ಬದುಕಿನ ಅಮೃತ ಸಂಭ್ರಮ ಮತ್ತು ಸಿನಿ ಬದುಕಿನ ಸುವರ್ಣ ಸಂಭ್ರಮದಲ್ಲಿರುವ ಅನಂತನಾಗ್ ಅವರಿಗೆ ಹಾರ್ದಿಕ ಅಭಿನಂದನೆಗಳು.
ಅನಂತನಾಗ್ ಭಾರತೀಯ ಸಿನಿಮಾ ರಂಗ ಕಂಡ ಅತ್ಯುತ್ತಮ ಮತ್ತು ಅಪರೂಪದ ನಟರಲ್ಲೊಬ್ಬರು. ನಟನೆಗೆ ಹೊಸದೊಂದು ವ್ಯಾಖ್ಯಾನವನ್ನು ನೀಡಿದ ಬೆರಳೆಣಿಕೆಯ ನಟರಲ್ಲೊಬ್ಬರಾದ ಅನಂತನಾಗ್ ಸೆಪ್ಟೆಂಬರ್ ೦೪, ೨೦೨೩ರಂದು ಎಪ್ಪತ್ತೈದು ವರ್ಷಗಳನ್ನು ಪೂರೈಸಿ ಎಪ್ಪತ್ತಾರನೆಯ ವರ್ಷಕ್ಕೆ ಕಾಲಿಡುತ್ತಿದ್ದಾರೆ. ೨೦೨೩ರಲ್ಲಿ ಅನಂತನಾಗ್ ಅವರು ಚಿತ್ರರಂಗ ಪ್ರವೇಶಿಸಿ ಸರಿಯಾಗಿ ಐವತ್ತು ವಸಂತಗಳನ್ನು ಪೂರೈಸಲಿದ್ದಾರೆ. ಸತತ ಐವತ್ತು ವರ್ಷಗಳ ಕಾಲ ಬಣ್ಣದ ಲೋಕದಲ್ಲಿದ್ದುಕೊಂಡು ಜನರನ್ನು ರಂಜಿಸುತ್ತಾ ಬಂದಿರುವ ಅನಂತನಾಗ್ ಅವರ ಬದುಕಿನ ಅಮೃತ ಮಹೋತ್ಸವ ಮತ್ತು ಸಿನಿ ಬದುಕಿನ ಸುವರ್ಣ ಮಹೋತ್ಸವ ಒಂದೇ ವರ್ಷ ಬಂದಿರುವುದು ಯೋಗಾಯೋಗವೇ ಸರಿ. ಬದುಕಿನ ಅಮೃತ ಸಂಭ್ರಮ ಮತ್ತು ಸಿನಿ ಬದುಕಿನ ಸುವರ್ಣ ಸಂಭ್ರಮದಲ್ಲಿರುವ ಅನಂತನಾಗ್ ಅವರಿಗೆ ಕನ್ನಡ ಜನತೆಯ ಪರವಾಗಿ ಹಾರ್ದಿಕ ಅಭಿನಂದನೆಗಳು ಸಲ್ಲುತ್ತವೆ.
ಅನಂತನಾಗ್ ಸಿನಿಮಾ ರಂಗ ಪ್ರವೇಶಿಸಿದ್ದು ೧೯೭೩ರಲ್ಲಿ ತೆರೆಕಂಡ ‘ಸಂಕಲ್ಪ’ ಚಿತ್ರದ ಮೂಲಕ. ಪಿ. ವಿ. ನಂಜರಾಜ್ ಅರಸ್ ಅವರ ನಿರ್ದೇಶನದ ‘ಸಂಕಲ್ಪ’ ಚಿತ್ರದ ಮೂಲಕ ಗಮನ ಸೆಳೆದ ಅನಂತನಾಗ್ ಅವರಿಗೆ ದೊಡ್ಡ ಬ್ರೇಕ್ ನೀಡಿದ ಸಿನಿಮಾ ಶ್ಯಾಮ್ ಬೆನಗಲ್ ನಿರ್ದೇಶನದ ಹಿಂದಿ ಚಿತ್ರ ‘ಅಂಕುರ್’. ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸು ಗಳಿಸಿದ ‘ಅಂಕುರ್’ ಸಿನಿಮಾ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆಯಿತು. ‘ಅಂಕುರ್’ ಭಾರತೀಯ ಜಮೀನ್ದಾರಿ ವ್ಯವಸ್ಥೆಯ ಕುರಿತು ಬಂದ ಅತ್ಯುತ್ತಮ ಮತ್ತು ನೈಜ ಚಿತ್ರ ಎಂಬ ಖ್ಯಾತಿ ಪಡೆದಿದೆ.
‘ಅಂಕುರ್’ ಚಿತ್ರದ ಯಶಸ್ಸು ಅನಂತನಾಗ್ ಅವರು ಶ್ಯಾಮ್ ಬೆನಗಲ್ ಅವರ ಇನ್ನಷ್ಟು ಚಿತ್ರಗಳಲ್ಲಿ ನಟಿಸುವಂತೆ ಮಾಡಿತು. ಅವರು ‘ನಿಶಾಂತ್’, ‘ಮಂಥನ್’, ‘ಭೂಮಿಕಾ’, ‘ಕೊಂಡುರಾ’, ‘ಅನುಗ್ರಹಂ’ (‘ಕೊಂಡುರಾ’ ಚಿತ್ರದ ತೆಲುಗು ಅವತರಣಿಕೆ) ಮತ್ತು ‘ಕಲಿಯುಗ್’ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಭೂಮಿಕಾ’ ಮತ್ತು ‘ಕಲಿಯುಗ್’ ಚಿತ್ರಗಳಲ್ಲಿನ ಅವರ ನಟನೆ ಮನೋಜ್ಞವಾಗಿದೆ.
೧೯೭೫ರಲ್ಲಿ ತೆರೆಕಂಡ ತ.ರಾ.ಸು. ಅವರ ಕಾದಂಬರಿಯಾಧಾರಿತ ‘ಹಂಸಗೀತೆ’ ಒಂದು ಗಮನಾರ್ಹ ಸಿನಿಮಾ. ಅನಂತನಾಗ್ ಅವರು ಸಂಗೀತಗಾರ ಭೈರವಿ ವೆಂಕಟಸುಬ್ಬಯ್ಯನ ಪಾತ್ರಕ್ಕೆ ಜೀವತುಂಬಿದ್ದಾರೆ. ಇಪ್ಪತ್ತೇಳರ ವಯಸ್ಸಿನ ಯುವಕರಾದ ಅನಂತನಾಗ್ ಭೈರವಿ ವೆಂಕಟಸುಬ್ಬಯ್ಯನ ಪಾತ್ರವನ್ನು ಧಾರಣ ಮಾಡಿಕೊಳ್ಳುವ ಮೂಲಕ ತಮ್ಮ ನಟನೆಯ ಸಾಮರ್ಥ್ಯವನ್ನು ಸಾಬೀತು ಪಡಿಸಿದರು.
‘ಹಂಸಗೀತೆ’ಯಲ್ಲಿ ಅದ್ಭುತ ನಟನೆ ಮಾಡಿದ್ದರೂ ಅದೊಂದು ಸಂಗೀತಮಯ ಕಲಾತ್ಮಕ ಚಿತ್ರವಾದ್ದರಿಂದ ಅನಂತನಾಗ್ ಅವರಿಗೆ ಒಳ್ಳೆಯ ಹೆಸರು ಬಂದರೂ ಕಮರ್ಷಿಯಲ್ ಚಿತ್ರಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಶ್ಯಾಮ್ ಬೆನಗಲ್ ಅವರ ಚಿತ್ರಗಳಲ್ಲಿ ನಟಿಸಿದರೂ ಕೂಡ ಅಲ್ಲಿಂದಲೂ ಅಂತಹ ಹೇಳಿಕೊಳ್ಳುವಂತಹ ಪ್ರಯೋಜನವಿರಲಿಲ್ಲ. ಖ್ಯಾತ ಕಾದಂಬರಿಕಾರ ಭಾರತೀಸುತರ ‘ಬಯಲುದಾರಿ’ ಕಾದಂಬರಿಯಾಧಾರಿತ ಸಿನಿಮಾಕ್ಕಾಗಿ ಹೊಸ ಪ್ರತಿಭೆಯ ಅನ್ವೇಷಣೆಯಲ್ಲಿದ್ದ ದೊರೈ ಭಗವಾನ್ ಅವರಿಗೆ ಸಿಕ್ಕದ್ದು ಅನಂತನಾಗ್. ಆ ಚಿತ್ರದಲ್ಲಿ ಅನಂತನಾಗ್ ಅವರಿಗಿಂತ ಖ್ಯಾತಿ ಮತ್ತು ವಯಸ್ಸಿನಲ್ಲಿ ಹಿರಿಯರಾಗಿದ್ದ ಕಲ್ಪನಾ ಅವರು ನಾಯಕಿ. ಗೋಪಿ ಎಂಬ ತುಂಟ ಯುವಕ ಮತ್ತು ಚಂದ್ರಾ ಎಂಬ ಪ್ರಬುದ್ಧ ಯುವತಿಯ ಸೊಗಸಾದ ಪ್ರೇಮಕಥೆಯ ಚಿತ್ರ ‘ಬಯಲುದಾರಿ’. ಅನಂತನಾಗ್ ಮತ್ತು ಕಲ್ಪನಾ ಜೋಡಿ ತೆರೆಯ ಮೇಲೆ ಮೋಡಿ ಮಾಡಿತು. ರಾಜನ್-ನಾಗೇಂದ್ರರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಸುಮಧುರ ಹಾಡುಗಳು ಚಿತ್ರದ ಪ್ಲಸ್ ಪಾಯಿಂಟ್. ಸಂಪೂರ್ಣವಾಗಿ ಹಾರಾಡುವ ಹೆಲಿಕಾಪ್ಟರಿನಲ್ಲಿ ಚಿತ್ರಿಸಿದ್ದ “ನಲ್ಲೆ ಎಲ್ಲಿರುವೆ ಮನ ಕಾಡುವ ರೂಪಸಿಯೇ…” ಎಂಬ ಹಾಡು ಆ ಕಾಲದಲ್ಲಿ ಸಾಕಷ್ಟು ಸಂಚಲನ ಉಂಟು ಮಾಡುವ ಮೂಲಕ ಅಪಾರ ಜನಪ್ರಿಯತೆ ಗಳಿಸಿತು. ಈಗಲೂ ಸಹ ‘ಬಯಲುದಾರಿ’ ಚಿತ್ರದ ಹಾಡುಗಳು ಜನಪ್ರಿಯ ಎಂಬುದು ಗಮನಾರ್ಹ.
‘ಬಯಲುದಾರಿ’ ಚಿತ್ರದ ಅದ್ಭುತ ಯಶಸ್ಸು ಅನಂತನಾಗ್ ಅವರಿಗೆ ಚಾಕಲೇಟ್ ಹೀರೊ ಇಮೇಜ್ ತಂದುಕೊಟ್ಟಿತು. ಅತ್ಯಂತ ಆಕರ್ಷಕ ವ್ಯಕ್ತಿತ್ವದ ಅನಂತನಾಗ್ ಲಕ್ಷಾಂತರ ಅಭಿಮಾನಿಗಳ ಅದರಲ್ಲೂ ವಿಶೇಷವಾಗಿ ಯುವತಿಯರ ಮನಗೆದ್ದರು. ‘ಬಯಲುದಾರಿ’ ಚಿತ್ರದ ಯಶಸ್ಸಿನ ನಂತರವೂ ಸಹ ಅನಂತನಾಗ್ ಕನ್ನಡದಲ್ಲಿ ಭದ್ರವಾಗಿ ಬೇರೂರಲಿಲ್ಲ. ಕೆಲವು ಹಿಂದಿ ಚಿತ್ರಗಳ ಜೊತೆ ಜೊತೆಗೆ ‘ಪ್ರೇಮಲೇಖಾಲು’ ಎಂಬ ತೆಲುಗು ಚಿತ್ರದಲ್ಲಿ ನಟಿಸಿದರು. ಇದು ಸ್ವಲ್ಪ ನೆಗೆಟಿವ್ ಶೇಡ್ ಇರುವ ಪ್ಲೇಬಾಯ್ ತರಹದ ಪಾತ್ರ. ಈ ಚಿತ್ರವೂ ಸಹ ಯಶಸ್ಸು ಗಳಿಸಿತು. ಅನಂತನಾಗ್ ಅವರು ಮುಂದೆ ‘ಕುದುರೆಮುಖ’ ಮತ್ತು ‘ಮಾತು ತಪ್ಪದ ಮಗ’ದಂತಹ ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದರು. ‘ಕನ್ನೇಶ್ವರ ರಾಮ’ದಂತಹ ವಿಭಿನ್ನ ಸಿನಿಮಾ ಸಹ ಇದೇ ಅವಧಿಯಲ್ಲಿ ಬಿಡುಗಡೆಯಾಗಿ ಗಮನ ಸೆಳೆಯಿತು.
೧೯೭೯ರಲ್ಲಿ ತೆರೆಕಂಡ ‘ನಾ ನಿನ್ನ ಬಿಡಲಾರೆ’ ಮತ್ತು ‘ಚಂದನದ ಗೊಂಬೆ’ ಚಿತ್ರಗಳ ಯಶಸ್ಸು ಅನಂತನಾಗ್ ಕನ್ನಡ ಚಿತ್ರರಂಗದಲ್ಲಿ ಖಾಯಮ್ಮಾಗಿ ನೆಲೆ ನಿಲ್ಲುವಂತೆ ಮಾಡಿತು. ಶಂಕರನಾಗ್ ಅವರ ನಿರ್ದೇಶನದಲ್ಲಿ ಬಂದ ‘ಮಿಂಚಿನ ಓಟ’ ಆ ಕಾಲದಲ್ಲಿ ಕನ್ನಡ ಮಾತ್ರವಲ್ಲ ಭಾರತೀಯ ಸಿನಿಮಾ ರಂಗದಲ್ಲೇ ಒಂದು ವಿನೂತನ ಪ್ರಯೋಗ. ೧೯೮೦ರ ದಶಕದ ಆರಂಭದ ಹೊತ್ತಿಗೆ ಅನಂತನಾಗ್ ಕನ್ನಡದ ಸ್ಟಾರ್ ನಟರಲ್ಲೊಬ್ಬರಾಗಿ ಗುರುತಿಸಿಕೊಂಡರು.
೧೯೮೦ರ ದಶಕದಲ್ಲಿ ಅನಂತನಾಗ್ ಅವರು ನಾಯಕ ನಟರಾಗಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಸದಭಿರುಚಿಯ ಕೌಟುಂಬಿಕ ಮತ್ತು ಕಾದಂಬರಿಯಾಧಾರಿತ ಚಿತ್ರಗಳ ಮೂಲಕ ಲಕ್ಷಾಂತರ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡರು. ದೊರೈ ಭಗವಾನ್ – ಅನಂತನಾಗ್ ಜೋಡಿ ಮತ್ತು ಕೆ. ವಿ. ಜಯರಾಂ – ಅನಂತನಾಗ್ ಜೋಡಿಯ ಕಾದಂಬರಿಯಾಧಾರಿತ ಚಿತ್ರಗಳು ಅಪಾರ ಯಶಸ್ಸನ್ನು ಗಳಿಸಿದವು. ದೊರೈ ಭಗವಾನ್ ಅವರ ನಿರ್ದೇಶನದಲ್ಲಿ ಬಂದ ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಬಿಡುಗಡೆಯ ಬೇಡಿ’, ‘ಸೇಡಿನ ಹಕ್ಕಿ’ ಮತ್ತು ‘ಗಗನ’ ಅವರ ಯಶಸ್ವಿ ಚಿತ್ರಗಳು. ಕೆ. ವಿ. ಜಯರಾಂ ನಿರ್ದೇಶನದಲ್ಲಿ ಬಂದ ‘ಬೆತ್ತಲೆ ಸೇವೆ’, ‘ಬಾಡದ ಹೂ’, ‘ಮುದುಡಿದ ತಾವರೆ ಅರಳಿತು’, ‘ಇಬ್ಬನಿ ಕರಗಿತು’, ‘ಹೊಸ ನೀರು’ ಮತ್ತು ‘ಅರುಣ ರಾಗ’ ಚಿತ್ರಗಳ ಮೂಲಕ ಅವರು ಕರ್ನಾಟಕದ ಮನೆಮಾತಾದರು.
ಯಶಸ್ವಿ ಕಮರ್ಷಿಯಲ್ ಚಿತ್ರಗಳ ಜೊತೆ ಜೊತೆಗೆ ಕಲಾತ್ಮಕ ಚಿತ್ರಗಳನ್ನು ಸಹ ಮಾಡುತ್ತ ಬಂದ ಅನಂತನಾಗ್ ಸದಾ ಪ್ರಯೋಗಶೀಲರು. ಅವರು ‘ಬರ’, ‘ಅವಸ್ಥೆ’, ‘ಪ್ರೇಮಜ್ವಾಲೆ’, ‘ಶಬ್ದಗಳು’, ‘ಆ್ಯಕ್ಸಿಡೆಂಟ್’ ಮತ್ತು ‘ನೋಡಿ ಸ್ವಾಮಿ ನಾವಿರೋದು ಹೀಗೆ…’ದಂತಹ ಕಲಾತ್ಮಕ ಚಿತ್ರಗಳಲ್ಲಿ ನಟಿಸಿದರು. ‘ಧೈರ್ಯ ಲಕ್ಷ್ಮಿ’, ‘ನಾರದ ವಿಜಯ’, ‘ಒಲವು ಮಾಡಿದಾಗ’ ಮತ್ತು ‘ಹೆಂಡ್ತಿಗ್ಹೇಳ್ಬೇಡಿ’ ತರಹದ ಕಾಮಿಡಿ ಚಿತ್ರಗಳಲ್ಲೂ ಅವರು ಯಶಸ್ಸು ಗಳಿಸಿದರು. ಚೈತನ್ಯದ ಚಿಲುಮೆಯಾದ ಶಂಕರನಾಗರ ಹಲವು ಕನಸುಗಳಿಗೆ ಅವರು ಬೆಂಬಲವಾಗಿ ನಿಂತರು. ‘ಮಿಂಚಿನ ಓಟ’, ‘ಜನ್ಮ ಜನ್ಮದ ಅನುಬಂಧ’, ‘ಗೀತಾ’, ‘ನೋಡಿ ಸ್ವಾಮಿ ನಾವಿರೋದು ಹೀಗೆ…’, ‘ಆ್ಯಕ್ಸಿಡೆಂಟ್’ ಸೇರಿದಂತೆ ಕೆಲವು ವಿಶಿಷ್ಟ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟರು. ‘ಸಂಕೇತ ಸ್ಟುಡಿಯೋ’ ಮೂಲಕ ಕನ್ನಡ ಚಿತ್ರಗಳ ತಾಂತ್ರಿಕ ಕೆಲಸಗಳಿಗೆ ಬೆಂಗಳೂರಿನಲ್ಲೇ ಸಾಕಷ್ಟು ನೆರವು ದೊರೆಯುವಂತಾದದ್ದು ಗಮನಾರ್ಹ.
ನಾಗ್ ಸೋದರರ ಮರೆಯಲಾಗದ ಕೊಡುಗೆಯೆಂದರೆ ‘ಮಾಲ್ಗುಡಿ ಡೇಸ್’. ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ‘ಮಾಲ್ಗುಡಿ ಡೇಸ್’ ಒಂದು ಅಪೂರ್ವ ಸೃಷ್ಟಿ. ಅನಂತನಾಗ್ ಅವರಂತಹ ಶ್ರೇಷ್ಠ ನಟ ಮತ್ತು ಶಂಕರನಾಗ್ ಅವರಂತಹ ಶ್ರೇಷ್ಠ ನಿರ್ದೇಶಕರು ಸೇರಿದರೆ ಎಂತಹ ಅದ್ಭುತಗಳನ್ನು ಸೃಷ್ಟಿಸಬಲ್ಲರು ಎಂಬುದಕ್ಕೆ ಜೀವಂತ ಉದಾಹರಣೆ ‘ಮಾಲ್ಗುಡಿ ಡೇಸ್’.
ಶಂಕರನಾಗ್ ಅವರು ಆರ್. ಕೆ. ನಾರಾಯಣರ ಕಲ್ಪನೆಯ ಮಾಲ್ಗುಡಿಯನ್ನು ತೆರೆಯ ಮೇಲೆ ಮರು ಸೃಷ್ಟಿ ಮಾಡಿದರೆ, ಅನಂತನಾಗ್ ಅವರು ಮಾಲ್ಗುಡಿಯ ಕಾಲ್ಪನಿಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ಮೂಲಕ ತೆರೆಯ ಮೇಲೆ ಮೋಡಿ ಮಾಡಿದರು. ‘ಮಿಠಾಯಿವಾಲ’ ಅಥವಾ ‘ದಿ ವೆಂಡರ್ ಆಫ್ ಸ್ವೀಟ್ಸ್’ನಲ್ಲಿನ ಅನಂತನಾಗ್ ಅವರ ಅಭಿನಯ ಎಷ್ಟು ಮನೋಜ್ಞವಾಗಿದೆಯೆಂದರೆ ಅದಕ್ಕೆ ಯಾವ ಪ್ರಶಸ್ತಿ ಕೊಟ್ಟರೂ ಅದು ಕಡಿಮೆಯೇ! ‘ಇಂಜಿನ್ ಟ್ರಬಲ್’, ‘ರೋಮನ್ ಇಮೇಜ್’, ‘ಲ್ಯಾಲಿ ರೋಡ್’, ‘ದಿ ಸ್ನೇಕ್ ಸಾಂಗ್’ ಮತ್ತು ‘ದಿ ಓಲ್ಡ್ ಮ್ಯಾನ್ ಆಫ್ ದಿ ಟೆಂಪಲ್’ ಎಂಬ ಸಂಚಿಕೆಗಳಲ್ಲಿ ಅನಂತನಾಗ್ ಅವರು ಸೊಗಸಾಗಿ ಅಭಿನಯಿಸಿದ್ದಾರೆ.
೧೯೭೦ ಮತ್ತು ೧೯೮೦ರ ದಶಕಗಳು ಕನ್ನಡ ಚಿತ್ರರಂಗದ ಪಾಲಿಗೆ ಸುವರ್ಣ ಯುಗ. ಈ ಅವಧಿಯಲ್ಲಿ ಹಲವಾರು ಕಾದಂಬರಿಯಾಧಾರಿತ ಸದಭಿರುಚಿಯ ಸಿನಿಮಾಗಳು ನಿರ್ಮಾಣವಾಗಿ ಯಶಸ್ಸು ಗಳಿಸಿದವು. ಬಹುಶಃ ನಟಸಾರ್ವಭೌಮ ಡಾ.ರಾಜಕುಮಾರ ಅವರ ನಂತರ ಅತಿ ಹೆಚ್ಚು ಕಾದಂಬರಿಯಾಧಾರಿತ ಚಿತ್ರಗಳಲ್ಲಿ ನಟಿಸಿದವರು ಅನಂತನಾಗ್. ಕಾದಂಬರಿಯಾಧಾರಿತ ಚಿತ್ರಗಳ ವಿಷಯದಲ್ಲಿ ಕನ್ನಡದ ತುಂಬ ಜನ ನಿರ್ಮಾಪಕರು ಮತ್ತು ನಿರ್ದೇಶಕರ ಮೊದಲ ಆಯ್ಕೆ ಅನಂತನಾಗ್ ಅವರಾಗಿದ್ದರು ಎಂಬುದು ಅವರ ನಟನಾ ಸಾಮರ್ಥ್ಯ ಮತ್ತು ಜನಪ್ರಿಯತೆಗೆ ಸಾಕ್ಷಿ.
ಖ್ಯಾತ ಸಾಹಿತಿಗಳಾದ ತ.ರಾ.ಸು., ಶಂಕರ ಮೊಕಾಶಿ ಪುಣೇಕರ, ಯು. ಆರ್. ಅನಂತಮೂರ್ತಿ, ಎಸ್. ಎಲ್. ಭೈರಪ್ಪ, ಭಾರತೀಸುತ, ಟಿ. ಕೆ. ರಾಮರಾವ್, ಕೆ. ಟಿ. ಗಟ್ಟಿ, ಬಿ. ಎಲ್. ವೇಣು, ಬಿ. ವಿ. ವೈಕುಂಠರಾಜು, ಎಂ. ಕೆ. ಇಂದಿರಾ, ಸಾಯಿಸುತೆ, ಉಷಾ ನವರತ್ನರಾಂ, ಅಶ್ವಿನಿ, ಚಿತ್ರಲೇಖ, ರೇಖಾ ಕಾಖಂಡಕಿ, ನುಗ್ಗೇಹಳ್ಳಿ ಪಂಕಜ, ಯಂಡಮೂರಿ ವೀರೇಂದ್ರನಾಥ್ ಮತ್ತು ಮಲ್ಲಾದಿ ವೆಂಕಟಕೃಷ್ಣಮೂರ್ತಿಯವರ ಕಾದಂಬರಿಯಾಧಾರಿತ ಚಿತ್ರಗಳಲ್ಲಿ ಅನಂತನಾಗ್ ನಟಿಸಿದ್ದಾರೆ.
ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಅನಂತನಾಗ್ ಅವರು ಆ ಕಾಲದಲ್ಲಿ ತುಂಬ ಖ್ಯಾತಿ ಪಡೆದ ಬಹುತೇಕ ನಾಯಕ ನಟಿಯರ ಜೊತೆ ನಟಿಸಿದರು. ಹಿರಿಯ ನಟಿಯರಾದ ಕಲ್ಪನಾ, ಜಯಂತಿಯವರಿಂದ ಮೊದಲ್ಗೊಂಡು ಭಾರತಿ, ಆರತಿ, ಮಂಜುಳ, ಪದ್ಮಪ್ರಿಯ, ಗೀತಾ, ಗಾಯತ್ರಿ, ಅಂಬಿಕಾ, ಸರಿತಾ, ಸುಹಾಸಿನಿ, ಭವ್ಯ, ರೇಖಾ, ಶಬಾನಾ ಅಜ್ಜಿ, ಸ್ಮಿತಾ ಪಾಟೀಲ, ಜಯಮಾಲಾ, ಜಯಸುಧ, ಜಯಚಿತ್ರ ಮತ್ತು ವಾಣಿಶ್ರೀ ಸೇರಿದಂತೆ ಬಹುತೇಕ ನಟಿಯರ ಜೊತೆ ತೆರೆಯ ಮೇಲೆ ಮಿಂಚಿದರು.
ಜೂಲಿ ಖ್ಯಾತಿಯ ಲಕ್ಷ್ಮಿ ಮತ್ತು ಅನಂತನಾಗ್ ಅವರ ಜೋಡಿ ಪಡೆದ ಖ್ಯಾತಿ ಮಾತ್ರ ವಿಶೇಷವಾದುದು. ಅನೇಕ ಕಾದಂಬರಿಯಾಧಾರಿತ, ಸದಭಿರುಚಿಯ ಚಿತ್ರಗಳಲ್ಲಿ ನಟಿಸಿದ ಈ ಜೋಡಿ ತೆರೆಯ ಮೇಲೆ ಅಕ್ಷರಶಃ ಮೋಡಿ ಮಾಡಿತ್ತು. ಭಾರತೀಯ ಸಿನಿಮಾ ರಂಗದಲ್ಲಿ ತೆರೆಯ ಮೇಲೆ ಮಿಂಚಿದ ಸಾರ್ವಕಾಲಿಕ ಜೋಡಿಗಳಲ್ಲಿ ಅನಂತನಾಗ್ – ಲಕ್ಷ್ಮಿ ಜೋಡಿಯ ಸ್ಥಾನ ಖಂಡಿತ ಅಗ್ರ ಹತ್ತರಲ್ಲಿರುತ್ತದೆ. ಅನೇಕ ಚಿತ್ರಗಳಲ್ಲಿ ಯುವ ಪ್ರೇಮಿಗಳಾಗಿ, ಬಡ ಮತ್ತು ಮಧ್ಯಮ ವರ್ಗದ ಯುವ ದಂಪತಿಗಳಾಗಿ ನೀಡಿದ ಸಹಜ ನಟನೆ ಅನಂತನಾಗ್ ಮತ್ತು ಲಕ್ಷ್ಮಿಯವರಿಗೆ ಅಪಾರ ಅಭಿಮಾನಿ ವೃಂದ ಸೃಷ್ಟಿಯಾಗುವಂತೆ ಮಾಡಿತು. ‘ನಾ ನಿನ್ನ ಬಿಡಲಾರೆ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಬಿಡುಗಡೆಯ ಬೇಡಿ’, ‘ಮುದುಡಿದ ತಾವರೆ ಅರಳಿತು’ ಮತ್ತು ‘ಇಬ್ಬನಿ ಕರಗಿತು’ ಈ ಜೋಡಿಯ ಅತ್ಯಂತ ಯಶಸ್ವಿ ಚಿತ್ರಗಳು.
ಕರ್ನಾಟಕ ರತ್ನ ಡಾ.ರಾಜಕುಮಾರ ಅವರ ಜೊತೆ ಅನಂತನಾಗ್ ಅವರು ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕಾಮನಬಿಲ್ಲು’ ಮತ್ತು ‘ಭಕ್ತ ಪ್ರಹ್ಲಾದ’ದಲ್ಲಿ ಅನಂತನಾಗ್ ಅವರು ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಡಾ.ರಾಜಕುಮಾರ ಮತ್ತು ಅನಂತನಾಗ್ ಜೋಡಿಯ ಸ್ನೇಹದ ದೃಶ್ಯಗಳು ‘ಕಾಮನಬಿಲ್ಲು’ ಚಿತ್ರದ ಹೈಲೈಟ್. ಇವರಿಬ್ಬರ ನಟನೆಯಿಂದ ‘ಕಾಮನಬಿಲ್ಲು’ ಚಿತ್ರ ಸಿನಿರಸಿಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ. ದುರ್ದೈವಶಾತ್ ಡಾ.ರಾಜಕುಮಾರ ಮತ್ತು ಅನಂತನಾಗ್ ಅವರು ಹೆಚ್ಚಿನ ಚಿತ್ರಗಳಲ್ಲಿ ನಟಿಸಲಿಲ್ಲ. ಅನಂತನಾಗ್ ಅವರು ತಮ್ಮ ಸಮಕಾಲೀನ ನಟರಾದ ಶ್ರೀನಾಥ್, ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್, ಲೋಕೇಶ್, ರಜನಿಕಾಂತ, ಶಶಿಕಪೂರ್ ಮತ್ತು ಅಮೋಲ್ ಪಾಲೇಕರ್ ಅವರೊಂದಿಗೆ ನಟಿಸಿದ್ದಾರೆ. ಸೋದರ ಶಂಕರನಾಗ್ ಅವರೊಟ್ಟಿಗೆ ಒಂದು ಡಝನ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಅನಂತನಾಗ್ ಅವರು ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತ ಬಂದಂತಹ ಪ್ರಬುದ್ಧ ನಟ. ೧೯೯೦ರ ದಶಕದ ಆರಂಭದಲ್ಲಿ ಅವರು ಸಾಲು ಸಾಲಾಗಿ ಅತ್ಯುತ್ತಮ ಕಾಮಿಡಿ ಚಿತ್ರಗಳಲ್ಲಿ ನಟಿಸಿದರು. ‘ಉದ್ಭವ’, ‘ಗಣೇಶನ ಮದುವೆ’, ‘ಗೌರಿ ಗಣೇಶ’, ‘ಮನೇಲಿ ಇಲಿ ಬೀದೀಲಿ ಹುಲಿ’, ‘ಉಂಡೂ ಹೋದ ಕೊಂಡೂ ಹೋದ’ ಮತ್ತು ‘ಯಾರಿಗೂ ಹೇಳ್ಬೇಡಿ’ ಸದಭಿರುಚಿಯ ಕಾಮಿಡಿ ಚಿತ್ರಗಳಿಗೆ ಉತ್ತಮ ಉದಾಹರಣೆಗಳು. ‘ಉದ್ಭವ’ ಮತ್ತು ‘ಗೌರಿ ಗಣೇಶ’ದಂತಹ ಸಿನಿಮಾಗಳನ್ನು ಅನಂತನಾಗ್ ಅವರು ಮಾತ್ರ ಮಾಡಬಲ್ಲರು.
ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಯಾಧಾರಿತ ‘ಬೆಳದಿಂಗಳ ಬಾಲೆ’ ಸಿನಿಮಾ ಅನಂತನಾಗ್ ಅವರ ಅತುಲ ನಟನಾ ಸಾಮರ್ಥ್ಯವನ್ನು ಅನಾವರಣ ಮಾಡಿದ ಅತ್ಯುತ್ತಮ ಚಿತ್ರ. ನಾಯಕಿಯೇ ಇಲ್ಲದ ಚಿತ್ರವಾದ ‘ಬೆಳದಿಂಗಳ ಬಾಲೆ’ ಒಂದು ವಿಶಿಷ್ಟ ಪ್ರಯೋಗ. ಆ ಚಿತ್ರದ ಸಂಪೂರ್ಣ ಯಶಸ್ಸು ಅನಂತನಾಗ್, ಸುನೀಲಕುಮಾರ ದೇಸಾಯಿ ಮತ್ತು ಯಂಡಮೂರಿ ವೀರೇಂದ್ರನಾಥ್ ಅವರಿಗೆ ಸಲ್ಲುತ್ತದೆ.
ತೊಂಬತ್ತರ ದಶಕದ ಮಧ್ಯಭಾಗದಲ್ಲಿ ರಾಜಕೀಯಕ್ಕೆ ಧುಮುಕಿದ ಅನಂತನಾಗ್ ಅವರು ಅದು ಒಗ್ಗದೆ ಮತ್ತೆ ಚಿತ್ರರಂಗಕ್ಕೆ ಮರಳಿದರು. ಅನಂತನಾಗ್ ಅವರು ಐವತ್ತು ವರ್ಷವಾದ ನಂತರ ಸ್ವಯಂಪ್ರೇರಿತರಾಗಿ ನಾಯಕನಟನ ಸ್ಥಾನ ಬಿಟ್ಟು ಪೋಷಕ ನಟನಾದರು. ಪೋಷಕ ನಟರಾಗಿಯೂ ಅವರು ತಮ್ಮ ಮನೋಜ್ಞ ಅಭಿನಯದ ಮೂಲಕ ಇಂದಿಗೂ ಚಿತ್ರರಂಗದಲ್ಲಿ ಬೇಡಿಕೆಯಲ್ಲಿದ್ದಾರೆ. ಅವರಿಗಾಗಿಯೇ ಕಥೆಗಳು ಬರೆಯಲ್ಪಡುತ್ತಿವೆಯೆಂದರೆ ಅದು ನಟನಾಗಿ ಅನಂತನಾಗ್ ಅವರ ಮಹತ್ತನ್ನು ಸೂಚಿಸುತ್ತದೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿನ ಅನಂತನಾಗ್ ಅವರ ಅಮೋಘ ಅಭಿನಯ ಅವರ ಕುರಿತಾಗಿರುವ ಪ್ರೀತ್ಯಾಭಿಮಾನ ಹೆಚ್ಚಾಗುವಂತೆ ಮಾಡುತ್ತದೆ.
ಒಳ್ಳೆಯ ಸಾಹಿತ್ಯಾಭಿರುಚಿ ಹೊಂದಿರುವ ಅನಂತನಾಗ್ ಅತ್ಯುತ್ತಮ ಓದುಗರು. ಅವರು ತಮ್ಮ ಕಿರಿಯ ಸೋದರ ಶಂಕರನಾಗ್ ಅವರ ಕುರಿತು ಬರೆದ ಕೃತಿ ‘ನನ್ನ ತಮ್ಮ ಶಂಕರ’ ತುಂಬ ಜನಪ್ರಿಯವಾಗಿದೆ. ಅನಂತನಾಗ್ ಅವರದು ತುಂಬ ಸೊಗಸಾದ ಗದ್ಯ. ಬಹುಶಃ ಇದು ಶಂಕರನಾಗ್ ಅವರ ಕುರಿತು ಬಂದಿರುವ ಖಚಿತ ಮತ್ತು ನಂಬಲರ್ಹ ಕೃತಿ. ‘ನನ್ನ ತಮ್ಮ ಶಂಕರ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.
ಅನಂತನಾಗ್ ಸಪ್ತಭಾಷೆ ತಾರೆ. ಕನ್ನಡದ ಮೊದಲ ಪ್ಯಾನ್ ಇಂಡಿಯಾ ಹೀರೋ ಅನಂತನಾಗ್. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ ಮತ್ತು ಇಂಗ್ಲಿಷ್ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯ ‘ಅಂಕುರ್’, ಮಲಯಾಳಂನ ‘ಸ್ವಾತಿ ತಿರುನಾಳ್’, ಮರಾಠಿಯ ‘ಅನಾಹತ್’, ತೆಲುಗಿನ ‘ಪ್ರೇಮಲೇಖಾಲು’ ಅವರ ಸ್ಮರಣೀಯ ಕನ್ನಡೇತರ ಚಿತ್ರಗಳು. ಇಂದಿಗೂ ಮಲಯಾಳಿ ಮತ್ತು ಮರಾಠಿ ಮಂದಿ ‘ಸ್ವಾತಿ ತಿರುನಾಳ್’ ಮತ್ತು ‘ಅನಾಹತ್’ ಚಿತ್ರಗಳಲ್ಲಿನ ಅವರ ಅಭಿನಯವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.
ಅನಂತನಾಗ್ ಅವರಿಗೆ ‘ನಾ ನಿನ್ನ ಬಿಡಲಾರೆ’ (೧೯೭೯), ‘ಬರ’ (೧೯೮೨), ‘ಹೆಂಡ್ತಿಗ್ಹೇಳ್ಬೇಡಿ’ (೧೯೮೯), ‘ಉದ್ಭವ’ (೧೯೯೦), ಗೌರಿ ಗಣೇಶ’ (೧೯೯೧) ಮತ್ತು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ (೨೦೧೬) ಚಿತ್ರಗಳಿಗೆ ಒಟ್ಟು ಆರು ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿಗಳು ಲಭಿಸಿವೆ. ‘ಮಿಂಚಿನ ಓಟ’ (೧೯೭೯-೮೦), ‘ಹೊಸ ನೀರು’ (೧೯೮೫-೮೬), ‘ಅವಸ್ಥೆ’ (೧೯೮೭-೮೮) ಮತ್ತು ‘ಗಂಗವ್ವ ಗಂಗಾಮಾಯಿ’ (೧೯೯೪-೯೫) ಚಿತ್ರಗಳಿಗೆ ಒಟ್ಟು ನಾಲ್ಕು ಅತ್ಯುತ್ತಮ ನಟ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ದೊರೆತಿವೆ. ಅವರಿಗೆ ‘ವಿಷ್ಣುವರ್ಧನ ಚಲನಚಿತ್ರ ಪ್ರಶಸ್ತಿ’ ಮತ್ತು ‘ರಾಜ್ಯೋತ್ಸವ ಪ್ರಶಸ್ತಿ’ ಸಹ ಲಭಿಸಿವೆ.
ಅನಂತನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿ ಸಿಗಬೇಕಿತ್ತು. ವಿನೋದ ಖನ್ನಾ ಮತ್ತು ರಜನಿಕಾಂತರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಗುವುದಾದರೆ ಅನಂತನಾಗ್ ಅವರಿಗೆ ಯಾಕೆ ಸಿಗುತ್ತಿಲ್ಲ? ನಿನ್ನೆ ಮೊನ್ನೆ ಬಂದ ಬಾಲಿವುಡ್ ನಟ-ನಟಿಯರಿಗೆ, ಧರ್ಮದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಮಾಡಿದ ಧರ್ಮ ಗುರುಗಳಿಗೆ ಮತ್ತು ರಾಜಕೀಯ ಪಕ್ಷಗಳ ಮಾಜಿ ಮಂತ್ರಿಗಳಿಗೆ ಪದ್ಮ ಪ್ರಶಸ್ತಿಗಳು ಸಿಗುವುದಾದರೆ ಅನಂತನಾಗ್ ಅವರಿಗೆ ಯಾಕೆ ಸಿಗುತ್ತಿಲ್ಲ? ಇದನ್ನೆಲ್ಲ ನೋಡಿದರೆ ಪ್ರಶಸ್ತಿಗಳ ಆಯ್ಕೆಯ ಮಾನದಂಡ ಬೇರೆಯೇ ಇದೆ ಎಂದು ಯಾರಿಗಾದರೂ ವೇದ್ಯವಾಗುತ್ತದೆ. ಇರಲಿ, ಅನಂತನಾಗ್ ಅವರು ಇಂತಹ ಎಲ್ಲ ಪ್ರಶಸ್ತಿಗಳಿಗಿಂತ ದೊಡ್ಡವರು. ಕನ್ನಡ ಜನತೆ ಅವರಿಗೆ ತೋರಿದ ಪ್ರೀತ್ಯಾಭಿಮಾನದ ಮುಂದೆ ಇಂತಹ ಪ್ರಶಸ್ತಿ – ಗೌರವಗಳೆಲ್ಲ ನಗಣ್ಯ. ಭಾರತೀಯ ಸಿನಿಮಾ ಚರಿತ್ರೆಯಲ್ಲಿ ಕಲಾವಿದರಾಗಿ ಅನಂತನಾಗ್ ಅವರಿಗೆ ಶಾಶ್ವತ ಸ್ಥಾನವಿದೆ.
3 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ‘ಅನಂತನಾಗ್ ಸುವರ್ಣ ಸಂಭ್ರಮ”
ಅನಂತ ನಾಗ್ ಅವರ ಹುಟ್ಟು ಹಬ್ಬಕ್ಕೆ ಸಂದ ನಲ್ಮೆಯ ಉಡುಗೊರೆ.
ಕನ್ನಡದ ಮೇರು ನಟ ಅನಂತ್ ನಾಗ್ ಬಗ್ಗೆ ಬರೆದ ಲೇಖನ ಅದ್ಭುತ. ಬರಹಗಾರ ಶ್ರೀ ವಿಕಾಸ ಹೊಸಮನಿ ಅವರಿಗೆ ಅಭಿನಂದನೆಗಳು.
ಅನಂತ್ ನಾಗ್ ರವರ ಬಗ್ಗೆ ಒಳ್ಳೆಯ ಲೇಖನ🌷🌷🌷