ಈ ' ಸ್ಟಾರ್ಟ್ ಅಪ್ ' ಕಾಲದಲ್ಲಿ ಪಾದಯಾತ್ರೆ ಮಾಡೋದು ಅಂದರೆ ಸಾಮಾನ್ಯ ವಿಷಯವಲ್ಲ. ಆದರೆ ಈಗಲೂ ತಿರುಪತಿ, ಶ್ರೀಶೈಲ, ಶಿರಡಿ, ಮಂತ್ರಾಲಯ ಇತ್ಯಾದಿ ಪುಣ್ಯಕ್ಷೇತ್ರಗಳಿಗೆ ಹೋಗುವ ಭಕ್ತಾದಿಗಳು ನಿರ್ಧಿಷ್ಟ ತಂಡದೊಂದಿಗೆ ಪಾದಯಾತ್ರೆ ಮಾಡುವದನ್ನು ರಸ್ತೆಗಳಲ್ಲಿ ನೋಡಬಹುದು. ಅವರಿಗಿಂತ ಮುಂಚಿತವಾಗಿ ಒಂದು ವ್ಯಾನ್ ಅಥವಾ ಜೀಪಿನಲ್ಲಿ, ವ್ಯವಸ್ಥಾಪಕರು ಮತ್ತು ಬಾಣಸಿಗರು ಮುಂದೆ ಹೋಗಿ ಪಾದಯಾತ್ರೆ ಮಾಡುವವರನ್ನು ನಿರ್ದಿಷ್ಟ ಸ್ಥಳ ತಲುಪುವ ಮುನ್ನ ಅವರಿಗಾಗಿ ತಿಂಡಿ, ಭೋಜನ ಹಾಗೂ ವಸತಿ (ಗುಡಿ ಗುಂಡಾರಗಳಲ್ಲಿ...) ಏರ್ಪಾಡು ಮಾಡುವರು. ಈ ಪಾದಯಾತ್ರೆ... ದೇವರ ಮೇಲಿನ ಭಕ್ತಿಗಾಗಿ... ಅನುಗ್ರಹಕ್ಕಾಗಿ... ಮುಕ್ತಿಗಾಗಿ. ಇನ್ನೊಂದು ತರಹದ ಪಾದ ಯಾತ್ರೆ ಬದುಕುವುದಕ್ಕಾಗಿ. ಇದು ಅಧಿಕಾರವಿಲ್ಲದೆ ಬದುಕಲಾಗದವರಿಗಾಗಿ... ಸಾಮಾನ್ಯವಾಗಿ ಇಂತಹ ಪಾದ ಯಾತ್ರೆಗಳು ಚುನಾವಣೆ ಇನ್ನು ಒಂದು ವರ್ಷವಿದೆ ಎನ್ನುವಾಗ ಶುರುವಾಗುತ್ತವೆ. ಕಾಲಿಗೆ ಕೆಸರು ಅಂಟಬಾರದೆಂದು 'ಬಾಟಾ ವಾಕಿಂಗ್ ಕ್ಯಾನ್ವಾಸ್' ಶೂಗಳನ್ನು ಹಾಕಿಕೊಂಡು ಇಂತಹ ಪಾದಯಾತ್ರೆ ಆರಂಭಿಸುವರು. ಕೆಲವರು ತಮ್ಮ ಸ್ವಂತ ಕ್ಷೇತ್ರದಿಂದ ಶುರು ಮಾಡಿದರೆ ಮತ್ತೆ ಹಲವಾರು ತಮ್ಮ ಮನೆ ದೇವರು ಇರುವ ದೇವಸ್ಥಾನಗಳಿಂದ ಆರಂಭಿಸುತ್ತಾರೆ ಈ ಪಾದ ಯಾತ್ರೆಯನ್ನು. 'ಜನ ನಾಯಕ' ಗುಂಡಣ್ಣ ಇದಕ್ಕೆ ಹೊರತಲ್ಲ. 'ಉಸಿರು ಗಟ್ಟಿಸುವ ವಾತಾವರಣ' ಇರುವ ಪಕ್ಷದಿಂದ ಜಂಪ್ ಮಾಡಿ ನಿರಾಳವಾಗಿ ' ಉಸಿರಾಡಲು ಅನುಕೂಲವಾಗುವ ಮತ್ತು ಹೆಚ್ಚು ಆಮ್ಲಜನಕ (ದುಡ್ಡಿನ ಆಕ್ಸಿಜನ್!) ದೊರಕುವ ಮತ್ತೊಂದು ರಾಜಕೀಯ ಪಕ್ಷದಿಂದ ಕಳೆದ ಬಾರಿ ನಿಂತು ಘೋರ ಸೋಲನ್ನಪ್ಪಿದ (ಇದು ಪ್ರಜ್ಞಾವಂತ ಮತದಾರರಿಗೆ ಸಂದ ವಿಜಯ!) ಗುಂಡಣ್ಣ. ಈ ಬಾರಿ ರಾಷ್ಟ್ರವ್ಯಾಪಿ ರಾಜಕೀಯ ಪಕ್ಷಗಳ ತಂಟೆ ಬೇಡವೆಂದು ಸ್ವತಂತ್ರವಾಗಿ (ತನ್ನ ಕಾಲ ಮೇಲೆ ತಾನು ನಿಲ್ಲುವ ಯೋಜನೆ ಹಾಕಿಕೊಂಡು) ಬರುವ ಚುನಾವಣೆಯಲ್ಲಿ ಸ್ಪರ್ಧಿಸ ಬೇಕೆಂದು ಗುಂಡಣ್ಣನ ಮಾಸ್ಟರ್ ಪ್ಲಾನ್. ಅದಕ್ಕಾಗಿ ಹಮ್ಮಿಕೊಂಡದ್ದು ಈ ಬೃಹತ್ ಪಾದಯಾತ್ರೆ! ಜನರನ್ನು ಮುಖ್ಯವಾಗಿ ಮಾನ್ಯ ಮತದಾರರನ್ನು ಮೋಡಿ ಮಾಡಿ ಸೆಳೆಯಲು ರೂಪಿಸಿದ ಯೋಜನೆಯೇ 'ನಿಮ್ಮ ಮನೆ ಮಗ - ನಿಮ್ಮ ಮನೆ ಬಾಗಿಲ ಮುಂದೆ!' (ಪಾದ ಯಾತ್ರೆಯ ಇನ್ನೊಂದು ಹೊಸ ಹೆಸರು). ಒಂದೊಮ್ಮೆ ಗೆದ್ದಾಗ ಕೊಟ್ಟ ಭರವಸೆಗಳನ್ನು ಆಚರಣೆಯಲ್ಲಿ ತರಲು ಭಾರೀ ವಿಫಲನಾದ ಗುಂಡಣ್ಣ ಈಗ ಮೇಲಿನ ಪ್ಲಾನ್ ರೂಪಿಸಿದ. ಅಲ್ಲದೇ 'ನನ್ನ ನಡೆ ಜನರತ್ತ...' ಎನ್ನುವ ಮತ್ತೊಂದು ಜನಾಕರ್ಷಕ ಸ್ಲೋಗನ್ ನೊಂದಿಗೆ ಒಂದಿಷ್ಟು ಬೆಂಬಲಿಗರ ಮತ್ತು ಅಭಿಮಾನಿಗಳ (ಹಣ ಪಡೆದು ಸೇವೆಗೆ ಸಿದ್ಧರಾದ!) ಪಡೆಯನ್ನು ಕಟ್ಟಿಕೊಂಡು ತನ್ನ ವಿಧಾನ ಸಭಾ ಕ್ಷೇತ್ರದಾದ್ಯಂತ ಪ್ರದಕ್ಷಿಣೆಯನ್ನು ಹಾಕುವ ಏಕ ಮೇವ ಗುರಿಯನ್ನು ಇಟ್ಟುಕೊಂಡು ಪಾದಯಾತ್ರೆ ಆರಂಭಿಸಿದ ಗುಂಡಣ್ಣ. ಈಗ ಗುಂಡಣ್ಣನಿಗೆ ಗುಡಿಸಲುಗಳು ದೇವಸ್ಥಾನಗಳಂತೆ ಮತ್ತು ಸ್ಲಮ್ ಏರಿಯಾಗಳು ದೇವಸ್ಥಾನದ ಒಳ ಆವರಣದಂತೆ ಕಂಡು ಬಂದವು. ಇನ್ನೂ ಮತದಾರರೋ ಸಾಕ್ಷಾತ್ 'ದೇವರ' ರೂಪದಲ್ಲಿ ಎದುರಾದರು. ಅವರೆಲ್ಲರಿಗೆ ದಾರಿಯುದ್ದಕ್ಕೂ ಭಕ್ತಿಯಿಂದ ನಮಸ್ಕಾರ ಮಾಡುತ್ತಾ ಅಳುತ್ತಿದ್ದವರನ್ನು ಕಂಡು 'ಸಂತೈಸಿ' ಸಮಾಧಾನ ಹೇಳಿದ. ಇನ್ನು ಸಿಂಬಳ ಸುರಿಸುವ ಪುಟ್ಟ ಮಕ್ಕಳನ್ನು ಆತ್ಮೀಯವಾಗಿ ಎತ್ತಿಕೊಂಡು ತನ್ನ ಸ್ವಂತ ಕರವಸ್ತ್ರದಿಂದ ಅವರ ಮೂಗು ಒರೆಸಿದ. ಕುರುಡರ ಕೈ ಮತ್ತು ಕೋಲು ಹಿಡಿದು ಅವರು ಬೇಡವೆಂದು ವಿನಂತಿಸಿದರೂ (ಬಲವಂತವಾಗಿ ಅವರು ಬೊಬ್ಬೆ ಹೊಡೆದರೂ ಬಿಡದೆ!) ಅವರಿಗೆ ಸಹಾಯ ಮಾಡುವ ನೆಪದಲ್ಲಿ ರಸ್ತೆ ದಾಟಿಸಿದ. ವಯಸ್ಸಾದವರು ಮತ್ತು ಅಶಕ್ತರನ್ನು ಹೆಚ್ಚು ಕಡಿಮೆ ಪ್ರೀತಿಯಿಂದ ಆಲಂಗಿಸಿಕೊಂಡ... ಇಂತಹ ಎಲ್ಲ ದೃಶ್ಯ ವೈಭವಗಳನ್ನು ಗುಂಡಣ್ಣನ ಬಲಗೈ ಬಂಟ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿಯಲು ಮಾತ್ರ ಮರೆಯಲಿಲ್ಲ. ಮೊದ ಮೊದಲು ತಂಡೋಪತಂಡವಾಗಿ ಹಿಂಬಾಲಿಸಿದ ಅಭಿಮಾನಿಗಳು ನಿಧಾನವಾಗಿ (ಹಣ ಸರಿಯಾಗಿ ಪಾವತಿ ಮಾಡದಿದ್ದರಿಂದ!) ಕಡಿಮೆಯಾಗತೊಡಗಿದರು. ಹಾಗೇ ಗುಂಡಣ್ಣ ರಸ್ತೆಯಲ್ಲಿ ಅನುಯಾಯಿಗಳು ಮತ್ತು ಹಿಂಬಾಲಕರೊಂದಿಗೆ ಒಮ್ಮೆ ನಡೆಯುವಾಗ ಇದ್ದಕ್ಕಿದ್ದಂತೆ ಏನೋ ಕಾಲಿಗೆ ತಾಗಿದಂತಾಗಿ ಬಗ್ಗಿ ನೋಡಿದ. ' ಗಾಜಿನ ಪುಟ್ಟ ಬಾಟಿಲ್ ' ಕಂಡಿತು. ಗುಂಡಣ್ಣನಿಗೆ ಬಾಟಿಲ್ ಎಂದರೆ ಅದೇನೋ ಒಂಥರಾ ಪ್ರೀತಿ. ಏಕೆಂದರೆ ಪ್ರತಿ ರಾತ್ರಿ ' ಬಾಟಲಿಯಲ್ಲಿರುವ ಗುಂಡಿನ' ಮೊರೆ ಹೋಗದೆ ಗುಂಡಣ್ಣ ನಿದ್ದೆ ಮಾಡುತ್ತಿರಲಿಲ್ಲ. ಎಂದಿನಂತೆ ಅಭ್ಯಾಸ ಬಲದಿಂದ ಇನ್ನೊಬ್ಬರು ನೋಡುವ ಮುಂಚೆಯೇ ಅದನ್ನು ತನ್ನ ಪ್ಯಾಂಟ್ ಜೇಬಿಗೆ ಸೇರಿಸಿಬಿಟ್ಟ ಗುಂಡಣ್ಣ. ನಂತರ ಏನೂ ಅರಿಯದವನಂತೆ ಮುಂದೆ ಹೆಜ್ಜೆ ಹಾಕಿದ ತನ್ನ ತಂಡದೊಂದಿಗೆ. ಆ ರಾತ್ರಿ ದಣಿವಾರಿಸಿಕೊಳ್ಳಲು ಕೈ ಕಾಲಿಗೆ ಪ್ರೀತಿಯ ಶಿಷ್ಯನಿಂದ ತೈಲ ಮರ್ದನ ಮಾಡಿಸಿಕೊಂಡು ಡಾಕ್ಟರನ್ನು ಕರೆಸಿಕೊಂಡು ಒಂದು ಪೇನ್ ಕಿಲ್ಲರ್ ಇಂಜಕ್ಷನ್ ಹಾಕಿಸಿಕೊಂಡು ನಿದ್ರೆ ಮಾಡಲು ಬಹಳ ಪ್ರಯತ್ನ ಮಾಡಿದ ಗುಂಡಣ್ಣ. ಆದರೆ ನಾಳೆಯ ಪಾದಯಾತ್ರೆ ಹೇಗೋ ಏನೋ ಎನ್ನುವ ಚಿಂತೆಯಲ್ಲಿ ಸರಿಯಾಗಿ ನಿದ್ರೆ ಬರಲಿಲ್ಲ. ಬೆಳಕು ಹರಿಯುವ ಮುಂಚೆಯೇ 'ಮುಲ್ಲಾ ಕೂಗುವ ಸಮಯಕ್ಕೆ' ಗುಂಡಣ್ಣ ಎದ್ದು ಕೂತ. ಆಗ ಬಾಟಲಿಯ ನೆನಪಾಗಿ ತನ್ನ ಪ್ಯಾಂಟಿನಿಂದ ಹೊರ ತೆಗೆದು ಒಂದು ಕ್ಷಣ ಅದನ್ನು ದಿಟ್ಟಿಸಿ ನೋಡಿದ. ಅದರ ಮುಚ್ಚಳ ತೆಗೆಯಲು ಯತ್ನಿಸಿದ. ಆದರೆ ಅದು ಸುಲಭವಾಗಿ ಬರಲಿಲ್ಲ. ಕೊನೆಗೆ ಕೆಳಗೆ ಚಕ್ಕಳೆ ಮುಕ್ಕಳೆ ಹಾಕಿ ಕೂತು ಬಾಟಲಿಯನ್ನು ಎರಡೂ ಕಾಲುಗಳ ಮಧ್ಯೆ ಇಟ್ಟುಕೊಂಡು ತನ್ನ ರೆಟ್ಟೆಯಲ್ಲಿನ ಶಕ್ತಿಯನ್ನೆಲ್ಲ ಕ್ರೋಢೀಕರಿಸಿ ಅದರ ಬಿರಡೆಯನ್ನು ಕೊನೆಗೂ ತೆಗೆದ ಗುಂಡಣ್ಣ. ಆಗ ಸೀಸೆಯಿಂದ ಭರ್ರನೆ ಹೊರ ಬಂದ ದಟ್ಟವಾದ ಬಿಳಿಯ ಹೊಗೆ ಇಡೀ ರೂಮನ್ನು ಆವರಿಸಿತು. ಅದನ್ನು ಕಂಡು ಭಯಭೀತನಾಗಿ ಅರೆಕ್ಷಣ ಗುಂಡಣ್ಣ ಕಣ್ಣು ಮುಚ್ಚಿದ. ನಂತರ ಕಣ್ಣು ತೆಗೆದು ನೋಡುತ್ತಾನೆ.... ಎದುರಿಗೆ ಒಂದು ದೊಡ್ಡ ಬೃಹದಾಕಾರ ಆಕೃತಿ ಕಂಡು ಬಂತು. ' ಜೈ ಗುಂಡಣ್ಣ... ಜೈ ಜೈ ನಾಯಕ ಗುಂಡಣ್ಣ... ' ಎಂದು ಅದರ ಬಾಯಿಂದ ಬಂದ ಮಧುರವಾದ ಜೈ ಕಾರದ ಶಬ್ದ ಕೇಳಿ ಸಂತಸದಿಂದ 'ಭೂತದ ಬಾಯಿಂದ ಭಗವದ್ಗೀತೆ... ' ಎಂದು ಜೋರಾಗಿ ಅರಚಿದ ಅಭ್ಯಾಸ ಬಲದಿಂದ ರಾಜಕೀಯ ನೇತಾರ ಗುಂಡಣ್ಣ. ನಂತರ ನಿಧಾನವಾಗಿ 'ನೀನು ಯಾರು...?' ಎಂದು ಕೇಳಿದ ಎದುರಲ್ಲಿದ್ದ ಆಕೃತಿಯನ್ನು. " ಪರಪ್ಪನ ಅಗ್ರಹಾರದಲ್ಲಿ ಎಷ್ಟೋ ವರ್ಷಗಳ ಕಾಲ ರಾಜಕೀಯ ನಾಯಕರ ಮತ್ತು ದೊಡ್ಡ ದೊಡ್ಡ ಗೂಂಡಾಗಳ ಮಧ್ಯೆ ಚುನಾವಣೆ ಬ್ರೋಕರ್ ಆಗಿ ಸೇವೆ ಸಲ್ಲಿಸುತ್ತಿದ್ದ ನನ್ನನ್ನು ಯಾರೋ ದುಷ್ಕರ್ಮಿಗಳು ಸಾಯಿಸಿದರು. ಆ ಬಳಿಕ ನನ್ನ ಆತ್ಮವನ್ನು ಈ ಬಾಟಲಿಯಲ್ಲಿ ಬಂಧಿಸಿಟ್ಟರು. ಈಗ ಬಾಟಲಿಯಿಂದ ನಾನು ಹೊರ ಬರುವಂತೆ ಮಾಡಿ ನನ್ನನ್ನು 'ಬಾಟಲಿ ಋಣ' ದಿಂದ ಮುಕ್ತನನ್ನಾಗಿಸಿದ ನಿನಗೆ ಏನು ವರ ಬೇಕು ಕೇಳು?...ಈಗಲೇ ಕೇಳು..? ಬೆಳಕು ಹರಿಯುವದರೊಳಗೆ ನಾನು ಈ ಜಾಗ ಖಾಲಿ ಮಾಡಲೇಬೇಕು. ಇಲ್ಲವೆಂದರೆ ಮತ್ತೆ ಅಂತರ ಪಿಶಾಚಿಯಾಗಿ ನಾನು ಇಲ್ಲೇ ಸುತ್ತಾಡಬೇಕಾಗುತ್ತದೆ ಅದಕ್ಕೆ... ಹರಿಯಪ್... ಬೇಗ ಬೇಗ...ಪ್ಲೀಜ್ ಗುಂಡಣ್ಣ..."ಎಂದು ಗೋಗರೆಯಿತು ಆಕೃತಿ. ಗುಂಡಣ್ಣ ಯೋಚನೆಗೆ ಬಿದ್ದ. ಆದರೂ ಮನದಾಳದ ಆಸೆ ಹೊರ ಹಾಕಿದ. ಒಂದೆರಡು ಕ್ಷಣದ ಬಳಿಕ ಗುಂಡಣ್ಣ ಹೇಳಿದ " ನೀನು ತುಂಬಾ ಅವಸರದಲ್ಲಿ ಇದ್ದೀಯಾ...ನನ್ನ ಒಂದೇ ಕೋರಿಕೆ ಏನೆಂದರೆ ನಾನು ಕೈಗೊಂಡ ಪಾದಯಾತ್ರೆ ಯಶಸ್ವಿಯಾಗಬೇಕು. ನಾನು ಮತ್ತೆ ಈ ಬಾರಿ ಗೆದ್ದು ಜನ ಸೇವೆ ಮಾಡುವ ಅವಕಾಶ ಒಂದಲ್ಲ ಕನಿಷ್ಠ 4-5 ಅವಧಿಗಾದರೂ ಸಿಗಬೇಕು. ಎಲ್ಲಾ ಪಕ್ಷದವರ ಓಟು ಸಾರಾ ಸಗಟಾಗಿ ನನಗೇ ಬೀಳಬೇಕು. ನನ್ನೆದುರು ನಿಂತ ಅಭ್ಯರ್ಥಿಗಳ ಡಿಪಾಸಿಟ್ ಸಹ ಉಳಿಯಬಾರದು..." ಎಂದೆಲ್ಲ ಬೇಡಿಕೆ ಪಟ್ಟಿಯನ್ನು ಮುಂದಿಟ್ಟ ಗುಂಡಣ್ಣ. " ಇಡೀ ವಿಶ್ವದಲ್ಲಿ ಅತ್ಯುತ್ತಮ ಪ್ರಜಾಪ್ರಭುತ್ವ ಆಡಳಿತದ ನಂಬರ್ ಒನ್ ದೇಶವಾದ ಭವ್ಯ ಭಾರತ... ಅದರಲ್ಲೂ ನಮ್ಮ ಕನ್ನಡ ರಾಜ್ಯ ಕರ್ನಾಟಕ ಮುಂಚೂಣಿಯಲ್ಲಿದೆ ಎನ್ನುವುದನ್ನು ನೆನಪಿಟ್ಟುಕೋ ಗುಂಡಣ್ಣ...ಆದರೆ ದಯವಿಟ್ಟು ಕ್ಷಮಿಸಬೇಕು...ಎಲ್ಲಾ ಮತದಾರರ ಮನಸು ಬದಲಿಸಲು ನನ್ನಿಂದ ಸಾಧ್ಯವಿಲ್ಲ. ಬೇಕಿದ್ದರೆ ನಿನ್ನ ಪಾದ ಯಾತ್ರೆಯಲ್ಲಿ ನೂರಾರು ಅಲ್ಲ, ಸಹಸ್ರಾರು ಜನ ಧುಮುಕಿ ಪಾಲ್ಗೊಳ್ಳುವಂತೆ ಮಾಡುತ್ತೇನೆ...ನಿನ್ನ ಹಿಂದೆ 'ಕೋತಿ ದೊಂಬರಾಟ' ಕ್ಕೆ ಅಥವಾ 'ಕರಡಿ ಕುಣಿತಕ್ಕೆ' ನೆರೆಯುವ ಜನಕ್ಕಿಂತ ಹೆಚ್ಚು ಜನ ಸೇರುವಂತೆ ಮಾಡುತ್ತೇನೆ... ನೀನು ಎಲ್ಲಿ ಮೈಕು ಹಿಡಿಯುತ್ತಿಯೋ ಅಲ್ಲೆಲ್ಲ ಗುಂಪು ಗುಂಪಾಗಿ ಜನ ಸೇರುತ್ತಾರೆ...ಇದು ನನ್ನ ವಾಗ್ದಾನ... ತಥಾಸ್ತು... ಬೈ ಬೈ..." ಎಂದು ಆಕಾರ ಪ್ರಕೃತಿಯಲ್ಲಿ ಮಾಯವಾಯಿತು. ಆಕಾರದ ದಯೆಯಿಂದ ಮತ್ತು ಗುಂಡಣ್ಣನ 'ಪೇ' (ಹಣವನ್ನು ಹಂಚುವ) ಸರ್ವೀಸ್ ಸಹಕಾರದಿಂದ ಮತದಾರರು 'ಕಿಂದರಿ ಜೋಗಿ' ಯಂತೆ ಗುಂಡಣ್ಣನನ್ನು ಹಿಂಬಾಲಿಸಿದರು. ಟ್ರಾಕ್ಟರ್ ನಲ್ಲಿ, ಲಾರಿಯಲ್ಲಿ ತಂಡೋಪತಂಡವಾಗಿ ಬಂದ ಜನರು ಗುಂಡಣ್ಣನ ಪಾದ ಯಾತ್ರೆ ಮತ್ತು ಸಭೆಗಳನ್ನು ಅತ್ಯಂತ ಯಶಸ್ವಿಯಾಗಿಸಿದರು. ಆ ದೊಡ್ಡ ಆಕೃತಿಯ ಆಶೀರ್ವಾದ ಜನರನ್ನು ಸೇರಿಸುವ ಕೆಲಸ ಮಾಡುತ್ತದೆಯೇ ಹೊರತು ಮತವನ್ನಂತೂ ಹಾಕಿಸುವದಿಲ್ಲ. ಅಲ್ಲದೇ ಸಭೆಗೆ ಸೇರುವ ಜನ ಜಂಗುಳಿ ಮತ ಯಂತ್ರಗಳ ಮುಂದೆ ಹಾಜರಾಗೋದಿಲ್ಲ. ಹಣವನ್ನು ಪಡೆದ ಮತದಾರರು ಈ 'ಜಾತ್ಯತೀತ' ರಾಷ್ಟ್ರದಲ್ಲಿ ತಮ್ಮ ಜಾತಿಯ ಅಭ್ಯರ್ಥಿಗೆ ಬಿಟ್ಟು ಬೇರೆಯವರಿಗೆ ಮತ ಹಾಕುವುದಿಲ್ಲ. ಇದು ಕಟು ಸತ್ಯ! ಹೀಗಾಗಿ ಗುಂಡಣ್ಣನ ಪಾದ ಯಾತ್ರೆ ಈ ಬಾರಿ ವರ್ಕ್ ಔಟ್ ಆಗೋದು ಸ್ವಲ್ಪ ಕಷ್ಟಾನೆ ಅಂತ ಹೇಳಬಹುದು! *****
ಪಾದಯಾತ್ರೆ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ರಾಘವೇಂದ್ರ ಮಂಗಳೂರು
- ರಾಘವೇಂದ್ರ ಮಂಗಳೂರು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ದಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ ಎರಡು ವರ್ಷದ ಹಿಂದೆ ನಿವೃತ್ತಿ ಹೊಂದಿರುವರು. ಅವರ ಮೊದಲ ತೆಲುಗು ಅನುವಾದಿತ ಕಾದಂಬರಿ 'ಜೀವನ ಸಮರ' ವು 'ರಾಗ ಸಂಗಮ' ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಎರಡನೇ ತೆಲುಗು ಅನುವಾದಿತ ಕಾದಂಬರಿ 'ಅರುಣ' ವು 'ಜಗಲಿ' ವಾರ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅವರು ಬರೆದ 'ಸಿರುಗುಪ್ಪ ತಾಲೂಕು ದರ್ಶನ' ಪುಸ್ತಕವನ್ನು ಐ. ಬಿ. ಎಚ್ ಪ್ರಕಾಶನ ಪ್ರಕಟಿಸಿದೆ.
ಕಳೆದ ವರ್ಷದ ಕೊನೆಯಲ್ಲಿ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಹನ್ನೆರಡು ಸ್ವಂತ ಕಥೆಗಳ 'ಲಾಟರಿ ಹುಡುಗ' ಗುಚ್ಛವನ್ನು ಇಂದಿರೇಶ ಪ್ರಕಾಶನ ಹೊರ ತಂದಿದೆ. ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡ ಅವರು ಬರೆದ ' ನ್ಯಾನೋ ಕಥೆಗಳು -2020' ಹಾಗೂ ಹಲವು ಹಾಸ್ಯ ಲೇಖನಗಳ ಗುಚ್ಛ 'ನರ್ಸರಿ ಶಿಕ್ಷಣದ ಭಾಗವದ್ಗೀತೆ' ಪ್ರಕಟಣೆಯ ಅಂಚಿನಲ್ಲಿವೆ.
ಇದಲ್ಲದೆ ಅವರು ಬರೆದ ಹಲವಾರು ಕಥೆಗಳು -ಹಾಸ್ಯ ಬರಹಗಳು ನಾಡಿನ ಅನೇಕ ಹೆಸರಾಂತ ವಾರ ಪತ್ರಿಕೆಗಳಲ್ಲಿ, ಮಾಸ ಪತ್ರಿಕೆಗಳಲ್ಲಿ ಹಾಗೂ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
All Posts
17 thoughts on “ಪಾದಯಾತ್ರೆ”
ರಾಜಕೀಯ ಕಟು ಸತ್ಯವನ್ನು ವಿಡಂಬನಾತ್ಮಕವಾಗಿ ಹೇಳಿದ್ದು ಸೊಗಸಾಗಿದೆ. ಅಭಿನಂದನೆಗಳು ರಾಘವೇಂದ್ರ ಮಂಗಳೂರು.
ರಾಜಕೀಯದಲ್ಲಿ ಮೊಟ್ಟಮೊದಲ ಕೆಲಸ ಜನಜಂಗುಳಿಯನ್ನು ಸೇರಿಸುವುದು. ಇದರಿಂದ ಪ್ರಚಾರ ಮತ್ತು ಇಮೇಜು ಎರೆಡೂ ಹೆಚ್ಚುತ್ತವೆ. ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ, ಚು0ಚುನಾವಣೆಯಲ್ಲಿ ಗುಂಡಣ್ಣ ಗೆಲ್ಲುವ ಅವಕಾಶ ಹೆಚ್ಚುತ್ತವೆ. ರಾಜಕೀಯ ಸತ್ಯವನ್ನು ರಾಘವೇಂದ್ರ ಮಂಗಳೂರು ಅವರು ವಿಡಂಬನಾತ್ಮಕವಾಗಿ ಸ್ಪಷ್ಟಪಡಿಸಿದ್ದಾರೆ. ಅಭಿನಂದನೆಗಳು.
ರಾಜಕೀಯದಲ್ಲಿ ಮೊಟ್ಟಮೊದಲ ಕೆಲಸ ಜನಜಂಗುಳಿಯನ್ನು ಸೇರಿಸುವುದು. ಇದರಿಂದ ಪ್ರಚಾರ ಮತ್ತು ಇಮೇಜು ಎರೆಡೂ ಹೆಚ್ಚುತ್ತವೆ. ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ , ಚುನಾವಣೆಯಲ್ಲಿ ಗುಂಡಣ್ಣ ಗೆಲ್ಲುವ ಅವಕಾಶ ಹೆಚ್ಚುತ್ತದೆ. ರಾಜಕೀಯ ಸತ್ಯವನ್ನು ರಾಘವೇಂದ್ರ ಮಂಗಳೂರು ಅವರು ವಿಡಂಬನಾತ್ಮಕವಾಗಿ ತಿಳಿಸಿದ್ದಾರೆ. ಅಭಿನಂದನೆಗಳು.
ಧನ್ಯವಾದಗಳು
ಧನ್ಯವಾದಗಳು
Very good humorous articale
Thank you Sir
ರಾಜಕೀಯ ಏಂಬ ಪ್ರಹಸನದಲ್ಲಿ ವ್ಯಂಗಗಳೂ ಅಡಕವಾಗಿರುತ್ತವೆ. ಅವುಗಳಿಂದಲೇ ರಾಜಕೀಯ ವ್ಯಕ್ತಿಗಳು ಮೇಲೆ ಬರಲು ಪ್ರಯತ್ನಿಸುತ್ತಿರುತ್ತಾರೆ. ಹಾಗಾಗಿ, ಅವುಗಳನ್ನು ಇಲ್ಲಿ ಬಿಂಬಿಸಿದ್ದುದು ಸರಿಯಾಗಿಯೇ ಇದೆ ಮತ್ತು ಆಕರ್ಷಣೀಯ ಕೂಡಾ. ಅಭಿನಂದನೆಗಳು.
ಧನ್ಯವಾದಗಳು ಸಾರ್
ಪಾದಯಾತ್ರೆ ವಿಡಂಬನೆ ಸೊಗಸಾಗಿ ಬಂದಿದೆ.
ರಾಜಕೀಯ ಮೇಲಾಟಕ್ಕೆ ಯಾವೆಲ್ಲ ಕಸರತ್ತು ಮಾಡಬೇಕಾಗುತ್ತದೆ ಎನ್ನುವುದನ್ನು ಬರಹ ಬಿಂಬಿಸುತ್ತಿದೆ.
ಜನಜಂಗುಳಿಯೂ ಒಂದು ರಾಜಕೀಯ ಆಟ. ಅದಿಲ್ಲಿ ಚೆನ್ನಾಗಿ ವ್ಯಕ್ತವಾಗಿದೆ.
ಅಭಿನಂದನೆಗಳು.
ಧನ್ಯವಾದಗಳು
ಸದ್ಯದ ರಾಜಕೀಯ ರಿಮಿಕ್ಸ್ ದ ಚಿತ್ರಣ ಯಥಾವತ್ತಾಗಿ ಮೂಡಿಬಂದಿದೆ. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅಭಿನಂದನೆಗಳು.
ಧನ್ಯವಾದಗಳು
ತುಂಬಾ ತಡವಾಗಿರುವುದಕ್ಕೆ ವಿಷಾದವಿದೆ. ಇಂದಿನ ರಾಜಕಾರಣದ ಕಟು ವಾಸ್ತವಿಕತೆಯು ವಿಡಂಬನಾತ್ಮಕ ಬರಹ ರೂಪದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು ಸರ್.
ಧನ್ಯವಾದಗಳು
ಪಾದಯಾತ್ರೆ ವಿಡಂಬನೆ ಸೊಗಸಾಗಿ ಬಂದಿದೆ.
ರಾಜಕೀಯ ಚುನಾವಣೆಯ ಕಸರತ್ತಿನ ಕಥಾವಸ್ತು ಬರಹದಲ್ಲಿದ್ದು ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ.
ಅಭಿನಂದನೆಗಳು.
ಧನ್ಯವಾದಗಳು