‘ಕೂರೆ’ ಕಥಾಸಂಕಲನ

ಪುಸ್ತಕ ಅವಲೋಕನ
ಕಥಾಸಂಕಲನ: ಕೂರೆ
ಲೇಖಕರು: ಪ್ರೊ. ಪ್ರೇಮಶೇಖರ್.
ಯಾಜಿ ಪ್ರಕಾಶನ
ಬೆಲೆ: 220 ರೂ

The storytellers and poets spend their lives learning the skill and art of using words well. And their words make the souls of their readers stronger, brighter, deeper.
   ಕಥೆಗಾರರು ಮತ್ತು ಕವಿಗಳು ಪದಗಳನ್ನು ಚೆನ್ನಾಗಿ ಬಳಸುವ ಕೌಶಲ್ಯ ಮತ್ತು ಕಲೆಯನ್ನು ಕಲಿಯಲು ತಮ್ಮ ಜೀವನವನ್ನು ಕಳೆಯುತ್ತಾರೆ.  ಮತ್ತು ಅವರ ಮಾತುಗಳು ತಮ್ಮ ಓದುಗರ ಆತ್ಮಗಳನ್ನು ಬಲವಾಗಿ, ಪ್ರಕಾಶಮಾನವಾಗಿ, ಆಳವಾಗಿಸುತ್ತವೆ ಎಂದು ಅಮೆರಿಕನ್ ಲೇಖಕಿಯಾದ ಉರ್‍ಸುಲಾ ಕೆ ಲೆಗ್ವಿನ್ ಹೇಳುತ್ತಾಳೆ. ಈ ಕಲ್ಪನೆ ಇಲ್ಲಿ ಸಾಕಾರಗೊಂಡಿದೆ.
  ಕೂರೆ ಇದು ಐದು ನೀಳ್ಗತೆಗಳ ಸಂಗ್ರಹ. ಇದು ಸುಪ್ರಸಿದ್ಧ ಲೇಖಕರಾದ  ಶ್ರೀ ಪ್ರೇಮಶೇಖರರ ಕಥಾಸಂಕಲನ. ಸಂಕಲನದ ಹೆಸರು ಕೇಳಿದೊಡನೆಯೇ ತೀರಾ ವಿಚಿತ್ರವೆನ್ನಿಸುವುದರ ಜೊತೆಗೇ ಒಂಥರಾ ಮೈಜುಮ್ಮೆನ್ನಿಸುವಂತಾಯಿತು!
  ಸೀಮಾತೀತ ಸಾಹಿತ್ಯದ ಪರಿಕಲ್ಪನೆಯನ್ನು ಇಟ್ಟುಕೊಂಡು ಪ್ರಾರಂಭವಾದುದು. ದೇಶ-ಕಾಲ-ಮತಗಳಾಚೆ ನಿಂತು ಸತ್ವಯುತ ಸಾಹಿತ್ಯ ಸೃಷ್ಟಿಯಾಗಬೇಕು ಎನ್ನುವುದು ಕಾಳಜಿ. ಇಲ್ಲಿ ಯಾವಾಗಲೂ ಆದ್ಯತೆ ಇರುವುದು ಆಲೋಚನೆಗೆ ಎಂದು ಈ ಪುಸ್ತಕದ ಪ್ರಕಾಶಕರು ತಾವೇ ಹೇಳಿಕೊಂಡಿದ್ದಾರೆ. ಅದು  ಉತ್ಪ್ರೇಕ್ಷೆಯಲ್ಲ ಎನ್ನುವುದು ಇಲ್ಲಿಯ ಕಥೆಗಳನ್ನು ಓದಿದಾಗ ಅರಿವಾಗುತ್ತದೆ.
  ಕೂರೆ ಒಂದು ಏಕಾಣುಜೀವಿ. ಇದು ಕಚ್ಚಿದ ನಂತರ ಅವನಲ್ಲಿ ವೃದ್ಧಿಗೊಂಡು ಅವನನ್ನು ಘಾಸಿಗೊಳಿಸಿ, ರೋಗವನ್ನು ಹರಡುತ್ತ ಹೋಗುತ್ತದೆಯಾದರೂ ಘಾಸಿಗೊಳಿಸಲಾಗದಿದ್ದರೆ ಅವುಗಳಿಂದ ಯಾವುದೇ ದುಷ್ಪರಿಣಾಮವೂ ಆಗದು. ಇವು ಪರಪುಟ್ಟಗಳು. ಆಶ್ರಯಿಸಿದವರನ್ನೇ ಕಾಡುವಂಥವು. ಇಲ್ಲಿಯ ಕಥೆಗಳ ಕಥಾವಸ್ತುಗಳಲ್ಲಿ ಕೂಡ ಕೂರೆಯಂಥ ವ್ಯಕ್ತಿಗಳದೇ ಪ್ರಮುಖ ಪಾತ್ರ.  ವೈಯುಕ್ತಿಕ ಸ್ವಾಸ್ಥ್ಯ ಕಡಿಮೆ ಇದ್ದಲ್ಲಿ  ಸಾಮಾನ್ಯವಾಗಿ ಕೂರೆಗಳು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಳ್ಳುವಂತೆ ಮಾನಸಿಕ ಆರೋಗ್ಯವು ಹದಗೆಟ್ಟರೆ ಇಂಥ ಪರಪುಟ್ಟರು  ತೊಂದರೆ ಕೊಡುತ್ತಾರೆ ಎಂಬುದು ಲೇಖಕರ ಸಿದ್ಧಾಂತ. 
   ಇಲ್ಲಿಯ ಮೊದಲ ಕಥೆ ‘ಉಳಿದುಹೋದದ್ದು ಕಥೆ ಮಾತ್ರ’. ಈಗ ಕಥಾನಾಯಕನದು ಪ್ರೀತಿಸುವ ಹೆಂಡತಿ, ಅಕ್ಕರೆಯ ಮಗಳೊಂದಿಗಿನ ಪರಿಪೂರ್ಣ ಜೀವನ. ಆದರೂ ಹದಿಹರೆಯದ ಪ್ರೇಮದ ಹಳೆಯ ನೆನಪು ಒಂದು ಈ ಮೇಲ್ ಮೂಲಕ ತೆರೆದುಕೊಳ್ಳುತ್ತದೆ. ಸಮೀರಾ ಕಥಾನಾಯಕನಿಗೆ ಸೋದರಮಾವನ ಮಗಳು. ಇವನಿಗಿಂತಲೂ ಎರಡು ವರ್ಷಗಳಿಗೆ ದೊಡ್ಡವಳು. ಅವಳ ವ್ಯಕ್ತಿತ್ವವನ್ನು ವಿವರಿಸುತ್ತ ಲೇಖಕರು ಆಕೆ ತನ್ನ ವಯಸ್ಸಿಗೆ ಮೀರಿದ ಜವಾಬ್ದಾರಿಯನ್ನು ಹೊರಬಲ್ಲವಳು. ಅದಕ್ಕೆ ಉದಾಹರಣೆಯಾಗಿ ತನ್ನ ಅವಳಿ ತಮ್ಮಂದಿರಲ್ಲಿ ಒಬ್ಬನನ್ನು ತಾಯಿ ಜೋಪಾನ ಮಾಡಿದರೆ ಆಕೆ ತನ್ನ ಒಂಬತ್ತನೆಯ ವಯಸ್ಸಿನಲ್ಲಿಯೇ ಎರಡನೆಯ ತಾಯಿಯಂತೆ ಜೋಪಾನ ಮಾಡಿದವಳು ಎನ್ನುವುದನ್ನು ಆಕೆಯ ತಾಯಿಯು, ‘ಅವನಿಗೆ ಅವಳೇ ತಾಯಿ. ಹಾಲು ಕುಡಿಸೋದು ಸಾಧ್ಯ ಆಗಿದ್ದರೆ ಅದನ್ನೂ ಮಾಡ್ತಿತ್ತೇನೋ’ ಎಂದು ಹೇಳುವುದರ ಮೂಲಕ ವ್ಯಕ್ತಗೊಳಿಸುತ್ತಾರೆ. ಆಗೆಲ್ಲ ಕಥಾನಾಯಕನ ಮನಸ್ಸಿನಲ್ಲಿ ಮೂಡುತ್ತಿದ್ದುದು ಎಳೆಯ ಜೀಸಸ್‌ನನ್ನು ಎದೆಗವಚಿಕೊಂಡು ನಿಂತಂತ ಮಾತೆ ಮೇರಿಯ ಚಿತ್ರ. ಆದರೂ ಅವಳು ವರ್ಷ ಎರಡು ವರ್ಷಗಳಿಗೊಮ್ಮೆ ಕಂಡಾಗ ಅವನಿಗೆ ಸುತ್ತಿನ ಹುಡುಗಿಯರಿಗಿಂತಲೂ ಹೆಚ್ಚು ಆಕರ್ಷಿಸಿರುತ್ತಾಳೆ. ಅವಳು ಎದುರಿಗಿಲ್ಲದಾಗ ಮಾತ್ರ ಅವಳು ಮೇರಿಯಾಗಿಯೇ ಕಾಣುತ್ತಾಳೆ. ನಂತರ ಅವನಿದ್ದ ಓಣಿಗೇ ಅವಳು ಬಂದಾಗ ನಾಯಕನ ಮನಸ್ಸಿನಲ್ಲಿ ಅವಳು ಇಪ್ಪತ್ತರ ಮೇರಿ ಮಾತೆ ಹಾಗೂ ಗೆಳತಿಯ ನಡುವೆ ಹೊಯ್ದಾಟವು ಪ್ರಾರಂಭವಾಗಿ ಕೊನೆಗೆ ಗೆಳತಿಯೇ ಗೆಲ್ಲುತ್ತಾಳೆ! ಎನ್ನುವ ಅವನಿಗೆ ಅವಳ ಮೇಲೆ ಆಕರ್ಷಣೆಯು ಉಂಟಾಗತೊಡಗುತ್ತದೆ. ಆಗ ಅದು ಅವನಿಗೆ ಹೊಸ ಜಗತ್ತಿಗೆ ಜಿಗಿದಂಥ ಅನುಭವ. ಅವನಿಗೆ ಅವಳು ಎಲ್ಲ ಹುಡುಗಿಯರಿಗಿಂತ ಬೇರೆಯಾಗಿ, ಬೇರೊಂದು ಲೋಕದಿಂದ ಬಂದವಳಂತೆ ತೋರತೊಡಗುತ್ತಾಳೆ. ಅವಳಲ್ಲಿಯ ಕಥೆಗಳ ಬಗೆಗಿನ ಆಕರ್ಷಣೆಯು ಅವನಲ್ಲಿಯೂ ಹುಟ್ಟುತ್ತದೆ. ಹೀಗೆ ಅವನು ಅವಳಿಗೆ ಹತ್ತಿರವಾಗುತ್ತ ಹೋಗುತ್ತಾನೆ. ಅವನಲ್ಲಿ ಹದಿಹರೆಯದ ಭಾವನೆಗಳು ಅರಳತೊಡಗುತ್ತವೆ. ಆದರೆ ಅವುಗಳನ್ನು ಅಭಿವ್ಯಕ್ತಿಗೊಳಿಸುವ ಧೈರ್ಯವಿಲ್ಲದೆ ತೊಳಲುತ್ತಾನೆ. ಅದಕ್ಕೆ ತಕ್ಕಂತೆ ಅವಳು ಅವನಿಗೆ ಪ್ರೋತ್ಸಾಹವನ್ನೀಯುವಂತೆ ಅವನನ್ನು ಅನಿರೀಕ್ಷಿತವಾಗಿ ಸ್ಪರ್ಶಿಸುವಾಗ ಅವನ ಅಲ್ಪಸ್ವಲ್ಪ ಭಯವೂ ಹೋಗಲಾಡಿಸಿದಂತಾಗುತ್ತದೆ. ಅವನು ಜೆಎನ್‌ಯು ನಲ್ಲಿ ಎಂ.ಎ. ಗೆ ಆಯ್ಕೆಯಾಗುತ್ತಾನೆ. ಹೋಗುವುದಕ್ಕೂ ಮೊದಲು ಅವಳಿಗೆ ತನ್ನ ಪ್ರೇಮನಿವೇದನೆಯನ್ನು ಮಾಡಲು ಪ್ರಯತ್ನಿಸುತ್ತಾನೆ. ಅವಳನ್ನು ಅಪ್ಪಿಕೊಂಡಾಗ ಅವಳು ಅವನ ಪ್ರೀತಿಯನ್ನು ಬಾಲಿಶವೆಂಬಂತೆ ಕಂಡುಬಿಡುತ್ತಾಳೆ. ನಂತರ ಅವನು ತನ್ನ ಜೀವನದಲ್ಲಿ ಸಮೀರಾಳ ಆಕರ್ಷಣೆಯನ್ನು ಮೀರಿ ಬೆಳೆಯುತ್ತಾನೆ. ಇದು ಮುಗಿದುಹೋದ ಕಥೆ. ಈಗ ಅವನ ಜೀವನದಲ್ಲಿ ಅವನನ್ನು ಚೆನ್ನಾಗಿ ಅರಿತುಕೊಂಡ ಅವನ ಅರ್ಧಾಂಗಿ ಲಲಿತೆಯ ಪ್ರವೇಶವಾಗಿದೆ. 
  ಸಮೀರಾಳ ಬದುಕೂ ಕೂಡ ಬೇರೇನೋ ದಿಕ್ಕನ್ನು ಹಿಡಿದು ಹೊರಟು ಪಿ ಎಚ್‌ಡಿಗೆ ಸೇರಿ, ಮೂರು ತಿಂಗಳಿನಲ್ಲಿಯೇ ಅದನ್ನು ತೊರೆದು ಮನೆಗೆ ಬಂದವಳು ತನ್ನೊಂದಿಗೆ ಅನೇಕ ವರ್ಷಗಳಿಂದ ಪ್ರೇಮಸಂಬಂಧವನ್ನಿರಿಸಿಕೊಂಡಿದ್ದ ಮುನೀರ್ ಎಂಬ ಒಬ್ಬ ಮುಸ್ಲಿಮ್ ಹುಡುಗನ ಜೊತೆಗೆ ಓಡಿಹೋಗುತ್ತಾಳೆ. ನಂತರ ಅವರಿಬ್ಬರೂ ನಕ್ಸಲ್ ಗುಂಪಿಗೆ ಸೇರುತ್ತಾರೆ.
   ಒಂದು ದಿನ ಅವನಿಗೆ ಒಂದು ಇ ಮೇಲ್ ಬರುತ್ತದೆ. ಅದರಲ್ಲಿಯ ವಿಷಯವೆಂದರೆ ಮುನೀರ್ ಎನ್‌ಕೌಂಟರಿನಲ್ಲಿ ತೀರಿಹೋಗಿರುತ್ತಾನೆ. ಸುಧಾ ಎನ್ನುವವಳು ಕಥಾನಾಯಕನ ಸಹೋದ್ಯೋಗಿ. ಅವಳು ಸಾಕಷ್ಟು ಓದಿಕೊಂಡವಳಾದರೂ ವಿಚಾರಗಳು ಅತಿರೇಕದವು. ಕೆಟ್ಟ ಭಾಷೆ, ಕೆಟ್ಟ ವಿಚಾರದ ಪತ್ರಿಕೆಯನ್ನು ನಡೆಸುತ್ತಿದ್ದ ಅವಳು ತನ್ನ ಉದ್ಯೋಗಕ್ಕೆ ಕುತ್ತು ಬರಬಾರದೆಂಬ ದೂರಾಲೋಚನೆಯಿಂದ ಅದಕ್ಕೆ ಬೇರೆ ಯಾರೋ ಒಬ್ಬ ಅನಾಮಧೇಯನನ್ನು ಸಂಪಾದಕ-ಪ್ರಕಾಶಕನನ್ನಾಗಿಸಿ ಕೆಲಸವನ್ನು ಸಾಗಿಸಿರುತ್ತಾಳೆ. ನಂತರ ಕೆಲವೇ ವರ್ಷಗಳಲ್ಲಿ ಅನೇಕ ಕೋಟಿ ರೂಪಾಯಿಗಳ ಆಸ್ತಿಯನ್ನೂ ಮಾಡಿರುತ್ತಾಳೆ. ಈಗ ಅವಳ ಬಗ್ಗೆ ತಿಳಿದಂಥ ಹೊಸ ವಿಷಯವೆಂದರೆ ಅವಳು ನಕ್ಸಲ್ ಹೋರಾಟಗಾರರ ನಾಗರಿಕ ಮುಖ. ಆದರೆ ಅವಳು ನಕ್ಸಲರಲ್ಲಿ ಸೇರಿಕೊಂಡರೂ ಅವರು ತನ್ನಲ್ಲಿ ಇಟ್ಟಂಥ ಆಪದ್ಧನವಾದ ಕೆಲವು ಕೋಟಿ ರೂಪಾಯಿಗಳನ್ನು ನುಂಗಿ ಹಾಕಿರುತ್ತಾಳೆ. ಅವರ ಗುಂಪು ಹಣವನ್ನು ವಾಪಸು ಕೇಳಿದಾಗ ತನಗೆ ಕೊಟ್ಟೇ ಇಲ್ಲವೆಂದು ನಿರಾಕರಿಸುತ್ತಾಳೆ. ಈಗ ಸಮೀರಾ ಆ ಹಣಕ್ಕೆ ಸುಧಾ ಮೋಸಮಾಡಿರುವುದಕ್ಕೆ ತನ್ನ ಗುಂಪಿನೊಂದಿಗೆ ಅವಳಿಗೆ ಶಿಕ್ಷೆ ಎಂದರೆ ಅವಳನ್ನು ಮುಗಿಸಲೆಂದೇ ಬರುತ್ತಿರುವ ಸುದ್ದಿ ಅದರಲ್ಲಿದೆ. ಇಷ್ಟೇ ಅಲ್ಲ, ಸಮೀರಾ ಇವನನ್ನು ಭೆಟ್ಟಿಯಾಗುವ ಒಂದು ಬಯಕೆಯನ್ನೂ ಆ ಪತ್ರದಲ್ಲಿ ವ್ಯಕ್ತಗೊಳಿಸಿ ಇವನಿಗೆ ತನ್ನನ್ನು ಭೆಟ್ಟಿಯಾಗಲು ಬರಲು ಹೇಳಿರುತ್ತಾಳೆ. ಆದರೆ ಸುಧಾಳಿಗೆ ಇದು ಹೇಗೋ ತಿಳಿದು ಅವಳು ಪೋಲೀಸರಿಗೆ ಸಮೀರಾ ಹಾಗೂ ಅವಳ  ಜೊತೆಗಾರರ ಬಗ್ಗೆ ಸೂಚನೆ ಕೊಟ್ಟು ಅವರನ್ನೇ ಎನ್‌ಕೌಂಟರಿನಲ್ಲಿ ಕೊಲ್ಲಿಸುತ್ತಾಳೆ. ಇದೇ ಕಥಾವಸ್ತು. ಇಲ್ಲಿ ಕೂರೆಗೆ ಅನ್ವರ್ಥವಾದವಳು ಸುಧಾ. ಪರಪುಟ್ಟ ಜೀವಿಯಂತೆ ಅವರ ರಕ್ತವನ್ನೇ ಹೀರಿ ಅವರನ್ನೇ ಕೊಲ್ಲಿಸಿದವಳು!
  ಎರಡನೆಯ ಕಥೆ ‘ಕೂರೆ’. ಟಿವಿ ಪತ್ರಕರ್ತನೊಬ್ಬ ಫೋನಾಯಿಸಿ ಕಥಾನಾಯಕನ ಫೋನ್ ನಂಬರನ್ನು ಇವನು ಮೊದಲು ಕೆಲಸ ಮಾಡುತ್ತಲಿದ್ದಂಥ ಪಾಂಡಿಚೇರಿಯ ಒಬ್ಬನಿಗೆ ಕೊಡಲೋ ಬೇಡವೋ ಎಂದು ಕೇಳುವುದರೊಂದಿಗೆ ಕಥೆಯು ಪ್ರಾರಂಭಗೊಳ್ಳುತ್ತದೆ. ದೇವೇಂದ್ರಪ್ಪ ಬಾದರದಿನ್ನಿ. ಚುನಾಂಬರ್ ನದಿಯು ಬಂಗಾಲ ಕೊಲ್ಲಿಯನ್ನು ಸೇರುವ ಸ್ಥಳದಲ್ಲಿಯ ಒಂದು ಹೋಟೆಲ್ ಅಥವಾ ರೆಸಾರ್ಟ್ ಮಾಲಿಕ. ಕರ್ನಾಟಕದಲ್ಲಿ ರಾಜಕೀಯ ಗೊಂದಲವುಂಟಾದಾಗ ಅವನ ರೆಸಾರ್ಟಿನಲ್ಲಿ ಪ್ರಮುಖ ವಿರೋಧ ಪಕ್ಷದ ನಾಯಕರು ತಮ್ಮ ವಿಧಾಯಕರನ್ನೆಲ್ಲ ಎರಡು ಬಸ್ಸುಗಳಲ್ಲಿ ತುಂಬಿಕೊಂಡು ಇಲ್ಲಿಗೆ ತಂದು ವಾರಗಟ್ಟಲೆ ಇರಿಸಿದಾಗ ಅವನ ಹೆಸರು ದೇಶಾದ್ಯಂತ ಪ್ರಸಿದ್ಧವಾಗಿಬಿಟ್ಟು, ಅವನ ರಾಜಕೀಯ ಸಂಪರ್ಕವೂ ಇದರಿಂದಾಗಿ ಹೆಚ್ಚುತ್ತದೆ. ಪ್ರೀತಿಯ ಹೆಂಡತಿ, ಮುದ್ದಾದ ಮಗಳು, ಕೈತುಂಬ ಸಂಬಳ ತರುವ ಯುನಿವರ್ಸಿಟಿ ಅಧ್ಯಾಪಕ ವೃತ್ತಿ, ಮೂರು ಬೆಡ್ ರೂಮಿನ ಸ್ಟಾಫ್ ಕ್ವಾರ್ಟರ್ಸು ಹೀಗೆ ನೆಮ್ಮದಿಯ ಬದುಕನ್ನು ಸಾಗಿಸುತ್ತಲಿದ್ದ ಕಥಾ ನಾಯಕನಿಗೆ “ಐಡೆಂಟಿಟಿ ಕ್ರೈಸಿಸ್ ಎನ್ನುವ ರೋಗವು ಮನುಷ್ಯನಿಗೆ ಯಾವಾಗ, ಯಾವ ಬಗೆಯಲ್ಲಿ ಅಮರಿಕೊಳ್ಳುತ್ತದೆ ಎಂದು ಹೇಳಲಾಗುವುದಿಲ್ಲ” ಎಂಬ ಲೇಖಕರ ಉದ್ಗಾರದಂತೆ  ಪಾಂಡಿಚೇರಿ ಕನ್ನಡಿಗರ ಕಾವೇರಿ ಕರ್ನಾಟಕ ಸಂಘದ ಜನರಲ್ ಸೆಕ್ರೆಟರಿಯಾಗುವ ಆಶೆಯು ಹುಟ್ಟಿ, ಅದನ್ನು ಬಾದರದಿನ್ನಿಗೂ ಹೇಳುತ್ತಾನೆ. ಆದರೆ ಆದದ್ದೇ ಬೇರೆ. ಈ ದೇವೇಂದ್ರಪ್ಪನೂ ಒಂದು ಕೂರೆಯೇ. ಪರಪುಟ್ಟನಾಗಿ ಇಲ್ಲಿ ಒಳ್ಳೆಯ ಲೇಖಕನಾದಂಥ ಕಥಾನಾಯಕನನ್ನು ಉಪಯೋಗಿಸಿಕೊಂಡು ತಾನು ಮೇಲೇರುತ್ತಾನೆ. ತನ್ನ ಜಾತಿಯವರಿಗೆ ಏಣಿಯಾಗುತ್ತಾನೆ.
  ಇದೆಲ್ಲವನ್ನೂ ಕಡೆಗಣಿಸಿದ ಕಥಾನಾಯಕನು ಕೆಲವು ವರ್ಷಗಳ ನಂತರ ಒಳ್ಳೆಯ ಲೇಖಕನಾಗಿ ಹೊರಹೊಮ್ಮುತ್ತಾನೆ. ನಂತರ ಮೈಸೂರಿಗೆ ಬರುತ್ತಾನೆ. ಅಲ್ಲಿ ತನ್ನಿಷ್ಟದ ಅಧ್ಯಾಪನ ವೃತ್ತಿ, ಸಾಹಿತ್ಯದ ಪ್ರವೃತ್ತಿಗಳಿಂದ ನೆಮ್ಮದಿಯ ಬದುಕನ್ನು ಸಾಗಿಸುತ್ತಿರುತ್ತಾನೆ. ಆದರೆ ದೇವೇಂದ್ರಪ್ಪನ ಮಗ ಡ್ರಗ್ ಸಾಗಿಸುತ್ತಿರುವಾಗ ಸಿಕ್ಕಿಬಿದ್ದಿರುತ್ತಾನೆ. ಆಗ ದೇವೇಂದ್ರಪ್ಪನು ತನ್ನ ಹಣ ಹಾಗೂ ಇನ್‌ಫ್ಲುಯೆನ್ಸನ್ನು ಉಪಯೋಗಿಸಿ ಒಬ್ಬ ಯುವ ಟಿವಿ ಸುದ್ದಿಗಾರ್ತಿಯನ್ನು ಛೂಬಿಟ್ಟು ಅವನಿಂದ ಸಾಮಾನ್ಯವಾದ ಸುದ್ದಿಯೆಂಬಂತೆ ದೇವೇಂದ್ರಪ್ಪನ ಕೆಲವು ಸುದ್ದಿಗಳನ್ನು ಹೊರಹಾಕಿಸಿ, ‘ಆ ಸೋಗಲಾಡಿಯ ಹಿಂದೆಯೇ ಈ ನಾಟಕಕ್ಕೆ ಪರದೆಯೆತ್ತಿದ ಪಾಕಡಾ ಪಾಂಡುರಂಗ, ಈ ನಾಟಕದಲ್ಲಿ ನುರಿತ ಪೋಷಕ ನಟಿಯೋ ಅಥವಾ ದುರಂತ ನಾಯಕಿಯೋ ಎಂದು ಗುರುತಿಗೆ ಹತ್ತದ ಮಮತಾ, ಹುಚ್ಚು ನಾಯಿ ದೇವೇಂದ್ರಪ್ಪ, ಕಾದ ಸೀಸದಂತಹ ದನಿಯಾಗಷ್ಟೇ ನನ್ನ ಅರಿವಿಗೆ ನಿಲುಕಿದ ಆ ಪೋಲೀಸು ಅಧಿಕಾರಿ..’ ಎಂದು ನೆನಪಿಸಿಕೊಳ್ಳುತ್ತಾನೆ ಕಥಾನಾಯಕ! ಅವನು ಇದೆಲ್ಲದರಿಂದ ಹೊರಬರುವಂತೆ ಹೊರಡುತ್ತಾನೆ. ಚಹಾ ಕುಡಿಯಲೆಂದು ಒಂದು ಟೀ ಅಂಗಡಿಯ ಎದುರು ಕಾಯುತ್ತ ನಿಂತಾಗ ಒಬ್ಬ ಹೆಣ್ಣುಮಗಳು ಒಂದು ಮಗುವಿನೊಂದಿಗೆ ಕಾಲುಚಾಚಿಕೊಂಡು ಕುಳಿತವಳು, ತನ್ನ ಮಗುವಿನ ಕಿವಿಯ ಸಂದಿಯ ಕೂರೆಗಳನ್ನು ತೆಗೆಯುತ್ತ ಅದಕ್ಕಾಗಿ ಆ ಮಗುವನ್ನು ಬೈಯುತ್ತಿರುತ್ತಾಳೆ. ಆ ಮಗುವನ್ನು ಕರುಣಿಸಿದ್ದು ಯಾರು ಎಂದು ಒಬ್ಬ ಖಾಕಿಧಾರಿಯು ಕೇಳಿದಾಗ ಅವಳು ಕಥಾನಾಯಕನತ್ತ ಬೆರಳು ತೋರುತ್ತಾಳೆ. ನಂತರ ಇವನಂಥವನೇ ಇನ್ನೊಬ್ಬ ಎಂದೂ ಹೇಳಿದರೂ “ರಕ್ತದಿಂದ ಕೆಂಪಾಗಿ ಕರೆಗಟ್ಟಿಹೋಗಿದ್ದ ಹೆಬ್ಬೆರಳ ಉಗುರಿನ ನಟ್ಟನಡುವೆ ಕಂಡ ನುಜ್ಜುಗುಜ್ಜಾದ ಕೂರೆಗಳ ಗುಪ್ಪೆ ಕಥಾನಾಯಕನ ಕಣ್ಣುಗಳೊಳಕ್ಕೇ ಚಿಮ್ಮಿದಂತಾಯಿತು …. ಅವಳು ತನ್ನ ಪಾಡಿಗೆ ತಾನು ಇನ್ನೊಂದು ಬೇಟೆಯ ಬೆನ್ನಟ್ಟಿದ್ದಳು…” ಎಂಬ ಮಾತುಗಳು ಕಥಾನಾಯಕನ ಗೊಂದಲಮಯ ಮನಃಸ್ಥಿತಿಯನ್ನು ಬಿಂಬಿಸುತ್ತವೆ.
  ಕಥಾನಾಯಕನು ಹೀಗೆ ರಕ್ತ ಹೀರುವ ಕೂರೆಗಳ ಕೂಪದಿಂದ ಹೊರಬರುತ್ತಾನೆ… ಆದರೂ ಈ ಕೂರೆಗಳ ಕೂರಲಗಿನ ಹೊಡೆತದಿಂದ ತಾನು ತಪ್ಪಿಸಿಕೊಳ್ಳಲು ಸಿಕ್ಕಂಥ ಅನೇಕ ಅವಕಾಶಗಳನ್ನು ಯಾಕೆ ಉಪಯೋಗಿಸಿಕೊಳ್ಳಲಿಲ್ಲವೆಂಬ ಪ್ರಶ್ನೆ ಕಾಡುತ್ತದೆ. ಮನುಷ್ಯ ಯಾರಿಗೋ ಉಪಕಾರ ಮಾಡಲು ಹೋಗಿ ತಾನೇ ಆ ಚಕ್ರವ್ಯೂಹದಲ್ಲಿ ಸಿಕ್ಕು ಬಳಲುವ ಉದಾಹರಣೆ ಇಲ್ಲಿದೆ. ಕೂರೆಯಂಥ ಕೆಲವರಿಗೆ ಇತರರನ್ನು ಅನಾಯಾಸವಾಗಿ ಉಪಯೋಗಿಸಿಕೊಂಡು ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುವ ವಿದ್ಯೆ ಸಾಧಿಸಿರುತ್ತದೆ ಎನ್ನುವುದಕ್ಕೆ ಈ ಕಥೆಯೊಂದು ಉದಾಹರಣೆ.
   ಮೂರನೆಯ ಕಥೆ ‘ಕಾಳಿದಾಸ ಕಾಣದೆಹೋದ ನಾಟಕ’.ಒಂದು ಗೆಸ್ಟ್ ಲೆಕ್ಚರಿಗಾಗಿ ಒಪ್ಪಿಕೊಂಡು ಅದಕ್ಕಾಗಿ ಒಂದು ಹೊಟೇಲಿನಲ್ಲಿ ಉಳಿದುಕೊಂಡ ಕಥಾನಾಯಕ ಒಬ್ಬ ಮನೋರೋಗಿ ಮಹಿಳೆಯ ಸುಳಿಯಲ್ಲಿ ಸಿಲುಕುತ್ತಾನೆ. ಅವಳನ್ನು ಒಬ್ಬ ವ್ಯಕ್ತಿ ನಂಬಿಸಿ ಮೋಸಮಾಡಿರುತ್ತಾನೆ. ಅದು ಅವಳ ತಂಗಿ, ತಮ್ಮ ಇಬ್ಬರಿಗೂ ಗೊತ್ತಿದ್ದರೂ ಆ ಮನೋರೋಗಿಯ ಮುಗ್ಧತೆಯಿಂದಾಗಿ ಕಥಾನಾಯಕನು ಮರುಕಪಟ್ಟು ಅವಳನ್ನು ಮಾನವೀಯತೆಯಿಂದಾಗಿ ಸಂತೈಸಿದರೆ ಕೆಲವರು ಅವಳಿಗೆ ಮೋಸ ಮಾಡಿದವನು ಇವನೇ ಎಂದುಕೊಳ್ಳುತ್ತಾರೆ. “ಕಥಾವಸ್ತುಗಳನ್ನು ಹುಡುಕಿಕೊಂಡು ಎಲ್ಲಿಗೂ ಹೋಗಬೇಕಾಗಿಲ್ಲ, ನಮ್ಮ ಸುತ್ತಲೂ ನಡೆಯುತ್ತಿರುವುದನ್ನು ಗಮನಿಸುತ್ತಿರಬೇಕಷ್ಟೇ, ಸಾಕು ಎನ್ನುವಷ್ಟು  ವಸ್ತುಗಳು ಸಿಕ್ಕಿ ಬಿಡುತ್ತವೆ.” ಎಂದು ತನಗೆ ಅನೇಕ ಕಡೆಗೆ ಎದುರಾಗಿದ್ದ ಪ್ರಶ್ನೆಗೆ ಈ ಉತ್ತರವು ಸರಳ ಎನ್ನಿಸಿದ್ದರೂ ಅವನಿಗೆ ತಾನು ಕಂಡ ದೃಶ್ಯದ ನೆನಪಾಗುತ್ತದೆ. ಆ ಮಹಿಳೆಯು ತನ್ನತ್ತಲೇ ಬೆರಳು ಮಾಡಿದ್ದು ನೆನಪಾಗಿ ಸಂವಾದವಾಗಬೇಕಾಗಿದ್ದುದು ತನ್ನ ಪಾಲಿಗೆ ಸಂತಾಪವಾದಂತಾಗುತ್ತದೆ. ಅವನಿಗೆ ತಾನೇ ಒಂದು ಕಥಾವಸ್ತುವಾಗಿ ಇವರಲ್ಲಿ ಎಷ್ಟು ಜನರಿಗೆ ಕಂಡಿರಬಹುದು ಎಂದೂ ಆಲೋಚಿಸುತ್ತಾನೆ.  ಅವಳಿಂದ ತಪ್ಪಿಸಿಕೊಳ್ಳಲಾರದೆ ಮತ್ತೆ ಮತ್ತೆ ಜನರ ಕಣ್ಣಲ್ಲಿ ಆಪಾದಿತನಂತೆ ಕಾಣುತ್ತಾನೆ.
  ಕೂರೆಯು ಒಂದು ಪರೋಪಜೀವಿ. ರಕ್ತ ಹೀರಲು ಅವಕಾಶ ಸಿಕ್ಕರೆ ಸಾಕು, ಅಂತೆಯೇ ಇಲ್ಲಿ ಜನರ ಅನುಮಾನದ ಕೂರೆಯು ಕಥಾನಾಯಕನ ಮೇಲೆ ಸವಾರಿಯಾಗಿದೆ, ಒಬ್ಬ ಕತೆಗಾತಿಯು ಈ ಸಂಶಯವನ್ನು ಅಲ್ಲಿದ್ದ ಎಲ್ಲರಲ್ಲೂ ಬಿತ್ತುತ್ತ ಒಂದು ಕಥಾವಸ್ತುವನ್ನು ನಿರೂಪಿಸುತ್ತ ಅದು ಕಥಾನಾಯಕನೇ ಬರೆದ ಕಥೆ ಎಂದೂ ಹೇಳುತ್ತಾಳೆ. ವೇದಿಕೆಯಲ್ಲಿದ್ದ ಪ್ರಿನ್ಸಿಪಾಲ್ ಕೂಡ ಸಂಶಯ ಪಡುವಂತಾಗುತ್ತದೆ.
  “ಬಾವಿಗಳು” ನಾಲ್ಕನೆಯ ಕಥೆ. ಇಲ್ಲಿ ಬಾವಿ ಎನ್ನುವುದು ಲೈಂಗಿಕ ಸಂಬಂಧಕ್ಕೆ ಸಂಬಂಧಪಟ್ಟ ಸಂಕೇತವಾಗಿದೆ. ಕವಿಸಮ್ಮೇಳನವೊಂದರಲ್ಲಿ ತೀರ್ಪು ಗಾರನಾಗಿ ಹೊರಟ ಕಥಾನಾಯಕ ತಮಿಳು ನಾಡಿನ ಬಾರ್ಡರಿಗೆ ಹತ್ತಿರದ ಚಿಕ್ಕ ಮಾಲಾಪುರವನ್ನು ತಲುಪಿ ಒಂದು ರಾತ್ರಿ ಮುಕ್ಕಾಂ ಮಾಡುವ ಪ್ರಸಂಗದಲ್ಲಿ ಎದುರಾದ ಸಮಸ್ಯೆಗಳ ವಿವರಣೆ ಇಲ್ಲಿದೆ.
ಕೆಲವು ಗೋಜಲು ಸಂಬಂಧಗಳಿವೆ. ನಂಜದೇವರು, ಶಾಂತಾ ಹಾಗೂ ಕೆಂಪದೇವಿ, ಸಿದ್ದರಾಜು ಇತ್ಯಾದಿ ಜನರ ಸಂಬಂಧಗಳು ವಿಚಿತ್ರ ಎನ್ನಿಸುತ್ತವೆ. ಅದರಂತೆಯೇ ಮೂರು ಮೂರು ನೀರಿಲ್ಲದ ಹಾಳುಬಾವಿಗಳು! ಇಲ್ಲಿ ಕೂಡ ಕೂರೆಗಳಂಥ ವ್ಯಕ್ತಿಗಳದೇ ಸಾಮ್ರಾಜ್ಯ. ಯಾರನ್ನು ಯಾರು ಶೋಷಿಸುತ್ತಿರುವರೋ ಎನ್ನುವುದೇ ಗೋಜಲಾಗಿದೆ.
   ಐದನೆಯ ಕಥೆ ‘ಪಯಣ’. ಇದು ಕೊನೆಯದು. ಇಲ್ಲಿ ಒಂದು ಸರಳ ಪ್ರೇಮ ಕಥೆಯಿದೆ. ಕಾಲೇಜಿನಲ್ಲಿ ಕಲಿಯುತ್ತಿದ್ದ ಕಥಾನಾಯಕ ಜಾಹ್ನವಿ ಎಂಬ ಸರಳ ಸುಂದರಿಯನ್ನು ಪ್ರೀತಿಸತೊಡಗುತ್ತಾನೆ. ಅವನ ಗೆಳೆಯರಾದ ರಾಜಗೋಪಾಲ ಹಾಗೂ ಶ್ರೀನಾಥ ಇವರಿಬ್ಬರು ಕಥಾನಾಯಕನ ಪ್ರೀತಿಗೆ ನೀರೆರೆಯುತ್ತಾರೆ. ಆದರೆ ಗೆಳೆಯರ ಒತ್ತಾಯಕ್ಕೆ ಮಣಿದು ಒಂದು ಪ್ರೇಮಪತ್ರ ಕೊಟ್ಟಾಗ ಅವಳು ಇನ್ನೊಬ್ಬ ಶ್ರೀಮಂತ ಯುವಕನೊಂದಿಗೆ ಬೈಕಿನಲ್ಲಿ ಹೋಗುತ್ತ ಆ ಪತ್ರವನ್ನು ಇವನತ್ತ ಬೀಸಿ ಒಗೆಯುವುದರೊಂದಿಗೆ ಪ್ರೇಮಪ್ರಕರಣ ಮುಕ್ತಾಯಗೊಳ್ಳುತ್ತದೆ. ಕೊನೆಯಲ್ಲಿ ಅದೊಂದು ನಾಟಕ ಎಂದೂ ಅರಿವಾಗುತ್ತದೆ.  ನಂತರ ಈ ಮೂವರೂ ಗೆಳೆಯರು ಮತ್ತೆ ಭೆಟ್ಟಿಯಾಗುತ್ತಾರೆ. ಮೂವರೂ ಒಳ್ಳೆಯ ಉದ್ಯೋಗಗಳಲ್ಲಿದ್ದರೂ ಆ ಮೊದಲಿನ ಮುಗ್ಧತೆ ಮಾಯವಾಗಿ ಅಲ್ಲಿ ಸ್ವಾರ್ಥ ಇಣಿಕಿದೆ. ಜೊತೆಗೇ ಶ್ರೀನಾಥನಿಗೆ ತನ್ನ ಹೆಂಡತಿಯ ವಿಧವೆ ತಂಗಿಯನ್ನು ಕಥಾನಾಯಕನಿಗೆ ಕಟ್ಟುವ ಆಶೆ. ಅದಕ್ಕಾಗಿ ಯೋಜನೆಗಳನ್ನು ಕೂಡ ರೂಪಿಸುತ್ತಾರೆ. ಜಾಹ್ನವಿಯ ಬಗ್ಗೆ ಇಲ್ಲಸಲ್ಲದ ನೈತಿಕ ಪತನದ ಆರೋಪಗಳನ್ನು ಹೊರಿಸಿ ಇವನ ಮನದಲ್ಲಿ ಅವಳ ಬಗ್ಗೆ ಜಿಗುಪ್ಸೆ ಹುಟ್ಟುವಂತೆ ಮಾಡಿದರೂ ಅದರಲ್ಲಿ ಯಶಸ್ವಿಯಾಗದೆ ಜಾಹ್ನವಿಯ ಹಾಗೂ ಕಥಾನಾಯಕನ ನಡುವಿನ ತಪ್ಪು ತಿಳಿವಳಿಕೆಯು ಅವರಿಬ್ಬರ ಭೆಟ್ಟಿಯಿಂದಾಗಿ ದೂರಗೊಂಡು ಅವರು ಮತ್ತೆ ಒಂದಾಗುತ್ತಾರೆ. ಇಲ್ಲಿ ಕೂರೆಗಳಾಗಿ ಜಿಗುಪ್ಸೆ ಹುಟ್ಟಿಸುವವರು ಶ್ರೀನಾಥ, ಅವನ ಹೆಂಡತಿ, ರಾಜಗೋಪಾಲ ಹಾಗೂ ಅವನ ಹೆಂಡತಿ! ಜೊತೆಗೇ ಶ್ರೀನಾಥನ  ನಾದಿನಿ ವಿಧವೆ ನಳಿನಿಯೂ ಕೂಡ ಕಥಾನಾಯಕನನ್ನು ಮದುವೆ ಆಗುವ ಇಚ್ಛೆಯನ್ನು ಹೊಂದಿರುವುದೂ ಅವರೆಲ್ಲರೂ ಸೃಷ್ಟಿಸಿದ ಸಂದರ್ಭಗಳಿಂದಾಗಿ ಅರಿವಾಗುತ್ತದೆ. ಕೊನೆಗೆ ಎಲ್ಲರ ಫೋನ್ ನಂಬರುಗಳನ್ನೂ ಬ್ಲಾಕ್ ಮಾಡುವುದರೊಂದಿಗೆ  ಸ್ವಾರ್ಥದಿಂದ ಕಲುಷಿತಗೊಂಡ ಈ ಸ್ನೇಹಸಂಬಂಧಗಳಿಗೂ ಮುಕ್ತಾಯ ಹಾಡುತ್ತಾನೆ ಕಥಾನಾಯಕ!
  ಒಟ್ಟಿನಲ್ಲಿ ಇಲ್ಲಿಯ ಕಥೆಗಳು ಕಲ್ಪನೆಗಿಂತಲೂ ವಾಸ್ತವಿಕತೆಯ ನಿರೂಪಣೆಯನ್ನು ಹೊಂದಿದ್ದು, ಇಂದಿನ ರಾಜಕೀಯ ಪರಿಸ್ಥಿತಿ, ಒಬ್ಬರನ್ನೊಬ್ಬರನ್ನು ಉಪಯೋಗಿಸಿಕೊಂಡು ಮೇಲೇರಬೇಕೆಂಬ ಸ್ವಾರ್ಥ, ಮಾನವೀಯತೆಗೆ ದುಗ್ಗಾಣಿಯ ಬೆಲೆಯನ್ನೂ ಕೊಡದ ಕೂರೆಯಂಥ ಸ್ವಾರ್ಥಿ ಸಮಾಜ… ಕೆಲವು ಮುಗ್ಧ ಹೆಣ್ಣು ಮಕ್ಕಳನ್ನು ಶೋಷಣೆ ಮಾಡುವ ಶ್ರೀಮಂತ ವರ್ಗ… ಇವೆಲ್ಲ ವಿಷಯಗಳನ್ನೊಳಗೊಂಡುದರಿಂದಾಗಿ ನೈಜತೆಗೆ ಹತ್ತಿರವೆನ್ನಿಸುತ್ತದೆ. ಕಥೆಗಾರರ ಒಂದು ಪಾಜಿಟಿವ್ ವಿಚಾರವು ಓದುಗರನ್ನು ಆಕರ್ಷಿಸುತ್ತದೆ. ಅದು ಗಂಡ-ಹೆಂಡತಿಯರ ನಡುವಿನ ಸಂಬಂಧದ ಪಾರದರ್ಶಕತೆ ಹಾಗೂ ನಂಬಿಕೆ, ವಿಶ್ವಾಸಗಳು!


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “‘ಕೂರೆ’ ಕಥಾಸಂಕಲನ”

  1. ಪ್ರೇಮಶೇಖರ

    “ಕೂರೆ” ಸಂಕಲನದ ಕಥೆಗಳನ್ನು ಆಸಕ್ತಿಯಿಂದ ಓದಿ ಶ್ರಮವಹಿಸಿ ಅವಲೋಕನ ಮಾಡಿರುವ ಹಿರಿಯ ಕಥೆಗಾರ್ತಿ ಶ್ರೀಮತಿ ಮಾಲತಿ ಮುದಕವಿ ಅವರಿಗೆ, ಪ್ರಕಟಿಸಿರುವ “ವಿಶ್ವ ಧ್ವನಿ”ಗೆ ಗೌರವಪೂರ್ವಕ ಧನ್ಯವಾದಗಳು. ಇದೆಲ್ಲಕ್ಕೂ ಕಾರಣಕರ್ತೆಯಾದ ಪ್ರಶಸ್ತಿ ಪುರಸ್ಕೃತ ಕಥೆಗಾರ್ತಿ-ಲೇಖಕಿ ಶ್ರೀಮತಿ ಮಾಲತಿ ಹೆಗಡೆ ಅವರಿಗೆ ಪ್ರೀತಿಪೂರ್ವಕ ಕೃತಜ್ಞತೆಗಳು. ಇವರೆಲ್ಲರ ಶ್ರಮವನ್ನು ಕನ್ನಡದ ಪ್ರಾಜ್ಞ ಓದುಗರು ಮೆಚ್ಚುತ್ತಾರೆಂದು ತಿಳಿಯುತ್ತೇನೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter