕೊಂಡವರ ಒಳ್ಳೆಯ ಮುಖವನ್ನು ಕಾರ್ಯ ಕಾರಣ ಸಂಬಂಧದ ಹಿನ್ನೆಲೆಯಲ್ಲಿ ನೋಡುವ ಪ್ರಯತ್ನ, ಸಮಾಜ ಸುಧಾರಕನಾಗಬೇಕಾದವನು ಸಮಾಜಕಂಟಕನಾಗುವುದಕ್ಕೆ ವ್ಯವಸ್ಥೆಯ ದೌರ್ಜನ್ಯವೇ ಕಾರಣ ಎಂಬ ದನಿ ಇಲ್ಲಿದೆ. ಬಾಲ್ಯದಲ್ಲಿ ಜೇಬು ಕತ್ತರಿಸದಿದ್ದರೂ ಆ ಅಪವಾದಕ್ಕೆ ಒಳಗಾಗಿದ್ದವನು ಕ್ರಮೇಣ ಜೇಬುಗಳ್ಳನಾಗುವ, ಒಂದು ಕಾಲದಲ್ಲಿ ಹತ್ತಿಯನ್ನು ಹಿಂಜುತ್ತಿದ್ದವನ ಮಗನು ಅಂಥ ಕಾರ್ಖಾನೆಯ ಒಡೆಯನ ಆಪ್ತ ಕಾರ್ಯದರ್ಶಿಯಾಗುವ ವಿಪರ್ಯಾಸಗಳನ್ನು ವ್ಯಂಜಿಸುತ್ತದೆ. ಚಂದ್ರಶೇಖರ ಮತ್ತು ಸೂಳೆಯ ಲೈಂಗಿಕ ಮುಖಾಮುಖಿಗೆ ಗೆಳೆಯನ ಮನೆಯ ಆವರಣ ಚೌಕಟ್ಟನ್ನು ಒದಗಿಸುತ್ತದೆ. ಜಾತಿ, ಸಂಸ್ಕಾರ, ಸಾಮಾಜಿಕ ಸ್ತರ, ನೀತಿ ನಿಯಮಗಳು ಯಾವ ವಿಷಯಗಳಲ್ಲೂ ಸಮಾನತೆಯಿಲ್ಲದ ಇವರಿಬ್ಬರ ನಡುವೆ ನಡೆಯುವ ಸಂಬಂಧ ಕೇವಲ ಲೈಂಗಿಕವಾಗಿದ್ದು ಅದಕ್ಕೆ ಯಾವುದೇ ರೀತಿಯ ಹಿಂದು ಮುಂದುಗಳಿಲ್ಲ. ಒಂದು ಹೆಣ್ಣು ಒಂದು ಗಂಡು. ಅದಕ್ಕಿಂತ ಹೆಚ್ಚೇನಿದೆ ಎಂಬ ಭಾವವನ್ನು ಇಲ್ಲಿ ಕಾಣಬಹುದು. ಸೂಳೆಯು ತನ್ನ ವೃತ್ತಿಧರ್ಮಕ್ಕೆ ಅನುಗುಣವಾಗಿ ತನ್ನನ್ನು ತಾನು ತೆರೆದುಕೊಂಡರೆ ಚಂದ್ರಶೇಖರನಿಗೆ ಅವಳನ್ನು ಕೂಡುವ ಮೊದಲು ಕುತೂಹಲ, ಭಯ, ಅಪರಾಧಿ ಪ್ರಜ್ಞೆ, ವ್ಯಥೆ, ಭಗ್ನಪ್ರೇಮದಿಂದ ಹುಟ್ಟಿದ ನೋವು, ತಾರುಣ್ಯದ ಬಯಕೆಗಳು ತಾಕಲಾಡುತ್ತವೆ. ಅನುಭವವು ಅವನಿಗೆ ತೃಪ್ತಿಯನ್ನು ಕೊಟ್ಟರೂ ಅವನಿಂದ ಹಣ ಪಡೆದ ಸೂಳೆಯು ‘ಇದರ ಅರ್ಧವನ್ನು ಅವರು (ಸೂಳೆಮನೆಯ ಒಡತಿ) ಇಸಿದುಕೊಳ್ಳುತ್ತಾರೆ’ ಎಂದಾಗ ಪ್ರೀತಿಯು ಅನುಕಂಪವಾಗುತ್ತದೆ. ರಮ್ಯಭಾವದ ಬದಲು ಸುಲಿಗೆ ಶೋಷಣೆಗಳ ಪರಿಕಲ್ಪನೆಯು ತಲೆಯೆತ್ತಿಕೊಳ್ಳುತ್ತದೆ. ಸಾಮಾಜಿಕ ಕಷ್ಟಗಳಿಗೆ ಸಿಲುಕಿದ ಯುವಕನ ಮಾನಸಿಕ ನೈತಿಕ ಗೊಂದಲ ಮತ್ತು ಯಾತನೆಗಳು ಚಂದ್ರಶೇಖರನ ಪ್ರಜ್ಞೆಯ ಮೂಲಕ ತಲುಪುವುದು ಇಲ್ಲಿನ ವಿಶೇಷತೆಯಾಗಿದೆ. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬ ಪರಿಸ್ಥಿತಿ ಆತನದ್ದು. ಜೇಬುಗಳ್ಳನಾಗಿದ್ದು ಹಣವನ್ನು ಲಪಟಾಯಿಸುವಾಗ, ಶಾರದೆಯು ಸೆಳೆಯುವಾಗ ಪಾಪಪ್ರಜ್ಞೆ ಕಾಡಿದರೆ ವನಜಳ ಪ್ರೀತಿಯನ್ನು ಅನುಭವಿಸುವ ಬದಲು ತನ್ನ ನಿಜಬಣ್ಣ ಆಕೆಗೆ ತಿಳಿದರೆ ಏನಾಗುವುದೋ ಎಂಬ ಭೀತಿಯು ಆವರಿಸುತ್ತದೆ. ಹೆಜ್ಜೆ ಹೆಜ್ಜೆಗೂ ಮೇಲೇರುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಬದುಕುತ್ತಾ ನೈತಿಕ ಅಧಪತನದ ಜಾರುಗುಂಡಿಯಲ್ಲಿ ಕೆಳಕ್ಕೆ ಜಾರುತ್ತಿದ್ದೇನೆ ಎಂಬ ಅರಿವು ತಲೆ ತುಂಬ ತುಮುಲವನ್ನು ಎಬ್ಬಿಸುತ್ತದೆ. ಕಾರ್ಖಾನೆಯ ಮಾಲೀಕರು ಮತ್ತು ಕಾರ್ಮಿಕರ ನಡುವೆ ಹೋರಾಟ ನಡೆಯುವಾಗ ಅವನ ಮನಸ್ಸು ಕಾರ್ಮಿಕರ ಕಡೆ ತುಡಿಯುತ್ತಿದ್ದರೂ ಉಪ್ಪಿನ ಋಣವು ಶ್ರೀಕಂಠನ ಕಡೆಗೆ ಎಳೆಯುತ್ತದೆ. “ಆ ಎರಡು ಶಕ್ತಿಗಳ ನಡುವೆ ನಾನು ಎಲ್ಲಿದ್ದೆ? ದರಿದ್ರರಾದ ಆ ಕೆಲಸಗಾರರ ಪಕ್ಷ ನನ್ನದಾಗಿರಲಿಲ್ಲ. ನನ್ನ ತಂದೆ ಹಿಂದೆ ಅದೇ ಜಾತಿಗೆ ಸೇರಿದ್ದ. ಆದರೆ ನಾನು ಅಲ್ಲಿರುವುದು ಸಾಧ್ಯವಿಲ್ಲ. ಆ ಇನ್ನೊಂದು ಪಕ್ಷ? ಅದು ಶ್ರೀಕಂಠನದ್ದು. ನನ್ನದಲ್ಲ. ನಾನು ಶ್ರೀಕಂಠನ ಸ್ನೇಹಿತ ಅಷ್ಟೆ ಪರೋಪಜೀವಿ.” (ಪುಟ 261) ಬದುಕಿನಿಂದ ಸಾವಿನವರೆಗೂ ದ್ವಂದ್ವದಲ್ಲೇ ನರಳುತ್ತಾನೆ. ಮರಣವು ಅವನಿಗೆ ವಿಮೋಚನೆಯನ್ನು ನೀಡುತ್ತದೆ. ಇಲ್ಲಿ ಕತೆಯು ಇಲ್ಲದಿದ್ದರೂ ಕೃತಿಯಲ್ಲಿ ಮೂರ್ತಗೊಳ್ಳುವ ಅನುಭವಗಳು ಪ್ರತ್ಯೇಕತೆ, ಅಸ್ವಸ್ಥತೆ, ಏಕಾಕಿತನ ಮತ್ತು ಭೀತಿ ಗೊಂದಲಗಳಿಗೆ ಸಂಬಂಧಿಸಿವೆ. ಲೈಂಗಿಕತೆ ತಲೆದೋರುತ್ತಿದ್ದರೂ ನಿರಂಜನರ ಸಂವೇದನೆಯು ಅದನ್ನು ದಾಟಿ ವ್ಯಕ್ತಿಯ ಸಾಮಾಜಿಕ ಬೆಳವಣಿಗೆಯ ರಹಸ್ಯವನ್ನು ಭೇದಿಸುವತ್ತ ಕೇಂದ್ರೀಕೃತವಾಗುತ್ತದೆ. ಕಲೆಯ ದೃಷ್ಟಿಯಲ್ಲಿ ಪ್ರಾಯೋಗಿಕ ಹಂತದಲ್ಲಿರುವ ಈ ಕಾದಂಬರಿಯು ನವ್ಯ ಸಂವೇದನೆಯ ಆವಿಷ್ಕಾರದಿಂದಾಗಿ ಗಮನವನ್ನು ಸೆಳೆಯುತ್ತದೆ. ಚಂದ್ರಶೇಖರನು ಮೂಲತಃ ದುರ್ಬಲನಾಗಿರುವುದರಿಂದ ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸಲು ವಿಫಲನಾಗುತ್ತಾನೆ. ಸೂಳೆಯೊಂದಿಗೆ ಸಕ್ರಿಯನಾಗಿ ತೊಡಗಿಸಿಕೊಂಡ ಚಂದ್ರಶೇಖರನು ಶಾರದೆಯನ್ನು ಸ್ವೀಕರಿಸುವುದಿಲ್ಲ. ಏಕೆಂದರೆ ಈ ಸಂಗತಿಯು ಸಾಮಾಜಿಕ ಮತ್ತು ಭಾವನಾತ್ಮಕ ಸ್ತರಗಳಿಗೆ ಸಂಬಂಧಿಸಿವೆ. ಆಕೆಯ ಗಂಡ ಶ್ರೀಕಂಠನು ಚಂದ್ರಶೇಖರನ ಬಾಲ್ಯದ ಗೆಳೆಯನಾಗಿರುವುದರಿಂದ ಆತನು ನೈತಿಕ ಕಟ್ಟುಪಾಡುಗಳನ್ನು ಮೀರಲಾರ. ಆದರೆ ಶಾರದೆಗೆ ಈ ವಿಷಯದಲ್ಲಿ ಹೆಚ್ಚಿನ ಸ್ವಾತಂತ್ರ್ಯವಿದೆ. ಆಕೆ ಚಂದ್ರಶೇಖರನನ್ನು ಸೆಳೆದರೂ ಆತನು ಜಾರುವುದಿಲ್ಲ. ಮನಸ್ಸಿನ ಸಂದಿಗ್ಧಗಳೇ ಅವನನ್ನು ನಿಯಂತ್ರಿಸುತ್ತವೆ. ಸಮಾಜದ ಬೇರೆ ಬೇರೆ ಸ್ತರಗಳ ನೈತಿಕ ಮೌಲ್ಯಗಳಲ್ಲಿರುವ ವಿಷಮತೆಗಳನ್ನು ಚಂದ್ರಶೇಖರನ ಅನುಭವಗಳ ಆಧಾರಲ್ಲಿ ತೋರಿಸುವ ಕಾದಂಬರಿಯ ಉದ್ದೇಶದಲ್ಲಿ ಯಶಸ್ಸು ದೊರೆತಿದೆಯಾದರೂ ಬಂಧ ಸಡಿಲವಾಗಿರುವುದರಿಂದ ಕಲಾತ್ಮಕ ತೃಪ್ತಿಯನ್ನು ಕೊಡುವುದಿಲ್ಲ. ಚಂದ್ರಶೇಖರನು ತನ್ನ ಗೆಳೆಯರಾದ ಅಮೀರ-ಶೀಲಾ, ನಾರಾಯಣ-ಕಮಲಾ, ಚಲಂ-ಸಾವಿತ್ರಿಯರ ಸಂಸಾರ ಸುಖವನ್ನು ನೋಡುತ್ತಾ ತನ್ನ ವ್ಯಾಕುಲತೆಯನ್ನು ಕಡಿಮೆ ಮಾಡಲು ಬಯಸುತ್ತಾನೆ. ಆದರೆ ಶ್ರೀಕಂಠ-ಶಾರದೆಯರ ಸಂಸಾರದ ಕ್ಷುದ್ರತೆಯನ್ನು ಕಂಡು ಭ್ರಮನಿರಸನವಾಗುತ್ತದೆ. ಆದರೆ ಅವರ ಪುಟ್ಟ ಮಗ ನಾಗರಾಜನ ಒಡನಾಟದಲ್ಲಿ ಕ್ಷಣ ಹೊತ್ತು ನೆಮ್ಮದಿಯನ್ನು ಕಂಡುಕೊಳ್ಳುತ್ತಾನೆ. ಸಮಾಜದ ದೃಷ್ಟಿಯಲ್ಲಿ ಚಂದ್ರಶೇಖರನು ತಪ್ಪಿತಸ್ಥನಾದರೂ ಮುಗ್ಧ ಮಗುವಿನ ಕಣ್ಣುಗಳಲ್ಲಿ ಆತ ಒಳ್ಳೆಯವನೇ. ನಾಗರಾಜನ ಜಗತ್ತು ಸಂಪೂರ್ಣ ಭಿನ್ನವಾಗಿದೆ. ಅಲ್ಲಿ ಸ್ವಾರ್ಥ, ದುಷ್ಟತನ, ಗಡಿಬಿಡಿ, ಚಿಂತೆ, ತಲ್ಲಣಗಳಿಲ್ಲ. ‘ಮಾಮಾ’ ಎಂದು ಬಾಯ್ತುಂಬ ಕರೆಯುತ್ತಾ ಚಂದ್ರಶೇಖರನೊಡನೆ ಕಾಲವನ್ನು ಕಳೆಯುವುದರಲ್ಲಿ ಅವನಿಗೆ ದೊರಕುವ ಸುಖ, ಸಂತಸ, ವಿಸ್ಮಯ, ಮೋಜುಗಳು ಅವನ ಜಗತ್ತನ್ನು ಇಂಥ ಕ್ಷಣಗಳನ್ನು ಕಳೆದುಕೊಂಡ ಪ್ರೌಢ ಜಗತ್ತಿನಿಂದ ಬೇರ್ಪಡಿಸುತ್ತವೆ. ಪ್ರೌಢಜಗತ್ತಿನ ರಕ್ಕಸತನವನ್ನು ಒಳಗೊಳಗೆ ಅನುಭವಿಸುತ್ತಿರುವ ನಾಗರಾಜನ ಮೂಕವೇದನೆ, ಬದುಕಿನ ಅರ್ಥಹೀನ ರೂಪಗಳನ್ನು ಗಮನಿಸುತ್ತಿದ್ದಂತೆ ನಾಗರಾಜನು ಚಂದ್ರಶೇಖರನ ಜಗತ್ತಿನ ಸೂಕ್ಷ್ಮರೂಪವಾಗಿ ಕಂಡುಬರುತ್ತಾನೆ. ತಂದೆತಾಯಿಯರ ವಿರಸ ದಾಂಪತ್ಯ, ಅವರ ಕಿತ್ತಾಟದ ನಡುವೆ ಅನುಭವಕ್ಕೆ ಬರುವ ಕ್ರೌರ್ಯಗಳು ಪ್ರೌಢ ಜಗತ್ತಿನಲ್ಲಿ ವಿರಳವಲ್ಲದಿದ್ದರೂ ಇವುಗಳು ತೀರಾ ಸಾಮಾನ್ಯವೆಂಬಂತೆ ಸ್ವೀಕೃತವಾಗುತ್ತಿರುವ ದುರಂತ ವ್ಯಕ್ತವಾಗುತ್ತದೆ. ಶಾರದೆಯ ಮರಣಾನಂತರ, ಚಂದ್ರಶೇಖರ ಸೆರೆಮನೆಗೆ ಸೇರಿದ ಬಳಿಕ ಆತ ಇನ್ನಷ್ಟು ಅಂತರ್ಮುಖಿಯಾಗಿ, ಕಹಿಯನ್ನು ಅನುಭವಿಸುತ್ತಾ ಇನ್ನೊಬ್ಬ ಚಂದ್ರಶೇಖರನಾಗಿ ಬದಲಾಗುವ ದುರಂತದ ಸಾಧ್ಯತೆಗಳು ಉಳಿದು ಬಿಡುತ್ತವೆ. ಆದರೆ ಕಾದಂಬರಿಯು ಚಂದ್ರಶೇಖರನ ಮೂಲಕ ಬದುಕನ್ನು ನೋಡುವುದರಿಂದ ಅಂಶಿಕವಾಗಿ ದೊರಕುವ ನಾಗರಾಜನ ಪರಿಸ್ಥಿತಿಯು ಚಿತ್ರಣವು ನವ್ಯದ ಸಂದರ್ಭದಲ್ಲಿ ನಾಗರಾಜನಂಥ ಹುಡುಗರ ದೃಷ್ಟಿಯಿಂದ ಮೂಡಿ ವಿಸ್ತಾರವನ್ನು ಪಡೆದು ಶ್ರೀಕೃಷ್ಣ ಆಲನಹಳ್ಳಿಯವರ ‘ಕಾಡು’, ಶಾಂತಿನಾಥ ದೇಸಾಯಿಯವರ ‘ಚಂದೂ’, ‘ದಿಗ್ಭ್ರಮೆ’, ಅನಂತಮೂರ್ತಿಯವರ ‘ಘಟಶ್ರಾದ್ಧ’, ಕೆ. ಸದಾಶಿವರ ‘ರಾಮನ ಸವಾರಿ ಸಂತೆಗೆ ಹೋದದ್ದು’ ಮುಂತಾದ ರಚನೆಗಳ ಮೂಲಕ ಬದುಕಿನ ಭಯಾನಕತೆಯನ್ನು ಅನುಭವಕ್ಕೆ ತರುತ್ತದೆ. ಮಾನವನ ಸೋಲಿನ ವೈಫಲ್ಯದ ತಟಸ್ಥ ಸ್ವೀಕೃತಿಯಲ್ಲಿ ಕೊನೆಗೊಳ್ಳುವ ಕಾದಂಬರಿಯಲ್ಲಿ ಚಂದ್ರಶೇಖರನ ಮನಃಪರಿವರ್ತನೆಯಿಲ್ಲ. ವಾಸ್ತವದ ನೆಲೆಯಲ್ಲಿ ಖಚಿತವಾದ ಸಾಮಾಜಿಕ ಹಾಗೂ ಸಾಂಸ್ಕøತಿಕ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳ ಸನ್ನಿವೇಶವನ್ನು ಸೃಷ್ಟಿಸುವ ಕಾದಂಬರಿಯು ಆಧುನಿಕ ಮೌಲ್ಯಗಳನ್ನು ಪರೀಕ್ಷೆಗೆ ಒಡ್ಡುತ್ತದೆ. ಬದುಕುವ ಆಸೆಯು ಚಂದ್ರಶೇಖರನ ಮಾನವೀಯತೆಯನ್ನು ಕುಗ್ಗಿಸಿದರೆ ಬಾಳುವೆಯ ಕಾವು ನೋವುಗಳು ಆತನನ್ನು ಕಟುವಾಗಿಸುತ್ತವೆ. ಸಮಾಜದ ದುರಂತ ಕಥನವು ಚಂದ್ರಶೇಖರನ ನಿವೇದನೆಯ ರೂಪದಲ್ಲಿ ಒದುಗರನ್ನು ತಲುಪುವುದು ಈ ಕಾದಂಬರಿಯ ವಿಶೇಷತೆಯಾಗಿದೆ. ಅವನ ಅನುಭವವನ್ನು ಸಾಮಾಜಿಕ ನ್ಯಾಯ-ಅನ್ಯಾಯ, ನೈತಿಕ ಪಾಪ ಪುಣ್ಯಗಳ ಭಿತ್ತಿಯಲ್ಲಿ ವಿವರಿಸಲಾಗಿದೆ. ಅವನ ಸೋಲಿಗೆ ರಾಜಕೀಯವಲ್ಲದ ವೈಯಕ್ತಿಕ ಕಾರಣಗಳೂ ಇವೆ. ಆತ್ಮವಂಚನೆಯ ಭಯವಿದೆ. ಶಿಕ್ಷಣವು ಮೊಟಕುಗೊಂಡ ವಿಷಾದವಿದೆ. ಆತ್ಮವಂಚನೆಯ ಭಯವಿದೆ. ಏನನ್ನು ಸಾಧಿಸಬೇಕೆಂದುಕೊಂಡಿದ್ದನೋ ಅದನ್ನು ಸಾಧಿಸಲಾಗದ ಹತಾಶೆಯಿದೆ. ಶೋಷಣೆಯು ಈ ಕಾದಂಬರಿಯ ಪ್ರಧಾನ ವಸ್ತುವಾಗಿದೆ. ಆದರೆ ಶೋಷಣೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸೋಲುವ ಕಾದಂಬರಿಗಳೇ ಹೆಚ್ಚು. ಶೋಷಣೆಯು ಕೃತಿಯ ಪ್ರಧಾನ ವಸ್ತು ಆಗಿರಬೇಕೆಂಬ ಸಿದ್ದಾಂತಕ್ಕೆ ಬದ್ಧವಾಗಿರುವ ಕಾದಂಬರಿಯಲ್ಲಿ ಏಕತಾನತೆಯೂ ಅಸಹಜ ಕಲ್ಪನೆಗಳೂ ಅಂತಸತ್ವವಿಲ್ಲದ ಪಾತ್ರ ಚಿತ್ರಣಗಳೂ ಉದ್ವಿಗ್ನತೆಯಿಂದ ಕೂಡಿದ ನಿರೂಪಣೆಯೂ ಅತಿಭಾವುಕತೆಯೂ ತಲೆ ಹಾಕಿ ಕೃತಿ ಸೊರಗುವುದಿದೆ. ಇದರಲ್ಲಿ ಏಕತಾನತೆಯಿದ್ದರೂ ದುಃಖಿತರ ಬಗೆಗಿನ ಕಳಕಳಿ, ಕ್ಷುಲ್ಲಕತೆಯನ್ನು ಮೀರಬಲ್ಲ ಔದಾರ್ಯ, ಅಸುರಿ ಶಕ್ತಿಗಳನ್ನು ಎದುರಿಸಬಲ್ಲ ಧೈರ್ಯ, ಆಶಾವಾದ ಮತ್ತು ಪ್ರಗತಿಯ ಹಂಬಲಗಳನ್ನು ಪೂರೈಸಲಾಗದಿರುವ ನಿರಾಶೆಯು ಇಲ್ಲಿ ಮುಖ್ಯವಾಗುತ್ತದೆ. ಇತರ ಪ್ರಗತಿಶೀಲ ಲೇಖಕರ ಬರವಣಿಗೆಗೆ ಹೋಲಿಸಿದರೆ ನಿರಂಜನರ ಕಾದಂಬರಿಯು ತೋರುವ ಸಂಯಮವು ಅನನ್ಯವಾಗಿದೆ. ಕಾದಂಬರಿಯು ಬಹುಮಟ್ಟಿಗೆ ಘಟನೆಗಳನ್ನು ಅವಲಂಬಿಸಿದ್ದು ಅದರಲ್ಲಿ ಅನವಶ್ಯಕ ವ್ಯಾಖ್ಯಾನ ಮತ್ತು ಭಾವಾಡಂಬರಗಳನ್ನು ಕಾಣಲಾರೆವು. ನಿರಂಜನರ ಇತರ ಕಾದಂಬರಿಗಳಲ್ಲಿ ಕಂಡುಬರುವ ವರ್ಗಪ್ರಜ್ಞೆ ಮತ್ತು ರಾಜಕೀಯ ತಿಳಿವು ಇಲ್ಲಿ ಗಾಢವಾಗಿಲ್ಲ. ವ್ಯಾಸರಾಯ ಬಲ್ಲಾಳರ ‘ಬಂಡಾಯ’ ಕಾದಂಬರಿಯಲ್ಲಿಯೂ ಕಾರ್ಖಾನೆಯ ಮಾಲೀಕರು ಮತ್ತು ಕಾರ್ಮಿಕ ಸಂಘಟನೆಯ ನಡುವಿನ ತಿಕ್ಕಾಟವು ರಾಜಕೀಯ ಸನ್ನಿವೇಶದ ಅಂಗವಾಗಿ ಬರುತ್ತದೆ. ಆಳುವವರ ಮತ್ತು ಆಳಿಸಿಕೊಳ್ಳುವವರ ವರ್ಗಗಳಿಂದಾಗಿ ಹುಟ್ಟುವ ಸಮಸ್ಯೆಗಳಿಗೆ ನಗರವೇ ಕೇಂದ್ರವಾಗುತ್ತದೆ. ಈ ಸಮಸ್ಯೆಯನ್ನು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ನೋಡಲು ಸಾಧ್ಯವಿದೆ. ಈ ಮೂರು ಕಾರಣಗಳಿಂದಾಗಿ ಹುಟ್ಟಿಕೊಳ್ಳುವ ಸಂಘರ್ಷವು ನಗರ ಕೇಂದ್ರಿತ ಆಲಯಗಳ ಒಳಹೊರಗುಗಳನ್ನು ಪೋಷಿಸಿಕೊಂಡು ಬರುವ ರೀತಿಯನ್ನು ಸಮರ್ಥವಾಗಿ ಚಿತ್ರಿಸುವ ‘ಬಂಡಾಯ’ದಲ್ಲಿ ಶರ್ಮ ಮತ್ತು ಸತೀಶರ ಕಾರ್ಖಾನೆಗಳು ಹುಟ್ಟುತ್ತಾ ಇರುತ್ತವೆ. ಅವುಗಳಿಗೆ ಹಣದ ಬಲವಿದೆ. ವ್ಯವಸ್ಥೆಯ ವ್ಯೂಹಗಳು ರಚನೆಗೊಳ್ಳುತ್ತಾ ಹೋಗುತ್ತವೆ. ತಮ್ಮದಲ್ಲದ ವ್ಯವಸ್ಥೆಗೆ ಲಕ್ಷಗಟ್ಟಲೆ ಕಾರ್ಮಿಕರು ಬೆವರು ಸುರಿಸುತ್ತಾರೆ. ಬೆವರಿಗೆ ಬೆಲೆ ಕೊಡುತ್ತೇವೆ ಎಂದು ನೆತ್ತರು ಹೀರುವ ವ್ಯವಸ್ಥೆಯ ವಿರುದ್ಧ ದನಿ ಎತ್ತಲು ಸಂಘಗಳು ತಲೆ ಎತ್ತುತ್ತವೆ. ರಾಜೀವನಿಗೆ ದೇಶಪಾಂಡೆಯು ಪ್ರತಿಸ್ಪರ್ಧಿಯಾಗುತ್ತಾನೆ. ಇಂಥ ನಾಯಕರನ್ನು ಎತ್ತಿ ಕಟ್ಟಲು ಮರಿನಾಯಕರು ಹುಟ್ಟಿಕೊಳ್ಳುತ್ತಾರೆ. ಮಾಲೀಕ, ಶ್ರಮಿಕ, ನಾಯಕ ಹೀಗೆ ಸುತ್ತಿಕೊಳ್ಳುತ್ತಾ ಸಂಕೀರ್ಣವಾಗುತ್ತಾ ಹೋಗುತ್ತವೆ. ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸಿಡಿದು ಬಂದು ಶ್ರಮಿಕ ನಾಯಕನಾಗಿ ಹೋರಾಡುವ ರಾಜೀವನಿಗೆ ಮಾಲೀಕರ ವಂಚನೆ, ದಬ್ಬಾಳಿಕೆ, ಒಡೆದು ಒಂದಾಗಿ ಕಾರ್ಮಿಕರಿಗೆ ನಾಳೆಯ ಆಸೆಗಳನ್ನು ನೀಡುತ್ತಾ ಅವರ ಬದುಕಿನ ಬಗ್ಗೆ ಚೆಲ್ಲಾಟವಾಡುವ ನಾಯಕರ ಸ್ವಾರ್ಥ ಮನವರಿಕೆಯಾಗುತ್ತಿದ್ದಂತೆ ತಾನು ವ್ಯವಸ್ಥೆಯ ನಡುವೆ ಅಸಹಾಯಕನಾಗಿರುವ ವಿಚಾರವು ರಾಜೀವನಿಗೆ ತಿಳಿಯುತ್ತದೆ. ನಗರ ಒಡ್ಡುವ ಸವಾಲು, ಭ್ರಮೆ ಮತ್ತು ವಾಸ್ತವದ ಚಿತ್ರಣಗಳನ್ನು ಇಲ್ಲಿ ಕಾಣಲು ಸಾಧ್ಯ. ಹಣ ಮತ್ತು ಅಧಿಕಾರಬಲದ ಮುಂದೆ ಜನರ ಶಕ್ತಿಯನ್ನು ದುರ್ಬಲಗೊಳಿಸುವ ಸತೀಶ-ಶರ್ಮರಂಥ ಹಿತಾಸಕ್ತಿಗಳು, ಸ್ವಾರ್ಥಕ್ಕಾಗಿ, ಸ್ಥಾನಕ್ಕಾಗಿ ಶ್ರಮಿಕರ ಹೆಸರಿನಲ್ಲಿ ಬೆಳೆದು ನಿಲ್ಲಲು ಯತ್ನಿಸುವ ದೇಶಪಾಂಡೆಯ ನಾಯಕತ್ವ, ಎರಡೂ ಕಡೆ ದಾಳವಾಗಿ ಉಳಿಯುವ ಜನ ಈ ಎರಡು ಶಕ್ತಿಗಳಲ್ಲಿ ಬಂಡಾಯ ಕೇಂದ್ರೀಕೃತವಾಗಬೇಕೆ ಅಥವಾ ಜನಸಾಮಾನ್ಯರಿಂದ ಹುಟ್ಟಿ ಬರಬೇಕೆ ಎಂಬುದು ಇವತ್ತಿನ ತುರ್ತು ಅಗತ್ಯವಾಗಿದೆ. ಈ ಎರಡೂ ಕೃತಿಗಳನ್ನು ಹೋಲಿಸಿದರೆ ಕನ್ನಡ ಕಾದಂಬರಿ ಪರಂಪರೆಯು ಕ್ರಮಿಸಿದ ಹಾದಿಯ ಕಲ್ಪನೆಯು ಮೂಡುತ್ತದೆ. ರೋಷವನ್ನು ನೇರವಾಗಿ ವ್ಯಕ್ತಗೊಳಿಸದ, ಘೋಷಣ ವಾಕ್ಯಗಳ ಮಾದರಿಯ ಬರಹಗಳ ಹಂಗನ್ನು ತೊರೆದ ‘ವಿಮೋಚನೆ’ಯ ಮೂಲಕ ಕ್ಷುದ್ರ ಸಮಾಜದ ಸ್ವರೂಪವು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಕೆಲವೇ ವಿವರಗಳಲ್ಲಿ ಇಡೀ ವ್ಯವಸ್ಥೆಯೂ, ಅದರ ಭಾಗವಾಗಿರುವವರ ದೃಷ್ಟಿಕೋನಗಳೂ ವ್ಯಕ್ತವಾಗುತ್ತವೆ. ವ್ಯವಸ್ಥೆಯು ಚಂದ್ರಶೇಖರನ ಮನಸ್ಸನ್ನು ಹೇಗೆ ರೂಪಿಸಿದೆ ಎಂಬುದನ್ನು ಈ ಸಹಜ ನಡೆಯು ತೋರಿಸುತ್ತದೆ. ಆತನು ಕಟುಕನಲ್ಲ. ಅವನ ಮೂಲಕ ಕೃತಿಯ ವೈಚಾರಿಕತೆಯು ನಿರಾಡಂಬರವಾಗಿ ಪ್ರಕಟವಾಗುತ್ತದೆ. ತಮ್ಮ ಆಸ್ತಿಯನ್ನು ಕಾಪಾಡಿಕೊಳ್ಳುವವರ ಸಮರ್ಥನೆಯ ಮುಸುಕನ್ನು ಎಳೆದು ಹಾಕುತ್ತದೆ. ಮನುಷ್ಯರ ನಡುವಿನ ಸಹಾನುಭೂತಿಯ ಬಾಂಧವ್ಯವು ವ್ಯವಸ್ಥೆಯಲ್ಲಿ ವಿಕಾರಗೊಂಡ ಬಗೆಯನ್ನು ಕಾಣುತ್ತೇವೆ. ತಪ್ಪಿತಸ್ಥರನ್ನು ಶಿಕ್ಷಿಸದೆ ನಿರಪರಾಧಿಯüನ್ನು ಅಪರಾಧಿಯನ್ನಾಗಿಸುವ, ದೀನ ದುರ್ಬಲರಿಗೆ ರಕ್ಷಣೆಯನ್ನು ನೀಡದ ವ್ಯವಸ್ಥೆಯ ಭಯಾನಕ ಸ್ವರೂಪದ ದರ್ಶನವಾಗುತ್ತದೆ. ಅವ್ಯವಸ್ಥೆಯ ಸಾಧನವಾದ ಒಂದರ ಮೇಲೆ ಒಂದರಂತೆ ಘಟನೆಗಳಿಂದ ಕಾದಂಬರಿಯು ವಾಸ್ತವದ ಹಾದಿಯಲ್ಲಿ ಚಲಿಸುತ್ತಾ ಸಂಕೀರ್ಣವಾದ ಅನುಭವವನ್ನು ನೀಡುತ್ತದೆ. ಸಾಮ್ರಾಜ್ಯ ಶಾಹಿತ್ವವು ಶೋಷಣೆಯ ಹಲವು ಮುಖಗಳ ಮೂಲಕ ಸಮಾಜದ ಸಂಪತ್ತು ಮತ್ತು ನೆಮ್ಮದಿಯನ್ನು ಕಬಳಿಸುವ, ಹಳ್ಳಿ ನಗರಗಳೆಂಬ ಭೇದವಿಲ್ಲದೆ ಮುದುಕರ ಮತ್ತು ಎಳೆಯರ ಬಾಳಿನ ಬೆಂಕಿಯಾಗಿ ಸುಡುವ ವಿದ್ಯಮಾನಗಳನ್ನು ಮನಗಾಣಿಸುವ ಕಾದಂಬರಿಯು ಸಮಾಜದಲ್ಲಿ ಅಂತರ್ಗತವಾದ ಶೋಷಣೆ, ಹಿಂಸೆಗಳು ಜನಸಾಮಾನ್ಯನ ಬದುಕಿನಲ್ಲಿ ಹಾಸುಹೊಕ್ಕು ಅವರ ಮನೆ, ಹೆಂಗಸರು, ಮಕ್ಕಳು, ಮುದುಕರ ಬಾಳನ್ನು ತಿರುಚುವ ರೀತಿಯನ್ನು ಚಿತ್ರಿಸುತ್ತಾ, ಸರಕಾರವೇ ಹಿಂಸೆ ಅನ್ಯಾಯಗಳ ಮೇಲೆ ನಿಂತಿರುವ ಬಗೆಯನ್ನು ಪ್ರಕಟಿಸುತ್ತದೆ. ಸಿದ್ಧಾಂತವು ಬದುಕಿನ ಸತ್ವವಾಗಿ ಕಾಣಿಸಿಕೊಳ್ಳುವ ಈ ಕೃತಿಯು ಶೋಷಣೆ, ಕ್ರೌರ್ಯ, ಹಿಂಸೆಗಳ ಪ್ರಾಬಲ್ಯವನ್ನು ನಿಷ್ಠುರವಾಗಿ ಚಿತ್ರಿಸುತ್ತಿದ್ದರೂ ಬದುಕಿನ ಭರವಸೆ ಮತ್ತು ಶೋಷಿತರ ಹೋರಾಟದ ಗೆಲುವಿನ ಮೇಲಿರುವ ನಂಬಿಕೆಯನ್ನು ಪ್ರತಿಪಾದಿಸದೆ ನಿರಾಶೆಯನ್ನು ಧ್ವನಿಸುತ್ತದೆ. ಚಿಕ್ಕಪುಟ್ಟ ವಾಕ್ಯಗಳ ಮೂಲಕ ಸ್ಪಷ್ಟವಾದ, ಮೂರ್ತ ವಿವರಗಳಿಂದ ಕೂಡಿದ, ಭಾವತೀಕ್ಷಣತೆಯಿಂದ ಶಕ್ತಿಯನ್ನು ಪಡೆಯುವ ಶೈಲಿ, ವೇಗವಾಗಿ ಸಾಗುವ ಕ್ರಿಯೆ, ಬಾಣವು ಗುರಿಯನ್ನು ಮುಟ್ಟುವಂತೆ ಪರಿಣಾಮವನ್ನು ಸಾಧಿಸುವ ಕಲೆಗಾರಿಕೆಯನ್ನು ಹೊಂದಿದ ಕೃತಿಯು ಪ್ರಗತಿಶೀಲ ಪಂಥದ ರಚನೆಯಾದರೂ ಒಡಲಲ್ಲಿ ನವ್ಯ ಸಂವೇದನೆಯನ್ನು ಒಳಗೊಂಡಿರುವುದರಿಂದ ಕನ್ನಡ ಕಾದಂಬರಿಗಳ ಪೈಕಿ ವಿಶಿಷ್ಟವೆನಿಸಿಕೊಳ್ಳುತ್ತದೆ.
ನಿರಂಜನರ ‘ವಿಮೋಚನೆ’
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ 'ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ' ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
All Posts
2 thoughts on “ನಿರಂಜನರ ‘ವಿಮೋಚನೆ’”
ಬಹಳ ಸುಂದರ ವಿಶ್ಲೇಷಣೆ. ನಿರಂಜನರಂಥ ಗಟ್ಟಿ ಅನುಭವಗಳ ಸಂವೇದನಾಶೀಲ ಲೇಖಕರ ಕಾದಂಬರಿಯನ್ನು ಇಂಚಿಂಚಾಗಿ ವಿಶ್ಲೇಷಿಸಿದ್ದಾರೆ.
ಪ್ರೋತ್ಸಾಹಕರ ಮಾತುಗಳನ್ನು ಹೇಳಿದ ನಿಮಗೆ ಧನ್ಯವಾದಗಳು.