ಮಧ್ಯಾಹ್ನದ ಸುಡು ನೆತ್ತಿಯ ಪ್ರಯಾಣ ಮುಗಿಸಿ ಭಾನುಪ್ರಕಾಶ್ ಪಡುವಣದಂಚಿಗೆ ಇಳಿಯಲು ದಾಪುಗಾಲು ಇಡಲು ಮುಂದಾಗಿ ಆಗಲೇ ತಾಸೆರಡಾಗಿತ್ತು. ಮಧ್ಯಾಹ್ನ ಎರಡು ಗಂಟೆಗೆ ಭರ್ಜರಿ ಸಿಹಿ ತಿನಿಸಿನ ಜೊತೆಗೆ ಪುಷ್ಕಳ ಭೋಜನ ಮುಗಿಸಿ ರಾಯರು ತಮ್ಮ ಕೋಣೆ ಸೇರಿಕೊಂಡಿದ್ದರು. ಕೋಣೆಯ ಬಾಗಿಲನ್ನು ಮುಂದುಮಾಡಿಕೊಂಡು ದಿನ ಪತ್ರಿಕೆಯೊಂದರ ಮೇಲೆ ಕಣ್ಣಾಡಿಸುತ್ತ ಮಂಚದ ಮೇಲೆ ಅಡ್ಡಾದರು. ಹತ್ತು ನಿಮಿಷ ಪತ್ರಿಕೆಯ ಮೇಲೆ ದೃಷ್ಟಿ ಓಡಾಡುತ್ತಿದ್ದಂತೆ ಕಣ್ಣೆವೆಗಳು ಅವರಿಗರಿವಿಲ್ಲದಂತೆ ಎಳೆಯತೊಡಗಿದವು. ಪತ್ರಿಕೆಯನ್ನು ಪಕ್ಕಕ್ಕಿಟ್ಟ ರಾಯರು ಕಣ್ಮುಚ್ಚಿ ಅಂಗಾತ ಮಲಗಿಕೊಂಡರು. ಸಿಹಿ ಊಟವೆಂದರೆ ಅದೂ ಅವರಿಗಿಷ್ಟವಾದ ಗಸಗಸೆ ಪಾಯಸ ಮತ್ತು ಜಿಲೇಬಿ. ಗರಿಗರಿಯಾದ ಆರು ಬಳೆ ಜಿಲೇಬಿ ಮತ್ತು ಎರಡು ಬಟ್ಟಲು ಪಾಯಸ ಸೇವಿಸಿದ್ದರು ಖುಷಿಯಿಂದ ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುತ್ತ. ಪತ್ನಿ ಬಡಿಸಲು ಹಿಂಜರಿಕೆ ತೋರಿಸುತ್ತಿದ್ದರೂ ಒತ್ತಾಯಮಾಡಿ ಹಾಕಿಸಿಕೊಂಡು ಸವಿದಿದ್ದರು.
"ರೀ, ನಿಮ್ಮ ಶುಗರ್ ಲೇವಲ್ ಬಾರ್ಡರಿನಲ್ಲಿ ಇದೆ. ಸಿಹಿ ಕಡಿಮೆ ಮಾಡಿದರೆ ಒಳ್ಳೆಯದು." ಮನೆಯಲ್ಲಿ ಸಿಹಿ ಮಾಡಿದಾಗೊಮ್ಮೆ ರಾಯರ ಪತ್ನಿ ವಸುಮತಿ ಗೊಣಗುತ್ತಿದ್ದುದು ಸರ್ವೇಸಾಮಾನ್ಯವಾದ ಮಾತು.
"ಇರ್ಲಿ ಬಿಡೇ ಅದೇನು ಮಹಾ ಲೇವಲ್...? ನೀನು ಸಿಹಿ ಅಡುಗೆ ಮಾಡೋದೇ ಹುಣ್ಣಿಮೆ-ಅಮವಾಸ್ಸೆ, ಹಬ್ಬ-ಹರಿದಿನ ಅಂತ. ನಾವೇನು ಬಜಾರಿನಿಂದ ಮೇಲಿಂದ ಮೇಲೆ ಸ್ವೀಟ್ಸ್ ತಂದು ತಿನ್ನೋದು ಅಷ್ಟರಲ್ಲೇ ಇದೆ." ರಾಯರ ಉತ್ತರ ರೆಡಿ ಇರುತ್ತಿತ್ತು.
"ಆದ್ರೂ ನಮ್ಮ ಹುಷಾರಿನಲ್ಲಿ ನಾವಿದ್ರೆ ಒಳ್ಳೇದಲ್ವೇ? ನೀವೇ ನೋಡಿದ್ರೆಲ್ಲ, ಪಕ್ಕದ ಮನೆ ಶ್ರೀನಿವಾಸರಾಯರ ಫಜೀತಿ. ಶುಗರ್ ಲೇವಲ್ ಸಿಕ್ಕಾಪಟ್ಟೆ ಹೆಚ್ಚಾಗಿ ಒಂದ್ವಾರ ಆಸ್ಪತ್ರೆ ಸೇರಿದ್ರಲ್ಲ...? ನೀರಿನಂಗೆ ರೊಕ್ಕ ಖರ್ಚುಮಾಡಿಕೊಂಡು ಒದ್ದಾಡಿದ್ರು. ಒಂದು ಇತಿ-ಮಿತಿಯಲ್ಲಿ ಇದ್ರೆ ಒಳ್ಳೇದಲ್ವೇ? ಅದ್ಕೇ ನಿಮ್ಗೆ ಜ್ಞಾಪ್ಸಿದ್ದು."
"ಹೌದೇ...? ನನ್ ಆರೋಗ್ಯ ಚೊಲೋನೇ ಐತೆ ಬಿಡೇ. ಇನ್ನೂ ಸ್ವಲ್ಪ ಸ್ವೀಟ್ ಹಾಕೇ..." ರಾಯರು ರಾಗ ಎಳೆಯುತ್ತಿದ್ದರು.
"ಸಿಹಿ ಅಂದ್ರೆ ಮೂಗು ಕೊಯ್ಸಿಕೊತೀರಿ ನೀವು. ನಾನು ಹೇಳೋದಿತ್ತು ಹೇಳ್ದೆ. ನಿಮ್ಮಿಷ್ಟ" ಎಂದೆನ್ನುತ್ತಾ ಮತ್ತೆ ಸ್ವಲ್ಪ ಸಿಹಿ ತಿನಿಸು ಬಡಿಸುತ್ತಿದ್ದರು ವಸುಮತಿಯವರು.
"ವಸೂ, ನೀನಿರುವಾಗ ನನಗೆಂಥ ಭಯ...?" ರಾಯರು ತೇಲಿಸಿ ಮಾತಾಡಿ ಬಿಡುತ್ತಿದ್ದರು.
"ನಿಮ್ದು ಅತಿಯಾಯಿತು."
"ವಸೂ, ನಂಗೆ ಅರವತ್ತೈದು ತುಂಬಿಯಾತು. ಇನ್ನೂ ಸಾಧಿಸಬೇಕಿದ್ದೇನಿದೆ...? ಏನೂ ಇಲ್ಲ ಅಂತ ಅಂದ್ಕೊಂಡಿದೀನಿ. ನನ್ನ ಮನದಿಚ್ಛೆಯನರಿತು ನಡೆಯುವಂಥ ನಿನ್ನಂಥ ಮುದ್ದಿನ ಮಡದಿ, ಮುತ್ತಿನಂಥ ಮಕ್ಕಳು, ಲಕ್ಷ್ಮಿದೇವಿರಂಥ ಸೊಸೆಯಂದಿರು, ಆತ್ಮೀಯನೆನಿಸುವ ಅಳಿಯ, ಒಬ್ಬರಿಗಿಂತ ಒಬ್ಬರು ಚೆಂದಾಗಿರುವ ಮುದ್ದಾದ ಮೊಮ್ಮಕ್ಕಳು ಇರುವಾಗ ನನಗಿನ್ನೇನಾಗಬೇಕಿದೆ? ಆ ನನ್ನ ಆರಾಧ್ಯ ದೈವ ಶ್ರೀಮನ್ನಾರಾಯಣ, ಬಾರೋ ವಾಸು ಎಂದು ಕರೆದರೆ ತುಂಬು ಖುಷಿಯಿಂದ ವೈಕುಂಠಕ್ಕೆ ಹೋಗಿ ಬಿಡುತ್ತೇನೆ" ಎಂದೆನ್ನುತ್ತಿದ್ದರು ರಾಯರು.
"ರೀ ಬಿಡ್ತು ಅನ್ನಿ. ಹಂಗ್ಯಾಕೆ ಮಾತಾಡ್ತ ಇದ್ದೀರಿ? ನಿಮ್ಮನ್ನು ಬಿಟ್ಟು ಒಂದು ಕ್ಷಣಾನೂ ನನ್ನಿಂದ ಇರ್ಲಿಕ್ಕೆ ಆದೀತೇ? ನಾರಾಯಣ ಕರೆದರೆ ಇಬ್ರೂ ಒಮ್ಮೆಲೇ ಹೋಗಿ ಬಿಡೋಣ. ಇಲ್ಲಾ ನಂಗೆ ಮುತ್ತೈದೆ ಸಾವು ಬಂದರೆ ನನ್ನಷ್ಟು ಅದೃಷ್ಟವಂತಳು ಯಾರೂ ಇಲ್ಲ ಅಂತ ಅಂದ್ಕೊಂಡಿದೀನಿ ನಾನೂ." ವಸುಮತಿ ರಾಯರ ಬಾಯಿಗೆ ಕೈ ಅಡ್ಡ ಹಿಡಿದು ಮಾತು ಬೆಳೆಸುತ್ತಿದ್ದರು.
"ಅದು ನಂಗೆ ಗೊತ್ತಿಲ್ಲೇನೇ? ನಿನ್ನಿಚ್ಛೆಯಂತೆಯೇ ಇಬ್ರೂ ಜೊತೆಯಾಗೇ ಹೋಗೋಣ. ಆದ್ರೆ ನೀನು ಮಾತ್ರ ಮುತ್ತೈದೆ ಸಾವು ಅಂತ ನನ್ನ ಒಂಟಿಮಾಡಿ ಹೋಗ್ಬೇಡ ಅಷ್ಟೇ. ನಾನು ಮೊದಲು ಹೋದ್ರೆ ನೀನಾದ್ರೂ ನಾಲ್ಕು ದಿನ ಬದುಕಬಹುದು. ಆದ್ರೆ ಪ್ರತಿಯೊಂದಕ್ಕೂ ವಸೂ, ವಸೂ ಎಂದೆನ್ನುತ್ತಾ ನಿನ್ನನ್ನೇ ಅವಲಂಬಿಸಿರುವ ನಾನು ನೀನಿಲ್ಲದೇ ಎಷ್ಟು ದಿನ ಬದುಕಿಯೇನು?"
"ಆಯಿತು, ಆಯಿತು. ಸುಮ್ನೇ ಊಟ ಮಾಡ್ರಿ. ಯಾವಾಗ್ಲೂ ನಿಮ್ದು ಇದೇ ಮಾತು" ಅಂತ ಹೇಳಿ ವಸುಮತಿ ಬೇರೆ ವಿಷಯದ ಕಡೆಗೆ ರಾಯರ ಗಮನವನ್ನು ಸೆಳೆಯುತ್ತಿದ್ದರು.
ಇಂದೂ ಹಾಗೇ ಮಾಡಿದ್ದರು ರಾಯರು. ರಾಯರ ಮತ್ತು ವಸುಮತಿಯವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಮಕ್ಕಳು, ಅಳಿಯ, ಸೊಸೆಯಂದಿರೆಲ್ಲರೂ ತಮ್ಮೊಳಗೇ ಮುಸಿಮುಸಿ ನಗುತ್ತಿದ್ದರು.
ರಾಯರೆಂದರೆ ವಾಸುದೇವರಾಯರು. ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿ ಐದು ವರ್ಷಗಳಾಗಿವೆ ಅಷ್ಟೇ. ಅದೇನೋ ಗೊತ್ತಿಲ್ಲ, ಪವಾಡ ಸದೃಶವೆಂಬಂತೆ ಅವರ ಮೂರೂ ಜನ ಮಕ್ಕಳು, ಅಂದರೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು, ಇಬ್ಬರು ಸೊಸೆಯಂದಿರು, ಅಳಿಯ ಮತ್ತು ಆರು ಜನ ಮೊಮ್ಮೊಕ್ಕಳು ಈ ಸಾರೆ ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದಿದ್ದು ತುಂಬಾ ಖುಷಿ ನೀಡಿತ್ತು ಇಳಿ ವಯಸ್ಸಿನ ವಾಸುದೇವರಾಯ ಮತ್ತು ವಸುಮತಿ ದಂಪತಿಗಳಿಗೆ.
ವಸುಮತಿ ಎಂದರೆ ವಸುಂಧರೆ ಇದ್ದಂತೆ. ನೋವು, ನಲಿವುಗಳನ್ನು ಸಹೃದಯದಿಂದ ಸ್ವೀಕರಿಸುವಾಕೆ. ಕುಟುಂಬದ ಕರುಳು-ಬಳ್ಳಿಗಳೆಲ್ಲರೂ ಬಂದಿದ್ದರಿಂದ ವಸುಮತಿಯವರ ಖುಷಿ, ಉತ್ಸಾಹಕ್ಕೆ ಕೊನೆ ಎಂಬುದಿರಲಿಲ್ಲ. ಅವರ ಮನಸ್ಸೆಂಬುದು ಮೊದಲ ಮಳೆಯ ಸಿಂಚನಕ್ಕೆ ಗರಿಗೆದರಿ ನರ್ತಿಸಿ ಸಂಭ್ರಮಿಸುವ ನವಿಲಿನಂತಾಗಿತ್ತು. ಒಳ್ಳೇ ಹರೇದ ಹುಡುಗಿಯಂತೆ ಓಡಾಡಿಕೊಂಡಿದ್ದರು ಎಲ್ಲರೂ ಬಂದಾಗಿನಿಂದ. ರಾಯರ ಜೊತೆಗಿರುವಾಗ ಮಂಡಿನೋವು, ಸೊಂಟನೋವು ಅದೂ ಇದೂ ಅಂತ ಗೊಣಗುತ್ತಿದ್ದಾಕೆಯ ಎಲ್ಲ ನೋವುಗಳು ಎಲ್ಲೋ ಹಾರಿಹೋಗಿದ್ದವು. ಮೊಮ್ಮಕ್ಕಳ ಆಟ-ಪಾಟ, ತುಂಟಾಟ, ನಗು, ಕೇಕೆ, ಸಂತಸ, ಸಂಭ್ರಮಗಳಲ್ಲಿ ತಾನೂ ಸಂಭ್ರಮಿಸಿ ಸಂತಸದ ಪರಾಕಾಷ್ಠೆ ಅನುಭವಿಸುತ್ತಿದ್ದರು. ಮಗಳ ಮುದ್ದು ಮಗನ ಹವಳದಂಥ ತುಟಿಗಳಿಗೆ ಮಾರು ಹೋಗಿದ್ದರು.
ಧಡಾರೆಂದು ಕೋಣೆಯ ಬಾಗಿಲು ತೆಗೆದ ಶಬ್ದ. ಮಕ್ಕಳ ಚಿಲಿಪಿಲಿ ರಾಗ ಎನ್ನುವುದಕ್ಕಿಂತ ಕರ್ಕಶ ಎಂದೆನ್ನಬಹುದಾದ ಶಬ್ದ. ಆಗಷ್ಟೇ ನಿದ್ದೆಗೆ ಜಾರುತ್ತಿದ್ದ ರಾಯರಿಗೆ ನಿದ್ರಾಭಂಗವಾಗಿತ್ತು. ಮೊಮ್ಮೊಕ್ಕಳೆಲ್ಲರೂ ಅವರ ಕೋಣೆಯಲ್ಲಿ ಜಮಾಯಿಸಿ ಗಲಾಟೆಗೆ ಮುಂದಾಗಿದ್ದರು. ಸುಖ ನಿದ್ರೆಗೆ ಕಲ್ಲು ಬಿದ್ದಿದ್ದಕ್ಕೆ ರಾಯರ ಕೋಪ ಒಂದು ಕ್ಷಣ ಭರ್ರಂತ ನೆತ್ತಿಗೇರತೊಡಗಿದ್ದರೂ ಅಷ್ಟೇ ವೇಗದಲ್ಲಿ ಸರ್ರಂತ ಕೋಪಕ್ಕೆ ಅಣೆಕಟ್ಟಿನ ತಡೆಯೊಡ್ಡಿ ಗಂಟಿಕ್ಕಿಕೊಂಡಿದ್ದ ಮುಖಕ್ಕೆ ನಗುವಿನ ಲೇಪನ ಕೊಟ್ಟು ಮಕ್ಕಳೊಂದಿಗೆ ಮಾತಿಗೆ ಮುಂದಾಗಿದ್ದರು.
"ಮಕ್ಕಳ್ರಾ, ನಂಗೆ ನಿದ್ರೆ ಬಂದಿದೆ. ಹೊರಗೆ ಹೋಗಿ ಆಟ ಆಡಿಕೊಳ್ಳಿರಿ."
"ತಾತಾ ತಾತಾ, ನಾವು ಇಲ್ಲೇ ಆಟ ಆಡ್ಬೇಕಂತ ತೀರ್ಮಾನ ತೊಗೊಂಡು ಬಂದೀವಿ. ಅದೂ ಅಲ್ದೇ ನಮ್ಗೆ ಆಡ್ಲಿಕ್ಕೆ ಬೇರೆಲ್ಲೂ ಜಾಗವಿಲ್ಲ. ಅದ್ಕೇ ಇಲ್ಲೇ ಆಟ ಆಡೋರು. ಹೊರಗೆಲ್ಲೂ ಹೋಗೋದಿಲ್ಲ." ಕಿರಿಮಗ ಅನಿರುದ್ಧನ ಆರು ವರ್ಷದ ಮಗ ಅವಿನಾಶ್ ಹೇಳಿದ.
"ಹಬ್ಬದ ಸಿಹಿ ಊಟದ ಮಹಿಮೆಯಿಂದ ನಂಗೆ ಕಣ್ತೆಗೆಯೋದಿಕ್ಕೆ ಆಗ್ತಿಲ್ಲ. ನೀವುಗಳು ಬೇರೆ ರೂಮು, ಇಲ್ಲಾ ಹಾಲಿನಲ್ಲಿ ಆಟ ಆಡ್ಕೊಳ್ಳಿ."
"ತಾತಾ ಎಲ್ಲಾ ಕಡೆಗೆ ಹೌಸ್ಫುಲ್. ಮಾಮ ಕೆಳಗಿನ ರೂಮಲ್ಲಿ ಮಲಗಿಕೊಂಡಿದ್ದರೆ ಅಪ್ಪ-ಅಮ್ಮ, ದೊಡ್ಡಪ್ಪ-ದೊಡ್ಡಮ್ಮ ಮೇಲಿನ ರೂಮ್‍ಗಳಲ್ಲಿ ಮಲ್ಕೊಂಡಿದಾರೆ. ಒಳಗಿನಿಂದ ಚಿಲಕ ಬೇರೆ ಹಾಕಿಕೊಂಡಿದ್ದಾರೆ. ಅಜ್ಜಿ ಮತ್ತು ಅತ್ತೆ ಇಬ್ರೂ ಹಾಲಲ್ಲಿ ಮಲಗಿ ಏನೇನೋ ಮಾತಾಡ್ತಿದ್ರು. ಮಾತಾಡ್ತಾ, ಮಾತಾಡ್ತಾ ಇಬ್ರೂ ನಿದ್ದೆಗೆ ಜಾರಿ ಗಡದ್ದಾಗಿ ಗೊರಕೆ ಹೊಡೀತಿದ್ದಾರೆ. ಅದ್ಕೇ ನಾವುಗಳೆಲ್ಲ ಇಲ್ಲಿಗೇ ಬಂದಿದ್ದು." ಹಿರಿಮಗ ಪ್ರದ್ಯುಮ್ನನ ಎಂಟು ವರ್ಷದ ಮಗ ಅನಿಕೇತ್ ಒಂದೇ ಉಸುರಿಗೆ ಹೇಳಿದ. ಕೈಯಲ್ಲಿದ್ದ ಮೊಬೈಲ್‍ಗಳ ಕೀಲಿಮಣೆ ಮೇಲೇ ಎಲ್ಲರ ಬೆರಳುಗಳು ಬೇರೆ ಹರಿದಾಡುತ್ತಿದ್ದವು. ಮೊಬೈಲ್‍ಗಳ ಕರ್ಕಶ ಶಬ್ದ ತುಂಬಾ ಕಿರಿಕಿರಿ ಎನಿಸತೊಡಗಿತ್ತು ರಾಯರಿಗೆ. ಕಿವಿಯಲ್ಲಿ ಒಂಥರ ಕಾಯ್ದ ಸೀಸ ಹಾಕಿದ ಅನುಭವ. ಮಕ್ಕಳ ಗಲಾಟೆ ಕಡಿಮೆಯಾಗುವ ಲಕ್ಷಣ ಕಾಣಲಿಲ್ಲ ರಾಯರಿಗೆ.
"ಅಜ್ಜ, ಅಜ್ಜ ಇವತ್ತೊಂದೇ ದಿನ ನಮ್ಮ ಈ ಕಿರಿಕಿರಿ ನಿಮ್ಗೆ. ಹೆಂಗಿದ್ರೂ ನಾಳೆ ನಾವೆಲ್ರೂ ನಿಮ್ಮ ಮನೆ ವೆಕೇಟ್ ಮಾಡಿ ಬೆಂಗ್ಳೂರಿಗೆ ಹೋಗ್ತಿದ್ದೇವಲ್ಲ... ಆಗ ನಿಮಗೆ ಮಲಗಲು ಯಾವ ತೊಂದ್ರೇನೂ ಇರೋದಿಲ್ಲ. ದಿನಾಲೂ ಊಟ ಮಾಡಿದ ನಂತರ ಹೇಗೆ ಮಲಗುತ್ತಿದ್ದಿರೋ ಹಾಗೇ ಹಾಯಾಗಿ ಮಲಗಬಹುದು ನೀವು. ಸಾರಿ ತಾತಾ" ಎಂದೆನ್ನುತ್ತಾ ಮಗಳು ಮಾನಸಿಯ ಏಳು ವರ್ಷದ ಮಗಳು ಹಂಸಿನಿ ಹಂಸದಂತೆ ಕೊರಳನ್ನು ಕೊಂಕಿಸುತ್ತ ಉಳಿದವರತ್ತ ಹೆಜ್ಜೆ ಹಾಕಿದಳು. ಪಟಪಟನೇ ಹರಳು ಹುರಿದಂತೆ ಚಟಪಟಿಸುವ ಕೆಂಪನೆಯ ಮೋತಿಯ ಬಲು ಚೂಟಿ ಹುಡುಗಿ ಹಂಸಿನಿ. ಮೊಮ್ಮಕ್ಕಳ ಮಾತಿಗೆ ರಾಯರು ತಮ್ಮ ನಿದ್ರೆಗೆ ಮನಸಲ್ಲೇ ಕಾಂಪ್ರೋಮೈಜ್ ಮಾಡಿಕೊಳ್ಳಲು ಮುಂದಾದರು.
"ಹೌದಲ್ವಾ, ಈ ಮಕ್ಕಳಿರೋದು ಇವತ್ತೊಂದೇ ರಾತ್ರಿ. ನಾಳೆ ರಾತ್ರಿ ಅವರ ಪ್ರಯಾಣವಿದೆ. ನಿದ್ರೆಗೆ ಗುಡ್ ಬೈ ಹೇಳಿ ಮಕ್ಕಳ ಜೊತೆಗೆ ಸಮಯ ಕಳೆಯುವುದೇ ಲೇಸು" ಎಂದು ಮನದಲ್ಲೇ ಯೋಚಿಸಿದಾಗ ರಾಯರ ನಿದ್ರೆ ಹಾರಿ ಹೋಗಿತ್ತು. ಹಾಗೇ ಮಂಚದ ಮೇಲೆ ಎದ್ದೂ ಕುಳಿತರು.
"ಮಕ್ಕಳೇ ಹಾಗಾದರೆ ನಾನು ನಿಮಗೆಲ್ಲರಿಗೂ ಕಥೆ ಹೇಳಲೇ...?" ರಾಯರ ಮಾತಿನಲ್ಲಿ ಉತ್ಸುಕತೆ ಇತ್ತು.
"ಅಜ್ಜ, ಹೇಳ್ರಿ. ಆದ್ರೆ ಅದೆಂಥಹ ಕಥೆ ಹೇಳ್ತೀರಿ ನೀವು...?" ಮೊಮ್ಮೊಗನೊಬ್ಬ ಬಾಣದಂತೆ ಪ್ರಶ್ನೆ ಬಿಟ್ಟಿದ್ದ.
"ರಾಮಾಯಣ, ಮಹಾಭಾರತ, ರಾಜ-ರಾಣಿಯರ ಕಥೆ ಹೇಳಲೇ...?"
"ತಾತಾ ಅವೆಲ್ಲವೂ ಓಲ್ಡ್ ಮಾಡೆಲ್ ಸ್ಟೋರಿಗಳು. ನಮ್ಮ ಪಪ್ಪ, ಮಮ್ಮೀ ಸಹ ಅಂಥಹ ಕಥೆ ಕೇಳಿಸಿಕೊಂಡಿರ್ಲಿಕ್ಕಿಲ್ಲ...?" ಅದೇ ಹಂಸಿನಿ ರಾಗವೆಳೆದಿದ್ದಳು. ರಾಯರ ಉತ್ಸಾಹ ಕೊಂಚ ತಣ್ಣಗಾಗಿತ್ತು ಆಗಲೇ.
"ಮಕ್ಕಳಿರಾ, ನಮ್ಮ ಕಾಲದಲ್ಲಿ ಚಂದಾಮಾಮ, ಬಾಲಮಿತ್ರ ಅಂತ ಮಕ್ಕಳ ಕತೆಗಳ ಪುಸ್ತಕಗಳನ್ನು ನಾವು ಓದ್ತಿದ್ವಿ. ಅದ್ರೊಳ್ಗೆ ರಾಮಾಯಣ, ಮಹಾಭಾರತ, ದಾನಶೂರ ಕರ್ಣ, ಅರ್ಜುನ-ಬಬ್ರುವಾಹನ, ಶ್ರೀಕೃಷ್ಣನ ಲೀಲೆಗಳು, ಪುಣ್ಯಕೋಟಿ, ಮೊಲ-ಆಮೆ, ಸತ್ಯ ಹರಿಶ್ಚಂದ್ರ, ನಳ-ದಮಯಂತಿ, ದುಷ್ಯಂತ-ಶಕುಂತಲೆ, ಸತ್ಯವಾನ ಸಾವಿತ್ರಿ, ಲವ-ಕುಶ, ವೀರ ಹನುಮಾನ, ರಾಜ-ರಾಣಿಯರ, ಜೊತೆಗೆ ಮಹಾತ್ಮಾ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರಬೋಸ್, ಸ್ವಾಮಿ ವಿವೇಕಾನಂದ, ಬಸವಾದಿ ಶರಣರು, ದಾಸವರೇಣ್ಯರು ಮುಂತಾದ ಮಹಾನ್ ಪುರುಷರ ನೀತಿ ಬೋಧಕ ಕಥೆಗಳು ಇರ್ತಿದ್ವು. ಬಾಳ ಉತ್ಸಾಹದಿಂದ ಓದ್ತಿದ್ವಿ. ಅಪ್ಪ, ಅಮ್ಮನೂ ಅಂಥ ನೂರಾರು ಕಥೆಗಳನ್ನು ನಮಗೆ ಹೇಳುತ್ತಿದ್ರು. ಆ ಕಥೆಗಳು ನಮ್ಗೆಲ್ಲಾ ತುಂಬಾ ಖುಷಿ ಕೊಡ್ತಿದ್ವು. ಮತ್ತೆ ನಿಮ್ಗೆ ಅದೆಂಥ ಕಥೆಗಳು ಬೇಕು...?"
"ಅಜ್ಜಾ, ಅವೆಲ್ಲವುಗಳು ಔಟ್ ಡೇಟೆಡ್. ಅಂಥಹ ಕಥೆಗಳನ್ನು ಅದ್ಯಾವ ಮಕ್ಳು ಕೇಳ್ತಾರೆ ಈಗ? ನಮಗೆಲ್ಲಾ ಕಾಮಿಕ್ಸ್ ಬೇಕು. ಟಾಮ್ ಅಂಡ್ ಜೆರ್ರಿ, ಮಿಕ್ಕಿ ಮೌಸ್, ಫ್ಯಾಂಟಮ್, ಛೋಟಾ ಭೀಮ್, ವಾಲ್ಟ್ ಡಿಸ್ನಿ, ಸ್ಪೈಡರ್ ಮ್ಯಾನ್ ಇಂಥ ಕಥೆಗಳು ಬೇಕು. ಇವ್ಯಾವೂ ಇಲ್ಲಾಂದ್ರೆ ಅಟ್ಲೀಸ್ಟ್ ಬಾಹುಬಲಿ ಕಥೆನಾದ್ರೂ ಹೇಳಿದ್ರೆ ನಾವು ಕೇಳ್ಸಿಕೊಂಡೇವು." ಅನಿಕೇತನ ಮಾತಿಗೆ ರಾಯರ ಉತ್ಸಾಹ ಸೂಜಿ ಚುಚ್ಚಿದ ಬಲೂನಿನಂತೆ ಟುಸ್ಸೆಂದು ಒಮ್ಮೆಲೇ ಇಳಿದಿತ್ತು.
"ಇಂಥ ಕಥೆಗಳು ಮಕ್ಕಳ ಜೀವನವನ್ನು ರೂಪಿಸುವುದಿಲ್ಲ. ನಂಗೆ ಇವ್ಯಾವ ಕಥೆಗಳೂ ಬರೋದಿಲ್ಲ ಮಕ್ಳೆ. ಆದ್ರೂ ನೀವು ನೀತಿ ಕಥೆಗಳನ್ನು ಓದ್ಬೇಕು ಮತ್ತು ಕೇಳ್ಬೇಕು." ರಾಯರ ಧ್ವನಿಯಲ್ಲಿ ನಿರಾಸೆ, ಬೇಸರವಿತ್ತು.
"ತಾತಾ, ನೀವೇನೂ ಬೇಸ್ರ ಮಾಡ್ಕೋಬ್ಯಾಡ್ರಿ. ಅನಿಕೇತ್ ಹೇಳಿದ ಕಥೆಗಳೆಲ್ಲಾ ನಮ್ಮ ನಮ್ಮ ಮೊಬೈಲ್‍ಗಳಲ್ಲಿ ಇವೆ. ನೀವು ಹೀಗೇ ಸುಮ್ನೇ ಕೂತು ನಮ್ಮ ಆಟ ನೋಡ್ತಾ ಖುಷಿಪಟ್ರೆ ಸಾಕು." ಅವಿನಾಶ್ ಹೇಳಿದ್ದಕ್ಕೆ ರಾಯರು ತುಸು ಗೆಲುವಾದರು.
ರಾಯರ ಮನಸ್ಸಿನಲ್ಲಿ ಬದುಕಿನ ಪುಟಗಳು ಆಗಸದಗಲ ತೆರೆದುಕೊಂಡವು. "ನಮ್ಮೂರು ತಾಲೂಕಿನ ಕೇಂದ್ರದಿಂದ ಬರೀ ನಾಲ್ಕು ಕಿಮೀ ದೂರದ ಊರು. ತಂದೆ ಮಾಧವರಾವ್ ಕುಲಕರ್ಣಿಯವರೆಂದರೆ ಸರಕಾರದ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ತುಂಬಾ ನಿಯತ್ತಿನ, ಪ್ರಾಮಾಣಿಕ ನೌಕರ. ಭಗವಂತ ನಮಗೆ ಸಾಕಷ್ಟು ಕೊಟ್ಟಿರುವಾಗ ಲಂಚ-ರುಷುವತ್ತನ್ನು ಖಂಡಿಸುತ್ತಿದ್ದರು. ಅಮ್ಮ ರುಕ್ಮಿಣಿದೇವಿ ಸಾಕ್ಷಾತ್ ದ್ವಾಪಾರ ಯುಗದ ರುಕ್ಮಿಣಿದೇವಿಯಂತೆಯೇ ಸೌಂದರ್ಯವತಿ, ಗುಣವತಿ. ಅಪ್ಪ, ಅಮ್ಮನ ದಾಂಪತ್ಯ ಕೃಷ್ಣ-ರುಕ್ಷಿಣಿಯರಂತೆಯೇ ಅನ್ಯೋನ್ಯವಾಗಿತ್ತು. ಅಪ್ಪ ಊರಲ್ಲಿದ್ದುಕೊಂಡೇ ದಿನಾಲೂ ಕೆಲಸಕ್ಕೆ ಹೋಗಿ ಬಂದು ಮಾಡುತಿದ್ದರು. ಜೊತೆಗೆ ಊರಲ್ಲಿರುವ ಮೂವತ್ತು ಎಕರೆ ಭೂಮಿಯನ್ನು ಸಾಗುವಳಿ ಮಾಡಿಸುತ್ತಿದ್ದರು. ಈಗ ತಾಲೂಕು ಕೇಂದ್ರ ಹೆಚ್ಚು-ಕಡಿಮೆ ನಮ್ಮೂರನ್ನು ಕಬಳಿಸುತ್ತ ನಮ್ಮೂರಿನತ್ತ ಬೆಳೆದು ನಿಂತಿದೆ.
ಊರಿಗೆ ಹೊಂದಿಕೊಂಡೇ ಇದ್ದ ಹತ್ತು ಎಕರೆ ಹೊಲದಲ್ಲೇ ನಮ್ಮ ಮನೆ ಇದೆ. ತಾತ ಕಟ್ಟಿಸಿದ್ದ ಮಣ್ಣಿನ ಮನೆಯನ್ನು ತೆಗೆಸಿ ಆರ್‍ಸಿಸಿ ಮನೆಯನ್ನಾಗಿ ತಂದೆಯವರು ತಮ್ಮ ಜೀವಿತಾವಧಿಯಲ್ಲೇ ಪರಿವರ್ತಿಸಿದ್ದರು. ಎರಡು ಬೆಡ್ ರೂಮುಗಳ ಮನೆ ನಮ್ಮದಿತ್ತು ಆಗ. ಈಗ ಮೊದಲಿನ ಅಂತಸ್ತನ್ನು ಮಾಡಿಕೊಂಡಿದ್ದೇನೆ. ನಾವು ಚಿಕ್ಕವರಿದ್ದಾಗ ಅಜ್ಜಿ, ತಾತ ದಿನಾಲೂ ಸಂಜೆ ನಮ್ಮನ್ನು ಕೂಡ್ರಿಸಿಕೊಂಡು ಚೆಂದ ಚೆಂದದ ಕತೆಗಳನ್ನು ಹೇಳುತ್ತಿದ್ದರು. ನನ್ನೊಂದಿಗೆ ಕಥೆ ಕೇಳಲು ಮುಸ್ಲಿಮ್, ಪರಿಶಿಷ್ಠ ಜಾತಿ, ಪರಿಶಿಷ್ಟ ಜನಾಂಗದವರಿಂದ ಹಿಡಿದು ಎಲ್ಲಾ ಜಾತಿಯ ನನ್ನ ಗೆಳೆಯರು, ಸಹಪಾಠಿಗಳು ಬರುತ್ತಿದ್ದರು. ಜಾತಿ, ಧರ್ಮಗಳ ಮಧ್ಯೆ ಯಾವುದೇ ತರಹದ ಬಿರುಕು, ಭಿನ್ನಾಭಿಪ್ರಾಯಗಳೇ ಇರಲಿಲ್ಲ ಆಗ. ಸೌಹಾರ್ದತೆಯ ಕಂಪು ಎಲ್ಲೆಲ್ಲೂ ಪಸರಿಸಿತ್ತು. ಆಗಿನ ನಮ್ಮೂರಿನ ಬಹುತೇಕ ಮುಸ್ಲಿಮರಿಗೆ ಕನ್ನಡ ಬಿಟ್ಟು ಬೇರೆ ಭಾಷೆಯೇ ಗೊತ್ತಿರಲಿಲ್ಲ. ಈಗಿನಂತೆ ಟಸ್-ಪುಸ್ ಅಂತ ಇಂಗ್ಲೀಷ್‍ನಲ್ಲಿ ಮಾತಾಡುವವರ ಸಂಖ್ಯೆ ಅತಿ ವಿರಳವಾಗಿತ್ತು.
ನಮ್ಮ ಹೊಲದ ಒಂದು ಬದುವಿಗೆ ಸಣ್ಣ ನಾಲು ಮತ್ತು ಅದಕ್ಕಂಟಿಕೊಂಡು ಗುಡ್ಡವೂ ಇದೆ. ಮಳೆಗಾಲದಲ್ಲಿ ಕುರುಚಲು ಗಿಡಗಳು ಚಿಗುರಿ ಹಸಿರು ಹಸಿರಾಗಿ ಇರುವುದನ್ನು ನೋಡುವುದಕ್ಕೆ ಕಣ್ಣುಗಳೆರಡೂ ಸಾಲದು. ಹತ್ತೆಕರೆಯಲ್ಲಿ ಆರು ಎಕರೆಯಷ್ಟು ಭೂಮಿ ನೀರಾವರಿಗೆ ಒಳಪಟ್ಟಿದೆ. ಮೂರೆಕರೆಯಲ್ಲಿ ಮಾವು, ಒಂದೆಕರೆಯಲ್ಲಿ ಋತುಮಾನಕ್ಕೆ ತಕ್ಕಂತೆ ಕಾಯಿಪಲ್ಲೆಗಳು, ಎರಡೆಕರೆಯಲ್ಲಿ ಮುಸುಕಿನ ಜೋಳ, ಸೂರ್ಯಕಾಂತಿ ಅದೂ, ಇದೂ ಅಂತ ಬೆಳೆಗಳು ಇರುತ್ತಿದ್ದವು. ಅಪ್ಪ, ಅಜ್ಜನೊಂದಿಗೆ ಹೊಲದಲ್ಲಿ ತಿರುಗಾಡಿ ಹಸಿರಿನ ಅಂದವನ್ನು ಕಣ್ತುಂಬಿಕೊಳ್ಳುವುದಕ್ಕೆ ತುಂಬಾ ಖುಷಿ. ಮಳೆಗಾಲದಲ್ಲಿ ಗುಡ್ಡದಂಚಿನಿಂದ ಇಳಿಯುವ ಜಲಧಾರೆಯ ಸೊಬಗು, ವೈಭವ ಬಣ್ಣಿಸಲಸದಳ. ಬೆಳಿಗ್ಗೆ ಹಕ್ಕಿಗಳ ಕಲರವ, ಚಿಲಿಪಿಲಿ ಗಾನ ಕಿವಿಗಳಿಗೆ ಇಂಪನ್ನೀಯುತ್ತಿತ್ತು. ಮಾವಿನ ತೋಪಿನಲ್ಲಿ ಹಿಂಡು ಹಿಂಡು ನವಿಲುಗಳು ಸುಪ್ರಭಾತ ಹಾಡುತ್ತಿದ್ದವು. ಮಳೆಗಾಲದಲ್ಲಿ ಮಳೆ ಹನಿಗಳಿಗೆ ಪುಳಕಿತಗೊಂಡ ನವಿಲುಗಳು ನರ್ತಿಸುತ್ತಿದ್ದುದೂ ಕಣ್ಮನಗಳಿಗೆ ಮುದ ನೀಡುತ್ತಿದ್ದುದು ಅಪರೂಪದ ದೃಶ್ಯವಾಗುತ್ತಿತ್ತು.
ನನ್ನ ಮೊಮ್ಮೊಕ್ಕಳಿಗೆ ಪುರಾಣದ ಕಥೆಗಳನ್ನು ಹೇಳುವೆನೆಂದರೆ ಅಂಥಹವುಗಳೆಲ್ಲ ತಮಗೆ ಬೇಕಿಲ್ಲವೆಂದು ಸಾರಾ ಸಗಟಾಗಿ ತಿರಸ್ಕರಿಸಿದರಲ್ಲ? ಎತ್ತ ಸಾಗಿದೆ ನಮ್ಮ ಭವ್ಯ ಭಾರತದ ಸಂಸ್ಕøತಿ? ಜನರೇಶನ್ ಗ್ಯಾಪ್ ಎಂದು ಇದಕ್ಕೇ ಹೇಳುತ್ತಿದ್ದಾರೇನೋ ಈಗಿನ ಪಂಡಿತರು! ಎಲ್ಲವೂ ಕಾಲಾಯ ತಸ್ಮೈ ನಮಃ ಎಂದೆನ್ನಲೇ? ಭಗವಂತ, ನಿನ್ನ ಲೀಲೆ ಅಗಾಧ. ಆಗ ಅದೆಂಥಹ ಅವಿನಾಭಾವ ನಂಟಿತ್ತು ಅಜ್ಜ-ಅಜ್ಜಿ, ಮೊಮ್ಮೊಕ್ಕಳ ನಡುವೆ...? ಆದರೆ ಈಗ...? ನಮ್ಮೊಂದಿಗೆ ಇರಲು ಈಗಿನ ಮಕ್ಕಳು ಬಯಸುವುದೇ ಇಲ್ಲವಲ್ಲ? ಅದೇನಿದ್ದರೂ ಅವರ ಆಟ-ಪಾಟ ಬರೀ ಕಂಪ್ಯೂಟರ್ ಮತ್ತು ಮೊಬೈಲ್‍ಗಳ ಜೊತೆಗಷ್ಟೇ ಎಂದರೆ ಅತಿಶಯೋಕ್ತಿ ಏನಿಲ್ಲ. ನಾವು ಬೆಂಗಳೂರಿಗೆ ಅವರ ಹತ್ತಿರ ಹೋದಾಗಲೂ ಇವರು ನಮ್ಮ ಜೊತೆಗೆ ಅಷ್ಟಾಗಿ ಇರುವುದೇ ಇಲ್ಲ. ತಾವಾಯಿತು, ತಮ್ಮ ಗೆಳೆಯರಾಯಿತು ಅಷ್ಟೇ. ಅವರು ಇಲ್ಲಿಗೆ ಬಂದಾಗಲೂ ಅಷ್ಟೇ. ಅಜ್ಜ, ಅಜ್ಜಿಯರ ನಡುವಿನ ನಂಟಿನ ತಂತು ಕಡಿದೇ ಹೋಗುತ್ತಿದೆ ಏನೋ?"
"ತಾತಾ, ನೀವು ಬಾಹುಬಲಿ ಪಾರ್ಟ್ ಟೂ ನೋಡ್ತೀರೇನು? ನಾನು ತೋರಿಸುವೆ ನನ್ನ ಮೊಬೈಲ್‍ನಲ್ಲಿ" ಎಂದು ಅವಿನಾಶ್ ರಾಯರ ಭುಜ ಹಿಡಿದು ಅಲುಗಾಡಿಸಿದಾಗಲೇ ರಾಯರ ಯೋಚನಾ ಲಹರಿ ತುಂಡಾಗಿತ್ತು. ನೆನಪಿನ ಬುತ್ತಿ ಕಟ್ಟಿಟ್ಟು ಮೊಮ್ಮಗನ ಕಡೆಗೆ ದೃಷ್ಟಿ ಹರಿಸಿದ್ದರು.
"ಬೇಡಪ್ಪಾ, ಅದನ್ನು ತೊಗೊಂಡು ನನಗೇನಾಗಬೇಕಿದೆ? ನೀವೇ ನೋಡಿಕೊಳ್ಳಿರಿ."
"ತಾತಾ, ತುಂಬಾ ಬೊಂಬಾಟಾಗಿದೆ." ಅನಿಕೇತ್ ಒತ್ತಾಯಿಸಿದಾಗ ರಾಯರು ಬೇಡವೇ ಬೇಡ ಅಂದಾಗ ಹುಡುಗರು ಮತ್ತೆ ಒತ್ತಾಯಿಸಲಿಲ್ಲ.
"ರೀ, ನಿದ್ರೆ ಬಂತೇನ್ರೀ?"
"ಹೌದು ಕಣೇ. ಮಧ್ಯಾಹ್ನ ಮೊಮ್ಮೊಕ್ಕಳು ನಿದ್ದೆ ಮಾಡುವುದಕ್ಕೆ ಬಿಡಲೇ ಇಲ್ಲವಲ್ಲ? ರೂಮಲ್ಲಿ ಬಂದು ತುಂಬಾ ಗಲಾಟೆ ಮಾಡಿದರು." ಆಗಷ್ಟೇ ನಿದ್ರಾದೇವಿಯ ಗಾಢ ಆಲಿಂಗನದಲ್ಲಿ ಸೇರಿಕೊಂಡಿದ್ದ ರಾಯರನ್ನು ವಸುಮತಿಯವರ ಧ್ವನಿ ಎಚ್ಚರಗೊಳಿಸಿತ್ತು.
"ಒಂಚೂರು ಮಾತಾಡುವುದಿತ್ತು..." ರಾಗವೆಳೆದರು ವಸುಮತಿ.
"ಅದೇನೇ ಮಾತು ಈ ಹೊತ್ತಿನಲ್ಲಿ...?" ನಿದ್ದೆಗಣ್ಣಿನಲ್ಲಿ ರಾಯರು ಗುನುಗಿದರು.
"ನಾಳೆ ರಾತ್ರಿ ಮಕ್ಕಳೆಲ್ಲರೂ ವಾಪಾಸು ಬೆಂಗಳೂರಿಗೆ ಹೋಗುತ್ತಿರುವವರಲ್ಲ, ಅದಕ್ಕೇ..."
"ಹೌದೌದು. ವಿಷಯ ಜರೂರೂ ಇದ್ರೆ ಹೇಳಿಬಿಡು."
"ಮೂವರೂ ಮಕ್ಕಳು ಬೆಂಗಳೂರಿನಲ್ಲಿ ಒಂದೇ ಬಹುಮಡಿ ಕಟ್ಟಡದಲ್ಲಿ ಫ್ಲ್ಯಾಟ್ಸ್ ಖರೀದಿ ಮಾಡಲು ಮುಂದಾಗಿದ್ದಾರಂತೆ."
"ಹೌದೇ? ಒಳ್ಳೇ ಸಮಾಚಾರ. ಒಳ್ಳೇದಾಯಿತು ಬಿಡು. ಅದಕ್ಯಾಕಿಷ್ಟು ಆತಂಕ?" ವಸುಮತಿಯವರು ಇನ್ನೂ ಏನೋ ಹೇಳುವವರಿದ್ದರು. ರಾಯರು ಮಧ್ಯೆದಲ್ಲಿಯೇ ಬಾಯಿಹಾಕಿದರು.
"ನಾನು ಪೂರ್ತಿ ಹೇಳೋದನ್ನು ನೀವು ಕೇಳ್ತಿಲ್ಲ. ನಡುವೆ ಬಾಯಿ ಹಾಕ್ತಿದ್ದೀರಿ. ಅವರು ಫ್ಲ್ಯಾಟ್ಸ್‍ಗೋಸ್ಕರ ಬ್ಯಾಂಕಲ್ಲಿ ಲೋನ್‍ಗೆ ಅರ್ಜಿ ಸಲ್ಲಿಸಿದ್ದಾರಂತೆ. ತಮ್ಮ ಇದುವರೆಗಿನ ಉಳಿತಾಯ ಎಲ್ಲವು ಸೇರಿದರೂ ಅವರಿಗೆ ಇನ್ನೂ ದುಡ್ಡು ಬೇಕಾಗಿದೆಯಂತೆ..."
"ಹೌದೇ? ಎಷ್ಟೆಷ್ಟು ಹಣ ಬೇಕಿದೆಯಂತೆ? ಮತ್ತೆ ಅದಕ್ಕೇನು ವ್ಯವಸ್ಥೆ ಮಾಡಿದ್ದಾರಂತೆ?"
"ಮತ್ತೆ ಅಡ್ಡಬಾಯಿ ನಿಮ್ಮದು. ಪ್ರದ್ಯುಮ್ನ ಮತ್ತು ಅನಿರುದ್ಧ ಇಬ್ಬರಿಗೂ ಇನ್ನೂ ತಲಾ ಹತ್ತತ್ತು ಲಕ್ಷ ಬೇಕಂತೆ. ಮಾನಸಿಗೆ ಇಪ್ಪತ್ತು ಲಕ್ಷ ಬೇಕಿತ್ತಂತೆ. ಅಳಿಯಂದಿರ ತಂದೆ ಹತ್ತು ಲಕ್ಷ ಕೊಡಲು ಮುಂದಾಗಿದ್ದಾರಂತೆ. ಅವಳಿಗೆ ಇನ್ನೂ ಹತ್ತು ಲಕ್ಷದ ಕೊರತೆ ಇದೆಯಂತೆ."
"ಅಂದರೆ ಭಾರೀ ಮೊತ್ತವೇ ಬೇಕಾಗಿದೆ ಹಾಗಾದರೆ. ಇಷ್ಟು ದೊಡ್ಡ ಮೊತ್ತವನ್ನು ಅದ್ಹೇಗೆ ಜೋಡಿಸುತ್ತಿದ್ದಾರೆ?"
"ನೀವು ಮೂವರಿಗೂ ತಲಾ ಹತ್ತತ್ತು ಲಕ್ಷ ಕೊಡಬೇಕಂತೆ...?" ವಸುಮತಿ ತಡೆದು ತಡೆದು ಹೇಳಿ ರಾಯರ ಪ್ರತಿಕ್ರಿಯೆಗಾಗಿ ಅವರ ಮುಖ ದಿಟ್ಟಿಸತೊಡಗಿದರು.
"ಅಂದರೆ ದುಡ್ಡನ್ನು ಕೇಳಲು ಎಲ್ಲರೂ ಒಂದಾಗಿ ಬಂದಿದ್ದಾರೇನು?"
"ಹೋದ ವರ್ಷ ರಜೆ ಸಿಗ್ಲಿಲ್ಲ ಅಂತ ಯಾರೂ ಇಲ್ಲಿಗೆ ಬರ್ಲಿಲ್ಲ. ಈ ಸಾರೆ ನಾವೇ ದೀಪಾವಳಿಗಾದ್ರೂ ಬರ್ರಿ ಬರ್ರೀ ಅಂತ ದುಂಬಾಲು ಬಿದ್ದಿದ್ದಿಲ್ಲೇನ್ರಿ? ಏನೋ ಹೊಂದಾಣಿಕೆ ಮಾಡ್ಕೊಂಡು ಬಂದಿದ್ದಾರೆ ಅಷ್ಟೇ."
"ಇರಲಿ, ನಾನೆಲ್ಲಿಂದ ತರಲಿ ಅಷ್ಟು ಹಣ? ನನ್ನ ಹತ್ತಿರ ರಿಜರ್ವ ಬ್ಯಾಂಕ್ ಇದೆಯೇನು?"
"ಹಾಗೆಂದರೆ ಹೇಗ್ರೀ...? ನೀವು ಕೆಲಸದಿಂದ ನಿವೃತ್ತರಾದಾಗ ಬಂದ ಹಣ ಇದೆ. ಅಲ್ಲದೇ ನಮ್ಮ ಎರಡೆಕರೆ ಹೊಲ ಎನ್ನೇ ಮಾಡಿಸಿ ಪ್ಲಾಟ್ ಮಾಡಿಸಿದ್ದೀರಲ್ಲ, ಈಗಾಗಲೇ ಮಾರಿರುವ ಪ್ಲಾಟ್‍ಗಳಿಂದ ಬಂದ ಹಣವೂ ಇದೆ."
"ಹಣವೇನೋ ಇದೆ. ನಮ್ಮಲ್ಲಿರುವ ಹಣವನ್ನೆಲ್ಲಾ ಅವರಿಗೆ ಕೊಟ್ಟರೆ ನಮ್ಮ ಉಪಜೀವನಕ್ಕೇನು ಮಾಡಬೇಕು...?"
"ರೀ, ನಮ್ಮ ಉಪಜೀವನಕ್ಕೆಷ್ಟು ದುಡ್ಡು ಬೇಕು? ನಿಮ್ಮ ಪಿಂಚಣಿ ಇದೆ, ಜಮೀನಿನ ಆದಾಯವಿದೆ, ಪ್ಲಾಟ್‍ಗಳು ಮಾರುತ್ತಲೇ ಇವೆ. ನಮ್ಮಿಬ್ಬರ ಹೊಟ್ಟೆ-ಬಟ್ಟೆಗೆ ಇದು ಸಾಕಾಗುವುದಿಲ್ಲವೇ?"
"ನೀನು ಹೇಳೋದೂ ಸರೀನೇ. ಆದ್ರೂ ಯೋಚನೆ ಮಾಡುವೆ. ಸದ್ಯ ಮಲಗು. ಬೆಳಿಗ್ಗೆ ಯಾವುದಕ್ಕೂ ಹೇಳುವೆ."
"ದಿನಗೂಲಿ ಮಾಡಿ ಜೀವನ ಮಾಡುತ್ತಿರುವವರಂತೆ ಅಷ್ಟ್ಯಾಕೆ ಯೋಚ್ನೆ ಮಾಡ್ಲಿಕತ್ತೀರಿ? ನೀವು ಗಳಿಸಿದ್ದೆಲ್ಲ ಅವರಿಗೇ ಸೇರಬೇಕು ತಾನೇ? ಇದರಲ್ಲಿ ಯೋಚ್ನೆ ಮಾಡುವಂಥದ್ದೇನಿದೆ...?"
"ಸರಿ ಸರಿ. ಬೆಳಿಗ್ಗೆ ನನ್ನ ನಿರ್ಧಾರ ತಿಳಿಸುವೆನೆಂದು ಹೇಳಿದೆನಲ್ಲ, ಸುಮ್ಮನೇ ಮಲಗು."
"ನಿಮ್ಮಿಷ್ಟ" ಎಂದ ವಸುಮತಿಯವರು ಮುಂದೆ ಮಾತನ್ನು ಬೆಳಸುವ ಧೈರ್ಯ ಮಾಡಲಿಲ್ಲ.
ಮರುದಿನ ಬೆಳಿಗ್ಗೆ ನಾಷ್ಟಾದ ಸಮಯ. ವಸುಮತಿಯವರು ಬರೀ ತುಪ್ಪದಲ್ಲೇ ರವೆ ಹುರಿದು ಹಿಡಿಹಿಡಿ ಗೋಡಂಬಿ, ದ್ರಾಕ್ಷಿ, ಸಾಕಷ್ಟು ಏಲಕ್ಕಿ, ಲವಂಗ, ಚಕ್ಕೆ, ಪತ್ರಿ ಹಾಕಿ ಘಮಘಮಿಸುವ ಕೇಸರಿಬಾತ್ ಮಾಡಿದ್ದರು. ಸೊಸೆಯಂದಿರು ಬಿಸಿಬಿಸಿ ದೋಸೆ ಹೊಯ್ಯತೊಡಗಿದ್ದರು. ಗಂಡಸರೆಲ್ಲರೂ ಸ್ನಾನ, ಪೂಜಾದಿಗಳೆಲ್ಲವನ್ನೂ ಮುಗಿಸಿ ನಾಷ್ಟಾಕ್ಕೆ ಕುಳಿತಿದ್ದರು. ತೋಟದಲ್ಲಿನ ಬಾಳೆ ಎಲೆಗಳು ಎಲ್ಲರ ಮುಂದಿದ್ದವು. ವಸುಮತಿಯವರು ತಾವೇ ಮುಂದಾಗಿ ಕೇಸರಿಬಾತ್, ಆಲೂಗಡ್ಡೆ ಪಲ್ಯೆ, ಕಾಯಿ ಚಟ್ಣಿ ಬಡಿಸಿದರು. ಕೇಸರಿಬಾತ್‍ದ ಫ್ಲೇವರ್ ಬಾಯಲ್ಲಿ ನೀರೂರಿಸತೊಡಗಿತ್ತು. ಎಲ್ಲರೂ ಬಾಯಿ ಚಪ್ಪರಿಸುತ್ತ ಕೇಸರಿಬಾತ್‍ನ್ನು ಹೊಟ್ಟೆಗಿಳಿಸತೊಡಗಿದರು. ಹತ್ತತ್ತು ಲಕ್ಷದ ಬಗ್ಗೆ ಬೆಳಿಗ್ಗೆ ತಿಳಿಸುವುದಾಗಿ ಹೇಳಿದ್ದ ರಾಯರು ಏನೂ ಹೇಳುತ್ತಿಲ್ಲವಲ್ಲ ಎಂಬ ಆತಂಕ, ಕುತೂಹಲ ವಸುಮತಿಯವರ ಎದೆಯೊಳಗೆ ತುಡಿಯುತ್ತಿತ್ತಾದರೂ ಮತ್ತೊಂದು ಸಾರೆ ಕೇಳುವ ಮನಸ್ಸಾಗಲಿಲ್ಲ. ಆಗೊಮ್ಮೆ, ಈಗೊಮ್ಮೆ ಅವರು ರಾಯರ ಮುಖ ದಿಟ್ಟಿಸಿದರಾದರೂ ಅವರ ಮುಖ ಭಾವರಹಿತವಾಗಿದ್ದನ್ನು ಗಮನಿಸಿ ಸುಮ್ಮನಿದ್ದು ಬಿಟ್ಟರು. ಗಂಡು ಮಕ್ಕಳು, ಅಳಿಯ ಸುಮ್ಮನೇ ನಾಷ್ಟಾ ಮಾಡುತ್ತಿದ್ದರು. ಸೊಸೆಯಂದಿರು ದೋಸೆ ಹೊಯ್ಯುವುದರಲ್ಲಿ ಬಿಜಿಯಾಗಿದ್ದರೆ ಮಗಳು ಮಕ್ಕಳಿಗೆ ನಾಷ್ಟಾ ಬಡಿಸಿ, ತಿನ್ನಿಸುವುದರಲ್ಲಿ ಮಗ್ನಳಾಗಿದ್ದಳು.
"ಏನ್ರೆಪಾ, ನೀವೆಲ್ರೂ ಒಂದೇ ಬಿಲ್ಡಿಂಗ್‍ನಲ್ಲಿ ಫ್ಲ್ಯಾಟ್ಸ್ ತೊಗೊಳ್ಲಿಕ್ಕೆ ಮನ್ಸು ಮಾಡೀರಂತೆ. ಬಾಳ ಒಳ್ಳೇದಾತುಬಿಡ್ರಿ. ಬೆಂಗ್ಳೂರಿಗೆ ಬಂದಾಗ ದೊಡ್ಡ ಮಗನ ಮನೆ, ಸಣ್ಣ ಮಗನ ಮನೆ, ಮಗಳ ಮನೆ ಅಂತ ಟ್ರ್ಯಾಫಿಕ್ ಜಾಮ್‍ಲ್ಲಿ ಆ ಮೂಲೆಯಿಂದ ಈ ಮೂಲೆಗೆ, ಈ ಮೂಲೆಯಿಂದ ಆ ಮೂಲೆಗೆ ತಿರುಗಾಡೋದ್ರಲ್ಲಿ ಸಾಕಾಗಿ ಹೋಗ್ತಿತ್ತು. ಒಂದೇ ಕಡೆಗೆ ಆಗ್ತಿರೋದ್ರಿಂದ ಚೊಲೋನೇ ಆತು. ಅದೇನೋ ದುಡ್ಡು ಕಡಿಮೆ ಬೀಳ್ತದಂತೆ ಬಾಯಿಯವ್ರ ಮುಂದೆ ಏನೋ ಪ್ರಸ್ತಾವನೆ ಇಟ್ಟೀರಂತೆ...?"
"ಹೌದ್ರೀ ಮಾಮಾರೇ. ನೀವು ಸದ್ಯ ಸಹಾಯ ಮಾಡಿದ್ರೆ ನಾವು ಮುಂಬರುವ ದಿನಗಳಲ್ಲಿ ನಿಮ್ಗೆ ಹಣ ವಾಪಾಸು ಕೊಡ್ತೀವಿ. ಬಾಳ ಉಪಕಾರವಾಗ್ತದೆ." ಅಳಿಯ ವರುಣ್ ತುಂಬಾ ವಿನಯದಿಂದ ಹೇಳಿದ. ಗಂಡು ಮಕ್ಕಳೂ ಅದನ್ನೇ ಪುನರುಚ್ಛರಿಸಿದರು.
ನಿನ್ನೆ ರಾತ್ರಿ ಹೆಂಡತಿ ಪ್ರಸ್ತಾವನೆ ಮಂಡಿಸಿ ತುಸು ಹೊತ್ತಿನಲ್ಲಿ ಸರಾಗವಾಗಿ ನಿದ್ದೆಗೆ ಜಾರಿ ಸಣ್ಣದಾಗಿ ಗೊರಕೆ ಹೊಡೆಯಲೂ ಮುಂದಾಗಿದ್ದಳು. ಆದರೆ ರಾಯರಿಗೆ ನಿದ್ರೆ ಹಾರಿಹೋಗಿತ್ತು. ಪತ್ನಿ ಕೊನೆಯಲ್ಲಿ ಹೇಳಿದ ಮಾತುಗಳೇ ಅವರ ಮನದಲ್ಲಿ ಗಿರಿಕಿ ಹೊಡೆಯಲು ಶುರುಮಾಡಿದ್ದವು.
"ವಸೂ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ತುಂಬಾ ಸಮಯೋಚಿತ ಮತ್ತು ಅರ್ಥಪೂರ್ಣ ಮಾತುಗಳು ಅವಳವು. ನಮ್ಮದೇನಿದ್ದರೂ ಮೂರೂ ಮಕ್ಕಳಿಗೆ ಸೇರಿದ್ದು. ಈಗ ಅವರಿಗೆ ದುಡ್ಡಿನ ಅವಶ್ಯಕತೆ ಇದೆ. ಅದಕ್ಕೇ ಆರ್ಥಿಕ ಸಹಾಯ ಯಾಚಿಸಿದ್ದಾರೆ. ಈಗ ಕೊಟ್ಟರೆ ಅವರಿಗೂ ಖುಷಿಯಾದೀತು. ಸಮಯಕ್ಕೆ ಅನುಕೂಲವಾದದ್ದಕ್ಕೆ ಜೀವನ ಪರ್ಯಂತ ನೆನೆಸಿಕೊಂಡಾರು. ಈಗ ಇಲ್ಲ, ಮುಂದೆಕೊಡ್ತೀನಿ, ನಮ್ಮ ತರುವಾಯ ನೀವೇ ಹಂಚಿಕೊಳ್ಳಿರಿ. ನಾವು ಇರುವವರೆಗೆ ನಾವು ಅನುಭವಿಸುತ್ತೇವೆ ಅಂತ ಹೇಳೋದಿಕ್ಕಿಂತ ಈಗಲೇ ಅವರ ಬೇಡಿಕೆಯನ್ನು ಮನ್ನಿಸುವುದೇ ಒಳ್ಳೆಯದು. ಸಮಯಕ್ಕೆ ಆಗಲಾರದ್ದು ಪ್ರಯೋಜನನಿಲ್ಲ. ಅವರು ಕೇಳಿದಷ್ಟು ಕೊಟ್ಟ ಮೇಲೂ ನಮಗೇನೂ ಕೊರತೆ ಕಾಣುವುದಿಲ್ಲ. ಅಳಿಯಂದಿರು ವರದಕ್ಷಿಣೆ, ಅದೂ, ಇದೂ ಅಂತ ಏನೂ ಕರಾರು ಇಡದೇ ಮಗಳನ್ನು ಮದುವೆಯಾಗಿ ತಮ್ಮ ದೊಡ್ಡ ಗುಣ ಮೆರೆದಿದ್ದಾರೆ. ಸೊಸೆಯಂದಿರೂ ಸಹ ಮನೆ ಮಕ್ಕಳಂತೆಯೇ ವರ್ತಿಸುತ್ತಿದ್ದಾರೆ." ಹೀಗೆ ಏನೇನೋ ವಿಚಾರಗಳು ಹರಿದಾಡಿದವು ರಾಯರ ಮನದಂಗಳದಲ್ಲಿ. ಕೊನೆಗೆ ಮಕ್ಕಳ ಬೇಡಿಕೆಗೆ ಅಸ್ತು ಎಂದು ಹೇಳಬೇಕೆಂದು ನಿರ್ಣಯ ತೆಗೆದು ಕೊಂಡಾಗ ಅವರಿಗೆ ತನ್ನಿಂದ ತಾನೇ ನಿದ್ರೆ ಆವರಿಸಿತ್ತು.
"ಯಾಕ್ರೀ ಮತ್ತೇನು ಯೋಚನೆ ಮಾಡ್ಲಿಕತ್ತೀರಿ? ಅಳಿಯಂದಿರು, ಮಕ್ಕಳು ಹೇಳಿದ ಮಾತು ನಿಮ್ ಕಿವಿಗೆ ಬಿತ್ತೋ ಇಲ್ಲೋ...? ನೀವು ಇಲ್ಲಿ ಇದ್ದಂಗಿಲ್ಲ...?" ಎಂದು ವಸುಮತಿಯವರು ಹೇಳಿದಾಗಲೇ ರಾಯರ ವಿಚಾರಧಾರೆಗೆ ಬ್ರೇಕ್ ಬಿದ್ದಿತು.
"ಹಾಂ ವಸೂ ಏನಂದೆ...?"
"ಅದೇರಿ ನಿನ್ನೆ ರಾತ್ರಿ ಪ್ರಸ್ತಾಪಿಸಿದ್ದನ್ನೇ ಈಗ ಮಕ್ಕಳು ತಮ್ಮ ಬಾಯಿಯಿಂದಾನೇ ಕೇಳಿದರಲ್ಲ...? ನೀವು ಏನೂ ಹೇಳದೇ ಸುಮ್ಮನೇ ಕೂತಿದ್ದೀರಿ."
"ಹೌದಾ? ಈಗ ಎಲ್ಲರೂ ನನ್ನ ಮಾತು ಕೇಳಿಸಿಕೊಳ್ಳಿರಿ. ನಿಮ್ಮ ಪ್ರಸ್ತಾವನೆ ಮಂಜೂರಾಗಿದೆ. ಮಕ್ಕಳೇ, ನಿಮ್ಮ ಮನಸ್ಸಂತೋಷವೇ ನಮ್ಮ ಸಂತೋಷ. ನಾವೀಗಾಗಲೇ ಹಣ್ಣೆಲೆಗಳು. ಈ ಹಣ್ಣೆಲೆಗಳು ಯಾವಾಗ ಉದುರುವುವೋ ಗೊತ್ತಿಲ್ಲ. ನಮ್ಮದೇನಿದ್ದರೂ ನಿಮ್ಮದೇ. ಸಂತೋಷ ತಾನೇ? ಮಕ್ಕಳೇ ಇದು ಈ ವರ್ಷದ ದೀಪಾವಳಿ ಕೊಡುಗೆ ಎಂದು ತಿಳಿದುಕೊಳ್ಳಿರಿ. ಕೊಡುಗೆ ಕೊಡುಗೆಯಷ್ಟೇ. ವಾಪಾಸು ಮಾಡಬೇಕಿಲ್ಲ." ರಾಯರು ತಮ್ಮ ಮನದಿಂಗಿತವನ್ನು ಪ್ರಕಟಿಸಿದಾಗ ಅದುವರೆಗೂ ಉಸಿರನ್ನು ಬಿಗಿ ಹಿಡಿದು ಕುತೂಹಲದಿಂದ ರಾಯರ ಮಾತನ್ನೇ ಆಲಿಸುತ್ತಿದ್ದ ಎಲ್ಲರೂ ನಿರಾಳವಾಗಿ ಉಸಿರು ಬಿಟ್ಟಿದ್ದರು. ಎಲ್ಲರೆದೆಗಳಲ್ಲಿ ಸಂತೋಷದ ಪ್ರವಾಹ ಉಕ್ಕೇರತೊಡಗಿತ್ತು.
ಶೇಖರಗೌಡ ವೀ ಸರನಾಡಗೌಡರ್,
ತಾವರಗೇರಾ-583279, ತಾ: ಕುಷ್ಟಗಿ, ಜಿ: ಕೊಪ್ಪಳ.
18 thoughts on “ಸರಳ ರೇಖೆಗಳು”
ಕಥೆಯ ವಿಷಯ ಸರಳವಾಗಿ ಇದ್ದರೂ ಹೇಳಿದ ರೀತಿ ಚೆನ್ನಾಗಿತ್ತು. ಮಕ್ಕಳ ಗಲಾಟೆ ಹಿಂದಿನ ನೆನಪು ಕಥೆಯನ್ನು ಬೆಳೆಸಿದೆ.
ಧನ್ಯವಾದಗಳು ಜನಾರ್ಧನ್ ರಾವ್.
ಶೀರ್ಷಿಕೆಗೆ ತಕ್ಕಂತೆ ಕತೆ ಸರಳ ವಾಗಿ ಸರಾಗವಾಗಿ ಮೂಡಿಬಂದಿದೆ.
ಅಭಿನಂದನೆಗಳು
ಧನ್ಯವಾದಗಳು ಆಚಾರ್ಯರೇ.
ಸರಾಗವಾಗಿ ಸಾಗುವ ಈ ಕಥಾನಕ ತುಂಬಾ ಚೆನ್ನಾಗಿದೆ ಸರ್. ಅಭಿನಂದನೆಗಳು.
ಕಥೆ ನೇರವಾಗಿದೆ ಎಂದು ಅನ್ನಿಸಿದರೂ ಅದನ್ನು ಹೆಣೆದ ರೀತಿ ಚೆನ್ನಾಗಿದೆ. ಹಾಗಾಗಿ ಕುತೂಹಲ ಕೊನೆಯ ವರೆಗೂ ಇರುತ್ತದೆ
ಧನ್ಯವಾದಗಳು ಸಹೋದರಿಯವರಿಗೆ.
ಸರಳ ಮನಸ್ಸಿನ ಕುಟುಂಬ, ಜೀವನವನ್ನು ಸರಳಗೊಳಿಸುತ್ತದೆ ಎನ್ನುವುದನ್ನು ಸರಳ ರೇಖೆಗಳ ರಾಯರ ಈ ಪ್ರಸಂಗದಿಂದ ಶ್ರೀ ಶೇಖರಗೌಡರು ನಮಗೆಲ್ಲ ತಿಳಿಸಿದ್ದಾರೆ. ಕಥೆ ಸುಂದರವಾಗಿ ಮೂಡಿದೆ. ಅಭಿನಂದನೆಗಳು.
ಧನ್ಯವಾದಗಳು ಮದನ್.
ಧನ್ಯವಾದಗಳು ನಾಯಕರೇ.
ಸರಾಗವಾಗಿ ಓದಿಸಿಕೊಂಡು ಹೋಗುವ ಕಥೆ
ಈಗಿನ ಕಾಲದ ಮಕ್ಕಳ ನಿರೀಕ್ಷೆಯನ್ನೂ ತೆಕ್ಕೆಗೆ ತೆಗೆದುಕೊಂಡು ಸಾಗಿದೆ.
ಅಭಿನಂದನೆಗಳು
ಧನ್ಯವಾದಗಳು ನಾಯಕರೇ.
ಕೊಡುಗೆಯನ್ನು ಕೊಡುಗೆಯಾಗಿ ಕೊಟ್ಟರಷ್ಟೇ ಚೆನ್ನ ಎನ್ನುವ ಕಟು ವಾಸ್ತವವನ್ನು ಹೇಳಿದ ರೀತಿ ಕಥೆಯ ಹೈಲೈಟ್. ಸರಳ ನಿರೂಪಣೆ ಕಥೆಯ ಸೊಬಗನ್ನು ಹೆಚ್ಚಿಸಿದೆ. ಅಭಿನಂದನೆಗಳು ಸಾರ್ …
ಧನ್ಯವಾದಗಳು ರಾಘವೇಂದ್ರ ಅವರೇ.
ಸರಳವಾದ ಕಥೆ. ಮಿಡ್ಲ್ ಕ್ಲಾಸ್ ಫ್ಯಾಮಿಲಿ ಗಳಲ್ಲಿ ಸಾಮಾನ್ಯವಾಗಿ ತಲೆದೋರುವ ಸಮಸ್ಯೆ. ರಾಯರ ನಿರ್ಧಾರ ನಿಜಕ್ಕೂ ಶ್ಲಾಘನೀಯ.
ಧನ್ಯವಾದಗಳು ಜಯರಾಮನ್.
ಉತ್ತಮ ಕತೆ. ದೀಪಾವಳಿ ಕೊಡುಗೆ ಸಮಂಜಸವಾಗಿದೆ.
ಧನ್ಯವಾದಗಳು ಸೊಂಡೂರ್.