ಈ ಕೃತಿ ನಾವು ಮುಂಬಯಿ ಚುಕ್ಕಿ ಸಂಕುಲದ ಗೆಳೆಯರು ಹಠಮಾಡಿ ನಮ್ಮ ಬಳಗದಲ್ಲೋರ್ವರಾದ ಚಂದ್ರಶೇಖರ ರಾವ್ ಅವರ ಕೃತಿಯೊಂದನ್ನು ತರಲು ಮುಂದಾದ ಪರಿಣಾಮವಾಗಿದೆ. ಚುಕ್ಕಿ ಸಂಕುಲದ ಸೃಜನಶೀಲ ನಾಟಕಕಾರ, ಸಾಹಿತಿ ಸಾ.ದಯಾ ಅವರು ಪ್ರೀತಿಯಿಂದ ಕೃತಿಯ ಸಂಪಾದನೆಯ ಜವಾಬ್ದಾರಿ ಹೊತ್ತುಕೊಂಡವರು. ಬಹು ಶ್ರಮವಹಿಸಿ ಇಲ್ಲಿನ ಬರಹಗಳನ್ನು ಸಂಕಲಿಸಿರುವರು. ಈ ಯೋಜನೆಗೆ ತುಂಬು ಮನಸ್ಸಿನಿಂದ ಕೈಜೋಡಿಸಿ ಸಹಕರಿಸಿದವರು ಪ್ರತಿಷ್ಠಾನದ ಅಧ್ಯಕ್ಷೆ ರಾವ್ ಅವರ ಧರ್ಮಪತ್ನಿ ಶ್ರೀದೇವಿ ರಾವ್ ಇವರಿಬ್ಬರಿಗೆ ಈ ಸಂದರ್ಭ ಅಭಿನಂದನೆ ಸಲ್ಲಲೇ ಬೇಕು. ಹೌದು, ಈ ಕೃತಿ ಗೆಳೆಯ ಚಂದ್ರಶೇಖರ ರಾವ್ ಜೀವಂತ ಇರುವಾಗ ಪ್ರಕಟವಾಗಬೇಕಿತ್ತು. ನಿರಂತರ ಸಾಹಿತ್ಯ ಕೃಷಿ ಮಾಡುತ್ತ ಬಂದಿದ್ದರೂ, ಅವರೆಂದೂ ತಮ್ಮ ಕೃತಿ ಪ್ರಕಟಗೊಳ್ಳಬೇಕೆಂದು ಬಯಸಿದವರೇ ಅಲ್ಲ! ಬೆನ್ನುಡಿಯಲ್ಲಿ ಹಿರಿಯ ಚಿಂತಕಿ, ಲೇಖಕಿ ಗಿರಿಜಾ ಶಾಸ್ತ್ರಿಯವರು, “ ಈ ಕೃತಿ ಚಂದ್ರಶೇಖರ ರಾವ್ ಅವರ ಮರಣೋತ್ತರ ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ ಏಕಕಾಲಕ್ಕೆ ಸಂತೋಷದ ಜೊತೆಗೆ ದು:ಖವನ್ನೂ ತಂದಿದೆ” ಎಂದಿರುವುದು ಅಕ್ಷರಶ: ನಿಜ. ಈ ನಮ್ಮ ಗೆಳೆಯ ಬೈಂದೂರಿನ ಸಮೀಪದ ಕಿರಿಮಂಜೇಶ್ವರದವರು. ಕುಂದಾಪುರದ ಬಂಡಾರ್ಸ್ಕರ್ ಕಾಲೇಜಿನಲ್ಲಿ ಬಿ.ಎ.ಪದವಿ ಮುಗಿಸಿ ಮುಂಬೈಗೆ ಬಂದವರು. ಕಲಿಕೆಯಲ್ಲಿ ಸದಾ ಮುಂದಿದ್ದ ರಾವ್ ಮುಂಬಯಿ ವಿ.ವಿ. ಮೂಲಕ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಕನ್ನಡದಲ್ಲೂ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ಆರಂಭದಲ್ಲಿ ಸಣ್ಣಪುಟ್ಟ ಕಂಪನಿಯಲ್ಲಿ ಕೆಲಸ ಮಾಡುತ್ತ ತಮ್ಮ ಹೆತ್ತವರನ್ನೂ ಮುಂಬಯಿಗೆ ಕರೆಯಿಸಿಕೊಳ್ಳುವರು. ತಮ್ಮ ಕಲಿಕಾ ಜಿಜ್ಞಾಸೆಯಿಂದಾಗಿ ICWA ಪದವಿಯನ್ನು ಮಾಡಿ ಪ್ರತಿಷ್ಠಿತ ಎ.ಪಿ.ಐ. ಕಂಪನಿಯಲ್ಲಿ ಅಕೌಂಟ್ಸ್ ಸುಪರ್ ವೈಸರ್ ಆಗಿ ಸೇರುತ್ತಾರೆ. ಮುಂದೆ ಈ ಕಂಪನಿ ಮುಚ್ಚುವ ಸಂದರ್ಭ ಬಂದಾಗ ಶೋಷಿತ ಕಾರ್ಮಿಕರ ಪರವಾಗಿ ನಿಂತು ಕಂಪನಿಯ ವಿರುದ್ಧ ಏಕಾಂಗಿಯಾಗಿ ಕಾನೂನು ಹೋರಾಟ ಮಾಡಿದವರು. ಮುಂದೆ ಇನ್ನೊಂದು ದೊಡ್ಡ ಫಾರ್ಮಾ ಕಂಪನೆಯಲ್ಲಿ ಎಕ್ಸೆಕ್ಯೂಟಿವ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಾರೆ. ರಾವ್ ಅವರು ಅದಾಗಲೇ ತೆರೆಮರೆಯಲ್ಲಿ ಅನೇಕ ಬಡ ಮಕ್ಕಳ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತ ಬಂದವರು. ಮುಂಬಾಯಿಗೆ ಬಂದು ಕನ್ನಡ ಸಂಸ್ಥೆಗಳ, ಸಾಹಿತಿಗಳ ಒಡನಾಟದಿಂದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆ ಮೂಲಕ ತಮ್ಮೊಳಗಿನ ಬರಹಗಾರನ ಧ್ವನಿಗೆ ಕಿವಿಕೊಟ್ಟುದರ ಪರಿಣಾಮವೇ ಕಥೆ,ಕವನ, ಹರಟೆ ಬರಹಗಳನ್ನು ಬರೆಯುವಂತಾಯಿತು. ಹಿರಿಯ ಸಾಹಿತಿ ಡಾ. ಜಿ.ಡಿ. ಜೋಶಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಅವರ ಪ್ರತಿಷ್ಠಾನದಲ್ಲಿ, ಕ.ಸಾ.ಪ. ಮಹಾರಾಷ್ಟ್ರ ಘಟಕದಲ್ಲಿ , ಮುಂಬಯಿ ಕನ್ನಡ ಸಂಘದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾರೆ. ನಾವು ಸಮಾನ ಮನಸ್ಕರಾದ ಗೆಳೆಯರು ಚಂದ್ರಶೇಖರ ಅವರ ಮನೆಯಲ್ಲಿ ಸಾಹಿತ್ಯದ ನೆಪದಲ್ಲಿ ಸೇರುತ್ತಿದ್ದೆವು. ಹೀಗೆ ಮನೆ ಮನೆ ಸಾಹಿತ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು ರಾವ್ ಅವರ ಮನೆಯಲ್ಲೆ. ನಮ್ಮ ಬಳಗಕ್ಕೆ ಮುಂಬಯಿ ಚುಕ್ಕಿ ಸಂಕುಲ ಅಂತ ನಾಮಕರಣ ಮಾಡಿ ಪ್ರಥಮ ಕಾರ್ಯಕ್ರಮವನ್ನು ಜಯಂತ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದೆವು. ಮುಂದೆ ರಾವ್ ಅವರು ಕ.ಸಾ.ಪ. ಮಹಾರಾಷ್ಟ್ರ ಘಟಕದ ಕಾರ್ಯದರ್ಶಿಯಾದಾಗ ಅವರ ಇಚ್ಛೆಯಂತೆ ಮತ್ತು ನಮ್ಮೆಲ್ಲರ ಒಪ್ಪಿಗೆಯ ಮೇರೆಗೆ ಈ ಮನೆ ಮನೆ ಕಾರ್ಯಕ್ರಮವನ್ನು ಘಟಕದ ಕಾರ್ಯಕ್ರಮದ ಒಂದು ಭಾಗವಾಗಿಸಿಕೊಂಡರು. ಇದು ಮುಂದಿನ ದಿನಗಳಲ್ಲಿ ಡಾ. ಜೋಶಿ ಅವರ ಪ್ರತಿಷ್ಠಾನದ ಮೂಲಕ ಮುಂದುವರಿಯಲೂ ರಾವ್ ಅವರೇ ಕಾರಣರಾಗುತ್ತಾರೆ. ಈ ಕುರಿತು ಸಂಪಾಕರ ನುಡಿ ಮಾತಿನಲ್ಲಿ ಸಾ.ದಯಾ ಉಲ್ಲೇಖಿಸಿದ್ದಾರೆ. ಈ ಕೃತಿಯಲ್ಲಿ ಒಟ್ಟು ಹದಿಮೂರು ಸಣ್ಣ ದೊಡ್ಡ ಹರಟೆ, ಪ್ರಬಂಧ ಬರಹಗಳಿವೆ. ಎಲ್ಲವೂ ಭಿನ್ನ ಭಿನ್ನ ವಸ್ತುವುಳ್ಳವು. ಒಮ್ಮೊಮ್ಮೆ ಈ ಹರಟೆ ಬರಹಗಳು ಒಣ ಮಾತುಗಳಂತೆ ಬಣಗುಡುವ ಅಪಾಯಕ್ಕೆ, ವಿಷಯಾಂತರಕ್ಕೆ ಒಳಗಾಗುವುದುಂಟು. ಆದರೆ ರಾವ್ ಅವರ ಲವಲವಿಕೆಯ ಬರವಣಿಗೆಯ ಶೈಲಿ ಹಾಗಾಗದಂತೆ ನಿಗಾವಹಿಸಿವೆ. ಇದಕ್ಕೆ ಮುಖ್ಯ ಕಾರಣ ಲೇಖಕರ ಹಾಸ್ಯ ಪ್ರಜ್ಞೆ. ಪ್ರತಿ ಸನ್ನಿವೇಶ, ಕಥೆ,ಅದಕ್ಕೆ ಪೂರಕ ಉಪಕಥೆ ಹೇಳುವಾಗಲೂ ನವಿರಾದ ಹಾಸ್ಯ ಓದುಗರನ್ನು ಸೆಳೆಯುತ್ತದೆ. ಇಲ್ಲಿನ ಬರಹಗಳಲ್ಲಿ ಗಮನಕ್ಕೆ ಬರುವ ಎರಡನೇ ಅಂಶ ವಿಡಂಬನೆ ಮತ್ತು ಅಲ್ಲಲ್ಲಿ ತೆಳುವಾಗಿ ತೇಲಿ ಬಿಟ್ಟ ವ್ಯಂಗ್ಯ. ಇಲ್ಲಿ ವ್ಯಕ್ತವಾಗಿರುವ ವಿಡಂಬನೆ ಮತ್ತು ವ್ಯಂಗ್ಯ ಒಂದು ಹದದಲ್ಲಿದ್ದು, ತೀರಾ ಮೊನಚಾಗಿ ಚುಚ್ಚುವಂತಹದ್ದಲ್ಲ. ಮೂರನೆಯದಾಗಿ, ಆಗಾಗ ಪ್ರಥಮ ಪುರುಷದಲ್ಲಿ ನಿರೂಪಿತಗೊಂಡ ಬರಹಗಳಲ್ಲಿ ಢಾಳಾಗಿ ಗೋಚರಿಸುವ ಲೇಖಕರ ಸಭ್ಯ ವಿನಯವಂತಿಕೆ. ಬಹುಶ: ಒಬ್ಬ ಹರಟೆ ಬರಹಗಾರನಿರಬೇಕಾದ ಈ ಬಹುಮುಖ್ಯ ಅಂಶಗಳನ್ನು ಚಂದ್ರಶೇಖರ ಅವರು ಆಗಲೇ ಕರಗತ ಮಾಡಿಕೊಂಡಿರುವುದು ಗಮನಾರ್ಹ ಅಂಶವೇ ಹೌದು. ‘ಕೆಮ್ಮು ಮತ್ತು ನನ್ನ ಜ್ಞಾನೋದಯವೂ’ ಲೇಖನದಲ್ಲಿ ಕೆಮ್ಮಿನ ನಾನಾ ಅವತಾರಗಳನ್ನು ಅದು ತರುವ ಅವಾಂತರಗಳನ್ನು ಲಘು ಹಾಸ್ಯದಲ್ಲಿ ನಿರೂಪಿಸಿದ್ದಾರೆ. ‘ರಾಕ್ಷಸ ಸಂಧಾನ’ ಪ್ರಬಂಧದಲ್ಲಿ ಸ್ವರ್ಗ ನರಕ ಕಲ್ಪನೆಯಲ್ಲಿ ದೇವತೆಗಳಿಗೂ ರಾಕ್ಷರಿಗೂ ನಡೆವ ಯುದ್ಧ ವಿವರಣೆ ನೀಡುತ್ತ ಪುರಾಣಕ್ಕೂ ವಾಸ್ತವಕ್ಕೂ ತಳಕು ಹಾಕುವುದನ್ನು ಹಾಸ್ಯಮಯ ವಿವರಣೆಯಲ್ಲಿ ಕಾಣುತ್ತೇವೆ. ಅವರೂರಿನ ಕೆಲವು ‘ಪೇಟೆಂಟೇಬಲ್ ವಸ್ತು’ಗಳಾದ ಕಾವೇರಮ್ಮನ ದೋಸೆಯ ಸ್ಪೆಶಾಲಿಟಿ, ಎತ್ತಿನ ಗಾಡಿಯ ಚಕ್ರವನ್ನು ನೆನಪಿಗೆ ತರುವ ಅಕ್ಕಣಿಯಮ್ಮನ ಗಟ್ಟಿ ಚಕ್ಕುಲಿ, ಕಮ್ತಿಯವರ ಹೊಟೇಲಿನ ಚಹಾ, ಪರಮೇಶ್ವರ ಭಟ್ಟರ ಮನೆಯ ತಂಬಿಟ್ಟು ಹೀಗೆ ಇಡೀ ಊರಿನ ವಿಶೇಷ ಖಾದ್ಯಗಳ ವಿಶೇಷತೆಯನ್ನು ವಿವರಿಸುತ್ತ ಓದುಗರ ಬಾಯಲ್ಲಿ ನೀರೂರಿಸುತ್ತಾರೆ. ಇಲ್ಲಿನ ಬರಹಗಳ ಶುಚಿರುಚಿಯ ಸ್ಯಾಂಪಲ್ ಸವಿಯುದಾದರೆ; ‘ ಪ್ರೊಫೆಸರ್ ಮಾರ್ತಾಡಿಯವರೊಂದಿಗೆ ಎರಡು ತಾಸು’ ಸಂದರ್ಶನ ಲೇಖನದ ಒಂದು ಸನ್ನಿವೇಶ ಇಂತಿದೆ. ನಾನು : ಅಂದಿನ ಆಡಳಿತ ವ್ಯವಸ್ಥೆಯ ಬಗ್ಗೆ ಸ್ವಲ್ಪ ಹೇಳುತ್ತೀರಾ ? ಪ್ರೊ. ಮಾರ್ತಾಡಿ : ಅಂದು ಇಂದಿನಂತೆ ಪ್ರಜಾಪ್ರಭುತ್ವ ಇದ್ದಿರಲಿಲ್ಲ.ಅಂದು ರಾಜ ಶ್ರೇಷ್ಠ. ಅಂದು ಅವನ ಸತ್ತಲೂ ಸೂರ್ಯನ ಸುತ್ತ ಗಿರಿಗಿಟಿಯಂತೆ ಗ್ರಹಗಳು ಸುತ್ತುವಂತೆ ಜನರು ಸುತ್ತುತ್ತಿದ್ದರು. ಇಂದು ಬಹು ಸಂಖ್ಯಾತರು (ಮೆಜಾರಿಟಿ) ಹೇಳಿದ್ದಕ್ಕೆ ರಾಜ ತಲೆ ಭಾಗಬೇಕಾಗಿದೆ. ಅಂದು ಎಲ್ಲರೂ ರಾಜನಿಗೆ ತಲೆಬಾಗಬೇಕಾಗಿತ್ತು. ಹಾಗೆ ಬಾಗಿ ಬಾಗಿ ಅವರ ಬೆನ್ನಿಗೆ ಅನುವಂಶಿಕ ಎನ್ನುವಷ್ಟರ ಮಟ್ಟಿಗೆ ಬೆನ್ನುಗೂನು ಬಂದಿರಬಹುದು. ಹಾಗೆ ಅಲ್ಲಿ ಸಿಕ್ಕಿದ ಹೆಣಗಳ ಅಸ್ಥಿ ಪಂಜರಗಳು ಬೆನ್ನು ಬಾಗಿದ ಈ ಕಶೇರುಕ ಪ್ರಾಣಿಗಳದ್ದೇ ಎಂದು ನನ್ನ ಅಭಿಪ್ರಾಯ.” ‘ ಈ ಶತಕದ ಮಹಾವಿಜ್ಞಾನಿ ಡಾ| ತಿಮ್ಮಣ್ಣ ಎಂ.ಎಸ್.’ ಲೇಖನದಲ್ಲಿ; ರಕ್ತ ಹೀರುವ ಈ ಮೂಲ ಪ್ರವೃತ್ತಿ ತಿಗಣಿಯಿಂದ ಬಂದಿದ್ದು, ಮಾನವನ ರಕ್ತದಲ್ಲೂ ಈ ಪ್ರವೃತ್ತಿಯಿದೆ. ಇದಕ್ಕೆ ಜಾಗತಿಕ ಇತಿಹಾಸದಿಂದಬೇಕಾದಷ್ಟು ಉದಾಹರಣೆಯನ್ನು ನೀಡಬಹುದು. ಮತಧರ್ಮದ ಹೆಸರಿನಲ್ಲಾಗಲಿ, ರಾಜಕೀಯ ಹೆಸರಿನಲ್ಲಾಗಲಿ ನಡೆದ ಯಾವುದೇ ಘರ್ಷಣೆಗೆ ಮಾನವನ ಈ ಮೂಲಭೂತ ಪ್ರವೃತ್ತಿಯೇ ಕಾರಣ. ಈ ರಕ್ತಗುಣ ಹೇಗೆ ಬಂತು? ಮಂಗನಿಂದಲೇ ? ಅಲ್ಲ, ಪಶುಪಕ್ಷಿಯಿಂದಲೇ? ಅಲ್ಲ. ಇದು ತಿಗಣಿಯಿಂದ ಬಂದಿದ್ದು.” ಎಂಬ ಜ್ಞಿಜ್ಞಾಸೆ ವ್ಯಕ್ತ ಪಡಿಸುತ್ತಾರೆ. ‘ಬಜೆಟ್ ‘ ನ ಮಹತ್ವವನ್ನು ಹೇಳುತ್ತ ಆ ಪ್ರಬಂಧದಲ್ಲಿ ಲೇಖಕರು; “ ತುಟಿಯ ಪರಿಧಿಯೊಳಗೆಯೇ ಹಲ್ಲಿದ್ದರೆ ಚೆನ್ನ. ತುಟಿ ಬಿಟ್ಟು ಹಲ್ಲು ಹೊರಗೆ ಬಂದರೆ ? ನಿಮಗೆ ಗೊತ್ತು. ಬಜೆಟ್ಟಿನ ಕೆಲಸ ಅದೇ. ಯಾವ ಅಂಗಾಂಗವೂ ಮಿತಿಮೀರಿ ಬೆಳೆಯಬಾರದಲ್ಲವೇ ? “ ಎನ್ನುವರು. ‘ಮೂರನೆಯ ಹೆಂಡತಿ’ ಯ ಕುರಿತು ಲೇಖಕರ ವಿನೋದಮಯ ವ್ಯಾಖ್ಯಾನ ನೋಡಿ; “ .....ಭಾಷೆಯಲ್ಲಿಯೂ ಸಹಿತ ನಾವು ಮೂರನ್ನು ಆಯ್ಕೆ ಮಾಡಿದ್ದೇವೆ... ಮೊದಲನೆಯ ಹೆಂಡತಿಯಾಗಿ ಮಾತೃಭಾಷೆಯನ್ನು, ಎರಡನೆಯ ಹೆಂಡತಿಯಾಗಿ ರಾಷ್ಟ್ರಭಾಷೆಯನ್ನೂ ಹಾಗೆ ಮೂರನೆಯವಳನ್ನಾಗಿ ಇಂಗ್ಲೀಷನ್ನು ನಾವು ಅಪ್ಪಿಕೊಂಡಿದ್ದೇವೆ ನೋಡಿ! ಆ ಮೂರನೆಯವಳ ಬಗ್ಗೆ ನಮ್ಮ ವ್ಯಾಮೋಹವೇನು? ಆ ಥಳಕೇನು? ಆ ಪಳಕೇನು? ಆಕೆಯೋ ಮಹಾನ್ ಬೆಡಗಿ. Oh my dear rascal ಎಂದರೂ ನಾವು ಜಿಗಿದು ಕುಪ್ಪಳಿಸುವುದೇನು ?....” ಎಂಬ ಮಾತಿಗೆ ಓದುಗರಿಗೆ ಅಹುದವುದೆನ್ನದೆ ಬೇರೆ ದಾರಿ ಇಲ್ಲ. ಕೃತಿಗೆ ಮುನ್ನುಡಿಯನ್ನು ಬರೆದ ಸಾಹಿತಿ, ರಾವ್ ಅವರ ಆಪ್ತರಾಗಿದ್ದ ಡಾ| ಕೆ. ರಘುನಾಥ ಅವರು ಇಲ್ಲಿನ ಹರಟೆ ಬರಹಗಳಲ್ಲಿ ವ್ಯಕ್ತವಾಗಿರುವ ಲೇಖಕರ ಹಾಸ್ಯಪ್ರಜ್ಞೆ, ವೈಚಾರಿಕತೆ ಮತ್ತು ಅನುಭೂತಿಯನ್ನು ಗುರುತಿಸಿದ್ದಾರೆ. ಗೆಳೆಯ ಚಂದ್ರಶೇಖರ ರಾವ್ ಭೌತಿಕವಾಗಿ ಇಲ್ಲ, ಆದರೆ ಈ ಕೃತಿಯ ಮೂಲಕ ನಮ್ಮೊಂದಿಗಿರುವರು. ಇದನ್ನೇ ಅಕ್ಷರಲೋಕದ ಮಾಯಕ ಅನ್ನಿ. ******
‘ಚಂದ್ರಶೇಖರ ರಾವ್ ಅವರ ಹರಟೆಗಳು’.
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಗೋಪಾಲ ತ್ರಾಸಿ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಮುಂಬೈನಲ್ಲಿ ಮೆನೇಜರ್ ಹುದ್ದೆಯಲ್ಲಿದ್ದಾರೆ.
ಹವ್ಯಾಸ : ಸಾಹಿತ್ಯ, ರಂಗಭೂಮಿ.
ಪ್ರಕಟಿತ ಕೃತಿಗಳು :
ಮೂರು ಕವನ ಸಂಕಲನಗಳು : ನೆಲದ ನಕ್ಷತ್ರಗಳು, ಬೊಗಸೆಯೊಡ್ಡುವ ಸಂತಸದ ಕ್ಷಣಗಳಿಗೆ,
ಬೇಚಾರ ಶಹರು.
ಒಂದು ಕಥಾ ಸಂಕಲನ : ಕಥೆಯೊಳಗಿನ ಬದುಕು.
ಒಂದು ಅಂಕಣ ಬರಹ : ಈ ಪರಿಯಾ ಕಥೆಯಾ..
ಒಂದು ವ್ಯಕ್ತಿ ಚಿತ್ರಣ ಕೃತಿ.
ಎರಡು ಸಂಪಾದಿತ ಕೃತಿಗಳು.
ಒಂದಷ್ಟು ಕಥೆ, ಕವನಗಳಿಗೆ ಬಹುಮಾನ ಸಿಕ್ಕಿವೆ.
2018 ರಲ್ಲಿ ಡಲ್ಲಾಸ್ ಅಮೇರಿಕಾದಲ್ಲಿ ನಡೆದ 10 ನೇ ಅಕ್ಕ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.
ರಂಗ ದಿಗ್ಗಜರಾದ ಮಾನ್ಯ ಸದಾನಂದ ಸುವರ್ಣ, ಸುರೇಶ ಆನಗಳ್ಳಿ, ಕೃಷ್ಣಮೂರ್ತಿ ಕವಾತ್ತಾರ್ ಮುಂತಾದವರ ರಂಗ ಶಿಬಿರಗಳಲ್ಲಿ ಪಾಲ್ಗೊಳ್ಳುವಿಕೆ.
ನಾಟಕಾಭಿನಯ ಮತ್ತು ರಂಗ ಸಂಗೀತಕ್ಕೆ ಒಂದಷ್ಟು ಬಹುಮಾನಗಳು ಸಿಕ್ಕಿವೆ.
ಗೆಳೆಯರಾದ ಸಾ.ದಯ, ಬಿ.ಎಮ್. ಬಶೀರ, ಜಿ.ಪಿ.ಕುಸುಮ, ಮತ್ತಿತರ ಮುಂಬೈ ಬರಹಗಾರ, ಕಲಾವಿದ ಗೆಳೆಯರೊಂದಿಗೆ 'ಮುಂಬಯಿ ಚುಕ್ಕಿ ಸಂಕುಲ' ಬಳಗದ ಸಂಸ್ಥಾಪನೆ(1996).
All Posts
2 thoughts on “‘ಚಂದ್ರಶೇಖರ ರಾವ್ ಅವರ ಹರಟೆಗಳು’.”
ವಂದನೆಗಳು ವಿಶ್ವಧ್ವನಿ ಬಳಗಕ್ಕೆ
ತ್ರಾಸಿಯವರೇ ಎಷ್ಟೊಂದು ಸರಳ ಸುಂದರವಾಗಿ ರಾವ್ ಅವರ ಬದುಕಿನ ಹೋರಾಟ, ಸಾಹಿತ್ಯ ಪ್ರೀತಿಯನ್ನು ಅಕ್ಷರಗಳ ಮೂಲಕ ಉಣಬಡಿಸಿದ್ದೀರಿ.
ಸೂಪರ್.
ಈ ತಿಂಗಳ ಸಾಫಲ್ಯ ಪತ್ರಿಕೆಯಲ್ಲಿ ರಾವ್ಕಾ ಅವರ ಕಾವೇರಮ್ಮನ ದೋಸೆ….ಲೇಖನವನ್ನು ಪ್ರಕಟಿಸಿದ್ದೇವೆ.
ಆಶ್ಚರ್ಯವಾಗುತ್ತಿದೆ. ಏಕಕಾಲದಲ್ಲಿ ನಮಗೆ ಗೆಳೆಯನ ನೆನಪು ಕಾಡಿದ್ದು ಹೇಗೆ……