ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಸೂಪರ್ ಸ್ಟಾರ್ ಕೃಷ್ಣ

ಸೂಪರ್ ಸ್ಟಾರ್ ಕೃಷ್ಣ ಎಂದೇ ಖ್ಯಾತರಾದ ಘಟ್ಟಿಮನೇನಿ ಶಿವರಾಮಕೃಷ್ಣ ಭಾರತೀಯ ಚಿತ್ರರಂಗ ಕಂಡ ಸಾರ್ವಕಾಲಿಕ ಶ್ರೇಷ್ಠ ನಟರಲ್ಲೊಬ್ಬರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬುರ್ರೇಪಾಲಂ ಎಂಬ ಹಳ್ಳಿಯಲ್ಲಿ ಜನಿಸಿದ ಕೃಷ್ಣ B.Sc. ಪದವೀಧರರು. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಂದ ಮೊದಲ್ಗೊಂಡು ನಾಯಕನ ಪಾತ್ರವನ್ನು ವಹಿಸುವ ಮೂಲಕ ನಟನೆಯ ತಾಲೀಮು ಪಡೆದ ಕೃಷ್ಣ ಅವರು ನಂತರ ಸಿನಿಮಾದತ್ತ ಆಸಕ್ತಿ ಬೆಳೆಸಿಕೊಂಡರು. ಸಿನಿಮಾರಂಗದಲ್ಲಿ ಭವಿಷ್ಯವನ್ನು ಅರಸಿ ಮದ್ರಾಸಿಗೆ ಹೋದ ಕೃಷ್ಣ ಅವರಿಗೆ ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಷ್ಟೇ ದೊರೆತವು. ೧೯೬೫ರಲ್ಲಿ ನಿರ್ದೇಶಕ ಅದುರ್ತಿ ಸುಬ್ಬರಾವ್ ಅವರು ‘ತೇನೇ ಮನಸುಲು’ ಎಂಬ ಚಿತ್ರದಲ್ಲಿ ಕೃಷ್ಣ ಅವರಿಗೆ ನಾಯಕನ ಪಾತ್ರವನ್ನು ನೀಡಿದರು. ಈ ಚಿತ್ರ ಆಂಧ್ರದಾದ್ಯಂತ ತುಂಬ ಯಶಸ್ವಿಯಾಯಿತು. ಅನೇಕ ಕೇಂದ್ರಗಳಲ್ಲಿ ಶತದಿನೋತ್ಸವ ಪೂರೈಸಿತು. ಇದು ಕೃಷ್ಣ ಅವರಿಗೆ ದೊರೆತ ಮೊದಲ ಯಶಸ್ಸು.


ಕನ್ನಡದಲ್ಲಿ ಡಾ.ರಾಜಕುಮಾರರ ಬಾಂಡ್ ಸಿನಿಮಾಗಳಿಂದ ಸ್ಫೂರ್ತಿ ಪಡೆದು ತೆಲುಗಿನಲ್ಲೂ ಸಹ ಅಂತಹ ಸಾಹಸ ಪ್ರಧಾನ ಚಿತ್ರ ಮಾಡಲು ಹೊಸ ಮುಖದ ಹುಡುಕಾಟದಲ್ಲಿದ್ದ ಎಂ. ಮಲ್ಲಿಕಾರ್ಜುನ ರಾವ್ ಎಂಬ ನಿರ್ದೇಶಕರಿಗೆ ಸರಿಯಾಗಿ ಸಿಕ್ಕದ್ದು ಕೃಷ್ಣ. ೧೯೬೬ರಲ್ಲಿ ತೆರೆ ಕಂಡ ‘ಗೂಢಚಾರಿ ೧೧೬’ ಯಶಸ್ಸು ಗಳಿಸುವುದರೊಂದಿಗೆ ಕೃಷ್ಣ ಅವರಿಗೆ ಆ್ಯಕ್ಷನ್ ಹೀರೊ ಇಮೇಜ್ ತಂದುಕೊಟ್ಟಿತು. ಈ ಚಿತ್ರದ ಮೂಲಕ ಜಯಲಲಿತಾ ಅವರಿಗೆ ತೆಲುಗಿನಲ್ಲಿ ದೊಡ್ಡ ಬ್ರೇಕ್ ಸಿಕ್ಕಿತು.
೧೯೭೦ರ ದಶಕದ ಆರಂಭದೊಂದಿಗೆ ಸಿನಿಮಾ ರಂಗದಲ್ಲಿ ಕೃಷ್ಣ ಅವರ ಸುವರ್ಣ ಅಧ್ಯಾಯ ಸಹ ಆರಂಭಗೊಂಡಿತು. ಸ್ವಭಾತಃ ತುಂಬ ಧೈರ್ಯಶಾಲಿ ಮತ್ತು ರಿಸ್ಕ್ ತೆಗೆದುಕೊಳ್ಳಲು ಯಾವತ್ತೂ ಹಿಂಜರಿಯದ ಕೃಷ್ಣ ಅವರು ತಮ್ಮ ಸೋದರರಾದ ಆದಿಶೇಷಗಿರಿ ರಾವ್ ಮತ್ತು ಹನುಮಂತ ರಾವ್ ಅವರ ಜೊತೆ ಸೇರಿ ‘ಪದ್ಮಾಲಯ ಫಿಲಂಸ್’ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿ ಆಗಿನ ಕಾಲಕ್ಕೆ ತುಂಬ ದುಬಾರಿ ಬಜೆಟ್ಟಿನ ಸಿನಿಮಾಗಳನ್ನು ನಿರ್ಮಿಸಿದರಲ್ಲದೇ, ಅಂತಹ ಸಿನಿಮಾಗಳಿಂದ ಹಣವನ್ನೂ ಸಹ ಅದೇ ರೀತಿ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟರು.
‘ಅಗ್ನಿ ಪರೀಕ್ಷಾ’, ‘ಮೋಸಗಾಲ್ಲಕು ಮೋಸಗಾಡು’, ‘ಪಂಡಂಟಿ ಕಾಪುರಮ್’, ‘ದೇವುಡು ಚೇಸಿನ ಮನುಷುಲು’ ಮತ್ತು ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮರಾಜುವಿನ ಜೀವನಾಧಾರಿತ ‘ಅಲ್ಲೂರಿ ಸೀತಾರಾಮರಾಜು’ ಎಂಬ ಬಿಗ್ ಬಜೆಟ್ ಚಿತ್ರಗಳನ್ನು ನೀಡಿದರು. ಸದಾ ಹೊಸತನಕ್ಕಾಗಿ ತುಡಿಯುತ್ತಿದ್ದ ಕೃಷ್ಣ ಅವರ ಇಂತಹ ಪ್ರಯೋಗಗಳನ್ನು ತೆಲುಗಿನ ಪ್ರೇಕ್ಷಕರು ಮೆಚ್ಚಿ, ಪ್ರೋತ್ಸಾಹಿಸಿದರು. ‘ಅಲ್ಲೂರಿ ಸೀತಾರಾಮರಾಜು’ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತು.


೧೯೭೪ರಲ್ಲಿ ತೆರೆ ಕಂಡ ‘ಅಲ್ಲೂರಿ ಸೀತಾರಾಮರಾಜು’ ಕೃಷ್ಣ ಅವರ ೧೦೦ನೆಯ ಸಿನಿಮಾ. ೧೯೮೨ರಲ್ಲಿ ತೆರೆ ಕಂಡ ‘ಈ ನಾಡು’ ಅವರ ೨೦೦ನೆಯ ಸಿನಿಮಾ. ಕೇವಲ ಎಂಟೇ ವರ್ಷಗಳಲ್ಲಿ ಅವರು ೧೦೦ ಸಿನಿಮಾ ಪೂರೈಸಿದರು! ಒಂದು ವರ್ಷಕ್ಕೆ ಸರಾಸರಿ ೧೨ ಚಿತ್ರಗಳು! ಕೃಷ್ಣ ಅವರ ಚಿತ್ರಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಚಿತ್ರಗಳ ಗುಣಮಟ್ಟವೇನೂ ಕಡಿಮೆಯಾಗಲಿಲ್ಲವೆಂಬುದು ಗಮನಾರ್ಹ. ಬಾಂಡ್, ಕೌಬಾಯ್, ಕೌಟುಂಬಿಕ, ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ, ಸಾಹಸ ಪ್ರಧಾನ, ಪ್ರೇಮಕಥಾನಕ, ಹಾಸ್ಯ ಪ್ರಧಾನ ಮತ್ತು ಫ್ಯಾಂಟಸಿ ಸಿನಿಮಾ ಸೇರಿದಂತೆ ಬಹುತೇಕ ಎಲ್ಲ ಬಗೆಯ ಸಿನಿಮಾಗಳಲ್ಲಿ ಕೃಷ್ಣ ಅವರು ನಟಿಸಿದ್ದಾರೆ.
ಕೃಷ್ಣ ಅವರ ಚಿತ್ರಗಳು ಜನಪ್ರಿಯತೆ ಮತ್ತು ಹಣ ಗಳಿಕೆಯಲ್ಲಿ ಎನ್. ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್, ಶೋಭನ್ ಬಾಬು ಮತ್ತು ಕೃಷ್ಣಂರಾಜು ಅವರಂತಹ ಘಟಾನುಘಟಿಗಳ ಚಿತ್ರಗಳನ್ನು ಮೀರಿಸಿ ಅಪಾರ ಯಶಸ್ಸು ಗಳಿಸಿದವು. ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಕೃಷ್ಣ ಅವರ ಕುರಿತು ಆಂಧ್ರದಾದ್ಯಂತ ಅಪಾರ ಕ್ರೇಜಿತ್ತು. ೧೯೭೭ ರಿಂದ ೧೯೮೭ರ ಒಂದು ದಶಕ ತೆಲುಗು ಚಿತ್ರರಂಗದಲ್ಲಿ ಅಕ್ಷರಶಃ ಕೃಷ್ಣಯುಗ! ಒಂದು ಹಂತದಲ್ಲಿ ಕೃಷ್ಣ ಅವರಿಗೆ ಎದುರಾಳಿಗಳೇ ಇರಲಿಲ್ಲ. ಮೊದಲ ಸ್ಥಾನವೇನಿದ್ದರೂ ಕೃಷ್ಣ ಅವರದೇ! ಉಳಿದವರೆಲ್ಲ ಸ್ಪರ್ಧಿಸಬೇಕಾಗಿರುವುದು ಎರಡನೆಯ ಸ್ಥಾನಕ್ಕೆ ಮಾತ್ರ ಎಂಬಷ್ಟು ಯಶಸ್ಸು ಮತ್ತು ಜನಪ್ರಿಯತೆಯನ್ನು ಕೃಷ್ಣ ಅವರು ಸಂಪಾದಿಸಿದ್ದರು.
ಕೃಷ್ಣ ಅವರು ಅದಾಗಲೇ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಎನ್. ಟಿ. ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರರಾವ್ ಅವರ ಜೊತೆ ‘ಸ್ತ್ರೀ ಜನ್ಮ’, ‘ನಿಲುವು ದೋಪಿಡಿ’, ‘ಮಂಚಿ ಕುಟುಂಬಂ’, ‘ವಿಚಿತ್ರ ಕುಟುಂಬಂ’, ‘ಅಕ್ಕಾ ಚೆಲ್ಲೆಲು’, ‘ದೇವುಡು ಚೇಸಿನ ಮನುಷುಲು’, ‘ಗುರು ಶಿಷ್ಯಲು’, ‘ಹೇಮಾಹೇಮಿಲು’ ಮತ್ತು ‘ಊರಂತಾ ಸಂಕ್ರಾಂತಿ’ ಎಂಬ ಚಿತ್ರಗಳಲ್ಲಿ ನಟಿಸಿದರು. ಈ ಅವಧಿಯಲ್ಲಿ ಕೃಷ್ಣ ಅವರು ತಮ್ಮ ಸಮಕಾಲೀನ ನಟರಾದ ಶೋಭನ್ ಬಾಬು ಮತ್ತು ಕೃಷ್ಣಂರಾಜು ಅವರ ಜೊತೆ ‘ಮಂಡೆ ಗುಂಡೆಲು’, ‘ಇದ್ದರು ದೊಂಗಲು’, ‘ಮುಂದಡಗು’, ‘ಕೃಷ್ಣಾರ್ಜುನುಲು’, ‘ಮಹಾಸಂಗ್ರಾಮಂ’, ‘ಯುದ್ಧಂ’, ‘ಅಡವಿ ಸಿಂಹಲು’, ‘ಮನುಷಲು ಚೇಸಿನ ದೊಂಗಲು’, ‘ಇಂದ್ರಭವನಂ’ ಮತ್ತು ‘ಕುರುಕ್ಷೇತ್ರ’ ಚಿತ್ರಗಳಲ್ಲಿ ನಟಿಸಿದರು.


ಕೃಷ್ಣ ಅವರ ಸಮಕಾಲೀನ ನಟರಾದ ಶೋಭನ್ ಬಾಬು ಅವರಿಗೆ ಸ್ವಲ್ಪ ಸೂಪೀರಿಯಾರಿಟಿ ಕಾಂಪ್ಲೆಕ್ಸ್ ಇತ್ತು. ಬ್ಲ್ಯೂ ಕಾಲರ್ ಪಾತ್ರಗಳಾದ ಆಟೋ ಡ್ರೈವರ್, ಲಾರಿ ಡ್ರೈವರ್, ಕೂಲಿ ಕಾರ್ಮಿಕ, ಬಡ ಮೇಷ್ಟ್ರು ಮತ್ತು ನಿರುದ್ಯೋಗಿ ಯುವಕ ಇಂತಹ ಕೆಳವರ್ಗದ ಪಾತ್ರಗಳನ್ನು ಮಾಡಲು ಅವರು ತುಂಬ ಹಿಂದೇಟು ಹಾಕುತ್ತಿದ್ದರು. ಚಿತ್ರವೊಂದರಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನಾದರೂ ಶೋಭನ್ ಬಾಬು ಅವರ ವೇಷಭೂಷಣಗಳು ಕಾರ್ಖಾನೆಯ ಮಾಲೀಕನಂತಿರುತ್ತಿದ್ದವು! ಇಂತಹ ಸ್ವಭಾವದ ಶೋಭನ್ ಬಾಬು ಅವರೊಂದಿಗೆ ಕೃಷ್ಣ ಅವರು ಒಂದು ಡಝನಗಿಂತ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕೃಷ್ಣ ಅವರಿಗಿಂತ ವಯಸ್ಸಿನಲ್ಲಿ ಐದು ವರ್ಷ ದೊಡ್ಡವರಾದ ಶೋಭನ್ ಬಾಬು ಅವರನ್ನು ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಒಬ್ಬ ಹಿರಿಯ ಸೋದರನಂತೆಯೇ ಕಾಣುತ್ತಿದ್ದ ಅವರು ಶೋಭನ್ ಬಾಬು ಅವರು ಆಯ್ಕೆ ಮಾಡಿ ಬಿಟ್ಟ ಪಾತ್ರವನ್ನು ತಾವು ಮಾಡುತ್ತಿದ್ದರು. ಅವರಿಬ್ಬರೂ ಸೇರಿ ನಟಿಸಿರುವ ಅಷ್ಟೂ ಚಿತ್ರಗಳಲ್ಲಿ ವ್ಹೈಟ್ ಕಾಲರ್ ಪಾತ್ರಗಳನ್ನು ಶೋಭನ್ ಬಾಬು ಮಾಡಿದರೆ, ಬ್ಲ್ಯೂ ಕಾಲರ್ ಪಾತ್ರಗಳನ್ನು ಕೃಷ್ಣ ಮಾಡಿದ್ದಾರೆ! ‘ಮುಂದಡಗು’ ೧೯೮೩ರಲ್ಲಿ ತೆರೆ ಕಂಡ ಸೂಪರ್ ಹಿಟ್ ಚಿತ್ರ. ಮೊದಲು ಈ ಚಿತ್ರದಲ್ಲಿ ಕೃಷ್ಣ ಅವರಿಗೆ ಶ್ರೀದೇವಿ ನಾಯಕಿ ಎಂದಾಗಿತ್ತು. ಶೋಭನ್ ಬಾಬು ಅವರು ಶ್ರೀದೇವಿ ತಮಗೆ ನಾಯಕಿಯಾಗಬೇಕು ಎಂದು ಹೇಳಿದಾಗ ಕೃಷ್ಣ ಅವರು ಅದನ್ನು ಮರು ಮಾತಿಲ್ಲದೆ ಒಪ್ಪಿ ಚಿತ್ರ ಮುಗಿಸಿಕೊಟ್ಟರು.
೧೯೭೭ರಲ್ಲಿ ಕೃಷ್ಣ ಅವರ ‘ಕುರುಕ್ಷೇತ್ರ’ ಮತ್ತು ಎನ್. ಟಿ. ರಾಮರಾವ್ ಅವರ ‘ದಾನವೀರ ಶೂರ ಕರ್ಣ’ ಚಿತ್ರಗಳು ಒಟ್ಟಿಗೇ ಚಿತ್ರೀಕರಣವಾಗುತ್ತಿದ್ದವು. ಎನ್. ಟಿ. ರಾಮರಾವ್ ಅವರು ಕರ್ಣ, ಸುಯೋಧನ ಮತ್ತು ಕೃಷ್ಣನ ಪಾತ್ರಗಳನ್ನು ತಾವೇ ಮಾಡುತ್ತಿದ್ದರು. ಅದು ಅವರ ಮಹತ್ವಾಕಾಂಕ್ಷೆಯ ಚಿತ್ರ. ಕೃಷ್ಣ ಅವರನ್ನು ಕರೆಸಿಕೊಂಡ ಎನ್. ಟಿ. ರಾಮರಾವ್, “ಇಬ್ಬರೂ ಒಂದೇ ವಿಷಯದ ಮೇಲೆ ಒಟ್ಟಿಗೇ ಚಿತ್ರ ಮಾಡುವುದು ಬೇಡ. ಇದರಿಂದ ಇಬ್ಬರಿಗೂ ನಷ್ಟ” ಎಂದು ತಿಳಿ ಹೇಳಿದರು. ‘ಕುರುಕ್ಷೇತ್ರ’ ಚಿತ್ರದ ಶೂಟಿಂಗ್ ಆರಂಭವಾಗಿ ಅದಾಗಲೇ ಶೇಕಡಾ ೩೦ರಷ್ಟು ಚಿತ್ರೀಕರಣವಾಗಿಬಿಟ್ಟದ್ದರಿಂದ ಕೃಷ್ಣ ಅವರು ತುಂಬ ವಿನಯದಿಂದಲೇ, “ಈಗಾಗಲೇ ಕಾಲು ಭಾಗದಷ್ಟು ಚಿತ್ರ ಮುಗಿದಿರುವುದರಿಂದ ಚಿತ್ರೀಕರಣ ನಿಲ್ಲಿಸುವುದು ಕಷ್ಟ. ಬೇಕಾದರೆ ಸಿನಿಮಾ ಬಿಡುಗಡೆಯಲ್ಲಿ ಒಂದು ಅಥವಾ ಎರಡು ತಿಂಗಳು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು” ಎಂದು ಹೇಳಿದರು. ಇದು ಎನ್. ಟಿ. ರಾಮರಾವ್ ಅವರಿಗೆ ತುಂಬ ಕೋಪ ತರಿಸಿತು. ಕೃಷ್ಣ ತಮ್ಮ ಮೇಲಿನ ಜಿದ್ದಿನಿಂದ ಹೀಗೆ ಮಾಡುತ್ತಿದ್ದಾರೆ ಎಂದು ಅವರು ಅಂದುಕೊಂಡರೆ, ಕೃಷ್ಣ ಅವರಲ್ಲಿ ಎನ್. ಟಿ. ರಾಮರಾವ್ ಅವರಿಗೆ ತಮ್ಮ ಯಶಸ್ಸನ್ನು ಸಹಿಸಲಾಗುತ್ತಿಲ್ಲ ಎಂಬ ಭಾವನೆ ಮೂಡುವಂತೆ ಮಾಡಿತು.


ಎನ್. ಟಿ. ರಾಮರಾವ್ ಮತ್ತು ಕೃಷ್ಣ ಅವರ ನಡುವಿನ ಈ ಸಣ್ಣ ಅಪಾರ್ಥ ತೆಲುಗು ಚಿತ್ರರಂಗವನ್ನು ಇಬ್ಬಾಗ ಮಾಡಿತು. ಎನ್. ಟಿ. ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರರಾವ್ ಅವರು ಒಂದು ಗುಂಪಾದರೆ ಕೃಷ್ಣ, ಶೋಭನ್ ಬಾಬು ಮತ್ತು ಕೃಷ್ಣಂರಾಜು ಅವರದು ಮತ್ತೊಂದು ಗುಂಪಾಯಿತು. ತೆಲುಗು ಚಿತ್ರರಂಗದ ಹಿರಿಯರು ಸಂಧಾನ ಮಾಡಲು ಸಾಕಷ್ಟು ಯತ್ನಿಸಿದರೂ ಅದು ಫಲ ಕೊಡಲಿಲ್ಲ. ತಮಿಳಿನ ಮೇರು ನಟ ಶಿವಾಜಿ ಗಣೇಶನ್ ಸಹ ಎನ್. ಟಿ. ರಾಮರಾವ್ ಮತ್ತು ಕೃಷ್ಣ ಅವರ ನಡುವೆ ಸಂಧಾನ ನಡೆಸಲು ಪ್ರಯತ್ನಿಸಿ ಕೊನೆಗೊಮ್ಮೆ ಅದರಲ್ಲಿ ಯಶಸ್ವಿಯಾದರು.
೧೯೭೭ ರಿಂದ ೧೯೮೦ರವರೆಗೆ ನಡೆದ ಈ ‘ರಾಮ ವರ್ಸಸ್ ಕೃಷ್ಣ’ ಮುನಿಸಿನಲ್ಲಿ ಹೈರಾಣಾದದ್ದು ಮಾತ್ರ ಎರಡೂ ಗುಂಪಿನ ನಟರೊಂದಿಗೆ ಸಿನಿಮಾ ಮಾಡಬೇಕಿದ್ದ ನಾಯಕ ನಟಿಯರು, ಪೋಷಕ ನಟ-ನಟಿಯರು ಮತ್ತು ಖಳನಟರು. ಆ ಕಾಲದ ಸ್ಟಾರ್ ನಟಿಯಾದ ಜಯಪ್ರದ ಆ ಕಾಲಘಟ್ಟದಲ್ಲಿದ್ದ ಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾ, “ಅಂತಹ ಸ್ಥಿತಿ ಶತ್ರುವಿಗೆ ಸಹ ಬರುವುದು ಬೇಡ” ಎಂದದ್ದು ಆ ಸಂದರ್ಭದಲ್ಲುಂಟಾದ ಮುನಿಸಿನ ತೀವ್ರತೆ ಎಂತಹುದು ಎಂಬುದಕ್ಕೆ ಸಾಕ್ಷಿ. ಗಮನಿಸಬೇಕಾದ ಅಂಶವೆಂದರೆ ‘ದಾನವೀರ ಶೂರ ಕರ್ಣ’ ಮತ್ತು ‘ಕುರುಕ್ಷೇತ್ರ’ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿದವು.
ಪದ್ಮಾಲಯ ಫಿಲಂಸ್ ಮೂಲಕ ನಿರ್ಮಾಪಕರಾಗಿಯೂ ಯಶಸ್ವಿಯಾದ ಕೃಷ್ಣ ಅವರು ನಿರ್ದೇಶನಕ್ಕಿಳಿದಾಗ ಅಷ್ಟೊಂದು ಯಶಸ್ಸು ಕಾಣಲಿಲ್ಲ. ಹಿಂದಿ ನಟ ಜಿತೇಂದ್ರ ಅವರ ಎಂಬತ್ತರ ದಶಕದಲ್ಲಿ ಬಂದ ಬಹುತೇಕ ಚಿತ್ರಗಳು ಕೃಷ್ಣ ಅವರ ಚಿತ್ರದ ರಿಮೇಕುಗಳು ಎಂಬುದು ಗಮನಾರ್ಹ. ಕೃಷ್ಣ ಅವರು ಜಿತೇಂದ್ರ ಅವರಿಗಾಗಿ ತುಂಬ ಚಿತ್ರಗಳನ್ನು ಹಿಂದಿಯಲ್ಲಿ ನಿರ್ಮಿಸಿದ್ದಾರೆ. ಅಮಿತಾಬ್ ಬಚ್ಚನ್, ವಿನೋದ ಖನ್ನಾ ಮತ್ತು ಮಿಥುನ್ ಚಕ್ರವರ್ತಿಯವರ ಅಬ್ಬರದ ನಡುವೆ ಜಿತೇಂದ್ರ ಅವರು ನಿಲ್ಲುವಂತಾದದ್ದೇ ಕೃಷ್ಣ ಅವರ ಕೃಪೆಯಿಂದ. ಜಿತೇಂದ್ರ ಅವರು ಮಾತ್ರ ಕೃಷ್ಣ ಅವರಿಂದ ಪಡೆದ ಇಂತಹ ಉಪಕಾರವನ್ನು ಎಲ್ಲಿಯೂ ಸ್ಮರಿಸಿಕೊಳ್ಳುವುದಿಲ್ಲ. ಬಾಲಿವುಡ್ ಮಂದಿಗೆ ಕೃತಜ್ಞತೆ ತುಂಬ ಕಡಿಮೆ.


ಅದುರ್ತಿ ಸುಬ್ಬರಾವ್, ಪೇರಾಲ, ದಾಸರಿ ನಾರಾಯಣ ರಾವ್, ಕೆ. ಬಾಪಯ್ಯ, ಕೆ. ಎಸ್. ಆರ್. ದಾಸ್, ಕೆ. ರಾಘವೇಂದ್ರ ರಾವ್, ಎಂ. ಮಲ್ಲಿಕಾರ್ಜುನ ರಾವ್, ಪಿ. ಸಾಂಬಶಿವ ರಾವ್, ವಿ. ರಾಮಚಂದ್ರ ರಾವ್, ವಿಜಯ ನಿರ್ಮಲ, ಬಿ. ವಿ. ಪ್ರಸಾದ್, ಕೆ. ಸುಬ್ಬಾರಾವ್, ಪಿ. ಚಂದ್ರಶೇಖರ ರೆಡ್ಡಿ, ಕೆ. ಎಸ್. ರಾಮಿರೆಡ್ಡಿ, ಲಕ್ಷ್ಮಿ ದೀಪಕ್, ಕಮಲಾಕರ ಕಾಮೇಶ್ವರ ರಾವ್, ಈ. ವಿ. ವಿ. ಸತ್ಯನಾರಾಯಣ, ಎಂ. ಎಸ್. ಗೋಪಿನಾಥ್, ಕೆ. ವಾಸು, ಬಾಪು, ಕೋಡಿ ರಾಮಕೃಷ್ಣ, ಎ. ಕೋದಂಡರಾಮಿರೆಡ್ಡಿ ಮತ್ತು ಭಾರತೀರಾಜಾ ಸೇರಿದಂತೆ ಆ ಕಾಲದ ಯಶಸ್ವಿ ನಿರ್ದೇಶಕರೊಟ್ಟಿಗೆಲ್ಲ ಕೃಷ್ಣ ಅವರು ಕೆಲಸ ಮಾಡಿದ್ದಾರೆ.
ಶಾರದಾ, ಜಮುನಾ, ಜಯಲಲಿತ, ಕಾಂಚನ, ಭಾರತಿ, ವಾಣಿಶ್ರೀ, ವಿಜಯ ನಿರ್ಮಲ, ಪ್ರಭಾ, ಮಂಜುಳಾ, ಜಯಚಿತ್ರ, ಜಯಸುಧ, ಮಾಧವಿ, ಸುಜಾತಾ, ಗೀತಾ, ಸುಹಾಸಿನಿ, ವಿಜಯಶಾಂತಿ, ಅಂಬಿಕಾ, ರಾಧಾ, ದೀಪಾ, ರೇಖಾ, ಭಾನುಪ್ರಿಯಾ, ಶೋಭನಾ, ಗೌತಮಿ, ಮೀನಾ, ಯಮುನಾ, ಸೌಂದರ್ಯ, ಮಾಲಾಶ್ರೀ, ರೋಜಾ, ರಂಭಾ, ಪ್ರೇಮಾ, ಇಂದ್ರಜಾ, ಅಮನಿ ಮತ್ತು ರವಳಿ ಸೇರಿದಂತೆ ಸುಮಾರು ೫೦ಕ್ಕೂ ಅಧಿಕ ನಾಯಕನಟಿಯರೊಂದಿಗೆ ಕೃಷ್ಣ ಅವರು ನಟಿಸಿದ್ದಾರೆ.
ಕೃಷ್ಣ – ವಿಜಯ ನಿರ್ಮಲ, ಕೃಷ್ಣ – ಜಯಪ್ರದ ಮತ್ತು ಕೃಷ್ಣ – ಶ್ರೀದೇವಿ ಜೋಡಿ ತೆರೆಯ ಮೇಲೆ ಅಪಾರ ಯಶಸ್ಸನ್ನು ಕಂಡವು. ೧೯೬೦ರ ಕೊನೆ ಮತ್ತು ೧೯೭೦ರ ಆರಂಭದಲ್ಲಿ ಕೃಷ್ಣ – ವಿಜಯ ನಿರ್ಮಲ ಜೋಡಿ ತುಂಬ ಖ್ಯಾತಿ ಪಡೆದಿತ್ತು. ಇವರಿಬ್ಬರೂ ಒಟ್ಟು ೪೮ ಚಿತ್ರಗಳಲ್ಲಿ ನಟಿಸಿದ್ದಾರೆ. ಕೃಷ್ಣ ಅವರ ಎರಡನೆಯ ಪತ್ನಿಯಾದ ವಿಜಯ ನಿರ್ಮಲ ಯಶಸ್ವಿ ನಿರ್ದೇಶಕರೂ ಹೌದು.
ಕೃಷ್ಣ ಅವರು ಸೂಪರ್ ಸ್ಟಾರ್ ಆಗಿ ಮೆರೆದ ಒಂದೂವರೆ ದಶಕದ ಅವಧಿಯಲ್ಲಿ ಅವರು ಬಹುತೇಕ ನಟಿಸಿದ್ದು ಜಯಪ್ರದ ಮತ್ತು ಶ್ರೀದೇವಿ ಅವರೊಂದಿಗೆ. ಕೃಷ್ಣ – ಜಯಪ್ರದ ಮತ್ತು ಕೃಷ್ಣ – ಶ್ರೀದೇವಿ ಜೋಡಿ ತೆರೆಯ ಮೇಲೆ ಅಕ್ಷರಶಃ ಮೋಡಿ ಮಾಡಿತ್ತು. ಕೃಷ್ಣ ಅವರು ಜಯಪ್ರದ ಮತ್ತು ಶ್ರೀದೇವಿಯವರೊಂದಿಗೆ ನಟಿಸಿದ ಚಿತ್ರಗಳೆಲ್ಲ ಬಹುತೇಕ ಯಶಸ್ವಿಯಾಗಿವೆ. ಅಲ್ಲೊಂದು ಇಲ್ಲೊಂದು ಚಿತ್ರ ಕಡಿಮೆ ಗಳಿಕೆ ಮಾಡಿರಬಹುದಷ್ಟೇ. ಕೃಷ್ಣ ಜಯಪ್ರದ ಅವರೊಂದಿಗೆ ೪೭ ಮತ್ತು ಶ್ರೀದೇವಿಯವರೊಂದಿಗೆ ೩೧ ಚಿತ್ರಗಳಲ್ಲಿ ನಟಿಸಿದ್ದಾರೆ.
‘ಏಜೆಂಟ್ ಗೋಪಿ’, ‘ರಹಸ್ಯ ಗೂಢಚಾರಿ’, ‘ಜತೆಗಾಡು’, ‘ಅಲ್ಲರಿ ಭಾವ’, ‘ಕೊತ್ತ ಅಲ್ಲುಡು’, ‘ಭಲೇ ಕೃಷ್ಣುಡು’, ‘ಕೃಷ್ಣ ಗಾರುಡಿ’,’ಕೊತ್ತಪೇಟ ರೌಡಿ’, ‘ಬಂಡೋಡು ಗುಂಡಮ್ಮ’, ‘ನಿವುರುಗಪ್ಪಿನ ನಿವ್ವು’, ‘ಊರಿಕಿ ಮೊನಗಾಡು’, ‘ಸಿರಿಪುರಂ ಮೊನಗಾಡು’, ‘ಮಹಾ ಮನಿಷಿ’, ‘ಸೂರ್ಯ ಚಂದ್ರ’, ‘ಪಗಬಟ್ಟಿನ ಸಿಂಹ’, ‘ಅಮ್ಮಾಯಿ ಮೊಗಡು ಮಾಮಕಿ ಯಮುಡು’, ‘ರೇಗಿಲ ಹೃದಯಾಲು’, ‘ಅಮಾಯಕುಡು ಕಾದು ಅಸಾಧ್ಯುಡು’, ‘ದೊಂಗಲವೇಟಾ’, ‘ನಾಯಕುಲುಕಿ ಸವಾಲ್’, ‘ಸಿಂಹಾಸನಂ’, ‘ಮಹಾಸಂಗ್ರಾಮಂ’, ‘ಯುದ್ಧಂ’ ಮತ್ತು ‘ಏಕಲವ್ಯ’ ಚಿತ್ರಗಳು ಕೃಷ್ಣ – ಜಯಪ್ರದ ಜೋಡಿಯ ಯಶಸ್ವಿ ಚಿತ್ರಗಳು.
‘ಪ್ರೇಮ ನಕ್ಷತ್ರಂ’, ‘ವಜ್ರಾಯುಧಂ’, ‘ಕಲವರಿ ಸಂಸಾರಂ’, ‘ಬಂಗಾರು ಭೂಮಿ’, ‘ಬಂಗಾರು ಕೊಡಕು’, ‘ಬಂಗಾರು ಭಾವ’, ‘ತಂದ್ರಿ ಕೊಡುಕುಲ ಚಾಲೆಂಜ್’, ‘ಮಾಮಾ ಅಲ್ಲುಲಾ ಸವಾಲ್’, ‘ಕಂಚು ಕಾಗದಾ’, ‘ಬುರ್ರೇಪಾಲಂ ಬುಲ್ಲೋಡು’, ‘ಮುಕುಟಂಲೇನೀ ಮಹಾರಾಜು’, ‘ಮಹಾರಾಜಶ್ರೀ ಮಾಯಾಗಾಡು’, ಪಚ್ಚನಿ ಕಾಪುರಂ’, ‘ಮಾ ವೂರಿ ಮಗಾಡು’, ‘ಜಯಂ ಮನದೇ’, ‘ಷಂಶೇರ್ ಶಂಕರ್’, ‘ಭೋಗ ಭಾಗ್ಯಾಲು’, ‘ಅದೃಷ್ಟವಂತುಡು’, ‘ರಾಮರಾಜ್ಯಂಲೋ ಭೀಮರಾಜು’, ‘ಕೃಷ್ಣಾರ್ಜುನುಲು’, ‘ಚುಟ್ಟಾಲುನ್ನಾರು ಜಾಗ್ರತ’, ‘ಘರಾನಾ ದೊಂಗ’, ‘ಕಿರಾಯಿ ಕೋಟಿಗಾಡು’, ‘ಸಮಾಜಾನಿಕಿ ಸವಾಲ್’ ಮತ್ತು ‘ಕೈದಿ ರುದ್ರಯ್ಯ’ ಚಿತ್ರಗಳು ಕೃಷ್ಣ – ಶ್ರೀದೇವಿ ಜೋಡಿಯ ಯಶಸ್ವಿ ಚಿತ್ರಗಳು.


ಸಂಕ್ರಾಂತಿ ಹಬ್ಬದಲ್ಲಿ ಬಿಡುಗಡೆಯಾಗುವ ಚಿತ್ರಗಳಿಗೆ ತೆಲುಗು ಚಿತ್ರರಂಗದಲ್ಲಿ ತುಂಬ ಮಹತ್ವವಿದೆ. ಸಂಕ್ರಾಂತಿ ಸಂದರ್ಭದಲ್ಲಿ ಬಂದ ಚಿತ್ರಗಳ ಗೆಲುವು ಸ್ಟಾರ್ ಡಂ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ೧೯೭೭ ರಿಂದ ೧೯೮೭ರವರೆಗೆ ಸುಮಾರು ಒಂದು ದಶಕದ ಕಾಲ ಕೃಷ್ಣ ಅವರ ಚಿತ್ರಗಳು ಸಂಕ್ರಾಂತಿ ಸಂದರ್ಭದಲ್ಲಿ ಬಹುದೊಡ್ಡ ಗೆಲುವು ಸಾಧಿಸುತ್ತಲೇ ಬಂದವು. ೧೯೮೨ರಲ್ಲಿ ಬಂದ ‘ಊರಿಕಿ ಮೊನಗಾಡು’ ಬಾಕ್ಸಾಫೀಸಿನಲ್ಲಿ ದಾಖಲೆಯ ಗಳಿಕೆ ಮಾಡಿತು. ೧೯೮೫ರಲ್ಲಿ ಬಂದ ‘ಅಗ್ನಿಪರ್ವತಂ’ ಚಿತ್ರ ‘ಊರಿಕಿ ಮೊನಗಾಡು’ ಸೇರಿದಂತೆ ಆವರೆಗಿನ ಎಲ್ಲ ಚಿತ್ರಗಳ ದಾಖಲೆಗಳನ್ನು ಮುರಿದು ಬಾಕ್ಸಾಫೀಸಿನಲ್ಲಿ ಹೊಸ ದಾಖಲೆ ಮಾಡಿತು. ‘ಅಗ್ನಿಪರ್ವತಂ’ ಚಿತ್ರದ ಯಶಸ್ಸು ಕೃಷ್ಣ ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದಿತು.
ಎಂಬತ್ತರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಕೃಷ್ಣ ಎಲೂರು ಕ್ಷೇತ್ರದಿಂದ ಒಂದು ಬಾರಿ ಸಂಸದರಾಗಿದ್ದರು. ರಾಜೀವ್ ಗಾಂಧಿಯವರ ಮಿತ್ರರಾಗಿದ್ದ ಕೃಷ್ಣ ಅವರು ರಾಜೀವರ ಭೀಕರ ಹತ್ಯೆಯಿಂದ ತುಂಬ ನೊಂದರು. ಮುಂದೆ ರಾಜಕೀಯ ಒಗ್ಗದ್ದರಿಂದ ಅದನ್ನು ಬಿಟ್ಟು ಚಿತ್ರರಂಗಕ್ಕೆ ಮರಳಿದರು. ತೊಂಬತ್ತರ ದಶಕದಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಯಾಗಿತ್ತು. ಚಿರಂಜೀವಿ, ನಾಗಾರ್ಜುನ, ವೆಂಕಟೇಶ್ ಮತ್ತು ಬಾಲಕೃಷ್ಣ ಚಿತ್ರರಂಗವನ್ನಾಳುತ್ತಿದ್ದರು.
ಸ್ಟಾರ್ ಡಂ ಮರಳಿ ಪಡೆಯಲು ಹರಸಾಹಸ ಮಾಡಿದ ಕೃಷ್ಣ ಅದರಲ್ಲಿ ಅಷ್ಟೊಂದು ಯಶಸ್ವಿಯಾಗಲಿಲ್ಲ. ಸೂಪರ್ ಸ್ಟಾರ್ ಎಂದು ಪಡೆದ ಖ್ಯಾತಿ ಉಳಿಸಿಕೊಳ್ಳಲು ಹೋಗಿ ತಮ್ಮ ಇಮೇಜಿಗೆ ತಕ್ಕುದಲ್ಲದ ಮಸಾಲಾ ಸಿನಿಮಾಗಳನ್ನು ಮಾಡಿ ಸಿನಿ ಪಂಡಿತರು ಮತ್ತು ಚಿತ್ರ ರಸಿಕರಿಂದ ಟೀಕೆಗೊಳಗಾದರು. ಸುದೈವವಶಾತ್ ಬಲು ಬೇಗ ಎಚ್ಚೆತ್ತುಕೊಂಡ ಕೃಷ್ಣ ಅವರು ತಮ್ಮ ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡುತ್ತ ಘನತೆಯುಳಿಸಿಕೊಂಡರು ಎಂಬುದು ಗಮನಾರ್ಹ.
ಸೂಪರ್ ಸ್ಟಾರ್ ಎಂಬ ಪದಕ್ಕೆ ಮತ್ತೊಂದು ಹೆಸರು ನಟ ಕೃಷ್ಣ. ಅವರು ತೆಲುಗು ಚಿತ್ರರಂಗದಲ್ಲಿ ನಟಿಸಿದ ವೈವಿಧ್ಯಮಯ ಚಿತ್ರಗಳು, ಮಾಡಿದ ಹೊಸ ಬಗೆಯ ಪ್ರಯೋಗಗಳು, ಪಡೆದ ಅಪಾರ ಯಶಸ್ಸು ಮತ್ತು ಜನಮನ್ನಣೆ ಅವರನ್ನು ಇಡೀ ಭಾರತೀಯ ಚಿತ್ರರಂಗ ಗೌರವದಿಂದ ನೋಡುವಂತೆ ಮಾಡಿತು. ಕೃಷ್ಣ ಅವರು ಆರು ದಶಕಗಳ ವೃತ್ತಿಜೀವನದಲ್ಲಿ ಕೇವಲ ತೆಲುಗು ಚಿತ್ರಗಳಲ್ಲಿ ಮಾತ್ರ ನಟಿಸಿದರು. ಹಿಂದಿ ಮತ್ತು ತಮಿಳು ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಅರಸಿ ಬಂದರೂ ತೆಲುಗಿನ ಮೇಲಿನ ಪ್ರೀತಿಯಿಂದ ಬೇರೆ ಭಾಷೆಯ ಚಿತ್ರಗಳನ್ನು ಮಾಡಲಿಲ್ಲ.
‘ಪದ್ಮಾಲಯ ಫಿಲಂಸ್’ ಮತ್ತು ‘ಪದ್ಮಾಲಯ ಸ್ಟುಡಿಯೋ’ ಮೂಲಕ ತೆಲುಗಿನಲ್ಲಿ ಅದ್ದೂರಿ ಸಿನಿಮಾಗಳನ್ನು ನಿರ್ಮಿಸಿದರು. ನಿರ್ಮಾಪಕರು ಮತ್ತು ನಿರ್ದೇಶಕರ ನಟ ಎಂದೇ ಹೆಸರಾಗಿದ್ದ ಅವರು ಹಣಕ್ಕಾಗಿ ಎಂದೂ ಕೆಲಸ ಮಾಡಿದವರಲ್ಲ. ಒಂದು ದಿನಕ್ಕೆ ಹದಿನೆಂಟು ಗಂಟೆಗಳ ಕಾಲ, ಮೂರು ಶಿಫ್ಟುಗಳಲ್ಲಿ ಕೆಲಸ ಮಾಡಿದ ಏಕೈಕ ತೆಲುಗು ನಟ ಕೃಷ್ಣ. ಅವರ ಯಾವುದಾದರೂ ಒಂದು ಚಿತ್ರ ಚೆನ್ನಾಗಿ ಗಳಿಕೆ ಮಾಡದಿದ್ದರೆ ಅದನ್ನು ಸರಿದೂಗಿಸಲು ಮತ್ತೊಂದು ಚಿತ್ರವನ್ನು ಉಚಿತವಾಗಿ ಮಾಡಿಕೊಡುತ್ತಿದ್ದರು. ಕೃಷ್ಣ ಅವರು ತೆಲುಗಿನಲ್ಲಿ ತುಂಬ ಜನ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಬೆಳೆಸಿದ್ದಾರೆ.


ಕೃಷ್ಣ ಅವರು ತೆಲುಗಿನಲ್ಲಿ ಒಟ್ಟು ೩೫೦ ಚಿತ್ರಗಳಲ್ಲಿ ನಟಿಸಿದ್ದಾರೆ. ೨೬ ಬಾರಿ ದ್ವಿಪಾತ್ರ ಮತ್ತು ೭ ಬಾರಿ ತ್ರಿಪಾತ್ರ ಮಾಡಿದ್ದಾರೆ. ಇದೂ ಸಹ ಒಂದು ವಿಶಿಷ್ಟ ದಾಖಲೆ. ತೆಲುಗಿನ ಮೊದಲ ಬಾಂಡ್ ಚಿತ್ರ ‘ಗೂಢಚಾರಿ ೧೧೬’, ಮೊದಲ ಕೌಬಾಯ್ ಚಿತ್ರ ‘ಮೋಸಗಾಲ್ಲಕು ಮೋಸಗಾಡು’ ಮಾಡಿದ್ದು ಕೃಷ್ಣ. ತೆಲುಗಿನ ಮೊದಲ ಸಿನಿಮಾ ಸ್ಕೋಪ್ ಚಿತ್ರ ‘ಅಲ್ಲೂರಿ ಸೀತಾರಾಮರಾಜು’, ಮೊದಲ ಈಸ್ಟಮನ್ ಕಲರ್ ಚಿತ್ರ ‘ಈನಾಡು’, ಮೊದಲ 70mm ಚಿತ್ರ ‘ಸಿಂಹಾಸನಂ’ ಮತ್ತು ಮೊದಲ DTS ಚಿತ್ರ ‘ತೆಲುಗು ವೀರಲೇವರಾ’ (ಇದು ಕೃಷ್ಣ ಅವರ ೩೦೦ನೆಯ ಚಿತ್ರ).
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಕೃಷ್ಣ ಅವರಿಗೆ ಕಾಂಗ್ರೆಸ್ ಬೆಂಬಲಿಗರು ಎಂಬ ಕಾರಣಕ್ಕಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಗಲಿಲ್ಲ ಎಂಬ ಅವರ ಅಭಿಮಾನಿಗಳ ಮಾತಿನಲ್ಲಿ ಖಂಡಿತ ಹುರುಳಿದೆ. ಅವರಿವರು ಕೊಡುವ ಸಣ್ಣ ಪುಟ್ಟ ಪ್ರಶಸ್ತಿಗಳಿಗ ಯಾವ ಮೌಲ್ಯವೂ ಇಲ್ಲ. “ಸೂಪರ್ ಸ್ಟಾರ್ ಎಂದರೆ ಕೃಷ್ಣ, ಕೃಷ್ಣ ಎಂದರೆ ಸೂಪರ್ ಸ್ಟಾರ್” ಎಂದೇ ಖ್ಯಾತಿ ಪಡೆದ ಕೃಷ್ಣ ಅವರು ಇಂತಹ ಎಲ್ಲ ಪ್ರಶಸ್ತಿ – ಗೌರವಗಳಿಗಿಂತ ತುಂಬ ದೊಡ್ಡವರು. ದಶಕಗಳ ಕಾಲ ಅಕ್ಷರಶಃ ತೆಲುಗು ಚಿತ್ರರಂಗವನ್ನಾಳಿ, ಹಲವಾರು ಸಾರ್ಥಕ ಸಿನಿಮಾಗಳನ್ನು ನೀಡಿದ ಕೃಷ್ಣ ಅವರಿಗೆ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಮತ್ತು ಭಾರತೀಯ ಸಿನಿ ಚರಿತ್ರೆಯಲ್ಲಿ ಶಾಶ್ವತ ಸ್ಥಾನವಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಸೂಪರ್ ಸ್ಟಾರ್ ಕೃಷ್ಣ”

  1. Raghavendra Mangalore

    ತೆಲುಗು ಚಿತ್ರರಂಗದ ಪರಿಚಯ ಇರುವದರಿಂದ ಸಹಜವಾಗಿ ಲೇಖನ ಇಷ್ಟವಾಯಿತು. ಅಭಿನಂದನೆಗಳು ಲೇಖಕ ವಿಕಾಸ್ ಹೊಸಮನಿ ಅವರಿಗೆ ಸೂಪರ್ ಸ್ಟಾರ್ ಕೃಷ್ಣರ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿ ಮನಸೆಳೆಯುವ ಅಂಕಣ ಬರೆದಿದ್ದಕ್ಕೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter